ಮೊದಲನೇ ವಾಚನ: ಯೆಶಾಯ 66:10-14
"ಜೆರುಸಲೇಮನ್ನು ಪ್ರೀತಿಸುವವರೇ, ನೀವೆಲ್ಲರೂ ಆನಂದಿಸಿರಿ ಆಕೆಯೊಂದಿಗೆ, ಹರ್ಷಗೊಳ್ಳಿರಿ ಆಕೆಯ ಬಗ್ಗೆ ಆಕೆಯ ನಿಮಿತ್ತ ದುಃಖಿಸುವವರೇ, "ಸಾಂತ್ವನ ನೀಡುವ ಆಕೆಯ ಸ್ತನ್ಯದಿಂದ
ತೃಪ್ತಿಗೊಳ್ಳುವೆವು,
ಹೌದು, ಆಕೆಯ ಸಿರಿ ಸಮೃದ್ಧಿಯನ್ನು ಹೀರುತ್ತಾ ಹಿಗ್ಗುವೆವು," ಎಂದು ನೀವೆಲ್ಲರು ಉಲ್ಲಾಸಪಡಿ ಆಕೆಯೊಂದಿಗೆ."
ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: "ಇಗೋ, ಆಕೆಗೆ ಹರಿಯಮಾಡುವೆನು ಸುಕಶಾಂತಿಯನ್ನು ನದಿಯಂತೆ ನೀಡುವೆ ರಾಷ್ಟ್ರಗಳ ವೈಭವವನು ತುಂಬಿ
ತುಳುಕುವ ತೊರೆಯಂತೆ ನೀವಿರುವಿರಿ ಹಾಲುಕುಡಿವ ಹಸುಳೆಯಂತೆ ಎತ್ತಿಕೊಳ್ಳಲಾಗುವುದು ನಿಮ್ಮನ್ನು
ತಾಯ ಕಂಕುಳಲಿ ನಲಿದಾಡುವಿರಿ ನೀವು ಆಕೆಯ ಮಡಿಲಲಿ. ನಾನೇ ನಿಮ್ಮನ್ನು ಸಂತೈಸುವೆನು ತಾಯಿಯಂತೆ
ಸಾಂತ್ವನ ದೊರಕುವುದು ನಿಮಗೆ ಜೆರುಸಲೇಮಿನಲ್ಲೆ. ಇದನ್ನು ಕಂಡಾಗ ನಿಮ್ಮೆದೆ ಸಂತಸದಿಂದ
ಉಬ್ಬುವುದು. ಚಿಗುರುವುದು ಹಸಿಹುಲ್ಲಂತೆ ನಿಮ್ಮೆಲುಬು. "ಸರ್ವೇಶ್ವರನ ಕೃಪಾಹಸ್ತ ತನ್ನ
ಭಕ್ತರ ಮೇಲೆ ಆತನ ರೋಷಾವೇಶ ಶತ್ರುಗಳ ಮೇಲೆ" ಎಂಬುವುದು ವ್ಯಕ್ತವಾಗುವುದು ನಿಮಗೆ.
ಕೀರ್ತನೆ: 66:1-3,
4-5, 6-7, 16, 20
ಶ್ಲೋಕ: ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ
ಎರಡನೇ ವಾಚನ: ಗಲಾತ್ಯರಿಗೆ 6:14-18
ನಮಗಾದರೋ ನಮ್ಮ ಪ್ರಭು ಯೇಸುಕ್ರಿಸ್ತರ ಶಿಲುಬೆಯನ್ನು
ಬಿಟ್ಟು ಬೇರಾವುದರಲ್ಲೂ ಹೆಚ್ಚಳಪಡುವುದು ಬೇಡವೇ ಬೇಡ. ಆ ಶಿಲುಬೆಯ ಮೂಲಕ, ನನ್ನ ಪಾಲಿಗೆ ಲೋಕವೇ ಶಿಲುಬೆಗೆ ಜಡಿಸಿಕೊಂಡು
ಸತ್ತಿದೆ;
ನಾನೂ ಸಹ ಲೋಕದ
ಪಾಲಿಗೆ ಶಿಲುಬೆಗೆ ಜಡಿಸಿಕೊಂಡು ಸತ್ತಿದ್ದೇನೆ. ಸುನ್ನತಿ ಮಾಡಿಸಿಕೊಳ್ಳುವುದೋ, ಮಾಡಿಸಿ ಕೊಳ್ಳದಿರುವುದೋ ಮಹತ್ತಾದುದಲ್ಲ. ಹೊಸ
ಸೃಷ್ಟಿಯಾಗುವುದೇ ಮಹತ್ತರವಾದುದು ಈ ನಿಯಮವನ್ನು ಅನುಸರಿಸುವ ಎಲ್ಲರಿಗೂ, ಅಂದರೆ ನಿಜ ಇಸ್ರಯೇಲರಾದ ದೇವಜನರೆಲ್ಲರಿಗೂ ಶಾಂತಿ ಸಮಾಧಾನವೂ ಕೃಪಾಶೀರ್ವಾದವೂ
ಲಭಿಸಲಿ! ಇನ್ನು ಮೇಲೆ ಯಾರೂ ನನಗೆ ತೊಂದರೆ ಕೊಡದಿರಲಿ. ಯೇಸುವಿನ ದಾಸನೆಂದು ಸೂಚಿಸುವ
ಕೆಂಗುರುತುಗಳು ನನ್ನ ದೇಹದಲ್ಲಿ ಮುದ್ರಿತವಾಗಿವೆ. ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹ ನಿಮ್ಮೊಡನೆ ಇರಲಿ! ಆಮೆನ್.
ಶುಭಸಂದೇಶ: ಲೂಕ 10:1-12, 17-20
(10:19)

ಯೇಸುಸ್ವಾಮಿ ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರಾಗಿ ತಾವೇ
ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, "ಬೆಳೆಯೇನೋ ಹೇರಳವಾಗಿದೆ; ಕೊಯ್ಲುಗಾರರೂ ವಿರಳ. ಆದುದರಿಂದ ಕೊಯ್ಲಿಗೆ
ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು
ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ,
ಪಾದರಕ್ಷೆಗಳನ್ನಾಗಲಿ
ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ
ಮನೆಗೆ ಹೋದರೂ,
"ಈ ಮನೆಗೆ ಶಾಂತಿ," ಎಂದು ಆಶೀರ್ವಾದ ಮಾಡಿ, ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು
ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ.
ದುಡಿಮೆಗಾರನು ಕೂಲಿಗೆ ಬಾಧ್ಯನು. ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ
ರೋಗಿಗಳನ್ನು ಗುಣಪಡಿಸಿರಿ. "ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ," ಎಂದು ತಿಳಿಸಿರಿ. ಆದರೆ ನೀವು ಹೋಗುವ ಊರಿನ ಜನರು
ನಿಮ್ಮನ್ನು ಸ್ವಾಗತಿಸದೆ ಹೋದರೆ, ರಸ್ತೆಗಳಿಗೆ ಹೋಗಿ,
"ನಿಮ್ಮ ಪಾದಗಳಿಗೆ
ಅಂಟಿರುವ ನಿಮ್ಮ ಊರಿನ ಧೂಳನ್ನು ಕೂಡ ನಿಮಗೆ ವಿರುದ್ಧವಾಗಿ ಒದರಿಬಿಡುತ್ತೇವೆ. ಆದರೂ ದೇವರ
ಸಾಮ್ರಾಜ್ಯ ಸಮೀಪಿಸಿದೆ ಎಂಬುದನ್ನು ಮಾತ್ರ ನೀವು ಗಮನದಲ್ಲಿಡಿ," ಎಂದು ತಿಳಿಸಿರಿ. ತೀರ್ಪಿನ ದಿನ ಈ ಊರಿನ ಗತಿ
ಸೊದೋಮ್ ಊರಿನ ಗತಿಗಿಂತಲೂ ಕಠಿಣವಾಗಿರುವುದೆಂದು ನಾನು ನಿಮಗೆ ಹೇಳುತ್ತೇನೆ." ಕಳುಹಿಸಲಾದ
ಎಪ್ಪತ್ತೆರಡು ಮಂದಿ ಸಂತೋಷಭರಿತರಾಗಿ ಹಿಂದಿರುಗಿ ಬಂದು, "ಸ್ವಾಮೀ ನಿಮ್ಮ ಹೆಸರಿನಲ್ಲಿ ಆಜ್ಞೆಮಾಡಿದಾಗ
ದೆವ್ವಗಳು ಕೂಡ ನಮಗೆ ಅದೀನವಾಗುತ್ತವೆ," ಎಂದು ವರದಿ ಮಾಡಿದರು. ಅದಕ್ಕೆ ಯೇಸು, "ಸೈತಾನನು ಆಕಾಶದಿಂದ ಸಿಡಿಲಿನಂತೆ ಬೀಳುವುದನ್ನು
ಕಂಡೆನು. ಇಗೋ,
ಸರ್ಪಗಳನ್ನು ಹಾಗೂ
ಚೇಳುಗಳನ್ನು ತುಳಿಯುವುದಕ್ಕೂ ಶತ್ರುವಿನ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೂ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ
ಹಾನಿಮಾಡದು. ಆದರೂ ದೆವ್ವಗಳು ನಿಮಗೆ ಅಧೀನವಾಗಿವೆಯೆಂದು ಸಂತೋಷಪಡುವುದಕಿಂತ ನಿಮ್ಮ ಹೆಸರುಗಳು
ಸ್ವರ್ಗದಲ್ಲಿ ಲಿಖಿತವಾಗಿವೆ ಎಂದು ಸಂತೋಷಪಡಿ," ಎಂದು ಹೇಳಿದರು.
No comments:
Post a Comment