ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

05.07.22 - “ಬೆಳೆಯೇನೋ ಹೇರಳ; ಕೊಯಿಲುಗಾರರೋ ವಿರಳ"

ಮೊದಲನೇ ವಾಚನ: ಪ್ರವಾದಿ ಹೋಶೇಯನ ಗ್ರಂಥ 8:4-7, 11-13

“ಅವರು ನನ್ನ ಅನುಮತಿ ಇಲ್ಲದೆ ಅರಸರನ್ನು ನೇಮಿಸಿಕೊಂಡಿದ್ದಾರೆ. ನನಗೆ ತಿಳಿಯದಂತೆ ಅಧಿಪತಿಗಳನ್ನು ಮಾಡಿಕೊಂಡಿದ್ದಾರೆ. ಬೆಳ್ಳಿಬಂಗಾರದ ವಿಗ್ರಹಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರು ಮಾಡಿರುವುದೆಲ್ಲ ಅವರ ನಾಶಕ್ಕಾಗಿಯೇ. ಸಮಾರಿಯವೇ, ನೀನು ನಿರ್ಮಿಸಿಕೊಂಡಿರುವ ಬಸವನನ್ನು ಧಿಕ್ಕರಿಸಿದ್ದೇನೆ. ನನ್ನ ಕೋಪಾಗ್ನಿ ನಿನ್ನ ಮೇಲೆ ಉರಿದುಬರುತ್ತಿದೆ. ಈ ಜನರು ನಿರ್ಮಲರಾಗುವುದಕ್ಕೆ ಇನ್ನೆಷ್ಟುಕಾಲ ಹಿಡಿಯುವುದೋ? ಆ ಬಸವ ಇಸ್ರಯೇಲಿನ ಕೈಕೆಲಸವೇ. ಶಿಲ್ಪಿ ಕೊಟ್ಟ ರೂಪವದು; ಅದು ದೇವರಲ್ಲ. ಸಮಾರ್ಯದ ಬಸವನು ನುಚ್ಚುನೂರಾಗುವನು. ಇವರು ಗಾಳಿಯನ್ನು ಬಿತ್ತುತ್ತಾರೆ; ಬಿರುಗಾಳಿಯನ್ನು ಕೊಯ್ಯುತ್ತಾರೆ. ಅವರ ಪೈರು ತೆನೆಗೆ ಬಾರದು. ಕಾಳು ಮೊಳೆತರೂ ಕೂಳು ದೊರಕದು. ಒಂದು ವೇಳೆ ದೊರಕಿದರೂ ಅನ್ಯಜನರು ಅದನ್ನು ಕಬಳಿಸಿಬಿಡುವರು. “ಎಫ್ರಯಿಮ್ ಪಾಪಪರಿಹಾರಕ್ಕಾಗಿ ಬಲಿಪೀಠಗಳನ್ನು ಕಟ್ಟಿದೆ. ಆ ಬಲಿಪೀಠಗಳೇ ಅದರ ಪಾಪಕ್ಕೆ ಕಾರಣವಾಗಿ ಪರಿಣಮಿಸಿವೆ. ನಾನು ನನ್ನ ಧರ್ಮವನ್ನು ಲಕ್ಷಾಂತರ ವಿಧಿಗಳ ರೂಪದಲ್ಲಿ ಬರೆದುಕೊಟ್ಟರೂ ಅವುಗಳು ತನಗೆ ಪರಕೀಯವೆಂದು ಭಾವಿಸುತ್ತದೆ. ಎಫ್ರಯಿಮಿನವರು ಬಲಿಪಶುಗಳನ್ನು ನನಗೆ ನೈವೇದ್ಯವಾಗಿ ವಧಿಸುತ್ತಾರೆ, ವಧಿಸಿದ್ದನ್ನು ಭುಜಿಸುತ್ತಾರೆ. ಆದರೆ ಆ ಬಲಿಗಳನ್ನು ನಾನು ಮೆಚ್ಚುವುದಿಲ್ಲ. ಅವರ ಅಧರ್ಮವನ್ನು ನೆನಪಿಗೆ ತಂದುಕೊಂಡು ಅವರ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವೆನು. ಆ ಜನರು ಈಜಿಪ್ಟಿಗೆ ಹಿಂದಿರುಗಬೇಕಾಗುವುದು."

ಕೀರ್ತನೆ: 115:3-4, 5-6, 7-8, 9-10
ಶ್ಲೋಕ:  ಪ್ರಭುವಿನಲ್ಲಿದೆ ಭರವಸೆ ಇಸ್ರಯೇಲ್ ಜನರಿಗೆ

ಶುಭಸಂದೇಶ: ಮತ್ತಾಯ 9:32-38


ಕುರುಡರು ಹೊರಟು ಹೋಗುತ್ತಿದ್ದ ಹಾಗೆ, ದೆವ್ವ ಹಿಡಿದಿದ್ದ ಒಬ್ಬ ಮೂಕನನ್ನು ಕೆಲವರು ಯೇಸುಸ್ವಾಮಿಯ ಬಳಿಗೆ ಕರೆತಂದರು. ದೆವ್ವ ಬಿಡಿಸಿದ ಮೇಲೆ ಆ ಮೂಕನಿಗೆ ಮಾತು ಬಂದಿತು. ಜನರೆಲ್ಲರೂ ಆಶ್ಚರ್ಯಚಕಿತರಾದರು. “ಇಂತಹ ಕಾರ್ಯವನ್ನು ನಾವು ಇಸ್ರಯೇಲಿನಲ್ಲಿ ಕಂಡದ್ದೇ ಇಲ್ಲ!” ಎಂದುಕೊಂಡರು. ಆದರೆ ಫರಿಸಾಯರು, “ಇವನು ದೆವ್ವಗಳೊಡೆಯನ ಶಕ್ತಿಯಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ,” ಎಂದರು. ಯೇಸುಸ್ವಾಮಿ, ಊರೂರುಗಳಲ್ಲೂ ಹಳ್ಳಿ ಹಳ್ಳಿಗಳಲ್ಲೂ ಸಂಚಾರ ಮಾಡುತ್ತಾ ಅಲ್ಲಿಯ ಪ್ರಾರ್ಥನಾಮಂದಿರಗಳಲ್ಲಿ ಬೋಧಿಸಿದರು. ಶ್ರೀಸಾಮ್ರಾಜ್ಯದ ಶುಭಸಂದೇಶವನ್ನು ಸಾರಿದರು. ಎಲ್ಲಾತರದ ರೋಗರುಜಿನಗಳನ್ನು ಗುಣಪಡಿಸಿದರು. ಆ ಜನಸಮೂಹವನ್ನು ಕಂಡಾಗ ಅವರ ಮನ ಕರಗಿತು. ಏಕೆಂದರೆ, ಕುರುಬನಿಲ್ಲದ ಕುರಿಗಳಂತೆ ಅವರು ತೊಳಲಿದ್ದರು ಹಾಗೂ ಬಳಲಿದ್ದರು. ಆದುದರಿಂದ ಯೇಸು ತಮ್ಮ ಶಿಷ್ಯರಿಗೆ, “ಬೆಳೆಯೇನೋ ಹೇರಳ; ಕೊಯಿಲುಗಾರರೋ ವಿರಳ; ಈ ಕಾರಣ ತನ್ನ ಕೊಯಿಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಪ್ರಾರ್ಥಿಸಿರಿ,” ಎಂದರು.

No comments:

Post a Comment