ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

17.07.22

ಮೊದಲನೆಯ ವಾಚನ: ಆದಿಕಾಂಡ 18:1-10

ಒಂದು ದಿನ ಅಬ್ರಹಾಮನು ಉರಿಬಿಸಿಲ ವೇಳೆಯಲ್ಲಿ ಮಮ್ರೋತೋಪಿನ ತನ್ನ ಗುಡಾರದ ಬಾಗಿಲಲ್ಲಿ ಕುಳಿತಿದ್ದನು. ಆಗ ಅವನಿಗೆ ಸರ್ವೇಶ್ವರಸ್ವಾಮಿಯ ದರ್ಶನವಾಯಿತು. ಅವನು ಕಣ್ಣೆತ್ತಿ ನೋಡಿದಾಗ ಯಾರೋ ಮೂರು ಮಂದಿ ಪುರುಷರು ಹತ್ತಿರದಲ್ಲೇ ನಿಂತಿದ್ದರು. ಅವರನ್ನು ಎದುರುಗೊಳ್ಳಲು ಅಬ್ರಹಾಮನು ಕೂಡಲೆ ಗುಡಾರದ ಬಾಗಿಲಿನಿಂದ ಓಡಿಬಂದು, ತಲೆಬಾಗಿ ನಮಸ್ಕರಿಸಿ, " ಸ್ವಾಮಿ, ದಯವಿರಲಿ; ದಾಸನ ಬಳಿಗೆ ದಯಮಾಡದೆ ಮುಂದೆ ಹೋಗಬೇಡಿ. ನೀರು ತರಿಸಿಕೊಡುತ್ತೇನೆ, ಕಾಲು ತೊಳೆದುಕೊಂಡು ಈ ಮರದ ನೆರಳಿನಲ್ಲಿ ವಿಶ್ರಮಿಸಿಕೊಳ್ಳಿ. ಸ್ವಲ್ಪ ಆಹಾರ ತರುತ್ತೇನೆ. ಊಟವಾದ ಮೇಲೆ ನೀವು ಮುಂದಕ್ಕೆ ಪ್ರಯಾಣ ಮಾಡಬಹುದು. ದಾಸನಿರುವ ಸ್ಥಳದ ಹತ್ತಿರ ಹಾದುಹೋಗುತ್ತಿದ್ದೀರಲ್ಲವೆ? " ಎನ್ನಲು ಅವರು " ನೀನು ಹೇಳಿದಂತೆಯೇ ಆಗಲಿ, " ಎಂದರು. ಆಗ ಅಬ್ರಹಾಮನು ಗುಡಾರದಲ್ಲಿದ್ದ ಸರಾಳ ಬಳಿಗೆ ಓಡಿ ಆಕೆಗೆ, " ಹಸನಾದ ಮೂರು ಸೇರು ಹಿಟ್ಟನ್ನು ನಾದಿ, ಬೇಗ ರೊಟ್ಟಿಗಳನ್ನು ಮಾಡು, " ಎಂದನು. ಅನಂತರ ದನಗಳ ಹಟ್ಟಿಗೆ ಓಡಿಹೋಗಿ ಕೊಬ್ಬಿದ ಎಳೇ ಕರುವನ್ನು ತೆಗೆದು ಅವಳ ಕೈಗೆ ಕೊಟ್ಟನು. ಆಳು ಬೇಗನೇ ಆಡಿಗೆಮಾಡಿದನು. ತರುವಾಯ ಅಬ್ರಹಾಮನು ಹಾಲು ಮೊಸರನ್ನು ಹಾಗೂ ಅಟ್ಟಮಾಂಸವನ್ನು ತೆಗೆದುಕೊಂಡು ಬಂದು ಆ ಮನುಷ್ಯರಿಗೆ ಬಡಿಸಿದನು. ಅವರು ಮರದ ಕೆಳಗೆ ಊಟಮಾಡಿ ಮುಗಿಸುವವರೆಗೂ ಅವನೇ ಹತ್ತಿರ ನಿಂತು ಉಪಚಾರಮಾಡಿದನು. ಬಳಿಕ, " ನಿನ್ನ ಹೆಂಡತಿ ಸಾರಾಳು ಎಲ್ಲಿ? " ಎಂದು ಆ ಅತಿಥಿಗಳು ವಿಚಾರಿಸಿದಾಗ, " ಅಲ್ಲಿ ಗುಡಾರದಲ್ಲಿದ್ದಾಳೆ, " ಎಂದು ಉತ್ತರಕೊಟ್ಟನು. ಆಗ ಸರ್ವೇಶ್ವರಸ್ವಾಮಿ, " ಬರುವ ವರ್ಷ ಇದೇ ಕಾಲದಲ್ಲಿ ನಾನು ತಪ್ಪದೆ ಮರಳಿ ನಿನ್ನ ಬಳಿಗೆ ಬರುತ್ತೇನೆ; ಬಂದಾಗ ನಿನ್ನ ಹೆಂಡತಿ ಸಾರಾಳಿಗೆ ಮಗನಿರುತ್ತಾನೆ, " ಎಂದರು.

ಕೀರ್ತನೆ: 15:1-5
ಶ್ಲೋಕ: ಯೋಗ್ಯನಾರು ಪ್ರಭೂ, ನಿನ್ನ ಗುಡಾರದಲಿ ಬಿಡಾರ ಮಾಡಲು | ಅರ್ಹನಾರು ನಿನ್ನ ಪವಿತ್ರ ಶಿಖರದಲಿ ವಾಸವಾಗಿರಲು||

ಅಂಥವನಿರಬೇಕು ನಿರ್ದೋಷಿ ಸನ್ಮಾರ್ಗಿ|
ಸತ್ಯವ ನುಡಿಯಬೇಕು ಹೃತ್ಪೂರ್ವಕವಾಗಿ||
ಚಾಡಿಯನು ಹೇಳನು ಕೇಡನು ಮಾಡನನ್ಯರಿಗೆ|
ಗುರಿಮಾಡನವನು ನೆರೆಹೊರೆಯವರನು ನಿಂದೆಗೆ||

ಭ್ರಷ್ಟರನು ಧಿಕ್ಕರಿಸುವನು, ಭಕ್ತರನು ಗೌರವಿಸುವನು|
ನಷ್ಟವಾದರೂ ಕೊಟ್ಟ ಮಾತನು ತಪ್ಪನವನು||
ಕೊಡುವನು ಕಡವನು, ಬಯಸನು ಬಡ್ಡಿಯನು|
ಎಡವರ ಕೇಡಿಗೆ ಪಡೆಯನು ಲಂಚವನು|
ಕದಲನೆಂದಿಗೂ ಈಪರಿ ನಡೆವವನು||

ಎರಡನೆಯ ವಾಚನ: 2 ಕೊಲೊಸ್ಸೆಯರಿಗೆ  1:24-28

ಸಹೋದರರೇ, ಈಗ ನಿಮಗೋಸ್ಕರ ಸಂಕಟಪಡುವುದರಲ್ಲಿ ನನಗೆ ಸಂತೋಷವಿದೆ. ಕ್ರಿಸ್ತ ಯೇಸು ತಮ್ಮ ಶರೀರವಾದ ಧರಾಮಸಭೆಗೋಸ್ಕರ ಅನುಭವಿಸಬೇಕಾದ ಯಾತನೆಗಳಲ್ಲಿ ಉಳಿದದ್ದನ್ನು ನಾನು ನನ್ನ ದೇಹದಲ್ಲಿ ಅನುಭವಿಸಿ ಪೂರ್ಣಗೊಸುತ್ತಿದ್ದೇನೆ. ದೇವರು ನನ್ನನ್ನು ಧರ್ಮಸಭೆಯ ದಾಸರನ್ನಾಗಿ ನೇಮಿಸಿದ್ದಾರೆ. ನಿಮ್ಮ ಹಿತಕ್ಕಾಗಿ ಒಂದು ಮಹತ್ವದ ಕಾರ್ಯವನ್ನು ನನಗೆ ವಹಿಸಿರುತ್ತಾರೆ. ಯುಗಯುಗಾಂತರಗಳಿಂದಲೂ ತಲಾಂತರಗಳಿಂದಲೂ ನಿಗೂಢವಾಗಿದ್ದ ರಹಸ್ಯವನ್ನು ಅಂದರೆ ತಮ್ಮ ವಾಕ್ಯವನ್ನು, ಈಗ ತಮ್ಮ ಜನರಿಗೆ ದೇವರು ಪ್ರಕಟಿಸಿದ್ದಾರೆ. ಈ ರಹಸ್ಯ ಎಷ್ಟು ಶ್ರೀಮಂತವಾದುದು, ಎಷ್ಟು ಮಹಿಮಾನ್ವಿತವಾದುದು ಎಂಬುದನ್ನು ಎಲ್ಲಾ ಜನಾಂಗಗಳಿಗೂ ತಿಳಿಸಲು ದೇವರು ಇಚ್ಛಿಸಿದರು. ಕ್ರಿಸ್ತ ಯೇಸು ನಿಮ್ಮಲ್ಲಿದ್ದು ಮುಂದಿನ ಮಹಿಮೆಯ ನಿರೀಕ್ಷೆಗೆ ಆಧಾರವಾಗಿದ್ದಾರೆ ಎಂಬುದೇ ಈ ರಹಸ್ಯ. ನಾವು ಸಾರುತ್ತಲಿರುವುದೂ ಯೇಸುಕ್ರಿಸ್ತರನ್ನೇ. ಎಲ್ಲರಿಗೂ ಪೂರ್ಣಜ್ಞಾನವನ್ನು ಉಪದೇಶಿಸುತ್ತಾ ಪರಿಣಿತರನ್ನಾಗಿ ಊರ್ಜಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ.

ಶುಭಸಂದೇಶ: ಲೂಕ 10:38-42

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರೊಡನೆ ಪ್ರಯಾಣ ಮುಂದುವರೆಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಳೆಂಬ ಮಹಿಳೆ ಅವರನ್ನು ತಮ್ಮ ಮನೆಗೆ ಆಮಂತ್ರಿಸಿದಳು. ಆಕೆಗೆ ಮರಿಯಳೆಂಬ ಸೋದರಿ ಇದ್ದಳು. ಈಕೆ ಪ್ರಭುವಿನ ಸನ್ನಿಧಿಯಲ್ಲಿ ಕುಳಿತುಕೊಂಡು ಅವರ ಬೋಧನೆಯನ್ನು ಆಲಿಸುತ್ತಿದ್ದಳು. ಮಾರ್ತಳಾದರೋ, ಅತಿಥಿಸತ್ಕಾರರದ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, " ಪ್ರಭೂ, ನನ್ನ ಸೋದರಿ ಈ ಕೆಲಸವನ್ನೆಲ್ಲಾ ನನ್ನೊಬ್ಬಳಿಗೇ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯಮಾಡುವಂತೆ ಅವಳಿಗೆ ಹೇಳಿ, " ಎಂದಳು. ಯೇಸು ಆಕೆಗೆ ಪ್ರತ್ಯುತ್ತರವಾಗಿ, " ಮಾರ್ತಾ, ಮಾರ್ತಾ, ನೀನು ಅನಾವಶ್ಯ ಚಿಂತೆಪೇಚಾಟಗಳಿಗೆ ಒಳಗಾಗಿರುವೆ. ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು, " ಎಂದರು.

No comments:

Post a Comment