ಮೊದಲನೇ ವಾಚನ: ಫಿಲಿಪ್ಪಿಯರಿಗೆ 1:18-26
ಸಹೋದರರೇ, ಶುಭಸಂದೇಶಪ್ರಚಾರಕರ ಉದ್ದೇಶ ಏನೇ ಆಗಿರಲಿ, ನನಗದು ಮುಖ್ಯವಲ್ಲ. ಕ್ರಿಸ್ತಯೇಸುವನ್ನು ಅವರು ಸಾರುತ್ತಿರುವುದೇ ನನಗೆ ಸಂತೋಷ. ಹೌದು, ನನಗದು ತುಂಬಾ ಸಂತೋಷದ ವಿಷಯ. ನಿಮ್ಮ ಪ್ರಾರ್ಥನಾ ಫಲದಿಂದಲೂ ಯೇಸುಕ್ರಿಸ್ತರು ಕೊಡುವ ಆತ್ಮದ ನೆರವಿನಿಂದಲೂ ನನಗೆ ಬಿಡುಗಡೆ ಖಚಿತವೆಂದು ಬಲ್ಲೆ. ನನ್ನ ಕರ್ತವ್ಯಪಾಲನೆಯಲ್ಲಿ ನಾಚುವಂಥ ಸಂದರ್ಭವು ನನಗೆಂದಿಗೂ ಬರದೆಂದು ಬಲ್ಲೆ; ನಾನು ಬದುಕಿದರೂ ಸರಿ, ಸತ್ತರೂ ಸರಿ; ನನ್ನ ದೇಹದ ಮೂಲಕ ಕ್ರಿಸ್ತಯೇಸುವಿಗೆ ಎಂದಿನಂತೆ ಈಗಲೂ ಮಹಿಮೆ ಉಂಟಾಗಬೇಕೆಂಬುದೇ ನನ್ನ ಉತ್ಕಟ ಆಕಾಂಕ್ಷೆ ಹಾಗೂ ನಿರೀಕ್ಷೆ. ನನಗಂತೂ ಬದುಕುವುದೆಂದರೆ ಕ್ರಿಸ್ತಯೇಸುವೇ; ಸಾಯುವುದು ಲಾಭವೇ. ದೈಹಿಕವಾಗಿ ಬದುಕುವುದು ಫಲಪ್ರದವಾಗಿದ್ದರೆ, ನಾನು ಬದುಕುವುದು ಉತ್ತಮವೋ ಅಥವಾ ಸಾಯುವುದು ಸೂಕ್ತವೋ ನನಗೆ ತಿಳಿಯದು. ಉಭಯ ಸಂಕಟಕ್ಕೆ ಸಿಲುಕಿದ್ದೇನೆ. ಒಂದು ಕಡೆ, ಈ ಬದುಕನ್ನು ತೊರೆದು ಕ್ರಿಸ್ತಯೇಸುವಿನೊಡನೆ ಒಂದಾಗಿರಬೇಕೆಂಬುದೇ ನನ್ನ ಬಯಕೆ. ಇದು ಎಷ್ಟೋ ಮೇಲಾದುದು. ಮತ್ತೊಂದು ಕಡೆ, ನಿಮಗೋಸ್ಕರ ಇಹದಲ್ಲಿದ್ದು ಜೀವಿಸುವುದು ಅತ್ಯವಶ್ಯಕವಾಗಿದೆ. ಇದರಲ್ಲಿ ನನಗೆ ಎಳ್ಳಷ್ಟೂ ಸಂದೇಹವಿಲ್ಲ. ಈ ಕಾರಣ, ನಾನು ಇಹದಲ್ಲಿ ಉಳಿಯುವೆನೆಂದು ಬಲ್ಲೆ. ನಿಮ್ಮೆಲ್ಲರೊಡನಿದ್ದು, ಕ್ರೈಸ್ತವಿಶ್ವಾಸದಲ್ಲಿ ನೀವು ವೃದ್ಧಿಯಾಗಿ ಆನಂದಿಸುವಂತೆ ನಿಮಗೆ ನೆರವಾಗುತ್ತೇನೆ. ನಿಮ್ಮಲ್ಲಿಗೆ ನಾನು ಮರಳಿಬಂದಾಗ ಕ್ರಿಸ್ತಯೇಸುವಿನಲ್ಲಿ ನೀವು ಹಿರಿಹಿಗ್ಗುವುದಕ್ಕೆ ಮಹದವಕಾಶ ದೊರಕುವುದು.ಕೀರ್ತನೆ: 42:2, 3, 5
ಶ್ಲೋಕ: ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ
ಶುಭಸಂದೇಶ: ಲೂಕ 14:1, 7-11
ಅಂದು ಸಬ್ಬತ್‍ದಿನ. ಯೇಸುಸ್ವಾಮಿ ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದರು. ಎಲ್ಲರ ಕಣ್ಣು ಅವರ ಮೇಲಿತ್ತು. ಅಲ್ಲದೆ, ಅಲ್ಲಿಗೆ ಬಂದಿದ್ದ ಅತಿಥಿಗಳು ಪಂಕ್ತಿಯಲ್ಲಿ ಉತ್ತಮ ಸ್ಥಾನಗಳನ್ನು ಆರಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಯೇಸು ಸಾಮತಿ ರೂಪದಲ್ಲಿ ಹೀಗೆಂದರು: “ಮದುವೆಯ ಔತಣಕ್ಕೆ ನಿನ್ನನ್ನು ಯಾರಾದರೂ ಆಹ್ವಾನಿಸಿದಾಗ ಪ್ರಧಾನ ಆಸನದಲ್ಲಿ ಹೋಗಿ ಕುಳಿತುಕೊಳ್ಳಬೇಡ. ಏಕೆಂದರೆ, ನಿನಗಿಂತ ಗೌರವಸ್ಥನನ್ನು ಆಹ್ವಾನಿಸಿರಬಹುದು. ನಿಮ್ಮಿಬ್ಬರನ್ನು ಕರೆದಾತ ನಿನ್ನ ಹತ್ತಿರಬಂದು, ‘ಇವನಿಗೆ ನಿನ್ನ ಸ್ಥಳವನ್ನು ಬಿಟ್ಟುಕೊಡು,’ ಎನ್ನಬಹುದು. ಆಗ ನೀನು ನಾಚಿಕೆಪಟ್ಟುಕೊಂಡು ಕಡೆಯ ಸ್ಥಾನದಲ್ಲಿ ಹೋಗಿ ಕುಳಿತುಕೊಳ್ಳಬೇಕಾಗಬಹುದು. ಅದಕ್ಕೆ ಬದಲಾಗಿ ನಿನ್ನನ್ನು ಆಹ್ವಾನಿಸಿದಾಗ ಕಡೆಯ ಸ್ಥಳದಲ್ಲಿ ಹೋಗಿ ಕುಳಿತುಕೋ. ಕರೆದವನು ಬಂದು, ‘ಗೆಳೆಯಾ, ಮೇಲೆ ಬಾ’ ಎಂದು ಹೇಳುವನು. ಆಗ ಜೊತೆಗೆ ಕುಳಿತಿರುವ ಅತಿಥಿಗಳೆಲ್ಲರ ಮುಂದೆ ನಿನಗೆ ಗೌರವ ಸಿಗುವುದು. ಅಂತೆಯೇ, ತನ್ನನ್ನು ತಾನೇ ಮೇಲಕ್ಕೆ ಏರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು; ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು,” ಎಂದರು.
No comments:
Post a Comment