ಮೊದಲನೇ ವಾಚನ: ಎಫೆಸಿಯರಿಗೆ 6:10-20
ಸಹೋದರರೇ, ಕೊನೆಯದಾಗಿ, ಪ್ರಭುವಿನ ಅನ್ಯೋನ್ಯತೆಯಲ್ಲಿ ಬಲಾಢ್ಯರಾಗಿರಿ. ಅವರ ಪರಾಕ್ರಮ ಶಕ್ತಿಯನ್ನು ಆಶ್ರಯಿಸಿರಿ. ಸೈತಾನನು ನಿಮಗೆ ಒಡ್ಡುವ ಕುತಂತ್ರಗಳ ವಿರುದ್ಧ ಅಚಲರಾಗಿ ನಿಲ್ಲಲು ನೀವು ಸಮರ್ಥರಾಗುವಂತೆ ದೇವರು ನೀಡುವ ಸಕಲ ಶಸ್ತ್ರಾಸ್ತ್ರಗಳನ್ನು ಧರಿಸಿಕೊಳ್ಳಿರಿ. ನಮ್ಮ ಹೋರಾಟ ಕೇವಲ ನರಮಾನವರೊಂದಿಗಲ್ಲ, ದಿಗಂತದಲ್ಲಿರುವ ಅಧಿಕಾರಿಗಳ ಹಾಗೂ ಆಧಿಪತ್ಯಗಳ ವಿರುದ್ಧ; ಪ್ರಸ್ತುತ ಅಂಧಕಾರಲೋಕಾಧಿಪತಿಗಳ ಹಾಗೂ ಅಶರೀರ ದುಷ್ಟಗಣಗಳ ವಿರುದ್ಧ. ಎಂದೇ, ದೇವರು ಕೊಡುವ ಸಕಲ ಶಸ್ತ್ರಾಸ್ತ್ರಗಳೊಂದಿಗೆ ಸುಸಜ್ಜಿತರಾಗಿರಿ. ಆ ದುರ್ದಿನದಂದು ವೈರಿಗಳನ್ನು ಎದುರಿಸಲು ಆಗ ನೀವು ಶಕ್ತರಾಗುತ್ತೀರಿ. ಮಾತ್ರವಲ್ಲ, ಕಟ್ಟಕಡೆಯವರೆಗೆ ಹಿಮ್ಮೆಟ್ಟದೆ ನಿಲ್ಲುತ್ತೀರಿ; ಹಿಮ್ಮೆಟ್ಟದೆ ನಿಲ್ಲಲೇಬೇಕು. ಇದಕ್ಕಾಗಿ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಳ್ಳಿ. ನೀತಿಯೆಂಬ ರಕ್ಷಕವಚವನ್ನು ತೊಟ್ಟುಕೊಳ್ಳಿರಿ. ಶಾಂತಿಯ ಶುಭಸಂದೇಶವನ್ನು ಸಾರಲು ಶ್ರದ್ಧೆಯೆಂಬ ಪಾದರಕ್ಷೆಯನ್ನು ಮೆಟ್ಟುಕೊಳ್ಳಿರಿ. ಸತತವೂ ವಿಶ್ವಾಸವೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಹೀಗೆ ಸೈತಾನನ ಅಗ್ನಿಬಾಣಗಳನ್ನೆಲ್ಲಾ ನಂದಿಸಲು ಶಕ್ತರಾಗುವಿರಿ. ರಕ್ಷಣೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಳ್ಳಿ; ಪವಿತ್ರಾತ್ಮರ ಕೊಡುಗೆಯಾದ ದೇವರ ವಾಕ್ಯವು ನಿಮಗೆ ಖಡ್ಗವಾಗಿರಲಿ. ಪವಿತ್ರಾತ್ಮರಿಂದ ಪ್ರೇರಿತರಾಗಿ ಎಲ್ಲಾ ಸಮಯಗಳಲ್ಲೂ ಪ್ರಾರ್ಥಿಸಿರಿ. ನಿಮ್ಮ ಕೋರಿಕೆ, ಬೇಡಿಕೆಗಳನ್ನು ದೇವರಿಗೆ ಅರ್ಪಿಸಿರಿ. ಎಚ್ಚರವಾಗಿದ್ದು ಎಲ್ಲಾ ದೇವಜನರಿಗಾಗಿ ಎಡೆಬಿಡದೆ ಪ್ರಾರ್ಥಿಸಿರಿ. ಶುಭಸಂದೇಶದ ಸತ್ಯಾರ್ಥವನ್ನು ನಿರ್ಭೀತನಾಗಿ ಸಾರಲು ಸೂಕ್ಷ್ಮವಾದ ಮಾತುಗಳನ್ನು ದೇವರು ನನಗೆ ದಯಪಾಲಿಸಲೆಂದು ನನಗೋಸ್ಕರ ಪ್ರಾರ್ಥಿಸಿರಿ. ಶುಭಸಂದೇಶದ ನಿಮಿತ್ತ ನಾನು ಸೆರೆಯಾಳಾಗಿದ್ದರೂ ಪ್ರಭುವಿನ ರಾಯಭಾರಿಯಾಗಿದ್ದೇನೆ. ಎಂತಲೇ, ಈ ಶುಭಸಂದೇಶವನ್ನು ಧೈರ್ಯದಿಂದ ಸೂಕ್ತ ರೀತಿಯಲ್ಲಿ ಸಾರಲಾಗುವಂತೆ ನನಗಾಗಿ ಪ್ರಾರ್ಥಿಸಿರಿ.
ಕೀರ್ತನೆ: 144:1, 2, 9-10
ಶ್ಲೋಕ: ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ ಆಶ್ರಯದುರ್ಗಕ್ಕೆ
ಶುಭಸಂದೇಶ: ಲೂಕ 13:31-35
ಕೆಲವು ಮಂದಿ ಫರಿಸಾಯರು ಯೇಸುಸ್ವಾಮಿಯ ಬಳಿಗೆ ಬಂದು, “ಇಲ್ಲಿಂದ ಹೊರಟು ಹೋಗಿಬಿಡಿ, ಹೆರೋದನು ನಿಮ್ಮನ್ನು ಕೊಲ್ಲಬೇಕೆಂದಿದ್ದಾನೆ,” ಎಂದರು. ಅದಕ್ಕೆ ಯೇಸು, “ನೀವು ಹೋಗಿ ಆ ನರಿಗೆ ಹೀಗೆಂದು ತಿಳಿಸಿರಿ: ಇಂದು ಮತ್ತು ನಾಳೆ ದೆವ್ವಗಳನ್ನು ಬಿಡಿಸುತ್ತೇನೆ, ರೋಗಿಗಳನ್ನು ಗುಣಪಡಿಸುತ್ತೇನೆ, ಮೂರನೆಯ ದಿನ ನನ್ನ ಕಾರ್ಯಸಿದ್ಧಿಗೆ ಬರುವುದು. ಹೇಗೂ ಇಂದು, ನಾಳೆ ಮತ್ತು ನಾಡಿದ್ದು ನಾನು ನನ್ನ ಮಾರ್ಗವನ್ನು ಮುಂದುವರಿಸಬೇಕು. ಪ್ರವಾದಿಯಾದವನು ಜೆರುಸಲೇಮಿನ ಹೊರಗೆ ಕೊಲೆಗೀಡಾಗುವುದು ಸಲ್ಲದು. “ಓ ಜೆರುಸಲೇಮೇ, ಜೆರುಸಲೇಮೇ, ಪ್ರವಾದಿಗಳ ಕೊಲೆಪಾತಕಿಯೇ, ದೇವರು ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲುಗಳಿಂದ ಹೊಡೆಯುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳಡಿ ಸೇರಿಸಿಕೊಳ್ಳುವಂತೆ, ನಾನು ನಿನ್ನ ಮಕ್ಕಳನ್ನು ಒಂದಾಗಿ ಸೇರಿಸಿ ಅಪ್ಪಿಕೊಳ್ಳಲು ಎಷ್ಟೋ ಬಾರಿ ಅಪೇಕ್ಷಿಸಿದೆ. ಆದರೆ ನೀನು ಒಪ್ಪಲಿಲ್ಲ. ಇಗೋ, ನಿಮ್ಮ ದೇವಾಲಯ ಪಾಳುಬೀಳುವುದು. ‘ಸರ್ವೇಶ್ವರನ ನಾಮದಲ್ಲಿ ಬರುವವರು ಧನ್ಯರು,’ ಎಂದು ನೀವಾಗಿ ಹೇಳುವ ದಿನದವರೆಗೂ ನೀವು ನನ್ನನ್ನು ಕಾಣಲಾರಿರಿ, ಎಂಬುದು ನಿಶ್ಚಯ,” ಎಂದರು.
No comments:
Post a Comment