ಮೊದಲನೇ ವಾಚನ: ಫಿಲಿಪ್ಪಿಯರಿಗೆ 1:1-11
ಸಹೋದರರೇ, ಕ್ರಿಸ್ತಯೇಸುವಿನಲ್ಲಿ ಜೀವಿಸುವ ಫಿಲಿಪ್ಪಿಯ ದೇವಜನರಿಗೆ, ಧರ್ಮಾಧಿಕಾರಿಗಳಿಗೆ ಹಾಗೂ ಧರ್ಮಸೇವಕರಿಗೆ - ಕ್ರಿಸ್ತಯೇಸುವಿನ ದಾಸರಾದ ಪೌಲ ಮತ್ತು ತಿಮೊಥೇಯರು ಜೊತೆಗೂಡಿ ಬರೆಯುವ ಪತ್ರ. ನಮ್ಮೆಲ್ಲರ ಪಿತನಾದ ದೇವರ ಮತ್ತು ಪ್ರಭುವಾದ ಯೇಸುಕ್ರಿಸ್ತರ ಆಶೀರ್ವಾದವೂ ಶಾಂತಿಸಮಾಧಾನವೂ ನಿಮಗೆ ಲಭಿಸಲಿ! ನಿಮ್ಮನ್ನು ಜ್ಞಾಪಿಸಿಕೊಳ್ಳುವಾಗಲೆಲ್ಲ ನಾನು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಿಮಗೋಸ್ಕರ ಯಾವಾಗಲೂ ತುಂಬುಹೃದಯದಿಂದ ಪ್ರಾರ್ಥಿಸುತ್ತೇನೆ. ಏಕೆಂದರೆ, ನಾನು ನಿಮ್ಮನ್ನು ಸಂಧಿಸಿದ ಮೊದಲ ದಿನದಿಂದ ಇಂದಿನವರೆಗೂ ನೀವು ನನ್ನೊಡನೆ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ಸಹಕರಿಸುತ್ತಿರುವಿರಿ. ಈ ಸತ್ಕಾರ್ಯವನ್ನು ನಿಮ್ಮಲ್ಲಿ ಪ್ರಾರಂಭಿಸಿದ ದೇವರು ಅದನ್ನು ಮುಂದುವರೆಸುತ್ತಾ, ಯೇಸುಕ್ರಿಸ್ತರು ಪುನರಾಗಮಿಸುವಷ್ಟರಲ್ಲಿ ಪೂರೈಸುವರು ಎಂಬುದೇ ನನ್ನ ದೃಢ ನಂಬಿಕೆ. ನೀವು ನನಗೆ ಆತ್ಮೀಯರು. ಆದಕಾರಣ, ನಿಮ್ಮೆಲ್ಲರನ್ನು ಕುರಿತು ನನಗೆ ಹೀಗನ್ನಿಸುವುದು ಸೂಕ್ತವೇ ಸರಿ. ನಾನು ಸೆರೆಯಲ್ಲಿರುವಾಗಲೂ ಶುಭಸಂದೇಶಕ್ಕಾಗಿ ಹೋರಾಡಿ ಆದನ್ನು ಸ್ಥಿರಗೊಳಿಸುವಾಗಲೂ ದೇವರ ಅನುಗ್ರಹದಲ್ಲಿ ನೀವು ನನ್ನೊಂದಿಗೆ ಸಹಭಾಗಿಗಳಾಗಿದ್ದಿರಿ. ಕ್ರಿಸ್ತಯೇಸುವಿನಲ್ಲಿರುವ ಉತ್ಕಟ ಪ್ರೀತಿಯಿಂದಲೇ ನಾನು ನಿಮ್ಮೆಲ್ಲರಿಗಾಗಿ ಹಂಬಲಿಸುತ್ತಿದ್ದೇನೆ; ಇದಕ್ಕೆ ದೇವರೇ ಸಾಕ್ಷಿ. ನೀವು ಪ್ರೀತಿಯಲ್ಲಿ ಪ್ರವರ್ಧಿಸುತ್ತಾ, ಪೂರ್ಣ ಜ್ಞಾನ ಹಾಗೂ ವಿವೇಕದಿಂದ ಕೂಡಿದವರಾಗಬೇಕೆಂಬುದೇ ನನ್ನ ಪ್ರಾರ್ಥನೆ. ಹೀಗೆ ನೀವು ಉತ್ತಮೋತ್ತಮವಾದುವುಗಳನ್ನೇ ಆರಿಸಿಕೊಂಡು, ಪ್ರಭು ಕ್ರಿಸ್ತರ ದಿನದಂದು ನಿರ್ದೋಷಿಗಳೂ ನಿಷ್ಕಳಂಕರೂ ಆಗಿ ಕಾಣಿಸಿಕೊಳ್ಳುವಿರಿ. ಯೇಸುಕ್ರಿಸ್ತರ ಮುಖಾಂತರ ಲಭಿಸುವ ಸತ್ಸಂಬಂಧದ ಫಲಗಳಿಂದ ತುಂಬಿದವರಾಗಿ ದೇವರಿಗೆ ಸ್ತುತಿಸಲ್ಲಿಸಿ, ಅವರ ಮಹಿಮೆ ಬೆಳಗುವಂತೆ ಮಾಡುವಿರಿ.
ಕೀರ್ತನೆ: 111:1-2, 3-4, 5-6
ಶ್ಲೋಕ: ಮಹತ್ತಾದವು ಪ್ರಭುವಿನಾ ಕಾರ್ಯಗಳು
ಶುಭಸಂದೇಶ: ಲೂಕ 14:1-6
ಅಂದು ಸಬ್ಬತ್‍ದಿನ. ಯೇಸುಸ್ವಾಮಿ ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದರು. ಎಲ್ಲರ ಕಣ್ಣು ಅವರ ಮೇಲಿತ್ತು. ಅಲ್ಲೇ ಅವರ ಮುಂದೆ ಜಲೋದರ ರೋಗಿಯೊಬ್ಬನು ಇದ್ದನು. “ಸಬ್ಬತ್‍ದಿನ ಗುಣಪಡಿಸುವುದು ಸರಿಯೋ ತಪ್ಪೋ?” ಎಂದು ಯೇಸು ಫರಿಸಾಯರನ್ನೂ ಶಾಸ್ತ್ರಜ್ಞರನ್ನೂ ಕೇಳಿದರು. ಅದಕ್ಕವರು ಮೌನವಾಗಿದ್ದರು. ಯೇಸು ರೋಗಿಯ ಕೈ ಹಿಡಿದು ಗುಣಪಡಿಸಿ ಕಳಿಸಿಬಿಟ್ಟರು. ಅನಂತರ, “ನಿಮ್ಮಲ್ಲಿ ಒಬ್ಬನ ಮಗನಾಗಲಿ, ಎತ್ತಾಗಲಿ ಬಾವಿಯಲ್ಲಿ ಬಿದ್ದರೆ, ಸಬ್ಬತ್‍ದಿನವಾಗಿದ್ದರೂ ನೀವು ತಡಮಾಡದೆ ಮೇಲಕ್ಕೆ ಎತ್ತುವುದಿಲ್ಲವೆ?” ಎಂದು ಕೇಳಿದರು. ಅದಕ್ಕೂ ಅವರು ನಿರುತ್ತರರಾದರು.
No comments:
Post a Comment