ಮೊದಲನೇ ವಾಚನ: ವಿಮೋಚನಕಾಂಡ 23:20-23
“ಇಗೋ, ದಾರಿಯಲ್ಲಿ ನಿಮ್ಮನ್ನು ಕಾಪಾಡುವುದಕ್ಕೆ ಹಾಗು ನಾನು ಗೊತ್ತುಮಾಡಿರುವ ಸ್ಥಳಕ್ಕೆ ನಿಮ್ಮನ್ನು ಕರೆದುತರುವುದಕ್ಕೆ ಒಬ್ಬ ದೂತನನ್ನು ನಿಮ್ಮ ಮುಂದೆ ಕಳಿಸುತ್ತೇನೆ. ನೀವು ಆತನಲ್ಲಿ ಲಕ್ಷ್ಯವಿಟ್ಟು ಮಾತಿಗೆ ಕಿವಿಗೊಡಬೇಕು. ಆತನಿಗೆ ಅವಿಧೇಯರಾಗಿ ಇರಬಾರದು. ಏಕೆಂದರೆ ಆತ ಬರುವುದು ನನ್ನ ಹೆಸರಿನಲ್ಲಿ. ನೀವು ಅವಿಧೇಯರಾದರೆ ಆತ ನಿಮ್ಮನ್ನು ಕ್ಷಮಿಸಲಾರನು. ನೀವು ಆತನ ಮಾತನ್ನು ಶ್ರದ್ಧೆಯಿಂದ ಆಲಿಸಿ, ನನ್ನ ಆಶೆಗಳನ್ನೆಲ್ಲ ಪಾಲಿಸಿದರೆ ನಾನು ನಿಮ್ಮ ಶತ್ರುಗಳಿಗೆ ಶತ್ರುವಾಗಿಯೂ ನಿಮ್ಮನ್ನು ಪೀಡಿಸುವವರನ್ನು ಪೀಡಿಸುವವನಾಗಿಯೂ ಇರುವೆನು. ನನ್ನ ದೂತನು ನಿಮ್ಮ ಮುಂದೆ ನಡೆದು ಅಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು, ಹಿವ್ವಿಯರು ಹಾಗೂ ಯೆಬೂಸಿಯರು ಇರುವ ನಾಡಿಗೆ ನಿಮ್ಮನ್ನು ಸೇರಿಸುವನು. ಅವರನ್ನಾದರೋ ನಾನು ನಿರ್ಮೂಲ ಮಾಡುವೆನು.
ಕೀರ್ತನೆ:
ಶ್ಲೋಕ: ಪ್ರಭೂ, ನಡೆಸೆನ್ನನು ಆ ಸನಾತನ ಪಥದಲಿ
ಮತ್ತಾಯ 18:1-5, 10
ಆ ಸಮಯದಲ್ಲಿ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು?” ಎಂದು ಕೇಳಿದರು. ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ಶಿಷ್ಯರ ನಡುವೆ ನಿಲ್ಲಿಸಿ ಹೀಗೆಂದರು: “ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು. ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ.” “ಎಚ್ಚರಿಕೆ! ಈ ಚಿಕ್ಕವರಲ್ಲಿ ಯಾರನ್ನೂ ತೃಣೀಕರಿಸಬೇಡಿ. ಸ್ವರ್ಗದಲ್ಲಿನ ಇವರ ದೂತರು ಸದಾಕಾಲ ನನ್ನ ಸ್ವರ್ಗೀಯ ಪಿತನ ಸಮ್ಮುಖದಲ್ಲಿ ಇದ್ದಾರೆ; ಇದು ನಿಮಗೆ ತಿಳಿದಿರಲಿ.
No comments:
Post a Comment