ಮೊದಲನೇ ವಾಚನ: ಸುಜ್ಞಾನಗ್ರಂಥ 12:13, 16-19
ಸರ್ವಜನರ ಸುಖ ಕೋರುವ ದೇವರು ನೀವಲ್ಲದೆ ಇನ್ನಾರೂ ಇಲ್ಲ. ನೀವು ವಿಧಿಸಿದ ದಂಡನೆ ಅನ್ಯಾಯವಲ್ಲ ಎಂದು ನೀವು ತೋರಿಸಬೇಕಾಗಿಲ್ಲ. ನಿಮ್ಮ ಶಕ್ತಿಯೇ ನ್ಯಾಯನೀತಿಗೆ ಆಧಾರ ನಿಮ್ಮ ಸಾರ್ವಭೌಮತ್ವವೇ ಎಲ್ಲ ಸಹನೆಗೆ ಮೂಲ ಕಾರಣ. ನೀವು ಸರ್ವಶಕ್ತರೆಂದು ಜನರು ನಂಬದಿರುವಾಗ ನೀವು ಶಕ್ತಿಯನ್ನು ತೋರಿಸುತ್ತೀರಿ; ಅದನು ಬಲ್ಲವರೊಂದಿಗೆ ವರ್ತಿಸುವಾಗ ಅವರ ಉದ್ಧಟತನವನ್ನು ಖಂಡಿಸುತ್ತೀರಿ. ಶಕ್ತಿಯಲ್ಲಿ ನೀವೇ ಸಾರ್ವಭೌಮ ಎಂದೇ, ತೀರ್ಪಿಡುತ್ತೀರಿ ಸಾಮ್ಯತೆಯಿಂದ ನಮ್ಮನ್ನಾಳುತ್ತೀರಿ ಬಹು ತಾಳ್ಮೆಯಿಂದ ನಿಮ್ಮ ಶಕ್ತಿ ನಿಮ್ಮಲ್ಲಿದೆ ಇಚ್ಛಿಸಿದಾಗಲೆಲ್ಲ ಇಂಥ ಕಾರ್ಯಗಳಿಂದ ಸಜ್ಜನನು ಜನಪ್ರಿಯ ನಾಗಿರಲು ಕಲಿಸಿಕೊಟ್ಟಿರುವಿರಿ ಪಾಪಗಳಿಗೆ ಪಶ್ಚಾತ್ತಾಪದ ಅವಕಾಶವಿತ್ತು ನಿಮ್ಮ ಮಕ್ಕಳನು ಭರವಸೆಯುಳ್ಳವರಾಗಿಸಿದಿರಿ.
ಕೀರ್ತನೆ: 86:5-6, 9-10, 15-16
ಶ್ಲೋಕ: ಪ್ರಭೂ, ನೀನು ದಯಾವಂತನು ಕ್ಷಮಿಸುವವನು
ಎರಡನೇ ವಾಚನ: ರೋಮನರಿಗೆ 8:26-2
ಸಹೋದರರೇ, ಪವಿತ್ರಾತ್ಮರು ಸಹ ನಮ್ಮ ದೌರ್ಬಲ್ಯದಲ್ಲಿ ನೆರವು ನೀಡುತ್ತಾರೆ. ಹೇಗೆ ಪ್ರಾರ್ಥಿಸಬೇಕು, ಯಾವುದಕ್ಕಾಗಿ ಪ್ರಾರ್ಥಿಸಬೇಕು ಎಂಬುದನ್ನು ನಾವು ತಿಳಿಯದವರು. ಪವಿತ್ರಾತ್ಮರೇ ಮಾತಿಗೆಟುಕದ ರೀತಿಯಲ್ಲಿ ಆತ್ಮಧ್ವನಿಯಿಂದ ನಮ್ಮ ಪರವಾಗಿ ದೇವರಲ್ಲಿ ವಿಜ್ಞಾಪಿಸುತ್ತಾರೆ. ಅಂತರಂಗಗಳನ್ನು ಈಕ್ಷಿಸುವ ದೇವರು ಪವಿತ್ರಾತ್ಮರ ಇಂಗಿತವೇನೆಂದು ಬಲ್ಲರು. ಏಕೆಂದರೆ, ದೇವರ ಚಿತ್ತದ ಪ್ರಕಾರವೇ ಪವಿತ್ರಾತ್ಮರು ದೇವಜನರಿಗಾಗಿ ಬಿನ್ನವಿಸುತ್ತಾರೆ.
ಶುಭಸಂದೇಶ: ಮತ್ತಾಯ13:24-43
ಯೇಸುಸ್ವಾಮಿ ಜನರಿಗೆ ಈ ಸಾಮತಿಯನ್ನು ಹೇಳಿದರು: “ಸ್ವರ್ಗಸಾಮ್ರಾಜ್ಯವು ತನ್ನ ಹೊಲದಲ್ಲಿ ಒಳ್ಳೆಯ ಗೋದಿಯನ್ನು ಬಿತ್ತಿದ ರೈತನನ್ನು ಹೋಲುತ್ತದೆ. ಒಂದು ರಾತ್ರಿ ಎಲ್ಲರೂ ನಿದ್ರಿಸುತ್ತಿರುವಾಗ, ಅವನ ವೈರಿ ಬಂದು, ಗೋದಿಯ ನಡುವೆ ಕಳೆಗಳನ್ನು ಬಿತ್ತಿ ಹೋದ. ಗೋದಿ ಬೆಳೆದು ತೆನೆಬಿಟ್ಟಾಗ ಕಳೆ ಬೆಳೆದಿರುವುದೂ ಗೋಚರವಾಯಿತು. ಆಗ ಆಳುಗಳು ತಮ್ಮ ಯಜಮಾನನ ಬಳಿಗೆ ಬಂದು, ‘ಸ್ವಾಮೀ, ನಿಮ್ಮ ಹೊಲದಲ್ಲಿ ಬಿತ್ತಿದ್ದು ಉತ್ತಮವಾದ ಗೋದಿ ಅಲ್ಲವೆ? ಜೊತೆಗೆ ಕಳೆಯೂ ಕಾಣಿಸಿಕೊಂಡಿದೆಯಲ್ಲಾ. ಅದೆಲ್ಲಿಂದ ಬಂತು?’ ಎಂದರು. ಯಜಮಾನ, ‘ಇದು ನನ್ನ ವೈರಿ ಮಾಡಿರುವ ಕೆಲಸ,’ ಎಂದ. ‘ಹಾಗಾದರೆ, ಕಳೆಯನ್ನು ಕಿತ್ತುಹಾಕೋಣವೇ’ ಎಂದರು ಆಳುಗಳು. ಅದಕ್ಕೆ ಯಜಮಾನ, ‘ಬೇಡ, ಬೇಡ; ಕಳೆಯನ್ನು ಕೀಳುವಾಗ, ಗೋದಿಯನ್ನೂ ಕಿತ್ತುಬಿಟ್ಟೀರಿ. 30ಸುಗ್ಗಿಯವರೆಗೆ ಎರಡೂ ಒಟ್ಟಿಗೆ ಬೆಳೆಯಲಿ; ಸುಗ್ಗಿಯ ಕಾಲದಲ್ಲಿ ಮೊದಲು ಕಳೆ ಕಿತ್ತು, ಸುಟ್ಟುಹಾಕಲು ಕಟ್ಟಿಡಿ; ಬಳಿಕ ಗೋದಿಯನ್ನು ಒಕ್ಕಣೆಮಾಡಿ ನನ್ನ ಕಣಜಕ್ಕೆ ತುಂಬಿರಿ, ಎಂದು ಕೊಯ್ಲುಗಾರರಿಗೆ ಹೇಳುತ್ತೇನೆ,’ ಎಂದ.” ಯೇಸುಸ್ವಾಮಿ ಇನ್ನೊಂದು ಸಾಮತಿಯನ್ನು ಹೇಳಿದರು: “ಸ್ವರ್ಗಸಾಮ್ರಾಜ್ಯ ಒಂದು ಸಾಸಿವೆ ಕಾಳನ್ನು ಹೋಲುತ್ತದೆ; ಈ ಕಾಳನ್ನು ತೆಗೆದುಕೊಂಡು ಹೋಗಿ ರೈತ ತನ್ನ ಹೊಲದಲ್ಲಿ ಬಿತ್ತಿದ.ಕಾಳುಗಳಲ್ಲಿ ಅತಿ ಸಣ್ಣದಾದ ಇದನ್ನು ಬಿತ್ತಿದಾಗ ಎಲ್ಲ ಸಸ್ಯಗಳಿಗಿಂತಲೂ ದೊಡ್ಡದಾಗಿ ಬೆಳೆದು ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಬಂದು ಇದರ ರೆಂಬೆಗಳಲ್ಲಿ ಗೂಡು ಕಟ್ಟಿ ವಾಸಿಸುತ್ತವೆ.” ಯೇಸುಸ್ವಾಮಿ ಮತ್ತೊಂದು ಸಾಮತಿಯನ್ನು ಜನರಿಗೆ ಹೇಳಿದರು: “ಸ್ವರ್ಗಸಾಮ್ರಾಜ್ಯ ಹುದುಗೆಬ್ಬಿಸುವ ಹುಳಿಯನ್ನು ಹೋಲುತ್ತದೆ. ಅದನ್ನು ಒಬ್ಬಾಕೆ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು.” ಇದೆಲ್ಲವನ್ನೂ ಯೇಸುಸ್ವಾಮಿ ಜನರಿಗೆ ಸಾಮತಿಗಳ ರೂಪದಲ್ಲಿ ಹೇಳಿದರು. ಸಾಮತಿಗಳಿಲ್ಲದೆ ಅವರಿಗೆ ಏನನ್ನೂ ಬೋಧಿಸಲಿಲ್ಲ. “ಸಾಮತಿಗಳಲ್ಲೇ ಬೋಧಿಸುವೆನು; ಲೋಕಾದಿಯಿಂದ ರಹಸ್ಯವಾದವುಗಳನ್ನು ಬಯಲುಗೊಳಿಸುವೆನು” ಎಂದು ದೇವರು ಪ್ರವಾದಿಯ ಮುಖಾಂತರ ತಿಳಿಸಿದ್ದ ಪ್ರವಚನವನ್ನು ಯೇಸು ಹೀಗೆ ನೆರವೇರಿಸಿದರು. ಯೇಸುಸ್ವಾಮಿ ಜನರನ್ನು ಬೀಳ್ಕೊಟ್ಟು ಮನೆಗೆ ಬಂದರು. ಶಿಷ್ಯರು ಅವರ ಬಳಿಗೆ ಬಂದು, “ಹೊಲದಲ್ಲಿ ಬಿತ್ತಲಾದ ಕಳೆಗಳ ಸಾಮತಿಯನ್ನು ನಮಗೆ ವಿವರಿಸಿರಿ,” ಎಂದು ಕೇಳಿಕೊಂಡರು. ಅದಕ್ಕೆ ಯೇಸು, “ಒಳ್ಳೆಯ ಗೋದಿಯನ್ನು ಬಿತ್ತುವವನು ಎಂದರೆ ನರಪುತ್ರನು; ಹೊಲವೇ ಈ ಲೋಕ; ಒಳ್ಳೆಯ ಕಾಳುಗಳೇ ಶ್ರೀಸಾಮ್ರಾಜ್ಯದ ಮಕ್ಕಳು; ಕಳೆಗಳೇ ಕೇಡಿಗನ ಮಕ್ಕಳು. ಆ ಕಳೆಗಳನ್ನು ಬಿತ್ತಿದ ವೈರಿಯೇ ಪಿಶಾಚಿ. ಸುಗ್ಗಿಯೇ ಕಾಲಾಂತ್ಯ. ಕೊಯ್ಲುಗಾರರೇ ದೇವದೂತರು. ಕಳೆಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟುಹಾಕಿದಂತೆ ಕಾಲಾಂತ್ಯದಲ್ಲೂ ನಡೆಯುವುದು. ನರಪುತ್ರನು ತನ್ನ ದೂತರನ್ನು ಕಳುಹಿಸುವನು. ಅವರು ಆತನ ರಾಜ್ಯದಿಂದ ಪಾಪಕ್ಕೆ ಕಾರಣವಾದುದೆಲ್ಲವನ್ನೂ ಮತ್ತು ದುಷ್ಕರ್ಮಿಗಳೆಲ್ಲರನ್ನೂ ಒಟ್ಟುಗೂಡಿಸಿ ಅಗ್ನಿಕುಂಡದಲ್ಲಿ ಹಾಕುವರು; ಅಲ್ಲಿ ಅವರು ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡುವರು. ಸದ್ದರ್ಮಿಗಳು ತಮ್ಮ ತಂದೆಯ ಸಾಮ್ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕಿವಿಯುಳ್ಳವನು ಕೇಳಿಸಿಕೊಳ್ಳಲಿ!" ಎಂದರು.
No comments:
Post a Comment