ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 55:10-11
ಮಳೆಯೂ ಹಿಮವೂ ಆಕಾಶಮಂಡಲದಿಂದಿಳಿದು ಬಂದು ತೋಯಿಸಿ, ಹಸಿರುಗೊಳಿಸಿ, ಹುಲುಸು ಮಾಡುತ್ತವೆ ಭೂಮಿಯನು. ಬಿತ್ತುವವನಿಗೆ ಬೀಜ, ಉಣ್ಣುವವನಿಗೆ ಆಹಾರ ಒದಗಿಸದೆ, ಹಿಂದಿರುಗಿ ಬರುವುದಿಲ್ಲ ಅವು ಸುಮ್ಮನೆ ಬಂದಲ್ಲಿಗೆ. ಅಂತೆಯೇ, ನನ್ನ ಬಾಯಿಂದ ಹೊರಡುವ ಮಾತು ನನ್ನ ಇಷ್ಟಾರ್ಥವನು ನೆರವೇರಿಸಿದ ಹೊರತು, ನನ್ನ ಉದ್ದೇಶವನು ಕೈಗೂಡಿಸಿದ ಹೊರತು. ನನ್ನ ಬಳಿಗೆ ವ್ಯರ್ಥವಾಗಿ ಹಿಂದಿರುಗದು.
ಕೀರ್ತನೆ: 65:10, 11, 12-13, 14
ಶ್ಲೋಕ: ಕೆಲವು ಬೀಜಗಳು ಭೂಮಿಯಲ್ಲಿ ಬಿದ್ದು ಫಲವನ್ನು ಕೊಟ್ಟವು
ಎರಡನೇ ವಾಚನ: ರೋಮನರಿಗೆ 8:18-23
ಇಂದಿನ ಕಾಲದಲ್ಲಿ ನಾವು ಅನುಭವಿಸುತ್ತಿರುವ ಕಷ್ಟಸಂಕಟಗಳು ಮುಂದೆ ನಮಗೆ ಪ್ರತ್ಯಕ್ಷವಾಗಲಿರುವ ಮಹಿಮೆಯೊಂದಿಗೆ ಹೋಲಿಸುವುದಕ್ಕೂ ಬಾರದವುಗಳೆಂದು ನಾನು ಎಣಿಸುತ್ತೇನೆ. ದೇವರ ಮಕ್ಕಳ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೋ ಎಂದು ಸೃಷ್ಟಿಸಮಸ್ತವು ಬಹು ಉತ್ಸುಕತೆಯಿಂದ ಎದುರು ನೋಡುತ್ತಿದೆ. ಸರ್ವಸೃಷ್ಟಿಯು ನಿರರ್ಥಕತೆಗೆ ಒಳಗಾಯಿತು. ಇದು ಅದರ ಸ್ವಂತ ಇಚ್ಛೆಯಿಂದಲ್ಲ. ದೇವರ ಇಚ್ಛೆಯಿಂದಲೇ ಆಯಿತು. ಆದರೂ ಸೃಷ್ಟಿಗೆ ನಿರೀಕ್ಷೆಯೊಂದಿದೆ. ಅದೇನೆಂದರೆ, ಸೃಷ್ಟಿಯು ಸಹ ವಿನಾಶವಿಧಿಯಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮಾಯುತ ಸ್ವಾತಂತ್ರ್ಯದಲ್ಲಿ ಪಾಲುಗೊಳ್ಳುತ್ತದೆ, ಎಂಬುದೇ. ಸೃಷ್ಟಿಸಮಸ್ತವು ಇಂದಿನವರೆಗೆ ನರಳುತ್ತಾ ಪ್ರಸವವೇದನೆಪಡುತ್ತಾ ಇದೆ ಎಂಬುದು ನಮಗೆ ತಿಳಿದಿದೆ. ಸೃಷ್ಟಿಮಾತ್ರವಲ್ಲ, ದೇವರ ವರದಾನಗಳಲ್ಲಿ ಪ್ರಥಮಫಲವಾಗಿ ಪವಿತ್ರಾತ್ಮ ಅವರನ್ನೇ ಪಡೆದಿರುವ ನಾವು ಸಹ ನಮ್ಮೊಳಗೇ ನರಳುತ್ತಿದ್ದೇವೆ. ದೇವರ ಮಕ್ಕಳಿಗೆ ದೊರೆಯುವ ಸೌಭಾಗ್ಯವನ್ನೂ ನಮ್ಮ ಸಂಪೂರ್ಣ ವಿಮೋಚನೆಯನ್ನೂ ನಿರೀಕ್ಷಿಸುತ್ತಿದ್ದೇವೆ.
ಶುಭಸಂದೇಶ: ಮತ್ತಾಯ 13:1-23

ಯೇಸುಸ್ವಾಮಿ ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತರು. 2ಜನರು ತಂಡೋಪತಂಡವಾಗಿ ಕೂಡಿಬಂದುದರಿಂದ ದೋಣಿ ಹತ್ತಿ ಕುಳಿತುಕೊಳ್ಳಬೇಕಾಯಿತು. ಜನರು ದಡದಲ್ಲೇ ನಿಂತರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಸಾಮತಿಯ ರೂಪದಲ್ಲಿ ಹೇಳಿದರು: “ಒಬ್ಬ ರೈತ ಬಿತ್ತುವುದಕ್ಕೆ ಹೋದ. ಬಿತ್ತನೆ ಮಾಡುತ್ತಿದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಬಿದ್ದದ್ದೇ ಹಕ್ಕಿಗಳು ಬಂದು ಆ ಬೀಜವನ್ನು ತಿಂದುಬಿಟ್ಟವು. ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಕಲ್ಲು ನೆಲದ ಮೇಲೆ ಬಿದ್ದವು. ಅಲ್ಲಿ ಮಣ್ಣು ತೆಳ್ಳಗಿದ್ದುದರಿಂದ ಅವು ಬೇಗನೆ ಮೊಳೆತವು. ಆದರೆ ಬಿಸಿಲೇರಿದಾಗ ಬಾಡಿದವು. ಬೇರು ಬಲವಾಗಿಲ್ಲದ ಕಾರಣ ಒಣಗಿಹೋದವು. ಮತ್ತೆ ಕೆಲವು ಬೀಜಗಳು ಮುಳ್ಳುಪೊದೆಗಳ ನಡುವೆ ಬಿದ್ದವು. ಆ ಪೊದೆಗಳು ಸಸ್ಯಗಳ ಸಮೇತ ಬೆಳೆದು, ಅವುಗಳನ್ನು ಅಡಗಿಸಿಬಿಟ್ಟವು. ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಮೊಳೆತು, ಬೆಳೆದು, ತೆನೆಬಿಟ್ಟವು. ಕೆಲವು ನೂರರಷ್ಟು ಮತ್ತೆ ಕೆಲವು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಫಸಲನ್ನು ಕೊಟ್ಟವು. ಕೇಳಲು ಕಿವಿಯುಳ್ಳವನು ಕೇಳಿಸಿಕೊಳ್ಳಲಿ,” ಎಂದು ಒತ್ತಿ ಹೇಳಿದರು. ತರುವಾಯ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ನೀವು ಜನರೊಡನೆ ಮಾತನಾಡುವಾಗ ಸಾಮತಿಗಳನ್ನು ಉಪಯೋಗಿಸುತ್ತೀರಿ, ಏಕೆ?” ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಸ್ವರ್ಗಸಾಮ್ರಾಜ್ಯದ ರಹಸ್ಯಗಳನ್ನು ಅರಿತುಕೊಳ್ಳುವ ಸದವಕಾಶ ಲಭಿಸಿರುವುದು ನಿಮಗೆ, ಅವರಿಗಲ್ಲ. ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಅವನು ಸಮೃದ್ಧನಾಗುತ್ತಾನೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ. ಅವರೊಡನೆ ಸಾಮತಿ ರೂಪದಲ್ಲಿ ಮಾತನಾಡುವುದಕ್ಕೆ ಕಾರಣ ಇದು: ಅವರು ಕಣ್ಣಾರೆ ನೋಡಿದರೂ ಕಾಣುವುದಿಲ್ಲ; ಕಿವಿಯಾರೆ ಕೇಳಿದರೂ ಕಿವಿಗೊಡುವುದಿಲ್ಲ; ಗ್ರಹಿಸುವುದೂ ಇಲ್ಲ. ಪ್ರವಾದಿ ಯೆಶಾಯನ ಈ ಪ್ರವಚನ ಅವರಲ್ಲಿ ಈಡೇರುತ್ತದೆ. ‘ಕೇಳಿ ಕೇಳಿಯೂ ಗ್ರಹಿಸರು ನೋಡಿ ನೋಡಿಯೂ ಕಾಣರು ಈ ಜನರ ಹೃದಯ ಕಲ್ಲಾಗಿದೆ ಕಿವಿ ಮಂದವಾಗಿದೆ ಕಣ್ಣು ಮಬ್ಬಾಗಿದೆ. ಇಲ್ಲದಿದ್ದರೆ ಇವರ ಕಣ್ಣು ಕಾಣುತ್ತಾ ಕಿವಿ ಕೇಳುತ್ತಾ ಹೃದಯ ಗ್ರಹಿಸುತ್ತಾ ನನ್ನತ್ತ ತಿರುಗುತ್ತಿದ್ದರು; ದೇವರಾದ ನಾನಿವರನು ಸ್ವಸ್ಥಪಡಿಸುತ್ತಿದ್ದೆನು.’ “ನೀವಾದರೋ ಭಾಗ್ಯವಂತರು. ನಿಮ್ಮ ಕಣ್ಣುಗಳು ಕಾಣುತ್ತವೆ, ಕಿವಿಗಳು ಕೇಳುತ್ತವೆ. ಎಷ್ಟೋ ಪ್ರವಾದಿಗಳು ಹಾಗೂ ಸತ್ಪುರುಷರು ನೀವು ನೋಡುವುದನ್ನು ನೋಡುವುದಕ್ಕೂ, ಕೇಳುವುದನ್ನು ಕೇಳುವುದಕ್ಕೂ ಅಪೇಕ್ಷಿಸಿದರು. ಆದರೆ ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂಬುದು ನಿಮಗೆ ತಿಳಿದಿರಲಿ. “ಈಗ ಬಿತ್ತುವವನ ಸಾಮತಿಯ ಅರ್ಥವನ್ನು ಕೇಳಿ:ಒಬ್ಬನು ಶ್ರೀಸಾಮ್ರಾಜ್ಯದ ಸಂದೇಶವನ್ನು ಕೇಳಿ ಅದನ್ನು ಗ್ರಹಿಸದೆಹೋದರೆ, ಕೇಡಿಗನು ಬಂದು ಅವನ ಹೃದಯದಲ್ಲಿ ಬಿತ್ತಿದ್ದ ಬೀಜವನ್ನು ತೆಗೆದೆಸೆಯುತ್ತಾನೆ. ಇವನು ಕಾಲ್ದಾರಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ. ಬೇರೊಬ್ಬನು ಈ ಸಂದೇಶವನ್ನು ಕೇಳಿದ ಕೂಡಲೇ ಅದನ್ನು ಸಂತೋಷದಿಂದ ಸ್ವೀಕರಿಸುತ್ತಾನೆ. ಆದರೆ ಅದು ತನ್ನಲ್ಲಿ ಬೇರೂರದ ಕಾರಣ ಕೊಂಚಕಾಲ ಮಾತ್ರ ಇದ್ದು, ಸಂದೇಶದ ನಿಮಿತ್ತ ಕಷ್ಟಕೋಟಲೆಗಳು ಬಂದೊದಗಿದಾಗ ಕೂಡಲೇ ಎಡವಿಬೀಳುತ್ತಾನೆ. ಇವನು ಕಲ್ಲು ನೆಲದ ಮೇಲೆ ಬಿದ್ದ ಬೀಜವನ್ನು ಹೋಲುತ್ತಾನೆ. ಇನ್ನೊಬ್ಬನು ಸಂದೇಶವನ್ನೇನೋ ಕೇಳುತ್ತಾನೆ, ಆದರೆ ಪ್ರಾಪಂಚಿಕ ಚಿಂತನೆಗಳು, ಐಶ್ವರ್ಯದ ವ್ಯಾಮೋಹಗಳು ಆ ಸಂದೇಶವನ್ನು ಫಲಬಿಡದಂತೆ ಅದುಮಿಬಿಡುತ್ತವೆ; ಇವನು ಮುಳ್ಳುಪೊದೆಗಳಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ. ಇನ್ನೊಬ್ಬನು ವಾಕ್ಯವನ್ನು ಕೇಳುತ್ತಾನೆ, ಗ್ರಹಿಸಿಕೊಳ್ಳುತ್ತಾನೆ; ಫಲಪ್ರದನಾಗಿ ನೂರರಷ್ಟು, ಅರವತ್ತರಷ್ಟು, ಮೂವತ್ತರಷ್ಟು ಫಲಕೊಡುತ್ತಾನೆ. ಇವನು ಹದವಾದ ಭೂಮಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ,” ಎಂದರು.
No comments:
Post a Comment