05.07.2020 - "ನನ್ನ ನೊಗ ಹಗುರ, ನನ್ನ ಹೊರೆ ಸುಗಮ,"

ಮೊದಲನೇ ವಾಚನ: ಜೆಕರ್ಯ 9:9-10

ಸಂತೋಷಿಸಿರಿ, ಆನಂದಿಸಿರಿ, ಸಿಯೋನಿನ ನಿವಾಸಿಗಳೇ, ಹರ್ಷೋದ್ಗಾರ ಮಾಡಿರಿ, ಜೆರುಸಲೇಮಿನ ಜನಗಳೇ. ಇಗೋ, ಬರುತಿಹನು ನಿಮ್ಮ ಅರಸನು ನ್ಯಾಯವಂತನು, ಜಯಶೀಲನು ಆತನು ವಿನಮ್ರನು, ಹೇಸರಗತ್ತೆಯನ್ನೇರಿ ಸಾಗಿಬರುತಿಹನು. ಕಿತ್ತುಹಾಕುವೆನು ಎಫ್ರಯಿಮಿನ ರಥಬಲವನು ನಿಶ್ಯೇಷಮಾಡುವೆನು ಜೆರುಸಲೇಮಿನ ಅಶ್ವಬಲವನು ಮುರಿಯಲಾಗುವುದು ಯುದ್ಧದ ಬಿಲ್ಲುಗಳನು. ಘೋಷಿಸುವೆನು ಶಾಂತಿಯನು ರಾಷ್ಟ್ರಗಳಿಗೆ ಆತನ ರಾಜ್ಯಭಾರ ಸಮುದ್ರದಿಂದ ಸಮುದ್ರದವರೆಗೆ ಯೂಫ್ರೆಟಿಸ್ ನದಿಯಿಂದ ಭುವಿಯ ಕಟ್ಟಕಡೆಯವರೆಗೆ.

ಕೀರ್ತನೆ: 145:1-2, 8-9, 10-11, 13-14

ಶ್ಲೋಕ: ದೇವಾ, ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ ನಮನ

ಎರಡನೇ ವಾಚನ: ರೋಮನರಿಗೆ 8:9, 11-13

ನಿಮ್ಮಲ್ಲಿ ನಿಜವಾಗಿಯೂ ದೇವರ ಆತ್ಮವು ನೆಲಸಿದ್ದರೆ ನೀವು ಶರೀರ ಸ್ವಭಾವಕ್ಕೆ ಅನುಸಾರವಾಗಿ ಜೀವಿಸದೆ ಪವಿತ್ರಾತ್ಮ ಅವರ ಚಿತ್ತಕ್ಕೆ ಅನುಸಾರವಾಗಿ ಜೀವಿಸುತ್ತೀರಿ. ಯಾರಲ್ಲಿ ಕ್ರಿಸ್ತಯೇಸುವಿನ ಆತ್ಮ ಇಲ್ಲವೋ ಅಂಥವನು ಕ್ರಿಸ್ತಯೇಸುವಿಗೆ ಸೇರಿದವನಲ್ಲ. ಯೇಸುವನ್ನು ಮರಣದಿಂದ ಎಬ್ಬಿಸಿದ ದೇವರ ಆತ್ಮ ನಿಮ್ಮಲ್ಲಿ ನೆಲೆಗೊಂಡಿರಲಿ. ಆಗ ಕ್ರಿಸ್ತಯೇಸುವನ್ನು ಮರಣದಿಂದ ಎಬ್ಬಿಸಿದ ದೇವರು ನಿಮ್ಮಲ್ಲಿ ನೆಲೆಗೊಂಡಿರುವ ಆತ್ಮನ ಮುಖಾಂತರ ನಿಮ್ಮ ನಶ್ವರ ದೇಹಗಳಿಗೂ ಜೀವವನ್ನೀಯುವರು. ಆದ್ದರಿಂದ ಸಹೋದರರೇ, ನಾವು ಶರೀರ ಸ್ವಭಾವದ ಹಂಗಿನಲ್ಲಿಲ್ಲ. ಅದರ ಆಶಾಪಾಶಗಳಿಗೆ ಅನುಗುಣವಾಗಿ ಬಾಳುವ ಹಂಗಿನಲ್ಲೂ ಇಲ್ಲ. ನೀವು ಶರೀರ ಸ್ವಭಾವಕ್ಕೆ ಅನುಸಾರವಾಗಿ ಬಾಳಿದರೆ ಖಂಡಿತವಾಗಿ ಸಾಯುವಿರಿ. ಪವಿತ್ರಾತ್ಮ ಅವರ ನೆರವಿನಿಂದ ದೈಹಿಕ ದುರಭ್ಯಾಸಗಳನ್ನು ದಮನಮಾಡಿದರೆ ಜೀವಿಸುವಿರಿ.

ಶುಭಸಂದೇಶ: ಮತ್ತಾಯ 11:25-30


ಆ ಸಮಯದಲ್ಲಿ ಯೇಸುಸ್ವಾಮಿ, "ಪಿತನೇ, ಪರಲೋಕ ಭೂಲೋಕಗಳ ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯಗಳನ್ನು ಮರೆಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು, ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. "ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ; ಪುತ್ರನು ಯಾರೆಂಬುದನ್ನು ಪಿತನೇ ಹೊರತು ಬೇರಾರೂ ಅರಿಯರು. ಪಿತನು ಯಾರು ಎಂಬುದನ್ನು ಪುತ್ರನು ಮತ್ತು ಯಾವನಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ, ಅವರೇ ಹೊರತು ಮತ್ತಾರೂ ಅರಿಯರು. ಶ್ರಮಜೀವಿಗಳಿಗೆ ವಿಶ್ರಾಂತಿದಾತ "ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುತ್ತೇನೆ. ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ," ಎಂದರು.

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...