18.02.2020 - "ನೀವಿನ್ನೂ ಮಂದಮತಿಗಳಾಗಿರುವಿರೋ? ಕಿವಿಗಳಿದ್ದೂ ಕೇಳಲಾರಿರಾ? ಕಣ್ಣುಗಳಿದ್ದೂ ನೋಡಲಾರಿರಾ?"

ಮೊದಲನೇ ವಾಚನ: ಯಕೋಬ 1:12-18

ಸಂಕಟ ಶೋಧನೆಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವವನೇ ಧನ್ಯನು. ಅವನು ಪರಿಶೋಧನೆಯಲ್ಲಿ ಯಶಸ್ವಿಯಾದ ಮೇಲೆ ಸಜ್ಜೀವವೆಂಬ ಜಯಮಾಲೆಯನ್ನು ಪಡೆಯುತ್ತಾನೆ. ದೇವರು ತಮ್ಮನ್ನು ಪ್ರೀತಿಸುವವರಿಗೆ ಇದನ್ನು ಕಾದಿರಿಸಿರುತ್ತಾರೆ. ಪಾಪಪ್ರಲೋಭನೆಗೆ ಒಳಗಾದಾಗ, “ಈ ಪ್ರಲೋಭನೆಗಳು ದೇವರಿಂದಲೇ ಬಂದವು,” ಎಂದು ಯಾರೂ ಹೇಳದಿರಲಿ. ಏಕೆಂದರೆ, ದೇವರು ಸ್ವತಃ ಪಾಪಪ್ರಲೋಭನೆಗೆ ಗುರಿಯಾಗುವುದಿಲ್ಲ ಮತ್ತು ಯಾರನ್ನೂ ಅಂಥ ಪ್ರಲೋಭನೆಗೆ ಗುರಿಪಡಿಸುವುದಿಲ್ಲ. ಮಾನವನು ಪ್ರಲೋಭನೆಗೆ ಒಳಗಾಗುವುದು ತನ್ನ ದುರಿಚ್ಛೆಯಿಂದಲೇ. ಅದು ಅವನನ್ನು ಆಕರ್ಷಿಸಿ ಮರುಳುಗೊಳಿಸುತ್ತದೆ. ದುರಿಚ್ಛೆ ಗರ್ಭಧರಿಸಿ ಪಾಪಕ್ಕೆ ಜನ್ಮವೀಯುತ್ತದೆ; ಪಾಪವು ಪೂರ್ತಿಯಾಗಿ ಬೆಳೆದು ಮರಣವನ್ನು ಹಡೆಯುತ್ತದೆ. ಪ್ರಿಯ ಸಹೋದರರೇ, ಮೋಸಹೋಗಬೇಡಿ. ಎಲ್ಲಾ ಯೋಗ್ಯ ವರಗಳೂ ಉತ್ತಮಕೊಡುಗೆಗಳೂ ಬರುವುದು ಮೇಲಿನಿಂದಲೇ. ಜ್ಯೋತಿರ್ಮಂಡಲವನ್ನು ಉಂಟುಮಾಡಿದ ದೇವರೇ ಅವುಗಳ ಮೂಲದಾತರು. ಅವರಲ್ಲಿ ಚಂಚಲತೆ ಇಲ್ಲ, ಮಬ್ಬು ಮುಸುಕಿನ ಛಾಯೆಯೂ ಇಲ್ಲ. ಸೃಷ್ಟಿಗಳಲ್ಲೆಲ್ಲಾ ನಾವು ಪ್ರಥಮ ಫಲವಾಗುವಂತೆ ದೇವರು ತಮ್ಮ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ನಮಗೆ ಜೀವವಿತ್ತರು.

ಕೀರ್ತನೆ: 94:12-13, 14-15, 18-19

ಶ್ಲೋಕ: ಪ್ರಭೂ, ನಿನ್ನಿಂದ ಧರ್ಮೋಪದೇಶ ಪಡೆದವನು ಧನ್ಯ

ಶುಭಸಂದೇಶ: ಮಾರ್ಕ 8:14-21


ಶಿಷ್ಯರು ಬುತ್ತಿಯನ್ನು ಕಟ್ಟಿಕೊಳ್ಳಲು ಮರೆತಿದ್ದರು. ದೋಣಿಯಲ್ಲಿ ಒಂದೇ ಒಂದು ರೊಟ್ಟಿಯಿತ್ತು. ಯೇಸುಸ್ವಾಮಿ ಅವರಿಗೆ, “ಎಚ್ಚರಿಕೆ, ಫರಿಸಾಯರ ಹಾಗೂ ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ,” ಎಂದು ಹೇಳಿದರು. ಇದನ್ನು ಕೇಳಿದ ಶಿಷ್ಯರು, “ನಮ್ಮಲ್ಲಿ ರೊಟ್ಟಿಯಿಲ್ಲದ್ದರಿಂದ ಹೀಗೆ ಹೇಳುತ್ತಿರಬಹುದೇ” ಎಂದು ಚರ್ಚಿಸತೊಡಗಿದರು. ಆ ಚರ್ಚೆಯನ್ನು ಯೇಸು ಗಮನಿಸಿ “ರೊಟ್ಟಿ ಇಲ್ಲವೆಂದು ಚರ್ಚೆ ಏಕೆ? ನಿಮಗೆ ಇನ್ನೂ ಅರಿವಾಗಲಿ, ಗ್ರಹಿಕೆಯಾಗಲಿ ಇಲ್ಲವೇ? ನೀವಿನ್ನೂ ಮಂದಮತಿಗಳಾಗಿರುವಿರೋ? ಕಿವಿಗಳಿದ್ದೂ ಕೇಳಲಾರಿರಾ? ಕಣ್ಣುಗಳಿದ್ದೂ ನೋಡಲಾರಿರಾ? ನಾನು ಐದು ರೊಟ್ಟಿಗಳಿಂದ ಐದುಸಾವಿರ ಜನರನ್ನು ತೃಪ್ತಿಪಡಿಸಿದಾಗ ಉಳಿದ ರೊಟ್ಟಿಯ ತುಂಡುಗಳನ್ನು ಎಷ್ಟು ಬುಟ್ಟಿ ತುಂಬಾ ಒಟ್ಟುಗೂಡಿಸಿದಿರಿ? ನಿಮಗೆ ಜ್ಞಾಪಕವಿಲ್ಲವೇ?” ಎಂದು ಕೇಳಿದರು. “ಹನ್ನೆರಡು ಬುಟ್ಟಿಗಳು” ಎಂದು ಅವರು ಉತ್ತರವಿತ್ತರು. “ಅಲ್ಲದೆ ನಾನು ಏಳು ರೊಟ್ಟಿಗಳಿಂದ ನಾಲ್ಕುಸಾವಿರ ಜನರನ್ನು ತೃಪ್ತಿಪಡಿಸಿದಾಗ ಎಷ್ಟು ಕುಕ್ಕೆತುಂಬಾ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಿರಿ?” ಎಂದು ಪುನಃ ಅವರನ್ನು ಕೇಳಲು, “ಏಳು ಕುಕ್ಕೆಗಳು,” ಎಂದರು. ಆಗ ಯೇಸು, “ಇಷ್ಟಾದರೂ ನಿಮಗಿನ್ನೂ ತಿಳುವಳಿಕೆ ಇಲ್ಲವೆ?” ಎಂದರು. 

No comments:

Post a Comment

15.07.2026 - ಯೇಸುಸ್ವಾಮಿ ಅದ್ಭುತ ಕಾರ್ಯಗಳನ್ನು ಹೇರಳವಾಗಿ ಮಾಡಿದ್ದರೋ ಆ ಪಟ್ಟಣಗಳ ಜನರೇ ಪಾಪಕ್ಕೆ ವಿಮುಖರಾಗಲಿಲ್ಲ

  ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 7:1-9 ಅದು ಆಹಾಜನ ಕಾಲ. ಇವನು ಯೋತಾಮನ ಮಗ, ಉಜ್ಜೀಯನ ಮೊಮ್ಮಗ, ಜುದೇಯದ ಅರಸ. ಇವನ ಕಾಲದಲ್ಲಿ ಸಿರಿಯದ ಅರಸ ರೆಚೀನ ಮತ್ತು ರೆಮ...