"ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಆಚಾರಗಳನ್ನೇಕೆ ಅನುಸರಿಸುವುದಿಲ್ಲ?"
ಒಮ್ಮೆ ಫರಿಸಾಯರು ಮತ್ತು ಜೆರುಸಲೇಮಿನಿಂದ ಬಂದ ಕೆಲವು ಮಂದಿ ಧರ್ಮಶಾಸ್ತ್ರಿಗಳು ಯೇಸುಸ್ವಾಮಿಯ ಬಳಿಗೆ ಬಂದು ಸೇರಿದರು.ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ,ಎಂದರೆ ಶುದ್ಧಾಚಾರಕ್ಕೆ ಅನುಗುಣವಾಗಿ ಕೈ ತೊಳೆದುಕೊಳ್ಳದೆ ಊಟ ಮಾಡುವುದನ್ನು ಅವರು ನೋಡಿದರು.ಫರಿಸಾಯರು ಇತರ ಯೆಹೂದ್ಯರಂತೆ ಕೈಗಳನ್ನು ವಿಧಿಬದ್ಧವಾಗಿ ತೊಳೆಯದೆ ಊಟ ಮಾಡುವುದಿಲ್ಲ. ಇದು ಅವರ ಪೂರ್ವಜರಿಂದ ಬಂದ ಸಂಪ್ರದಾಯ, ಪೇಟೆ ಬೀದಿಗಳ್ಳಿಗೆ ಹೋಗಿ ಬಂದರೆ ಸ್ನಾನ ಮಾಡಿಯೇ ಊಟ ಮಾಡುವುದು; ತಂಬಿಗೆ,ಬೆಂಬು,ತಪ್ಪಲೆಗಳನ್ನು ಸೂತ್ರ ಬದ್ಧವಾಗಿ ತೊಳೆಯುವಿದು; ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದವು. ಆದುದರಿಂದ ಫರಿಸಾಯರೂ ಧರ್ಮಶಾಸ್ತ್ರಿಗಳು. “ ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಆಚಾರಗಳನ್ನೇಕೆ ಅನುಸರಿಸುವುದಿಲ್ಲ?ಅಶುದ್ಧವಾದ ಕೈಗಳಿಂದಲೇ ಅವರು ಊಟಮಾಡುತ್ತಿದ್ದಾರಲ್ಲಾ?” ಎಂದು ಯೇಸುವನ್ನು ಕೇಳಿದರು. ಅದಕ್ಕೆ ಯೇಸು”ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ಎಷ್ಟೊಂದು ಚೆನ್ನಾಗಿ ಪ್ರವಾದಿಸಿದ್ದಾನೆ:
‘ಬರಿ ಮಾತಿನ ಮನ್ನಣೆಯನ್ನೀಯುತ,ಹೃದಯವನು ದೂರವಿರಿಸುತ, ನರಕಲ್ಪಿತ ಕಟ್ಟಳೆಗಳನೆ ದೇವ ವಾಕ್ಯವೆಂದು ಉಪದೇಶಿಸುತ,ಈ ಜನರೆನಗೆ ಮಾಡುವ ಆರಾಧನೆ ವ್ಯರ್ಥ! ಎಂದರು ದೇವರು.’ ನೀವು ದೇವರ ಆಜ್ಞೆಯನು ತೊರೆದು ಮಾನವನಿರ್ಮಿತ ಸಂಪ್ರದಾಯಗಳನ್ನು ನಿಷ್ಠೆಯಿಂದ ಪರಿಪಾಲಿಸುತ್ತಿದ್ದೀರಿ. ಸಂಪ್ರದಾಯದ ನೆಪದಲ್ಲಿ ದೇವರ ಆಜ್ಞೆಗಳನ್ನು ನೀವು ಜಾಣ್ಮೆಯಿಂದ ಬದಿಗೊತ್ತಿರುವುದು ಬಲು ಚೆನ್ನಾಗಿದೆ! ‘ನಿಮ್ಮ ತಂದೆ ತಾಯಿಗಳನ್ನು ಗೌರವಿಸಬೇಕು; ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣ ದಂಡನೆ ಆಗಲೇಬೇಕು,’ ಎಂಬುದು ಮೋಶೆ ವಿಧಿಸಿದ ಆಜ್ಞೆ. ನೀವಾದರೋ, ಒಬ್ಬನು ತನ್ನ ತಂದೆಗೆ ಅಥವಾ ತಾಯಿಗೆ ’ನನ್ನಿಂದ ನಿಮಗೆ ಸಲ್ಲತಕ್ಕದು “ಕೊರ್ಬಾನ್”( ಎಂದರೆ ದೇವರಿಗೆ ಮುಡಿಪು) ಎಂದು ಹೇಳಿಬಿಟ್ಟರೆ ಸಾಕು, ಮುಂದೆ ಅವನು ತನ್ನ ತಂದೆ ತಾಯಿಗಳಿಗೆ ಯಾವ ಸಹಾಯವನ್ನೂ ಮಾಡುವುದಕ್ಕೆ ನೀವು ಬಿಡುವುದಿಲ್ಲ. ಹೀಗೆ ನೀವು ಬೋಧಿಸುವ ಸಂಪ್ರದಾಯಗಳಿಂದಾಗಿ ದೇವರ ವಾಕ್ಯವನ್ನೇ ನಿರರ್ಥಕಗೊಳಿಸುತ್ತೀರಿ. ಇಂಥಾ ಕೃತ್ಯಗಳು ಇನ್ನೆಷ್ಟೋ!” ಎಂದರು.
No comments:
Post a Comment