ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ - 8: 1-10
ಜನರೆಲ್ಲರೂ ಉಂಡು ತೃಪ್ತರಾದರು.
ಜನರು ಪುನ: ದೊಡ್ಡ ಸಂಖ್ಯೆಯಲ್ಲಿ ಬಂದು ನೆರದಿದ್ದರು. ಊಟ ಮಾಡಲು ಅವರಲ್ಲಿ ಆಹಾರವಿರಲಿಲ್ಲ.ಆಗ ಯೇಸುಸ್ವಾಮಿ ಶಿಷ್ಯರನ್ನು ಕರೆದು” ಈ ಜನರು ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದ್ದಾರೆ; ಊಟಕ್ಕೆ ಇವರಲ್ಲಿ ಏನೂ ಇಲ್ಲ. ಇವರನ್ನು ಕಂಡಾಗ ನನ್ನ ಹೃದಯ ಕರಗುತ್ತದೆ. ಬರೀ ಹೊಟ್ಟೆಯಲಿ ಮನೆಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಬಿದ್ದಾರು.ಕೆಲವರಂತೂ ಬಹುದೂರದಿಂದ ಬಂದಿದ್ದಾರೆ,” ಎಂದರು. ಅದಕ್ಕೆ ಶಿಷ್ಯರು “ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ? ಎಂದು ಮರುನುಡಿದರು. ಯೇಸು “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಲು ಅವರು,” ಏಳು ಇವೆ,” ಎಂದರು. ಯೇಸು ಜನರ ಗುಂಪಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಆಜ್ಞಾಪಿಸಿದರು. ಅನಂತರ ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಸಲ್ಲಿಸಿ,ಅವುಗಳನ್ನು ಮುರಿದು, ಜನರ ಗುಂಪಿಗೆ ಬಡಿಸಲು ಶಿಷ್ಯರಿಗೆ ಕೊಟ್ಟರು. ಅವರು ಬಡಿಸಿದರು.ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು. ಯೇಸು ಅವುಗಳಿಗೆ ದೇವಸ್ತುತಿಮಾಡಿ ಅವುಗಳನ್ನು ಹಂಚಬೇಕೆಂದು ಆಜ್ಞಾಪಿಸಿದರು. ಜನರೆಲ್ಲರೂ ಉಂಡು ತೃಪ್ತರಾದರು. ಉಳಿದ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಾಗ. ಅವು ಏಳು ಕುಕ್ಕೆಗಳ ತುಂಬ ಆದವು. ಊಟ ಮಾಡಿದವರ ಸಂಖ್ಯೆಯ ನಾಲ್ಕು ಸಾವಿರ. ಊಟವಾದ ಬಳಿಕ ಯೇಸು ಜನರನ್ನು ಕಳುಹಿಸಿಕೊಟ್ಟು ವಿಳಂಬ ಮಾಡದೆ ದೋಣಿಯನ್ನು ಹತ್ತಿ, ಶಿಷ್ಯರೊಡನೆ ದಲ್ಮನೂಥ ಎಂಬ ಪ್ರದೇಶಕ್ಕೆ ಹೋದರು.
No comments:
Post a Comment