21.03.25 - “ ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಆ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು"

ಮೊದಲನೇ ವಾಚನ: ಆದಿಕಾಂಡ 37:3-4, 12-13, 17-18


ಜೋಸೆಫನು ಯಕೋಬನಿಗೆ ಮುಪ್ಪಿನಲ್ಲಿ ಹುಟ್ಟಿದ ಮಗ. ಎಂದೇ ಯಕೋಬನಿಗೆ ಅವನ ಮೇಲೆ ಮಿಕ್ಕ ಮಕ್ಕಳಿಗಿಂತ ಮಿಗಿಲಾದ ಪ್ರೀತಿ. ಅಲಂಕೃತವಾದ ಒಂದು ನಿಲುವಂಗಿಯನ್ನೂ ಅವನಿಗೆ ಮಾಡಿಸಿಕೊಟ್ಟಿದ್ದ. ತಂದೆ ತನ್ನ ಎಲ್ಲ ಮಕ್ಕಳಿಗಿಂತ ಇವನನ್ನೇ ಹೆಚ್ಚಾಗಿ ಪ್ರೀತಿಸುವುದನ್ನು ಕಂಡು, ಅಣ್ಣಂದಿರು ಆ ಜೋಸೆಫನನ್ನು ಹಗೆ ಮಾಡಿದರು. ಅವನೊಡನೆ ಸ್ನೇಹಭಾವದಿಂದಲೂ ಮಾತಾಡದೆ ಹೋದರು. ಒಮ್ಮೆ ಜೋಸೆಫನ ಅಣ್ಣಂದಿರು ತಂದೆಯ ಆಡುಕುರಿಗಳನ್ನು ಮೇಯಿಸಲು ಶೆಕೆಮಿಗೆ ಹೋಗಿದ್ದರು. ಯಕೋಬನು ಜೋಸೆಫನಿಗೆ, “ನಿನ್ನ ಅಣ್ಣಂದಿರು ಶೆಕೆಮಿನಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದಾರೆ, ಅಲ್ಲವೇ? ಅವರ ಬಳಿಗೆ ನಿನ್ನನ್ನು ಕಳಿಸಬೇಕೆಂದಿದ್ದೇನೆ,” ಎನ್ನಲು ಅದಕ್ಕೆ ಆ ಮನುಷ್ಯ, “ಅವರು ಇಲ್ಲಿಂದ ಹೊರಟುಹೋದರು; ‘ದೋತಾನಿಗೆ ಹೋಗೋಣ’ ಎಂದು ಮಾತಾಡುವುದನ್ನು ಕೇಳಿದೆ,” ಎಂದ. ಜೋಸೆಫನು ಅವರನ್ನು ಹುಡುಕುತ್ತಾ ಹೋಗಿ, ದೋತಾನಿನಲ್ಲಿ ಅವರನ್ನು ಕಂಡ. ಅಣ್ಣಂದಿರು ಅವನನ್ನು ದೂರದಿಂದಲೇ ನೋಡಿದರು. ಅವನು ತಮ್ಮ ಬಳಿಗೆ ಬರುವಷ್ಟರೊಳಗೆ ಅವನನ್ನು ಕೊಲ್ಲಲು ಒಳಸಂಚು ಮಾಡಿಕೊಂಡರು.

ಕೀರ್ತನೆ: 105:16-21

ಶ್ಲೋಕ: ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು I

ತದನಂತರ ಬರಮಾಡಿದನಾ ನಾಡಿನಲಿ ಕ್ಷಾಮವನು I
ಮುರಿದುಬಿಟ್ಟನು ಆಹಾರವೆಂಬಾ ಊರುಗೋಲನು II
ಕಳಿಸಿದ ಅವರಿಗೆ ಮುಂದಾಗಿ ಒಬ್ಬಾತನನು I
ದಾಸತ್ವಕೆ ಮಾರಲಾದ ಆ ಜೋಸೆಫನನು II

ಅವನ ಕಾಲು ನೊಂದವು ಸಂಕೋಲೆಗಳಿಂದ I
ಕುತ್ತಿಗೆ ಕೊರೆಯಿತು ಕಬ್ಬಿಣದ ಕೋಳಗಳಿಂದ II
ಕ್ರಮೇಣ ಕೈಗೂಡಿತು ಜೋಸೆಫನು ನುಡಿದದ್ದು I
ಪ್ರಭುವಿನ ವಾಣಿ ಕಂಡುಬಂದಿತು ಸತ್ಯವೆಂದು II

ಬಿಡಿಸಲವನನು ಅರಸ ಕಳಿಸಿದ ಆಳನು I
ಬಿಡುಗಡೆಮಾಡಿದ ಜನಾಧಿಪತಿ ಅವನನು II
ನೇಮಿಸಿದವನನು ತನ್ನ ಮನೆಗೆ ಯಜಮಾನನ್ನಾಗಿ I
ಮಾಡಿದ ತನ್ನಾಸ್ತಿಗೆಲ್ಲಾ ಅಧಿಕಾರಿಯನ್ನಾಗಿ II

ಶುಭಸಂದೇಶ: ಮತ್ತಾಯ 21:33-43, 45-46


ಆ ಕಾಲದಲ್ಲಿ ಯೇಸು ಮುಖ್ಯ ಯಾಜಕರಿಗೂ ಪ್ರಜಾಪ್ರಮುಕರಿಗೂ ಈ ಸಾಮತಿಯನ್ನು ಹೇಳಿದರು: "ಒಬ್ಬ ಯಜಮಾನ ಒಂದು ದ್ರಾಕ್ಷಿತೋಟ ಮಾಡಿಸಿದ. ಅದರ ಸುತ್ತ ಬೇಲಿಯನ್ನು ಹಾಕಿಸಿದ. ದ್ರಾಕ್ಷಾರಸವನ್ನು ತೆಗೆಯಲು ಅಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಅನಂತರ ಅದನ್ನು ಗೇಣಿದಾರರಿಗೆ ವಹಿಸಿ ಹೊರನಾಡಿಗೆ ಹೊರಟುಹೋದ. ಫಲಕೊಡುವ ಕಾಲ ಹತ್ತಿರವಾದಾಗ, ತನಗೆ ಬರಬೇಕಾದ ಪಾಲನ್ನು ತರುವುದಕ್ಕಾಗಿ ಆಳುಗಳನ್ನು ಗೇಣಿದಾರರ ಬಳಿಗೆ ಕಳುಹಿಸಿದ. ಇವರು ಆ ಆಳುಗಳ ಮೇಲೆ ಬಿದ್ದು ಒಬ್ಬನನ್ನು ಬಡಿದರು, ಇನ್ನೊಬ್ಬನನ್ನು ಕಡಿದರು, ಮತ್ತೊಬ್ಬನ ಮೇಲೆ ಕಲ್ಲು ತೂರಿದರು. ತೋಟದ ಯಜಮಾನ ಮೊದಲಿಗಿಂತಲೂ ಹೆಚ್ಚು ಆಳುಗಳನ್ನು ಕಳುಹಿಸಿದ. ಅವರಿಗೂ ಅದೇ ಗತಿ ಆಯಿತು. ಕಟ್ಟಕಡೆಗೆ ಯಜಮಾನ, ‘ನನ್ನ ಮಗನಿಗೆ ಇವರು ಮರ್ಯಾದೆ ಕೊಟ್ಟೇಕೊಡುವರು’ ಎಂದುಕೊಂಡು ತನ್ನ ಮಗನನ್ನೇ ಕಳುಹಿಸಿದ. ಆದರೆ ಗೇಣಿದಾರರು ಮಗನನ್ನು ಕಂಡೊಡನೇ, ‘ಈ ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ, ಇವನನ್ನು ಮುಗಿಸಿಬಿಡೋಣ. ಇವನಿಗೆ ಬರುವ ಸೊತ್ತನ್ನು ನಮ್ಮದಾಗಿಸಿಕೊಳ್ಳೋಣ,’ ಎಂದು ತಮ್ಮತಮ್ಮಲ್ಲೇ ಒಳಸಂಚು ಮಾಡಿಕೊಂಡರು. ಅಂತೆಯೇ ಅವನನ್ನು ಹಿಡಿದು, ತೋಟದಿಂದ ಹೊರಕ್ಕೆ ದಬ್ಬಿಕೊಂಡು ಹೋಗಿ, ಕೊಂದುಹಾಕಿದರು. “ಈಗ ನೀವೇ ಹೇಳಿ: ತೋಟದ ಯಜಮಾನ ಬಂದಾಗ ಆ ಗೇಣಿದಾರರರಿಗೆ ಏನು ಮಾಡುವನು?” ಎಂದು ಯೇಸು ಕೇಳಿದರು. “ಆ ಕೇಡಿಗರನ್ನು ಕ್ರೂರವಾಗಿ ಸಂಹರಿಸುವನು. ತರುವಾಯ ಕಾಲಕಾಲಕ್ಕೆ ಸರಿಯಾಗಿ ಪಾಲನ್ನು ಸಲ್ಲಿಸುವ ಬೇರೆಯವರಿಗೆ ತೋಟವನ್ನು ಗೇಣಿಗೆ ಕೊಡುವನು,” ಎಂದು ಅಲ್ಲಿದ್ದವರು ಉತ್ತರಕೊಟ್ಟರು. ಬಳಿಕ ಯೇಸು ಇಂತೆಂದರು: “ ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಆ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು! ಸರ್ವೇಶ್ವರನಿಂದಲೇ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ!’ ಎಂಬ ವಾಕ್ಯವನ್ನು ನೀವು ಪವಿತ್ರ ಗ್ರಂಥದಲ್ಲಿ ಓದಿಲ್ಲವೆ? ಆದುದರಿಂದ ನಾನು ನಿಮಗೆ ಹೇಳುತ್ತೇನೆ, ‘ದೇವರ ಸಾಮ್ರಾಜ್ಯವನ್ನು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲಕೊಡುವ ಜನತೆಗೆ ನೀಡಲಾಗುವುದು. ಮುಖ್ಯ ಯಾಜಕರೂ ಫರಿಸಾಯರೂ ಸ್ವಾಮಿ ಹೇಳಿದ ಸಾಮತಿಗಳನ್ನು ಕೇಳಿ, ‘ಇವನು ನಮ್ಮನ್ನು ಕುರಿತೇ ಹೀಗೆ ಮಾತನಾಡುತ್ತಿದ್ದಾನೆ,’ ಎಂದು ಅರ್ಥ ಮಾಡಿಕೊಂಡರು. ಯೇಸುವನ್ನು ಹಿಡಿದು ಬಂಧಿಸಲು ಯತ್ನಿಸಿದರು. ಆದರೆ ಜನಸಮೂಹಕ್ಕೆ ಭಯಪಟ್ಟರು. ಏಕೆಂದರೆ, ಜನರು ಯೇಸುವನ್ನು ಪ್ರವಾದಿ ಎಂದು ಸನ್ಮಾನಿಸುತ್ತಿದ್ದರು.

ಮನಸ್ಸಿಗೊಂದಿಷ್ಟು :
ಇಂದಿನ ಸಾಮತಿಯಲ್ಲಿನ ಕೆಲಸಗಾರರಂತೆ ಪ್ರವಾದಿಗಳ , ಶುಭಸಂದೇಶದ ಮಾತುಗಳಿಗೆ ಕಿವಿಗೊಡದೆ ದೇವರ ಕೋಪಕ್ಕೆ ಈಡಾಗದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಆದರೆ ಈ ಎಚ್ಚರಕ್ಕೆ ನಮಗೆ ನಿಜಕ್ಕೂ ಬೇಕಾಗಿರುವುದು ಸ್ವರ್ಗವೆಂಬ ದ್ರಾಕ್ಷಾತೋಟದ ಬಗ್ಗೆ ಪ್ರೀತಿ ಹಾಗು ಅದಕ್ಕಾಗಿ ತಣಿಯದ ಹಾತೊರೆಯುವಿಕೆ. 

ಸಾಮತಿಯಲ್ಲಿನ ಯಜಮಾನನ ಮಗ ಕೆಲಸಗಾರರಿಂದ ಅಪಾಯದ ಸೂಚನೆ ಇದ್ದರೂ ಬಂದು ಪ್ರಾಣ ತ್ಯಾಗ ಮಾಡಿದಂತೆ, ನಮಗಾಗಿ  ತಾವಾಗೇ ಬಂದು ಪ್ರಾಣಾರ್ಪಣೆ  ಮಾಡಿದ ಯೇಸುವಿಗಾಗಿ ನಮ್ಮ ಮನ ಕರಗಬೇಕಾಗಿದೆ, ಪರಿವರ್ತನೆಗೊಳ್ಳಬೇಕಾಗಿದೆ - ಜೀವವಾಕ್ಯ 

20.03.25 -‘ಮೋಶೆಗೂ ಪ್ರವಾದಿಗಳಿಗೂ ಅವರು ಕಿವಿಗೊಡದಿದ್ದರೆ, ಸತ್ತವನು ಜೀವಂತನಾಗಿ ಎದ್ದು ಬಂದರೂ ಅವರು ನಂಬುವುದಿಲ್ಲ,’

ಮೊದಲನೇ ವಾಚನ: ಯೆರೆಮೀಯ: 17:5-10

ಇವು ಸರ್ವೇಶ್ವರನ ಮಾತುಗಳು: “ಮಾನವ ಮಾತ್ರದವರಲ್ಲಿ ಭರವಸೆಯಿಟ್ಟು ನರಜನ್ಮದವರನ್ನೇ ತನ್ನ ಭುಜಬಲ ವೆಂದುಕೊಂಡು ಸರ್ವೇಶ್ವರನನ್ನೇ ತೊರೆಯುವಂಥ ಹೃದಯವುಳ್ಳವನು ಶಾಪಗ್ರಸ್ತನು! ಇಂಥವನು ಅಡವಿಯಲ್ಲಿನ ಜಾಲಿಗಿಡಕ್ಕೆ ಸಮಾನನು. ಶುಭಸಂಭವಿಸಿದರೂ ಅದು ಅವನ ಕಣ್ಣಿಗೆ ಕಾಣದು. ಜನರಾರೂ ವಾಸಿಸದ ಚೌಳು ನೆಲದೊಳು ಬೆಳೆಯಿಲ್ಲದ ಬೆಂಗಾಡಿನೊಳು ವಾಸಿಸುವವನ ಪರಿಸ್ಥಿತಿ ಅವನದು. ಸರ್ವೇಶ್ವರನಲ್ಲಿ ಭರವಸೆಯಿಟ್ಟವನಾದರೋ ಧನ್ಯ! ಅಂಥವನಿಗೆ ಸರ್ವೇಶ್ವರನಲ್ಲೇ ವಿಶ್ವಾಸ. ನೀರರುಗಿನಲೆ ನೆಡಲಾದ, ನದಿಯ ಬದಿಯಲೆ ಬೇರು ಹರಡಿದ ಬಿಸಿಲ ಧಗೆಗೆ ಹೆದರದ, ಬರಗಾಲದಲ್ಲೂ ನಿಶ್ಚಿಂತವಾದ ಹಸಿರೆಲೆಬಿಡುವ, ಫಲನೀಡುವ ಮರಕ್ಕೆ ಸಮಾನನು ಆತ. ಮಾನವ ಹೃದಯ ಎಲ್ಲಕ್ಕಿಂತ ವಂಚಕ ಅದಕ್ಕೆ ಅಂಟಿದೆ ಗುಣವಾಗದ ರೋಗ ಅದರ ಗುಟ್ಟನ್ನು ಅರಿತುಕೊಳ್ಳಬಲ್ಲವರೂ ಇಲ್ಲ. ಸರ್ವೇಶ್ವರನಾದ ನಾನು ಹೃದಯ ಪರಿಶೀಲಕ ಹೌದು, ಅಂತರಿಂದ್ರಿಯಗಳನ್ನು ಪರಿಶೋಧಿಸುವಾತ.

ಶ್ಲೋಕ: 1:1-4, 6

ಕೀರ್ತನೆ: ಪ್ರಭುವಿನಲ್ಲೆ ಭರವಸೆ ಇಟ್ಟು ನಡೆವಾತನು ಧನ್ಯನು I

ದುರ್ಜನರ ಆಲೋಚನೆಯಂತೆ ನಡೆಯದೆ I
ಪಾಪಾತ್ಮರ ಪಥದಲಿ ಕಾಲೂರದೆ I
ಧರ್ಮನಿಂದಕರ ಕೂಟದಲಿ ಕೂರದೆ II

ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು I
ಹಗಲಿರುಳೆನ್ನದೆ ಅದನೆ ಧ್ಯಾನಿಸುತಿರುವವನಾರೋ ಅವನೇ ಧನ್ಯನು II
ನದಿಯ ಬದಿಯಲೇ ಬೆಳೆದಿಹ ಮರದಂತೆ I
ಸಕಾಲಕೆ ಫಲವೀವ ವೃಕ್ಷದಂತೆ I
ಎಲೆಬಾಡದೆ ಪಸಿರಿರುವ ತರುವಂತೆ I
ಸಿಗುವುದು ಅವನ ಕಾರ್ಯಗಳಿಗೆ ಸಫಲತೆ II

ದುರುಳರಾದರೊ ತೂರಿ ಹೋಗುವರು I
ಬಿರುಗಾಳಿಗೆ ತರಗೆಲೆಯಾಗುವರು II
ಸಜ್ಜನರ ಮಾರ್ಗಕ್ಕಿದೆ ಪ್ರಭುವಿನ ಪಾಲನ I
ದುರ್ಜನರ ಮಾರ್ಗಕ್ಕಿದೆ ಸಂಪೂರ್ಣ ವಿನಾಶನ II

ಶುಭಸ೦ದೇಶ ಲೂಕ: 16:19-31





ಆ ಕಾಲದಲ್ಲಿ ಯೇಸು ಶಿಷ್ಯರನ್ನುದ್ದೇಶಿಸಿ ಈ ಸಾಮತಿಯನ್ನು ಹೇಳಿದರು: “ಒಬ್ಬ ಧನಿಕನಿದ್ದ. ಬೆಲೆ ಬಾಳುವ ಉಡುಗೆ-ತೊಡುಗೆಗಳನ್ನೂ ನಯವಾದ ನಾರುಮಡಿಗಳನ್ನೂ ಧರಿಸಿಕೊಂಡು ದಿನ ನಿತ್ಯವೂ ಸುಖಭೋಗಗಳಲ್ಲಿ ಮೈಮರೆಯುತ್ತಿದ್ದ. ಅವನ ಮನೆಯ ಬಾಗಿಲಲ್ಲೇ ಲಾಜರನೆಂಬ ಒಬ್ಬ ಭಿಕಾರಿ ಬಿದ್ದಿರುತ್ತಿದ್ದ. ಅವನ ಮೈಯೆಲ್ಲಾ ಹುಣ್ಣು. ಧನಿಕನು ತಿಂದು ಬಿಸಾಡಿದ ಎಂಜಲಿನಿಂದ ಹಸಿವು ನೀಗಿಸಿಕೊಳ್ಳಲು ಅವನು ಹಂಬಲಿಸುತ್ತಿದ್ದ. ಅಷ್ಟು ಮಾತ್ರವಲ್ಲ, ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು. “ಒಂದು ದಿನ ಆ ಭಿಕಾರಿ ಸತ್ತುಹೋದ. ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಸ್ವರ್ಗಸೌಭಾಗ್ಯದಲ್ಲಿದ್ದ ಅಬ್ರಹಾಮನ ಪಕ್ಕದಲ್ಲೇ ಕೂರಿಸಿದರು. ಧನಿಕನು ಕೂಡ ಸತ್ತುಹೋದ. ಅವನ ಶವಸಂಸ್ಕಾರವೂ ಮುಗಿಯಿತು. ಪಾತಾಳದಲ್ಲಿ ಯಾತನೆಪಡುತ್ತಾ ಅವನು ಕಣ್ಣೆತ್ತಿ ನೋಡಿದಾಗ, ದೂರದಲ್ಲಿ ಅಬ್ರಹಾಮನನ್ನೂ ಅವನ ಪಕ್ಕದಲ್ಲೇ ಕುಳಿತಿದ್ದ ಲಾಜರನನ್ನೂ ಕಂಡ. ‘ಓ ಪಿತಾಮಹ ಅಬ್ರಹಾಮ, ನನ್ನ ಮೇಲೆ ಕನಿಕರವಿಡು. ಈ ಅಗ್ನಿಜ್ವಾಲೆಯಲ್ಲಿ ಬಾಧೆಪಡುತ್ತಿದ್ದೇನೆ; ಲಾಜರನು ತನ್ನ ತುದಿ ಬೆರಳನ್ನು ತಣ್ಣೀರಿನಲ್ಲಿ ಅದ್ದಿ, ನನ್ನ ನಾಲಗೆಗೆ ತಂಪನ್ನುಂಟು ಮಾಡುವಂತೆ ಅವನನ್ನು ಇಲ್ಲಿಗೆ ಕಳುಹಿಸಿಕೊಡು’ ಎಂದು ದನಿಯೆತ್ತಿ ಮೊರೆಯಿಟ್ಟ. ಅದಕ್ಕೆ ಅಬ್ರಹಾಮನು, ‘ಮಗನೇ, ಜೀವಮಾನದಲ್ಲಿ ಬೇಕಾದಷ್ಟು ಸುಖ ಸಂಪತ್ತನ್ನು ನೀನು ಅನುಭವಿಸಿದೆ; ಲಾಜರನಾದರೋ ದುಃಖ ದಾರಿದ್ರ್ಯವನ್ನು ಅನುಭವಿಸಿದ ಎಂಬುದನ್ನು ನೆನಪಿಗೆ ತಂದುಕೊ. ಆದರೆ ಈಗ ಅವನು ಇಲ್ಲಿ ಸುಖಪಡುತ್ತಿದ್ದಾನೆ; ನೀನು ಅಲ್ಲಿ ಸಂಕಟ ಪಡುತ್ತಿರುವೆ. ಅಷ್ಟೇ ಮಾತ್ರವಲ್ಲ, ನಮಗೂ ನಿಮಗೂ ನಡುವೆ ಅಗಾಧ ಪ್ರಪಾತವು ಚಾಚಿದೆ. ಆದಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಬರಬೇಕೆಂದಿದ್ದರೂ ಬರಲಾಗದು; ಆ ಕಡೆಯಿಂದ ನಮ್ಮ ಬಳಿಗೆ ದಾಟಿ ಬರಲೂ ಸಾಧ್ಯವಿಲ್ಲ,’ ಎಂದ. ಆಗ ಆ ಧನಿಕ, ‘ಪಿತಾಮಹ ಅಬ್ರಹಾಮ, ಲಾಜರನನ್ನು ನನ್ನ ತಂದೆಯ ಮನೆಗಾದರೂ ಕಳುಹಿಸು. ನನಗೆ ಐವರು ಸೋದರರಿದ್ದಾರೆ; ಅವರೂ ಈ ಯಾತನಾಸ್ಥಳಕ್ಕೆ ಬಾರದಂತೆ ಇವನು ಹೋಗಿ ಎಚ್ಚರಿಕೆಕೊಡಲಿ,’ ಎಂದು ಬೇಡಿಕೊಂಡ. ಅದಕ್ಕೆ ಅಬ್ರಹಾಮನು, ‘ಅವರಿಗೆ ಎಚ್ಚರಿಕೆ ಕೊಡಲು ಮೋಶೆ ಮತ್ತು ಪ್ರವಾದಿಗಳ ಗ್ರಂಥಗಳಿವೆ. ಅವುಗಳಿಗೆ ಕಿವಿಗೊಡಲಿ,’ ಎಂದು ಉತ್ತರಕೊಟ್ಟ. ‘ಇಲ್ಲ, ಪಿತಾಮಹ ಅಬ್ರಹಾಮ, ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಾಪಕ್ಕೆ ವಿಮುಖರಾಗುವರು,’ ಎಂದು ಧನಿಕನು ಮತ್ತೆ ಕೇಳಿಕೊಂಡ. ಅದಕ್ಕೆ ಅಬ್ರಹಾಮನು, ‘ಮೋಶೆಗೂ ಪ್ರವಾದಿಗಳಿಗೂ ಅವರು ಕಿವಿಗೊಡದಿದ್ದರೆ, ಸತ್ತವನು ಜೀವಂತನಾಗಿ ಎದ್ದು ಬಂದರೂ ಅವರು ನಂಬುವುದಿಲ್ಲ,’ ಎಂದ.

19.03.25 - "ಆಕೆಯ ಪತಿ ಜೋಸೆಫನು ನೀತಿವಂತನು"

ಮೊದಲನೇ ವಾಚನ: 2 ಸಮುವೇಲನ 7:4-5, 12-14, 16

ಆದರೆ ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು: ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: ‘ನೀನು ನನಗೊಂದು ದೇವಾಲಯವನ್ನು ಕಟ್ಟಬೇಕೆಂದಿರುವೆಯೋ? ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು. ಅವನು ನನ್ನ ಹೆಸರಿನಲ್ಲಿ ಒಂದು ದೇವಾಲಯವನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು. ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ಅವನು ತಪ್ಪುಮಾಡಿದಾಗ, ಮಗನಿಗೆ ತಂದೆ ಬೆತ್ತದ ರುಚಿತೋರಿಸುವಂತೆ ನಾನು ಅವನನ್ನು ಶಿಕ್ಷಿಸುವೆನು. ನಿನ್ನ ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವುವು; ನಿನ್ನ ಸಿಂಹಾಸನ ಶಾಶ್ವತವಾಗಿರುವುದು.”

ಕೀರ್ತನೆ: 89:1-4, 26, 28.
ಶ್ಲೋಕ: ಚಿರಶಾಶ್ವತವಾಗಿರುವುದು ಅವನ ಸಂತತಿ. 

ಎರಡನೇ ವಾಚನ: ರೋನರಿಗೆ 4:13, 16-18, 22


ಅಬ್ರಹಾಮನಿಗೂ ಆತನ ಸಂತತಿಗೂ ಜಗತ್ತನ್ನೇ ಕೊಡುವುದಾಗಿ ದೇವರು ವಾಗ್ದಾನ ಮಾಡಿದರು. ಈ ವಾಗ್ದಾನವನ್ನು ಅಬ್ರಹಾಮನು ಪಡೆದದ್ದು ಧರ್ಮಶಾಸ್ತ್ರದ ಪಾಲನೆಯಿಂದ ಅಲ್ಲ, ಆದರೆ ವಿಶ್ವಾಸದ ಮೂಲಕ ದೇವರೊಡನೆ ಸತ್ಸಂಬಂಧವನ್ನು ಹೊಂದಿದ್ದರಿಂದ. ದೈವವಾಗ್ದಾನಕ್ಕೆ ವಿಶ್ವಾಸವೇ ಆಧಾರ. ಇವೆಲ್ಲಕ್ಕೂ ದೈವಾನುಗ್ರಹವೇ ಮೂಲ. ಇವು ಅಬ್ರಹಾಮನ ಸಂತತಿಯವರಿಗೆ, ಅಂದರೆ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವವರಿಗೆ ಮಾತ್ರವಲ್ಲ, ಅಬ್ರಹಾಮನಂತೆ ದೇವರಲ್ಲಿ ವಿಶ್ವಾಸ ಇಟ್ಟವರೆಲ್ಲರಿಗೂ ಖಚಿತವಾಗಿ ದೊರೆಯುತ್ತದೆ. ಏಕೆಂದರೆ, ಅಬ್ರಹಾಮನೇ ನಮ್ಮೆಲ್ಲರಿಗೂ ಮೂಲಪಿತ. “ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲಪಿತನನ್ನಾಗಿ ನೇಮಿಸಿದ್ದೇನೆ,” ಎಂದು ಪವಿತ್ರಗ್ರಂಥದಲ್ಲೇ ಬರೆದಿದೆ. ಹೌದು, ಮೃತರನ್ನು ಜೀವಂತಗೊಳಿಸುವವರೂ ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವರೂ ಆದ ದೇವರಲ್ಲಿ ಆತನು ವಿಸ್ವಾಸವಿಟ್ಟನು. ಆದ್ದರಿಂದ ಈ ವಾಗ್ದಾನವನ್ನು ಸಾಕ್ಷಾತ್ ದೇವರಿಂದಲೇ ಪಡೆದನು. ಆತನ ವಿಶ್ವಾಸ ಮತ್ತು ಭರವಸೆ ಎಷ್ಟರಮಟ್ಟಿಗೆ ಇತ್ತೆಂದರೆ, ಈ ದೈವವಾಗ್ದಾನವು ನೆರವೇರುವ ನಿರೀಕ್ಷೆ ಇಲ್ಲದಿದ್ದರೂ ಆತನು ದೇವರನ್ನು ನಂಬಿದನು. ಆದುದರಿಂದಲೇ “ನಿನ್ನ ಸಂತಾನವು ನಕ್ಷತ್ರಗಳಷ್ಟು ಅಸಂಖ್ಯಾತ ಆಗುವುದು,” ಎಂಬ ಹೇಳಿಕೆಯಂತೆ ಆತನು ಅನೇಕ ಜನಾಂಗಗಳಿಗೆ ಮೂಲಪಿತನಾದನು. ಆದ್ದರಿಂದಲೇ, “ದೇವರು ಆತನನ್ನು ತಮ್ಮೊಂದಿಗೆ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು,” ಎಂದು ಲಿಖಿತವಾಗಿದೆ.

ಶುಭಸ೦ದೇಶ: ಮತ್ತಾಯ 1:18-21, 24


ಕ್ರಿಸ್ತ ಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೆಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮುಂಚೆಯೇ ಮರಿಯಳು ಗರ್ಭವತಿಯಾಗಿರುವುದು ತಿಳಿದುಬಂತು. ಆಕೆ ಗರ್ಭಧರಿಸಿದ್ದು ಪವಿತ್ರಾತ್ಮ ಪ್ರಭಾವದಿಂದ. ಆಕೆಯ ಪತಿ ಜೋಸೆಫನು ನೀತಿವಂತನು. ಮರಿಯಳನ್ನು ಅವಮಾನಕ್ಕೆ ಗುರಿಮಾಡುವ ಉದ್ದೇಶ ಅವನದಲ್ಲವಾದ್ದರಿಂದ ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು. ಆತನು ಈ ಕುರಿತು ಆಲೋಚಿಸುತ್ತಿದ್ದಂತೆ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, "ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ. ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು ‘ಯೇಸು’ ಎಂಬ ಹೆಸರಿಡಬೇಕು. ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವವನು ಆತನೇ," ಎಂದನು. ಆಗ ಜೋಸೆಫನು ಎಚ್ಚೆತ್ತು ದೇವದೂತನ ಆಜ್ಞೆಯ ಪ್ರಕಾರ ಮರಿಯಳನ್ನು ವಿವಾಹ ಮಾಡಿಕೊಂಡನು.


ಮನಸ್ಸಿಗೊಂದಿಷ್ಟು : "ಈ ಜಗದಲ್ಲಿ ಪ್ರತಿ ಮನುಷ್ಯ ಹೊತ್ತುಕೊಳ್ಳುವ ಜವಬ್ದಾರಿ, ವಹಿಸಿಕೊಳ್ಳುವ ಪಾತ್ರಕ್ಕೆ ತಕ್ಕಂತೆ ದೇವರು ಅವರ ಮೇಲೆ ಕೃಪಾವರಗಳನ್ನು ಸುರಿಸುತ್ತಾರೆ" ಎನ್ನುತ್ತಾರೆ ಸಂತ ಥಾಮಸ್ ಅಕ್ವಿನಾಸ್. ಲೋಕದಲ್ಲಿ ತಮ್ಮ ಮಗನ ಪ್ರಾಂಪಚಿಕ ತಂದೆಯಾಗಿ ಪಾತ್ರವಹಿಸಬೇಕಾದ ಜೋಸೆಫರಿಗೆ ಎಷ್ಟು ಕೃಪಾವರಗಳನ್ನು ಸುರಿಸಬೇಕು. 

ತಮ್ಮಂತೆ ಮನುಷ್ಯರನ್ನು ಉಂಟು ಮಾಡಿದ ದೇವರು, ಅವರಿಂದ ಬಯಸಿದ್ದು ಪಾವಿತ್ರತೆ ಹಾಗು ವಿಧೇಯತೆ ಎನ್ನವುವ ಮಾತಿದೆ. ಸಂತ ಜೋಸೆಫರ ಈ ಎರಡರಲ್ಲೂ ದೇವರ ಮೆಚ್ಚುಗೆಗೆ ಪಾತ್ರರಾದವರೇ. ತಮ್ಮ ನಿದ್ದೆಯಲ್ಲಿ ದೇವರ ಚಿತ್ತದ ಸಂದೇಶ ಪಡೆದ ಜೋಸೆಫರು ಎಚ್ಚರದ ನಂತರ ಜೀವನದುದ್ದಕೂ ಅದಕ್ಕೆ ತಲೆಬಾಗಿದ್ದು ನಮಗೆ ಸದಾ ಪ್ರೇರಣೆಯಾಗಲಿ     


 

18.03.25 - "ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು"

ಮೊದಲನೇ ವಾಚನ: ಯೆಶಾಯ 1:10, 16-20

ಸೊದೋಮಿನ ಅಧಿಪತಿಗಳ೦ತಿರುವವರೇ, ಸರ್ವೇಶ್ವರಸ್ವಾಮಿಯ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳನ್ನು ಹೋಲುವವರೇ, ನಮ್ಮ ದೇವರ ಉಪದೇಶಕ್ಕೆ ಕಿವಿಗೊಡಿ. ತೊಳೆದುಕೊಳ್ಳಿರಿ, ನಿಮ್ಮನ್ನೆ ಶುದ್ಧ ಮಾಡಿಕೊಳ್ಳಿರಿ. ಕಣ್ಣಿಗೆ ಕಟ್ಟಿದ೦ತಿರುವ ನಿಮ್ಮ ದುಷ್ಕೃತ್ಯಗಳು ನೀಗಿ ಹೋಗಲಿ. ಕೇಡನ್ನು ಬಿಟ್ಟು ಒಳಿತನ್ನು ಕೈಗೊಳ್ಳಿರಿ. ನ್ಯಾಯನೀತಿಗಳಲ್ಲಿ ನಿರತರಾಗಿರಿ. ಹಿ೦ಸಾತ್ಮಕರನ್ನು ತಿದ್ದಿ ಸರಿಪಡಿಸಿರಿ. ಅನಾಥರಿಗೆ ನ್ಯಾಯ ದೊರಕಿಸಿರಿ. ವಿಧವೆಯರ ಪರವಾಗಿ ವಾದಿಸಿರಿ. ಸರ್ವೇಶ್ವರ ಸ್ವಾಮಿ ಇಂತೆನ್ನುತ್ತಾರೆ : "ಬನ್ನಿರಿ, ಈಗ ವಾದಿಸೋಣ. ನಿಮ್ಮ ಪಾಪಗಳು ಕಡುಗೆ೦ಪಾಗಿದ್ದರೂ ಹಿಮದ೦ತೆ ಬಿಳುಪಾಗುವುವು. ರಕ್ತಗೆ೦ಪಾಗಿದ್ದರೂ ಉಣ್ಣೆಯ೦ತೆ ಬೆಳ್ಳಗಾಗುವುವು. ನೀವು ಮನಃಪೂರ್ವಕವಾಗಿ ನನಗೆ ವಿಧೇಯರಾದರೆ ಈ ನಾಡಿನ ಸತ್ಫಲವನ್ನು ಸವಿಯುವಿರಿ. ಇದಕ್ಕೊಪ್ಪದೆ ಪ್ರತಿಭಟಿಸಿದ್ದೇ ಆದರೆ, ಸಾವಿಗೆ ತುತ್ತಾಗುವಿರಿ. ಸ್ವಾಮಿಯಾದ ನಾನೇ ಇದನ್ನು ನುಡಿದಿದ್ದೇನೆ."

ಕೀರ್ತನೆ: 1116:10, 15, 16-19 

ಶ್ಲೋಕ: ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ದಾರವನು. 

ಶುಭಸ೦ದೇಶ: ಮತ್ತಾಯ 23:1-2

ಬಳಿಕ ಜನಸಮೂಹವನ್ನೂ ತಮ್ಮ ಶಿಷ್ಯರನ್ನು ಉದ್ದೇಶಿಸಿ ಯೇಸುಸ್ವಾಮಿ ಇ೦ತೆ೦ದರು: "ಧರ್ಮಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಇದ್ದಾರೆ. ಆದುದರಿ೦ದ ಅವರು ನಿಮಗೆ ಉಪದೇಶಿಸುವುದನ್ನೆಲ್ಲಾ ಆಲಿಸಿರಿ ಹಾಗು ಪಾಲಿಸಿರಿ. ಆದರೆ ಅವರ ನಡತೆಯನ್ನು ಅನುಸರಿಸಬೇಡಿ. ಏಕೆಂದರೆ ಅವರು ನುಡಿದ೦ತೆ ನಡೆಯುವುದಿಲ್ಲ. ಭಾರವಾದ ಹಾಗು ಹೊರಲಾಗದ ಹೊರೆಗಳನ್ನು ಕಟ್ಟಿ ಮಾನವರ ಹೆಗಲ ಮೇಲೆ ಹೇರುತ್ತಾರೆ. ತಾವಾದರೋ ಅವನ್ನು ಕಿರುಬೆರಳಿನಿ೦ದಲೂ ಮುಟ್ಟಲೊಲ್ಲರು. ತಾವು ಕೈಗೊಳ್ಳುವ ಕಾರ್ಯಗಳನ್ನೆಲ್ಲಾ ಜನರು ನೋಡಲೆ೦ದೇ ಮಾಡುತ್ತಾರೆ. ತಮ್ಮ ಧಾರ್ಮಿಕ ಹಣೆ ಪಟ್ಟಿಗಳನ್ನು ಅಗಲ ಮಾಡಿಕೊಳ್ಳುತ್ತಾರೆ. ಮೇಲ೦ಗಿಯ ಗೊ೦ಡೆಗಳನ್ನು ಉದ್ದುದ್ದ ಮಾಡಿಕೊಳ್ಳುತ್ತಾರೆ. ಜೌತಣಕೂಟಗಳಲ್ಲಿ, ಶ್ರೇಷ್ಠ ಸ್ಥಾನಮಾನಗಳನ್ನೂ, ಪ್ರಾರ್ಥನಾಮ೦ದಿರಗಳಲ್ಲಿ ಉನ್ನತ ಆಸನಗಳನ್ನೂ ಪೇಟೆಬೀದಿಗಳಲ್ಲಿ ವ೦ದನೋಪಚಾರಗಳನ್ನೂ ಅವರು ಅಪೇಕ್ಷಿತ್ತಾರೆ. ಅದು ಮಾತ್ರವಲ್ಲ, ’ಗುರುವೇ’ ಎ೦ದು ಕರೆಸಿಕೊಳ್ಳಲು ಇಚ್ಚಿಸುತ್ತಾರೆ. ಹಾಗೆ ಕರೆಸಿಕೊಳ್ಳುವುದು ನಿಮಗೆ ಬೇಡ. ನಿಮಗಿರುವ ಗುರುವು ಒಬ್ಬರೇ ಮತ್ತು ನೀವೆಲ್ಲರೂ ಸಹೋದರರು. ಇಹದಲ್ಲಿ ನೀವು ಯಾರನ್ನೂ "ಪಿತನೇ" ಎ೦ದು  ಸಂಬೋಧಿಸಬೇಡಿ. ಏಕೆ೦ದರೆ ನಿಮ್ಮ ಪಿತ ಒಬ್ಬರೇ. ಅವರು ಸ್ವರ್ಗದಲ್ಲಿದ್ದಾರೆ. ಒಡೆಯ ಎ೦ದೂ ಕರೆಯಿಸಿಕೊಳ್ಳಬೇಡಿ; ಏಕೆ೦ದರೆ ನಿಮಗಿರುವ ಒಡೆಯ ಒಬ್ಬನೇ, ’ಆತನೇ ಕ್ರಿಸ್ತ’. ನಿಮ್ಮಲ್ಲಿ ಶ್ರೇಷ್ಠನು ಯಾರೋ ಅವನು ನಿಮ್ಮ ಸೇವಕನಾಗಿರಬೇಕು. ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವ ಪ್ರತಿಯೊಬ್ಬನ್ನನ್ನೂ ದೇವರು ಕೆಳಗಿಳಿಸುವರು. ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು.

17.03.25 - "ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು"

ಮೊದಲನೇ ವಾಚನ: ದಾನಿಯೇಲ 9:4-10 

ಪಾಪವನ್ನು ಅರಿಕೆಮಾಡಿ ನನ್ನ ದೇವರಾದ ಸರ್ವೇಶ್ವರನಿಗೆ ಹೀಗೆಂದು ಬಿನ್ನವಿಸಿದೆ:  "ಹೇ ಸರ್ವೇಶ್ವರಾ, ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆದ ದೇವರೇ, ನಿಮ್ಮನ್ನು ಪ್ರೀತಿಸಿ, ನಿಮ್ಮ ಆಜ್ಞೆಗಳನ್ನು ಅನುಸರಿಸುವವರಿಗೆ ನೀವು ಮಾಡಿದ ವಾಗ್ದಾನಗಳನ್ನು ಪ್ರೀತಿಯಿಂದ ನೆರವೇರಿಸುತ್ತೀರಿ. "ನಾವು ಪಾಪಾಪರಾಧಗಳನ್ನು ಮಾಡಿ, ಕೆಟ್ಟವರಾಗಿ ನಡೆದಿದ್ದೇವೆ; ನಿಮಗೆ ವಿರುದ್ಧ ತಿರುಗಿಬಿದ್ದು, ನಿಮ್ಮ ಆಜ್ಞೆಗಳನ್ನು ತೊರೆದು ಬಿಟ್ಟಿದ್ದೇವೆ. ಅರಸರಿಗೆ, ಒಡೆಯರಿಗೆ, ಹಿರಿಯರಿಗೆ ಹಾಗು ಜನಸಾಮಾನ್ಯರಿಗೆ ನಿಮ್ಮ ದಾಸರಾದ ಪ್ರವಾದಿಗಳು ನಿಮ್ಮ ಹೆಸರಿನಲ್ಲಿ ನುಡಿದ ಮಾತುಗಳಿಗೆ ನಾವು ಕಿವಿಗೊಡಲೇ ಇಲ್ಲ. ಸರ್ವೇಶ್ವರಾ, ನೀವು ಸತ್ಯಸ್ವರೂಪಿ. ನಾವೋ ಲಜ್ಜೆಗೆಟ್ಟವರು. ಹೌದು, ಯೆಹೂದ್ಯರು ಹಾಗು ಜೆರುಸಲೇಮಿನ ನಿವಾಸಿಗಳು ಈಗಾಗಲೆ ನಿಮಗೆ ವಿರುದ್ಧ ಮಾಡಿದ ದ್ರೋಹದ ನಮಿತ್ತ ನಿಮ್ಮಿಂದ ದೇಶವಿದೇಶಗಳಿಗೆ ತಳ್ಳಲ್ಪಟ್ಟಿದ್ದಾರೆ. ದೂರದ ದೇಶಗಳಿಗೂ ಹತ್ತಿರದ ನಾಡುಗಳಿಗೂ ಚದುರಿಹೋಗಿರುವ ಎಲ್ಲ ಇಸ್ರಯೇಲರು ನಿಚಿಕೆಗೆ ಈಡಾಗಿದ್ದಾರೆ. ಸ್ವಾಮೀ, ನಿಮಗೆ ವಿರುದ್ಧ ಪಾಪಮಾಡಿದ್ದರಿಂದ ನಾವೂ ನಮ್ಮ ಅರಸರೂ ಓಡೆಯರೂ ಹಿರಿಯರೂ ನಾಚಿಕೆಗೆ ಗುರಿಯಾಗಿದ್ದೇವೆ. ನಮ್ಮ ದೇವರಾದ ಸರ್ವೇಶ್ವರ, ನಮ್ಮನ್ನು ಕರುಣಿಸುವವರೂ ಕ್ಷಮಿಸುವವರೂ ಆಗಿದ್ದಾರೆ. ಆದರೆ ನಾವು ಅವರಿಗೆ ವಿರುದ್ಧ ತಿರುಗಿಬಿದ್ದೆವು. ನಮ್ಮ ದೇವರಾದ ಸರ್ವೇಶ್ವರನ ಮಾತನ್ನು ಕೇಳಲಿಲ್ಲ. ಅವರ ದಾಸರಾದ ಪ್ರವಾದಿಗಳ ಮುಖಾಂತರ ನಮಗೆ ಗೊತ್ತುಮಾಡಿದ ಸನ್ಮಾರ್ಗದಲ್ಲಿ ನಾವು ನಡೆಯಲಿಲ್ಲ.

ಕೀರ್ತನೆ: 79:8, 9, 11, 13
ಶ್ಲೋಕ: ಪ್ರಭೂ, ನಮ್ಮ ಪಾಪಗಳಿಗೆ ತಕ್ಕಂತೆ ನಮ್ಮನ್ನು ದಂಡಿಸದಿರಿ

ಶುಭಸಂದೇಶ: ಲೂಕ 6:36-38


ನಿಮ್ಮ ತಂದೆಯಾದ ದೇವರಂತೆ ನೀವೂ ದಯಾವಂತರಾಗಿರಿ. "ನೀವು ಇತರರ ಬಗ್ಗೆ ತೀರ್ಪು ಕೊಡಬೇಡಿ, ಆಗ ದೇವರು ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ; ಪರರನ್ನು ದಂಡನೆಗೆ ಗುರಿ ಮಾಡಬೇಡಿ, ದೇವರು ನಿಮ್ಮನ್ನೂ ದಂಡನೆಗೆ ಗುರಿ ಮಾಡುವುದಿಲ್ಲ. ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು: ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು; ಅಳತೆಯಲ್ಲಿ ತುಂಬಿ, ಕುಲುಕಿ, ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು," ಎಂದರು.

ಮನಸಿಗೊಂದಿಷ್ಟು : ವೈದ್ಯರು ರೋಗಿಗಳಿಗೆ ನೀಡುವ ಔಷದಿಯ ಚೀಟಿಯಂತೆ ಮನಸ್ಸಿನ ನಿರಾಳತೆ ಹಾಗೂ  ದೇವರ ಕೃಪೆಗೆ ಯೇಸು ಒಂದಷ್ಟು ಸಿದ್ಧ ಔಷದಿಗಳ ಪಟ್ಟಿ ನೀಡುತ್ತಾರೆ. ಔಷದಿಯಂತೆ ಇವು ನುಂಗುವಾಗ ಕಹಿ, ಅದರೆ ಅದು ಮನಸಿಗೆ, ನೀಡುವ ಚಿಕಿತ್ಸೆ ಅವರ್ಣನೀಯ.  ನಾವು-ಪರರು-ದೇವರು ಎಂಬ ತ್ರಿಕೋನವು ಒಂದಕ್ಕೊಂದು ಬೆಸೆದುಕೊಂಡು ಅದು ಈ ಜಗದಲ್ಲಿ ನಮ್ಮನ್ನು ಮಾನವತೆಯಿಂದ ದೈವತ್ವದೆಡೆಗೆ
ಪ್ರೇರೇಪಿಸುತ್ತಿದೆ. "ನಾನೇ ಬಡವ, ನಾನೇನು ಮಾಡಲು ಸಾಧ್ಯ?"ಎಂದುಕೊಳ್ಳುತ್ತಿದ್ದರೆ, 'ದಯಾವಂತರಾಗಿರಿ ಸಾಕು' ಎನ್ನುತ್ತಿದ್ದಾರೆ ಯೇಸು.     

ಪ್ರಶ್ನೆ : ದೇವರಿಂದ ಅಗಾಧವಾಗಿ ಪಡೆಯುತ್ತಿರುವ ನಾವು, ಪರರಿಗೆ ನೀಡುತ್ತಿರುವ ಅಳತೆ ಸರಿಯಾಗಿದೆಯೇ?


ಪಸ್ಸು ಕಾಲದಲ್ಲಿನ ಇಲ್ಲಿಯವರೆಗಿನ ಪ್ರಶ್ನೆಗಳು 


 -   ತಪಸ್ಸು ಕಾಲದಲ್ಲಿ ನಮ್ಮ ಅಧ್ಯಾತ್ಮಿಕ ಗುರಿಗಳೇನು?

 -  ಶಿಲುಬೆ ಹೊತ್ತು ಹಿಂಬಾಲಿಸಲು ಸಿದ್ಧವಿದ್ದೇವೆಯೇ

 -  ದೇವರ ಮುಂದೆ ನಾವು ತೋರಬಹುದಾದ ಆಸ್ತಿಗಳಾವುವು

 -  ನಮಗೆ  ದೈವೀಕ ವೈದ್ಯನ ಅವಶ್ಯಕತೆಯಿದೆ ಎಂಬ ಅರಿವು ನಮಗಿದೆಯೇ?

 -  ನಾವಿಂದು ಯಾವುದೆಲ್ಲವುಗಳಿಂದ ಜೀವಿಸುತ್ತಿದ್ದೇವೆ?

 -  ನಮ್ಮ ಜೀವನದಲ್ಲಿ ಹಸಿದವರಿಗೆ ನಾವಾಗೇ ಹೋಗಿ ಊಟವಿತ್ತ ಉದಾಹರಣೆಗಳೆಷ್ಟು

 -  ನಮ್ಮ ಪ್ರಾರ್ಥನೆಯಲ್ಲಿ ನಿರರ್ಥಕ ಪದಗಳೆಷ್ಟುಸ್ವಾರ್ಥ ಬೇಡಿಕೆಗಳೆಷ್ಟು?

 -  ನಮ್ಮ ಹೃದಯವೂ ನೆನೆವೆ ನಗರದಂತಾಗಲು ಸಾಧ್ಯವಿಲ್ಲವೇ?

 -  ನಮಗಾಗಿ ನಾವು ಏನು ಅಪೇಕ್ಷಿಸುತ್ತೇವೆಯೋ ಅದನ್ನು ಇತರರಿಗೂ ಬಯಸುತ್ತಿದ್ದೇವೆಯೇ?

 -  ನಾವು ಮತ್ತೊಬ್ಬರನ್ನು ತುಚ್ಛೀಕರಿಸಿದ ಸಂದರ್ಭಗಳ ಲೆಕ್ಕ ನಮ್ಮಲ್ಲಿದೆಯೇ?   

-ನಾವು ಯೇಸುವಿಗೆ ಸ್ವಂತ ಜನರಾಗಿದ್ದೇವೆಯೇ ಅಥವಾ ಇನ್ನೂ ಅನ್ಯರಾಗೇ ಉಳಿದಿದ್ದೇವೆಯೇ?


ಯೇಸುವಿನ ಈ ರೂಪಾಂತರದ ಘಟನೆ ನಮ್ಮೊಳಗಿನ ರೂಪಾಂತರಕ್ಕೆ ಸ್ಪೂರ್ತಿಯಾಗಬಲ್ಲದೇ?

16.03.25 - "ಈತನು ನನ್ನ ಪುತ್ರನು; ನಾನು ಆರಿಸಿಕೊಂಡವನು, ಈತನ ಮಾತಿಗೆ ಕಿವಿಗೊಡಿರಿ,"

ಮೊದಲನೇ ವಾಚನ: ಆದಿಕಾಂಡ 15:5-12, 17-18


ಸರ್ವೇಶ್ವರ ಬಳಿಕ ಅಬ್ರಾಮನನ್ನು ಹೊರಗೆ ಕರೆತಂದು, " ಆಕಾಶದ ಕಡೆಗೆ ನೋಡು. ಆ ನಕ್ಷತ್ರಗಳನ್ನು ನಿನ್ನಿಂದಾದರೆ ಲೆಕ್ಕಿಸು. ನಿನ್ನ ಸಂತಾನವು ಅಷ್ಟು ಅಸಂಖ್ಯಾತವಾಗುವುದು!" ಎಂದರು. ಅಬ್ರಾಮನು ಸರ್ವೇಶ್ವರ ಸ್ವಾಮಿಯಲ್ಲಿ ವಿಶ್ವಾಸವಿಟ್ಟನು. ಅವರು ಅವನ ವಿಶ್ವಾಸವೇ ಸರಿಯಾದ ಸಂಬಂಧವೆಂದು ಪರಿಗಣಿಸಿದರು. ಸರ್ವೇಶ್ವರ ಬಳಿಕ ಅಬ್ರಾಮನಿಗೆ ಇಂತೆಂದರು: "ಈ ನಾಡನ್ನು ನಿನಗೆ ಸೊತ್ತಾಗಿ ಕೊಡಬೇಕೆಂದು ಬಾಬಿಲೋನಿನಲ್ಲಿರುವ ಊರ್ ಪಟ್ಟಣದಿಂದ ನಿನ್ನನ್ನು ಬರಮಾಡಿದ ಸರ್ವೇಶ್ವರ ನಾನೇ," ಎಂದರು. ಅದಕ್ಕೆ ಅಬ್ರಾಮನು, "ಸರ್ವೇಶ್ವರ, ಇದು ನನ್ನ ಸೊತ್ತು ಎಂದು ತಿಳಿದುಕೊಳ್ಳುವುದು ಹೇಗೆ?" ಎಂದನು. ಸರ್ವೇಶ್ವರ ಪ್ರತ್ಯುತ್ತರವಾಗಿ, "ನೀನು ಮೂರು ಮೂರು ವರ್ಷದ ಒಂದು ಕಡಸನ್ನು, ಒಂದು ಆಡನ್ನು, ಒಂದು ಟಗರನ್ನು, ಒಂದು ಬೆಳವಕ್ಕಿಯನ್ನು ಹಾಗು ಒಂದು ಮರಿ ಪಾರಿವಾಳವನ್ನು ತೆಗೆದುಕೊಂಡು ಬಾ," ಎಂದರು. ಅಬ್ರಾಮನು ಅವುಗಳನ್ನೆಲ್ಲಾ ತೆಗೆದುಕೊಂಡು ಬಂದು ಆ ಪ್ರಾಣಿಗಳನ್ನು ಕಡಿದು, ಎರಡೆರಡು ಹೋಳುಮಾಡಿ, ತುಂಡಿಗೆ ತುಂಡನ್ನು ಎದುರಾಗಿಟ್ಟನು. ಪಕ್ಷಿಗಳನ್ನು ಮಾತ್ರ ಕಡಿಯಲಿಲ್ಲ. ಆ ಪ್ರಾಣಿಗಳ ತುಂಡುಗಳ ಮೇಲೆ ರಣ ಹದ್ದುಗಳು ಎರಗಿದಾಗ - ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು. ಹೊತ್ತು ಮುಳುಗುತ್ತಿದ್ದಾಗ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು. ಭೀಕರವಾದ ಕಾರ್ಗತ್ತಲು ಅವನನ್ನು ಕವಿಯಿತು. ಹೊತ್ತು ಮುಳುಗಿ ಕಾರ್ಗತ್ತಲಾದಾಗ ಇಗೋ, ಹೊಗೆಯಾಡುವ ಒಲೆಯೊಂದು ಹಾಗು ಉರಿಯುವ ದೀವಟಿಗೆಯೊಂದು ಕಾಣಿಸಿಕೊಂಡು ಆ ತುಂಡುಗಳ ನಡುವೆ ಹಾದುಹೋದವು. ಸರ್ವೇಶ್ವರ ಅಂದೇ ಅಬ್ರಾಮನ ಸಂಗಡ ಒಂದು ಒಡಂಬಡಿಕೆಯನ್ನು ಮಾಡಿಕೊಂಡರು: "ಈಜಿಪ್ಟಿನ ನದಿಯಿಂದ ಯೂಫ್ರೆಟಿಸ್ ಮಹಾನದಿಯವರೆಗೆ, ಕೊಡುವೆನು ಈ ನಾಡೆಲ್ಲವನ್ನು ನಿನ್ನ ಸಂತತಿಯವರಿಗೆ,"

ಕೀರ್ತನೆ: 27:1, 7-8, 8-9, 13-14
ಶ್ಲೋಕ: ನನಗೆ ಬೆಳಕು ರಕ್ಷೆ ಪ್ರಭುವೇ

ಎರಡನೇ ವಾಚನ; ಫಿಲಿಪ್ಪಿಯರಿಗೆ 3:17-4:1

 ಸಹೋದರರೇ, ನೀವು ನನ್ನನ್ನು ಅನುಸರಿಸಿ. ನಮ್ಮಂತೆ ಆದರ್ಶಜೀವನ ನಡೆಸುವವರನ್ನು ಅನುಸರಿಸಿ ಬಾಳಿರಿ. ಕ್ರಿಸ್ತಯೇಸುವಿನ ಶಿಲುಬೆಗೆ ವಿರೋಧವಾಗಿ ನಡೆಯುವವರು ಅನೇಕರಿದ್ದಾರೆ. ಇದನ್ನು ನಾನು ಹಲವಾರು ಸಾರಿ ತಿಳಿಸಿರುವಂತೆ ಈಗಲೂ ಅತೀವ ದುಃಖದಿಂದ ಹೇಳುತ್ತಿದ್ದೇನೆ. ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕಾರ್ಯಗಳಲ್ಲಿಯೇ ಅವರಿಗೆ ಹೆಮ್ಮೆ, ನಶ್ವರವಾದ ವಿಷಯಗಳಲ್ಲಿಯೇ ಅವರಿಗೆ ವ್ಯಾಮೋಹ. ಹೀಗಾಗಿ, ವಿನಾಶವೇ ಅವರ ಅಂತ್ಯ. ನಾವಾದರೋ ಸ್ವರ್ಗಸಾಮ್ರಾಜ್ಯದ ಪ್ರಜೆಗಳು, ಉದ್ಧರಕರಾದ ಪ್ರಭು ಯೇಸುಕ್ರಿಸ್ತರು ಪನರಾಗಮಿಸುವುದು ಅಲ್ಲಿಂದಲೇ ಎಂದು ಎದುರುನೋಡುತ್ತಿದ್ದೇವೆ. ಅವರು ಸಮಸ್ತವನ್ನು ಸ್ವಾಧೀನಪಡಿಸಿಕೊಳ್ಳುವರು; ಸಶ್ವರವಾದ ನಮ್ಮ ದೀನ ದೇಹಗಳನ್ನು ತಮ್ಮ ಶಕ್ತಿಯಿಂದ ರೂಪಾಂತರಗೊಳಿಸಿ ತಮ್ಮ ತೇಜೋಮಯ ಶರೀರದಂತೆ ಮಾಡುವರು. ಹೀಗಿರಲಾಗಿ ಒಲವಿನ ಸಹೋದರರೇ, ನನ್ನ ಅತಿ ಪ್ರಿಯರೇ, ಆಪ್ತರೇ, ನನ್ನ ಮುದವೂ ಮುಕುಟವೂ ಆದವರೇ, ಪ್ರಭುವಿನಲ್ಲಿ ದೃಢ ವಿಶ್ವಾಸಿಗಳಾಗಿ ಬಾಳಿರಿ.

ಶುಭಸಂದೇಶ: ಲೂಕ 9:28-36

ಪೇತ್ರ, ಯೊವಾನ್ನ ಮತ್ತು ಯಕೋಬ ಇವರನ್ನು ತನ್ನೊಡನೆ ಕರೆದುಕೊಂಡು ಯೇಸುಸ್ವಾಮಿ ಪ್ರಾರ್ಥನೆ ಮಾಡಲು ಬೆಟ್ಟವನ್ನು ಹತ್ತಿದರು. ಪ್ರಾರ್ಥನೆ ಮಾಡುವ ಸಮಯದಲ್ಲಿ ಯೇಸುವಿನ ಮುಖಚರ್ಯೆಯು ಮಾರ್ಪಟ್ಟಿತು. ಅವರ ಉಡುಪು ಬೆಳ್ಳಗೆ ಪ್ರಜ್ವಲಿಸಿತು. ಇದ್ದಕಿದ್ದ ಹಾಗೆ ಮೋಶೆ ಮತ್ತು ಎಲೀಯ ಎಂಬ ಇಬ್ಬರು ಪ್ರವಾದಿಗಳು ಅವರೊಡನೆ ಮಾತನಾಡುತ್ತಿದ್ದರು. ದಿವ್ಯ ವೈಭವದಿಂದ ಕಂಗೊಳಿಸುತ್ತಿದ್ದ ಇವರಿಬ್ಬರು ಯೇಸು ಜೆರುಸಲೇಮಿನಲ್ಲಿ ಪ್ರಾಣ ತ್ಯಾಗಮಾಡಿ ದೈವೇಚ್ಛೆಯನ್ನು ನೆರವೇರಿಸಲಿದ್ದ ವಿಷಯವಾಗಿ  ಸಂಭಾಷಿಸುತ್ತಿದ್ದರು. ಗಾಢ ನಿದ್ರೆಯಲ್ಲಿದ್ದ ಪೇತ್ರ ಮತ್ತು ಸಂಗಡಿಗರು ಎಚ್ಚೆತ್ತಾಗ ಯೇಸುವಿನ ಮಹಿಮೆಯನ್ನೂ ಅವರೊಡನೆ ನಿಂತಿದ್ದ ಆ ಇಬ್ಬರನ್ನೂ ಕಂಡರು. ಅವರಿಬ್ಬರು ಯೇಸುವನ್ನು ಬಿಟ್ಟುಹೋಗುತ್ತಿರುವಾಗ, ಪೇತ್ರನು ಯೇಸುವಿಗೆ, "ಗುರುದೇವಾ, ನಾವು ಇಲ್ಲೇ ಇರುವುದು ಒಳ್ಳೆಯದು; ಅಪ್ಪಣಿಯಾಗಲಿ, ಮೂರು ಗುಡಾರಗಳನ್ನು ಕಟ್ಟುವೆವು - ತಮಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು," ಎಂದನು. ತಾನು ಏನು ಹೇಳುತ್ತಿರುವೆನೆಂದೇ ಪೇತ್ರನು ಗ್ರಹಿಸಲಿಲ್ಲ. ಆತನು ಇದನ್ನು ಹೇಳುತ್ತಿದ್ದ ಹಾಗೆ ಮೇಘವೊಂದು ಬಂದು ಅವರನ್ನಾವರಿಸಿತು. ಆ ಮೇಘದಲ್ಲಿ ಅವರು ಅದೃಶ್ಯರಾದಾಗ ಶಿಷ್ಯರು ದಿಗಿಲುಗೊಂಡರು. ಅದರೊಳಗಿಂದ, "ಈತನು ನನ್ನ ಪುತ್ರನು; ನಾನು ಆರಿಸಿಕೊಂಡವನು ಈತನ ಮಾತಿಗೆ ಕಿವಿಗೊಡಿರಿ," ಎಂಬ ವಾಣಿ ಕೇಳಿಸಿತು. ಆ ವಾಣಿ ಆದಮೇಲೆ ಕಾಣಿಸಿಕೊಂಡವರು ಯೇಸು ಮಾತ್ರ. ಶಿಷ್ಯರು ತಾವು ನೋಡಿದ್ದನ್ನು ಕುರಿತು ಆ ದಿನಗಳಲ್ಲಿ ಏನನ್ನೂ ಹೇಳದೆ, ಯಾರಿಗೂ ತಿಳಿಸದೆ ತತ್ಕಾಲ ಮೌನದಿಂದ ಇದ್ದರು.


ಮನಸಿಗೊಂದಿಷ್ಟು : ಗಾಢ ನಿದ್ರೆಯಲ್ಲಿದ್ದ ಶಿಷ್ಯರು ಎಚ್ಚೆತ್ತಾಗ ಕ್ರಿಸ್ತನ ಮಹಿಮೆಯನ್ನು ನೋಡಿದರು ಎನ್ನುತ್ತದೆ ಇಂದಿನ ಶುಭ ಸಂದೇಶ. ನಮ್ಮ ಜೀವನದಲ್ಲೂ ಅನೇಕ ಸಲ ನಾವು ಕ್ರಿಸ್ತನ ಮಹಿಮೆಯನ್ನು ಕಾಣಲು ನಮ್ಮ ಅಧ್ಯಾತ್ಮಿಕ ನಿದ್ದೆಯೇ ಅಡ್ಡಿಯಾಗುತ್ತದೆ. ಗೊಂದಲಗಳು ನಮ್ಮನ್ನು ಕಾಡಿದಾಗ ದೇವರ ಮಾತು ಕೇಳಲು ನಮ್ಮ ಮನಸು ಜಾಗೃತವಾಗಿರಬೇಕಾಗುತ್ತದೆ. ಶುಭ ಸಂದೇಶದಲ್ಲಿ ಶಿಷ್ಯರಿಗೆ ಕೇಳಿದ ವಾಣಿಯಂತೆ ದೈವ ವಾಕ್ಯಗಳು ನಮ್ಮನ್ನು ಮುನ್ನಡೆಸುತ್ತಿರಲಿ ಎಂಬುದು ನಮ್ಮ ಗುರಿಯಾಗಲಿ.

ಪ್ರಶ್ನೆ :ಯೇಸುವಿನ ಈ ರೂಪಾಂತರದ ಘಟನೆ ನಮ್ಮೊಳಗಿನ ರೂಪಾಂತರಕ್ಕೆ ಸ್ಪೂರ್ತಿಯಾಗಬಲ್ಲದೇ?


ತಪಸ್ಸು ಕಾಲದಲ್ಲಿನ ಇಲ್ಲಿಯವರೆಗಿನ ಪ್ರಶ್ನೆಗಳು 


Ø   ತಪಸ್ಸು ಕಾಲದಲ್ಲಿ ನಮ್ಮ ಅಧ್ಯಾತ್ಮಿಕ ಗುರಿಗಳೇನು?

Ø  ಶಿಲುಬೆ ಹೊತ್ತು ಹಿಂಬಾಲಿಸಲು ಸಿದ್ಧವಿದ್ದೇವೆಯೇ? 

Ø  ದೇವರ ಮುಂದೆ ನಾವು ತೋರಬಹುದಾದ ಆಸ್ತಿಗಳಾವುವು? 

Ø  ನಮಗೆ  ದೈವೀಕ ವೈದ್ಯನ ಅವಶ್ಯಕತೆಯಿದೆ ಎಂಬ ಅರಿವು ನಮಗಿದೆಯೇ?

Ø  ನಾವಿಂದು ಯಾವುದೆಲ್ಲವುಗಳಿಂದ ಜೀವಿಸುತ್ತಿದ್ದೇವೆ?

Ø  ನಮ್ಮ ಜೀವನದಲ್ಲಿ ಹಸಿದವರಿಗೆ ನಾವಾಗೇ ಹೋಗಿ ಊಟವಿತ್ತ ಉದಾಹರಣೆಗಳೆಷ್ಟು? 

Ø  ನಮ್ಮ ಪ್ರಾರ್ಥನೆಯಲ್ಲಿ ನಿರರ್ಥಕ ಪದಗಳೆಷ್ಟುಸ್ವಾರ್ಥ ಬೇಡಿಕೆಗಳೆಷ್ಟು?

Ø  ನಮ್ಮ ಹೃದಯವೂ ನೆನೆವೆ ನಗರದಂತಾಗಲು ಸಾಧ್ಯವಿಲ್ಲವೇ?

Ø  ನಮಗಾಗಿ ನಾವು ಏನು ಅಪೇಕ್ಷಿಸುತ್ತೇವೆಯೋ ಅದನ್ನು ಇತರರಿಗೂ ಬಯಸುತ್ತಿದ್ದೇವೆಯೇ?

Ø  ನಾವು ಮತ್ತೊಬ್ಬರನ್ನು ತುಚ್ಛೀಕರಿಸಿದ ಸಂದರ್ಭಗಳ ಲೆಕ್ಕ ನಮ್ಮಲ್ಲಿದೆಯೇ?   

Øನಾವು ಯೇಸುವಿಗೆ ಸ್ವಂತ ಜನರಾಗಿದ್ದೇವೆಯೇ ಅಥವಾ ಇನ್ನೂ ಅನ್ಯರಾಗೇ ಉಳಿದಿದ್ದೇವೆಯೇ? 

15.03.25 - "ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ."

ಮೊದಲನೇ ವಾಚನ: ಧರ್ಮೋಪದೇಶಕಾಂಡ 26:16-19

ಮೋಶೆ ಜನರಿಗೆ ಹೀಗೆಂದನು: "ಈ ಆಜ್ಞಾವಿಧಿಗಳನ್ನು ನೀವು ಅನುಸರಿಸಬೇಕೆಂದು ನಮ್ಮ ದೇವರಾದ ಸರ್ವೇಶ್ವರ ನಿಮಗೆ ಇಂದು ಆಜ್ಞಾಪಿಸಿದ್ದಾರೆ. ಆದುದರಿಂದ ನೀವು ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಇವುಗಳನ್ನು ಕೈಗೊಂಡು ನಡೆಯಬೇಕು. ನಮಗೆ ಸರ್ವೇಶ್ವರನೇ ದೇವರಾಗಿರುವರೆಂದೂ ಹಾಗು ಅವರು ಹೇಳಿದ ಮಾರ್ಗದಲ್ಲೇ ನಡೆದು ಅವರ ಆಜ್ಞಾವಿಧಿ ನಿರ್ಣಯಗಳನ್ನು ಕೈಗೊಂಡು ಅವರ ಮಾತಿಗೆ ಲಕ್ಷ್ಯೆಕೊಡುವೆವೆಂದೂ ನೀವು ಈಗ ಒಡಂಬಟ್ಟಿದ್ದೀರಿ. ಸರ್ವೇಶ್ವರಸ್ವಾಮಿಯಾದರೋ ನಿಮ್ಮ ವಿಷಯದಲ್ಲಿ, 'ಇವರು ನನ್ನ ಆಜ್ಞೆಗಳನ್ನೆಲ್ಲ ಅನುಸರಿಸುವವರಾದರೆ ನನ್ನ ವಾಗ್ದಾನಾನುಸಾರ ನನಗೆ ಸ್ವಕೀಯ ಜನರಾಗಿರುವರು. ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತ ಇವರಿಗೆ ಹೆಚ್ಚಾದ ಕೀರ್ತಿ ಘನಮಾನಗಳನ್ನುಂಟು ಮಾಡುವೆನು ಹಾಗು ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಸರ್ವೇಶ್ವರನಿಗೆ ಮೀಸಲಾದ ಜನರಾಗಲು ಒಡಂಬಟ್ಟಿದ್ದಾರೆ,' ಎನ್ನುವರು."

ಕೀರ್ತನೆ: 119:1-2, 4-5, 7-8

ಶ್ಲೋಕ: ಪ್ರಭುವಿನ ಶಾಸ್ತ್ರಾನುಸಾರ ನಡೆವವರು ಧನ್ಯರು

ಶುಭಸಂದೇಶ: ಮತ್ತಾಯ 5:43-48

 



 ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು" ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ. ನಾನು ಹೇಳುವುದನ್ನು ಗಮನಿಸಿರಿ: ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥನೆ ಮಾಡಿರಿ. ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ. ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕ ವಸೂಲಿ ಮಾಡುವವರೂ ಹಾಗೆ ಮಾಡುವುದಿಲ್ಲವೇ? ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯ ಜನರೂ ಹಾಗೆ  ಮಾಡುತ್ತಾರಲ್ಲವೇ? ಆದುದರಿಂದ ಸ್ವರ್ಗದಲ್ಲಿರುವ ನಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ."

ಮನಸಿಗೊಂದಿಷ್ಟು : ತಮ್ಮವರು ಹಾಗೂ ಅನ್ಯ ಜನರೂ ಎಂಬ ವಿಂಗಡಣೆಯನ್ನು ಯೇಸು ಮಾಡುತ್ತಾರೆ. ಈ ವಿಂಗಡನೆಗೆ ಬೇರೆ ಯಾವ ಮಾನದಂಡವು ಇಲ್ಲ. ಅದು ಕೇವಲ ತಮ್ಮ ವಾಕ್ಯಗಳಂತೆ ನಡೆಯುವವರು ಮತ್ತು ನಡೆಯದವರು ಎಂಬುದು ಮಾತ್ರ. ಯೇಸುವಿನ ಮಾತುಗಳಂತೆ ನಡೆಯುವವರು ಅನುಸರಿಸಬೇಕಾದ ಮಾರ್ಗ ಕಠಿಣ ಆದರೆ ಸುಂದರ. ಆದರೆ ಅದರಿಂದ ದೊರಕುವ ಬಹುಮಾನ ಸ್ವರ್ಗದ ತಂದೆಯ ಮಕ್ಕಳಾಗುವ ಸೌಭಾಗ್ಯ ಹಾಗೂ ತಂದೆಯಂತೆ ಪರಿಪೂರ್ಣವಾಗುವ ಪರಿಪೂರ್ಣತೆ

ಪ್ರಶ್ನೆ : ನಾವು ಯೇಸುವಿಗೆ ಸ್ವಂತ ಜನರಾಗಿದ್ದೇವೆಯೇ ಅಥವಾ ಇನ್ನೂ ಅನ್ಯರಾಗೇ ಉಳಿದಿದ್ದೇವೆಯೇ? 



ತಪಸ್ಸು ಕಾಲದಲ್ಲಿನ ಇಲ್ಲಿಯವರೆಗಿನ ಪ್ರಶ್ನೆಗಳು 


Ø   ತಪಸ್ಸು ಕಾಲದಲ್ಲಿ ನಮ್ಮ ಅಧ್ಯಾತ್ಮಿಕ ಗುರಿಗಳೇನು?

Ø  ಶಿಲುಬೆ ಹೊತ್ತು ಹಿಂಬಾಲಿಸಲು ಸಿದ್ಧವಿದ್ದೇವೆಯೇ? 

Ø  ದೇವರ ಮುಂದೆ ನಾವು ತೋರಬಹುದಾದ ಆಸ್ತಿಗಳಾವುವು? 

Ø  ನಮಗೆ  ದೈವೀಕ ವೈದ್ಯನ ಅವಶ್ಯಕತೆಯಿದೆ ಎಂಬ ಅರಿವು ನಮಗಿದೆಯೇ?

Ø  ನಾವಿಂದು ಯಾವುದೆಲ್ಲವುಗಳಿಂದ ಜೀವಿಸುತ್ತಿದ್ದೇವೆ?

Ø  ನಮ್ಮ ಜೀವನದಲ್ಲಿ ಹಸಿದವರಿಗೆ ನಾವಾಗೇ ಹೋಗಿ ಊಟವಿತ್ತ ಉದಾಹರಣೆಗಳೆಷ್ಟು? 

Ø  ನಮ್ಮ ಪ್ರಾರ್ಥನೆಯಲ್ಲಿ ನಿರರ್ಥಕ ಪದಗಳೆಷ್ಟುಸ್ವಾರ್ಥ ಬೇಡಿಕೆಗಳೆಷ್ಟು?

Ø  ನಮ್ಮ ಹೃದಯವೂ ನೆನೆವೆ ನಗರದಂತಾಗಲು ಸಾಧ್ಯವಿಲ್ಲವೇ?

Ø  ನಮಗಾಗಿ ನಾವು ಏನು ಅಪೇಕ್ಷಿಸುತ್ತೇವೆಯೋ ಅದನ್ನು ಇತರರಿಗೂ ಬಯಸುತ್ತಿದ್ದೇವೆಯೇ?

Ø  ನಾವು ಮತ್ತೊಬ್ಬರನ್ನು ತುಚ್ಛೀಕರಿಸಿದ ಸಂದರ್ಭಗಳ ಲೆಕ್ಕ ನಮ್ಮಲ್ಲಿದೆಯೇ?   

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...