08.02.25 - "ಯೇಸುವಿಗೆ ಮತ್ತು ಅವರ ಶಿಷ್ಯರಿಗೆ ಊಟಮಾಡಲೂ ಬಿಡುವಿರಲಿಲ್ಲ"

ಮೊದಲನೆಯ ವಾಚನ - ಹಿಬ್ರಿ 13: 15-17, 20-21


ಆದ್ದರಿಂದ, ಪ್ರಭುವಾದ ಯೇಸುಕ್ರಿಸ್ತರನ್ನು ಮುಕ್ತಕಂಠದಿಂದ ಗುಣಗಾನಮಾಡುತ್ತಾ ಅವರ ಮುಖಾಂತರ ಸ್ತುತಿಯೆಂಬ ಬಲಿಯನ್ನು ದೇವರಿಗೆ ಸತತವಾಗಿ ಸಮರ್ಪಿಸೋಣ. ಇದಲ್ಲದೆ, ಪರೋಪಕಾರ ಮಾಡುವುದನ್ನೂ ನಿಮಗಿರುವುದನ್ನು ಪರರೊಡನೆ ಹಂಚಿಕೊಳ್ಳುವುದನ್ನೂ ನಿಲ್ಲಿಸಬೇಡಿ. ಇವು ಕೂಡ ದೇವರಿಗೆ ಮೆಚ್ಚುಗೆಯಾದ ಬಲಿಯರ್ಪಣೆಗಳೇ.

ನಿಮ್ಮ ಸಭಾನಾಯಕರಿಗೆ ವಿಧೇಯರಾಗಿರಿ. ಅವರ ಆಜ್ಞೆಗಳನ್ನು ಪಾಲಿಸಿರಿ. ಅವರು ನಿಮ್ಮ ಆತ್ಮಗಳ ಪಾಲಕರು; ದೇವರಿಗೆ ಲೆಕ್ಕ ಒಪ್ಪಿಸಬೇಕಾದವರು. ಈ ಸೇವೆಯನ್ನು ಅವರು ಸಂತೋಷದಿಂದ ಮಾಡುವಂತೆ ನೀವು ನಡೆದುಕೊಳ್ಳಿ. ಅವರು ಮನನೊಂದುಕೊಂಡು ಮಾಡುವ ಸೇವೆಯಿಂದ ನಿಮಗೆ ಒಳಿತಾಗದು. ಸಭೆಯೆಂಬ ಕುರಿಮಂದೆಗೆ ಮಹಾಪಾಲಕರಾದ ಯೇಸುಸ್ವಾಮಿ ಶಾಶ್ವತ ಒಡಂಬಡಿಕೆಯನ್ನು ನಿಶ್ಚಯಪಡಿಸುವುದಕ್ಕಾಗಿ ತಮ್ಮ ರಕ್ತವನ್ನು ಸುರಿಸಿದರು. ಶಾಂತಿದಾತರಾದ ದೇವರು ನಮ್ಮ ಪ್ರಭುವನ್ನು ಸಾವಿನಿಂದ ಜೀವಕ್ಕೆ ಎಬ್ಬಿಸಿದರು. ನೀವು ಇಂಥ ದೇವರ ಚಿತ್ತವನ್ನು ನೆರವೇರಿಸಲು ನಿಮಗೆ ಬೇಕಾದ ಎಲ್ಲಾ ವರದಾನಗಳನ್ನು ಅವರು ನಿಮಗೆ ಅನುಗ್ರಹಿಸಲಿ. ಸ್ವಾಮಿ ಯೇಸುಕ್ರಿಸ್ತರ ಮುಖಾಂತರ ನಾವು ಅವರಿಗೆ ಪ್ರಿಯರಾದವರಾಗಿ ಬಾಳುವಂತಾಗಲಿ. ಯೇಸುಕ್ರಿಸ್ತರಿಗೆ ಯುಗಯುಗಾಂತರಕ್ಕೂ ಮಹಿಮೆ ಸಲ್ಲಲಿ! ಆಮೆನ್.
ಪ್ರಭುವಿನ ವಾಕ್ಯ


ಕೀರ್ತನೆ - 23: 1-4, 5, 6
ಪ್ರಭು ಕುರಿಗಾಹಿಯಾಗಿರಲು ನನಗೆ I
ಕುಂದುಕೊರತೆಗಳೆಲ್ಲಿಯವು ಎನಗೆ? II

ಹಸಿರುಗಾವಲುಗಳಲೆನ್ನ ತಂಗಿಸುವನು I
ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು II

ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ I
ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ II
ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ I
ನಿನ್ನ ಕುರಿಗೋಲು, ಊರುಗೋಲು, ಧೈರ್ಯವನು ತರುವುದೆನಗೆ I

ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ II
ಸಜ್ಜುಗೊಳಿಸುವೆ ನೀ ಶತ್ರುಗಳ ಕಣ್ಮುಂದೆಯೆ ನನಗೌತಣವನು I
ಹಚ್ಚುವೆ ತಲೆಗೆ ತೈಲವನು, ತುಂಬಿತುಳುಕಿಸುವೆ ಪಾನಪಾತ್ರೆಯನು II
ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ I
ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ II

ಶುಭಸಂದೇಶ - ಮಾರ್ಕ 6: 30-34


ಪ್ರೇಷಿತರು ಯೇಸುಸ್ವಾಮಿಯ ಬಳಿಗೆ ಹಿಂದಿರುಗಿ ಬಂದು ತಾವು ಮಾಡಿದ ಸಕಲ ಕಾರ್ಯಕಲಾಪಗಳ ಹಾಗು ನೀಡಿದ ಬೋಧನೆಯ ವರದಿಯನ್ನು ಒಪ್ಪಿಸಿದರು. ಜನರು ಗುಂಪು ಗುಂಪಾಗಿ ಎಡೆಬಿಡದೆ ಬರುತ್ತಾ ಹೋಗುತ್ತಾ ಇದ್ದುದರಿಂದ ಯೇಸುವಿಗೆ ಮತ್ತು ಅವರ ಶಿಷ್ಯರಿಗೆ ಊಟಮಾಡಲೂ ಬಿಡುವಿರಲಿಲ್ಲ. ಆದುದರಿಂದ ಯೇಸು, “ಬನ್ನಿ, ಪ್ರತ್ಯೇಕವಾಗಿ ನಾವು ನಿರ್ಜನ ಪ್ರದೇಶಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಂಡು ಬರೋಣ,” ಎಂದರು. ಅಂತೆಯೇ ಅವರೆಲ್ಲರೂ ಪ್ರತ್ಯೇಕವಾಗಿ ದೋಣಿಯನ್ನು ಹತ್ತಿ ಏಕಾಂತ ಪ್ರದೇಶಕ್ಕೆ ಹೊರಟರು. ಆದರೆ ಅವರು ಹೋಗುತ್ತಿರುವುದನ್ನು ಕಂಡು ಗುರುತಿಸಿದ ಅನೇಕರು ಎಲ್ಲಾ ಊರುಗಳಿಂದ ಕಾಲ್ದಾರಿಯಲ್ಲಿ ತ್ವರಿತವಾಗಿ ಸಾಗಿ ಅವರಿಗೆ ಮುಂಚಿತವಾಗಿಯೇ ಆ ಸ್ಥಳವನ್ನು ಸೇರಿದರು. ಯೇಸು ದೋಣಿಯಿಂದ ಇಳಿದಾಗ ಅಲ್ಲಿ ದೊಡ್ಡ ಜನಸಮೂಹವೇ ಸೇರಿತ್ತು. ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು ಯೇಸುವಿನ ಮನ ಕರಗಿತು; ಅನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು.
ಪ್ರಭುವಿನ ಶುಭಸಂದೇಶ

07.02.25 - "ಯೇಸುಕ್ರಿಸ್ತರು, ನಿನ್ನೆ ಇದ್ದಹಾಗೆಯೇ ಇಂದೂ ಎಂದೆಂದೂ ಇದ್ದಾರೆ"

ಮೊದಲನೆಯ ವಾಚನ - ಹಿಬ್ರಿಯರಿಗೆ 13: 1-8


ಸೋದರ ಪ್ರೀತಿಯಲ್ಲಿ ನೆಲೆಯಾಗಿ ನಿಲ್ಲಿರಿ. ಅತಿಥಿ ಸತ್ಕಾರ ಮಾಡುವುದನ್ನು ಮರೆಯದಿರಿ. ಅದನ್ನು ಮಾಡುವಾಗ ಅರಿಯದೆ ಕೆಲವರು ದೇವದೂತರನ್ನೇ ಉಪಚರಿಸಿದ್ದಾರೆ. ಸೆರೆಯಲ್ಲಿರುವವರನ್ನು ಸ್ಮರಿಸಿಕೊಳ್ಳಿ. ಅವರ ಸಂಗಡ ನೀವೂ ಸೆರೆಯಲ್ಲಿರುವಂತೆ ಭಾವಿಸಿಕೊಳ್ಳಿ. ಅನ್ಯಾಯಕ್ಕೆ ಒಳಗಾಗಿರುವವರನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ. ಅನ್ಯಾಯಕ್ಕೆ ಒಳಗಾಗಬಲ್ಲ ದೇಹವೊಂದು ನಿಮಗೂ ಸಹ ಇದೆಯಲ್ಲವೇ?  ವಿವಾಹ ಬಂಧನವನ್ನು ಎಲ್ಲರೂ ಗೌರವಿಸಲಿ; ದಂಪತಿಗಳ ಸಂಬಂಧವು ನಿಷ್ಕಳಂಕವಾಗಿರಲಿ. ಕಾಮುಕರೂ ವ್ಯಭಿಚಾರಿಗಳೂ ದೇವರ ನ್ಯಾಯತೀರ್ಪಿಗೆ ಗುರಿಯಾಗುತ್ತಾರೆ.

ಹಣದಾಶೆಗೆ ಬಲಿಯಾಗಬೇಡಿ. ನಿಮಗೆ ಇರುವುದರಲ್ಲಿಯೇ ತೃಪ್ತರಾಗಿರಿ. “ಎಂದೆಂದಿಗೂ ನಾನು ನಿನ್ನ ಕೈಬಿಡಲಾರೆ; ತ್ಯಜಿಸಲಾರೆ,” ಎಂದು ದೇವರೇ ಹೇಳಿದ್ದಾರೆ. ಆದ್ದರಿಂದ, “ಸರ್ವೇಶ್ವರ ನನಗೆ ಸಹಾಯಕ, ನಾನು ಭಯಪಡೆನು; ಮಾನವನು ನನಗೇನು ಮಾಡಬಲ್ಲನು?” ಎಂದು ನಾವು ಧೈರ್ಯದಿಂದ ಹೇಳಲು ಸಾಧ್ಯ.

ದೇವರ ವಾಕ್ಯವನ್ನು ನಿಮಗೆ ಹೇಳಿಕೊಟ್ಟ ಹಿಂದಿನ ಸಭಾನಾಯಕರನ್ನು ಮರೆಯಬೇಡಿ. ಅವರು ಹೇಗೆ ಬಾಳಿದರು, ಎಂಥ ಮರಣವನ್ನು ಪಡೆದರು ಎಂಬುದನ್ನು ಕುರಿತು ಆಲೋಚಿಸಿರಿ. ಅವರ ವಿಶ್ವಾಸ ನಿಮಗೆ ಆದರ್ಶವಾಗಿರಲಿ. ಯೇಸುಕ್ರಿಸ್ತರು, ನಿನ್ನೆ ಇದ್ದಹಾಗೆಯೇ ಇಂದೂ ಎಂದೆಂದೂ ಇದ್ದಾರೆ.
ಪ್ರಭುವಿನ ವಾಕ್ಯ

ಕೀರ್ತನೆ - 27: 1, 3, 5, 8-9 V.1

ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ I
ನಾನಾರಿಗೂ ಅಳುಕೆನು II

ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ I
ನಾನಾರಿಗೂ ಅಳುಕೆನು II
ನನ್ನ ಬಾಳಿಗಾಧಾರ ಪ್ರಭುವೆ I
ನಾನಾರಿಗೂ ಅಂಜೆನು II

ಕೇಡು ಮಾಡಬಂದರೆನಗೆ ಕೊಲೆಗಡುಕರು I
ಎಡವಿಬಿದ್ದರು, ತಾವೇ ಅಳಿದುಹೋದರು II
ಸೇನೆ ಸಮೇತ ಶತ್ರು ಬಂದರೂ ಎದೆಗುಂದೆನು I
ಸಮರಕ್ಕೆರಗಿದರೂ ನಾ ಭರವಸೆಯಿಂದಿರುವೆನು II

ಕೇಡುಕಾಲದಲ್ಲಿ ಅವಿತಿಸಿಡುವನು ನನ್ನನ್ನು ತನ್ನ ಗುಡಾರದಲಿ I
ಇರಿಸುವನು ಮರೆಯಾಗಿ ಗರ್ಭಗುಡಿಯಲಿ, ಸುರಕ್ಷಿತ ಶಿಖರದಲಿ II

“ಅರಸೆನ್ನ ಮುಖದರುಶನವನು", ಎಂದೆ ನೀನು I
“ಅರಸುವೆನು ಅದನೆ", ಎಂದು ಮರುನುಡಿದೆ ನಾನು II
ವಿಮುಖನಾಗಬೇಡ ಪ್ರಭು, ಕೋಪದಿಂದೆನ್ನ ತಳ್ಳಬೇಡಯ್ಯಾ I
ರಕ್ಷಕದೇವಾ, ಎನಗೆ ಸಹಾಯಕಾ, ದಾಸನ ಕೈಬಿಡಬೇಡಯ್ಯಾ II


ಶುಭಸಂದೇಶ - ಮಾರ್ಕ 6: 14-29

ಇಷ್ಟರಲ್ಲಿ ಯೇಸುಸ್ವಾಮಿಯ ಹೆಸರು ಮನೆ ಮಾತಾಯಿತು. ಅದು ಹೆರೋದ ಅರಸನ ಕಿವಿಗೂ ಬಿತ್ತು. ಯೇಸುವಿನ ವಿಚಾರವಾಗಿ ಕೆಲವರು, “ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದುದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ,” ಎನ್ನುತ್ತಿದ್ದರು. ಇನ್ನು ಕೆಲವರು, ‘ಈತನೇ ಎಲೀಯನು’ ಎಂದೂ ಮತ್ತೆ ಕೆಲವರು, “ಪ್ರಾಚೀನ ಪ್ರವಾದಿಗಳಂತೆ ಈತನೂ ಒಬ್ಬ ಪ್ರವಾದಿ,” ಎಂದೂ ಹೇಳುತ್ತಿದ್ದರು. ಇದನ್ನೆಲ್ಲಾ ಕೇಳಿದ ಹೆರೋದನು, “ಹೌದು, ನಾನು ಶಿರಚ್ಛೇದನ ಮಾಡಿದ ಯೊವಾನ್ನನೇ ಮರಳಿ ಜೀವಂತನಾಗಿ ಬಂದಿದ್ದಾನೆ,” ಎಂದನು.

ಹೆರೋದನು ತಾನು ಇಟ್ಟುಕೊಂಡಿದ್ದ ಹೆರೋದಿಯಳ ನಿಮಿತ್ತ ಯೊವಾನ್ನನನ್ನು ಸೆರೆಹಿಡಿಸಿ ಬಂಧನದಲ್ಲಿರಿಸಿದ್ದನು. ಹೆರೋದಿಯಳು ಹೆರೋದನ ಸಹೋದರ ಫಿಲಿಪ್ಪನ ಧರ್ಮಪತ್ನಿ. ಆದರೂ ಹೆರೋದನು ಆಕೆಯನ್ನು ಹೆಂಡತಿಯಾಗಿ ಇಟ್ಟುಕೊಂಡಿದ್ದನು. ಈ ಕಾರಣ ಯೊವಾನ್ನನು, “ನಿನ್ನ ಸಹೋದರನ ಪತ್ನಿಯನ್ನು ನೀನು ಇಟ್ಟುಕೊಂಡಿರುವುದು ನ್ಯಾಯವಲ್ಲ,” ಎಂದು ಪದೇಪದೇ ಅವನನ್ನು ಎಚ್ಚರಿಸುತ್ತಿದ್ದನು. ಇದರ ನಿಮಿತ್ತ ಹೆರೋದಿಯಳು ಯೊವಾನ್ನನ ಮೇಲೆ ಹಗೆಯಿಟ್ಟು ಆತನನ್ನು ಕೊಲ್ಲಿಸಬೇಕು ಎಂದಿದ್ದಳು. ಆದರೆ ತನ್ನ ಸೇಡನ್ನು ತೀರಿಸಿಕೊಳ್ಳಲು ಅವಳಿಂದಾಗಿರಲಿಲ್ಲ. ಏಕೆಂದರೆ, ಯೊವಾನ್ನನು ಸಂತನು ಹಾಗೂ ಸತ್ಪುರುಷನು ಎಂದು ಹೆರೋದನು ಅರಿತು, ಆತನಿಗೆ ಭಯಪಟ್ಟು ಯಾವ ಅಪಾಯವೂ ಆತನಿಗೆ ಬಾರದಂತೆ ನೋಡಿಕೊಳ್ಳುತ್ತಿದ್ದನು. ಯೊವಾನ್ನನು ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗಲೆಲ್ಲಾ ಹೆರೋದನ ಮನಸ್ಸು ಅಲ್ಲೋಲಕಲ್ಲೋಲವಾಗುತ್ತಿತ್ತು. ಆದರೂ ಆತನ ಮಾತುಗಳನು ಕಿವಿಗೊಟ್ಟು ಕೇಳುತ್ತಿದ್ದನು.

ಕಡೆಗೊಮ್ಮೆ, ಹೆರೋದಿಯಳಿಗೆ ಅನುಕೂಲವಾದ ಸಂದರ್ಭ ಒದಗಿತು. ಹೆರೋದನು ತನ್ನ ಹುಟ್ಟುಹಬ್ಬದ ದಿನಾಚರಣೆಯಂದು, ಆಸ್ಥಾನಿಕರಿಗೂ ಸೇನಾಧಿಪತಿಗಳಿಗೂ ಗಲಿಲೇಯ ಪ್ರಾಂತ್ಯದ ಪ್ರಮುಖರಿಗೂ ಔತಣಕೂಟವನ್ನು ಏರ್ಪಡಿಸಿದನು. ಆ ಸಮಾರಂಭದಲ್ಲಿ ಹೆರೋದಿಯಳ ಮಗಳು ಔತಣ ಶಾಲೆಗೆ ಬಂದು ನರ್ತನ ಮಾಡಿದಳು. ಹೆರೋದನೂ ಅವನ ಜೊತೆಯಲ್ಲಿ ಭೋಜನಕ್ಕೆ ಕುಳಿತಿದ್ದ ಅತಿಥಿಗಳೂ ಅದನ್ನು ಬಹಳವಾಗಿ ಮೆಚ್ಚಿಕೊಂಡರು. ಆಗ ಅರಸ ಹೆರೋದನು ಅವಳಿಗೆ, “ನಿನಗೆ ಏನುಬೇಕಾದರೂ ಕೇಳು, ಕೊಡುತ್ತೇನೆ” ಎಂದನು. “ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಅದನ್ನು ನಿನಗೆ ಕೊಡುತ್ತೇನೆ,” ಎಂದು ಪ್ರಮಾಣ ಮಾಡಿದನು. ಅವಳು ತನ್ನ ತಾಯಿಯ ಬಳಿಗೆ ಹೋಗಿ, “ಅಮ್ಮಾ, ನಾನು ಏನನ್ನು ಕೇಳಿಕೊಳ್ಳಲಿ?” ಎಂದು ವಿಚಾರಿಸಿದಳು. “ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು,” ಎಂದು ಆಕೆ ಮಗಳನ್ನು ಪ್ರೇರೇಪಿಸಿದಳು. ಕೂಡಲೆ ಅವಳು ಅರಸನ ಬಳಿಗೆ ಧಾವಿಸಿ, “ಸ್ನಾನಿಕ ಯೊವಾನ್ನನ ತಲೆಯನ್ನು ಇದೀಗಲೇ ಒಂದು ತಟ್ಟೆಯಲ್ಲಿ ತರಿಸಿಕೊಡಿ; ಇದೇ ನನ್ನ ಬೇಡಿಕೆ,” ಎಂದು ಕೇಳಿಕೊಂಡಳು. ಅರಸನಿಗೆ ಅತೀವ ದುಃಖವಾಯಿತು. ಆದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ. ಆದುದರಿಂದ ಅವನು ಒಬ್ಬ ಪಹರೆಯವನನ್ನು ಕರೆದು, ಕೂಡಲೇ ಯೊವಾನ್ನನ ತಲೆಯನ್ನು ತರಬೇಕೆಂದು ಅವನಿಗೆ ಆಜ್ಞೆ ಮಾಡಿ ಕಳುಹಿಸಿದನು. ಪಹರೆಯವನು ಸೆರೆಮನೆಗೆ ಹೋಗಿ ಯೊವಾನ್ನನ ತಲೆಯನ್ನು ಕತ್ತರಿಸಿ, ಅದನ್ನು ತಟ್ಟೆಯಲ್ಲಿ ಇಟ್ಟು ಹುಡುಗಿಗೆತಂದುಕೊಟ್ಟನು. ಅವಳು ಅದನ್ನು ತನ್ನ ತಾಯಿಗೆ ಕೊಟ್ಟಳು. ಇದನ್ನು ಕೇಳಿದ ಯೊವಾನ್ನನ ಶಿಷ್ಯರು ಅಲ್ಲಿಗೆ ಬಂದು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು.
ಪ್ರಭುವಿನ ಶುಭಸಂದೇಶ

06.02.25 - ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ

ಮೊದಲನೆಯ ವಾಚನ – ಹಿಬ್ರಿಯರಿಗೆ 12: 18-19, 21-24


ಸಹೋದರರೇ, ನೀವು ಇಸ್ರಯೇಲರಂತೆ ಮುಟ್ಟಬಹುದಾದ ಸೀನಾಯ್ ಬೆಟ್ಟಕ್ಕೆ ಬಂದಿಲ್ಲ. ಅಲ್ಲಿ ಬೆಂಕಿ ಧಗಧಗಿಸುತ್ತಿತ್ತು. ಕಾರ್ಗತ್ತಲು ಕವಿದಿತ್ತು; ಮೋಡದ ಮಬ್ಬು ಮುಸುಕಿತ್ತು; ಬಿರುಗಾಳಿ ಬೀಸುತ್ತಿತ್ತು; ಕಹಳೆಗಳು ಮೊಳಗುತ್ತಿದ್ದವು. ಆಗ ಧ್ವನಿಯೊಂದು ಕೇಳಿಬಂತು. ಅದನ್ನು ಕೇಳಿದವರು, ಇನ್ನೆಂದಿಗೂ ಆ ಧ್ವನಿ ತಮ್ಮೊಂದಿಗೆ ಮಾತನಾಡುವುದೇ ಬೇಡವೆಂದು ಕೇಳಿಕೊಂಡರು. ಆ ನೋಟ ಎಷ್ಟು ಭಯಂಕರವಾಗಿತ್ತೆಂದರೆ, ಮೋಶೆ ಕೂಡ, “ನಾನು ಭಯದಿಂದ ನಡುಗುತ್ತಿದ್ದೇನೆ,” ಎಂದು ಹೇಳುವಂತಾಯಿತು! ಆದರೆ ನೀವು ಬಂದಿರುವುದು ಸಿಯೋನ್ ಬೆಟ್ಟಕ್ಕೆ, ಜೀವಂತ ದೇವರ ನಗರಕ್ಕೆ; ಸ್ವರ್ಗೀಯ ಜೆರುಸಲೇಮಿಗೆ, ಅಸಂಖ್ಯ ದೇವದೂತರು ಕೂಡಿರುವ ಉತ್ಸವ ಕೂಟಕ್ಕೆ; ಸ್ವರ್ಗದಲ್ಲಿ ದಾಖಲೆಯಾಗಿರುವ ಜೇಷ್ಠಪುತ್ರನ ಸಭೆಗೆ; ನೀವು ಬಂದಿರುವುದು ಸಕಲ ಮಾನವರ ನ್ಯಾಯಮೂರ್ತಿಯಾದ ದೇವರ ಸನ್ನಿಧಿಗೆ; ಸಿದ್ಧಿಗೆ ಬಂದ ಸತ್ಪುರುಷರ ಆತ್ಮಗಳ ಸಮೂಹಕ್ಕೆ; ಹೊಸ ಒಡಂಬಡಿಕೆಯ ಮಧ್ಯಸ್ಥರಾದ ಯೇಸುಸ್ವಾಮಿಯ ಬಳಿಗೆ, ಹೇಬೆಲನ ರಕ್ತಕ್ಕಿಂತಲೂ ಅಮೋಘವಾಗಿ ಮೊರೆಯಿಡುವ ಪ್ರೋಕ್ಷಣಾರಕ್ತದ ಬಳಿಗೆ ನೀವು ಬಂದಿದ್ದೀರಿ. 
ಪ್ರಭುವಿನ ವಾಕ್ಯ

ಕೀರ್ತನೆ – 48: 1-3, 8, 9-10, V.9
ಶ್ಲೋಕ: ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು Iನಿನ್ನ ಮಹದಾಲಯದೊಳು ಅದನು ಧ್ಯಾನಿಸುವೆವು II

ಸರ್ವಸ್ತುತಿಗೆ ಪಾತ್ರ, ಪ್ರಭುವು ಪರಮೋನ್ನತ I
ದೇವನಗರದಲಿ ಆತನ ಪವಿತ್ರ ಪರ್ವತ II

ಎತ್ತರದಲಿ ಸುಂದರ, ಉತ್ತರದಲಿ ಸಿಯೋನ್ ಶಿಖರ I
ಆನಂದದಾಯಕ ರಾಜಾಧಿರಾಜನ ಆ ನಗರ II

ಅದರ ಕೋಟೆಕೊತ್ತಲಗಳ ನಡುವೆ ದೇವನು I
ತಾನೇ ಸುಭದ್ರ ದುರ್ಗವೆಂದು ತೋರಿಹನು II

ಕಿವಿಯಾರೆ ಕೇಳಿದಂತೆಯೆ ಕಣ್ಣಾರೆ ಕಂಡೆವು I
ಸರ್ವಶಕ್ತ ಪ್ರಭುವನು ದೇವನಗರದಲಿ ಕಂಡೆವು II

ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು I
ನಿನ್ನ ಮಹದಾಲಯದೊಳು ಅದನು ಧ್ಯಾನಿಸುವೆವು II

ನಿನ್ನ ನಾಮದಂತೆ ನಿನ್ನಾ ಹೊಗಳಿಕೆ I
ಮುಟ್ಟುತ್ತದೆ ಜಗದ ಎಲ್ಲೆ ಎಲ್ಲೆಗೆ I

ಶುಭಸಂದೇಶ – ಮಾರ್ಕ 6: 7-13


ಅನಂತರ ಯೇಸುಸ್ವಾಮಿ ಸುತ್ತಮುತ್ತಲಿನ ಊರುಗಳಿಗೆ ಹೋಗಿ ಜನರಿಗೆ ಪ್ರಬೋಧಿಸಿದರು. ಇದಲ್ಲದೆ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ ದೆವ್ವಬಿಡಿಸುವ ಅಧಿಕಾರವನ್ನಿತ್ತು, ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದರು. ಕಳುಹಿಸುವಾಗ, “ಪ್ರಯಾಣ ದಂಡವೊಂದನ್ನು ಹೊರತು ಇನ್ನೇನನ್ನೂ ತೆಗೆದುಕೊಂಡು ಹೋಗಬೇಡಿ. ಬುತ್ತಿ, ಜೋಳಿಗೆ, ಜೇಬಿನಲ್ಲಿ ಹಣ, ಯಾವುದೂ ಬೇಡ. ಪಾದರಕ್ಷೆಯನ್ನು ಮೆಟ್ಟಿಕೊಂಡರೆ ಸಾಕು. ಎರಡು ಅಂಗಿಗಳನ್ನೂ ತೊಟ್ಟುಕೊಳ್ಳಬೇಡಿ,” ಎಂದು ಅಪ್ಪಣೆ ಮಾಡಿದರು. ಇದಲ್ಲದೆ, “ನೀವು ಯಾವುದೇ ಒಂದು ಊರಿಗೆ ಹೋದಾಗ ಆ ಊರನ್ನು ಬಿಡುವವರೆಗೂ ಆತಿಥ್ಯ ನೀಡುವ ಯಾವುದಾದರೂ ಒಂದು ಮನೆಯಲ್ಲೇ ಉಳಿದುಕೊಳ್ಳಿ. ಯಾವುದೇ ಊರಿನ ಜನರು ನಿಮ್ಮನ್ನು ಸ್ವಾಗತಿಸದೆಯೂ ನಿಮ್ಮ ಬೋಧನೆಗೆ ಕಿವಿಗೊಡದೆಯೂ ಹೋದರೆ, ಆ ಊರನ್ನು ಬಿಟ್ಟುಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿಬಿಡಿ. ಅವರ ವಿರುದ್ಧ ಅದು ಸಾಕ್ಷಿಯಾಗಿರಲಿ,” ಎಂದರು. ಶಿಷ್ಯರು ಹೊರಟುಹೋಗಿ, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ,” ಎಂದು ಜನರಿಗೆ ಸಾರಿ ಹೇಳಿದರು. ದೆವ್ವಹಿಡಿದಿದ್ದ ಅನೇಕರಿಂದ ದೆವ್ವಗಳನ್ನು ಹೊರಗಟ್ಟಿದರು. ತೈಲಲೇಪನಮಾಡಿ ಅನೇಕ ರೋಗಿಗಳನ್ನು ಗುಣಪಡಿಸಿದರು.
ಪ್ರಭುವಿನ ಶುಭಸಂದೇಶ



04.02.25 - ತಲಿಥಾಕೂಮ್

ಮೊದಲನೆಯ ವಾಚನ: ಹಿಬ್ರಿಯರಿಗೆ 12: 1-4


ಆದಕಾರಣ ಇಷ್ಟುಮಂದಿ ಸಾಕ್ಷಿಗಳು ದೊಡ್ಡ ಮೇಘದಂತೆ ನಮ್ಮ ಸುತ್ತಲೂ ಆವರಿಸಿರುವಾಗ, ನಮಗೆ ಅಡ್ಡಿಯಾಗಬಲ್ಲ ಹೊರೆಯನ್ನೂ ಅಂಟಿಕೊಳ್ಳುವ ಪಾಪವನ್ನೂ ತೆಗೆದು ಹಾಕಿ, ನಮಗಾಗಿ ನೇಮಿಸಿರುವ ಓಟದ ಸ್ಪರ್ಧೆಯಲ್ಲಿ ನಾವು ಸ್ಥಿರಚಿತ್ತದಿಂದ ಭಾಗವಹಿಸೋಣ. ವಿಶ್ವಾಸವನ್ನು ಹುಟ್ಟಿಸುವ ಮತ್ತು ಅದನ್ನು ಪರಿಪೂರ್ಣಗೊಳಿಸುವ ಯೇಸುಸ್ವಾಮಿಯನ್ನು ಗುರಿಯಾಗಿಟ್ಟು ಓಡೋಣ. ಅವರು ತಮ್ಮ ಮುಂದಿಡಲಾದ ಸೌಭಾಗ್ಯವನ್ನು ಗಳಿಸಲು ನಿಂದೆ ಅವಮಾನಗಳನ್ನು ಲೆಕ್ಕಿಸದೆ ಶಿಲುಬೆಯ ಮರಣವನ್ನು ಸಹಿಸಿಕೊಂಡರು. ಈಗಲಾದರೋ ದೇವರ ಸಿಂಹಾಸನದ ಬಲಗಡೆ ಆಸೀನರಾಗಿದ್ದಾರೆ. ಪಾಪಿಗಳಿಂದ ತಮಗುಂಟಾದ ಕಠಿಣ ವಿರೋಧವನ್ನು ಯೇಸುಸ್ವಾಮಿ ಹೇಗೆ ಸಹಿಸಿಕೊಂಡರೆಂಬುದನ್ನು ಮನಸ್ಸಿನಲ್ಲಿಡಿ. ಆಗ ನೀವು ಬೇಸತ್ತು ಎದೆಗುಂದಲಾರಿರಿ. ಪಾಪದ ವಿರುದ್ಧ ನೀವು ಕೈಗೊಂಡ ಹೋರಾಟದಲ್ಲಿ ನಿಮ್ಮ ರಕ್ತವನ್ನೇ ಸುರಿಸುವ ಸ್ಥಿತಿಗೆ ನೀವಿನ್ನೂ ಬಂದಿಲ್ಲ

ಕೀರ್ತನೆ – 22:26-27, 28, 30, 31-32
ಶ್ಲೋಕ: ಹರಿದವು ಸ್ತುತಿ ಭಕ್ತರ ಬಾಯಿಂದ 

ಶುಭಸಂದೇಶ – ಮಾರ್ಕ 5:21-43


ಯೇಸುಸ್ವಾಮಿ ದೋಣಿಯನ್ನೇರಿ ಸರೋವರದ ಈಚೆ ದಡಕ್ಕೆ ಮರಳಿದರು. ತೀರವನ್ನು ಸೇರಿದೊಡನೆ ಜನರು ದೊಡ್ಡಗುಂಪಾಗಿ ಅವರ ಸುತ್ತಲೂ ನೆರೆದರು. ಪ್ರಾರ್ಥನಾಮಂದಿರದ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನ ಹೆಸರು ಯಾಯೀರ. ಅವನು ಯೇಸುವನ್ನು ನೋಡಿದೊಡನೆ ಅವರ ಪಾದಕ್ಕೆರಗಿ, “ನನ್ನ ಪುಟ್ಟ ಮಗಳು ಮರಣಾವಸ್ಥೆಯಲ್ಲಿದ್ದಾಳೆ; ತಾವು ಬಂದು ತಮ್ಮ ಹಸ್ತವನ್ನು ಅವಳ ಮೇಲಿಟ್ಟು, ಅವಳು ಗುಣಹೊಂದಿ ಬದುಕುವಂತೆ ಅನುಗ್ರಹಿಸಬೇಕು,” ಎಂದು ಬಹಳವಾಗಿ ವಿನಂತಿಸಿದನು. ಯೇಸು ಅವನ ಜೊತೆಯಲ್ಲಿ ಹೊರಟರು. ದೊಡ್ಡ ಜನಸ್ತೋಮವು ಯೇಸುವನ್ನು ಮುತ್ತಿಕೊಂಡು ಅವರ ಜೊತೆಯಲ್ಲೇ ಹೊರಟಿತು. ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಆ ಗುಂಪಿನಲ್ಲಿದ್ದಳು. ಅನೇಕ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರೂ ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯ ಮಾಡಿದ್ದರೂ ಅವಳ ರೋಗ ಮಾತ್ರ ಉಲ್ಬಣ ಆಗುತ್ತಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ. ಯೇಸುವಿನ ವಿಷಯವಾಗಿ ಜನರು ಹೇಳುತ್ತಿದ್ದುದನ್ನು ಆಕೆ ಕೇಳಿ, ಜನರ ಗುಂಪಿನಲ್ಲಿ ಸೇರಿ, ಯೇಸುವನ್ನು ಹಿಂಬಾಲಿಸಿದಳು. “ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣಹೊಂದುವೆನು” ಎಂದುಕೊಂಡು ಯೇಸುವಿನ ಉಡುಪನ್ನು ಮುಟ್ಟಿದಳು. ಅದನ್ನು ಮುಟ್ಟಿದಾಕ್ಷಣ ಅವಳ ರಕ್ತಸ್ರಾವ ನಿಂತುಹೋಯಿತು. ಕಾಡುತ್ತಿದ್ದ ವ್ಯಾಧಿಯಿಂದ ತಾನು ಗುಣಹೊಂದಿದ್ದೇನೆಂದು ಆಕೆಗೆ ಅರಿವಾಯಿತು. ಇತ್ತ ಯೇಸು, ರೋಗವನ್ನು ಗುಣಪಡಿಸುವ ಶಕ್ತಿ ತಮ್ಮಿಂದ ಹೊರಹೊಮ್ಮಿದ್ದನ್ನು ತಕ್ಷಣ ತಿಳಿದು, ಸುತ್ತಲಿದ್ದ ಜನರತ್ತ ತಮ್ಮ ದೃಷ್ಟಿಯನ್ನು ಹರಿಸಿ, “ನನ್ನ ಉಡುಪನ್ನು ಮುಟ್ಟಿದವರಾರು?” ಎಂದು ಪ್ರಶ್ನಿಸಿದರು. ಅದಕ್ಕೆ ಶಿಷ್ಯರು, “ತಮ್ಮ ಸುತ್ತಲೂ ಜನರು ಮುತ್ತಿಕೊಂಡಿರುವುದು ತಮಗೆ ತಿಳಿದೇ ಇದೆ. ಆದರೂ ‘ನನ್ನನ್ನು ಮುಟ್ಟಿದವರು ಯಾರು?’ ಎಂದು ಕೇಳುತ್ತೀರಲ್ಲಾ” ಎಂದರು. ಆದರೆ ಯೇಸು ತಮ್ಮನ್ನು ಮುಟ್ಟಿದವರು ಯಾರೆಂದು ಗುರುತಿಸಲು ಸುತ್ತಲೂ ನೋಡುತ್ತಿದ್ದರು. ತನ್ನಲ್ಲಿ ಸಂಭವಿಸಿದ್ದನ್ನು ಅರಿತಿದ್ದ ಆ ಮಹಿಳೆ ಭಯದಿಂದ ನಡುಗುತ್ತಾ ಮುಂದೆ ಬಂದು ಯೇಸುವಿನ ಪಾದಕ್ಕೆ ಎರಗಿ, ಅವರಿಗೆ ನಡೆದ ಸಂಗತಿಯನ್ನು ತಿಳಿಸಿದಳು. ಯೇಸು ಆಕೆಗೆ, “ಮಗಳೇ, ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ; ಸಮಾಧಾನದಿಂದ ಹೋಗು, ವ್ಯಾಧಿಮುಕ್ತಳಾಗಿ ಆರೋಗ್ಯದಿಂದಿರು,” ಎಂದು ಅನುಗ್ರಹಿಸಿದರು. ಯೇಸುಸ್ವಾಮಿ ಇನ್ನೂ ಮಾತನಾಡುತ್ತ ಇರುವಾಗಲೇ ಯಾಯಿರನ ಮನೆಯಿಂದ ಕೆಲವರು ಬಂದು ಅವನಿಗೆ, “ನಿಮ್ಮ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುತ್ತೀರಿ?” ಎಂದರು. ಅವರು ಹೇಳಿದ ಮಾತುಗಳನ್ನು ಯೇಸು ಕೇಳಿಯೂ ಅವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಯಾಯಿರನಿಗೆ, “ಭಯಪಡಬೇಡ, ನಿನ್ನಲ್ಲಿ ವಿಶ್ವಾಸ ಒಂದಿದ್ದರೆ ಸಾಕು,” ಎಂದರು. ಅನಂತರ ಪೇತ್ರ, ಯಕೋಬ ಹಾಗೂ ಅವನ ಸೋದರ ಯೊವಾನ್ನ, ಇವರನ್ನು ಮಾತ್ರ ತಮ್ಮ ಜೊತೆಯಲ್ಲಿ ಕರೆದುಕೊಂಡು ಯಾಯಿರನ ಮನೆಯನ್ನು ತಲುಪಿದರು. ಅಲ್ಲಿ ಜನರ ಗೋಳಾಟ, ಗೊಂದಲದ ದೃಶ್ಯ ಅವರ ಕಣ್ಣಿಗೆ ಬಿತ್ತು. ಯೇಸು ಮನೆಯೊಳಕ್ಕೆ ಹೋಗಿ, “ಏತಕ್ಕೆ ಇಷ್ಟೆಲ್ಲಾ ಗಲಭೆ, ಗೋಳಾಟ? ಬಾಲಕಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ,” ಎಂದರು. ಇದನ್ನು ಕೇಳಿದ ಜನರು, ಯೇಸುವನ್ನು ಪರಿಹಾಸ್ಯ ಮಾಡಿದರು. ಆದರೆ ಯೇಸು ಎಲ್ಲರನ್ನೂ ಹೊರಗೆ ಕಳುಹಿಸಿ ಬಾಲಕಿಯ ತಂದೆತಾಯಿಯನ್ನು ಮತ್ತು ತಮ್ಮೊಂದಿಗಿದ್ದ ಮೂವರು ಶಿಷ್ಯರನ್ನು ಮಾತ್ರ ಕರೆದುಕೊಂಡು ಆ ಬಾಲಕಿಯನ್ನು ಮಲಗಿಸಿದ್ದ ಕೊಠಡಿಯನ್ನು ಪ್ರವೇಶಿಸಿದರು. ಆಕೆಯ ಕೈಯನ್ನು ಹಿಡಿದು, “ತಲಿಥಾಕೂಮ್” ಎಂದರು. (‘ಮಗಳೇ, ನಿನಗೆ ಹೇಳುತ್ತೇನೆ, ಎದ್ದೇಳು’ ಎಂಬುದು ಆ ಮಾತಿನ ಅರ್ಥ) ಅವಳು ತಟ್ಟನೆ ಎದ್ದು ನಡೆದಾಡತೊಡಗಿದಳು. ಅಲ್ಲಿದ್ದವರೆಲ್ಲರೂ ಆಶ್ಚರ್ಯ ಭರಿತರಾದರು. ಅವಳಿಗೆ ಹನ್ನೆರಡು ವರ್ಷ ವಯಸ್ಸು ಆಗಿತ್ತು. ಈ ವಿಷಯವನ್ನು ಬೇರೆ ಯಾರಿಗೂ ತಿಳಿಸಬಾರದೆಂದು ಯೇಸು ಅವರಿಗೆ ಕಟ್ಟಪ್ಪಣೆ ಮಾಡಿದರು. ಬಾಲಕಿಗೆ ತಿನ್ನಲು ಏನಾದರೂ ಕೊಡುವಂತೆ ತಿಳಿಸಿದರು.

05.02.25

ಮೊದಲನೆಯ ವಾಚನ - ಹಿಬ್ರಿಯರಿಗೆ 12: 4-7, 11-15

ಪಾಪದ ವಿರುದ್ಧ ನೀವು ಕೈಗೊಂಡ ಹೋರಾಟದಲ್ಲಿ ನಿಮ್ಮ ರಕ್ತವನ್ನೇ ಸುರಿಸುವ ಸ್ಥಿತಿಗೆ ನೀವಿನ್ನೂ ಬಂದಿಲ್ಲ. ಮಕ್ಕಳಿಗೆ ಹೇಳುವಂತೆ ದೇವರು ನಿಮಗೆ ಹೇಳಿರುವ ಎಚ್ಚರಿಕೆಯ ಮಾತನ್ನು ನೀವು ಮರೆತುಬಿಟ್ಟಿರೋ? “ಸುಕುಮಾರಾ, ಸರ್ವೇಶ್ವರ ಕೊಡುವ ಶಿಕ್ಷೆಯನ್ನು ತಾತ್ಸಾರ ಮಾಡದಿರು ಅವರು ನಿನ್ನನ್ನು ದಂಡಿಸುವಾಗ ಧೈರ್ಯಗೆಡದಿರು ಸರ್ವೇಶ್ವರ ತಾವು ಪ್ರೀತಿಸುವವನನ್ನು ಶಿಕ್ಷಿಸುವರು; 
ತಮಗೆ ಮಗನೆಂದು ಬರಮಾಡಿಕೊಳ್ಳುವವನನ್ನು ದಂಡಿಸುವರು.” ಶಿಸ್ತಿಗಾಗಿ ಶಿಕ್ಷೆಯನ್ನು ಸಹಿಸಿಕೊಳ್ಳಬೇಕು. ದೇವರು ನಿಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ತಂದೆಯಿಂದ ಶಿಕ್ಷೆಯನ್ನು ಪಡೆಯದ ಮಗನಿದ್ದಾನೆಯೇ? ಯಾವ ಶಿಕ್ಷೆಯಾದರೂ ತಕ್ಷಣಕ್ಕೆ ಸಿಹಿಯಾಗಿರದೆ ಕಹಿಯಾಗಿಯೇ ಇರುತ್ತದೆ. ಹೀಗೆ ಶಿಸ್ತಿನ ಕ್ರಮಕ್ಕೆ ಒಳಗಾದವರು ಮುಂದಕ್ಕೆ ನ್ಯಾಯನೀತಿಯನ್ನೂ ಶಾಂತಿಸಮಾಧಾನವನ್ನೂ ಪ್ರತಿಫಲವಾಗಿ ಪಡೆಯುತ್ತಾರೆ. ಆದ್ದರಿಂದ, ಜೋತುಬೀಳುವ ನಿಮ್ಮ ಕೈಗಳನ್ನು ಮೇಲೆತ್ತಿ, ಕುಸಿದುಬೀಳುವ ನಿಮ್ಮ ಮೊಣಕಾಲುಗಳನ್ನು ಚೇತರಿಸಿಕೊಳ್ಳಿ. ನೀವು ಹಿಡಿದಿರುವ ಹಾದಿಯನ್ನು ಸರಿಪಡಿಸಿಕೊಳ್ಳಿ. ಆಗ ಕುಂಟುವ ಕಾಲು ಉಳುಕದೆ ವಾಸಿಯಾಗುತ್ತದೆ. ಎಲ್ಲರೊಂದಿಗೂ ಶಾಂತಿಸಮಾಧಾನದಿಂದಿರಲು ಪ್ರಯತ್ನಿಸಿರಿ; ಪರಿಶುದ್ಧತೆಯನ್ನು ಅರಸಿರಿ; ಪರಿಶುದ್ಧತೆಯಿಲ್ಲದೆ ಯಾರೂ ದೇವರನ್ನು ಕಾಣುವಂತಿಲ್ಲ. ನಿಮ್ಮಲ್ಲಿ ಯಾರೂ ದೇವರ ಅನುಗ್ರಹವನ್ನು ಕಳೆದುಕೊಳ್ಳದಂತೆ ಎಚ್ಚರಿಕೆಯಾಗಿರಿ. ಯಾವ ವಿಷದ ಬೇರೂ ನಿಮ್ಮಲ್ಲಿ ತಲೆದೋರಿ, ಅಸಮಾಧಾನವನ್ನು ಹುಟ್ಟಿಸಿ, ಸಭೆಯನ್ನು ಕೆಡಿಸದಂತೆ ನೋಡಿಕೊಳ್ಳಿ.
ಪ್ರಭುವಿನ ವಾಕ್ಯ

ಕೀರ್ತನೆ - 103: 1-2, 13-14, 17-18
ಭಯಭಕ್ತರಿಗೆ ಪ್ರಭುವಿನ ಪ್ರೀತಿಯಾದರೋ ಯುಗಯುಗಾಂತರಕು I

ಭಜಿಸು ನನ್ನ ಮನವೇ, ಭಜಿಸು ಪ್ರಭುವನು I
ನನ್ನ ಅಂತರಂಗವೇ, ಭಜಿಸು ಆತನನು I

ನೆನೆ ಆತನ ಪರಮಪಾವನ ನಾಮವನು II
ಭಜಿಸು ನನ್ನ ಮನವೇ, ಭಜಿಸು ಪ್ರಭುವನು I

ಮರೆಯದಿರು ಆತನ ಉಪಕಾರಗಳೊಂದನು II
ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ I

ಕನಿಕರಿಸುವನಾತ ತನಗೆ ಅಂಜುವವರಿಗೆ II
ಏಕೆನೆ, ನಮ್ಮ ಸ್ವಭಾವವನು ಆತನು ಬಲ್ಲ I

ನಾವು ಹುಡಿಮಣ್ಣೆಂದವನಿಗೆ ತಿಳಿದಿದೆಯಲ್ಲಾ II
ಭಯಭಕ್ತರಿಗೆ ಪ್ರಭುವಿನ ಪ್ರೀತಿಯಾದರೋ ಯುಗಯುಗಾಂತರಕು I

ಅವರ ಮಕ್ಕಳ ಮಕ್ಕಳಿಗೆ ಆತನ ನೀತಿಯು ತಲತಲಾಂತರಕು II
ಅಂತೆಯೇ ಆತನ ನಿಬಂಧನೆಗಳನು ಕೈಗೊಳ್ಳುವವರಿಗೆ I
ಆತನ ವಿಧಿನಿಯಮಗಳು ನೆನಪಿನಲ್ಲಿಟ್ಟು ನಡೆವವರಿಗೆ II

ಶುಭಸಂದೇಶ - ಮಾರ್ಕ 6: 1-6

ಯೇಸುಸ್ವಾಮಿ ಅಲ್ಲಿಂದ ಹೊರಟು ತಮ್ಮ ಸ್ವಂತ ಊರಿಗೆ ಹೋದರು. ಶಿಷ್ಯರು ಅವರನ್ನು ಹಿಂಬಾಲಿಸಿದರು. ಸಬ್ಬತ್‍ದಿನ ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಉಪದೇಶ ಮಾಡತೊಡಗಿದರು. ಕಿಕ್ಕಿರಿದು ನೆರೆದಿದ್ದ ಜನರು ಯೇಸುವಿನ ಬೋಧನೆಯನ್ನು ಕೇಳಿ ಬೆರಗಾದರು. “ಇದೆಲ್ಲಾ ಇವನಿಗೆ ಎಲ್ಲಿಂದ ಬಂದಿತು? ಇವನು ಪಡೆದಿರುವ ಜ್ಞಾನವಾದರೂ ಎಂಥಾದ್ದು? ಇವನಿಂದ ಮಹತ್ಕಾರ್ಯಗಳು ಆಗುವುದಾದರೂ ಹೇಗೆ? ಇವನು ಆ ಬಡಗಿಯಲ್ಲವೆ? ಮರಿಯಳ ಮಗನಲ್ಲವೆ? ಯಕೋಬ, ಯೋಸೆ, ಯೂದ ಮತ್ತು ಸಿಮೋನ ಇವರ ಸಹೋದರನಲ್ಲವೆ? ಇವನ ಸಹೋದರಿಯರು ಇಲ್ಲಿಯೇ ವಾಸಮಾಡುತ್ತಿಲ್ಲವೆ?” ಎಂದು ಹೇಳುತ್ತಾ ಯೇಸುವನ್ನು ತಾತ್ಸಾರಮಾಡಿದರು. ಆಗ ಯೇಸು, “ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು. ಆದರೆ ಸ್ವಗ್ರಾಮದಲ್ಲಿ, ಸ್ವಜನರಲ್ಲಿ, ಸ್ವಗೃಹದಲ್ಲಿ ಗೌರವ ದೊರಕದು,” ಎಂದರು. ಕೆಲವು ರೋಗಿಗಳ ಮೇಲೆ ಕೈಗಳನ್ನಿರಿಸಿ, ಅವರನ್ನು ಗುಣಪಡಿಸಿದ್ದನ್ನು ಬಿಟ್ಟರೆ ಇನ್ನಾವ ಮಹತ್ತಾದ ಕಾರ್ಯಗಳನ್ನೂ ಅವರು ಅಲ್ಲಿ ಮಾಡಲಾಗಲಿಲ್ಲ. ಆ ಜನರ ಅವಿಶ್ವಾಸವನ್ನು ಕಂಡು ಯೇಸುವಿಗೆ ಬಹಳ ಅಚ್ಚರಿಯಾಯಿತು
ಪ್ರಭುವಿನ ಶುಭಸಂದೇಶ

03.02.25- “ಸ್ವಾಮಿ ಯೇಸುವೇ, ಪರಮೋನ್ನತ ದೇವರ ಪುತ್ರರೇ, ನಿಮಗೇಕೆ ನನ್ನ ಗೊಡವೆ?"

ಮೊದಲನೆಯ ವಾಚನ: ಹಿಬ್ರಿಯರಿಗೆ 11: 32-40

ಪ್ರಿಯ ಸಹೋದರರೇ, ಇನ್ನೂ ಹೇಳಬೇಕೇ? ಗಿಡಿಯೋನ್, ಬಾರಾಕ್, ಸಂಸೋನ್, ಯೆಪ್ತಾಹ, ದಾವೀದ, ಸಮುವೇಲ ಇವರನ್ನೂ ಇತರ ಪ್ರವಾದಿಗಳನ್ನೂ ಕುರಿತು ಹೇಳಬೇಕಾದರೆ ನನಗೆ ಸಮಯ ಸಾಲದು. ಇವರು ವಿಶ್ವಾಸದಿಂದಲೇ ರಾಜ್ಯಗಳನ್ನು ಗೆದ್ದರು; ನ್ಯಾಯನೀತಿಯಿಂದ ಆಳಿದರು; ದೇವರಿಂದ ವಾಗ್ದಾನಗಳನ್ನು ಪಡೆದರು; ಸಿಂಹಗಳ ಬಾಯನ್ನು ಬಂಧಿಸಿದರು.ಅಗ್ನಿಜ್ವಾಲೆಯನ್ನು ಆರಿಸಿದರು; ಖಡ್ಗದ ಬಾಯಿಂದ ತಪ್ಪಿಸಿಕೊಂಡರು; ಬಲಹೀನರಾಗಿದ್ದರೂ ಬಲಿಷ್ಠರಾದರು; ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು; ಶತ್ರುಗಳ ಸೈನ್ಯವನ್ನು ಸದೆಬಡಿದರು. ವಿಶ್ವಾಸದಿಂದಲೇ ಮಹಿಳೆಯರು ಮೃತರಾಗಿದ್ದ ತಮ್ಮವರನ್ನು ಮರಳಿ ಜೀವಂತರಾಗಿ ಪಡೆದರು. ಕೆಲವರು ಇದಕ್ಕಿಂತ ಶ್ರೇಷ್ಠವಾದ ಪುನರುತ್ಥಾನವನ್ನು ಪಡೆಯುವ ಉದ್ದೇಶದಿಂದ ಬಿಡುಗಡೆಯನ್ನು ನಿರಾಕರಿಸಿ, ಹಿಂಸೆಬಾಧೆಗಳಿಗೆ ತುತ್ತಾಗಿ ಮರಣವನ್ನಪ್ಪಿದರು. ಇನ್ನೂ ಕೆಲವರು ಹಾಸ್ಯ ಪರಿಹಾಸ್ಯ, ಏಟುಪೆಟ್ಟು, ಸೆರೆಸಂಕಲೆಗಳನ್ನು ಅನುಭವಿಸಿದರು. ಮತ್ತೆ ಕೆಲವರನ್ನು ಜನರು ಕಲ್ಲೆಸೆದು ಕೊಂದರು; ಗರಗಸದಿಂದ ಸೀಳಿ ಸಾಯಿಸಿದರು; ಖಡ್ಗದಿಂದ ಕಡಿದುಹಾಕಿದರು. ಇನ್ನೂ ಕೆಲವರು ನಿರ್ಗತಿಕರಾಗಿ ಕುರಿಮೇಕೆಗಳ ಚರ್ಮಗಳನ್ನು ಹೊದ್ದುಕೊಂಡು ಅಲೆದಾಡಿದರು. ಬಡತನಕ್ಕೂ ಹಿಂಸೆಬಾಧೆಗಳಿಗೂ ಕಷ್ಟಸಂಕಟಗಳಿಗೂ ಈಡಾದರು; ಇಂಥವರಿಗೆ ಈ ಲೋಕ ತಕ್ಕ ಸ್ಥಳವಾಗಿರಲಿಲ್ಲ. ಈ ಕಾರಣದಿಂದ, ಅವರು ಕಾಡು ಬೆಟ್ಟಗಳಲ್ಲೂ ಗುಹೆಕಣಿವೆಗಳಲ್ಲೂ ತಲೆಮರೆಸಿಕೊಂಡಿದ್ದರು. ಇವರೆಲ್ಲರೂ ವಿಶ್ವಾಸವುಳ್ಳವರಾದುದರಿಂದಲೇ ಸಜ್ಜನರೆಂದು ಹೆಸರುವಾಸಿಯಾದರು. ಆದರೂ ದೇವರು ವಾಗ್ದಾನಮಾಡಿದ ಸತ್ಫಲಗಳನ್ನು ಸವಿಯಲಿಲ್ಲ. ಏಕೆಂದರೆ, ದೇವರು ನಮ್ಮೆಲ್ಲರಿಗೋಸ್ಕರ, ಶ್ರೇಷ್ಠವಾದ ಯೋಜನೆಯೊಂದನ್ನು ರೂಪಿಸಿ, ನಮ್ಮೊಡನೆಯೇ ಅಂದಿನ ವಿಶ್ವಾಸಿಗಳೂ ಸಿದ್ಧಿಗೆ ಬರಬೇಕೆಂದು ಸಂಕಲ್ಪಿಸಿದರು.
ಪ್ರಭುವಿನ ವಾಕ್ಯ

ಕೀರ್ತನೆ – 31: 19-23. V.24

ಪ್ರಭುವಿಗಾಗಿ ಕಾದಿಹ ಜನರೆ, ನಿಮಗಿರಲಿ ಅಭಯ I

ನಿನಗಂಜಿ ನಡೆವರಿಗೆ ನೀ ಕಟ್ಟಿಟ್ಟಿರುವ ಬುತ್ತಿ ಅದೆಷ್ಟು ಅಗಾಧ I
ನಿನ್ನ ನಂಬಿದವರಿಗೆ ಬಟ್ಟ ಬಯಲಾಗಿ ನೀಡುವ ನೆರವದೆಷ್ಟು ಅಪಾರ II

ಪಾರುಮಾಡುವುದವರನು ನಿನ್ನ ಸಾನ್ನಿಧ್ಯ ಸೆರಗು, ಜನರೊಳಸಂಚಿನಿಂದ I
ದೂರವಿಡುವುದವರನು ನಿನ್ನಾಸರೆಯು, ವ್ಯಾಜ್ಯಮಾಡುವ ಜಿಹ್ವೆಯಿಂದ II

ಮುತ್ತಿಗೆಗೆ ತುತ್ತಾದ ನಗರದೊಳಿಂದೆನ್ನ Iಅಚ್ಚರಿಯಿಂದ ರಕ್ಷಿಸಿದೊಡೆಯನಿಗೆ ನಮನ II
ದೇವರಿಂದ ದೂರನಾದೆಯೆಂಬ ದಿಗಿಲೇರಲು I

ಅಕ್ಕರೆಯಿಂದ ನೀ ಕಿವಿಗೊಟ್ಟೆ ನಾ ಮೊರೆಯಿಡಲು II
ಪ್ರಭುವಿನ ಭಕ್ತರೇ, ಪ್ರೀತಿಸಿ ನೀವಾತನನು ಅಧಿಕಾಧಿಕವಾಗಿ I

ಶರಣರನು ರಕ್ಷಿಸಿ, ಸೊಕ್ಕಿನವರನು ಶಿಕ್ಷಿಸುವನಾತ ಸರಿಯಾಗಿ II
ಪ್ರಭುವಿಗಾಗಿ ಕಾದಿಹ ಜನರೆ, ನಿಮಗಿರಲಿ ಅಭಯ I
ಧೈರ್ಯದಿಂದಿರಲಿ ನಿರುತ ನಿಮ್ಮೆಲ್ಲರ ಹೃದಯ II

ಶುಭಸಂದೇಶ – ಮಾರ್ಕ 5:1-20


ಆ ಕಾಲದಲ್ಲಿ ಯೇಸು ಮತ್ತು ಶಿಷ್ಯರು ಗಲಿಲೇಯ ಸರೋವರವನ್ನು ದಾಟಿ ಆಚೆಯ ಕಡೆಯಲ್ಲಿದ್ದ ಗೆರಸೇನರ ಪ್ರಾಂತ್ಯವನ್ನು ಸೇರಿದರು.ಯೇಸುಸ್ವಾಮಿ ದೋಣಿಯಿಂದ ಇಳಿಯುತ್ತಲೇ, ದೆವ್ವ ಹಿಡಿದಿದ್ದ ಒಬ್ಬನು ಸಮಾಧಿಯ ಗುಹೆಯೊಳಗಿಂದ ಅವರ ಎದುರಿಗೆ ಬಂದನು. ಸಮಾಧಿಯ ಗುಹೆಗಳೇ ಅವನಿಗೆ ವಾಸಸ್ಥಳವಾಗಿದ್ದವು. ಅವನನ್ನು ಬಂಧಿಸಲು ಯಾರಿಂದಲೂ ಆಗುತ್ತಿರಲಿಲ್ಲ; ಸಂಕೋಲೆಯಿಂದ ಬಂಧಿಸುವುದೂ ಅಸಾಧ್ಯವಾಗಿತ್ತು. ಸರಪಳಿ ಸಂಕೋಲೆಗಳಿಂದ ಅವನನ್ನು ಕಟ್ಟಿದಾಗ ಅವುಗಳನ್ನು ತುಂಡುತುಂಡು ಮಾಡುತ್ತಿದ್ದನು. ಅವನನ್ನು ಹತೋಟಿಗೆ ತರುವ ಸಾಮರ್ಥ್ಯ ಯಾರಿಗೂ ಇರಲಿಲ್ಲ. ಹಗಲಿರುಳೆನ್ನದೆ ಸಮಾಧಿಯ ಗುಹೆಗಳಲ್ಲಿಯೂ ಬೆಟ್ಟಗುಡ್ಡಗಳಲ್ಲಿಯೂ ಅವನು ಅಲೆದಾಡುತ್ತಾ ಅರಚಾಡುತ್ತಾ ಕಲ್ಲುಗಳಿಂದ ತನ್ನನ್ನು ತಾನೇ ಚಚ್ಚಿಕೊಳ್ಳುತ್ತಾ ಇದ್ದನು. ದೂರದಲ್ಲಿ ಬರುತ್ತಿದ್ದ ಯೇಸುಸ್ವಾಮಿಯನ್ನು ಕಂಡು, ಅವನು ಓಡಿಬಂದು ಅವರಿಗೆ ಸಾಷ್ಟಾಂಗವೆರಗಿ, “ಸ್ವಾಮಿ ಯೇಸುವೇ, ಪರಮೋನ್ನತ ದೇವರ ಪುತ್ರರೇ, ನಿಮಗೇಕೆ ನನ್ನ ಗೊಡವೆ? ದೇವರಾಣೆ, ನನ್ನನ್ನು ಪೀಡಿಸಬೇಡಿ, ನಿಮ್ಮನ್ನು ಬೇಡಿಕೊಳ್ಳುತ್ತೇನೆ,” ಎಂದು ಅಬ್ಬರಿಸಿದನು. ಕಾರಣ - ಅವನನ್ನು ಬಿಟ್ಟು ತೊಲಗಬೇಕೆಂದು ಯೇಸು ದೆವ್ವಕ್ಕೆ ಈ ಮೊದಲೇ ಕಟ್ಟಪ್ಪಣೆ ಮಾಡಿದ್ದರು. “ನಿನ್ನ ಹೆಸರೇನು?” ಎಂದು ಯೇಸು ಅವನನ್ನು ಕೇಳಲು, “ನನ್ನ ಹೆಸರು ‘ಗಣ’; ಏಕೆಂದರೆ ನಾವು ಬಹುಮಂದಿ ಇದ್ದೇವೆ,” ಎಂದನು. ಅಲ್ಲದೆ, “ನಮ್ಮನ್ನು ಆ ಪ್ರಾಂತ್ಯದಿಂದ ಹೊರಗಟ್ಟಬೇಡಿ,” ಎಂದು ಯೇಸುವನ್ನು ಬಹಳವಾಗಿ ಬೇಡಿಕೊಂಡನು. ಸಮೀಪದಲ್ಲೇ ಹಂದಿಗಳ ದೊಡ್ಡ ಹಿಂಡೊಂದು ಬೆಟ್ಟದ ತಪ್ಪಲಲ್ಲಿ ಮೇಯುತ್ತಿತ್ತು. ಆ ದೆವ್ವಗಳು, “ನಾವು ಆ ಹಂದಿಗಳೊಳಗೆ ಸೇರಿಕೊಳ್ಳುವಂತೆ ನಮ್ಮನ್ನು ಕಳುಹಿಸಿಕೊಡಿ,” ಎಂದು ಯೇಸುವನ್ನು ಬೇಡಿಕೊಂಡವು. ಅವರು ಹಾಗೆಯೇ ಅಪ್ಪಣೆಮಾಡಿದರು. ಕೂಡಲೇ ದೆವ್ವಗಳು ಆ ವ್ಯಕ್ತಿಯಿಂದ ಹೊರಬಂದು ಹಂದಿಗಳೊಳಗೆ ಹೊಕ್ಕವು. ಇದರ ಪರಿಣಾಮವಾಗಿ ಎರಡು ಸಾವಿರ ಹಂದಿಗಳಿದ್ದ ಆ ಹಿಂಡು, ಬೆಟ್ಟದ ಕಡಿದಾದ ಬದಿಯಿಂದ ಸರೋವರದತ್ತ ಧಾವಿಸಿ, ಅದರಲ್ಲಿ ಬಿದ್ದು ಮುಳುಗಿಹೋಯಿತು. ಹಂದಿಗಳನ್ನು ಮೇಯಿಸುತ್ತಿದ್ದವರು ಓಡಿಹೋಗಿ ಊರುಕೇರಿಗಳಲ್ಲಿ ಈ ವಿಷಯವನ್ನು ತಿಳಿಸಿದರು. ನಡೆದ ಸಂಗತಿ ಏನೆಂಬುದನ್ನು ನೋಡಲು ಜನರು ಹೊರಟು, ಯೇಸುಸ್ವಾಮಿಯ ಬಳಿಗೆ ಬಂದರು. ದೆವ್ವಗಣದಿಂದ ಪೀಡಿತನಾಗಿದ್ದವನು ಈಗ ಬಟ್ಟೆಯನ್ನು ತೊಟ್ಟುಕೊಂಡು, ಸ್ವಸ್ಥಬುದ್ಧಿಯುಳ್ಳವನಾಗಿ ಕುಳಿತಿರುವುದನ್ನು ಕಂಡು ಅವರೆಲ್ಲರೂ ಗಾಬರಿಗೊಂಡರು. ನಡೆದುದನ್ನು ಕಣ್ಣಾರೆ ನೋಡಿದವರು ದೆವ್ವ ಹಿಡಿದಿದ್ದವನು ಸ್ವಸ್ಥನಾದ ವಿಧವನ್ನು ಮತ್ತು ಹಂದಿಗಳಿಗಾದ ಗತಿಯನ್ನು ಅವನಿಗೆ ವಿವರಿಸಿದರು. ಇದನ್ನು ಕೇಳಿದ ಜನರು ಯೇಸುವಿಗೆ, ತಮ್ಮ ಪ್ರಾಂತ್ಯವನ್ನು ಬಿಟ್ಟುಹೋಗಬೇಕೆಂದು ಮನವಿಮಾಡಿಕೊಂಡರು. ಯೇಸು ದೋಣಿಯನ್ನು ಹತ್ತುತ್ತಿದ್ದಾಗ ದೆವ್ವ ಹಿಡಿದಿದ್ದವನು, “ನನ್ನನ್ನು ನಿಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿ,” ಎಂದು ಬಿನ್ನವಿಸಿಕೊಂಡನು. ಯೇಸು ಅದಕ್ಕೊಪ್ಪದೆ, “ನೀನು ನಿನ್ನ ಮನೆಗೂ ನಿನ್ನ ಸ್ವಜನರ ಬಳಿಗೂ ಹೋಗು. ಸರ್ವೇಶ್ವರ ನಿನಗೆ ಎಂಥಾ ಉಪಕಾರಮಾಡಿದ್ದಾರೆ, ಎಷ್ಟು ಕರುಣೆ ತೋರಿಸಿದ್ದಾರೆ ಎಂದು ಅವರಿಗೆ ವಿವರಿಸು,” ಎಂದರು. ಅಂತೆಯೇ ಅವನು ಹೊರಟುಹೋಗಿ, ಯೇಸು ತನಗೆ ಮಾಡಿದ ಮಹದುಪಕಾರವನ್ನು ದೆಕಪೊಲಿ ಎಂಬ ನಾಡಿನಲ್ಲಿ ಪ್ರಕಟಿಸಿದನು. ಕೇಳಿದವರೆಲ್ಲರೂ ಆಶ್ಚರ್ಯಚಕಿತರಾದರು.

ಪ್ರಭುವಿನ ಶುಭಸಂದೇಶ

02.02.25 - "ನಿನ್ನ ಮಾತು ಸರ್ವೇಶ್ವರಾ ನೆರವೇರಿತಿಂದು; ಇನ್ನು ತೆರಳಬಿಡು ಶಾಂತಿಯಿಂದ ನಿನ್ನ ದಾಸನಾದ ಎನ್ನನು"





ಮೊದಲನೆಯ ವಾಚನ: ಮಲಾಕಿ 3:1-4


ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ: "ನಾನು ನನ್ನ ದೂತನನ್ನು ಮುಂದಾಗಿ ಕಳಿಹಿಸುತ್ತೇನೆ. ನಾನು ಬರಲು ಮಾರ್ಗವನ್ನು ಆತನು ಸಿದ್ದಗೊಳಿಸುವನು. ನೀವು ಎದುರುನೋಡುತ್ತಿರುವ ಸರ್ವೇಶ್ವರ ಇದ್ದಕ್ಕಿದ್ದಂತೆ ತಮ್ಮ ಆಲಯಕ್ಕೆ ಬರುವರು. ಇಗೋ, ನಿಮಗೆ ಪ್ರಿಯನಾದ ದೂತನು ಬರುವನು ನನ್ನ ಒಡಂಬಡಿಕೆಯನ್ನು ನಿಮಗೆ ಪ್ರಕಟಿಸುವನು. " ಆದರೆ ಆತನು ಬರುವಾಗ ಆತನನ್ನು ಎದುರುಗೊಳ್ಳಬಲ್ಲವನು ಯಾರು? ಆತನ ದರ್ಶನವನ್ನು ಪಡೆದು ಬದುಕಬಲ್ಲವನು ಯಾರು? ಆತನು ಅಕ್ಕಸಾಲಿಗನ ಕುಲುಮೆಯ ಬೆಂಕಿಗೂ ಅಗಸನ ಚೌಳಿಗೂ ಸಮಾನನು. ಬೆಳ್ಳಿಯನ್ನು ಶುದ್ದೀಕರಿಸುವ ಅಕ್ಕಸಾಲಿಗನಂತೆ ಲೇವಿಯ ವಂಶದವರನ್ನು ಶುದ್ದಗೊಳಿಸುವನು; ಬೆಳ್ಳಿ ಬಂಗಾರದಂತೆ ಶುದ್ದೀಕರಿಸುವನು. ಆಗ ಅವರು ಯೋಗ್ಯವಾದ ಕಾಣಿಕೆಗಳನ್ನು ಸರ್ವೇಶ್ವರಸ್ವಾಮಿಗೆ ತಂದೊಪ್ಪಿಸುವರು. ಪೂರ್ವದಿನಗಳಲ್ಲಿ, ಪುರಾತನ ಕಾಲದಲ್ಲಿ ಇದ್ದಂತೆ ಜೂದಾ ಮತ್ತು ಜೆರುಸಲೇಮಿನ ಜನರ ಕಾಣಿಕೆಗಳು ಆ ಸ್ವಾಮಿಗೆ ಮೆಚ್ಚುಗೆಯಾಗಿರುವುವು.

ಕೀರ್ತನೆ 24:7,8,9,10
ಶ್ಲೋಕ: ಯಾರಿವನು ಮಹಿಮಾವಂತ ರಾಜಾಧಿರಾಜನು? ಇವನೇ ಪ್ರಭು.

ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು|
ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು||

ಯಾರಿವನು ಮಹಿಮಾವಂತ ರಾಜಾಧಿರಾಜನು?|
ಇವನೇ ಪ್ರಭು ಯುದ್ಧವೀರನು, ಶಕ್ತಿಸಮರ್ಥನು||

ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು|
ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು||

ಯಾರಿವನು ಮಹಿಮಾವಂತ ರಾಜಾಧಿರಾಜನು?|
ಇವನೇ ಪ್ರಭು ಸೇನಾಧೀಶ್ವರನು, ಮಹಿಮಾರಾಜನು||

ಎರಡನೆಯ ವಾಚನ: 2 ಹಿಬ್ರಿಯರಿಗೆ  2:14-18

Uploading: 95211 of 95211 bytes uploaded.


ಸಹೋದರರೇ, ಮಕ್ಕಳು ರಕ್ತಮಾಂಸಧಾರಿಗಳಾಗಿರುವುದರಿಂದ ಯೇಸು ಸೈತಾನನನ್ನು ತಮ್ಮ ಕಾರಣದಿಂದಲೇ ಸೋಲಿಸಲು ಮತ್ತು ಮರಣಭಯದ ನಿಮಿತ್ತ ಜೀವನದುದ್ದಕ್ಕೂ ದಾಸ್ಯದಲ್ಲಿದ್ದವರನ್ನು ಬಿಡುಗಡೆಮಾಡಲು ಅವರು ಮನುಷ್ಯರಾದರು. ಅವರು ಉದ್ದಾರ ಮಾಡ ಬಂದುದು ಖಂಡಿತವಾಗಿ ದೇವದೂತರನ್ನಲ್ಲ, ಅಬ್ರಹಾಮನ ಸಂತತಿಯನ್ನು, ಆದಕಾರಣ, ಎಲ್ಲದರಲ್ಲೂ ತಮ್ಮ ಸಹೋದರರಿಗೆ ಸಮಾನರಾಗಬೇಕಾಗಿತ್ತು. ಜನರ ಪಾಪ ನಿವಾರಣೆಗಾಗಿ ದೇವರಕಾರ್ಯಗಳನ್ನು ನಿರ್ವಹಿಸುವ ದಯಾಮಯನೂ ನಂಬಿಗಸ್ಥನೂ ಆದ ಪ್ರಧಾನ ಯಾಜಕನಾಗಿರಬೇಕಾಗಿತ್ತು. ಸ್ವತಃ ತಾವೇ ಶೋಧನೆಗೊಳಗಾಗಿ ಯಾತನೆಯನ್ನು ಅನುಭವಿಸಿದ್ದರಿಂದ ಶೋಧನೆಗೊಳಗಾಗುವವರಿಗೆ ನೆರವಾಗಲು ಯೇಸು ಸಮರ್ಥರಾದರು.

ಘೋಷಣೆ ಲೋಕ 2:32
ಅಲ್ಲೆಲೂಯ, ಅಲ್ಲೆಲೂಯ!

ಈತ ಅನ್ಯ ಜನರನ್ನು ಬೆಳಗಿಸುವ ಜ್ಯೋತಿ | ನಿನ್ನ ಜನ ಇಸ್ರಯೇಲರಿಗೆ ತರುವನು ಕೀರ್ತಿ ||

ಶುಭಸಂದೇಶ: ಲೂಕ 2:22-40



ಮೋಶೆಯ ನಿಯಮದ ಪ್ರಕಾರ ಸೂಚಕ ದಿನಗಳು ಮುಗಿದು ಶುದ್ದೀಕರಣ ದಿನ ಬಂದಾಗ, ತಂದೆತಾಯಿಗಳು ಆ ಮಗುವನ್ನು ಎತ್ತಿಕೊಂಡು ಜೆರುಸಲೇಮಿಗೆ ಹೋದರು. ಏಕೆಂದರೆ, ಮೊದಲು ಜನಿಸಿದ ಪ್ರತಿಯೊಂದು ಗಂಡು ಮಗುವನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕಾಗಿತ್ತು. ಅಲ್ಲದೆ, ಧರ್ಮಶಾಸ್ತ್ರದಲ್ಲೇ ಉಲ್ಲೇಖಿಸಿರುವಂತೆ ಒಂದು ಜೋಡಿ ಬೆಳವಹಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ, ಬಲಿಯನ್ನಾಗಿ ಅರ್ಪಿಸಬೇಕಾಗಿತ್ತು. ಆಗ ಜೆರುಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬನು ವಾಸವಾಗಿದ್ದನು. ಸತ್ಪುರುಷನೂ ದೈವಭಕ್ತನೂ ಆದ ಇವನು, ಇಸ್ರಯೇಲ್ ಜನತೆಯ ಉದ್ಧಾರಕ ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು. ಪವಿತ್ರಾತ್ಮ ಇವನಲ್ಲಿ ನೆಲೆಸಿದ್ದರು. ಸರ್ವೇಶ್ವರ ಕಳುಹಿಸಲಿರುವ ಅಭಿಷಿಕ್ತನಾದ ಲೋಕೋದ್ಧಾರಕನ ದರ್ಶನವಾಗುವವರಿಗೆ ತನಗೆ ಸಾವಿಲ್ಲವೆಂದು ಪವಿತ್ರಾತ್ಮರಿಂದ ಆಶ್ವಾಸನೆ ಪಡೆದಿದ್ದನು. ಆ ಪವಿತ್ರಾತ್ಮರಿಂದ ಪ್ರೇರಿತನಾಗಿ ಅವನು ಮಹಾದೇವಾಲಯಕ್ಕೆ ಬಂದನು. ಧರ್ಮಶಾಸ್ತ್ರದ ವಿಧಿಯನ್ನು ಪೂರೈಸಲು ಬಾಲಯೇಸುವನ್ನು ತಂದೆತಾಯಿಗಳು ದೇವಾಲಯಕ್ಕೆ ತಂದಾಗ, ಸಿಮೆಯೋನನು ಆ ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರನ್ನು ಹೀಗೆಂದು ಸ್ತುತಿಸಿದನು: "ನಿನ್ನ ಮಾತು ಸರ್ವೇಶ್ವರಾ ನೆರವೇರಿತಿಂದು; ಇನ್ನು ತೆರಳಬಿಡು ಶಾಂತಿಯಿಂದ ನಿನ್ನ ದಾಸನಾದ ಎನ್ನನು, ನೀನಿತ್ತ ಉದ್ಧಾರಕನನು ನಾ ಕಂಡೆ ಕಣ್ಣಾರೆ, ಜನರೆಲ್ಲರ ಸಮ್ಮುಖದಲ್ಲಿ ನೀನೀತನನು ಪ್ರತ್ಯಕ್ಷ ಮಾಡಿರುವೆ. ಈತ ಅನ್ಯ ಜನರನ್ನು ಬೆಳಗಿಸುವ ಜ್ಯೋತಿ, ನಿನ್ನ ಜನ ಇಸ್ರಯೇಲರಿಗೆ ತರುವನು ಕೀರ್ತಿ, " ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳನ್ನು ಕೇಳಿ ತಂದೆತಾಯಿಗಳು ಆಶ್ಚರ್ಯಪಟ್ಟರು. ಅವರನ್ನು ಸಿಮೆಯೋನನು ಆಶೀರ್ವದಿಸಿದನು. ತಾಯಿ ಮರಿಯಳಿಗೆ, "ಇಗೋ, ಈ ಮಗು ಇಸ್ರಯೇಲರಲ್ಲಿ ಅನೇಕರ ಉನ್ನತಿಗೂ ಅನೇಕರ ಅವನತಿಗೂ ಕಾರಣನಾಗುವನು. ಅನೇಕರು ಪ್ರತಿಭಟಿಸುವ ದೈವಸಂಕೇತವಾಗುವನು. ಇದರಿಂದ ಅನೇಕರ ಹೃದಯದಾಳದ ಭಾವನೆಗಳು ಬಯಲಾಗುವುವು. ನಿನ್ನ ವಿಷಯದಲ್ಲಿ ಹೇಳುವುದಾದರೆ, ದುಃಖವೆಂಬ ಅಲಗೊಂದು ನಿನ್ನ ಅಂತರಂಗವನ್ನು ಸೀಳುವುದು, " ಎಂದು ಹೇಳಿದನು. ಇದಲ್ಲದೆ ಅಲ್ಲಿ ಅಶೇರನ ವಂಶಕ್ಕೆ ಸೇರಿದ ಘನುವೇಲನ ಮಗಳಾದ ಅನ್ನಳೆಂಬ ಪವಾದಿನಿಯಿದ್ದಳು. ಅವಳು ಮುದಿಪ್ರಾಯದವಳು. ಮದೆವೆಯಾಗಿ ಏಳು ವರ್ಷ ಮಾತ್ರ ಗಂಡನೊಡನೆ ಬಾಳಿ ವಿಧವೆಯಾದವಳು. ಅವಳಿಗೆ ಸುಮಾರು ಎಂಭತ್ತನಾಲ್ಕು ವರ್ಷ ವಯಸ್ಸು. ಮಹಾದೇವಾಲಯವನ್ನು ಬಿಟ್ಟು ಅವಳು ಎಲ್ಲಿಗೂ ಹೋಗುತ್ತಿರಲಿಲ್ಲ; ಹಗಲಿರುಳು ಉಪವಾಸ ಪ್ರಾರ್ಥನೆಗಳಿಂದ ದೇವಾರಾಧನೆಯಲ್ಲಿ ನಿರತಳಾಗಿದ್ದಳು. ಅವಳು ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದು, ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸಿ, ಜೆರುಸಲೇಮಿನ ವಿಮೋಚನೆಯನ್ನು ಎದುರುನೋಡುತ್ತಿದ್ದ ಅಲ್ಲಿಯವರಿಗೆಲ್ಲಾ ಆ ಶಿಶುವಿನ ವಿಷಯವಾಗಿ ಹೇಳತೊಡಗಿದಳು. ಸರ್ವೇಶ್ವರನ ಧರ್ಮಶಾಸ್ತ್ರಕ್ಕನುಸಾರ ಎಲ್ಲ ವಿಧಿಗಳನ್ನು ನೆರವೇರಿಸಿದ ಮೇಲೆ ಜೋಸೆಫ್ ಮತ್ತು ಮರಿಯಳು ಗಲಿಲೇಯ ಪ್ರಾಂತ್ಯದಲ್ಲಿದ್ದ ತಮ್ಮ ಸ್ವಗ್ರಾಮವಾದ ನಜರೇತಿಗೆ ಹಿಂದಿರುಗಿದರು. ಬಾಲಕ ಯೇಸು ಬೆಳೆದಂತೆ ಶಕ್ತರೂ ಜ್ಞಾನಸಂಪೂರ್ಣರೂ ಆದರು. ಇದಲ್ಲದೆ ದೈವಾನುಗ್ರಹ ಅವರ ಮೇಲಿತ್ತು.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...