ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

19.08.2024 - ನಿನ್ನ ಆಸ್ತಿಯನ್ನೆಲ್ಲಾ ಮಾರಿ ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ.

 ಮೊದಲನೆಯ ವಾಚನ:  ಪ್ರವಾದಿ  ಯೆಜೆಕಿಯೇಲನ ಗ್ರಂಥದಿಂದ ಇಂದಿನ ವಾಚನ 24:15-23

 

ಸರ್ವೇಶ್ವರ  ಇನ್ನೊಂದು  ವಾಣಿಯನ್ನು  ನನಗೆ  ದಯಪಾಲಿಸಿದರು;  "ನರಪುತ್ರನೇ,  ಇಗೋ,  ಓಂದೇ  ಏಟಿನಿಂದ  ನಾನು  ನಿನಗೆ  ನೇತ್ರಾನಂದವಾಗಿರುವವಳನ್ನು  ನಿನ್ನಿಂದ  ತೆಗೆದುಬಿಡುವನು.  ಆದರೂ  ನೀನು  ಗೋಳಾಡಬೇಡ,  ಅಳಬೇಡ,  ಕಣ್ಣೀರು  ಸುರಿಸಬೇಡ.  ಸದ್ದಿಲ್ಲದೆ  ಮೊರೆಯಿಡು,  ವಿಯೋಗದು:  ತೋರಿಸಬೇಡ.  ರುಮಾಲನ್ನು  ಸುತ್ತಿಕೊಂಡಿರು,  ಕೆರಗಳನ್ನು  ಮೆಟ್ಟಿಕೊಂಡಿರು,  ಬಾಯನ್ನು  ಬಟ್ಟೆಯಿಂದ  ಮುಚ್ಚಿಕೊಳ್ಳಬೇಡ,  ಗಾರಿಗೆಯನ್ನು  ತಿನ್ನಬೇಡ.  "ಹೀಗೆ  ಆಜ್ಞೆಯಾಗಲು,  ನಾನು  ಪ್ರಾತಃಕಾಲದಲ್ಲಿ  ಜನರಿಗೆ  ಪ್ರವಾದಿಸಿದೆನು;  ಸಾಯಂಕಾಲಕ್ಕೆ  ನನ್ನ  ಪತ್ನಿ  ತೀರಿಹೋದಳು;  ಮಾರನೆಯ  ಬೆಳಿಗ್ಗೆ  ನನಗೆ  ಅಪ್ಪಣೆಯಾದಂತೆ  ನಡೆದುಕೊಂಡೆನು.  ಜನರು,  "ನೀನು  ಹೀಗೆ  ಮಾಡುವುದರಿಂದ  ನಾವು  ತಿಳಿಯತಕ್ಕದ್ದೇನು?  ತಿಳಿಸುವುದಿಲ್ಲವೋ? "ಎಂದು  ನನ್ನನ್ನು  ಕೇಳಿದರು.  ಅದಕ್ಕೆ  ನಾನು  ಹೀಗೆ  ಹೇಳಿದೆ:   "ಸರ್ವೇಶ್ವರ    ವಾಣಿಯನ್ನು  ನನಗೆ  ದಯಪಾಲಿಸಿದ್ದಾರೆ - ಇಸ್ರಯೇಲ್   ವಂಶದವರಿಗೆ  ಹೀಗೆ  ಸಾರು - ಹಾ,  ನಿಮಗೆ  ಮುಖ್ಯಬಲ,  ನೇತ್ರಾನಂದ  ಹಾಗು  ಪ್ರಾಣಪ್ರಿಯ  ಆದ  ನನ್ನ  ಪವಿತ್ರಾಲಯವನ್ನು  ನಾನು  ಅಪವಿತ್ರಮಾಡಿಸುವೆನು;  ನೀವು  ಬಿಟ್ಟುಬಂದಿರುವ  ನಿಮ್ಮ  ಗಂಡು  ಹೆಣ್ಣು  ಮಕ್ಕಳು  ಖಡ್ಗಕ್ಕೆ  ತುತ್ತಾಗುವರು,  ಎಂಬುದಾಗಿ  ಸರ್ವೇಶ್ವರನಾದ  ದೇವರು  ನುಡಿದಿದ್ದಾರೆ.  ನಾನು  ಮಾಡಿದಂತೆ  ಆಗ  ನೀವೂ  ಮಾಡುವಿರಿ,  ಅಂದರೆ  ಬಟ್ಟೆಯಿಂದ   ಬಾಯನ್ನು  ಮುಚ್ಚಿಕೊಳ್ಳದೆ,  ಗಾರಿಗೆಯನ್ನು  ತಿನ್ನದೆ,  ರುಮಾಲನ್ನು  ಸುತ್ತಿಕೊಂಡು,  ಕೆರಗಳನ್ನು  ಮೆಟ್ಟಿಕೊಂಡು  ಇರುವಿರಿ;  ನೀವು  ಗೋಳಾಡುವುದಿಲ್ಲ,  ಅಳುವುದಿಲ್ಲ,  ಆದರೆ  ನಿಮ್ಮ  ಅಧರ್ಮದಿಂದ  ಕ್ಷೀಣವಾಗಿ  ನರಳುವಿರಿ.  ಒಬ್ಬರೆದುರಿಗೆ  ನರಳುವಿರಿ.    ವಿಷಯದಲ್ಲಿ  ಯೆಜೆಕಿಯೇಲನು  ನಿಮಗೆ  ಮುಂಗುರುತಾಗಿರುವನು.  ಅವನು  ಮಾಡಿದಂತೆಯೇ  ಎಲ್ಲವನ್ನು  ಮಾಡುವಿರಿ;  ಇದು  ಸಭವಿಸುವಾಗ  ನಾನೇ  ಸರ್ವೇಶ್ವರನಾದ  ದೇವರು  ಎಂದು  ನಿಮಗೆ  ಗೊತ್ತಾಗುವುದು." 

- ಪ್ರಭುವಿನ ವಾಕ್ಯ

ಕೀರ್ತನೆಧರ್ಮೋ 32:18-19,20,21 V.18

ಶ್ಲೋಕಸ್ಮರಿಸಲಿಲ್ಲ  ನೀವುಹೆತ್ತ  ತಾಯಂತಿದ್ದಾ  ದೇವರನು.

1.  ಎಲೈ ಇಸ್ರಯೇಲರೇ, ಮರೆತಿರಾ ಜನ್ಮವಿತ್ತ ಪೊರೆಬಂಡೆಯನು|

ಸ್ಮರಿಸಲಿಲ್ಲ ನೀವು, ಹೆತ್ತ ತಾಯಂತಿದ್ದಾ ದೇವರನು||

ಇದಕಂಡ ಸರ್ವೇಶ್ವರ ಬೇಸರಗೊಂಡ|

ತನ್ನಾ ಕುವರಕುವರಿಯರ ನಡತೆಯ ನೋಡಿ ನೊಂದುಕೊಂಡ||

ಶ್ಲೋಕ

 

2.  ಎಂದೇ ಇಂತೆಂದುಕೊಂಡೆನು: ಇವರಿಗೆ ವಿಮುಖನಾಗುವೆನು|

ಇವರಿಗೊದಗಲಿರುವ ಗತಿಯನು ನೋಡುವೆನು||

ಸತ್ಯವರಿತೂ ಅನುಸರಿಸದೆ ಹೋದರು|

ವಿದ್ರೋಹ ಮಕ್ಕಳಂಥವರು||

ಶ್ಲೋಕ

 

3.  ರೇಗಿಸಿದರೆನ್ನನು ದೇವರಿಲ್ಲದವುಗಳ ಮೂಲಕ|

ಸಿಟ್ಟೇರಿಸಿದರು ಅಚೇತ ವಿಗ್ರಗಳ ಮೂಲಕ||

ನಾನವರಲಿ ಅಸೂಯೆ ಹುಟ್ಟಿಸುವೆನು ಜನಾಂಗವಲ್ಲದವರ ಮುಖಾಂತರ|

ನಾನವರನು ಸಿಟ್ಟಿಗೆಬ್ಬಿಸುವೆನು ಸಭ್ಯರಲ್ಲದಾ ಜನರ ಮುಖಾಂತರ||

ಘೋಷಣೆ : 

ಅಲ್ಲೆಲೂಯ, ಅಲ್ಲೆಲೂಯ!
ಸರ್ವೇಶ್ವರಾ,  ಅಪ್ಪಣೆಯಾಗಲಿ  ತಮ್ಮ  ದಾಸ  ಕಾದಿದ್ದಾನೆ |
ನಿತ್ಯ  ಜೀವವನ್ನು  ಈಯುವ  ನುಡಿ  ಇರುವುದು  ತಮ್ಮಲ್ಲೇ ||
ಅಲ್ಲೆಲೂಯ!

 ಶುಭಸಂದೇಶ :  ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 19:16-22


  ಕಾಲದಲ್ಲಿ  ಒಮ್ಮೆ  ಯೇಸುವಿನ  ಬಳಿಗೆ  ಒಬ್ಬ  ಯುವಕನು  ಬಂದು,  "ಗುರುದೇವಾಅಮರ  ಜೀವವನ್ನು  ಪಡೆಯಲು  ನಾನು  ಒಳ್ಳೆಯದೇನನ್ನು  ಮಾಡಬೇಕು? " ಎಂದು  ಕೇಳಿದನುಅದಕ್ಕೆ  ಅವರು,  "ಒಳ್ಳೆಯದನ್ನು  ಕುರಿತು  ನೀನು  ನನ್ನನ್ನು  ವಿಚಾರಿಸುವುದು  ಏಕೆಒಳ್ಳೆಯವರು  ಒಬ್ಬರೇನೀನು    ಜೀವಕ್ಕೆ  ಪ್ರವೇಶಿಸಿ ಬೇಕಾದರೆ  ದೈವಾಜ್ಞೆಗಳನ್ನು  ಅನುಸರಿಸು, "ಎಂದರು.  "ಅವು  ಯಾವುವು?  "ಎಂದು  ಮರುಪ್ರಶ್ನೆ  ಹಾಕಿದ  ಅವನಿಗೆ  ಯೇಸು,  "ನರಹತ್ಯೆಮಾಡಬಾರದುವ್ಯಭಿಚಾರಮಾಡಬಾರದುಕದಿಯಬಾರದುಸುಳ್ಳುಸಾಕ್ಷಿ  ಹೇಳಬಾರದುನಿನ್ನ  ತಂದೆ  ತಾಯಿಗಳನ್ನು  ಗೌರವಿಸಬೇಕು  ಮತ್ತು  ನಿನ್ನನ್ನು  ನೀನೇ  ಪ್ರೀತಿಸಿಕೊಳ್ಳುವಂತೆ  ನಿನ್ನ  ನೆರೆಯವನನ್ನೂ  ಪ್ರೀತಿಸಬೇಕು, "ಎಂದರುಅದಕ್ಕೆ    ಯುವಕ,  "ಇವೆಲ್ಲವನ್ನೂ  ಅನುಸರಿಕೊಂಡು  ಬಂದಿದ್ದೇನೆನನ್ನಲ್ಲಿ  ಇನ್ನೇನು  ಕೊರತೆ  ಇದೆ? " ಎಂದು  ಮತ್ತೆ  ಕೇಳಿದಆಗ  ಯೇಸು,  "ನೀನು  ಸಂಪೂರ್ಣನಾಗಬೇಕು  ಎಂದಿದ್ದರೆ  ಹೋಗುನಿನ್ನ  ಆಸ್ತಿಯನ್ನೆಲ್ಲಾ  ಮಾರಿ  ಬಡಬಗ್ಗರಿಗೆ  ದಾನಮಾಡುಸ್ವರ್ಗದಲ್ಲಿ  ನಿನಗೆ  ಸಂಪತ್ತು  ಇರುತ್ತದೆನೀನು  ಬಂದು  ನನ್ನನ್ನು  ಹಿಂಬಾಲಿಸು, "ಎಂದರುಇದನ್ನು  ಕೇಳಿದ್ದೇ    ಯುವಕ  ಖಿನ್ನಮನಸ್ಕನಾಗಿ  ಅಲ್ಲಿಂದ  ಹೊರಟೇ  ಹೋದಏಕೆಂದರೆ  ಅವನಿಗೆ  ಅಪಾರ  ಆಸ್ತಿಪಾಸ್ತಿಯಿತ್ತು.

ಪ್ರಭುಕ್ರಿಸ್ತರ ಶುಭಸಂದೇಶ

18.08.2024 - ಸವಿದು ನೋಡು ಪ್ರಭುವಿನ ಮಾಧುರ್ಯವನು

ಮೊದಲನೆಯ ವಾಚನ : ಜ್ಞಾನೋಕ್ತಿಗಳಿಂದ ಇಂದಿನ ಮೊದಲನೆಯ ವಾಚನ 9:1-6

ಜ್ಞಾನವೆಂಬಾಕೆ ಮನೆಯನ್ನು ಕಟ್ಟಿಕೊಂಡಿದ್ದಾಳೆ; ಅದಕ್ಕೆ ಏಳು ಸ್ತಂಭಗಳನ್ನು ಕೆತ್ತಿಸಿದ್ದಾಳೆ. ಪಶುಗಳನ್ನು ಕೊಯ್ಯಿಸಿ ದ್ರಾಕ್ಷಾರಸವನ್ನು ಬೆರೆಸಿ ಔತಣವನ್ನು ಆಕೆ ಸಿದ್ಧಪಡಿಸುತ್ತಿದ್ದಾಳೆ. ನಗರದ ರಾಜಬೀದಿಗಳಿಗೆ ತನ್ನ ದಾಸಿಯನ್ನು ಕಳುಹಿಸುತ್ತಾಳೆ. “ಮುಗ್ಧ ಮನಸ್ಕರು ಯಾರಾದರೂ ಇದ್ದರೆ ಇತ್ತ ಬರಲಿ’’ ಎಂದು ಪ್ರಕಟಿಸುತ್ತಾಳೆ. “ಬನ್ನಿ, ನಾ ಬಡಿಸುವ ಆಹಾರವನ್ನು ಉಣ ಬನ್ನಿ; ನಾ ಬೆರೆಸಿದ ದ್ರಾಕ್ಷಾರಸವನ್ನು ಕುಡಿಯ ಬನ್ನಿ, ಮೂಢರೇ, ನಿಮ್ಮ ಮೂಢತ್ವವನ್ನು ಬಿಟ್ಟು ಬಾಳಿರಿ, ವಿವೇಕ ಮಾರ್ಗದಲ್ಲಿ ನೆಟ್ಟಗೆ ನಡೆಯಿರಿ, 'ಎಂದು ಪ್ರಬೋಧಿಸುತ್ತಾಳೆ.

ಪ್ರಭುವಿನ ವಾಕ್ಯ

ಕೀರ್ತನೆ 34: 1-2, 9-14. ಶ್ಲೋಕ. 8

ಶ್ಲೋಕ:  ಸವಿದು ನೋಡು ಪ್ರಭುವಿನ ಮಾಧುರ್ಯವನು.

1.  ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು
ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು
ಪ್ರಭುವಿನಲ್ಲಿದೆ ನನ್ನ ಮನದಭಿಮಾನ
ದೀನರಿದನು ಕೇಳಿ, ಪಡೆಯಲಿ ಸುಮ್ಮಾನ. ಶ್ಲೋಕ
 
2.  ದೇವಜನರೆ, ನಿಮಗಿರಲಿ ಪ್ರಭುವಿನ ಭಯಭಕುತಿ
ಅಂಥವರಿಗಿರದು ಯಾವ ಕುಂದುಕೊರತೆಯ  ಭೀತಿ
ಯುವ ಕೇಸರಿಗೆ ಇರಬಹುದು ಹಸಿವು, ದಾಹ
ಪ್ರಭುವನು ಅರಸುವವರಿಗಿರದು ಒಳಿತಿನ ಅಭಾವ. ಶ್ಲೋಕ
 
3.  ಬನ್ನಿ ಮಿತ್ರರೇ, ಆಲಿಸಿರೀ ಮಾತನು
ಕಲಿಸುವೆನು ನಾ ನಿಮಗೆ ದೇವ ಭಯವನು
ಎಲೈಮಾನವ, ಬಲುದಿನ ಬಾಳಲು ಬಯಸುವೆಯಾ?
ಆಯುರಾರೋಗ್ಯ ಭಾಗ್ಯವನು ಆಶಿಸುವೆಯಾ? ಶ್ಲೋಕ
 
4.  ಕಾದಿಡು ನಾಲಿಗೆಯನು ಕೇಡನು ಆಡದಂತೆ
ಬಿಗಿಯಿಡು ತುಟಿಯನ್ನು ಕುಟಿಲವನು ನುಡಿಯದಂತೆ
ಬಿಡು ಕೆಟ್ಟದನು, ಮಾಡು ಒಳಿತನು
ಹುಡುಕು ಶಾಂತಿಯನು, ಬೆನ್ನಟ್ಟು ಅದನು. ಶ್ಲೋಕ

ಎರಡನೆಯ ವಾಚನ : ಪೌಲನು ಎಫೆಸಿಯರಿಗೆ ಬರೆದ ಪತ್ರದಿಂದ ಇಂದಿನ ಎರಡನೆಯ ವಾಚನ 5:15-21

ಸಹೋದರರೇ, ನಿಮ್ಮ ನಡತೆಯ ವಿಷಯದಲ್ಲಿ ನೀವು ಅತ್ಯಂತ ಜಾಗರೂಕರಾಗಿರಿ; ಮೂಢರಂತಿರದೆ ಜಾಣರಾಗಿ ಜೀವಿಸಿರಿ. ಈ ದಿನಗಳು ಕೆಟ್ಟ ದಿನಗಳಾಗಿರುವುದರಿಂದ ನಿಮಗಿರುವ ಸದವಕಾಶಗಳನ್ನು ಸದ್ವಿನಿಯೋಗಿಸಿಕೊಳ್ಳಿರಿ. ಬುದ್ಧಿಹೀನರಾಗಿರದೆ ಪ್ರಭುವಿನ ಚಿತ್ತವೇನೆಂದು ಗ್ರಹಿಸಿಕೊಳ್ಳಿರಿ. ಮದ್ಯಪಾನ ಮಾಡಿ ಮತ್ತರಾಗಬೇಡಿ. ಅದು ಪಾಪಕೃತ್ಯಗಳಿಗೆ ಎಡೆಮಾಡುತ್ತದೆ. ಬದಲಿಗೆ ಪವಿತ್ರಾತ್ಮಭರಿತರಾಗಿರಿ. ಕೀರ್ತನೆ, ಹಾಡು, ಭಕ್ತಿಗೀತೆ ಇವುಗಳಿಂದ ನಿಮ್ಮ ಭಾವನೆಗಳನ್ನು ಪರಸ್ಪರ ವ್ಯಕ್ತಪಡಿಸಿರಿ. ಹೃದಯಾಂತರಾಳದಿಂದ ಹಾಡಿ ಪ್ರಭುವಿಗೆ ಸುತ್ತಿಸಲ್ಲಿಸಿರಿ. ನಮ್ಮ ಪ್ರಭು ಯೇಸು ಕ್ರಿಸ್ತರ ಹೆಸರಿನಲ್ಲಿ ಯಾವಾಗಲೂ ಎಲ್ಲಾ ವರಗಳಿಗಾಗಿಯೂ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ. ಕ್ರಿಸ್ತ ಯೇಸುವಿನಲ್ಲಿ ಭಯ ಭಕ್ತಿಯುಳ್ಳವರಾಗಿದ್ದು, ಒಬ್ಬರಿಗೊಬ್ಬರು ನಮ್ರತೆಯಿಂದ ನಡೆದು ಕೊಳ್ಳಿರಿ.

ಪ್ರಭುವಿನ ವಾಕ್ಯ

 ಘೋಷಣೆ : ಯೊವಾನ್ನ 6:51

ಅಲ್ಲೆಲೂಯ, ಅಲ್ಲೆಲೂಯ!
ನಾನೇ ಸ್ವರ್ಗದಿಂದ ಇಳಿದುಬಂದ ಜೀವಂತ ರೊಟ್ಟಿ |
ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ ||
ಅಲ್ಲೆಲೂಯ!

 ಶುಭಸಂದೇಶ - ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 6:51-58

ಆ ಕಾಲದಲ್ಲಿ ಯೇಸು ಜನ ಸಮೂಹಕ್ಕೆ ಹೀಗೆಂದರು: “ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ, ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ.’’ ಅಷ್ಟಕ್ಕೆ ಆ ಯೆಹೂದ್ಯರಲ್ಲಿ ತೀವ್ರ ವಾಗ್ವಾದ ಉಂಟಾಯಿತು. “ಈತನು ತನ್ನ ಮಾಂಸವನ್ನು ತಿನ್ನಲು ಹೇಗೆ ಕೊಟ್ಟಾನು?’’ ಎಂದು ಕೇಳತೊಡಗಿದರು. ಅದಕ್ಕೆ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನರಪುತ್ರನ ಮಾಂಸವನ್ನು ತಿನ್ನದೆ, ಆತನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮಲ್ಲಿ ಜೀವ ಇರುವುದಿಲ್ಲ. ನನ್ನ ಮಾಂಸವನ್ನು ತಿಂದು, ನನ್ನ ರಕ್ತವನ್ನು ಕುಡಿಯುವವನಲ್ಲಿ ನಿತ್ಯಜೀವ ಇರುತ್ತದೆ. ಅಲ್ಲದೆ ಅಂತಿಮ ದಿನದಂದು ನಾನು ಅವನನ್ನು ಜೀವಕ್ಕೆ ಎಬ್ಬಿಸುತ್ತೇನೆ. ನನ್ನ ಮಾಂಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ. ನನ್ನ ಮಾಂಸವನ್ನು ತಿಂದು, ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ನೆಲೆಸಿರುತ್ತಾನೆ. ನಾನು ಅವನಲ್ಲಿ ನೆಲೆಸಿರುತ್ತೇನೆ. ಜೀವ ಸ್ವರೂಪಿಯಾದ ಪಿತನು ನನ್ನನ್ನು ಕಳುಹಿಸಿಕೊಟ್ಟಿರುವರು, ನಾನು ಅವರಿಂದಲೇ ಜೀವಿಸುತ್ತೇನೆ. ಅಂತೆಯೇ ನನ್ನನ್ನು ಭುಜಿಸುವವನು ನನ್ನಿಂದಲೇ ಜೀವಿಸುತ್ತಾನೆ. ಸ್ವರ್ಗದಿಂದ ಇಳಿದು ಬಂದ ರೊಟ್ಟಿ ಇದೇ. ನಿಮ್ಮ ಪೂರ್ವಜರು ‘ಮನ್ನಾ’ವನ್ನು ತಿಂದರೂ ಸಾವಿಗೆ ತುತ್ತಾದರು. ಇದು" ಹಾಗಲ್ಲ. ಈ ರೊಟ್ಟಿಯನ್ನು ತಿನ್ನುವವನು ಚಿರಕಾಲ ಬಾಳುವನು,’’ ಎಂದು ಹೇಳಿದರು.

ಪ್ರಭುಕ್ರಿಸ್ತರ ಶುಭಸಂದೇಶ

17.08.24 - "ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ; ಅವುಗಳನ್ನು ತಡೆಯಬೇಡಿ. ಸ್ವರ್ಗಸಾಮ್ರಾಜ್ಯ ಇಂಥವರದೇ,"

ಮೊದಲನೇ ವಾಚನ: ಯೆಜೆಕಿಯೇಲ: 18: 1-10, 13, 30-32


ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ: "ಹೆತ್ತವರು ತಿಂದರು ಹುಳಿ ದ್ರಾಕ್ಷಿಯನ್ನು; ಚಳಿತು ಹೋದವು ಅವರ ಮಕ್ಕಳ ಹಲ್ಲುಗಳು" ಎಂಬ ಗಾದೆಯನ್ನು ನೀವು ಇಸ್ರಯೇಲ್ ನಾಡನ್ನು ಕುರಿತು ಹೇಳುವುದೇಕೆ? ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ನೀವು ಈ ಗಾದೆಯನ್ನು ಇಸ್ರಯೇಲಿನಲ್ಲಿ ಇನ್ನು ಎತ್ತ ಬೇಕಾಗುವುದಿಲ್ಲ. ಇಗೋ, ಸಕಲ ನರ ಪ್ರಾಣಿಗಳು ನನ್ನವೇ; ತಂದೆಯೇನು, ಮಗನೇನು, ನರಪ್ರಾಣಿಗಳೆಲ್ಲವೂ ನನ್ನಧೀನದಲ್ಲಿವೆ; ಪಾಪ ಮಾಡುವ ಪ್ರಾಣಿಯೇ ಸಾಯುವನು. ಒಬ್ಬನು ಸದ್ಧರ್ಮಿಯಾಗಿಯಾಗಿ ನ್ಯಾಯ ನೀತಿಗಳನ್ನು ನಡೆಸಿ, ಗುಡ್ಡಗಳ ಮೇಲೆ ಯಜ್ಞಶೇಷವನ್ನು ತಿನ್ನದೆ, ಇಸ್ರಯೇಲ್ ವಂಶದವರ ವಿಗ್ರಹಗಳ ಕಡೆಗೆ ಕಣ್ಣೆತ್ತದೆ, ನೆರೆಯವನ ಹೆಂಡತಿಯನ್ನು ಕೆಡಿಸದೆ, ಮುಟ್ಟಿನ ಹೆಂಗಸನ್ನು ಕೂಡದೆ, ಯಾರನ್ನೂ ಹಿಂಸಿಸದೆ, ಸಾಲ ಮಾಡಿದವನ ಒತ್ತೆಯನ್ನು ಬಿಗಿಯಿಡಿಯದೆ, ಯಾರ ಸೊತ್ತನ್ನೂ ಅಪಹರಿಸದೆ, ಹಸಿದವನಿಗೆ ಅನ್ನವಿಕ್ಕಿ, ಬೆತ್ತಲೆ ಇರುವವನಿಗೆ ಹೊದಿಕೆಯನ್ನು ಹೊದಿಸಿ; ಸಾಲಕ್ಕೆ ಬಡ್ಡಿ ತೆಗೆಯದೆ, ಲಾಭಕ್ಕೆ ಹಣ ಕೊಡದೆ, ಅನ್ಯಾಯಕ್ಕೆ ಕೈ ಹಾಕದೆ, ವಾದಿ ಪ್ರತಿವಾದಿಗಳಿಗೆ ಸರಿಯಾಗಿ ನ್ಯಾಯ ತೀರಿಸಿ, ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು, ಸತ್ಯ ಪರನಾಗಿಯೇ ನಡೆದರೆ, ಇಂಥವನು ಸದ್ದರ್ಮಿ. ಆದುದರಿಂದ ಅವನು ಜೀವಿಸುವುದು ನಿಶ್ಚಯ. ಇದು ಸರ್ವೇಶ್ವರನಾದ ದೇವರ ನುಡಿ: ಇಂಥವನು ಪಡೆದ ಮಗನು, ಈಗ ಹೇಳಿದ ದುಷ್ಕೃತ್ಯಗಳಲ್ಲಿ ಯಾವುದನ್ನಾದರೂ ನಡೆಸಿ, ಅಸಹ್ಯ ಕಾರ್ಯವನ್ನು ಮಾಡಿ, ಸಾಲಕ್ಕೆ ಬಡ್ಡಿ ತೆಗೆದು, ಲಾಭಕ್ಕೆ ಹಣ ಕೊಟ್ಟು, ಹಿಂಸಾಚಾರಿಯೂ, ರಕ್ತ ಸುರಿಸುವವನೂ ಆಗಿದ್ದರೆ, ಜೀವಿಸುವನೇ? ಖಂಡಿತ ಜೀವಿಸನು; ಈ ದುರಾಚಾರಗಳನ್ನೆಲ್ಲಾ ನಡೆಸಿದನ್ನಲ್ಲವೇ? ಅವನು ಸಾಯುವುದು ನಿಶ್ಚಯ; ತನ್ನ ಮರಣಕ್ಕೆ ತಾನೇ ಕಾರಣ. ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಇಸ್ರಯೇಲ್ ವಂಶದವರೇ, ನಿಮ್ಮ ನಿಮ್ಮ ನಡತೆಗೆ ತಕ್ಕ ಹಾಗೆ ನಾನು ನಿಮಗೆ ತೀರ್ಪು ನೀಡುವೆನು; ಅಧರ್ಮವು ನಿಮ್ಮನ್ನು ನಾಶ ಮಾಡದಂತೆ ಪಾಪಕ್ಕೆ ವಿಮುಖರಾಗಿರಿ; ನಿಮ್ಮ ಅಪರಾಧಗಳನ್ನೆಲ್ಲಾ ತೊರೆದುಬಿಡಿ. ನೀವು ಮಾಡುತ್ತಾ ಬಂದಿರುವ ಅಪರಾಧಗಳನ್ನೆಲ್ಲಾ ನಿಮ್ಮಿಂದ ತೊಲಗಿಸಿ ಬಿಟ್ಟು ನಿಮ್ಮ ಹೃದಯವನ್ನೂ ಸ್ವಭಾವವನ್ನೂ ನೂತನ ಮಾಡಿಕೊಳ್ಳಿ: ಇಸ್ರಯೇಲ್ ವಂಶದವರೇ ನೀವು ಏಕೆ ಸಾಯಬೇಕು? ಯಾರ ಸಾವಿನಲ್ಲೂ ನನಗೆ ಸಂತೋಷವಿಲ್ಲ; ಪಾಪಕ್ಕೆ ವಿಮುಖರಾಗಿ ಜೀವಿಸಿರಿ; ಇದು ಸರ್ವೇಶ್ವರನಾದ ದೇವರ ನುಡಿ".

ಕೀರ್ತನೆ: 51: 12-13, 14-15, 18-19

ಶ್ಲೋಕ: ವಿಧೇಯನಾಗಿ ನಡೆವ ಸಿದ್ದ ಮನಸ್ಸನು ನೀಡು ಪ್ರಭು.

ಶುಭಸಂದೇಶ: ಮತ್ತಾಯ: 19:13-15



ಅನಂತರ ಕೆಲವರು ಚಿಕ್ಕ ಮಕ್ಕಳನ್ನು ಯೇಸುಸ್ವಾಮಿಯ ಬಳಿಗೆ ತಂದರು. ಅವುಗಳ ಮೇಲೆ ಕೈಯಿಟ್ಟು ಪ್ರಾರ್ಥನೆ ಮಾಡಬೇಕೆಂದು ಕೇಳಿಕೊಂಡರು. ಶಿಷ್ಯರು ಅವರನ್ನು ಗದರಿಸಿದರು. ಆಗ ಯೇಸು, "ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ; ಅವುಗಳನ್ನು ತಡೆಯಬೇಡಿ. ಸ್ವರ್ಗಸಾಮ್ರಾಜ್ಯ ಇಂಥವರದೇ," ಎಂದರು. ತರುವಾಯ ಆ ಮಕ್ಕಳ ಮೇಲೆ ಕೈಯಿಟ್ಟು ಆಶೀರ್ವದಿಸಿದರು. ಬಳಿಕ ಅಲ್ಲಿಂದ ಹೊರಟು ಹೋದರು. 

16.08.24 - "ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರವಾಗಿರುವರು"

 ಮೊದಲನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 16:1-15, 60, 63

ಆಮೇಲೆ ಸರ್ವೇಶ್ವರ ನನಗೆ ದಯಪಾಲಿಸಿದ ವಾಣಿ - “ನರಪುತ್ರನೇ, ನೀನು ಜೆರುಸಲೇಮಿಗೆ ಅದರ ಅಸಹ್ಯಕಾರ್ಯಗಳನ್ನು ತಿಳಿಯಪಡಿಸಿ ಹೀಗೆ ನುಡಿ - ಸರ್ವೇಶ್ವರ ದೇವರು ಜೆರುಸಲೇಮೆಂಬಾಕೆಗೆ ಈ ಮಾತನ್ನು ಹೇಳಿ ಕಳುಹಿಸಿದ್ದಾರೆ: “ನೀನು ಹುಟ್ಟಿದ್ದು ಕಾನಾನ್ ದೇಶದಲ್ಲಿ, ಅದೇ ನಿನ್ನ ಜನ್ಮಭೂಮಿ. ನಿನ್ನ ತಂದೆ ಅಮೋರಿಯನು, ನಿನ್ನ ತಾಯಿ ಹಿತ್ತಿಯಳು. ನಿನ್ನ ಜನನವನ್ನು ಕುರಿತು ಏನು ಹೇಳಲಿ! ನೀನು ಹುಟ್ಟಿದ ದಿನದಂದು ಯಾರೂ ನಿನ್ನ ಹೊಕ್ಕಳು ಕೊಯ್ದು ಕಟ್ಟಲಿಲ್ಲ. ನಿನ್ನನ್ನು ನೀರಿನಿಂದ ತೊಳೆದು ಶುಚಿಮಾಡಲಿಲ್ಲ, ನಿನಗೆ ಉಪ್ಪನ್ನು ಸ್ವಲ್ಪವು ಸವರಲಿಲ್ಲ, ನಿನ್ನನ್ನು ಬಟ್ಟೆಯಲ್ಲಿ ಸುತ್ತಲೇ ಇಲ್ಲ. ನಿನ್ನನ್ನು ಕಟಾಕ್ಷಿಸಿ, ಕರುಣಿಸಿ ಯಾರೂ ನಿನಗೆ ಇಂಥಾ ಸಹಾಯ ಮಾಡಲಿಲ್ಲ; ನಿನ್ನ ಜನನ ದಿವಸದಲ್ಲಿ ನೀನು ಹೇಸಿಗೆಯಾಗಿದ್ದೆ, ನಿನ್ನನ್ನು ಬಯಲಿನಲ್ಲಿ ಬಿಸಾಡಿಬಿಟ್ಟರು. “ನಾನು ಹಾದುಹೋಗುತ್ತಾ, ನಿನ್ನ ರಕ್ತದಲ್ಲೇ ಹೊರಳಾಡುತ್ತಿದ್ದ ನಿನ್ನನ್ನು ನೋಡಿ, ‘ನೀನು ರಕ್ತದಿಂದ ಅಶುದ್ಧವಾಗಿದ್ದರೂ ಬದುಕು’ ಎಂದು ಹೇಳಿದೆ; ಹೌದು, ‘ನೀನು ರಕ್ತದಿಂದ ಅಶುದ್ಧವಾಗಿದ್ದರೂ ಬದುಕು’ ಎಂದು ಹೇಳಿ ಬದುಕಿಸಿದೆ. ಭೂಮಿಯಲ್ಲಿ ಮೊಳಕೆಯನ್ನೋ ಎಂಬಂತೆ ನಾನು ನಿನ್ನನ್ನು ಬೆಳೆಯಿಸಿದೆ; ನೀನು ಬಲಿತು ಪ್ರಾಯ ತುಂಬಿ ಅತಿ ಸುಂದರಿಯಾದೆ; ನಿನಗೆ ಸ್ತನಗಳು ಮೂಡಿದವು. ನಿನ್ನ ಕೂದಲು ಉದ್ದವಾಯಿತು; ಆದರೆ ನೀನು ಬಟ್ಟೆಯಿಲ್ಲದೆ ಬೆತ್ತಲೆಯಾಗಿದ್ದೆ. “ನಾನು ಪುನಃ ಹಾದುಹೋಗುತ್ತಾ ನಿನ್ನನ್ನು ನೋಡಲು ಇಗೋ, ನೀನು ಮದುವೆಗೆ ಸಿದ್ಧಳಾಗಿದ್ದೆ; ಆಗ ನಾನು ನನ್ನ ಹೊದಿಕೆಯ ಸೆರಗನ್ನು ನಿನಗೆ ಹೊದಿಸಿ, ನಿನ್ನ ಮಾನವನ್ನು ಕಾಪಾಡಿದೆ; ಇದಲ್ಲದೆ ನಾನು ನಿನಗೆ ಮಾತುಕೊಟ್ಟು ಒಡಂಬಡಿಕೆ ಮಾಡಿಕೊಂಡೆ. ಆದ್ದರಿಂದ ನೀನು ನನ್ನವಳಾದೆ; ಇದು ಸರ್ವೇಶ್ವರನಾದ ದೇವರ ನುಡಿ. “ಆಗ ನಾನು ನೀರಿನಲ್ಲಿ ನಿನಗೆ ಸ್ನಾನ ಮಾಡಿಸಿ, ನಿನ್ನ ಮೇಲಿನ ರಕ್ತವನ್ನು ತೊಳೆದುಬಿಟ್ಟು, ನಿನಗೆ ತೈಲವನ್ನು ಹಚ್ಚಿದೆ.  ಇದಲ್ಲದೆ ಕಸೂತಿಯ ಬಟ್ಟೆಯನ್ನು ನಿನಗೆ ತೊಡಿಸಿ, ಕಡಲು ಹಂದಿಯ ತೊಗಲಿನ ಕೆರಗಳನ್ನು ನಿನ್ನ ಕಾಲಿಗೆ ಮೆಟ್ಟಿಸಿ, ನಯವಾದ ನಾರುಮಡಿಯನ್ನು ನಿನಗೆ ಉಡಿಸಿ, ರೇಷ್ಮೆಯ ಹೊದಿಕೆಯನ್ನು ನಿನಗೆ ಹೊದಿಸಿದೆ.  ಮತ್ತು ನಾನು ನಿನ್ನ ಕೈಗಳಿಗೆ ಬಳೆಗಳನ್ನು,  ಕೊರಳಿಗೆ ಮಾಲೆಯನ್ನು, ಮೂಗಿಗೆ ಮೂಗುತಿಯನ್ನು, ಶಿರಸ್ಸಿಗೆ ಸುಂದರ ಕಿರೀಟವನ್ನು ಇಟ್ಟು, ನಿನ್ನನ್ನು ಆಭರಣಗಳಿಂದ ಸಿಂಗರಿಸಿದೆ.  ನಿನ್ನ ಒಡವೆಗಳು ಬೆಳ್ಳಿಬಂಗಾರದವು; ನಿನ್ನ ಉಡುಪು ನಯವಾದ ನಾರುಮಡಿ, ರೇಷ್ಮೆಯ ಹೊದಿಕೆ, ಕಸೂತಿಯ ವಸ್ತ್ರ; ನಿನ್ನ ಆಹಾರವು ಗೋದಿಹಿಟ್ಟು, ಜೇನುತುಪ್ಪ ಮತ್ತು ಎಣ್ಣೆ; ನಿನ್ನ ಲಾವಣ್ಯವು ಅತಿ ಮನೋಹರ; ನೀನು ಹೀಗೆ ವೃದ್ಧಿಗೊಂಡು ರಾಣಿಯಾದೆ.  ನಾನು ನಿನಗೆ ಅನುಗ್ರಹಿಸಿದ ನಿನ್ನ ವೈಭವದಿಂದ ನಿನ್ನ ಸೌಂದರ್ಯ ಪರಿಪೂರ್ಣವಾಯಿತು; ನಿನ್ನ ಚೆಲುವು ಜನಾಂಗಗಳಲ್ಲಿ ಪ್ರಸಿದ್ಧವಾಯಿತು; ಇದು ಸರ್ವೇಶ್ವರನಾದ ದೇವರ ನುಡಿ. “ಆದರೆ ನೀನು ನಿನ್ನ ಸೌಂದರ್ಯವನ್ನೇ ನೆಚ್ಚಿಕೊಂಡೆ, ‘ನಾನು ಪ್ರಸಿದ್ಧಳಾದೆ’ ಎಂದು ಉಬ್ಬಿಕೊಂಡು ಸೂಳೆತನ ಮಾಡಿದೆ; ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿಮೀರಿ ಹಾದರಮಾಡಿದೆ. ಒಬ್ಬೊಬ್ಬನಿಗೂ ಒಳಗಾದೆ. ಆದರೂ ನಾನು ನಿನ್ನ ಯೌವನಕಾಲದಲ್ಲಿ ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡು ನಿನ್ನೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡು ದೃಢೀಕರಿಸುವೆನು. ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ, ನೀನು ಅವುಗಳನ್ನು ನೆನಪಿಗೆ ತಂದು ನಾಚಿಕೆಪಟ್ಟು, ನಿನಗಾದ ಅವಮಾನದ ನಿಮಿತ್ತ ಇನ್ನು ಬಾಯಿ ತೆರೆಯದಿರುವೆ.” ಇದು ಸರ್ವೇಶ್ವರನಾದ ದೇವರ ನುಡಿ.

ಕೀರ್ತನೆ: 12:2-3, 4, 5-6

ಶ್ಲೋಕ: ನಿನಗಿತ್ತು ಎನ್ನ ಮೇಲೆ ಕೋಪ ಮನ; ಆದರೆ ಆದೀಗ ಆಗಿದೆ ಶಮನ

ಶುಭಸಂದೇಶ: ಮತ್ತಾಯ 19:3-12

ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, “ಯಾವುದಾದರೂ ಕಾರಣದಿಂದ ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?” ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಸೃಷ್ಟಿಕರ್ತ ಆದಿಯಿಂದಲೇ ಅವರನ್ನು ಗಂಡುಹೆಣ್ಣಾಗಿ ಉಂಟುಮಾಡಿದರು ಎಂದೂ, ‘ಈ ಕಾರಣದಿಂದಲೇ ಗಂಡನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು’ ಎಂದೂ ಹೇಳಿದ್ದಾರೆಂಬುದಾಗಿ ನೀವು ಪವಿತ್ರಗ್ರಂಥದಲ್ಲಿ ಓದಿಲ್ಲವೇ? ಹೀಗಿರುವಲ್ಲಿ, ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರವಾಗಿರುವರು. ಈ ನಿಮಿತ್ತ ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದೆ ಇರಲಿ,” ಎಂದರು. "ಹಾಗಾದರೆ ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ನಿಯಮಿಸಿದ್ದು ಏಕೆ?” ಎಂದು ಫರಿಸಾಯರು ಮರುಪ್ರಶ್ನೆ ಹಾಕಿದರು. “ನಿಮ್ಮ ಹೆಂಡತಿಯನ್ನು ನೀವು ಬಿಟ್ಟುಬಿಡಬಹುದೆಂದು ಮೋಶೆ ಅನುಮತಿ ಇತ್ತದ್ದು ನಿಮ್ಮ ಹೃದಯ ಕಾಠಿಣ್ಯದ ನಿಮಿತ್ತದಿಂದಲೇ. ಆದರೆ ಅದು ಆದಿಯಿಂದಲೇ ಹಾಗಿರಲಿಲ್ಲ. ನಾನು ನಿಮಗೆ ಹೇಳುವುದನ್ನು ಕೇಳಿ; ತನ್ನ ಹೆಂಡತಿಯನ್ನು ಅವಳ ದುರ್ನಡತೆಯ ಕಾರಣದಿಂದಲ್ಲದೆ ಬಿಟ್ಟುಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವ ಪ್ರತಿಯೊಬ್ಬನೂ ವ್ಯಭಿಚಾರಿಯಾಗುತ್ತಾನೆ.” ಶಿಷ್ಯರು ಆಗ, “ಸತಿಪತಿಯರ ಸಂಬಂಧ ಈ ರೀತಿ ಇರುವುದಾದರೆ, ಮದುವೆಮಾಡಿಕೊಳ್ಳದಿರುವುದೇ ಲೇಸು,” ಎಂದರು.  ಅದಕ್ಕೆ ಯೇಸು, “ಇದನ್ನು ಅಂಗೀಕರಿಸಲು ಎಲ್ಲರಿಂದಲೂ ಸಾಧ್ಯವಿಲ್ಲ; ಯಾರಿಗೆ ಅನುಗ್ರಹಿಸಲಾಗಿದೆಯೋ ಅವರಿಂದ ಮಾತ್ರ ಸಾಧ್ಯ. ತಾಯಿಯ ಉದರದಿಂದಲೇ ನಪುಂಸಕರಾಗಿ ಹುಟ್ಟಿದವರಿದ್ದಾರೆ; ಜನರಿಂದ ನಪುಂಸಕರಾದವರು ಕೂಡ ಇದ್ದಾರೆ; ಸ್ವರ್ಗಸಾಮ್ರಾಜ್ಯದ ನಿಮಿತ್ತ ಅವಿವಾಹಿತರಾಗಿ ಇರುವವರೂ ಇದ್ದಾರೆ; ಇದನ್ನು ಅಂಗೀಕರಿಸಬಲ್ಲವನು ಅಂಗೀಕರಿಸಲಿ,” ಎಂದರು.

15.08.24 - “ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ"

 ಮೊದಲನೇ ವಾಚನ: ಪ್ರಕಟನಾ ಗ್ರಂಥ 11:19; 12:1-6, 10



ಸ್ವರ್ಗದಲ್ಲಿನ ದೇವಾಲಯವು ತೆರೆಯಿತು. ದೇವರ ಒಡಂಬಡಿಕೆಯ  ಮಂಜೂಷವು ಅಲ್ಲಿರುವುದು ಕಾಣಿಸಿತು. ಆಕಾಶದಲ್ಲಿ ಚಿಹ್ನೆಯೊಂದು ಕಾಣಿಸಿಕೊಂಡಿತು. ಮಹಿಳೆಯೊಬ್ಬಳು ಸೂರ್ಯಭೂಷಿತಳಾಗಿದ್ದಳು. ಆಕೆಯ ಪಾದದಡಿ ಚಂದ್ರನಿದ್ದನು. ತಲೆಯ ಮೇಲೆ ಹನ್ನೆರಡು ನಕ್ಷತ್ರ ಖಚಿತವಾದ ಕಿರೀಟವಿತ್ತು. ಆಕೆ ತುಂಬು ಗರ್ಭಿಣಿ, ಪ್ರಸವ ವೇದನೆಯಿಂದ ನರಳುತ್ತಿದ್ದಳು. ಆಕಾಶದಲ್ಲಿ ಮತ್ತೊಂದು ಚಿಹ್ನೆ ಕಾಣಿಸಿಕೊಂಡಿತು. ಅಲ್ಲಿ ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ ಏಳು ತಲೆಗಳಿದ್ದವು, ಹತ್ತು ಕೊಂಬುಗಳಿದ್ದವು; ಅದರ ಏಳು ತಲೆಗಳ ಮೇಲೆ ಏಳು ಮುಕುಟಗಳಿದ್ದವು. ಅದು ತನ್ನ ಬಾಲದಿಂದ ಮೂರನೆಯ ಒಂದು ಭಾಗದಷ್ಟು ನಕ್ಷತ್ರಗಳನ್ನು ಆಕಾಶದಿಂದ ಸೆಳೆದೆಳೆದು ಅವುಗಳನ್ನು ಭೂಮಿಗೆ ಎಸೆಯಿತು. ಮಗು ಹುಟ್ಟಿದ ಕೂಡಲೇ  ಅದನ್ನು ನುಂಗಿಬಿಡಬೇಕೆಂದು ಘಟಸರ್ಪವು ಆ ತುಂಬು ಗರ್ಭಿಣಿಯ ಬಳಿಯಲ್ಲಿಯೇ ಕಾಯ್ದುಕೊಂಡಿತ್ತು. ಸರ್ವಜನಾಂಗಗಳನ್ನು ಕಬ್ಬಿಣದ ದಂಡದಿಂದ ಆಳಬಲ್ಲಂಥ ಒಂದು ಗಂಡುಮಗುವಿಗೆ  ಆಕೆ ಜನ್ಮವಿತ್ತಳು. ಆದರೆ, ಆ ಮಗುವನ್ನು ಸಿOಹಾಸನದಲ್ಲಿದ್ದ ದೇವರ ಬಳಿಗೆ ಕೊಂಡೊಯ್ಯಲಾಯಿತು. ಆ ಮಹಿಳೆ ಅರಣ್ಯಕ್ಕೆ ಓಡಿ ಹೋದಳು. ಅಲ್ಲಿ ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಆಕೆಗೆ ಶುಶ್ರೂಷೆಯಾಗಬೇಕೆಂದು ದೇವರೇ ಆ ಸ್ಥಳವನ್ನು ಸಜ್ಜುಗೊಳಿಸಿದ್ದರು. ಸ್ವರ್ಗದಿಂದ ಬಂದ ಮಹಾ ಶಬ್ದವನ್ನು ನಾನು ಕೇಳಿಸಿಕೊಂಡೆ. ಅದು ಇಂತೆಂದಿತು: "ಇಗೋ, ನಮ್ಮ ದೇವನಿತ್ತ ಜೀವೋದ್ಧಾರ ಸಿದ್ಧಿಸಿದೆ ಆತನ ಶಕ್ತಿ, ಸಾಮ್ರಾಜ್ಯಗಳು ಕಂಗೊಳಿಸುತ್ತಿವೆ. ಆತನ ಕ್ರಿಸ್ತಾಧಿಪತ್ಯ ಸ್ಥಾಪಿತವಾಗಿದೆ.

ಕೀರ್ತನೆ: 45:10, 11, 12, 16

ಶ್ಲೋಕ: ಪಟ್ಟದ ರಾಣಿಯು ನಿಂತಿಹಳು ನಿನ್ನ ಬಲಪಾರ್ಶ್ವದಲ್ಲಿ, ಓಫಿರ್ ನಾಡಿನ ಚಿನ್ನಾಭರಣಗಳಿಂದ ಭೂಷಿತಳಾಗಿ

ಎರಡನೇ ವಾಚನ: 1 ಕೊರಿಂಥಿಯರಿಗೆ 15:20-27

ಕ್ರಿಸ್ತ ಯೇಸು ಪುನರುತ್ದಾನ ಹೊಂದಿದ್ದೇನೋ ಸತ್ಯಸ್ಯ ಸತ್ಯ. ಅವರ ಪುನರುತ್ದಾನವು, ಸತ್ತವರು ಪುನರುತ್ದಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ. ಒಬ್ಬ ಮನುಷ್ಯನಿಂದ ಸಾವು ಸಂಭವಿಸಿದಂತೆಯೇ ಒಬ್ಬ ಮನುಷ್ಯನಿಂದಲೇ ಸತ್ತವರಿಗೆ ಪುನರುತ್ದಾನವು ಪರಿಣಮಿಸಿತು. ಆದಾಮನ ಸಂಬಂಧದಿಂದ ಎಲ್ಲರೂ ಸಾವಿಗೀಡಾದಂತೆ ಕ್ರಿಸ್ತಯೇಸುವಿನ ಸಂಬಂಧದಿಂದ ಎಲ್ಲರೂ ಜೀವಂತರಾಗಿ ಏಳುತ್ತಾರೆ. ಈ ಭಾಗ್ಯವನ್ನು ಒಬ್ಬೊಬ್ಬನೂ ಕ್ರಮಬದ್ಧ ರೀತಿಯಲ್ಲಿ ಪಡೆಯುತ್ತಾನೆ. ಪ್ರಪ್ರಥಮ ಫಲವಾಗಿ ಕ್ರಿಸ್ತಯೇಸುವೇ ಜೀವಂತರಾದರು. ಆನಂತರ, ಕ್ರಿಸ್ತಯೇಸುವಿಗೆ ಸೇರಿದವರು ಯೇಸು ಪುನರಾಗಮಿಸುವಾಗ ಜೀವಂತರಾಗುತ್ತಾರೆ. ಅಂತ್ಯ ಬರುವುದು ಆನಂತರವೇ. ಆಗ ಯೇಸು ಎಲ್ಲಾ ಅಧಿಪತ್ಯವನ್ನೂ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿ ತಂದೆಯಾದ ದೇವರಿಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಡುವರು.  ಶತ್ರುಗಳೆಲ್ಲರನ್ನು ತಮ ಪಾದಪೀಠವಾಗಿಸಿಕೊಳ್ಳುವ ತನಕ ಅವರು ರಾಜ್ಯವಾಳಬೇಕಾಗಿದೆ.  ಕಟ್ಟಕಡೆಗೆ ನಿರ್ಮೂಲವಾಗುವ ಶತ್ರುವೆಂದರೆ ಮೃತ್ಯುವೇ. "ದೇವರು ಎಲ್ಲವನ್ನು ಆಧೀನಪಡಿಸಿ, ಅತನ ಪಾದಪೀಠವನ್ನಾಗಿಸಿದ್ದಾರೆ," ಎಂದು ಲಿಖಿತವಾಗಿದೆ. "ಎಲ್ಲವನ್ನೂ ಅಧೀನಪಡಿಸಿಕೊಳ್ಳಲಾಗಿದೆ," ಎಂದು ಹೇಳುವಾಗ, ಹಾಗೆ ಅಧೀನಪಡಿಸಿದ ದೇವರು ಅದರಲ್ಲಿ ಸೇರಲಿಲ್ಲ ಎಂಬುದು ಸುಸ್ಪಷ್ಟವಾಗಿದೆ.

ಶುಭಸಂದೇಶ: ಲೂಕ 1:39-56

ಮರಿಯಳು ಪ್ರಯಾಣಹೊರಟು  ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು. ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು. ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿಂದ  ಹೀಗೆಂದಳು: "ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ!ನನ್ನ ಪ್ರಭುವಿನ ತಾಯಿ ನೀನು; ನನ ಬಳಿಗೆ ಬಂದುದು ಅದೆಂಥ ಭಾಗ್ಯ! ನಿನ್ನ ವಂದನೆಯ ದನಿ ನನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ! ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು," ಆಗ ಮರಿಯಳು ಹೀಗೆಂದು ಹೊಗಳಿದಳು: "ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ; ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ ತನ್ನ ದಾಸಿಯ ದೀನತೆಯನ್ನು ನೆನಪಿಗೆ ತಂದುಕೊಂಡನಾತ   ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವಜನಾಂಗ ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ; ಆತನಲ್ಲಿ ಭಯಭಕ್ತಿಯುಳ್ಳವರಿಗೆ ಆತನ ಪ್ರೀತಿ ತಲತಲಾಂತರದವರೆಗೆ, ಗರ್ವ ಹೃದಯಿಗಳನಾತ  ಚದರಿಸಿರುವನು ಪ್ರದರ್ಶಿಸಿರುವನು ತನ್ನ ಬಾಹುಬಲವನು ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು ಏರಿಸಿರುವನು ಉನ್ನತಿಗೆ ದೀನದಲಿತರನು. ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ, ಹೊರದೂಡಿರುವನು ಸಸಿರಿವಂತರನು ಬರೀಗೈಯಲಿ ನೆರವಾದನು ತನ್ನ ದಾಸ ಇಸ್ರಯೇಲರಿಗೆ  ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ ಅವನ ಸಂತತಿಗೆ, ಯುಗಯುಗಾಂತರದವರೆಗೆ," ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂದಿರುಗಿದಳು.

14.08.24 - "ಎಲ್ಲಿ ಇಬ್ಬರು, ಮೂವರು ನನ್ನ ನಾಮದಲ್ಲಿ ಸೇರಿರುತ್ತಾರೋ, ಅಲ್ಲಿ ನಾನು ಅವರ ಮಧ್ಯೆ ಇರುತ್ತೇನೆ.”

 ಮೊದಲನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 9:1-7; 10:18-22

ಆಮೇಲೆ ದೇವರು, “ಈ ಪಟ್ಟಣವನ್ನು ದಂಡಿಸಲಿರುವವರೇ, ನೀವೆಲ್ಲರೂ ನಿಮ್ಮ ಹತ್ಯದ ಆಯುಧಗಳನ್ನು ಹಿಡಿದು ಸಮೀಪಿಸಿರಿ,” ಎಂದು ಗಟ್ಟಿಯಾಗಿ ಕೂಗಿ ಹೇಳಿದ ಮಾತು ನನ್ನ ಕಿವಿಗೆ ಬಿತ್ತು. ಕೂಡಲೆ ಗದೆಗಳನ್ನು ಹಿಡಿದುಕೊಂಡ ಆರು ಮಂದಿ ಪುರುಷರು ಉತ್ತರಾಭಿಮುಖವಾಗಿರುವ ಮೇಲಣ ಹೆಬ್ಬಾಗಿಲಿನ ಮಾರ್ಗವಾಗಿ ಬಂದರು; ನಾರಿನ ಬಟ್ಟೆಯನ್ನು ಹೊದ್ದುಕೊಂಡು ಲೇಖಕನ ದೌತಿಯನ್ನು ನಡುವಿಗೆ ಕಟ್ಟಿಕೊಂಡಿರುವ ಮತ್ತೊಬ್ಬ ಪುರುಷನು ಅವರ ಮಧ್ಯದಲ್ಲಿದ್ದನು. ಇವರೆಲ್ಲರೂ ಒಳಕ್ಕೆ ಸೇರಿ ಕಂಚಿನ ಬಲಿಪೀಠದ ಪಕ್ಕದಲ್ಲಿ ನಿಂತುಕೊಂಡರು. ಇಷ್ಟರಲ್ಲಿ ಇಸ್ರಯೇಲಿನ ದೇವರ ತೇಜಸ್ಸು ತನ್ನ ವಾಹನವಾದ ಕೆರೂಬಿಯನ್ನು ಬಿಟ್ಟು ಮೇಲಕ್ಕೇರಿ ಆಲಯದ ಹೊಸ್ತಿಲಿನ ಮೇಲ್ಗಡೆ ನಿಂತಿತ್ತು; ಆಗ ನಾರಿನ ಬಟ್ಟೆಯನ್ನು ಹೊದ್ದುಕೊಂಡು, ಲೇಖಕನ ಮಸಿಕೊಂಬನ್ನು ನಡುವಿಗೆ ಕಟ್ಟಿಕೊಂಡಿದ್ದ ಪುರುಷನನ್ನು ಸರ್ವೇಶ್ವರ ಕೂಗಿ ಅವನಿಗೆ, “ನೀನು ಜೆರುಸಲೇಮ್ ಪಟ್ಟಣದಲ್ಲೆಲ್ಲಾ ತಿರುಗಾಡಿ, ಅದರೊಳಗೆ ನಡೆಯುವ ಸಮಸ್ತ ಅಸಹ್ಯ ಕಾರ್ಯಗಳಿಗೆ ನರಳಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಗುರುತುಮಾಡು,” ಎಂದು ಅಪ್ಪಣೆಕೊಟ್ಟರು. ಮಿಕ್ಕವರಿಗೆ, “ನೀವು ಪಟ್ಟಣದಲ್ಲೆಲ್ಲಾ ಇವನ ಹಿಂದೆ ಸಂಚರಿಸುತ್ತಾ ಹತಿಸಿರಿ; ಯಾರನ್ನೂ ಕಟಾಕ್ಷಿಸದಿರಿ, ಉಳಿಸದಿರಿ; ವೃದ್ಧ, ಯುವಕ, ಯುವತಿ, ಮಹಿಳೆ, ಬಾಲಕ ಎನ್ನದೆ ಸಕಲರನ್ನೂ ಸಂಹಾರ ಮಾಡಿ ಬಿಡಿ; ಆದರೆ ಆ ಗುರುತುಳ್ಳವರಲ್ಲಿ ಯಾರನ್ನೂ ಮುಟ್ಟಬೇಡಿ; ನನ್ನ ಆಲಯದಲ್ಲಿಯೇ ಪ್ರಾರಂಭಮಾಡಿ,” ಎಂದು ನನಗೆ ಕೇಳಿಸುವಂತೆ ಅಪ್ಪಣೆಮಾಡಿದರು. ಆಗ ದೇವಾಲಯದ ಮುಂದೆ ಇದ್ದ ಹಿರಿಯರನ್ನು ಮೊದಲುಗೊಂಡು ಹತಿಸತೊಡಗಿದರು. ದೇವರು ಅವರಿಗೆ, “ಹೊರಡಿ, ಪ್ರಾಕಾರಗಳನ್ನು ಶವಗಳಿಂದ ತುಂಬಿಸಿ, ದೇವಾಲಯವನ್ನು ಹೊಲೆಗೆಡಿಸಿ,” ಎಂದು ಅಪ್ಪಣೆಕೊಡಲು ಅವರು ಹೊರಟು ಪಟ್ಟಣದಲ್ಲಿದ್ದವರನ್ನು ಹತಿಸಿದರು ಬಳಿಕ ಸರ್ವೇಶ್ವರನ ತೇಜಸ್ಸು ದೇವಾಲಯದ ಹೊಸ್ತಿಲನ್ನು ಬಿಟ್ಟು, ಕೆರೂಬಿಗಳ ಮೇಲೆ ನಿಂತಿತು. ಆಗ ನನ್ನ ಕಣ್ಣೆದುರಿಗೆ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡು ಚಕ್ರಸಮೇತವಾಗಿ ನೆಲದಿಂದ ಏರಿ ಹೊರಟು ಸರ್ವೇಶ್ವರನ ಆಲಯದ ಪೂರ್ವಬಾಗಿಲ ಮುಂದೆ ನಿಂತವು. ಅವುಗಳ ಮೇಲ್ಗಡೆ ಇಸ್ರಯೇಲಿನ ದೇವರ ತೇಜಸ್ಸು ನೆಲಸಿತ್ತು. ಇಸ್ರಯೇಲಿನ ದೇವರ ವಾಹನವಾಗಿ ಕೆಬಾರ್ ನದಿಯ ಹತ್ತಿರ ನನಗೆ ಕಾಣಿಸಿದ ಆ ಜೀವಿಗಳು ಇವೇ; ಅವು ಕೆರೂಬಿಗಳೆಂದು ಈಗ ನನಗೆ ತಿಳಿದುಬಂತು. ಒಂದೊಂದಕ್ಕೆ ನಾಲ್ಕು ನಾಲ್ಕು ಮುಖಗಳೂ ನಾಲ್ಕು ನಾಲ್ಕು ರೆಕ್ಕೆಗಳೂ ಇದ್ದವು; ಅವುಗಳ ರೆಕ್ಕೆಗಳ ಕೆಳಗೆ ಮನುಷ್ಯಹಸ್ತದಂಥ ಹಸ್ತಗಳು ಇದ್ದವು;  ಅವುಗಳ ಮುಖಗಳು ಕೆಬಾರ್ ನದಿಯ ಹತ್ತಿರ ನಾನು ಕಂಡ ಮುಖಗಳಂತೆ ನನಗೆ ಕಂಡುಬಂದವು. ಅವು ಆ ಮುಖಗಳೇ. ಪ್ರತಿಯೊಂದು ಜೀವಿಯು ಹೊರಟ ಮುಖವಾಗಿಯೇ ಹೋಗುತ್ತಿತ್ತು.

ಕೀರ್ತನೆ: 113:1-2, 3-4, 5-6

ಶ್ಲೋಕ: ಪ್ರಭುವಿನ ಮಹಿಮೆ ಗಗನಕ್ಕಿಂತಲೂ ಉತ್ಕೃಷ್ಟ

ಶುಭಸಂದೇಶ: ಮತ್ತಾಯ 18:15-20

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೇಳಿದ್ದೇನೆಂದರೆ, “ನಿನ್ನ ಸೋದರನು ನಿನಗೆ ಅಪರಾಧ ಮಾಡಿದರೆ, ನೀನು ಹೋಗಿ ನೀವಿಬ್ಬರೇ ಇರುವಾಗ, ಅವನ ತಪ್ಪನ್ನು ಮನಗಾಣಿಸು. ಅವನು ನಿನಗೆ ಕಿವಿಗೊಟ್ಟರೆ ಅವನ ಸೋದರತ್ವವನ್ನು ನೀನು ಮತ್ತೆ ಗಳಿಸಿಕೊಂಡಂತಾಗುವುದು. ಒಂದು ವೇಳೆ, ಅವನು ನಿನಗೆ ಕಿವಿಗೊಡದೆಹೋದರೆ ಒಬ್ಬಿಬ್ಬರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು; ಹೀಗೆ ಇಬ್ಬರು ಅಥವಾ ಮೂವರು ಸಾಕ್ಷಿಗಳ ಸಮ್ಮುಖದಲ್ಲಿ ಪ್ರತಿಯೊಂದು ಮಾತೂ ಇತ್ಯರ್ಥವಾಗಲಿ.  ಅವರಿಗೂ ಅವನು ಕಿವಿಗೊಡದೆ ಹೋದಲ್ಲಿ ಧರ್ಮಸಭೆಗೆ ತಿಳಿಸು. ಧರ್ಮಸಭೆಗೂ ಅವನು ಕಿವಿಗೊಡದೆಹೋದರೆ ಅವನನ್ನು ಧರ್ಮಭ್ರಷ್ಟನೆಂದು ಹಾಗೂ ಬಹಿಷ್ಕೃತನೆಂದು ಪರಿಗಣಿಸು. “ನೀವು ಇಹದಲ್ಲಿ ಏನನ್ನು ಬಂಧಿಸುತ್ತೀರೋ ಅದು ಪರದಲ್ಲೂ ಬಂಧಿಸಲಾಗುವುದು; ನೀವು ಇಹದಲ್ಲಿ ಏನನ್ನು ಬಿಚ್ಚುತ್ತೀರೋ ಅದು ಪರದಲ್ಲೂ ಬಿಚ್ಚಲಾಗುವುದು ಎಂದು ನಿಮಗೆ ಖಚಿತವಾಗಿ ಹೇಳುತ್ತೇನೆ. “ಇನ್ನೂ ನಾನು ನಿಮಗೆ ಹೇಳುವುದು ಏನೆಂದರೆ: ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳುವ ಯಾವುದಾದರೊಂದು ವಿಷಯವಾಗಿ ಇಹಲೋಕದಲ್ಲಿ ಒಮ್ಮನಸ್ಸುಳ್ಳವರಾಗಿದ್ದರೆ, ಅದು ಸ್ವರ್ಗದಲ್ಲಿರುವ ನನ್ನ ತಂದೆಯಿಂದ ಅವರಿಗೆ ಕೈಗೂಡುತ್ತದೆ.  ಎಲ್ಲಿ ಇಬ್ಬರು, ಮೂವರು ನನ್ನ ನಾಮದಲ್ಲಿ ಸೇರಿರುತ್ತಾರೋ, ಅಲ್ಲಿ ನಾನು ಅವರ ಮಧ್ಯೆ ಇರುತ್ತೇನೆ.”

13.08.24 - "ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು"

ಮೊದಲನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 2:8-3:4

ನರಪುತ್ರನೇ, ನಾನು ನಿನಗೆ ನುಡಿಯುವ ಮಾತನ್ನು ಕೇಳು; ಅವಿಧೇಯರಾದ ಆ ವಂಶದವರಂತೆ ನೀನು ಅವಿಧೇಯನಾಗಬೇಡ; ನಾನು ಕೊಡುವುದನ್ನು ಬಾಯಿತೆರೆದು ತಿಂದು ಬಿಡು,” ಎಂದರು. ಇಗೋ, ನಾನು ನೋಡುತ್ತಿದ್ದಂತೆ ಒಂದು ಕೈ ನನ್ನ ಕಡೆಗೆ ಚಾಚಿತ್ತು; ಅದರಲ್ಲಿ ಗ್ರಂಥದ ಸುರುಳಿಯೊಂದು ಕಾಣಿಸಿತು. ಆ ಸುರುಳಿಯನ್ನು ನನ್ನೆದುರಿನಲ್ಲೆ ಬಿಚ್ಚಿದರು. ಅದರ ಎರಡು ಬದಿಗಳಲ್ಲಿಯೂ ಬರೆದಿತ್ತು: ಅದು ಪ್ರಲಾಪ, ಶೋಕ, ಶಾಪ ಇವುಗಳ ಬರಹದಿಂದ ಕೂಡಿತ್ತು. ಬಳಿಕ ಸರ್ವೇಶ್ವರ ನನಗೆ, “ನರಪುತ್ರನೇ, ನಿನಗೆ ಕೊಟ್ಟ ಈ ಸುರುಳಿಯನ್ನು ತಿನ್ನು; ಅನಂತರ ಇಸ್ರಯೇಲ್ ವಂಶದವರಿಗೆ ಸಾರು, ಹೋಗು,” ಎಂದು ಆಜ್ಞಾಪಿಸಿದರು. ನಾನು ಬಾಯಿ ತೆರೆದೆ; ಅವರೇ ಆ ಸುರುಳಿಯನ್ನು ನನಗೆ ತಿನ್ನಿಸಿದರು. ತಿನ್ನಿಸುತ್ತಾ, “ನರಪುತ್ರನೇ, ನಾನು ಕೊಡುವ ಈ ಸುರುಳಿಯನ್ನು ತಿಂದು ಹೊಟ್ಟೆ ತುಂಬಿಸಿಕೋ,” ಎಂದರು. ನಾನು ಅದನ್ನು ತಿಂದು ಬಿಟ್ಟೆ; ಅದು ನನ್ನ ಬಾಯಿಗೆ ಜೇನಿನಂತೆ ಸಿಹಿಯಾಗಿತ್ತು. ಆಮೇಲೆ ಸರ್ವೇಶ್ವರ ನನಗೆ ಹೀಗೆಂದರು: “ನರಪುತ್ರನೇ, ನೀನು ಇಸ್ರಯೇಲ್ ವಂಶದವರ ಬಳಿಗೆ ಹೋಗಿ ನಾನು ತಿಳಿಸುವ ಮಾತುಗಳನ್ನು ಅವರಿಗೆ ಹೇಳು."

ಕೀರ್ತನೆ: 119:14, 24, 72, 103, 111, 131

ಶ್ಲೋಕ:  ನಿನ್ನ  ನುಡಿ  ಎನಿತೊ  ರುಚಿ  ನನ್ನ  ನಾಲಿಗೆಗೆ.

1.  ಸಿರಿಸಂಪತ್ತಿಗಿಂತ  ಮಿಗಿಲಾಗಿ
ಆನಂದಿಪೆ  ನಿನ್ನ  ಮಾರ್ಗಿಯಾಗಿ
ನಿನ್ನಾಜ್ಞೆಯು   ಆನಂದದಾಯಕ
ಅವೇ  ನನಗೆ  ಮಂತ್ರಾಲೋಚಕ

2.  ಸಾವಿರಾರು  ಚಿನ್ನ  ಬೆಳ್ಳಿ  ನಾಣ್ಯಗಳಿಗಿಂತ
ನಿನ್ನ  ಬಾಯಿಂದ  ಬಂದ  ಧರ್ಮಶಾಸ್ತ್ರ  ಉಚಿತ
ನಿನ್ನ  ನುಡಿ  ಎನಿತೊ  ರುಚಿ  ನನ್ನ  ನಾಲಿಗೆಗೆ
ಜೇನುತುಪ್ಪಕ್ಕಿಂತ  ಸಿಹಿ  ನನ್ನ  ಬಾಯಿಗೆ

3.  ಹೃದಯಾನಂದಕರ  ನಿನ್ನ  ಕಟ್ಟಳೆಗಳು
ನನಗಮರ  ಸ್ವಾಸ್ಥ್ಯವಾದುವುವು   ಅವುಗಳು
ಬಾಯ್ದೆರೆದು  ಹಾತೊರೆಯುತ್ತಿರುವೆ
ನಿನ್ನ  ಆಜ್ಞೆಗಳನು  ಅರಸುತಿರುವೆ

ಘೋಷಣೆ                   ಕೀರ್ತನೆ 119:34

ಅಲ್ಲೆಲೂಯ, ಅಲ್ಲೆಲೂಯ!
ನೀಡೆನಗೆ  ನಿನ್ನ  ಶಾಸ್ತ್ರದ  ಅರಿವನು,
ಪೂರ್ಣಮನದಿಂದ  ಆಚರಿಸುವೆನದನು,,
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 18:1-5, 10, 12-14


ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು?” ಎಂದು ಕೇಳಿದರು. ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ಶಿಷ್ಯರ ನಡುವೆ ನಿಲ್ಲಿಸಿ ಹೀಗೆಂದರು: “ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು. ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ.” “ಎಚ್ಚರಿಕೆ! ಈ ಚಿಕ್ಕವರಲ್ಲಿ ಯಾರನ್ನೂ ತೃಣೀಕರಿಸಬೇಡಿ.  ಸ್ವರ್ಗದಲ್ಲಿನ ಇವರ ದೂತರು ಸದಾಕಾಲ ನನ್ನ ಸ್ವರ್ಗೀಯ ಪಿತನ ಸಮ್ಮುಖದಲ್ಲಿ ಇದ್ದಾರೆ; ಇದು ನಿಮಗೆ ತಿಳಿದಿರಲಿ. “ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳು ಇವೆಯೆನ್ನೋಣ. ಅವುಗಳಲ್ಲಿ ಒಂದು ಕುರಿ ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ. ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತೊಂಬತ್ತೊಂಬತ್ತು ಕುರಿಗಳನ್ನು ಗುಡ್ಡದಲ್ಲೇ ಬಿಟ್ಟು, ತಪ್ಪಿಸಿಕೊಂಡುಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ? ಅದು ಸಿಕ್ಕಿತು ಅನ್ನಿ; ತಪ್ಪಿಸಿಕೊಳ್ಳದ ಆ ತೊಂಬತ್ತೊಂಬತ್ತು ಕುರಿಗಳಿಗಿಂತ ಸಿಕ್ಕಿದ ಆ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅಂತೆಯೇ, ಈ ಚಿಕ್ಕವರಲ್ಲಿ ಒಬ್ಬನು ಕೂಡ ಕಳೆದುಹೋಗಬಾರದು; ಇದೇ ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತ."