24.02.24 - "ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ"

ಮೊದಲನೇಯ ವಾಚನ ಧರ್ಮೋಪದೇಶಕಾಂಡ 26:16-19

 ಆಜ್ಞಾವಿಧಿಗಳನ್ನು ನೀವು ಅನುಸರಿಸಬೇಕದು ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಇಂದು ಆಜ್ಞಾಪಿಸಿದ್ದಾರೆ. ಆದುದರಿಂದ ನೀವು ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಇವುಗಳನ್ನು ಕೈಕೊಂಡು ನಡೆಯಬೇಕು. ನಮಗೆ ಸರ್ವೇಶ್ವರನೇ ದೇವರಾಗಿರುವರೆಂದು ಹಾಗು ಅವರು ಹೇಳಿದ ಮಾರ್ಗದಲ್ಲೇ ನಡೆದು ಅವರ ಆಜ್ಞಾವಿಧಿನಿರ್ಣಯಗಳನ್ನು ಕೈಕೊಂಡು ಅವರ ಮಾತಿಗೆ ಲಕ್ಷ್ಯಕೊಡುವೆವೆಂದೂ ನೀವು ಈಗ ಒಡಂಬಟ್ಟಿದ್ದೀರಿ. ಸರ್ವೇಶ್ವರ ಸ್ವಾಮಿ ಆದರೋ ನಿಮ್ಮ ವಿಷಯದಲ್ಲಿ,‘ಇವರು ನನ್ನ ಆಜ್ಞೆಗಳನ್ನೆಲ್ಲ ಅನುಸರಿಸುವವರಾದರೆ ನನ್ನ ವಾಗ್ದಾನಾನುಸಾರ ನನಗೆ ಸ್ವಕೀಯಜನರಾಗಿರುವರು. ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತ ಇವರಿಗೆ ಹೆಚ್ಚಾದ ಕೀರ್ತಿಘನಮಾನಗಳನ್ನುಂಟು ಮಾಡುವೆನು ಹಾಗು ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಸರ್ವೇಶ್ವರನಿಗೆ ಮೀಸಲಾದ ಜನರಾಗಲು ಒಡಂಬಟ್ಟಿದ್ದಾರೆ,’ ಎನ್ನುವರು,” ಎಂದು ಹೇಳಿದನು.

ಕೀರ್ತನೆ 119:1-2, 4-5, 7-8

ಶ್ಲೋಕ ಪ್ರಭುವಿನ ಶಾಸ್ರ್ತಾನುಸಾರ ನಡೆಸುವವರು ಧನ್ಯರು

ಶುಭ ಸಂದೇಶ ಮತ್ತಾಯ 5:43-48
ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು’ ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ. ನಾನು ಹೇಳುವುದನ್ನು ಗಮನಿಸಿರಿ; ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ. ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ. ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕ ವಸೂಲಿಮಾಡುವವರೂ ಹಾಗೆ ಮಾಡುವುದಿಲ್ಲವೇ? ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯಜನರೂ ಹಾಗೆ ಮಾಡುತ್ತಾರಲ್ಲವೇ? ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ.”


ಮನಸ್ಸಿಗೊಂದಿಷ್ಟು : ’ಶತ್ರುವಿಗಾಗಿ  ಪ್ರೀತಿಸಿ’ ಎಂದ ಯೇಸು ’ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ’ ಎನ್ನುತ್ತಾ ಮತ್ತೊಂದು ಕಠಿಣವಾದ ಮೆಟ್ಟಿಲನ್ನು ಏರಲು ಹೇಳುತ್ತಿದ್ದಾರೆಅದು ಕಠಿಣ ಎನಿಸಿದರೆ ಅವರ ಮುಂದಿನ ಮಾತು ನಮ್ಮ ಕಣ್ಣು ತೆರೆಸಬೇಕುಪಾಪಿ ಪುಣ್ಯವಂತರೆನ್ನದೆ ಎಲ್ಲರ ಮೇಲೆ ಬೆಳಕುಮಳೆ ಸುರಿಸುವ ದೇವರ ಕಾರುಣ್ಯದ ಒಂದಷ್ಟು ಭಾಗವಾದರೂ ನಮ್ಮ ಹೃದಯಕ್ಕೆ ಬರಲು ನಾವು ಅವಕಾಶ ಮಾಡಿಕೊಡಬೇಕಾಗಿದೆ.

ಪ್ರಶ್ನೆ ನಮ್ಮ ಶತ್ರುಗಳನ್ನು ಪ್ರೀತಿಸುವುದು ಕಷ್ಟವೋಅವರಿಗಾಗಿ ಪ್ರಾರ್ಥಿಸಿವುದು ಹೆಚ್ಚು ಕಷ್ಟವೋ?

ಪ್ರಭುವೇ,
ಮಿತ್ರರಿಗಿಂತ ಶತ್ರುಗಳೇ ಹೆಚ್ಚು
ನಮ್ಮ ಆಲೋಚನೆಗಳಲ್ಲಿರಲು
ಅವರ ಪ್ರೀತಿಸಿ ಪ್ರಾರ್ಥಿಸಿ
ನಿಮ್ಮಂತೆ ಪರಿಪೂರ್ಣರಾಗಲು
ಅರಿವಿನ ಬೆಳಕಾಗಿ ನನ್ನಲ್ಲಿ ಬನ್ನಿ

ಒಲವಿನ ಮಳೆಯನ್ನು ತನ್ನಿ

23.02.24 - "‘ಮೂರ್ಖ’ ಎಂದು ಮೂದಲಿಸುವವನು ನರಕಾಗ್ನಿಗೆ ಗುರಿಯಾಗುವನು"

ಮೊದಲನೇಯ ವಾಚನ : ಯೆಜಿಕಿಯೇಲ 18:21-28   
      
ಆದರೆ ದುಷ್ಟನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟು, ನನ್ನ ಸಕಲವಿಧಿಗಳನ್ನು ಕೈಗೊಂಡು, ನ್ಯಾಯನೀತಿಗಳನ್ನು ನಡೆಸಿದರೆ ಸಾಯನು; ಖಂಡಿತ ಜೀವಿಸುವನು. ಅವನು ಮಾಡಿದ ಯಾವ ಅಪರಾಧವೂ ಅವನ ಲೆಕ್ಕಕ್ಕೆ ಸೇರದು. ಅವನು ಮಾಡುತ್ತಿರುವ ಸದ್ಧರ್ಮದಿಂದಲೇ  ಅವನು ಜೀವಿಸುವನು. ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ -  ದುಷ್ಟನ ಸಾವಿನಲ್ಲಿ ನನಗೆ ಲವಲೇಶವಾದರೂ ಸಂತೋಷವಿಲ್ಲ. ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. ಆದರೆ ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು, ಅಧರ್ಮಮಾಡಿ, ದುಷ್ಟನು ನಡೆಸುವ ದುರಾಚಾರಗಳನ್ನೆಲ್ಲಾ ನಡೆಸಿದರೆ, ಅವನು ಜೀವಿಸುವನೇ? ಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು, ಅವನು ಮಾಡುತ್ತಿರುವ ಪಾಪಾಪರಾಧಗಳಿಂದಲೇ ಸಾಯುವನು.“ಆದರೆ ನೀವು,‘ಸರ್ವೇಶ್ವರನ ಕ್ರಮ ಸರಿಯಲ್ಲ ಎಂದು ಹೇಳುತ್ತಿದ್ದೀರಿ; ಇಸ್ರಯೇಲ್ ವಂಶದವರೇ, ನನ್ನ ಕ್ರಮವು ಸರಿಯಲ್ಲವೆ? ನಿಮ್ಮ ಕ್ರಮವೇ ಸರಿಯಲ್ಲವಷ್ಟೆ. ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮದಿಂದಲೇ ಸಾಯಬೇಕಾಯಿತು. ದುಷ್ಟನು ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟು, ನ್ಯಾಯನೀತಿಗಳನ್ನು ನಡೆಸಿದರೆ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು. ಅವನು ಯೋಚಿಸಿ, ತಾನು ಮಾಡುತ್ತಿದ್ದ ಅಪರಾಧಗಳನ್ನೆಲ್ಲಾ ಬಿಟ್ಟದ್ದರಿಂದ ಸಾಯನು, ಖಂಡಿತ ಜೀವಿಸುವನು

ಕೀರ್ತನೆ : 130:1-2.3-4,5-7,7-8

ಶ್ಲೋಕ : ಪಾಪಗಳ ನೀ ಪಟ್ಟಿ ಮಾಡಿದೆಯಾದರೆ ಪ್ರಭೂ,
ನಿನ್ನ ಮುಂದೆ ಯಾರೂ ತಾನೆ ನಿಲ್ಲಬಲ್ಲರು ವಿಭೂ?

 ಶುಭಸಂದೇಶ : ಮತ್ತಾಯ 5:20-26



ಧರ್ಮಶಾಸ್ತ್ರಿಗಳ ಹಾಗೂ ಫರಿಸಾಯರ ಧರ್ಮನಿಷ್ಠೆಗಿಂತ ನಿಮ್ಮ ಧರ್ಮನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸಲಾರಿರಿ ಎಂಬುದು ನಿಶ್ಚಯ.”  “ ‘ನರಹತ್ಯೆ ಮಾಡಬೇಡ; ನರಹತ್ಯೆ ಮಾಡುವವನು ನ್ಯಾಯತೀರ್ಪಿಗೆ ಗುರಿಯಾಗುವನು ಎಂದು ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. ಆದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ; ತನ್ನ ಸೋದರನ ಮೇಲೆ (ನಿಷ್ಕಾರಣವಾಗಿ) ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯತೀರ್ಪಿಗೆ ಈಡಾಗುವನು; ತನ್ನ ಸೋದರನನ್ನು ತುಚ್ಛೀಕರಿಸುವವನು ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು;‘ಮೂರ್ಖ ಎಂದು ಮೂದಲಿಸುವವನು ನರಕಾಗ್ನಿಗೆ ಗುರಿಯಾಗುವನು. ಆದಕಾರಣ, ಬಲಿಪೀಠದ ಮುಂದೆ ದೇವರಿಗೆ ಕಾಣಿಕೆಯನ್ನು ಅರ್ಪಿಸಲಿರುವಾಗ, ನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಸ್ತಾಪವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು  ಬಲಿ ಪೀಠದ ಮುಂದೆಯೇ ಇಟ್ಟುಬಿಡು. ಮೊದಲು ಹೋಗಿ ನಿನ್ನ ಸೋದರನೊಡನೆ ಸಮಾಧಾನಮಾಡಿಕೊ ಅನಂತರ ಬಂದು ನಿನ್ನ ಕಾಣಿಕೆಯನ್ನು ಒಪ್ಪಿಸು.” “ನಿನ್ನ ಎದುರಾಳಿ ನಿನ್ನನ್ನು ನ್ಯಾಯಸ್ಥಾನಕ್ಕೆ ಎಳೆಯುವಾಗ ಮಾರ್ಗಮಧ್ಯದಲ್ಲೇ ಅವನೊಡನೆ ಬೇಗ ಸಮಾಧಾನಮಾಡಿಕೊ. ಇಲ್ಲದಿದ್ದರೆ, ಅವನು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು. ನ್ಯಾಯಾಧಿಪತಿ ನಿನ್ನನ್ನು ಪೊಲೀಸರ ವಶಕ್ಕೆ ಬಿಡಬಹುದು. ಅನಂತರ ನಿನಗೆ ಸೆರೆವಾಸ ಪ್ರಾಪ್ತವಾದೀತು! ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಬಿಡಿಕಾಸನ್ನೂ ಬಿಡದೆ ಎಲ್ಲವನ್ನೂ ತೆರಬೇಕಾಗುವುದು. ಇದನ್ನು ನೆನಪಿನಲ್ಲಿಡು.”

ಮನಸ್ಸಿಗೊಂದಿಷ್ಟು : ಕೋಪ, ಮನಸ್ತಾಪ, ಹಗೆ ನಮ್ಮ ಅಂತರಂಗವನ್ನೇ ಸುಟ್ಟು ನೆಮ್ಮದಿ ಇಲ್ಲದಂತೆ ಮಾಡಿಕೊಳ್ಳುವುದಕ್ಕಿಂತ ಅದನ್ನೇ ಮೊಳಕೆಯಲ್ಲಿ ಚಿವುಟುವ ಪರಿಹಾರವನ್ನು ಯೇಸು ನೀಡುತ್ತಾರೆ. ದೇವರ ಮುಂದೆ ನಿಲ್ಲುವಾಗ ನಮ್ಮ ಮನಸ್ಸು ತಿಳಿಯಾಗಿರಬೇಕಾದ ಅವಶ್ಯಕತೆಯನ್ನು ಇಲ್ಲಿ ಸ್ಪಷ್ಟಪಡಿಸುತ್ತಾರೆ. ಕಠಿಣ ಆದರೆ ನಿಜಕ್ಕೂ ಫಲದಾಯಕವಾದ ಪರಿಹಾರವಿದು.

ಪ್ರಶ್ನೆ : ನಮ್ಮಲ್ಲಿನ ಮನಸ್ತಾಪಗಳು ನಮ್ಮನ್ನು ನೆಮ್ಮದಿಯಾಗಿ ಬದುಕಲು ಬಿಟ್ಟಿವಿಯೇ?

ಪ್ರಭುವೇ,
ನನ್ನೊಳಗಿನ ಹಗೆತನ ಕೋಪ
ನನ್ನ ಬಾಳಿಗಾಗಿದೆ ಶಾಪ
ಅಂತರಂಗದ ನನ್ನೀ ಕದನ
ನಿನ್ನ ಕೃಪೆಯಲ್ಲಿ ಕಾಣಲಿ ಶಮನ
-ಚಿತ್ತ

22.02.24 - ಯೋನ್ನನ ಮಗ ಸಿಮೋನನೇ, ನೀನು ಧನ್ಯ!




ಮೊದಲನೆಯ ವಾಚನ: 1 ಪೇತ್ರ 5:1-4

                                      

ನನ್ನ ಜೊತೆ ಹಿರಿಯರೇ, ಕ್ರಿಸ್ತ ಯೇಸುವಿನ ಮರಣ ಯಾತನೆಯನ್ನು ಕಣ್ಣಾರೆ ಕಂಡವನೂ ಮುಂದೆ ಪ್ರತ್ಯಕ್ಷವಾಗುವ ಮಹಿಮೆಯಲ್ಲಿ ಭಾಗಿಯಾಗಿರುವವನೂ ಸಭಾಪ್ರಮುಖನೂ ಆದ ನಾನು ನಿಮ್ಮಲ್ಲಿ ಪ್ರಮುಖರಾದ ಇತರರನ್ನು ಪ್ರೋತ್ಸಾಹಿಸಿ ವಿನಂತಿಸುವುದೇನೆಂದರೆ: ನನ್ನ ಜೊತೆ ಹಿರಿಯರೇ, ದೇವರು ನಿಮಗೆ ವಹಿಸಿಕೊಟ್ಟಿರುವ ಮಂದೆಯನ್ನು ಕಾಯಿರಿ. ಕಡ್ಡಾಯದಿಂದಲ್ಲ, ದೇವರ ಚಿತ್ತಾನುಸಾರ ಅಕ್ಕರೆಯಿಂದ ಕಾಯಿರಿ. ದ್ರವ್ಯದ ದುರಾಶೆಯಿಂದಲ್ಲ, ಸೇವಾಸಕ್ತಿಯಿಂದ ಕಾಯಿರಿ. ನಿಮ್ಮ ಪಾಲನೆಗೆ ಒಳಗಾಗಿರುವವರ ಮೇಲೆ ದರ್ಪದಿಂದ ದೊರೆತನಮಾಡದೆ ದೇವರ ಮಂದೆಗೆ ಆದರ್ಶ ಮಾದರಿಗಳಾಗಿರಿ. ಆಗ ಮಾತ್ರ, ಪ್ರಧಾನ ಕುರಿಗಾಹಿ ಪ್ರತ್ಯಕ್ಷನಾಗುವಾಗ ಮಲಿನವಾಗದ ಮಹಿಮಾನ್ವಿತ ಜಯಮಾಲೆಯನ್ನು ಪಡೆಯುವಿರಿ.

ಕೀರ್ತನೆ 23:1-6
ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ನನಗೆ, ಕುಂದುಕೊರತೆಗಳೆಲ್ಲಿಯವು ಎನಗೆ.

ಪ್ರಭು ಕುರಿಗಾಹಿಯಾಗಿರಲು ನನಗೆ /
ಕುಂದುಕೊರತೆಗಳೆಲ್ಲಿಯವು ಎನಗೆ? // ಹಸಿರುಗಾವಲುಗಳಲೆನ್ನ ತಂಗಿಸುವನು /
ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು //

ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ |
ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ ||

ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು,
ಅಂಜೆನು ಕೇಡಿಗೆ | ನಿನ್ನ ಕುರಿಗೋಲು, ಊರುಗೋಲು, ಧೈರ್ಯವನು ತರುವುದೆನಗೆ | ಕಾಣೆನೆಂದಿಗೂ ನಾ ದಿಗಿಲನು,
ನೀನಿರಲು ನನ್ನೊಂದಿಗೆ //

ಸಜ್ಜುಗೊಳಿಸುವೆ ನೀ ಶತ್ರುಗಳ
ಕಣ್ಮುಂದೆಯೆ ನನಗೌತಣವನು //
ಹಚ್ಚುವೆ ತಲೆಗೆ ತೈಲವನು,
ತುಂಬಿತುಳುಕಿಸುವೆ ಪಾನಪಾತ್ರೆಯನು //

ಶುಭಶಾಂತಿಯಿಂದ ನಾ
ಬಾಳುವೆ ಜೀವಮಾನವೆಲ್ಲ /
ದೇವಮಂದಿರದಲಿ ನಾ
ವಾಸಿಸುವೆ ಚಿರಕಾಲವೆಲ್ಲ //

ಶುಭಸಂದೇಶ: ಮತ್ತಾಯ 16:13-19

ಆ ಕಾಲದಲ್ಲಿ ಯೇಸು 'ಫಿಲಿಪ್ಪನ ಸೆಜರೇಯ' ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ? ಎಂದು ಕೇಳಿದರು. ಅದಕ್ಕೆ ಶಿಷ್ಯರು, ಸ್ನಾನಿಕ ಯೊವಾನ್ನ', ಎಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರು, 'ಎಲೀಯನು' ಎನ್ನುತ್ತಾರೆ. 'ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು,' ಎಂಬುದು ಇನ್ನೂ ಕೆಲವರ ಅಭಿಪ್ರಾಯ, ಎಂದು ಉತ್ತರ ಕೊಟ್ಟರು. ಆಗ ಯೇಸು, ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ? ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, ಅಭಿಷಿಕ್ತರಾದ ಲೋಕೋದ್ಧಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ, ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತಪಡಿಸಿದ್ದು ನರಮಾನವ ಶಕ್ತಿಯಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ. ನಾನು ನಿನಗೆ ಹೇಳುತ್ತೇನೆ, ಕೇಳು: ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತಿಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು.

21.02.24 - "ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ"

ಮೊದಲನೇ ವಾಚನ: ಯೋನ 3:1-10


ಯೋನನಿಗೆ ಸರ್ವೇಶ್ವರಸ್ವಾಮಿಯ ವಾಣಿ ಪುನಃ ಕೇಳಿಸಿತು: “ಎದ್ದು ಮಹಾನಗರವಾದ ನಿನೆವೆಗೆ ಹೋಗು. ನಾನು ನಿನಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿಗಳಿಗೆ ಸಾರು,” ಎಂದಿತು. ಸ್ವಾಮಿಯ ಆಜ್ಞಾನುಸಾರ ಯೋನನು ನಿನೆವೆಗೆ ಹೋದನು. ಅದೊಂದು ವಿಸ್ತಾರವಾದ ನಗರ. ಅದನ್ನು ಹಾದು ಹೋಗಲು ಮೂರು ದಿನಗಳು ಹಿಡಿಯುತ್ತಿತ್ತು. ನಗರವನ್ನು ಪ್ರವೇಶಿಸಿ ಒಂದು ದಿನದ ಪ್ರಯಾಣ ಮಾಡಿದ ನಂತರ ಯೋನನು ಸ್ವಾಮಿಯ ಸಂದೇಶವನ್ನು ಸಾರುತ್ತಾ, “ಜನರೇ ಕೇಳಿ: ನಿಮ್ಮ ನಗರ ನಲವತ್ತು ದಿನಗಳಲ್ಲಿ ನಾಶವಾಗುವುದು,” ಎಂದನು. ಆ ನಗರದ ನಿವಾಸಿಗಳು ದೇವರ ಸಂದೇಶವನ್ನು ನಂಬಿದರು. ಪ್ರತಿಯೊಬ್ಬನೂ ಉಪವಾಸ ಕೈಗೊಳ್ಳಬೇಕೆಂದು ನಿರ್ಧರಿಸಿದರು. ಹಿರಿಯರು ಮೊದಲುಗೊಂಡು ಕಿರಿಯರವರೆಗೆ – ಎಲ್ಲರೂ ಮನಃಪರಿವರ್ತನೆಯ ಚಿಹ್ನೆಯಾಗಿ ಗೋಣಿ ತಟ್ಟನ್ನು ಉಟ್ಟುಕೊಂಡರು. ಈ ಸಂಗತಿ ನಿನೆವೆಯ ಅರಸನ ಕಿವಿಗೆ ಬಿದ್ದಿತು. ಅವನು ಸಿಂಹಾಸನದಿಂದ ಇಳಿದು, ತನ್ನ ರಾಜವಸ್ತ್ರಗಳನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತು ಕೊಂಡನು. ಕೂಡಲೇ ತನ್ನ ಪ್ರಜೆಗಳಿಗೆ ಈ ರಾಜಾಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿದನು: “ಅರಸನ ಹಾಗೂ ಆತನ ಆಪ್ತ ಪ್ರಮುಖರ ಆಜ್ಞೆಯಿದು: ಜನರಾಗಲೀ, ದನಕರುಗಳಾಗಲೀ, ಕುರಿಮೇಕೆಗಳಾಗಲೀ, ಯಾರೂ ಏನನ್ನೂ ತಿನ್ನಬಾರದು, ಕುಡಿಯಲೂಬಾರದು. ಎಲ್ಲ ಜನರೂ ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು: ಪ್ರಾಣಿಗಳಿಗೂ ಹೊದಿಸಬೇಕು. ದೇವರನ್ನು ಶ್ರದ್ಧೆಯಿಂದ ಪ್ರಾರ್ಥಿಸಬೇಕು. ಎಲ್ಲರೂ ದೌರ್ಜನ್ಯವನ್ನು ತ್ಯಜಿಸಿ, ಹಿಂಸಾಚಾರವನ್ನು ಕೈಬಿಡಬೇಕು. ಹೀಗೆ ಮಾಡಿದ್ದೇ ಆದರೆ, ದೇವರು ಒಂದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ತಮ್ಮ ಉಗ್ರ ಕೋಪವನ್ನು ತಡೆದಾರು, ನಾವು ನಾಶವಾಗದೆ ಉಳಿದೇವು.” ಆ ಜನರು ಮಾಡಿದುದೆಲ್ಲವನ್ನು ದೇವರು ಗಮನಿಸಿದರು. ತಮ್ಮ ದುರ್ನಡತೆಯನ್ನು ಜನರು ಕೈಬಿಟ್ಟದ್ದನ್ನು ಕಂಡು, ಮನ ಮರುಗಿ ಅವರಿಗೆ ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ತಡೆ ಹಿಡಿದರು.

ಕೀರ್ತನೆ: 51:3-4, 12-13, 18-19

ಶ್ಲೋಕ: ನೊಂದ ಬೆಂದ ಮನವನಾತ ಒಲ್ಲೆಯೆನನು.

ಶುಭಸಂದೇಶ: ಲೂಕ 11:29-32

ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು: “ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತ ಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು. “ದೈವ ತೀರ್ಪಿನ ದಿನ ದಕ್ಷಿಣ ದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ, ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. 

ಮನಸ್ಸಿಗೊಂದಿಷ್ಟು :  ಪ್ರವಾದಿ ಯೋನನ ಮಾತಿಗೆ ಬೆಲೆ ಕೊಟ್ಟು ಪಶ್ಚಾತ್ತಾಪಪಟ್ಟ ನೆನೆವೆ ನಗರ ಒಂದೆಡೆ , ದೇವರ ಜ್ಞಾನವನ್ನು ಸೊಲೋಮೋನನಲ್ಲಿ ಕಾಣಲು ಬಂದ ರಾಣಿಯ ಚರಿತ್ರೆ ಇನ್ನೊಂದೆಡೆ. ಇದರ ನಡುವೆ ದೇವರ ಪುತ್ರನೇ ಜೊತೆಯಲ್ಲಿದ್ದರೂ ನಂಬದ, ಸಂತೋಷಿಸದ, ಅವರ ಮಾತಿಗೆ ಬೆಲೆ ಕೊಡದ, ಪಾಪಕ್ಕೆ ಪಶ್ಚಾತ್ತಾಪ ಪಡದ ಜನರ ಬಗ್ಗೆ ಯೇಸು ನಿರಾಸೆಯಿಂದ ಮಾತಾಡುತ್ತಾರೆ. ನಾವೂ ಕೂಡ ಯೇಸುವನ್ನು ಆ ನಿರಾಸೆಗೆ ತಳ್ಳದಂತೆ ನಡೆದುಕೊಳ್ಳಬೇಕಾಗಿದೆ. 

ಪ್ರಶ್ನೆ : ಮೂರು ದಿನ ಮೀನಿನ ದೇಹದಲ್ಲಿದ್ದು ಹೊರ ಬಂದ ಯೋನನಿಗಿಂತ , ಅಪಾರ ಜ್ಞಾನಿಯಾದ ಸೊಲೋಮೋನನಿಗಿಂತ ಶ್ರೇಷ್ಟರೂ, ನಮ್ಮ ಹೃದಯದಲ್ಲಿ ನೆಲಸಲು ಹಾತೊರೆಯುತ್ತಿರುವವರೂ ಆದ ಯೇಸುವಿಗೆ ನಮ್ಮ ಪ್ರತಿಕ್ರಿಯೆ ಏನು?

ಪ್ರಭುವೇ,
ನನ್ನ ಪ್ರತಿ ಉಸಿರೂ 
ನಿನ್ನ ಕರುಣೆಯ ಸಂಕೇತ
ಈ ನನ್ನ ಜೀವ ಭಾವ
ನಿನ್ನ ತ್ಯಾಗದೇ ನಿರ್ಮಿತ  
ಕೇಳಲಾರೆ ಬೇರಾವ ಅದ್ಭುತ
ನನ್ನೊಳಗಿರು ನೀ ಓ ಜೀವದಾತ
-ಚಿತ್ತ

20.02.24 - "ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು"

ಮೊದಲನೇ ವಾಚನ: ಯೆಶಾಯ 55:10-11


ಸ್ವಾಮಿ ಸರ್ವೇಶ್ವರ ಹೀಗೆನ್ನುತ್ತಾರೆ: ಮಳೆಯೂ ಹಿಮವೂ ಆಕಾಶಮಂಡಲದಿಂದಿಳಿದು ಬಂದು ತೋಯಿಸಿ, ಹಸಿರುಗೊಳಿಸಿ, ಹುಲುಸು ಮಾಡುತ್ತವೆ ಭೂಮಿಯನು. ಬಿತ್ತುವವನಿಗೆ ಬೀಜ, ಉಣ್ಣುವವನಿಗೆ ಆಹಾರ ಒದಗಿಸದೆ, ಹಿಂದಿರುಗಿ ಬರುವುದಿಲ್ಲ ಅವು ಸುಮ್ಮನೆ ಬಂದಲ್ಲಿಗೆ. ಅಂತೆಯೇ, ನನ್ನ ಬಾಯಿಂದ ಹೊರಡುವ ಮಾತು ನನ್ನ ಇಷ್ಟಾರ್ಥವನು ನೆರವೇರಿಸಿದ ಹೊರತು, ನನ್ನ ಉದ್ದೇಶವನು ಕೈಗೂಡಿಸಿದ ಹೊರತು, ನನ್ನ ಬಳಿಗೆ ವ್ಯರ್ಥವಾಗಿ ಹಿಂದಿರುಗದು.

ಕೀರ್ತನೆ: 34:4-5, 5-7, 16-17, 18-19
ಶ್ಲೋಕ: ಸಜ್ಜನನಿಗೊದುವ ಸಂಕಟಗಳು ವಿಪರೀತ, ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ

1. ಬನ್ನಿ, ಕೊಂಡಾಡುವ ಪ್ರಭು ದೇವನನು|
ಘನಪಡಿಸೋಣ ಆತನ ಶ್ರೀ ನಾಮವನು||
ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು|
ಭಯಭೀತಿಯಿಂದೆನ್ನನು ಮುಕ್ತನಾಗಿಸಿಹನು||


2. ಆತನತ್ತ ತಿರುಗಿದ ಮುಖ ಅರಳುವುದು|
ಲಜ್ಜೆಯಿಂದೆಂದಿಗು ಕುಂದಿ ಹೋಗದು||
ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು|
ಸರ್ವಾಪತ್ತಿನಿಂದವನು ಮುಕ್ತಗೊಂಡನು||

3. ದುರ್ಜನರಿಗಾದರೋ ಪ್ರಭು ವಿಮುಖನು|
ಅವರ ಹೆಸರನು ಧರೆಯಿಂದ ಅಳಿಸುವನು||
ಸಜ್ಜನರನು ಪ್ರಭು ಕಟಾಕ್ಷಿಸುವನು|
ಅವರ ಮೊರೆಗಾತ ಕಿವಿಗೊಡುವನು||

4. ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ|
ನೆರವೀವನವರ ಕಷ್ಟ ನಿವಾರಣೆಗೆ||
ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ|
ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ||


ಶುಭಸಂದೇಶ: ಮತ್ತಾಯ 6:7-15

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು:  "ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸುಗುಟ್ಟಬೇಡ. ತಮ್ಮ ಪ್ರಾರ್ಥನೆ ದೀರ್ಘವಾದಷ್ಟೂ ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ. ನೀವು ಅವರಂತೆ ಆಗಬೇಡಿ. ನಿಮ್ಮ ಅಗತ್ಯಗಳೇನೆಂದು ನೀವು ಕೇಳುವುದಕ್ಕೆ ಮೊದಲೇ ನಿಮ್ಮ ತಂದೆಗೆ ಗೊತ್ತಿದೆ. ಆದುದರಿಂದ ಹೀಗೆಂದು ಪ್ರಾರ್ಥನೆ ಮಾಡಿ: "ಸ್ವರ್ಗದಲ್ಲಿರುವ ಓ ನಮ್ಮ ತಂದೆಯೇ, ನಿಮ್ಮ ಪವಿತ್ರ ನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ; ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಜಗತ್ತಿನಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಆಹಾರವನ್ನು ನಮಗಿಂದು ಕೊಡಿ. ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿರಿ. "ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು. ಜನರನ್ನು ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸರು."


ಮನಸ್ಸಿಗೊಂದಿಷ್ಟು : ಪರಲೋಕ ಪ್ರಾರ್ಥನೆಯ ಮೊದಲ ಭಾಗವು ದೇವರಿಗೆ ಸ್ತೋತ್ರ ಸಲ್ಲಿಸುತ್ತಾ ಅವರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡರೆ, ಎರಡನೆಯ ಭಾಗವು ಅವಶ್ಯಕತೆಗಳತ್ತ ಗಮನ ಹರಿಸುತ್ತದೆ. ದೇವರಿಗೆ ಸಲ್ಲಬೇಕಾದ ಎಲ್ಲ ಸ್ತುತಿ ಗೌರವಗಳು ಸಂದರೆ ನಮ್ಮ ಬಾಳು ಸುಂದರವಾಗಿ, ನಮ್ಮ ಅವಶ್ಯಕತೆಗಳು ದೇವರ ಅನುಗ್ರಹದಿಂದ  ನೆರವೇರುತ್ತದೆ. ಕ್ಷಮೆ ನಾವು ಕೊಟ್ಟಂತೆ ನಮಗೆ ದೊರಕುತ್ತದೆ.    

ಪ್ರಶ್ನೆ : ಪರಲೋಕ ಪ್ರಾರ್ಥನೆ ನಮ್ಮ ಬಾಳಿಗೆಷ್ಟು ಪ್ರಸ್ತುತ?

ಪ್ರಭುವೇ,
ನೀವೇ ಕಲಿಸಿಕೊಟ್ಟ ಈ ಪ್ರಾರ್ಥನೆ 
ಆಗಲಿ ನನ್ನ ಅನುದಿನದ  ನಿವೇದನೆ
ನನ್ನೀ  ಹೃದಯದಲ್ಲಿ ನಿಮ್ಮ ಚಿತ್ತ
ನೆರವೇರುತ್ತ ಸಾಗುತ್ತಿರಲಿ  ನಿಮ್ಮತ್ತ
-ಚಿತ್ತ

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...