11.09.23 -"ನಿನ್ನ ಕೈಯನ್ನು ಚಾಚು"

 ಮೊದಲನೇ ವಾಚನ: ಕೊಲೊಸ್ಸೆಯರಿಗೆ: 1:24-2:3


ಸಹೋದರರೇ, ಪೌಲನೆಂಬ ನಾನು ಈ ಸುವಾರ್ತೆಗೆ ಸೇವಕನಾದೆನು. ಈಗ ನಿಮಗೋಸ್ಕರ ಸಂಕಟಪಡುವುದರಲ್ಲಿ ನನಗೆ ಸಂತೋಷವಿದೆ. ಕ್ರಿಸ್ತ ಯೇಸು ತಮ್ಮ ಶರೀರವಾದ ಧರ್ಮಸಭೆಗೋಸ್ಕರ ಅನುಭವಿಸಬೇಕಾದ ಯಾತನೆಗಳಲ್ಲಿ ಉಳಿದದ್ದನ್ನು ನಾನು ನನ್ನ ದೇಹದಲ್ಲಿ ಅನುಭವಿಸಿ ಪೂರ್ಣಗೊಳಿಸುತ್ತಿದ್ದೇನೆ. ದೇವರು ನನ್ನನ್ನು ಧರ್ಮಸಭೆಯ ದಾಸನನ್ನಾಗಿ ನೇಮಿಸಿದ್ದಾರೆ. ನಿಮ್ಮ ಹಿತಕ್ಕಾಗಿ ಒಂದು ಮಹತ್ವದ ಕಾರ್ಯವನ್ನು ನನಗೆ ವಹಿಸಿರುತ್ತಾರೆ. ಯುಗಯುಗಾಂತರಗಳಿಂದಲೂ ತಲತಲಾಂತರಗಳಿಂದಲೂ ನಿಗೂಢವಾಗಿದ್ದ ರಹಸ್ಯವನ್ನು, ಅಂದರೆ ತಮ್ಮ ವಾಕ್ಯವನು, ಈಗ ತಮ್ಮ ಜನರಿಗೆ ದೇವರು ಪ್ರಕಟಿಸಿದ್ದಾರೆ. ಈ ರಹಸ್ಯ ಎಷ್ಟು ಶ್ರೀಮಂತವಾದುದು, ಎಷ್ಟು ಮಹಿಮಾನ್ವಿತವಾದುದು ಎಂಬುದನ್ನು ಎಲ್ಲಾ ಜನಾಂಗಗಳಿಗೂ ತಿಳಿಸಲು ದೇವರು ಇಚ್ಛಿಸಿದರು. ಕ್ರಿಸ್ತ ಯೇಸು ನಿಮ್ಮಲ್ಲಿದ್ದು ಮುಂದಿನ ಮಹಿಮೆಯ ನಿರೀಕ್ಷೆಗೆ ಆಧಾರವಾಗಿದ್ದಾರೆ ಎಂಬುದೇ ಈ ರಹಸ್ಯ. ನಾವು ಸಾರುತ್ತಲಿರುವುದೂ  ಯೇಸುಕ್ರಿಸ್ತರನ್ನೇ. ಎಲ್ಲರಿಗೂ ಬುದ್ಧಿ ಹೇಳುತ್ತಾ ಎಲ್ಲರಿಗೂ ಪೂರ್ಣಜ್ಞಾನವನ್ನು ಉಪದೇಶಿಸುತ್ತಾ ದೇವರ ಮುಂದೆ ಎಲ್ಲರನ್ನು ಕ್ರಿಸ್ತ ಯೇಸುವಿನಲ್ಲಿ ಪರಿಣತರನ್ನಾಗಿ ಊರ್ಜಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ನನ್ನನ್ನು ಚೇತನಗೊಳಿಸುತ್ತಿರುವ ಯೇಸುಕ್ರಿಸ್ತರ ಶಕ್ತಿಯಿಂದ ಈ ಗುರಿಯನ್ನು ಸಾಧಿಸಲು ಶ್ರಮವಹಿಸಿ ಹೋರಾಡುತ್ತಿದ್ದೇನೆ. ನಿಮಗಾಗಿಯೂ ಲವೊದಿಕೀಯರಿಗಾಗಿಯೂ ಹಾಗೂ ನನ್ನ ನೇರ ಪರಿಚಯ ಇಲ್ಲದವರಿಗಾಗಿಯೂ ನಾನು ಎಷ್ಟು ಶ್ರಮಿಸುತ್ತಿದ್ದೇನೆಂಬುದನ್ನು ತಿಳಿಯಬಯಸುತ್ತೇನೆ. ಇದರಿಂದ ಅವರು ಅಂತರಂಗದಲ್ಲಿ ಉತ್ತೇಜನಗೊಂಡು ಪ್ರೀತಿಯಲ್ಲಿ ಒಂದಾಗಬೇಕು; ನೈಜ ಅರಿವಿನಿಂದ ಅವರಿಗೆ ಪೂರ್ಣಜ್ಞಾನ ಲಭಿಸಬೇಕು ಎಂಬುದೇ ನನ್ನ ಆಶಯ. ಆಗ ಅವರು ದೇವರ ರಹಸ್ಯವನ್ನು, ಅಂದರೆ ಕ್ರಿಸ್ತ ಯೇಸುವನ್ನು ಅರಿತುಕೊಳ್ಳಲು ಸಾಧ್ಯ. ಕ್ರಿಸ್ತ ಯೇಸುವಿನಲ್ಲಿಯೇ ಜ್ಞಾನ, ವಿವೇಕ ಎಂಬ ಸಿರಿಸಂಪತ್ತು ಅಡಗಿದೆ.

ಕೀರ್ತನೆ: 62:6-7,9
ಶ್ಲೋಕ: ಭದ್ರವಾದ ಬಂಡೆ, ನನಗಾಶ್ರಯ ದೇವನೇ

ಆತನೆನಗೆ ದುರ್ಗ, ರಕ್ಷಕ, ಶರಣು I
ನಾನೆಂದಿಗೂ ಕದಲಿ ಬೀಳೆನು II
ಉದ್ಧಾರಕೆ, ಗೌರವಕೆ ಎನಗಾಧಾರ ದೇವನೆ I
ಭದ್ರವಾದ ಬಂಡೆ, ನನಗಾಶ್ರಯ ಆತನೆ II

ನರಮಾನವರೆಲ್ಲರು ಬರೇ ಉಸಿರು I
ನರಾಧಿಪತಿಗಳು ತೀರಾ ಹುಸಿಯು I
ತ್ರಾಸಿನಲಿ ತೂಗಲು ಅವರೆಲ್ಲರು I
ಉಸಿರಿಗಿಂತಲೂ ಅತ್ಯಂತ ಹಗುರು II


ಶುಭಸಂದೇಶ: ಲೂಕ 6:6-11


ಒಂದು ಸಬ್ಬತ್ ದಿನ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಹೋಗಿ ಉಪದೇಶ ಮಾಡುತ್ತಿದ್ದರು. ಅಲ್ಲಿ ಬಲಗೈ ಬತ್ತಿಹೋಗಿದ್ದ ಒಬ್ಬಾತ ಇದ್ದನು. ಅವನನ್ನು  ಸಬ್ಬತ್ ದಿನದಲ್ಲಿ ಸ್ವಸ್ಥಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪು ಹೊರಿಸಬಹುದೆಂಬ ಉದ್ದೇಶದಿಂದ ಧರ್ಮಶಾಸ್ತ್ರಿಗಳು ಮತ್ತು ಫರಿಸಾಯರು ಹೊಂಚುಹಾಕಿ ನೋಡುತ್ತಿದ್ದರು. ಯೇಸು ಅವರ ಆಲೋಚನೆಗಳನ್ನರಿತು ಬತ್ತಿದ ಕೈಯುಳ್ಳವನಿಗೆ, "ಬಂದು ಇಲ್ಲಿ ನಿಲ್ಲು," ಎಂದರು. ಅವನು ಎದ್ದು ಬಂದು ನಿಂತನು. ಆಗ ಯೇಸು ಅವರಿಗೆ, "ನಾನು ನಿಮಗೊಂದು ಪ್ರಶ್ನೆ ಹಾಕುತ್ತೇನೆ: ಸಬ್ಬತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ?" ಎಂದರು. ಆನಂತರ ಸುತ್ತಲೂ ಇದ್ದವರೆಲ್ಲರನ್ನು ದಿಟ್ಟಿಸಿ ನೋಡಿ ಬತ್ತಿದ ಕೈಯುಳ್ಳವನ ಕಡೆ ತಿರುಗಿ, "ನಿನ್ನ ಕೈಯನ್ನು ಚಾಚು," ಎಂದರು. ಅವನು ಚಾಚಿದ. ಕೈ ಸ್ವಸ್ಥವಾಯಿತು. ಅವರಾದರೋ ಕ್ರೋಧಭರಿತರಾಗಿ, ಯೇಸುವಿಗೆ ಏನಾದರೂ ಮಾಡಬೇಕೆಂದು ತಮ್ಮತಮ್ಮೊಳಗೆ ಸಂಚುಮಾಡಿದರು.

10.09.23 - "ಎಲ್ಲಿ ಇಬ್ಬರು, ಮೂವರು ನನ್ನ ನಾಮದಲ್ಲಿ ಸೇರಿರುತ್ತಾರೋ, ಅಲ್ಲಿ ನಾನು ಅವರ ಮಧ್ಯೆ ಇರುತ್ತೇನೆ.”

ಮೊದಲನೇ ವಾಚನ: ಯೆಜೆಕಿಯೇಲ 33:7-9

ಕರ್ತರು ನನಗೆ ಇಂತೆಂದರು: “ನರಪುತ್ರನೇ, ನಾನು ನಿನ್ನನ್ನು ಇಸ್ರಯೇಲ್ ವಂಶದವರಿಗೆ ಕಾವಲುಗಾರನಾಗಿ ನೇಮಿಸಿದ್ದೇನೆ; ನೀನು ನನ್ನ ಬಾಯಿಂದ ಹೊರಡುವ ಮಾತನ್ನು ಕೇಳಿ, ನನ್ನ ದೂತನಾಗಿ ಅವರನ್ನು ಎಚ್ಚರಪಡಿಸು. ನಾನು ದುಷ್ಟನಿಗೆ - ‘ದುಷ್ಟನೇ, ನೀನು ಸತ್ತೇಸಾಯುವೆ’ ಎಂದು ನುಡಿಯುವಾಗ ನೀನು ಆ ದುಷ್ಟನನ್ನು ತನ್ನ ದುರ್ಮಾರ್ಗದಿಂದ ತಪ್ಪಿಸಲು ಅವನನ್ನು ಎಚ್ಚರಪಡಿಸದೆಹೋದರೆ ಅವನು ತನ್ನ ಅಪರಾಧದಿಂದಲೇ ಸಾಯಬೇಕಾಗುವುದು; ಅವನ ಮರಣಕ್ಕೆ ಹೊಣೆಯಾದ ನಿನಗೆ ಮುಯ್ಯಿತೀರಿಸುವೆನು. ಆದರೆ ನೀನು ದುಷ್ಟನನ್ನು ದುರ್ಮಾರ್ಗದಿಂದ ತಪ್ಪಿಸಲು ಅವನನ್ನು ಎಚ್ಚರಿಸಿದರೂ ಇವನು ಅದನ್ನು ಬಿಡದೆಹೋದರೆ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ.

ಕೀರ್ತನೆ: 95:1-2, 6-7, 8-9

ಶ್ಲೋಕ: ಪ್ರಭುವಿನ ಕರೆಗೆ ಕಿವಿಗೊಟ್ಟರೆನಿತೊ ಒಳ್ಳಿತು ನೀವೀಂದೇ

ಎರಡನೇ ವಾಚನ: ರೋಮನರಿಗೆ 13:8-10

ಸಹೋದರರೇ, ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ವಿಧವಾದ ಋಣವೂ ನಿಮಗಿರಬಾರದು. ಏಕೆಂದರೆ ಪರರನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನು ಪೂರ್ಣವಾಗಿ ನೆರವೇರಿಸಿದವನು. “ವ್ಯಭಿಚಾರ ಮಾಡಬೇಡ, ಕೊಲಬೇಡ, ಕಳಬೇಡ, ದುರಾಶೆ ಪಡಬೇಡ,” - ಈ ಮುಂತಾದ ಆಜ್ಞೆಗಳೆಲ್ಲವೂ “ನೀನು ನಿನ್ನನ್ನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನೂ ಪ್ರೀತಿಸು,” ಎಂಬ ಒಂದೇ ಆಜ್ಞೆಯಲ್ಲಿ ಅಡಗಿವೆ.ಪ್ರೀತಿಯು ಪರರಿಗೆ ಕೇಡು ಬಗೆಯದು. ಆದಕಾರಣ ಪ್ರೀತಿಯೇ ಧರ್ಮಶಾಸ್ತ್ರದ ಪೂರೈಕೆ.

ಶುಭಸಂದೇಶ: ಮತ್ತಾಯ 18:15-20


ಯೇಸು ತಮ್ಮ ಶಿಷ್ಯರಿಗೆ: “ನಿನ್ನ ಸೋದರನು ನಿನಗೆ ಅಪರಾಧಮಾಡಿದರೆ, ನೀನು ಹೋಗಿ ನೀವಿಬ್ಬರೇ ಇರುವಾಗ, ಅವನ ತಪ್ಪನ್ನು ಮನಗಾಣಿಸು. ಅವನು ನಿನಗೆ ಕಿವಿಗೊಟ್ಟರೆ ಅವನ ಸೋದರತ್ವವನ್ನು ನೀನು ಮತ್ತೆ ಗಳಿಸಿಕೊಂಡಂತಾಗುವುದು. ಒಂದು ವೇಳೆ, ಅವನು ನಿನಗೆ ಕಿವಿಗೊಡದೆಹೋದರೆ ಒಬ್ಬಿಬ್ಬರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು; ಹೀಗೆ ಇಬ್ಬರು ಅಥವಾ ಮೂವರು ಸಾಕ್ಷಿಗಳ ಸಮ್ಮುಖದಲ್ಲಿ ಪ್ರತಿಯೊಂದು ಮಾತೂ ಇತ್ಯರ್ಥವಾಗಲಿ. ಅವರಿಗೂ ಅವನು ಕಿವಿಗೊಡದೆಹೋದಲ್ಲಿ ಧರ್ಮಸಭೆಗೆ ತಿಳಿಸು. ಧರ್ಮಸಭೆಗೂ ಅವನು ಕಿವಿಗೊಡದೆಹೋದರೆ ಅವನನ್ನು ಧರ್ಮಭ್ರಷ್ಟನೆಂದು ಹಾಗೂ ಬಹಿಷ್ಕೃತನೆಂದು ಪರಿಗಣಿಸು. “ನೀವು ಇಹದಲ್ಲಿ ಏನನ್ನು ಬಂಧಿಸುತ್ತೀರೋ ಅದು ಪರದಲ್ಲೂ ಬಂಧಿಸಲಾಗುವುದು; ನೀವು ಇಹದಲ್ಲಿ ಏನನ್ನು ಬಿಚ್ಚುತ್ತೀರೋ ಅದು ಪರದಲ್ಲೂ ಬಿಚ್ಚಲಾಗುವುದು ಎಂದು ನಿಮಗೆ ಖಚಿತವಾಗಿ ಹೇಳುತ್ತೇನೆ.  “ಇನ್ನೂ ನಾನು ನಿಮಗೆ ಹೇಳುವುದು ಏನೆಂದರೆ: ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳುವ ಯಾವುದಾದರೊಂದು ವಿಷಯವಾಗಿ ಇಹಲೋಕದಲ್ಲಿ ಒಮ್ಮನಸ್ಸುಳ್ಳವರಾಗಿದ್ದರೆ, ಅದು ಸ್ವರ್ಗದಲ್ಲಿರುವ ನನ್ನ ತಂದೆಯಿಂದ ಅವರಿಗೆ ಕೈಗೂಡುತ್ತದೆ.  ಎಲ್ಲಿ ಇಬ್ಬರು, ಮೂವರು ನನ್ನ ನಾಮದಲ್ಲಿ ಸೇರಿರುತ್ತಾರೋ, ಅಲ್ಲಿ ನಾನು ಅವರ ಮಧ್ಯೆ ಇರುತ್ತೇನೆ.” ಎಂದರು.

ಸಂತ ಮರಿಯಮ್ಮನವರ ಹಳೆಯ ಗೀತೆಗಳ ಗೀತಗುಚ್ಛ


09.09.23 - "ನರಪುತ್ರನು ಸಬ್ಬತ್ತಿಗೆ ಒಡೆಯನಾಗಿದ್ದಾನೆ,"

 ಮೊದಲನೇ ವಾಚನ: ಕೊಲೊಸ್ಸೆಯರಿಗೆ 1:21-23


ಸಹೋದರರೇ, ಹಿಂದೆ ನೀವು ಆಚಾರವಿಚಾರಗಳಲ್ಲಿ ಕೆಟ್ಟವರಾಗಿದ್ದರಿಂದ ದೇವರ ವಿರೋಧಿಗಳಾಗಿದ್ದು ಅವರಿಂದ ದೂರವಿದ್ದೀರಿ. ಈಗಲಾದರೋ ಯೇಸುಕ್ರಿಸ್ತರ ದೈಹಿಕ ಮರಣದ ಫಲವಾಗಿ ನಿಮಗೂ ದೇವರಿಗೂ ಸಂಧಾನ ನಡೆದಿದೆ. ಹೀಗೆ ದೇವರು ನಿಮ್ಮನ್ನು ತಮ್ಮ ಸನ್ನಿಧಿಗೆ ಸೇರಿಸಿಕೊಳ್ಳಲು ನೀವು ಪವಿತ್ರರೂ ನಿಷ್ಕಳಂಕರೂ ದೋಷರಹಿತರೂ ಆಗಿರುವಂತೆ ಮಾಡಿದ್ದಾರೆ. ಇನ್ನು ನೀವು ವಿಶ್ವಾಸದಲ್ಲಿ ದೃಡವಾಗಿ ಮುನ್ನಡೆಯಬೇಕು. ಶುಭಸಂದೇಶವನ್ನು ಕೇಳಿದಾಗ ನೀವು ಹೊಂದಿದ  ಭರವಸೆಯನ್ನು ಕಳೆದುಕೊಳ್ಳದಂತೆ ಜಾಗರೂಕರಾಗಿರಬೇಕು. ಪೌಲನಾದ ನಾನು ಇದೇ ಶುಭಸಂದೇಶದ ಪ್ರಚಾರಕ. ಈ ಶುಭಸಂದೇಶವನ್ನು ಜಗತ್ತಿನಲ್ಲಿರುವ ಸರ್ವ ಸೃಷ್ಟಿಗೂ ಸಾರಲಾಗುತ್ತಿದೆ.

ಕೀರ್ತನೆ: 54:3-4, 6, 8  
ಶ್ಲೋಕ: ನನಗಿದೋ ದೇವನೇ ಸಹಾಯಕನು

ನನಗಿದೋ ದೇವನೆ ಸಹಾಯಕನು I
ರಕ್ಷಿಸೆನ್ನನು ದೇವ, ನಿನ್ನ ನಾಮ ಶಕ್ತಿಯಿಂದ I
ನ್ಯಾಯ ದೊರಕಿಸೆನಗೆ ನಿನ್ನ ಪರಾಕ್ರಮದಿಂದ II
ನನ್ನ ಪ್ರಾರ್ಥನೆಯನು ಆಲಿಸಯ್ಯಾ I
ನನ್ನ ಮಾತುಗಳಿಗೆ ಕಿವಿಗೊಡು ದೇವಾ II ಶ್ಲೋಕ

ನನಗಿದೋ ದೇವನೆ ಸಹಾಯಕನು I
ಸರ್ವಾಪತ್ತುಗಳಿಂದ ತಪ್ಪಿಸಿದೆ ಪ್ರಭು, ನನ್ನನು I
ಎಂತಲೆ ಸ್ವಂತ ಇಚ್ಛೆಯಿಂದ ಬಲಿಯನರ್ಪಿಸುವೆ ನಿನಗೆ I
ಧನ್ಯವಾದ ಪ್ರಭು, ನಿನ್ನ ಸರ್ವೋತ್ತಮ ನಾಮಕೆ II


ಶುಭಸಂದೇಶ: ಲೂಕ 6:1-5

ಒಂದು ಸಬ್ಬತ್ ದಿನ ಯೇಸುಸ್ವಾಮಿ, ಗೋದಿಯ ಹೊಲಗಳನ್ನು ಹಾದುಹೋಗುತ್ತಿದ್ದರು. ಅವರ ಶಿಷ್ಯರು ಕೆಲವು ತೆನೆಗಳನ್ನು ಕಿತ್ತು ಕೈಗಳಲ್ಲಿ ಹೊಸಕಿ ತಿನ್ನಲಾಂಭಿಸಿದರು.  ಅದನ್ನು ಕಂಡ ಫರಿಸಾಯರಲ್ಲಿ ಕೆಲವರು, "ಸಬ್ಬತ್ ದಿನದಲ್ಲಿ ನಿಷಿದ್ದವಾದುದನ್ನು ನೀವು ಮಾಡುವುದೇಕೆ?" ಎಂದು ಅವರನ್ನು ಆಕ್ಷೇಪಿಸಿದರು. ಅದಕ್ಕೆ ಯೇಸು, "ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂಬುದನ್ನು ನೀವು ಓದಿರಬೇಕಲ್ಲವೆ? ದಾವೀದನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ಬೇರೆ ಯಾರೂ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತೆಗೆದುಕೊಂಡು ತಿಂದುದಲ್ಲದೆ ತನ್ನ ಸಂಗಡಿಗರಿಗೂ ಕೊಟ್ಟನು ಅಲ್ಲವೆ? ನರಪುತ್ರನು ಸಬ್ಬತ್ತಿಗೆ ಒಡೆಯನಾಗಿದ್ದಾನೆ," ಎಂದು ಉತ್ತರಕೊಟ್ಟರು.

08.09.23 - “ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು ‘ಇಮ್ಮಾನುವೇಲ್’ ಎಂದು ಆತನಿಗೆ ಹೆಸರಿಡುವರು”

ದೇವಮಾತೆಯ ಮಹೋತ್ಸವ 

ಮೊದಲನೇ ವಾಚನ: ಮೀಕ 5:1-4

ಸಿಯೋನ್ ನಗರಿಯೇ, ನಿನ್ನ ಸೇನಾವ್ಯೂಹಗಳನ್ನು ಒಟ್ಟುಗೂಡಿಸು. ಇಗೋ, ಶತ್ರುಗಳು ನಮಗೆ ಮುತ್ತಿಗೆಹಾಕಿದ್ದಾರೆ. ಅವರು ಇಸ್ರಯೇಲಿನ ಅಧಿಪತಿಯ ಕೆನ್ನೆಗೆ ಕೋಲಿನಿಂದ ಹೊಡೆಯುವರು! ಎಫ್ರಾತದ ಬೆತ್ಲೆಹೇಮೇ, ಜುದೇಯದ ಕುಲಗಳಲ್ಲಿ ನೀನು ಅತಿಚಿಕ್ಕವಳಾಗಿದ್ದರೂ ಇಸ್ರಯೇಲನ್ನು ಆಳತಕ್ಕವನು ನಿನ್ನಿಂದಲೇ ಉದಯಿಸುವನು. ಆತನ ಗೋತ್ರದ ಮೂಲ ಪುರಾತನವಾದುದು, ಅನಾದಿಕಾಲದಿಂದ ಬಂದುದು. ಇಂತಿರಲು ದಿನತುಂಬಿದವಳು ಹೆರುವವರೆಗೂ ಸರ್ವೇಶ್ವರ ತನ್ನ ಜನರನ್ನು ಶತ್ರುಗಳ ವಶಕ್ಕೆ ಬಿಟ್ಟುಬಿಡುವರು. ಅನಂತರ ಅಳಿದುಳಿದ ಸಹೋದರರು ಬಂದು ಇಸ್ರಯೇಲ್ ಜನರೊಂದಿಗೆ ಸೇರಿಕೊಳ್ಳುವರು. ಆತನು ಸರ್ವೇಶ್ವರನಿಂದ ಬರುವ ಶಕ್ತಿಯಿಂದಲೂ ಆ ಸ್ವಾಮಿ ದೇವರ ನಾಮದ ಪ್ರಭಾವದಿಂದಲೂ ತನ್ನ ಜನರನ್ನು ಪರಿಪಾಲಿಸುವನು. ಆ ಜನರು ಸುರಕ್ಷಿತವಾಗಿ ಬಾಳುವರು. ಆತನು ಜಗದ ಕಟ್ಟಕಡೆಯವರೆಗೂ ಪ್ರಬಲನಾಗಿರುವನು.

ಕೀರ್ತನೆ: 13:6, 6

ಶ್ಲೋಕ: ಹಿರಿಹಿಗ್ಗುವುದು ನನ್ನ ದೇವರಲಿ ನನ್ನಾತ್ಮ

ನಿನ್ನಚಲ ಪ್ರೀತಿಯಲ್ಲಿದೆ ನನಗಿದೆ ವಿಶ್ವಾಸ I
ನಿನ್ನ ರಕ್ಷಣೆ ತಂದಿದೆ ನನ್ನ ಮನಕೆ ಹರುಷ II

ಪ್ರಭು ಮಾಡಿದ ಮಹೋಪಕಾರಗಳಿಗಾಗಿ I
ಹಾಡುವೆ ಗೀತವನು ಮನಃಪೂರ್ವಕವಾಗಿ II

ಶುಭಸಂದೇಶ: ಮತ್ತಾಯ 1:1-16, 18-23


ಅಬ್ರಹಾಮನ ಮನೆತನಕ್ಕೆ ಸೇರಿದ ದಾವೀದ ಕುಲದ ಯೇಸುಕ್ರಿಸ್ತರ ವಂಶಾವಳಿ: ಅಬ್ರಹಾಮನಿಗೆ ಇಸಾಕನು, ಇಸಾಕನಿಗೆ ಯಕೋಬನು, ಯಕೋಬನಿಗೆ ಯೂದ ಹಾಗೂ ಆತನ ಸಹೋದರರು ಹುಟ್ಟಿದರು. ಯೂದನಿಗೆ ತಾಮರ ಎಂಬವಳಿಂದ, ಪೆರಸ್ ಹಾಗೂ ಜೆರಹನ್ ಹುಟ್ಟಿದರು. ಪೆರಸನಿಗೆ ಹೆಸ್ರೋನ್, ಹೆಸ್ರೋನನಿಗೆ ರಾಮ್, ರಾಮನಿಗೆ ಅಮ್ಮಿನದಾಬ್, ಅಮ್ಮಿನದಾಬನಿಗೆ ನಹಸ್ಸೋನ್, ನಹಸ್ಸೋನನಿಗೆ ಸಲ್ಮೋನ್, 5ಸಲ್ಮೋನನಿಗೆ ರಹಾಬ್ ಎಂಬವಳಿಂದ ಬೋವಜ್, ಬೋವಜನಿಗೆ ರೂತ್ ಎಂಬವಳಿಂದ ಓಬೇದ್, ಓಬೇದನಿಗೆ ಜೆಸ್ಸೆಯ, ಜೆಸ್ಸೆಯನಿಗೆ ದಾವೀದರಸನು ಹುಟ್ಟಿದರು. ದಾವೀದನಿಗೆ ಊರಿಯನ ಹೆಂಡತಿಯಿಂದ ಸೊಲೊಮೋನ್, ಸೊಲೊಮೋನನಿಗೆ ರೆಹಬ್ಬಾಮ, ರೆಹಬ್ಬಾಮನಿಗೆ ಅಬೀಯ, ಅಬೀಯನಿಗೆ ಆಸನ್ ಹುಟ್ಟಿದರು. ಆಸನನಿಗೆ ಯೋಸೆಫಾತ್, ಯೋಸೆಫಾತನಿಗೆ ಯೆಹೋರಾಮ್, ಯೆಹೋರಾಮನಿಗೆ ಉಜ್ಜೀಯ ಹುಟ್ಟಿದರು. ಉಜ್ಜೀಯನಿಗೆ ಯೋತಾಮ್, ಯೋತಾಮನಿಗೆ ಅಹಾಜ್, ಅಹಾಜನಿಗೆ ಹಿಜ್ಕೀಯನು ಹುಟ್ಟಿದರು. ಹಿಜ್ಕೀಯನಿಗೆ ಮನಸ್ಸೆ, ಮನಸ್ಸೆಗೆ ಆಮೋನ್,  ಆಮೋನನಿಗೆ ಯೋಷೀಯ ಹುಟ್ಟಿದರು. ಯೋಷೀಯನಿಗೆ ಯೆಕೊನ್ಯ ಮತ್ತು ಅವನ ಸಹೋದರರು ಹುಟ್ಟಿದರು. ಈ ಸಮಯದಲ್ಲೇ ಇಸ್ರಯೇಲರನ್ನು ಬಾಬಿಲೋನಿಗೆ ಸೆರೆ ಒಯ್ದದ್ದು. ಬಾಬಿಲೋನಿಗೆ ಸೆರೆಹೋದ ದಾಸ್ಯದಿನಗಳು ಮುಗಿದ ಮೇಲೆ ಯೆಕೊನ್ಯನಿಗೆ ಸಲಥಿಯೇಲ್, ಸಲಥಿಯೇಲನಿಗೆ ಜೆರುಬಾಬೆಲ್,  ಜೆರುಬಾಬೆಲನಿಗೆ ಅಬೀಹೂದ್, ಅಬೀಹೂದನಿಗೆ ಎಲ್ಯಕೀಮ್. ಎಲ್ಯಕೀಮನಿಗೆ ಅಜೋರ್ ಹುಟ್ಟಿದರು.  ಅಜೋರನಿಗೆ ಸದೋಕ್, ಸದೋಕನಿಗೆ ಅಖೀಮ್, ಅಖೀಮನಿಗೆ ಎಲಿಹೂದ್,  ಎಲಿಹೂದನಿಗೆ ಎಲಿಯಾಜರ್, ಎಲಿಯಾಜರನಿಗೆ ಮತ್ತಾನ್, ಮತ್ತಾನನಿಗೆ ಯಕೋಬ್ ಹುಟ್ಟಿದರು. ಯಕೋಬನಿಗೆ ಮರಿಯಳ ಪತಿಯಾದ ಜೋಸೆಫನು ಹುಟ್ಟಿದನು. ಈ ಮರಿಯಳಿಂದಲೇ “ಕ್ರಿಸ್ತ” ಎಂದು ಕರೆಯಲಾಗುವ ಯೇಸುಸ್ವಾಮಿ ಹುಟ್ಟಿದ್ದು; ಕ್ರಿಸ್ತಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೆಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮುಂಚೆಯೇ ಮರಿಯಳು ಗರ್ಭವತಿಯಾಗಿರುವುದು ತಿಳಿದುಬಂತು. ಆಕೆ ಗರ್ಭ ಧರಿಸಿದ್ದು ಪವಿತ್ರಾತ್ಮ ಪ್ರಭಾವದಿಂದ. ಆಕೆಯ ಪತಿ ಜೋಸೆಫನು ನೀತಿವಂತನು. ಮರಿಯಳನ್ನು ಅವಮಾನಕ್ಕೆ ಗುರಿಮಾಡುವ ಉದ್ದೇಶ ಅವನದಲ್ಲವಾದ್ದರಿಂದ ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು.  ಆತನು ಈ ಕುರಿತು ಆಲೋಚಿಸುತ್ತಿದ್ದಂತೆ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, “ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ.  ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು ‘ಯೇಸು’ ಎಂಬ ಹೆಸರಿಡಬೇಕು. ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವವನು ಆತನೇ,” ಎಂದನು. “ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು ‘ಇಮ್ಮಾನುವೇಲ್’ ಎಂದು ಆತನಿಗೆ ಹೆಸರಿಡುವರು” ಎಂಬುದಾಗಿ ಪ್ರವಾದಿಯ ಮುಖಾಂತರ ಸರ್ವೇಶ್ವರ ಹೇಳಿದ ಪ್ರವಚನ ನೆರವೇರುವಂತೆ ಇದೆಲ್ಲಾ ಸಂಭವಿಸಿತು.  “ಇಮ್ಮಾನುವೇಲ್” ಎಂದರೆ, “ದೇವರು ನಮ್ಮೊಡನೆ ಇದ್ದಾರೆ” ಎಂದು ಅರ್ಥ.

ಮರಿಯಮ್ಮನವರ ಗೀತೆಗಳು


                                            



 

07.09.23 - "ಹೆದರಬೇಡ, ಇಂದಿನಿಂದ ನೀನು ಮೀನು ಹಿಡಿಯುವವನ ಬದಲು ಮನುಷ್ಯರನ್ನೇ ಹಿಡಿಯುವವನು ಆಗುವೆ,"

ಮೊದಲನೆಯ ವಾಚನ: 1 ಕೊಲೊಸ್ಸೆಯರಿಗೆ 1:9-14


ಸಹೋದರರೇ, ಹೀಗಿರುವುದರಿಂದ ಈ ವಿಷಯವನ್ನು ನಾವು ಕೇಳಿದ ದಿನದಿಂದಲೂ ನಿಮಗಾಗಿ ಸದಾ ಪ್ರಾರ್ಥಿಸುತ್ತಲೇ ಇದ್ದೇವೆ. ನೀವು ಪರಿಪೂರ್ಣ ವಿವೇಕದಿಂದಲೂ ಆಧ್ಯಾತ್ಮಿಕ ಜ್ಞಾನದಿಂದಲೂ ದೇವರ ಚಿತ್ತವನ್ನು ಸಂಪೂರ್ಣವಾಗಿ ಅರಿಯಬೇಕೆಂಬುದೇ ನಮ್ಮ ಕೋರಿಕೆ. ಆಗ ಎಲ್ಲ ವಿಷಯಗಳಲ್ಲಿಯೂ ಪ್ರಭು ಯೇಸು ಮೆಚ್ಚುವ ರೀತಿಯಲ್ಲಿ ನೀವು ಜೀವಿಸುವಿರಿ. ನಾನಾ ತರಹದ ಸತ್ಕಾರ್ಯಗಳನ್ನು ಕೈಗೊಳ್ಳುವಿರಿ. ಸತ್ಫಲವನ್ನೀಯುವ ದೈವಜ್ಞಾನದಲ್ಲಿ ವೃದ್ದಿ ಹೊಂದುವಿರಿ. ದೇವರ ಮಹಿಮಾಶಕ್ತಿಯಿಂದ ನೀವು ಬಲಗೊಂಡು ಎಲ್ಲವನ್ನೂ. ತಾಳ್ಮೆಯಿಂದಲೂ ಸಮಾಧಾನದಿಂದಲೂ ಸಹಿಸಿಕೊಳ್ಳುವಿರಿ. ಪಿತನಿಗೆ ಹರ್ಷದಿಂದ ಕೃತಜ್ಞತಾಸ್ತುತಿ ಸಲ್ಲಿಸುವಿರಿ. ಏಕೆಂದರೆ ಬೆಳಕಿನಲ್ಲಿರುವ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ಥ್ಯದಲ್ಲಿ ಪಾಲುಗಾರರಾಗಲು ನಿಮ್ಮನ್ನು ಯೋಗ್ಯರನ್ನಾಗಿ ಅವರು ಮಾಡಿದ್ದಾರೆ. ದೇವರು ನಮ್ಮನ್ನು ಅಂಧಕಾರದ ಆಡಳಿತದಿಂದ ಬಿಡುಗಡೆಮಾಡಿ ತಮ್ಮ ಪುತ್ರನ ಸಾಮ್ರಾಜ್ಯಕ್ಕೆ ಸುರಕ್ಷಿತವಾಗಿ ತಂದಿದ್ದಾರೆ. ಈ ಪುತ್ರನಲ್ಲಿ ನಮಗೆ ಪಾಪಕ್ಷಮೆ ದೊರಕಿದೆ, ವಿಮೋಚನೆ ಶಲಭಿಸಿದೆ.

ಕೀರ್ತನೆ 98:2-6
ಶ್ಲೋಕ: ಪ್ರಕಟಿಸಿಹನಾ ಪ್ರಭು ಮುಕ್ತಿವಿಧಾನವನು.

ಪ್ರಕಟಿಸಿಹನಾ ಪ್ರಭು ಮುಕ್ತಿವಿಧಾನವನು
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕ ಶಕ್ತಿಯನು
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು

ಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ
ನಮ್ಮ ದೇವ ಸಾಧಿಸಿದ. ಜಯಗಳಿಕೆ
ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ
ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ

ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ
ಭಜಿಸಿರಿ ಆತನನು ವಾದ್ಯಮೇಳದೊಂದಿಗೆ
ಊದಿರಿ ಕೊಂಬನು, ತುತೂರಿಯನು
ಉದ್ಘೋಷಿಸಿರಿ, ಪ್ರಭು ರಾಜನನು

ಶುಭಸಂದೇಶ: ಲೂಕ 5:1-11


ಆ ಕಾಲದಲ್ಲಿ ಒಮ್ಮೆ ಯೇಸು ಗೆನೆಸರೇತ್ ಎಂಬ ಸರೋವರದ ತೀರದಲ್ಲಿ ನಿಂತಿದ್ದಾಗ, ಜನಸಮೂಹವು ದೇವರ ವಾಕ್ಯವನ್ನು ಕೇಳಲು ನೂಕುನುಗ್ಗಲಾಗಿ ಬಂದು ಅವರನ್ನು ಒತ್ತರಿಸುತ್ತಿತ್ತು. ಆಗ ದಡದ ಮೇಲಿದ್ದ ಎರಡು ದೋಣಿಗಳು ಯೇಸುವಿನ ಕಣ್ಣಿಗೆ ಬಿದ್ದವು. ಬೆಸ್ತರು ದೋಣಿಗಳನ್ನು ಅಲ್ಲಿಯೇ ಬಿಟ್ಟು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. ಆ ದೋಣಿಗಳಲ್ಲಿ ಒಂದು ಸಿಮೋನನದು. ಯೇಸು ಅದನ್ನು ಹತ್ತಿ, ದಡದಿಂದ ಸ್ವಲ್ಪ ದೂರ ತಳ್ಳಲು ಹೇಳಿ, ಅದರಲ್ಲೇ ಕುಳಿತುಕೊಂಡು ತಮ್ಮ ಬೋಧನೆಯನ್ನು ಮುಂದುವರಿಸಿದರು. ಬೋಧನೆ ಮುಗಿದದ್ದೇ ಸಿಮೋನನಿಗೆ, " ನೀರು ಆಳವಾಗಿರುವ ಸ್ಥಳಕ್ಕೆ ದೋಣಿಯನ್ನು ಹಾಯಿಸಿ, ಮೀನುಬೇಟೆಗೆ ನಿಮ್ಮ ಬಲೆಗಳನ್ನು ಹಾಕಿರಿ, " ಎಂದರು. ಅದಕ್ಕೆ ಸಿಮೋನನು, " ಗುರುವೇ, ನಾವು ರಾತ್ರಿಯೆಲ್ಲಾ ದುಡಿದಿದ್ದೇವೆ, ಏನೂ ಸಿಗಲಿಲ್ಲ. ಆದರೂ ನಿಮ್ಮ ಮಾತಿಗೆ ಬೆಲೆಕೊಟ್ಟು ಬಲೆಗಳನ್ನು ಹಾಕುತ್ತೇವೆ, " ಎಂದನು. ಬಲೆಗಳನ್ನು ಹಾಕಿದ್ದೇ ಮೀನುಗಳು ರಾಶಿರಾಶಿಯಾಗಿ ಸಿಕ್ಕಿಕೊಂಡವು, ಬಲೆಗಳು ಹರಿದು ಹೋಗುವುದರಲ್ಲಿದ್ದವು. ಆದುದರಿಂದ ಬೇರೆ ದೋಣಿಯಲ್ಲಿದ್ದ ತಮ್ಮ ಸಂಗಡಿಗರಿಗೆ ಸನ್ನೆಮಾಡಿ ಸಹಾಯಕ್ಕಾಗಿ ಕರೆದುಕೊಂಡರು. ಅವರೆಲ್ಲರೂ ಸೇರಿ ಮೀನುಗಳನ್ನು ತುಂಬಿಕೊಳ್ಳಲು, ದೋಣಿಗಳೆರಡೂ ಮುಳುಗಲು ಆರಂಭಿಸಿದವು. ಇದನ್ನು ಕಂಡ ಸಿಮೋನ್ ಪೇತ್ರನು ಯೇಸುವಿನ ಕಾಲಿಗೆ ಬಿದ್ದು, " ಸ್ವಾಮಿ, ನಾನು ಪಾಪಾತ್ಮ, ನನ್ನಿಂದ ದೂರವಿರಿ! " ಎಂದನು. ಹಿಡಿದ ಮೀನಿನ ರಾಶಿಯನ್ನು ಕಂಡು ಅವನ ಸಂಗಡಿಗರೆಲ್ಲರೂ ನಿಬ್ಬೆರಗಾಗಿ ಹೋಗಿದ್ದರು. ಸಿಮೋನನ ಪಾಲುಗಾರರಾದ ಜೆಬೆದಾಯನ ಮಕ್ಕಳು -- ಯಕೋಬ ಮತ್ತು ಯೊವಾನ್ನರು -- ಹಾಗೆಯೇ ಬೆರಗಾಗಿದ್ದರು. ಆಗ ಯೇಸು ಸಿಮೋನನಿಗೆ, " ಹೆದರಬೇಡ, ಇಂದಿನಿಂದ ನೀನು ಮೀನು ಹಿಡಿಯುವವನ ಬದಲು ಮನುಷ್ಯರನ್ನೇ ಹಿಡಿಯುವವನು ಆಗುವೆ, " ಎಂದರು. ಆ ಬೆಸ್ತರು ದೋಣಿಗಳನ್ನು ದಡಕ್ಕೆ ಸಾಗಿಸಿದ್ದೇ ಎಲ್ಲವನ್ನು ತ್ಯಜಿಸಿಬಿಟ್ಟು ಯೇಸುವನ್ನು ಹಿಂಬಾಲಿಸಿದರು.

06.09.23 - "ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಬೇರೆ ಊರುಗಳಿಗೂ ನಾನು ಬೋಧಿಸಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಅದಕ್ಕಾಗಿಯೇ,"

ಮೊದಲನೆಯ ವಾಚನ: ಪೌಲನು ಕೊಲೊಸ್ಸೆಯರಿಗೆ ಬರೆದ ಪತ್ರ 1:1-8

ಕೊಲೊಸ್ಸೆಯಲ್ಲಿರುವ ದೇವಜನರಿಗೆ ಹಾಗೂ ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಸಹೋದರರಿಗೆ ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಪ್ರೇಷಿತನಾದ ಪೌಲನು ಮತ್ತು ಸಹೋದರ ತಿಮೊಥೇಯನು ಬರೆಯುವ ಪತ್ರ. ನಮ್ಮ ತಂದೆಯಾದ ದೇವರ ಅನುಗ್ರಹವೂ ಶಾಂತಿ ಸಮಾಧಾನವೂ ನಿಮ್ಮಲ್ಲಿರಲಿ. ನೀವು ಪ್ರಭು ಯೇಸುಕ್ರಿಸ್ತರಲ್ಲಿ ಇಟ್ಟಿರುವ ವಿಶ್ವಾಸ ಹಾಗು ದೇವಜನರಲ್ಲಿ ನೀವು ಇರಿಸಿರುವ ಪ್ರೀತಿ ಇವುಗಳ ಬಗ್ಗೆ ನಾವು ಕೇಳಿದ್ದೇವೆ. ಇದಕ್ಕಾಗಿ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರಲ್ಲಿ ಪ್ರಾರ್ಥಿಸುವಾಗಲೆಲ್ಲ ನಿಮಗಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಸತ್ಯ ವಾಕ್ಯದ, ಅಂದರೆ, ಶುಭಸಂದೇಶದ ಮೂಲಕ ನೀವು ಕೇಳಿ ತಿಳಿದಂಥ ಹಾಗೂ ನಿರೀಕ್ಷಿಸುವಂಥ ಸೌಭಾಗ್ಯವನ್ನು ಸ್ವರ್ಗಲೋಕದಲ್ಲಿ ನಿಮಗಾಗಿ ಕಾದಿರಿಸಲಾಗಿದೆ. ದೇವಾನುಗ್ರಹದ ಸತ್ಯಾರ್ಥವನ್ನು ನೀವು ತಿಳಿದ ದಿನದಿಂದಲೂ ನಿಮ್ಮಲ್ಲಿ ಶುಭಸಂದೇಶವು ಹೇಗೆ ಫಲಭರಿತವಾಗುತ್ತಿದೆಯೋ ಹಾಗೆ ಈ ಶುಭಸಂದೇಶವು ಜಗತ್ತಿನ ಎಲ್ಲೆಡೆಯೂ ಹಬ್ಬಿಹರಡುತ್ತಲಿದೆ. ಈ ಶುಭಸಂದೇಶವನ್ನು ಕ್ರಿಸ್ತ ಯೇಸುವಿನ ನಂಬಿಗಸ್ಥ ದಾಸನೂ ನಮ್ಮ ಜೊತೆಯ ಸೇವಕನೂ ಆದ ಎಪಫ್ರನಿಂದ ಕಲಿತುಕೊಂಡಿದ್ದೀರಿ. ಪವಿತ್ರಾತ್ಮ ಅವರು ನಿಮಗೆ ಅನುಗ್ರಹಿಸಿದ ಪ್ರೀತಿಯ ಬಗ್ಗೆ ನಮಗೆ ತಿಳಿಸಿದವನು ಸಹ ಆತನೇ.


ಕೀರ್ತನೆ 52:8-9
ಶ್ಲೋಕ: ದೇವರ ಸ್ಥಿರ ಪ್ರೀತಿಯನು ಯುಗಯುಗಾಂತರಕ್ಕೂ ನಂಬಿಕೊಂಡಿರುವೆನು.


ನಾನಾದರೋ ದೇಗುಲದಲಿ ಬೆಳೆದಿಹ ಎಣ್ಣೆ ಮರದಂತಿರುವೆನು
ದೇವರ ಸ್ಥಿರ ಪ್ರೀತಿಯನು ಯುಗಯುಗಾಂತರಕ್ಕೂ ನಂಬಿಕೊಂಡಿರುವೆನು

ನಿನ್ನುಪಕಾರವನು ಹೇ ದೇವಾ, ನಾನು ಸದಾ ಸ್ಮರಿಸುವೆನು
ನಿನ್ನ ಶ್ರೇಷ್ಠ ನಾಮವನು ಭಕ್ತರ ಮುಂದೆ ಸ್ತುತಿಸುವೆನು


ಶುಭಸಂದೇಶ: ಲೂಕ 4:38-44

ಆ ಕಾಲದಲ್ಲಿ ಪ್ರಾರ್ಥನಾಮಂದಿರದಿಂದ ಹೊರಟು ಯೇಸು ಸಿಮೋನನ ಮನೆಗೆ ಬಂದರು. ಸಿಮೋನನ ಅತ್ತೆ ವಿಷಮ ಜ್ವರದಿಂದ ನರಳುತ್ತಿದ್ದಳು. ಅಲ್ಲಿದ್ದವರು ಅವಳ ಪರವಾಗಿ ಯೇಸುವಿನಲ್ಲಿ ಮೊರೆಯಿಟ್ಟರು. ಯೇಸು ಆಕೆಯ ಬಳಿ ನಿಂತು, ಬಾಗಿ, ಜ್ವರಕ್ಕೆ ಬಿಟ್ಟು ಹೋಗೆಂದು ಆಜ್ಞಾಪಿಸಿದರು, ಅದು ಬಿಟ್ಟುಹೋಯಿತು. ಆ ಕ್ಷಣವೇ ಆಕೆ ಎದ್ದು ಅವರೆಲ್ಲರನ್ನು ಸತ್ಕರಿಸಿದಳು. ಸಂಜೆಯಾಗುತ್ತಿದ್ದಂತೆ ಜನರು ತಮ್ಮ ಮನೆಯಲ್ಲಿ ವಿಧವಿಧವಾದ ಕಾಯಿಲೆಯಿಂದ ನರಳುತ್ತಿದ್ದವರನ್ನೆಲ್ಲಾ ಯೇಸುವಿನ ಬಳಿಗೆ ಕರೆತಂದರು. ಯೇಸು ಪ್ರತಿಯೊಬ್ಬರ ಮೇಲೆ ತಮ್ಮ ಕೈಯಿಟ್ಟು ಗುಣಪಡಿಸಿದರು. ಆನೇಕರ ಮೈಮೇಲಿದ್ದ ದೆವ್ವಗಳು ಸಹ, " ನೀವು ದೇವರ ಪುತ್ರ, " ಎಂದು ಬೊಬ್ಬೆಹಾಕುತ್ತಾ ಬಿಟ್ಟುಹೋದವು. ಇವರೇ ' ಕ್ರಿಸ್ತ ' ಎಂದು ಅವುಗಳು ತಿಳಿದಿದ್ದರಿಂದ ಯೇಸು ಅವುಗಳನ್ನು ಗದರಿಸಿ ಮಾತೆತ್ತಲು ಬಿಡಲಿಲ್ಲ. ಬೆಳಗಾಗುತ್ತಲೇ, ಯೇಸು ಅಲ್ಲಿಂದ ಹೊರಟು ನಿರ್ಜನ ಸ್ಥಳಕ್ಕೆ ಹೋದರು. ಜನಸಮೂಹವು ಅವರನ್ನು ಹುಡುಕಿಕೊಂಡು ಅಲ್ಲಿಗೂ ಬಂದಿತು, ತಮ್ಮನ್ನು ಬಿಟ್ಟುಹೋಗಬಾರದೆಂದು ಜನರು ತಡೆಗಟ್ಟಲು ಯತ್ನಿಸಿದರು. ಅವರಿಗೆ ಯೇಸು, "ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಬೇರೆ ಊರುಗಳಿಗೂ ನಾನು ಬೋಧಿಸಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಅದಕ್ಕಾಗಿಯೇ, " ಎಂದರು. ಬಳಿಕ ಜುದೇಯ ಪ್ರಾಂತ್ಯದ ಪ್ರಾರ್ಥನಾಮಂದಿರಗಳಲ್ಲಿ ಯೇಸು ಬೋಧಿಸುತ್ತಿದ್ದರು.

04.09.23 - ಆದರೆ ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.

ಮೊದಲನೆಯ ವಾಚನ: ಪೌಲನು ಥೆಸಲೋನಿಯರಿಗೆ ಬರೆದ ಮೊದಲನೆಯ ಪತ್ರ  4:13-18




ಸಹೋದರರೇ, ಮೃತರ ಮುಂದಿನ ಸ್ಥಿತಿಗತಿಯ ವಿಷಯವಾಗಿ ನೀವು ತಿಳಿದಿರಬೇಕು ಎಂಬುದೇ ನಮ್ಮ ಬಯಕೆ. ಏಕೆಂದರೆ, ನಂಬಿಕೆ ನಿರೀಕ್ಷೆಯಿಲ್ಲದೆ ಇತರರಂತೆ ಮೃತರಿಗಾಗಿ ನೀವು ದುಃಖಿಸಬಾರದು. ಯೇಸು ಸತ್ತು ಪುನರುತ್ಥಾನ ಹೊಂದಿದರೆಂದು ನಾವು ವಿಶ್ವಾಸಿಸುತ್ತೇವೆ ಅಲ್ಲವೇ ? ಹಾಗೆಯೇ ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟು ಮರಣ ಹೊಂದಿದವರನ್ನು ದೇವರು ಯೇಸುಕ್ರಿಸ್ತರೊಡನೆ ಮರಳಿ ಕರೆದುಕೊಳ್ಳುತ್ತಾರೆ. ಪ್ರಭುವಿನ ವಾಕ್ಯದ ಆಧಾರದ ಮೇಲೆ ನಾವು ನಿಮಗೆ ಹೇಳುತ್ತೇವೆ: ಪ್ರಭು ಪುನರಾಗಿಸುವಾಗ, ಇನ್ನೂ ಬದುಕಿರುವ ನಾವು ಮೃತರಾಗಿರುವ ಇತರರಿಗಿಂತಲೂ ಮುಂದಿನವರಾಗುವುದಿಲ್ಲ. ಆಜ್ಞಾಘೋಷವಾದಾಗ, ಪ್ರಧಾನ ದೂತನ ಧ್ವನಿಯು ಕೇಳಿಬಂದಾಗ, ದೇವರ ತುತೂರಿ ನಾದಗೈದಾಗ, ಪ್ರಭುವೇ ಸ್ವರ್ಗದಿಂದ ಇಳಿದು ಬರುತ್ತಾರೆ. ಆಗ, ಕ್ರಿಸ್ತಸ್ಥರಾಗಿ ಮೃತರಾದವರು ಮೊದಲು ಎದ್ದು ಬರುತ್ತಾರೆ. ಆಮೇಲೆ, ಇನ್ನೂ ಬದುಕಿರುವ ನಾವು ಎದ್ಧುಬಂದವರೊಡನೆ ಆಕಾಶಮಂಡಲದಲ್ಲಿ ಪ್ರಭುವನ್ನು ಎದುರುಗೊಳ್ಳಲು ಮೇಘಾರೂಢರಾಗಿ ಮೇಲಕ್ಕೆ ಒಯ್ಯಲ್ಪಡುತ್ತೇವೆ. ಹೀಗೆ ಸರ್ವದಾ ನಾವು ಪಭುವಿನೊಂದಿಗೆ ಇರುತ್ತೇವೆ. ಆದ್ದರಿಂದ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿ.

ಕೀರ್ತನೆ 96:1, 3, 4-5, 11-13
ಶ್ಲೋಕ: ಪ್ರಭು ಧರೆಗೆ ನ್ಯಾಯತೀರಿಸಲು ಬಂದೇ ಬರುವನು ಖರೆಯಾಗಿ.

ಹೊಸ ಗೀತೆಯನು ಹಾಡಿರಿ ಪ್ರಭುವಿಗೆ
ವಿಶ್ವವೆಲ್ಲವು ಹಾಡಲಿ ಆತನಿಗೆ
ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ
ಆತನದ್ಭುತಕಾರ್ಯಗಳನು ಸಕಲ ಜನಾಂಗಗಳಿಗೆ

ಏಕೆನೆ ಮಹಾತ್ಮನು ಪ್ರಭು, ಬಲು ಸ್ತುತ್ಯರ್ಹನು
ಸಕಲ ದೇವರುಗಳಿಗಿಂತಲೂ ಘನ ಗಂಭೀರನು
ಶೂನ್ಯ ಪ್ರತಿಮೆಗಳು ಅನ್ಯರಾಷ್ಟ್ರಗಳ ದೇವರುಗಳೆಲ್ಲ
ಪ್ರಭುವಿನಿಂದಲೇ ಉಂಟಾಯಿತು ಆಕಾಶಮಂಡಲವೆಲ್ಲ

ಹರ್ಷಿಸಲಿ ಆಕಾಶವು, ಸಂತೋಷಿಸಲಿ ಎಂದು ಭೂಲೋಕವು
ಗರ್ಜಿಸಲಿ ಸಮುದ್ರವು ಮತ್ತು ಅದರೊಳಿರುವುದೆಲ್ಲವು
ಉಲ್ಲಾಸಿಸಲಿ ಹೊಲಗದ್ದೆಗಳು, ಪೈರುಪಚ್ಚೆಗಳು
ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು

ಪ್ರಭು ಧರೆಗೆ ನ್ಯಾಯತೀರಿಸಲು ಬಂದೇ ಬರುವನು ಖರೆಯಾಗಿ
ಜಗಕೂ ಜನತೆಗೂ ತೀರ್ಪಿಡುವನು ನೀತಿನಿಯಮಾನುಸಾರವಾಗಿ

ಶುಭಸಂದೇಶ: ಲೂಕ 4:16-30


ಆ ಕಾಲದಲ್ಲಿ ಯೇಸು ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್ ದಿನ ಪ್ರಾರ್ಥನಾಮಂದಿರಕ್ಕೆ ಹೋದರು. ಅಲ್ಲಿ ಪವಿತ್ರ ಗ್ರಂಥವನ್ನು ಓದುವುದಕ್ಕೆ ಅವರು ಎದ್ದುನಿಂತಾಗ, ಪ್ರವಾದಿ ಯೆಶಾಯನ ಗ್ರಂಥದ ಸುರಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು: "ದೇವರಾತ್ಮ ನನ್ನ ಮೇಲಿದೆ ದೀನದಲಿತರಿಗೆ ಶುಭಸಂದೇಶವನ್ನು ಬೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ, ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಿಲೂ ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನು ಉದ್ಧರಿಸುವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ." ಈ ವಾಕ್ಯವನ್ನು ಓದಿ, ಸುರುಳಿಯನ್ನು ಸುತ್ತಿ, ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. ಆಗ ಯೇಸು, " ನೀವು ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು, " ಎಂದು ವಿವರಿಸಲಾರಂಭಿಸಿದರು. ಎಲ್ಲರೂ ಅವರನ್ನು ಬಹುವಾಗಿ ಮೆಚ್ಚಿಕೊಂಡರು. ಅವರ ಬಾಯಿಂದ ಬಂದ ಮಧುರ ಮಾತುಗಳನ್ನು ಕೇಳಿ ಅಚ್ಚರಿಗೊಂಡರು. " ಇವನು ಜೋಸೆಫನ ಮಗನಲ್ಲವೇ? " ಎಂದು ಮಾತನಾಡಿಕೊಂಡರು. ಅನಂತರ ಯೇಸು ಅವರಿಗೆ, " 'ವೈದ್ಯನೇ, ಮೊದಲು ನಿನ್ನನ್ನು ನೀನು ಗುಣಪಡಿಸಿಕೊ ' ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ ನನಗೆ ಅನ್ವಯಿಸುವಿರಿ, ಅಲ್ಲದೆ, ' ಕಪೆರ್ನವುಮಿನಲ್ಲಿ ನೀನು ಎಂತೆಂಥ ಮಹತ್ಕಾರ್ಯಗಳನ್ನು ಮಾಡಿದೆ ಎಂದು ನಾವು ಕೇಳಿದ್ದೇವೆ, ಅಂಥವುಗಳನ್ನು ಈ ನಿನ್ನ ಸ್ವಂತ ಊರಿನಲ್ಲೂ ಮಾಡು, ' ಎಂದೂ ಹೇಳುವಿರಿ. ಆದರೆ ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಹಿಂದೆ ನಡೆದ ಒಂದು ಸಂಗತಿಯನ್ನು ಕೇಳಿ: ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬಂದೊದಗಿತ್ತು. ಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮಂದಿ ವಿಧವೆಯಾಗಿದ್ದರು. ಅವರಾರ ಬಳಿಗೂ ದೇವರು ಎಲೀಯನನ್ನು ಕಳುಹಿಸಲಿಲ್ಲ. ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಿದರು. ಅಂತೆಯೇ, ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್ ನಾಡಿನಲ್ಲಿ ಅನೇಕ ಕುಷ್ಠರೋಗಿಗಳು ಇದ್ದರು. ಅವರಲ್ಲಿ ಸಿರಿಯ ದೇಶದ ನಾಮಾನನು ಬಿಟ್ಟು ಮಿಕ್ಕ ಯಾರೂ ಗುಣಮುಖರಾಗಲಿಲ್ಲ, " ಎಂದು ಹೇಳಿದರು. ಇದನ್ನು ಕೇಳಿ, ಪ್ರಾರ್ಥನಾಮಂದಿರದಲ್ಲಿ ಇದ್ದ ಎಲ್ಲರೂ ಕಡುಗೋಪಗೊಂಡರು. ಯೇಸುವನ್ನು ಆ ಊರ ಹೊರಕ್ಕೆ ಎಳೆದುಕೊಂಡು, ತಮ್ಮ ಊರಿದ್ದ ಗುಡ್ಡದ ತುದಿಗೆ ಕೊಂಡೊಯ್ದು, ಅಲ್ಲಿಂದ ಅವರನ್ನು ಕೆಳಕ್ಕೆ ದಬ್ಬಬೇಕೆಂದಿದ್ದರು. ಯೇಸುವಾದರೋ ಅವರ ನಡುವೆಯೇ ನಡೆದು, ತಮ್ಮ ದಾರಿ ಹಿಡಿದುಹೋದರು.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...