ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

26.01.23 - "ಕೂಡಲೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು"

ಮೊದಲನೇ ವಾಚನ: ಯೆಶಾಯ 8:23-9:3

ಆಕಾಶವನ್ನು ದಿಟ್ಟಿಸಿ ನೋಡಿದರೂ ಭೂಮಿಯನ್ನು ದುರುಗುಟ್ಟಿ ನೋಡಿದರೂ ಅವರಿಗೆ ಕಾಣುವುದು ಕಷ್ಟ ಸಂಕಟಗಳ ಕತ್ತಲೆ, ಭಯಂಕರವಾದ ಕಾಳಗತ್ತಲೆಯಲ್ಲದೆ ಮತ್ತೇನೂ ಅಲ್ಲ. ಅಂಥ ಕರಾಳ ಕತ್ತಲೆಯೊಳಗೆ ಅವರನ್ನು ದೂಡಲಾಗುವುದು.  ಆದರೂ ಕಷ್ಟ ಸಂಕಷ್ಟಗಳನ್ನು ಅನುಭವಿಸಿದ ಆ ನಾಡಿಗೆ ಇನ್ನು ಮುಂದೆ ಕತ್ತಲಿರುವುದಿಲ್ಲ. ಒಮ್ಮೆ ಜೆಬುಲೋನ್ ಮತ್ತು ನಪ್ತಾಲಿಯ ಗೋತ್ರಗಳಿಗೆ ಬೀಡಾಗಿದ್ದ ಆ ಪ್ರಾಂತ್ಯವು ಅವಮಾನಕ್ಕೆ ಗುರಿಯಾಗಿತ್ತು. ಆದರೆ ಇನ್ನು ಮುಂದೆ ಅದಕ್ಕೆ ಘನತೆ ಗೌರವ ಬರುವುದು: ಸಮುದ್ರದ ಹಾದಿಯಿಂದ ಹಿಡಿದು ಜೋರ್ಡನಿನ ಆಚೆಯಲ್ಲಿ ಇರುವ ಪ್ರಾಂತ್ಯದವರೆಗೆ ಮಾತ್ರವಲ್ಲ, ಅನ್ಯಜನರು ಇರುವ ಗಲಿಲೇಯ ಪ್ರಾಂತ್ಯದವರೆಗೂ ಘನತೆ ಗೌರವ ಬಂದೊದಗುವುದು. ಕಾಣಿಸಿತೊಂದು ಮಹಾಜ್ಯೋತಿ ಕತ್ತಲಲಿ ಸಂಚರಿಸುತ್ತಿದ್ದ ಜನರಿಗೆ ಪ್ರಜ್ವಲಿಸಿತಾ ಜ್ಯೋತಿ ಕಗ್ಗತ್ತಲಲಿ ಬಾಳುತ್ತಿದ್ದಾ ನಡಿಗರಿಗೆ. ವೃದ್ಧಿಗೊಳಿಸಿರುವೆ ನೀನು ಆ ದೇಶವನು ಅಧಿಕರಿಸಿರುವೆ ಅದರ ತೋಷವನು ಸುಗ್ಗಿಕಾಲದಲಿ ಹಿಗ್ಗುವವರಂತೆ ಕೊಳ್ಳೆ ಹಂಚಿಕೊಳ್ಳುವವರಂತೆ ಹರ್ಷಿಸುವರವರು ನಿನ್ನ ಮುಂದೆ.

ಕೀರ್ತನೆ: 27:1, 4, 13-14

ಶ್ಲೋಕ: ನಿನ್ನ ಮಾರ್ಗವನು ಪ್ರಭೂ, ನನಗೆ ತೋರಿಸು

ನನಗೆ  ಬೆಳಕು,  ನನಗೆ  ರಕ್ಷೆ  ಪ್ರಭುವೇ|
ನಾನಾರಿಗೂ  ಅಳುಕೆನು||
ನನ್ನ  ಬಾಳಿಗಾಧಾರ  ಪ್ರಭುವೇ|
ನಾನಾರಿಗೂ  ಅಂಜೆನು||

ನಾನೊಂದನು  ಕೋರಿದೆ  ಪ್ರಭುವಿನಿಂದ|
ನಾನದನ್ನೇ  ನಿರೀಕ್ಷಿಸಿದೆ  ಆತನಿಂದ||
ವಾಸಿಸಬೇಕು  ಜೀವಮಾನವೆಲ್ಲ  ನಾನಾತನ  ಮಂದಿರದಲಿ|
ನಾ  ತಲ್ಲೀನನಾಗಬೇಕು  ಅಲ್ಲಾತನ  ಪ್ರಸನ್ನತೆಯಲಿ||

ಪ್ರಭುವಿನೊಳಿತನು  ನಾ  ಕಾಣುವೆ  ಜೀವಲೋಕದೊಳು|
ನಾನಿಟ್ಟಿರುವೆ  ನಂಬಿಕೆ  ನಿರೀಕ್ಷೆ  ಅದರೊಳು||
ಪ್ರಭುವನು  ಎದುರು  ನೋಡುತ್ತಿರು  ಮನವೇ|
ಧೈರ್ಯದಿಂದ  ನಿರೀಕ್ಷಿಸುತ್ತಿರು  ಎದೆಗುಂದದೆ||

ಎರಡನೇ ವಾಚನ: 1 ಕೊರಿಂಥಿಯರಿಗೆ 1:10-13, 17

ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ: ವಾದ ವಿವಾದವಿಲ್ಲದೆ, ಭಿನ್ನಭೇದಗಳಿಲ್ಲದೆ ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕ್ಯಮತ್ಯದಿಂದ ಬಾಳಿರಿ. ಸಹೋದರರೇ, ನೀವು ಜಗಳವಾಡುತ್ತಿದ್ದೀರಿ ಎಂಬುದು ಖ್ಲೋಯೇಯನ ಮನೆಯವರಿಂದ ತಿಳಿದು ಬಂದಿದೆ. ನಿಮ್ಮ ಪೈಕಿ, ತಾನು ಪೌಲನ ಕಡೆಯವನು ಎಂದು ಒಬ್ಬ, ತಾನು ಅಪೊಲೋಸನ ಕಡೆಯವನು ಎಂದು ಇನ್ನೊಬ್ಬ, ತಾನು ಕೇಫನ ಕಡೆಯವನು ಎಂದು ಮತ್ತೊಬ್ಬ, ತಾನು ಕ್ರಿಸ್ತನ ಕಡೆಯವನು ಎಂದು ಮಗದೊಬ್ಬ. ಹೀಗೆ ಒಬ್ಬೊಬ್ಬರು ಒಂದೊಂದು ತೆರನಾಗಿ ಹೇಳಿಕೊಳ್ಳುತ್ತಾರಂತೆ. ಕ್ರಿಸ್ತಯೇಸು ಭಾಗ ಭಾಗವಾಗಿ ವಿಂಗಡಿಸಿ ಹೋಗಿದ್ದಾರೆಯೇ? ನಿಮಗೋಸ್ಕರ ಶಿಲುಬೆಯ ಮೇಲೆ ಮಡಿದವನು ಪೌಲನೇ? ನೀವು ದೀಕ್ಷಾಸ್ನಾನ ಪಡೆದದ್ದು ಪೌಲನ ಹೆಸರಿನಲ್ಲೇ? ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ, ಶುಭಸಂದೇಶವನ್ನು ಸಾರುವುದಕ್ಕೆ. ಅದೂ ವಾಕ್‍ಚಾತುರ್ಯದಿಂದಲ್ಲ. ಹಾಗೆ ಸಾರಿದ್ದೇ ಆದರೆ, ಕ್ರಿಸ್ತಯೇಸುವಿನ ಶಿಲುಬೆಯೇ ನಿರರ್ಥಕವಾದೀತು.

ಶುಭಸಂದೇಶ: ಮತ್ತಾಯ 4:12-23


ಯೊವಾನ್ನನು ಬಂಧಿತನಾದನೆಂದು ಯೇಸುಸ್ವಾಮಿ ಕೇಳಿ, ಆ ಪ್ರಾಂತ್ಯವನ್ನು ಬಿಟ್ಟು ಗಲಿಲೇಯಕ್ಕೆ ಹೊರಟುಹೋದರು. ನಜರೇತ್ ಊರಿನಲ್ಲಿ ತಂಗದೆ ಗಲಿಲೇಯ ಸರೋವರದ ಸವಿೂಪದಲ್ಲಿರುವ ಕಫೆರ್ನವುಮ್ ಎಂಬ ಊರಿನಲ್ಲಿ ವಾಸಮಾಡಿದರು. ಇದು ಜೆಬುಲೋನ್ ಹಾಗೂ ನೆಫ್ತಲೀಮ್ ನಾಡುಗಳ ಸರಹದ್ದಿನಲ್ಲಿದೆ. ಹೀಗೆ: "ಜೆಬುಲೋನ್ ನಾಡೇ, ನೆಫ್ತಲೀಮ್ ನಾಡೇ, ಸರೋವರದ ಹತ್ತಿರವಿರುವ ಹಾದಿಬೀದಿಯೇ, ಜೋರ್ಡನಿನ ಹೊರವಲಯವೇ, ಕಾರ್ಗತ್ತಲಲ್ಲಿ ವಾಸಿಸುವವರಿಗೆ ದಿವ್ಯ ಜ್ಯೋತಿಯೊಂದು ಕಾಣಿಸಿತು. ಮರಣಛಾಯೆ ಕವಿದ ನಾಡಿಗರಿಗೆ ಅರುಣೋದಯವಾಯಿತು,"ಎಂದು ನುಡಿದ ಪ್ರವಾದಿ ಯೆಶಾಯನ ವಚನಗಳು ಈಡೇರಿದವು. ಅಂದಿನಿಂದ ಯೇಸು, "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಸ್ವರ್ಗಸಾಮ್ರಾಜ್ಯ ಸಮೀಪಿಸಿತು," ಎಂಬ ಸಂದೇಶವನ್ನು ಬೋಧಿಸತೊಡಗಿದರು.

ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದರು. ಆಗ ಇಬ್ಬರು ಸಹೋದರರನ್ನು ಕಂಡರು. ಇವರೇ ‘ಪೇತ್ರ’ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ. ಬೆಸ್ತರಾದ ಇವರು ಸರೋವರದಲ್ಲಿ ಬಲೆ ಬೀಸುತ್ತಾ ಇದ್ದರು. "ನನ್ನನ್ನು ಹಿಂಬಾಲಿಸಿ ಬನ್ನಿ. ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು," ಎಂದು ಹೇಳಿ ಯೇಸು ಅವರನ್ನು ಕರೆದರು. ತಕ್ಷಣವೇ, ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದಾಗ ಯೇಸು ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಎಂಬ ಇನ್ನಿಬ್ಬರು ಸಹೋದರರನ್ನು ಕಂಡರು. ಇವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯಲ್ಲಿ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಇವರನ್ನೂ ಕರೆದರು. ಕೂಡಲೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಉಪದೇಶ ಮಾಡುತ್ತಿದ್ದರು. ದೈವರಾಜ್ಯದ ಸಂದೇಶವನ್ನು ಪ್ರಬೋಧಿಸುತ್ತಿದ್ದರು. ಜನರ ಎಲ್ಲಾ ತರಹದ ರೋಗರುಜಿನಗಳನ್ನೂ ಬೇನೆ ಬವಣೆಗಳನ್ನೂ ಗುಣಪಡಿಸುತ್ತಿದ್ದರು.

25.01.23 - "ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 22:3-16

ಪೌಲನು ಜನರುನ್ನುದ್ದೇಶಿಸಿ ಹೀಗೆಂದನು: “ನಾನೊಬ್ಬ ಯೆಹೂದ್ಯನು, ಸಿಲಿಸಿಯದ ತಾರ್ಸ ಎಂಬಲ್ಲಿ ಹುಟ್ಟಿದವನು. ಆದರೆ, ಇದೇ ಜೆರುಸಲೇಮಿನಲ್ಲಿ ಬೆಳೆದವನು. ಗಮಲಿಯೇಲನ ಪಾದಸನ್ನಿಧಿಯಲ್ಲಿ ನಮ್ಮ ಪೂರ್ವಜರ ಧರ್ಮಶಾಸ್ತ್ರವನ್ನು ಕಟ್ಟುನಿಟ್ಟಾಗಿ ಕಲಿತವನು. ಇಲ್ಲಿ ಇಂದು ನೆರೆದಿರುವ ನೀವೆಲ್ಲರೂ ದೈವಾಭಿಮಾನಿಗಳಾಗಿರುವಂತೆಯೇ ನಾನು ದೈವಾಭಿಮಾನಿಯಾಗಿದ್ದೆ. ಕ್ರಿಸ್ತ ಮಾರ್ಗವನ್ನು ಅನುಸರಿಸುವವರನ್ನು, ಸ್ತ್ರೀ ಪುರುಷರೆನ್ನದೆ ಬಂಧಿಸಿ, ಅವರನ್ನು ಸೆರೆಮನೆಗೆ ತಳ್ಳಿದೆ. ಅವರನ್ನು ಮರಣ ಪರಿಯಂತರ ಪೀಡಿಸಿ ಹಿಂಸಿಸಿದೆ. ಇದಕ್ಕೆ ಪ್ರಧಾನ ಯಾಜಕರು ಮತ್ತು ಪ್ರಮುಖರ ಇಡೀ ಸಭೆಯೇ ಸಾಕ್ಷಿ. ನಾನು ಅವರಿಂದಲೇ ದಮಸ್ಕಸಿನಲ್ಲಿರುವ ಯೆಹೂದ್ಯ ಬಾಂಧವರಿಗೆ ಪತ್ರಗಳನ್ನು ಪಡೆದು, ಆ ಪಟ್ಟಣಕ್ಕೆ ಹೊರಟೆ. ಅಲ್ಲಿಂದ ಕ್ರೈಸ್ತರನ್ನು ಬಂಧಿಸಿ, ಜೆರುಸಲೇಮಿಗೆ ತಂದು ಶಿಕ್ಷಿಸಬೇಕೆಂಬುದೇ ನನ್ನ ಉದ್ದೇಶವಾಗಿತ್ತು. “ಹೀಗೆ ಪ್ರಯಾಣ ಮಾಡುತ್ತಾ ದಮಸ್ಕಸನ್ನು ಸವಿೂಪಿಸಿದೆ. ಆಗ ಸುಮಾರು ನಡು ಮಧ್ಯಾಹ್ನ. ಇದ್ದಕ್ಕಿದ್ದಂತೆ ಆಕಾಶದಿಂದ ಮಹಾ ಬೆಳಕೊಂದು ನನ್ನ ಸುತ್ತಲೂ ಮಿಂಚಿತು. ನಾನು ನೆಲಕ್ಕುರುಳಿದೆ. ಆಗ ‘ಸೌಲನೇ, ಸೌಲನೇ, ನನ್ನನ್ನೇಕೆ ಹಿಂಸಿಸುತ್ತಿರುವೆ?’ ಎಂಬ ವಾಣಿ ಕೇಳಿಸಿತು. ನಾನು ‘ಪ್ರಭೂ, ನೀವಾರು?’ ಎಂದು ಕೇಳಿದೆ. ‘ನೀನು ಹಿಂಸೆಪಡಿಸುತ್ತಿರುವ ನಜರೇತಿನ ಯೇಸುವೇ ನಾನು,’ ಎಂದರು ಅವರು. ನನ್ನೊಡನೆ ಇದ್ದವರಿಗೆ ಬೆಳಕೇನೋ ಕಾಣಿಸಿತು, ಆದರೆ ನನ್ನೊಡನೆ ಮಾತಾಡುತ್ತಿದ್ದ ವಾಣಿ ಅವರಿಗೆ ಕೇಳಿಸಲಿಲ್ಲ. ‘ನಾನೇನು ಮಾಡಬೇಕು ಪ್ರಭೂ?’ ಎಂದು ಕೇಳಿದೆ. ಅದಕ್ಕೆ ಪ್ರಭು, ‘ಏಳು, ದಮಸ್ಕಸಿಗೆ ಹೋಗು, ನೀನು ಏನು ಮಾಡಬೇಕೆಂದು ನಿಶ್ಚಯಿಸಲಾಗಿದೆಯೋ ಅದೆಲ್ಲವನ್ನೂ ನಿನಗೆ ತಿಳಿಸಲಾಗುವುದು,’ ಎಂದು ಹೇಳಿದರು. ಬೆಳಕಿನ ಪ್ರಕಾಶದ ನಿಮಿತ್ತ ನಾನು ದೃಷ್ಟಿಹೀನನಾದೆ. ಜೊತೆಯಲ್ಲಿದ್ದವರು ನನ್ನನ್ನು ದಮಸ್ಕಸಿಗೆ ಕೈ ಹಿಡಿದು ನಡೆಸಿಕೊಂಡು ಹೋದರು. “ದಮಸ್ಕಸಿನಲ್ಲಿ ಅನನೀಯ ಎಂಬ ಒಬ್ಬ ವ್ಯಕ್ತಿ ಇದ್ದನು. ಅವನು ಧರ್ಮಶಾಸ್ತ್ರಕ್ಕೆ ಪ್ರಾಮಾಣಿಕನಾಗಿ ಬಾಳಿದವನು. ಆ ಊರಿನ ಸಮಸ್ತ ಯೆಹೂದ್ಯರಿಂದ ಸನ್ಮಾನಿತನು. ಅವನು ಬಂದು ನನ್ನ ಬಳಿ ನಿಂತು, ‘ಸಹೋದರ ಸೌಲನೇ, ದೃಷ್ಟಿಯನ್ನು ಪಡೆ,’ ಎಂದನು. ಆ ಕ್ಷಣವೇ ನಾನು ದೃಷ್ಟಿ ಪಡೆದು ಅವನನ್ನು ನೋಡಿದೆ. ಆಗ ಅವನು, ‘ನಮ್ಮ ಪೂರ್ವಜರ ದೇವರು ತಮ್ಮ ಚಿತ್ತವನ್ನು ನೀನು ಅರಿಯಬೇಕೆಂದು, ತಮ್ಮ ಸತ್ಯ ಸ್ವರೂಪಿಯನ್ನು ನೀನು ನೋಡಬೇಕೆಂದು, ತಮ್ಮ ಕಂಠಸ್ವರವನ್ನು ನೀನು ಕೇಳಬೇಕೆಂದು ನಿನ್ನನ್ನು ಆರಿಸಿಕೊಂಡಿದ್ದಾರೆ. ನೀನು ಕಂಡು ಕೇಳಿದ ವಿಷಯಗಳಿಗೆ ನೀನೇ ಎಲ್ಲ ಜನರಿಗೆ ಅವರ ಪರವಾಗಿ ಸಾಕ್ಷಿಯಾಗಬೇಕು. ಇನ್ನು ತಡಮಾಡುವುದೇಕೆ? ಏಳು, ಅವರ ನಾಮವನ್ನು ಜಪಿಸಿ, ದೀಕ್ಷಾಸ್ನಾನವನ್ನು ಪಡೆದು ನಿನ್ನ ಪಾಪಗಳನ್ನು ತೊಳೆದುಕೊ,’ ಎಂದನು.

ಕೀರ್ತನೆ: 117:1-2
ಶ್ಲೋಕ: ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶ ಪ್ರಬೋಧಿಸಿರಿ.

ಸ್ತುತಿ ಮಾಡಿ ಪ್ರಭುವನು ಸಮಸ್ತ ರಾಷ್ಟ್ರಗಳೆ |
ಆತನನು ಹೊಗಲಿ ಹಾಡಿ ಸರ್ವಜನಾಂಗಗಳೇ||

ನಮ್ಮ ಮೇಲೆ ಆತನಿಗಿರುವ ಪ್ರೀತಿ ಅಚಲ|
ಆತನ ಸತ್ಯಪರತೆ ಇರುವುದು ಅನಂತ ಕಾಲ||

ಅಲ್ಲೆಲೂಯ, ಅಲ್ಲೆಲೂಯ!


ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ | ನೀವು ಲೋಕಕ್ಕೆ ಹೋಗಬೇಕು ಸಫಲರಾಗಬೇಕು; ಆ ಫಲ ಶಾಶ್ವತವಾಗಿರಬೇಕೆಂದೇ ನಿಮ್ಮನ್ನು ನೇಮಿಸಿದ್ದೇನೆ ||
ಅಲ್ಲೆಲೂಯ!

ಶುಭಸಂದೇಶ: ಮಾರ್ಕ 16:15-18


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: ‘ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ. ವಿಶ್ವಾಸವಿಟ್ಟು ದೀಕ್ಷಾಸ್ನಾನ ಪಡೆಯುವವನು ಜೀವೋದ್ಧಾರ ಹೊಂದುವನು. ವಿಶ್ವಾಸಿಸದೆ ಇರುವವನು ಖಂಡನೆಗೆ ಗುರಿಯಾಗುವನು. ವಿಶ್ವಾಸಿಸುವುದರಿಂದ ಈ ಅದ್ಭುತ ಕಾರ್ಯಗಳು ಆಗುವುವು. ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಹೊಸ ಭಾಷೆಗಳಲ್ಲಿ ಮಾತಾಡುವರು; ಕೈಗಳಿಂದ ಸರ್ಪಗಳನ್ನು ಎತ್ತಿದರೂ ವಿಷ ಪದಾರ್ಥಗಳನ್ನೇನಾದರೂ ಕುಡಿದರೂ ಯಾವ ಹಾನಿಯೂ ಅವರಿಗಾಗದು. ಅವರು ರೋಗಿಗಳ ಮೇಲೆ ಕೈ ಇಟ್ಟರೆ ರೋಗಿಗಳು ಗುಣ ಹೊಂದುವರು.”

24.01.23 - "ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ, ತಾಯಿ,"

ಮೊದಲನೇ ವಾಚನ: ಹಿಬ್ರಿಯರಿಗೆ  10:1-10

ರ್ಮಶಾಸ್ತ್ರವು ಬರಲಿದ್ದ ಸೌಭಾಗ್ಯದ ಛಾಯೆಯೇ ಹೊರತು ಅದರ ನಿಜಸ್ವರೂಪವಲ್ಲ. ವರ್ಷವರ್ಷವೂ ನಿರಂತರವಾಗಿ ಅದೇ ಬಲಿಗಳು ಅರ್ಪಿತವಾಗುತ್ತಿವೆ. ಹೀಗಿರುವಲ್ಲಿ, ದೇವರನ್ನು ಅರಸಿ ಬರುತ್ತಿರುವವರನ್ನು ಇಂಥ ಬಲಿಗಳಿಂದ ಸಿದ್ಧಿಗೆ ತರಲು ಹೇಗೆತಾನೆ ಸಾಧ್ಯ?  ಹಾಗೆ ಸಿದ್ಧಿಗೆ ತರಲು ಸಾಧ್ಯವಿದ್ದಿದ್ದರೆ ಬಲಿಯರ್ಪಣೆಯು  ಎಂದೋ ನಿಂತು ಹೋಗುತ್ತಿತ್ತು. ಏಕೆಂದರೆ, ಆಗ ಆರಾಧಕರು ಒಮ್ಮೆಗೇ ಶುದ್ಧಿಹೊಂದಿ ತಾವು ಪಾಪಿಗಳೆಂಬ ಮನವರಿಕೆಯೇ ಇಲ್ಲದೆ ಇರುತ್ತಿದ್ದರು.  ಬದಲಿಗೆ, ಪ್ರತಿ ವರ್ಷವೂ ಸಮರ್ಪಿಸಲಾಗುವ ಬಲಿಯರ್ಪಣೆಗಳು ಪಾಪನಿವಾರಣೆ ಆಗದ್ದನ್ನು ಜ್ಞಾಪಕಕ್ಕೆ  ತರುತ್ತವೆ. ಏಕೆಂದರೆ, ಹೋತ ಹೋರಿಗಳ ರಕ್ತದಿಂದ ಪಾಪನಿವಾರಣೆ ಅಸಾಧ್ಯ. ಆದ್ದರಿಂದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತಯೇಸು ದೇವರಿಗೆ  ಇಂತೆಂದರು: "ಬಲಿಯರ್ಪಣೆಗಳೂ ಕಾಣಿಕೆಗಳೂ ನಿಮಗೆ ಬೇಡವಾದವು: ಎಂದೇ ಆಣೆಮಾಡಿ ಕೊಟ್ಟಿರಿ ನನಗೆ ದೇಹವೊಂದನು. ಸರ್ವಾಂಗ ಹೋಮಗಳೂ ಪಾಪಪರಿಹಾರಕ ಬಲಿಗಳೂ ನಿಮಗೆ ತರಲಿಲ್ಲ ತೃಪ್ತಿಯನ್ನು. ಅಗ ಇಂತೆಂದೆ ನಾನು: ಗ್ರಂಥದ ಸುರುಳಿಯಲಿ ನನ್ನನ್ನು ಕುರಿತು ಬರೆದಿರುವಂತೆ, ಓ ದೇವಾ, ಇಗೋ ನಾ ಬಂದೆ ನಿನ್ನ ಚಿತ್ತವನ್ನು    ನೆರವೇರಿಸಲೆಂದೇ." ಧರ್ಮಶಾಸ್ತ್ರದ  ವಿಧಿಗನುಸಾರ ಅರ್ಪಿಸಲಾಗುತ್ತಿದ್ದುವಾದರೂ  "ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪಪರಿಹಾರಕ ಬಲಿಗಳು ನಿಮಗೆ  ಬೇಡವಾದವು; ಇವು ಯಾವುವೂ ನಿಮಗೆ ತರಲಿಲ್ಲ ತೃಪ್ತಿಯನು," ಎಂದು ಮೊದಲು ಹೇಳುತ್ತಾರೆ. ಆನಂತರ, "ಇಗೋ, ನಾ ಬಂದೆ, ನಿಮ್ಮ ಚಿತ್ತವನ್ನು ನೆರವೇರಿಸಲೆಂದೇ," ಎನ್ನುತ್ತಾರೆ. ಹೀಗೆ ಹೊಸದನ್ನು ಸ್ಥಾಪಿಸಲು ಹಳೆಯದನ್ನು ರದ್ದುಮಾಡಿದ್ದಾರೆ. ಯೇಸುಕ್ರಿಸ್ತರು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮ ದೇಹವನ್ನು ಸಮರ್ಪಿಸಿ, ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಪುನಿತರಾಗಿದ್ದೇವೆ.

ಕೀರ್ತನೆ: 40:2, 4, 7-8, 10, 11
ಶ್ಲೋಕ: ಪ್ರಭೂ, ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರವಾವೇಶ

ಕಾದಿದ್ದೆನು,  ಪ್ರಭುವಿಗಾಗಿ  ಕಾದಿದ್ದೆನು|
ಕೊನೆಗಾತ  ನನ್ನತ್ತ  ಬಾಗಿ  ಕಿವಿಗೊಟ್ಟನು||
ಬರಿಸಿದನು  ನವಗೀತೆಯನು|
ದೇವಸ್ತುತಿಯನು  ನನ್ನ  ಬಾಯಲಿ||

ಬೇಡವಾದವು  ನಿನಗೆ  ಯಜ್ಞಾರ್ಪಣೆ,  ಬಲಿಕಾಣಿಕೆ|
ಬಯಸಿಲ್ಲ  ನೀ  ಹೋಮವನೇ,  ಪರಿಹಾರಿಕ  ಬಲಿಯನೆ||
ಶ್ರವಣಶಕ್ತಿಯನು  ಅನುಗ್ರಹಿಸಿದೆ  ನೀನು  ನನಗೆ|
ನಾನೋಗೊಡುತ  ಇಂತೆಂದೆ:  " ಇಗೋ,   ನಾನೇ  ಬರುತ್ತಿರುವೆ"||  

ಜೀವೋದ್ಧಾರದ  ಶುಭಸಂದೇಶವನು  ಸಾರಿದೆ  ಮಹಾಸಭೆಗೆ|
ನಾ  ಸಾರಿದೆ  ಅದನು  ಮೌನವಿರದೆ,  ಇದು  ಗೊತ್ತಿದೆ  ಪ್ರಭೂ  ನಿನಗೆ||
ಬಚ್ಚಿಟ್ಟುಕೊಳ್ಳಲಿಲ್ಲ  ನನ್ನೆದೆಯೊಳು  ನಿನ್ನ  ಸತ್ಸಂಬಂಧವನು|
ಪ್ರಕಟಿಸಿದೆನು  ಜೀವೋದ್ಧಾರವನು,  ನಿನ್ನ  ಪ್ರಾಮಾಣಿಕತೆಯನು||

ಘೋಷಣೆ                      ಪ್ರೇ.ಕಾ. 16:14
ಅಲ್ಲೆಲೂಯ, ಅಲ್ಲೆಲೂಯ!
ನಿಮ್ಮ  ಬೋಧನೆಗೆ  ಕಿವಿಗೊಟ್ಟು  ಗ್ರಹಿಸುವಂತೆ,  ಪ್ರಭೂ,  ನಮ್ಮ  ಹೃದಯವನ್ನು  ತೆರೆಯಿರಿ,,
ಅಲ್ಲೆಲೂಯ!

ಶುಭಸಂದೇಶ: ಮಾರ್ಕ 3:31-35

ಯೇಸುಸ್ವಾಮಿಯ ತಾಯಿ ಮತ್ತು ಸಹೋದರರು ಅಲ್ಲಿಗೆ ಬಂದರು. ಒಳಗೆ ಜನರು ಯೇಸುವಿನ ಸುತ್ತಲೂ ಗುಂಪಾಗಿ ಕುಳಿತ್ತಿದ್ದರು. ಆದುದರಿಂದ ಅವರು ಹೊರಗೆ ನಿಂತು, ಯೇಸುವಿಗೆ ಬರಬೇಕೆಂದು ಹೇಳಿಕಳುಹಿಸಿದರು. "ನಿಮ್ಮ ತಾಯಿಯೂ ಸಹೋದರರೂ ಹೊರಗೆ ನಿಗಾಗಿ ಕಾದಿದ್ದಾರೆ," ಎಂದು ಯೇಸುವಿಗೆ ತಿಳಿಸಿದರು. ಅದಕ್ಕೆ ಯೇಸು, "ನನಗೆ ತಾಯಿ ಯಾರು?, ಸಹೋದರರು ಯಾರು?" ಎನ್ನುತ್ತಾ ತಮ್ಮ ಸುತ್ತಲೂ ಕುಳಿತಿದ್ದವರ ಮೇಲೆ ದೃಷ್ಟಿ ಹರಿಸಿ, "ಇಗೋ, ನನ್ನ ತಾಯಿ! ಇಗೋ ನನ್ನ ಸಹೋದರರು! ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ, ತಾಯಿ," ಎಂದರು.

23.01.23 - " ಸೈತಾನನ ಪಕ್ಷದವರು ಪರಸ್ಪರ ವಿರೋಧಿಗಳಾಗರೆ ಅವನ ರಾಜ್ಯ ಉಳಿಯದು."

ಮೊದಲನೆಯ ವಾಚನ: ಹಿಬ್ರಿಯರಿಗೆ 9:15, 24-28


ಸಹೋದರರೇ, ಈ ಕಾರಣ ಒಡಂಬಡಿಕೆಯನ್ನು ಏರ್ಪಡಿಸಿದ ಮಧ್ಯಸ್ಥರಾಗಿದ್ದಾರೆ. ದೈವಕರೆ ಹೊಂದಿದವರು ದೇವರು ವಾಗ್ದಾನ ಮಾಡಿದ ಅಮರ ಸೌಭಾಗ್ಯವನ್ನು ಬಾಧ್ಯವಾಗಿ ಪಡೆಯುವಂತೆ ಈ ಒಡಂಬಡಿಕೆಯನ್ನು ಏರ್ಪಡಿಸಲಾಯಿತು. ಇದು ಯೇಸುವಿನ ಮರಣದ ಮೂಲಕವೇ ಉಂಟಾಯಿತು. ಈ ಮರಣವು ಹಳೆಯ ಒಡಂಬಡಿಕೆಯನ್ನು ಮೀರಿ ಮಾಡಿದ ಅಪರಾಧಗಳನ್ನೂ ಪರಿಹರಿಸುತ್ತದೆ. ಕ್ರಿಸ್ತ ಯೇಸು ಪ್ರವೇಶಿಸಿದ್ದು ನೈಜದೇವಾಲಯದ ಛಾಯೆಯಂತಿರುವ ಮಾನವನಿರ್ಮಿತ ಗರ್ಭಗುಡಿಯನಲ್ಲ ; ನಮ್ಮ ಪರವಾಗಿ ದೇವರ ಸಮ್ಮುಖದಲ್ಲಿ ಉಪಸ್ಥಿತರಾಗಲು ಸಾಕ್ಷಾತ್ ಸ್ವರ್ಗವನ್ನೇ ಅವರು ಪ್ರವೇಶಿಸಿದರು. ಪ್ರಧಾನ ಯಾಜಕನು ಪ್ರತಿವರ್ಷವೂ ಪ್ರಾಣಿಗಳ ರಕ್ತವನ್ನು ತೆಗೆದುಕೊಂಡು ಗರ್ಭಗುಡಿಯನ್ನು ಪ್ರವೇಶಿಸುವಂತೆ ಯೇಸು ಪ್ರವೇಶಿಸಲಿಲ್ಲ. ಅವರು ಸ್ವರ್ಗವನ್ನು ಪ್ರವೇಶಿಸಿದ್ದು ಪದೇಪದೇ ತಮ್ಮನ್ನು ಸಮರ್ಪಿಸಿಕೊಳ್ಳುವುದಕ್ಕೂ ಅಲ್ಲ ; ಹಾಗೆ ಸಮರ್ಪಿಸಬೇಕಾಗಿದ್ದ ಪಕ್ಷದಲ್ಲಿ ಲೋಕಾದಿಯಿಂದಲೂ ಅವರು ಅನೇಕ ಸಾರಿ ಮರಣಯಾತನೆಯನ್ನು ಅನುಭವಿಸಬೇಕಾಗಿ ಬರುತ್ತಿತ್ತು; ಅದಕ್ಕೆ ಬದಲಾಗಿ ಯುಗಾಂತ್ಯವಾದ ಈ ಕಾಲದಲ್ಲಿ, ಪಾಪನಿವಾರಣೆ ಮಾಡಬೇಕೆಂಬ ಉದ್ದೇಶದಿಂದ ಒಮ್ಮೆಗೇ ತಮ್ಮನ್ನು ತಾವೇ ಬಲಿಯಾಗಿ ಸಮರ್ಪಿಸಿಕೊಳ್ಳಲೆಂದು ಯೇಸು ಪ್ರತ್ಯಕ್ಷರಾದರು. ಪ್ರತಿಯೊಬ್ಬ ಮಾನವನು ಸಾಯುವುದು ಒಂದೇ ಸಾರಿ. ಅನಂತರ ಅವನು ನ್ಯಾಯತೀರ್ಪಿಗೆ ಗುರಿಯಾಗಬೇಕು. ಹಾಗೆಯೇ, ಎಲ್ಲಾ ಮಾನವರ ಪಾಪಗಳನ್ನು ಹೊತ್ತು ಹೋಗಲಾಡಿಸಲು ಕ್ರಿಸ್ತಯೇಸು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮನ್ನೇ ಬಲಿಯಾಗಿ ಸಮರ್ಪಿಸಿಕೊಂಡರು. ಅವರು ಮತ್ತೆ ಪ್ರತ್ಯಕ್ಷರಾಗುವರು; ಪಾಪನಿವಾರಣೆ ಮಾಡಲೆಂದು ಅಲ್ಲ, ತಮ್ಮನ್ನು ನಂಬಿ ನಿರೀಕ್ಷಿಕೊಂಡವರನ್ನು ಜೀವೋದ್ಧಾರಮಾಡಲೆಂದು.

ಕೀರ್ತನೆ 98:1, 2-4, 5-6
ಶ್ಲೋಕ: ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು.

ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು|
ಎಸಗಿಹನಾತನು ಪವಾಡ ಕಾರ್ಯಗಳನು|
ಗಳಸಿತಾತನ ಕೈ ಪೂತಭುಜ ಗೆಲುವನು||

ಪ್ರಕಟಿಸಿಹನಾ ಪ್ರಭು ಮುಕ್ತಿವಿಧಾನವನು|
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕ ಶಕ್ತಿಯನು||
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು|
ಇಸ್ರಾಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು||

ಕಂಡು ಬಂದಿತು ಜಗದ ಎಲ್ಲೆ ಎಲ್ಲೆಗೆ ನಮ್ಮ ದೇವ ಸಾಧಿಸಿದ ಜಯಗಳಿಕೆ||
ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ|
ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ||

ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ|
ಭಜಿಸಿರಿ ಆತನನು ವಾದ್ಯಮೇಳದೊಂದಿಗೆ||
ಊದಿರಿ ಕೊಂಬನು, ತುತೂರಿಯನು|
ಉದ್ಘೋಷಿಸಿರಿ ಪ್ರಭು ರಾಜನನು||

ಶುಭಸಂದೇಶ: ಮಾರ್ಕ 3:22-30


ಆ ಕಾಲದಲ್ಲಿ ಜೆರುಸಲೇಮಿನಿಂದ ಬಂದಿದ್ದ ಧರ್ಮಶಾಸ್ತ್ರಿಗಳು, " ಇವರನ್ನು ಬೆಲ್ಜೆಬೂಲನು ಹಿಡಿದಿದ್ದಾನೆ; ದೆವ್ವಗಳ ಒಡೆಯನ ಶಕ್ತಿಯಿಂದಲೇ ಇವನು ದೆವ್ವ ಬಿಡಿಸುತ್ತಾನೆ, " ಎನ್ನುತ್ತಿದ್ದರು. ಆಗ ಯೇಸು ಅವರನ್ನು ತಮ್ಮ ಹತ್ತಿರಕ್ಕೆ ಕರೆದು ಸಾಮತಿಗಳ ಮೂಲಕ ಮಾತನಾಡತೊಡಗಿದರು: "ಸೈತಾನನು ಸೈತಾನನನ್ನು ಹೊರದೂಡುವುದು ಹೇಗೆ ತಾನೇ ಸಾಧ್ಯ? ಒಂದು ರಾಜ್ಯದ ಪ್ರಜೆಗಳು ತಮ್ಮತಮ್ಮೊಳಗೆ ಕಚ್ಚಾಡುವುದಾದರೆ ಆ ಕುಟುಂಬ ಬಾಳದು. ಅದರಂತೆಯೇ ಸೈತಾನನ ಪಕ್ಷದವರು ಪರಸ್ಪರ ವಿರೋಧಿಗಳಾಗರೆ ಅವನ ರಾಜ್ಯ ಉಳಿಯದು; ಅದು ಅಳಿದು ಹೋಗುವುದು. ಒಬ್ಬನು ಬಲಿಷ್ಟನ ಮನೆಯನ್ನು ನುಗ್ಗಿ ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆಮಾಡಲಾಗದು. ಮೊದಲು ಅವನನ್ನು ಕಟ್ಟಬೇಕು. ಬಳಿಕ ಅವನ ಮನೆಯನ್ನು ಕೊಳ್ಳೆಹೊಡೆಯಬೇಕು. ನಿಶ್ಚಯವಾಗಿ ನಿಮಗೆ ಹೇಳುತ್ತೇನೆ: ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೂ ಆಡುವ ಎಲ್ಲಾ ದೇವದೂಷಣೆಗಳಿಗೂ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಮಾತ್ರ ಕ್ಷಮೆ ದೊರಕದು. ಅಂಥವನ ಪಾಪ ಶಾಶ್ವತವಾದುದು, " ಹೀಗೆ ಎಂದರು. (ದೆವ್ವ ಹಿಡಿದಿದೆ ಎಂದು ತಮ್ಮನ್ನು ಕೆಲವರು ನಿಂದಿಸುತ್ತಿದ್ದುದರಿಂದ ಯೇಸು ಹೀಗೆ ಹೇಳಿದರು).

22.01.23 - "ಕೂಡಲೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು"

ಮೊದಲನೇ ವಾಚನ: ಯೆಶಾಯ 8:23-9:3

ಆಕಾಶವನ್ನು ದಿಟ್ಟಿಸಿ ನೋಡಿದರೂ ಭೂಮಿಯನ್ನು ದುರುಗುಟ್ಟಿ ನೋಡಿದರೂ ಅವರಿಗೆ ಕಾಣುವುದು ಕಷ್ಟ ಸಂಕಟಗಳ ಕತ್ತಲೆ, ಭಯಂಕರವಾದ ಕಾಳಗತ್ತಲೆಯಲ್ಲದೆ ಮತ್ತೇನೂ ಅಲ್ಲ. ಅಂಥ ಕರಾಳ ಕತ್ತಲೆಯೊಳಗೆ ಅವರನ್ನು ದೂಡಲಾಗುವುದು.  ಆದರೂ ಕಷ್ಟ ಸಂಕಷ್ಟಗಳನ್ನು ಅನುಭವಿಸಿದ ಆ ನಾಡಿಗೆ ಇನ್ನು ಮುಂದೆ ಕತ್ತಲಿರುವುದಿಲ್ಲ. ಒಮ್ಮೆ ಜೆಬುಲೋನ್ ಮತ್ತು ನಪ್ತಾಲಿಯ ಗೋತ್ರಗಳಿಗೆ ಬೀಡಾಗಿದ್ದ ಆ ಪ್ರಾಂತ್ಯವು ಅವಮಾನಕ್ಕೆ ಗುರಿಯಾಗಿತ್ತು. ಆದರೆ ಇನ್ನು ಮುಂದೆ ಅದಕ್ಕೆ ಘನತೆ ಗೌರವ ಬರುವುದು: ಸಮುದ್ರದ ಹಾದಿಯಿಂದ ಹಿಡಿದು ಜೋರ್ಡನಿನ ಆಚೆಯಲ್ಲಿ ಇರುವ ಪ್ರಾಂತ್ಯದವರೆಗೆ ಮಾತ್ರವಲ್ಲ, ಅನ್ಯಜನರು ಇರುವ ಗಲಿಲೇಯ ಪ್ರಾಂತ್ಯದವರೆಗೂ ಘನತೆ ಗೌರವ ಬಂದೊದಗುವುದು. ಕಾಣಿಸಿತೊಂದು ಮಹಾಜ್ಯೋತಿ ಕತ್ತಲಲಿ ಸಂಚರಿಸುತ್ತಿದ್ದ ಜನರಿಗೆ ಪ್ರಜ್ವಲಿಸಿತಾ ಜ್ಯೋತಿ ಕಗ್ಗತ್ತಲಲಿ ಬಾಳುತ್ತಿದ್ದಾ ನಡಿಗರಿಗೆ. ವೃದ್ಧಿಗೊಳಿಸಿರುವೆ ನೀನು ಆ ದೇಶವನು ಅಧಿಕರಿಸಿರುವೆ ಅದರ ತೋಷವನು ಸುಗ್ಗಿಕಾಲದಲಿ ಹಿಗ್ಗುವವರಂತೆ ಕೊಳ್ಳೆ ಹಂಚಿಕೊಳ್ಳುವವರಂತೆ ಹರ್ಷಿಸುವರವರು ನಿನ್ನ ಮುಂದೆ.

ಕೀರ್ತನೆ: 27:1, 4, 13-14

ಶ್ಲೋಕ: ನಿನ್ನ ಮಾರ್ಗವನು ಪ್ರಭೂ, ನನಗೆ ತೋರಿಸು

ನನಗೆ  ಬೆಳಕು,  ನನಗೆ  ರಕ್ಷೆ  ಪ್ರಭುವೇ|
ನಾನಾರಿಗೂ  ಅಳುಕೆನು||
ನನ್ನ  ಬಾಳಿಗಾಧಾರ  ಪ್ರಭುವೇ|
ನಾನಾರಿಗೂ  ಅಂಜೆನು||

ನಾನೊಂದನು  ಕೋರಿದೆ  ಪ್ರಭುವಿನಿಂದ|
ನಾನದನ್ನೇ  ನಿರೀಕ್ಷಿಸಿದೆ  ಆತನಿಂದ||
ವಾಸಿಸಬೇಕು  ಜೀವಮಾನವೆಲ್ಲ  ನಾನಾತನ  ಮಂದಿರದಲಿ|
ನಾ  ತಲ್ಲೀನನಾಗಬೇಕು  ಅಲ್ಲಾತನ  ಪ್ರಸನ್ನತೆಯಲಿ||

ಪ್ರಭುವಿನೊಳಿತನು  ನಾ  ಕಾಣುವೆ  ಜೀವಲೋಕದೊಳು|
ನಾನಿಟ್ಟಿರುವೆ  ನಂಬಿಕೆ  ನಿರೀಕ್ಷೆ  ಅದರೊಳು||
ಪ್ರಭುವನು  ಎದುರು  ನೋಡುತ್ತಿರು  ಮನವೇ|
ಧೈರ್ಯದಿಂದ  ನಿರೀಕ್ಷಿಸುತ್ತಿರು  ಎದೆಗುಂದದೆ||

ಎರಡನೇ ವಾಚನ: 1 ಕೊರಿಂಥಿಯರಿಗೆ 1:10-13, 17

ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ: ವಾದ ವಿವಾದವಿಲ್ಲದೆ, ಭಿನ್ನಭೇದಗಳಿಲ್ಲದೆ ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕ್ಯಮತ್ಯದಿಂದ ಬಾಳಿರಿ. ಸಹೋದರರೇ, ನೀವು ಜಗಳವಾಡುತ್ತಿದ್ದೀರಿ ಎಂಬುದು ಖ್ಲೋಯೇಯನ ಮನೆಯವರಿಂದ ತಿಳಿದು ಬಂದಿದೆ. ನಿಮ್ಮ ಪೈಕಿ, ತಾನು ಪೌಲನ ಕಡೆಯವನು ಎಂದು ಒಬ್ಬ, ತಾನು ಅಪೊಲೋಸನ ಕಡೆಯವನು ಎಂದು ಇನ್ನೊಬ್ಬ, ತಾನು ಕೇಫನ ಕಡೆಯವನು ಎಂದು ಮತ್ತೊಬ್ಬ, ತಾನು ಕ್ರಿಸ್ತನ ಕಡೆಯವನು ಎಂದು ಮಗದೊಬ್ಬ. ಹೀಗೆ ಒಬ್ಬೊಬ್ಬರು ಒಂದೊಂದು ತೆರನಾಗಿ ಹೇಳಿಕೊಳ್ಳುತ್ತಾರಂತೆ. ಕ್ರಿಸ್ತಯೇಸು ಭಾಗ ಭಾಗವಾಗಿ ವಿಂಗಡಿಸಿ ಹೋಗಿದ್ದಾರೆಯೇ? ನಿಮಗೋಸ್ಕರ ಶಿಲುಬೆಯ ಮೇಲೆ ಮಡಿದವನು ಪೌಲನೇ? ನೀವು ದೀಕ್ಷಾಸ್ನಾನ ಪಡೆದದ್ದು ಪೌಲನ ಹೆಸರಿನಲ್ಲೇ? ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ, ಶುಭಸಂದೇಶವನ್ನು ಸಾರುವುದಕ್ಕೆ. ಅದೂ ವಾಕ್‍ಚಾತುರ್ಯದಿಂದಲ್ಲ. ಹಾಗೆ ಸಾರಿದ್ದೇ ಆದರೆ, ಕ್ರಿಸ್ತಯೇಸುವಿನ ಶಿಲುಬೆಯೇ ನಿರರ್ಥಕವಾದೀತು.

ಶುಭಸಂದೇಶ: ಮತ್ತಾಯ 4:12-23


ಯೊವಾನ್ನನು ಬಂಧಿತನಾದನೆಂದು ಯೇಸುಸ್ವಾಮಿ ಕೇಳಿ, ಆ ಪ್ರಾಂತ್ಯವನ್ನು ಬಿಟ್ಟು ಗಲಿಲೇಯಕ್ಕೆ ಹೊರಟುಹೋದರು. ನಜರೇತ್ ಊರಿನಲ್ಲಿ ತಂಗದೆ ಗಲಿಲೇಯ ಸರೋವರದ ಸವಿೂಪದಲ್ಲಿರುವ ಕಫೆರ್ನವುಮ್ ಎಂಬ ಊರಿನಲ್ಲಿ ವಾಸಮಾಡಿದರು. ಇದು ಜೆಬುಲೋನ್ ಹಾಗೂ ನೆಫ್ತಲೀಮ್ ನಾಡುಗಳ ಸರಹದ್ದಿನಲ್ಲಿದೆ. ಹೀಗೆ: "ಜೆಬುಲೋನ್ ನಾಡೇ, ನೆಫ್ತಲೀಮ್ ನಾಡೇ, ಸರೋವರದ ಹತ್ತಿರವಿರುವ ಹಾದಿಬೀದಿಯೇ, ಜೋರ್ಡನಿನ ಹೊರವಲಯವೇ, ಕಾರ್ಗತ್ತಲಲ್ಲಿ ವಾಸಿಸುವವರಿಗೆ ದಿವ್ಯ ಜ್ಯೋತಿಯೊಂದು ಕಾಣಿಸಿತು. ಮರಣಛಾಯೆ ಕವಿದ ನಾಡಿಗರಿಗೆ ಅರುಣೋದಯವಾಯಿತು,"ಎಂದು ನುಡಿದ ಪ್ರವಾದಿ ಯೆಶಾಯನ ವಚನಗಳು ಈಡೇರಿದವು. ಅಂದಿನಿಂದ ಯೇಸು, "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಸ್ವರ್ಗಸಾಮ್ರಾಜ್ಯ ಸಮೀಪಿಸಿತು," ಎಂಬ ಸಂದೇಶವನ್ನು ಬೋಧಿಸತೊಡಗಿದರು.

ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದರು. ಆಗ ಇಬ್ಬರು ಸಹೋದರರನ್ನು ಕಂಡರು. ಇವರೇ ‘ಪೇತ್ರ’ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ. ಬೆಸ್ತರಾದ ಇವರು ಸರೋವರದಲ್ಲಿ ಬಲೆ ಬೀಸುತ್ತಾ ಇದ್ದರು. "ನನ್ನನ್ನು ಹಿಂಬಾಲಿಸಿ ಬನ್ನಿ. ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು," ಎಂದು ಹೇಳಿ ಯೇಸು ಅವರನ್ನು ಕರೆದರು. ತಕ್ಷಣವೇ, ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದಾಗ ಯೇಸು ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಎಂಬ ಇನ್ನಿಬ್ಬರು ಸಹೋದರರನ್ನು ಕಂಡರು. ಇವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯಲ್ಲಿ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಇವರನ್ನೂ ಕರೆದರು. ಕೂಡಲೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಉಪದೇಶ ಮಾಡುತ್ತಿದ್ದರು. ದೈವರಾಜ್ಯದ ಸಂದೇಶವನ್ನು ಪ್ರಬೋಧಿಸುತ್ತಿದ್ದರು. ಜನರ ಎಲ್ಲಾ ತರಹದ ರೋಗರುಜಿನಗಳನ್ನೂ ಬೇನೆ ಬವಣೆಗಳನ್ನೂ ಗುಣಪಡಿಸುತ್ತಿದ್ದರು.

21.01.23 - "ಯೇಸುವಿಗೂ ಶಿಷ್ಯರಿಗೂ ಊಟಮಾಡಲು ಕೂಡ ಬಿಡುವಿಲ್ಲದೆ ಹೋಯಿತು"

ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 9:2-3, 11-14

ಸಹೋದರರೇ, ದೇವಾರಾಯಧನೆಗೆ  ಒಂದು ಗುಡಾರವನ್ನು ಕಟ್ಟುತ್ತಿದ್ದರು. ಅದರಲ್ಲಿ ಎರಡು ಭಾಗಗಳು ಇದ್ದವು. ಮೊದಲನೆಯ ಭಾಗಕ್ಕೆ ಪವಿತ್ರಸ್ಥಳ ಎಂದು ಹೆಸರು. ಅಲ್ಲಿ, ಒಂದು ದೀಪಸ್ತಂಭ ಮತ್ತು ಒಂದು ಮೇಜು ಇದ್ದವು. ಆ ಮೇಜಿನ ಮೇಲೆ ಅರ್ಪಣೆಯ ನೈವೇದ್ಯ ರೊಟ್ಟಿಗಳನ್ನು ಇಡುತ್ತಿದ್ದರು. 3ಅದರ ಎರಡನೆಯ ಭಾಗಕ್ಕೆ ಗರ್ಭಗುಡಿ ಎಂದು ಹೆಸರು. ಈ ಎರಡು ಭಾಗಗಳ ನಡುವೆ ತೆರೆಯಿತ್ತು. ಗರ್ಭಗುಡಿಯನ್ನು ಈ ತೆರೆ ಮರೆಮಾಡಿತ್ತು ಆದರೆ ಕ್ರಿಸ್ತಯೇಸು ಈಗಾಗಲೇ ಪ್ರಧಾನಯಾಜಕರಾಗಿ ಬಂದಿದ್ದಾರೆ. ಅವರು ಅನುಗ್ರಹಿಸುವ ಸತ್ಫಲಗಳು ಈಗಾಗಲೇ ನಮಗೆ ದೊರೆತಿವೆ. ಅವರು ಸೇವೆ ಸಲ್ಲಿಸುತ್ತಿರುವ ಗುಡಾರವು ಹಿಂದಿನವುಗಳಿಗಿಂತ ಶ್ರೇಷ್ಠವಾದುದು ಮತ್ತು ಪರಿಪೂರ್ಣವಾದುದು. ಇದು ಕೈಯಿಂದ ಕಟ್ಟಿದ್ದಲ್ಲ. ಇಹಲೋಕದ ಸೃಷ್ಟಿಗೆ ಸಂಬಂಧಪಟ್ಟಿದ್ದಲ್ಲ. ಇಂಥ ಗರ್ಭಗುಡಿಯನ್ನು ಅವರು ಒಮ್ಮೆಗೇ ಶಾಶ್ವತವಾಗಿ ಪ್ರವೇಶಿಸಿದ್ದಾರೆ. ಹೋತಗಳ ಅಥವಾ ಹೋರಿಕರುಗಳ ರಕ್ತವನ್ನು ತೆಗೆದುಕೊಂಡು ಅವರು ಪ್ರವೇಶಿಸಲಿಲ್ಲ. ತಮ್ಮ ಸ್ವಂತ ರಕ್ತವನ್ನೇ ತೆಗೆದುಕೊಂಡು ಪ್ರವೇಶಿಸಿ ನಮಗೆ ಶಾಶ್ವತ ಜೀವೋದ್ಧಾರವು ದೊರಕುವಂತೆ ಮಾಡಿದ್ದಾರೆ. ಹೋತಹೋರಿಗಳ ರಕ್ತವನ್ನೂ ಯಜ್ಞಪಶುಗಳ ಬೂದಿಯನ್ನೂ ಮಲಿನರಾದವರ ಮೇಲೆ ಚಿಮುಕಿಸುವುದರ ಮೂಲಕ ಶಾರೀರಕ ಮೈಲಿಗೆಯನ್ನು ಹೋಗಲಾಡಿಸಿ ಅವರನ್ನು ಪರಿಶುದ್ಧಗೊಳಿಸಬಹುದಾದರೆ, ಯೇಸುವಿನ ರಕ್ತವು ಮತ್ತಷ್ಟು ಹೆಚ್ಚಾಗಿ ನಮ್ಮನ್ನು ಪರಿಶುದ್ಧಗೊಳಿಸುತ್ತದಲ್ಲವೇ? ನಿತ್ಯಾತ್ಮದ ಮೂಲಕ ಅವರು ತಮ್ಮನ್ನೇ ನಿಷ್ಕಳಂಕಬಲಿಯಾಗಿ ದೇವರಿಗೆ ಸಮರ್ಪಿಸಿದ್ದಾರೆ; ನಾವು ಜೀವಸ್ವರೂಪರಾದ ದೇವರನ್ನು ಆರಾಧಿಸುವಂತೆ, ಜಡಕರ್ಮಗಳಿಂದ ನಮ್ಮನ್ನು ಬಿಡುಗಡೆಮಾಡಿ ನಮ್ಮ ಅಂತರಂಗವನ್ನು ಪರಿಶುದ್ಧಗೊಳಿಸುತ್ತಾರೆ.
ಪ್ರಭುವಿನ ವಾಕ್ಯ

ಕೀರ್ತನೆ: 47:2-3, 6-7, 8-9 
ಶ್ಲೋಕ: ಏರಿದನು ಜಯಜಯಕಾರದೊಂದಿಗೆ, ಆರೋಹಣವಾದನು ತುತೂರಿನಾದದ ಜೊತೆಗೆ. 

ಪರಾತ್ಪರನಾದ ಪ್ರಭುವು ಘನಗಂಭೀರನು I
ಪ್ರಪಂಚಕ್ಕೆಲ್ಲ ರಾಜಾಧಿರಾಜನು II
ಜನಾಂಗಗಳನಾತ ನಮಗಧೀನಪಡಿಸಿಹನು I
ರಾಷ್ಟ್ರಗಳನು ನಮಗೆ ಪಾದಪೀಠವಾಗಿಸಿಹನು II


ಕೀರ್ತಿಸಿರಿ, ನಮ್ಮ ದೇವನನು ಸಂಕೀರ್ತಿಸಿರಿ I
ಕೀರ್ತಿಸಿರಿ, ನಮ್ಮ ರಾಜನನು ಸಂಕೀರ್ತಿಸಿರಿ II
ದೇವನು ಭೂಮಂಡಲಕ್ಕೆಲ್ಲಾ ಒಡೆಯನು I
ಕೀರ್ತನೆಯಿಂದ ಕೊಂಡಾಡಿರಿ ಆತನನು II

ವಹಿಸಿಕೊಂಡನು ದೇವನು ಸರ್ವಾಧಿಪತ್ಯ I
ಅಲಂಕರಿಸಿಹನು ತನ್ನ ಪೂಜ್ಯ ಗದ್ದುಗೆಯ II
ಒಟ್ಟುಗೂಡಿ ಬಂದರು ಪ್ರಜೆಯ ಪ್ರಮುಖರು I

ಅಬ್ರಹಾಮನ ದೇವಜನರೊಡನೆ ಸೇರಿಕೊಂಡರು II
ಭೂಪಾಲರೆಲ್ಲರೂ ದೇವರಿಗೆ ಅಧೀನರು I
ಸರ್ವೋನ್ನತನು, ಸಾರ್ವಭೌಮನು ದೇವರು II

ಮಾರ್ಕನು ಬರೆದ ಶುಭಸ೦ದೇಶ 3:20-21


ಯೇಸುಸ್ವಾಮಿ ಮನೆಗೆ ಹೋದಾಗ ಜನರು ಮರಳಿ ಗುಂಪುಗುಂಪಾಗಿ ಬಂದರು. ಯೇಸುವಿಗೂ ಶಿಷ್ಯರಿಗೂ ಊಟಮಾಡಲು ಕೂಡ ಬಿಡುವಿಲ್ಲದೆ ಹೋಯಿತು. :ಈತನಿಗೆ ಹುಚ್ಚು ಹಿಡಿದಿದೆ,” ಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ಆದ್ದರಿಂದ ಯೇಸುವಿನ ಬಂಧುಗಳು ಯೇಸುವನ್ನು ಹಿಡಿದು ತರಲು ಹೊರಟರು.
ಪ್ರಭು ಕ್ರಿಸ್ತರ ಶುಭಸ೦ದೇಶ

20.01.23 - "ಯೇಸು ಹನ್ನೆರಡು ಮಂದಿಯನ್ನು ಆಯ್ದುಕೊಂಡು, ‘ಪ್ರೇಷಿತರು’ ಎಂದು ಅವರಿಗೆ ಹೆಸರಿಟ್ಟರು. "

ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 8:6-13


ಸಹೋದರರೇ, ಯೇಸು, ಆ ಯಾಜಕರ ಸೇವೆಗಿಂತಲೂ ಶ್ರೇಷ್ಠವಾದ ಯಾಜಕಸೇವೆಯನ್ನು ಕೈಗೊಂಡಿದ್ದಾರೆ. ಯೇಸುವನ್ನು ಮಧ್ಯಸ್ಥರನ್ನಾಗಿ ಪಡೆದಿರುವ ಒಡಂಬಡಿಕೆಯು ಅಷ್ಟೇ ಶ್ರೇಷ್ಠವಾದುದು. ಏಕೆಂದರೆ ಅದು, ಹಿಂದಿನ ವಾಗ್ದಾನಗಳಿಗಿಂತಲೂ ಉತ್ತಮವಾದ ವಾಗ್ದಾನಗಳನ್ನು ಆಧರಿಸಿದೆ. ಮೊದಲನೆಯ ಒಡಂಬಡಿಕೆ ದೋಷರಹಿತ ಆಗಿದ್ದಿದ್ದರೆ, ಎರಡನೆಯ ಒಡಂಬಡಿಕೆಯ ಅವಶ್ಯಕತೆಯೇ ಇರುತ್ತಿರಲಿಲ್ಲ. ಆದರೆ ದೇವರು ಆ ಒಡಂಬಡಿಕೆಗೆ ಸೇರಿದ ಜನರನ್ನು ಆರೋಪಿಸುತ್ತಾ ಇಂತೆಂದಿದ್ದಾರೆ: “ಇಗೋ, ನಾನು ಇಸ್ರಯೇಲ್ ವಂಶದವರೊಂದಿಗೂ ಯೆಹೂದ್ಯ ವಂಶದವರೊಂದಿಗೂ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ಕಾಲವು ಬರಲಿದೆ, ಎಂದರು ಸರ್ವೇಶ್ವರ. ಈ ಒಡಂಬಡಿಕೆ, ನಾನು ಪೂರ್ವಜರನ್ನು ಈಜಿಪ್ಟ್ ದೇಶದಿಂದ ಕೈಹಿಡಿದು ಕರೆತಂದಾಗ ಮಾಡಿದ ಒಡಂಬಡಿಕೆಯಂತಲ್ಲ; ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲ; ಎಂದೇ, ನಾನು ಅವರನ್ನು ಲಕ್ಷಿಸಲೂ ಇಲ್ಲ, ಎಂದರು ಸರ್ವೇಶ್ವರ. ಆ ದಿನಗಳು ಬಂದಮೇಲೆ ಇಸ್ರಯೇಲ್ ವಂಶದವರೊಡನೆ ನಾನು ಮಾಡಿಕೊಳ್ಳುವ ಒಡಂಬಡಿಕೆ ಹೀಗಿರುವುದು, ಎಂದರು ಸರ್ವೇಶ್ವರ. ನಾಟಿಸುವೆನು ನನ್ನಾಜ್ಞೆಗಳನು ಅವರ ಮನದಲಿ ಬರೆಯುವೆನು ಅವುಗಳನು ಅವರ ಹೃದಯದಲಿ ದೇವನಾಗಿರುವೆನು ನಾನವರಿಗೆ ಅವರಾಗುವರು ಪ್ರಜೆಗಳು ನನಗೆ. ‘ಸರ್ವೇಶ್ವರನನ್ನು ಅರಿತುಕೊಳ್ಳಿರಿ’ ಎಂದು ನೆರೆಯವನಿಗಾಗಲಿ, ಸೋದರನಿಗಾಗಲಿ ಯಾರೂ ಬೋಧಿಸಬೇಕಾಗಿಲ್ಲ. ಹಿರಿಯಕಿರಿಯರು ಎಲ್ಲರೂ ನನ್ನನ್ನು ಅರಿಯುವರು. ಅವರ ಪಾಪಗಳನ್ನು ಕ್ಷಮಿಸುವೆನು ಅವರ ತಪ್ಪುನೆಪ್ಪುಗಳನು ನೆನಪಿಗೆ ತಂದುಕೊಳ್ಳೆನು ಎಂದರು ಸರ್ವೇಶ್ವರ.” ಇಲ್ಲಿ ‘ಹೊಸ ಒಡಂಬಡಿಕೆ’ ಎಂದು ಹೇಳಿ, ಹಿಂದಿನದನ್ನು ಹಳೆಯದಾಗಿಸಿದ್ದಾರೆ. ಹಳತಾದುದು ಹಾಗೂ ಮುದಿಯಾದುದು ಅಳಿದುಹೋಗುವಂಥಾದ್ದು. ಪ್ರಭುವಿನ ವಾಕ್ಯ

ಕೀರ್ತನೆ: 85:8, 10, 11-12, 13-14
ಶ್ಲೋಕ: ಪ್ರೀತಿಯೂ, ಸತ್ಯವೂ ಒಂದನ್ನೊಂದು ಕೂಡಿರುವುದು. 

ನಾ ಕೇಳುತ್ತಿರುವೆನು, ಪ್ರಭು ಹೇಳುವುದನು I
ತನ್ನ ಜನರಿಗಾತ ನುಡಿವುದು ಶಾಂತಿಯನು I
ಇನ್ನಾದರು ತೊರೆಯೋಣ ಮೂರ್ಖತೆಯನು II
ಪ್ರೀತಿಯೂ ಸತ್ಯವೂ ಒಂದನ್ನೊಂದು ಕೂಡಿರುವುವು I

ನೀತಿಯೂ ಶಾಂತಿಯೂ ಒಂದನ್ನೊಂದು ಚುಂಬಿಸುವುವು II
ಸತ್ಯತೆಯು ಹುಟ್ಟುವುದು ಭೂಮಿಯಿಂದ I
ನೀತಿಯು ದೃಷ್ಟಿಸುವುದು ಗಗನದಿಂದ II
ಪ್ರಭು ಕೊಟ್ಟೇ ತೀರುವನು ಒಳಿತನು I

ನಮ್ಮ ನಾಡು ನೀಡುವುದು ಬೆಳೆಯನು II
ನಡೆವುದು ಪ್ರಭುವಿನ ಮುಂದೆ ನೀತಿ I
ಮಾಡುವುದು ಆತನ ಹೆಜ್ಜೆಗೆ ಹಾದಿ II

ಮಾರ್ಕನು ಬರೆದ ಶುಭಸ೦ದೇಶ 3:13-19 


ಆ ಕಾಲದಲ್ಲಿ ಯೇಸುಸ್ವಾಮಿ ಬೆಟ್ಟವನ್ನೇರಿ, ತಮಗೆ ಒಪ್ಪಿಗೆಯಾದವರನ್ನು ಕರೆದರು. ಅವರು ಹತ್ತಿರಕ್ಕೆ ಬಂದರು. ಯೇಸು ಹನ್ನೆರಡು ಮಂದಿಯನ್ನು ಆಯ್ದುಕೊಂಡು, ‘ಪ್ರೇಷಿತರು’ ಎಂದು ಅವರಿಗೆ ಹೆಸರಿಟ್ಟರು. “ನನ್ನ ಜೊತೆಯಲ್ಲಿ ಇರಲು ನಿಮ್ಮನ್ನು ಆರಿಸಿಕೊಂಡಿದ್ದೇನೆ. ಶುಭಸಂದೇಶವನ್ನು ಸಾರಲು ನಿಮ್ಮನ್ನು ಕಳುಹಿಸುತ್ತೇನೆ. ದೆವ್ವಗಳನ್ನು ಬಿಡಿಸುವ ಅಧಿಕಾರವನ್ನು ನಿಮಗೆ ಕೊಡುತ್ತೇನೆ", ಎಂದು ಅವರಿಗೆ ಹೇಳಿದರು. ಹೀಗೆ ನೇಮಕಗೊಂಡ ಹನ್ನೆರಡು ಮಂದಿ ಯಾರೆಂದರೆ : ಸಿಮೋನ (ಯೇಸು ಈತನಿಗೆ ‘ಪೇತ್ರ’ ಎಂದು ಹೆಸರಿಟ್ಟರು). ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ (ಯೇಸು ಇವರಿಬ್ಬರಿಗೆ ‘ಬೊವನೆರ್ಗೆಸ್’ ಎಂದರೆ ‘ಸಿಡಿಲಮರಿಗಳು’ ಎಂಬ ಹೆಸರನ್ನಿಟ್ಟರು).  ಅಂದ್ರೆಯ, ಫಿಲಿಪ್ಪ, ಬಾರ್ತಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗ ಯಕೋಬ, ತದ್ದಾಯ, ದೇಶಾಭಿಮಾನಿ ಆದ ಸಿಮೋನ ಮತ್ತು ಮುಂದೆ ಗುರುದ್ರೋಹಿಯಾಗಲಿದ್ದ ಇಸ್ಕರಿಯೋತ. ಪ್ರಭು ಕ್ರಿಸ್ತರ ಶುಭಸ೦ದೇಶ