ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

20.01.23 - "ಯೇಸು ಹನ್ನೆರಡು ಮಂದಿಯನ್ನು ಆಯ್ದುಕೊಂಡು, ‘ಪ್ರೇಷಿತರು’ ಎಂದು ಅವರಿಗೆ ಹೆಸರಿಟ್ಟರು. "

ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 8:6-13


ಸಹೋದರರೇ, ಯೇಸು, ಆ ಯಾಜಕರ ಸೇವೆಗಿಂತಲೂ ಶ್ರೇಷ್ಠವಾದ ಯಾಜಕಸೇವೆಯನ್ನು ಕೈಗೊಂಡಿದ್ದಾರೆ. ಯೇಸುವನ್ನು ಮಧ್ಯಸ್ಥರನ್ನಾಗಿ ಪಡೆದಿರುವ ಒಡಂಬಡಿಕೆಯು ಅಷ್ಟೇ ಶ್ರೇಷ್ಠವಾದುದು. ಏಕೆಂದರೆ ಅದು, ಹಿಂದಿನ ವಾಗ್ದಾನಗಳಿಗಿಂತಲೂ ಉತ್ತಮವಾದ ವಾಗ್ದಾನಗಳನ್ನು ಆಧರಿಸಿದೆ. ಮೊದಲನೆಯ ಒಡಂಬಡಿಕೆ ದೋಷರಹಿತ ಆಗಿದ್ದಿದ್ದರೆ, ಎರಡನೆಯ ಒಡಂಬಡಿಕೆಯ ಅವಶ್ಯಕತೆಯೇ ಇರುತ್ತಿರಲಿಲ್ಲ. ಆದರೆ ದೇವರು ಆ ಒಡಂಬಡಿಕೆಗೆ ಸೇರಿದ ಜನರನ್ನು ಆರೋಪಿಸುತ್ತಾ ಇಂತೆಂದಿದ್ದಾರೆ: “ಇಗೋ, ನಾನು ಇಸ್ರಯೇಲ್ ವಂಶದವರೊಂದಿಗೂ ಯೆಹೂದ್ಯ ವಂಶದವರೊಂದಿಗೂ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ಕಾಲವು ಬರಲಿದೆ, ಎಂದರು ಸರ್ವೇಶ್ವರ. ಈ ಒಡಂಬಡಿಕೆ, ನಾನು ಪೂರ್ವಜರನ್ನು ಈಜಿಪ್ಟ್ ದೇಶದಿಂದ ಕೈಹಿಡಿದು ಕರೆತಂದಾಗ ಮಾಡಿದ ಒಡಂಬಡಿಕೆಯಂತಲ್ಲ; ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲ; ಎಂದೇ, ನಾನು ಅವರನ್ನು ಲಕ್ಷಿಸಲೂ ಇಲ್ಲ, ಎಂದರು ಸರ್ವೇಶ್ವರ. ಆ ದಿನಗಳು ಬಂದಮೇಲೆ ಇಸ್ರಯೇಲ್ ವಂಶದವರೊಡನೆ ನಾನು ಮಾಡಿಕೊಳ್ಳುವ ಒಡಂಬಡಿಕೆ ಹೀಗಿರುವುದು, ಎಂದರು ಸರ್ವೇಶ್ವರ. ನಾಟಿಸುವೆನು ನನ್ನಾಜ್ಞೆಗಳನು ಅವರ ಮನದಲಿ ಬರೆಯುವೆನು ಅವುಗಳನು ಅವರ ಹೃದಯದಲಿ ದೇವನಾಗಿರುವೆನು ನಾನವರಿಗೆ ಅವರಾಗುವರು ಪ್ರಜೆಗಳು ನನಗೆ. ‘ಸರ್ವೇಶ್ವರನನ್ನು ಅರಿತುಕೊಳ್ಳಿರಿ’ ಎಂದು ನೆರೆಯವನಿಗಾಗಲಿ, ಸೋದರನಿಗಾಗಲಿ ಯಾರೂ ಬೋಧಿಸಬೇಕಾಗಿಲ್ಲ. ಹಿರಿಯಕಿರಿಯರು ಎಲ್ಲರೂ ನನ್ನನ್ನು ಅರಿಯುವರು. ಅವರ ಪಾಪಗಳನ್ನು ಕ್ಷಮಿಸುವೆನು ಅವರ ತಪ್ಪುನೆಪ್ಪುಗಳನು ನೆನಪಿಗೆ ತಂದುಕೊಳ್ಳೆನು ಎಂದರು ಸರ್ವೇಶ್ವರ.” ಇಲ್ಲಿ ‘ಹೊಸ ಒಡಂಬಡಿಕೆ’ ಎಂದು ಹೇಳಿ, ಹಿಂದಿನದನ್ನು ಹಳೆಯದಾಗಿಸಿದ್ದಾರೆ. ಹಳತಾದುದು ಹಾಗೂ ಮುದಿಯಾದುದು ಅಳಿದುಹೋಗುವಂಥಾದ್ದು. ಪ್ರಭುವಿನ ವಾಕ್ಯ

ಕೀರ್ತನೆ: 85:8, 10, 11-12, 13-14
ಶ್ಲೋಕ: ಪ್ರೀತಿಯೂ, ಸತ್ಯವೂ ಒಂದನ್ನೊಂದು ಕೂಡಿರುವುದು. 

ನಾ ಕೇಳುತ್ತಿರುವೆನು, ಪ್ರಭು ಹೇಳುವುದನು I
ತನ್ನ ಜನರಿಗಾತ ನುಡಿವುದು ಶಾಂತಿಯನು I
ಇನ್ನಾದರು ತೊರೆಯೋಣ ಮೂರ್ಖತೆಯನು II
ಪ್ರೀತಿಯೂ ಸತ್ಯವೂ ಒಂದನ್ನೊಂದು ಕೂಡಿರುವುವು I

ನೀತಿಯೂ ಶಾಂತಿಯೂ ಒಂದನ್ನೊಂದು ಚುಂಬಿಸುವುವು II
ಸತ್ಯತೆಯು ಹುಟ್ಟುವುದು ಭೂಮಿಯಿಂದ I
ನೀತಿಯು ದೃಷ್ಟಿಸುವುದು ಗಗನದಿಂದ II
ಪ್ರಭು ಕೊಟ್ಟೇ ತೀರುವನು ಒಳಿತನು I

ನಮ್ಮ ನಾಡು ನೀಡುವುದು ಬೆಳೆಯನು II
ನಡೆವುದು ಪ್ರಭುವಿನ ಮುಂದೆ ನೀತಿ I
ಮಾಡುವುದು ಆತನ ಹೆಜ್ಜೆಗೆ ಹಾದಿ II

ಮಾರ್ಕನು ಬರೆದ ಶುಭಸ೦ದೇಶ 3:13-19 


ಆ ಕಾಲದಲ್ಲಿ ಯೇಸುಸ್ವಾಮಿ ಬೆಟ್ಟವನ್ನೇರಿ, ತಮಗೆ ಒಪ್ಪಿಗೆಯಾದವರನ್ನು ಕರೆದರು. ಅವರು ಹತ್ತಿರಕ್ಕೆ ಬಂದರು. ಯೇಸು ಹನ್ನೆರಡು ಮಂದಿಯನ್ನು ಆಯ್ದುಕೊಂಡು, ‘ಪ್ರೇಷಿತರು’ ಎಂದು ಅವರಿಗೆ ಹೆಸರಿಟ್ಟರು. “ನನ್ನ ಜೊತೆಯಲ್ಲಿ ಇರಲು ನಿಮ್ಮನ್ನು ಆರಿಸಿಕೊಂಡಿದ್ದೇನೆ. ಶುಭಸಂದೇಶವನ್ನು ಸಾರಲು ನಿಮ್ಮನ್ನು ಕಳುಹಿಸುತ್ತೇನೆ. ದೆವ್ವಗಳನ್ನು ಬಿಡಿಸುವ ಅಧಿಕಾರವನ್ನು ನಿಮಗೆ ಕೊಡುತ್ತೇನೆ", ಎಂದು ಅವರಿಗೆ ಹೇಳಿದರು. ಹೀಗೆ ನೇಮಕಗೊಂಡ ಹನ್ನೆರಡು ಮಂದಿ ಯಾರೆಂದರೆ : ಸಿಮೋನ (ಯೇಸು ಈತನಿಗೆ ‘ಪೇತ್ರ’ ಎಂದು ಹೆಸರಿಟ್ಟರು). ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ (ಯೇಸು ಇವರಿಬ್ಬರಿಗೆ ‘ಬೊವನೆರ್ಗೆಸ್’ ಎಂದರೆ ‘ಸಿಡಿಲಮರಿಗಳು’ ಎಂಬ ಹೆಸರನ್ನಿಟ್ಟರು).  ಅಂದ್ರೆಯ, ಫಿಲಿಪ್ಪ, ಬಾರ್ತಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗ ಯಕೋಬ, ತದ್ದಾಯ, ದೇಶಾಭಿಮಾನಿ ಆದ ಸಿಮೋನ ಮತ್ತು ಮುಂದೆ ಗುರುದ್ರೋಹಿಯಾಗಲಿದ್ದ ಇಸ್ಕರಿಯೋತ. ಪ್ರಭು ಕ್ರಿಸ್ತರ ಶುಭಸ೦ದೇಶ

No comments:

Post a Comment