ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

23.01.23 - " ಸೈತಾನನ ಪಕ್ಷದವರು ಪರಸ್ಪರ ವಿರೋಧಿಗಳಾಗರೆ ಅವನ ರಾಜ್ಯ ಉಳಿಯದು."

ಮೊದಲನೆಯ ವಾಚನ: ಹಿಬ್ರಿಯರಿಗೆ 9:15, 24-28


ಸಹೋದರರೇ, ಈ ಕಾರಣ ಒಡಂಬಡಿಕೆಯನ್ನು ಏರ್ಪಡಿಸಿದ ಮಧ್ಯಸ್ಥರಾಗಿದ್ದಾರೆ. ದೈವಕರೆ ಹೊಂದಿದವರು ದೇವರು ವಾಗ್ದಾನ ಮಾಡಿದ ಅಮರ ಸೌಭಾಗ್ಯವನ್ನು ಬಾಧ್ಯವಾಗಿ ಪಡೆಯುವಂತೆ ಈ ಒಡಂಬಡಿಕೆಯನ್ನು ಏರ್ಪಡಿಸಲಾಯಿತು. ಇದು ಯೇಸುವಿನ ಮರಣದ ಮೂಲಕವೇ ಉಂಟಾಯಿತು. ಈ ಮರಣವು ಹಳೆಯ ಒಡಂಬಡಿಕೆಯನ್ನು ಮೀರಿ ಮಾಡಿದ ಅಪರಾಧಗಳನ್ನೂ ಪರಿಹರಿಸುತ್ತದೆ. ಕ್ರಿಸ್ತ ಯೇಸು ಪ್ರವೇಶಿಸಿದ್ದು ನೈಜದೇವಾಲಯದ ಛಾಯೆಯಂತಿರುವ ಮಾನವನಿರ್ಮಿತ ಗರ್ಭಗುಡಿಯನಲ್ಲ ; ನಮ್ಮ ಪರವಾಗಿ ದೇವರ ಸಮ್ಮುಖದಲ್ಲಿ ಉಪಸ್ಥಿತರಾಗಲು ಸಾಕ್ಷಾತ್ ಸ್ವರ್ಗವನ್ನೇ ಅವರು ಪ್ರವೇಶಿಸಿದರು. ಪ್ರಧಾನ ಯಾಜಕನು ಪ್ರತಿವರ್ಷವೂ ಪ್ರಾಣಿಗಳ ರಕ್ತವನ್ನು ತೆಗೆದುಕೊಂಡು ಗರ್ಭಗುಡಿಯನ್ನು ಪ್ರವೇಶಿಸುವಂತೆ ಯೇಸು ಪ್ರವೇಶಿಸಲಿಲ್ಲ. ಅವರು ಸ್ವರ್ಗವನ್ನು ಪ್ರವೇಶಿಸಿದ್ದು ಪದೇಪದೇ ತಮ್ಮನ್ನು ಸಮರ್ಪಿಸಿಕೊಳ್ಳುವುದಕ್ಕೂ ಅಲ್ಲ ; ಹಾಗೆ ಸಮರ್ಪಿಸಬೇಕಾಗಿದ್ದ ಪಕ್ಷದಲ್ಲಿ ಲೋಕಾದಿಯಿಂದಲೂ ಅವರು ಅನೇಕ ಸಾರಿ ಮರಣಯಾತನೆಯನ್ನು ಅನುಭವಿಸಬೇಕಾಗಿ ಬರುತ್ತಿತ್ತು; ಅದಕ್ಕೆ ಬದಲಾಗಿ ಯುಗಾಂತ್ಯವಾದ ಈ ಕಾಲದಲ್ಲಿ, ಪಾಪನಿವಾರಣೆ ಮಾಡಬೇಕೆಂಬ ಉದ್ದೇಶದಿಂದ ಒಮ್ಮೆಗೇ ತಮ್ಮನ್ನು ತಾವೇ ಬಲಿಯಾಗಿ ಸಮರ್ಪಿಸಿಕೊಳ್ಳಲೆಂದು ಯೇಸು ಪ್ರತ್ಯಕ್ಷರಾದರು. ಪ್ರತಿಯೊಬ್ಬ ಮಾನವನು ಸಾಯುವುದು ಒಂದೇ ಸಾರಿ. ಅನಂತರ ಅವನು ನ್ಯಾಯತೀರ್ಪಿಗೆ ಗುರಿಯಾಗಬೇಕು. ಹಾಗೆಯೇ, ಎಲ್ಲಾ ಮಾನವರ ಪಾಪಗಳನ್ನು ಹೊತ್ತು ಹೋಗಲಾಡಿಸಲು ಕ್ರಿಸ್ತಯೇಸು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮನ್ನೇ ಬಲಿಯಾಗಿ ಸಮರ್ಪಿಸಿಕೊಂಡರು. ಅವರು ಮತ್ತೆ ಪ್ರತ್ಯಕ್ಷರಾಗುವರು; ಪಾಪನಿವಾರಣೆ ಮಾಡಲೆಂದು ಅಲ್ಲ, ತಮ್ಮನ್ನು ನಂಬಿ ನಿರೀಕ್ಷಿಕೊಂಡವರನ್ನು ಜೀವೋದ್ಧಾರಮಾಡಲೆಂದು.

ಕೀರ್ತನೆ 98:1, 2-4, 5-6
ಶ್ಲೋಕ: ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು.

ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು|
ಎಸಗಿಹನಾತನು ಪವಾಡ ಕಾರ್ಯಗಳನು|
ಗಳಸಿತಾತನ ಕೈ ಪೂತಭುಜ ಗೆಲುವನು||

ಪ್ರಕಟಿಸಿಹನಾ ಪ್ರಭು ಮುಕ್ತಿವಿಧಾನವನು|
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕ ಶಕ್ತಿಯನು||
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು|
ಇಸ್ರಾಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು||

ಕಂಡು ಬಂದಿತು ಜಗದ ಎಲ್ಲೆ ಎಲ್ಲೆಗೆ ನಮ್ಮ ದೇವ ಸಾಧಿಸಿದ ಜಯಗಳಿಕೆ||
ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ|
ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ||

ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ|
ಭಜಿಸಿರಿ ಆತನನು ವಾದ್ಯಮೇಳದೊಂದಿಗೆ||
ಊದಿರಿ ಕೊಂಬನು, ತುತೂರಿಯನು|
ಉದ್ಘೋಷಿಸಿರಿ ಪ್ರಭು ರಾಜನನು||

ಶುಭಸಂದೇಶ: ಮಾರ್ಕ 3:22-30


ಆ ಕಾಲದಲ್ಲಿ ಜೆರುಸಲೇಮಿನಿಂದ ಬಂದಿದ್ದ ಧರ್ಮಶಾಸ್ತ್ರಿಗಳು, " ಇವರನ್ನು ಬೆಲ್ಜೆಬೂಲನು ಹಿಡಿದಿದ್ದಾನೆ; ದೆವ್ವಗಳ ಒಡೆಯನ ಶಕ್ತಿಯಿಂದಲೇ ಇವನು ದೆವ್ವ ಬಿಡಿಸುತ್ತಾನೆ, " ಎನ್ನುತ್ತಿದ್ದರು. ಆಗ ಯೇಸು ಅವರನ್ನು ತಮ್ಮ ಹತ್ತಿರಕ್ಕೆ ಕರೆದು ಸಾಮತಿಗಳ ಮೂಲಕ ಮಾತನಾಡತೊಡಗಿದರು: "ಸೈತಾನನು ಸೈತಾನನನ್ನು ಹೊರದೂಡುವುದು ಹೇಗೆ ತಾನೇ ಸಾಧ್ಯ? ಒಂದು ರಾಜ್ಯದ ಪ್ರಜೆಗಳು ತಮ್ಮತಮ್ಮೊಳಗೆ ಕಚ್ಚಾಡುವುದಾದರೆ ಆ ಕುಟುಂಬ ಬಾಳದು. ಅದರಂತೆಯೇ ಸೈತಾನನ ಪಕ್ಷದವರು ಪರಸ್ಪರ ವಿರೋಧಿಗಳಾಗರೆ ಅವನ ರಾಜ್ಯ ಉಳಿಯದು; ಅದು ಅಳಿದು ಹೋಗುವುದು. ಒಬ್ಬನು ಬಲಿಷ್ಟನ ಮನೆಯನ್ನು ನುಗ್ಗಿ ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆಮಾಡಲಾಗದು. ಮೊದಲು ಅವನನ್ನು ಕಟ್ಟಬೇಕು. ಬಳಿಕ ಅವನ ಮನೆಯನ್ನು ಕೊಳ್ಳೆಹೊಡೆಯಬೇಕು. ನಿಶ್ಚಯವಾಗಿ ನಿಮಗೆ ಹೇಳುತ್ತೇನೆ: ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೂ ಆಡುವ ಎಲ್ಲಾ ದೇವದೂಷಣೆಗಳಿಗೂ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಮಾತ್ರ ಕ್ಷಮೆ ದೊರಕದು. ಅಂಥವನ ಪಾಪ ಶಾಶ್ವತವಾದುದು, " ಹೀಗೆ ಎಂದರು. (ದೆವ್ವ ಹಿಡಿದಿದೆ ಎಂದು ತಮ್ಮನ್ನು ಕೆಲವರು ನಿಂದಿಸುತ್ತಿದ್ದುದರಿಂದ ಯೇಸು ಹೀಗೆ ಹೇಳಿದರು).

No comments:

Post a Comment