09.09.22 - "ಶುಭಸಂದೇಶವನ್ನು ನಾನು ಸಾರುತ್ತಿದ್ದೇನೆಂದು ಕೊಚ್ಚಿಕೊಳ್ಳುವುದಕ್ಕೂ ನನಗೆ ಆಸ್ಪದವಿಲ್ಲ. ಏಕೆಂದರೆ, ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಬದ್ಧನಾಗಿದ್ದೇನೆ."

ಮೊದಲನೇ ವಾಚನ: 1 ಕೊರಿಂಥಿಯರಿಗೆ 9:16-19, 22-27

ಸಹೋದರರೇ, ಶುಭಸಂದೇಶವನ್ನು ನಾನು ಸಾರುತ್ತಿದ್ದೇನೆಂದು ಕೊಚ್ಚಿಕೊಳ್ಳುವುದಕ್ಕೂ ನನಗೆ ಆಸ್ಪದವಿಲ್ಲ. ಏಕೆಂದರೆ, ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಬದ್ಧನಾಗಿದ್ದೇನೆ. ಸಾರದಿದ್ದರೆ ನನಗೆ ಧಿಕ್ಕಾರವಿರಲಿ!  ನಾನು ಸ್ವಂತ ಇಷ್ಟದಿಂದ ಈ ಕಾರ್ಯವನ್ನು ಕೈಗೊಂಡಿದ್ದರೆ ತಕ್ಕ ಸಂಭಾವನೆ ಇರುತ್ತಿತ್ತು. ಆದರೆ ಈ ಕರ್ತವ್ಯವನ್ನು ನನಗೆ ವಹಿಸಲಾಗಿದೆ. ಆದ್ದರಿಂದ ಕರ್ತವ್ಯಬದ್ಧನಾಗಿ ಮಾಡುತ್ತಿದ್ದೇನೆ.  ಹಾಗಾದರೆ ನನಗೆ ಸಿಗುವ ಸಂಭಾವನೆಯಾದರೂ ವಿಶ್ವಾಸದಲ್ಲಿ ದುರ್ಬಲರನ್ನು ಗಳಿಸಿಕೊಳ್ಳಲು ನಾನೂ ದುರ್ಬಲನಂತಾದೆ. ಹೇಗಾದರೂ ಸರಿ, ಕೆಲವರನ್ನಾದರೂ ಉದ್ಧರಿಸಲು ಎಲ್ಲರಿಗೂ ಎಲ್ಲವೂ ಆದೆ.  ಶುಭಸಂದೇಶದ ಸೌಭಾಗ್ಯದಲ್ಲಿ ಪಾಲುಗೊಳ್ಳಲೆಂದು ಇದೆಲ್ಲವನ್ನು ಶುಭಸಂದೇಶಕ್ಕಾಗಿಯೇ ಮಾಡುತ್ತೇನೆ,  ನಿಮಗೆ ತಿಳಿದಿರುವಂತೆ ಕ್ರೀಡಾಂಗಣದಲ್ಲಿ ಅನೇಕರು ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಆದರೆ ಪ್ರಥಮ ಬಹುಮಾನ ದೊರಕುವುದು ಒಬ್ಬನಿಗೆ ಮಾತ್ರ. ಅಂತೆಯೇ ಬಹುಮಾನವನ್ನು ಪಡೆದುಕೊಳ್ಳಲು ನೀವೂ ಓಡಿ.  ಕ್ರೀಡಾಪಟುಗಳೆಲ್ಲರೂ ತಮ್ಮನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತಾರೆ. ಅಳಿದುಹೋಗುವ ಪದಕದ ಗಳಿಕೆಗಾಗಿ ಪ್ರಯತ್ನ ಮಾಡುತ್ತಾರೆ. ನಾವಾದರೋ ಅಮರ ಪದಕದ ಗಳಿಕೆಗಾಗಿ ಶ್ರಮಿಸುತ್ತೇವೆ.  ನಾನಾದರೋ ಗೊತ್ತು ಗುರಿಯಿಲ್ಲದವನಂತೆ ಓಡುವುದಿಲ್ಲ, ಗಾಳಿಯೊಡನೆ ಗುದ್ದಾಡುವವನಂತೆ ಹೋರಾಡುವುದಿಲ್ಲ.  ಇತರರಿಗೆ ಕರೆಕೊಟ್ಟ ಮೇಲೆ ನಾನೇ ಅಯೋಗ್ಯನಾಗದಂತೆ, ನನ್ನ ದೇಹವನ್ನು ದಂಡಿಸಿ, ನನ್ನನ್ನೇ ನಾನು ಹತೋಟಿಯಲ್ಲಿಟ್ಟುಕೊಳ್ಳುತ್ತೇನೆ.

ಕೀರ್ತನೆ: 84:3, 4, 5-6, 8, 12

ಶ್ಲೋಕ: ಸ್ವರ್ಗಸೇನಾಧೀಶ್ವರಾ, ನಿನ್ನ ನಿವಾಸಗಳೆನಿತೋ ಸುಂದರ

ಶುಭಸಂದೇಶ: ಲೂಕ 6:39-42


ಯೇಸುಸ್ವಾಮಿ ಶಿಷ್ಯರಿಗೆ ಈ ಸಾಮತಿಯನ್ನೂ ಹೇಳಿದರು: “ಕುರುಡನು ಕುರುಡನಿಗೆ ದಾರಿ ತೋರಿಸಲಾದೀತೆ? ಇಬ್ಬರೂ ಹಳ್ಳದಲ್ಲಿ ಬೀಳುವುದಿಲ್ಲವೆ?  ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ; ಆದರೂ ಪೂರ್ಣ ಶಿಕ್ಷಣ ಪಡೆದ ಪ್ರತಿಯೊಬ್ಬನೂ ಗುರುವಿನಂತೆ ಆಗುವನು. “ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ನೋಡದೆ, ಸೋದರನ ಕಣ್ಣಿನಲ್ಲಿರುವ ಅಣುವನ್ನು ಗಮನಿಸುವುದೇಕೆ? ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನೇ ಕಾಣಲಾರದ ನೀನು, ‘ತಮ್ಮಾ ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದುಬಿಡುತ್ತೇನೆ,’ ಎಂದು ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದುಹಾಕು, ಅನಂತರ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆದುಹಾಕಲು ನಿನಗೆ ಕಣ್ಣು ನಿಚ್ಚಳವಾಗಿ ಕಾಣಿಸುವುದು."

08.09.22 - “ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು ‘ಇಮ್ಮಾನುವೇಲ್’ ಎಂದು ಆತನಿಗೆ ಹೆಸರಿಡುವರು”

ದೇವಮಾತೆಯ ಮಹೋತ್ಸವ 

ಮೊದಲನೇ ವಾಚನ: ಮೀಕ 5:1-4

ಸಿಯೋನ್ ನಗರಿಯೇ, ನಿನ್ನ ಸೇನಾವ್ಯೂಹಗಳನ್ನು ಒಟ್ಟುಗೂಡಿಸು. ಇಗೋ, ಶತ್ರುಗಳು ನಮಗೆ ಮುತ್ತಿಗೆಹಾಕಿದ್ದಾರೆ. ಅವರು ಇಸ್ರಯೇಲಿನ ಅಧಿಪತಿಯ ಕೆನ್ನೆಗೆ ಕೋಲಿನಿಂದ ಹೊಡೆಯುವರು! ಎಫ್ರಾತದ ಬೆತ್ಲೆಹೇಮೇ, ಜುದೇಯದ ಕುಲಗಳಲ್ಲಿ ನೀನು ಅತಿಚಿಕ್ಕವಳಾಗಿದ್ದರೂ ಇಸ್ರಯೇಲನ್ನು ಆಳತಕ್ಕವನು ನಿನ್ನಿಂದಲೇ ಉದಯಿಸುವನು. ಆತನ ಗೋತ್ರದ ಮೂಲ ಪುರಾತನವಾದುದು, ಅನಾದಿಕಾಲದಿಂದ ಬಂದುದು. ಇಂತಿರಲು ದಿನತುಂಬಿದವಳು ಹೆರುವವರೆಗೂ ಸರ್ವೇಶ್ವರ ತನ್ನ ಜನರನ್ನು ಶತ್ರುಗಳ ವಶಕ್ಕೆ ಬಿಟ್ಟುಬಿಡುವರು. ಅನಂತರ ಅಳಿದುಳಿದ ಸಹೋದರರು ಬಂದು ಇಸ್ರಯೇಲ್ ಜನರೊಂದಿಗೆ ಸೇರಿಕೊಳ್ಳುವರು. ಆತನು ಸರ್ವೇಶ್ವರನಿಂದ ಬರುವ ಶಕ್ತಿಯಿಂದಲೂ ಆ ಸ್ವಾಮಿ ದೇವರ ನಾಮದ ಪ್ರಭಾವದಿಂದಲೂ ತನ್ನ ಜನರನ್ನು ಪರಿಪಾಲಿಸುವನು. ಆ ಜನರು ಸುರಕ್ಷಿತವಾಗಿ ಬಾಳುವರು. ಆತನು ಜಗದ ಕಟ್ಟಕಡೆಯವರೆಗೂ ಪ್ರಬಲನಾಗಿರುವನು.

ಕೀರ್ತನೆ: 13:6, 6

ಶ್ಲೋಕ: ಹಿರಿಹಿಗ್ಗುವುದು ನನ್ನ ದೇವರಲಿ ನನ್ನಾತ್ಮ

ನಿನ್ನಚಲ ಪ್ರೀತಿಯಲ್ಲಿದೆ ನನಗಿದೆ ವಿಶ್ವಾಸ I
ನಿನ್ನ ರಕ್ಷಣೆ ತಂದಿದೆ ನನ್ನ ಮನಕೆ ಹರುಷ II

ಪ್ರಭು ಮಾಡಿದ ಮಹೋಪಕಾರಗಳಿಗಾಗಿ I
ಹಾಡುವೆ ಗೀತವನು ಮನಃಪೂರ್ವಕವಾಗಿ II

ಶುಭಸಂದೇಶ: ಮತ್ತಾಯ 1:1-16, 18-23


ಅಬ್ರಹಾಮನ ಮನೆತನಕ್ಕೆ ಸೇರಿದ ದಾವೀದ ಕುಲದ ಯೇಸುಕ್ರಿಸ್ತರ ವಂಶಾವಳಿ: ಅಬ್ರಹಾಮನಿಗೆ ಇಸಾಕನು, ಇಸಾಕನಿಗೆ ಯಕೋಬನು, ಯಕೋಬನಿಗೆ ಯೂದ ಹಾಗೂ ಆತನ ಸಹೋದರರು ಹುಟ್ಟಿದರು. ಯೂದನಿಗೆ ತಾಮರ ಎಂಬವಳಿಂದ, ಪೆರಸ್ ಹಾಗೂ ಜೆರಹನ್ ಹುಟ್ಟಿದರು. ಪೆರಸನಿಗೆ ಹೆಸ್ರೋನ್, ಹೆಸ್ರೋನನಿಗೆ ರಾಮ್, ರಾಮನಿಗೆ ಅಮ್ಮಿನದಾಬ್, ಅಮ್ಮಿನದಾಬನಿಗೆ ನಹಸ್ಸೋನ್, ನಹಸ್ಸೋನನಿಗೆ ಸಲ್ಮೋನ್, 5ಸಲ್ಮೋನನಿಗೆ ರಹಾಬ್ ಎಂಬವಳಿಂದ ಬೋವಜ್, ಬೋವಜನಿಗೆ ರೂತ್ ಎಂಬವಳಿಂದ ಓಬೇದ್, ಓಬೇದನಿಗೆ ಜೆಸ್ಸೆಯ, ಜೆಸ್ಸೆಯನಿಗೆ ದಾವೀದರಸನು ಹುಟ್ಟಿದರು. ದಾವೀದನಿಗೆ ಊರಿಯನ ಹೆಂಡತಿಯಿಂದ ಸೊಲೊಮೋನ್, ಸೊಲೊಮೋನನಿಗೆ ರೆಹಬ್ಬಾಮ, ರೆಹಬ್ಬಾಮನಿಗೆ ಅಬೀಯ, ಅಬೀಯನಿಗೆ ಆಸನ್ ಹುಟ್ಟಿದರು. ಆಸನನಿಗೆ ಯೋಸೆಫಾತ್, ಯೋಸೆಫಾತನಿಗೆ ಯೆಹೋರಾಮ್, ಯೆಹೋರಾಮನಿಗೆ ಉಜ್ಜೀಯ ಹುಟ್ಟಿದರು. ಉಜ್ಜೀಯನಿಗೆ ಯೋತಾಮ್, ಯೋತಾಮನಿಗೆ ಅಹಾಜ್, ಅಹಾಜನಿಗೆ ಹಿಜ್ಕೀಯನು ಹುಟ್ಟಿದರು. ಹಿಜ್ಕೀಯನಿಗೆ ಮನಸ್ಸೆ, ಮನಸ್ಸೆಗೆ ಆಮೋನ್,  ಆಮೋನನಿಗೆ ಯೋಷೀಯ ಹುಟ್ಟಿದರು. ಯೋಷೀಯನಿಗೆ ಯೆಕೊನ್ಯ ಮತ್ತು ಅವನ ಸಹೋದರರು ಹುಟ್ಟಿದರು. ಈ ಸಮಯದಲ್ಲೇ ಇಸ್ರಯೇಲರನ್ನು ಬಾಬಿಲೋನಿಗೆ ಸೆರೆ ಒಯ್ದದ್ದು. ಬಾಬಿಲೋನಿಗೆ ಸೆರೆಹೋದ ದಾಸ್ಯದಿನಗಳು ಮುಗಿದ ಮೇಲೆ ಯೆಕೊನ್ಯನಿಗೆ ಸಲಥಿಯೇಲ್, ಸಲಥಿಯೇಲನಿಗೆ ಜೆರುಬಾಬೆಲ್,  ಜೆರುಬಾಬೆಲನಿಗೆ ಅಬೀಹೂದ್, ಅಬೀಹೂದನಿಗೆ ಎಲ್ಯಕೀಮ್. ಎಲ್ಯಕೀಮನಿಗೆ ಅಜೋರ್ ಹುಟ್ಟಿದರು.  ಅಜೋರನಿಗೆ ಸದೋಕ್, ಸದೋಕನಿಗೆ ಅಖೀಮ್, ಅಖೀಮನಿಗೆ ಎಲಿಹೂದ್,  ಎಲಿಹೂದನಿಗೆ ಎಲಿಯಾಜರ್, ಎಲಿಯಾಜರನಿಗೆ ಮತ್ತಾನ್, ಮತ್ತಾನನಿಗೆ ಯಕೋಬ್ ಹುಟ್ಟಿದರು. ಯಕೋಬನಿಗೆ ಮರಿಯಳ ಪತಿಯಾದ ಜೋಸೆಫನು ಹುಟ್ಟಿದನು. ಈ ಮರಿಯಳಿಂದಲೇ “ಕ್ರಿಸ್ತ” ಎಂದು ಕರೆಯಲಾಗುವ ಯೇಸುಸ್ವಾಮಿ ಹುಟ್ಟಿದ್ದು; ಕ್ರಿಸ್ತಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೆಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮುಂಚೆಯೇ ಮರಿಯಳು ಗರ್ಭವತಿಯಾಗಿರುವುದು ತಿಳಿದುಬಂತು. ಆಕೆ ಗರ್ಭ ಧರಿಸಿದ್ದು ಪವಿತ್ರಾತ್ಮ ಪ್ರಭಾವದಿಂದ. ಆಕೆಯ ಪತಿ ಜೋಸೆಫನು ನೀತಿವಂತನು. ಮರಿಯಳನ್ನು ಅವಮಾನಕ್ಕೆ ಗುರಿಮಾಡುವ ಉದ್ದೇಶ ಅವನದಲ್ಲವಾದ್ದರಿಂದ ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು.  ಆತನು ಈ ಕುರಿತು ಆಲೋಚಿಸುತ್ತಿದ್ದಂತೆ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, “ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ.  ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು ‘ಯೇಸು’ ಎಂಬ ಹೆಸರಿಡಬೇಕು. ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವವನು ಆತನೇ,” ಎಂದನು. “ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು ‘ಇಮ್ಮಾನುವೇಲ್’ ಎಂದು ಆತನಿಗೆ ಹೆಸರಿಡುವರು” ಎಂಬುದಾಗಿ ಪ್ರವಾದಿಯ ಮುಖಾಂತರ ಸರ್ವೇಶ್ವರ ಹೇಳಿದ ಪ್ರವಚನ ನೆರವೇರುವಂತೆ ಇದೆಲ್ಲಾ ಸಂಭವಿಸಿತು.  “ಇಮ್ಮಾನುವೇಲ್” ಎಂದರೆ, “ದೇವರು ನಮ್ಮೊಡನೆ ಇದ್ದಾರೆ” ಎಂದು ಅರ್ಥ.

ಮರಿಯಮ್ಮನವರ ಗೀತೆಗಳು


                                            



 

06.09.22 - ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡರು. ಅವರಿಗೆ 'ಪ್ರೇಷಿತರು' ಎಂದು ಹೆಸರಿಟ್ಟರು

ಮೊದಲನೇ ವಾಚನ: 1 ಕೊರಿಂಥಿಯರಿಗೆ  6:1-11 


ನಿಮ್ಮಲ್ಲಿ ಒಬ್ಬನಿಗೆ ಮತ್ತೊಬ್ಬನ ಮೇಲೆ ವ್ಯಾಜ್ಯವಿದ್ದರೆ ನ್ಯಾಯವಿಚಾರಣೆಗೆ ದೇವಜನರ ಮುಂದೆ ಹೋಗದೆ, ಅನ್ಯಜನರ ಮುಂದೆ ಹೋಗುವಷ್ಟು ಸೊಕ್ಕು ನಿಮಗೆಲ್ಲಿಂದ ಬಂದಿತು? ದೇವಜನರು ಈ ಲೋಕಕ್ಕೆ ನ್ಯಾಯತೀರ್ಪು ಮಾಡುತ್ತಾರೆಂದು ನಿಮಗೆ ತಿಳಿಯದೋ? ಲೋಕವೇ ನಿಮ್ಮಿಂದ ತೀರ್ಪು ಪಡೆಯಬೇಕಾಗಿರುವಲ್ಲಿ ಸಣ್ಣಪುಟ್ಟ ವಿಷಯಗಳನ್ನು ತೀರ್ಮಾನಿಸಿಕೊಳ್ಳಲು ನೀವು ಅಸಮರ್ಥರೋ? ದೇವದೂತರಿಗೂ ನಾವು ನ್ಯಾಯತೀರ್ಪು ಮಾಡುವೆವೆಂದು ನಿಮಗೆ ತಿಳಿಯದೋ? ಹೀಗಿರುವಲ್ಲಿ, ಈ ಜೀವನದ ಸಮಸ್ಯೆಗಳನ್ನು ಕುರಿತು ನ್ಯಾಯತೀರ್ಪು ಮಾಡುವುದು ಎಷ್ಟೋ ಸುಲಭವಲ್ಲವೇ? ಇಂಥ ವಿಷಯಗಳು ತಲೆದೋರಿದಾಗ ಧರ್ಮಸಭೆಯಿಂದ ಮಾನ್ಯತೆ ಪಡೆಯದವರನ್ನು ಏಕೆ ನ್ಯಾಯತೀರ್ಪುಗಾರನನ್ನಾಗಿ ಮಾಡುತ್ತೀರಿ? ಇದು ನಿಮಗೆ ನಾಚಿಕೆಗೇಡು! ಸಹೋದರರ ವ್ಯಾಜ್ಯವನ್ನು ತೀರ್ಮಾನಿಸಬಲ್ಲ ಜಾಣನು ನಿಮ್ಮಲ್ಲಿ ಒಬ್ಬನೂ ಇಲ್ಲವೇ? ಸಹೋದರನು ಸಹೋದರನ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು, ಅದೂ ಅವಿಶ್ವಾಸಿಗಳ ಮುಂದೆ ಹೋಗುವುದು ಸರಿಯೇ? ನಿಮ್ಮ ನಿಮ್ಮಲ್ಲಿರುವ ವ್ಯಾಜ್ಯಗಳೇ ನಿಮ್ಮ ಸೋಲಿನ ಸೂಚನೆಗಳು. ಅದಕ್ಕಿಂತ ಅನ್ಯಾಯವನ್ನು ಸಹಿಸಿಕೊಳ್ಳುವುದು ಒಳ್ಳೆಯದಲ್ಲವೇ? ಸುಲಿಗೆಗೆ ತುತ್ತಾದರೂ ಸಾವಧಾನದಿಂದ ಇರುವುದು ಒಳಿತಲ್ಲವೇ? ಅದಕ್ಕೆ ಬದಲು ನೀವೇ ಅನ್ಯಾಯಮಾಡುತ್ತೀರಿ; ನೀವೇ ಸುಲಿಗೆಮಾಡುತ್ತೀರಿ; ಅದೂ ಸಹೋದರರಿಗೆ ಹೀಗೆ ಮಾಡುತ್ತೀರಿ. ಅಧರ್ಮಿಗಳು ದೇವರ ಸಾಮ್ರಾಜ್ಯಕ್ಕೆ ಬಾಧ್ಯರಲ್ಲವೆಂದು ನೀವು ಬಲ್ಲಿರಿ. ನಿಮ್ಮನ್ನು ನೀವೇ ವಂಚಿಸಿಕೊಳ್ಳಬೇಡಿ. ದುರಾಚಾರಿಗಳು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಸಲಿಂಗಕಾಮಿಗಳು, ಕಳ್ಳರು, ಲೋಭಿಗಳು, ಕುಡುಕರು, ಪರನಿಂದಕರು, ಸುಲಿಗೆಗಾರರು,  ಇವರಾರೂ ದೇವರ ಸಾಮ್ರಾಜ್ಯಕ್ಕೆ ಬಾಧ್ಯರಲ್ಲ. ಹಿಂದೆ ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ. ಆದರೆ ಈಗ ಪ್ರಭು ಯೇಸುಕ್ರಿಸ್ತರ ನಾಮದಲ್ಲಿ ಮತ್ತು ದೇವರಾತ್ಮನಲ್ಲಿ ನೀವು ಶುದ್ಧರಾಗಿದ್ದೀರಿ, ಪುನಿತರಾಗಿದ್ದೀರಿ ಹಾಗೂ ದೇವರೊಡನೆ ಸತ್ಸಂಬಂದ ಹೊಂದಿದ್ದೀರಿ.

ಕೀರ್ತನೆ:149:1b-2, 3-4, 5-6a, 9b 

ಶ್ಲೋಕ: ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನ್ನು. 

ಹಾಡಿರಿ  ಪ್ರಭುವಿಗೆ  ನೂತನ  ಕೀರ್ತನೆಯನು|
ಭಕ್ತರ  ಸಭೆಯಲಿ  ಸ್ತುತಿ  ಮಾಡಿರಿ  ಆತನನು||
ಆನಂದಿಸಲಿ  ತಮ್ಮ  ಸೃಷ್ಟಿಕರ್ತನಲಿ  ಇಸ್ರಯೇಲರು|
ತಮ್ಮಾ  ರಾಜನಿಗೆ  ಜಯಕಾರ  ಮಾಡಲಿ  ಸಿಯೋನಿನವರು||

ಆತನ  ನಾಮವನು  ಕೀತೀಸಲಿ  ಕುಣಿತದಿಂದ|
ಆತನನು  ಭಜಿಸಲಿ  ತಮಟೆ,  ಕಿನ್ನರಿಗಳಿಂದ||
ಪ್ರೀತಿಸುತ್ತಾನೆ  ಪ್ರಭು  ತನ್ನ  ಪ್ರಜೆಯನು|
ಜಯಶೀಲರನ್ನಾಗಿಸುತ್ತಾನೆ  ದೀನದಲಿತರನು||

ಹಿಗ್ಗಲಿ  ಭಕ್ತಾದಿಗಳು  ದೊರೆತ  ವಿಜಯದಲಿ|
ಜಯಕಾರ  ಮಾಡಲಿ  ತಮ್ಮ  ತಮ್ಮ  ಶಿಬಿರಗಳಲಿ||
ಇರಲಿ  ಪ್ರಭುವಿನ  ಸ್ತೋತ್ರ  ಬಾಯಲಿ|
ಇದು  ತರಲಿ  ಭಕ್ತರೆಲ್ಲರಿಗೆ  ಗೌರವವನು||

ಘೋಷಣೆ                      ಕೀರ್ತನೆ  119:34

ಅಲ್ಲೆಲೂಯ, ಅಲ್ಲೆಲೂಯ!
ನೀಡೆನಗೆ  ನಿನ್ನ  ಶಾಸ್ತ್ರದ  ಅರಿವನು,  
ಪೂರ್ಣ  ಮನದಿಂದ  ಆಚರಿಸುವೆನದನು,,
ಅಲ್ಲೆಲೂಯ!

ಶುಭಸಂದೇಶ: ಲೂಕ 6:12-19 



ಒಮ್ಮೆ ಯೇಸುಸ್ವಾಮಿ ಪ್ರಾರ್ಥನೆ ಮಾಡಲು  ಬೆಟ್ಟವನ್ನೇರಿದರು. ರಾತ್ರಿಯೆಲ್ಲಾ ದೇವರ ಪ್ರಾರ್ಥನೆಯಲ್ಲಿ ಕಳೆದರು. ಬೆಳಗಾದಾಗ ತಮ್ಮ ಶಿಷ್ಯರನ್ನು ಕರೆದು, ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡರು. ಅವರಿಗೆ 'ಪ್ರೇಷಿತರು ಎಂದು  ಹೆಸರಿಟ್ಟರು. ಹೀಗೆ ಆಯ್ಕೆ ಆದವರು ಪೇತ್ರನೆಂದು ಹೆಸರು ಪಡೆದ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ, ಯಕೋಬ ಮತ್ತು ಯೊವಾನ್ನ, ಫಿಲಿಪ್ಪ ಮತ್ತು ಬಾರ್ತೊಲೊಮಾಯ, ಮತ್ತಾಯ ಮತ್ತು ತೋಮ, ಆಲ್ಫಾಯನ ಮಗ ಯಕೋಬ ಮತ್ತು ದೇಶಾಭಿಮಾನಿ ಎನಿಸಿಕೊಂಡಿದ್ದ ಸಿಮೋನ, ಯಕೋಬನ ಮಗ ಯೂದ ಮತ್ತು ಗುರುದ್ರೋಹಿಯಾಗಲಿದ್ದ ಯೂದ ಇಸ್ಕರಿಯೋತ. ಅನಂತರ ಯೇಸುಸ್ವಾಮಿ ಅವರೊಂದಿಗೆ ಬೆಟ್ಟದಿಂದ ಇಳಿದು, ಸಮತಟ್ಟಾದ ಸ್ಥಳಕ್ಕೆ ಬಂದರು. ಶಿಷ್ಯರ ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮ್ ಪಟ್ಟಣದಿಂದಲೂ ಜನಸಮೂಹ ಅಲ್ಲಿಗೆ ಬಂದಿತ್ತು. ಯೇಸುವಿನ ಭೋಧನೆ ಕೇಳುವುದಕ್ಕೂ ತಮ್ಮ ರೋಗರುಜಿನಗಳಿಂದ ವಿಮುಕ್ತರಾಗುವುದಕ್ಕೂ ಜನರು ಅಲ್ಲಿಗೆ ಬಂದು ಸೇರಿದ್ದರು. ದೆವ್ವಪೀಡಿತರು ಕೂಡ ಬಂದು ಸ್ವಸ್ಥರಾಗುತ್ತಿದ್ದರು. ಯೇಸುವಿನಿಂದ ದಿವ್ಯಶಕ್ತಿ ಹರಿದು ಎಲ್ಲರನ್ನೂ ಗುಣಪಡಿಸುತ್ತಿತ್ತು. ಆದುದರಿಂದ ಅಲ್ಲಿದ್ದ ಜನರೆಲ್ಲರೂ ಯೇಸುವನ್ನು ಮುಟ್ಟಲು ತವಕಪಡುತ್ತಿದ್ದರು.

07.09.22 - “ಆದರೆ ಧನಿಕರೇ, ನಿಮಗೆ ಧಿಕ್ಕಾರ! ನೀವು ಸುಖಜೀವನವನ್ನು ಅನುಭವಿಸಿ ಆಗಿದೆ"

ಮೊದಲನೇ ವಾಚನ: 1 ಕೊರಿಂಥಿಯರಿಗೆ 7:25-31

ಸಹೋದರರೇ, ಅವಿವಾಹಿತರ ಬಗ್ಗೆ ಪ್ರಭುವಿನಿಂದ ಬಂದ ಕಟ್ಟಳೆ ಯಾವುದೂ ನನ್ನಲ್ಲಿಲ್ಲ. ಪ್ರಭುವಿನ ಕೃಪೆಯಿಂದ ನಂಬಿಕೆಗೆ ಅರ್ಹನಾದ ವ್ಯಕ್ತಿಯಂತೆ ನನ್ನ ಅಭಿಪ್ರಾಯಗಳನ್ನು ನಿಮ್ಮ ಮುಂದೆ ಇಡುತ್ತೇನೆ. 26ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಒಬ್ಬನು ತಾನು ಇದ್ದ ಸ್ಥಿತಿಯಲ್ಲೇ ಇರುವುದು ಉತ್ತಮವೆಂದು ಭಾವಿಸುತ್ತೇನೆ.  ನಿನಗೆ ವಿವಾಹವಾಗಿದೆಯೋ? ವಿವಾಹ ವಿಚ್ಛೇದನಕ್ಕೆ ಯತ್ನಿಸಬೇಡ. ನೀನು ಅವಿವಾಹಿತನೋ? ವಿವಾಹವಾಗಲು ಅವಸರಪಡಬೇಡ. ಹಾಗೇನಾದರೂ ನೀನು ವಿವಾಹ ಮಾಡಿಕೊಂಡರೆ ಅದು ಪಾಪವಲ್ಲ. ಅಂತೆಯೇ, ಅವಿವಾಹಿತ ಸ್ತ್ರೀಯೊಬ್ಬಳು ವಿವಾಹ ಮಾಡಿಕೊಂಡರೆ ಅದು ಪಾಪವಲ್ಲ. ಆದರೆ ದಂಪತಿಗಳಿಗೆ ತಾಪತ್ರಯಗಳು ಅನೇಕ. ಇವುಗಳು ನಿಮ್ಮನ್ನು ಬಾಧಿಸದಿರಲೆಂಬುದೇ ನನ್ನ ಹಾರೈಕೆ. ಪ್ರಿಯ ಸಹೋದರರೇ, ನನ್ನ ಅಭಿಪ್ರಾಯ ಇದು: ಉಳಿದಿರುವ ಕಾಲವು ಕೊಂಚ ಮಾತ್ರ. ಆದ್ದರಿಂದ ಮದುವೆಯಾದವರು ಮದುವೆಯಾಗದವರೋ ಎಂಬಂತೆ ನಡೆದುಕೊಳ್ಳಲಿ.  ದುಃಖಿತರು ದುಃಖವಿಲ್ಲದವರಂತೆ, ಸಂತೋಷಭರಿತರು ಸಂತೋಷರಹಿತರಂತೆ ಹಾಗು ಕೊಂಡುಕೊಳ್ಳುವವರು ಕೊಂಡದ್ದು ತಮ್ಮದಲ್ಲವೋ ಎಂಬಂತೆ ನಡೆದುಕೊಳ್ಳಲಿ.  ಲೋಕದ ವ್ಯವಹಾರದಲ್ಲಿ ಇರುವವರು ಅದರಲ್ಲಿಯೇ ತಲ್ಲೀನರಾಗದಿರಲಿ. ಏಕೆಂದರೆ, ಲೋಕದ ರೂಪರೇಷೆಗಳು ಗತಿಸಿಹೋಗುತ್ತವೆ.

ಕೀರ್ತನೆ: 45:11-12, 14-15, 16-17

ಶ್ಲೋಕ: ಎಲೇ ಕುವರಿಯೇ ಕೇಳು, ಎನ್ನ ಮೊರೆಗೆ ಕಿವಿಗೊಡು

ಶುಭಸಂದೇಶ: ಲೂಕ 6:20-26


ಯೇಸುಸ್ವಾಮಿ ತಮ್ಮ ಶಿಷ್ಯರ ಕಡೆಗೆ ದೃಷ್ಟಿಸಿ ನೋಡಿ ಹೀಗೆಂದು ಬೋಧಿಸಿದರು: “ದೀನದಲಿತರೇ, ನೀವು ಭಾಗ್ಯವಂತರು! ದೇವರ ಸಾಮ್ರಾಜ್ಯ ನಿಮ್ಮದು. ಈಗ ಹಸಿದಿರುವವರೇ, ನೀವು ಭಾಗ್ಯವಂತರು! ನಿಮಗೆ ಸಂತೃಪ್ತಿಯಾಗುವುದು. ಈಗ ಅತ್ತು ಗೋಳಾಡುವವರೇ, ನೀವು ಭಾಗ್ಯವಂತರು! ನೀವು ನಕ್ಕುನಲಿದಾಡುವಿರಿ! ನರಪುತ್ರನ ಶಿಷ್ಯರು ನೀವಾದುದರಿಂದ ನಿಮ್ಮನ್ನು ದ್ವೇಷಿಸಿ, ಬಹಿಷ್ಕರಿಸಿ, ಧಿಕ್ಕರಿಸಿ, ನಿಮ್ಮ ಹೆಸರೆತ್ತುವುದು ಕೂಡ ಕೇಡೆಂದು ತಿರಸ್ಕರಿಸುವಾಗ ನೀವು ಭಾಗ್ಯವಂತರು! ಈ ಜನರ ಪೂರ್ವಜರು ಪ್ರವಾದಿಗಳನ್ನು ಹೀಗೆಯೇ ತೆಗಳಿದ್ದರು. ಇದೆಲ್ಲಾ ಸಂಭವಿಸುವಾಗ ಹಿಗ್ಗಿ ನಲಿದಾಡಿರಿ. ಏಕೆಂದರೆ, ಸ್ವರ್ಗದಲ್ಲಿ ನಿಮಗೆ ಲಭಿಸುವ ಪ್ರತಿಫಲವು ಮಹತ್ತರವಾದುದು. “ಆದರೆ ಧನಿಕರೇ, ನಿಮಗೆ ಧಿಕ್ಕಾರ! ನೀವು ಸುಖಜೀವನವನ್ನು ಅನುಭವಿಸಿ ಆಗಿದೆ. ಈಗ ತಿಂದು ತೃಪ್ತಿಯಾಗಿರುವವರೇ, ನಿಮಗೆ ಧಿಕ್ಕಾರ! ನೀವು ಹಸಿದು ಬಳಲುವಿರಿ. ಈಗ ನಕ್ಕುನಲಿದಾಡುವವರೇ, ನಿಮಗೆ ಧಿಕ್ಕಾರ! ನೀವು ದುಃಖಿಸಿ ಗೋಳಾಡುವಿರಿ. ಜನರೆಲ್ಲರಿಂದ ಹೊಗಳಿಸಿಕೊಳ್ಳುವಾಗ ನಿಮಗೆ ಧಿಕ್ಕಾರ! ಕಪಟ ಪ್ರವಾದಿಗಳೂ ಈ ಜನರ ಪೂರ್ವಜರಿಂದ ಹೀಗೆಯೇ ಹೊಗಳಿಸಿಕೊಂಡಿದ್ದರು. 








05.09.22 - “ನಿನ್ನ ಕೈಯನ್ನು ಚಾಚು,” ಎಂದರು. ಅವನು ಚಾಚಿದ. ಕೈ ಸ್ವಸ್ಥವಾಯಿತು.

ಮೊದಲನೇ ವಾಚನ: 1 ಕೊರಿಂಥಿಯರಿಗೆ 5:1-8 

ಸಹೋದರರೇ,  ದುರ್ನಡತೆ ನಿಮ್ಮಲ್ಲಿದೆಯೆಂಬುದಾಗಿ ವರದಿ ಬಂದಿದೆ. ನಿಮ್ಮಲ್ಲಿ ಒಬ್ಬನು ತನ್ನ ತಂದೆಯ ಪತ್ನಿಯನ್ನೇ ಇಟ್ಟುಕೊಂಡಿದ್ದಾನಂತೆ. ಹೀಗಿರಲು, ನೀವು ಸೊಕ್ಕಿನಿಂದ ಮೆರೆಯಲು ಕಾರಣವಾದರೂ ಎಲ್ಲಿದೆ? ಬದಲಿಗೆ, ನೀವು ವ್ಯಸನಪಟ್ಟು ಅವನನ್ನು ನಿಮ್ಮ ಸಭಾಕೂಟದಿಂದ ಬಹಿಷ್ಕರಿಸಬೇಕಾಗಿತ್ತಲ್ಲವೆ? ನಾನು ಶಾರೀರಿಕವಾಗಿ ನಿಮ್ಮಿಂದ ದೂರವಿದ್ದರೂ ಆತ್ಮಿಕವಾಗಿ ನಿಮ್ಮ ಹತ್ತಿರವಿದ್ದೇನೆ. ನಿಮ್ಮ ಸಂಗಡವೇ ಇರುವವನಂತೆ ಅವನಿಗೆ ಏನುಮಾಡಬೇಕೆಂದು ಈಗಾಗಲೇ ತೀರ್ಮಾನಿಸಿದ್ದೇನೆ. ಅದೇನೆಂದರೆ: ನೀವು ಸಭೆಸೇರಿ, ಪ್ರಭು ಯೇಸುವಿನ ಶಕ್ತಿಯ ಆಧಾರದ ಮೇಲೆ ಅವನನ್ನು ಸೈತಾನನಿಗೆ ಒಪ್ಪಿಸಿಬಿಡಬೇಕು. ನಾನು ಆತ್ಮಿಕವಾಗಿ ನಿಮ್ಮ ಮಧ್ಯೆಯಿರುತ್ತೇನೆ. ಅವನ ದೇಹವು ದಂಡನೆಗೊಳಗಾದರೂ ಅವನ ಆತ್ಮ ಪ್ರಭು ಯೇಸುವಿನ ದಿನದಂದು ಉದ್ಧಾರವಾಗುವಂತೆ ಹೀಗೆ ಮಾಡಬೇಕು. ನೀವು ಜಂಬ ಕೊಚ್ಚಿಕೊಳ್ಳುವುದು ತರವಲ್ಲ. ಒಂದಿಷ್ಟು ಹುಳಿ, ಹಿಟ್ಟನ್ನೆಲ್ಲಾ ಹುದುಗೆಬ್ಬಿಸುತ್ತದೆಂಬುದನ್ನು ನೀವು ಚೆನ್ನಾಗಿ ಬಲ್ಲಿರಿ. ನೀವು ಹುಳಿಯಿಲ್ಲದ ಕಣಕವಾಗಿದ್ದೀರಿ. ಅಪ್ಪಟ ರೊಟ್ಟಿಯಾಗುವಂತೆ ಹುಳಿಯನ್ನು ತೆಗೆದುಹಾಕಿರಿ. ಏಕೆಂದರೆ, ಪಾಸ್ಕ ಯಜ್ಞದ ಕುರಿಮರಿಯಾದ ಕ್ರಿಸ್ತಯೇಸು ಬಲಿಯಾಗಿದ್ದಾರೆ. ಆದಕಾರಣ ನಾವು ದುಷ್ಟತನ, ಕೆಡುಕುತನವೆಂಬ ಹುಳಿಹಿಟ್ಟನ್ನು ವರ್ಜಿಸೋಣ. ಪರಿಶುದ್ಧತೆ ಮತ್ತು ಸತ್ಯತೆ ಎಂಬ ಹುಳಿಯಿಲ್ಲದ ಹೊಸರೊಟ್ಟಿಯನ್ನು ತಿಂದು ಪಾಸ್ಕಹಬ್ಬವನ್ನು ಆಚರಿಸೋಣ.

ಕೀರ್ತನೆ: 5:5-6, 7, 12

ಶ್ಲೋಕ: ಸತ್ಯಪಥದಲಿ ನಡೆಸೆನ್ನನು ದೇವಾ

ಶುಭಸಂದೇಶ: ಲೂಕ 6:6-11

ಒಂದು ಸಬ್ಬತ್ ದಿನ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಹೋಗಿ ಉಪದೇಶಮಾಡುತ್ತಿದ್ದರು. ಅಲ್ಲಿ ಬಲಗೈ ಬತ್ತಿಹೋಗಿದ್ದ ಒಬ್ಬಾತ ಇದ್ದನು. ಅವನನ್ನು ಸಬ್ಬತ್ದಿನದಲ್ಲಿ ಸ್ವಸ್ಥಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪು ಹೊರಿಸಬಹುದೆಂಬ ಉದ್ದೇಶದಿಂದ ಧರ್ಮಶಾಸ್ತ್ರಿಗಳು ಮತ್ತು ಫರಿಸಾಯರು ಹೊಂಚುಹಾಕಿ ನೋಡುತ್ತಿದ್ದರು. ಯೇಸು ಅವರ ಆಲೋಚನೆಗಳನ್ನರಿತು ಬತ್ತಿದ ಕೈ ಉಳ್ಳವನಿಗೆ, “ಬಂದು ಇಲ್ಲಿ ನಿಲ್ಲು,” ಎಂದರು. ಅವನು ಎದ್ದುಬಂದು ನಿಂತನು. ಆಗ ಯೇಸು ಅವರಿಗೆ, “ನಾನು ನಿಮಗೊಂದು ಪ್ರಶ್ನೆ ಹಾಕುತ್ತೇನೆ: ಸಬ್ಬತ್ತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ?” ಎಂದರು. ಅನಂತರ ಸುತ್ತಲೂ ಇದ್ದವರೆಲ್ಲರನ್ನು ದಿಟ್ಟಿಸಿ ನೋಡಿ ಬತ್ತಿದ ಕೈಯುಳ್ಳವನ ಕಡೆಗೆ ತಿರುಗಿ, “ನಿನ್ನ ಕೈಯನ್ನು ಚಾಚು,” ಎಂದರು. ಅವನು ಚಾಚಿದ. ಕೈ ಸ್ವಸ್ಥವಾಯಿತು. ಅವರಾದರೋ ಕ್ರೋಧಭರಿತರಾಗಿ, ಯೇಸುವಿಗೆ ಏನಾದರೂ ಮಾಡಬೇಕೆಂದು ತಮ್ಮತಮ್ಮೊಳಗೆ ಸಂಚುಮಾಡಿದರು.


ಸಂತ ಮರಿಯಮ್ಮನವರ ಗೀತೆಗಳು - ಚಿಗುರು ಬಳಗ 




04.09.22 - "ಯಾವನು ತನಗಿರುವುದನ್ನೆಲ್ಲಾ ಪರಿತ್ಯಾಗ ಮಾಡುವುದಿಲ್ಲವೋ ಅವನು ನನ್ನ ಶಿಷ್ಯನಾಗಲಾರ":

ಮೊದಲನೇ ವಾಚನ: ಸುಜ್ಞಾನ ಗ್ರಂಥ 9:13-18

ದೇವರ ಸಂಕಲ್ಪವನ್ನು ಅರಿಯಬಲ್ಲವನಾರು? ಸರ್ವೇಶ್ವರನ ಚಿತ್ತವೇನೆಂದು ಗ್ರಹಿಸಬಲ್ಲವನಾರು? ಮರ್ತ್ಯ ಮಾನವರ ವಿವೇಚನೆ ಅಸಮರ್ಪಕವಾದುದೇ ನಮ್ಮ ಯೋಜನೆಗಳೆಲ್ಲ ಕೈಗೂಡದೆ ಹೋಗುವಂಥವೇ. ಈ ನಶ್ವರ ದೇಹ ಅಂತರಾತ್ಮವನ್ನು ಕುಗ್ಗಿಸುತ್ತದೆ ಈ ಮಣ್ಣಿನ ಗುಡಾರ, ಚಿಂತಾಭರಿತ ಮನಕ್ಕೊಂದು ಭಾರವೇ. ಧರೆಯ ಮೇಲಿನ ವಿಷಯಗಳನ್ನು ತಿಳಿಯುವುದೆಷ್ಟೋ ಕಷ್ಟಕರ  ಕೈಗೆಟಕುವುಗಳನ್ನೇ ಕಂಡರಿತುಕೊಳ್ಳುವುದು ಎಷ್ಟೋ ಪ್ರಯಾಸಕರ. ಇಂತಿರಲು, ಸ್ವರ್ಗದಲ್ಲಿರುವುದನು ಬದಲಿಗೆ ತರಲು ಯಾರು ಸಮರ್ಥ? ನೀವು ನಿಮ್ಮ ಸುಜ್ಞಾನವನ್ನು ಅನುಗ್ರಹಿಸದೆ ಹೋಗಿದ್ದರೆ ನಿಮ್ಮ ಪವಿತ್ರಾತ್ಮನನ್ನು ಸ್ವರ್ಗದಿಂದ ಕಳುಹಿಸದೆ ಹೋಗಿದ್ದರೆ ನಿಮ್ಮ ಸಂಕಲ್ಪವನ್ನು ಯಾರಾದರು ಅರಿಯುತ್ತಿದ್ದರೇ? ಹೀಗೆ ಲೋಕದ ಮಾರ್ಗಗಳನ್ನು ತಿದ್ದಲಾಯಿತು, ನಿಮಗೆ ಮೆಚ್ಚುಗೆಯಾದುದನು ಜನರಿಗೆ ಕಲಿಸಲಾಯಿತು, ಸುಜ್ಞಾನದಿಂದಲೇ ಅವರಿಗೆ ರಕ್ಷಣೆ ಲಭಿಸುವಂತಾಯಿತು.

ಕೀರ್ತನೆ: 90:3-6, 12-13, 14, 17

ಶ್ಲೋಕ: ಪ್ರಭು, ತಲತಲಾಂತರಕ್ಕೆ ಶ್ರೀನಿವಾಸ ನೀನೆಮಗೆ

ಎರಡನೇ ವಾಚನ: ಫಿಲೆಮೋನನಿಗೆ 1:9-10, 12-17

ನಿನ್ನ ಮೇಲಿರುವ ಪ್ರೀತಿಯ ನಿಮಿತ್ತ ನಾನು ನಿಮ್ಮಲ್ಲಿ ವಿನಂತಿಸುತ್ತೇನೆ: ವೃದ್ಧಪ್ರಾಯನೂ ಮತ್ತು ಕ್ರಿಸ್ತಯೇಸುವಿಗೋಸ್ಕರ ಈಗ ಸೆರೆಯಾಳೂ ಆಗಿರುವ ಪೌಲನೆಂಬ ನಾನು ಒನೇಸಿಮನ ಪರವಾಗಿ ನಿನ್ನಲ್ಲಿ ವಿಜ್ಞಾಪಿಸುತ್ತೇನೆ. ಇವನು ಯೇಸುವಿನಲ್ಲಿ ನನ್ನ ಸ್ವಂತ ಮಗನಂತಿದ್ದಾನೆ. ಸೆರೆಮನೆಯಲ್ಲಿ ನಾನು ಅವನನ್ನು ಆಧ್ಯಾತ್ಮಿಕವಾಗಿ ಪಡೆದೆನು. ನನಗಂತೂ ಇವನು ಪ್ರಾಣದಂತಿದ್ದರೂ ಈಗ ನಿನ್ನ ಬಳಿಗೆ ಕಳುಹಿಸುತ್ತಿದ್ದೇನೆ. ಶುಭಸಂದೇಶಕ್ಕೋಸ್ಕರ ನಾನು ಸೆರೆಮನೆಯಲ್ಲಿರುವಾಗ ನಿನ್ನ ಬದಲಾಗಿ ನನಗೆ ಸಹಾಯ ಮಾಡಲು ಇವನನ್ನು ಇಲ್ಲಿಯೇ ಉಳಿಸಿಕೊಳ್ಳಲು ಇಷ್ಟವಿತ್ತು. ಆದರೆ ನನಗೆ ಸಹಾಯವಾಗಲೆಂದು ನಿನ್ನನ್ನು ಕಡ್ಡಾಯಪಡಿಸಲು ನನಗಂತೂ ಇಷ್ಟವಿಲ್ಲ. ನಿನಗಾಗಿಯೇ ನಿನ್ನ ಸ್ವಂತ ಇಚ್ಛೆಯಿಂದ ಹಾಗೆ ಮಾಡಬೇಕೆಂಬುದು ನನ್ನ ಅಪೇಕ್ಷೆ. ಆದ್ದರಿಂದ ನಿನ್ನ ಒಪ್ಪಿಗೆಯಿಲ್ಲದೆ ನಾನು ಏನನ್ನೂ ಮಾಡುತ್ತಿಲ್ಲ. ಸ್ವಲ್ಪಕಾಲ ಒನೇಸಿಮನು ನಿನ್ನಿಂದ ದೂರವಿದ್ದುದಕ್ಕೆ ಕಾರಣ ಆತನು ಸದಾಕಾಲ ನಿನ್ನವನಾಗುವುದಕ್ಕೋ ಏನೋ. ಈಗ ಅವನು ನಿನ್ನ ಬಳಿಗೆ ಬರುತ್ತಿರುವುದು ಕೇವಲ ಗುಲಾಮನಂತೆ ಅಲ್ಲ, ಅದಕ್ಕಿಂತಲೂ ಬಹಳ  ಮೇಲಾದವನಂತೆ, ಕ್ರಿಸ್ತ ಯೇಸುವಿನಲ್ಲಿ ಪ್ರಿಯ ಸಹೋದರನಂತೆ, ಅವನೆಂದರೆ ನನಗೆಷ್ಟೋ ಪ್ರೀತಿ. ಹಾಗಾದರೆ ನಿನ್ನ ಸೇವಕನೂ ನಮ್ಮ ಪ್ರಭುವಿನಲ್ಲಿ ನಿನ್ನ ಪ್ರಿಯ ಸಹೋದರನೂ ಆಗಿರುವ ಅವನ ಬಗ್ಗೆ ನಿನಗೆ ಮತ್ತಷ್ಟು ಪ್ರೀತಿ ಇರಬೇಕಲ್ಲವೇ? ಆದ್ದರಿಂದ ಕ್ರಿಸ್ತ ಯೇಸುವಿನಲ್ಲಿ ನಿನಗೂ ನನಗೂ ಅನ್ಯೋನ್ಯತೆ ಇದೆಯೆಂದು ನೀನು ಪರಿಗಣಿಸುವುದಾದರೆ ನನ್ನನ್ನು ಹೇಗೆ ಸ್ವಾಗತಿಸುತ್ತಿದ್ದೆಯೋ ಹಾಗೆಯೇ ಇವನನ್ನೂ ಸ್ವಾಗತಿಸು.

ಶುಭಸಂದೇಶ: ಲೂಕ 14:25-33


ಜನರು ಗುಂಪುಗುಂಪಾಗಿ ಯೇಸುಸ್ವಾಮಿಯ ಸಂಗಡ ಹೋಗುತ್ತಿದ್ದರು. ಆಗ ಯೇಸು ಅವರ ಕಡೆಗೆ ತಿರುಗಿ ಹೀಗೆಂದರು: "ನನ್ನಲ್ಲಿಗೆ ಬರುವ ಯಾರೊಬ್ಬನೂ ತನ್ನ ತಂದೆ-ತಾಯಿ, ಹೆಂಡತಿ- ಮಕ್ಕಳು, ಸೋದರ- ಸೋದರಿಯರನ್ನು ಮಾತ್ರವಲ್ಲ, ತನ್ನ ಪ್ರಾಣವನ್ನು ಕೂಡ ತ್ಯಜಿಸದ ಹೊರತು, ನನ್ನ ಶಿಷ್ಯನಾಗಲಾರನು. ತನ್ನ ಶಿಲುಬೆಯನ್ನು ಹೊತ್ತು ನನ್ನ ಹಿಂದೆ ಬಾರದವನುನನ್ನ ಶಿಷ್ಯನಾಗಲಾರನು. ನಿಮ್ಮಲ್ಲಿ ಒಬ್ಬನು ಒಂದು ಗೋಪುರವನ್ನು ಕಟ್ಟಲು ಇಚ್ಛಿಸಿದರೆ, ಕೆಲಸವನ್ನು ಮುಗಿಸಲು ತನ್ನಿಂದ ಸಾಧ್ಯವೇ ಎಂದು ನೋಡಲು, ಮೊದಲು ಕುಳಿತು, ಬೇಕಾಗುವ ಖರ್ಚುವೆಚ್ಚವನ್ನು ಲೆಕ್ಕ ಹಾಕುವುದಿಲ್ಲವೇ? ಇಲ್ಲದೆ ಹೋದರೆ, ಇವನು ಅಸ್ತಿವಾರ ಹಾಕಿದ ಮೇಲೆ ಕೆಲಸ ಪೂರೈಸದೆ ಇರುವುದನ್ನು ಕಂಡು, "ಕಟ್ಟಲಾರಂಭಿಸಿದ; ಮುಗಿಸಲು ಇವನಿಂದಾಗಲಿಲ್ಲ!" ಎಂದು ನೋಡುವವರೆಲ್ಲರೂ ಅವನನ್ನು ಪರಿಹಾಸ್ಯಮಾಡುವರು. ಹಾಗೆಯೇ, ಅರಸನೊಬ್ಬನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವುದಕ್ಕೆ ಮುಂಚೆ ಇಪ್ಪತ್ತು ಸಾವಿರ ಸೈನ್ಯದೊಡನೆ ಬರುವ ಶತ್ರುವನ್ನು ತನ್ನ ಹತ್ತು ಸಾವಿರ ಸೈನ್ಯದಿಂದ ಎದುರಿಸಲು ಸಾಧ್ಯವೇ ಎಂದು ಮೊದಲು ಕುಳಿತು ಆಲೋಚನೆ ಮಾಡುವುದಿಲ್ಲವೇ? ಸಾಧ್ಯವಿಲ್ಲದಿದ್ದರೆ, ಶತ್ರು ರಾಜನು ದೂರದಲ್ಲಿರುವಾಗಲೇ ದೂತರನ್ನು ಕಳುಹಿಸಿ, ಸಂಧಾನಕ್ಕೆ ಷರತ್ತುಗಳೇನೆಂದು ವಿಚಾರಿಸುತ್ತಾನೆ. ಅದೇ ಮೇರೆಗೆ, ನಿಮ್ಮಲ್ಲಿ ಯಾವನು ತನಗಿರುವುದನ್ನೆಲ್ಲಾ ಪರಿತ್ಯಾಗ ಮಾಡುವುದಿಲ್ಲವೋ ಅವನು ನನ್ನ ಶಿಷ್ಯನಾಗಲಾರ.

03.09.22 - "ನರಪುತ್ರನು ಸಬ್ಬತ್ತಿಗೆ ಒಡೆಯನಾಗಿದ್ದಾನೆ,”

ಮೊದಲನೇ ವಾಚನ: 1 ಕೊರಿಂಥಿಯರಿಗೆ  4: 6-15

ಸಹೋದರರೇ, ನಿಮ್ಮ ಪ್ರಯೋಜನಕ್ಕಾಗಿ ಇದೆಲ್ಲವನ್ನು ನನಗೂ ಅಪೊಲೋಸನಿಗೂ ಅನ್ವಯಿಸಿ ಹೇಳಿದ್ದೇನೆ. ನೀವು ನಮ್ಮ ಆದರ್ಶವನ್ನು ಅನುಸರಿಸಬೇಕು. ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನು ವಿೂರಬಾರದು. ನಿಮ್ಮಲ್ಲಿ ಯಾರೂ ಒಬ್ಬನ ಪಕ್ಷವಹಿಸಿ ಜಂಬ ಕೊಚ್ಚಿಕೊಂಡು ಮತ್ತೊಬ್ಬನನ್ನು ಕಡೆಗಣಿಸಬಾರದು. ಇತರರಿಗಿಂತಲೂ ನಿನ್ನನ್ನು ಶ್ರೇಷ್ಠನನ್ನಾಗಿಸಿದವರು ಯಾರು? ದೇವರಿಂದ ಪಡೆಯದೆ ಇರುವುದು ನಿನ್ನಲ್ಲಿ ಯಾವುದಾದರೂ ಇದೆಯೆ? ಹೀಗೆ ಎಲ್ಲವನ್ನೂ ದೇವರಿಂದ ಪಡೆದ ಮೇಲೆ, ಪಡೆಯದವನಂತೆ ಜಂಬ ಕೊಚ್ಚಿಕೊಳ್ಳುವುದೇಕೆ? ಈಗಾಗಲೇ ನೀವು ಸಂತೃಪ್ತರಾಗಿಬಿಟ್ಟಿರೋ? ಇಷ್ಟಕ್ಕೇ ಶ್ರೀಮಂತರಾಗಿಬಿಟ್ಟಿರೋ? ನಮ್ಮನ್ನು ಬಿಟ್ಟು ನೀವು ಸಿಂಹಾಸನವೇರಿಬಿಟ್ಟಿರೋ? ನೀವು ನಿಜವಾಗಿಯೂ ರಾಜರಾಗಿದ್ದರೆ ಚೆನ್ನಾಗಿರುತ್ತಿತ್ತು! ಆಗ ನಾವೂ ನಿಮ್ಮ ಜೊತೆ ರಾಜ್ಯ ಆಳಬಹುದಿತ್ತು! ಬದಲಿಗೆ, ಪ್ರೇಷಿತರಾದ ನಮ್ಮನ್ನು ದೇವರು ಕಟ್ಟಕಡೆಯವರನ್ನಾಗಿಸಿದ್ದಾರೆಂದು ತೋರುತ್ತದೆ. ಎಲ್ಲರ ಮುಂದೆ ಮರಣದಂಡನೆಗೆ ಎಳೆದೊಯ್ಯಲಾಗುವವರಂತೆ ನಾವು ದೂತರಿಗೂ ಮಾನವರಿಗೂ ಇಡೀ ಜಗತ್ತಿಗೂ ಹಾಸ್ಯಾಸ್ಪದವಾದ ನೋಟವಾಗಿದ್ದೇವೆ. ಕ್ರಿಸ್ತಯೇಸುವಿನ ನಿಮಿತ್ತ ನಾವಂತೂ ಹುಚ್ಚರು, ನೀವಾದರೋ ಕ್ರಿಸ್ತಯೇಸುವಿನಲ್ಲಿ ಬುದ್ದಿವಂತರು; ನಾವು ಬಲಹೀನರು, ನೀವು ಬಲಾಢ್ಯರು; ನಾವು ಅವಮಾನಿತರು, ನೀವು ಸನ್ಮಾನಿತರು! ಈ ಗಳಿಗೆಯವರೆಗೂ ನಾವು ಹಸಿದು ಬಾಯಾರಿದವರು, ಬಟ್ಟೆಬರೆ ಇಲ್ಲದವರು, ಏಟುಪೆಟ್ಟು ತಿನ್ನುವವರು ಮತ್ತು ಮನೆಮಠವಿಲ್ಲದೆ ಅಲೆಯುವವರು ಆಗಿದ್ದೇವೆ. ಸ್ವಂತ ದುಡಿಮೆಯಿಂದ ಜೀವಿಸುತ್ತೇವೆ; ನಮ್ಮನ್ನು ಶಪಿಸುವವರನ್ನು ಆಶೀರ್ವದಿಸುತ್ತೇವೆ; ಹಿಂಸೆಗೊಳಗಾದಾಗ ಸಹಿಸಿಕೊಳ್ಳುತ್ತೇವೆ. ಅಪವಾದ ಹೊರಿಸಿದವರೊಡನೆ ವಿನಯದಿಂದ ವರ್ತಿಸುತ್ತೇವೆ; ಪ್ರಪಂಚದ ಪಾಲಿಗೆ ನಾವೀಗ ಕಸಕ್ಕಿಂತಲೂ ಕಡೆ; ವಿಶ್ವಕ್ಕೇ ಹೊಲಸು! ನಿಮ್ಮನ್ನು ನಾಚಿಕೆಪಡಿಸುವುದಕ್ಕೆ ಇದನ್ನು ಬರೆಯಲಿಲ್ಲ. ನಮ್ಮ ನೆಚ್ಚಿನ ಮಕ್ಕಳಾದ ನಿಮ್ಮನ್ನು ಎಚ್ಚರಿಸಲೆಂದು ಬರೆದೆನು. ನಿಮಗೆ ಕ್ರಿಸ್ತಯೇಸುವಿನಲ್ಲಿ ಸಾವಿರಾರು ಮಂದಿ ಶಿಕ್ಷಕರು ಇರಬಹುದು. ಆದರೆ ನಿಮಗೆ ನಾನೊಬ್ಬನೇ ತಂದೆ. ಶುಭಸಂದೇಶದ ಮೂಲಕ ನಾನೇ ನಿಮ್ಮನ್ನು ಕ್ರಿಸ್ತಯೇಸುವಿನಲ್ಲಿ ಪಡೆದ ತಂದೆ.

ಕೀರ್ತನೆ:  145:17-18, 19-20, 21

ಶ್ಲೋಕ: ಹತ್ತಿರ ಇಹನು ಪ್ರಭು ಕರೆಯುವಾವರೆಲ್ಲರಿಗೆ

ಶುಭಸಂದೇಶ: ಲೂಕ 6:1-5

ಒಂದು ಸಬ್ಬತ್ದಿನ ಯೇಸುಸ್ವಾಮಿ ಗೋದಿಯ ಹೊಲಗಳನ್ನು ಹಾದುಹೋಗುತ್ತಿದ್ದರು. ಅವರ ಶಿಷ್ಯರು ಕೆಲವು ತೆನೆಗಳನ್ನು ಕಿತ್ತು ಕೈಗಳಲ್ಲಿ ಹೊಸಕಿ ತಿನ್ನಲಾರಂಭಿಸಿದರು. ಅದನ್ನು ಕಂಡ ಫರಿಸಾಯರಲ್ಲಿ ಕೆಲವರು, “ಸಬ್ಬತ್ತಿನ ದಿನದಲ್ಲಿ ನಿಷಿದ್ಧವಾದುದನ್ನು ನೀವು ಮಾಡುವುದೇಕೆ?” ಎಂದು ಅವರನ್ನು ಆಕ್ಷೇಪಿಸಿದರು. ಅದಕ್ಕೆ ಯೇಸು, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂಬುದನ್ನು ನೀವು ಓದಿರಬೇಕಲ್ಲವೆ? ದಾವೀದನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ಬೇರೆ ಯಾರೂ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತೆಗೆದುಕೊಂಡು ತಿಂದುದಲ್ಲದೆ ತನ್ನ ಸಂಗಡಿಗರಿಗೂ ಕೊಟ್ಟನು ಅಲ್ಲವೆ? ನರಪುತ್ರನು ಸಬ್ಬತ್ತಿಗೆ ಒಡೆಯನಾಗಿದ್ದಾನೆ,” ಎಂದು ಉತ್ತರಕೊಟ್ಟರು.


28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...