ದೇವಮಾತೆಯ ಮಹೋತ್ಸವ
ಮೊದಲನೇ ವಾಚನ: ಮೀಕ 5:1-4
ಸಿಯೋನ್ ನಗರಿಯೇ, ನಿನ್ನ ಸೇನಾವ್ಯೂಹಗಳನ್ನು ಒಟ್ಟುಗೂಡಿಸು. ಇಗೋ, ಶತ್ರುಗಳು ನಮಗೆ ಮುತ್ತಿಗೆಹಾಕಿದ್ದಾರೆ. ಅವರು ಇಸ್ರಯೇಲಿನ ಅಧಿಪತಿಯ ಕೆನ್ನೆಗೆ ಕೋಲಿನಿಂದ ಹೊಡೆಯುವರು! ಎಫ್ರಾತದ ಬೆತ್ಲೆಹೇಮೇ, ಜುದೇಯದ ಕುಲಗಳಲ್ಲಿ ನೀನು ಅತಿಚಿಕ್ಕವಳಾಗಿದ್ದರೂ ಇಸ್ರಯೇಲನ್ನು ಆಳತಕ್ಕವನು ನಿನ್ನಿಂದಲೇ ಉದಯಿಸುವನು. ಆತನ ಗೋತ್ರದ ಮೂಲ ಪುರಾತನವಾದುದು, ಅನಾದಿಕಾಲದಿಂದ ಬಂದುದು. ಇಂತಿರಲು ದಿನತುಂಬಿದವಳು ಹೆರುವವರೆಗೂ ಸರ್ವೇಶ್ವರ ತನ್ನ ಜನರನ್ನು ಶತ್ರುಗಳ ವಶಕ್ಕೆ ಬಿಟ್ಟುಬಿಡುವರು. ಅನಂತರ ಅಳಿದುಳಿದ ಸಹೋದರರು ಬಂದು ಇಸ್ರಯೇಲ್ ಜನರೊಂದಿಗೆ ಸೇರಿಕೊಳ್ಳುವರು. ಆತನು ಸರ್ವೇಶ್ವರನಿಂದ ಬರುವ ಶಕ್ತಿಯಿಂದಲೂ ಆ ಸ್ವಾಮಿ ದೇವರ ನಾಮದ ಪ್ರಭಾವದಿಂದಲೂ ತನ್ನ ಜನರನ್ನು ಪರಿಪಾಲಿಸುವನು. ಆ ಜನರು ಸುರಕ್ಷಿತವಾಗಿ ಬಾಳುವರು. ಆತನು ಜಗದ ಕಟ್ಟಕಡೆಯವರೆಗೂ ಪ್ರಬಲನಾಗಿರುವನು.
ಕೀರ್ತನೆ: 13:6, 6
ಶ್ಲೋಕ: ಹಿರಿಹಿಗ್ಗುವುದು ನನ್ನ ದೇವರಲಿ ನನ್ನಾತ್ಮ
ನಿನ್ನಚಲ ಪ್ರೀತಿಯಲ್ಲಿದೆ ನನಗಿದೆ ವಿಶ್ವಾಸ I
ನಿನ್ನ ರಕ್ಷಣೆ ತಂದಿದೆ ನನ್ನ ಮನಕೆ ಹರುಷ II
ಪ್ರಭು ಮಾಡಿದ ಮಹೋಪಕಾರಗಳಿಗಾಗಿ I
ಹಾಡುವೆ ಗೀತವನು ಮನಃಪೂರ್ವಕವಾಗಿ II
ಶುಭಸಂದೇಶ: ಮತ್ತಾಯ 1:1-16, 18-23
ಅಬ್ರಹಾಮನ ಮನೆತನಕ್ಕೆ ಸೇರಿದ ದಾವೀದ ಕುಲದ ಯೇಸುಕ್ರಿಸ್ತರ ವಂಶಾವಳಿ: ಅಬ್ರಹಾಮನಿಗೆ ಇಸಾಕನು, ಇಸಾಕನಿಗೆ ಯಕೋಬನು, ಯಕೋಬನಿಗೆ ಯೂದ ಹಾಗೂ ಆತನ ಸಹೋದರರು ಹುಟ್ಟಿದರು. ಯೂದನಿಗೆ ತಾಮರ ಎಂಬವಳಿಂದ, ಪೆರಸ್ ಹಾಗೂ ಜೆರಹನ್ ಹುಟ್ಟಿದರು. ಪೆರಸನಿಗೆ ಹೆಸ್ರೋನ್, ಹೆಸ್ರೋನನಿಗೆ ರಾಮ್, ರಾಮನಿಗೆ ಅಮ್ಮಿನದಾಬ್, ಅಮ್ಮಿನದಾಬನಿಗೆ ನಹಸ್ಸೋನ್, ನಹಸ್ಸೋನನಿಗೆ ಸಲ್ಮೋನ್, 5ಸಲ್ಮೋನನಿಗೆ ರಹಾಬ್ ಎಂಬವಳಿಂದ ಬೋವಜ್, ಬೋವಜನಿಗೆ ರೂತ್ ಎಂಬವಳಿಂದ ಓಬೇದ್, ಓಬೇದನಿಗೆ ಜೆಸ್ಸೆಯ, ಜೆಸ್ಸೆಯನಿಗೆ ದಾವೀದರಸನು ಹುಟ್ಟಿದರು. ದಾವೀದನಿಗೆ ಊರಿಯನ ಹೆಂಡತಿಯಿಂದ ಸೊಲೊಮೋನ್, ಸೊಲೊಮೋನನಿಗೆ ರೆಹಬ್ಬಾಮ, ರೆಹಬ್ಬಾಮನಿಗೆ ಅಬೀಯ, ಅಬೀಯನಿಗೆ ಆಸನ್ ಹುಟ್ಟಿದರು. ಆಸನನಿಗೆ ಯೋಸೆಫಾತ್, ಯೋಸೆಫಾತನಿಗೆ ಯೆಹೋರಾಮ್, ಯೆಹೋರಾಮನಿಗೆ ಉಜ್ಜೀಯ ಹುಟ್ಟಿದರು. ಉಜ್ಜೀಯನಿಗೆ ಯೋತಾಮ್, ಯೋತಾಮನಿಗೆ ಅಹಾಜ್, ಅಹಾಜನಿಗೆ ಹಿಜ್ಕೀಯನು ಹುಟ್ಟಿದರು. ಹಿಜ್ಕೀಯನಿಗೆ ಮನಸ್ಸೆ, ಮನಸ್ಸೆಗೆ ಆಮೋನ್, ಆಮೋನನಿಗೆ ಯೋಷೀಯ ಹುಟ್ಟಿದರು. ಯೋಷೀಯನಿಗೆ ಯೆಕೊನ್ಯ ಮತ್ತು ಅವನ ಸಹೋದರರು ಹುಟ್ಟಿದರು. ಈ ಸಮಯದಲ್ಲೇ ಇಸ್ರಯೇಲರನ್ನು ಬಾಬಿಲೋನಿಗೆ ಸೆರೆ ಒಯ್ದದ್ದು. ಬಾಬಿಲೋನಿಗೆ ಸೆರೆಹೋದ ದಾಸ್ಯದಿನಗಳು ಮುಗಿದ ಮೇಲೆ ಯೆಕೊನ್ಯನಿಗೆ ಸಲಥಿಯೇಲ್, ಸಲಥಿಯೇಲನಿಗೆ ಜೆರುಬಾಬೆಲ್, ಜೆರುಬಾಬೆಲನಿಗೆ ಅಬೀಹೂದ್, ಅಬೀಹೂದನಿಗೆ ಎಲ್ಯಕೀಮ್. ಎಲ್ಯಕೀಮನಿಗೆ ಅಜೋರ್ ಹುಟ್ಟಿದರು. ಅಜೋರನಿಗೆ ಸದೋಕ್, ಸದೋಕನಿಗೆ ಅಖೀಮ್, ಅಖೀಮನಿಗೆ ಎಲಿಹೂದ್, ಎಲಿಹೂದನಿಗೆ ಎಲಿಯಾಜರ್, ಎಲಿಯಾಜರನಿಗೆ ಮತ್ತಾನ್, ಮತ್ತಾನನಿಗೆ ಯಕೋಬ್ ಹುಟ್ಟಿದರು. ಯಕೋಬನಿಗೆ ಮರಿಯಳ ಪತಿಯಾದ ಜೋಸೆಫನು ಹುಟ್ಟಿದನು. ಈ ಮರಿಯಳಿಂದಲೇ “ಕ್ರಿಸ್ತ” ಎಂದು ಕರೆಯಲಾಗುವ ಯೇಸುಸ್ವಾಮಿ ಹುಟ್ಟಿದ್ದು; ಕ್ರಿಸ್ತಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೆಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮುಂಚೆಯೇ ಮರಿಯಳು ಗರ್ಭವತಿಯಾಗಿರುವುದು ತಿಳಿದುಬಂತು. ಆಕೆ ಗರ್ಭ ಧರಿಸಿದ್ದು ಪವಿತ್ರಾತ್ಮ ಪ್ರಭಾವದಿಂದ. ಆಕೆಯ ಪತಿ ಜೋಸೆಫನು ನೀತಿವಂತನು. ಮರಿಯಳನ್ನು ಅವಮಾನಕ್ಕೆ ಗುರಿಮಾಡುವ ಉದ್ದೇಶ ಅವನದಲ್ಲವಾದ್ದರಿಂದ ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು. ಆತನು ಈ ಕುರಿತು ಆಲೋಚಿಸುತ್ತಿದ್ದಂತೆ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, “ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ. ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು ‘ಯೇಸು’ ಎಂಬ ಹೆಸರಿಡಬೇಕು. ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವವನು ಆತನೇ,” ಎಂದನು. “ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು ‘ಇಮ್ಮಾನುವೇಲ್’ ಎಂದು ಆತನಿಗೆ ಹೆಸರಿಡುವರು” ಎಂಬುದಾಗಿ ಪ್ರವಾದಿಯ ಮುಖಾಂತರ ಸರ್ವೇಶ್ವರ ಹೇಳಿದ ಪ್ರವಚನ ನೆರವೇರುವಂತೆ ಇದೆಲ್ಲಾ ಸಂಭವಿಸಿತು. “ಇಮ್ಮಾನುವೇಲ್” ಎಂದರೆ, “ದೇವರು ನಮ್ಮೊಡನೆ ಇದ್ದಾರೆ” ಎಂದು ಅರ್ಥ.
ಮರಿಯಮ್ಮನವರ ಗೀತೆಗಳು
No comments:
Post a Comment