ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

18.06.22

ಮೊದಲನೆಯ ವಾಚನ: 2 ಪೂರ್ವಕಾಲ ಇತಿಹಾಸದ: 24:17-25

ಯೆಹೋಯಾದವನು ಮೃತನಾದ ಮೇಲೆ, ಜುದೇಯದ ಪದಾಧಿಕಾರಿಗಳು ಅರಸ ಯೆಹೋವಾಷನ ಬಳಿಗೆ ಬಂದು, ಅವನಿಗೆ ಅಡ್ಡಬಿದ್ದು ಅವನನ್ನು ಒಲಿಸಿಕೊಂಡರು. ಅಂದಿನಿಂದ ಅವರು ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನ ಆಲಯವನ್ನು ನಿರಾಕರಿಸಿ, ಅಶೇರಸ್ತಂಭಗಳನ್ನೂ ವಿಗ್ರಹಗಳನ್ನೂ ಪೂಜಿಸತೊಡಗಿದರು. ಅವರ ಈ ಅಪರಾಧದಿಂದ ಜುದೇಯದ ಮೇಲೂ ಜೆರುಸಲೇಮಿನ ಮೇಲೂ ದೈವಕೋಪ ಎರಗಿತು. ಸರ್ವೇಶ್ವರ ಅವರನ್ನು ತಮ್ಮ ಕಡೆಗೆ ತಿರುಗಿಸಿಕೊಳ್ಳುವುದಕ್ಕಾಗಿ ಅವರ ಬಳಿಗೆ ಪ್ರವಾದಿಗಳನ್ನು ಕಳುಹಿಸಿದರು. ಇವರ ಮುಖಾಂತರ ಎಷ್ಟು ಎಚ್ಚರಿಸಿದರೂ ಅವರು ಕಿವಿಗೊಡಲಿಲ್ಲ. ಆಗ ಯಾಜಕ ಯೆಹೋಯಾದನ ಮಗ ಜೆಕರ್ಯನು ದೇವಾತ್ಮನಿಂದ ಆವೇಶವುಳ್ಳವನಾದನು. ಅವನು ಜನರ ಎದುರಿಗೆ ಉನ್ನತ ಸ್ಥಾನದಲ್ಲಿ ನಿಂತು, " ದೇವರ ಮಾತನ್ನು ಕೇಳಿರಿ; ನೀವೇಕೆ ಸರ್ವೇಶ್ವರನ ಆಜ್ಞೆಗಳನ್ನು ಮೀರಿ, ನಿಮ್ಮನ್ನೇ ನಾಶಮಾಡಿಕೊಳ್ಳುತ್ತೀರಿ ? ನೀವು ಸರ್ವೇಶ್ವರಸ್ವಾಮಿಯನ್ನು ಬಿಟ್ಟಿದ್ದರಿಂದ ಅವರೂ ನಿಮ್ಮನ್ನು ಬಿಟ್ಟುಬಿಟ್ಟಿದ್ದಾರೆ, " ಎಂದನು. ಆಗ ಅವನಿಗೆ ವಿರೋಧವಾಗಿ ಒಳಸಂಚು ಮಾಡಿ, ಸರ್ವೇಶ್ವರನ ಆಲಯದ ಪ್ರಕಾರದಲ್ಲಿ ಅವನನ್ನು ಕಲ್ಲೆಸೆದು ಕೊಂದರು. ಇದು ಅರಸ ಯೆಹೋವಾಷನ ಅಪ್ಪಣೆಯಿಂದಲೇ ಆಯಿತು. ಜೆಕರ್ಯನ ತಂದೆ ಯಹೋಯಾದನಿಂದ ತನಗಾದ ಉಪಕಾರವನ್ನು ನೆನಪುಮಾಡಿಕೊಳ್ಳದೆ ಈ ಯೆಹೋವಾಷನು ಅವನ ಮಗನನ್ನು ಕೊಲ್ಲಿಸಿದನು. ಜೆಕರ್ಯನು ಸಾಯುವಾಗ, " ಸರ್ವೇಶ್ವರಸ್ವಾಮಿಯೇ ಇದನ್ನು ನೋಡಿ ತಕ್ಕ ಶಾಸ್ತಿಮಾಡಲಿ " ಎಂದನು. ವರ್ಷಾಂತ್ಯದಲ್ಲಿ ಸಿರಿಯಾದ ಸೈನ್ಯ ಯೆಹೋವಾಷನ ಮೇಲೆ ದಾಹಿಮಾಡಲು ಹೊರಟಿತು. ಆ ಸೈನ್ಯದವರು ಜುದೇಯ ನಾಡಿನೊಳಗೆ ನುಗ್ಗಿ ಜೆರುಸಲೇಮಿಗೆ ಬಂದು, ಇಸ್ರಯೇಲರ ಎಲ್ಲ ಜನಾಧಿಪತಿಗಳನ್ನು ನಿರ್ನಾಮ ಮಾಡಿ ಅವರಲ್ಲಿ ಸಿಕ್ಕಿದ ಕೊಳ್ಳೆಯನ್ನೆಲ್ಲಾ ದಮಸ್ಕದ ಅರಸನಿಗೆ ಕಳುಹಿಸಿದರು. ಸಿರಿಯಾದ ಸೈನ್ಯದಿಂದ ಬಂದ ಗುಂಪು ಚಿಕ್ಕದಾಗಿದ್ದರೂ ಯೆಹೂದ್ಯರು ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನನ್ನು ಬಿಟ್ಟುಬಿಟ್ಟಿದ್ದರಿಂದ ಶಿಕ್ಷೆಗೆ ಗುರಿಯಾದರು. ತಮ್ಮದು ಮಹಾಸೈನ್ಯವಾಗಿದ್ದರೂ ಸಿರಿಯಾದವರ ಕೈಯಲ್ಲಿ ಸೋಲನ್ನು ಅನುಭವಿಸಿದರು; ಯೆಹೋವಾಷನಿಗೆ ದಂಡನೆಯಾಯಿತು. ಕಠಿಣವಾಗಿ ಗಾಯಗೊಂಡಿದ್ದ ಅವನನ್ನು ಸಿರಿಯಾದವರು ಬಿಟ್ಟುಹೋದರು. ಅವನ ಸೇವಕರೇ, ಯಾಜಕ ಯೆಹೋಯಾದನ ಮಗನ ವಧೆಯ ನಿಮಿತ್ತ, ಅವನಿಗೆ ವಿರೋದವಾಗಿ ಒಳಸಂಚುಮಾಡಿ ಅವನನ್ನು ಹಾಸಿಗೆಯಲ್ಲೇ ಕೊಂದುಹಾಕಿದರು. ಅವನ ಸವವನ್ನು ದಾವೀದನಗರದೊಳಗೆ ಸಮಾಧಿಮಾಡಿದರು; ಆದರೆ ರಾಜಸ್ಮಶಾನದಲ್ಲಿ ಮಾಡಲಿಲ್ಲ.

ಕೀರ್ತನೆ: 89:3-4, 28-29, 30-32, 33
ಶ್ಲೋಕ: ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ.

ನೀನೆಂದೆ, " ನಾನಾರಿಸಿದವನೊಡನೆ ಮಾಡಿರುವೆ ಒಪ್ಪಂದ|
ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರನಾದ ಶಪಥ:||
ಸ್ಥಾಪಿಸುವೆ ಶಾಶ್ವತವಾಗಿ ನಿನ್ನ ಸಂತತಿಯನು|
ಸ್ಥಿರಪಡಿಸುವೆ ಯುಗಯುಗಕು ನಿನ್ನ ಸಿಂಹಾಸನವನು "||

ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ|
ಅವನೊಡನೆ ನಾ ಮಾಡಿದೊಪ್ಪಂದ ಸ್ಥಿರಸ್ಥಾಯಿಯಾಗಿ||
ಉಳಿಸುವೆನು ಅವನ ಸಂತಾನವನು ನಿರಂತರವಾಗಿ|
ಅವನ ಸಿಂಹಾಸನವಿರುವುದು ಗಗನದಂತೆ ಸ್ಥಿರವಾಗಿ||

ಅವನ ಕುವರರು ತೊರೆದರಾದರೆ ನನ್ನ ಧರ್ಮಶಾಸ್ತ್ರವನು|
ಉಲ್ಲಂಘಿಸಿ ನಡೆದರಾದರೆ ನನ್ನ ಆಜ್ಞಾವಿಧಿಗಳನು||
ಮೀರಿ ನಡೆದರಾದರೆ ನನ್ನ ಶಾಸನಗಳನು|
ಪರಿಪಾಲಿಸದೆ ಹೋದರೆ ಎನ್ನ ನಿಯಮಗಳನು||
ದಂಡಿಸುವೆನವರ ದ್ರೋಹವನು ದಂಡದಿಂದ|
ಶಿಕ್ಷಿಸುವೆನವರ ಅಪರಾಧವನು ಚಾಟಿಯಿಂದ||

ಶುಭಸಂದೇಶ: ಮತ್ತಾಯ 6:24-34

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: " ಯಾರೂ ಇಬ್ಬರು ಯಜಮಾನರಿಗೆ ಜೀತ ಮಾಡಲಾಗದು. ಅವನು ಒಬ್ಬನನ್ನು ದ್ವೇಷಿಸಿ ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ, ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆಮಾಡಲು ನಿಮ್ಮಿಂದಾಗದು. ನಾನು ಹೇಳುವುದನ್ನು ಕೇಳಿ : ' ಪ್ರಾಣಧಾರಣೆಗೆ ಏನು ಉಣ್ಣುವುದು, ಏನು ಕುಡಿಯುವುದು; ದೇಹರಕ್ಷಣೆಗೆ ಏನು ಹೊದೆಯುವುದು ' ಎಂದು ಚಿಂತೆಮಾಡಬೇಡಿ. ಊಟಕ್ಕಿಂತ ಪ್ರಾಣ, ಉಡುಪಿಗಿಂತ ದೇಹ ಮೇಲಾದುದಲ್ಲವೆ? ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ಗಮನಿಸಿರಿ: ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ಕೂಡಿಡುವುದೂ ಇಲ್ಲ. ಆದರೂ ಸ್ವರ್ಗದಲ್ಲಿರುವ ನಿಮ್ಮ ತಂದೆ ಅವುಗಳನ್ನು ಪೋಷಿಸುತ್ತಾರೆ. ಹಕ್ಕಿಗಳಿಗಿಂತ ನೀವು ಎಷ್ಟೋ ಮೇಲಾದವರಲ್ಲವೆ? ಚಿಂತಿಸಿ, ಚಿಂತಿಸಿ ನಿಮ್ಮ ಜೀವನಾವಧಿಯನ್ನು ಕೊಂಚಕಾಲವಾದರೂ ದೀರ್ಘಮಾಡಲು ನಿಮ್ಮಲ್ಲಿ ಯಾರಿಂದಾದೀತು? ಉಡುಗೆತೊಡುಗೆಗಳ ಚಿಂತೆ ನಿಮಗೇಕೆ? ವನಕುಸುಮಗಳು ಬೆಳೆಯುವ ರೀತಿಯನ್ನು ಗಮನಿಸಿ ನೋಡಿ : ಅವು ದುಡಿಯುವುದಿಲ್ಲ, ನೂಲುವುದಿಲ್ಲ. ಆದರೂ ಅರಸ ಸೊಲೊಮೋನನು ತನ್ನ ಸರ್ವವೈಭವದಲ್ಲಿ ಇದ್ದಾಗಲೂ ಈ ಕುಸುಮಗಳಲ್ಲಿ ಒಂದರಷ್ಟೂ ಸುಂದರವಾದ ಉಡುಪನ್ನು ಧರಿಸಿರಲಿಲ್ಲ. ಅಲ್ಪ ವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆಪಾಲಾಗುವ ಬಯಲಿನ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ, ನಿಮಗೆ ಮತ್ತಷ್ಟೂ ಮಾಡಲಾರರೇ? ಆದುದರಿಂದ ತಿನ್ನಲು ಏನು? ಕುಡಿಯಲು ಏನು? ಉಡಲು ಏನು? ಎಂದು ಪೇಚಾಡಬೇಡಿ. ಇವೆಲ್ಲವುಗಳಿಗಾಗಿ ಪರಕೀಯರೂ ಪರದಾಡುತ್ತಾರೆ; ಇವೆಲ್ಲಾ ನಿಮಗೆ ಅವಶ್ಯ ಎಂದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ. ನೀವಾದರೋ ಮೊದಲು ದೇವರ ಸಾಮ್ರಾಜ್ಯಕ್ಕಾಗಿ, ಅವರ ಸತ್ಸಂಬಂಧಕ್ಕಾಗಿ ತವಕಪಡಿ. ಇದರೊಂದಿಗೆ ಅವೆಲ್ಲವೂ ನಿಮಗೆ ನೀಡಲಾಗುವುದು. ಆದುದರಿಂದ ನಾಳೆಯ ಚಿಂತೆ ನಿಮಗೆ ಬೇಡ. ನಾಳೆಯ ಚಿಂತೆ ನಾಳೆಗೇ ಇರಲಿ; ಇಂದಿನ ಪಾಡೇ ಇಂದಿಗೆ ಸಾಕು."




*✝️ ಪ್ರಭುವಿನ ಶುಭಸಂದೇಶ.*

*🛐ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ.*




*🟩🛐🌻🙏 ಆಮೆನ್🙏🌻🛐🙏☦️🛐☦️🙏

17.06.22 - " ನಿನ್ನ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು ನಿನ್ನ ಹೃದಯ."

ಮೊದಲನೆಯ ವಾಚನ: 2 ಅರಸುಗಳು 11:1-4, 9-18, 20

ಅಹಜ್ಯನು ಮರಣಹೊಂದಿದನೆಂಬುದನ್ನು ಅವನ ತಾಯಿ ಅತಲ್ಯಳು ಕೇಳಿದಾಗ ರಾಜಸಂತಾನದವರನ್ನೆಲ್ಲಾ ಬೇಗನೆ ಸಂಹರಿಸಿಬಿಟ್ಟಳು. ಆದರೆ ಅರಸ ಯೆಹೋರಾಮನ ಮಗಳೂ ಅಹಜ್ಯನ ತಂಗಿಯೂ ಆದ ಯೆಹೋಷೆಬ ಎಂಬಾಕೆ, ಯಾರಿಗೂ ತಿಳಿಯದಂತೆ ತನ್ನ ಅಣ್ಣನ ಮಗ ಯೆಹೋವಾಷನನ್ನು, ಹತವಾಗುವುದಕ್ಕಿಂತ ರಾಜಪುತ್ರರ ಮಧ್ಯೆಯಿಂದ, ಅವನ ದಾದಿಯೊಡನೆ ತೆಗೆದುಕೊಂಡು ಹೋಗಿ, ಮಲಗುವ ಕೋಣೆಯಲ್ಲಿ ಅಡಗಿಸಿಬಿಟ್ಟಳು. ಹೀಗೆ ಅವನು ಅತಲ್ಯಳಿಂದ ಹತವಾಗದೆ ತಪ್ಪಿಸಿಕೊಂಡು, ಆರು ವರ್ಷಗಳವರೆಗೂ ಯೆಹೋಷೆಬಳೊಡನೆ ಗುಪ್ತವಾಗಿ ಸರ್ವೇಶ್ವರನ ಆಲಯದಲ್ಲಿದ್ದನು. ಈ ಆರು ವರ್ಷಗಳಲ್ಲಿ ಅತಲ್ಯಳೇ ನಾಡನ್ನು ಆಳುತ್ತಿದ್ದಳು. ಏಳನೆಯ ವರ್ಷದಲ್ಲಿ ಯಾಜಕನಾದ ಯೆಹೋಯಾದಾವನು ' ಕಾರಿ ' ಎಂಬ ಸಿಪಾಯಿಗಳ ಮತ್ತು ಕಾವಲುದಂಡಿನವರ ಶತಾಧಿಪತಿಗಳನ್ನು ತನ್ನ ಹತ್ತಿರ ಸರ್ವೇಶ್ವರನ ಆಲಯಕ್ಕೆ ಕರೆಯಿಸಿದನು. ಅಲ್ಲಿ ಅವನು ಅವರ ಸಂಗಡ ಪ್ರಮಾಣಪೂರ್ವಕವಾದ ಒಪ್ಪಂದವನ್ನು ಮಾಡಿಕೊಂಡ ನಂತರ ರಾಜಕುಮಾರನನ್ನು ತೋರಿಸಿದನು. ಯೆಹೋಯಾದಾವನು. ಆಜ್ಞಾಪಿಸಿದಂತೆ ಶತಾಧಿಪತಿಗಳು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಕಾಯುವುದಕ್ಕಾಗಿ ಬರತಕ್ಕ ಸಿಪಾಯಿಗಳನ್ನು ಕರೆದುಕೊಂಡು ಅವನ ಬಳಿಗೆ ಬಂದರು. ಅವನು ಆ ಶತಾಧಿಪತಿಗಳಿಗೆ ಸರ್ವೇಶ್ವರನ ಆಲಯದಲ್ಲಿ ಇಡಲಾಗಿದ್ದ ದಾವೀದನ ಬರ್ಜಿಯನ್ನೂ ಗುರಾಣಿಗಳನ್ನೂ ಕೊಟ್ಟನು. ಕಾವಲುದಂಡಿನವರು ಆಯುಧ ಹಿಡಿದುಕೊಂಡು ಅರಸನನ್ನು ಕಾಯುವುದಕ್ಕಾಗಿ ದೇವಾಲಯದ ದಕ್ಷಿಣ ದಿಕ್ಕಿನ ಮೂಲೆಯಿಂದ ಬಲಿಪೀಠದವರೆಗು, ಅಲ್ಲಿಂದ ಉತ್ತರ ದಿಕ್ಕಿನ ಮೂಲೆಯವರೆಗು, ಸಾಲಾಗಿ ನಿಂತರು. ಯೆಹೋಯಾದಾವನು ರಾಜಪುತ್ರನನ್ನು ಹೊರಗೆ ಕರೆದುಕೊಂಡು ಬಂದು, ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ಧರ್ಮಶಾಸ್ತ್ರವನ್ನು ಕೊಟ್ಟು, ಅವನಿಗೆ ರಾಜ್ಯಾಭಿಷೇಕ ಮಾಡಿದನು. ಕೂಡಲೆ ಜನರು ಚಪ್ಪಾಳೆಹೊಡೆದು ' ಅರಸನು ಚಿರಂಜೀವಿಯಾಗಿರಲಿ! ' ಎಂದು ಜಯಕಾರ ಮಾಡಿದರು. ಅತಲ್ಯಲು ಕಾವಲುದಂಡಿನವರ ಮತ್ತು ಇತರ ಜನರ ಗದ್ದಲವನ್ನು ಕೇಳಿ, ಅವರು ಕೂಡಿದ್ದ ಸರ್ವೇಶ್ವರನ ಆಲಯಕ್ಕೆ ಬಂದಳು. ಅಲ್ಲಿ ಅರಸನು ಪದ್ಧತಿಯ ಪ್ರಕಾರ ಸ್ತಂಭದ ಬಳಿಯಲ್ಲಿ ನಿಂತಿದ್ದನು; ಅಧಿಪತಿಗಳೂ ತುತೂರಿಗಳನ್ನು ಊದುವವರೂ ಅರಸನ ಹತ್ತಿರ ಇದ್ದರು. ಜನಸಾಮ್ಯಾರೆಲ್ಲರು ಸಂತೋಷದಿಂದ ಕೊಂಬೂದುತ್ತಿದ್ದರು. ಇದನ್ನು ಕಂಡಕೂಡಲೆ ಆಕೆ ಕೋಪದಿಂದ ಬಟ್ಟೆಗಳನ್ನು ಹರಿದುಕೊಂಡು, " ದ್ರೋಹ! ದ್ರೋಹ! " ಎಂದು ಕೂಗಿದಳು. ಆಗ ಯಾಜಕನಾದ ಯೆಹೋಯಾದಾವನು ಸೇನಾನಿಗಳಾದ ಶತಾಧಿಪತಿಗಳಿಗೆ, " ಈಕೆಯನ್ನು ಸರ್ವೇಶ್ವರನ ಆಲಯದಲ್ಲಿ ಕೊಲ್ಲಬೇಡಿ; ಎರಡು ಸಾಲು ಸಿಪಾಯಿಗಳು ಈಕೆಯನ್ನು ನಡುವೆ ಮಾಡಿ, ಹೊರಗೆ ಕರೆದುಕೊಂಡು ಹೋಗಲಿ;. ಮತ್ತು ಈಕೆಯನ್ನು ಹಿಂಬಾಲಿಸುವಂಥವರನ್ನು ಕತ್ತಿಯಿಂದ ಕೊಲ್ಲಿರಿ, " ಎಂದು ಆಜ್ಞಾಪಿಸಿದನು. ಅವರು ಆಕೆಯನ್ನು ಹಿಡಿದು ಕುದುರೆಗಳ ಬಾಗಿಲಿನಿಂದ ಅರಮನೆಗೆ ಒಯ್ದು ಅಲ್ಲಿ ಹತಿಸಿದರು. ಅನಂತರ ಯೆಹೋಯಾದಾವನ ಪ್ರೇರಣೆಯಿಂದ ಅರಸನೂ ಪ್ರಜೆಗಳೂ ತಾವು ಸರ್ವೇಶ್ವರನ ಪ್ರಜೆಗಳಾಗಿರುವುದಾಗಿ ಪ್ರಮಾಣಮಾಡಿದರು. ಇದಲ್ಲದೆ, ರಾಜನಿಗೂ ಪ್ರಜೆಗಳಿಗೂ ಒಂದು ಒಪ್ಪಂದವಾಯಿತು. ಯೆಹೂದ್ಯರೆಲ್ಲರೂ ಬಾಳ್ ದೇವತೆಯ ದೇವಸ್ಥಾನಕ್ಕೆ ಹೋಗಿ ಬಾಳನ ಪೂಜಾರಿಯಾದ ಮತ್ತಾನನನ್ನು ಪೀಠಗಳ ಮುಂದೆಯೇ ಕೊಂದು, ಆ ದೇವಸ್ಥಾನವನ್ನೂ ಅದರಲ್ಲಿದ್ದ ಪೀಠ ಹಾಗು ವಿಗ್ರಹಗಳನ್ನೂ ಸಂಪೂರ್ಣವಾಗಿ ಹಾಳುಮಾಡಿದರು. ಯೆಹೋಯಾದಾವನು ದೇವಾಲಯಕ್ಕೆ ಕಾವಲಿಟ್ಟನು. ನಾಡಿನವರೆಲ್ಲರೂ ಬಹಳವಾಗಿ ಸಂತೋಷಪಟ್ಟರು. ಪಟ್ಟಣದಲ್ಲಿ ಶಾಂತಿಯಿತ್ತು ; ಅತಲ್ಯಳನ್ನು ಅರಭನೆಯಲ್ಲೇ ಕತ್ತಿಯಿಂದ ಸಂಹರಿಸಿದರು.

ಕೀರ್ತನೆ 132:11, 12, 13-14, 17-18
ಶ್ಲೋಕ: ಆರಿಸಿಕೊಂಡಿಹನು ಪ್ರಭು ಸಿಯೋನ್ ನಗರವನು.

ದಾವೀದನಿಗೆ ಪ್ರಭು ಆಣೆಯಿಟ್ಟು ಇಂತೆಂದ:|
ಆಣೆಯಿಟ್ಟು ಕೊಟ್ಟಾ, ಮಾತಿಗೆ ತಪ್ರಲಾರನಾತ:|
ನಿನ್ನ ಸಿಂಹಾಸನರಲಿ ಕೂರಿಸುವೆನು ನಿನ್ನ ತನುಜನೊಬ್ಬನನು||

ನನ್ನ ನೇಮನಿಯಮಗಳನು ನಿನ್ನ ಮಕ್ಕಳು ಅನುಸರಿಸುವರಾದರೆ|
ಕೂರುವರು ಸದಾಕಾಲ ಅವರ ಮಕ್ಕಳು ನಿನ್ನಾ ಸಿಂಹಾಸನದ ಮೇಲೆ||

ಆರಿಸಿಕೊಂಡಿಹನು ಪ್ರಭು ಸಿಯೋನ್ ನಗರವನು|
ಅಪೇಕ್ಷಿಸಿಹನು ತನ್ನ ನಿವಾಸಕ್ಕಾಗಿ ಅದನು||
ಎಂದೆಂದಿಗು ಇದೇ ನನ್ನ ನಿವಾಸ|
ಇರುವೆನಿಲ್ಲೇ, ಇದು ನನ್ನ ಅಭಿಲಾಶ||

ಕೋಡೊಂದು ಮೂಡುವಂತೆ ಮಾಡುವೆ ದಾವೀದನಿಗಿಲ್ಲೇ|
ನಂದಾದೀಪ ಬೆಳಗುವಂತೆ ಮಾಡುವೆ ನಿನ್ನ ಅಭಿಷಿಕ್ತನಿಗಿಲ್ಲೇ||
ತೊಡಿಸುವೆನು ಅವನ ವೈರಿಗಳಿಗೆ ಲಜ್ಜಾಕವಚವನು|
ಮುಡಿಸುವೆನು ಅವನಿಗಾದರೋ ಪ್ರಜ್ವಲ ಕೀರಿಟವನು||

ಶುಭಸಂದೇಶ: ಮತ್ತಾಯ 6:19-23


"ಇಹಲೋಕದಲ್ಲಿ ಆಸ್ತಿಪಾಸ್ತಿಯನ್ನು ಶೇಕರಿಸಿಡಬೇಡಿ. ಇಲ್ಲಿ ತುಕ್ಕು ಹಿಡಿದೀತು; ನುಸಿ ಹೊಡೆದೀತು; ಕಳ್ಳರು ಕನ್ನ ಕೊರೆದು ಕದ್ದಾರು. ನಿಮ್ಮ ಆಸ್ತಿಯನ್ನು ಸ್ವರ್ಗದಲ್ಲಿ ಕೂಡಿಸಿಡಿ. ಅಲ್ಲಿ ತುಕ್ಕು ಹಿಡಿಯದು,. ನುಸಿ ಹೊಡೆಯದು, ಕಳ್ಳರು ಕನ್ನ ಕೊರೆದು ಕದಿಯರು. ನಿನ್ನ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು ನಿನ್ನ ಹೃದಯ. ಕಣ್ಣೇ ದೇಹಕ್ಕೆ ದೀಪ. ನಿನ್ನ ಕಣ್ಣು ಸರಿಯಿದ್ದರೆ ದೇಹವೆಲ್ಲ ಕಾಂತಿಮಯವಾಗುವುದು. ಅದು ಕೆಟ್ಟಿದ್ದರೆ ನಿನ್ನ ದೇಹವೆಲ್ಲ ಕತ್ತಲೆಮಯವಾಗುವುದು. ನಿನ್ನೊಳಗಿರುವ ಬೆಳಕೇ ಕತ್ತಲೆಯಾದಲ್ಲಿ ಅದೆಂತಹ ಕರಾಳ ಕತ್ತಲೆಯಾಗಿರಬಹುದು!"

16.06.22 - “ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು"

ಮೊದಲನೇ ವಾಚನ: ಸಿರಾಖನು 48:1-14

ಎಲೀಯನು ಆಮೇಲೆ ಪ್ರವಾದಿ ಎಲೀಯನೆದ್ದನು ಬೆಂಕಿಯಂತೆ ಉರಿಯಿತವನ ನುಡಿ ಪಂಜಿನಂತೆ. ಕ್ಷಾಮವನ್ನು ಬರಮಾಡಿದನಿವನು ಜನರ ಮೇಲೆ ಅವರನ್ನು ಕುಂದಿಸಿದನು ತನ್ನ ರೋಷದಿಂದಲೆ. ಆಕಾಶವನ್ನೇ ಮುಚ್ಚಿಬಿಟ್ಟನು ಸರ್ವೇಶ್ವರನ ಹೆಸರಿನಲ್ಲಿ ಬೆಂಕಿಯಿಳಿಯುವಂತೆ ಮಾಡಿದನು ಮೂರುಸಾರಿ. ಎಲೈ ಎಲೀಯನೇ, ಮಹತ್ಕಾರ್ಯಗಳಲ್ಲಿ ನೀನು ಎಷ್ಟು ಘನವಂತನಾಗಿದ್ದೆ ! ನಿನ್ನಂತೆ ಹೆಚ್ಚಳಪಡುವವರು ಯಾರಿದ್ದಾರೆ? ಸತ್ತವನನ್ನು ನೀನೆಬ್ಬಿಸಿದೆ ಮರಣದಿಂದ, ಪಾತಾಳದಿಂದ ಇದು ಸಾಧ್ಯವಾಯಿತು ಮಹೋನ್ನತನ ವಾಕ್ಯ ಶಕ್ತಿಯಿಂದ. ಅರಸುಗಳನ್ನು ನಾಶನಕ್ಕೆ ಗುರಿಮಾಡಿದವನು ನೀನು ಗಣ್ಯವ್ಯಕ್ತಿಗಳನ್ನು ಮಂಚದಿಂದ ಇಳಿಸಿದವನು ನೀನು. ಸೀನಾಯಿನಲ್ಲಿ ಗದರಿಸಿಕೊಂಡವನು ನೀನು ಹೋರೇಬಿನಲ್ಲಿ ಮುಯ್ಯಿತೀರಿಸುವ ನಿರ್ಣಯ ಕೇಳಿಸಿಕೊಂಡವನು ನೀನು. ಪ್ರತೀಕಾರ ಮಾಡುವುದಕ್ಕೆ ಅರಸರನ್ನು, ನಿನ್ನಾನಂತರ ಇರಬೇಕಾದ ಪ್ರವಾದಿಯನ್ನು ಅಭಿಷೇಕಿಸಿದವನು ನೀನು. ನೀ ಒಯ್ಯಲ್ಪಟ್ಟೆ ಬೆಂಕಿಯ ಬಿರುಗಾಳಿಯಲ್ಲಿ ಅಗ್ನಿಮಯ ಕುದುರೆಗಳೆಳೆದ ರಥದಲ್ಲಿ. ಕೋಪ ರೌದ್ರಕ್ಕೇರುವುದಕ್ಕೆ ಮುಂಚೆ ಅದನ್ನು ಶಾಂತಪಡಿಸುವುದಕ್ಕಾಗಿ ತಂದೆಯ ಹೃದಯವನ್ನು ಮಗನ ಕಡೆಗೆ ತಿರುಗಿಸುವುದಕ್ಕಾಗಿ ಇಸ್ರಯೇಲಿನ ಕುಲಗಳನ್ನು ಯಥಾಸ್ಥಿತಿಗೆ ತರುವುದಕ್ಕಾಗಿ ತಕ್ಕಕಾಲದಲ್ಲಿ ಗದರಿಸುವಾತ ನೀನೆಂದು ಬರೆದಿದೆ ನಿನ್ನ ವಿಷಯವಾಗಿ. ನಿನ್ನನು ನೋಡುವವರು ಧನ್ಯರು ಪ್ರೀತಿಯಿಂದ ನಿಧನರಾದವರು ಧನ್ಯರು ! ಕಾರಣ, ನಾವು ಸಹ ನಿಜವಾಗಿ ಜೀವಿಸುವೆವು. ಎಲೀಷ ಸುಳಿಗಾಳಿಯಿಂದ ಆವರಿಸಲ್ಪಟ್ಟವನು ಎಲೀಯನು ಅವನ ಆತ್ಮದಿಂದ ತುಂಬಿಕೊಂಡವನು ಎಲೀಷನು. ಇವನು ತನ್ನ ಜೀವನದಲ್ಲಿ ಜಗ್ಗಲಿಲ್ಲ ಯಾವ ಅರಸನ ಬೆದರಿಕೆಗು ಇವನನ್ನು ಅಧೀನದಲ್ಲಿಟ್ಟುಕೊಳ್ಳುವ ಶಕ್ತಿ ಇರಲಿಲ್ಲ ಯಾರಿಗು. ಇವನು ಸೋಲಲಿಲ್ಲ ಯಾವ ಮಾತಿಗು ಇವನ ದೇಹ ಪ್ರವಾದಿಸಿತು ಸತ್ತ ಮೇಲೂ. ಜೀವಮಾನಕಾಲದಲ್ಲಿ ಎಸಗಿದನು ಮಹತ್ಕಾರ್ಯಗಳನ್ನು ಸತ್ತಮೇಲೂ ಅವನ ಕಾರ್ಯಗಳು ಅಗಾಧವಾಗಿದ್ದವು.

ಕೀರ್ತನೆ: 97:1-2, 3-4, 5-6, 7

ಶ್ಲೋಕ: ಸಜ್ಜನರೇ, ಪ್ರಭುವಿನಲಿ ಆನಂದಿಸಿರಿ

ಶುಭಸಂದೇಶ: ಮತ್ತಾಯ 6:7-15


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸುಗುಟ್ಟಬೇಡ. ತಮ್ಮ ಪ್ರಾರ್ಥನೆ ದೀರ್ಘವಾದಷ್ಟೂ ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ. ನೀವು ಅವರಂತೆ ಆಗಬೇಡಿ. ನಿಮ್ಮ ಅಗತ್ಯಗಳೇನೆಂದು ನೀವು ಕೇಳುವುದಕ್ಕೆ ಮೊದಲೇ ನಿಮ್ಮ ತಂದೆಗೆ ಗೊತ್ತಿದೆ. 9ಆದುದರಿಂದ ಹೀಗೆಂದು ಪ್ರಾರ್ಥನೆಮಾಡಿ: ‘ಸ್ವರ್ಗ ದಲ್ಲಿರುವ ಓ ನಮ್ಮ ತಂದೆಯೇ, ನಿಮ್ಮ ಪವಿತ್ರ ನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ; ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಜಗತ್ತಿನಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಆಹಾರವನ್ನು ನಮಗಿಂದು ಕೊಡಿ. ನಮಗೆ ತಪ್ಪುಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿರಿ.’ “ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು. ಜನರನ್ನು ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸರು.”

15.06.22 - ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು

ಮೊದಲನೇ ವಾಚನ: 2 ಅರಸುಗಳು 2:1, 6-14


ಸರ್ವೇಶ್ವರಸ್ವಾಮಿ ಎಲೀಯನನ್ನು ಸುಂಟರಗಾಳಿಯಲ್ಲಿ ಪರಲೋಕಕ್ಕೆ ಸೇರಿಸುವ ಸಮಯ ಬಂದಿತು. ಆಗ ಎಲೀಯನು ಎಲೀಷನೊಡನೆ ಗಿಲ್ಗಾಲನ್ನು ಬಿಟ್ಟು ಹೊರಟನು. ಎಲೀಯನು ಮತ್ತೆ ಎಲೀಷನಿಗೆ, “ದಯವಿಟ್ಟು ನೀನು ಇಲ್ಲೇ ಇರು; ಸರ್ವೇಶ್ವರ ನನಗೆ ಜೋರ್ಡನಿಗೆ ಹೋಗಬೇಕೆಂದು ಆಜ್ಞಾಪಿಸಿದ್ದಾರೆ,” ಎಂದನು. ಆಗ ಅವನು, “ಸರ್ವೇಶ್ವರನ ಆಣೆ, ನಿಮ್ಮ ಜೀವದಾಣೆ, ನಾನು ನಿಮ್ಮನ್ನು ಬಿಟ್ಟಿರಲಾಗದು,” ಎಂದು ಉತ್ತರಕೊಟ್ಟನು. ಆದುದರಿಂದ ಇಬ್ಬರೂ ಹೊರಟು ಜೋರ್ಡನ್ ನದಿಯ ದಡಕ್ಕೆ ಬಂದರು. ಪ್ರವಾದಿಮಂಡಲಿಯವರಲ್ಲಿ ಐವತ್ತುಮಂದಿ ಇವರ ಹಿಂದಿನಿಂದಲೇ ಬಂದು ಸ್ವಲ್ಪ ದೂರದಲ್ಲಿ ನಿಂತುಕೊಂಡರು. ಅನಂತರ ಎಲೀಯನು ತನ್ನ ಕಂಬಳಿಯನ್ನು ಮಡಿಚಿ, ಅದರಿಂದ ನೀರನ್ನು ಹೊಡೆದನು. ನೀರು ಇಬ್ಭಾಗವಾಯಿತು; ಅವರಿಬ್ಬರೂ ಒಣ ನೆಲದ ಮೇಲೆ ದಾಟಿಹೋದರು. ಅವರು ಆಚೆ ದಡಕ್ಕೆ ಸೇರಿದ ಮೇಲೆ ಎಲೀಯನು ಎಲೀಷನನ್ನು, “ನಿನ್ನನ್ನು ಬಿಟ್ಟುಹೋಗುವ ಮೊದಲು ನಾನು ನಿನಗೋಸ್ಕರ ಏನು ಮಾಡಬೇಕನ್ನುತ್ತಿ ಹೇಳು?” ಎಂದು ಕೇಳಿದನು. ಅದಕ್ಕೆ ಎಲೀಷನು, “ನಿಮಗಿರುವ ಆತ್ಮಶಕ್ತಿಯಲ್ಲಿ ನನಗೆ ಎರಡು ಪಾಲನ್ನು ಅನುಗ್ರಹಿಸಿ,” ಎಂದು ಬೇಡಿಕೊಂಡನು. ಆಗ ಎಲೀಯನು, “ನೀನು ದುರ್ಲಭವಾದದ್ದನ್ನು ಕೇಳಿಕೊಂಡೆ; ಆದರೂ ನನ್ನನ್ನು ನಿನ್ನ ಬಳಿಯಿಂದ ತೆಗೆಯಲಾಗುವಾಗ ನೀನು ನನ್ನನ್ನು ನೋಡುವುದಾದರೆ ಅದು ದೊರಕುವುದು; ಇಲ್ಲವಾದರೆ ದೊರಕುವುದಿಲ್ಲ,” ಎಂದನು. ಅವರು ಮಾತನಾಡುತ್ತಾ ಮುಂದೆ ಹೋಗುತ್ತಿರುವಾಗ ಫಕ್ಕನೆ ಅಗ್ನಿಮಯವಾದ ರಥರಥಾಶ್ವಗಳು ನಡುವೆ ಬಂದು ಅವರನ್ನು ವಿಂಗಡಿಸಿದವು. ಎಲೀಯನು ಸುಂಟರಗಾಳಿಯಲ್ಲಿ ಪರಲೋಕಕ್ಕೆ ಹೋದನು. ಎಲೀಷನು ಅದನ್ನು ನೋಡುತ್ತಾ, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಯೇಲರಿಗೆ ರಥರಥಾಶ್ವಗಳಾಗಿದ್ದವರೇ,” ಎಂದು ಕೂಗಿಕೊಂಡನು. ಎಲೀಯನು ತನಗೆ ಕಾಣಿಸದೆ ಹೋದಮೇಲೆ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದು ಎರಡು ತುಂಡುಮಾಡಿದನು. ಅನಂತರ ಅವನು ಮೇಲಿನಿಂದ ಬಿದ್ದ ಎಲೀಯನ ಕಂಬಳಿಯನ್ನು ತೆಗೆದುಕೊಂಡು ಜೋರ್ಡನ್ ನದೀತೀರಕ್ಕೆ ಬಂದನು. “ಎಲೀಯನ ದೇವರಾದ ಸರ್ವೇಶ್ವರನೆಲ್ಲಿ?” ಎಂದುಕೊಂಡು ಆ ಕಂಬಳಿಯಿಂದ ನೀರನ್ನು ಹೊಡೆದನು. ಅದು ಇಬ್ಭಾಗ ಆಯಿತು. ಅವನು ದಾಟಿಹೋದನು. 

ಕೀರ್ತನೆ: 31:20, 21, 24
ಶ್ಲೋಕ: ಪ್ರಭುವಿಗಾಗಿ ಕಾದಿಹೆ ಜನರೇ, ನಿಮಗಿರಲಿ ಅಭಯ

ಶುಭಸಂದೇಶ: ಮತ್ತಾಯ 6:1-6, 16-18


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: " ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಸ್ವರ್ಗದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರಕದು. ಅಂತೆಯೇ, ನೀನು ದಾನಧರ್ಮ ಮಾಡುವಾಗ ತುತೂರಿಯನ್ನು ಊದಿಸಬೇಡ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿ ಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿದ್ದಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ದಾನ ಧರ್ಮಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು. “ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾ ಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ಅವರಿಗೆ ಬರಬೇಕಾದ ಪೂರ್ತಿ ಫಲ ಆಗಲೇ ಬಂದಾಯಿತೆಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ. ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು.” “ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪೆಮಾಡಬೇಡಿ. ಜನರ ಕಣ್ಣಿಗೆ ತಾವು ಉಪವಾಸಿಗಳೆಂದು ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ಮುಖವನ್ನು ಬಾಡಿಸಿಕೊಳ್ಳುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿಯಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ಉಪವಾಸ ಕೈಗೊಂಡಾಗ ಮುಖ ತೊಳೆದುಕೊ, ತಲೆಬಾಚಿಕೊ. ಆಗ ಉಪವಾಸ ಮಾಡುವವನಂತೆ ನೀನು ಜನರಿಗೆ ಕಾಣಿಸಿಕೊಳ್ಳುವುದಿಲ್ಲ; ಅಂತರಂಗದಲ್ಲಿ ಇರುವ ನಿನ್ನ ತಂದೆಗೆ ಮಾತ್ರ ಕಾಣಿಸಿಕೊಳ್ಳುವೆ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು.”

14.06.22 - ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ?

ಮೊದಲನೇ ವಾಚನ: 1 ಅರಸುಗಳು 21:17-29


ಆಗ ತಿಷ್ಬೀಯನಾದ ಎಲೀಯನಿಗೆ ಸರ್ವೇಶ್ವರನ ವಾಣಿವುಂಟಾಯಿತು. “ನೀನು ಹೋಗಿ ಸಮಾರಿಯಲ್ಲಿ ವಾಸಿಸುವ ಇಸ್ರಯೇಲ್ ಅರಸನನ್ನು ಕಾಣು; ಅವನು ಈಗ ನಾಬೋತನ ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳುವುದಕ್ಕಾಗಿ ಅಲ್ಲಿಗೆ ಹೋಗಿದ್ದಾನೆ; ಅವನಿಗೆ, “ನೀನು ಕೊಲೆಮಾಡಿ, ಸೊತ್ತನ್ನು ಸಂಪಾದಿಸಿಕೊಂಡೆಯಲ್ಲವೇ? ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುವುವು, ಎನ್ನುತ್ತಾರೆ ಸರ್ವೇಶ್ವರ’ ಎಂದು ಹೇಳು.” ಅಹಾಬನು ಎಲೀಯನನ್ನು ನೋಡಿ, “ಎಲೈ ವೈರಿಯೇ, ನೀನು ನನ್ನನ್ನು ಕಂಡುಹಿಡಿದೆಯಾ?” ಎಂದು ಕೇಳಿದನು. ಅವನು, “ಹೌದು, ಕಂಡುಹಿಡಿದೆ, ನೀನು ನಿನ್ನನ್ನು ಪಾಪಕ್ಕೆ ಮಾರಿಬಿಟ್ಟು, ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದೆ. ಸರ್ವೇಶ್ವರ ನಿನ್ನನ್ನು ಕುರಿತು, ‘ನಾನು ನಿನ್ನ ಮೈಮೇಲೆ ಕೇಡನ್ನು ಬರಮಾಡಿ, ನಿನ್ನನ್ನು ಕಸದಂತೆ ತೆಗೆದುಹಾಕುವೆನು; ನಿನ್ನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಲಿ, ಪರತಂತ್ರರಾಗಲಿ ಎಲ್ಲರನ್ನೂ ಇಸ್ರಯೇಲರ ಮಧ್ಯೆಯಿಂದ ಕಡಿದುಬಿಡುವೆನು. ನೀನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿ, ನನಗೆ ಕೋಪವನ್ನೆಬ್ಬಿಸಿದ್ದರಿಂದ ನೆಬಾಟನ ಮಗ ಯಾರೊಬ್ಬಾಮನ ಮನೆಗೂ ಅಹೀಯನ ಮಗ ಬಾಷನ ಮನೆಗೂ ಆದ ಗತಿ ನಿನ್ನ ಮನೆಗೂ ಆಗುವುದು,’ ಎನ್ನುತ್ತಾರೆ. ಇದಲ್ಲದೆ ಈಜೆಬೆಲಳನ್ನು ಕುರಿತು ಅವರು, ‘ನಾಯಿಗಳು ಜೆಸ್ರೀಲ್ ಪಟ್ಟಣದ ಗೋಡೆಯ ಬಳಿಯಲ್ಲಿ ಆಕೆಯ ಶವವನ್ನು ತಿನ್ನುವುವು; ಅಹಾಬನ ಮನೆಯವರಲ್ಲಿ ಊರೊಳಗೆ ಸಾಯುವಂಥವರನ್ನು ನಾಯಿಗಳೂ ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದುಬಿಡುವುವು’ ಎಂದು ಹೇಳುತ್ತಾರೆ,” ಎಂದನು. ಹೆಂಡತಿ ಈಜೆಬೆಲಳಿಂದ ಪ್ರಚೋದಿತನಾಗಿ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡುವುದಕ್ಕೆ ತನ್ನನ್ನೇ ಮಾರಿಬಿಟ್ಟ ಅಹಾಬನಂಥ ದುಷ್ಟನು ಇನ್ನೊಬ್ಬನಿರಲಿಲ್ಲ. ಸರ್ವೇಶ್ವರ ಇಸ್ರಯೇಲರ ನಾಡಿನಿಂದ ಓಡಿಸಿಬಿಟ್ಟ ಅಮೋರಿಯರಂತೆ ವಿಗ್ರಹಗಳನ್ನು ಪೂಜಿಸಿದ ಅಹಾಬನ ನಡತೆ ಬಹಳ ಅಸಹ್ಯವಾಗಿತ್ತು. ಅಹಾಬನು ಎಲೀಯನ ಮಾತುಗಳನ್ನು ಕೇಳಿ ತನ್ನ ಬಟ್ಟೆಯನ್ನು ದುಃಖದಿಂದ ಹರಿದುಕೊಂಡನು; ಹಗಲಿರುಳು ಮೈಮೇಲೆ ಗೋಣಿತಟ್ಟನ್ನು ಹಾಕಿಕೊಂಡು ಉಪವಾಸ ಮಾಡುತ್ತಾ ದೀನಮನಸ್ಸಿನಿಂದ ವರ್ತಿಸಿದನು. ಆದುದರಿಂದ ಸರ್ವೇಶ್ವರ ತಿಷ್ಬೀಯನಾದ ಎಲೀಯನಿಗೆ, “ಅಹಾಬನು ನನ್ನ ಮುಂದೆ ತನ್ನನ್ನೇ ತಗ್ಗಿಸಿಕೊಂಡದ್ದನ್ನು ನೋಡಿದಿಯಲ್ಲವೇ? ಅವನು ಹೀಗೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ನಾನು ಮುಂತಿಳಿಸಿದ ಕೇಡನ್ನು ಅವನ ಜೀವಮಾನದಲ್ಲಿ ಬರಗೊಡಿಸುವುದಿಲ್ಲ. ಅವನ ಮಗನ ಕಾಲದಲ್ಲಿ ಅವನ ಮನೆಯವರ ಮೇಲೆ ಬರಮಾಡುವೆನು,” ಎಂದು ಹೇಳಿದರು.

ಕೀರ್ತನೆ: 51:3-4, 5-6, 11, 16

ಶ್ಲೋಕ: ಕೃಪಾಳು ದೇವಾ, ಕರುಣಿಸೆನ್ನನು, ನಿನಗೆ ದ್ರೋಹವೆಸಗಿದೆ

ಶುಭಸಂದೇಶ: ಮತ್ತಾಯ 5:43-48


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೇಳಿದ್ದೇನೆಂದರೆ: “ ‘ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು’ ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ. ನಾನು ಹೇಳುವುದನ್ನು ಗಮನಿಸಿರಿ; ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ. ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ. ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕ ವಸೂಲಿ ಮಾಡುವವರೂ ಹಾಗೆ ಮಾಡುವುದಿಲ್ಲವೇ? ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯಜನರೂ ಹಾಗೆ ಮಾಡುತ್ತಾರಲ್ಲವೇ? ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ.”

13.06.22 - "ಒಬ್ಬನು ಹೊಡೆದರೆ ಇನ್ನೊಂದು ಕೆನ್ನೆಯನ್ನೂ ಒಡ್ಡು"

ಮೊದಲನೇ ವಾಚನ: 1 ಅರಸುಗಳು 21:1-16


ಜೆಸ್ರೀಲಿನಲ್ಲಿ, ಸಮಾರಿಯದ ಅರಸ ಅಹಾಬನ ಅರಮನೆಯ ಹತ್ತಿರ ಜೆಸ್ರೀಲಿನವನಾದ ನಾಬೋತನೆಂಬ ವ್ಯಕ್ತಿಗೆ ಒಂದು ದ್ರಾಕ್ಷೀತೋಟವಿತ್ತು. ಅಹಾಬನು ಆ ನಾಬೋತನಿಗೆ, “ನಿನ್ನ ದ್ರಾಕ್ಷೀತೋಟವನ್ನು ನನಗೆ ಕೊಡು; ಅದು ನನ್ನ ಅರಮನೆಯ ಹತ್ತಿರವಿರುವುದರಿಂದ ಅದನ್ನು ಕಾಯಿಪಲ್ಯದ ತೋಟವನ್ನಾಗಿ ಮಾಡಿಕೊಳ್ಳುತ್ತೇನೆ; ಅದಕ್ಕೆ ಬದಲಾಗಿ ನಿನಗೆ ಅದಕ್ಕಿಂತ ಉತ್ತಮವಾದ ತೋಟವನ್ನು ಕೊಡುತ್ತೇನೆ; ಅದು ಬೇಡವಾದರೆ ಕ್ರಯವನ್ನು ಕೊಡುತ್ತೇನೆ,” ಎಂದು ಹೇಳಿದನು. ಅದಕ್ಕೆ ನಾಬೋತನು, “ಪಿತ್ರಾರ್ಜಿತ ಸೊತ್ತನ್ನು ನಿಮಗೆ ಮಾರದಂತೆ ಸರ್ವೇಶ್ವರ ನನ್ನನ್ನು ತಡೆಯಲಿ!” ಎಂದು ಉತ್ತರಕೊಟ್ಟನು. ಪಿತ್ರಾರ್ಜಿತ ಸೊತ್ತನ್ನು ನಿನಗೆ ಕೊಡುವುದಿಲ್ಲವೆಂದು ನಾಬೋತನು ಹೇಳಿದ್ದರಿಂದ ಅಹಾಬನು ಸಿಟ್ಟುಗೊಂಡನು; ಗಂಟುಮೋರೆ ಮಾಡಿಕೊಂಡು ಮನೆಗೆ ಹೋಗಿ, ಊಟಮಾಡಲೊಲ್ಲದೆ ಮಂಚದ ಮೇಲೆ ಮಲಗಿ, ಗೋಡೆಯ ಕಡೆಗೆ ಮುಖ ತಿರುಗಿಸಿಕೊಂಡನು. ಆಗ ಅವನ ಹೆಂಡತಿ ಈಜೆಬೆಲಳು ಅವನ ಬಳಿಗೆ ಬಂದು, “ನೀವೇಕೆ ಊಟಮಾಡುವುದಿಲ್ಲ? ನಿಮಗೆ ಯಾವ ಚಿಂತೆ?” ಎಂದು ಕೇಳಿದಳು. ಅವನು, “ನಾನು ಜೆಸ್ರೀಲಿನವನಾದ ನಾಬೋತನಿಗೆ, ‘ನಿನ್ನ ದ್ರಾಕ್ಷೀತೋಟವನ್ನು ನನಗೆ ಮಾರಿಬಿಡು; ಹಣ ಬೇಡವಾದರೆ ನಿನಗೆ ಬೇರೊಂದು ದ್ರಾಕ್ಷೀತೋಟವನ್ನು ಕೊಡುತ್ತೇನೆ ಎಂದು ಹೇಳಿದೆ; ಆದರೆ ಅವನು ಕೊಡುವುದಿಲ್ಲ ಎಂದುಬಿಟ್ಟ,” ಎಂದು ಉತ್ತರಕೊಟ್ಟನು. ಆಗ ಅವನ ಹೆಂಡತಿ ಈಜೆಬೆಲಳು, “ಇಸ್ರಯೇಲರ ಅರಸರಾದ ನೀವು ಹೀಗೆ ವರ್ತಿಸುವುದೇ! ಎದ್ದು ಊಟಮಾಡಿ, ಸಂತೋಷದಿಂದಿರಿ; ನಾನು ನಿಮಗೆ ಜೆಸ್ರೀಲಿನವನಾದ ನಾಬೋತನ ದ್ರಾಕ್ಷೀತೋಟವನ್ನು ಕೊಡುತ್ತೇನೆ,” ಎಂದು ನುಡಿದಳು. ಅಂತೆಯೇ ಅಹಾಬನ ಹೆಸರಿನಲ್ಲಿ ಒಂದು ಪತ್ರವನ್ನು ಬರೆದು, ಅದಕ್ಕೆ ಅವನ ಮುದ್ರೆ ಹಾಕಿ, ಅದನ್ನು ನಾಬೋತನ ಊರಿನಲ್ಲಿದ್ದ ಎಲ್ಲಾ ಪ್ರಧಾನಪುರುಷರಿಗೂ ಹಿರಿಯರಿಗೂ ಕಳುಹಿಸಿದಳು. ಅದರಲ್ಲಿ, “ಎಲ್ಲರೂ ಉಪವಾಸ ಮಾಡಬೇಕೆಂದು ಪ್ರಕಟಿಸಿರಿ: ನಾಬೋತನನ್ನು ನೆರೆದ ಸಭೆಯ ಮುಂದೆ ನಿಲ್ಲಿಸಿರಿ; ಅವನು ದೇವರನ್ನೂ ಅರಸನನ್ನೂ ಶಪಿಸಿದವನು ಎಂಬುದಾಗಿ ಇಬ್ಬರು ದುಷ್ಟಮನುಷ್ಯರಿಂದ ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಿಸಿರಿ; ಅವನನ್ನು ಹೊರಗೆ ಒಯ್ದು, ಕಲ್ಲೆಸೆದು ಕೊಲ್ಲಿರಿ,” ಎಂದು ಬರೆದಿದ್ದಳು. ಅವನ ಊರಿನ ಹಿರಿಯರೂ ಪ್ರಧಾನಪುರುಷರೂ ಈಜೆಬೆಲಳು ಕಳುಹಿಸಿದ ಪತ್ರದಲ್ಲಿ ಬರೆದಿದ್ದಂತೆಯೇ ಮಾಡಿದರು. ಉಪವಾಸವನ್ನು ಪ್ರಕಟಿಸಿದರು, ನೆರೆದ ಸಭೆಯ ಮುಂದೆ ನಾಬೋತನನ್ನು ನಿಲ್ಲಿಸಿದರು; ತರುವಾಯ ಇಬ್ಬರು ದುಷ್ಟರು ಬಂದು ಅವನ ಮುಂದೆ ಕುಳಿತರು. ಇವನು ದೇವರನ್ನೂ ಅರಸನನ್ನೂ ಶಪಿಸಿದ್ದಾನೆಂಬುದಾಗಿ ಜನರ ಎದುರಿನಲ್ಲೆ ಅವನಿಗೆ ವಿರುದ್ಧ ಸಾಕ್ಷಿಹೇಳಿದರು. ಜನರು ಅವನನ್ನು ಊರಿನ ಹೊರಗೆ ಒಯ್ದು ಕಲ್ಲೆಸೆದು ಕೊಂದರು. ನಾಬೋತನು ಕಲ್ಲೆಸೆತದಿಂದ ಸತ್ತ ಸಮಾಚಾರವನ್ನು ಆ ಹಿರಿಯರು ಈಜೆಬೆಲಳಿಗೆ ಮುಟ್ಟಿಸಿದರು. ಆಕೆ ಇದನ್ನು ಕೇಳಿ ಅಹಾಬನಿಗೆ, “ನೀವು ಹೋಗಿ ನಾಬೋತನು ಮಾರುವುದಿಲ್ಲವೆಂದು ಹೇಳಿದ ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳಿ. ಅವನು ಜೀವದಿಂದಿಲ್ಲ, ಸತ್ತನು,” ಎಂದು ಹೇಳಿದಳು. ಜೆಸ್ರೀಲಿನವನಾದ ನಾಬೋತನ ಮರಣವಾರ್ತೆಯನ್ನು ಅಹಾಬನು ಕೇಳಿ, ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋದನು.

ಕೀರ್ತನೆ: 5:2-3, 4-6, 6-7

ಶ್ಲೋಕ: ಕಿವಿಗೊಡು ಪ್ರಭೂ, ಎನ್ನ ನುಡಿಗೆ 

ಶುಭಸಂದೇಶ: ಮತ್ತಾಯ 5:38-42

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ ‘ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಬದಲಾಗಿ ಹಲ್ಲು’ ಎಂಬುದನ್ನು ನೀವು ಕೇಳಿದ್ದೀರಿ. ಆದರೆ ನನ್ನ ಬೋಧೆ ಇದು; ನಿನಗೆ ಅಪಕಾರ ಮಾಡಿದವನಿಗೆ ಪ್ರತೀಕಾರ ಮಾಡಬೇಡ. ನಿನ್ನ ಬಲಗೆನ್ನೆಗೆ ಒಬ್ಬನು ಹೊಡೆದರೆ ಇನ್ನೊಂದು ಕೆನ್ನೆಯನ್ನೂ ಒಡ್ಡು. ನಿನ್ನೊಡನೆ ವ್ಯಾಜ್ಯಮಾಡಿ ನಿನ್ನ ಒಳ ಅಂಗಿಯನ್ನು ಕಿತ್ತುಕೊಳ್ಳುವವನಿಗೆ ಹೊರ ಅಂಗಿಯನ್ನೂ ಕೊಟ್ಟುಬಿಡು. ಯಾರಾದರೂ ಒಂದು ಕಿಲೊಮೀಟರ್ ದೂರ ಬಾ ಎಂದು ನಿನ್ನನ್ನು ಒತ್ತಾಯಪಡಿಸಿದರೆ ಅವನೊಡನೆ ಎರಡು ಕಿಲೊಮೀಟರ್ ಹೋಗು; ಬೇಡಿಕೊಳ್ಳುವವನಿಗೆ ಕೊಡು. ಸಾಲ ಕೇಳಬಂದವನಿಂದ ಮುಖ ತಿರುಗಿಸಿಕೊಳ್ಳಬೇಡ.”

12.06.22 - "ಈ ನಂಬಿಕೆ ನಿರಿಕ್ಷೆಯು ನಮಗಿರುವುದರಿಂದ ನಮಗೆ ಆಶಾಭಂಗವಾಗುವುದಿಲ್ಲ"

ಮೊದಲನೇ ವಾಚನಜ್ಞಾನೋಕ್ತಿಗಳು 8:22--31

ಜ್ಞಾನವೆಂಬಾಕೆ ಇಂತೆನ್ನುತ್ತಾಳೆತನ್ನ ಸೃಷ್ಟಿಕ್ರಮದಲ್ಲಿ ಸರ್ವೇಶ್ವರ ನಿರ್ಮಿಸಿದ ನನ್ನನ್ನು ಮೊತ್ತಮೊದಲು ಆತನ ಪುರಾತನ  ಕಾರ್ಯಕ್ರಮಗಳಲ್ಲಿ ನಾನೇ ಪ್ರಥಮಳುನಾನು ಸ್ಥಾಪಿಸಲ್ಪಟ್ಟೆ ಪ್ರಾರಂಭದಲ್ಲೇ ಜಗದುತ್ಪತ್ತಿಗೆ ಮುಂಚೆಯೇಅನಾದಿಕಾಲದಲ್ಲೇಜಲನಿಧಿಗಳಾಗಲಿನೀರಿನ ಬುಗ್ಗೆಗಳಾಗಲಿ ಇಲ್ಲದಿರುವಾಗಲೇ ನಾ ಬಂದೆ ಜನ್ಮತಾಳಿನಾನು ಹುಟ್ಟಿದೆ ಬೆಟ್ಟಗುಡ್ಡಗಳು ಬೇರೂರಿ ನಿಲ್ಲುವುದಕ್ಕೆ ಮೊದಲೇ ನಾನು ಜನಿಸಿದೆ ಭೂಮಿಯನ್ನಾಗಲಿಬೈಲನ್ನಾಗಲಿ ನೆಲದ ಅಣುರೇಣನ್ನಾಗಲಿ ಆತ ನಿರ್ಮಿಸದೆ ಇರುವಾಗಲೇನಾನು ಅಲ್ಲಿದ್ದೆ ಆತ ಆಕಾಶಮಂಡಲವನ್ನು ಸ್ಥಪಿಸುವಾಗ ಸಾಗರದ ಮೇಲೆ ಚಕ್ರಾಕಾರದ ಗೆರೆಯನ್ನು ಎಳೆಯುವಾಗಗಗನವನ್ನು ಮೇಲೆ ಸ್ಥಿರಪಡಿಸುವಾಗ ಸಾಗರದ ಸೆಲೆಗಳನ್ನು ನೆಲೆಗೊಳಿಸಿದಾಗಜಲಪ್ರವಾಹಗಳು ತನ್ನ ಅಪ್ಪಣೆಯನ್ನು ಮೀರದ ಹಾಗೆ ಸಮೂದ್ರಕ್ಕೆ ಎಲ್ಲೆಕಟ್ಟನ್ನು ನೇಮಿಸುವಾಗ ಭೂಮಿಯ ಅಸ್ತಿಭಾರವನ್ನು ಗೊತ್ತುಮಾಡುವಾಗನಾನು ಆತನ ಬಳಿ ಕುಶಲ ಶಿಲ್ಪಿಯಂತಿದ್ದೆ ಅನುದಿನವೂ ಆತನಿಗೆ ಆನಂದವನ್ನೀಯುತ್ತಿದ್ದೆ ಸದಾ ಆತನ ಮುಂದೆ ಸಂತೋಷಪಡುತ್ತಿದ್ದೆಉಲ್ಲಾಸಿಸುತ್ತಿದ್ದೆ ಆತನ ಭುಲೋಕದಲ್ಲಿ ಹರ್ಷಿಸುತ್ತಾ ಇದ್ದೆ ಮಾನವ ಸಂತಾನದಲ್ಲಿ.

ಕೀರ್ತನೆ: 8:4--5, 6--7, 8--9

ಶ್ಲೋಕಪ್ರಭೂ ಎಮ್ಮ ಪ್ರಭೂನಿನ್ನ ನಾಮಾಮೃತಬೆಳಗಿದೆ ತನ್ನ ಮಹಿಮೆಯನು ಭುವನ ಪರ್ಯಂತ

ಎರಡನೇ ವಾಚನರೋಮನರಿಗೆ 5:1--5
ಸಹೋದರರೇವಿಶ್ವಾಸದ ಮೂಲಕ ದೇವರೊಡನೆ ಸತ್ಸಂಬಂಧದಲ್ಲಿರುವ ನಾವು ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ದೇವರೊಡನೆ ಶಾಂತಿಸಮಾಧಾನದಿಂದಿರುತ್ತೆವೆವಿಶ್ವಾಸದ ಮೂಲಕ ನಾವು ದೈವಾನುಗ್ರಹವನ್ನು ಸವಿಯುವಂತೆ ಯೇಸುಕ್ರಿಸ್ತರು ದಾರಿ ತೋರಿಸಿದರುನಾವೀಗ ನೆಲೆಗೊಂಡಿರುವುದು  ಅನುಗ್ರಹದಲ್ಲಿಯೇಆದ್ದರಿಂದಲೇದೇವರ ಮಹಿಮೆಯಲ್ಲಿ ನಾವೂ ಪಾಲುಗೊಳ್ಳುತ್ತೇವೆಂಬ ಭರವಸೆಯಿಂದ ಹೆಮ್ಮೆಪಡುತ್ತೇವೆಅಷ್ಟೇ ಅಲ್ಲನಮಗೆ ಬಂದೊದುಗುವ ಕಷ್ಟಸಂಕಟಗಳಲ್ಲೂ  ಹೆಮ್ಮೆಪಡುತ್ತೇವೆಏಕೆಂದರೆಕಷ್ಟಸಂಕಟಗಳು ಸಹನೆಯನ್ನುಸಹನೆಯು ಸದ್ಗುಣವನ್ನುಸದ್ಗುಣವು ನಂಬಿಕೆ ನಿರಿಕ್ಷೆಯನ್ನು ಬೆಳೆಸುತ್ತವೆಂದು ನಾವು ಬಲ್ಲೆವು ನಂಬಿಕೆ ನಿರಿಕ್ಷೆಯು ನಮಗಿರುವುದರಿಂದ ನಮಗೆ ಆಶಾಭಂಗವಾಗುವುದಿಲ್ಲಏಕೆಂದರೆನಮಗೆ ದಾನವಾಗಿ ದಯಪಾಲಿಸಿರುವ ಪವಿತ್ರಾತ್ಮ ಅವರ ಮುಖಾಂತರ ದೇವರು ತಮ್ಮ ಪ್ರೀತಿಯನ್ನು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿಸಿದ್ದಾರೆ.

ಶುಭಸಂದೇಶಯೊವಾನ್ನ 16:12--15


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರುನಾನು ನಿಮಗೆ ಹೇಳಬೇಕಾದುದು ಇನ್ನೂ ಎಷ್ಟೋ ಇದೆಸಧ್ಯಕ್ಕೆ ಅವು ನಿಮಗೆ ಹೊರಲಾಗದ ಹೊರೆಯಾಗಬಾರದುಹೇಗೂ ಸತ್ಯಸ್ವರೂಪಿಯಾದ ಪವಿತ್ರಾತ್ಮ ಬಂದಮೇಲೆ ನಿಮ್ಮನ್ನು ಸಮಗ್ರ ಸತ್ಯದೆಡೆಗೆ ಕರೆದೊಯ್ಯುವರುಅವರು ತಮ್ಮಷ್ಟಕ್ಕೆ ತಾವೇ ಏನನ್ನೂ ಬೋಧಿಸದೆ ತಾವು ಕೇಳಿದುದನ್ನು ಕುರಿತೇ ಮಾತನಾಡುವರುಮುಂದೆ ನಡೆಯಲ್ಲಿರುವುದನ್ನೂ ನಿಮಗೆ ತಿಳಿಸುವರುಅವರುನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸಿ ನನ್ನ ಮಹಿಮೆಯನ್ನು ಬೆಳಗಿಸುವರುಪಿತನಿಗೆ ಇರುವುದೆಲ್ಲವೂ ನನ್ನದೇಆದುದರಿಂದಲೇ ಪವಿತ್ರಾತ್ಮ ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸುವರೆಂದು ನಾನು ಹೇಳಿದ್ದು."

ಮನಸಿಗೊಂದಿಷ್ಟು : ನಮ್ಮ ಬುದ್ಧಿಯನ್ನು ವಿಕಾಸಗೊಳಿಸುವ ಪವಿತ್ರಾತ್ಮರ ಮಹತ್ವವನು ಯೇಸು ಇಂದು ನಮಗೆ ತಿಳಿಸುತ್ತಾರೆ. ಪವಿತ್ರಾತ್ಮರಿಗೆ ನಮ್ಮ ಬದುಕಿನಲ್ಲಿ ನಾವು ದೊಡ್ಡ ಪಾತ್ರ ಸ್ಥಳ ಕೊಟ್ಟಾಗ ನಮ್ಮ ಬದುಕು ಪಡೆದುಕೊಳ್ಳುವ ಪಾವಿತ್ರತೆ, ಸಾರ್ಥಕತೆ ಅಗಾಧ. ಪವಿತ್ರಾತ್ಮರ ವರಕ್ಕಾಗಿ ನಮ್ಮ ಹೃದಯ ಸದಾ ಹಾತೊರೆಯಲಿ.

ಪ್ರಶ್ನೆ : ಪವಿತ್ರಾತ್ಮರಿಗಾಗಿ ನಾವೆಷ್ಟು ಹಾತೊರೆದಿದ್ದೇವೆ.