ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

11.12.21 - "ನೀವು ಕಂಡ ಈ ದರ್ಶನವನ್ನು ಯಾರಿಗೂ ಹೇಳಬೇಡಿ,"

ಮೊದಲನೇ ವಾಚನ: ಸಿರಾಖ 48:1-4, 9-11

ಆಮೇಲೆ ಪ್ರವಾದಿ ಎಲೀಯನೆದ್ದನು ಬೆಂಕಿಯಂತೆ ಉರಿಯಿತವನ ನುಡಿ ಪಂಜಿನಂತೆ, ಕ್ಷಾಮವನ್ನು ಬರಮಾಡಿದನಿವನು ಜನರ ಮೇಲೆ ಅವರನ್ನು ಕುಂದಿಸಿದನು ತನ್ನ ರೋಷದಿಂದಲೆ, ಆಕಾಶವನ್ನೇ ಮುಚ್ಚಿಬಿಟ್ಟನು ಸರ್ವೇಶ್ವರನ ಹೆಸರಿನಲ್ಲಿ ಬೆಂಕಿಯಿಳಿಯುವಂತೆ ಮಾಡಿದನು ಮೂರುಸಾರಿ. ಎಲೈ ಎಲೀಯನೇ, ಮಹತ್ಕಾರ್ಯಗಳಲ್ಲಿ ನೀನು  ಎಷ್ಟು ಘನವಂತನಾಗಿದ್ದೆ! ನಿನ್ನಂತೆ ಹೆಚ್ಚಳಪಡುವವರು ಯಾರಿದ್ದಾರೆ? ನೀ ಒಯ್ಯಲ್ಪಟ್ಟೆ ಬೆಂಕಿಯ ಬಿರುಗಾಳಿಯಲ್ಲಿ ಅಗ್ನಿಮಯ ಕುದುರುಗಳೆಳೆದ ರಥದಲ್ಲಿ. ಕೋಪ ರೌದ್ರಕ್ಕೇರುವುದಕ್ಕೆ ಮುಂಚೆ ಅದನ್ನು ಶಾಂತಪಡಿಸುವುದಕ್ಕಾಗಿ ತಂದೆಯ ಹೃದಯವನ್ನು ಮಗನ ಕಡೆಗೆ ತಿರುಗಿಸುವುದಕ್ಕಾಗಿ ಇಸ್ರಯೇಲಿನ ಕುಲಗಳನ್ನು ಯಥಾಸ್ಥಿತಿಗೆ ತರುವುದಕ್ಕಾಗಿ ತಕ್ಕಕಾಲದಲ್ಲಿ ಗದರಿಸುವಾತ ನೀನೆಂದು ಬರೆದಿದೆ ನಿನ್ನ ವಿಷಯವಾಗಿ. ನಿನ್ನನ್ನು ನೋಡುವವರು ಧನ್ಯರು ಪ್ರೀತಿಯಿಂದ ನಿಧನರಾದವರು ಧನ್ಯರು! ಕಾರಣ, ನಾವು ಸಹ ನಿಜವಾಗಿ ಜೀವಿಸುವೆವು.

ಕೀರ್ತನೆ: 80:2, 3, 15-16, 18, 19
ಶ್ಲೋಕ: ಸರ್ವಶಕ್ತನಾದ ದೇವನೇ, ಉದ್ಧರಿಸೆಮ್ಮನು ಬೆಳಗಲಿ ನಿನ್ನ ಮುಖಕಾಂತಿ, ಪಡೆದೆವು ರಕ್ಷಣೆಯನು

ಶುಭಸಂದೇಶ: ಮತ್ತಾಯ 17:9, 10-13

ಅವರೆಲ್ಲರು ಬೆಟ್ಟದಿಂದ ಇಳಿದು ಬರುವಾಗ ಯೇಸು, "ನರಪುತ್ರನು ಸತ್ತು ಪುನರುತ್ಥಾನ ಹೊಂದುವ ತನಕ ನೀವು ಕಂಡ ಈ ದರ್ಶನವನ್ನು ಯಾರಿಗೂ ಹೇಳಬೇಡಿ," ಎಂದು ಆಜ್ಞಾಪಿಸಿದರು. ಶಿಷ್ಯರು, "ಎಲೀಯನೇ ಮೊದಲು ಬರಬೇಕಾಗಿದೆ ಎಂದು ಶಾಸ್ತ್ರಜ್ಞರು ಹೇಳುತ್ತಾರಲ್ಲಾ, ಅದು ಹೇಗೆ?", ಎಂದು ಯೇಸುವನ್ನು ಕೇಳಿದರು ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಎಲೀಯನು ಬಂದು  ಎಲ್ಲವನ್ನೂ ಸಜ್ಜುಗೊಳಿಸುವನು ಎಂಬುದು ನಿಜ, ಆದರೆ ನಾನು ನಿಮಗೆ ಹೇಳುತ್ತೇನೆ; ಎಲೀಯನು ಈಗಾಗಲೇ ಬಂದಾಗಿದೆ; ಜನರು ಆತನನ್ನು ಗುರುತಿಸದೇ ತಮಗೆ ಇಷ್ಟ ಬಂದ ಹಾಗೆ ಹಿಂಸಿಸಿದ್ದೂ ಆಗಿದೆ. ಅಂತೆಯೇ ನರಪುತ್ರನೂ ಅವರ ಕೈಯಿಂದ ಯಾತನೆಯನ್ನು ಅನುಭವಿಸುವನು," ಎಂದರು. ಅವರು ಹೇಳುತ್ತಿರುವುದು ಸ್ನಾನಿಕ ಯೊವಾನ್ನನನ್ನು ಕುರಿತೇ ಎಂದು ಪ್ರೇಷಿತರು ಆಗ ಅರ್ಥಮಾಡಿಕೊಂಡರು.

10.12.21 - "ದೈವಜ್ಞಾನವೇ ನಿಜವಾದ ಜ್ಞಾನ"

 ಮೊದಲನೇ ವಾಚನ ಯೆಶಾಯ 48:17-19

ನಿನ್ನ ಜೀವೋದ್ಧಾರಕನು ಇಸ್ರಯೇಲಿನ ಪರಮಪಾವನನು ಆದ ಸರ್ವೇಶ್ವರಸ್ವಾಮಿಯೆ ನುಡಿದಿಹನು: "ನಿನಗೆ ಕ್ಷೇಮಕರವಾದ ಮಾರ್ಗವನು ಬೋಧಿಸುವವನೂ ನೀ ಹೋಗಬೇಕಾದ ಹಾದಿಯಲಿ ನಡೆಯಿಸುವವನೂ ಆದಂಥ ಸರ್ವೇಶ್ವರಸ್ವಾಮಿ ದೇವರು ನಾನು. ಎಷ್ಟೋ ಚೆನ್ನಾಗಿರುತ್ತಿತ್ತು ನೀ ನನ್ನ ಆಜ್ಞೆಗಳನ್ನು ಪಾಲಿಸಿದ್ದರೆ ಇರುತಿತ್ತು ನಿನಗೆ ಸುಖಶಾಂತಿ ಮಹಾನದಿಯಂತೆ ನಿನ್ನ ಸತ್ಯಸಂಧತೆ ಸಮುದ್ರ ಅಲೆಗಳಂತೆ. ಆಗಣಿತವಾಗಿರುತಿತ್ತು ನಿನ್ನ ಸಂತತಿ ಕಡಲ ಮರಳಿನಂತೆ, ನಿನ್ನ ಕರುಳಿನ ಕುಡಿಗಳು ಉಸುಬಿನ ಅಣುರೇಣುಗಳಂತೆ, ಅವರ ಹೆಸರುಗಳು ಕೆಟ್ಟು ಅಳಿದುಹೋಗುತ್ತಿರಲಿಲ್ಲ ನನ್ನ ಮುಂದೆ."

ಕೀರ್ತನೆ: 1:1-2, 3, 4, 6

ಶ್ಲೋಕ: ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ, ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ

ಶುಭಸಂದೇಶ: ಮತ್ತಾಯ 11:16-19
"ಈ ಪೀಳಿಗೆಯನ್ನು ನಾನು  ಯಾರಿಗೆ ಹೋಲಿಸಲಿ? ನಾವು ಕೊಳಲನೂದಲು ನೀವು ಕುಣಿದಾಡಲಿಲ್ಲ; ನಾವು ಶೋಕಗೀತೆಗಳ ಹಾಡಲು ನೀವು ಕಣ್ಣೀರಿಡಲಿಲ್ಲ," ಎಂದು ಪೇಟೆಬೀದಿಗಳಲ್ಲಿ ಕುಳಿತು, ಒಬ್ಬರಿಗೊಬ್ಬರು ಕೂಗಾಡುವ ಮಕ್ಕಳನ್ನು ಇವರು ಹೋಲುತ್ತಾರೆ. ಏಕೆಂದರೆ, ಯೊವಾನ್ನನು ಬಂದನು; ಅವನು ಅನ್ನಪಾನೀಯಗಳನ್ನು ಸೇವಿಸಲಿಲ್ಲ. ಅದಕ್ಕೆ "ಇವನಿಗೆ ದೆವ್ವ ಹಿಡಿದಿದೆ" ಎಂದರು. ನರಪುತ್ರನು ಬಂದನು; ಅನ್ನಪಾನೀಯಗಳನ್ನು ಸೇವಿಸಿದನು. ಇವನೊಬ್ಬ ಹೊಟ್ಟೆಬಾಕ, ಕುಡುಕ, ಸುಂಕದವರ ಹಾಗೂ ಪಾಪಿಷ್ಠರ ಗೆಳೆಯ ಎನ್ನುತ್ತಾರೆ. ಆದರೆ ದೈವಜ್ಞಾನವೇ ನಿಜವಾದ ಜ್ಞಾನವೆಂದು ಅದರ ಕಾರ್ಯಗಳಿಂದಲೇ ಸಮರ್ಥಿಸಲಾಗುತ್ತದೆ," ಎಂದರು.

09.12.21 - "ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ"

ಮೊದಲನೇ ವಾಚನ: ಯೆಶಾಯ 41:13-20


ನಿನ್ನ ದೇವರಾದ ಸರ್ವೇಶ್ವರ ನಾನೇ, ಭಯಪಡಬೇಡ, ನಿನಗೆ ನಾನೇ ನೆರವಾಗುವೆ ಎಂತಲೇ, ನಿನ್ನ ಕೈ ಹಿಡಿದುಕೊಳ್ಳುವೆ. ಸರ್ವೇಶ್ವರ ಇಂತೆನ್ನುತ್ತಾರೆ: "ಹುಳುವಿನಂತಿರುವ ಯಕೋಬೇ, ಇಸ್ರಯೇಲಿನ ಜನತೆಯೇ, ಭಯಪಡಬೇಡ, ನಾನೇ ನಿನಗೆ ಸಹಾಯಕ, ಇಸ್ರಯೇಲಿನ ಪರಮಪಾವನ ಸ್ವಾಮಿಯೇ ನಿನಗೆ ವಿಮೋಚಕ. ಮಾಡಿರುವೆ ನಿನ್ನನ್ನು ಮಸೆದ ಮೊನೆಹಲ್ಲಿನ ಹೊಸ ಕುಂಟೆಯಂತೆ. ನೀನು ಒಕ್ಕುತ್ತಾ ಪುಡಿಪುಡಿ ಮಾಡುವೆ ಬೆಟ್ಟಗಳನ್ನೆ, ಹೊಟ್ಟು ಧೂಳಾಗಿಸುವೆ ಗುಡ್ಡಗಳನ್ನೆ ನೀನು ತೂರಲು ಅವುಗಳನ್ನು ಕೊಂಡೊಯ್ವದು ಗಾಳಿ, ಚಂಡಮಾರುತವು ಮಾಡುವುದವುಗಳನ್ನು ಚೆಲ್ಲಾಪಿಲ್ಲಿ. ನೀನಾದರೋ ಆನಂದಿಸುವೆ ಸರ್ವೇಶ್ವರ ಸ್ವಾಮಿಯಲಿ. ದೀನದರಿದ್ರರು ನೀರಿಗಾಗಿ ಪರದಾಡುವಾಗ, ಬಾಯಾರಿ ಅವರ ನಾಲಿಗೆ ಒಣಗಿಹೋದಾಗ, ಪ್ರಸನ್ನನಾಗುವೆ ಸರ್ವೇಶ್ವರನಾದ ನಾನೇ. ಇಸ್ರಯೇಲಿನ ದೇವರಾದ ನಾನವರನ್ನು ಕೈಬಿಡುವನೆ? ಹೊರಡಿಸುವೆನು ಬೋಳುಗುಡ್ಡಗಳಲ್ಲಿ ನದಿಗಳನು, ತಗ್ಗುತಿಟ್ಟುಗಳಲ್ಲಿ ಒರತೆಗಳನು, ಮಾರ್ಪಡಿಸುವೆನು ಕೆರೆಯಾಗಿ ಅರಣ್ಯವನು, ಬುಗ್ಗೆಗಳಾಗಿ ಮರುಭೂಮಿಯನು, ನೆಡುವೆನು ಅಡವಿಯಲಿ ದೇವದಾರು, ಕಸ್ತೂರಿ, ಜಾಲಿ, ಸುಗಂಧ ಓಲೀವ್ ಮರಗಳನು; ತೋಪಾಗಿ ಬೆಳೆಸುವೆನು ಅರಣ್ಯದೊಳು ತುರಾಯಿ, ತಪಸಿ, ತಿಲಕ ವೃಕ್ಷಗಳನು. ಇದನು ಕುರಿತು ಗ್ರಹಿಸಿಕೊಳ್ಳುವರು ಜನರು ಮನಸಾರೆ, ನುಡಿವರಾಗ, ಇದನ್ನು ಮಾಡಿದ ಹಸ್ತವು ಸರ್ವಶ್ವರಸ್ವಾಮಿಯದೇ, ಇದನ್ನು ಸೃಷ್ಟಿಸಿದಾತ ಇಸ್ರಯೇಲಿನ ಪರಮಪಾವನ ಸ್ವಾಮಿಯೇ."

ಕೀರ್ತನೆ: 144:1, 9, 10-12, 13
ಶ್ಲೋಕ: ಪ್ರಭು ದಯಾನಿಧಿ, ಕೃಪಾಸಾಗರನು ಸಹನಶೀಲನು, ಪ್ರೀತಿಪೂರ್ಣನು

ಶುಭಸಂದೇಶ: ಮತ್ತಾಯ 11:11-15

ಯೇಸು ಜನಸಮೂಹಕ್ಕೆ ಯೊವಾನ್ನನನ್ನು ಕುರಿತು ಹೀಗೆಂದರು. ಮಾನವನಾಗಿ ಜನಿಸಿದ್ದವರಲ್ಲಿ ಸ್ನಾನಿಕ ಯೆವಾನ್ನನಿಗಿಂತ ಶ್ರೇಷ್ಠನಾರೂ ಹುಟ್ಟಿಲ್ಲ! ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಆದರೂ ಸ್ವರ್ಗಸಾಮ್ರಾಜ್ಯದಲ್ಲಿ ಕನಿಷ್ಠನಾದವನು ಕೂಡ ಅವನಿಗಿಂತ ಶ್ರೇಷ್ಟನೆ ಸರಿ. ಯೊವಾನ್ನನು ತನ್ನ ಸಂದೇಶವನ್ನು ಸಾರಿದಂದಿನಿಂದ ಇಂದಿನವರಿಗೆ ಸ್ವರ್ಗ ಸಾಮ್ರಾಜ್ಯವು ನೂಕುನುಗ್ಗಲಿಗೆ ಗುರಿಯಾಗಿದೆ. ಬಲಪ್ರಯೋಗ ಮಾಡುವವರು ಅದನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಯೊವಾನ್ನನ ಕಾಲದ ತನಕ ಧರ್ಮಶಾಸ್ತ್ರ ಹಾಗೂ ಎಲ್ಲ ಪ್ರವಾದಿಗಳು ದೇವರ ಸಾಮ್ರಾಜ್ಯವನ್ನು ಕುರಿತು ಪ್ರವಾದನೆ ಮಾಡಿದರು. ಅವರ ಹೇಳಿಕೆಯನ್ನು ನಂಬಲು ನಿಮಗಿಷ್ಟವಿದ್ದರೆ ಈಗೋ, ಬರತಕ್ಕ ಎಲೀಯನು ಈ ಯೊವಾನನ್ನೇ. ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ.

08.12.21 - "ಇಗೋ, ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ,"

ಮೊದಲನೇ ವಾಚನ: ಆದಿಕಾಂಡ 3:9-15, 20


ಸರ್ವೇಶ್ವರನಾದ ದೇವರು, "ಎಲ್ಲಿರುತ್ತೀಯಾ?" ಎಂದು ಆದಾಮನನ್ನು ಕೂಗಿ ಕೇಳಿದರು. ಅದಕ್ಕೆ ಅವನು, "ತಾವು ತೋಟದಲ್ಲಿ ಸಂಚರಿಸುವ ಸಪ್ಪಳವು ಕೇಳಿಸಿತು; ಬೆತ್ತಲೆಯಾಗಿದ್ದೇನಲ್ಲಾ ಎಂದು ಹೆದರಿ ಅವಿತುಕೊಂಡೆ," ಎಂದನು. "ನೀನು ಬೆತ್ತಲೆಯಾಗಿರುವಿಯೆಂದು ನಿನಗೆ ತಿಳಿಸಿದವರು ಯಾರು?" ಎಂದು ಕೇಳಿದರು. ಅದಕ್ಕೆ ಆದಾಮನು, "ನನ್ನ ಜೊತೆಯಲ್ಲಿ ಇರಲು ತಾವು ಕೊಟ್ಟ ಮಹಿಳೆ, ಆ ಮರದ ಹಣ್ಣನ್ನು ನನಗೆ ಕೊಟ್ಟಳು: ನಾನು ತಿಂದೆ," ಎಂದನು. ಸರ್ವೇಶ್ವರನಾದ ದೇವರು ಈ ಮಹಿಳೆಯನ್ನು, "ಇದೇನು ನೀನು ಮಾಡಿದ್ದು?" ಎಂದು ಕೇಳಲು ಆಕೆ, "ಸರ್ಪವು ನನ್ನನ್ನು ವಂಚಿಸಿ ತಿನ್ನುವಂತೆ ಮಾಡಿತು," ಎಂದು ಉತ್ತರಕೊಟ್ಟಳು. ಆಗ ಸರ್ವೇಶ್ವರನಾದ ದೇವರು, ಇಂತೆಂದರು ಸರ್ಪಕ್ಕೆ: "ಈ ಪರಿಯ ಕೃತ್ಯವನ್ನು ನೀನೆಸಗಿದುದರಿಂದ ಶಾಪಗ್ರಸ್ತನಾದೆ ಎಲ್ಲ ಪಶುಪ್ರಾಣಿಗಳಿಗಿಂತ: ಹರಿದಾಡುವೆ ಹೊಟ್ಟೆಯ ಮೇಲೆ ಇಂದಿನಿಂದ ತಿನ್ನುವೆ ಮಣ್ಣನ್ನೇ ಜೀವಮಾನ ಪರಿಯಂತ. ಹಗೆತನವಿರುಸುವೆನು ನಿನಗೂ ಈ ಮಹಿಳೆಗೂ ನಿನ್ನ ಸಂತಾನಕ್ಕೂ ಇವಳ ಸಂತಾನಕ್ಕೂ. ಜಜ್ಜುವುದಿವಳ ಸಂತಾನ ನಿನ್ನ ತಲೆಯನ್ನು ಕಚ್ಚುವೆ ನೀನಾ ಸಂತಾನದ ಹಿಮ್ಮಡಿಯನು." ಆದಾಮನು ತನ್ನ ಹೆಂಡತಿಗೆ "ಹವ್ವ" ಎಂದು ಹೆಸರಿಟ್ಟನು. ಏಕೆಂದರೆ ಮಾನವಕುಲಕ್ಕೆ ಮೂಲಮಾತೆ ಆಕೆ.

ಕೀರ್ತನೆ:98:2-3, 3-4
ಶ್ಲೋಕ: ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು ಎಸಗಿಹನಾತನು ಪವಾಡಕಾರ್ಯಗಳನು

ಎರಡನೇ ವಾಚನ: ಎಫೆಸಿಯರಿಗೆ 1:3-6, 11-12

ನಮ್ಮ ಪ್ರಭು ಯೇಸುಕ್ರಿಸ್ತರ ಪಿತನಾದ ದೇವರಿಗೆ ಸ್ತುತಿ ಸಲ್ಲಲಿ! ಪಿತದೇವರು ಸ್ವರ್ಗಲೋಕದಿಂದ ಎಲ್ಲಾ ಬಗೆಯ ಆಧ್ಯಾತ್ಮಿಕ ಆಶೀರ್ವಾದಗಳನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿದ್ದಾರೆ. ಜಗತ್ತು ಸೃಷ್ಟಿಯಾಗುವ ಮೊದಲೇ ದೇವರು ಕ್ರಿಸ್ತಯೇಸುವಿನಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು. ಹೀಗೆ ಅವರ ಸನ್ನಿಧಿಯಲ್ಲಿ ನಾವು ನಿಷ್ಕಳಂಕರೂ ನಿರ್ದೋಷಿಗಳೂ ಆಗಿರಬೇಕೆಂದು ಇಚ್ಛಿಸಿದರು. ನಮ್ಮ ಮೇಲಿನ ಪ್ರೀತಿಯಿಂದಾಗಿ ದೇವರು ಯೇಸುಕ್ರಿಸ್ತರ ಮೂಲಕ ನಮ್ಮನ್ನು ತಮ್ಮ ಮಕ್ಕಳನ್ನಾಗಿಸಿಕೊಳ್ಳಲು ಆಗಲೇ ನಿರ್ಧರಿಸಿದ್ದರು. ಇದು ಅವರ ಸಂಕಲ್ಪ ಹಾಗೂ ಚಿತ್ತವಾಗಿತ್ತು. ತಮ್ಮ ಪ್ರೀತಿಯ ಪುತ್ರನಲ್ಲೇ ಅವರು ನಮಗೆ ಉಚಿತವಾಗಿ ಅನುಗ್ರಹಿಸಿರುವ ಅತಿಶಯ ವರಪ್ರಸಾದಕ್ಕಾಗಿ ಅವರಿಗೆ ಸ್ತುತಿ ಸಲ್ಲಿಸೋಣ. ದೈವಯೋಜನೆಯಂತೆಯೇ ಸಕಲವೂ ಸಂಭವಿಸುತ್ತದೆ. ದೇವರು ಆದಿಯಲ್ಲೇ ಸಂಕಲ್ಪಿಸಿದ್ದಂತೆ ತಮ್ಮ ಚಿತ್ತಕ್ಕನುಗುಣವಾಗಿ ಕ್ರಿಸ್ತ ಯೇಸುವಿನ ಅನ್ಯೋನ್ಯತೆಯಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು. ಆದಕಾರಣ ಯೇಸುಕ್ರಿಸ್ತರಲ್ಲಿ ಮೊತ್ತಮೊದಲು ನಿರೀಕ್ಷೆಯನ್ನಿರಿಸಿದ ನಾವು ದೇವರ ಮಹಿಮೆಯನ್ನು ಸ್ತುತಿಸಿ ಹಾಡಬೇಕು.

ಶುಭಸಂದೇಶ: ಲೂಕ 1:26-38


ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬಂದು "ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!" ಎಂದನು. ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. "ಇದೆಂಥ ಶುಭಾಶಯ" ಎಂದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ, "ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು  ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ ಆತನಿಗೆ "ಯೇಸು" ಎಂಬ ಹೆಸರಿಡಬೇಕು; ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು, ಯಕೋಬನ ವಂಶವನ್ನು ಅವನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು," ಎಂದನು. ಅದಕ್ಕೆ ಮರಿಯಳು, "ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ  ಇಲ್ಲವಲ್ಲಾ?" ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, "ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು "ದೇವರ ಪುತ್ರ ಎನಿಸಿಕೊಳ್ಳುವನು. ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು; ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ," ಎಂದನು. ಆಗ ಮರಿಯಳು, "ಇಗೋ, ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ," ಎಂದಳು.  ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.


07.12.21 - "ಸಿಕ್ಕಿದ ಈ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ"

ಮೊದಲನೇ ವಾಚನ: ಯೆಶಾಯ 40:1-11

ನಿಮ್ಮ ದೇವರು ಇಂತೆನ್ನುತ್ತಾರೆ: "ಸಂತೈಸಿ, ನನ್ನ ಜನರನ್ನು ಸಂತೈಸಿರಿ. ಜೆರುಸಲೇಮಿನೊಡನೆ ಪ್ರೀತಿಯಿಂದ ಮಾತನಾಡಿ; ಅದರ ಊಳಿಗತನ ಮುಗಿಯಿತೆನ್ನಿ: ತಕ್ಕ ಪ್ರಾಯಶ್ಚಿತ್ತವಾಗಿದೆ ಅದು ಗೈದ ದೋಷಕ್ಕೆ ಸರ್ವೇಶ್ವರಸ್ವಾಮಿಯಿಂದಲೇ ಅದರ ಎಲ್ಲಾ ಪಾಪಕೃತ್ಯಗಳಿಗೆ ಇಮ್ಮಡಿ ಶಿಕ್ಷೆಯಾಗಿದೆ ಎಂದು ಕೂಗಿ ಹೇಳಿ ಆ ನಗರಿಗೆ" ಇಗೋ, ಈ ವಾಣಿಯನ್ನು. ಕೇಳಿ: "ಸರ್ವೇಶ್ವರಸ್ವಾಮಿಗೆ ಮಾರ್ಗವನ್ನು ಸಿದ್ಧ ಮಾಡಿ ಅರಣ್ಯದಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ಸರಾಗ ಮಾಡಿ ಅಡವಿಯಲ್ಲಿ. ತುಂಬಬೇಕು ಎಲ್ಲ ಹಳ್ಳಕೊಳ್ಳಗಳನ್ನು ಮಟ್ಟಮಾಡಬೇಕು ಎಲ್ಲ ಬೆಟ್ಟಗುಡ್ಡಗಳನ್ನು. ನೆಲಸಮ ಮಾಡಬೇಕು ದಿಬ್ಬ ದಿಣ್ಣೆಗಳನ್ನು. ಸಮತಲಗೊಳಿಸಬೇಕು ತಗ್ಗುಮುಗ್ಗಾದ ಸ್ಥಳಗಳನ್ನು. ಗೋಚರವಾಗುವುದಾಗ ಸರ್ವೇಶ್ವರಸ್ವಾಮಿಯ ಮಹಿಮೆಯು, ಮಾನವರೆಲ್ಲರೂ ಅದನ್ನು ಕಾಣುವರು ಒಟ್ಟಿಗೆ, ಸರ್ವೇಶ್ವರಸ್ವಾಮಿಯೇ ಇದನ್ನು ಬಾಯಾರೆ ನುಡಿದಿದ್ದಾರೆ." ಆ ವಾಣಿ ಮತ್ತೆ ಕೇಳಿಸಿತು: "ಗಟ್ಟಿಯಾಗಿ ಕೂಗು" ಎಂದಿತು. ನಾನೇನೆಂದು ಕೂಗಲಿ ಎನ್ನಲು ಈ ಪರಿಯಾಗಿ ಉತ್ತರಿಸಿತು: "ನರಮಾನವರೆಲ್ಲ ಬರೀ ಹುಲ್ಲಿನಂತೆ ಅವರ ಸೊಬಗೆಲ್ಲಾ ಬಯಲಿನ ಕುಸುಮದಂತೆ. ಪ್ರಭುವಿನ ಶ್ವಾಸ ಬೀಸಲು ಒಣಗಿ ಹೋಗುವುದಾ ಹುಲ್ಲು ಬಾಡಿ ಹೋಗುವುದಾ ಹೂವು ಮಾನವರೆಲ್ಲ ಹುಲ್ಲೇ ಹುಲ್ಲು, ಒಣಗಿ ಹೋಗುವುದಾ ಹುಲ್ಲು, ಬಾಡಿ ಹೋಗುವುದಾ ಹೂವು, ನಮ್ಮ ದೇವರ ನುಡಿಯಾದರೋ ಇರುವುದು ಚಿರಕಾಲವು." ಪರ್ವತವನ್ನೇರು ಶುಭಸಂದೇಶಕಳಾದ ಸಿಯೋನೇ, ಧ್ವನಿಯೇರಿಸು, ನಿರ್ಭಯದಿಂದ ಏರಿಸು "ಇಗೋ, ನಿಮ್ಮ ದೇವರು" ಎಂದು ಜೂದ ನಗರಗಳಿಗೆ ಸಾರು. ಇಗೋ, ಬರುತಿಹನು ಸ್ವಾಮಿ ಸರ್ವೇಶ್ವರ ಶೂರನಂತೆ ರಾಜ್ಯವಾಳುವನು ತನ್ನ ಭುಜಬಲದಿಂದಲೇ ಇಗೋ,  ಶ್ರಮಕ್ಕೆ ತಕ್ಕ ಪ್ರತಿಫಲ ಆತನ ಕೈಯಲ್ಲಿದೆ ಆತ ಜಯಿಸಿದ ಪರಿವಾರ ಆತನ ಮುಂದಿದೆ. ಆತ ಮೇಯಿಸುವನು ತನ್ನ ಮಂದೆಯನ್ನು ಕುರುಬನ ಹಾಗೆ ಮರಿಗಳನ್ನು ಕೈಗೆ ಎತ್ತಿಕೊಳ್ಳುವನು, ಅಪ್ಪಿಕೊಳ್ಳುವನು ಎದೆಗೆ ನಡೆಸುವನು ಹಾಲೂಡಿಸುವ ಕುರಿಗಳನ್ನು ಮೆಲ್ಲಗೆ.

ಕೀರ್ತನೆ: 96:1-2, 3, 10, 11-12, 13
ಶ್ಲೋಕ: ಇಗೋ, ಸರ್ವೇಶ್ವರಸ್ವಾಮಿ ಬರುತಿಹನು ಶೂರನಂತೆ

ಹೊಸಗೀತೆಯನು ಹಾಡಿರಿ ಪ್ರಭುವಿಗೆ|
ವಿಶ್ವವೆಲ್ಲವು ಹಾಡಲಿ ಆತನಿಗೆ||
ಪ್ರಭುವಿಗೆ ಹಾಡಿರಿ, ಆತನ ನಾಮವನು ಕೊಂಡಾಡಿರಿ|
ಆತನ ಮುಕ್ತಿಮಾರ್ಗವನು ಪ್ರತಿನಿತ್ಯವೂ ಸಾರಿರಿ||

ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ|
ಆತನದ್ಭುತ ಕಾರ್ಯಗಳನು ಸಕಲ ಜನಾಂಗಗಳಿಗೆ||
ಪ್ರಭು ರಾಜನೆಂದು ಸಾರಿರಿ ರಾಷ್ಟ್ರಗಳಿಗೆ|
ನ್ಯಾಯತೀರ್ಪು ಕೊಡುವನು ಜನಾಂಗಕೆ||

ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು|
ಗರ್ಜಿಸಲಿ ಸಮುದ್ರವು ಮತ್ತು ಅದರೊಳಿರುವುದೆಲ್ಲವು||
ಉಲ್ಲಾಸಿಸಲಿ ಹೊಲಗದ್ದೆಗಳು, ಪೈರುಪಚ್ಚೆಗಳು|
ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು||

ಪ್ರಭು ಧರೆಗೆ ನ್ಯಾಯತೀರಿಸಲು|
ಬಂದೇ ಬರುವನು ಖರೆಯಾಗಿ||
ಜಗಕು ಜನತೆಗು ತೀರ್ಪಿಡುವನು|
ನೀತಿ ನಿಯಮಾನುಸಾರವಾಗಿ||

ಘೋಷಣೆ:
ಅಲ್ಲೆಲೂಯ, ಅಲ್ಲೆಲೂಯ!
ಸ್ವಾಮಿ ಸರ್ವೇಶ್ವರಾ, ತಡಮಾಡಬೇಡಿ | ನಿಮ್ಮ ಜನರ ಪಾಪಗಳನ್ನು ಕ್ಷಮಿಸಿರಿ ||
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 18:12-14


"ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳು ಇವೆಯೆನ್ನೋಣ, ಅವುಗಳಲ್ಲಿ ಒಂದು ಕುರಿ ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ, ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಗುಡ್ಡದಲ್ಲೇ ಬಿಟ್ಟು, ತಪ್ಪಿಸಿಕೊಂಡು ಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ? ಅದು ಸಿಕ್ಕಿತು ಅನ್ನಿ; ತಪ್ಪಿಸಿಕೊಳ್ಳದ ಈ ತೊಂಭತ್ತೊಂಭತ್ತು ಕುರಿಗಳಿಗಿಂತ ಸಿಕ್ಕಿದ ಈ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅಂತೆಯೇ, ಈ ಚಿಕ್ಕವರಲ್ಲಿ ಒಬ್ಬನು ಕೂಡ ಕಳೆದುಹೋಗಬಾರದು; ಇದೇ ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತ," ಎಂದರು ಯೇಸುಸ್ವಾಮಿ.

06.12.21 - 'ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎನ್ನುವುದು ಸುಲಭವೋ ಅಥವಾ 'ಎದ್ದು ನಡೆ' ಎನ್ನುವುದು ಸುಲಭವೋ?

ಮೊದಲನೇ ವಾಚನ: ಯೆಶಾಯ  35:1-10

ಆನಂದಿಸಲಿ ಅರಣ್ಯವೂ ಮರಭೂಮಿಯೂ, ಹೂಗಳಂತೆ ಅರಳಿ ಹರ್ಷಿಸಲಿ ಒಣನೆಲವು. ಉಲ್ಲಾಷಿಸಲಿ ಅದು ಹುಲುಸಾಗಿ ಹೂಬಿಟ್ಟು, ಹೌದು, ಸಂತಸ ಸಂಗೀತ ಹಾಡುವಷ್ಟು. ದೊರಕಲಿ ಅದಕ್ಕೆ ಲೆಬನೋನಿನ ಮಹಿಮೆಯು; ಕರ್ಮೆಲಿನ ಮತ್ತು ಶಾರೋನಿನ ವೈಭವವು.  ಕಾಣುವುವು ಸರ್ವೇಶ್ವರನ ಮಹಿಮೆಯನು, ನೋಡುವುವು ಇವೆಲ್ಲ ನಮ್ಮ ದೇವರ ವೈಭವವನ್ನು. ಜೋಲುಬಿದ್ದ ಕೈಗಳನ್ನು ಬಲಗೊಳಿಸಿರಿ. ನಡುಗುವ ಕಾಲುಗಳನ್ನು ದೃಢಗೊಳಿಸಿರಿ. ಚಂಚಲ ಹೃದಯರಿಗೆ ಹೀಗೆಂದು ಹೇಳಿ: "ಭಯಪಡಬೇಡಿ, ಎದೆಗುಂದಬೇಡಿ, ಬರುವನು ಆ ದೇವನು ಮುಯ್ಯಿತೀರಿಸಲು; ಬರುವನು ಆ ದೇವನು ಪ್ರತೀಕಾರವೆಸಗಲು; ತಾನೇ ಬರುವನು ನಿಮ್ಮನ್ನು ರಕ್ಷಿಸಲು." ಕುರುಡರ ಕಣ್ಣು ಕಾಣುವುದಾಗ, ಕಿವುಡರ ಕಿವಿ ತೆರೆಯುವುದಾಗ, ಜಿಗಿಯುವನು ಕುಂಟನು ಜಿಂಕೆಯಂತೆ ಹಾಡುವುದು ಮೂಕನ ನಾಲಿಗೆ ಹರ್ಷಗೀತೆ, ಒರತೆಗಳು ಒಡೆಯುವುವು ಅರಣ್ಯದಲ್ಲಿ ನದಿಗಳು ಹುಟ್ಟಿಹರಿಯುವುವು ಒಣನೆಲದಲ್ಲಿ. ಸರೋವರವಾಗುವುದಾ ಉರಿಗಾಡು ಬುಗ್ಗೆಯಾಗುವುದಾ ಬುವಿ ಬರಡು, ನರಿಗಳು ನಿವಾಸಿಸುವ ಗುಹೆಗಳು ಆಗುವುವು ಹುಲುಸಾದ  ಹುಲ್ಲುಗಾವಲುಗಳು. ಅಲ್ಲಿರುವುದೊಂದು ರಾಜಮಾರ್ಗ ಅದೆನಿಸಿಕೊಳ್ಳುವುದು ಪವಿತ್ರಮಾರ್ಗ ನಡೆಯನು ಅದರೊಳು ಪಾಪಾತ್ಮನು; ಅದಾಗುವುದು ಜನರಿಗೆ ಮೀಸಲು ದಾರಿತಪ್ಪನು ಅಲ್ಲ ನಡೆಯುವ ಮೂಢನು. ಅಲ್ಲಿರದು ಸಿಂಹ ಸಿಂಹಿಣಿ, ಅಲ್ಲಿ ಸೇರದು ಕ್ರೂರ ಪ್ರಾಣಿ, ಕಾಣಸಿಗದಲ್ಲಿ ಇದಾವ ಹಾನಿ, ಪಾಪವಿಮುಕ್ತರೇ ನಡೆವರಲ್ಲಿ. ಹಿಂದಿರುಗುವರು ಸರ್ವೇಶ್ವರನಿಂದ ವಿಮೋಚನೆ ಪಡೆದವರು ಜಯಜಯಕಾರದೊಂದಿಗೆ ಸಿಯೋನನು ಸೇರುವರು. ನಿತ್ಯಾನಂದ ಸುಖವಿರುವುದು ಕಿರೀಟಪ್ರದವಾಗಿ ಸಿಗುವುದವರಿಗೆ ಹರ್ಷಾನಂದದ ಸವಿ ತೊಲಗುವುದು ದುಃಖ ದುಗುಡದ ಕಹಿ.

ಕೀರ್ತನೆ: 85:9, 10, 11-12, 13-14
ಶ್ಲೋಕ: ಅಗೋ, ದೇವನು ತಾನೇ ಬರುವನು ನಿಮ್ಮನ್ನು ರಕ್ಷಿಸಲು.

ಶುಭಸಂದೇಶ: ಲೂಕ 5:17-26

ಒಮ್ಮೆ ಯೇಸುಸ್ವಾಮಿ ಬೋಧನೆ ಮಾಡುತ್ತಾ ಇದ್ದಾಗ, ಫರಿಸಾಯರೂ ಧರ್ಮಶಾಸ್ತ್ರಜ್ಞರೂ ಅವರ ಹತ್ತಿರ ಕುಳಿತ್ತಿದ್ದರು. ಇವರು ಗಲಿಲೇಯ ಹಾಗೂ ಜುದೇಯ ಪ್ರಾಂತ್ಯದ ಊರೂರುಗಳಿಂದಲೂ ಜೆರುಸಲೇಮ್ ಪಟ್ಟಣದಿಂದಲೂ ಬಂದಿದ್ದರು. ಗುಣಪಡಿಸುವಂತಹ ದೈವಶಕ್ತಿ ಯೇಸುವಿನಲ್ಲಿತ್ತು. ಆಗ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯ ಸಮೇತ ಹೊತ್ತುಕೊಂಡು ಅಲ್ಲಿಗೆ ಬಂದರು. ರೋಗಿಯನ್ನು ಒಳಕ್ಕೆ ತೆಗೆದುಕೊಂಡು ಹೋಗಿ ಯೇಸುವಿನ ಮುಂದೆ ಇಡಬೇಕೆಂದು ಪ್ರಯತ್ನಿಸಿದರು. ಆದರೆ ಜನಸಂದಣಿಯ ನಿಮಿತ್ತ ದಾರಿ ಮಾಡಲಾಗಲಿಲ್ಲ. ಆಗ ಅವರು ಮನೆಯ ಮೇಲೆ ಹತ್ತಿ , ಹೆಂಚುಗಳನ್ನು ತೆಗೆದು, ಅಲ್ಲಿಂದ ರೋಗಿಯನ್ನು ಹಾಸಿಗೆಯ ಸಹಿತ ಯೇಸುವಿನ ಮುಂದೆ ಇಳಿಸಿದರು. ಯೇಸು ಅವರ ವಿಶ್ವಾಸವನ್ನು ಮೇಚ್ಚಿ,  "ತಮ್ಮಾ, ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎಂದರು. ಇದನ್ನು ಕೇಳಿದ ಧರ್ಮಶಾಸ್ತ್ರಿಗಳೂ ಫರಿಸಾಯರೂ, "ದೇವದೂಷಣೆ ಆಡುತ್ತಿರುವ ಇವನಾರು? ದೇವರೊಬ್ಬರನ್ನು ಬಿಟ್ಟರೆ ಪಾಪಗಳನ್ನು ಕ್ಷಮಿಸಿ ಪರಿಹರಿಸಲು ಬೇರೆ ಯಾರಿಂದ ಸಾಧ್ಯ?" ಎಂದು ತಮ್ಮಲ್ಲೇ ಹೇಳಿಕೊಳ್ಳಲು  ಆರಂಭಿಸಿದರು. ಯೇಸು ಅವರ ಆಲೋಚನೆಗಳನ್ನು ಗ್ರಹಿಸಿಕೊಂಡು, "ನೀವು ನಿಮ್ಮ ಮನಸ್ಸಿನಲ್ಲಿ ಆಲೋಚಿಸುತ್ತಾ ಇರುವುದೇನು? 'ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎನ್ನುವುದು ಸುಲಭವೋ ಅಥವಾ 'ಎದ್ದು ನಡೆ' ಎನ್ನುವುದು ಸುಲಭವೋ? ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸಲು ನರಪುತ್ರನಿಗೆ ಅಧಿಕಾರ ಉಂಟೆಂದು ಈ ಮೂಲಕ ನಿಮಗೆ ಖಚಿತವಾಗಬೇಕು," ಎಂದು ಹೇಳಿ, ಅ ಪಾರ್ಶ್ವವಾಯು ರೋಗಿಯ ಕಡೆ ನೋಡಿ,  'ಏಳು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೊರಡು,' ಎಂದು ನಿನಗೆ ಆಜ್ಞಾಪಿಸುತ್ತೇನೆ" ಎಂದರು. ತಕ್ಷಣವೇ ಅವರೆಲ್ಲರೂ ನೋಡುತ್ತಿದ್ದ ಹಾಗೆ ಅವನು ಎದ್ದು, ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು, ದೇವರನ್ನು ಸ್ತುತಿಸುತ್ತಾ ತನ್ನ ಮನೆಗೆ ಹೋದನು. ಎಲ್ಲರೂ ನಿಬ್ಬೆರಗಾಗಿ, ನಾವು ಈ ದಿನ ಎಂಥ ಅಪೂರ್ವ ಕಾರ್ಯವನ್ನು ಕಂಡೆವು!" ಎಂದು ಭಯಭಕ್ತಿಯಿಂದ ದೇವರನ್ನು ಕೊಂಡಾಡಿದರು.

05.12.21 - "ಹಳ್ಳಕೊಳ್ಳಗಳೆಲ್ಲ ಭರ್ತಿಯಾಗಬೇಕು; ಬೆಟ್ಟಗುಡ್ಡಗಳು ಮಟ್ಟವಾಗಬೇಕು; ಅಂಕು ಡೊಂಕಾದವು ನೆಟ್ಟಗಾಗಬೇಕು; ತಗ್ಗುಮುಗ್ಗಾದ ಹಾದಿಗಳು ಹಸನಾಗಬೇಕು"

ಮೊದಲನೇ ವಾಚನ: ಬಾರೂಕ  5:1-9

ಜೆರುಸಲೇಮೇಕಳಚಿಬಿಡು ನಿನ್ನ ಶೋಕಾರ್ಥ ವಸ್ತ್ರಗಳನ್ನು ಧರಿಸಿಕೋ  ನಿತ್ಯಕ್ಕೆಂದು ದೇವರಿಂದ ಬರುವ ಪ್ರಭಾವದ ಸೊಬಗನ್ನು. ತೊಟ್ಟುಕೋ ದೇವರಿಂದ ಬರುವ ನೀತಿಯೆಂಬ ನಿಲುವಂಗಿಯನ್ನು ಇಟ್ಟುಕೋ ತಲೆಯ ಮೇಲೆ ಮಹಿಮೆಯೆಂಬ ಮುಕುಟವನ್ನು. ದೇವರೇ ನಿನ್ನ ತೇಜಸ್ಸನ್ನು ಹರಡುವರು. ಆಕಾಶದಡಿಯಿರುವ ಎಲ್ಲಾ ದಿಕ್ಕುಗಳಿಗು. "ನೀತಿಯಿಂದ ಶಾಂತಿ", "ಭಕ್ತಿಯಿಂದ ಕೀರ್ತಿ" ಎಂದು ದೇವರೇ ನಿನ್ನನ್ನು ಹೆಸರಿಸುವರು ಎಂದೆಂದಿಗು. ಜೆರುಸಲೇಮೇಎದ್ದೇಳುಉನ್ನತಸ್ಥಾನದಲ್ಲಿ ನಿಲ್ಲು ಪೂರ್ವಾಭಿಮುಖವಾಗಿ ತಿರುಗಿಸು ನಿನ್ನ ಕಣ್ಣುಗಳನ್ನು. ದೇವರು ತಮ್ಮನ್ನು ನೆನೆಸಿಕೊಂಡರೆಂದು ಹಿಗ್ಗುತಿಹರು ನಿನ್ನ ಮಕ್ಕಳು ಪರಮಪಾವನನ ನುಡಿಯಂತೆ ಪೂರ್ವ ಪಶ್ಚಿಮದಿಂದ ಕೂಡಿಬರುತಹರು ನೋಡು. ಶತ್ರುಗಳಿಂದ ಒಯ್ಯಲ್ಪಟ್ಟು ಕಾಲ್ನಡೆಯಲ್ಲಿ ಅವರು ನಿನ್ನನ್ನು ಬಿಟ್ಟುಹೋದರು. ಈಗ ವೈಭವದಿಂದ ಹೊರಟು ಸಿಂಹಾಸನರೂಢರಾದವರಂತೆ ಬರುತ್ತಿಹರು ದೇವರೇ ಅವರನ್ನು ನಿನ್ನ ಬಳಿಗೆ ಬರಮಾಡುತ್ತಿಹರು. ಇಸ್ರಯೇಲ್ ದೈವಪ್ರಭೆಯಲ್ಲಿ ಸುರಕ್ಷಿತವಾಗಿ ಸಾಗಬೇಕಂದು ಅದಕ್ಕಾಗಿ ಉನ್ನತಬೆಟ್ಟಗಳುನೆಲೆಯಾದ ಗುಡ್ಡಗಳು ತಗ್ಗಬೇಕೆಂದು ಹಳ್ಳಕೊಳ್ಳಗಳು ತುಂಬಿ ಭರ್ತಿಯಾಗಿ ನೆಲಸಮವಾಗಬೇಕೆಂದು ದೇವರೇ ನೇಮಕಮಾಡಿರುವರು. ಆ ದೇವರ ಅಪ್ಪಣೆಯ ಪ್ರಕಾರ ಇಸ್ರಯೇಲಿಗೆ ನೆರಳು ನೀಡುವುವು ಕಾಡುಗಳು. ಸುಗಂಧವಾಸನೆಯನ್ನು ಬೀರುವುವು ಗಿಡಮರಗಳು. ದೇವರು ಇಸ್ರಯೇಲನ್ನು ನಡೆಸುವರು ತಮ್ಮ ಮಹಿಮೆ ಪ್ರಕಾಶದಲ್ಲೇ ಹರುಷದೊಡನೆ ತಮ್ಮಿಂದ ಬರುವ ಕರುಣೆ ಹಾಗು ನ್ಯಾಯನೀತಿಗಳೊಡನೆ.

ಕೀರ್ತನೆ: 126:1-2, 2-3, 4-5, 6
ಶ್ಲೋಕ: ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ ಎಂತೆಲೇ ನಾವು ಆನಂದಭರಿತರಾಗುವುದು ಉಚಿತ.

ಎರಡನೇ ವಾಚನ: ಫಿಲಿಪ್ಪಿಯರಿಗೆ  1:4-6, 8-11

ನಿಮಗೋಸ್ಕರ ಯಾವಾಗಲೂ ತುಂಬುಹೃದಯದಿಂದ ಪ್ರಾರ್ಥಿಸುತ್ತೇನೆ. ಏಕೆಂದರೆನಾನು ನಿಮ್ಮನ್ನು ಸಂದಿಸಿದ ಮೊದಲ ದಿನದಿಂದ ಇಂದಿನವರೆಗೂ ನೀವು ನನ್ನೊಡನೆ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ಸಹಕರಿಸುತ್ತಿರುವಿರಿ. ಈ ಸತ್ಕಾರ್ಯವನ್ನು ನಿಮ್ಮಲ್ಲಿ ಪ್ರಾರಂಭಿಸಿದ ದೇವರು ಅದನ್ನು ಮುಂದುವರಿಸುತ್ತಾಯೇಸುಕ್ರಿಸ್ತರು ಪುನರಾಗಮಿಸುವಷ್ಟರಲ್ಲಿ ಪೂರೈಸುವರು ಎಂಬುದೇ ನನ್ನ ದೃಢ ನಂಬಿಕೆ. ಕ್ರಿಸ್ತಯೇಸುವಿನಲ್ಲಿರುವ ಉತ್ಕಟ ಪ್ರೀತಿಯಿಂದಲೇ ನಾನು ನಿಮ್ಮೆಲ್ಲರಿಗಾಗಿ ಹಂಬಲಿಸುತ್ತಿದ್ದೇನೆಇದಕ್ಕೆ ದೇವರೇ ಸಾಕ್ಷಿ. ನೀವು ಪ್ರೀತಿಯಲ್ಲಿ ಪ್ರವರ್ಧಿಸುತ್ತಾಪೂರ್ಣ ಜ್ಞಾನ ಹಾಗೂ ವಿವೇಕದಂದ ಕೂಡಿದವರಾಗಬೇಕೆಂಬುದೇ ನನ್ನ ಪ್ರಾರ್ಥನೆ. ಹೀಗೆ ನೀವು ಉತ್ತಮೋತ್ತಮವಾದುವುಗಳನ್ನೇ ಆರಿಸಿಕೊಂಡುಪ್ರಭುಕ್ರಿಸ್ತರ ದಿನದಂದು ನಿರ್ದೋಷಿಗಳೂ ನಿಷ್ಕಳಂಕರೂ ಆಗಿ ಕಾಣಿಸಿಕೊಳ್ಳುವಿರಿ. ಯೇಸುಕ್ರಿಸ್ತರ ಮುಖಾಂತರ ಲಭಿಸುವ ಸತ್ಸಂಬಂಧದ ಫಲಗಳಿಂದ ತುಂಬಿದವರಾಗಿ ದೇವರಿಗೆ ಸ್ತುತಿಸಲ್ಲಿಸಿಅವರ ಮಹಿಮೆ ಬೆಳಗುವಂತೆ ಮಾಡಿವಿರಿ.

ಶುಭಸಂದೇಶ: ಲೂಕ 3:1-6



ಅದು ತಿಬೇರಿಯಸ್ ಚಕ್ರವರ್ತಿಯ ಆಡಲಿತದ ಹದಿನೈದನೆಯ ವರ್ಷ. ಆ ಕಾಲದಲ್ಲಿ ಜುದೇಯ ಪ್ರಾಂತ್ಯಕ್ಕೆ ಪೊನ್ಸಿಯುಸ್ ಪಿಲಾತನು ರಾಜ್ಯಪಾಲನಾಗಿದ್ದನು. ಗಲಿಲೇಯ ಪ್ರಾಂತ್ಯಕ್ಕೆ ಹೆರೋದನೂ ಇತುರೆಯ ಮತ್ತು ತ್ರಕೋನಿತಿ ಪ್ರಾಂತ್ಯಗಳಿಗೆ ಇವನ ತಮ್ಮನಾದ ಫಿಲಿಪ್ಪನೂ ಮತ್ತು ಅಬಿಲೇನೆ ಪ್ರಾಂತ್ಯಕ್ಕೆ ಲುಸಾನಿಯನೂ ಸಾಮಂತರಾಗಿದ್ದರು. ಅನ್ನನು ಮತ್ತು ಕಾಯಿಫನು ಅಂದಿನ ಪ್ರದಾನ ಯಾಜಕರು. ಆಗ ಬೆಂಗಾಡಿನಲ್ಲಿ ಜಕರಿಯನ ಮಗ ಯೊವಾನ್ನನಿಗೆ ದೇವರ ಸಂದೇಶದ ಬೋದೆ ಆಯಿತು. ಆತನು ಜೋರ್ಡಾನ್ ನದಿಯ ಪರಿಸರ ಪ್ರಾಂತ್ಯದಲ್ಲೆಲ್ಲಾ ಸಂಚರಿಸುತ್ತಾ,  "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ ಮತ್ತು ಸ್ನಾನದೀಕ್ಷೆ ಪಡೆದುಕೊಳ್ಳಿರಿದೇವರು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡುವರು," ಎಂದು ಸಾರಿ ಹೇಳುತ್ತಿದ್ದನು. ಈ ಬಗ್ಗೆ ಪ್ರವಾದಿ ಯೆಶಾಯನ ಗ್ರಂಥದಲ್ಲಿ ಮುಂಚಿತವಾಗಿಯೇ ಹೀಗೆಂದು ಬರೆದಿಡಲಾಗಿದೆ:"  ಪ್ರಭುವಿಗಾಗಿ ಮಾರ್ಗವನ್ನು ಸಿದ್ದಪಡಿಸಿರಿಆತನ ಆಗಮನಕ್ಕಾಗಿ ಹಾದಿಯನ್ನು ಸರಾಗ ಮಾಡಿರಿ" ಎಂದು ಬೆಂಗಾಡಿನಲ್ಲಿ ಒಬ್ಬನು ಘೋಷಿಸುತ್ತಿದ್ದಾನೆ. ಹಳ್ಳಕೊಳ್ಳಗಳೆಲ್ಲ ಭರ್ತಿಯಾಗಬೇಕುಬೆಟ್ಟಗುಡ್ಡಗಳು ಮಟ್ಟವಾಗಬೇಕುಅಂಕು ಡೊಂಕಾದವು ನೆಟ್ಟಗಾಗಬೇಕುತಗ್ಗುಮುಗ್ಗಾದ ಹಾದಿಗಳು ಹಸನಾಗಬೇಕು. ಆಗ ದೇವರು ದಯಪಾಲಿಸುವ ಜೀವೋದ್ಧಾರವನ್ನು ಮಾನವರೆಲ್ಲರೂ ಕಾಣುವರು."