13.10.2018

ಸಾಧಾರಣ ಕಾಲದ 27ನೇ - ಶನಿವಾರ

ಮೊದಲನೇ ವಾಚನ: ಗಲಾತ್ಯರಿಗೆ: 3: 22-29

ಸಹೋದರರೇ, ಸಮಸ್ತ ಲೋಕವು ಪಾಪಕ್ಕೆ ಒಳಗಾಯಿತು ಎಂದು ಪವಿತ್ರ ಗ್ರಂಥ ಸ್ಪಷ್ಟೀಕರಿಸುತ್ತದೆ. ಹೀಗೆ, ವಾಗ್ದಾನ ಮಾಡಿದ ಸೌಭಾಗ್ಯವನ್ನು ಯೇಸು ಕ್ರಿಸ್ತರಲ್ಲಿ ವಿಶ್ವಾಸವಿಟ್ಟವರಿಗೆ ಅವರ ನಂಬಿಕೆಯ ಆಧಾರದ ಮೇಲೆ ಕೊಡಲಾಗುತ್ತದೆ. ಕ್ರೈಸ್ತ ವಿಶ್ವಾಸ ಕಾಲವು ಬರುವುದಕ್ಕೆ ಮೊದಲು ನಾವು ಧರ್ಮಶಾಸ್ತ್ರದ ನಿರ್ಬಂಧಕ್ಕೆ ಒಳಗಾಗಿ ಕೈದಿಗಳಂತೆ ಇದ್ದೆವು. ಈ ವಿಶ್ವಾಸವು ಪ್ರಕಟವಾಗುವವರೆಗೂ ಇದೇ ಪರಿಸ್ಥಿತಿ ಇತ್ತು. ಅಂತೆಯೇ, ವಿಶ್ವಾಸದ ಮೂಲಕ ನಾವು ದೇವರೊಡನೆ ಸತ್ಸಂಬಂಧ ಹೊಂದುವಂತೆ ಕ್ರಿಸ್ತ ಯೇಸು ಬರುವವರೆಗೆ ಅದು ನಮಗೆ ಕಾವಲಾಗಿತ್ತು. ಈಗ ಕ್ರೈಸ್ತ ವಿಶ್ವಾಸವು ಆಗಮಿಸಿರುವುದರಿಂದ ಇನ್ನು ನಾವು ಧರ್ಮಶಾಸ್ತ್ರದ ಅಧೀನದಲ್ಲಿ ಇಲ್ಲ. ಕ್ರಿಸ್ತ ಯೇಸುವಿನಲ್ಲಿ ಇಟ್ಟಿರುವ ವಿಶ್ವಾಸದ ಮೂಲಕ ನೀವೆಲ್ಲರೂ ದೇವರ ಮಕ್ಕಳಾಗಿದ್ದೀರಿ. ಹೇಗೆಂದರೆ, ಕ್ರಿಸ್ತ ಯೇಸುವಿನಲ್ಲಿ ಒಂದಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡಿರುವ ನೀವೆಲ್ಲರೂ ಕ್ರಿಸ್ತಂಬರರಾಗಿದ್ದೀರಿ. ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದಾಗಿದ್ದೀರಿ. ಎಂದೇ, ಇನ್ನು ಮೇಲೆ ಯೆಹೂದ್ಯ-ಯೆಹೂದ್ಯನಲ್ಲದವ, ದಾಸ, ಧಣಿ, ಗಂಡು-ಹೆಣ್ಣು ಎಂಬ ಭೇದವಿಲ್ಲ. ನೀವು ಕ್ರಿಸ್ತ ಯೇಸುವಿಗೆ ಸೇರಿದವರಾಗಿದ್ದರೆ ಅಬ್ರಹಾಮನ ಸಂತತಿಯೂ ಹಾಗಿದ್ದೀರಿ; ದೈವ ವಾಗ್ದಾನದ ಪ್ರಕಾರ ವಾರಸುದಾರರು ಆಗಿದ್ದೀರಿ. 


ಕೀರ್ತನೆ: 105: 2-3, 4-5, 6-
ಶ್ಲೋಕ: ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು

ಶುಭಸಂದೇಶ: ಲೂಕ: 11: 27-28

ಯೇಸುಸ್ವಾಮಿ ಹೀಗೆ ಮಾತನಾಡುತ್ತಿದ್ದಾಗ ಜನಸಮೂಹದಿಂದ ಮಹಿಳೆಯೊಬ್ಬಳು, "ನಿಮ್ಮಲ್ಲಿ ಉದರದಲ್ಲಿ ಹೊತ್ತು, ನಿಮಗೆ ಮೊಲೆಯೂಡಿಸಿದ ತಾಯಿ ಭಾಗ್ಯವಂತಳು!" ಎಂದು ಕೂಗಿ ಹೇಳಿದಳು. ಅದಕ್ಕೆ ಯೇಸು, "ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವನು ಹೆಚ್ಚು ಭಾಗ್ಯವಂತನು!".

12.10.2018

ಸಾಧಾರಣ ಕಾಲದ 27ನೇ - ಶುಕ್ರವಾರ

ಮೊದಲನೇ ವಾಚನ: ಗಲಾತ್ಯರಿಗೆ: 3: 7-14



ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ: "ಅಬ್ರಹಾಮನು ದೇವರಲ್ಲಿ ವಿಶ್ವಾಸವಿಟ್ಟನು; ಈ ಕಾರಣ ದೇವರು ಆತನನ್ನು ತಮ್ಮ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು. ಆದ್ದರಿಂದ ಯಾರು ವಿಶ್ವಾಸದಿಂದ ಜೀವಿಸುತ್ತಾರೋ ಅವರೇ ಅಬ್ರಹಾಮನ ಮಕ್ಕಳೆಂದು ತಿಳಿದುಕೊಳ್ಳಿ. ಈ ವಿಶ್ವಾಸದ  ಮೂಲಕವೇ ಅನ್ಯಧರ್ಮೀಯರನ್ನು  ಕೂಡ ದೇವರು ತಮ್ಮ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ, ಎಂದು ಪವಿತ್ರಗ್ರಂಥದಲ್ಲಿ ಮೊದಲೇ ಬರೆಯಲಾಗಿತ್ತು. ಈ ಕಾರಣದಿಂದಲೇ ಅಬ್ರಹಾಮನಿಗೆ, "ನಿನ್ನ ಮುಖಾಂತರವೇ ಎಲ್ಲಾ ಜನಾಂಗಗಳು ಅಶೀರ್ವಾದವನ್ನು ಪಡೆಯುವುವು," ಎಂಬ ಶುಭವರ್ತಮಾನವನ್ನು ಮುಂಚಿತವಾಗಿ ತಿಳಿಸಲಾಯಿತು. ಹೀಗಿರಲಾಗಿ, ವಿಶ್ವಾಸದಿಂದ ಬಾಳುವವರು ವಿಶ್ವಾಸಿಯಾದ ಅಬ್ರಹಾಮನು ಪಡೆದ ಸೌಭಾಗ್ಯವನ್ನೇ ಪಡೆಯುವರು.

ಧರ್ಮಶಾಸ್ತ್ರದ ವಿಧಿನಿಯಮಗಳನ್ನೇ ಆಧಾರವಾಗಿಟ್ಟುಕೊಂಡು ಬಾಳುವವರು  ಶಾಪಗ್ರಸ್ತರು. ಏಕೆಂದರೆ, "ಧರ್ಮಗ್ರಂಥದಲ್ಲಿ ಬರೆದಿರುವುದನ್ನೆಲ್ಲಾ ಅನುದಿನವೂ ಕೈಗೊಂಡು ನಡೆಯದ ಪ್ರತಿಯೊಬ್ಬನೂ ಶಾಪಗ್ರಸ್ತನು," ಎಂದು ಲಿಖಿತವಾಗಿದೆ. ಇದಲ್ಲದೆ ಧರ್ಮಶಾಸ್ತ್ರ ವಿಧಿಸುವುದನ್ನು ಪೂರೈಸುವುದರಿಂದ ಯಾರೂ ದೇವರೊಡನೆ ಸತ್ಸಂಬಂಧ ಪಡೆಯಲಾರರು. ಎಂಬುದು ಸಹ ಸ್ಪಷ್ಟವಾಗಿದೆ. ಏಕೆಂದರೆ, "ಯಾರು ದೇವರೊಡನೆ ಸತ್ಸಂಬಂಧವನ್ನು ಹೊಂದಿರುತ್ತಾರೋ ಅವರು ವಿಶ್ವಾಸದಿಂದಲೇ ಸಜ್ಜೀವವನ್ನು ಪಡೆಯುತ್ತಾರೆ" ಎಂದು ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ. ಧರ್ಮಶಾಸ್ತ್ರ ವಿಶ್ವಾಸವನ್ನು ಆಧರಿಸಲಿಲ್ಲ. ಬದಲಿಗೆ, "ಅದರ ವಿಧಿನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕವಾಗಿ ಜೀವಿಸುತ್ತಾನೆ," ಎಂದು ಬರೆಯಲಾಗಿದೆ. "ಮರಕ್ಕೆ ತೂಗುಹಾಕಲಾದ ಪ್ರತಿ ಒಬ್ಬನೂ ಶಾಪಗ್ರಸ್ತನು," ಎಂದು ಬರೆದಿರುವಂತೆ, ನಮಗೋಸ್ಕರ ಕ್ರಿಸ್ತಯೇಸು ಶಾಪ ಸ್ವರೂಪಿಯಾಗಿ ಧರ್ಮಶಾಸ್ತ್ರದಲ್ಲಿ ಹೇಳಲಾಗಿರುವ ಶಾಪದಿಂದ ನಮ್ಮನ್ನು ಪಾರುಮಾಡಿದರು. ಇದರಿಂದಾಗಿ ಅಬ್ರಹಾಮನಿಗೆ ದೊರಕಿದ ಸೌಭಾಗ್ಯ, ಕ್ರಿಸ್ತಯೇಸುವಿನ ಮುಖಾಂತರ ಅನ್ಯಧರ್ಮೀಯರಿಗೂ ದೊರಕುವಂತಾಯಿತು; ವಿಶ್ವಾಸದ ಮೂಲಕವಾಗಿ, ದೇವರು ವಾಗ್ದಾನ ಮಾಡಿದ ಪವಿತ್ರಾತ್ಮ ನಮಗೂ ದೊರಕುವಂತಾಯಿತು.

ಕೀರ್ತನೆ: 111: 1ಬಿ-2, 3-4, 5-6
ಶ್ಲೋಕ: ತನ್ನೊಡಂಬಡಿಕೆಯ ಚಿರ ನೆನಪಿರುವುದು ಪ್ರಭುವಿಗೆ.

ಶುಭಸಂದೇಶ: ಲೂಕ: 11: 15-26

ಆದರೆ ಅವರಲ್ಲಿ ಕೆಲವರು, "ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ," ಎಂದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಸ್ವರ್ಗದಿಂದ ಒಂದು ಅದ್ಭುತ ಕಾರ್ಯವನ್ನು ಮಾಡಿ ತೋರಿಸುವಂತೆ ಕೇಳಿದರು. ಅವರ ಆಲೋಚನೆಗಳನ್ನು ಅರಿತುಕೊಂಡ ಯೇಸು, "ಅಂತಃ ಕಲಹದಿಂದ ಒಡೆದು ಹೋಗಿರುವ ಪ್ರತಿಯೊಂದು ರಾಜ್ಯ ನಾಶವಾಗುವುದು; ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಗುವುವು. ಅಂತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ದ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೇ ಉಳಿದೀತು? ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ, ಎಂಬುದು ಸ್ಪಷ್ಟ. "ಬಲಿಷ್ಠನೊಬ್ಬನು ಸರ್ವಾಯುಧಗಳಿಂದ ಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯಲ್ಲಾ ಸುರಕ್ಷಿತವಾಗಿರುತ್ತದೆ. ಆದರೆ ಇವನಿಗಿಂದಲೂ ಬಲಿಷ್ಠನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು ಸುಲಿಗೆಯನ್ನು ಹಂಚಿಕೊಡುತ್ತಾನೆ. ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದುರಿಸುತ್ತಾನೆ," ಎಂದರು. ಯೇಸುಸ್ವಾಮಿ ಬೋಧನೆಯನ್ನು ಮುಂದುವರಿಸುತ್ತಾ, "ದೆವ್ವವು ಒಬ್ಬ ಮನುಷ್ಯನನ್ನು ಬಿಟ್ಟು ತೊಲಗಿದ ಮೇಲೆ ನೆಲೆಯನ್ನು ಹುಡುಕುತ್ತಾ ಒಣಗಾಡಿನಲ್ಲಿ ಅಲೆದಾಡುತ್ತದೆ. ಅದಕ್ಕೆ ನೆಲೆ ಸಿಗದ ಕಾರಣ ಅದು, ’ನಾನು ಬಿಟ್ಟು ಬಂದ ನನ್ನ ಮನೆಗೇ ಹಿಂದಿರುಗುತ್ತೇನೆ.’ ಎಂದುಕೊಳ್ಳುತ್ತದೆ. ಅದು ಮರಳಿ ಬಂದಾಗ, ಮನೆ ಗುಡಿಸಿರುವುದನ್ನು ಎಲ್ಲವೂ ಚೊಕ್ಕಟವಾಗಿರುವುದನ್ನು ಕಾಣುತ್ತದೆ. ಪುನಃ ಹೊರಟು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಅವು ಆ ಮನುಷ್ಯನ ಒಳಹೊಕ್ಕು ನೆಲೆಸುತ್ತವೆ. ಕೊನೆಗೆ ಅವನ ಪರಿಸ್ಥಿತಿ ಪೂರ್ವ ಸ್ಥಿತಿಗಿಂತಲೂ ಅಧೋಗತಿಗೆ ಇಳಿಯುತ್ತದೆ," ಎಂದರು.

ಚಿಂತನೆ: ಕೆಟ್ಟದನ್ನು ಹೊರ ಹಾಕುವುದು ಮಾತ್ರ ಮುಖ್ಯವಲ್ಲ, ಕೆಟ್ಟದ್ದು ಹೊರ ಹೋದ ಮೇಲೆ ಮನವು ಖಾಲಿ ಬೀಳದಂತೆ ಅಲ್ಲಿ ಒಳ್ಳೆಯದನ್ನು ತುಂಬುವುದೂ ಅಷ್ಟೇ ಮುಖ್ಯ.

11.10.2018

ಸಾಧಾರಣ ಕಾಲದ 27ನೇ - ಗುರುವಾರ

ಮೊದಲನೇ ವಾಚನ: ಗಲಾತ್ಯರಿಗೆ: 3: 1-5

ಎಲೈ ಮತಿಗೆಟ್ಟ ಗಲಾತಿಯರೇ, ನಿಮ್ಮನ್ನು ಮರುಳುಗೊಳಿಸಿದವರು ಯಾರು? ಯೇಸು ಕ್ರಿಸ್ತರು ಶಿಲುಬೆಯ ಮೇಲೆ ಪ್ರಾಣಾರ್ಪಣೆ ಮಾಡಿದನ್ನು ನಿಮ್ಮ ಕಣ್ಣೆದುರಿಗೇ ಚಿತ್ರಿತಗೊಳಿಸಲಿಲ್ಲವೇ? ನಿಮ್ಮ ಬಳಿ ಒಂದು ವಿಷಯವನ್ನು ಕೇಳಲಿಚ್ಚಿಸುತ್ತೇನೆ: ನೀವು ಪವಿತ್ರಾತ್ಮರನ್ನು ಪಡೆದುದು ಹೇಗೆ? ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಿದ್ದರಿಂದಲೋ? ಇಲ್ಲವೇ ಶುಭಸಂದೇಶವನ್ನು ಕೇಳಿ ವಿಶ್ವಾಸಿಸಿದ್ದರಿಂದಲೋ? ನೀವು ಪವಿತ್ರಾತ್ಮ ಸಂಬಂಧವಾದ ಆಧ್ಯಾತ್ಮಿಕ ಜೀವನವನ್ನು ಪ್ರಾರಂಬಿಸಿಯೂ ಈಗ ಅದನ್ನು ಕೇವಲ ದೇಹ ಸಂಬಂಧವಾದ ವಿಧಿಯಿಂದ ಪೂರೈಸಬೇಕೆಂದಿದ್ದೀರೋ? ನೀವು ಅಷ್ಟು ಮತಿಗೆಟ್ಟವರೋ? ನಿಮ್ಮ ಅನುಭವಗಳೆಲ್ಲವೂ ವ್ಯರ್ಥವಾದುವು ಎಂದು ಹೇಳೋಣವೇ? ದೇವರು ನಿಮಗೆ ಪವಿತ್ರಾತ್ಮರನ್ನು ಪ್ರಧಾನ ಮಾಡಿ ಮಹತ್ಕಾರ್ಯಗಳನ್ನು ಎಸಗುತ್ತಾ ಬಂದಿದ್ದಾರೆ. ಹಾಗೆ ಮಾಡುತ್ತಿರುವುದು, ನೀವು ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಿದ್ದರಿಂದಲ್ಲ. ಶುಭಸಂದೇಶವನ್ನು ಕೇಳಿ ವಿಶ್ವಾಸ ಇಟ್ಟಿರುವುದರಿಂದ. 

ಲೂಕ: 1:65-70, 71-72, 73-75
ಶ್ಲೋಕ: ಸ್ತುತಿ ಸ್ತೋತ್ರ ಇಸ್ರಯೇಲಿನ ದೇವರಾದ ಸರ್ವೇಶ್ವರನಿಗೆ.

ಶುಭಸಂದೇಶ: ಲೂಕ: 11: 5-13

ಪುನಃ ಯೇಸುಸ್ವಾಮಿ ಶಿಷ್ಯರಿಗೆ, "ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನ ಮನೆಗೆ ನಡುರಾತ್ರಿಯಲ್ಲಿ ಹೋಗುತ್ತಾನೆಂದು ಭಾವಿಸೋಣ: ಅವನು, ’ಗೆಳೆಯಾ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು. ಪ್ರಯಾಣದಲ್ಲಿದ್ದ ನನ್ನ ಸ್ನೇಹಿತನೊಬ್ಬನು ಅನಿರೀಕ್ಷಿತವಾಗಿ ನನ್ನ ಮನೆಗೆ ಈಗ ತಾನೇ ಬಂದಿದ್ದಾನೆ. ಅವನಿಗೆ ಊಟಕ್ಕಿಡಲು ನನ್ನಲ್ಲಿ ಏನೂ ಇಲ್ಲ,’ ಎಂದು ಕೇಳಲು, ಈ ಸ್ನೇಹಿತ ಒಳಗಿನಿಂದಲೇ, ’ನನಗೆ ತೊಂದರೆಕೊಡಬೇಡ; ಬಾಗಿಲು ಹಾಕಿ ಆಗಿದೆ; ನನ್ನ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ಬಂದು ಕೊಡುವುದ್ದಕ್ಕಾಗುವುದಿಲ್ಲ,’ ಎಂದು ಉತ್ತರ ಕೊಡುವುದು ಸಹಜವಲ್ಲವೇ? ಆದರೂ, ತನ್ನ ಗೆಳೆಯ ಇವನು ಎಂದು ಎದ್ದುಬಂದು ಕೊಡದೆ ಇದ್ದರೂ, ನಾಚಿಕೆ ಪಡದೆ ಕೇಳುತ್ತಲೇ ಇದ್ದಾನಲ್ಲ ಎಂಬ ಕಾರಣದಿಂದಾದರು ಅವನು ಎದ್ದು ಬಂದು ಕೇಳಿದಷ್ಟನ್ನು ಕೊಡುತ್ತನೆಂಬುದು ನಿಜ. ಆದುದರಿಂದ ’ಕೇಳಿರಿ ನಿಮಗೆ ದೊರಕುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು.’ "ನಿಮ್ಮಲ್ಲಿ ಯಾವ ತಂದೆತಾನೆ ತನ್ನ ಮಗ ಮೀನನ್ನು ಕೇಳಿದರೆ ಹಾವನ್ನು ಕೊಡುತ್ತಾನೆ? ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುತ್ತಾನೆ? ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅವಕ್ಕಿಂತಲೂ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮರನ್ನೇ ಅನುಗ್ರಹಿಸ ಬಲ್ಲರು! ಎಂದು ನಾನು ನಿಮಗೆ ಹೇಳುತ್ತೇನೆ."

10.10.2018

ಸಾಧಾರಣ ಕಾಲದ ೨೭ನೇ ಬುಧವಾರ

ಮೊದಲನೇ ವಾಚನ: ಗಲಾತ್ಯರಿಗೆ  2:1-2, 7-14

ಹದಿನಾಲ್ಕು ವರ್ಷಗಳು ಕಳೆದ ಮೇಲೆ ತೀತನನ್ನು ಕರೆದುಕೊಂಡು ಬಾರ್ನಬನ ಜೊತೆಯಲ್ಲಿ ಪುನಃ ಜೆರುಸಲೇಮಿಗೆ ಹೋದೆ. ದೇವಪ್ರೇರಣೆಗೆ ಅನುಸಾರವಾಗಿಯೇ ಅಲ್ಲಿಗೆ ಹೋದೆ. ಅನ್ಯಧರ್ಮಿಯರಿಗೆ ನಾನು ಸಾರುತ್ತಿದ್ದ ಸಂದೇಶ ಏನೆಂಬುದನ್ನು ಅಲ್ಲಿದ್ದ ಕೆಲವು ಗಣ್ಯವ್ಯಕ್ತಿಗಳಿಗೆ ಪ್ರತ್ಯೇಕವಾಗಿ ತಿಳಿಸಿದೆ. ಅದುವರೆಗೆ ನಾನು ಪಟ್ಟ ಶ್ರಮವಾಗಲೀ, ಈಗ ಪಡುತ್ತಿರುವ ಶ್ರಮವಾಗಲೀ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಹೀಗೆ ಮಾಡಿದೆ. ಬದಲಾಗಿ, ಯೆಹೂದ್ಯರಿಗೆ ಶುಭಸಂದೇಶವನ್ನು ಸಾರುವ ಸೇವೆಯನ್ನು ಪೇತ್ರನಿಗೆ ವಹಿಸಿಕೊಟ್ಟಂತೆಯೇ ಯೆಹೂದ್ಯರಲ್ಲದವರಿಗೆ ಶುಭಸಂದೇಶವನ್ನು ಸಾರುವ ಸೇವಾಕಾರ್ಯವನ್ನು ದೇವರು ನನಗೆ ವಹಿಸಿಕೊಟ್ಟಿದ್ದಾರೆ. ಹೌದು, ಯೆಹೂದ್ಯರಿಗೆ ಪ್ರೇಷಿತನಾಗುವಂತೆ ಪೇತ್ರನನ್ನು ಪ್ರೇರೇಪಿಸಿದ ದೇವರು, ಯೆಹೂದ್ಯರಲ್ಲದವರಿಗೆ ಪ್ರೇಷಿತನಾಗಲು ನನನ್ನು ಪ್ರೇರೇಪಿಸಿದ್ದಾರೆ. ನನಗೆ ಕೊಡಲಾಗಿದ್ದ ಈ ವಿಶೇಷ ವರವನ್ನು ಮನಗೊಂಡು ಸಭಾಸ್ತಂಬಗಳೆಂದು ಪರಿಗಣಿತರಾದ ಯಕೋಬ, ಕೇಫ ಮತ್ತು ಯೊವಾನ್ನರು ನನಗೂ ಬಾರ್ನಬನಿಗೂ ಕೈಯಲ್ಲಿ ಕೈಯನ್ನಿಟ್ಟು ಅನ್ಯೋನ್ಯತೆಯನ್ನು ಸೂಚಿಸಿದರು. ಅಲ್ಲದೆ, "ನೀವು ಯೆಹೂದ್ಯರಲ್ಲದವರ ಬಳಿಗೆ ಹೋಗಿರಿ, ನಾವು ಯೆಹೂದ್ಯರ ಬಳಿಗೆ ಹೋಗುತ್ತೇವೆ,"  ಎಂದೂ  ಹೇಳಿದರು. ಅವರಲ್ಲಿದ್ದ ಬಡಬಗ್ಗರಿಗೆ ಮರೆಯದೆ ನೆರವಾಗಬೇಕೆಂಬ ಒಂದು ವಿಷಯವನ್ನು ಮಾತ್ರ ಕೇಳಿಕೊಂಡರು. ನಾನು ಮಾಡಬೇಕೆಂದು  ಎಣಿಸಿದುದು ಅದೇ ಆಗಿತ್ತು. ಆದರೆ ಕೇಫನು ಅಂತಿಯೋಕ್ಯಕ್ಕೆ ಬಂದಾಗ ಆತನು ತಪ್ಪಿತಸ್ಥನೆಂಬುದು ಸಿದ್ಧವಾಗಿದ್ದುದರಿಂದ ನಾನು ಆತನನ್ನು ಮುಖಾಮುಖಿಯಾಗಿ ಖಂಡಿಸಿದೆ. ಯಕೋಬನ ಕಡೆಯಿಂದ ಕೆಲವು ಸಹೋದರರು ಬರುವುದಕ್ಕೆ ಮುಂಚೆ ಆತನು ಅನ್ಯಧರ್ಮೀಯರೊಡನೆ ಊಟ ಮಾಡುತ್ತಿದ್ದನು. ಆದರೆ ಅವರು ಬಂದ ಮೇಲೆ ಸುನ್ನತಿ ಪರವಾದಿಗಳಿಗೆ ಅಂಜಿ ಅನ್ಯಧರ್ಮೀಯರಿಂದ ದೂರವಾದನು. ಅಂತೆಯೇ, ಕೇಫನ ಸಂಗಡ ಇದ್ದ ಮಿಕ್ಕ ಯೆಹೂದ್ಯರು ಕಪಟತನದಿಂದ ವರ್ತಿಸಿದರು. ಇವರ ವರ್ತನೆಗೆ ಬಾರ್ನಬನೂ ಸಹ ಮಾರುಹೋದನು.  ಅವರ ಈ ನಡತೆ, ಶುಭಸಂದೇಶದ ಸತ್ಯಕ್ಕೆ ಅನುಗುಣವಾದುದಲ್ಲ ಎಂದು ನನಗೆ ಮನದಟ್ಟಾಯಿತು. ಆಗ ನಾನು ಅವರೆಲ್ಲರ ಸಮ್ಮುಖದಲ್ಲೇ ಕೇಫನಿಗೆ: "ನೀನು ಯೆಹೂದ್ಯನಾಗಿದ್ದೂ ಯೆಹೂದ್ಯರಂತೆ ನಡೆಯದೆ ಅನ್ಯಧರ್ಮೀಯರಂತೆ ನಡೆದುಕೊಳ್ಳುತ್ತ ಇದ್ದಿಯಲ್ಲವೇ? ಹೀಗಿರುವಲ್ಲಿ ಅನ್ಯಧರ್ಮೀಯರು ಯೆಹೂದ್ಯರಂತೆ ನಡೆದುಕೊಳ್ಳಬೇಕೆಂದು ನೀನು ಒತ್ತಾಯಪಡಿಸುವುದಾದರೂ ಹೇಗೆ?" ಎಂದು ಕೇಳಿದೆ.

ಕೀರ್ತನೆ:117:1bc,2
ಶ್ಲೋಕ: ವಿಶ್ವದ ಎಲ್ಲೆಡೆಗಳಿಗೂ ಹೋಗಿ ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ.

ಶುಭಸಂದೇಶ: ಲೂಕ  11:1-4

ಒಮ್ಮೆ ಯೇಸುಸ್ವಾಮಿ ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡುತ್ತಾ ಇದ್ದರು. ಅವರ ಪ್ರಾರ್ಥನೆ ಮುಗಿದ ಮೇಲೆ ಶಿಷ್ಯರಲ್ಲಿ ಒಬ್ಬನು, "ಪ್ರಭುವೇ ಯೊವಾನ್ನನು ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಿದ ಹಾಗೆ ನಮಗೂ ಕಲಿಸಿಕೊಡಿ," ಎಂದನು. ಅದಕ್ಕೆ ಯೇಸು ಇಂತೆಂದರು. "ನೀವು ಹೀಗೆ ಪ್ರಾರ್ಥನೆಮಾಡಬೇಕು: 'ತಂದೆಯೇ, ನಿಮ್ಮ ಪವಿತ್ರನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ. ನಮಗೆ ಅಗತ್ಯವಾದ ಅಹಾರವನ್ನು ಅನುದಿನವೂ ಕೊಡಿ. ನಮಗೆ ತಪ್ಪು ಮಾಡಿದ ಪ್ರತಿಯೊಬ್ಬನನ್ನು ನಾವು  ಕ್ಷಮಿಸುವುದರಿಂದ, ನಮ್ಮ ಪಾಪಗಳನ್ನು ಕ್ಷಮಿಸಿರಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ."

09.10.2018

ಸಾಧಾರಣ ಕಾಲದ 27ನೇ ಮಂಗಳವಾರ

ಮೊದಲನೇ ವಾಚನ: ಗಲಾತ್ಯರಿಗೆ 1:13-24

ಹಿಂದೊಮ್ಮೆ ನಾನು ಯೆಹೂದ್ಯ ಮತಸ್ಥನಾಗಿದ್ದಾಗ ನನ್ನ ನಡತೆ ಹೇಗಿತ್ತೆಂದು ನೀವು ಚೆನ್ನಾಗಿ ಬಲ್ಲಿರಿ. ಆಗ ನಾನು ದೇವರ ಸಭೆಯನ್ನು ಕ್ರೂರವಾಗಿ ಹಿಂಸಿಸಿದೆ; ಅದನ್ನು ಧ್ವಂಸಮಾಡಲು ಪ್ರಯತ್ನಿಸಿದೆ. ಇದಲ್ಲದೆ,  ನಾನು ನನ್ನ ಪೂರ್ವಜರ ಮತ ಸಂಪ್ರದಾಯಗಳಲ್ಲಿ ಅತ್ಯಧಿಕ ನಿಷ್ಟೆಯುಳ್ಳವನಾಗಿದ್ದೆ. ಯೆಹೂದ್ಯ ಮತಾಚರಣೆಯಲ್ಲಿ ಅನೇಕ ಸಮವಯಸ್ಕರಿಗಿಂತ ಎಷ್ಟೋ ಮುಂದಾಗಿದ್ದೆ. ಆದರೆ, ನಾನಿನ್ನು ತಾಯಿಯ ಗರ್ಭದಲ್ಲಿ ಇದ್ದಾಗಲೇ ದೇವರು ನನ್ನನ್ನು ತಮ್ಮ ಅನುಗ್ರಹದಿಂದ ಆರಿಸಿಕೊಂಡು ತಮ್ಮ ಸೇವೆಗೆ ಕರೆದರು. ನಾನು ಯೆಹೂದ್ಯರಲ್ಲದವರಿಗೆ ಶುಭಸಂದೇಶವನ್ನು ಸಾರಬೇಕೆಂದು ದೇವರು ತಮ್ಮ ಮಗನನ್ನು ನನಗೆ ಶ್ರುತಪಡಿಸಿದರು. ಆಗ ಸಲಹೆಗಾಗಿ ನಾನು ಯಾರ ಬಳಿಗೂ ಹೋಗಲಿಲ್ಲ. ನನಗಿಂತ ಮುಂಚಿತವಾಗಿ ಪ್ರೇಷಿತರಾದವರನ್ನು ಕಾಣಲೆಂದು ನಾನು ಜೆರುಸಲೇಮಿಗೂ ಹೋಗಲಿಲ್ಲ. ಬದಲಿಗೆ, ನೇರವಾಗಿ ಅರೇಬಿಯಾಕ್ಕೆ ಹೋದೆ, ಅಲ್ಲಿಂದ ಡಮಸ್ಕಸ್ ನಗರಕ್ಕೆ ಹಿಂದಿರುಗಿದೆ. ಮೂರು ವರ್ಷಗಳ ನಂತರವೇ ಕೇಫನನ್ನು ಕಂಡು ಮಾತನಾಡಲು ಜೆರುಸಲೇಮಿಗೆ ಹೋದೆ; ಹದಿನೈದು ದಿನ ಅತನೊಂದಿಗೆ ತಂಗಿದ್ದೆ. ಅಗ, ಉಳಿದ ಪ್ರೇಷಿತರಲ್ಲಿ ಪ್ರಭುವಿನ ಸಹೋದರ ಯಕೋಬನಲ್ಲದೆ ಬೇರೆ ಯಾವ ಪ್ರೇಷಿತನೂ ನಾನು ಕಾಣಲಿಲ್ಲ. ನಾನು ನಿಮಗೆ ಬರೆಯುವ ಸಂಗತಿಗಳು ಸುಳ್ಳಲ್ಲ ಎಂಬುದಕ್ಕೆ ದೇವರೇ ಸಾಕ್ಷಿ. ಅನಂತರ ನಾನು ಸಿರಿಯ ಮತ್ತು ಸಿಲಿಸಿಯ ಪ್ರಾಂತ್ಯಗಳಿಗೆ ಹೋದೆ. ಆಗ ಜುದೇಯ ಪ್ರಾಂತ್ಯದಲ್ಲಿದ್ದ ಕ್ರೈಸ್ತ ಸಭೆಳಿಗೆಗೆ ನನ್ನ ಪರಿಚಯವಾಗಿರಲಿಲ್ಲ. "ಹಿಂದೊಮ್ಮೆ ನಮ್ಮನ್ನು ಹಿಂಸಿಸುತ್ತಿದ್ದವನು, ತಾನು ನಾಶ ಮಾಡಲೆತ್ನಿಸಿದ ವಿಶ್ವಾಸವನ್ನೇ ಈಗ ಪ್ರಚಾರ ಮಾಡುತ್ತಿದ್ದಾನೆ', ಎಂಬ ಸುದ್ಧಿಯನ್ನು ಮಾತ್ರ ಕೇಳಿದರು. ಈ ಕಾರಣ ನನ್ನನ್ನು ಕುರಿತು ಅವರು ದೇವರನ್ನು ಕೊಂಡಾಡುತ್ತಿದ್ದರು.


ಕೀರ್ತನೆ:139:1b-3, 13-14ab, 14c-15
ಶ್ಲೋಕ: ಪ್ರಭು, ನಡೆಸೆನ್ನನು ಆ ಸನಾತನ ಪಥದಲಿ.

ಶುಭಸಂದೇಶ: ಲೂಕ 10:38-42 

ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಳೆಂಬ ಮಹಿಳೆ ಅವರನ್ನು ತಮ್ಮ ಮನೆಗೆ ಆಮಂತ್ರಿಸಿದಳು. ಆಕೆಗೆ ಮರಿಯಳೆಂಬ ಸೋದರಿ ಇದ್ದಳು ಈಕೆ ಪ್ರಭುವಿನ ಪಾದತಳದಲ್ಲಿ ಕುಳಿತುಕೊಂಡು ಅವರ ಭೋಧನೆಯನ್ನು ಆಲಿಸುತ್ತಿದ್ದಳು. ಮಾರ್ತಳಾದರೋ, ಅತಿಥಿ ಸತ್ಕಾರದ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, "ಪ್ರಭೂ, ನನ್ನ ಸೋದರಿ  ಈ ಕೆಲಸವನ್ನೆಲ್ಲಾ ನನ್ನೊಬ್ಬಳಿಗೇ ಬಿಟ್ಟಿದ್ದಾಳೆ ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ," ಎಂದಳು. ಯೇಸು ಆಕೆಗೆ ಪ್ರತ್ಯುತ್ತರವಾಗಿ, "ಮಾರ್ತ, ಮಾರ್ತ, ನೀನು ಅನಾವಶ್ಯ ಚಿಂತೆ  ಪೇಚಾಟಗಳಿಗೆ ಒಳಗಾಗಿರುವೆ. ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು," ಎಂದರು.

ಚಿಂತನೆ : ಮ್ಯಾಕ್ಸ್ ಲುಕಾಡೊ ಎಂಬ ಚಿಂತಕರೊಬ್ಬರು ಹೇಳುತ್ತಾರೆ " ಕಹಿ ಮನಸ್ಸಿನ ಗದ್ದಲದ ಸೇವಕನಿಗಿಂತ  ಪ್ರಾಮಾಣಿಕನ ಮೌನ ಸೇವೆ ದೇವರಿಗೆ  ಹೆಚ್ಚು ಪ್ರಿಯ."
"ದೇವರೇ, ನಾ ನಿನ್ನ ಆರಾಧಿಸುವ ಸಮಯ, ಶಕ್ತಿಯನ್ನು, ನಿನಗಾಗಿ ನಾ ಮಾಡುವ ಕಾರ್ಯಗಳು ಎಂದಿಗೂ ಕಸಿಯದಿರಲಿ" ಎಂಬುದೊಂದು ಪ್ರಾರ್ಥನೆಯೂ ಇದೆ. 

08.10.2018

ಸಾಧಾರಣ ಕಾಲದ 27ನೇ ಸೋಮವಾರ

ಮೊದಲನೇ ವಾಚನ: ಗಲಾತ್ಯರಿಗೆ 1:6-12 

ಕ್ರಿಸ್ತಯೇಸುವಿನ ಅನುಗ್ರಹದಿಂದ ನಿಮ್ಮನ್ನು ಕರೆದ ದೇವರನ್ನು ನೀವಿಷ್ಟು ಬೇಗನೆ ತ್ಯಜಿಸಿ, ಬೇರೊಂದು 'ಶುಭಸಂದೇಶ’ವನ್ನು ಅಂಗೀಕರಿಸುತ್ತಿರುವರೆಂದು ಕೇಳಿ ನನಗೆ ಆಶ್ಚರ್ಯವಾಗುತ್ತಿದೆ. ವಾಸ್ತವವಾಗಿ, ಬೇರೆ ಯಾವ ಶುಭಸಂದೇಶವೂ ಇಲ್ಲ. ಆದರೆ ಕೆಲವರು ನಿಮ್ಮಲ್ಲಿ ಗೊಂದಲವೆಬ್ಬಿಸಿ, ಕ್ರಿಸ್ತ ಯೇಸುವಿನ ಶುಭಸಂದೇಶವನ್ನು ಮಾರ್ಪಡಿಸಲು ಯತ್ನಿಸುತ್ತಾ ಇದ್ದಾರೆ. ನಾವು ನಿಮಗೆ ಬೋಧಿಸಿದ ಶುಭಸಂದೇಶಕ್ಕೆ ವಿರುದ್ಧವಾದ ಸಂದೇಶವನ್ನು ನಾವೇ ಆಗಲಿ, ಸ್ವರ್ಗದಿಂದ ಇಳಿದ ದೇವದೂತನೇ ಆಗಲಿ, ಯಾರೇ ಆಗಲಿ ಬೋಧಿಸಿದರೆ ಅವನು ಶಾಪಗ್ರಸ್ತನಾಗಲಿ! ನೀವು ಅಂಗೀಕರಿಸಿದ ಶುಭಸಂದೇಶಕ್ಕೆ ವಿರುದ್ಧವಾದ ಸಂದೇಶವನ್ನು ಸಾರುವವನು ಶಾಪಗ್ರಸ್ತನಾಗಲಿ ಎಂದು ನಾನು ಮೊದಲು ಹೇಳಿದಂತೆ, ಮತ್ತೊಮ್ಮೆ ಒತ್ತಿ ಹೇಳುತ್ತೇನೆ. ಇದರಿಂದ ನಾನು ಯಾರನ್ನು ಒಲಿಸಿಕೊಳ್ಳಲು ಯತ್ನಿಸುತಿದ್ದೇನೆ? ದೇವರನ್ನೋ? ನಾನು ಮಾನವರ ಮೆಚ್ಚುಗೆಯನ್ನು ಗಳಿಸಲು ಯತ್ನಿಸುತಿಲ್ಲ; ನಾನಿನ್ನೂ ಜನರ ಮೆಚ್ಚುಗೆಯನ್ನು ಗಳಿಸುವವನೇ ಆಗಿದ್ದರೆ  ಕ್ರಿಸ್ತಯೇಸುವಿನ ದಾಸನಾಗಿರಲು ಸಾಧ್ಯವೇ ಇಲ್ಲ. ಪ್ರಿಯ ಸಹೋದರರೇ, ನಾನು ಬೋಧಿಸಿದ ಶುಭಸಂದೇಶವು ಮಾನವ ಕಲ್ಪಿತ ಸಂದೇಶ ಅಲ್ಲವೆಂದು ನಿಮಗೆ ಮನದಟ್ಟು ಮಾಡಲು ಬಯಸುತ್ತೇನೆ. ಈ ಶುಭಸಂದೇಶವನ್ನು ನಾನು ಮನುಷ್ಯರಿಂದ ಪಡೆಯಲಿಲ್ಲ; ಅದನ್ನು ಯಾರಿಂದಲೂ ಕಲಿತುಕೊಳ್ಳಲಿಲ್ಲ. ಯೇಸುಕ್ರಿಸ್ತರೇ ನನಗದನ್ನು ಶ್ರುತಪಡಿಸಿದರು.

ಕೀರ್ತನೆ: 111:1b-2, 7-8, 9 & 10c
ಶ್ಲೋಕ: ತನ್ನೊಡಂಬಡಿಕೆಯ ಚಿರ ನೆನಪಿಸುವುದು ಪ್ರಭುವಿಗೆ.

ಶುಭಸಂದೇಶ: ಲೂಕ 10:25-37

ಒಬ್ಬ ಶಾಸ್ತ್ರಜ್ಞನು ಎದ್ದು ಯೇಸುಸ್ವಾಮಿಯನ್ನು ಪರೀಕ್ಷಿಸುವ ಉದ್ದೇಶದಿಂದ " ಬೋಧಕರೇ, ಅಮರ ಜೀವ ನನಗೆ ಪ್ರಾಪ್ತಿ ಆಗಬೇಕಾದರೆ ನಾನು ಮಾಡಬೇಕಾದುದು ಏನು?" ಎಂದು ಕೇಳಿದನು. ಅದಕ್ಕೆ ಯೇಸು, "ಧರ್ಮಶಾಸ್ತ್ರದಲ್ಲಿ ಏನು ಬರೆದಿದೆ? ಹೇಗೆ ಪಠಿಸುತ್ತೀಯೆ?" ಎಂದು ಪ್ರಶ್ನೆ ಹಾಕಿದರು. ಅವನು, "ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು" ಎಂದಿದೆ," ಎಂದು ಉತ್ತರಕೊಟ್ಟನು. ಯೇಸು "ಸರಿಯಾಗಿ ಉತ್ತರಕೊಟ್ಟೆ, ಅದರಂತೆ ಮಾಡು. ನಿನಗೆ ಅಮರ ಜೀವ ಲಭಿಸುವುದು," ಎಂದರು. ಆದರೆ ಆ ಶಾಸ್ತ್ರಜ್ಞನು ತನ್ನನ್ನು ತಾನೇ ಸಮರ್ಥಿಸಿಕೊಳ್ಳಲು, "ನನ್ನ ನೆರೆಯವನು ಯಾರು? ಎಂದು ಯೇಸುವನ್ನು ಮತ್ತೆ ಪ್ರಶ್ನಿಸಿದನು. ಯೇಸು ಅವನಿಗೆ ಹೀಗೆಂದು ವಿವರಿಸಿದರು: "ಒಬ್ಬನು ಜೆರುಸಲೇಮಿನಿಂದ ಇಳಿದು ಜೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ದರೋಡೆಗಾರರ ಕೈಗೆ ಸಿಕ್ಕಿಬಿದ್ದ. ದರೋಡೆಗಾರರು ಅವನನ್ನು ಸುಲಿಗೆಮಾಡಿ, ಹೊಡೆದು ಬಡಿದು, ಅರೆಜೀವ ಮಾಡಿ, ಅಲ್ಲೇ ಬಿಟ್ಟುಹೋದರು.ಅದೇ ಮಾರ್ಗವಾಗಿ ಒಬ್ಬ ಯಾಜಕನು ಹಾದು ಹೋಗಬೇಕಾಗಿ ಬಂದಿತು. ಈತನು,  ಅವನನ್ನು ಕಂಡದ್ದೇ ಆಚೆ ಬಳಸಿಕೊಂಡು ಹೋದ. ಹಾಗೆಯೇ ಲೇವಿಯೊಬ್ಬನು ಆ ಸ್ಥಳಕ್ಕೆ ಬಂದು ಅವನನ್ನು ನೋಡಿ, ಹಾಗೆಯೇ ಬಳಸಿಕೊಂಡು ಹೋದ. ಆದರೆ ಆ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದ ಒಬ್ಬ ಸಮಾರಿಯದವನು ಅಲ್ಲಿಗೆ ಬಂದಾಗ, ಅವನನ್ನು ಕಂಡು ಕನಿಕರಪಟ್ಟು, ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣಿಯನ್ನೂ ದ್ರಾಕ್ಷಾರಸವನ್ನೂ ಹಚ್ಚಿ ಅವುಗಳಿಗೆ ಬಟ್ಟೆ ಕಟ್ಟಿದ. ಅವನನ್ನು ತನ್ನ ಸ್ವಂತ ವಾಹಕ ಪಶುವಿನ ಮೇಲೆ  ಹತ್ತಿಸಿಕೊಂಡು ಒಂದು ಛತ್ರಕ್ಕೆ ಕರೆದುಕೊಂಡು ಹೋಗಿ ಆರೈಕೆ ಮಾಡಿದ. ಮಾರನೆಯ ದಿನ ಎರಡು ದಿನಾರಿ ನಾಣ್ಯಗಳನ್ನು ಛತ್ರದವನಿಗೆ ಕೊಟ್ಟು, 'ಇವನನ್ನು ಚೆನ್ನಾಗಿ ನೋಡಿಕೊ, ಇದಕಿಂತ ಹೆಚ್ಚು ವೆಚ್ಚ ಆದರೆ ನಾನು ಹಿಂದಿರುಗಿ ಬರುವಾಗ ಸಲ್ಲಿಸುತ್ತೇನೆ'   ಎಂದ. ದರೋಡೆಗಾರರ ಕೈಗೆ ಸಿಕ್ಕಿದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ?" ಎಂದು ಯೇಸು ಆ ಶಾಸ್ತ್ರಜ್ಞನನ್ನು ಕೇಳಿದರು. ಅದಕ್ಕೆ ಅವನು , "ದಯೆ ತೋರಿದವನೇ ನೆರೆಯವನು," ಎಂದನು. ಆಗ ಯೇಸು, "ಹೋಗು, ನೀನು ಹಾಗೆಯೇ ಮಾಡು,"  ಎಂದು ಹೇಳಿದರು.

ಚಿಂತನೆ: "ಗಾಯಾಳುವಿಗೆ ಸಹಾಯ ಮಾಡುವ ಒಳ್ಳೆಯ ಉದ್ದೇಶ ಮತ್ತು ಜೊತೆಯಲ್ಲಿದ್ದ ಹಣ ಮಾತ್ರವಾಗಿದ್ದರೆ  ಸದಯ ಸಮಾರಿತನನ್ನು ಯಾರೂ ಇಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ". ಇಂಗ್ಲೆಂಡ್ ನ ಪ್ರಧಾನಿಯಾಗಿದ್ದ ಮಾಗರೆಟ್ ಟ್ಯಾಚರ್ ಹೇಳಿದ ಮಾತಿದು. ಇದರ ಅರ್ಥವಿಷ್ಟೇ, ಸಹಾಯ ಮಾಡಬೇಕು ಅನ್ನುವ ಆವನ ಉದ್ದೇಶ ಕಾರ್ಯರೂಪಕ್ಕೆ ಬಂದಾಗ ಮಾತ್ರ ಅದಕ್ಕೆ ಅರ್ಥ, ಇಲ್ಲವಾದರೆ ಅದು ಕೇವಲ ಒಂದು ಚಲಿಸುವ ಆಲೋಚನೆಯಷ್ಟೇ. 

07.10.2018

 ವರ್ಷದ 27ನೆಯ ಭಾನುವಾರ

ಮೊದಲನೆಯ ವಾಚನ : ಆದಿಕಾಂಡದಿಂದ ವಾಚನ      2: 18-24
ಅವರಿಬ್ಬರೂ ಒಂದೇ ಒಡಲಾಗಿ ಬಾಳುವರು.

ಅನಂತರ ದೇವರಾದ ಸರ್ವೇಶ್ವರ, ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ, ಅವನಿಗೆ ಸರಿಬೀಳುವ ಸಹಕಾರಿಯನ್ನು ಸೃಷ್ಟಿಮಾಡುವೆನು, ಎಂದರು. ಎಲ್ಲ ಭೂಜಂತುಗಳನ್ನೂ ಆಕಾಶದ ಪಕ್ಷಿಗಳನ್ನೂ ಮಣ್ಣಿನಿಂದ ನಿರ್ಮಿಸಿದ ಅವರು, ಮನುಷ್ಯನು ಇವುಗಳಿಗೆ ಏನೇನು ಹೆಸರಿಡುವನೋ ನೋಡೋಣವೆಂದು ಅವನ ಬಳಿಗೆ ಅವುಗಳನ್ನು ಬರಮಾಡಿದರು. ಆ ಮನುಷ್ಯನು ಒಂದೊಂದು ಪ್ರಾಣಿಗೆ ಯಾವ ಯಾವ ಹೆಸರಿಟ್ಟನೋ ಅದೇ ಅವುಗಳಿಗೆ ಹೆಸರಾಯಿತು. ಹೀಗೆ ಮನುಷ್ಯನು ಎಲ್ಲ ಸಾಕುಪ್ರಾಣಿಗಳಿಗೂ ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಹೆಸರಿಟ್ಟನು; ಆದರೆ ಅವನಿಗೆ ಸರಿಬೀಳುವ ಜೊತೆಗಾತಿ ಅವುಗಳಲ್ಲಿ ಕಾಣಿಸಲಿಲ್ಲ. ಹೀಗಿರುವಲ್ಲಿ ದೇವರಾದ ಸರ್ವೇಶ್ವರ ಈ ಮನುಷ್ಯನಿಗೆ ಗಾಢನಿದ್ರೆಯನ್ನು ಬರಮಾಡಿದರು. ಅವನು ನಿದ್ರಿಸುತ್ತಿರುವಾಗ ಅವರ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿದರು. ಆ ಎಲುಬನ್ನು ಮಹಿಳೆಯನ್ನಾಗಿ ಮಾಡಿ ಆಕೆಯನ್ನು ಅವನ ಬಳಿಗೆ ಬರಮಾಡಿದರು. ಅವನು ಆಕೆಯನ್ನು ನೋಡಿ ಹೀಗೆಂದನು:
ಸರಿ, ನನಗೀಗ ಇವಳು ನನ್ನೆಲುಬಿನ ಎಲುಬು, ನನ್ನೊಡಲಿನ ಒಡಲು
ನರನಿಂದ ಉತ್ಪತ್ತಿಯಾದಿವಳನ್ನು ನಾರಿಯೆಂದೇ ಕರೆವರು’.
ಈ ಕಾರಣ, ಪುರುಷರು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಒಡಲಾಗಿ ಬಾಳುವರು.
-ದೇವರ ವಾಕ್ಯವಿದು

ಕೀರ್ತನೆ                                                                                       128 : 1-2,3 4-5,6

ಶ್ಲೋಕ : ಪ್ರಭು ನಿನ್ನನ್ನು ಆಶೀರ್ವದಿಸಲಿ ಇಡೀ ಜೀವಮಾನವೆಲ್ಲ |

ಎರಡನೆಯ ವಾಚನ : ಹಿಬ್ರಿಯರಿಗೆ ಬರೆದ ಪತ್ರದಿಂದ ವಾಚನ    2 : 9-11

ಪವಿತ್ರಗೊಳಿಸುವವನಿಗೂ ಪವಿತ್ರರಾಗುವವರಿಗೂ ಒಬ್ಬನೇ ತಂದೆ.
ಸಹೋದರರೇ, ದೇವದೂತರಿಗಿಂತ ಕೊಂಚಕಾಲವೇ ತುಸು ತಗ್ಗಿಸಲಾದ ಒಬ್ಬರನ್ನು, ಅಂದರೆ, ಯೇಸುವನ್ನು ಮಾತ್ರ ನಾವು ಕಾಣುತ್ತೇವೆ. ಇವರು ಯಾತನಾಮರಣವನ್ನು ಅನುಭವಿಸಿದ್ದರಿಂದ ಘನಗೌರವವನ್ನೂ ಸಿರಿಮಹಿಮೆಯನ್ನೂ ಮುಕುಟವಾಗಿ ಪಡೆದುದನ್ನು ನಆವು ಕಾಣುತ್ತೇವೆ. ದೈವಾನುಗ್ರಹದಿಂದ ಎಲ್ಲಾ ಮಾನವರ ಕಲ್ಯಾಣಕ್ಕಾಗಿ ಅವರು ಸಾವನ್ನು ಅನುಭವಿಸಬೇಕಾಗಿತ್ತು. ಸಮಸ್ತವನ್ನೂ ಸೃಷ್ಟಿಸಿ ಪರಿಪಾಲಿಸಿಕೊಂಡು ಬರುವ ದೇವರು ತಮ್ಮ ಮಹಿಮೆಯಲ್ಲಿ ಪಾಲುಗೊಳ್ಳಲು ಮಕ್ಕಳನೇಕರನ್ನು ಕರೆತರುವಂತೆ ಉದ್ಧಾರ ಪ್ರವರ್ತಕರಾದ ಯೇಸುವನ್ನು ಹಿಂಸೆಬಾಧೆಗಳ ಮೂಲಕ ಪರಿಪೂರ್ಣವಾಗಿಸಿದ್ದು ಯುಕ್ತವೇ ಸರಿ. ಪವಿತ್ರಗೊಳಿಸುವವನಿಗೂ ಪವಿತ್ರರಾಗುವವರಿಗೂ ಒಬ್ಬನೇ ತಂದೆ. ಈ ಕಾರಣ, ಪವಿತ್ರಗೊಳಿಸುವ ಯೇಸು, ಪವಿತ್ರರಾಗುವವರನ್ನು ‘ಸಹೋದರರು’ ಎಂದು ಕರೆಯಲು ನಾಚಿಕೆಪಡಲಿಲ್ಲ.
  ದೇವರ ವಾಕ್ಯವಿದು.

ಘೋಷಣೆ                                                                                     ಯೊವಾನ್ನ 17:17
ಅಲ್ಲೆಲೂಯ, ಅಲ್ಲೆಲೂಯ !
ಇವರನ್ನು ಸತ್ಯಸಂಧರನ್ನಾಗಿಸಿ ನಿಮ್ಮ ಸೇವೆಗೆ ಮೀಸಲಾಗಿಡಿ;
ನಿಮ್ಮ ಮಾತೇ ಸತ್ಯ.
ಅಲ್ಲೆಲೂಯ !


ಶುಭಸಂದೇಶ : ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ   10 : 2-16

ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದಿರಲಿ.

ಫರಿಸಾಯರಲ್ಲಿ ಕೆಲವರು, ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೇ? ಎಂದು ಕೇಳಿದರು. ಯೇಸು, ಈ ವಿಷಯವಾಗಿ ಮೋಶೆ ನಿಮಗೆ ಏನೆಂದು ವಿಧಿಸಿದ್ದಾನೆ? ಎಂದು ಅವರನ್ನೇ ಪುನಃ ಪ್ರಶ್ನಿಸಿದರು. ಅದಕ್ಕೆ ಅವರು, ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟುಬಿಡಲು ಮೋಶೆ ಅನುಮತಿ ಇತ್ತಿದ್ದಾನೆ, ಎಂದರು. ಆಗ ಯೇಸು, ನಿಮ್ಮ ಹೃದಯ ಕಲ್ಲಾಗಿದ್ದುದರಿಂದಲೇ ಮೋಶೆ ಈ ನಿಯಮವನ್ನು ಬರೆದಿಟ್ಟನು. ಆದರೆ ಸೃಷ್ಟಿಯ ಆರಂಭದಿಂದಲೇ ‘ದೇವರು ಮನುಷ್ಯರನ್ನು ಗಂಡುಹೆಣ್ಣಾಗಿ ನಿರ್ಮಿಸಿದ್ದಾರೆ. ಈ ಕಾರಣದಿಂದ ಗಂಡನು ತಂದೆತಾಯಿಗಳನ್ನು ಬಿಟ್ಟು, ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು’ ಎನುತ್ತದೆ ಪವಿತ್ರಗ್ರಂಥ. ಹೀಗಿರುವಲ್ಲಿ ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರ. ಆದುದರಿಂದ ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದಿರಲಿ,” ಎಂದರು. ಅಂದು, ಮನೆಗೆ ಹೋದ ಬಳಿಕ ಶಿಷ್ಯರು, ಅದೇ ವಿಷಯವಾಗಿ ಯೇಸುವನ್ನು ವಿಚಾರಿಸಿದರು. ಅದಕ್ಕೆ ಅವರು, “ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವವನು ಆಕೆಗೆ ದ್ರೋಹ ಬಗೆದು ವ್ಯಭಿಚಾರಿಯಾಗುತ್ತಾನೆ. ಅಂತೆಯೇ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ವಿವಾಹವಾಗುವವಳು ವ್ಯಭಿಚಾರಿಣಿಯಾಗುತ್ತಾಳೆ,” ಎಂದರು. ಮತ್ತೆ ಕೆಲವರು, ತಮ್ಮ ಚಿಕ್ಕಮಕ್ಕಳನ್ನು ಮುಟ್ಟಿ ಹರಸಲೆಂದು ಅವುಗಳನ್ನು ಯೇಸುಸ್ವಾಮಿಯ ಬಳಿಗೆ ಕರೆತಂದರು. ಶಿಷ್ಯರು ಆ ಜನರನ್ನು ಗದರಿಸಿದರು. ಇದನ್ನು ಕಂಡ ಯೇಸು ಸಿಟ್ಟುಗೊಂಡು ಶಿಷ್ಯರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ. ಅವರನ್ನು ತಡೆಯಬೇಡಿ; ದೇವರ ಸಾಮ್ರಾಜ್ಯ ಇಂಥವರದೇ. ದೇವರ ಸಾಮ್ರಾಜ್ಯವನ್ನು ಶಿಶುಭಾವದಿಂದ ಅಂಗೀಕರಿಸದೆ ಇರುವವನು ಅದನ್ನು ಎಂದಿಗೂ ಸೇರಲಾರನು, ಇದು ನಿಶ್ಚಯ,” ಎಂದರು. ಅನಂತರ ಆ ಮಕ್ಕಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಗಳನ್ನಿರಿಸಿ ಹರಸಿದರು.
ಪ್ರಭು ಕ್ರಿಸ್ತ ಶುಭಸಂದೇಶವಿದು.

ಚಿಂತನೆ :  ಮಹಿಳೆಯೊಬ್ಬಳು ರಬ್ಬಿಯೊಬ್ಬರ ಬಂದು ಕೇಳುತ್ತಾಳೆ “ 6 ದಿನಗಳಲ್ಲಿ ಎಲ್ಲವನ್ನು ಸೃಷ್ಟಿಸಿದ ನಿಮ್ಮ ದೇವರು ನಂತರ ಏನು ಮಾಡುತ್ತಿದ್ದಾರೆ?  ಗುರು ಉತ್ತರಿಸುತ್ತಾರೆ, “ ಅಂದಿನಿಂದ ಭೂಲೋಕದಲ್ಲಿನ ವಿವಾಹ ಬಂಧನಗಳನ್ನು ಏರ್ಪಡಿಸುತ್ತಿದ್ದಾರೆ, ಆದ ವಿವಾಹಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ”
ಮಹಿಳೆ, “ಅಷ್ಟೆಯೇ? ಇಷ್ಟು ಸುಲಭ ಕೆಲಸವನ್ನು ನಾನೂ ಮಾಡಬುಹುದಲ್ಲವೇ?”
ಅದಕ್ಕೆ ಗುರು ನುಡಿಯುತ್ತಾರೆ, “ ನಿನಗೆ ಇದು ಸುಲಭವಿರಬಹುದು , ಆದರೆ ದೇವರು ಆ ಕೆಂಪು ಸಮುದ್ರವನ್ನು ಇಬ್ಭಾಗಿಸದಷ್ಟೇ ಪ್ರೀತಿ, ಕಾಳಜಿಯಿಂದ ಈ ಕಾರ್ಯವನ್ನೂ ಮಾಡುತ್ತಿದ್ದಾರೆ, ಅವರಿಗೆ ಸ್ತುತಿ ಸಲ್ಲಲಿ”

                                                            ಜಪಮಾಲೆ ರಾಣಿಯ ಹಬ್ಬ


10.09.2026 - ಆದುದರಿಂದ ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ಅವನಿಗೆ ಒಳಿತನ್ನೇ ಮಾಡಿರಿ. ಪ್ರತಿಯಾಗಿ ಪಡೆಯುವ ಆಶೆಯಿಡದೆ ಸಾಲಕೊಡಿ

  ಮೊದಲನೇ ವಾಚನ: 1 ಕೊರಿಂಥಿಯರಿಗೆ 8:1-7, 11-13 ವಿಗ್ರಹಗಳಿಗೆ ನೈವೇದ್ಯಮಾಡಿದ ಆಹಾರಪದಾರ್ಥಗಳ ವಿಷಯವಾಗಿ ನಾನು ಹೇಳುವುದೇನೆಂದರೆ: “ನಮಗೆಲ್ಲರಿಗೂ ಜ್ಞಾನೋದಯವಾಗಿದೆ” ...