15.03.2026 - ಯೇಸು ಎಂಬುವರು ಮಣ್ಣಿನ ಲೇಪಮಾಡಿ ನನ್ನ ಕಣ್ಣಿಗೆ ಹಚ್ಚಿದರು

 ಮೊದಲನೇ ವಾಚನ: 1 ಸಮುವೇಲ 16:1, 6-7, 10-13



ಸರ್ವೇಶ್ವರಸ್ವಾಮಿ ಸಮುವೇಲನಿಗೆ, “ನಾನು ಸೌಲನನ್ನು ಇಸ್ರಯೇಲರ ಅರಸನಾಗಿರುವುದಕ್ಕೆ ಅಯೋಗ್ಯನೆಂದು ತಳ್ಳಿಬಿಟ್ಟೆನಲ್ಲವೆ? ನೀನು ಅವನಿಗಾಗಿ ಎಷ್ಟರವರೆಗೆ ದುಃಖಿಸುತ್ತಿರುವೆ? ಕೊಂಬನ್ನು ಎಣ್ಣೆಯಿಂದ ತುಂಬಿಸಿಕೊಂಡು ಬಾ; ನಾನು ನಿನ್ನನ್ನು ಬೆತ್ಲೆಹೇಮಿನವನಾದ ಜೆಸ್ಸೆಯನ ಬಳಿಗೆ ಕಳುಹಿಸುತ್ತೇನೆ. ಅವನ ಮಕ್ಕಳಲ್ಲೊಬ್ಬನನ್ನು ಅರಸನನ್ನಾಗಿ ಆರಿಸಿಕೊಂಡಿದ್ದೇನೆ,” ಎಂದು ಹೇಳಿದರು. ಸಮುವೇಲನು ಎಲೀಯಾಬನನ್ನು ನೋಡಿ ತನ್ನಷ್ಟಕ್ಕೆ, “ನಿಶ್ಚಯವಾಗಿ ಸರ್ವೇಶ್ವರ ಅಭಿಷೇಕಕ್ಕೆ ಆರಿಸಿಕೊಂಡವನು ನನ್ನ ಮುಂದೆಯೇ ಇದ್ದಾನೆ,” ಎಂದುಕೊಂಡನು. ಆದರೆ ಸರ್ವೇಶ್ವರಸ್ವಾಮಿ ಸಮುವೇಲನಿಗೆ, “ನೀನು ಅವನ ಚೆಲುವಿಕೆಯನ್ನಾಗಲಿ ಎತ್ತರವನ್ನಾಗಲಿ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಸರ್ವೇಶ್ವರ ಮನುಷ್ಯರಂತೆ ಬಹಿರಂಗದ ತೋರಿಕೆಯನ್ನು ನೋಡುವುದಿಲ್ಲ; ಅಂತರಂಗವನ್ನೇ ವೀಕ್ಷಿಸುತ್ತಾನೆ,” ಎಂದರು. ಹೀಗೆ ಜೆಸ್ಸೆಯನು ತನ್ನ ಮಕ್ಕಳಲ್ಲಿ ಏಳು ಮಂದಿಯನ್ನೂ ಅವನ ಬಳಿಗೆ ಬರಮಾಡಿದರೂ ಅವನು, “ಸರ್ವೇಶ್ವರ ಇವರನ್ನು ಆರಿಸಿಕೊಳ್ಳಲಿಲ್ಲ,” ಎಂದು ನುಡಿದನು. ಅನಂತರ ಸಮುವೇಲನು ಜೆಸ್ಸೆಯನನ್ನು, “ನಿನ್ನ ಮಕ್ಕಳೆಲ್ಲಾ ಇಷ್ಟೇ ಮಂದಿಯೋ?” ಎಂದು ಕೇಳಿದನು. ಅವನು, “ಇವರೆಲ್ಲರಿಗಿಂತಲೂ ಚಿಕ್ಕವನು ಒಬ್ಬನಿದ್ದಾನೆ; ಅವನು ಕುರಿಮೇಯಿಸುವುದಕ್ಕೆ ಹೋಗಿದ್ದಾನೆ,” ಎಂದು ಉತ್ತರಕೊಟ್ಟನು.

ಆಗ ಸಮುವೇಲನು, “ಅವನನ್ನು ಇಲ್ಲಿಗೆ ಬರಮಾಡು; ಅವನು ಬರುವವರೆಗೂ ನಾವು ಊಟಕ್ಕೆ ಕುಳಿತುಕೊಳ್ಳಬಾರದು,” ಎಂದು ಹೇಳಿದನು. ಜೆಸ್ಸೆಯನು ಅವನನ್ನು ಕರೆದುತರಿಸಿದನು. ಅವನು ಕೆಂಬಣ್ಣದವನು, ಸುಂದರನೇತ್ರನು, ಹಾಗು ನೋಟಕ್ಕೆ ರಮಣೀಯನು. ಸರ್ವೇಶ್ವರ ಸಮುವೇಲನಿಗೆ, “ಎದ್ದು ಇವನನ್ನು ಅಭಿಷೇಕಿಸು; ನಾನು ಆರಿಸಿಕೊಂಡವನು ಇವನೇ,” ಎಂದು ಆಜ್ಞಾಪಿಸಿದರು. ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲಿ ಅಭಿಷೇಕಿಸಿದನು. ಕೂಡಲೆ ಸರ್ವೇಶ್ವರನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು. ಅನಂತರ ಸಮುವೇಲನು ರಾಮಾಕ್ಕೆ ಹೊರಟು ಹೋದನು.

ಕೀರ್ತನೆ: 23:1-3, 3-4, 5, 6
ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ಎನಗೆ, ಕುಂದುಕೊರತೆಗಳೆಲ್ಲಿಯವು ಎನಗೆ?

ಎರಡನೇ ವಾಚನ: ಎಫೆಸಿಯರಿಗೆ 5:8-14

ನೀವು ಹಿಂದೊಮ್ಮೆ ಕತ್ತಲುಮಯವಾಗಿದ್ದಿರಿ; ಈಗಲಾದರೋ ಪ್ರಭುವಿನಲ್ಲಿ ಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿನ ಮಕ್ಕಳಾಗಿ ಬಾಳಿರಿ. ಕಾರಣ - ಸಚ್ಚರಿತೆ, ಸದಾಚಾರ ಮತ್ತು ಸತ್ಯಸಂಧತೆ ಇವೆಲ್ಲವೂ ಬೆಳಕಿನ ಕುಡಿಗಳು. ಪ್ರಭುವಿಗೆ ಮೆಚ್ಚಿಕೆಯಾದುದು ಯಾವುದೆಂಬುದನ್ನು ಕಲಿತುಕೊಳ್ಳಿರಿ. ನಿಷ್ಪ್ರಯೋಜಕವಾದ ಕತ್ತಲುಮಯ ಕಾರ್ಯಗಳಿಗೆ ಕೈಹಾಕದಿರಿ. ಅಂಥವುಗಳನ್ನು ಬಯಲಿಗೆಳೆದು ಖಂಡಿಸಿರಿ. ಆ ಜನರು ಗುಟ್ಟಾಗಿ ಮಾಡುವ ಕೃತ್ಯಗಳು ಹೇಳುವುದಕ್ಕೂ ಅವಮಾನಕರವಾದುವು. ಬೆಳಕು ಬೆಳಗಿಸುವ ವಸ್ತುಗಳೆಲ್ಲವೂ ಕಂಗೊಳಿಸುವುವು. ಹೀಗೆ ಕಂಗೊಳಿಸುವುದೆಲ್ಲವೂ ಬೆಳಕಾಗುವುದು. ಆದ್ದರಿಂದ: “ನಿದ್ರೆಮಾಡುವವನೇ ಎದ್ದೇಳು ಸತ್ತವರನ್ನು ಬಿಟ್ಟು ಬಾ ಎಚ್ಚೆತ್ತು ನಿನಗೀವನು ಬೆಳಕನು ಕ್ರಿಸ್ತನು.” ಎಂದು ಬರೆಯಲಾಗಿದೆ.

ಶುಭಸಂದೇಶ: ಯೊವಾನ್ನ 9:1-41

ಯೇಸುಸ್ವಾಮಿ ನಡೆದು ಹೋಗುತ್ತಿದ್ದಾಗ, ಒಬ್ಬ ಹುಟ್ಟು ಕುರುಡನನ್ನು ಕಂಡರು. ಶಿಷ್ಯರು, “ಗುರುದೇವಾ, ಇವನು ಕುರುಡನಾಗಿ ಹುಟ್ಟಬೇಕಾದರೆ ಅದಕ್ಕೆ ಯಾರ ಪಾಪ ಕಾರಣ? ಇವನದೋ ಅಥವಾ ಇವನನ್ನು ಹೆತ್ತವರದೋ?” ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಯೇಸು, ಇವನ ಪಾಪವಾಗಲಿ, ಇವನನ್ನು ಹೆತ್ತವರ ಪಾಪವಾಗಲಿ ಇದಕ್ಕೆ ಕಾರಣವಲ್ಲ, ದೇವರ ಕಾರ್ಯ ಇವನಲ್ಲಿ ವ್ಯಕ್ತವಾಗುವಂತೆ ಹೀಗಾಗಿದೆ. ಹಗಲಿರುವಾಗಲೇ ನನ್ನನ್ನು ಕಳುಹಿಸಿರುವಾತನ ಕೆಲಸವನ್ನು ನಾನು ಮಾಡುತ್ತಿರಬೇಕು. ರಾತ್ರಿ ಆದಮೇಲೆ ಯಾರೂ ಕೆಲಸಮಾಡಲಾಗದು. ಜಗತ್ತಿನಲ್ಲಿ ನಾನಿರುವಾಗ ಜಗದ ಜ್ಯೋತಿ ನಾನೇ,” ಎಂದು ನುಡಿದರು. ತರುವಾಯ ನೆಲದಲ್ಲಿ ಉಗುಳಿ, ಮಣ್ಣಿನ ಲೇಪಮಾಡಿ, ಅದನ್ನು ಕುರುಡನ ಕಣ್ಣಿಗೆ ಲೇಪಿಸಿ, “ನೀನು ಶಿಲೋವಾಮಿನ ಕೊಳಕ್ಕೆ ಹೋಗಿ ತೊಳೆದುಕೋ,” ಎಂದು ಹೇಳಿದರು. (‘ಶಿಲೋವಾಮ್’ ಎಂದರೆ ಕಳುಹಿಸಲಾದವನು ಎಂದರ್ಥ). ಅದರಂತೆಯೇ ಆ ಕುರುಡನು ಹೋಗಿ ಕಣ್ಣುಗಳನ್ನು ತೊಳೆದುಕೊಂಡನು; ಹಿಂದಿರುಗಿದಾಗ ಅವನಿಗೆ ಕಣ್ಣು ಬಂದಿತ್ತು. ಪುನಃ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದರು. “ಹೌದು ಅವನೇ,” ಎಂದರು ಕೆಲವರು. “ಇಲ್ಲ, ಇವನು ಅವನಂತೆ ಕಾಣುತ್ತಾನೆ, ಅಷ್ಟೆ,” ಎಂದರು ಇತರರು. ಆ ಕುರುಡನು “ನಾನೇ ಅವನು” ಎಂದು ತಿಳಿಸಿದನು. ಆಗ ಅವರು, “ಹಾಗಾದರೆ ನಿನಗೆ ಕಣ್ಣು ಹೇಗೆ ಬಂತು?” ಎಂದು ಕೇಳಿದರು. ಅದಕ್ಕೆ ಅವನು, “ಯೇಸು ಎಂಬುವರು ಮಣ್ಣಿನ ಲೇಪಮಾಡಿ ನನ್ನ ಕಣ್ಣಿಗೆ ಹಚ್ಚಿದರು, ‘ಶಿಲೋವಾಮಿಗೆ ಹೋಗಿ ತೊಳೆದುಕೊ,’ ಎಂದು ಹೇಳಿದರು; ನಾನು ಹೋಗಿ ತೊಳೆದುಕೊಂಡೆ; ನನಗೆ ಕಣ್ಣು ಬಂತು,” ಎಂದು ಹೇಳಿದನು. ಅದಕ್ಕೆ ಅವರು, “ಆತ ಎಲ್ಲಿದ್ದಾನೆ?” ಎಂದು ವಿಚಾರಿಸಿದರು. ಅವನು ಉತ್ತರವಾಗಿ “ನಾನರಿಯೆ,” ಎಂದನು. ಆಗ ಆ ಜನರು ಅವನನ್ನು ಫರಿಸಾಯರ ಬಳಿಗೆ ಕರೆದುಕೊಂಡು ಹೋದರು. ಏಕೆಂದರೆ, ಯೇಸುಸ್ವಾಮಿ ಮಣ್ಣಿನ ಲೇಪವನ್ನು ಮಾಡಿ ಅವನಿಗೆ ಕಣ್ಣುಕೊಟ್ಟ ದಿನ ಸಬ್ಬತ್ ದಿನವಾಗಿತ್ತು. ಕಣ್ಣು ಬಂದುದು ಹೇಗೆಂದು ಫರಿಸಾಯರು ಅವನನ್ನು ಮತ್ತೆ ಕೇಳಿದರು. “ಯೇಸು ನನ್ನ ಕಣ್ಣುಗಳಿಗೆ ಮಣ್ಣಿನ ಲೇಪವನ್ನು ಹಚ್ಚಿದರು; ನಾನು ಹೋಗಿ ಕಣ್ಣುಗಳನ್ನು ತೊಳೆದುಕೊಳ್ಳುತ್ತಲೇ ನನಗೆ ದೃಷ್ಟಿ ಬಂತು,” ಎಂದನು ಅವನು. ಫರಿಸಾಯರಲ್ಲಿ ಕೆಲವರು, “ಹೀಗೆ ಮಾಡಿದವನು ದೇವರಿಂದ ಬಂದವನಲ್ಲ, ಅವನು ಸಬ್ಬತ್ ನಿಯಮವನ್ನು ಪಾಲಿಸುವುದಿಲ್ಲ,” ಎಂದರು. ಇತರರು, “ಪಾಪಿಯಾದವನು ಇಂಥ ಸೂಚಕ ಕಾರ್ಯಗಳನ್ನು ಮಾಡಲು ಸಾಧ್ಯವೇ?” ಎಂದರು. ಹೀಗೆ ಅವರಲ್ಲೇ ಭಿನ್ನ ಬೇಧವುಂಟಾಯಿತು. ಆದ್ದರಿಂದ ಫರಿಸಾಯರು ಆ ಕುರುಡನನ್ನು ಕುರಿತು, “ಅವನೇ ನಿನಗೆ ಕಣ್ಣು ಕೊಟ್ಟನೆಂದು ಹೇಳುತ್ತೀಯಲ್ಲಾ, ಅವನ ಬಗ್ಗೆ ನಿನಗೇನು ಅನ್ನಿಸುತ್ತದೆ?” ಎಂದು ವಿಚಾರಿಸಿದರು. ಅದಕ್ಕೆ ಅವನು, “ಅವರೊಬ್ಬ ಪ್ರವಾದಿಯೇ ಸರಿ,” ಎಂದನು. ಆ ಕುರುಡನು ಹಿಂದೆ ನಿಜವಾಗಿಯೂ ಕುರುಡನಾಗಿದ್ದು ಈಗ ದೃಷ್ಟಿ ಪಡೆದಿದ್ದಾನೆ ಎಂದು ಯೆಹೂದ್ಯ ಅಧಿಕಾರಿಗಳು ನಂಬಲು ಒಪ್ಪಲಿಲ್ಲ. ಈ ಕಾರಣ ಅವನ ಹೆತ್ತವರನ್ನು ಕರೆಯಿಸಿ, “ಇವನು ನಿಮ್ಮ ಮಗನೋ? ಇವನು ಹುಟ್ಟು ಕುರುಡನೋ? ಹಾಗಾದರೆ ಇವನಿಗೆ ಈಗ ಕಣ್ಣು ಬಂದದ್ದು ಹೇಗೆ?” ಎಂದು ಕೇಳಿದರು. ಅದಕ್ಕೆ ಅವನ ತಂದೆ ತಾಯಿಗಳು, “ಇವನಿಗೆ ದೃಷ್ಟಿ ಬಂದದ್ದು ಹೇಗೆ ಎಂದು ನಮಗೆ ಗೊತ್ತಿಲ್ಲ; ಇವನಿಗೆ ಕಣ್ಣುಕೊಟ್ಟವರು ಯಾರೆಂದೂ ನಮಗೆ ತಿಳಿಯದು. ಇವನನ್ನೇ ಕೇಳಿ, ಹೇಗೂ ಪ್ರಾಯದವನಾಗಿದ್ದಾನಲ್ಲವೆ? ತನ್ನ ವಿಷಯವಾಗಿ ತಾನೇ ಮಾತನಾಡಬಲ್ಲ,” ಎಂದು ಉತ್ತರಿಸಿದರು. ಅವರು ಹೀಗೆ ಹೇಳಿದ್ದು ಯೆಹೂದ್ಯ ಅಧಿಕಾರಿಗಳ ಅಂಜಿಕೆಯಿಂದ. ಏಕೆಂದರೆ, ಯಾರಾದರೂ ಯೇಸುವನ್ನು ಲೋಕೋದ್ಧಾರಕ ಎಂದು ಒಪ್ಪಿಕೊಂಡರೆ ಅಂಥವರಿಗೆ ಪ್ರಾರ್ಥನಾ ಮಂದಿರದಿಂದ ಬಹಿಷ್ಕಾರ ಹಾಕಬೇಕೆಂದು ಅಧಿಕಾರಿಗಳು ಈ ಮೊದಲೇ ಗೊತ್ತುಮಾಡಿದ್ದರು. ಆದುದರಿಂದಲೇ, “ಅವನು ಪ್ರಾಯದವನು, ಅವನನ್ನೇ ಕೇಳಿ” ಎಂದು ಅವನ ತಂದೆತಾಯಿಗಳು ಹೇಳಿದ್ದು. ಅಧಿಕಾರಿಗಳು ಆ ಹುಟ್ಟು ಕುರುಡನನ್ನು ಮತ್ತೆ ಕರೆಯಿಸಿ, “ನೀನು ದೇವರ ಮುಂದೆ ಪ್ರಮಾಣ ಮಾಡಿ ಹೇಳು. ಆ ಮನುಷ್ಯ ಪಾಪಿಯೆಂದು ನಮಗೆ ಗೊತ್ತು,” ಎಂದು ಕೇಳಿದರು. ಉತ್ತರವಾಗಿ ಅವನು, “ಅವರು ಪಾಪಿಯೋ, ಅಲ್ಲವೋ ನಾನರಿಯೆ; ಆದರೆ ನಾನೊಮ್ಮೆ ಕುರುಡನಾಗಿದ್ದೆ; ಈಗಲಾದರೋ ಕಣ್ಣು ಕಾಣಿಸುತ್ತದೆ ಇಷ್ಟು ಮಾತ್ರ ಬಲ್ಲೆ,” ಎಂದು ಹೇಳಿದನು. “ಅವನು ನಿನಗೇನು ಮಾಡಿದ? ನಿನಗೆ ಹೇಗೆ ಕಣ್ಣು ಬರಿಸಿದ?” ಎಂದು ಅವರು ಮತ್ತೆ ಪ್ರಶ್ನಿಸಿದರು. ಅವನು, “ನಿಮಗೆ ಆಗಲೇ ಹೇಳಿದ್ದೇನೆ. ಆದರೆ ನೀವು ನಂಬುವುದಿಲ್ಲ. ಅದನ್ನೇ ಏಕೆ ಮತ್ತೆ ಮತ್ತೆ ಕೇಳುತ್ತೀರಿ? ಅವನ ಶಿಷ್ಯರಾಗಲು ನಿಮಗೂ ಮನಸ್ಸಿದೆಯೇ?” ಎಂದನು. ಆಗ ಅಧಿಕಾರಿಗಳು ಅವನನ್ನು ಶಪಿಸಿದರು. “ನೀನೇ ಅವನ ಶಿಷ್ಯ, ನಾವು ಮೋಶೆಯ ಶಿಷ್ಯರು. ಮೋಶೆಯೊಡನೆ ದೇವರು ಮಾತನಾಡಿದರು ಎಂಬುದನ್ನು ನಾವು ಬಲ್ಲೆವು. ಆದರೆ ಇವನು ಎಲ್ಲಿಯವನೋ ನಾವು ಅರಿಯೆವು,” ಎಂದರು. ಅದಕ್ಕೆ ಆ ಕುರುಡ, “ಏನಾಶ್ಚರ್ಯ! ನನಗೆ ಕಣ್ಣು ಬರಿಸಿದ್ದಾರೆ. ಆದರೂ ‘ಅವನು ಎಲ್ಲಿಯವನೋ ನಾವರಿಯೆವು’ ಎನ್ನುತ್ತೀರಿ. ದೇವರು ಪಾಪಿಗಳಿಗೆ ಓಗೊಡುವುದಿಲ್ಲ. ಯಾರು ಭಕ್ತಿಯಿಂದ ಅವರ ಚಿತ್ತದಂತೆ ನಡೆಯುತ್ತಾರೋ ಅವರಿಗೆ ಓಗೊಡುತ್ತಾರೆಂದು ನಮಗೆಲ್ಲಾ ಚೆನ್ನಾಗಿ ತಿಳಿದಿದೆ. ಹುಟ್ಟು ಕುರುಡನಿಗೆ ಯಾರಾದರೂ ಕಣ್ಣುಕೊಟ್ಟ ಸುದ್ದಿಯನ್ನು ಲೋಕ ಸೃಷ್ಟಿಯಾದಾಗಿನಿಂದ ಒಬ್ಬರೂ ಕೇಳಿಲ್ಲ. ಇವರು ದೇವರಿಂದ ಬಂದವರು ಅಲ್ಲದಿದ್ದರೆ ಇಂಥದ್ದೇನನ್ನೂ ಮಾಡಲಾಗುತ್ತಿರಲಿಲ್ಲ,” ಎಂದನು. ಆಗ ಫರಿಸಾಯರು, “ಪಾಪದಲ್ಲೇ ಹುಟ್ಟಿ ಬೆಳೆದವನು ನೀನು. ನಮಗೇ ಬುದ್ಧಿ ಹೇಳ ಹೊರಟೆಯಾ?” ಎಂದು ಹೇಳಿ ಅವನನ್ನು ತಳ್ಳಿ ಬಿಟ್ಟರು. ಹುಟ್ಟು ಕುರುಡನನ್ನು ಹೊರಗೆ ತಳ್ಳಿದ ವಾರ್ತೆ ಯೇಸುಸ್ವಾಮಿಯ ಕಿವಿಗೆ ಮುಟ್ಟಿತು. ಯೇಸು ಅವನನ್ನು ಕಂಡು, “ನರಪುತ್ರನಲ್ಲಿ ನಿನಗೆ ವಿಶ್ವಾಸವಿದೆಯೇ?” ಎಂದು ಕೇಳಿದರು. ಅವನು, “ಅವರು ಯಾರೆಂದು ತಿಳಿಸಿ ಸ್ವಾವಿೂ, ನಾನು ವಿಶ್ವಾಸಿಸುತ್ತೇನೆ,” ಎಂದನು. ಯೇಸು, “ನೀನು ಆತನನ್ನು ಕಂಡಿದ್ದೀಯೆ, ನಿನ್ನೊಡನೆ ಮಾತನಾಡುತ್ತಿರುವ ನಾನೇ ಆತನು,” ಎಂದರು. “ಸ್ವಾವಿೂ, ನಾನು ವಿಶ್ವಾಸಿಸುತ್ತೇನೆ,” ಎಂದು ಹೇಳುತ್ತಾ ಅವನು ಯೇಸುವಿಗೆ ಅಡ್ಡಬಿದ್ದನು. ಆಗ ಯೇಸು, “ಕುರುಡರು ಕಾಣುವಂತೆಯೂ ಕಾಣುವವರು ಕುರುಡರಾಗುವಂತೆಯೂ ತೀರ್ಪು ಕೊಡಲೆಂದೇ ನಾನು ಈ ಲೋಕಕ್ಕೆ ಬಂದುದು,” ಎಂದು ನುಡಿದರು. ಅಲ್ಲಿ ನಿಂತಿದ್ದ ಫರಿಸಾಯರು ಈ ಮಾತನ್ನು ಕೇಳಿ, “ಹಾಗಾದರೆ ನಾವು ಕೂಡ ಕುರುಡರೋ?” ಎಂದು ಪ್ರಶ್ನಿಸಿದರು. ಯೇಸು, “ನೀವು ಕುರುಡರೇ ಆಗಿದ್ದರೆ ಪಾಪಿಗಳಾಗುತ್ತಿರಲಿಲ್ಲ, ಆದರೆ, ‘ನಮಗೆ ಕಣ್ಣು ಕಾಣುತ್ತದೆ,’ ಎಂದು ಹೇಳಿಕೊಳ್ಳುತ್ತೀರಿ; ಆದ್ದರಿಂದ ನೀವು ಪಾಪಿಗಳಾಗಿದ್ದೀರಿ,” ಎಂದರು.





ಮನಸ್ಸಿಗೊಂದಿಷ್ಟು :  ಹುಟ್ಟಿನಿಂದಲೇ ಕುರುಡನಾಗಿದ್ದ ವ್ಯಕ್ತಿಗೆ ಯೇಸು ದೃಷ್ಟಿ ನೀಡಿದರೂ ನಂಬದವರು ಇದ್ದರು ಎನ್ನುತ್ತದೆ ಇಂದಿನ ಶುಭಸಂದೇಶ. ಅಷ್ಟು ಮಾತ್ರವಲ್ಲದೆ ಆ ಗುಣ ಹೊಂದಿದ ವ್ಯಕ್ತಿಯನ್ನೂ ವ್ಯಂಗ ಮಾಡುತ್ತಾರೆ, ದೂಷಿಸುತ್ತಾರೆ.  ಇದು ಆಶ್ಚರ್ಯದ ಸಂಗತಿಯೇನ್ನಲ್ಲ. ಇಂದಿಗೂ ದೇವರ ಕಾರ್ಯಗಳು ನೆರವೇರುತ್ತದೆ ಎಂಬುದನ್ನು ನಂಬದವರು ನಮ್ಮ ನಡುವೆಯೇ ಇದ್ದಾರೆ. ನಂಬುವವರನ್ನು, ವ್ಯಂಗ ಮಾಡುವವರು ಈಗಲೂ ಇದ್ದಾರೆ. ನಮ್ಮ ಮನೋಭಾವ ಹಾಗಾಗದಿರಲಿ. 

ಪ್ರಶ್ನೆ : ವಿಶ್ವಾಸದ ಕುರುಡುತನದಿಂದ ಬಳಲುತ್ತಿರುವ ನಮ್ಮ ಕಣ್ಣುಗಳು ತೆರೆಯಬೇಕೆಂಬ ಆಸೆ ನಮಗಿದೆಯೇ?

ಪ್ರಭುವೇ,
ಹುಟ್ಟಿನಿಂದಲೂ ನಿಮ್ಮವರೇ   
ಎನ್ನಿಸಿಗೊಂಡಿದ್ದರೂ 
ಬೆನ್ನು ಮಾಡಿದ್ದೇವೆ ಬೆಳಕಿಗೆ 

ನಮ್ಮ ಅವಿಶ್ವಾಸದ 
ಅಂಧತ್ವವನ್ನು ನೀಗಿಸಿ
ಬೆಳಕು ನೀಡಿ 
ಕಣ್ಣು ಮನಸ್ಸಿಗೆ  

ಪಡೆದ ಬೆಳಕು ಸಾರಲಿ 
ನಿಮ್ಮ ಮಹಿಮೆ 
ಸಾರಿ ಹರಡಲಿ 
ದೈವ ನಲುಮೆ 

14.03.202 6 - ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು. ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು

 ಮೊದಲನೇ ವಾಚನ: ಹೊಶೇಯ: 6: 1-6

ನನ್ನನ್ನು ಜನರು ಮರೆಹೋಗುತ್ತಾ ಹೀಗೆನ್ನುವರು: “ಬನ್ನಿ, ಸರ್ವೇಶ್ವರಸ್ವಾಮಿಯ ಬಳಿಗೆ ಹಿಂದಿರುಗೋಣ. ಅವರು ನಮ್ಮನ್ನು ಛಿದ್ರಗೊಳಿಸಿದವರು. ಅವರು ನಮ್ಮನ್ನು ಗಾಯಗೊಳಿಸಿದ್ದಾರೆ; ಅವರೇ ನಮ್ಮ ಗಾಯಗಳನ್ನು ಕಟ್ಟಿ ಗುಣಪಡಿಸುವರು. ಒಂದೆರಡು ದಿನಗಳ ನಂತರ ಅವರು ನಮ್ಮನ್ನು ಬದುಕಿಸುವರು. ಮೂರನೆಯ ದಿನದಲ್ಲಿ ಅವರು ನಮ್ಮನ್ನು ಎಬ್ಬಿಸುವರು. ಆಗ ನಾವು ಅವರ ಸನ್ನಿಧಿಯಲ್ಲಿ ಬಾಳುವೆವು. ನಿರಂತರವಾಗಿ ಹುಡುಕಿ ಅವರನ್ನು ಕಂಡುಕೊಳ್ಳೋಣ; ಸರ್ವೇಶ್ವರಸ್ವಾಮಿಯನ್ನು ಅರಿತುಕೊಳ್ಳೋಣ; ಅವರ ಆಗಮನ ಸೂರ್ಯೋದಯದಂತೆ ನಿಶ್ಚಯ. ಭೂಮಿಯನ್ನು ತಣಿಸುವ ಮುಂಗಾರು ಹಿಂಗಾರು ಮಳೆಗಳಂತೆ ಅವರು ನಮ್ಮ ಬಳಿಗೆ ಬಂದೇ ಬರುವರು. ಆದರೆ ಸರ್ವೇಶ್ವರ ಹೇಳುವುದೇನೆಂದರೆ: “ಎಫ್ರಯಿಮೇ, ನಾನು ನಿನ್ನನ್ನು ಹೇಗೆ ತಿದ್ದಲಿ? ಜುದೇಯವೇ, ನಿನ್ನನ್ನು ಹೇಗೆ ಸರಿಪಡಿಸಲಿ? ನಿಮ್ಮ ಭಕ್ತಿ ಪ್ರಾತಃಕಾಲದ ಮೋಡದಂತಿದೆ; ಬೇಗನೆ ಮಾಯವಾಗುವ ಇಬ್ಬನಿಯಂತಿದೆ. ಖಂಡ ತುಂಡವಾದ ತೀರ್ಪುನೀಡುವ, ಕತ್ತಿಯಂತೆ ಹರಿತವಾಗಿ ಮಾತನಾಡುವ ನನ್ನ ಪ್ರವಾದಿಗಳನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ. ನನ್ನ ನ್ಯಾಯ ದಂಡನೆ ಮಿಂಚಿನಂತೆ ಹೊರಡುವುದು. ನನಗೆ ಬೇಕಾದುದು ಕರುಣೆ, ಬಲಿಯರ್ಪಣೆಯಲ್ಲ; ನನಗೆ ಬೇಕಾದುದು ದೈವಜ್ಞಾನ, ದಹನಬಲಿ ದಾನವಲ್ಲ.

ಕೀರ್ತನೆ: 51: 1-3 16-19
ಶ್ಲೋಕ: ನನಗೆ ಬೇಕಾದುದು ಕರುಣೆ, ಬಲಿಯರ್ಪಣೆಯಲ್ಲ

ಕೃಪಾಳು, ದೇವಾ, ಕರುಣಿಸೆನ್ನನು I
ಕರುಣಾನಿಧಿ, ಅಳಿಸೆನ್ನ ದೋಷವನು II

ತೊಳೆ ಪೂರ್ತಿಯಾಗಿ ಪಾಪದಿಂದೆನ್ನನು I
ದೋಷಪರಿಹರಿಸಿ ಶುದ್ಧಗೊಳಿಸೆನ್ನನು II

ಬಲಿಯರ್ಪಣೆಯಲಿ ನಿನಗೊಲವಿಲ್ಲ I
ದಹನ ಬಲಿಯಿತ್ತರು ನಿನಗೆ ಬೇಕಿಲ್ಲ II

ಮುರಿದ ಮನವೇ ದೇವನೊಲಿವ ಯಜ್ಞವು I
ನೊಂದು ಬೆಂದ ಮನವನಾತ ಒಲ್ಲೆಯೆನನು II

ಸಿಯೋನಿಗೆ ದೇವಾ, ಶುಭವನು ಕರುಣಿಸು I
ಜೆರುಸಲೇಮ್ ಕೋಟೆಯನು ಮರಳಿ ಎಬ್ಬಿಸು II

ಸೂಕ್ತ ಬಲಿಗಳಿಂದಾಗ ನಿನ್ನನೊಲಿಸುವರು I
ವೇದಿಕೆ ಮೇಲೆ ಯಜ್ಞಪಶುಗಳನು ಅರ್ಪಿಸುವರು II

ಶುಭಸ೦ದೇಶ: ಲೂಕ: 18: 9-14


ಕೆಲವರು ತಾವೇ ಸತ್ಪುರುಷರು ಎಂದುಕೊಂಡು ಇತರರನ್ನು ತುಚ್ಛವಾಗಿ ಕಾಣುತ್ತಿದ್ದರು. ಅಂಥವರನ್ನು ಉದ್ದೇಶಿಸಿ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: “ಒಮ್ಮೆ, ಇಬ್ಬರು ಪ್ರಾರ್ಥನೆಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕವಸೂಲಿಯವನು. ಫರಿಸಾಯನು ಮುಂದೆ ನಿಂತು ತನ್ನಷ್ಟಕ್ಕೆ ಹೀಗೆ ಪ್ರಾರ್ಥನೆಮಾಡಿದ: ‘ಓ ದೇವರೇ, ನಾನು ಇತರರ ಹಾಗೆ ಅಲ್ಲ. ಅವರೋ ಕೊಳ್ಳೆಗಾರರು, ಅನ್ಯಾಯಗಾರರು, ವ್ಯಭಿಚಾರಿಗಳು. ನಾನು ಈ ಸುಂಕದವನಂತೆಯೂ ಅಲ್ಲ. ಇದಕ್ಕಾಗಿ ನಿಮಗೆ ಧನ್ಯವಾದವನ್ನು ಸಲ್ಲಿಸುತ್ತೇನೆ. ನಾನಾದರೋ ವಾರಕ್ಕೆ ಎರಡು ದಿನ ಉಪವಾಸವ್ರತವನ್ನು ಕೈಗೊಳ್ಳುತ್ತೇನೆ; ನನ್ನ ಆದಾಯದಲ್ಲಿ ಹತ್ತನೆಯ ಒಂದು ಪಾಲನ್ನು ನಿಮಗೆ ಸಲ್ಲಿಸುತ್ತೇನೆ. “ಸುಂಕವಸೂಲಿಯವನಾದರೋ ದೂರದಲ್ಲೇ ನಿಂತು, ತಲೆಯನ್ನೂ ಮೇಲಕ್ಕೆ ಎತ್ತದೆ, ‘ಓ ದೇವರೇ, ನಾನು ಪಾಪಿ; ನನಗೆ ದಯೆತೋರಿ,’ ಎನ್ನುತ್ತಾ ಎದೆಬಡಿದುಕೊಂಡ. “ದೇವರ ದೃಷ್ಟಿಯಲ್ಲಿ ಪಾಪಮುಕ್ತನಾಗಿ ಮನೆಗೆ ತೆರಳಿದವನು ಈ ಸುಂಕ ವಸೂಲಿಯವನು, ಆ ಫರಿಸಾಯನಲ್ಲ, ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಏಕೆಂದರೆ, ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು. ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು,” ಎಂದರು ಯೇಸು.

ಮನಸ್ಸಿಗೊಂದಿಷ್ಟು :  ಇಂದಿನ ಶುಭಸಂದೇಶದಲ್ಲಿ ಇಬ್ಬರ ಪ್ರಾರ್ಥನೆ ಇದೆ.  ಚಿಂತಕರೊಬ್ಬರು ಹೇಳುವಂತೆ ಫರಿಸಾಯ ಪ್ರಾರ್ಥಿಸಲಿಲ್ಲ, ಬದಲಿಗೆ ತಾನೆಷ್ಟು ಒಳ್ಳೆಯವನೆಂದು ದೇವರಿಗೆ  ವರದಿ ಮಾಡಿದನಷ್ಟೆ. ಸುಂಕ ವಸೂಲಿಯವನು ದೇವರ ಮುಂದೆ ತನ್ನನ್ನೇ ತಗ್ಗಿಸಿಕೊಂಡ, ದೇವರಿಗೆ ಅದೇ  ಮೆಚ್ಚುಗೆಯಾಯಿತು

ಜಂಭದ ಮನಸ್ಸಿಗೆ ಪ್ರಾರ್ಥನೆ ಕಷ್ಟವಂತೆ. ನಾವು ನಮ್ಮ ಒಳ್ಳೆಯತನವನ್ನು ಹೋಲಿಸಿಕೊಳ್ಳಬೇಕಾದರೆ, ಅದು ಇತರ ಮನುಷ್ಯರೊಂದಿಗೆ ಅಲ್ಲ ದೇವರ ಒಳ್ಳೆಯತನದೊಂದಿಗೆ ಎನ್ನುವ ಮಾತಿದೆ. ದೇವರ ಒಳ್ಳೆಯತನದ ಅಗಾಧತೆ ನಮ್ಮ ಗುರಿಯಾಗಲಿ.  ವಿನಯ ನಮ್ಮ ಪ್ರಾರ್ಥನೆಯ ಗರಿಯಾಗಲಿ - ಜೀವವಾಕ್ಯ 

13.03.2026 - ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ

 ಮೊದಲನೇ ವಾಚನ: ಹೊಶೇಯ: 14: 1-9


ಇಸ್ರಯೇಲ್, ನಿನ್ನ ಸರ್ವೇಶ್ವರನಾದ ದೇವರ ಬಳಿಗೆ ಹಿಂದಿರುಗು. ನಿನ್ನ ಪಾಪದ್ರೋಹಗಳೇ ನಿನ್ನ ಪತನಕ್ಕೆ ಕಾರಣ. ಆದುದರಿಂದ ಪಶ್ಚಾತ್ತಾಪದ ಮಾತುಗಳೊಂದಿಗೆ ದೇವರಿಗೆ ಅಭಿಮುಖವಾಗಿ, “ಪ್ರಭುವೇ, ನಮ್ಮ ಅಪರಾಧವನ್ನು ತೊಡೆದುಹಾಕು. ನಮ್ಮಲ್ಲಿ ಒಳಿತಾದುದನ್ನೇ ಅಂಗೀಕರಿಸು. ನಿನಗೆ ಸ್ತುತಿಬಲಿಯನ್ನು ಸಮರ್ಪಿಸುವೆವು. ಅಸ್ಸೀರಿಯದಿಂದ ನಮಗೆ ರಕ್ಷಣೆ ದೊರಕದು. ನಾವು ಕಾಳಗದ ಕುದುರೆಗಳ ಮೇಲೆ ಇನ್ನೆಂದೂ ಸವಾರಿ ಮಾಡೆವು. ನಮ್ಮ ಕೈಗಳು ನಿರ್ಮಿಸಿರುವ ವಿಗ್ರಹಗಳನ್ನು ವೀಕ್ಷಿಸಿ, ‘ನೀವೇ ನಮ್ಮ ದೇವರು’ ಎಂದು ಜಪಿಸೆವು. ಓ ದೇವಾ, ದಿಕ್ಕಿಲ್ಲದವರಿಗೆ ಕರುಣೆತೋರಿಸುವವನು ನೀನೇ,” ಎಂದು ಹೇಳು. ಸರ್ವೇಶ್ವರ ಇಂತೆನ್ನುತ್ತಾರೆ: ಪರಿಹರಿಸುವೆನು ಜನರ ಭ್ರಷ್ಟತನವನು ಪ್ರೀತಿಸುವೆನು ಮನಪೂರ್ವಕವಾಗಿ ಅವರನು ತ್ಯಜಿಸಿಬಿಡುವೆನು ಅವರ ಮೇಲಿದ್ದ ಕೋಪವನು. ಇರುವೆನು ಇಸ್ರಯೇಲಿಗೆ ಇಬ್ಬನಿಯಂತೆ ಅರಳುವುದು ಆ ನಾಡು ತಾವರೆಯಂತೆ ಬೇರೂರುವುದು ಲೆಬನೋನಿನ ದೇವದಾರು ವೃಕ್ಷದಂತೆ. ಹರಡಿಕೊಳ್ಳುವುದದು ಮರದ ರೆಂಬೆಗಳಂತೆ ಕಂಗೊಳಿಸುವುದು ಚೆಲುವಾದ ಓಲಿವ ಮರದಂತೆ ಅದರ ಪರಿಮಳ ಮನೋಹರ ಲೆಬನೋನಿನ ಲತೆಗಳಂತೆ. ಮರಳಿ ಆಶ್ರಯಿಸುವರು ನನ್ನ ನೆರಳನ್ನು ಆ ಜನತೆ ಅಭಿವೃದ್ಧಿಯಾಗುವರು ಉದ್ಯಾನವನದಂತೆ ಫಲಪ್ರದವಾಗುವರು ಆ ಜನರು ದ್ರಾಕ್ಷಾಲತೆಯಂತೆ ಸುಪ್ರಸಿದ್ಧ ಅವರ ಕೀರ್ತಿ ಲೆಬನೋನಿನ ದ್ರಾಕ್ಷಾರಸದಂತೆ. ನುಡಿವುದು ಎಫ್ರಯಿಮ್, “ನನಗಿನ್ನು ಬೇಡ ವಿಗ್ರಹಗಳ ಗೊಡವೆ”. ಅದಕ್ಕೆ ಒಲಿದು ಕಟಾಕ್ಷಿಸುವವನು ನಾನೇ ಅದಕ್ಕೆ ಹಚ್ಚಹಸಿರಾದ ತುರಾಯಿಮರದಂತಿರುವೆ ಅದಕ್ಕೆ ಫಲವನ್ನು ನೀಡುವವನು ನಾನೇ.” ಬುದ್ಧಿವಂತನು ಈ ಮಾತುಗಳನ್ನು ಗ್ರಹಿಸಿಕೊಳ್ಳಲಿ. ವಿವೇಕಿಯು ಈ ನುಡಿಗಳನ್ನು ಅರ್ಥಮಾಡಿ ಕೊಳ್ಳಲಿ. ಸರ್ವೇಶ್ವರಸ್ವಾಮಿಯ ಮಾರ್ಗಗಳು ನೇರವಾದವುಗಳು. ಸನ್ಮಾರ್ಗಿಗಳು ಅವುಗಳನ್ನು ಕೈಗೊಂಡು ನಡೆಯುವರು. ದುರ್ಮಾರ್ಗಿಗಳು ಅವುಗಳನ್ನು ಕೈಬಿಟ್ಟು ಮುಗ್ಗರಿಸಿ ಬೀಳುವರು.

ಕೀರ್ತನೆ: 81: 6-7, 8-10, 13, 16
ಶ್ಲೋಕ: ಈಜಿಪ್ಟಿನಿಂದ ಕರೆತಂದ ಸ್ವಾಮಿ ದೇವನು ನಾನು, ನನ್ನ ಜನರೇ, ಕಿವಿಗೊಡಿ ನನ್ನ ಬುದ್ಧಿಮಾತಿಗೆ.

ಅಪರಿಚಿತ ವಾಣಿಯೊಂದು ನುಡಿಯಿತೀ ಮಾತನು:/
“ತಪ್ಪಿಸಿದೆ ನಾನು ಹೆಗಲಮೇಲೆ ನೀ ಹೊರೆಹೊರುವುದನು
ಬಿಡುಗಡೆ ಮಾಡಿದೆ ಗೂಡೆಯೆತ್ತುವ ಕೈಗಳನು //
“ಸಂಕಟದಲಿ ಮೊರೆಯಿಟ್ಟಾಗ ವಿಮೋಚಿಸಿದೆ ನಿನ್ನನು / 

ಗುಡುಗುವ ಮೇಘದಿಂದ ಕೊಟ್ಟೆ ನಿನಗೆ ಸದುತ್ತರವನು /
ಮೆರೀಬಾ ಪ್ರವಾಹಗಳ ಬಳಿ ಪರೀಕ್ಷಿಸಿದೆ ನಿನ್ನನು,//
“ನನ್ನ ಜನರೇ, ಕಿವಿಗೊಡಿ ನನ್ನ ಬುದ್ಧಿಮಾತಿಗೆ /
ಹಾಗೆ ಮಾಡಿದರೆ ಇಸ್ರಯೇಲರೆ, ಹಿತ ನಿಮಗೆ, // 

“ಇರಬಾರದು ಅನ್ಯದೇವತೆಗಳು ನಿಮ್ಮಲಿ /
ಪರದೇವತೆಗಳ ಪೂಜೆ ಕೂಡದು ನಿಮ್ಮಲಿ,//
“ಈಜಿಪ್ಟಿನಿಂದ ನಿಮ್ಮನು ಕರೆತಂದ ಸ್ವಾಮಿ ದೇವನು ನಾನು / 
ಒಳಿತಾಗಿರುತ್ತಿತ್ತು ನನ್ನ ಜನರು ನನಗೆ ಕಿವಿಗೊಟ್ಟಿದ್ದರೆ /

ಮೇಲಾಗಿರುತ್ತಿತ್ತು ಇಸ್ರಯೇಲರು ನನ್ನ ಹಾದಿ ಹಿಡಿದಿದ್ದರೆ, //
“ನಿಮಗಾದರೋ ಬಡಿಸುತ್ತಿದ್ದೆ ಅತ್ಯುತ್ತಮ ಗೋದಿಯನು /
ಉಣಿಸುತ್ತಿದ್ದೆ ನಾ ನಿಮಗೆ ಬೆಟ್ಟದ ಜೇನುತುಪ್ಪವನು” // 

ಶುಭಸ೦ದೇಶ:  ಮಾರ್ಕ: 12: 28-34


ಈ ತರ್ಕವನ್ನು ಕೇಳುತ್ತಿದ ಧರ್ಮಶಾಸ್ತ್ರಿ ಒಬ್ಬನು, ಯೇಸುಸ್ವಾಮಿ ಸದ್ದುಕಾಯರಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದನ್ನು ಮೆಚ್ಚಿ, ಅವರ ಬಳಿಗೆ ಬಂದು, “ಆಜ್ಞೆಗಳಲ್ಲೆಲ್ಲಾ ಪ್ರಪ್ರಥಮ ಆಜ್ಞೆ ಯಾವುದು?” ಎಂದು ಕೇಳಿದನು. ಯೇಸು ಅವನಿಗೆ, “ಇಸ್ರಯೇಲ್ ಸಮಾಜವೇ ಕೇಳು: ನಮ್ಮ ದೇವರಾದ ಸರ್ವೇಶ್ವರ ಏಕೈಕ ಸರ್ವೇಶ್ವರ; ನಿನ್ನ ದೇವರಾದ ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸು. ಇದೇ ಪ್ರಪ್ರಥಮ ಆಜ್ಞೆ. “ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು. ಇದೇ ಎರಡನೆಯ ಆಜ್ಞೆ. ಇವೆರಡು ಆಜ್ಞೆಗಳಿಗಿಂತ ಶ್ರೇಷ್ಠವಾದ ಆಜ್ಞೆ ಬೇರೊಂದೂ ಇಲ್ಲ,” ಎಂದರು. ಇದನ್ನು ಕೇಳಿದ ಆ ಧರ್ಮಶಾಸ್ತ್ರಿ, “ಬೋಧಕರೇ, ಚೆನ್ನಾಗಿ ಹೇಳಿದಿರಿ. ದೇವರು ಒಬ್ಬರೇ, ಅವರ ಹೊರತು ಬೇರೆ ದೇವರಿಲ್ಲ, ಎಂದು ನೀವು ಹೇಳಿದ್ದು ಸತ್ಯ; ಅವರನ್ನು ನಾವು ಪೂರ್ಣ ಹೃದಯದಿಂದಲೂ ಪೂರ್ಣ ಜ್ಞಾನದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದ್ದು. ಇವು ಎಲ್ಲಾ ದಹನಬಲಿಗಳಿಗಿಂತಲೂ ಯಜ್ಞಯಾಗಾದಿಗಳಿಗಿಂತಲೂ ಎಷ್ಟೋ ಮೇಲಾದುವು,” ಎಂದನು. ಅವನ ವಿವೇಕಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು, “ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ,” ಎಂದರು. ಇದಾದ ಬಳಿಕ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರೊಬ್ಬರೂ ಧೈರ್ಯಗೊಳ್ಳಲಿಲ್ಲ.

ಮನಸ್ಸಿಗೊಂದಿಷ್ಟು : ಇಂದಿನ ಶುಭಸಂದೇಶದಲ್ಲಿ ಧರ್ಮಶಾಸ್ತ್ರೀ ಯೇಸುವಿನ ಮಾತನ್ನು ಒಪ್ಪುವುದು, ಯೇಸು ಅವನನ್ನು ಮೆಚ್ಚುವುದನ್ನು ಕಾಣುತ್ತೇವೆ. ಯೇಸು ವಿನಾಕಾರಣ ಯಾರನ್ನೂ ಖಂಡಿಸುತ್ತಿರಲಿಲ್ಲ ಎಂಬುದರ ಮೇಲೆ ಮಾರ್ಕರು  ಬೆಳಕು ಚೆಲ್ಲುತ್ತಾರೆ.  

ಯೇಸು ನೀಡಿದ ಎರಡೂ ಆಜ್ಞೆಗಳು ಈಗಾಗಲೇ ಹಳೆಯ ಒಡಂಬಡಿಕೆಯಲ್ಲಿ ಚರ್ಚೆಯಾಗಿದೆ. ಆದರೆ ಯೇಸು ದೈವ ಪ್ರೀತಿ ಹಾಗು ಪರ ಪ್ರೀತಿಗೆ  ಸಮನಾದ ಮಹತ್ವ ನೀಡುತ್ತಾರೆ. ದೈವ ಶಾಸ್ತ್ರದ ಕಟ್ಟಲೆ ನಿಯಮಗಳನ್ನು ಪಾಲಿಸುವುದೇನೋ ಸರಿ. ಆದರೆ ಅವು ಪ್ರೀತಿಗಿಂತ ಹೆಚ್ಚು ಮಹತ್ವ ಪಡೆಯುವ ಅಪಾಯವೇ ಹೆಚ್ಚು . 

ಜೆರಿಕೋ ಮಾರ್ಗದಲ್ಲಿ ಗಾಯಗೊಂಡ ಪ್ರಯಾಣಿಕನನ್ನು ಆರೈಕೆ ಮಾಡದೆ ಹೋದ ಯಾಜಕ ಹಾಗು ಲೇವಿ ಈ ವಿಷಯದಲ್ಲಿ ಉದಾಹರಣೆ. ಅವರಲ್ಲಿ ಪ್ರೀತಿ ಕರುಣೆಗಿಂತ ವಿಧಿ, ನಿಯಮದ ಕರ್ತವ್ಯವೇ ಹೆಚ್ಚು ಮಹತ್ವ ಪಡೆಯಿತು. 

ಈ ನಿಟ್ಟಿನಲ್ಲಿ ಯೇಸು ಹೇಳಿದ ಈ ಎರಡು ಆಜ್ಞೆಗಳೇ  ನಮ್ಮ ದಾರಿ ದೀಪವಾಗಬೇಕು

11.03.2026 - ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು

 ಮೊದಲನೇ ವಾಚನ: 1 ಅರಸುಗಳು  18:20-39



ಅಹಾಬನು ಇಸ್ರಯೇಲರನ್ನೂ ಎಲ್ಲಾ ಪ್ರವಾದಿಗಳನ್ನೂ ಅಲ್ಲಿಗೆ ಕರೆಯಿಸಿದನು. ಎಲೀಯನು ಜನರೆಲ್ಲರ ಬಳಿಗೆ ಹೋಗಿ, “ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ? ಸರ್ವೇಶ್ವರಸ್ವಾಮಿ ನಿಮಗೆ ದೇವರಾಗಿದ್ದರೆ ಅವರನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ,” ಎಂದು ಹೇಳಿದನು. ಜನರು ಇದಕ್ಕೆ ಏನೂ ಉತ್ತರಕೊಡದೆ ಸುಮ್ಮನಿರುವುದನ್ನು ಕಂಡು, ಅವನು ಮತ್ತೆ ಅವರಿಗೆ, “ಸರ್ವೇಶ್ವರನ ಪ್ರವಾದಿಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ; ಬಾಳನ ಪ್ರವಾದಿಗಳಲ್ಲಿ ನಾನೂರೈವತ್ತುಮಂದಿ ಇದ್ದಾರೆ. ಅವರು ಎರಡು ಹೋರಿಗಳನ್ನು ನಮ್ಮ ಬಳಿಗೆ ತರಲಿ; ಅವುಗಳಲ್ಲೊಂದನ್ನು ಆರಿಸಿಕೊಂಡು, ಕಡಿದು ತುಂಡುಮಾಡಿ ಕಟ್ಟಿಗೆಯ ಮೇಲಿಡಲಿ; ಆದರೆ ಬೆಂಕಿ ಹೊತ್ತಿಸಬಾರದು. ನಾನೂ ಇನ್ನೊಂದು ಹೋರಿಯನ್ನು ಹಾಗೆಯೇ ಕಡಿದು ಬೆಂಕಿ ಹೊತ್ತಿಸದೆ ಕಟ್ಟಿಗೆಯ ಮೇಲಿಡುವೆನು. ನೀವು ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ. ಅನಂತರ ನಾನು ಸರ್ವೇಶ್ವರನ ಹೆಸರು ಹೇಳಿ ಪ್ರಾರ್ಥಿಸುವೆನು. ಅವರಿಬ್ಬರಲ್ಲಿ ಯಾರು ಆಲಿಸಿ ಬೆಂಕಿಯನ್ನು ಕಳುಹಿಸುವನೋ ಅವನೇ ದೇವರೆಂದು ನಿಶ್ಚಯಿಸೋಣ,” ಎಂದನು. ಜನರೆಲ್ಲರು, “ಸರಿ, ನೀನು ಹೇಳಿದಂತೆಯೇ ಆಗಲಿ,” ಎಂದು ಉತ್ತರಕೊಟ್ಟರು. ಆಗ ಎಲೀಯನು ಬಾಳನ ಪ್ರವಾದಿಗಳಿಗೆ, “ನೀವು ಹೆಚ್ಚುಮಂದಿ ಇರುವುದರಿಂದ ಮೊದಲು ನೀವೇ ಒಂದು ಹೋರಿಯನ್ನು ಆರಿಸಿಕೊಂಡು, ಅದನ್ನು ಸಿದ್ಧಪಡಿಸಿ, ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ; ಆದರೆ ಬೆಂಕಿಯನ್ನು ಹೊತ್ತಿಸಕೂಡದು,” ಎಂದನು. ಅಂತೆಯೇ ತರಲಾದ ಹೋರಿಗಳಲ್ಲಿ ಒಂದನ್ನು ಅವರು ತೆಗೆದುಕೊಂಡು ಸಿದ್ಧಪಡಿಸಿದರು. ತಮ್ಮ ದೇವರಾದ ಬಾಳನ ಹೆಸರು ಹೇಳಿ, “ಬಾಳನೇ, ನಮಗೆ ಕಿವಿಗೊಡು,” ಎಂದು ಹೊತ್ತಾರೆಯಿಂದ ಮಧ್ಯಾಹ್ನದವರೆಗೆ ಕೂಗಿದರು. ಆದರೆ ಯಾವ ವಾಣಿಯೂ ಕೇಳಿಸಲಿಲ್ಲ; ಅವರು ಪೀಠದ ಸುತ್ತಲೂ ಕುಣಿದಾಡಿದರು. ಆದರೂ ಯಾರೂ ಉತ್ತರಕೊಡಲಿಲ್ಲ. ಮಧ್ಯಾಹ್ನವಾದನಂತರ ಎಲೀಯನು ಅವರನ್ನು ಪರಿಹಾಸ್ಯ ಮಾಡಿದನು: “ಗಟ್ಟಿಯಾಗಿ ಕೂಗಿರಿ; ಅವನು ದೇವರಲ್ಲವೆ? ಈಗ ಒಂದು ವೇಳೆ ಅವನು ಧ್ಯಾನದಲ್ಲಿ ಇರಬಹುದು; ಇಲ್ಲವೇ, ಯಾವುದೋ ಕೆಲಸದಲ್ಲಿ ಅಥವಾ ಪ್ರಯಾಣದಲ್ಲಿ ಇರಬೇಕು; ಇಲ್ಲದಿದ್ದರೆ, ನಿದ್ರೆಮಾಡುತ್ತಿರಬೇಕು; ಎಚ್ಚರವಾಗಲಿ,” ಎಂದು ಹೇಳಿದನು. ಅವರು ಗಟ್ಟಿಯಾಗಿ ಕೂಗಿ ತಮ್ಮ ಪದ್ಧತಿಯ ಪ್ರಕಾರ ಈಟಿಕತ್ತಿಗಳಿಂದ ರಕ್ತಸೋರುವಷ್ಟು ಗಾಯಮಾಡಿಕೊಂಡರು. ಮಧ್ಯಾಹ್ನದಿಂದ ನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಪರವಶರಾಗಿ ಕೂಗುತ್ತಿದ್ದರು. ಆದರೂ ಯಾವ ವಾಣಿಯೂ ಕೇಳಿಸಲಿಲ್ಲ; ಯಾವನೂ ಅವರಿಗೆ ಉತ್ತರಕೊಡಲಿಲ್ಲ; ಅವರನ್ನು ಯಾವನೂ ಲಕ್ಷಿಸಲೂ ಇಲ್ಲ. ಅನಂತರ ಎಲೀಯನು ಜನರೆಲ್ಲರನ್ನು ಹತ್ತಿರಕ್ಕೆ ಕರೆದನು; ಅವರು ಬಂದರು. ಹಾಳಾಗಿದ್ದ ಅಲ್ಲಿನ ಸರ್ವೇಶ್ವರನ ಪೀಠವನ್ನು ದುರಸ್ತು ಮಾಡಿಸಿದನು. ಸರ್ವೇಶ್ವರನಿಂದ ‘ಇಸ್ರಯೇಲ್’ ಎಂಬ ಹೆಸರು ಹೊಂದಿದ ಯಕೋಬನ ಮಕ್ಕಳಿಂದ ಉತ್ಪತ್ತಿಯಾದ ಕುಲಗಳ ಸಂಖ್ಯೆಗೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು, ಸರ್ವೇಶ್ವರನ ಹೆಸರಿಗಾಗಿ ಒಂದು ಪೀಠವನ್ನು ಕಟ್ಟಿಸಿದನು. ಅದರ ಸುತ್ತಲೂ ಇಪ್ಪತ್ತು ಸೇರು ಬೀಜವರೀ ನೆಲವನ್ನು ಅಗಿಸಿ ಕಾಲುವೆ ಮಾಡಿಸಿದನು. ಕಟ್ಟಿಗೆಯನ್ನು ಪೀಠದ ಮೇಲೆ ಪೇರಿಸಿ, ಹೋರಿಯನ್ನು ವಧಿಸಿ ತುಂಡುಮಾಡಿ, ಅದರ ಮೇಲೆ ಇಟ್ಟನು. ಅನಂತರ ಜನರಿಗೆ, “ನಾಲ್ಕು ಕೊಡ ನೀರು ತಂದು ಬಲಿಮಾಂಸದ ಮೇಲೆಯೂ ಕಟ್ಟಿಗೆಯ ಮೇಲೆಯೂ ಹೊಯ್ಯಿರಿ,” ಎಂದು ಆಜ್ಞಾಪಿಸಿದನು. ಅವರು ಅಂತೆಯೇ ತೆಗೆದುಕೊಂಡು ಬಂದರು. “ಇನ್ನೊಂದು ಸಾರಿ ತನ್ನಿ,” ಎಂದು ಹೇಳಿದನು. ಅವರು ಇನ್ನೊಮ್ಮೆ ತಂದರು. ಅವನು ಮೂರನೆಯ ಸಾರಿ ಅದೇ ಪ್ರಕಾರ ಆಜ್ಞಾಪಿಸಲು ಅವರು ಮತ್ತೊಮ್ಮೆ ತಂದು ಸುರಿದರು. ನೀರು ವೇದಿಯ ಸುತ್ತಲೂ ಹರಿಯಿತು. ಇದಲ್ಲದೆ, ಅವನು ಕಾಲುವೆಯನ್ನೂ ನೀರಿನಿಂದ ತುಂಬಿಸಿದನು. ಸಂಧ್ಯಾನೈವೇದ್ಯದ ಹೊತ್ತಿಗೆ, ಪ್ರವಾದಿ ಎಲೀಯನು ಪೀಠದ ಹತ್ತಿರ ಬಂದು, “ಅಬ್ರಹಾಮ್, ಇಸಾಕ್, ಇಸ್ರಯೇಲರ ದೇವರೇ, ಸರ್ವೇಶ್ವರಾ, ನೀವೊಬ್ಬರೇ ಇಸ್ರಯೇಲರ ದೇವರಾಗಿರುತ್ತೀರಿ ಎಂಬುದನ್ನು, ನಾನು ನಿನ್ನ ದಾಸನಾಗಿರುತ್ತೇನೆಂಬುದನ್ನು ಹಾಗು ಇದನ್ನೆಲ್ಲಾ ನಿಮ್ಮ ಅಪ್ಪಣೆಯ ಮೇರೆಗೆ ಮಾಡಿದೆನೆಂಬುದನ್ನು ಈ ದಿನ ತೋರಿಸಿಕೊಡಿ. ನಮಗೆ ಕಿವಿಗೊಡಿ; ಸರ್ವೇಶ್ವರಾ ನಮಗೆ ಕಿವಿಗೊಡಿ; ಸರ್ವೇಶ್ವರನಾದ ನೀವೊಬ್ಬರೇ ದೇವರು ಹಾಗು ಈ ಜನರ ಮನಸ್ಸನ್ನು ನಿಮ್ಮಕಡೆಗೆ ತಿರುಗಿಸಿಕೊಳ್ಳುವವರು ಆಗಿರುತ್ತೀರಿ ಎಂಬುದನ್ನು ಇವರಿಗೆ ತಿಳಿಯಪಡಿಸಿ,” ಎಂದು ಪ್ರಾರ್ಥಿಸಿದನು. ಕೂಡಲೆ ಸರ್ವೇಶ್ವರನ ಕಡೆಯಿಂದ ಬೆಂಕಿ ಇಳಿದುಬಂದು ಬಲಿಮಾಂಸವನ್ನೂ ಕಟ್ಟಿಗೆ ಕಲ್ಲುಮಣ್ಣುಗಳನ್ನೂ ದಹಿಸಿಬಿಟ್ಟಿತು. ಕಾಲುವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು. ಜನರೆಲ್ಲರೂ ಅದನ್ನು ಕಂಡು ಬೋರಲಬಿದ್ದರು; “ಸರ್ವೇಶ್ವರನೇ ದೇವರು, ಸರ್ವೇಶ್ವರನೇ ದೇವರು,” ಎಂದು ಕೂಗಿದರು

ಕೀರ್ತನೆ: 4:2-3, 4-5, 7-8

ಶ್ಲೋಕ: ನೀಡು ದೇವಾ, ರಕ್ಷಣೆಯನು, ನಾ ನಿನಗೆ ಶರಣಾಗತನು

ಶುಭಸಂದೇಶ: ಮತ್ತಾಯ 5:17-19

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದು ಮಾಡಲು ನಾನು ಬಂದೆನೆಂದು ತಿಳಿಯಬೇಡಿ. ರದ್ದುಮಾಡಲು ಅಲ್ಲ, ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ. ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲ ನೆರವೇರುವುದೇ ಹೊರತು ಅದರಲ್ಲಿ ಒಂದು ಚಿಕ್ಕ ಅಕ್ಷರವಾಗಲಿ, ಚುಕ್ಕೆಯಾಗಲಿ ನಿರರ್ಥಕವಾಗದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವಲ್ಲಿ, ಅದರ ಆಜ್ಞೆಗಳಲ್ಲಿ ಅತಿ ಚಿಕ್ಕದೊಂದನ್ನು ಮೀರುವವನು, ಮೀರುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆಂದು ಪರಿಗಣಿತನಾಗುವನು; ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು."

12.03.2026 - ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದುರಿಸುತ್ತಾನೆ

 ಮೊದಲನೇ ವಾಚನ: ಯೆರೆಮೀಯ: 7: 23-28


ನಾನು ಕೊಟ್ಟ ಒಂದು ಕಟ್ಟಳೆಯೆಂದರೆ ಇದು - ನನ್ನ ಮಾತಿಗೆ ಕಿವಿಗೊಡಿ, ನಾನು ನಿಮ್ಮ ದೇವರಾಗಿರುತ್ತೇನೆ, ನೀವು ನನ್ನ ಪ್ರಜೆಯಾಗಿರಿ. ನಿಮಗೆ ಹಿತವಾಗುವಂತೆ ನಾನು ವಿಧಿಸುವ ಮಾರ್ಗದಲ್ಲೆ ನಡೆಯಿರಿ. ಆದರೆ ಅವರು ಕೇಳಲಿಲ್ಲ. ಕಿವಿಗೊಡಲಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ಅನುಸರಿಸಿದರು. ತಮ್ಮ ದುಷ್ಟ ಹೃದಯದ ನಿಮಿತ್ತ ಹಟಮಾರಿಗಳಂತೆ ನಡೆದುಕೊಂಡರು. ಮುಂದೆ ಸಾಗದೆ ಹಿಂದಿರುಗಿಯೇ ಹೋದರು. ನಿಮ್ಮ ಪೂರ್ವಜರು ಈಜಿಪ್ಟ್ ದೇಶದಿಂದ ಹೊರಟದಿನ ಮೊದಲುಗೊಂಡು ಈ ದಿನದವರೆಗೂ ನನ್ನ ದಾಸರಾದ ಎಲ್ಲ ಪ್ರವಾದಿಗಳನ್ನು ನಿಮ್ಮವರ ಬಳಿಗೆ ಕಳಿಸುತ್ತಾ ಬಂದು ಇದ್ದೇನೆ. ದಿನದಿನವೂ ತಡಮಾಡದೆ ಕಳಿಸಿದ್ದೇನೆ. ನಿಮ್ಮವರಾದರೋ ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲಿಲ್ಲ. ನನ್ನ ಆಜ್ಞೆಗೆ ಮಣಿಯಲಿಲ್ಲ. ತಮ್ಮ ಪೂರ್ವಜರಿಗಿಂತಲೂ ಕೆಟ್ಟವರಾಗಿ ನಡೆದುಕೊಂಡರು.” “ಯೆರೆವಿೂಯನೇ, ನೀನು ಈ ಮಾತುಗಳನ್ನು ಅವರಿಗೆ ಹೇಳಿದರೂ ಅವರು ಕಿವಿಗೊಡುವುದಿಲ್ಲ, ಕರೆದರೂ ಅವರು ಓಗೊಡುವುದಿಲ್ಲ. ಆದಕರಣ ನೀನು ಅವರಿಗೆ – ‘ತನ್ನ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದ, ದಂಡಿಸಿದರೂ ತಿದ್ದುಕೊಳ್ಳದ ಜನಾಂಗ ಇದುವೇ; ಸತ್ಯವೆಂಬುದು ಅಳಿದುಹೋಗಿದೆ, ಇದರ ಬಾಯಿಂದ ಕಡಿದು ಹೋಗಿದೆ’ ಎಂದು ಹೇಳು.”

ಕೀರ್ತನೆ: 95:1-2, 6-7, 8-9

ಶ್ಲೋಕ: ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ, ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ.

ಬನ್ನಿ, ಸ್ತುತಿಗೀತೆ ಹಾಡೋಣ ಬನ್ನಿ, ಪ್ರಭುವಿಗೆ I
ಜಯಘೋಷ ಮಾಡೋಣ ನಮ್ಮ ರಕ್ಷಕ ದೇವನಿಗೆ II

ಆತನ ಸನ್ನಿಧಿ ಸೇರೋಣ ಕೃತಜ್ಞತಾಸ್ತುತಿಯೊಂದಿಗೆ I
ಜಯಜಯಕಾರ ಮಾಡೋಣ ಕೀರ್ತನೆಗಳಿಂದಾತನಿಗೆ II

ಬನ್ನಿ ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ I
ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ II

ಆತನೆಮ್ಮ ದೇವರು, ನಾವು ಆತನ ಕೈಮಂದೆ I
ಆತನಿಂದಲೇ ಪಾಲನೆಪೋಷಣೆ ಪಡೆದ ಜನತೆ II

ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ I
ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ I

ಮೆರಿಬಾದಲಿ, ಮಸ್ಸಾ ಮರುಭೂಮಿಯಲಿ ಅವರು ಮಾಡಿದಂತೆ II
ನೋಡಿದರಾದರೂ ನನ್ನ ಮಹತ್ಕಾರ್ಯಗಳನು I
ಅಲ್ಲವರು ಕೆಣಕಿದರು, ಪರಿಶೋಧಿಸಿದರು ನನ್ನನು II

ಶುಭಸ೦ದೇಶ: ಲೂಕ 11:14-23

ಒಮ್ಮೆ ಯೇಸುಸ್ವಾಮಿ ಒಂದು ಮೂಕ ದೆವ್ವವನ್ನು ಬಿಡಿಸುತ್ತಿದ್ದರು. ಆ ದೆವ್ವ ಬಿಟ್ಟು ಹೋದ ಮೇಲೆ ಮೂಕನು ಮಾತನಾಡಿದನು. ಜನರು ಆಶ್ಚರ್ಯಚಕಿತರಾದರು. ಆದರೆ ಅವರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ,” ಎಂದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಸ್ವರ್ಗದಿಂದ ಒಂದು ಅದ್ಭುತ ಕಾರ್ಯವನ್ನು ಮಾಡಿ ತೋರಿಸುವಂತೆ ಕೇಳಿದರು. ಅವರ ಆಲೋಚನೆಗಳನ್ನು ಅರಿತುಕೊಂಡ ಯೇಸು, “ಅಂತಃಕಲಹದಿಂದ ಒಡೆದು ಹೋಗಿರುವ ಪ್ರತಿಯೊಂದು ರಾಜ್ಯ ನಾಶವಾಗುವುದು; ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಾಗುವುವು. ಅಂತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು? ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು. ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ, ಎಂಬುದು ಸ್ಪಷ್ಟ. “ಬಲಿಷ್ಠನೊಬ್ಬನು ಸರ್ವಾಯುಧಗಳಿಂದ ಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ. ಆದರೆ ಇವನಿಗಿಂತಲೂ ಬಲಿಷ್ಠನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಯನ್ನು ಹಂಚಿಕೊಡುತ್ತಾನೆ. “ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದುರಿಸುತ್ತಾನೆ,” ಎಂದರು.

ಮನಸ್ಸಿಗೊಂದಿಷ್ಟು : ಇಂದಿನ ಶುಭಸಂದೇಶದಲ್ಲಿ ಎರಡು ಸಂಗತಿಗಳು ಸ್ಪಷ್ಟವಾಗುತ್ತವೆ. ಒಂದು ಅದೆಷ್ಟೇ ಒಳ್ಳೆಯ ಕಾರ್ಯ ಮಾಡಿದರೂ, ಮಾಡಲು ಪ್ರಯತ್ನಿಸಿದರೂ ಕಾಲೆಳೆಯುವ ಜನರಿದ್ದೇ ಇರುತ್ತಾರೆ. ಯೇಸು ದೆವ್ವ ಹಿಡಿದವನನ್ನು ಗುಣಪಡಿಸಿದರೂ ಅದಕ್ಕೊಂದು ಕೊಂಕು ಮಾತು ಬಂತು. ದಿಟ್ಟವಾಗಿ ಉತ್ತರಿಸಿದ ಯೇಸುವಿನಂತೆ ನಮ್ಮ ಕಾರ್ಯದ ಒಳಿತಿನ ಬಗ್ಗೆ ನಾವು ಸ್ಪಷ್ಟವಾಗಿರಬೇಕಷ್ಟೇ 

ಇನ್ನೊಂದು ನಮ್ಮ ಕ್ರೈಸ್ತ ಜೀವನದಲ್ಲಿ ನಾವು ತಟಸ್ಥರಾಗುವಂತಿಲ್ಲ. ನಾವು ಕ್ರಿಸ್ತನ ಪರ ಅಥವಾ ಕ್ರಿಸ್ತನ ವಿರುದ್ಧ, ಅಷ್ಟೇ ನಮ್ಮ ಆಯ್ಕೆ . ಕ್ರಿಸ್ತ ಕಲಿಸಿದ ಆಶಯಗಳ ಪರ ಅಥವಾ ವಿರುದ್ಧವಷ್ಟೇ ನಾವು ತೆಗೆದುಕೊಳ್ಳಬೇಕಾದ ನಿಲುವು. ಸ್ಪಷ್ಟತೆಗಾಗಿ ಪ್ರಾರ್ಥಿಸೋಣ - ಜೀವವಾಕ್ಯ 

10.03.2026 - ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು

 ಮೊದಲನೇ ವಾಚನ: ಅಜರ್ಯ 1:2, 11-20

ಅಜರ್ಯನು ಬೆ೦ಕಿಯ ನಡುವೆ ನಿ೦ತುಕೊ೦ಡು ಗಟ್ಟಿಯಾಗಿ ಕೂಗಿ ಹೀಗೆ೦ದು ಪ್ರಾರ್ಥನೆ ಮಾಡಿದ: ಪ್ರಭೂದೇವಾ, ನಿಮ್ಮ ನಾಮದ ಪ್ರಯುಕ್ತ ನಮ್ಮನ್ನು ಎ೦ದೆ೦ದಿಗೂ ತ್ಯಜಿಸಬೇಡಿ. ನಿಮ್ಮ ಮಿತ್ರ ಅಬ್ರಹಾಮನ ನಿಮಿತ್ತ ನಿಮ್ಮ ದಾಸ ಇಸಾಕನ, ನಿಮ್ಮ ಭಕ್ತ ಯಕೋಬನ ಪ್ರಯುಕ್ತ ನಿಮ್ಮ ಕೃಪೆ ನಮ್ಮನ್ನು ಬಿಟ್ಟಗಲದಿರಲಿ. ಇವರಿಗೆ, "ನಿಮ್ಮ ಸ೦ತಾನವನ್ನು ಆಕಾಶದ ನಕ್ಷತ್ರಗಳ೦ತೆ ಸಮುದ್ರ ತೀರದ ಮರಳಿನ೦ತೆ ಅಸ೦ಖ್ಯವಾಗಿಸುವೆ" ಎ೦ದು ನೀವು ವಾಗ್ಧಾನ ಮಾಡಿದಿರಲ್ಲವೆ? ಒಡೆಯಾ, ಉಳಿದ ರಾಷ್ಟ್ರಗಳಿಗಿ೦ತ ನಾವು ಕನಿಷ್ಟರಾಗಿಬಿಟ್ಟೆವು, ನಮ್ಮ ಪಾಪಗಳ ಕಾರಣ ಜಗದಲ್ಲಿನ ಹೀನಸ್ಥಿತಿಗೆ ಇಳಿದುಬಿಟ್ಟೆವು. ನಮಗೀಗ ರಾಜರಿಲ್ಲ, ಪ್ರವಾದಿಗಳಿಲ್ಲ, ನಾಯಕರಿಲ್ಲ; ಹೋಮವಿಲ್ಲ, ಬಲಿದಾನವಿಲ್ಲ, ನೈವೇದ್ಯವಿಲ್ಲ, ಧೂಪವಿಲ್ಲ. ಕಾಣಿಕೆಯನ್ನರ್ಪಿಸಿ ನಿಮ್ಮ ಕೃಪೆ ಪಡೆಯಲು ಸ್ಥಳವೂ ಇಲ್ಲ; ಆದರೂ ಪಶ್ಚಾತ್ತಾಪದ ಹೃದಯ, ದೀನಮನ ನಿಮಗೆ ಅ೦ಗೀಕೃತವಾಗಲಿ. ಹೋತಹೋರಿಗಳ, ಸಾವಿರಾರು ಕೊಬ್ಬಿದ ಕುರಿಮರಿಗಳ ದಹನಬಲಿದಾನದ೦ತೆ ನಮ್ಮೀ ಅ೦ತರ೦ಗದ ಬಲಿ ನಿಮಗಿ೦ದು ಅ೦ಗೀಕೃತವಾಗಲಿ. ಪೂರ್ಣ ಹೃದಯದಿ೦ದ ನಿಮ್ಮನ್ನೀಗ ಹಿ೦ಬಾಲಿಸುತ್ತೇವೆ ನಿಮ್ಮಲ್ಲಿ ಭಯಭಕ್ತಿಯಿಡುತ್ತೇವೆ ನಿಮ್ಮ ಸನ್ನಿಧಿಯನ್ನು ಮತ್ತೆ ಅರಸುತ್ತೇವೆ. ನಮ್ಮನ್ನು ನಿರಾಶೆಗೊಳಿಸಬೇಡಿ ನಿಮ್ಮ ಸೈರಣೆಗೆ ತಕ್ಕ೦ತೆ, ನಿಮ್ಮ ಕೃಪಾತಿಶಯದ ಪ್ರಕಾರ ನಮ್ಮ ಸ೦ಗಡ ವರ್ತಿಸಿ.

ಕೀರ್ತನೆ: 25:4-5, 6-7, 8-9
ಶ್ಲೋಕ: ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು I

ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು I
ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು II

ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ, ಮುಕ್ತಿದಾತ I
ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ II

ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು I
ಆದಿಯಿಂದ ನೀ ತೋರಿದಚಲ ಪ್ರೀತಿಯನು II

ಯೌವನದೆನ್ನ ಪಾಪಪ್ರವೃತ್ತಿಗಳ ಮನದಲ್ಲಿಟ್ಟುಕೊಳ್ಳಬೇಡ I
ನಿನ್ನೊಲುಮೆ ನಲ್ಮೆಗಳ ನಿಮಿತ್ತ ಪ್ರಭು, ನನ್ನ ನೆನೆಯದಿರಬೇಡ II

ಸತ್ಯಸ್ವರೂಪನು, ದಯಾವಂತನು ಪ್ರಭು I
ದಾರಿತಪ್ಪಿದವರಿಗೆ ಬೋಧಕನು ವಿಭು II

ದೀನರನು ನಡೆಸುವನು ತನ್ನ ವಿಧಿಗನುಸಾರ I
ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ II

ಶುಭಸ೦ದೇಶ: ಮತ್ತಾಯ 18:21-35


ಪೇತ್ರನು ಯೇಸುವಿನ ಬಳಿಗೆ ಬಂದು, “ಸ್ವಾವಿೂ, ನನಗೆ ವಿರುದ್ಧ ದ್ರೋಹ ಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳುಸಲವೇ?” ಎಂದು ಕೇಳಿದನು. “ಏಳುಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ ಹೇಳುತ್ತೇನೆ” ಎಂದು ಯೇಸು ಉತ್ತರವಿತ್ತರು. ಯೇಸು ತಮ್ಮ ಮಾತನ್ನು ಮುಂದುವರಿಸುತ್ತಾ, “ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ: ಒಬ್ಬ ರಾಜನಿದ್ದ. ಅವನು ತನ್ನ ಸೇವಕರಿಂದ ಲೆಕ್ಕ ಕೇಳಲು ನಿರ್ಧರಿಸಿದ. ಲೆಕ್ಕ ತೆಗೆದುಕೊಳ್ಳಲು ಆರಂಭಿಸಿದಾಗ ಹತ್ತು ಸಾವಿರ ‘ಚಿನ್ನದ ನಾಣ್ಯ’ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು. ಆದರೆ ಸಾಲ ತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿಂದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ, ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲ ತೀರಿಸುವಂತೆ ರಾಜ ಆಜ್ಞಾಪಿಸಿದ. ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊಂಡ: ‘ಸ್ವಲ್ಪ ಸೈರಿಸಿಕೊಳ್ಳಿ ಸ್ವಾವಿೂ, ನಿಮ್ಮ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಅಂಗಲಾಚಿದ. ರಾಜನಿಗೆ ಕನಿಕರ ಉಂಟಾಯಿತು. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿ ಬಿಟ್ಟ. “ಆದರೆ ಅದೇ ಸೇವಕ ಹೊರಗೆ ಬಂದದ್ದೇ ತನಗೆ ಕೇವಲ ನೂರು ‘ಬೆಳ್ಳಿಕಾಸು’ ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊಂಡ. ಅವನನ್ನು ಹಿಡಿದು, ‘ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು,’ ಎಂದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, ‘ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ,’ ಎಂದು ಕಾಲಿಗೆ ಬಿದ್ದು ಕೇಳಿಕೊಂಡ. ಆದರೂ ಅವನು ಒಪ್ಪಲಿಲ್ಲ. ಅಷ್ಟುಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ. ಇದೆಲ್ಲವನ್ನು ಕಂಡ ಇತರ ಸೇವಕರು ಬಹಳವಾಗಿ ನೊಂದುಕೊಂಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು. ರಾಜನು ಅವನನ್ನು ಕರೆಯಿಸಿ, ‘ಎಲೋ ನೀಚ, ನೀನು ಬೇಡಿಕೊಂಡಿದ್ದರಿಂದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ. ನಾನು ನಿನಗೆ ದಯೆ ತೋರಿಸಿದಂತೆ ನೀನೂ ನಿನ್ನ ಜೊತೆಗಾರನಿಗೆ ದಯೆ ತೋರಿಸಬೇಕಿತ್ತು ಅಲ್ಲವೇ?’ ಎಂದು ಸಿಟ್ಟುಗೊಂಡ. ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ. “ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆ ನಿಮಗೆ ಇದರಂತೆಯೇ ಮಾಡುವರು,” ಎಂದರು.

ಮನಸ್ಸಿಗೊಂದಿಷ್ಟು :  ನಾವು ಪೇತ್ರರಿಗೆ ಧನ್ಯವಾದಗಳನ್ನು ಸಲ್ಲಿಸಬೇಕು . ನಮ್ಮಲ್ಲಿ ಏಳಬಹುದಾದ ಎಷ್ಟೋ ಪ್ರಶ್ನೆ ಅನುಮಾನಗಳನ್ನು ಯೇಸುವಿನ ಬಳಿ ಕೇಳಿ ಬೈಸಿಕೊಂಡವರು ಪೇತ್ರರು. ಇಂದಿನ ಶುಭಸಂದೇಶದಲ್ಲಿ ಆದದ್ದೂ ಅದೇ. ಅಂದಿನ ಯಹೂದ್ಯ ಪದ್ದತಿಯಲ್ಲಿ ಒಬ್ಬನ ತಪ್ಪನ್ನು ಮೂರು ಬಾರಿ ಕ್ಷಮಿಸಬಹುದಿತ್ತು. ಅದೇ ವಾಡಿಕೆಯಲ್ಲಿ ಪೇತ್ರ ಒಂದಷ್ಟು ಮುಂದೆ ಹೋಗಿ ಮೂರನ್ನು ದುಪ್ಪಟ್ಟು ಪಡಿಸಿ ಅದಕ್ಕೆ ಮತ್ತೊಂದು ಸೇರಿಸಿ ಏಳು ಬಾರಿ ಕ್ಷಮಿಸಬಹುದೇ ಎಂದು ಕೇಳಿ ಯೇಸುವಿನ ಮೆಚ್ಚುಗೆ ಪಡೆಯಲು  ಪ್ರಯತ್ನಿಸುತ್ತಾನೆ. 

ಯೇಸು, ಕ್ಷಮೆ ನೀಡಿದ ರಾಜ - ಕ್ಷಮೆ ನೀಡದ ಸೇವಕನ ಸಾಮತಿ ಹೇಳುತ್ತಾರೆ. ಒಂದು ಅಂದಾಜಿನ ಪ್ರಕಾರ ಆ ರಾಜ ತನ್ನ ಸೇವಕನಿಗೆ  ನೀಡಿದ ಸಾಲದ  ಮೊತ್ತ ಆ ಸೇವಕ ಮತ್ತೊಬ್ಬನಿಗೆ ನೀಡಿದಕ್ಕೆ  5000 ಪಟ್ಟಷ್ಟು ಹೆಚ್ಚು.  ಆದರೂ ರಾಜ ಸಾಲ ಮನ್ನಿಸುತ್ತಾನೆ, ಅದೇ ಸೇವಕ ಉದಾರಿಯಾಗದೆ ಕ್ಷಮಿಸದೇ ಹೋಗುತ್ತಾನೆ.

ನಾವು ದೇವರ ಮುಂದೆ ಮಾಡಿದ ತಪ್ಪುಗಳು, ಮತ್ತೊಬ್ಬರು ನಮಗೆ ಮಾಡಿದ ತಪ್ಪಿಗಿಂತ ಎಷ್ಟೋ ಪಟ್ಟುಗಳು ಹೆಚ್ಚು. ಉದಾರಿಯಾಗಿ ಕ್ಷಮಿಸುವ ದೇವರ ಮನಸ್ಸು ನಮ್ಮದಾಗಬೇಕೆಂದು ಯೇಸು ಬಯಸುತ್ತಾರೆ. ಹಾಗೆ ಆದರೆ ಎಷ್ಟು ಚೆಂದವಲ್ಲವೇ?

09.03.2026 - ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ

ಮೊದಲನೆಯ  ವಾಚನ

ಅರಸುಗಳ  ಎರಡನೆಯ  ಗ್ರಂಥ 5:1-15


"ಇಸ್ರಯೇಲ್  ನಾಡಿನಲ್ಲಿ  ಆನೇಕ  ಕುಷ್ಠರೋಗಿಗಳು  ಇದ್ದರು.  ಅವರಲ್ಲಿ  ಸಿರಿಯ  ದೇಶದ  ನಾಮನನ್ನು  ಬಿಟ್ಟು  ಮಿಕ್ಕ  ಯಾರೂ  ಗುಣಮುಖರಾಗಲಿಲ್ಲ." ಸಿರಿಯಾದ  ರಾಜನಿಗೆ  ನಾಮನ್  ಎಂಬೊಬ್ಬ  ಸೇನಾಪತಿಯಿದ್ದನು.  ಸರ್ವೇಶ್ವರಸ್ವಾಮಿ  ಇವನ  ಮುಖಾಂತರ  ಸಿರಿಯಾದವರಿಗೆ  ಜಯವನ್ನು  ಅನುಗ್ರಹಿಸಿದ್ದರು.  ಆದುದರಿಂದ  ರಾಜನು  ಇವನನ್ನು  ಮಹಾ  ಪುರುಷನೆಂದೂ  ಸನ್ಮಾನ್ಯನೆಂದು  ಗೌರವಿಸುತ್ತಿದ್ದನು.  ಆದರೆ  ಪರಾಕ್ರಮಶಾಲಿಯಾದ  ಇವನು  ಭೀಕರ  ಚರ್ಮರೋಗದಿಂದ  ನರಳುತ್ತಿದ್ದನು.  ಸಿರಿಯಾದವರು,  ಒಮ್ಮೆ  ಸುಲಿಗೆಗಾಗಿ  ಇಸ್ರಯೇಲರ  ಪ್ರಾಂತ್ಯಕ್ಕೆ  ಹೋಗಿ  ಬರುವಾಗ,  ಅಲ್ಲಿನ  ಒಬ್ಬ  ಹುಡುಗಿಯನ್ನು  ಹಿಡಿದುಕೊಂಡು  ಬಂದರು.  ಆಕೆ  ನಾಮಾನನ  ಹೆಂಡತಿಗೆ  ದಾಸಿಯಾದಳು.  ಒಂದು  ದಿನ  ಆಕೆ  ತನ್ನ  ಯಜಮಾನನಿಗೆ,  "ನಮ್ಮ  ದಣಿಯವರು  ಸಮಾರಿಯದಲ್ಲಿರುವ  ಪ್ರವಾದಿಯ  ಹತ್ತಿರ  ಇದ್ದಿದ್ದರೆ  ಎಷ್ಟೋ  ಒಳ್ಳೇದಾಗುತ್ತಿತ್ತು ;  ಅವರು  ಇವರನ್ನು  ಈ  ಚರ್ಮರೋಗದಿಂದ  ಗುಣಪಡಿಸುತ್ತಿದ್ದರು, " ಎಂದು  ಹೇಳಿದಳು.  ನಾಮಾನನು  ರಾಜನ  ಸನ್ನಿಧಿಗೆ  ಹೋಗಿ,  ಇಸ್ರಯೇಲ್  ನಾಡಿನ  ಹುಡುಗಿ  ಹೇಳಿದ್ದನ್ನು  ತಿಳಿಸಿದನು.  ಅವನು,  "ನೀನು  ಅಲ್ಲಿಗೆ  ಹೋಗಿ  ಬಾ;  ನಾನು  ನಿನ್ನ  ಕೈಯಲ್ಲಿ  ಇಸ್ರಯೇಲರ  ಅರಸನಿಗೆ  ಒಂದು  ಪತ್ರವನ್ನು  ಕೊಡುತ್ತೇನೆ," ಎಂದನು.

ನಾಮಾನನು  ಮೂವತ್ತು  ಸಾವಿರ  ಬೆಳ್ಳಿ,  ಆರು  ಸಾವಿರ  ಬಂಗಾರ  ನಾಣ್ಯಗಳನ್ನೂ,  ಹತ್ತು  ದುಸ್ತು  ಬಟ್ಟೆಗಳನ್ನೂ  ತೆಗೆದುಕೊಂಡು  ಸಮಾರಿಯಕ್ಕೆ  ಹೋದನು;  ತಂದ  ಪತ್ರವನ್ನು  ಇಸ್ರಯೇಲರ  ಅರಸನಿಗೆ  ಕೊಟ್ಟನು.  ಅದರಲ್ಲಿ,  "ನನ್ನ  ಸೇವಕ  ನಾಮಾನನನ್ನು  ನಿಮ್ಮ  ಬಳಿಗೆ  ಕಳುಹಿಸಿದ್ದೇನೆ;  ನೀವು  ಅವನ  ಚರ್ಮರೋಗವನ್ನು  ವಾಸಿಮಾಡತಕ್ಕದ್ದೆಂದು  ಈ  ಪತ್ರದಿಂದ  ತಿಳಿದುಕೊಳ್ಳಿ" ಎಂಬುದಾಗಿ  ಬರೆದಿತ್ತು.  ಇಸ್ರಯೇಲರ  ಅರಸನು  ಈ  ಪತ್ರವನ್ನು  ಓದಿದ  ಕೂಡಲೇ;  ಸಿಟ್ಟಿನಿಂದ  ಬಟ್ಟೆಗಳನ್ನು  ಹರಿದುಕೊಂಡು,  ತನ್ನ  ಪರಿವಾರದವರಿಗೆ,  "ತಾನು  ಕಳುಹಿಸಿದ  ವ್ಯಕ್ತಿಯನ್ನು  ಚರ್ಮರೋಗದಿಂದ  ನಾನು  ವಾಸಿಮಾಡಬೇಕಂತೆ !  ಇದು  ಎಂಥ  ಅಪ್ಪಣೆ!  ನಾನೇನು  ದೇವರೋ?  ಜೀವದಾನ  ಮಾಡುವುದಕ್ಕಾಗಲಿ,  ಜೀವಹರಣ  ಮಾಡುವುದಕ್ಕಾಗಲಿ  ನನಗೆ   ಸಾಮರ್ಥ್ಯವುಂಟೇ?  ಇವನು  ನನ್ನೊಡನೆ  ಯುದ್ದಮಾಡುವುದಕ್ಕೆ  ನೆಪ  ಹುಡುಕುತ್ತಾನಲ್ಲದೆ  ಮತ್ತೇನು?  ನೀವೇ  ಆಲೋಚಿಸಿ  ನೋಡಿ,"  ಎಂದು  ಹೇಳಿದನು.  ಇಸ್ರಯೇಲರ  ಅರಸನು  ಸಿಟ್ಟಿನಿಂದ  ತನ್ನ  ಬಟ್ಟೆಗಳನ್ನು  ಹರಿದುಕೊಂಡನೆಂಬುದನ್ನು  ದೈವ ಪುರುಷ  ಎಲೀಷನು  ಕೇಳಿದನು.  ದೂತರ  ಮುಖಾಂತರ  ಅವನಿಗೆ,  "ನೀವು  ನಿಮ್ಮ  ಬಟ್ಟೆಗಳನ್ನು  ಹರಿದುಕೊಂಡದ್ದೇಕೆ?  ಅವನನ್ನು  ನನ್ನ  ಬಳಿಗೆ  ಕಳುಹಿಸಿ;  ಇಸ್ರಯೇಲರಲ್ಲಿ  ಒಬ್ಬ  ಪ್ರವಾದಿ  ಇದ್ದಾನೆಂಬುದು  ಅವನಿಗೆ  ಗೊತ್ತಾಗಲಿ,"  ಎಂದು  ಹೇಳಿ ಕಳುಹಿಸಿದನು.  ನಾಮನನು  ರಥರಥಾಶ್ವಗಳೊಡನೆ  ಎಲೀಷನ  ಮನೆಗೆ  ಹೋಗಿ  ಬಾಗಿಲಿನ  ಮುಂದೆ  ನಿಂತನು.  ಎಲೀಷನು  ಅವನಿಗೆ,  "ಹೋಗಿ  ಜೋರ್ಡನ್  ನದಿಯಲ್ಲಿ  ಏಳು  ಸಾರಿ  ಸ್ನಾನಮಾಡು;  ಆಗ  ನಿನ್ನ  ದೇಹ  ಮೊದಲಿದ್ದಂತಾಗುವುದು;  ನೀನು  ಶುದ್ದನಾಗುವೆ," ಎಂದು  ಹೇಳಿಕಳುಹಿಸಿದನು.  ನಾಮನನು  ಇದನ್ನು  ಕೇಳಿ  ಕೋಪಗೊಂಡನು.  "ಇದೇನು!  ಇವನು  ಖಂಡಿತವಾಗಿ  ಹೊರಗೆಬಂದು  ನಿಂತು,  ತನ್ನ  ದೇವರಾದ  ಸರ್ವೇಶ್ವರನ  ಹೆಸರು  ಹೇಳಿ,  ನನ್ನ  ಚರ್ಮದ  ಮೇಲೆ  ಕೈಯಾಡಿಸಿ,  ರೋಗ ವಾಸಿಮಾಡುವನೆಂದು  ನೆನಸಿದೆ.  ದಮಸ್ಕದ  ಅಬಾನಾ  ಹಾಗು  ಪರ್ಪರ್  ಎಂಬ  ನದಿಗಳು  ಇಸ್ರಯೇಲರ  ಎಲ್ಲಾ  ನದಿ  ಹೊಳೆಗಳಿಗಿಂತ  ಉತ್ತಮವಾಗಿವೆಯಲ್ಲವೆ?  ಸ್ನಾನದಿಂದ  ವಾಸಿಯಾಗುವ  ಹಾಗಿದ್ದರೆ  ನಾನು  ಅವುಗಳಲ್ಲಿಯೇ  ಸ್ನಾನಮಾಡಬಹುದಿತ್ತಲ್ಲವೆ? ಎಂದು  ಹೇಳಿ,  ಬಹಳ  ಸಿಟ್ಟಿನಿಂದ  ಹೊರಟುಹೋದನು.  ಆಗ  ಅವನ  ಸೇವಕರು  ಹತ್ತಿರ  ಬಂದು,  "ಯಜಮಾನರೇ,  ಪ್ರವಾದಿ  ಒಂದು  ಕಠಿಣವಾದ  ಕೆಲಸವನ್ನು  ಹೇಳಿದ್ದರೆ  ಅದನ್ನು  ಮಾಡುತ್ತಿದ್ದಿರಲ್ಲವೆ?  ಹಾಗಾದರೆ  'ಸ್ನಾನಮಾಡಿ,  ಶುದ್ಧರಾಗುವಿರಿ'  ಎಂದು  ಹೇಳಿದರೆ  ಏಕೆ  ಅದರಂತೆ  ಮಾಡಬಾರದು?" ಎಂದರು.  ಅವನು  ಅಂತೆಯೇ  ಜೋರ್ಡನಿಗೆ  ಹೋಗಿ,  ಏಳು  ಸಾರಿ  ಅದರಲ್ಲಿ  ಮುಳುಗಿ  ಎದ್ದನು.  ಕೂಡಲೆ  ದೈವ  ಪುರುಷನ  ಮಾತಿಗನುಸಾರ  ಅವನ  ದೇಹ  ಒಂದು  ಮಗುವಿನ  ದೇಹದಂತೆ  ಶುದ್ದವಾಯಿತು.  ಅನಂತರ  ನಾಮನನು  ತನ್ನ  ಪರಿವಾರದವರೊಡನೆ  ಹಿಂದಿರುಗಿ  ದೈವ  ಪುರುಷನ  ಬಳಿಗೆ  ಹೋಗಿ  ಅವನ  ಮುಂದೆ  ನಿಂತನು.  "ಇಸ್ರಯೇಲ್  ನಾಡಿನಲ್ಲಿರುವ  ದೇವರ  ಹೊರತು,  ಲೋಕದಲ್ಲಿ  ಬೇರೆ  ದೇವರು ಇಲ್ಲವೇ ಇಲ್ಲವೆಂಬುದು  ಈಗ  ನನಗೆ  ಗೊತ್ತಾಯಿತು," ಎಂದು  ಹೇಳಿದನು.

ಪ್ರಭುವಿನ  ವಾಕ್ಯ

ಕೀರ್ತನೆ: 42: 1-2, 43: 3-4, v.2

ಶ್ಲೋಕ:  ಜೀವಂತ  ದೇವನಿಗಾಗಿ  ದಾಹದಿಂದಿದೆ  ಎನ್ನ  ಮನ | ನಾ  ತೆರಳಿ  ಪಡುವುದೆಂತು  ಆ  ದೇವನ  ಮುಖದರ್ಶನ ||*

1.  ಬಾಯಾರಿದ  ಜಿಂಕೆ  ಹಾತೊರೆಯುವಂತೆ  ತೊರೆಯಾಗಿ|

ದಣಿದಿದೆನ್ನ  ಮನ  ದೇವಾ,  ಹಂಬಲಿಸುತಿದೆ  ನಿನಗಾಗಿ||

ಶ್ಲೋಕ

2.  ಜೀವಂತ  ದೇವನಿಗಾಗಿ  ದಾಹದಿಂದಿದೆ  ಎನ್ನ  ಮನ|

ನಾ  ತೆರಳಿ  ಪಡುವುದೆಂತು  ಆ  ದೇವನ  ಮುಖದರ್ಶನ||

ಶ್ಲೋಕ

3.  ಕಳುಹಿಸು  ನಿನ್ನ  ಜ್ಯೋತಿಯನು,  ನಿನ್ನ  ಸತ್ಯವನ್ನು  ನನ್ನ  ನಡೆಸಲಿಕೆ|

ಸೇರಿಸಲೆನ್ನನು  ನಿನ್ನ  ಪವಿತ್ರ  ಪರ್ವತಕೆ,   ನಿನ್ನಯ  ನಿವಾಸಕೆ||

ಶ್ಲೋಕ

4.  ಬರುವೆನಾಗ  ನಿನ್ನ  ಬಲಿಪೀಠದ  ಬಳಿಗೆ|

ನನ್ನಾನಂದ  ನಿಧಿಯಾದ  ನಿನ್ನ  ಸನ್ನಿಧಿಗೆ||

ಶ್ಲೋಕ

ಘೋಷಣೆ      ‍                                     ‍

ದೇವರ ವಾಕ್ಯವಾದ ಪ್ರಭು ಯೇಸುವೇ, ನಿಮಗೆ ಸದಾ  ಮಹಿಮೆ ಸಲ್ಲಲಿ

ಲೂಕನು  ಬರೆದ  ಪವಿತ್ರ  ಶುಭಸಂದೇಶದಿಂದ  ವಾಚನ  4:24-30

Uploading: 115475 of 115475 bytes uploaded.


ಆ  ಕಾಲದಲ್ಲಿ  ಯೇಸು  ತಾವು  ಬೆಳೆದ  ಊರಾದ  ನಜರೇತಿಗೆ  ಬಂದರು.  ಅಲ್ಲಿನ   ಪ್ರಾರ್ಥನಾಮಂದಿರದಲ್ಲಿ  ಬೋಧಿಸುತ್ತಾ  ಹೀಗೆಂದರು:ಯಾವ  ಪ್ರವಾದಿಯೂ  ಸ್ವಗ್ರಾಮದಲ್ಲಿ  ಸನ್ಮಾನಿತನಲ್ಲ  ಎಂದು  ನಿಮಗೆ  ನಿಶ್ಚಯವಾಗಿ  ಹೇಳುತ್ತೇನೆ.  ಹಿಂದೆ  ನಡೆದ  ಒಂದು  ಸಂಗತಿಯನ್ನು  ಕೇಳಿ :  ಎಲೀಯನ  ಕಾಲದಲ್ಲಿ  ಮೂರು ವರ್ಷ  ಆರು  ತಿಂಗಳು  ಮಳೆ  ಬಾರದೆ  ದೇಶದಲ್ಲೆಲ್ಲಾ  ದೊಡ್ಡ  ಕ್ಷಾಮ  ಬಂದೊದಗಿತ್ತು.  ಆಗ  ಇಸ್ರಯೇಲ್  ನಾಡಿನಲ್ಲಿ  ಎಷ್ಟೋ  ಮಂದಿ  ವಿಧವೆಯರಿದ್ದರು.  ಅವರಾರ  ಬಳಿಗೂ  ದೇವರು  ಎಲೀಯನನ್ನು  ಕಳಿಸಲಿಲ್ಲ.  ಸಿದೋನ್  ದೇಶಕ್ಕೆ  ಸೇರಿದ  ಸರೆಪ್ತ  ಊರಿನ  ಒಬ್ಬ  ವಿಧವೆಯ  ಬಳಿಗೆ  ಮಾತ್ರ  ಕಳುಹಿಸಿದರು.  ಅಂತೆಯೇ,  ಎಲೀಷನೆಂಬ  ಪ್ರವಾದಿಯ  ಕಾಲದಲ್ಲಿ  ಇಸ್ರಯೇಲ್  ನಾಡಿನಲ್ಲಿ  ಅನೇಕ  ಕುಷ್ಠ  ರೋಗಿಗಳು  ಇದ್ದರು.  ಅವರಲ್ಲಿ  ಸಿರಿಯ  ದೇಶದ  ನಾಮನನು  ಬಿಟ್ಟು  ಮಿಕ್ಕ  ಯಾರೂ  ಗುಣಮುಖರಾಗಲಿಲ್ಲ, " ಎಂದು  ಹೇಳಿದರು.  ಇದನ್ನು  ಕೇಳಿ,  ಪ್ರಾರ್ಥನಾಮಂದಿರದಲ್ಲಿ  ಇದ್ದ  ಎಲ್ಲರೂ  ಕಡುಗೋಪಗೊಂಡರು.  ಯೇಸುವನ್ನು  ಆ  ಊರಹೊರಕ್ಕೆ  ಎಳೆದುಕೊಂಡು,  ತಮ್ಮ  ಊರಿದ್ದ  ಗುಡ್ಡದ  ತುದಿಗೆ  ಕೊಂಡೊಯ್ದು,  ಅಲ್ಲಿಂದ  ಅವರನ್ನು  ಕೆಳಕ್ಕೆ  ದಬ್ಬಬೇಕೆಂದಿದ್ದರು.  ಯೇಸುವಾದರೋ,  ಅವರ  ನಡುವೆಯೇ  ನಡೆದು,  ತಮ್ಮ  ದಾರಿ  ಹಿಡಿದು  ಹೋದರು.

ಪ್ರಭುವಿನ  ಶುಭಸಂದೇಶ

08.08.2026 - ನಿಮ್ಮಿಂದ ಅಸಾಧ್ಯವಾದುದು ಒಂದೂ ಇರದು

  ಮೊದಲನೇ ವಾಚನ: ಪ್ರವಾದಿ ಹಬಕ್ಕೂಕನ ಗ್ರಂಥ 1:12--2:4 ಸರ್ವೇಶ್ವರಾ, ನನ್ನ ದೇವರೇ, ಪರಮ ಪಾವನ ಸ್ವಾಮಿಯೇ, ಅನಾದಿಯಿಂದ ಇರುವಂಥವರು ನೀವು. ನಾವು ಖಂಡಿತ ಸಾಯುವುದಿಲ್ಲ....