09.03.25 - "ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು; ಅವರೊಬ್ಬರಿಗೆ ಸೇವೆ ಸಲ್ಲಿಸು"

 ಮೊದಲನೆಯ ವಾಚನ : ಧರ್ಮೋಪದೇಶಕಾಂಡದಿಂದ ಇಂದಿನ ಮೊದಲನೆಯ ವಾಚನ 26:4-10


ಮೋಶೆ ಜನರಿಗೆ ಹೀಗೆಂದನು: "ಯಾಜಕನು ಆ ಪಟ್ಟಿಯನ್ನು ನಿಮ್ಮ ಕೈಯಿಂದ ತೆಗೆದುಕೊಂಡು ನಿಮ್ಮ ದೇವರಾದ ಸರ್ವೇಶ್ವರನ ಬಲಿಪೀಠದ ಮುಂದೆ ಇಡುವನು.  ಆಗ ನೀವು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿ, ಅರಾಮ್ಯನಾದ ನಮ್ಮ ಮೂಲ ಪಿತೃವು ಗತಿಯಿಲ್ಲದವನಾಗಿ ಸ್ವಲ್ಪ ಮಂದಿಯೊಡನೆ ಈಜಿಪ್ಟ್ ದೇಶಕ್ಕೆ ಹೋಗಿ ಅಲ್ಲಿ ಇಳಿದುಕೊಂಡನು.  ಅಲ್ಲಿ ಅವನ ಸಂತಾನದವರು ಹೆಚ್ಚಿ ಮಹಾಬಲಿಷ್ಠ ಜನಾಂಗವಾದರು.  ಈಜಿಪ್ಟರು ನಮ್ಮನ್ನು ಉಪದ್ರವಪಡಿಸಿ, ಬಾಧಿಸಿ, ನಮ್ಮಿಂದ ಕಠಿಣವಾಗಿ ದುಡಿಸಿಕೊಂಡರು.  ಆಗ ನಾವು ನಮ್ಮ ಪಿತೃಗಳ ದೇವರಾದ ಸರ್ವೇಶ್ವರನಿಗೆ ಮೊರೆಯಿಟ್ಟೆವು; ಅವರು ಆಲಿಸಿ ನಮ್ಮ ದುರಾವಸ್ಥೆಯನ್ನೂ ಕಷ್ಟ ಉಪದ್ರವಗಳನ್ನೂ ನೋಡಿ, ಭುಜಬಲ, ಶಿಕ್ಷಾಹಸ್ತ, ಮಹಾಭೀತಿ, ಮಹಾತ್ಕಾರ್ಯ, ಸೂಚಕಕಾರ್ಯ, ಇವುಗಳನ್ನು ಪ್ರಯೋಗಿಸಿ ನಮ್ಮನ್ನು ಬಿಡಿಸಿದರು.  ಈಜಿಪ್ಟ್ ದೇಶದಿಂದ ಕರೆ ತಂದು ಹಾಲೂ ಜೇನೂ ಹರಿಯುವ ಈ ನಾಡನ್ನು ನಮಗೆ ಕೊಟ್ಟಿದ್ದಾರೆ.  ಆದುದರಿಂದ "ಸರ್ವೇಶ್ವರ, ನೀವು ಅನುಗ್ರಹಿಸಿರುವ ಭೂಮಿಯ ಬೆಳೆಯಲ್ಲಿ ಪ್ರಥಮ ಫಲಗಳನ್ನು ನಾವು ಕಾಣಿಕೆಯಾಗಿ ತಂದಿದ್ದೇವೆ; ಸ್ವೀಕರಿಸಬೇಕು' ಎಂದು ಹೇಳಿ ಆ ಪ್ರಥಮ ಫಲಗಳನ್ನು ನಿಮ್ಮ ದೇವರಾದ ಸರ್ವೇಶ್ವರನ ಸನ್ನಿಧಿಯಲ್ಲಿಟ್ಟು ಅವರನ್ನು ಆರಾಧಿಸಬೇಕು.

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಕೀರ್ತನೆ 91:1-2,10-15 

ಶ್ಲೋಕಪ್ರಭೂ, ನನ್ನ ಸಂಕಟಗಳಲ್ಲಿ ನನ್ನೊಡನಿದ್ದು ನನ್ನನ್ನು ರಕ್ಷಿಸಿರಿ.
1.  ಪರಾತ್ಪರ ಪ್ರಭುವಿನ ಮೊರೆಹೊಕ್ಕಿರುವವನು|
ಸರ್ವಶಕ್ತನ ಆಶ್ರಯದಲಿ ಸುರಕ್ಷಿತನು|
ನಾನಾತನಿಗೆ, 'ನೀನೇ ನನ್ನ ರಕ್ಷಕನೂ||
ದುರ್ಗವೂ ನಾ ನಂಬಿದ ದೇವನೂ' ಎನ್ನುವೆನು|
ಹಾನಿಯೊಂದು ನಿನಗೆ ಸಂಭವಿಸದು|
ಕೆಡಕು ನಿನ್ನ ಗುಡಾರದ ಬಳಿ ಸುಳಿಯದು||
ಶ್ಲೋಕ
 
2.  ನೀನು ಹೋದೆಡೆಯೆಲ್ಲ ನಿನ್ನ ಕಾಯುವುದಕ್ಕೆ|
ಕೊಟ್ಟಿಹನಾತ ಕಟ್ಟಳೆ ತನ್ನ ದೂತರಿಗೆ|
ನಿನ್ನ ಕಾಲು ಕಲ್ಲಿಗೆ ತಾಗದಂತೆ||
ನಿನ್ನನೆತ್ತಿಕೊಳ್ಳುವರು ಕೈಗಳಲೆ|
ಸಿಂಹಗಳ ಮೇಲೂ, ಸರ್ಪಗಳ ಮೇಲೂ ನಡೆಯುವೆ|
ಪ್ರಾಯದ ಸಿಂಹವನು, ಘಟಸರ್ಪವನು ತುಳಿದುಬಿಡುವೆ||
ಶ್ಲೋಕ
 
3.  ನನ್ನ ಭಕ್ತನಾದ್ದರಿಂದ ವಿಮೋಚಿಸುವೆನು ಅವನನು|
ನನ್ನ ನಾಮವನು ಅರಿತವನಾದ್ದರಿಂದ ರಕ್ಷಿಸುವೆನು||
ನನಗೆ ಮೊರೆಯಿಟ್ಟಾಗ ಕಿವಿಗೊಡುವೆನು, ಸಂಕಟದೊಳು ಅವನ ಸಂಗಡವಿರುವೆನು|
ಅವನನು ಉದ್ಧರಿಸಿ ಘನಪಡಿಸುವೆನು||
ಶ್ಲೋಕ

ಎರಡನೆಯ ವಾಚನ : 🛐ಪೌಲನು ರೋಮನರಿಗೆ ಬರೆದ ಪತ್ರದಿಂದ ಇಂದಿನ ಎರಡನೆಯ ವಾಚನ 10:8-13



ಸಹೋದರರೇ, ಧರ್ಮಗ್ರಂಥವು ಹೇಳುವುದಿಷ್ಟೇ: ದೇವರ ವಾಕ್ಯ ನಿನ್ನ ಸಮೀಪದಲ್ಲೇ ಇದೆ.  ಅದು ನಿನ್ನ ಬಾಯಲ್ಲೂ ಹೃದಯದಲ್ಲೂ ಇದೆ.  ಅದೇ ನಾವು ನಿಮಗೆ ಬೋಧಿಸುವ ವಿಶ್ವಾಸದ ವಾಕ್ಯ.  "ಯೇಸುವೇ ಪ್ರಭು" ಎಂದು ನೀನು ಬಾಯಿಂದ ನಿವೇದಿಸಿ, ಅವರನ್ನು ದೇವರು ಸಾವಿನಿಂದ ಪುನರುತ್ಥಾನ ಗೊಳಿಸಿದ್ದಾರೆಂದು ಹೃದಯದಿಂದ ವಿಶ್ವಾಸಿಸಿದರೆ ಜೀವೋದ್ಧಾರವನ್ನು ಹೊಂದುತ್ತೀಯೆ.  ಹೌದು, ಹೃದಯಪೂರ್ವಕವಾಗಿ ವಿಶ್ವಾಸಿಸುವವನು ದೇವರೊಡನೆ ಸತ್ಸಂಬಂಧವನ್ನು ಪಡೆಯುತ್ತಾನೆ;  ಬಾಯಿಂದ ನಿವೇದಿಸುವವನು ಜೀವೋದ್ಧಾರ ಹೊಂದುತ್ತಾನೆ.  ಏಕೆಂದರೆ, "ಅವರಲ್ಲಿ ವಿಶ್ವಾಸ ಇಡುವ ಯಾರಿಗೂ ಆಶಾಭಂಗವಾಗುವುದಿಲ್ಲ, "ಎಂದು ಪವಿತ್ರಗ್ರಂಥದಲ್ಲೇ ಹೇಳಲಾಗಿದೆ.  ಈ ವಿಷಯದಲ್ಲಿ ಯೆಹೂದ್ಯರು, ಯೆಹೂದ್ಯರಲ್ಲದವರು ಎಂಬ ಭೇದಭಾವವಿಲ್ಲ.  ಸರ್ವರಿಗೂ ಒಬ್ಬರೇ ಪ್ರಭು.  ತಮ್ಮನ್ನು ಬೇಡಿಕೊಳ್ಳುವ ಎಲ್ಲರಿಗೂ ಅವರು ಧಾರಾಳವಾಗಿ ವರದಾನವನ್ನು ನೀಡುತ್ತಾರೆ.  "ಪ್ರಭುವಿನ ನಾಮಸ್ಮರಣೆ ಮಾಡುವ ಪ್ರತಿಯೊಬ್ಬನೂ ಜೀವೋದ್ಧಾರವನ್ನು ಹೊಂದುತ್ತಾನೆ" ಎಂದು ಲಿಖಿತವಾಗಿದೆ.

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ


ಶುಭಸಂದೇಶ : ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 4:1-13


ಆ ಕಾಲದಲ್ಲಿ ಯೇಸು ಪವಿತ್ರಾತ್ಮಭರಿತರಾಗಿ ಜೋರ್ಡಾನ್ ನದಿ ತೀರದಿಂದ ಹಿಂದಿರುಗಿದ ಮೇಲೆ ಅದೇ ಆತ್ಮರಿಂದ ಪ್ರೇರಿತರಾಗಿ ಬೆಂಗಾಡು ಪ್ರದೇಶಕ್ಕೆ ಬಂದರು.  ನಾಲ್ವತ್ತು ದಿನ ಅಲ್ಲಿದ್ದಾಗ ಅವರನ್ನು ಪರೀಕ್ಷಿಸಲು ಪಿಶಾಚಿ ಪ್ರಯತ್ನಿಸಿತು.  ದೇವರ ಪುತ್ರ ಎಂಬುದು ಸತ್ಯವಾದರೆ ಈ ಕಲ್ಲಿಗೆ ರೊಟ್ಟಿ ಆಗೆಂದು ಆಜ್ಞೆ ಮಾಡು, "ಎಂದಿತು.  ಅದಕ್ಕೆ ಯೇಸು, "ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ, 'ಮಾನವನು ಜೀವಿಸುವುದು ಆಹಾದಿಂದ ಮಾತ್ರವಲ್ಲ, "ಎಂದು ಉತ್ತರಿಸಿದರು.  ಬಳಿಕ ಪಿಶಾಚಿ ಯೇಸುವನ್ನು ಎತ್ತರಕ್ಕೆ ಕರೆದೊಯ್ದು ಪ್ರಪಂಚದ ಎಲ್ಲಾ ರಾಜ್ಯಗಳನ್ನು ಕ್ಷಣ ಮಾತ್ರದಲ್ಲಿ ತೋರಿಸಿ, "ಇವುಗಳ ಸರ್ವಾಧಿಕಾರವನ್ನೂ ವೈಭವವನ್ನೂ ನಿನಗೆ ಕೊಡುವೆನು.  ಇವೆಲ್ಲಾ ನನ್ನ ಅಧೀನದಲ್ಲಿವೆ.  ನನ್ನ ಇಷ್ಟ ಬಂದವರಿಗೆ ಇವನ್ನು ಕೊಡಬಲ್ಲೆ.  ನೀನು ನನಗೆ ಅಡ್ಡಬಿದ್ದೆಯಾದರೆ ಇದೆಲ್ಲಾ ನಿನ್ನದಾಗುವುದು, "ಎಂದಿತು.  ಅದಕ್ಕೆ ಯೇಸು ಪ್ರತ್ಯುತ್ತರವಾಗಿ, "ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು; ಅವರೊಬ್ಬರಿಗೆ ಸೇವೆ ಸಲ್ಲಿಸು, "ಎಂದು ಪವಿತ್ರಗ್ರಂಥದಲ್ಲಿ ಬರೆಯಲಾಗಿದೆ, "ಎಂದರು.  ಅನಂತರ ಪಿಶಾಚಿ ಯೇಸುವನ್ನು ಜೆರುಸಲೇಮಿಗೆ ಕರೆದೊಯ್ದು ಮಹಾದೇವಾಲಯದ ಗೋಪುರದ ತುತ್ತತುದಿಯ ಮೇಲೆ ನಿಲ್ಲಿಸಿ, "ನೀನು ದೇವರ ಪುತ್ರನೆಂಬುದು ಸತ್ಯವಾದರೆ ಇಲ್ಲಿಂದ ಕೆಳಕ್ಕೆ ಧುಮುಕು.  ಏಕೆಂದರೆ, ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ನಿನ್ನನ್ನು ಕಾಪಾಡುವಂತೆ ದೇವರೇ ತಮ್ಮ ದೂತರಿಗೆ ಆಜ್ಞಾಪಿಸುವರು, ಮತ್ತು 'ಇವರು ನಿನ್ನ ಕಾಲುಗಳು ಕಲ್ಲುಗಳಿಗೆ ತಾಗದಂತೆ ನಿನ್ನನ್ನು ತಮ್ಮ ಕೈಗಳಲ್ಲಿ ಆತುಕೊಳ್ಳುವರು, "ಎಂದಿತು.  ಅದಕ್ಕೆ ಯೇಸು, " 'ನಿನ್ನ ದೇವರಾದ ಸರ್ವೇಶ್ವರಾ; ನೀನು ಅವರನ್ನು ಪರೀಕ್ಷಿಸಬಾರದು, "ಎಂದು ಸಹ ಪವಿತ್ರ ಗ್ರಂಥ ಹೇಳುತ್ತದೆ, "ಎಂದು ಉತ್ತರಕೊಟ್ಟರು.  ಹೀಗೆ ಪಿಶಾಚಿ ಯೇಸುವನ್ನು ನಾನಾ ವಿಧದಲ್ಲಿ ಶೋಧಿಸಿದ ನಂತರ ತಕ್ಕ ಕಾಲ ಬರುವ ತನಕ ಅವರನ್ನು ಬಿಟ್ಟು ಹೋಯಿತು.

ಪ್ರಭುವಿನ ಶುಭಸಂದೇಶ
ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ

07.03.25 - "ಇದೇ ಅಲ್ಲವೆ ನನಗೆ ಇಷ್ಟಕರವಾದ ಉಪವಾಸ ವ್ರತ?"




ಮೊದಲನೇ ವಾಚನ: ಯೆಶಾಯ  58:1-9

ಸರ್ವೇಶ್ವರಸ್ವಾಮಿ ಇಂತೆನ್ನುತ್ತಾರೆ: “ಗಟ್ಟಿಯಾಗಿ ಕೂಗು, ನಿಲ್ಲಿಸಬೇಡ; ಕೊಂಬಿನಂತೆ ಸ್ವರವೆತ್ತಿ ನನ್ನ ಜನರಿಗೆ ಅವರ ದ್ರೋಹವನ್ನು ತಿಳಿಸು; ಯಕೋಬ ವಂಶದವರಿಗೆ ಅವರ ಪಾಪವನ್ನು ತಿಳಿಸು; ತಮ್ಮ ದೇವರ ವಿಧಿನಿಯಮಗಳನ್ನು ಬಿಡದೆ, ಧರ್ಮವನ್ನು ಆಚರಿಸುವ ಜನಾಂಗವೊ ಎಂಬಂತೆ, ಇವರು ದಿನ ದಿನವೂ ನನ್ನ ದರ್ಶನಕ್ಕಾಗಿ ಬರುತ್ತಾರೆ; ನನ್ನ ಮಾರ್ಗವನ್ನು ತಿಳಿದುಕೊಳ್ಳುವುದರಲ್ಲಿ ಸಂತೋಷಿಸುವಂತೆ ನಟಿಸುತ್ತಾರೆ. ಧೈರ್ಯವಾಗಿ ನನ್ನಿಂದ ನ್ಯಾಯವಿಧಿಗಳನ್ನು ಕೇಳುತ್ತಾರೆ. ದೇವ ದರ್ಶನದಲ್ಲಿ ಆನಂದಿಸುವವರಂತೆ ತೋರಿಸಿಕೊಳ್ಳುತ್ತಾರೆ.” ನಾವು ಉಪವಾಸ ಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವುದಿಲ್ಲ? ನಮ್ಮನ್ನು ನಾವೇ ತಗ್ಗಿಸಿಕೊಂಡಿದ್ದೇವೆ, ನೀನು ಗಮನಿಸದೆ ಇರುವುದೇಕೆ?” ಎಂದುಕೊಳ್ಳುತ್ತಾರೆ. “ನಿಮ್ಮ ಉಪವಾಸದ ಪರಿಣಾಮಗಳು ಇಷ್ಟೆ: ವ್ಯಾಜ್ಯ, ಕಲಹ, ಗುದ್ದಾಟ. ಇಲ್ಲಿಯವರೆಗೆ ನೀವು ಮಾಡಿದಂತೆ ಉಪವಾಸ ಮಾಡಿದರೆ, ನಿಮ್ಮ ಪ್ರಾರ್ಥನೆ ಪರಲೋಕವನ್ನು ಮುಟ್ಟುವುದಿಲ್ಲ. ಸ್ವಾರ್ಥ ನಿಗ್ರಹಕ್ಕಾಗಿ ನಾನು ನೇಮಿಸಿದ ಉಪವಾಸದ ದಿನ ಇಂಥದೋ? ಒಬ್ಬನು ಜೊಂಡಿನಂತೆ ತಲೆಯನ್ನು ಬಗ್ಗಿಸಿಕೊಳ್ಳುವುದು, ಗೋಣಿತಟ್ಟನ್ನು ಉಟ್ಟುಕೊಳ್ಳುವುದು, ಬೂದಿಯ ಗುಂಡಿಯಲ್ಲಿ ಕುಳಿತುಕೊಳ್ಳುವುದು, ಇವು ನನಗೆ ಮೆಚ್ಚುಗೆಯಾಗುವ ಉಪವಾಸ ಎನ್ನುತ್ತೀರೊ? “ನಾನು ಹೇಳುವುದನ್ನು ಕೇಳಿ: ಅನ್ಯಾಯದ ಬಂಧನಗಳನ್ನು ಬಿಚ್ಚುವುದು, ಭಾರವಾದ ನೊಗದ ಕಣಿಗಳನ್ನು ಕಳಚುವುದು, ಜರ್ಜರಿತರಾದವರನ್ನು ಬಿಡುಗಡೆಮಾಡುವುದು, ಹಸಿದವರಿಗೆ ಅನ್ನ ಹಾಕುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯಾದವರನ್ನು ಕಂಡಾಗ ಅವರಿಗೆ ಬಟ್ಟೆ ಹೊದಿಸುವುದು, ನಿನ್ನ ರಕ್ತ ಸಂಬಂಧಿಕರಿಂದ ಮುಖ ಮರೆಮಾಡಿಕೊಳ್ಳದಿರುವುದು, ಇದೇ ಅಲ್ಲವೆ ನನಗೆ ಇಷ್ಟಕರವಾದ ಉಪವಾಸ ವ್ರತ? “ಇದನ್ನು ಆಚರಿಸುವಾಗ ನೀವು ಉದಯ ಕಾಲದ ಸೂರ್ಯನಂತೆ ಪ್ರಜ್ವಲಿಸುವಿರಿ. ಆರೋಗ್ಯಭಾಗ್ಯವು ನಿಮಗೆ ಬೇಗನೆ ದೊರಕುವುದು. ನಿಮ್ಮ ಸದಾಚಾರವೆ ನಿಮಗೆ ಮುಂಬಲವಾಗಿ ನಡೆಸುವುದು; ಸರ್ವೇಶ್ವರಸ್ವಾಮಿಯ ಮಹಿಮೆ ನಿಮಗೆ ಹಿಂಬಲವಾಗಿ ಇರುವುದು. ಆಗ ನೀವು ಪ್ರಾರ್ಥಿಸಿದರೆ, ಆ ಸ್ವಾಮಿ ನಿಮಗೆ ಉತ್ತರಿಸುವರು; ಮೊರೆಯಿಟ್ಟು ಕರೆದರೆ ‘ಇಗೋ ಆಲಿಸುತ್ತಿದ್ದೇನೆ’ ಎನ್ನುವರು. 

ಕೀರ್ತನೆ: 51:3-4, 5-6, 18-19

ಶ್ಲೋಕ: ನೊಂದ ಬೆಂದ ಮನವನಾತ ಬಲ್ಲೆಯೆನನು

ಶುಭಸಂದೇಶ: ಮತ್ತಾಯ 9: 14-15

ಯೊವಾನ್ನನ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದರು. “ನಾವೂ ಫರಿಸಾಯರೂ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ?" ಎಂದು ಪ್ರಶ್ನೆ ಹಾಕಿದರು. ಅದಕ್ಕೆ ಯೇಸು, "ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದುಃಖಪಡುವುದುಂಟೇ? ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲವು ಬರುವುದು; ಆಗ ಅವರು ಉಪವಾಸ ಮಾಡುವರು.

ಮನಸ್ಸಿಗೊಂದಿಷ್ಟು : ಕೇವಲ ಆಚರಣೆಗಾಗಿ ಮಾತ್ರವೇ ಮಾಡುವ ಉಪವಾಸ ವ್ರತದ ಬಗ್ಗೆ ಇಂದಿನ ಎರಡೂ ವಾಚನಗಳು ಮಾತನಾಡುತ್ತವೆ.   ದೇವರಿಗೆ ಇಷ್ಟವಾದ  ಉಪವಾಸ ವ್ರತ ಯಾವುದೆಂದು ಯೆಶಾಯ ಪ್ರವಾದಿ ಹೇಳಿದರೆ, "ನಾನು ಜೊತೆಗಿರುವಾಗ ಉಪವಾಸವೇಕೆ ಬೇಕು" ಎನ್ನುತ್ತಾರೆ ಯೇಸು. ನಮ್ಮ ಉಪವಾಸ, ತ್ಯಾಗದಿಂದ ನಮಗೆ ಮಾತ್ರವೇ ಒಳ್ಳೆಯದಾಗಿ ಮತ್ತೊಬ್ಬರಿಗೆ ಅದರಿಂದ ಪ್ರಯೋಜನವಾಗದಿದ್ದರೆ ಅದು ನಿರರ್ಥಕ ಎಂಬ ಪೋಪ್ ಫ್ರಾನ್ಸಿಸ್ ರ  ಮಾತು ಚಿಂತನೆಗೆ ಯೋಗ್ಯವಾಗಿದೆ. 

ಪ್ರಭುವೇ,
ನೀ ನನ್ನ ಜೊತೆಯಿರೇ ದುಃಖವೇಕೆ 
ಕರುಣೆ ಪ್ರೀತಿಯಿಲ್ಲದ ಉಪವಾಸವೇಕೆ?
-ಚಿತ್ತ 

06.03.25 - "ನಾನು ಶುಭವನ್ನೂ ಅಶುಭವನ್ನೂ ಜೀವವನ್ನೂ ಸಾವನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ"


ಮೊದಲನೇ ವಾಚನ: ಧರ್ಮೋಪದೇಶಕಾಂಡ 30:15-20

ಮೋಶೆಯು ಜನರಿಗೆ ಹೀಗೆಂದು ಹೇಳಿದನು: “ಇಗೋ ನೋಡಿ: ನಾನು ಶುಭವನ್ನೂ ಅಶುಭವನ್ನೂ ಜೀವವನ್ನೂ ಸಾವನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ. ನಾನು ಈಗ ನಿಮಗೆ ಬೋಧಿಸುವಂತೆ ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ, ಅವರು ಹೇಳಿದ ಮಾರ್ಗದಲ್ಲಿ ನಡೆದು, ಅವರ ಆಜ್ಞಾವಿಧಿ ನಿರ್ಣಯಗಳನ್ನು ಅನುಸರಿಸಿದರೆ ನೀವು ಬದುಕಿ ಬಾಳುವಿರಿ, ಅಭಿವೃದ್ಧಿಯಾಗುವಿರಿ, ಮತ್ತು ನೀವು ಸ್ವಾಧೀನ ಮಾಡಿಕೊಳ್ಳಲು ಹೋಗುವ ನಾಡಿನಲ್ಲಿ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಆಶೀರ್ವದಿಸುವರು. ಆದರೆ ನೀವು ಅವರನ್ನು ಬಿಟ್ಟು, ಅವರ ಮಾತನ್ನು ಕೇಳಲೊಲ್ಲದೆ, ಮೋಸಹೋಗಿ, ಇತರ ದೇವರುಗಳನ್ನು ಪೂಜಿಸಿ ಅವಲಂಬಿಸಿದರೆ ನೀವು ಸ್ವಾಧೀನ ಮಾಡಿಕೊಳ್ಳಲು ಜೋರ್ಡನ್ ನದಿಯನ್ನು ದಾಟಿ ಹೋಗುವ ನಾಡಿನಲ್ಲಿ ಬಹುಕಾಲ ಇರದೆ ನಾಶ ಆಗಿ ಹೋಗುವಿರಿ. ಇದನ್ನು ನಾನು ಈಗ ನಿಮಗೆ ಖಂಡಿತವಾಗಿ ತಿಳಿಸುತ್ತೇನೆ. ನಾನು ಸಾವು ಜೀವಗಳನ್ನೂ ಶಾಪಾಶೀರ್ವಾದಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮಿ ಆಕಾಶಗಳೇ ಸಾಕ್ಷಿಗಳಾಗಿರಲಿ; ಆದುದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಬಾಳುವಂತೆ ಜೀವವನ್ನೇ ಆರಿಸಿಕೊಳ್ಳಿ; ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ ಅವರ ಮಾತಿಗೆ ವಿಧೇಯರಾಗಿರಿ; ಅವರನ್ನು ಹೊಂದಿಕೊಂಡೇ ಇರಿ. ಸರ್ವೇಶ್ವರ ನಿಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್, ಯಕೋಬರಿಗೆ ಪ್ರಮಾಣಮಾಡಿ ಕೊಟ್ಟ ನಾಡಿನಲ್ಲಿ ನೀವು ಬದುಕಿ ಬಾಳುವುದಕ್ಕೂ ಬಹುಕಾಲ ಇರುವುದಕ್ಕೂ ಅವರೇ ಆಧಾರ.”

ಕೀರ್ತನೆ: 1:1-2, 3, 4, 6

ಶ್ಲೋಕ: ಪ್ರಭುವಿನಲ್ಲೇ ಭರವಸೆಯಿಟ್ಟು ನಡೆವಾತನು ಧನ್ಯನು

ಶುಭಸಂದೇಶ: ಲೂಕ 9:22-25


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು. ಆದರೆ ಮೂರನೇ ದಿನ ಆತನು ಪುನರುತ್ಥಾನ ಹೊಂದುವನು,” ಎಂದು ಅವರಿಗೆ ತಿಳಿಸಿದರು. ಯೇಸುಸ್ವಾಮಿ ಎಲ್ಲರನ್ನು ನೋಡಿ ಹೇಳಿದ್ದೇನೆಂದರೆ: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ಅನುದಿನವೂ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು. ಒಬ್ಬನು ಪ್ರಪಂಚವನ್ನೆಲ್ಲಾ ಗೆದ್ದುಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅಥವಾ ತೆತ್ತರೆ ಅವನಿಗೆ ಅದರಿಂದ ಬರುವ ಲಾಭವಾದರೂ ಏನು?

ಮನಸ್ಸಿಗೊಂದಿಷ್ಟು :  ಆಯ್ಕೆಗಳು ನಮ್ಮನ್ನು ಗೊಂದಲಕ್ಕೆ ತಳ್ಳಬಹುದು. ಸುಖ-ಸಮೃದ್ಧಿ, ಆಸೆ-ಸೌಲಭ್ಯಗಳ ನಡುವೆ ಶಿಲುಬೆಯನ್ನು ಹೊತ್ತು ತಮ್ಮ ಹಿಂದೆ  ಬರಲು ಯೇಸು ನೀಡುವ ಕರೆ ಕಷ್ಟದ ಆಯ್ಕೆಯೇ. ಇಂದಿನವರೆಗಿನ ನಮ್ಮ ಆಯ್ಕೆ ಯಾವುದಾಗಿತ್ತು. ಮುಂದೆ ಯಾವುದಾಗಬಹುದು? ಯೇಸುವಿನ ಹಿಂದೆ ಸಾಗಲು ನಮಗಿರುವ ಅಡ್ಡಿಗಳೇನು?

ಪ್ರಶ್ನೆ : ಇಂದಿನ ಶುಭಸಂದೇಶದಲ್ಲಿನ ಯೇಸುವಿನ ಕರೆ ನಮ್ಮನ್ನು ಯೋಚಿಸುವಂತೆ ಮಾಡಿದೆಯೇ ಅಥವಾ ಪ್ರತಿ ನಿತ್ಯದ ವಾಕ್ಯದಂತೆ ಇದೂ ಓದಿಗೆ ಮಾತ್ರವೇ?

ಪ್ರಭುವೇ,
ಹೊರಬೇಕಾದ ಶಿಲುಬೆ, ಭಾರವೇ ಸರಿ 
ಹೊತ್ತು ನಿನ್ನ ಹಿಂದೆ ಬರುವುದಾಗಲಿ 
ಈ ನನ್ನ ಜೀವನದ ಗುರಿ
-ಚಿತ್ತ  

05.03.25 - "ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು"










ಮೊದಲನೇ ವಾಚನ: ಯೊವೇಲ 2:12-18

ಸರ್ವೇಶ್ವರ ಇಂತೆನ್ನುತ್ತಾರೆ: “ಈಗಲಾದರೂ ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಳ್ಳಿ. ಉಪವಾಸ ಕೈಗೊಂಡು, ಅತ್ತು ಗೋಳಾಡಿ.” ನಿಮ್ಮ ಉಡುಪುಗಳನ್ನು ಅಲ್ಲ, ಹೃದಯಗಳನ್ನು ಸೀಳಿರಿ: ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಕಡೆಗೆ ತಿರುಗಿಕೊಳ್ಳಿ; ಅವರು ದಯಾವಂತರು, ಕರುಣಾಮೂರ್ತಿ, ಸಹನಶೀಲ, ಪ್ರೀತಿಮಯ. ವಿಧಿಸಬೇಕಾಗಿದ್ದ ದಂಡನೆಗಾಗಿ ಮನನೊಂದುಕೊಳ್ಳುವಂಥವರು. ಒಂದು ವೇಳೆ ಸರ್ವೇಶ್ವರ ತಮ್ಮ ಮನಸ್ಸನ್ನು ಬದಲಾಯಿಸಬಹುದು. ನಿಮ್ಮ ಕಡೆಗೆ ತಿರುಗಿ ನಿಮ್ಮನ್ನು ಆಶೀರ್ವದಿಸಬಹುದು; ನಿಮ್ಮ ದೇವರಾದ ಅವರಿಗೆ ಅರ್ಪಿಸಲು ಬೇಕಾದ ನೈವೇದ್ಯಗಳನ್ನು ಧಾರಾಳವಾಗಿ ಅನುಗ್ರಹಿಸಬಹುದು. ಸಿಯೋನ್ ಶಿಖರದ ಮೇಲೆ ನಿಂತು ಕೊಂಬೂದಿರಿ. ಉಪವಾಸ ದಿನವನ್ನು ಘೋಷಿಸಿರಿ. ಮಹಾಸಭೆಯನ್ನು ಕರೆಯಿರಿ. ಜನರನ್ನು ಒಟ್ಟುಗೂಡಿಸಿರಿ; ಸಭೆಯನ್ನು ಏರ್ಪಡಿಸಿರಿ; ವೃದ್ಧರನ್ನು, ಮಕ್ಕಳನ್ನು, ಮೊಲೆಗೂಸುಗಳನ್ನು ಕರೆತನ್ನಿರಿ. ವಧೂವರರು ತಮ್ಮ ಕಲ್ಯಾಣಗೃಹದಿಂದ ಹೊರಟುಬರಲಿ. ಸರ್ವೇಶ್ವರಸ್ವಾಮಿಯ ಪರಿಚಾರಕರಾದ ಯಾಜಕರು ದೇವಾಲಯದ ದ್ವಾರ ಮಂಟಪಕ್ಕೂ ಬಲಿಪೀಠಕ್ಕೂ ನಡುವೆ ಶೋಕತಪ್ತರಾಗಿ ಹೀಗೆಂದು ಪ್ರಾರ್ಥಿಸಲಿ: “ಕರುಣೆ ತೋರು, ಹೇ ಸರ್ವೇಶ್ವರಾ, ನಿನ್ನ ಪ್ರಜೆಗೆ ನಿಂದೆಯಾಗದಿರಲಿ ನಿನ್ನ ಸ್ವಂತ ಜನತೆಗೆ ಗುರಿಯಾಗದಿರಲಿ ಅವರು ಅನ್ಯರ ತಾತ್ಸಾರಕೆ ‘ನಿಮ್ಮ ದೇವನೆಲ್ಲಿ?’ ಎಂಬ ಪರಕೀಯರ ಹೀಯಾಳಿಕೆಗೆ” ಆಗ ಸರ್ವೇಶ್ವರ ತಮ್ಮ ದೇಶದ ಮೇಲೆ ಅಭಿಮಾನಗೊಂಡು, ತಮ್ಮ ಜನರಿಗೆ ಕರುಣೆ ತೋರಿ ಹೀಗೆಂದರು:

ಕೀರ್ತನೆ: 51:3-4, 5-6, 12-13, 14, 17

ಶ್ಲೋಕ: ಕೃಪಾಳು ದೇವಾ ಕರುಣಿಸೆಮ್ಮನು ನಿಮ್ಮ ವಿರುದ್ಧ ನಾವು ಪಾಪ ಮಾಡಿದ್ದೇವೆ.

ಎರಡನೇ ವಾಚನ: 2 ಕೊರಿಂಥಿಯರಿಗೆ 5:20-6:2

ಸಹೋದರರೇ, ನಾವು ಕ್ರಿಸ್ತಯೇಸುವಿನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾರೆ. ಅವರೊಡನೆ ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತ್ತೇವೆ. ಪಾಪವನ್ನೇ ಅರಿಯದ ಕ್ರಿಸ್ತಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತಯೇಸುವಿನಲ್ಲಿ ನಾವು ದೇವರೊಡನೆ ಸತ್ಸಂಬಂಧವನ್ನು ಪಡೆಯಲೆಂದೇ ಹೀಗೆ ಮಾಡಿದರು. ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೇನೆಂದರೆ: ದೇವರಿಂದ ನೀವು ಪಡೆದ ವರಪ್ರಸಾದಗಳನ್ನು ವ್ಯರ್ಥಮಾಡಬೇಡಿ. "ಸುಪ್ರಸನ್ನತೆಯ ಕಾಲದಲ್ಲಿ ನಿನ್ನನ್ನಾಲಿಸಿದೆನು; ಉದ್ಧಾರ ದಿನದಂದು ನಿನಗೆ ನೆರವಾದೆನು,” ಎಂದಿದ್ದಾರೆ ದೇವರು. ಇದೇ ಆ ಸುಪ್ರಸನ್ನತೆಯ ಕಾಲ. ಇದೇ ಆ ಉದ್ಧಾರದ ಸುದಿನ.

ಶುಭಸಂದೇಶ: ಮತ್ತಾಯ 6:1-6, 16-18

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಸ್ವರ್ಗದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರಕದು. ಅಂತೆಯೇ, ನೀನು ದಾನಧರ್ಮ ಮಾಡುವಾಗ ತುತೂರಿಯನ್ನು ಊದಿಸಬೇಡ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿದ್ದಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ದಾನಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು." "ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾ ಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ಅವರಿಗೆ ಬರಬೇಕಾದ ಪೂರ್ತಿಫಲ ಆಗಲೇ ಬಂದಾಯಿತೆಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ. ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು."  "ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪೆಮಾಡಬೇಡಿ. ಜನರ ಕಣ್ಣಿಗೆ ತಾವು ಉಪವಾಸಿಗಳೆಂದು ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ಮುಖವನ್ನು ಬಾಡಿಸಿಕೊಳ್ಳುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿಯಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ಉಪವಾಸ ಕೈಗೊಂಡಾಗ ಮುಖ ತೊಳೆದುಕೊ, ತಲೆಬಾಚಿಕೊ. ಆಗ ಉಪವಾಸ ಮಾಡುವವನಂತೆ ನೀನು ಜನರಿಗೆ ಕಾಣಿಸಿಕೊಳ್ಳುವುದಿಲ್ಲ; ಅಂತರಂಗದಲ್ಲಿ ಇರುವ ನಿನ್ನ ತಂದೆಗೆ ಮಾತ್ರ ಕಾಣಿಸಿಕೊಳ್ಳುವೆ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು."

ಮನಸ್ಸಿಗೊಂದಿಷ್ಟು : ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳಾದ ದಾನ-ಧರ್ಮ ಪ್ರಾರ್ಥನೆ ಹಾಗೂ ಉಪವಾಸ ವ್ರತ ಹೇಗಿರಬೇಕೆಂಬುದನ್ನು ಯೇಸು ಇಂದು ಹೇಳುವುದನ್ನು ನಾವು ಕಾಣುತ್ತೇವೆ. ಆಚರಣೆಗಳು ತಮ್ಮ ಮೂಲ ಅರ್ಥವನ್ನೇ ಕಳೆದುಕೊಂಡು ಕೇವಲ ತೋರ್ಪಡಿಕೆಗೆ ಸೀಮಿತವಾದಾಗ ಅದು ಮನುಷ್ಯರ ಮೆಚ್ಚುಗೆಗಷ್ಟೇ  ಪಾತ್ರವಾಗುತ್ತದೆ. ಆದರೆ ದೇವರನ್ನು ಮೆಚ್ಚಿಸುವುದು ಅವುಗಳ ನಿಜ ಕಾರಣವಾಗಬೇಕು ಎಂಬುದು ಯೇಸುವಿನ ಕರೆ.

ಪ್ರಶ್ನೆ : ನಮ್ಮ ದಿನ ನಿತ್ಯದ ಕಾರ್ಯಗಳು ಯಾರನ್ನು ಹೆಚ್ಚು ಮೆಚ್ಚಿಸುವತ್ತ ಸಾಗುತ್ತಿದೆ? ಮನುಷ್ಯರನ್ನೋ ? ದೇವರನ್ನೋ ?

ಪ್ರಭುವೇ,
ಇಂದಿನವರೆಗಿನ 'ನನ್ನನ್ನು' ಸರಿಸಿ 
ಈಗಿಂದಲೇ  ನಿಮ್ಮನ್ನು ನನ್ನಲಿರಿಸಿ 
-ಚಿತ್ತ 

04.03.25 - ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು

ಮೊದಲನೇ ವಾಚನ: ಸಿರಾಖನು 35:1-12 

ರ್ಮಶಾಸ್ತ್ರವನ್ನು ಅನುಸರಿಸುವವನು ಕಾಣಿಕೆಗಳನು ಹೆಚ್ಚಾಗಿ ಅರ್ಪಿಸಿದವನಂತೆ ಆಜ್ಞೆಗಳನ್ನು ಕೈಗೊಳ್ಳುವವನು  ಶಾಂತಿ ಸಮಾಧಾನದ ಬಲಿಯರ್ಪಿಸಿದವನಂತೆ. ಪ್ರತ್ಯುಪಕಾರ ಮಾಡುವವನು ಗೋದಿ ಹಿಟ್ಟನ್ನು ನೈವೇದ್ಯ ಮಾಡಿದವನಂತೆ ದಾನಧರ್ಮ ಮಾಡುವವನು ಸ್ತುತಿ ಬಲಿಯನ್ನು ಅರ್ಪಿಸಿದವನಂತೆ. ದುಷ್ಟತನವನು ಬಿಟ್ಟುಬಿಡುವುದು ಪಾಪಕ್ಕೆ ಪ್ರಾಯಶ್ಚಿತ್ತ. ಸರ್ವೇಶ್ವರನ ಸನ್ನಿಧಿಯನು ಸೇರಬಾರದು ಬರಿಗೈಯಿಂದ. ಇವುಗಳನ್ನೆಲ್ಲ ಮಾಡಬೇಕಾಗಿದೆ ಆತನ ಆಜ್ಞೆಯ ನಿಮಿತ್ತ. ನೀತಿವಂತನ ಅರ್ಪಣೆ ಒಂದು ಅಲಂಕಾರ ಯಜ್ಞವೇದಿಕೆ ಅದರ ಸುವಾಸನೆ ಏರುವುದು ಮಹೋನ್ನತನ ಸನ್ನಿಧಿಗೆ. ಸಮರ್ಪಕವಾಗಿರುವುದು ನೀತಿವಂತ ನೀಡುವ ಬಲಿಕಾಣಿಕೆ ಮರೆತುಹೋಗುವುದಿಲ್ಲ ಅದರ ಸ್ಮರಣೆ. ಉದಾರದೃಷ್ಟಿಯಿಂದ ಸರ್ವೇಶ್ವರನನು ಮಹಿಮೆಪಡಿಸು ಕಡಿಮೆಮಾಡಬೇಡ ನಿನ್ನ ಕೈಯ ಪ್ರಥಮ ಫಲಗಳನು, ಕಾಣಿಕೆ ಕೊಡುವಾಗಲೆಲ್ಲ ಹಸನ್ಮುಖಿಯಾಗಿರು ಸಂತೋಷದಿಂದ ದಶಮಾಂಶವನು ಸಲ್ಲಿಸು. ಮಹೋನ್ನತನು ನಿನಗೆ ಕೊಟ್ಟ ಪ್ರಮಾಣಕ್ಕೆ ಕೊಡು ನಿನ್ನ ಕೈ ಗಳಿಸಿದ ಪ್ರಮಾಣಕ್ಕೆ ಸರಿಯಾಗಿ ಒಳ್ಳೇ ದೃಷ್ಟಿಯಿಂದ ಕೊಡು. ಏಕೆಂದರೆ ಸರ್ವೇಶ್ವರ ಪ್ರತಿಫಲ ನೀಡುವನು ಏಳ್ಮಡಿಯಾಗಿ ನಿನಗೆ ಕೊಡುವನು. ಲಂಚದೋಪಾದಿ ಕಾಣಿಕೆ ತರಬೇಡ, ಆತನು ಅವುಗಳನ್ನು ಅಂಗೀಕರಿಸುವುದಿಲ್ಲ ಅಕ್ರಮವಾದ ಬಲಿಯ ಮೇಲೆ ಮನಸ್ಸಿಡಬೇಡ, ಅತ ನ್ಯಾಯಧೀಶ, ಆತನಲ್ಲಿ ಮುಖದಾಕ್ಷಿಣ್ಯವಿಲ್ಲ.

ಕೀರ್ತನೆ: 50:5-6, 7-8, 14, 23

ಶ್ಲೋಕ: ಪ್ರಭು, ಮೋಡಗಳ ಮಧ್ಯೆ ಬೆಳಗುವ ಬೆಳಗಿನ ಚುಕ್ಕಿಯಂತೆ, ಪೂರ್ಣಚಂದ್ರನಂತೆ

ಶುಭಸಂದೇಶ: ಮಾರ್ಕ 10:28-31


ಗ ಪೇತ್ರನು ಮುಂದೆ ಬಂದು, "ನೋಡಿ ನಾವು ಎಲ್ಲವನ್ನೂ ಬಿಟ್ಟುಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲ," ಎಂದನು ಆಗ ಯೇಸು "ನಾನು ನಿಶ್ಚಯವಾಗಿ ಹೇಳುತ್ತೇನೆ: ಯಾರಾದರೂ ನನ್ನ ನಿಮಿತ್ತ ಹಾಗೂ ಶುಭಸಂದೇಶ ನಿಮಿತ್ತ ಮನೆಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ಅಕ್ಕತಂಗಿಯರನ್ನಾಗಲಿ, ತಾಯಿಯನ್ನಾಗಲಿ, ತಂದೆಯನ್ನಾಗಲಿ, ಮಕ್ಕಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ತ್ಯಜಿಸುತ್ತಾನೋ ಅವನು, ಈ ಕಾಲದಲ್ಲೇ ಮನೆ, ಅಣ್ಣತಮ್ಮ, ಅಕ್ಕತಂಗಿ, ತಾಯಿ, ಮಕ್ಕಳು, ಹೊಲಗದ್ದೆ ಇವೆಲ್ಲವನ್ನೂ ನೂರ್ಮಡಿಯಷ್ಟು ಪಡೆಯುವನು. ಇವುಗಳೊಂದಿಗೆ ಹಿಂಸೆಯನ್ನೂ ಅನುಭವಿಸಬೇಕಾಗುವುದು; ಅದಲ್ಲದೆ ಮುಂದಿನ ಲೋಕದಲ್ಲಿ ಅಮರ ಜೀವವನ್ನು ಪಡೆಯುವನು. "ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು," ಎಂದರು.

ಮನಸಿಗೊಂದಿಷ್ಟು :  ಅಂತೆಯೇ ದೇವರನ್ನು ಹಿಂಬಾಲಿಸುವುದು ಸುಲಭದ ಮಾತಲ್ಲ ಎಂಬುದನ್ನೂ ಹೇಳುತ್ತಾರೆ. ಆಮಿಷಗಳನ್ನು ಒಡ್ಡಿ ದೇವರತ್ತ ಸೆಳೆಯುವವರಿಗೆ ಅಥವಾ ಆಮಿಷಗಳಿಂದ ದೇವರತ್ತ ಸಾಗುವುವವರಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ. ಅಂತೆಯೇ ದೇವರ ತೀರ್ಪು ಲೋಕ ರೂಢಿಗಿಂತ ಭಿನ್ನವಾದುದು ಎಂಬ ಸಣ್ಣ ಎಚ್ಚರಿಕೆಯನ್ನು ಯೇಸು ನೀಡುತ್ತಾರೆ. ನಾವು ಇತರರಿಗಿಂತ ಮೇಲು ಎಂಬ ನಮ್ಮ ಭಾವ ದೇವರ ಮುಂದೆ ಏನೂ ಇಲ್ಲದ್ದಂತಾಗಬಹುದು.

ಪ್ರಶ್ನೆ : ಯೇಸುವಿನ ನಿಮಿತ್ತ, ಶುಭಸಂದೇಶದ ನಿಮಿತ್ತ ನಾವೇನು ತ್ಯಜಿಸಿದ್ದೇವೆ?

03.03.25 - "ಮನುಷ್ಯನಿಗೆ ಇದು ಅಸಾಧ್ಯ, ದೇವರಿಗೆ ಎಲ್ಲವೂ ಸಾಧ್ಯ,"

ಮೊದಲನೇ ವಾಚನ:  ಸಿರಾಖ 17:24-29

ತನ್ನಲ್ಲಿಗೆ ಬರಗೊಡಿಸುವನು ಪಶ್ಚಾತ್ತಾಪ ಪಡುವವರನ್ನು ಸಂತೈಸುವನು ತಾಳ್ಮೆಗೆಡುತ್ತಿರುವವರನ್ನು. ಸರ್ವೇಶ್ವರನ ಕಡೆ ತಿರುಗಿಕೊಂಡು, ಪಾಪವನ್ನು ತೊರೆದುಬಿಡು; ಆತನನ್ನು ಪ್ರಾರ್ಥಿಸಿ, ಅಪರಾಧಗಳ ಅಡ್ಡಿಯನ್ನು ಕಡಿಮೆಮಾಡು. ಮಹೋನ್ನತನ ಕಡೆ ಹಿಂದಿರುಗಿ, ಅಧರ್ಮವನ್ನು ಬಿಡು ಅಸಹ್ಯ ಕೃತ್ಯಗಳನ್ನು ಸಂಪೂರ್ಣವಾಗಿ ಹಗೆಮಾಡು. ಜೀವಿಸುತ್ತಾ ಮಹೋನ್ನತನಿಗೆ  ಉಪಕಾರ ಸ್ತುತಿ ಮಾಡುವವರನ್ನು ಬಿಟ್ಟರೆ ಪಾತಾಳದಲ್ಲಿ ಆತನಿಗೆ ಸ್ತುತಿ ಹಾಡುವವರಿದ್ದಾರೆ? ಕೃತಜ್ಞತಾ ಸ್ತುತಿ ಇರುವುದಿಲ್ಲ ಜೀವಿಸದೆ ಇದ್ದವನಲ್ಲಿ ಅಂತೆಯೇ ಅದು ಲಯವಾಗುತ್ತದೆ  ಮೃತನಾದವನಲ್ಲಿ ಸರ್ವೇಶ್ವರನ ಸ್ತುತಿಗೈವನು ಜೀವಂತನು ಹಾಗು ಆರೋಗ್ಯಶಾಲಿ. ನಮ್ಮ ದೇವರಾದ ಸರ್ವೇಶ್ವರನ ಕೃಪೆ ಎಷ್ಟು ಘನವಾದುದು! ಶುದ್ದರಾಗಿ ಆತನ ಕಡೆ ತಿರುಗುವವರ ಮೇಲೆ ಆತನ ಕನಿಕರ ಎಷ್ಟು ವಿಶೇಷವಾದುದು!

ಕೀರ್ತನೆ: 32:1-2, 5, 6, 7
ಶ್ಲೋಕ: ಪ್ರಭು, ಭಕ್ತರೆಲ್ಲರು ನಿನ್ನ ಪ್ರಾರ್ಥಿಸಲಿ ಸಕಾಲದಲಿ.

ಶುಭಸಂದೇಶ: ಮಾರ್ಕ 10:17-27

ಅಲ್ಲಿಂದ ಯೇಸುಸ್ವಾಮಿ ಪ್ರಯಾಣವನ್ನು ಮುಂದುವರಿಸಿದರು. ದಾರಿಯಲ್ಲಿ ಒಬ್ಬನು, "ಒಳ್ಳೆಯ ಗುರುವೇ, ಅಮರಜೀವವು ನನಗೆ ಪ್ರಾಪ್ತಿಯಾಗಬೇಕಾದರೆ ನಾನೇನು ಮಾಡಬೇಕು?" ಎಂದು ಕೇಳಿದನು. "ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ ದೇವರೊಬ್ಬರನ್ನು ಬಿಟ್ಟರೆ ಬೇರೆ ಯಾರೂ ಒಳ್ಳೆಯವರಲ್ಲ. ದೈವಾಜ್ಞೆಗಳು ನಿನಗೆ ತಿಳಿದೇ ಇವೆ: ನರಹತ್ಯೆ ಮಾಡಬೇಡ, ಕದಿಯಬೇಡ, ಸುಳ್ಳುಸಾಕ್ಷಿ ಹೇಳಬೇಡ, ಮೋಸಮಾಡಬೇಡ, ನಿನ್ನ ತಂದೆತಾಯಿಗಳನ್ನು ಗೌರವಿಸು," ಎಂದು ಯೇಸು ಉತ್ತರವಿತ್ತರು. ಅದಕ್ಕೆ ಅವನು, "ಗುರುದೇವಾ, ನಾನು ಬಾಲ್ಯದಿಂದಲೇ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ," ಎಂದು ಹೇಳಿದನು. ಆಗ ಯೇಸು ಅವನನ್ನು ಮಮತೆಯಿಂದ ಈಕ್ಷಿಸಿ, "ನೀನು ಮಾಡಬೇಕಾದ ಕಾರ್ಯವೂಂದು ಬಾಕಿಯಿದೆ. ಹೋಗು, ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು," ಎಂದರು. ಯೇಸುವಿನ ಈ ಮಾತನ್ನು ಕೇಳುತ್ತಲೇ ಅವನ ಮುಖ ಪೆಚ್ಚಾಯಿತು. ಅವನು ಖಿನ್ನ ಮನಸ್ಕನಾಗಿ ಅಲ್ಲಿಂದ ಹೊರಟು ಹೋದನು. ಏಕೆಂದರೆ ಅವನಿಗೆ ಅಪಾರ ಆಸ್ತಿಯಿತ್ತು. ಆಗ ಯೇಸುಸ್ವಾಮಿ ಸುತ್ತಲೂ  ನೋಡಿ, ತಮ್ಮ ಶಿಷ್ಯರನ್ನು ಉದ್ದೇಶಿಸಿ, "ಐಶ್ವರ್ಯವುಳ್ಳವರಿಗೆ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದು ಎಷ್ಟೊಂದು ಕಷ್ಟ!" ಎಂದರು. ಅವರ ಈ ಮಾತನ್ನು ಕೇಳಿದ ಶಿಷ್ಯರು ಬೆರಗಾದರು. ಯೇಸು ಪುನಃ ಅವರಿಗೆ, "ಮಕ್ಕಳೇ, ದೇವರ ಸಾಮ್ರಾಜ್ಯವನ್ನು ಸೇರುವುದು ಎಷ್ಟು ಕಷ್ಟ! ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಸೇರುವುದಕ್ಕಿಂತಲೂ ಒಂಟೆಯು ಸೂಜಿಗಣ್ಣಲ್ಲಿ ನುಸುಳುವುದು ಸುಲಭ," ಎಂದರು. ಇದನ್ನು ಕೇಳಿದ ಮೇಲಂತೂ ಶಿಷ್ಯರಿಗೆ ಅಪರಮಿತ ಆಶ್ಚರ್ಯವಾಯಿತು. "ಹಾಗಾದರೆ ಯಾರು ತಾನೇ ಜೀವೂದ್ಧಾರ ಹೊಂದಲು ಸಾಧ್ಯ?" ಎಂದು ತಮ್ಮತಮ್ಮೊಳಗೇ ಮಾತನಾಡಿಕೊಂಡರು. ಯೇಸು ಅವರನ್ನು ನಿಟ್ಟಿಸಿ ನೋಡಿ, "ಮನುಷ್ಯನಿಗೆ ಇದು ಅಸಾಧ್ಯ, ದೇವರಿಗೆ ಎಲ್ಲವೂ ಸಾಧ್ಯ," ಎಂದರು.

ಮನಸಿಗೊಂದಿಷ್ಟು : ಶ್ರೀಮಂತಿಕೆ ತಪ್ಪಲ್ಲ. ಐಶ್ವರ್ಯ ನಮ್ಮ ಹಿಡಿತದಲ್ಲಿ ಇರುವ ಬದಲಾಗಿ ಐಶ್ವರ್ಯದ ಹಿಡಿತದಲ್ಲಿ ನಾವಿರುವುದು ತಪ್ಪಾಗುತ್ತದೆ. ಐಶ್ವರ್ಯದ ಹಾತೊರಿಕೆಯೇ ನಮ್ಮ ಗುರಿಯಾದಾಗ ಸ್ವರ್ಗ ಸಾಮ್ರಾಜ್ಯ ನಿಧಾನವಾಗಿ ನಮ್ಮಿಂದ ದೂರವಾಗುತ್ತಲೇ ಹೋಗುತ್ತದೆ.

ಪ್ರಶ್ನೆ : ಐಶ್ವರ್ಯವೂ ಸೇರಿದಂತೆ ಸ್ವರ್ಗ ಸಾಮ್ರಾಜ್ಯವನ್ನು ನಮ್ಮಿಂದ ದೂರಗೊಳಿಸುತ್ತಿರುವುವು ಯಾವುವು?

02.03.25 - "ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದು ಹಾಕು"

ಮೊದಲನೇ ವಾಚನ: ಸಿರಾಖನು 27:4-7
ಕಾಳನು ಸಾಣಿಸುವಾಗ ಹಿಪ್ಪೆ ಉಳಿಯುವುದು ಜರಡಿಯಲ್ಲಿ ಮನುಷ್ಯನ ಹೊಲೆತನ ಕಂಡು ಬರುವುದು ಅವನ ಆಲೋಚನೆಯಲ್ಲಿ. ಕುಂಬಾರನ ಮಡಿಕೆಯ ಪರೀಕ್ಷೆ ಬೆಂಕಿಯ ಆವಿಗೆಯಿಂದ ಮನುಷ್ಯನ ಪರಿಕ್ಷೆ ಅವನ ಸಂಭಾಷಣೆಯಿಂದ . ಮರದ ಫಲ ತೋರಿಸುವುದು ಅದನ್ನು ಬೆಳೆಯಿಸಿದ ಹದವನ್ನು, ಮಾತು ವ್ಯಕ್ತಪಡಿಸುವುದು ಮನಸ್ಸಿನ ಆಲೋಚನೆಯನ್ನು, ಒಬ್ಬನನ್ನು ಹೊಗಳಬೇಡ ಅವನ ಸಂಭಾಷಣೆಯನ್ನು ಅಳೆಯುವ ಮೊದಲೇ ಏಕೆಂದರೆ ಅವನ ಸತ್ವಪರೀಕ್ಷೆ ಅಡಗಿರುವುದು ಅದರಲ್ಲೇ.

ಕೀರ್ತನೆ: 92:2-3, 13-14, 15-16

ಶ್ಲೋಕ: ಪ್ರಭು, ನಿನ್ನ ಗುಣಗಾನ ಮಂಗಳಕರ

ಎರಡನೇ ವಾಚನ: 1 ಕೊರಿಂಥಿಯರಿಗೆ  15:54-58


ಳಿದು ಹೋಗುವಂಥದ್ದು ಅಮರತ್ವವನ್ನೂ ಮರ್ತ್ಯವಾದುದು ಅಮರ್ತ್ಯವನ್ನೂ ಧರಿಸಿಕೊಂಡಾಗ ಪವಿತ್ರಗ್ರಂಥದ ಈ ವಾಕ್ಯ ನೆರವೇರುವುದು: ಸಾವಿಗೆ ಸೋಲಾಯಾತು ಜಯವು ಸಂಪೂರ್ಣವಾಯಿತು. ಎಲೈ ಸಾವೇ, ನಿನ್ನ ಜಯವೆಲ್ಲಿ? ಎಲೈ ಸಾವೇ, ನಿನ್ನ ವಿಷಕೊಂಡಿಯೆಲ್ಲಿ? ಪಾಪವೇ ಸಾವಿನ ವಿಷಕೊಂಡಿ. ಪಾಪಕ್ಕೆ ಶಕ್ತ್ಯಾಧಾರ ಶಾಸ್ತ್ರ ವಿಧಿಗಳೇ. ಆದರೆ ನಮ್ಮ ಪ್ರಭುವಾದ ಯೇಸುಕ್ರಿಸ್ತರ ಮುಖಾಂತರ ನಮಗೆ ಜಯವನ್ನು ದೊರಕಿಸಿಕೊಟ್ಟಿರುವ ದೇವರಿಗೆ ಸ್ತೋತ್ರ ಸಲ್ಲಲಿ! ನನ್ನ ಪ್ರಿಯ ಸಹೋದರರೇ, ಸ್ಥಿರ ಚಿತ್ತರಾಗಿರಿ, ನಿಶ್ಚಲರಾಗಿರಿ, ಪ್ರಭುವಿನ ಸೇವೆಯಲ್ಲಿ ನೀವು ಪಡುವ ಪ್ರಯಾಸ ಎಂದಿಗೂ ನಿಷ್ಪಲವಾಗದು . ಆದ್ದರಿಂದ ಅವರ ಸೇವೆಯಲ್ಲಿ ನಿರಂತರ  ಶ್ರದ್ಧೆಯುಳ್ಳವರಾಗಿರಿ.

 ಶುಭಸಂದೇಶ: ಲೂಕ 6:39-45

ಯೇಸುಸ್ವಾಮಿ ಅವರಿಗೆ ಈ ಸಾಮತಿಯನ್ನೂ ಹೇಳಿದರು: "ಕುರುಡನು ಕುರುಡನಿಗೆ ದಾರಿ ತೋರಿಸಲಾದೀತೆ? ಇಬ್ಬರೂ ಹಳ್ಳದಲ್ಲಿ ಬೀಳುವುದಿಲ್ಲವೆ? ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ; ಆದರೂ ಪೂರ್ಣ ಶೀಕ್ಷಣ ಪಡೆದ ಪ್ರತಿಯೊಬ್ಬನೂ ಗುರುವಿನಂತೆ ಆಗುವನು. "ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು  ನೋಡದೆ, ಸೋದರನ ಕಣ್ಣಿನಲ್ಲಿರುವ ಅಣುವನ್ನು ಗಮನಿಸುವುದೇಕೆ? ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನೇ ಕಾಣಲಾರದ ನೀನು, 'ತಮ್ಮಾ ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದು ಬಿಡುತ್ತೇನೆ," ಎಂದು ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದು ಹಾಕು, ಅನಂತರ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆದು ಹಾಕಲು ನಿನಗೆ ಕಣ್ಣು ನಿಚ್ಚಳವಾಗಿ ಕಾಣಿಸುವುದು. "ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ; ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. ಪ್ರತಿಯೊಂದು ಮರದ ಗುಣವನ್ನು ಅದರ ಹಣ್ಣಿನಿಂದ ಗುರುತಿಸಬಹುದು. ಮುಳ್ಳು ಗಿಡದಲ್ಲಿ ಅಂಜೂರ ಕೀಳುವಂತಿಲ್ಲ. ಮುಳ್ಳು ಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವಂತಿಲ್ಲ. ಒಳ್ಳೆಯವನು ತನ್ನ ಹೃದಯವೆಂಬ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರ ತರುತ್ತಾನೆ. ಹೃದಯದಲ್ಲಿ ತುಂಬಿರುವುದೇ ಬಾಯಿ ಮಾತಾಗಿ ತುಳುಕುತ್ತದೆ.

ಮನಸಿಗೊಂದಿಷ್ಟು :  ಧರ್ಮಗಳ ಶ್ರೇಷ್ಠತೆಯ ವಿಷಯ ಬಂದಾಗ ನಾವು ಬಹಳ ಉನ್ಮಾದಕ್ಕೆ ಒಳಗಾಗುತ್ತೇವೆ. ನಮ್ಮದೇ ಮೇಲು ಎಂಬುದನ್ನು ಸಾಧಿಸಲು ವಾದಿಸುತ್ತೇವೆ. ಆದರೆ ’ಒಳ್ಳೆಯ ಮರವು ಒಳ್ಳೆಯ ಫಲವನ್ನು ಕೊಡುತ್ತದೆ’ ಎಂಬ ಮಾತು ನಮಗೆ ನೆನಪಿಗೆ ಬರಬೇಕು. ಒಳ್ಳೆಯ ಧರ್ಮದ, ಚಿಂತನೆಯ, ಆಶಯದ ಫಲಗಳು ನಾವು ಎಂಬುದಾಗಿ ಪ್ರತಿ ದಿನ ಬಾಳಿದಾಗ ನಾವು ಒಳ್ಳೆಯ ಮರದ ಫಲಗಳು ಎಂಬ ಸಂದೇಶ ಹೊರಡುತ್ತದೆ. ದಾರಿ ತೋರುವಂತರಾಗಲು ನಮ್ಮ ದೃಷ್ಟಿ ಸರಿಯಾಗಿರಲಿ.

ಪ್ರಶ್ನೆ : ಸದ್ಯಕ್ಕೆ ನಮ್ಮ ಕಣ್ಣಲ್ಲಿರುವ ದಿಮ್ಮಿ ಎಷ್ಟು ಗಾತ್ರದ್ದು?  

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...