07.01.25 - “ನಮ್ಮಲ್ಲಿ ಐದುರೊಟ್ಟಿ ಮತ್ತು ಎರಡು ವಿೂನುಗಳಿವೆ”

ಮೊದಲನೇ ವಾಚನ: 1 ಯೋವಾನ್ನ 4:7-10


ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿ ದೇವರಿಂದ ಉಗಮವಾದುದು. ಪ್ರೀತಿಸುವವನು ದೇವರ ಮಗನು. ಅವನು ದೇವರನ್ನು ಬಲ್ಲವನು. ಪ್ರೀತಿಸದವನು ದೇವರನ್ನು ಬಲ್ಲವನಲ್ಲ. ಏಕೆಂದರೆ, ದೇವರು ಪ್ರೀತಿಸ್ವರೂಪಿ. ತಮ್ಮ ಏಕೈಕ ಪುತ್ರನ ಮುಖಾಂತರ ನಾವು ಸಜ್ಜೀವವನ್ನು ಪಡೆಯುವಂತೆ ದೇವರು ಅವರನ್ನು ಲೋಕಕ್ಕೆ ಕಳುಹಿಸಿದರು. ನಮ್ಮ ಮೇಲೆ ದೇವರಿಗಿರುವ ಪ್ರೀತಿ ಹೀಗೆ ವ್ಯಕ್ತವಾಯಿತು. ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ಅವರು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತಮ್ಮ ಪುತ್ರನನ್ನು ಕಳುಹಿಸಿದ್ದರಲ್ಲಿಯೇ ಪ್ರೀತಿಯ ನಿಜ ಗುಣ ತೋರಿಬರುತ್ತದೆ.

ಕೀರ್ತನೆ: 72:1-4, 7-8 v.11
ಶ್ಲೋಕ: ರಾಷ್ಟ್ರಗಳು ಸಾಷ್ಟಾಂಗವೆರಾಗಲಿ ಸರ್ವೇಶ್ವರಸ್ವಾಮಿಗೆ. 

ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ|
ಕಲಿಸು ನಿನ್ನ ನೀತಿಯನು, ರಾಜಕುವರನಿಗೆ||
ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ|
ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ||

ಬೆಟ್ಟಗುಡ್ಡಗಳಿಂದ ಬರಲಿ ಸಮೃದ್ಧಿ|
ನಿನ್ನ ಪ್ರಜೆಗೆ ಫಲಿಸಲಿ ನ್ಯಾಯನೀತಿ||
ದೀನದಲಿತರನಾತ ಉದ್ಧರಿಸಲಿ|
ಬಡಬಗ್ಗರಿಗೆ ನ್ಯಾಯ ದೊರಕಿಸಲಿ|
ಪ್ರಜಾಹಿಂಸಕರನು ಸದೆಬಡಿಯಲಿ||

ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ|
ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ||
ಸಾಗರದಿಂದ ಸಾಗರದವರೆಗಿರಲಿ ಆತನ ಆಧಿಪತ್ಯ|
ಮಹಾನದಿಯಿಂದ ಭುವಿ ಎಲ್ಲೆಯವರೆಗಿರಲಿ ಆತನ ಪ್ರಭುತ್ವ||

ಘೋಷಣೆ ಮತ್ತಾಯ 4:23
ಅಲ್ಲೆಲೂಯ, ಅಲ್ಲೆಲೂಯ!

ಯೇಸು ದೈವರಾಜ್ಯದ ಸಂದೇಶವನ್ನು ಪ್ರಭೋಧಿಸುತ್ತಿದ್ದರು ಮತ್ತು ಜನರ ಎಲ್ಲಾ ತರಹದ ರೋಗರುಜಿನಗಳನ್ನೂ ಬೇನೆ ಬವಣೆಗಳನ್ನೂ ಗುಣಪಡಿಸುತ್ತಿದ್ದರು.
ಅಲ್ಲೆಲೂಯ!

ಶುಭಸ೦ದೇಶ: ಮಾರ್ಕ 6:34-44


ಯೇಸು ದೋಣಿಯಿಂದ ಇಳಿದಾಗ ಅಲ್ಲಿ ದೊಡ್ಡ ಜನಸಮೂಹವೇ ಸೇರಿತ್ತು. ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು, ಯೇಸುವಿನ ಮನ ಕರಗಿತು; ಅನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು. ಅಷ್ಟರಲ್ಲಿ ಸಂಜೆಯಾಗುತ್ತಾ ಬಂದಿತು. ಶಿಷ್ಯರು ಯೇಸುವಿನ ಬಳಿಗೆ ಬಂದು, “ಈಗಾಗಲೇ ಹೊತ್ತು ವಿೂರಿಹೋಯಿತು; ಇದು ನಿರ್ಜನ ಪ್ರದೇಶ; ಇನ್ನು ಜನರನ್ನು ಕಳುಹಿಸಿಬಿಡಿ. ಅವರು ಸವಿೂಪದ ಊರುಕೇರಿಗಳಿಗೆ ಹೋಗಿ ಊಟಕ್ಕೆ ಏನಾದರೂ ಕೊಂಡುಕೊಳ್ಳಲಿ,” ಎಂದರು. ಆಗ ಯೇಸು, “ನೀವೇ ಅವರಿಗೆ ಊಟಕ್ಕೇನಾದರೂ ಕೊಡಿ,” ಎಂದರು ಅದಕ್ಕೆ ಶಿಷ್ಯರು “ನಾವು ಹೋಗಿ ಇನ್ನೂರು ದೆನಾರಿ ನಾಣ್ಯಗಳ ಬೆಲೆಯಷ್ಟು ರೊಟ್ಟಿಯನ್ನು ಕೊಂಡುತಂದು ಅವರಿಗೆ ಊಟಕ್ಕೆ ಬಡಿಸೋಣವೇನು?” ಎಂದರು. ಯೇಸು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ, ಹೋಗಿ ನೋಡಿಕೊಂಡು ಬನ್ನಿ,” ಎಂದರು. ಅವರು ವಿಚಾರಿಸಿಕೊಂಡು ಬಂದು, “ನಮ್ಮಲ್ಲಿ ಐದುರೊಟ್ಟಿ ಮತ್ತು ಎರಡು ವಿೂನುಗಳಿವೆ,” ಎಂದು ತಿಳಿಸಿದರು. ಎಲ್ಲರು ಪಂಕ್ತಿಪಂಕ್ತಿಯಾಗಿ ಹಸಿರು ಹುಲ್ಲಿನ ಮೇಲೆ ಊಟಕ್ಕೆ ಕುಳಿತುಕೊಳ್ಳಬೇಕೆಂದು ಯೇಸು ಅಪ್ಪಣೆಮಾಡಿದರು. ಅವರು ಐವತ್ತರಂತೆಯೂ ನೂರರಂತೆಯೂ ಪಂಕ್ತಿಯಲ್ಲಿ ಕುಳಿತರು. ಯೇಸು ಆ ಐದು ರೊಟ್ಟಿಗಳನ್ನೂ ಎರಡು ವಿೂನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ಆ ರೊಟ್ಟಿಗಳನ್ನು ಮುರಿದು ಜನರಿಗೆ ಬಡಿಸುವಂತೆ ಅವನ್ನು ಶಿಷ್ಯರಿಗೆ ಕೊಟ್ಟರು. ಅಂತೆಯೇ ಎರಡು ವಿೂನುಗಳನ್ನು ಜನರೆಲ್ಲರಿಗೆ ಹಂಚುವಂತೆ ಮಾಡಿದರು. ಎಲ್ಲರೂ ಹೊಟ್ಟೆ ತುಂಬಾ ತಿಂದು ತೃಪ್ತರಾದರು. ಇನ್ನೂ ಉಳಿದಿದ್ದ ರೊಟ್ಟಿ ಮತ್ತು ವಿೂನಿನ ತುಂಡುಗಳನ್ನು ಒಟ್ಟುಗೂಡಿಸಿದಾಗ, ಅವು ಹನ್ನೆರಡು ಬುಟ್ಟಿ ತುಂಬ ಆದವು. ಊಟ ಮಾಡಿದವರಲ್ಲಿ ಗಂಡಸರ ಸಂಖ್ಯೆಯೇ ಐದು ಸಾವಿರ.

06.01.25 - "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಸ್ವರ್ಗಸಾಮ್ರಾಜ್ಯ ಸಮೀಪಿಸಿತು"

ಮೊದಲನೇ ವಾಚನ: 1 ಯೋವಾನ್ನ 3:22-4:6

ಪ್ರಿಯರೇ, ನಾವು ದೇವರ ಆಜ್ಞೆಗಳಿಗೆ ವಿಧೇಯರಾಗಿ ಅವರಿಗೆ ಮೆಚ್ಚುಗೆಯಾದವುಗಳನ್ನೇ ಮಾಡುವುದರಿಂದ ನಾವು ಕೋರುವುದೆಲ್ಲವನ್ನೂ ಅವರಿಂದ ಪಡೆಯುತ್ತೇವೆ. ನಾವು ದೇವರ ಪುತ್ರ ಯೇಸುಕ್ರಿಸ್ತರ ನಾಮದಲ್ಲಿ ವಿಶ್ವಾಸವಿಟ್ಟು ಅವರು ವಿಧಿಸಿದಂತೆ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದೇ ಅವರ ಆಜ್ಞೆ. ದೇವರ ಆಜ್ಞೆಯನ್ನು ಪಾಲಿಸುವವನು ಅವರಲ್ಲಿ ನೆಲೆಸಿರುತ್ತಾನೆ. ದೇವರೂ ಅವನಲ್ಲಿ ನೆಲೆಸಿರುತ್ತಾರೆ. ದೇವರು ನಮ್ಮಲ್ಲಿ ನೆಲೆಸಿದ್ದಾರೆಂದು ಅವರು ದಯಪಾಲಿಸುವ ಪವಿತ್ರಾತ್ಮರಿಂದಲೇ ತಿಳಿದುಕೊಳ್ಳುತ್ತೇವೆ. ಪ್ರಿಯರೇ, “ನಾವು ಪವಿತ್ರಾತ್ಮ ಪ್ರೇರಿತರು” ಎಂದು ಹೇಳುವ ಎಲ್ಲರನ್ನೂ ನಂಬಬಾರದು. ಆ ಪ್ರೇರಣೆ ದೇವರಿಂದ ಬಂದಿದೆಯೇ ಎಂದು ಪರೀಕ್ಷಿಸಿ ನೋಡಬೇಕು. ಏಕೆಂದರೆ, ಎಷ್ಟೋ ಮಂದಿ ಕಪಟ ಪ್ರವಾದಿಗಳು ಎಲ್ಲೆಡೆಯಲ್ಲೂ ಹರಡಿದ್ದಾರೆ. ದೇವರ ಆತ್ಮದಿಂದ ಬಂದ ಪ್ರೇರಣೆಯನ್ನು ನೀವು ಹೀಗೆ ಗುರುತಿಸಬಹುದು: ಮನುಷ್ಯ ಆಗಿ ಬಂದ ಕ್ರಿಸ್ತಯೇಸುವನ್ನು ಒಪ್ಪಿಕೊಳ್ಳುವ ಆತ್ಮವು ದೇವರಿಂದ ಪ್ರೇರಿತವಾದುದು. ಯೇಸುವನ್ನು ಒಪ್ಪಿಕೊಳ್ಳದ ಆತ್ಮ ದೇವರಿಂದ ಪ್ರೇರಿತವಾದುದಲ್ಲ. ಅದು ಕ್ರಿಸ್ತ ವಿರೋಧಿಯ ಆತ್ಮ. ಅದು ಬರುವುದೆಂದು ನೀವು ಕೇಳಿದ್ದೀರಿ; ಈಗಾಗಲೇ ಅದು ಲೋಕದಲ್ಲಿ ತಲೆದೋರಿದೆ. ಪ್ರಿಯ ಮಕ್ಕಳೇ, ನೀವಂತೂ ದೇವರಿಗೆ ಸೇರಿದವರು. ಲೋಕದಲ್ಲಿರುವ ದುರಾತ್ಮಕ್ಕಿಂತಲೂ ನಿಮ್ಮಲ್ಲಿರುವ ಆತ್ಮವು ಶ್ರೇಷ್ಠವಾದುದು. ಆದ್ದರಿಂದಲೇ ಆ ಕಪಟ ಪ್ರವಾದಿಗಳನ್ನು ಜಯಿಸಿದ್ದೀರಿ. ಅವರು ಲೋಕಕ್ಕೆ ಸೇರಿದವರು. ಆದ್ದರಿಂದ ಅವರು ಲೌಕಿಕವಾದುದನ್ನೇ ಮಾತನಾಡುತ್ತಾರೆ. ಎಂದೇ, ಲೋಕವು ಅವರಿಗೆ ಕಿವಿಗೊಡುತ್ತದೆ. ನಾವಾದರೋ ದೇವರಿಗೆ ಸೇರಿದವರು. ದೇವರನ್ನು ಅರಿತವನು ನಮಗೆ ಕಿವಿಗೊಡುತ್ತಾನೆ. ದೇವರಿಗೆ ಸೇರದವನು ನಮಗೆ ಕಿವಿಗೊಡುವುದಿಲ್ಲ. ಇದರಿಂದಲೇ ಸತ್ಯವನ್ನು ಸಾರುವ ಆತ್ಮ ಯಾವುದು ಮತ್ತು ಅಸತ್ಯವನ್ನು ಸಾರುವ ಆತ್ಮ ಯಾವುದು ಎಂಬುದು ನಮಗೆ ತಿಳಿಯುತ್ತದೆ. 
ಕೀರ್ತನೆ: 2:7-8, 10-11 v.8
ಶ್ಲೋಕ: ಕೇಳಿದೆಯಾದರೆ ನಿನಗಧೀನಮಾಡುವೆನು ರಾಷ್ಟ್ರಗಳನು ಕೊಡುವೆನು ನಿನಗೆ ಸ್ವಾಸ್ತ್ಯವಾಗಿ ಜಗದ ಆದ್ಯಂತ್ಯವನು. 

ಶುಭಸಂದೇಶ: ಮತ್ತಾಯ 4:12-17, 23-25


ಯೊವಾನ್ನನು ಬಂಧಿತನಾದನೆಂದು ಯೇಸುಸ್ವಾಮಿ ಕೇಳಿ, ಆ ಪ್ರಾಂತ್ಯವನ್ನು ಬಿಟ್ಟು ಗಲಿಲೇಯಕ್ಕೆ ಹೊರಟುಹೋದರು. ನಜರೇತ್ ಊರಿನಲ್ಲಿ ತಂಗದೆ ಗಲಿಲೇಯ ಸರೋವರದ ಸವಿೂಪದಲ್ಲಿರುವ ಕಫೆರ್ನವುಮ್ ಎಂಬ ಊರಿನಲ್ಲಿ ವಾಸಮಾಡಿದರು. ಇದು ಜೆಬುಲೋನ್ ಹಾಗೂ ನೆಫ್ತಲೀಮ್ ನಾಡುಗಳ ಸರಹದ್ದಿನಲ್ಲಿದೆ. ಹೀಗೆ: "ಜೆಬುಲೋನ್ ನಾಡೇ, ನೆಫ್ತಲೀಮ್ ನಾಡೇ, ಸರೋವರದ ಹತ್ತಿರವಿರುವ ಹಾದಿಬೀದಿಯೇ, ಜೋರ್ಡನಿನ ಹೊರವಲಯವೇ, ಕಾರ್ಗತ್ತಲಲ್ಲಿ ವಾಸಿಸುವವರಿಗೆ ದಿವ್ಯ ಜ್ಯೋತಿಯೊಂದು ಕಾಣಿಸಿತು. ಮರಣಛಾಯೆ ಕವಿದ ನಾಡಿಗರಿಗೆ ಅರುಣೋದಯವಾಯಿತು,"ಎಂದು ನುಡಿದ ಪ್ರವಾದಿ ಯೆಶಾಯನ ವಚನಗಳು ಈಡೇರಿದವು. ಅಂದಿನಿಂದ ಯೇಸು, "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಸ್ವರ್ಗಸಾಮ್ರಾಜ್ಯ ಸಮೀಪಿಸಿತು," ಎಂಬ ಸಂದೇಶವನ್ನು ಬೋಧಿಸತೊಡಗಿದರು. ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಉಪದೇಶ ಮಾಡುತ್ತಿದ್ದರು. ದೈವರಾಜ್ಯದ ಸಂದೇಶವನ್ನು ಪ್ರಬೋಧಿಸುತ್ತಿದ್ದರು. ಜನರ ಎಲ್ಲಾ ತರಹದ ರೋಗರುಜಿನಗಳನ್ನೂ ಬೇನೆ ಬವಣೆಗಳನ್ನೂ ಗುಣಪಡಿಸುತ್ತಿದ್ದರು. ಅವರ ಕೀರ್ತಿ ಸಿರಿಯಾ ದೇಶದಲ್ಲೆಲ್ಲಾ ಹಬ್ಬಿತು. ದೆವ್ವ ಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯು ಪೀಡಿತರನ್ನೂ ನಾನಾ ತರಹದ ವ್ಯಾಧಿ ಹಾಗೂ ವೇದನೆಯಿಂದ ನರಳುತ್ತಿದ್ದ ಎಲ್ಲ ರೋಗಿಗಳನ್ನೂ ಅವರ ಬಳಿಗೆ ಕರೆ ತಂದರು. ಯೇಸು ಅವರೆಲ್ಲರನ್ನು ಸ್ವಸ್ಥಪಡಿಸಿದರು. ಗಲಿಲೇಯ, ದೆಕಪೊಲಿ, ಜೆರುಸಲೇಮ್, ಜುದೇಯ ಎಂಬ ಸ್ಥಳಗಳಿಂದಲೂ ಜೋರ್ಡನ್ ನದಿಯ ಆಚೆಕಡೆಯಿಂದಲೂ ಜನರು ತಂಡೋಪ ತಂಡವಾಗಿ ಬಂದು ಯೇಸುವನ್ನು ಹಿಂಬಾಲಿಸಿದರು.

05.01.25 - "ಇಸ್ರಯೇಲನ್ನು ಪರಿಪಾಲಿಸುವವನು ನಿನ್ನಿಂದಲೇ ಉದಯಿಸಲಿರುವನು"

ಮೊದಲನೇ ವಾಚನ: ಯೆಶಾಯ  60:1-6 


ನಿನಗೆ ಬೆಳಕು ಬಂದಿದೆ ಜೆರುಸಲೇಮೇ, ಏಳು, ಪ್ರಕಾಶಿಸು; ನಿನ್ನ ಮೇಲೆ ಉದಯಿಸಿದೆ ಸರ್ವೇಶ್ವರನ ತೇಜಸ್ಸು. ಇಗೋ ಜಗತ್ತನು ಮುತ್ತಿದೆ ಕತ್ತಲು, ಜನಾಂಗಗಳನು ಆವರಿಸಿದೆ ಕಾರ್ಗತ್ತಲು. ನಿನ್ನ ಮೇಲಾದರೋ ಉದಯಿಸುವನು ಸರ್ವೇಶ್ವರನು, ನಿನ್ನಲ್ಲಿ ಗೋಚರವಾಗುವುದು ಆತನಾ ತೇಜಸ್ಸು. ರಾಷ್ಟ್ರಗಳು ಬರುವವು ನಿನ್ನ ಬೆಳಕಿಗೆ, ಅರಸರು ನಿನ್ನ ಉದಯದ ಶೋಭೆಗೆ. ನೀ ನೋಡು ಸುತ್ತಮುತ್ತಲು ಕಣ್ಣೆತ್ತಿ, ಬರುತಿಹರು ನಿನ್ನ ಮಕ್ಕಳೆಲ್ಲರು ಗುಂಪಾಗಿ. ದೂರದಿಂದ ಬರುತಿಹರು ಗಂಡುಮಕ್ಕಳು, ಕಂಕುಳಿನಲ್ಲಿ ಹೊತ್ತ ಆ ಹೆಣ್ಣುಮಕ್ಕಳು. ಇದನ್ನು ನೋಡಿ ನೀ ಬೆಳಗುವೆ ಕಾಂತಿಯಿಂದ, ಉಬ್ಬುವುದು ನಿನ್ನ ಎದೆ ಆನಂದದಿಂದ. ಹರಿಯುವುದು ನಿನ್ನೆಡೆಗೆ ಸಮುದ್ರ ವ್ಯಾಪಾರ ಸಮೃದ್ಧಿ, ದೊರಕುವುದು ನಿನಗೆ ಅನ್ಯಜನಾಂಗಗಳ ಆಸ್ತಿಪಾಸ್ತಿ. ತುಂಬಿರುವುದು ನಿನ್ನೊಳು ಒಂಟೆಗಳ ಗುಂಪುಗಳು, ಮಿದ್ಯಾನಿನ, ಏಫದ ಪ್ರಾಯದ ಒಂಟೆಗಳು. ಬರುವರೆಲ್ಲರು ಶೆಬದಿಂದ, ತರುವರು ಬಂಗಾರ, ಧೂಪಗಳನು ಸಾರುವರೆಲ್ಲರು ಸರ್ವೇಶ್ವರನ ಸ್ತುತ್ಯಕಾರ್ಯಗಳನ್ನು. 

ಕೀರ್ತನೆ: 72:1-2, 7-8, 10-11, 12-13 

ಶ್ಲೋಕ: ರಾಜರುಗಳು ಸಾಷ್ಟಾಂಗವೆರಗಲಿ ಸರ್ವೇಶ್ವರಸ್ವಾಮಿಗೆ 

1.  ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ
     ಕಲಿಸು ನಿನ್ನ ನೀತಿಯನು ರಾಜಕುವರನಿಗೆ
     ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ
     ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ

2.  ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ
     ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ
     ಸಾಗರದಿಂದ ಸಾಗರದವರೆಗಿರಲಿ ಆತನ ಅಧಿಪತ್ಯ
     ಮಹಾನದಿಯಿಂದ ಭುವಿ ಎಲ್ಲೆಯವರೆಗಿರಲಿ ಆತನ ಪ್ರಭುತ್ವ

3.  ಕಷ್ಟಗಳನರ್ಪಿಸಲಿ ತಾರ್ಷಿಷ್ ಹಾಗೂ ದ್ವೀಪದ್ವೀಪದ ರಾಜರುಗಳು
     ಕಾಣಿಕೆಗಳ ತಂದೊಪ್ಪಿಸಲಿ ಶೆಬಾ ಹಾಗೂ ಸೆಬಾದ ರಾಜರುಗಳು
     ರಾಜರುಗಳು ಸಾಷ್ಟಾಂಗವೆರಗಲಿ ಆತನಿಗೆ
     ಘನರಾಷ್ಟ್ರಗಳು ಸೇವೆಸಲ್ಲಿಸಲಿ ಆತನಿಗೆ

4.  ಏಕೆನೆ ಕಾಪಾಡುವನಾತ ಮೊರೆಯಿಡುವ ಬಡವರನು
     ಉದ್ದರಿಸುವನಾತ ದಿಕ್ಕಿಲ್ಲದ ದೀನದಲಿತರನು
     ದೀನದರಿದ್ರರಿಗೆ ದಯೆಯ ತೋರುವನು
     ದಲಿತರ ಪ್ರಾಣವನು ಕಾಪಾಡುವನು

ಎರಡನೇ ವಾಚನ: ಎಫೆಸಿಯರಿಗೆ  3:2-3, 5-6 

ದೇವರು ತಮ್ಮ ಕೃಪಾತಿಶಯದ ಬಗ್ಗೆ ಸಾರುವ ಹೊಣೆಯನ್ನು ನಿಮ್ಮ ಸಲುವಾಗಿ ನನಗೆ ಕೊಟ್ಟಿರುತ್ತಾರೆಂಬುದನ್ನು ನೀವೇ ಬಲ್ಲಿರಿ. ದೇವರು ತಮ್ಮ ನಿಗೂಢ ಯೋಜನೆಯನ್ನು ನನಗೆ ಪ್ರಕಟಗೊಳ್ಳಿಸಿದ್ದಾರೆ. ಇದರ ಬಗ್ಗೆ ನಾನು ಮೊದಲೇ ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ. ಹಿಂದಿನ ಕಾಲದವರಿಗೆ ಈ ರಹಸ್ಯವನ್ನು ತಿಳಿಸಿರಲಿಲ್ಲ. ಆದರೆ ಈಗ ದೇವರು ಪವಿತ್ರಾತ್ಮರ  ಪೂಜ್ಯ ಪ್ರೇಷಿತರಿಗೂ ಪ್ರವಾದಿಗಳಿಗೂ ಅದನ್ನು ಪ್ರಕಟಿಸಿದ್ದಾರೆ. ಶುಭಸಂದೇಶದ ಮೂಲಕ ಅನ್ಯಜನರೂ ಯೇಸುಕ್ರಿಸ್ತರಲ್ಲಿ ದೇವಜನರೋಡನೆ ಸಹಬಾಧ್ಯರು, ಹಕ್ಕುದಾರರು, ಒಂದೇ ಶರೀರದ ಅಂಗಗಳು, ಹಾಗೂ ದೇವರು ಮಾಡಿದ ವಾಗ್ದಾನದಲ್ಲಿ ಪಾಲುಗಾರರು - ಇದೇ ಆ ರಹಸ್ಯ. 


ಶುಭಸಂದೇಶ: ಮತ್ತಾಯ 2:1-12 

ಯೇಸುಸ್ವಾಮಿ ಜನಿಸಿದ್ದು ಹೆರೋದರಸನ ಕಾಲದಲ್ಲಿ: ಜುದೇಯ ನಾಡಿನ ಬೆತ್ಲೆಹೇಂ ಎಂಬ ಊರಿನಲ್ಲಿ. ಕೆಲವು ಜ್ಯೋತಿಷಿಗಳು ಪೂರ್ವದಿಕ್ಕಿನಿಂದ ಹೊರಟು ಜೆರುಸಲೇಮಿಗೆ ಬಂದರು. "ಯೆಹೂದ್ಯರ ಅರಸ ಹುಟ್ಟಿದ್ದಾರಲ್ಲವೇ  ಅವರೆಲ್ಲಿ?"  ಎಂದು  ವಿಚಾರಿಸಿದರು; "ಅವರನ್ನು ಸೂಚಿಸುವ ನಕ್ಷತ್ರ ಪೂರ್ವದಲ್ಲಿ ಉದಯಿಸಿದ್ದನ್ನು ಕಂಡು ಅವರನ್ನು ಆರಾಧಿಸಲು ಇಲ್ಲಿಗೆ ಬಂದಿದ್ದೇವೆ" ಎಂದರು. ಇದನ್ನು ಕೇಳಿದ್ದೇ  ಹೆರೋದರಸನು ಬಹಳ ತಳಮಳಗೊಂಡನು; ಅಂತೆಯೇ ಜೆರುಸಲೇಮ್ ಆದ್ಯಂತವೂ ಗಲಿಬಿಲಿಗೊಂಡಿತು. ಯೆಹೂದ್ಯರ ಎಲ್ಲ ಮುಖ್ಯ ಯಾಜಕರನ್ನೂ ಧರ್ಮಶಾಸ್ತ್ರಿಗಳನ್ನೂ ಅವನು ಸಭೆ ಸೇರಿಸಿದನು. " ಕ್ರಿಸ್ತ ಹುಟ್ಟಬೇಕಾದುದು ಎಲ್ಲಿ?" ಎಂದು ಅವರನ್ನು ವಿಚಾರಿಸಿದನು. ಅದಕ್ಕೆ ಅವರು "ಜುದೇಯದಲ್ಲಿರುವ ಬೆತ್ಲೆಹೇಮಿನಲ್ಲೇ ಹುಟ್ಟುವನು; ಏಕೆಂದರೆ "ಜುದೇಯ ನಾಡಿನ ಬೆತ್ಲೆಹೇಮೇ, ಜುದೇಯದ ಪ್ರಮುಖ ಪಟ್ಟಣಗಳಲ್ಲಿ ನೀನು ಅಲ್ಪಳೇನು ಅಲ್ಲ. ಕಾರಣ ನನ್ನ ಪ್ರಜೆ ಇಸ್ರಯೇಲನ್ನು ಪರಿಪಾಲಿಸುವವನು ನಿನ್ನಿಂದಲೇ ಉದಯಿಸಲಿರುವನು", ಎಂದು ಪ್ರವಾದಿ ಬರೆದಿದ್ದಾನೆ. ಎಂದು ಉತ್ತರವಿತ್ತನು. ಆಗ ಹೆರೋದನು ಆ ಜ್ಯೋತಿಷಿಗಳನ್ನು ಗೋಪ್ಯವಾಗಿ ಬರಮಾಡಿಕೊಂಡು ಅವರಿಗೆ ನಕ್ಷತ್ರ ಕಾಣಿಸಿಕೊಂಡ ಕಾಲವನ್ನು ಸ್ಪಷ್ಟವಾಗಿ ಕೇಳಿ ತಿಳಿದುಕೊಂಡನು. ಆನಂತರ ಅವರನ್ನು ಬೆತ್ಲೆಹೇಮಿಗೆ ಕಳುಹಿಸಿಕೊಡುತ್ತಾ, 'ನೀವು ಹೋಗಿ ಆ ಮಗುವನ್ನು ಚೆನ್ನಾಗಿ ಹುಡುಕಿರಿ; ಕಂಡಕೂಡಲೇ ನನಗೆ ಬಂದು ತಿಳಿಸಿರಿ. ನಾನು ಹೋಗಿ ಆ ಮಗುವನ್ನು ಆರಾಧಿಸಬೇಕು," ಎಂದು ಹೇಳಿದನು. ಜ್ಯೋತಿಷಿಗಳು ಅರಸನ ಮಾತಿಗೆ ತಲೆಬಾಗಿ ಹೊರಟರು. ಪೂರ್ವದಿಕ್ಕಿನಲ್ಲಿ ಮೊದಲೇ ಅವರಿಗೆ ಕಾಣಿಕೊಂಡಿದ್ದ ನಕ್ಷತ್ರ ಪುನಃ ಕಾಣಿಸಿಕೊಂಡಿತು. ಅವರು ಪರಮಾನಂದಭರಿತರಾದರು. ಆ ನಕ್ಷತ್ರ ಅವರ ಮುಂದೆ ಮುಂದೆ ಸಾಗುತ್ತಾ ಮಗು ಇದ್ದ ಸ್ಥಳದ ಮೇಲೆ ಬಂದು ನಿಂತುಬಿಟ್ಟಿತು. ಜ್ಯೋತಿಷಿಗಳು ಆ ಮನೆಯನ್ನು ಪ್ರವೇಶಿಸಿ ಮಗುವನ್ನು ತಾಯಿ ಮರಿಯಳ ಬಳಿ ಕಂಡು ಅದಕ್ಕೆ ಸಾಷ್ಟಾಂಗವೆರಗಿ ಆರಾಧಿಸಿದರು. ತಮ್ಮ ತಮ್ಮ ಬೊಕ್ಕಸಗಳನ್ನು ಬಿಚ್ಚಿ ಚಿನ್ನ, ಪರಿಮಳದ್ರವ್ಯ ಮತ್ತು ರಕ್ತಬೋಳ ಇವುಗಳನ್ನು ಮಗುವಿಗೆ ಪಾದಕಾಣಿಕೆಯಾಗಿ ಸಮರ್ಪಿಸಿದರು. ಹೆರೋದನ ಬಳಿಗೆ ಹಿಂದಿರುಗಬಾರದೆಂದು ಕನಸಿನಲ್ಲಿ ದೈವಾಜ್ಞೆಯಾದ್ದರಿಂದ, ಅವರು ಬೇರೆ ಮಾರ್ಗವಾಗಿ ತಮ್ಮ ದೇಶಕ್ಕೆ ಮರಳಿದರು.

04.01.25 - "ನಮಗೆ "ಮೆಸ್ಸೀಯ" ಸಿಕ್ಕಿದ್ದಾರೆ"

ಮೊದಲನೇ ವಾಚನ: 1 ಯೊವಾನ್ನ 3:7-10 

ಪ್ರಿಯ ಮಕ್ಕಳೇ, ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸುವುದಕ್ಕೆ ಯಾರಿಗೂ ಅವಕಾಶ ಕೊಡಬೇಡಿ. ಕ್ರಿಸ್ತಯೇಸು ಸತ್ಯ ಸ್ವರೂಪಿಯಾಗಿರುವಂತೆಯೇ ಸತ್ಯಕ್ಕನುಸಾರ ನಡೆಯುವ ಪ್ರತಿ ಒಬ್ಬನೂ ಸತ್ಯವಂತನೇ. ಪಾಪಮಾಡುವವನು ಸೈತಾನನ ಸಂತಾನದವನು. ಸೈತಾನನು ಆದಿಯಿಂದಲೂ ಪಾಪಮಾಡಿದವನೇ. ಅವನ ದುಷ್ಕ್ರತ್ಯಗಳನ್ನು ವಿನಾಶಗೊಳಿಸಲೆಂದೇ ದೇವರ ಪುತ್ರ ಕಾಣಿಸಿಕೊಂಡದ್ದು. ದೇವರಿಂದ ಜನಿಸಿದ ಯಾವನೂ ಪಾಪಮಾಡನು. ದೇವರ ಜೀವದ ಕುಡಿ ಅವನಲ್ಲಿರುವುದು. ಅವನು ಪಾಪದಲ್ಲಿ ಜೀವಿಸನು. ಏಕೆಂದರೆ, ಅವನು ದೇವರಿಂದ ಜನಿಸಿದವನು. ಸನ್ಮಾರ್ಗದಲ್ಲಿ ನಡೆಯದವನೂ ಸಹೋದರರನ್ನು ಪ್ರೀತಿಸದವನೂ ದೇವರಿಂದ ಜನಿಸಿದವನಲ್ಲ. ಹೀಗೆ ದೇವರ ಮಕ್ಕಳು ಯಾರು ಮತ್ತು ಸೈತಾನನ ಮಕ್ಕಳು ಯಾರು ಎಂಬುದನ್ನು ತಿಳಿಯಬಹುದು. 

ಕೀರ್ತನೆ: 98:1, 7-9 
ಶ್ಲೋಕ: ಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ ನಮ್ಮ ದೇವ ಸಾಧಿಸಿದ ಜಯಗಳಿಕೆ. 

ಶುಭಸಂದೇಶ: ಯೊವಾನ್ನ 1:35-42 

ಮಾರನೆಯ ದಿನ ಯೊವಾನ್ನನು ತನ್ನಿಬ್ಬರು ಶಿಷ್ಯರ ಸಂಗಡ ನಿಂತುಕೊಂಡಿರುವಾಗ, ಯೇಸುಸ್ವಾಮಿ ಆ ಮಾರ್ಗವಾಗಿ ಹೋಗುತ್ತಿದ್ದರು. ಅವರನ್ನು ನೋಡುತ್ತಲೇ ಯೊವಾನ್ನನು ತನ್ನ ಆ ಶಿಷ್ಯರಿಗೆ, "ಇಗೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ  ಕುರಿಮರಿ," ಎಂದು ಹೇಳಿದನು. ಇದನ್ನು ಕೇಳಿ ಆ ಶಿಷ್ಯರು ಯೇಸುವನ್ನು ಹಿಂಬಾಲಿಸಿದರು. ಯೇಸುಸ್ವಾಮಿ, ತಮ್ಮನ್ನು ಹಿಂಬಾಲಿಸಿ ಬರುತ್ತಿರುವುದನ್ನು ನೋಡಿ, "ನಿಮಗೆ ಏನು ಬೇಕು?" ಎಂದು ಕೇಳಿದರು. ಅವರು, "ರಬ್ಬಿ, ತಾವು ವಾಸ ಮಾಡುವುದೆಲ್ಲಿ?" ಎಂದು ವಿಚಾರಿಸಿದರು. ('ರಬ್ಬಿ'  ಎಂದರೆ ಗುರುದೇವ ಎಂದು ಅರ್ಥ.) ಯೇಸು ಉತ್ತರವಾಗಿ, "ಬಂದು ನೋಡಿ" ಎನ್ನಲು ಅವರು ಹೋಗಿ ಯೇಸುಸ್ವಾಮಿ ಇದ್ದ ಸ್ಥಳವನ್ನು ಕಂಡು ಆ ದಿನವನ್ನು ಅವರೊಡನೆ ಕಳೆದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು. ಯೊವಾನ್ನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ್ದ ಇಬ್ಬರು ಶಿಷ್ಯರಲ್ಲಿ ಸಿಮೋನ ಪೇತ್ರನ ಸಹೋದರನಾದ ಅಂದ್ರೆಯನು ಒಬ್ಬನು. ಇವನು ಮೊದಲು ತನ್ನ ಸಹೋದರ ಸಿಮೋನನನ್ನು ಕಂಡು, "ನಮಗೆ "ಮೆಸ್ಸೀಯ" ಸಿಕ್ಕಿದ್ದಾರೆ," ಎಂದು ತಿಳಿಸಿ ಅವನನ್ನು ಯೇಸುವಿನ ಬಳಿಗೆ ಕರೆತಂದನು. ('ಮೆಸ್ಸೀಯ' ಎಂದರೆ ಅಭಿಷಿಕ್ತನಾದ ಲೋಕೋದ್ಧಾರಕ ಎಂದು ಅರ್ಥ). ಯೇಸು ಸಿಮೋನನನ್ನು ನೋಡಿ, "ಯೊವಾನ್ನನ ಮಗನಾದ ಸಿಮೋನನೇ, ಇನ್ನು ಮುಂದೆ ನಿನ್ನನ್ನು ಕೇಫನೆಂದು ಕರೆಯುವರು," ಎಂದು ನುಡಿದರು. ('ಕೇಫ' ಎಂದರೆ 'ಪೇತ್ರ' ಇಲ್ಲವೇ 'ಬಂಡೆ' ಎಂದರ್ಥ).

03.01.25 - ಇಗೋ, ನೋಡಿ ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ

ಮೊದಲನೆಯ ವಾಚನ: ಯೊವಾನ್ನನು ಬರೆದ ಮೊದಲನೆಯ ಪತ್ರದಿಂದ ಇಂದಿನ ವಾಚನ 2:29-3:6


ಪ್ರಿಯರೇ, ಕ್ರಿಸ್ತಯೇಸು ಸತ್ಯಸ್ವರೂಪಿ ಎಂಬುದನ್ನು ನೀವು ಬಲ್ಲಿರಿ. ಎಂದೇ, ಸತ್ಯಮಾರ್ಗದಲ್ಲಿ ನಡೆಯುವ ಪ್ರತಿಯೊಬ್ಬನೂ ಅವರಿಂದ ಜನಿಸಿದನು ಎಂಬುದು ನಿಮಗೆ ವೇದ್ಯವಾಗಿರಬೇಕು. ನಾವು ದೇವರ ಮಕ್ಕಳು ಎನಿಸಿಕೊಂಡಿರಬೇಕಾದರೆ ಪಿತನು ನಮ್ಮನ್ನು ಎಷ್ಟಾಗಿ ಪ್ರೀತಿಸುತ್ತಾರೆಂಬುದನ್ನು ಗಮನಿಸಿರಿ. ನಿಜಕ್ಕೂ ನಾವು ದೇವರ ಮಕ್ಕಳೇ. ಲೋಕವು ಅವರನ್ನು ಅರಿತುಕೊಲಿಲ್ಲವಾದ ಕಾರಣ ನಾವು ಎಂಥವರೆಂದು ಅದು ಅರಿತಿಲ್ಲ. ಪ್ರಿಯರೇ, ನಾವೀಗ ದೇವರ ಮಕ್ಕಳು. ಮುಂದೆ ನಾವು ಎಂಥವರಾಗುತ್ತೇವೆ ಎಂಬುದು ಇನ್ನೂ ವಿಷದವಾಗಿಲ್ಲ. ಆದರೆ ಕ್ರಿಸ್ತಯೇಸು ಪ್ರತ್ಯಕ್ಷವಾಗುವಾಗ ನಾವೂ ಅವರಂತೆಯೇ ಇರುತ್ತೇವೆಂದು ಬಲ್ಲೆವು. ಏಕೆಂದರೆ, ಅವರನ್ನು ನಾವು ಅವರ ಯಥಾರ್ಥ ರೂಪದಲ್ಲೇ ಕಾಣುತ್ತೇವೆ. ಕ್ರಿಸ್ತಯೇಸುವಿನಲ್ಲಿ ನಂಬಿಕೆ ನಿರೀಕ್ಷೆಯನ್ನಿಟ್ಟಿರುವ ಪ್ರತಿಯೊಬ್ಬನೂ ಅವರು ಶುದ್ದರಾಗಿರುವಂತೆಯೇ ತಮ್ಮನ್ನು ಶುದ್ದವಾಗಿಟ್ಟುಕೊಳ್ಳುತ್ತಾನೆ. ಪಾಪ ಮಾಡುವ ಪ್ರತಿಯೊಬ್ಬನೂ ದೇವರ ಆಜ್ಞೆಯನ್ನು ಮೀರುತ್ತಾನೆ. ದೇವರ ಆಜ್ಞೆಯನ್ನು ಉಲ್ಲಂಘಿಸುವುದೇ ಪಾಪ. ಪಾಪರಹಿತವಾದ ಕ್ರಿಸ್ತಯೇಸು ಪಾಪಪರಿಹಾರ ಮಾಡಲೆಂದೇ ಕಾಣಿಸಿಕೊಂಡರೆಂದು ನೀವು ಬಲ್ಲಿರಿ. ಅವರಲ್ಲಿ ನೆಲೆಸಿರುವ ಪ್ರತಿಯೊಬ್ಬನು ಪಾಪಮಾಡನು. ಪಾಪಮಾಡುವವನು ಅವರನ್ನು ಕಂಡವನೂ ಅಲ್ಲ, ಅರಿತವನೂ ಅಲ್ಲ.

ಕೀರ್ತನೆ: 98:1,3-4,5-6
ಶ್ಲೋಕ: ಕಂಡುಬಂದಿತು ಜಗದ ಎಲ್ಲೆಎಲ್ಲೆಗೆ ನಮ್ಮ ದೇವ ಸಾಧಿಸಿದ ಜಯಗಳಿಕೆ.

ಹಾಡಿರಿ ಪ್ರಭುವಿಗೆ ಹೊಸ ಗೀತೆಯೊಂದನು|
ಎಸಗಿಹನಾತನು ಪವಾಡ ಕಾರ್ಯಗಳನು|
ಗಳಿಸಿತಾತನ ಕೈ ಮಹತ್ವಪೂರ್ಣ ಗೆಲುವನು||

ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ| ನಮ್ಮ ದೇವ ಸಾಧಿಸಿದ ಜಯಗಳಿಕೆ||
ಭೂನಿವಾಸಿಗಳೇ ಮಾಡಿರಿ ಜಯಕಾರ ಪ್ರಭುವಿಗೆ|
ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ||

ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ|
ಭಜಿಸಿರಿ ಆತನನು ವಾದ್ಯಮೇಳದೊಂದಿಗೆ||
ಊದಿರಿ ಕೊಂಬನು ತುತೂರಿಯನು|
ಉದ್ಘೋಷಿಸಿರಿ ಪ್ರಭು ರಾಜನನು||

ಘೋಷಣೆ:
ಅಲ್ಲೆಲೂಯ, ಅಲ್ಲೆಲೂಯ!

ಪವಿತ್ರ ದಿನವೊಂದು ಉದಯಿಸಿದೆ ಜನಾಂಗಗಳೇ, ಬಂದು ಸರ್ವೇಶ್ವರ ಸ್ವಾಮಿಯನ್ನು ಸ್ತುತಿಸಿರಿ | ಏಕೆಂದರೆ ಇಂದು ಪೃಥ್ವಿಯ ಮೇಲೆ ಅತಿಶಯವಾದ ಬೆಳಕೊಂದು ಪ್ರಕಾಶಿಸಿದೆ ||

ಶುಭಸಂದೇಶ: ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 1:29-34


ಆ ಕಾಲದಲ್ಲಿ ಯೊವಾನ್ನನು, ತಾನಿದ್ದಲ್ಲಿಗೆ ಯೇಸು ಬರುತ್ತಿರುವುದನ್ನು ಕಂಡು, "ಇಗೋ, ನೋಡಿ ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ; ಲೋಕದ ಪಾಪಗಳನ್ನು ಪರಿಹರಿಸುವವರು ಇವರೇ. ಇವರು "ನನ್ನ ಬಳಿಕ ಬಂದವರಾದರೂ ನನಗಿಂತಲೂ ಮೊದಲೇ ಇದ್ದವರು; ಆದುದರಿಂದ ಇವರು ನನಗಿಂತಲೂ ಶ್ರೇಷ್ಠರು, " ಎಂದು ನಾನು ಹೇಳಿದುದು ಇವರನ್ನು ಕುರಿತೇ. ಇಸ್ರಯೇಲರಿಗೆ ಇವರನ್ನು ತೊರ್ಪಡಿಸಬೇಕೆಂದೇ ನಾನು ನೀರಿನಿಂದ ಸ್ನಾನದೀಕ್ಷೆ ಕೊಡುತ್ತಾ ಬಂದೆನು; ಬರಬೇಕಾಗಿದ್ದವರು ಇವರೇ ಎಂದು ನನಗೂ ತಿಳಿದಿರಳಿಲ್ಲ, "ಎಂದು ನುಡಿದನು. ಯೊವಾನ್ನನು ತನ್ನ ಸಾಕ್ಷ್ಯವನ್ನು ಮುಂದುವರೆಸುತ್ತಾ, "ಪಾರಿವಾಳದ ರೂಪದಲ್ಲಿ ಪವಿತ್ರಾತ್ಮ ಸ್ವರ್ಗದಿಂದ ಇಳಿದುಬಂದು ಅವರ ಮೇಲೆ ನೆಲಸುವುದನ್ನು ನಾನು ನೋಡಿದೆನು. ಬರಬೇಕಾಗಿದ್ದವರು ಇವರೇ ಎಂದು ನನಗೂ ತಿಳಿದಿರಳಿಲ್ಲ. ಆದರೆ ನೀರಿನಿಂದ ಸ್ನಾನದೀಕ್ಷೆ ಕೊಡುವಂತೆ ನನ್ನನ್ನು ಕಳುಹಿಸಿದ ದೇವರು, 'ಪವಿತ್ರಾತ್ಮ ಇಳಿದುಬಂದು ಯಾವ ವ್ಯಕ್ತಿಯ ಮೇಲೆ ನೆಲಸುವುದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೂಡುವಾತ, 'ಎಂದಿದ್ದರು. ಅದನ್ನು ನಾನು ಕಣ್ಣಾರೆ ನೋಡಿದ್ದೇನೆ. ಆದುದರಿಂದ ಅವರೇ ದೇವರ ಪುತ್ರನೆಂದು ಸಾಕ್ಷಿನೀಡುತ್ತಿದ್ದೇನೆ, "ಎಂದು ಹೇಳಿದನು.

02.01.2025 - ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ

ಮೊದಲನೆಯ ವಾಚನ : ಯೊವಾನ್ನನು ಬರೆದ ಮೊದಲನೆಯ ಪತ್ರದಿಂದ ಇಂದಿನ ವಾಚನ 2:22-28



ಮೊದಲಿನಿಂದಲೂ ನೀವು ಯಾವ ಸಂದೇಶವನ್ನು ಕೇಳಿದ್ದಿರೋ ಅದು ನಿಮ್ಮಲ್ಲಿ ನೆಲೆಸಲಿ"
ಪ್ರಿಯ ಮಕ್ಕಳೇ, ಅಸತ್ಯವಾದಿ ಎಂದರೆ ಯಾರು?  ಯೇಸವೇ ಕ್ರಿಸ್ತ ಎಂಬುದನ್ನು ಯಾರು ಅಲ್ಲಗಳೆಯುತ್ತಾನೋ ಅವನೇ ಅಸತ್ಯವಾದಿ;  ಅವನೇ ಕ್ರಿಸ್ತವಿರೋಧಿ.  ಅವನು ಪಿತನನ್ನು ಮತ್ತು ಪುತ್ರನನ್ನು ತಿರಸ್ಕರಿಸುತ್ತಾನೆ.  ಪುತ್ರನನ್ನು  ತಿರಸ್ಕರಿಸುವವನು ಪಿತನನ್ನೂ ತಿರಸ್ಕರಿಸುತ್ತಾನೆ.  ಪುತ್ರನನ್ನು ಅಂಗೀಕರಿಸುವವನು ಪಿತನನ್ನೂ ಅಂಗೀಕರಿಸುತ್ತಾನೆ.  ಮೊದಲಿನಿಂದಲೂ ನೀವು ಯಾವ ಸಂದೇಶವನ್ನು ಕೇಳಿದ್ದಿರೋ ಅದು ನಿಮ್ಮಲ್ಲಿ ನೆಲೆಸಲಿ.  ಮೊದಲಿನಿಂದಲೂ ನೀವು ಕೇಳಿದ ಸಂದೇಶ ನಿಮ್ಮಲ್ಲಿ ನೆಲಸಿದ್ದರೆ ಪುತ್ರನಲ್ಲಿಯೂ ಪಿತನಲ್ಲಿಯೂ ನೀವು ನೆಲಸುತ್ತೀರಿ.  ಕ್ರಿಸ್ತಯೇಸು ನಿಮಗೆ ವಾಗ್ದಾನ ಮಾಡಿರುವ ನಿತ್ಯಜೀವ ಇದೇ.  ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸಬೇಕೆಂದಿರುವವರನ್ನು ಕುರಿತು ಇದನ್ನು ನಿಮಗೆ ಬರೆದಿದ್ದೇನೆ.  ನೀವು ಕ್ರಿಸ್ತ ಯೇಸುವಿನಿಂದ ಅಭಿಷಿಕ್ತರಾಗಿದ್ದೀರಿ.  ಆ ಆಭಿಷೇಕವು ನಿಮ್ಮಲ್ಲಿ ನೆಲಸಿದೆ.  ಆದ್ದರಿಂದ ಯಾರೂ ನಿಮಗೆ ಬೋಧಿಸುವ ಅವಶ್ಯಕತೆಯಿಲ್ಲ.  ಆ ಅಭಿಷೇಕವೇ ನಿಮಗೆ ಎಲ್ಲವನ್ನೂ ಬೋಧಿಸುತ್ತಾ ಬರುತ್ತದೆ.  ಈ ಬೋಧನೆ ಸತ್ಯವಾದುದು.  ಮಿಥ್ಯವಾದುದಲ್ಲ.  ಅದರ ಪ್ರಕಾರವೇ ಕ್ರಿಸ್ತಯೇಸುವಿನಲ್ಲಿ ನೆಲೆಸಿರಿ.  ಹೌದು ಪ್ರಿಯಮಕ್ಕಳೇ,  ಕ್ರಿಸ್ತಯೇಸು ಪ್ರತ್ಯಕ್ಷವಾಗುವಾಗ, ಅವರ ಪುನರಾಗಮನದ ಪ್ರಯುಕ್ತ ಅವರ ಮುಂದೆ ನಾವು ನಾಚಿಕೆಪಡದೆ ಧೈರ್ಯದಿಂದಿರುವಂತೆ ಅವರಲ್ಲಿ ನೆಲೆಗೊಂಡಿರೋಣ.
ಪ್ರಭುವಿನ ವಾಕ್ಯ

ಕೀರ್ತನೆ             98: 1,2-4
ಶ್ಲೋಕ:  ಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ ನಮ್ಮ ದೇವ ಸಾಧಿಸಿದ ಜಯಗಳಿಕೆ.

1.  ಹಾಡಿರಿ ಪ್ರಭುವಿಗೆ ಹೊಸ ಗೀತೆಯೊಂದನು|
ಎಸಗಿಹನಾತನು ಪವಾಡ ಕಾರ್ಯಗಳನು|
ಗಳಿಸಿತಾತನ ಕೈ ಪೂತಭುಜ ಗೆಲುವನು||
ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು|
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು||
ಶ್ಲೋಕ

2.  ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ|
ನಮ್ಮ ದೇವ ಸಾಧಿಸಿದ ಜಯಗಳಿಕೆ||
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು|
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು||
ಶ್ಲೋಕ

3.  ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ|
ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ||
ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ|
ಭಜಿಸಿರಿ ಆತನನು ವಾದ್ಯಮೇಳದೊಂದಿಗೆ||
ಶ್ಲೋಕ

ಘೋಷಣೆ  (ಯೊವಾನ್ನ 1:14,12)
ಅಲ್ಲೆಲೂಯ, ಅಲ್ಲೆಲೂಯ!
ಆ ದಿವ್ಯವಾಣಿ ಮನುಷ್ಯ ಆದರು, ಮನುಷ್ಯರಾಗಿ ನಮ್ಮೊಡನೆ ವಾಸಮಾಡಿದರು | ಕೆಲವರಾದರೋ ಅವರನ್ನು ಬರಮಾಡಿಕೊಂಡರು  ಅಂಥವರಿಗೆ ದೇವರ ಮಕ್ಕಳಾಗುವ ಹಕ್ಕನ್ನು ಅವರು ಕೊಟ್ಟರು ||
ಅಲ್ಲೆಲೂಯ!

ಶುಭಸಂದೇಶ : ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 1:19-26


ಆ ಕಾಲದಲ್ಲಿ ಜೆರುಸಲೇಮಿನ ಯೆಹೂದ್ಯ ಅಧಿಕಾರಿಗಳು, ಯಾಜಕರನ್ನೂ ಲೇವಿಯರನ್ನೂ ಯೊವಾನ್ನನ ಬಳಿಗೆ ಕಳಿಸಿದರು.  ಇವರು,  "ನೀನು ಯಾರು? " ಎಂದು ಪ್ರಶ್ನಿಸಿದರು.  ಯೊವಾನ್ನನು ಅದಕ್ಕೆ ಉತ್ತರವಾಗಿ, "ಅಭಿಷಿಕ್ತನಾದ ಲೋಕೋದ್ಧಾರಕ ನಾನಲ್ಲ, "ಎಂದು ಸ್ಪಷ್ಟವಾಗಿ ಹೇಳಿದನು.  ಏನನ್ನೂ ಮರೆಮಾಚಲಿಲ್ಲ.  ಹಾಗಾದರೆ, "ನೀನು ಎಲೀಯನೋ? " ಎಂದು ಕೇಳಲು "ಅಲ್ಲ" ಎಂದನು.  "ನೀನು ಬರಬೇಕಾಗಿದ್ದ ಪ್ರವಾದಿಯಿರಬಹುದೇ? "ಎಂದು ಅವರು ಮತ್ತೇ ಕೇಳಲು,  "ಅದೂ ಅಲ್ಲ, "ಎಂದು ಮರುನುಡಿದನು.  ಹಾಗಾದರೆ ನೀನು ಯಾರೆಂದು ನಮಗೆ ತಿಳಿಸು.  ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರಕೊಡಬೇಕಾಗಿದೆ .  ನಿನ್ನನ್ನು ಕುರಿತು ನೀನು ಏನು ಹೇಳುತ್ತಿ? "ಎಂದು ಅವರು ಮತ್ತೊಮ್ಮೆ ಕೇಳಿದರು.  ಅದಕ್ಕೆ ಯೊವಾನ್ನನು, "ಪ್ರಭುವಿನ ಮಾರ್ಗವನ್ನು ನೇರಗೊಳಿಸಿರೆಂದು ಬೆಂಗಾಡಿನಲ್ಲಿ ಕೂಗುವವನ ಸ್ವರವೇ ನಾನು, "ಎಂದು ಯೆಶಾಯ ಪ್ರವಾದಿಯ ಮಾತುಗಳಲ್ಲೇ ಉತ್ತರಕೊಟ್ಟನು.  ಆಗ ಫರಿಸಾಯರ ಕಡೆಯಿಂದ ಬಂದಿದ್ದ ಕೆಲವರು, "ನೀನು ಲೋಕೋದ್ಧಾರಕನಾಗಲಿ, ಎಲೀಯನಾಗಲಿ, ಬರಬೇಕಾಗಿದ್ದ ಪ್ರವಾದಿಯೇ ಆಗಲಿ ಅಲ್ಲವೆಂದ ಮೇಲೆ ಸ್ನಾನದೀಕ್ಷೆ ಕೊಡುವುದೇಕೆ? "ಎಂದು ಪ್ರಶ್ನಿಸಿದರು.  ಪ್ರತ್ಯುತ್ತರವಾಗಿ ಯೊವಾನ್ನನು, "ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ.  ನಿಮಗೆ ತಿಳಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ.  ನನ್ನ ಬಳಿಕ ಬರಬೇಕಾಗಿದ್ದವರು ಅವರೇ.  ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ, "ಎಂದನು.  ಯೊವಾನ್ನನು ಸ್ನಾನದೀಕ್ಷೆ ಕೊಡುತ್ತಿದ್ದ ಜೋರ್ಡಾನ್ ನದಿಯ ಆಚೆದಡದಲ್ಲಿದ್ದ ಬೆಥಾನಿಯ ಎಂಬಲ್ಲಿ ಇದೆಲ್ಲವೂ ನಡೆಯಿತು.
ಪ್ರಭುಕ್ರಿಸ್ತರ ಶುಭಸಂದೇಶ

31.12.24 - "ಆ ದಿವ್ಯವಾಣಿಯಲ್ಲಿ ಸಜ್ಜೀವವಿತ್ತು"

ಮೊದಲನೇ ವಾಚನ: 1 ಯೊವಾನ್ನ 2:18-21 

ನನ್ನ ಪ್ರಿಯ ಮಕ್ಕಳೇ, ಅಂತಿಮ ಕಾಲ ಸಮಿಾಪಿಸಿತು. ಕ್ರಿಸ್ತವಿರೋಧಿ ಬರುವನೆಂದು ನೀವು ಕೇಳಿದ್ದೀರಿ. ಈಗಾಗಲೇ ಅನೇಕ ಕ್ರಿಸ್ತವಿರೋಧಿಗಳು ತಲೆದೋರಿದ್ದಾರೆ. ಇದರಿಂದ ಅಂತಿಮಕಾಲ ಸನ್ನಿಹಿತವಾಯಿತೆಂದು ನಮಗೆ ತಿಳಿದುಬರುತ್ತದೆ. ಈ ಕ್ರಿಸ್ತವಿರೋಧಿಗಳು ನಮ್ಮವರಾಗಿರಲಿಲ್ಲ. ಆದಕಾರಣ, ಅವರು ನಮ್ಮನ್ನು ತೊರೆದರು. ಅವರು ನಮ್ಮವರೇ ಆಗಿದ್ದರೆ, ನಮ್ಮೊಂದಿಗೇ ಇರುತ್ತಿದ್ದರು. ಆದರೆ ಅವರು ನಮ್ಮನ್ನು ತೊರೆದು ಹೋದರು. ಇದರಿಂದ ಕ್ರೈಸ್ತರೆನಿಸಿಕೊಳ್ಳುವವರೆಲ್ಲರೂ ನಮ್ಮವರಲ್ಲ ಎಂಬುದು ಸ್ವಷ್ಟವಾಗಿ ಕಂಡುಬರುತ್ತದೆ. ನೀವಾದರೋ ಪರಿಶುದ್ಧವಾದವರಿಂದ ಅಭಿಷಿಕ್ತರಾಗಿದ್ದೀರಿ, ಸತ್ಯವನ್ನು ಅರಿತವರಾಗಿದ್ದೀರಿ. ನೀವು ಸತ್ಯವನ್ನು ಅರಿಯದವರೆಂದು ಭಾವಿಸಿ ನಾನು ಬರೆಯುತ್ತಿಲ್ಲ, ನೀವು ಸತ್ಯವನ್ನು ಅರಿತವರು; ಸತ್ಯದಿಂದ ಸುಳ್ಳು ಜನಿಸದೆಂಬುದನ್ನು ತಿಳಿದವರು ಆದುದರಿಂದ ನಾನು ನಿಮಗೆ  ಬರೆದಿದ್ದೇನೆ. 


ಕೀರ್ತನೆ: 96:1-2,11-12,13 
ಶ್ಲೋಕ: ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು 

ಶುಭಸಂದೇಶ: ಯೊವಾನ್ನ 1:1-18 
ಜಗತ್ತು ಉಂಟಾಗುವ ಮೊದಲೇ "ದಿವ್ಯವಾಣಿ" ಎಂಬುವರಿದ್ದರು. ಆ ದಿವ್ಯವಾಣಿ ದೇವರಾಗಿದ್ದರು. ಆ ದಿವ್ಯವಾಣಿ ದೇವರೊಂದಿಗೆ ಇದ್ದರು; ಅನಾದಿಯಿಂದಲೇ ಅವರು ದೇವರೊಂದಿಗೆ ಇದ್ದರು. ದಿವ್ಯವಾಣಿಯ ಮುಖಾಂತವೇ ಸಮಸ್ತವೂ ಉಂಟಾಯಿತು ಉಂಟಾದವುಗಳಲ್ಲಿ ಯಾವುದೂ ಆ ದಿವ್ಯವಾಣಿಯಿಂದಲ್ಲದೆ ಆದುದಲ್ಲ. ಆ ದಿವ್ಯವಾಣಿಯಲ್ಲಿ ಸಜ್ಜೀವವಿತ್ತು. ಆ ಜೀವವೇ ಮಾನವಜನಾಂಗದ ಜ್ಯೋತಿಯಾಗಿತ್ತು. ಆ ಜ್ಯೋತಿ ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲಿಗಾದರೋ ಅದನ್ನು ನಿಗ್ರಹಿಸಲಾಗಲಿಲ್ಲ. ದೇವರು ಒಬ್ಬ ವ್ಯಕ್ತಿಯನ್ನು ಕಳುಹಿಸಿದರು, ಆತನ ಹೆಸರು ಯೊವಾನ್ನ. ಈತನು ಸಾಕ್ಷಿಕೊಡಲು ಬಂದನು. ತನ್ನ ಮುಖಾಂತರ ಸರ್ವರೂ ವಿಶ್ವಾಸಿಸುವಂತೆ ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಿದನು ಈತನೇ ಜ್ಯೋತಿಯಾಗಿರಲಿಲ್ಲ; ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಲೆಂದೇ ಬಂದವನು. ನಿಜವಾದ ಜ್ಯೋತಿ ಆ ದಿವ್ಯವಾಣಿಯೇ. ಮಾನವರೆಲ್ಲರನ್ನು ಬೆಳಗಿಸಲು ಲೋಕಕ್ಕೆ ಆಗಮಿಸಲಿದ್ದ ಜಗಜ್ಯೋತಿ ಅವರೇ. ದಿವ್ಯವಾಣಿ ಲೋಕದಲ್ಲಿ ಇದ್ದರು. ಅವರ ಮುಖಾಂತರವೇ ಲೋಕವು ಉಂಟಾಯಿತು. ಲೋಕವಾದರೋ ಅವರನ್ನು ಅರಿತುಕೊಳ್ಳದೆ ಹೋಯಿತು. ಅವರು ತಮ್ಮ ಸ್ವದೇಶಕ್ಕೆ ಬಂದರು; ಸ್ವಜನರೇ ಅವರನ್ನು ಬರಮಾಡಿಕೊಳ್ಳದೆ ಹೋದರು. ಕೆಲವರಾದರೋ ಅವರನ್ನು ಬರಮಾಡಿಕೊಂಡರು. ಅಂಥವರಿಗೆ, ಅಂದರೆ, ಅವರಲ್ಲಿ ವಿಶ್ವಾಸವಿಟ್ಟವರಿಗೆ, ದೇವರ ಮಕ್ಕಳಾಗುವ ಹಕ್ಕನ್ನು ಅವರು ಕೊಟ್ಟರು. ಅಂಥವರ ಜನನವು ರಕ್ತಸಂಬಂಧದಿಂದ ಅಲ್ಲ, ಶಾರೀರಕ ಇಚ್ಛೆಯಿಂದ ಅಲ್ಲ, ಮಾನವಸಹಜ ಬಯಕೆಯಿಂದಲೂ ಅಲ್ಲ, ದೇವರಿಂದಲೇ ಆದುದು. ಆ ದಿವ್ಯವಾಣಿ ಮನುಷ್ಯ ಆದರು. ಮನುಷ್ಯನಾಗಿ ನಮ್ಮೊಡನೆ ವಾಸಮಾಡಿದರು. ಅವರ ಮಹಿಮೆಯನ್ನು ನಾವು ನೋಡಿದೆವು. ಪಿತನಿಂದ ಪಡೆದ ಆ ಮಹಿಮೆಏಕೈಕ ಪುತ್ರನಿಗೆ ಮಿಾಸಲಾದ ಮಹಿಮೆಯೇ ಎಂದೇ ಅವರು ವರಪ್ರಸಾದದಿಂದಲೂ ಸತ್ಯದಿಂದಲೂ ಪರಿಪೂರ್ಣರಾಗಿದ್ದರು. ಯೊವಾನ್ನನು ಅವರನ್ನು ಕುರಿತು ಸಾಕ್ಷಿ ನುಡಿಯುತ್ತಾ," 'ಅವರು ನನ್ನ ಬಳಿಕ ಬಂದವರಾದರೂ ನನಗಿಂತ ಮೊದಲೇ ಇದ್ದವರು; ಆದುದರಿಂದ ಅವರು ನನಗಿಂತಲೂ ಶ್ರೇಷ್ಟರು" ಎಂದು ನಾನು ಹೇಳಿದ್ದು ಅವರನ್ನು ಕುರಿತೇ," ಎಂದು ಘೋಷಿಸಿದನು. ಅವರ ಪರಿಪೂರ್ಣತೆಯಿಂದ ನಾವೆಲ್ಲರು ವರಪ್ರಸಾದದ ಮೇಲೆ ವರಪ್ರಸಾದವನ್ನು ಪಡೆದಿದ್ದೇವೆ. ಧರ್ಮಶಾಸ್ತ್ರವನ್ನು ಮೋಶೆಯ ಮುಖಾಂತರ ಕೊಡಲಾಯಿತು. ವರಪ್ರಸಾದ ಹಾಗೂ  ಸತ್ಯವಾದರೋ ಯೇಸುಕ್ರಿಸ್ತರ ಮುಖಾಂತರ ಬಂದವು. ಯಾರೂ ಎಂದೂ ದೇವರನ್ನು ಕಂಡಿಲ್ಲ; ಪಿತನ ವಕ್ಷಸ್ಥಳದಲ್ಲಿರುವ, ಸ್ವತಃ ದೇವರಾಗಿರುವ ಏಕೈಕ ಪುತ್ರನೇ ಅವರನ್ನು ತಿಳಿಯಪಡಿಸಿದ್ದಾರೆ.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...