08.04.24 - “ಇಗೋ, ನಾನು ದೇವರ ಸೇವಕಿ, ನೀವು ಹೇಳಿದಂತೆ ನನಗಾಗಲಿ,”

ಮಂಗಳವಾರ್ತೆಯ ಮಹೋತ್ಸವ




ಮೊದಲನೇ ವಾಚನ: ಯೆಶಾಯ 7:10-14; 8:10

ಪುನಃ ಸರ್ವೇಶ್ವರಸ್ವಾಮಿ ಆಹಾಜನಿಗೆ ಹೇಳಿದ್ದೇನೆಂದರೆ: “ನಿನ್ನ ದೇವರಾದ ಸರ್ವೇಶ್ವರನಿಂದ ಒಂದು ಗುರುತನ್ನು ಕೇಳಿಕೊ. ಅದು ಪಾತಾಳದಷ್ಟು ಆಳದಲ್ಲೇ ಇರಲಿ, ಆಕಾಶದಷ್ಟು ಎತ್ತರದಲ್ಲೇ ಇರಲಿ, ಕೇಳು” ಎಂದರು. ಅದಕ್ಕೆ ಆಹಾಜನು “ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ” ಎಂದನು. ಆಗ ಯೆಶಾಯನು: “ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೇ ಕೆಣಕುತ್ತಿರುವಿರಾ? ಆಗಲಿ, ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭ ತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು. ವ್ಯರ್ಥವಾಗುವುದು ನೀವು ಮಾಡಿದ ಸಮಾಲೋಚನೆ; ಕೈಗೂಡದು ನೀವು ಮಾಡಿದ ಪ್ರತಿಜ್ಞೆ; ಕಾರಣ, ದೇವನಿರುವನು ನಮ್ಮೊಡನೆ.”

ಕೀರ್ತನೆ: 40:7, 8-9, 10, 11
ಶ್ಲೋಕ: ನಾನೋಗೊಡುತ ಇಂತೆಂದೆ: ’ಇಗೋ ನಾನೇ ಬರುತ್ತಿರುವೆ’

ಬೇಡವಾದವು ನಿನಗೆ ಯಜ್ಞಾರ್ಪಣೆ, ಬಲಿಕಾಣಿಕೆ I
ಬಯಸಿಲ್ಲ ನೀ ಹೋಮವನೆ, ಪರಿಹಾರಕ ಬಲಿಯನೆ I
ಶ್ರವಣಶಕ್ತಿಯನು ಅನುಗ್ರಹಿಸಿದೆ ನೀನು ನನಗೆ II

ನಾನೋಗೊಡುತ ಇಂತೆಂದೆ : “ಇಗೋ ನಾನೇ ಬರುತ್ತಿರುವೆ I
ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ? II
ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ I

ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ” II
ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ I
ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ II

ಬಚ್ಚಿಟ್ಟುಕೊಳ್ಳಲಿಲ್ಲ ನನ್ನೆದೆಯೊಳು ನಿನ್ನ ಸತ್ಸಂಬಂಧವನು I
ಪ್ರಕಟಿಸಿದೆನು ಜೀವೋದ್ಧಾರವನು, ನಿನ್ನ ಪ್ರಾಮಾಣಿಕತೆಯನು I
ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ ಪ್ರೀತಿ ಸತ್ಯತೆಯನು II

ಎರಡನೇ ವಾಚನ: ಹಿಬ್ರಿಯರಿಗೆ 10:4-10

ಏಕೆಂದರೆ, ಹೋತ, ಹೋರಿಗಳ ರಕ್ತದಿಂದ ಪಾಪನಿವಾರಣೆ ಅಸಾಧ್ಯ. ಆದ್ದರಿಂದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತ ಯೇಸು ದೇವರಿಗೆ ಇಂತೆಂದರು: “ಬಲಿಯರ್ಪಣೆಗಳೂ ಕಾಣಿಕೆಗಳೂ ನಿಮಗೆ ಬೇಡವಾದವು ಎಂದೇ ಅಣಿಮಾಡಿ ಕೊಟ್ಟಿರಿ ನನಗೆ ದೇಹವೊಂದನು. ಸರ್ವಾಂಗ ಹೋಮಗಳೂ ಪಾಪ ಪರಿಹಾರಕ ಬಲಿಗಳೂ ನಿಮಗೆ ತರಲಿಲ್ಲ ತೃಪ್ತಿಯನು. ಆಗ ಇಂತೆಂದೆ ನಾನು: ಗ್ರಂಥದ ಸುರುಳಿಯಲಿ ನನ್ನನ್ನು ಕುರಿತು ಬರೆದಿರುವಂತೆ, ಓ ದೇವಾ, ಇಗೋ ನಾ ಬಂದೆ ನಿನ್ನ ಚಿತ್ತವನು ನೆರವೇರಿಸಲೆಂದೇ.” ಧರ್ಮಶಾಸ್ತ್ರದ ವಿಧಿಗನುಸಾರ ಅರ್ಪಿಸಲಾಗುತ್ತಿದ್ದುವಾದರೂ “ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪ ಪರಿಹಾರಕ ಬಲಿಗಳು ನಿಮಗೆ ಬೇಡವಾದವು; ಇವು ಯಾವುವೂ ನಿಮಗೆ ತರಲಿಲ್ಲ ತೃಪ್ತಿಯನು,” ಎಂದು ಮೊದಲು ಹೇಳುತ್ತಾರೆ. ಅನಂತರ, “ಇಗೋ, ನಾ ಬಂದೆ, ನಿಮ್ಮ ಚಿತ್ತವನ್ನು ನೆರವೇರಿಸಲೆಂದೇ,” ಎನ್ನುತ್ತಾರೆ. ಹೀಗೆ ಹೊಸದನ್ನು ಸ್ಥಾಪಿಸಲು ಹಳೆಯದನ್ನು ರದ್ದು ಮಾಡಿದ್ದಾರೆ. ಯೇಸುಕ್ರಿಸ್ತರು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮ ದೇಹವನ್ನು ಸಮರ್ಪಿಸಿ, ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಪುನೀತರಾಗಿದ್ದೇವೆ.

ಶುಭಸಂದೇಶ: ಲೂಕ 1:26-38


ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬಂದು “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!” ಎಂದನು. ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. ‘ಇದೆಂಥ ಶುಭಾಶಯ’ ಎಂದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ, “ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ ‘ಯೇಸು’ ಎಂಬ ಹೆಸರಿಡಬೇಕು; ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು. ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು,” ಎಂದನು. ಅದಕ್ಕೆ ಮರಿಯಳು, “ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ?” ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, “ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು ‘ದೇವರ ಪುತ್ರ’ ಎನಿಸಿಕೊಳ್ಳುವನು. ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ,” ಎಂದನು. ಆಗ ಮರಿಯಳು, “ಇಗೋ, ನಾನು ದೇವರ ಸೇವಕಿ, ನೀವು ಹೇಳಿದಂತೆ ನನಗಾಗಲಿ,” ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.

ಮನಸ್ಸಿಗೊಂದಿಷ್ಟು : ದೂತನು ಮಾತೆ ಮರಿಯ ಬಳಿಗೆ ಬಂದು ಶುಭವಾರ್ತೆಯನ್ನು ತಿಳಿಸಿದಾಗ, ಮೊದಲಿಗೆ ಮರಿಯ ತಬ್ಬಿಬ್ಬಾಗುತ್ತಾರೆ, ಆಶ್ಚರ್ಯಪಡುತ್ತಾರೆ ನಂತರ ಸಂಪೂರ್ಣವಾಗಿ ಒಪ್ಪಿಸಿಕೊಂಡು ದೈವಚಿತ್ತಕ್ಕೆ ತಲೆ ಬಾಗುತ್ತಾರೆ. ದೇವರಿಗೆ ಎಲ್ಲವು ಸಾಧ್ಯ ಎಂಬ ಮರಿಯಳ ವಿಶ್ವಾಸ ಲೋಕ ರಕ್ಷಣಾ ಕಾರ್ಯಕ್ಕೆ ಮುನ್ನುಡಿಯಾಯಿತು. ಬಾಳಿನ ಕಷ್ಟದ ಸಮಯದಲ್ಲಿ ನಾವು ತಬ್ಬಿಬ್ಬಾಗುತ್ತೇವೆ, ಗೊಂದಲಗೊಳ್ಳುತ್ತೇವೆ, ಭಯಪಡುತ್ತೇವೆ. ಆದರೆ ದೇವರಿಗೆ ನಮ್ಮ ಬಾಳನ್ನು ಸಮರ್ಪಿಸಿದಾಗ ದೇವರ ಕಾರ್ಯಗಳು ನಮ್ಮಲ್ಲಿ ಕೈಗೂಡುವುದನ್ನು ಕಾಣುತ್ತೇವೆ, ಅನುಭವಿಸುತ್ತೇವೆ.

ಪ್ರಶ್ನೆ : ಮಾತೆ ಮರಿಯಳ ವಿನಯ ವಿಧೇಯತೆ ನಮ್ಮ ಬಾಳಿಗೆಷ್ಟು ಪ್ರಸ್ತುತ?

07.04.24 - “ಇಗೋ ನೋಡು, ನನ್ನ ಕೈಗಳು; ನಿನ್ನ ಬೆರಳನ್ನು ತಂದು ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:42-47

ಭಕ್ತಾದಿಗಳು ಪ್ರೇಷಿತರ ಬೋಧನೆಯನ್ನು ಕೇಳುವುದರಲ್ಲಿ ನಿರತರಾಗಿದ್ದರು; ಅನ್ಯೋನ್ಯವಾಗಿ ಬಾಳುತ್ತಿದ್ದರು; ರೊಟ್ಟಿ ಮುರಿಯುವ ಸಹಭೋಜನದಲ್ಲಿ ಪಾಲ್ಗೊಳ್ಳುತ್ತಿದ್ದರು ಹಾಗೂ ಪ್ರಾರ್ಥನಾಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಭಕ್ತರ ಸಭಾಜೀವನ ಪ್ರೇಷಿತರ ಮುಖಾಂತರ ಅನೇಕ ಅದ್ಭುತ ಕಾರ್ಯಗಳೂ ಸೂಚಕಕಾರ್ಯಗಳೂ ನಡೆಯುತ್ತಿದ್ದವು. ಇವನ್ನು ಕಂಡು ಜನರು ಭಯಭ್ರಾಂತರಾಗುತ್ತಿದ್ದರು. ಭಕ್ತವಿಶ್ವಾಸಿಗಳೆಲ್ಲರೂ ಅನ್ಯೋನ್ಯವಾಗಿ ಬಾಳುತ್ತಿದ್ದರು. ತಮ್ಮಲ್ಲಿದ್ದುದನ್ನು ಹುದುವಾಗಿ ಹಂಚಿಕೊಳ್ಳುತ್ತಿದ್ದರು. ತಮ್ಮ ತಮ್ಮ ಆಸ್ತಿಪಾಸ್ತಿಯನ್ನು ಮಾರಿ ಬಂದ ಹಣವನ್ನು ಅವರವರ ಅವಶ್ಯಕತೆಗೆ ತಕ್ಕಂತೆ ಎಲ್ಲರಿಗೂ ಹಂಚುತ್ತಿದ್ದರು. ದಿನಂಪ್ರತಿ ಅವರು ಒಮ್ಮನಸ್ಸಿನಿಂದ ದೇವಾಲಯದಲ್ಲಿ ಸಭೆ ಸೇರುತ್ತಿದ್ದರು. ತಮ್ಮ ಮನೆಗಳಲ್ಲಿ ರೊಟ್ಟಿಮುರಿಯುವ ಸಹಭೋಜನವನ್ನು ಏರ್ಪಡಿಸಿ ಸಂತೋಷದಿಂದಲೂ ಸಹೃದಯದಿಂದಲೂ ಭಾಗವಹಿಸುತ್ತಿದ್ದರು. ದೇವರನ್ನು ಸ್ತುತಿಸುತ್ತಾ ಸಕಲರಿಗೆ ಅಚ್ಚುಮೆಚ್ಚಾಗಿ ಬಾಳುತ್ತಿದ್ದರು. ಜೀವೋದ್ಧಾರವನ್ನು ಹೊಂದುತ್ತಿದ್ದವರನ್ನೆಲ್ಲಾ ಪ್ರಭು ಈ ಸಭೆಗೆ ದಿನೇದಿನೇ ಸೇರಿಸಿಕೊಳ್ಳುತ್ತಿದ್ದರು.

ಕೀರ್ತನೆ: 118:2-4, 13-15, 22-24

ಶ್ಲೋಕ: ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ, ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ

ಸಾರಲಿ ಇಸ್ರಯೇಲಿನ ಜನತೆ I
ಆತನ ಪ್ರೀತಿ ಶಾಶ್ವತ’ ಎಂದೆ II
ಸಾರಲಿ ಆರೋನನ ವಂಶಲತೆI
ಆತನ ಪ್ರೀತಿ ಶಾಶ್ವತ’ ಎಂದೆ II
ಸಾರಲಿ ಆತನ ಭಕ್ತರ ಪಂಥ I
ಆತನ ಪ್ರೀತಿ ಶಾಶ್ವತ ಅಂಥ II

ನನ್ನನು ತಳ್ಳಿ ಬೀಳಿಸ ನೋಡಿದರು ನೆಲಕೆ I
ಆದರೆ ಪ್ರಭು ನೆರವು ನೀಡಿದನು ಎನಗೆ II
ಪ್ರಭುವೇ ನನಗೆ ಬಲವುಧೈರ್ಯವು I
ಆತನಿಂದಲೇ ನನಗೆ ಉದ್ಧಾರವು II
ಜಯಘೋಷಹರ್ಷಸುನಾದ ಸಜ್ಜನರ ಬಿಡಾರದಿಂದ I
ಪರಾಕ್ರಮಪ್ರದರ್ಶನ ಪ್ರಭುವಿನ ಬಲಗೈಯಿಂದ II

ಮನೆಕಟ್ಟುವವರು ಮೂಲೆಗೆಸೆದ ಕಲ್ಲು I
ಆಯಿತು ನೋಡುಮುಖ್ಯವಾದ ಮೂಲೆಗಲ್ಲು II
ಪ್ರಭುವಿನಿಂದಲೆ ಆದ  ಕಾರ್ಯ I
ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯII
ಪ್ರಭುವೇ ನಿಯೋಜಿಸಿದ ದಿನವಿದು I

ಹರ್ಷಿಸಿ ಆನಂದಿಸೋಣ ಇಂದು II   

ಎರಡನೆಯ ವಾಚನ: 1 ಯೊವಾನ್ನ 5:1-6

ಸಹೋದರರೇ, ಯೇಸುವೇ  'ಕ್ರಿಸ್ತ'  ಎಂದು  ವಿಶ್ವಾಸಿಸುವ  ಪ್ರತಿಯೊಬ್ಬನೂ  ದೇವರ  ಮಗನು.  ತಂದೆಯನ್ನು  ಪ್ರೀತಿಸುವವನು  ಆತನ  ಮಗನನ್ನೂ  ಪ್ರೀತಿಸುತ್ತಾನೆ.  ದೇವರನ್ನು  ಪ್ರೀತಿಸಿ,  ಅವರ  ಆಜ್ಞೆಗಳನ್ನು  ಪಾಲಿಸುವುದರಿಂದ  ನಾವು  ದೇವರ  ಮಕ್ಕಳನ್ನು  ಪ್ರೀತಿಸುತ್ತೇವೆಂಬುದು  ನಿಶ್ಚಯವಾಗುತ್ತದೆ.  ದೇವರನ್ನು  ಪ್ರೀತಿಸುವುದು  ಎಂದರೆ  ಅವರು  ಕೊಟ್ಟ  ಆಜ್ಞೆಗಳನ್ನು  ಅನುಸರಿಸಿ  ನಡೆಯುವುದೇ.  ಅವರ  ಆಜ್ಞೆಗಳು  ನಮಗೆ  ಹೊರೆಯೇನೂ  ಅಲ್ಲ.  ದೇವರಿಂದ  ಜನಿಸಿದ  ಪ್ರತಿಯೊಬ್ಬನೂ  ಲೋಕವನ್ನು  ಜಯಿಸುತ್ತಾನೆ.  ಲೋಕವನ್ನು  ಜಯಿಸುವಂಥದು  ನಮ್ಮ  ವಿಶ್ವಾಸವೇ.  ಯೇಸುವೇ  ದೇವರ  ಪುತ್ರನೆಂದು  ನಂಬಿದವರೇ  ಹೊರತು  ಲೋಕವನ್ನು  ಜಯಿಸಲು  ಬೇರೆ  ಯಾರಿಂದ  ಸಾಧ್ಯ?  ಕ್ರಿಸ್ತ  ಯೇಸುವೇ  ಜಲ  ಮತ್ತು  ರಕ್ತದಿಂದ  ಸಾಕ್ಷಿಹೊಂದಿದವರು.  ಜಲದಿಂದ  ಮಾತ್ರವಲ್ಲ,  ಜಲ  ಮತ್ತು  ರಕ್ತದಿಂದ  ಸಾಕ್ಷಿಹೊಂದಿದವರು.


ಶುಭಸಂದೇಶ: ಯೊವಾನ್ನ 20:19-31


ಅದೇ ಭಾನುವಾರ ಸಂಜೆ ಶಿಷ್ಯರು ಒಂದು ಮನೆಯಲ್ಲಿ ಕೂಡಿದ್ದರು. ಯೆಹೂದ್ಯರಿಗೆ ಅಂಜಿ ಮನೆಯ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ನಡುವೆ ನಿಂತರು. “ನಿಮಗೆ ಶಾಂತಿ” ಎಂದು ಹೇಳಿ ತಮ್ಮ ಕೈಗಳನ್ನು ಮತ್ತು ಪಕ್ಕೆಗಳನ್ನು ತೋರಿಸಿದರು. ಪ್ರಭುವನ್ನು ಕಂಡು ಶಿಷ್ಯರಿಗೆ ಮಹದಾನಂದವಾಯಿತು. ಯೇಸು ಪುನಃ, “ನಿಮಗೆ ಶಾಂತಿ, ಪಿತನು ನನ್ನನ್ನು ಕಳುಹಿಸಿದಂತೆಯೇ ನಾನೂ ನಿಮ್ಮನ್ನು ಕಳುಹಿಸುತ್ತೇನೆ,” ಎಂದರು. ಅನಂತರ ಅವರ ಮೇಲೆ ಉಸಿರೂದಿ, “ಪವಿತ್ರಾತ್ಮರನ್ನು ಸ್ವೀಕರಿಸಿರಿ. ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ ಅವನ್ನು ಕ್ಷಮಿಸಲಾಗುವುದು; ಯಾರ ಪಾಪಗಳನ್ನು ನೀವು ಕ್ಷಮಿಸದೆ ಉಳಿಸುತ್ತೀರೋ, ಅವರಿಗೆ ಕ್ಷಮಿಸದೆ ಉಳಿಸಲಾಗುವುದು,” ಎಂದು ನುಡಿದರು. ಹನ್ನೆರಡು ಮಂದಿಯಲ್ಲಿ ಒಬ್ಬನಾದ ದಿದುಮ ಎಂಬ ತೋಮನು, ಯೇಸುಸ್ವಾಮಿ ಬಂದಾಗ ಶಿಷ್ಯರೊಡನೆ ಇರಲಿಲ್ಲ. ಉಳಿದ ಶಿಷ್ಯರು “ನಾವು ಪ್ರಭುವನ್ನು ನೋಡಿದೆವು,” ಎಂದು ಹೇಳಿದರು. ಅದಕ್ಕೆ ಅವನು, “ಅವರ ಕೈಗಳಲ್ಲಿ ಮೊಳೆಗಳಿಂದಾದ ಗಾಯದ ಕಲೆಯನ್ನು ನಾನು ನೋಡಬೇಕು, ಮೊಳೆಗಳು ಜಡಿದಿದ್ದ ಜಾಗದಲ್ಲಿ ನನ್ನ ಬೆರಳನ್ನಿಡಬೇಕು, ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟು ನೋಡಬೇಕು. ಆ ಹೊರತು ನಾನು ನಂಬುವುದೇ ಇಲ್ಲ,” ಎಂದುಬಿಟ್ಟನು. ಎಂಟು ದಿನಗಳು ಕಳೆದವು. ಶಿಷ್ಯರು ಪುನಃ ಒಳಗೆ ಒಟ್ಟುಗೂಡಿದ್ದರು. ತೋಮನೂ ಅವರೊಡನೆ ಇದ್ದನು. ಬಾಗಿಲುಗಳು ಮುಚ್ಚಿದ್ದರೂ ಯೇಸು ಬಂದು ಅವರ ನಡುವೆ ನಿಂತು, “ನಿಮಗೆ ಶಾಂತಿ” ಎಂದರು. ಆಮೇಲೆ ತೋಮನಿಗೆ, “ಇಗೋ ನೋಡು, ನನ್ನ ಕೈಗಳು; ನಿನ್ನ ಬೆರಳನ್ನು ತಂದು ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು; ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು,” ಎಂದು ಹೇಳಿದರು. ಆಗ ತೋಮನು, “ನನ್ನ ಪ್ರಭುವೇ, ನನ್ನ ದೇವರೇ,” ಎಂದನು. ಯೇಸು ಅವನಿಗೆ “ನನ್ನನ್ನು ಕಂಡುದರಿಂದ ತಾನೆ ನಿನಗೆ ವಿಶ್ವಾಸ ಹುಟ್ಟಿತು? ಕಾಣದೆ ವಿಶ್ವಾಸಿಸುವವರು ಧನ್ಯರು,” ಎಂದು ಹೇಳಿದರು. ಯೇಸು ತಮ್ಮ ಶಿಷ್ಯರ ಕಣ್ಮುಂದೆ ಮಾಡಿದ ಸೂಚಕಕಾರ್ಯಗಳು ಇನ್ನೂ ಎಷ್ಟೋ ಇವೆ. ಅವನ್ನು ಈ ಪುಸ್ತಕದಲ್ಲಿ ಬರೆದಿಲ್ಲ. ಇಲ್ಲಿ ಬರೆದವುಗಳ ಉದ್ದೇಶ ಇಷ್ಟೇ: ಯೇಸು, ದೇವರಪುತ್ರ ಹಾಗು ಲೋಕೋದ್ಧಾರಕ ಎಂದು ನೀವು ವಿಶ್ವಾಸಿಸಬೇಕು; ವಿಶ್ವಾಸಿಸಿ ಅವರ ಹೆಸರಿನಲ್ಲಿ ಸಜ್ಜೀವವನ್ನು ಪಡೆಯಬೇಕು.

06.04.24 - "ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ"

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 4:13-21



ಅವಿದ್ಯಾವಂತರು ಹಾಗೂ ಜನ ಸಾಮಾನ್ಯರು ಆಗಿದ್ದರೂ, ಇವರು ಇಷ್ಟು ಧೈರ್ಯಶಾಲಿಗಳಾಗಿರುವುದನ್ನು ಕಂಡು ಸಭೆಯ ಸದಸ್ಯರು ಚಕಿತರಾದರು; ಯೇಸುವಿನ ಸಂಗಡಿಗರೆಂದು ಇವರ ಗುರುತುಹಚ್ಚಿದರು. ಗುಣಹೊಂದಿದ್ದ ಆ ಮನುಷ್ಯನು ಪೇತ್ರ ಮತ್ತು ಯೊವಾನ್ನರ ಜೊತೆ ನಿಂತಿರುವುದನ್ನು ಕಂಡು ನಿರುತ್ತರರಾದರು. ಸಭಾಕೂಟದಿಂದ ಪ್ರೇಷಿತರನ್ನು ಹೊರಗೆ ಕಳುಹಿಸಿ ತಮ್ಮೊಳಗೇ ಚರ್ಚಿಸಲಾರಂಭಿಸಿದರು: ಇವರನ್ನು ಏನು ಮಾಡೋಣ? ಇವರು ಮಾಡಿರುವ ಅಪರೂಪ ಅದ್ಭುತ ಜೆರುಸಲೇಮಿನ ಸರ್ವರಿಗೂ ತಿಳಿದು ಹೋಗಿದೆ. ಅದನ್ನು ಅಲ್ಲಗಳೆಯುವಂತಿಲ್ಲ. ಆದರೂ, ಈ ಸಮಾಚಾರ ಜನರಲ್ಲಿ ಮತ್ತಷ್ಟು ಹರಡದಂತೆ ಇನ್ನು ಮೇಲೆ ಯಾರ ಬಳಿಯಲ್ಲೂ ಯೇಸುವಿನ ಹೆಸರೆತ್ತದಂತೆ ಇವರಿಗೆ ಎಚ್ಚರಿಕೆ ಕೊಡೋಣ,” ಎಂದುಕೊಂಡರು. ಅನಂತರ ಪ್ರೇಷಿತರನ್ನು ಒಳಕ್ಕೆ ಕರೆದು, “ಇನ್ನು ಮುಂದೆ ಯೇಸುವಿನ ಹೆಸರೆತ್ತಿ ಮಾತನಾಡಬಾರದು, ಬೋಧಿಸಕೂಡದು,” ಎಂದು ಕಟ್ಟಪ್ಪಣೆ ಮಾಡಿದರು. ಆಗ ಪೇತ್ರ ಮತ್ತು ಯೊವಾನ್ನರು, “ನಾವು ದೇವರಿಗೆ ವಿಧೇಯರಾಗಬೇಕೋ? ನಿಮಗೆ ವಿಧೇಯರಾಗಬೇಕೋ? ದೇವರ ದೃಷ್ಟಿಯಲ್ಲಿ ಯಾವುದು ಸರಿ? ನೀವೇ ನಿರ್ಣಯಿಸಿರಿ. ನಾವಂತೂ ಕಣ್ಣಾರೆ ಕಂಡು, ಕಿವಿಯಾರೆ ಕೇಳಿದ ವಿಷಯವನ್ನು ಕುರಿತು ಮೌನದಿಂದಿರಲಾಗದು,” ಎಂದು ಬದಲು ನುಡಿದರು. ನಡೆದ ಅದ್ಭುತಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಿದ್ದರು. ಇದನ್ನು ಅರಿತ ಆ ಸಭಾಸದಸ್ಯರಿಗೆ ಪ್ರೇಷಿತರನ್ನು ಶಿಕ್ಷಿಸುವ ಮಾರ್ಗ ತೋಚದೆ ಹೋಯಿತು. ಆದುದರಿಂದ ಅವರನ್ನು ಇನ್ನೂ ಅಧಿಕವಾಗಿ ಎಚ್ಚರಿಸಿ ಕಳುಹಿಸಿಬಿಟ್ಟರು.

ಕೀರ್ತನೆ: 118:1, 14-15, 16-18, 19-21

ಶ್ಲೋಕ: ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ

ಪ್ರಭುವೇ ನನಗೆ ಬಲವುಧೈರ್ಯವು I
ಆತನಿಂದಲೇ ನನಗೆ ಉದ್ಧಾರವು II
ಜಯಘೋಷಹರ್ಷಸುನಾದ ಸಜ್ಜನರ ಬಿಡಾರದಿಂದ I
ಪರಾಕ್ರಮಪ್ರದರ್ಶನ ಪ್ರಭುವಿನ ಬಲಗೈಯಿಂದ II

ವಿಜಯಸಾಧನ ಪ್ರಭುವಿನಾ ಬಲಗೈಯಿಂದ I
ಪರಾಕ್ರಮಪ್ರದರ್ಶನವೂ ಅದರಿಂದ” II
ಸಾಯೆನುಜೀವದಿಂದಿರುವೆನು ನಾನು I
ಪ್ರಭುವಿನ ಕಾರ್ಯಗಳನು ಸಾರುವೆನು II
ಗುರಿಪಡಿಸಿಹನು ಎನ್ನನು ಪ್ರಭು ಕಠಿಣ ಶಿಕ್ಷೆಗೆ I
ಆದರೂ ಗುರಿಮಾಡಲಿಲ್ಲ ಎನ್ನನು ಮರಣಕೆ I

ತೆರೆಯಿರಿ ಎನಗೆ ನೀತಿದ್ವಾರಗಳನು I
ಒಳನುಗ್ಗಿ ಹೊಗಳುವೆನು ಪ್ರಭುವನು II
ಇದುವೇ ದ್ವಾರ ಪ್ರಭುವಿನ ಮಂದಿರಕೆ I
ಇದುವೇ ಪ್ರವೇಶಮಾರ್ಗ ಸಜ್ಜನರಿಗೆ II
ಸದುತ್ತರ ಪಾಲಿಸಿದ ಪ್ರಭೂನಿನಗೆ ವಂದನೆ I

ಉದ್ಧಾರ ಮಾಡಿದೆನಿನಗೆ ಕೃತಜ್ಞತಾವಂದನೆ II

ಶುಭಸಂದೇಶ: ಮಾರ್ಕ 16:9-15


ಭಾನುವಾರ ಮುಂಜಾನೆ ಪುನರುತ್ಥಾನ ಹೊಂದಿದ ಯೇಸುಸ್ವಾಮಿ, ಮೊತ್ತಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡರು. ಅವರು ಏಳು ದೆವ್ವಗಳನ್ನು ಹೊರಗಟ್ಟಿದ್ದು ಈಕೆಯಿಂದಲೇ. ಈಕೆ ಹೋಗಿ ತಾನು ಕಂಡದ್ದನ್ನು ಯೇಸುವಿನ ಸಂಗಡಿಗರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಾ ಕುಳಿತಿದ್ದರು. ಆದರೆ ಯೇಸು ಜೀವಂತರಾಗಿದ್ದಾರೆ ಮತ್ತು ಆಕೆಗೆ ಕಾಣಿಸಿಕೊಂಡಿದ್ದಾರೆ ಎಂಬ ವಾರ್ತೆಯನ್ನು ಕೇಳಿದಾಗ ಅವರು ಅದನ್ನು ನಂಬಲೇ ಇಲ್ಲ. ತರುವಾಯ, ಹಳ್ಳಿಯೊಂದಕ್ಕೆ ಪ್ರಯಾಣ ಮಾಡುತ್ತಿದ್ದ ತಮ್ಮ ಇಬ್ಬರು ಶಿಷ್ಯರಿಗೆ ಯೇಸುಸ್ವಾಮಿ ಇನ್ನೊಂದು ರೀತಿಯಲ್ಲಿ ಕಾಣಿಸಿಕೊಂಡರು. ಇವರಿಬ್ಬರೂ ಹಿಂದಿರುಗಿ ಬಂದು, ಮಿಕ್ಕ ಶಿಷ್ಯರಿಗೆ ಇದನ್ನು ತಿಳಿಸಿದರು. ಆದರೆ ಅದನ್ನು ಅವರು ನಂಬದೆ ಹೋದರು. ಅನಂತರ, ಹನ್ನೊಂದು ಮಂದಿ ಶಿಷ್ಯರು ಊಟ ಮಾಡುತ್ತಿದ್ದಾಗ ಯೇಸುಸ್ವಾಮಿ ಪ್ರತ್ಯಕ್ಷರಾದರು. ತಾವು ಪುನರುತ್ಥಾನ ಹೊಂದಿದ ಮೇಲೆ, ತಮ್ಮನ್ನು ಕಂಡವರ ಮಾತನ್ನು ಅವರು ನಂಬದಿದ್ದ ಕಾರಣ ಅವರ ಅವಿಶ್ವಾಸವನ್ನೂ ಹೃದಯ ಕಾಠಿಣ್ಯವನ್ನೂ ಯೇಸು ಖಂಡಿಸಿದರು. ಬಳಿಕ ಅವರಿಗೆ, ‘ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ", ಎಂದರು.

05.04.24 - "ಬರೀ ಮೈಯಲ್ಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊಂಡು ನೀರಿಗೆ ಧುಮುಕಿದನು"

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 4:1-12



ಪೇತ್ರ ಮತ್ತು ಯೊವಾನ್ನ ಜನರನ್ನು ಉದ್ದೇಶಿಸಿ ಇನ್ನೂ ಮಾತನಾಡುತ್ತಿದ್ದರು. ಆಗ ಯಾಜಕರೂ ಮಹಾದೇವಾಲಯದ ದಳಪತಿಗಳೂ ಸದ್ದುಕಾಯರೂ ಅಲ್ಲಿಗೆ ಬಂದರು. ಯೇಸುವಿನ ಪುನರುತ್ಥಾನದ ಆಧಾರದ ಮೇಲೆ ಮೃತರಾದ ಎಲ್ಲರೂ ಪುನರುತ್ಥಾನ ಹೊಂದುವರು ಎಂದು ಈ ಇಬ್ಬರು ಪ್ರೇಷಿತರು ಬೋಧಿಸುತ್ತಿದ್ದರು. ಇದನ್ನು ಕೇಳಿ ಸಿಟ್ಟುಗೊಂಡಿದ್ದ ಅವರು ಪೇತ್ರ, ಯೊವಾನ್ನರನ್ನು ಬಂಧಿಸಿದರು. ಆಗಲೇ ಹೊತ್ತು ವಿೂರಿದ್ದರಿಂದ ಮಾರನೆಯ ದಿನದವರೆಗೆ ಅವರನ್ನು ಸೆರೆಮನೆಯಲ್ಲಿಟ್ಟರು. ಆದರೆ ಪ್ರೇಷಿತರ ಬೋಧನೆಯನ್ನು ಕೇಳಿದ ಅನೇಕರು ವಿಶ್ವಾಸಿಗಳಾದರು. ಭಕ್ತವಿಶ್ವಾಸಿಗಳ ಸಂಖ್ಯೆ ಸುಮಾರು ಐದು ಸಾವಿರಕ್ಕೆ ಏರಿತು. ಮಾರನೆಯ ದಿನ ಯೆಹೂದ್ಯ ಅಧಿಕಾರಿಗಳೂ ಪ್ರಮುಖರೂ ಧರ್ಮಶಾಸ್ತ್ರಿಗಳೂ ಜೆರುಸಲೇಮಿನಲ್ಲಿ ಸಭೆ ಸೇರಿದರು. ಪ್ರಧಾನ ಯಾಜಕ ಅನ್ನಾ ಹಾಗೂ ಕಾಯಫ, ಯೊವಾನ್ನ, ಅಲೆಕ್ಸಾಂಡರ್ ಮತ್ತು ಪ್ರಧಾನ ಯಾಜಕನ ಕುಟುಂಬದವರು ಆ ಸಭೆಯಲ್ಲಿ ಹಾಜರಿದ್ದರು. ಪ್ರೇಷಿತರನ್ನು ಸಭೆಯ ಮುಂದೆ ನಿಲ್ಲಿಸಿ, “ಇದೆಲ್ಲವನ್ನು ನೀವು ಯಾರ ಹೆಸರಿನಲ್ಲಿ ಮತ್ತು ಯಾವ ಅಧಿಕಾರದಿಂದ ಮಾಡಿದಿರಿ?” ಎಂದು ಪ್ರಶ್ನಿಸಿದರು. ಪೇತ್ರನು ಪವಿತ್ರಾತ್ಮಭರಿತನಾಗಿ ಹೀಗೆಂದು ಉತ್ತರಕೊಟ್ಟನು: “ಜನರ ಅಧಿಕಾರಿಗಳೇ, ಪ್ರಮುಖರೇ, ನಾವು ಒಬ್ಬ ಕುಂಟನಿಗೆ ಮಾಡಿದ ಸತ್ಕಾರ್ಯದ ಬಗ್ಗೆ, ಅವನು ಸ್ವಸ್ಥನಾದುದು ಹೇಗೆಂದು ನೀವು ನಮ್ಮನ್ನು ಇಂದು ಪ್ರಶ್ನಿಸುತ್ತಿರುವಿರಿ. ನಿಮಗೂ ಇಸ್ರಯೇಲಿನ ಎಲ್ಲಾ ಜನರಿಗೂ ಈ ವಿಷಯ ತಿಳಿದಿರಲಿ: ನಜರೇತಿನ ಯೇಸುಕ್ರಿಸ್ತರ ನಾಮದ ಶಕ್ತಿಯಿಂದಲೇ ಈ ಮನುಷ್ಯನು ಪೂರ್ಣ ಗುಣಹೊಂದಿ ನಿಮ್ಮ ಮುಂದೆ ನಿಂತಿದ್ದಾನೆ. ನೀವು ಶಿಲುಬೆಗೇರಿಸಿ ಕೊಂದದ್ದು ಈ ಯೇಸುವನ್ನೇ. ದೇವರು ಅವರನ್ನು ಪುನರುತ್ಥಾನಗೊಳಿಸಿದ್ದಾರೆ. ‘ಮನೆಕಟ್ಟುವವರಾದ ನೀವು ಬೇಡವೆಂದು ಮೂಲೆಗೆಸೆದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು’ ಎಂದು ಬರೆದಿರುವುದು ಇವರನ್ನು ಕುರಿತೇ. ಇವರಿಂದಲ್ಲದೆ ಬೇರಾರಿಂದಲೂ ನಮಗೆ ಜೀವೋದ್ಧಾರವಿಲ್ಲ. ಇವರ ನಾಮವನ್ನು ಬಿಟ್ಟರೆ ಈ ಧರೆಯಲ್ಲಿರುವ ಬೇರೆ ಯಾವ ನಾಮದಿಂದಲೂ ನಾವು ಜೀವೋದ್ಧಾರ ಹೊಂದುವಂತಿಲ್ಲ.”

ಕೀರ್ತನೆ: 118:1-2, 4, 22-24, 25-27
ಶ್ಲೋಕ: ಮನೆಕಟ್ಟುವವರು ಮೂಲೆಗೆಸೆದ ಕಲ್ಲು, ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು

ಮನೆಕಟ್ಟುವವರು ಮೂಲೆಗೆಸೆದ ಕಲ್ಲು I
ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು II
ಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ I
ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ II

ಸಾರಲಿ ಇಸ್ರಯೇಲಿನ ಜನತೆ I
‘ಆತನ ಪ್ರೀತಿ ಶಾಶ್ವತ’ ಎಂದೆ II
ಸಾರಲಿ ಆತನ ಭಕ್ತರ ಪಂಥ I
ಆತನ ಪ್ರೀತಿ ಶಾಶ್ವತ ಅಂಥ II

ಮನೆಕಟ್ಟುವವರು ಮೂಲೆಗೆಸೆದ ಕಲ್ಲು I
ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು II
ಪ್ರಭುವಿನಿಂದಲೆ ಆದ ಈ ಕಾರ್ಯ I
ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ! II

ಪ್ರಭುವೇ ನಿಯೋಜಿಸಿದ ದಿನವಿದು I
ಹರ್ಷಿಸಿ ಆನಂದಿಸೋಣ ಇಂದು II
ರಕ್ಷಿಸು ಪ್ರಭೂ, ರಕ್ಷಿಸು ದಯವಿಟ್ಟು I
ಸುಕ್ಷೇಮ ನೀಡು ಪ್ರಭು ಕರುಣೆಯಿಟ್ಟು II

ಪ್ರಭುವಿನ ನಾಮದಲಿ ಬರುವವನಿಗೆ ಜಯಮಂಗಳ I
ಪ್ರಭುವಿನ ಮಂದಿರದಲ್ಲಿಹ ನಮ್ಮಿಂದ ಶುಭಮಂಗಳ II
ಪ್ರಭುವೆ ದೇವನು, ನಮ್ಮ ಮೇಲೆ ಜ್ಯೋತಿಯನು ಬೆಳಗಿದವನು I
ಪ್ರದಕ್ಷಿಣೆ ಮಾಡಿರಿ, ಬಲಿಪೀಠದ ಸುತ್ತ, ಹಿಡಿದು ರೆಂಬೆಗಳನು II

ಶುಭಸಂದೇಶ: ಯೊವಾನ್ನ 21:1-14


ತರುವಾಯ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಮತ್ತೊಮ್ಮೆ ತಿಬೇರಿಯ ಸರೋವರದ ಬಳಿ ಕಾಣಿಸಿಕೊಂಡರು. ಅದು ಹೀಗೆ ನಡೆಯಿತು: ಸಿಮೋನ ಪೇತ್ರನು, ದಿದುಮನೆಂಬ ತೋಮನು, ಗಲಿಲೇಯದ ಕಾನಾ ಊರಿನ ನತಾನಯೇಲನು, ಜೆಬೆದಾಯನ ಪುತ್ರರು ಮತ್ತು ಯೇಸುವಿನ ಇನ್ನಿಬ್ಬರು ಶಿಷ್ಯರು ಒಟ್ಟಿಗೆ ಸೇರಿದ್ದರು. ಆಗ ಸಿಮೋನ ಪೇತ್ರನು, “ನಾನು ಮೀನು ಹಿಡಿಯಲು ಹೋಗುತ್ತೇನೆ,” ಎಂದನು. ಮಿಕ್ಕವರು, “ನಾವೂ ನಿನ್ನೊಡನೆ ಬರುತ್ತೇವೆ,” ಎಂದರು. ಅವರೆಲ್ಲರೂ ಹೊರಟು ದೋಣಿಯನ್ನು ಹತ್ತಿದರು. ಆ ರಾತ್ರಿಯೆಲ್ಲಾ ಅವರಿಗೆ ಒಂದು ವಿೂನೂ ಸಿಗಲಿಲ್ಲ. ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿಂತಿದ್ದರು. ಆದರೆ ಅವರು ಯೇಸು ಎಂದು ಶಿಷ್ಯರಿಗೆ ಹೊಳೆಯಲಿಲ್ಲ. ಯೇಸು ಅವರಿಗೆ, “ಮಕ್ಕಳೇ, ಊಟಕ್ಕೆ ಏನಾದರೂ ಸಿಕ್ಕಿತೇ?” ಎಂದು ಕೇಳಿದರು. “ಏನೂ ಇಲ್ಲ,” ಎಂದರು ಅವರು. “ದೋಣಿಯ ಬಲಗಡೆಗೆ ಬಲೆ ಬೀಸಿರಿ; ವಿೂನುಗಳು ಸಿಗುತ್ತವೆ,” ಎಂದು ಯೇಸು ಹೇಳಲು ಅವರು ಹಾಗೆಯೇ ಮಾಡಿದರು. ಆಗ ವಿೂನುಗಳು ರಾಶಿರಾಶಿಯಾಗಿ ಸಿಕ್ಕಿದವು. ಬಲೆಯನ್ನು ಎಳೆಯಲೂ ಆಗದೆ ಹೋಯಿತು. ಆಗ ಯೇಸುವಿನ ಆಪ್ತಶಿಷ್ಯನು ಪೇತ್ರನಿಗೆ, “ಅವರೇ ಪ್ರಭು” ಎಂದನು. ಪ್ರಭುವೆಂದು ಕೇಳಿದ್ದೇ ತಡ, ಬರೀ ಮೈಯಲ್ಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊಂಡು ನೀರಿಗೆ ಧುಮುಕಿದನು. ಮಿಕ್ಕ ಶಿಷ್ಯರು ವಿೂನು ತುಂಬಿದ್ದ ಬಲೆಯನ್ನು ಎಳೆಯುತ್ತಾ ಸುಮಾರು ಮುನ್ನೂರು ಅಡಿ ದೂರದಲ್ಲಿದ್ದ ದಡಕ್ಕೆ ದೋಣಿಯಲ್ಲೇ ಬಂದರು. ಅವರು ದಡವನ್ನು ಸೇರಿದಾಗ ಅಲ್ಲಿ ಇದ್ದಲಿನ ಬೆಂಕಿ ಮಾಡಲಾಗಿತ್ತು. ಕೆಂಡದ ಮೇಲೆ ವಿೂನುಗಳಿದ್ದವು. ರೊಟ್ಟಿಯೂ ಅಲ್ಲಿತ್ತು. ಯೇಸು ಅವರಿಗೆ, “ನೀವು ಈಗ ತಾನೇ ಹಿಡಿದ ವಿೂನುಗಳಲ್ಲಿ ಕೆಲವನ್ನು ತನ್ನಿ,” ಎಂದು ಹೇಳಿದರು. ಸಿಮೋನ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಳೆದು ತಂದನು. ಬಲೆಯ ತುಂಬ ದೊಡ್ಡ ವಿೂನುಗಳು - ಒಟ್ಟಿಗೆ ನೂರೈವತ್ತಮೂರು ಇದ್ದವು. ಅಷ್ಟು ವಿೂನುಗಳಿದ್ದರೂ ಬಲೆಯು ಹರಿದಿರಲಿಲ್ಲ. ಯೇಸು ಅವರಿಗೆ, “ಬಂದು ಊಟಮಾಡಿ,” ಎಂದು ಅವರನ್ನು ಕರೆದರು. ಅವರು ಪ್ರಭುವೆಂದು ಅರಿತಿದ್ದ ಕಾರಣ ಶಿಷ್ಯರಲ್ಲಿ ಒಬ್ಬನಿಗಾದರೂ, “ನೀವು ಯಾರು?” ಎಂದು ಕೇಳುವಷ್ಟು ಧೈರ್ಯ ಇರಲಿಲ್ಲ. ಯೇಸು ಹತ್ತಿರಕ್ಕೆ ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟರು; ಹಾಗೆಯೇ ವಿೂನನ್ನೂ ಕೊಟ್ಟರು. ಯೇಸು ಸತ್ತು ಜೀವಂತರಾಗಿ ಎದ್ದ ಬಳಿಕ ತಮ್ಮ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ. 

04.04.24 - “ಏಕೆ ಕಳವಳಪಡುತ್ತೀರಿ? ನಿಮ್ಮ ಮನಸ್ಸಿನಲ್ಲಿ ಸಂಶಯವೇಕೆ?"

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 3:11-26


‘ಸೊಲೊಮೋನನ ಮಂಟಪ’ದಲ್ಲಿ ಪೇತ್ರ ಮತ್ತು ಯೊವಾನ್ನರ ಜೊತೆ ಆ ಭಿಕ್ಷುಕನು ಇನ್ನೂ ನಿಂತಿದ್ದನು. ಆಶ್ಚರ್ಯಭರಿತರಾದ ಜನರು ಅಲ್ಲಿಗೆ ಓಡಿಬಂದರು. ಇದನ್ನು ನೋಡಿ ಪೇತ್ರನು ಇಂತೆಂದನು: “ಇಸ್ರಯೇಲಿನ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನಮ್ಮನ್ನೇಕೆ ಎವೆಯಿಕ್ಕದೆ ನೋಡುತ್ತಿದ್ದೀರಿ? ನಮ್ಮ ಸ್ವಂತ ಶಕ್ತಿಯಿಂದಾಗಲೀ ಭಕ್ತಿಯಿಂದಾಗಲೀ, ಈ ಮನುಷ್ಯನು ನಡೆಯುವಂತೆ ನಾವು ಮಾಡಿದೆವೆಂದು ಭಾವಿಸುತ್ತೀರೋ? ಪಿತಾಮಹ ಅಬ್ರಹಾಮ, ಇಸಾಕ ಮತ್ತು ಯಕೋಬರ ದೇವರು, ಅಂದರೆ ನಮ್ಮ ಪೂರ್ವಜರ ದೇವರು, ತಮ್ಮ ದಾಸ ಯೇಸುವಿನ ಮಹಿಮೆಯನ್ನು ಬೆಳಗಿಸಿದ್ದಾರೆ. ನೀವಾದರೋ ಅವರನ್ನು ಅಧಿಕಾರಿಗಳ ಕೈಗೊಪ್ಪಿಸಿದಿರಿ. ರಾಜ್ಯಪಾಲ ಪಿಲಾತನು ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದಾಗ ಕೂಡ ಅವನ ಸಮ್ಮುಖದಲ್ಲೇ ಅವರನ್ನು ಧಿಕ್ಕರಿಸಿದಿರಿ. ಯೇಸು ಪುನೀತರು ಹಾಗೂ ಸತ್ಯಸ್ವರೂಪರು. ಆದರೂ ನೀವು ಅವರನ್ನು ನಿರಾಕರಿಸಿ, ಒಬ್ಬ ಕೊಲೆಗಡುಕನನ್ನೇ ನಿಮಗೆ ಬಿಟ್ಟುಕೊಡುವಂತೆ ಪಿಲಾತನನ್ನು ಬೇಡಿಕೊಂಡಿರಿ. ಜೀವದೊಡೆಯನನ್ನು ನೀವು ಕೊಂದುಹಾಕಿದಿರಿ; ದೇವರು ಅವರನ್ನು ಪುನರುತ್ಥಾನಗೊಳಿಸಿದರು. ಇದಕ್ಕೆ ನಾವೇ ಸಾಕ್ಷಿಗಳು. ನಿಮ್ಮ ಕಣ್ಣೆದುರಿಗಿರುವ ಈ ಮನುಷ್ಯನು ಯಾರೆಂದು ನಿಮಗೆ ಗೊತ್ತಿದೆ. ಯೇಸುವಿನ ನಾಮದಿಂದಲೇ, ಆ ನಾಮದ ಮೇಲಿಟ್ಟ ವಿಶ್ವಾಸದಿಂದಲೇ, ಈತನು ಶಕ್ತಿಪಡೆದಿದ್ದಾನೆ. ಯೇಸುವಿನಲ್ಲಿಟ್ಟ ಆ ವಿಶ್ವಾಸವೇ ಈತನಿಗೆ, ನೀವೇ ನೋಡುವಂತೆ, ಸಂಪೂರ್ಣ ಆರೋಗ್ಯವನ್ನು ದಯಪಾಲಿಸಿದೆ. “ಸಹೋದರರೇ, ನೀವೂ ನಿಮ್ಮ ಅಧಿಕಾರಿಗಳೂ ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆಂದು ನಾನು ಬಲ್ಲೆ. ಕ್ರಿಸ್ತಯೇಸು ಯಾತನೆಯನ್ನು ಅನುಭವಿಸಬೇಕೆಂದು ದೇವರು ಪ್ರವಾದಿಗಳೆಲ್ಲರ ಮುಖಾಂತರ ಆಗಲೇ ಮುಂತಿಳಿಸಿದ್ದರು. ಆ ಪ್ರವಾದನೆಗಳನ್ನು ಈಗ ನೆರವೇರಿಸಿದ್ದಾರೆ. ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿರಿ. ಅವರು ನಿಮ್ಮ ಪಾಪಗಳನ್ನು ಪರಿಹರಿಸುವರು.
20 : ಸರ್ವೇಶ್ವರನ ಸಾನ್ನಿಧ್ಯ ಸೌಭಾಗ್ಯವು ನಿಮ್ಮದಾಗುವುದು; ನಿಮಗೋಸ್ಕರ ನೇಮಿತರಾದ ಉದ್ಧಾರಕ ಯೇಸುವನ್ನು ಕಳುಹಿಸುವರು. ಸಮಸ್ತವನ್ನೂ ಪುನರ್‍ಸ್ಥಾಪನೆಗೊಳಿಸುವವರೆಗೆ ಕ್ರಿಸ್ತಯೇಸು ಸ್ವರ್ಗದಲ್ಲಿಯೇ ಇರಬೇಕಾಗಿದೆ. ಇದನ್ನು ದೇವರು ಪವಿತ್ರ ಪ್ರವಾದಿಗಳ ಮುಖಾಂತರ ಬಹುಕಾಲಕ್ಕೆ ಹಿಂದೆಯೇ ಪ್ರಕಟಿಸಿದ್ದಾರೆ. ‘ಸರ್ವೇಶ್ವರನಾದ ದೇವರು ನನ್ನನ್ನು ಕಳುಹಿಸಿದಂತೆಯೇ ನಿಮಗೊಬ್ಬ ಪ್ರವಾದಿಯನ್ನು ಕಳುಹಿಸುವರು. ಆತನು ನಿಮ್ಮ ಸ್ವಂತ ಜನಾಂಗದವನಾಗಿರುವನು. ಆತನು ಹೇಳುವುದನ್ನೆಲ್ಲಾ ನೀವು ಕೇಳಬೇಕು. ಆ ಪ್ರವಾದಿಗೆ ಕಿವಿಗೊಡದವನು ದೇವಜನರಿಂದ ದೂರವಾಗಿ ನಾಶವಾಗುತ್ತಾನೆ,’ ಎಂದು ಮೋಶೆ ಹೇಳಿದ್ದಾನೆ. ಸಮುವೇಲನೂ ಅವನ ನಂತರ ಬಂದ ಎಲ್ಲ ಪ್ರವಾದಿಗಳೂ ಈ ದಿನಗಳಲ್ಲಿ ನಡೆಯುತ್ತಿರುವುದನ್ನು ದೈವದತ್ತವಾಗಿ ಸಾರಿದ್ದಾರೆ. ದೇವರು ಪ್ರವಾದಿಗಳ ಮುಖಾಂತರ ಮಾಡಿದ ವಾಗ್ದಾನಗಳಿಗೂ ನಿಮ್ಮ ಪೂರ್ವಜರೊಂದಿಗೆ ಮಾಡಿದ ಒಡಂಬಡಿಕೆಗೂ ನೀವು ಉತ್ತರಾಧಿಕಾರಿಗಳು; ಪೂರ್ವಜ ಅಬ್ರಹಾಮನಿಗೆ, ‘ನಿನ್ನ ಸಂತತಿಯ ಮುಖಾಂತರ ವಿಶ್ವದ ಎಲ್ಲಾ ಜನಾಂಗಗಳು ಧನ್ಯರಾಗುವರು’ ಎಂದಿದ್ದಾರೆ ದೇವರು. ಅಂತೆಯೇ, ಅವರು ತಮ್ಮ ದಾಸನನ್ನು ಎಬ್ಬಿಸಿದ್ದಾರೆ. ನಿಮ್ಮೆಲ್ಲರನ್ನು ದುರ್ಮಾರ್ಗದಿಂದ ದೂರಮಾಡಿ ಧನ್ಯರಾಗಿಸಲು ಅವರನ್ನು ಮೊತ್ತಮೊದಲು ನಿಮ್ಮಲ್ಲಿಗೆ ಕಳುಹಿಸಿದ್ದಾರೆ.”

ಕೀರ್ತನೆ: 8:2, 5, 6-7, 8-9
ಶ್ಲೋಕ: ಪ್ರಭೂ, ಓ ನಮ್ಮ ಪ್ರಭೂ, ಎನಿತು ಮಹಿಮಾನ್ವಿತ,
ಹರಡಿವೆ ನಿನ್ನ ಸಿರಿನಾಮ ಜಗದಾದ್ಯಂತ

ಪ್ರಭು, ಓ ನಮ್ಮ ಪ್ರಭು, ಎನಿತು ಮಹಿಮಾನ್ವಿತ I
ಹರಡಿವೆ ನಿನ್ನ ಸಿರಿನಾಮ ಜಗದಾದ್ಯಂತ I
ಪ್ರಭು, ಓ ನಮ್ಮ ಪ್ರಭು, ಎನಿತು ಮಹಿಮಾನ್ವಿತ I
ಹರಡಿವೆ ನಿನ್ನ ಸಿರಿನಾಮ ಜಗದಾದ್ಯಂತ I

ಇಂತಿರಲು, ಮನುಜನು ಎಷ್ಟರವನು ನೀನವನನು ಲಕ್ಷಿಸಲು? I
ಏತರದವನು ನರಮಾನವನು ನೀನವನನು ಪರಾಮರಿಸಲು? II
ಆದರೆ ದೇವದೂತರಿಗಿಂತ ಕಿಂಚಿತ್ತೆ ಕೀಳಾಗಿಸಿದೆ ಮನುಜನನು I
ಮುಡಿಸಿದೆ ಮುಕುಟವಾಗವನಿಗೆ ಘನಮಾನವನು, ಸಿರಿಹಿರಿಮೆಯನು II

ಒಡೆಯನಾಗಿಸಿದೆ ನಿನ್ನಯ ಕರಕೃತಿಗಳಿಗೆ I
ಒಳಪಡಿಸಿದೆ ಸಕಲವನು ಅವನ ಪಾದದಡಿಗೆ II
ಕುರಿಗಳನು, ಕರುಗಳನು, ಕಾಡುಮೃಗಗಳನು I
ಗರಿಗಳನು, ಮೀನುಗಳನು, ಜಲಚರಗಳನು I
ಕರಗತ ಮಾಡಿದೆ ನೀ ಅವನಿಗೆಲ್ಲವನು II

ಶುಭಸಂದೇಶ: ಲೂಕ: 24:35-48


ಆಗ ಶಿಷ್ಯರು ತಾವು ದಾರಿಯಲ್ಲಿ ಕಂಡ ವಿಷಯವನ್ನೂ ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತುಹಚ್ಚಿದ ವಿಷಯವನ್ನೂ ಅಲ್ಲಿದ್ದವರಿಗೆ ವರದಿಮಾಡಿದರು. ಅವರು ವರದಿಮಾಡುತ್ತಿದ್ದಂತೆ ಯೇಸುಸ್ವಾಮಿಯೇ ಅವರ ಮಧ್ಯೆ ಪ್ರತ್ಯಕ್ಷವಾಗಿ ನಿಂತು, ‘ನಿಮಗೆ ಶಾಂತಿ,’ ಎಂದರು. ಅವರೆಲ್ಲರೂ ಚಕಿತರಾಗಿ, ದಿಗಿಲುಗೊಂಡು, ತಾವು ಕಾಣುತ್ತಿರುವುದು ಭೂತವೆಂದು ಭಾವಿಸಿದರು. ಆಗ ಯೇಸು, “ಏಕೆ ಕಳವಳಪಡುತ್ತೀರಿ? ನಿಮ್ಮ ಮನಸ್ಸಿನಲ್ಲಿ ಸಂಶಯವೇಕೆ? ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿ, ನಾನೇ ಅಲ್ಲವೇ? ನನ್ನನ್ನು ಮುಟ್ಟಿ ನೋಡಿರಿ, ನೀವು ನನ್ನಲ್ಲಿ ಕಾಣುವಂತೆ, ಮಾಂಸ ಮತ್ತು ಎಲುಬು ಭೂತಕ್ಕೆ ಇರುವುದಿಲ್ಲ,” ಎಂದರು. ಇಂತೆಂದ ಮೇಲೆ ತಮ್ಮ ಕೈಗಳನ್ನೂ ಕಾಲುಗಳನ್ನೂ ಅವರಿಗೆ ತೋರಿಸಿದರು. ಶಿಷ್ಯರು ಇನ್ನೂ ನಂಬದೆ, ಆನಂದಾಶ್ಚರ್ಯಭರಿತರಾಗಿದ್ದರು. ಆಗ ಯೇಸು, “ನಿಮ್ಮಲ್ಲಿ ತಿನ್ನಲು ಏನಾದರೂ ಇದೆಯೇ?” ಎಂದು ಕೇಳಿದರು. ಹುರಿದ ವಿೂನಿನ ತುಂಡು ಒಂದನ್ನು ಶಿಷ್ಯರು ಕೊಟ್ಟರು. ಯೇಸು ಅದನ್ನು ತೆಗೆದುಕೊಂಡು ಅವರ ಎದುರಿಗೇ ತಿಂದರು. ಅಂತಿಮ ಸಂದೇಶ ತರುವಾಯ ಯೇಸುಸ್ವಾಮಿ, “ನಾನು ನಿಮ್ಮೊಡನೆ ಇದ್ದಾಗಲೇ ನಿಮಗೆ ತಿಳಿಸಿದ ವಿಷಯ ಇದು: ಮೋಶೆಯ ನಿಯಮದಲ್ಲೂ ಪ್ರವಾದಿಗಳ ಗ್ರಂಥದಲ್ಲೂ ಕೀರ್ತನೆಗಳಲ್ಲೂ ನನ್ನ ವಿಷಯವಾಗಿ ಬರೆದಿರುವುದೆಲ್ಲಾ ನೆರವೇರಲೇಬೇಕಾಗಿತ್ತು,” ಎಂದರು. ಆಮೇಲೆ, ಪವಿತ್ರ ಗ್ರಂಥವನ್ನು ಅವರು ಅರ್ಥಮಾಡಿಕೊಳ್ಳುವಂತೆ ಅವರ ಬುದ್ಧಿಯನ್ನು ವಿಕಾಸಗೊಳಿಸಿದರು. ಅನಂತರ, “ಮೊದಲೇ ಬರೆದಿರುವ ಪ್ರಕಾರ ಕ್ರಿಸ್ತನು ಯಾತನೆಯನ್ನು ಅನುಭವಿಸಿ ಸತ್ತು ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿತ್ತು; ಅಲ್ಲದೆ ಜನರು ಪಾಪಪರಿಹಾರ ಪಡೆಯಬೇಕಾದರೆ, ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖರಾಗಿ, ದೈವಾಭಿಮುಖಿಗಳಾಗಬೇಕೆಂತಲೂ ಈ ಸಂದೇಶವನ್ನು ಜೆರುಸಲೇಮಿನಿಂದ ಮೊದಲ್ಗೊಂಡು ಎಲ್ಲಾ ಜನಾಂಗಗಳಿಗೂ ಆತನ ಹೆಸರಿನಲ್ಲೇ ಪ್ರಕಟಿಸಬೇಕೆಂತಲೂ ಮೊದಲೇ ಲಿಖಿತವಾಗಿತ್ತು. ಇದಕ್ಕೆಲ್ಲಾ ನೀವೇ ಸಾಕ್ಷಿಗಳು, ಎಂದು ಹೇಳಿದರು.

03.04.24 - “ಪ್ರಭು ಜೀವಂತರಾಗಿ ಎದ್ದಿರುವುದು ನಿಜ ! ಅವರು ಸಿಮೋನನಿಗೆ ಕಾಣಿಸಿಕೊಂಡರು”

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 3:1-10



ಒಂದು ದಿನ ಮಧ್ಯಾಹ್ನ ಮೂರು ಗಂಟೆಯ ಸಮಯ. ಅದು ಪ್ರಾರ್ಥನಾವೇಳೆ, ಪೇತ್ರ ಮತ್ತು ಯೊವಾನ್ನ ಮಹಾದೇವಾಲಯಕ್ಕೆ ಹೋದರು. ‘ಸುಂದರ ದ್ವಾರ’ ಎಂದು ಕರೆಯಲಾದ ಬಾಗಿಲ ಬಳಿ ಹುಟ್ಟು ಕುಂಟನೊಬ್ಬ ಇದ್ದನು. ಅವನನ್ನು ಪ್ರತಿ ದಿನ ಹೊತ್ತು ತಂದು ಈ ದ್ವಾರದ ಬಳಿ ಬಿಡಲಾಗುತ್ತಿತ್ತು. ಅವನು ದೇವಾಲಯಕ್ಕೆ ಬರುತ್ತಿದ್ದ ಜನರಿಂದ ಭಿಕ್ಷೆ ಬೇಡುತ್ತಿದ್ದನು. ಪೇತ್ರ ಮತ್ತು ಯೊವಾನ್ನ ದೇವಾಲಯದೊಳಗೆ ಹೋಗುತ್ತಿರುವುದನ್ನು ಅವನು ಕಂಡನು. ತನಗೆ ಏನಾದರೂ ಭಿಕ್ಷೆ ಕೊಡಬೇಕೆಂದು ಬೇಡಿದನು. ಅವರು ಕುಂಟನನ್ನು ತದೇಕ ದೃಷ್ಟಿಯಿಂದ ಈಕ್ಷಿಸಿದರು. ಪೇತ್ರನು, “ಎಲ್ಲಿ, ನಮ್ಮನ್ನು ನೋಡು,” ಎಂದನು. ಕುಂಟನು ಅವರಿಂದ ಭಿಕ್ಷೆಯನ್ನು ಅಪೇಕ್ಷಿಸುತ್ತಾ ಅವರನ್ನೇ ನೋಡಿದನು. ಆದರೆ ಪೇತ್ರನು, “ಹಣ ಕಾಸೇನೂ ನನ್ನಲ್ಲಿಲ್ಲ, ನನ್ನಲ್ಲಿ ಇರುವುದನ್ನು ನಿನಗೆ ಕೊಡುತ್ತೇನೆ; ನಜರೇತಿನ ಯೇಸುಕ್ರಿಸ್ತರ ಹೆಸರಿನಲ್ಲಿ ನಾನು ಆಜ್ಞಾಪಿಸುತ್ತೇನೆ, ಎದ್ದು ನಡೆ” ಎನ್ನುತ್ತಾ, ಅವನ ಬಲಗೈಯನ್ನು ಹಿಡಿದು ನಿಲ್ಲಲು ಸಹಾಯ ಮಾಡಿದನು. ಆ ಕ್ಷಣವೇ ಕುಂಟನ ಅಂಗಾಲು ಮುಂಗಾಲುಗಳು ಬಲಗೊಂಡವು. ಅವನು ಜಿಗಿದುನಿಂತು ಅತ್ತಿತ್ತ ನಡೆದಾಡಲು ಪ್ರಾರಂಭಿಸಿದನು. ಅನಂತರ ಅವನು ಕುಣಿಯುತ್ತಾ ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಅವರೊಡನೆಯೇ ದೇವಾಲಯದೊಳಗೆ ಹೋದನು. ಅವನು ಹೀಗೆ ನಡೆಯುವುದನ್ನೂ ದೇವರನ್ನು ಕೊಂಡಾಡುವುದನ್ನೂ ಜನಸಮೂಹ ನೋಡಿತು. ದೇವಾಲಯದ ಸುಂದರ ದ್ವಾರದ ಬಳಿ ಕುಳಿತು ಭಿಕ್ಷೆ ಬೇಡುತ್ತಿದ್ದವನು ಇವನೇ ಎಂದು ಜನರು ಗುರುತು ಹಚ್ಚಿದರು. ಅವನಿಗೆ ಸಂಭವಿಸಿದ್ದನ್ನು ಕಂಡು ಬೆಕ್ಕಸಬೆರಗಾದರು.



ಕೀರ್ತನೆ: 105:1-2, 3-4, 6-7, 8-9
ಶ್ಲೋಕ: ಹೆಮ್ಮೆಪಡಿ, ನೆನೆದಾತನ ಶ್ರೀನಾಮ, ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ

ಹೆಮ್ಮೆಪಡಿ, ನೆನೆದಾತನ ಶ್ರೀನಾಮ I
ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ II
ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು I
ಮಾಡಿರಿ ಆತನ ನಾಮಸ್ಮರಣೆಯನು I
ಸಾರಿರಿ ಜಗಕೆ ಆತನ ಸತ್ಕಾರ್ಯಗಳನು II

ಹಾಡಿ ಪಾಡಿ ಹೊಗಳಿರಿ ಪ್ರಭುವನು I
ಧ್ಯಾನಿಸಿ ನೀವು ಆತನ ಪವಾಡಗಳನು II
ಹೆಮ್ಮೆಪಡಿ, ನೆನೆದಾತನ ಶ್ರೀನಾಮ I
ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ II

ಅರಸಿರಿ ಪ್ರಭುವನೂ ಆತನ ಶಕ್ತಿಯನೂ I
ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು II
ಆತನ ದಾಸ ಅಬ್ರಹಾಮನ ಸಂತತಿಯವರೇ I
ಆತನಾರಿಸಿಕೊಂಡ ಯಕೋಬನ ವಂಶದವರೇ II

ಪ್ರಭು ನಮ್ಮ ದೇವನೆಂಬುದು ಶ್ರುತ I
ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ II
ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು I
ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು II

ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು I
ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು II

ಶುಭಸಂದೇಶ: ಲೂಕ: 24:13-35


ಅದೇ ದಿನ ಶಿಷ್ಯರಲ್ಲಿ ಇಬ್ಬರು ಜೆರುಸಲೇಮಿಗೆ ಹನ್ನೊಂದು ಕಿಲೋಮೀಟರಿನಷ್ಟು ದೂರದಲ್ಲಿದ್ದ ಎಮ್ಮಾವು ಎಂಬ ಗ್ರಾಮಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ನಡೆದ ವಿಷಯಗಳನ್ನೆಲ್ಲಾ ಕುರಿತು ಅವರು ಸಂಭಾಷಣೆ ಮಾಡುತ್ತಾ ನಡೆಯುತ್ತಿದ್ದರು. ಹೀಗೆ ಮಾತನಾಡಿಕೊಂಡು ಚರ್ಚೆ ಮಾಡುತ್ತಾ ಹೋಗುತ್ತಿರುವಾಗ, ಯೇಸುಸ್ವಾಮಿಯೇ ಖುದ್ದಾಗಿ ಸಮೀಪಿಸಿ ಅವರ ಜೊತೆ ಸೇರಿಕೊಂಡರು. ಆದರೆ ಇವರಾರೆಂದು ಅವರು ಗುರುತು ಹಚ್ಚಲಿಲ್ಲ. ಕಾರಣ - ಶಿಷ್ಯರಿಗೆ ಕಣ್ಣು ಕಟ್ಟಿದಂತಾಗಿತ್ತು. “ನೀವು ತರ್ಕ ಮಾಡಿಕೊಂಡು ಹೋಗುತ್ತಿರುವಿರಲ್ಲಾ, ಏನು ವಿಷಯ?” ಎಂದು ಯೇಸು ಕೇಳಿದರು. ಶಿಷ್ಯರು ಸಪ್ಪೆ ಮುಖಮಾಡಿ ನಿಂತರು. ಆಗ ಅವರಲ್ಲಿ ಒಬ್ಬನಾದ ಕ್ಲೆಯೋಫ, “ಇತ್ತೀಚೆಗೆ ಜೆರುಸಲೇಮಿನಲ್ಲಿ ಜರುಗಿದ ಘಟನೆಗಳನ್ನು ಪಟ್ಟಣಕ್ಕೆ ಪಟ್ಟಣವೇ ತಿಳಿದಿದೆ; ನಿನಗೊಬ್ಬನಿಗೇ ಅವು ತಿಳಿಯದೆ?” ಎಂದನು. “ಏನು ನಡೆಯಿತು?” ಎಂದು ಯೇಸು ಪುನಃ ಕೇಳಿದಾಗ ಆ ಶಿಷ್ಯರಿಬ್ಬರು, “ಇವು ನಜರೇತಿನ ಯೇಸುವಿಗೆ ಸಂಭವಿಸಿದ ಘಟನೆಗಳು. ಅವರು ನಡೆಯಲ್ಲೂ ನುಡಿಯಲ್ಲೂ ದೇವರ ಹಾಗೂ ಸಕಲ ಮಾನವರ ದೃಷ್ಟಿಯಲ್ಲಿ ಪ್ರವಾದಿಯಾಗಿದ್ದರು. ನಮ್ಮ ಮುಖ್ಯ ಯಾಜಕರು ಮತ್ತು ಮುಖಂಡರು ಅವರನ್ನು ಮರಣದಂಡನೆಗೆ ಗುರಿಮಾಡಿಸಿ ಶಿಲುಬೆಗೆ ಜಡಿಸಿದರು. ಇಸ್ರಯೇಲನ್ನು ಬಿಡುಗಡೆ ಮಾಡುವ ಉದ್ಧಾರಕ ಅವರೇ ಎಂದು ನಾವು ನಂಬಿಕೊಂಡಿದ್ದೆವು. ಇಷ್ಟು ಮಾತ್ರವಲ್ಲ, ಇದೆಲ್ಲಾ ಸಂಭವಿಸಿ ಇಂದಿಗೆ ಮೂರುದಿನಗಳು ಆಗಿವೆ. ಆದರೂ ನಮ್ಮಲ್ಲಿ ಕೆಲವು ಮಂದಿ ಮಹಿಳೆಯರು ಮುಂಜಾನೆ ಸಮಾಧಿಯ ಬಳಿಗೆ ಹೋಗಿದ್ದರು. ಅಲ್ಲಿ ಯೇಸುವಿನ ಪಾರ್ಥಿವ ಶರೀರವನ್ನು ಕಾಣಲಿಲ್ಲ. ಹಿಂದಿರುಗಿ ಬಂದು, ‘ನಮಗೆ ದೇವದೂತರು ಪ್ರತ್ಯಕ್ಷರಾದರು; ಇವರು ಯೇಸುಸ್ವಾಮಿ ಸಜೀವದಿಂದ ಇದ್ದಾರೆಂದು ನಮಗೆ ತಿಳಿಸಿದರು,’ ಎಂದು ಹೇಳಿ ನಮ್ಮನ್ನು ದಿಗ್ಭ್ರಾಂತರನ್ನಾಗಿ ಮಾಡಿದರು. ನಮ್ಮ ಸಂಗಡಿಗರಲ್ಲಿ ಕೆಲವರು ಸಮಾಧಿಯ ಬಳಿಗೆ ಹೋಗಿ ನೋಡಿದರು; ಮಹಿಳೆಯರು ಹೇಳಿದ್ದೆಲ್ಲಾ ಸರಿಯಾಗಿತ್ತು. ಆದರೆ ಯೇಸುಸ್ವಾಮಿಯನ್ನು ಮಾತ್ರ ಕಾಣಲಿಲ್ಲ,” ಎಂದರು. ಆಗ ಯೇಸು, “ಎಂಥ ಮತಿಹೀನರು ನೀವು! ಪ್ರವಾದಿಗಳು ಹೇಳಿರುವುದೆಲ್ಲವನ್ನು ನಂಬುವುದರಲ್ಲಿ ಎಷ್ಟು ಮಂದಮತಿಗಳು ನೀವು! ಕ್ರಿಸ್ತನು ಇಂತಹ ಸಂಕಷ್ಟಗಳನ್ನು ಅನುಭವಿಸಿ ತನ್ನ ಮಹಿಮಾ ಸಿದ್ದಿಯನ್ನು ಪಡೆಯಬೇಕಾಗಿತ್ತು ಅಲ್ಲವೇ?” ಎಂದರು. ಅನಂತರ, ಮೋಶೆ ಹಾಗೂ ಪ್ರವಾದಿಗಳೆಲ್ಲರಿಂದ ಆರಂಭಿಸಿ ಎಲ್ಲಾ ಪವಿತ್ರ ಗ್ರಂಥಗಳಲ್ಲಿ ತಮ್ಮ ವಿಷಯವಾಗಿ ಬರೆದಿರುವುದನ್ನು ಅವರಿಗೆ ವಿವರಿಸಿದರು. ಅಷ್ಟರಲ್ಲಿ ಶಿಷ್ಯರು ತಲುಪಬೇಕಾಗಿದ್ದ ಗ್ರಾಮವು ಸಮೀಪಿಸಿತು. ಯೇಸುಸ್ವಾಮಿ ಇನ್ನೂ ಮುಂದಕ್ಕೆ ಸಾಗುವವರಂತೆ ಕಂಡಿತು. ಆಗ ಶಿಷ್ಯರು, “ಸಂಜೆಯಾಯಿತು, ಕತ್ತಲಾಗುತ್ತ ಬಂದಿತು; ಬಂದು ನಮ್ಮೊಡನೆ ತಂಗಿರಿ,” ಎಂದು ಒತ್ತಾಯಪಡಿಸಿದರು. ಯೇಸು ಅವರೊಡನೆ ತಂಗಲು ಹೋದರು. ಅವರ ಸಂಗಡ ಊಟಕ್ಕೆ ಕುಳಿತಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು ಅವರಿಗೆ ಕೊಟ್ಟರು. ಆಗಲೇ ಶಿಷ್ಯರ ಕಣ್ಣುಗಳು ತೆರೆದವು; ಯೇಸುವನ್ನು ಗುರುತು ಹಚ್ಚಿದರು. ಆಗ ಯೇಸು ಅವರಿಂದ ಅದೃಶ್ಯರಾದರು. ಶಿಷ್ಯರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ, “ದಾರಿಯಲ್ಲಿ ಇವರು ನಮ್ಮ ಸಂಗಡ ಮಾತನಾಡುತ್ತಾ ಪವಿತ್ರ ಗ್ರಂಥದ ಅರ್ಥವನ್ನು ನಮಗೆ ವಿವರಿಸುತ್ತಾ ಇದ್ದಾಗ ನಮ್ಮ ಹೃದಯ ಕುತೂಹಲದಿಂದ ಕುದಿಯುತ್ತಾ ಇತ್ತಲ್ಲವೇ?” ಎಂದುಕೊಂಡರು. ಒಡನೇ ಅವರು ಅಲ್ಲಿಂದ ಎದ್ದು ಜೆರುಸಲೇಮಿಗೆ ಹಿಂದಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡಿಗರೂ ಒಟ್ಟುಗೂಡಿದ್ದರು. “ಪ್ರಭು ಜೀವಂತರಾಗಿ ಎದ್ದಿರುವುದು ನಿಜ ! ಅವರು ಸಿಮೋನನಿಗೆ ಕಾಣಿಸಿಕೊಂಡರು,” ಎಂದು ಅಲ್ಲಿದ್ದವರು ಹೇಳುವುದನ್ನು ಕೇಳಿದರು. ಆಗ ಅವರು ತಾವು ದಾರಿಯಲ್ಲಿ ಕಂಡ ವಿಷಯವನ್ನೂ ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತು ಹಚ್ಚಿದ ವಿಷಯವನ್ನೂ ಅಲ್ಲಿದ್ದವರಿಗೆ ವರದಿ ಮಾಡಿದರು

02.04.24

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:36-41



ಪೇತ್ರನು ಜನಸಮೂಹವನ್ನು ಉದ್ದೇಶಿಸಿ ಗಟ್ಟಿಯಾದ ಧ್ವನಿಯಿಂದ ಹೀಗೆಂದು ಪ್ರಬೋಧಿಸಿದನು: “ಇಸ್ರಯೇಲಿನ ಜನರೆಲ್ಲರಿಗೆ ಇದು ನಿಸ್ಸಂದೇಹವಾಗಿ ತಿಳಿದಿರಲಿ: ನೀವು ಶಿಲುಬೆಗೇರಿಸಿದ ಈ ಯೇಸುಸ್ವಾಮಿಯನ್ನೇ ದೇವರು ಪ್ರಭುವನ್ನಾಗಿಯೂ ಅಭಿಷಿಕ್ತ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ.” ಇದನ್ನು ಕೇಳಿದ ಆ ಜನರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪ್ರೇಷಿತರನ್ನು ಉದ್ದೇಶಿಸಿ, “ಸಹೋದರರೇ, ಈಗ ನಾವು ಮಾಡಬೇಕಾದುದು ಏನು?” ಎಂದು ಕೇಳಿದರು. ಅದಕ್ಕೆ ಪೇತ್ರನು, “ನಿಮ್ಮಲ್ಲಿ ಪ್ರತಿ ಒಬ್ಬನೂ ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗಲಿ; ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆಯಲಿ. ಇದರಿಂದ ನೀವು ಪಾಪಕ್ಷಮೆಯನ್ನು ಪಡೆಯುವಿರಿ; ದೇವರ ವರವಾದ ಪವಿತ್ರಾತ್ಮರನ್ನು ಹೊಂದುವಿರಿ. ಈ ವಾಗ್ದಾನವನ್ನು ನಿಮಗೆ ಮಾತ್ರವಲ್ಲ, ನಿಮ್ಮ ಸಂತತಿಗೂ ದೂರ ಇರುವ ಎಲ್ಲರಿಗೂ ಮತ್ತು ಸರ್ವೇಶ್ವರನಾದ ದೇವರು ತಮ್ಮತ್ತ ಆಹ್ವಾನಿಸುವ ಪ್ರತಿಯೊಬ್ಬನಿಗೂ ಮಾಡಲಾಗಿದೆ,” ಎಂದನು. ಪೇತ್ರನು ಅವರಿಗೆ ಹಲವಾರು ವಿಧದಲ್ಲಿ ಮನವಿಮಾಡಿದನು. ‘ಈ ದುಷ್ಟ ಪೀಳಿಗೆಯಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಿ,’ ಎಂದು ಎಚ್ಚರಿಸಿದನು. ಅವನ ಬೋಧನೆಯನ್ನು ಅಂಗೀಕರಿಸಿದ ಅನೇಕರು ದೀಕ್ಷಾಸ್ನಾನ ಪಡೆದರು. ಅಂದೇ ಸುಮಾರು ಮೂರು ಸಾವಿರ ಜನರು ಸಭೆಯನ್ನು ಸೇರಿಕೊಂಡರು.

ಕೀರ್ತನೆ: 33:4-5, 18-19, 20, 22
ಶ್ಲೋಕ: ಅಚಲ ಪ್ರೀತಿಯಿಂದ ಪ್ರಭು ಜಗವನು ತುಂಬಿಹನು

ಸತ್ಯಸಂಧನು, ನ್ಯಾಯಪ್ರಿಯನು ಆತನು I
ಅಚಲಪ್ರೀತಿಯಿಂದ ಜಗವನು ತುಂಬಿಹನು II
ಸತ್ಯವಾದುದು ಆತನ ಪವಿತ್ರ ವಾಕ್ಯ I
ಸ್ತುತ್ಯವಾದುದು ಆತನ ಪುನೀತ ಕಾರ್ಯ II

ಸತ್ಯಸಂಧನು, ನ್ಯಾಯಪ್ರಿಯನು ಆತನು I
ಅಚಲಪ್ರೀತಿಯಿಂದ ಜಗವನು ತುಂಬಿಹನು II
ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು I
ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು II

ತಪ್ಪಿಸುವನವನು ಪ್ರಾಣವನು ಮರಣದಿಂದ I
ಉಳಿಸುವನು ಜೀವವನು ಕ್ಷಾಮಡಾಮರದಿಂದ II
ಕಾದಿದೆ ಎನ್ನ ಮನ ಪ್ರಭುವಿಗಾಗಿ I
ಆತನಿಹನು ಎನಗೆ ಗುರಾಣಿಯಾಗಿ II

ನಮ್ಮ ಮೇಲಿರಲಿ ಪ್ರಭು, ನಿನ್ನಚಲ ಪ್ರೀತಿ I
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ II

ಶುಭಸಂದೇಶ: ಯೊವಾನ್ನ 20:11-18

ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ ಶ್ವೇತವಸ್ತ್ರಧಾರಿಗಳಾದ ಇಬ್ಬರು ದೇವದೂತರನ್ನು ಅಲ್ಲಿ ಕಂಡಳು. ಯೇಸುವಿನ ಪಾರ್ಥಿವ ಶರೀರವನ್ನು ಇಟ್ಟಿದ್ದ ಸ್ಥಳದಲ್ಲಿ, ಒಬ್ಬನು ಅವರ ತಲೆಯಿದ್ದ ಕಡೆಯಲ್ಲೂ ಮತ್ತೊಬ್ಬನು ಕಾಲಿದ್ದ ಕಡೆಯಲ್ಲೂ ಕುಳಿತಿದ್ದರು. ಅವರು ಆಕೆಯನ್ನು, “ಏಕಮ್ಮಾ ಅಳುತ್ತಿರುವೆ?” ಎಂದು ಕೇಳಿದರು. “ನನ್ನ ಪ್ರಭುವನ್ನು ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ. ಎಲ್ಲಿ ಇಟ್ಟಿದ್ದಾರೋ ತಿಳಿಯದು,” ಎಂದಳು. ಹಾಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದು ಆಕೆಗೆ ಕಾಣಿಸಿತು. ಆದರೆ ಯೇಸುವೇ ಅವರೆಂದು ಆಕೆಗೆ ತಿಳಿಯಲಿಲ್ಲ. ಯೇಸು, “ಏಕಮ್ಮಾ ಅಳುತ್ತಿರುವೇ? ಏನನ್ನು ಹುಡುಕುತ್ತಿರುವೇ?” ಎಂದು ಕೇಳಿದಾಗಲೂ ಮರಿಯಳು ಅವರು ತೋಟಗಾರನೆಂದು ಭಾವಿಸಿ, “ಅಯ್ಯಾ, ನೀವೇನಾದರೂ ಅವರನ್ನು ಕೊಂಡೊಯ್ದಿದ್ದರೆ ಎಲ್ಲಿ ಇಟ್ಟಿರುವಿರಿ, ಹೇಳಿ; ನಾನು ತೆಗೆದುಕೊಂಡು ಹೋಗುತ್ತೇನೆ,” ಎಂದು ಹೇಳಿದಳು. ಆಗ ಯೇಸು, “ಮರಿಯಾ” ಎಂದು ಹೆಸರಿಡಿದು ಕರೆದರು. ಆಕೆ ಹಿಂದಿರುಗಿ ನೋಡಿ, “ರಬ್ಬೂನಿ” ಎಂದಳು. (ಯೆಹೂದ್ಯರ ಭಾಷೆಯಲ್ಲಿ ಹಾಗೆಂದರೆ “ಗುರುದೇವಾ” ಎಂದರ್ಥ). ಯೇಸು ಆಕೆಗೆ, “ನನ್ನನ್ನು ಹಿಡಿದುಕೊಂಡಿರಬೇಡ, ನಾನು ಇನ್ನೂ ಪಿತನ ಬಳಿಗೆ ಏರಿಹೋಗಿಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಿಮ್ಮ ಪಿತನೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನಲ್ಲಿಗೆ ನಾನು ಏರಿ ಹೋಗುತ್ತೇನೆಂದು ತಿಳಿಸು,” ಎಂದು ಹೇಳಿದರು. ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಬಂದು, “ನಾನು ಪ್ರಭುವನ್ನು ಕಂಡೆ. ಅವರು ಹೀಗೆಲ್ಲಾ ಹೇಳಿದರು,” ಎಂದು ತಿಳಿಸಿದಳು.

29.08.2026 - ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು

  ಸಂತ ಸ್ನಾನಿಕ ಯೊವಾನ್ನನ ಶಿರಚ್ಛೇದನ ಮೊದಲನೇ ವಾಚನ: ಯೆರೆಮಿಯ: 1: 17-19 ಆದುದರಿಂದ ನೀನು ನಿನ್ನ ನಡುವನ್ನು ಕಟ್ಟಿ ನಿಂತುಕೊಂಡು ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲ...