ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

09.12.23 - "ಬೆಳೆಯೇನೋ ಹೇರಳ; ಕೊಯಿಲಿಗಾರರೋ ವಿರಳ;"

ಮೊದಲನೇ ವಾಚನ: ಯೆಶಾಯ 30: 19-21, 23-26 


ಜೆರುಸಲೇಮಿನಲ್ಲಿ ವಾಸಿಸುವ ಸಿಯೋನಿನ ಜನರೇ, ನೀವಿನ್ನು ಅಳಬೇಕಾಗಿಲ್ಲ. ನಿಮ್ಮ ಕೂಗನ್ನು ಕೇಳಿದ್ದೇ, ಸರ್ವೇಶ್ವರ ನಿಮಗೆ ಕೃಪೆತೋರಿಸುವರು. ನಿಮ್ಮ ಸ್ವರವನ್ನು ಕೇಳಿದಾಕ್ಷಣ ಸದುತ್ತರವನ್ನು ದಯಪಾಲಿಸುವರು. ಅವರು ನಿಮಗೆ ಕಷ್ಟಸಂಕಟವನ್ನು ಅನ್ನಪಾನವಾಗಿ ಕೊಟ್ಟರೂ ನಿಮ್ಮ ಬೋಧಕರು ಇನ್ನು ನಿಮಗೆ ಮರೆಯಾಗಿ ಇರುವುದಿಲ್ಲ. ನೀವು ಅವರನ್ನು ಕಣ್ಣಾರೆ ಕಾಣುವಿರಿ. ನೀವು ಬಲಕ್ಕಾಗಲೀ ಎಡಕ್ಕಾಗಲೀ ತಿರುಗಿದರೆ ‘ಇದೇ ಮಾರ್ಗ, ಇದರಲ್ಲೇ ನಡೆಯಿರಿ’ ಎಂಬ ಮಾತು ಹಿಂದಿನಿಂದ ನಿಮ್ಮ ಕಿವಿಗೆ ಕೇಳಿಸುವುದು. ಆಗ ಸರ್ವೇಶ್ವರ ಹೊಲದ ಬಿತ್ತನೆಗೆ ಬೇಕಾದ ಮಳೆಯನ್ನು ನಿಮಗೆ ಸುರಿಸುವರು. ಆ ಹೊಲದ ಬೆಳೆಯಿಂದ ಸಾರವತ್ತಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವರು. ಅಂದು ನಿಮ್ಮ ದನಕರುಗಳು ವಿಶಾಲವಾದ ಹುಲ್ಲು ಗಾವಲುಗಳಲ್ಲಿ ಮೇಯುವುವು. ಹೊಲಗೇಯುವ ನಿಮ್ಮ ಎತ್ತು ಕತ್ತೆಗಳು ಮೊರದಿಂದಲೂ ಕವೆಗೋಲಿನಿಂದಲೂ ತೂರಿದ ರುಚಿಕರವಾದ ಮೇವನ್ನು ತಿನ್ನುವುವು. ಕೋಟೆಕೊತ್ತಲಗಳು ಬಿದ್ದುಹೋಗುವುವು. ಶತ್ರುಗಳ ಮಹಾಸಂಹಾರ ನಡೆಯುವ ಆ ದಿನದಂದು ಉನ್ನತ ಪರ್ವತಗಳಿಂದಲೂ ಎತ್ತರವಾದ ಗುಡ್ಡಗಳಿಂದಲೂ ತೊರೆಗಳೂ ನೀರಿನ ಕಾಲುವೆಗಳೂ ಹರಿಯುವುವು. ಇದಲ್ಲದೆ ಚಂದ್ರನ ಬೆಳಕು ಸೂರ್ಯನ ಬೆಳಕಿನಂತಿರುವುದು. ಸೂರ್ಯನ ಬೆಳಕು ಏಳ್ಮಡಿ ಹೆಚ್ಚುವುದು. ಏಳು ದಿನಗಳ ಬೆಳಕು ಒಂದೇ ದಿನದ ಬೆಳಕಿನಂತಾಗುವುದು. ಅಂದು ಸರ್ವೇಶ್ವರ ತಮ್ಮ ಜನರ ಹುಣ್ಣುಗಳನ್ನು ಕಟ್ಟುವರು. ತಮ್ಮ ಪೆಟ್ಟಿನಿಂದ ಜನರಿಗಾದ ಗಾಯಗಳನ್ನು ಗುಣಪಡಿಸುವರು. 

ಕೀರ್ತನೆ: 147: 1-2, 3-4, 5-6
ಶ್ಲೋಕ: ಪ್ರಭುವಿನಲ್ಲಿ ವಿಶ್ವಾಸವಿಡುವವರು ಉಲ್ಲಾಸಿಸುತ್ತಾರೆ  

ಶುಭಸಂದೇಶ: ಮತ್ತಾಯ 9: 35 – 10: 1, 5a, 6-8 


ಯೇಸುಸ್ವಾಮಿ, ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಸಂಚಾರ ಮಾಡುತ್ತಾ ಅಲ್ಲಿಯ ಪ್ರಾರ್ಥನಾಮಂದಿರಗಳಲ್ಲಿ ಬೋಧಿಸಿದರು. ಶ್ರೀ ಸಾಮ್ರಾಜ್ಯದ ಶುಭಸಂದೇಶವನ್ನು ಸಾರಿದರು. ಎಲ್ಲಾ ತರಹದ ರೋಗರುಜಿನಗಳನ್ನು ಗುಣಪಡಿಸಿದರು. ಆ ಜನಸಮೂಹವನ್ನು ಕಂಡಾಗ ಅವರ ಮನ ಕರಗಿತು. ಏಕೆಂದರೆ, ಕುರುಬನಿಲ್ಲದ ಕುರಿಗಳಂತೆ ಅವರು ತೊಳಲಿದ್ದರು ಹಾಗೂ ಬಳಲಿದ್ದರು. ಆದುದರಿಂದ ಯೇಸು ತಮ್ಮ ಶಿಷ್ಯರಿಗೆ, "ಬೆಳೆಯೇನೋ ಹೇರಳ; ಕೊಯಿಲಿಗಾರರೋ ವಿರಳ; ಈ ಕಾರಣ ತನ್ನ ಕೊಯಿಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಪ್ರಾರ್ಥಿಸಿರಿ," ಎಂದರು. ಯೇಸುಸ್ವಾಮಿ ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಎಲ್ಲ ರೋಗರುಜಿನಗಳನ್ನು ಗುಣಪಡಿಸುವುದಕ್ಕೂ ದೆವ್ವಗಳನ್ನು ಬಿಡಿಸುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು. ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ; ಹೋಗುತ್ತಾ, ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ. ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ, ದೆವ್ವಗಳನ್ನು ಬಿಡಿಸಿರಿ. ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ.

08.12.23

ಮೊದಲನೆಯ ವಾಚನ: ಆದಿಕಾಂಡ 3:9-15,20

ಸರ್ವೇಶ್ವರನಾದ ದೇವರು, "ಎಲ್ಲಿರುತ್ತೀಯಾ?" ಎಂದು ಆದಾಮನನ್ನು ಕೂಗಿ ಕೇಳಿದರು. ಅದಕ್ಕೆ ಅವನು, "ತಾವು ತೋಟದಲ್ಲಿ ಸಂಚರಿಸುವ ಸಪ್ಪಳವು ಕೇಳಿಸಿತು; ಬೆತ್ತಲೆಯಾಗಿದ್ದೇನಲ್ಲಾ ಎಂದು ಹೆದರಿ ಅವಿತುಕೊಂಡೆ, "ಎಂದನು. "ನೀನು ಬೆತ್ತಲೆಯಾಗಿರುವಿಯೆಂದು ನಿನಗೆ ತಿಳಿಸಿದವರು ಯಾರು? "ಎಂದು ಕೇಳಿದರು. ಅದಕ್ಕೆ ಆದಾಮನು, "ನನ್ನ ಜೊತೆಯಲ್ಲಿ ಇರಲು ತಾವು ಕೊಟ್ಟ ಮಹಿಳೆ, ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆ, " ಎಂದನು. ಸರ್ವೇಶ್ವರನಾದ ದೇವರು ಈ ಮಹಿಳೆಯನ್ನು, "ಇದೇನು ನೀನು ಮಾಡಿದ್ದು? "ಎಂದು ಕೇಳಲು ಆಕೆ, " ಸರ್ಪವು ನನ್ನನ್ನು ವಂಚಿಸಿ ತಿನ್ನುವಂತೆ ಮಾಡಿತು, " ಎಂದು ಉತ್ತರಕೊಟ್ಟಳು. ಆಗ ಸರ್ವೇಶ್ವರನಾದ ದೇವರು, ಇಂತೆಂದರು ಸರ್ಪಕ್ಕೆ: ಈ ಪರಿಯ ಕೃತ್ಯವನ್ನು ನೀನೆಸಗಿದುದರಿಂದ ಶಾಪಗ್ರಸ್ತನಾದೆ ಎಲ್ಲ ಪಶುಪ್ರಾಣಿಗಳಿಗಿಂತ: ಹರಿದಾಡುವೆ ಹೊಟ್ಟೆಯ ಮೇಲೆ ಇಂದಿನಿಂದ, ತಿನ್ನುವೆ ಮಣ್ಣನ್ನೇ ಜೀವಮಾನ ಪರಿಯಂತ. ಹಗೆತನವಿರಿಸುವೆನು ನಿನಗೂ ಈ ಮಹಿಳೆಗೂ, ನಿನ್ನ ಸಂತಾನಕ್ಕೂ ಇವಳ ಸಂತಾನಕ್ಕೂ. ಜಜ್ಜುವುದಿವಳ ಸಂತಾನ ನಿನ್ನ ತಲೆಯನ್ನು ಕಚ್ಚುವೆ ನೀನಾ ಸಂತಾನದ ಹಿಮ್ಮಡಿಯನ್ನು " ಆದಾಮನು ತನ್ನ ಹೆಂಡತಿಗೆ "ಹವ್ವ" ಎಂದು ಹೆಸರಿಟ್ಟನು. ಏಕೆಂದರೆ ಮಾನವಕುಲಕ್ಕೆ ಮೂಲಮಾತೆ ಆಕೆ.

ಕೀರ್ತನೆ: 98:1, 2-3,3-4
ಶ್ಲೋಕ: ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು, ಎಸಗಿಹನಾತನು ಪವಾಡಕಾರ್ಯಗಳನು |

ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು|
ಎಸಗಿಹನಾತನು ಪವಾಡಕಾರ್ಯಗಳನು||
ಗಳಿಸಿತಾತನ ಕೈ ಪೂತಭುಜ ಗೆಲುವನು|
ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು|
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕ ಶಕ್ತಿಯನು||

ಕಂಡು ಬಂದಿತು ಜಗದ ಎಲ್ಲೆ ಎಲ್ಲೆಗೆ|
ನಮ್ಮ ದೇವ ಸಾಧಿಸಿದ ಜಯಗಳಿಕೆ||
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು|
ಇಸ್ರಾಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು||

ಭೂನಿವಾಸಿಗಳೇ ಮಾಡಿರಿ ಜಯಕಾರ ಪ್ರಭುವಿಗೆ|
ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ ||

ಎರಡನೆಯ ವಾಚನ: 2 ಎಫೆಸಿಯರಿಗೆ 1:3-6,11-12

ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಪಿತನಾದ ದೇವರಿಗೆ ಸ್ತುತಿ ಸಲ್ಲಲಿ ! ಪಿತದೇವರು ಸ್ವರ್ಗಲೋಕದಿಂದ ಎಲ್ಲಾ ಬಗೆಯ ಆಧ್ಯಾತ್ಮಿಕ ಆಶೀರ್ವಾದಗಳನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿದ್ದಾರೆ. ಜಗತ್ತು ಸೃಷ್ಟಿಯಾಗುವ ಮೊದಲೇ ದೇವರು ಕ್ರಿಸ್ತಯೇಸುವಿನಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು. ಹೀಗೆ ಅವರ ಸನ್ನಿಧಿಯಲ್ಲಿ ನಾವು ನಿಷ್ಕಳಂಕರೂ ನಿರ್ದೋಷಿಗಳೂ ಆಗಿರಬೇಕೆಂದು ಇಚ್ಛಿಸಿದರು. ನಮ್ಮ ಮೇಲಿನ ಪ್ರೀತಿಯಿಂದಾಗಿ ದೇವರು ಯೇಸುಕ್ರಿಸ್ತರ ಮೂಲಕ ನಮ್ಮನ್ನು ತಮ್ಮ ಮಕ್ಕಳನ್ನಾಗಿಸಿಕೊಳ್ಳಲು ಆಗಲೇ ನಿರ್ದರಿಸಿದ್ದರು. ಇದು ಅವರ ಸಂಕಲ್ಪ ಹಾಗೂ ಚಿತ್ತವಾಗಿತ್ತು. ತಮ್ಮ ಪ್ರೀತಿಯ ಪುತ್ರನಲ್ಲೇ ಅವರು ನಮಗೆ ಉಚಿತವಾಗಿ ಅನುಗ್ರಹಿಸಿರುವ ಅತಿಶಯ ವರಪ್ರಸಾದಕ್ಕಾಗಿ ಅವರಿಗೆ ಸ್ತುತಿ ಸಲ್ಲಿಸೋಣ. ದೈವಯೋಜನೆಯಂತೆಯೇ ಸಕಲವೂ ಸಂಭವಿಸುತ್ತದೆ. ದೇವರು ಆದಿಯಲ್ಲೇ ಸಂಕಲ್ಪಿಸಿದ್ದಂತೆ ತಮ್ಮ ಚಿತ್ತಕ್ಕನುಗುಣವಾಗಿ ಕ್ರಿಸ್ತ ಯೇಸುವಿನ ಅನ್ಯೋನ್ಯತೆಯಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು. ಆದಕಾರಣ ಯೇಸುಕ್ರಿಸ್ತರಲ್ಲಿ ಮೊತ್ತಮೊದಲು ನಿರೀಕ್ಷೆಯನ್ನಿರಿಸಿದ ನಾವು ದೇವರ ಮಹಿಮೆಯನ್ನು ಸ್ತುತಿಸಿ ಹಾಡಬೇಕು.

ಘೋಷಣೆ ಲೂಕ 1:28
ಅಲ್ಲೆಲೂಯ, ಅಲ್ಲೆಲೂಯ!

"ಧೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ | ಸರ್ವೇಶ್ವರರು ನಿನ್ನೊಡನೆ ಇದ್ದಾರೆ, ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು" ||

ಶುಭಸಂದೇಶ: ಲೂಕ 1:26-38

ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ. ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ. ಕಳುಹಿಸಿದರು. ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬಂದು "ಧೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ ! "ಎಂದನು. ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. "ಇದೆಂಥ ಶುಭಾಶಯ" ಎಂದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ, "ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ ಆತನಿಗೆ "ಯೇಸು" ಎಂಬ ಹೆಸರಿಡಬೇಕು; ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು, ಯಕೋಬನ ವಂಶವನ್ನು ಅವನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು, " ಎಂದನು. ಅದಕ್ಕೆ ಮರಿಯಳು, "ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ? "ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ. "ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು "ದೇವರ ಪುತ್ರ". ಎನಿಸಿಕೊಳ್ಳುವನು. ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು; ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. "ಎಂದನು. ಆಗ ಮರಿಯಳು, "ಇಗೋ, ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ, " ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.

07.12.23 - "ನನ್ನ ಈ ಮಾತನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ದಿವಂತನನ್ನು ಹೋಲುತ್ತಾನೆ"

ಮೊದಲನೇ ವಾಚನ: ಯೆಶಾಯ 26: 1-6 


ಕಾಲ ಬರುವುದು; ಆಗ ಹಾಡುವರು ಜುದೇಯ ನಾಡಿನಲ್ಲಿ ಈ ಗೀತೆಯನು: ನಮಗಿದೆ ಸುಭದ್ರ ನಗರ, ದೇವರೇ ಅದರ ದುರ್ಗ, ಪ್ರಾಕಾರ. ತೆರೆಯಿರಿ ನಗರ ದ್ವಾರಗಳನು, ಪ್ರವೇಶಿಸಲಿ ವಿಶ್ವಾಸವುಳ್ಳ ಸಜ್ಜನರು. ನಿನ್ನ ನೆಚ್ಚಿದವರಿಗೆ, ಸ್ಥಿರ ಚಿತ್ತವುಳ್ಳವರಿಗೆ, ಚಿರಶಾಂತಿಯ ನೀ ನೀಡುವೆ. ಶಾಶ್ವತ ಆಶ್ರಯಗಿರಿ, ಸ್ವಾಮಿ ಸರ್ವೇಶ್ವರನೇ, ಸತತ ಭರವಸೆಯಿಡಿರಿ ಆತನಲ್ಲೇ. ತಗ್ಗಿಸುವನಾತ ಎತ್ತರದಲಿ ವಾಸಿಸುವವರನು, ಕೆಡವಿ, ನೆಲಸಮಮಾಡಿ, ಧೂಳಾಗಿಸುವನು ಅವರು ವಾಸಮಾಡುವಾ ಉನ್ನತ ನಗರವನು. ಈಡಾಗುವುದದು ಕಾಲತುಳಿತಕೆ ದೀನದಲಿತರ ಪಾದತುಳಿತಕೆ.

ಕೀರ್ತನೆ: 118: 1 8-9, 19-21, 25-27a 

ಶ್ಲೋಕ: ಪ್ರಭುವಿನ ನಾಮದಲ್ಲಿ ಬರುವವನಿಗೆ ಜಯಮಂಗಳ 

ಶುಭಸಂದೇಶ: ಮತ್ತಾಯ 7: 21, 24-27 

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನನ್ನನ್ನು "ಸ್ವಾವಿೂ, ಸ್ವಾವಿೂ," ಎನ್ನುವ ಪ್ರತಿಯೊಬ್ಬನೂ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು. "ನನ್ನ ಈ ಮಾತನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ದಿವಂತನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆದರೂ ಅದು ಬೀಳಲಿಲ್ಲ. ಕಾರಣ ಅದರ ಅಡಿಗಟ್ಟು ಬಂಡೆಯ ಮೇಲಿತ್ತು. ನನ್ನ ಈ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದ ಪ್ರತಿಯೊಬ್ಬನೂ ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ದಿಹೀನನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಅದು ಕುಸಿದು ಬಿತ್ತು. ಅದಕ್ಕಾದ ಪತನವೋ ಅಗಾಧ!".

06.12.23 - "ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?"

ಮೊದಲನೇ ವಾಚನ: ಯೆಶಾಯ 25: 6-10 


ಇದಲ್ಲದೆ ಸೇನಾಧೀಶ್ವರ ಸರ್ವೇಶ್ವರ ಈ ಪರ್ವತದಲ್ಲಿ ಸಕಲ ರಾಷ್ಟ್ರಗಳಿಗೆ ಸಾರವತ್ತಾದ ಮೃಷ್ಟಾನ್ನವನ್ನೂ ಶ್ರೇಷ್ಟವಾದ ದ್ರಾಕ್ಷಾರಸವನ್ನೂ ಭೋಜನಕ್ಕಾಗಿ ಅಣಿಗೊಳಿಸುವರು. ಸಮಸ್ತ ರಾಷ್ಟ್ರಗಳನ್ನು ಆವರಿಸಿರುವ ಮುಸುಕನ್ನೂ ಸಕಲ ದೇಶಗಳನ್ನು ಮುಚ್ಚಿರುವ ತೆರೆಯನ್ನೂ ಇದೇ ಪರ್ವತದಲ್ಲಿ ನಾಶಮಾಡುವರು. ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವರು. ಸರ್ವೇಶ್ವರಸ್ವಾಮಿ ಎಲ್ಲರ ಕಣ್ಣೀರನ್ನು ಒರೆಸಿಬಿಡುವರು. ತಮ್ಮ ಪ್ರಜೆಗಾದ ಅವಮಾನವನ್ನು ಜಗದಿಂದಲೇ ತೊಲಗಿಸಿಬಿಡುವರು. ಸರ್ವೇಶ್ವರಸ್ವಾಮಿಯೇ ಇಂತೆಂದು ನುಡಿದಿದ್ದಾರೆ. ಇದು ನೆರವೇರಿದಾಗ ಜನರು: “ಇವರೇ ನಮ್ಮ ದೇವರು; ನಮ್ಮನ್ನು ರಕ್ಷಿಸುವರೆಂದು ಇವರನ್ನೇ ನೆಚ್ಚಿಕೊಂಡಿದ್ದೆವು. ಇವರೇ ಸರ್ವೇಶ್ವರ; ಇವರನ್ನೇ ನೆಚ್ಚಿಕೊಂಡಿದ್ದೆವು. ಇವರು ನೀಡುವ ರಕ್ಷಣೆಯಲ್ಲಿ ಆನಂದಿಸೋಣ!” ಎಂದು ಹೇಳಿಕೊಳ್ಳುವರು. ದೇವರು ನೀಡುವ ದಂಡನೆ ಸರ್ವೇಶ್ವರಸ್ವಾಮಿಯ ಅಭಯ ಹಸ್ತವು ಈ ಪರ್ವತದ ಮೇಲೆ ಶಾಶ್ವತವಾಗಿ ನೆಲಸುವುದು. ಮೋವಾಬಾದರೋ ತಿಪ್ಪೆಗುಂಡಿಯ ರೊಚ್ಚಿನಲ್ಲಿ ಒಣಹುಲ್ಲು ತುಳಿತಕ್ಕೆ ಈಡಾಗುವಂತೆ ತಾನಿದ್ದಲ್ಲೇ ತುಳಿತಕ್ಕೀಡಾಗುವುದು.

ಕೀರ್ತನೆ: 23: 1-3a, 3b-4, 5, 6 
ಶ್ಲೋಕ: ದೇವಮಂದಿರದಲ್ಲಿ ನಾ ವಾಸಿಸುವೆ ಚಿರಕಾಲವೆಲ್ಲ. 

ಶುಭಸಂದೇಶ: ಮತ್ತಾಯ 15: 29-37 


ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು, ಗಲಿಲೇಯ ಸರೋವರದ ತೀರದಲ್ಲೇ ನಡೆದು, ಒಂದು ಗುಡ್ಡವನ್ನು ಹತ್ತಿ ಅಲ್ಲಿ ಕುಳಿತುಕೊಂಡರು. ಜನರು ಗುಂಪುಗುಂಪಾಗಿ ಅಲ್ಲಿಗೆ ಬಂದರು. ಕುಂಟರು, ಕುರುಡರು, ಮೂಕರು, ಅಂಗವಿಕಲರು ಮುಂತಾದ ಅನೇಕರನ್ನು ತಮ್ಮೊಡನೆ ಕರೆತಂದು ಯೇಸುವಿನ ಪಾದಸನ್ನಿಧಿಯಲ್ಲಿ ಬಿಟ್ಟರು. ಯೇಸು ಅವರನ್ನು ಗುಣಪಡಿಸಿದರು. ಮೂಕರು ಮಾತನಾಡುವುದನ್ನೂ ಅಂಗವಿಕಲರು ಸ್ವಸ್ಥರಾಗುವುದನ್ನೂ ಕುಂಟರು ನಡೆಯುವುದನ್ನೂ ಕುರುಡರು ನೋಡುವುದನ್ನೂ ಈ ಜನರು ಕಂಡು ಆಶ್ಚರ್ಯಚಕಿತರಾಗಿ ಇಸ್ರಯೇಲಿನ ದೇವರನ್ನು ಕೊಂಡಾಡಿದರು. ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು, "ಈ ಜನಸ್ತೋಮ ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದೆ. ಊಟಕ್ಕೆ ಇವರಲ್ಲಿ ಏನೂ ಇಲ್ಲ. ಇವರನ್ನು ಕಂಡು ನನ್ನ ಹೃದಯ ಕರಗುತ್ತದೆ. ಇವರನ್ನು ಹಸಿದ ಹೊಟ್ಟೆಯಲ್ಲಿ ಕಳಿಸಿಬಿಡಲು ನನಗೆ ಇಷ್ಟವಿಲ್ಲ, ದಾರಿಯಲ್ಲಿ ಬಳಲಿ ಬಿದ್ದಾರು," ಎಂದರು. ಅದಕ್ಕೆ ಶಿಷ್ಯರು, "ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ?" ಎಂದು ಕೇಳಿದರು. "ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?" ಎಂದು ಯೇಸು ಕೇಳಿದರು. "ಏಳು ರೊಟ್ಟಿಗಳು ಮತ್ತು ಕೆಲವು ಸಣ್ಣ ಮೀನುಗಳಿವೆ," ಎಂದು ಶಿಷ್ಯರು ಉತ್ತರಕೊಟ್ಟರು. ಆಗ ಜನಸಮೂಹಕ್ಕೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಯೇಸು ಆಜ್ಞಾಪಿಸಿದರು. ಅನಂತರ ಆ ಏಳು ರೊಟ್ಟಿಗಳನ್ನೂ ಮೀನುಗಳನ್ನು ತೆಗೆದುಕೊಂಡು, ದೇವರಿಗೆ ಸ್ತೋತ್ರ ಸಲ್ಲಿಸಿ, ಅವುಗಳನ್ನು ಮುರಿದು ತಮ್ಮ ಶಿಷ್ಯರಿಗೆ ಕೊಟ್ಟರು; ಶಿಷ್ಯರು ಜನರಿಗೆ ಬಡಿಸಿದರು. ಜನರೆಲ್ಲರೂ ಉಂಡು ತೃಪ್ತರಾದರು. ಉಳಿದ ತುಂಡುಗಳನ್ನು ಶಿಷ್ಯರು ಏಳು ಕುಕ್ಕೆಗಳ ತುಂಬ ತುಂಬಿಸಿಕೊಂಡರು.

05.12.23 - “ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು"

ಮೊದಲನೇ ವಾಚನ: ಯೆಶಾಯ 11: 1-10 


ಜೆಸ್ಸೆಯನ ಬುಡದಿಂದ ಒಡೆಯುವು ದೊಂದು ಚಿಗುರು; ಅದರ ಬೇರಿನಿಂದ ಫಲಿಸುವುದೊಂದು ತಳಿರು. ನೆಲಸುವುದಾತನ ಮೇಲೆ ಜ್ಞಾನವಿವೇಕ ದಾಯಕ ಆತ್ಮ; ಶಕ್ತಿ ಸಮಾಲೋಚನೆಯನ್ನೀಯುವ ಆತ್ಮ; ಸರ್ವೇಶ್ವರನ ಅರಿವನು, ಭಯವನು ಹುಟ್ಟಿಸುವ ಆತ್ಮ ಅಹುದು, ನೆಲಸುವುದಾತನ ಮೇಲೆ ಸರ್ವೇಶ್ವರನ ಆತ್ಮ ಸರ್ವೇಶ್ವರನ ಭಯಭಕ್ತಿ ಅವಗೆ ಪರಿಮಳದಂತೆ. ತೀರ್ಪಿಡನಾತ ಕಣ್ಣಿಗೆ ತೋಚಿದಂತೆ ನಿರ್ಣಯಿಸನಾತ ಕಿವಿಗೆ ಬಿದ್ದಂತೆ. ಆದರೆ ಬಡಬಗ್ಗರಿಗೆ ತೀರ್ಪಿಡುವನು ನ್ಯಾಯನೀತಿಯಿಂದ ನಾಡ ದಲಿತರಿಗೆ ನಿರ್ಣಯಿಸುವನು ಯಥಾರ್ಥತೆಯಿಂದ ದಂಡಿಸುವನು ಲೋಕವನು ನುಡಿಯೆಂಬ ದಂಡದಿಂದ ಕೊಲ್ಲುವನು ಕೆಡುಕರನು ಉಸಿರೆಂಬ ಕತ್ತಿಯಿಂದ. ಸದ್ಧರ್ಮವೇ ಆತನಿಗೆ ನಡುಕಟ್ಟು ಪ್ರಾಮಾಣಿಕತೆಯೇ ಸೊಂಟಪಟ್ಟಿ. ಬಾಳುವುವು ತೋಳಕುರಿಮರಿಗಳು ಒಂದಿಗೆ ಮಲಗುವುವು ಮೇಕೆಚಿರತೆಗಳು ಜೊತೆಗೆ ಮೊಲೆಯುಣ್ಣುವುವು ಕರುಕೇಸರಿಗಳು ಒಟ್ಟಿಗೆ ನಡೆಸುವುದವುಗಳನು ಚಿಕ್ಕಮಗು ಮೇಯಿಸುವುದಕೆ. ಮೇಯುವುವು ಕರಡಿ, ಆಕಳುಗಳು ಒಟ್ಟಿಗೆ ಮಲಗುವುವು ಅವುಗಳ ಮರಿಗಳು ಜೊತೆಗೆ ಎತ್ತಿನ ಹುಲ್ಲು ಮೇವಾಗುವುದು ಸಿಂಹಕೆ. ಆಡುವುದು ಮೊಲೆಗೂಸು ನಾಗರ ಹುತ್ತದ ಮೇಲೆ ಕೈ ಹಾಕುವುದು ಮೊಲೆಬಿಟ್ಟ ಮಗು ಹಾವಿನಬಿಲದ ಒಳಗೆ. ಹಾನಿಯನು, ಕೇಡನು ಮಾಡರಾರೂ ನನ್ನ ಪರ್ವತದ ಮೇಲೆ. ಸಮುದ್ರದಂತೆ ತುಂಬಿರುವುದು ಸರ್ವೇಶ್ವರನ ಜ್ಞಾನ, ಧರೆಯ ಮೇಲೆ. ಆ ದಿನದಂದು ಜೆಸ್ಸೆಯನ ಸಂತಾನದ ಕುಡಿ ಸರ್ವಜನಾಂಗಗಳಿಗೆ ಧ್ವಜಪ್ರಾಯವಾಗಿ ನಿಲ್ಲುವುದು. ಆತನನ್ನು ರಾಷ್ಟ್ರಗಳು ಆಶ್ರಯಿಸುವುವು; ವೈಭವದಿಂದಿರುವುದಾತನ ವಿಶ್ರಾಂತಿ ನಿಲಯವು.

ಕೀರ್ತನೆ: 72: 1-2, 7-8, 12-13, 17 

ಶ್ಲೋಕ: ಬೆಳೆಯಲಿ ಆತನ ಪಾಲನೆಯಲ್ಲಿ ನ್ಯಾಯನೀತಿ, ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ. 

ಶುಭಸಂದೇಶ: ಲೂಕ 10: 21-24 

ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡು, “ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ. ಪುತ್ರನು ಯಾರೆಂದು ಪಿತನ ಹೊರತು ಬೇರಾರೂ ಅರಿಯರು. ಪಿತನು ಯಾರೆಂದು ಪುತ್ರನು ಮತ್ತು ಯಾರಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ ಅವರೇ ಹೊರತು ಮತ್ತಾರೂ ಅರಿಯರು,” ಎಂದು ಹೇಳಿದರು. ಅನಂತರ ಯೇಸು ಶಿಷ್ಯರ ಕಡೆ ತಿರುಗಿ, ಅವರಿಗೆ ಪ್ರತ್ಯೇಕವಾಗಿ, “ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು. ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕೂ ಆಶಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂದು ನಿಮಗೆ ಹೇಳುತ್ತೇನೆ,” ಎಂದರು.

04.12.23 - " ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ. - ಸಂತ ಫ್ರಾನ್ಸಿಸ್ ಕ್ಸೇವಿಯರ್ (ಧರ್ಮಗುರು ಹಾಗೂ ಭಾರತದ ಪಾಲಕರು) ಮಹೋತ್ಸವ

ಮೊದಲನೇ ವಾಚನ: ಪ್ರವಾದಿ  ಯೆರೆಮೀಯನ  ಗ್ರಂಥದಿಂದ  ಇಂದಿನ  ಮೊದಲನೆಯ  ವಾಚನ 1:4


ಸರ್ವೇಶ್ವರಸ್ವಾಮಿ  ಈ  ವಾಣಿಯನ್ನು  ನನಗೆ  ದಯಪಾಲಿಸಿದರು:  "ನಿನ್ನನ್ನು  ತಾಯಿಯ  ಗರ್ಭದಲ್ಲಿ  ರೂಪಿಸುವುದಕ್ಕೆ  ಮುಂಚೆಯೇ  ನಿನ್ನನ್ನು  ನಾನು  ತಿಳಿದಿದ್ದೆ ; ನೀನು  ಉದರದಿಂದ  ಹೊರ  ಬರುವುದಕ್ಕೆ  ಮೊದಲೇ  ನಿನ್ನನ್ನು  ಪವಿತ್ರೀಕರಿಸಿದ್ದೆ ;  ನಿನ್ನನ್ನು  ರಾಷ್ಟ್ರಗಳಿಗೆ  ಪ್ರವಾದಿಯನ್ನಾಗಿ  ನೇಮಿಸಿದ್ದೇನೆ." ಅದಕ್ಕೆ  ನಾನು,  "ಅಯ್ಯೋ,  ಸ್ವಾಮಿ  ಸರ್ವೇಶ್ವರಾ,  ನಾನು  ಮಾತುಬಲ್ಲವನಲ್ಲ,  ಇನ್ನೂ  ತರುಣ, " ಎಂದು  ಬಿನ್ನವಿಸಿದೆ. ಆಗ  ಸರ್ವೇಶ್ವರ  ನನಗೆ,  "ನಾನೊಬ್ಬ  ತರುಣ  ಎನ್ನಬೇಡ ; ಯಾರ  ಬಳಿಗೆ  ನಿನ್ನನ್ನು  ಕಳಿಸುತ್ತೇನೋ,  ಅವರೆಲ್ಲರ  ಬಳಿಗೆ  ನೀನು  ಹೋಗಲೇಬೇಕು ;  ಅವರಿಗೆ  ಅಂಜಬೇಡ ; ನಿನ್ನನ್ನು  ಕಾಪಾಡಲು  ನಾನೇ  ನಿನ್ನೊಂದಿಗೆ  ಇರುತ್ತೇನೆ ;  ಇದು  ಸರ್ವೇಶ್ವರನಾದ  ನನ್ನ  ಮಾತು, "ಎಂದರು.

- ಪ್ರಭುವಿನ  ವಾಕ್ಯ

ಕೀರ್ತನೆ:   

ಶ್ಲೋಕ:  ನೀವು  ವಿಶ್ವದ  ಎಲ್ಲೆಡೆಗಳಿಗೂ  ಹೋಗಿ,  ಜಗತ್ತಿಗೆಲ್ಲಾ  ಶುಭಸಂದೇಶವನ್ನು  ಪ್ರಬೋಧಿಸಿರಿ |

1.  ಸ್ತುತಿ  ಮಾಡಿ  ಪ್ರಭುವನು  ಸಮಸ್ತ  ರಾಷ್ಟ್ರಗಳೇ|
ಆತನನು  ಹೊಗಳಿ  ಹಾಡಿ  ಸರ್ವಜನಾಂಗಗಳೇ||

ಶ್ಲೋಕ

2.  ನಮ್ಮ  ಮೇಲೆ  ಆತನಿಗಿರುವ  ಪ್ರೀತಿ  ಅಚಲ|
ಆತನ  ಸತ್ಯಪರತೆ  ಇರುವುದು  ಅನಂತ  ಕಾಲ||

ಶ್ಲೋಕ

ಘೋಷಣೆ

ಅಲ್ಲೆಲೂಯ, ಅಲ್ಲೆಲೂಯ!
ಹೋಗಿ, ಸಕಲ ದೇಶಗಳ  ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ | ಲೋಕಾಂತ್ಯದವರೆಗೂ ಸದಾ  ನಾನು ನಿಮ್ಮೊಡನೆ ಇರುತ್ತೇನೆ|| 
ಅಲ್ಲೆಲೂಯ!

ಶುಭಸಂದೇಶ: ಮಾರ್ಕನು  ಬರೆದ ಪವಿತ್ರ ಶುಭಸಂದೇಶದಿಂದ ವಾಚನ 16:15-20


ಯೇಸು  ಹನ್ನೆರಡು  ಮಂದಿ  ಶಿಷ್ಯರಿಗೆ  ಹೀಗೆಂದರು: " ನೀವು  ವಿಶ್ವದ  ಎಲ್ಲೆಡೆಗಳಿಗೂ  ಹೋಗಿ  ಜಗತ್ತಿಗೆಲ್ಲಾ  ಶುಭಸಂದೇಶವನ್ನು  ಪ್ರಬೋಧಿಸಿರಿ.  ವಿಶ್ವಾಸವಿಟ್ಟು  ದೀಕ್ಷಾಸ್ನಾನ  ಪಡೆಯುವವನು  ಜೀವೋದ್ಧಾರ  ಹೊಂದುವನು.   ವಿಶ್ವಾಸಿಸದೇ  ಇರುವವನು  ಖಂಡನೆಗೆ  ಗುರಿಯಾಗುವನು.  ವಿಶ್ವಾಸಿಸುವುದರಿಂದ  ಈ  ಅದ್ಭುತ  ಕಾರ್ಯಗಳು  ಆಗುವುವು.  ಅವರು  ನನ್ನ  ಹೆಸರಿನಲ್ಲಿ  ದೆವ್ವಗಳನ್ನು  ಬಿಡಿಸುವರು ;  ಹೊಸ  ಭಾಷೆಗಳಲ್ಲಿ  ಮಾತಾಡುವರು;  ಕೈಗಳಿಂದ  ಸರ್ಪಗಳನ್ನು  ಎತ್ತಿದರೂ  ವಿಷ  ಪದಾರ್ಥಗಳನ್ನೇನಾದರು  ಕುಡಿದರೂ  ಯಾವ  ಹಾನಿಯೂ  ಅವರಿಗಾಗದು.  ಅವರು  ರೋಗಿಗಳ  ಮೇಲೆ  ಕೈ  ಇಟ್ಟರೆ  ರೋಗಿಗಳು  ಗುಣಹೊಂದುವರು, " ಎಂದರು.  ಯೇಸುಸ್ವಾಮಿ  ಶಿಷ್ಯರೊಡನೆ  ಮಾತನಾಡಿದ  ಮೇಲೆ  ಸ್ವರ್ಗಾರೋಹಣವಾಗಿ  ದೇವರ  ಬಲಪಾರ್ಶ್ವದಲ್ಲಿ  ಆಸೀನರಾದರು.  ಇತ್ತ  ಶಿಷ್ಯರು  ಹೊರಟುಹೋಗಿ,  ಎಲ್ಲೆಡೆಗಳಲ್ಲಿಯೂ  ಶುಭಸಂದೇಶವನ್ನು  ಬೋಧಿಸತೊಡಗಿದರು.  ಪ್ರಭು  ಯೇಸು  ಅವರೊಂದಿಗೆ  ಕಾರ್ಯಸಾಧಿಸುತ್ತಾ,  ಮಹತ್ಕಾರ್ಯಗಳಿಂದ  ಶುಭಸಂದೇಶವನ್ನು  ಸಮರ್ಥಿಸುತ್ತಾ  ಇದ್ದರು.

ಪ್ರಭುಕ್ರಿಸ್ತರ  ಶುಭಸಂದೇಶ

03.12.23 - ಎಚ್ಚರವಾಗಿರಿ; ಯಜಮಾನನು, ಸಂಜೆಯಲ್ಲೋ ಮಧ್ಯರಾತ್ರಿಯಲ್ಲೋ ಕೋಳಿಕೂಗುವಾಗಲೋ ಬೆಳಕುಹರಿಯುವಾಗಲೋ, ಯಾವಾಗ ಬರುವನೆಂಬುದು ನಿಮಗೆ ತಿಳಿಯದು.

ಮೊದಲನೆಯ  ವಾಚನ : ಪ್ರವಾದಿ  ಯೆಶಾಯನ  ಗ್ರಂಥದಿಂದ  ಇಂದಿನ  ಮೊದಲನೆಯ  ವಾಚನ  63:16-17, 64:1,3-8


"ನೀವೇ  ನಮ್ಮ  ತಂದೆ.  ಅಬ್ರಹಾಮನು  ನಮ್ಮನ್ನು  ಅರಿಯದೆ  ಇರಬಹುದು,  ಇಸ್ರಯೇಲನು  ನಮ್ಮನ್ನು  ಗುರುತಿಸದೆ  ಇರಬಹುದು.  ಆದರೆ  ಸರ್ವೇಶ್ವರಾ,  ನೀವೇ  ನಮ್ಮ  ತಂದೆ.  ನಮ್ಮ  ಉದ್ಧಾರಕ;  ಆದಿಯಿಂದ  ಇರಲು  ಅದುವೇ  ನಿಮ್ಮ  ನಾಮಾಂಕಿತ.  ಸ್ವಾಮೀ  ನಾವು  ನಿಮ್ಮ  ಮಾರ್ಗ  ತಪ್ಪಿ  ಅಲೆಯುವಂತೆ  ಮಾಡುತ್ತೀರಿ,  ಏಕೆ ?  ನಿಮಗೆ  ಭಯಪಡದ  ಹಾಗೆ  ನಮ್ಮ  ಹೃದಯವನ್ನು  ಕಠಿಣ  ಪಡಿಸುವುದು  ಏಕೆ ?  ನಿಮ್ಮ  ಶರಣರ  ನಿಮಿತ್ತ,  ನಿಮಗೆ  ಬಾಧ್ಯರಾದ  ಕುಲಗಳ  ನಿಮಿತ್ತ,  ನಮಗೆ  ಪ್ರಸನ್ನಚಿತ್ತರಾಗಿರಿ.  ಸ್ವಾಮೀ,  ಆಕಾಶವನ್ನು  ಸೀಳಿ  ಇಳಿದು  ಬರಲಾರಿರಾ?  ನಿಮ್ಮ  ದರ್ಶನವನ್ನು  ಕಂಡು  ಬೆಟ್ಟಗುಡ್ಡಗಳು  ಗಡಗಡನೆ  ನಡುಗಬಾರದೇ?  ನಮ್ಮ ನಿರೀಕ್ಷೆಗೆ  ಮೀರದ  ಮಹತ್ಕಾರ್ಯಗಳನ್ನು  ನಡೆಸಿ, ನಿಮ್ಮ  ನಾಮ  ಮಹಿಮೆಯನ್ನು  ನಿಮ್ಮ  ಶತ್ರುಗಳಿಗೆ  ಪ್ರದರ್ಶಿಸಿ  ಅನ್ಯ  ರಾಷ್ಟ್ರಗಳನ್ನು  ನಡುಗಿಸಲಾರಿರಾ?  ಹೌದು,  ನೀವು  ಇಳಿದುಬಂದು,  ಬೆಟ್ಟಗುಡ್ಡಗಳು  ನಡುಗಿದರೆ  ಎಷ್ಟೋ  ಲೇಸು.  ತಮ್ಮನ್ನು  ಕಾದು  ಎದುರು  ನೋಡುವವರ  ಪರವಾಗಿ  ಕಾರ್ಯಗತರಾಗುವಂಥ  ದೇವರು,  ನಿಮ್ಮನ್ನು  ಬಿಟ್ಟರೆ  ಯಾರಿದ್ದಾರೆ?  ಅಂಥಾ  ದೇವರನ್ನು  ಲೋಕಾದಿಯಿಂದ  ಯಾರೂ  ಕಂಡಿಲ್ಲ,  ಅಂಥವರು  ಯಾರ  ಕಿವಿಗೂ  ಬೀಳಲಿಲ್ಲ.  ಯಾವ  ಕಣ್ಣಿಗೂ  ಕಾಣಿಸಲಿಲ್ಲ.  ಸದಾಚಾರದಲ್ಲೇ  ಸಂತೋಷ  ಪಡುತ್ತಾ,  ನಿಮ್ಮ  ಮಾರ್ಗದಲ್ಲಿ  ನಡೆಯುತ್ತಾ  ನಿಮ್ಮನ್ನು  ಸ್ಮರಿಸುತ್ತಾ  ಬಂದವರಿಗೆ  ಪ್ರತ್ಯಕ್ಷರಾಗುತ್ತೀರಿ.  ನಮ್ಮ  ಮೇಲಾದರೋ  ಕೋಪಗೊಂಡಿರಿ.  ಆದರೂ  ನಾವು  ಪಾಪದಲ್ಲೇ  ಮುನ್ನಡೆದೆವು.  ಬಹುಕಾಲದಿಂದ  ಪಾಪದಲ್ಲಿ  ಮುಳುಗಿಹೋದೆವು.  ನಮ್ಮಂಥವರಿಗೆ  ರಕ್ಷಣೆ  ಇದೆಯೇ?  ನಾವೆಲ್ಲರೂ  ಅಶುದ್ದರು,  ನಮ್ಮ  ಸತ್ಕಾರ್ಯಗಳೆಲ್ಲ  ಕೊಳಕು,  ತರಗೆಲೆಯಂತೆ  ಒಣಗಿ  ಹೋಗಿದ್ದೇವೆ.  ಬಿರುಗಾಳಿಯಂತೆ  ನಮ್ಮನ್ನು  ತಳ್ಳಿಕೊಂಡು  ಬಂದಿದೆ,  ನಮ್ಮ  ಅಪರಾಧಗಳು.  ನಿಮ್ಮ  ನಾಮ  ಸ್ಮರಣೆ  ಮಾಡುವವನು  ಯಾರು  ಇಲ್ಲ.  ನಿಮ್ಮ  ಆಶ್ರಯ  ಕೋರುವ  ಆಸಕ್ತನು  ಎಲ್ಲಿಯೂ  ಇಲ್ಲ.  ಏಕೆಂದರೆ  ನೀವು  ನಮಗೆ  ವಿಮುಖರಾಗಿದ್ದೀರಿ.  ನಮ್ಮ  ಪಾಪಗಳ  ವಶಕ್ಕೆ  ನಮ್ಮನ್ನು  ಬಿಟ್ಟುಬಿಟ್ಟಿದ್ದೀರಿ.  ಆದರೂ  ಸ್ವಾಮಿ  ಸರ್ವೇಶ್ವರಾ,  ನೀವು  ನಮ್ಮ  ತಂದೆ,  ನಾವು  ಜೇಡಿಮಣ್ಣು,  ನೀವೇ  ಕುಂಬಾರ;  ನಾವೆಲ್ಲರು  ನಿಮ್ಮ  ಕೈಯ  ಕೃತಿಗಳು.

- ಪ್ರಭುವಿನ  ವಾಕ್ಯ

ಕೀರ್ತನೆ:         80:1-2,14-18

ಶ್ಲೋಕ:  ಓ  ದೇವಾ,  ಪುನರುದ್ದಾರ  ಮಾಡೆಮ್ಮನು|  ಬೆಳಗಲಿ  ನಿನ್ನ  ಮುಖಕಾಂತಿ!  ಪಡೆದೆವು  ರಕ್ಷಣೆಯನು ||

ಕಿವಿಗೊಟ್ಟು  ಆಲಿಸು  ಇಸ್ರಯೇಲಿನ  ಮೇಷಪಾಲನೇ|
ಜೋಸೆಫನ  ವಂಶಜರನ್ನು  ಕುರಿಹಿಂಡಂತೆ  ಕರೆತಂದವನೇ||
ವಿರಾಜಿಸು  ಕೆರುಬೀಯರ  ಮಧ್ಯೆ  ಆಸೀನನಾದವನೇ|
ತೋರ್ಪಡಿಸು  ನಿನ್ನ  ಶೌರ್ಯವನು|
ಬಂದು  ಜಯಪ್ರದನಾಗು  ನಮಗೆ||

ಸರ್ವಶಕ್ತನಾದ  ದೇವಾ,  ಮರಳಿ  ಮುಖ  ತೋರಿಸು|
ಪರದಿಂದೀಕ್ಷಿಸಿ  ಆ  ದ್ರಾಕ್ಷಾಲತೆಯನು  ಪರಾಮರಿಸು||
ಕಾಪಾಡು  ನಿನ್ನ  ಬಲಗೈ  ನೆಟ್ಟು  ಸಾಕಿದ  ಸಸಿಯನು|
ಕಾದಿರಿಸು  ನಿನಗೆಂದೇ  ನೀ  ಬೆಳೆಸಿದಾ  ಬಳ್ಳಿಯನು||

ಕೈಹಿಡಿದು  ಕಾಪಾಡು  ನಿನ್ನ  ಬಲಗೈ  ಉದ್ದರಿಸಿದ  ಪುರುಷನನು|
ನಿನಗೆಂದೇ  ನೀ  ಸಾಕಿ  ಬೆಳೆಸಿದಾ  ವರಪುತ್ರನನು||
ಆಗ  ಬಿಟ್ಟಗಲುವುದಿಲ್ಲ  ನಾವೆಂದೆಂದಿಗು  ನಿನ್ನನು|
ಪುನರ್ಜೀವಗೊಳಿಸು  ಮಾಳ್ಪೆವು  ನಿನ್ನ  ನಾಮಸ್ಮರಣೆಯನು||

ಎರಡನೆಯ  ವಾಚನ : ಪೌಲನು  ಕೊರಿಂಥಿಯರಿಗೆ  ಬರೆದ  ಮೊದಲನೆಯ  ಪತ್ರದಿಂದ  ಇಂದಿನ  ಎರಡನೆಯ  ವಾಚನ 1:3-9



ಸಹೋದರರೇ,  ನಮ್ಮ  ತಂದೆಯಾದ  ದೇವರಿಂದಲೂ  ಪ್ರಭುವಾದ  ಯೇಸುಕ್ರಿಸ್ತರಿಂದಲೂ  ನಿಮಗೆ  ಅನುಗ್ರಹ  ಮತ್ತು  ಶಾಂತಿಸಮಾಧಾನ  ಲಭಿಸಲಿ !  ಕ್ರಿಸ್ತ  ಯೇಸುವಿನಲ್ಲಿ  ನಿಮಗೆ  ಕೊಡಲಾಗಿರುವ  ದೇವಾನುಗ್ರಹದ  ಸಲುವಾಗಿ  ನಾನು  ನಿಮಗೋಸ್ಕರ  ನನ್ನ  ದೇವರಿಗೆ  ಸತತವಾಗಿ  ಕೃತಜ್ಞತೆಯನ್ನು  ಸಲ್ಲಿಸುತ್ತೇನೆ.  ಏಕೆಂದರೆ,  ಕ್ರಿಸ್ತ  ಯೇಸುವಿನಲ್ಲಿ  ನೀವು  ಎಲ್ಲ  ದೃಷ್ಟಿಯಿಂದಲೂ  ಶ್ರೀಮಂತರು,  ಜ್ಞಾನಸಂಪನ್ನರು  ಮತ್ತು  ವಾಕ್ಚತುರರು  ಆಗಿದ್ದೀರಿ.  ಇದಲ್ಲದೇ,  ಕ್ರಿಸ್ತ  ಯೇಸುವನ್ನು  ಕುರಿತ  ಸಾಕ್ಷ್ಯವು  ನಿಮ್ಮಲ್ಲಿ  ನೆಲೆಗೊಂಡಿದೆ.  ಇದರಿಂದಾಗಿ  ನಮ್ಮ  ಪ್ರಭು  ಯೇಸುಕ್ರಿಸ್ತರು  ಪ್ರತ್ಯಕ್ಷವಾಗುವುದನ್ನೇ  ಎದುರುನೋಡುತ್ತಿರುವ  ನಿಮಗೆ  ಯಾವ  ಕೃಪಾರ್ಶಿವಾದಗಳ  ಕೊರೆತೆಯೂ  ಇಲ್ಲ.  ನಮ್ಮ  ಪ್ರಭು  ಯೇಸುಕ್ರಿಸ್ತರ  ದಿನದಂದು  ನಿರ್ದೋಷಿಗಳಾಗಿರುವಂತೆ  ಆ  ದೇವರೇ  ನಿಮ್ಮನ್ನು  ಕಡೆವರೆಗೂ  ಸ್ಥಿರವಾಗಿ  ಕಾಪಾಡುವರು.  ತಮ್ಮ  ಪುತ್ರನೂ  ನಮ್ಮ  ಪ್ರಭುವೂ  ಆದ  ಯೇಸುಕ್ರಿಸ್ತರ  ಅನ್ಯೋನ್ಯತೆಗೆ  ನಿಮ್ಮನ್ನು  ಕರೆದಿರುವ  ದೇವರು  ನಿಜಕ್ಕೂ  ವಿಶ್ವಾಸಪಾತ್ರರು.

- ಪ್ರಭುವಿನ  ವಾಕ್ಯ

ಘೋಷಣೆ                    ಕೀರ್ತನೆ 85:7

ಅಲ್ಲೆಲೂಯ, ಅಲ್ಲೆಲೂಯ!
ತೋರಿಸೆಮಗೆ  ಪ್ರಭು  ಕರುಣೆಯನು | ಅನುಗ್ರಹಿಸೆಮಗೆ  ರಕ್ಷಣೆಯನು||
ಅಲ್ಲೆಲೂಯ!

ಶುಭಸಂದೇಶ : ಮಾರ್ಕನು  ಬರೆದ  ಪವಿತ್ರ  ಶುಭಸಂದೇಶದಿಂದ  ವಾಚನ 13:33-37


ಆ  ಕಾಲದಲ್ಲಿ  ಯೇಸು  ತಮ್ಮ  ಶಿಷ್ಯರಿಗೆ  ಹೀಗೆಂದರು:  "ಆ  ಕಾಲ  ಯಾವಾಗ  ಬರುವುದು  ಎಂದು  ನಿಮಗೆ  ತಿಳಿಯದ್ದರಿಂದ  ಎಚ್ಚರಿಕೆಯಿಂದಿರಿ,  ಜಾಗರೂಕರಾಗಿರಿ.  ಪ್ರವಾಸಕ್ಕೆಂದು  ಯಜಮಾನನೊಬ್ಬನು  ಮನೆಬಿಟ್ಟು  ಹೋಗುವಾಗ  ತನ್ನ  ಸೇವಕರಲ್ಲಿ  ಪ್ರತಿಯೊಬ್ಬನಿಗೆ  ಒಂದೊಂದು  ಜವಾಬ್ಧಾರಿಯನ್ನು  ವಹಿಸಿ,  ದ್ವಾರಪಾಲಕನಿಗೆ  'ನೀನು  ಎಚ್ಚರವಾಗಿರಬೇಕು, ' ಎಂದು  ಅಪ್ಪಣೆಕೊಡುವ  ರೀತಿಯಲ್ಲಿ  ನಾನು  ನಿಮಗೆ  ಹೇಳುತ್ತಿದ್ದೇನೆ.  ಎಚ್ಚರವಾಗಿರಿ;  ಯಜಮಾನನು,  ಸಂಜೆಯಲ್ಲೋ  ಮಧ್ಯರಾತ್ರಿಯಲ್ಲೋ  ಕೋಳಿಕೂಗುವಾಗಲೋ  ಬೆಳಕುಹರಿಯುವಾಗಲೋ,  ಯಾವಾಗ  ಬರುವನೆಂಬುದು  ನಿಮಗೆ  ತಿಳಿಯದು.  ಅನಿರೀಕ್ಷಿತವಾಗಿ  ಅವನು  ಬಂದಾಗ  ನೀವು  ನಿದ್ರಿಸುತ್ತಿರುವುದನ್ನು  ಕಂಡಾನು !  ನಿಮಗೆ  ಹೇಳುವುದನ್ನೇ  ಸರ್ವರಿಗೂ  ಹೇಳುತ್ತೇನೆ;  ಎಚ್ಚರಿಕೆಯಿಂದಿರಿ ! " ಎಂದರು.

ಪ್ರಭುಕ್ರಿಸ್ತರ  ಶುಭಸಂದೇಶ