19.10.23 - "ನೀವು ಒಳಕ್ಕೆ ಪ್ರವೇಶಿಸುವುದಿಲ್ಲ; ಪ್ರವೇಶಿಸಲು ಯತ್ನಿಸುವವರನ್ನೂ ತಡೆಗಟ್ಟುತ್ತೀರಿ"

 ಮೊದಲನೇ ವಾಚನ: ರೋಮನರಿಗೆ 3:21-30

ಸಹೋದರರೇ, ಈಗಲಾದರೋ ಧರ್ಮಶಾಸ್ತ್ರದ ನೆರವಿಲ್ಲದೆಯೇ ದೇವರಿಂದ ದೊರಕುವ ಸತ್ಸಂಬಂಧವು ಪ್ರಕಟವಾಗಿದೆ. ಇದಕ್ಕೆ ಧರ್ಮಶಾಸ್ತ್ರವೂ ಪ್ರವಾದನಾಗ್ರಂಥವೂ ಸಾಕ್ಷಿಯಾಗಿವೆ. ಯೇಸುಕ್ರಿಸ್ತರಲ್ಲಿ ವಿಶ್ವಾಸವಿಡುವುದರ ಮೂಲಕವೇ ವಿಶ್ವಾಸಿಗಳೆಲ್ಲರನ್ನೂ ದೇವರು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ ಇದರಲ್ಲಿ ಯಾವ ತಾರತಮ್ಯವನ್ನು ಮಾಡುವುದಿಲ್ಲ. ಮಾನವರೆಲ್ಲರೂ ಪಾಪಿಗಳೇ, ಎಲ್ಲರೂ ದೇವದತ್ತ ಮಹಿಮೆಯನ್ನು ಕಳೆದುಕೊಂಡವರೇ. ಆದರೆ ದೇವರು ಯೇಸುಕ್ರಿಸ್ತರ ಮುಖಾಂತರ ಅವರಿಗೆ ಪಾಪವಿಮೋಚನೆಯನ್ನು ದಯಪಾಲಿಸಿ, ತಮ್ಮ ಉಚಿತಾರ್ಥ ಅನುಗ್ರಹದಿಂದ ಅವರನ್ನು ತಮ್ಮ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ ಪೂರ್ವಕಾಲದಲ್ಲಿ ಮಾನವರ ಪಾಪವನ್ನು ದಂಡಿಸದೆ ತಾಳ್ಮೆಯಿಂದಿದ್ದ ದೇವರು, ವಿಶ್ವಾಸವುಳ್ಳವರಿಗೆ ಪಾಪಕ್ಷಮೆಯನ್ನು ತರುವ ಸಲುವಾಗಿ ಯೇಸುಕ್ರಿಸ್ತರು ರಕ್ತಧಾರೆ ಎರೆಯುವಂತೆ ಮಾಡಿದರು. ತಾವು ನೀತಿಸ್ವರೂಪರೆಂದು ತೋರಿಸುವುದಕ್ಕಾಗಿ ಹೀಗೆ ಮಾಡಿದರು. ಯೇಸುಕ್ರಿಸ್ತರಲ್ಲಿ ವಿಶ್ವಾಸ ಇಡುವವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುವುದಕ್ಕಾಗಿಯೂ ತಾವು ಸತ್ಯಸ್ವರೂಪರು ಮತ್ತು ನ್ಯಾಯವಂತರು ಎಂದು ವ್ಯಕ್ತಪಡಿಸುವ ಸಲುವಾಗಿಯೂ ಪ್ರಸ್ತುತ ಕಾಲದಲ್ಲಿ ದೇವರು ಈ ರೀತಿ ಮಾಡಿದರು. ಹೀಗಿರುವಲ್ಲಿ ಮಾನವನು ಕೊಚ್ಚಿಕೊಳ್ಳುವುದಕ್ಕೆ ಆಸ್ಪದವಿದೆಯೇ? ಇಲ್ಲವೇ ಇಲ್ಲ. ಹಾಗಾದರೆ ಸತ್ಸಂಬಂಧಕ್ಕೆ ಆಧಾರವೇನು? ಸತ್ಕಾರ್ಯಗಳ  ಸಾಧನೆಯೇ? ಇಲ್ಲ. ವಿಶ್ವಾಸವೇ? ಹೌದು. ಮಾನವರಿಗೆ ದೇವರೊಡನೆ ಸತ್ಸಂಬಂಧ ದೊರಕುವುದು ಧರ್ಮಶಾಸ್ತ್ರಗಳ ನೇಮನಿಯಮಗಳನ್ನು ಪಾಲಿಸುವುದರಿಂದ ಅಲ್ಲ, ವಿಶ್ವಾಸದಿಂದಲೇ ಎಂಬುದು ನಮ್ಮ ಸಿದ್ಧಾಂತ. ದೇವರು ಕೇವಲ ಯೆಹೂದ್ಯರಿಗೆ ಮಾತ್ರ ದೇವರೋ ಅಥವಾ ಇತರರಿಗೂ ದೇವರೋ? ಹೌದು, ಇತರರಿಗೂ ದೇವರೆ. ಯೆಹೂದ್ಯರನ್ನು ಅವರ ವಿಶ್ವಾಸದ ಆಧಾರದ ಮೇಲೂ ಇತರರನ್ನು ಅವರ ವಿಶ್ವಾಸದ ಮೂಲಕವೂ ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುವ ದೇವರು ಒಬ್ಬರೇ.

ಕೀರ್ತನೆ: 130: 1-2, 3-4, 5-6
ಶ್ಲೋಕ: ಪ್ರಭುವಿನಲ್ಲಿದೆ ಕರುಣೆ, ಪೂರ್ಣ ವಿಮೋಚನೆ

ಶುಭಸಂದೇಶ: ಲೂಕ 11:47-54

ಯೇಸು ಧರ್ಮಶಾಸ್ತ್ರಜ್ಞರನ್ನುದ್ದೇಶಿಸಿ ಹೀಗೆಂದರು. "ಶಾಸ್ತ್ರಜ್ಞರೇ, ನಿಮಗೆ ಧಿಕ್ಕಾರ! ನಿಮ್ಮ ಪಿತೃಗಳು ಕೊಂದು ಹಾಕಿದ ಪ್ರವಾದಿಗಳಿಗೆ ನೀವು ಅಂದದ ಗೋರಿಗಳನ್ನು ನಿರ್ಮಿಸುತ್ತೀರಿ. ನಿಮ್ಮ ಪಿತೃಗಳ ಕೃತ್ಯಗಳನ್ನು ನೀವು ಅನುಮೋದಿಸುತ್ತೀರಿ ಎಂಬುದಕ್ಕೆ ಇದೇ ಸಾಕ್ಷಿ. ಏಕೆಂದರೆ, ಪ್ರವಾದಿಗಳನ್ನು ಕೊಂದವರು ಅವರಾದರೆ, ಗೋರಿ ನಿರ್ಮಿಸುತ್ತಿರುವವರು ನೀವು. ಈ ಕಾರಣದಿಂದಲೇ ದೇವರ ಜ್ಞಾನವು ಹೇಳುವುದೇನೆಂದರೆ - ನಾನು ಅವರ ಬಳಿಗೆ ಪ್ರವಾದಿಗಳನ್ನೂ ಪ್ರೇಷಿತರನ್ನೂ ಕಳುಹಿಸುವೆನು; ಅವರಲ್ಲಿ ಕೆಲವರನ್ನು ಕೊಲೆಮಾಡುವರು: ಕೆಲವರನ್ನು ಚಿತ್ರಹಿಂಸೆ ಪಡಿಸುವರು. ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಅಂದರೆ, ಹೇಬೆಲನ ರಕ್ತ ಮೊದಲ್ಗೊಂಡು, ಬಲಿಪೀಠಕ್ಕೂ ದೇವಾಲಯಕ್ಕೂ ನಡುವೆ ಹತನಾದ ಜಕರೀಯನ ರಕ್ತದವರೆಗೂ ಈ ಪೀಳಿಗೆಯವರು ಲೆಕ್ಕಕೊಡಬೇಕಾಗುವುದು. ಹೌದು, ಈ ಪೀಳಿಗೆಯವರೇ ಲೆಕ್ಕಕೊಡ ಬೇಕಾಗುವುದೆಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಧರ್ಮಶಾಸ್ತ್ರಜ್ಞರೇ, ನಿಮಗೆ ಧಿಕ್ಕಾರ! ಜ್ಞಾನವೆಂಬ ಮಂದಿರದ ಬೀಗದ ಕೈಯನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ನೀವು ಒಳಕ್ಕೆ ಪ್ರವೇಶಿಸುವುದಿಲ್ಲ; ಪ್ರವೇಶಿಸಲು ಯತ್ನಿಸುವವರನ್ನೂ ತಡೆಗಟ್ಟುತ್ತೀರಿ,  ಎಂದರು. ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಅವರನ್ನು ಉಗ್ರವಾಗಿ ಪ್ರತಿಭಟಿಸಲಾರಂಭಿಸಿದರು. ಹಲವಾರು ವಿಷಯಗಳನ್ನು ಕುರಿತು ಮಾತಾಡುವಂತೆ ಕೆಣಕಿ, ಅವರ ಮಾತಿನಲ್ಲಿ ಏನಾದರು ತಪ್ಪು ಕಂಡು ಹಿಡಿಯಲೇಬೇಕೆಂದು ಹೊಂಚುಹಾಕುತ್ತಿದ್ದರು.

18.10.23

ಮೊದಲನೆಯ ವಾಚನ: 2 ತಿಮೋಥೆಯ 4:10-17

ದೇಮನು ಇಹಲೋಕದ ಆಶಾಪಾಶಗಳಿಗೆ ಒಳಗಾಗಿ ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋಗಿದ್ದಾರೆ. ಲೂಕನು ಮಾತ್ರ ನನ್ನ ಜೊತೆಯಿದ್ದಾನೆ. ನೀನು ಬರುವಾಗ ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ. ಅವನ ಸೇವೆ ನನಗೆ ಅಗತ್ಯವಾಗಿದೆ. ತುಖಿಕನನ್ನು ನಾನು ಎಫೆಸಕ್ಕೆ ಕಳುಹಿಸಿದ್ದೇನೆ. ನೀನು ಬರುವಾಗ ತ್ರೋವದಲ್ಲಿ ನಾನು ಕರ್ಪನ ಬಳಿ ಬಿಟ್ಟುಬಂದ ನನ್ನ ಮೇಲಂಗಿಯನ್ನು ತೆಗೆದುಕೊಂಡು ಬಾ. ನನ್ನ ಕೆಲವು ಪುಸ್ತಕಗಳನ್ನೂ ಮುಖ್ಯವಾಗಿ ಚರ್ಮದ ಸುರುಳಿಗಳನ್ನೂ ತಪ್ಪದೆ ತೆಗೆದುಕೊಂಡು ಬಾ. ಕಂಚುಗಾರನಾದ ಅಲೆಗ್ಸಾಂಡರನು ನನಗೆ ಬಹಳ ಕೇಡುಮಾಡಿದ್ದಾನೆ. ಪ್ರಭು ಅವನ ಕೃತ್ಯಗಳಿಗೆ ತಕ್ಕ ಶಿಕ್ಷೆಯನ್ನು ವಿಧಿಸುವರು. ನೀನು ಅವನ ವಿಷಯದಲ್ಲಿ ಎಚ್ಚರಿಕೆಯಿಂದಿರು. ನಮ್ಮ ಬೋಧನೆಗೆ ಅವನು ಕಟುವಾದ ವಿರೋಧಿಯಾಗಿದ್ದಾನೆ. ನಾನು ಮೊದಲನೆಯ ಸಾರಿ ವಿಚಾರಣೆಗೆ ಒಳಗಾಗಿ ಪ್ರತಿವಾದಿಸುತ್ತಿದ್ದಾಗ ಯಾರೂ ನನ್ನ ಪರವಾಗಿ ನಿಲ್ಲಲಿಲ್ಲ. ಎಲ್ಲರೂ ನನ್ನನ್ನು ಕೈಬಿಟ್ಟರು. ದೇವರು ಅವರನ್ನು ಕ್ಷಮಿಸಲಿ. ಆದರೆ ಪ್ರಭು ನನಗೆ ಬೆಂಬಲವಾಗಿ ನಿಂತರು. ನಾನು ಶುಭಸಂದೇಶವನ್ನು ಸಂಪೂರ್ಣವಾಗಿ ಸಾರುವಂತೆಯೂ ಅನ್ಯಧರ್ಮಿಯರೆಲ್ಲರು ಅದನ್ನು ಕೇಳುವಂತೆಯೂ ಮಾಡಿದರು.

ಕೀರ್ತನೆ 145:11, 12-13, 17-18
ಶ್ಲೋಕ: ಪ್ರಭೂ, ನಿನ್ನ ಭಕ್ತಸಮೂಹವು ಪ್ರಸಿದ್ಧಪಡಿಸುವುದು, ನಿನ್ನ ರಾಜ್ಯದ ಮಹತ್ವವನು.

ಪ್ರಭೂ, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು|
ಕೊಂಡಾಡುವುದು ನಿನ್ನನು ಭಕ್ತಸಮೂಹವು||
ಪ್ರಸಿದ್ದಪಡಿಸುವರು ನಿನ್ನ ರಾಜ್ಯದ ಮಹತ್ವವನು|
ವರ್ಣಿಸುವರವರು ನಿನ್ನ ಶಕ್ತಿ ಸಾಮರ್ಥ್ಯವನು||

ಅರಿವರಿಂತು ಜನರು ನಿನ್ನ ಶೂರ ಕಾರ್ಯಗಳನು|
ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು||
ಶಾಶ್ವತವಾದುದು ನಿನ್ನ ರಾಜ್ಯವು|
ಇರುವುದೆಂದಿಗು ನಿನ್ನ ಆಳ್ವಿಕೆಯು||

ನುಡಿಯಲಿ ಪ್ರಭು ಸದಾ ಪ್ರಮಾಣಿಕನು|
ನಡೆಯಲಿ ಆತನು ಸದಾ ಪ್ರೀತಿಮಯನು||
ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ|
ಯಥಾರ್ಥವಾಗಿ ಆತನನು ಅರಸುವವರಿಗೆ||

ಶುಭಸಂದೇಶ: ಲೂಕ 10:1-9


ಆ ಕಾಲದಲ್ಲಿ ಯೇಸು ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರನ್ನಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, " ಬೆಳೆಯೇನೋ ಹೇರಳವಾಗಿದೆ, ಕೊಯ್ಲುಗಾರರೋ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, ' ಮನೆಗೆ ಶಾಂತಿ, ' ಎಂದು ಆಶೀರ್ವಾದ ಮಾಡಿ, ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು. ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. ' ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ, ' ಎಂದು ತಿಳಿಸಿರಿ.

18.10.23 - ಸಂತ ಸ್ಮರಣೆ - ಸಂತ ಲೂಕ - St. Luke


ಹೊಸ ಒಡಂಬಡಿಕೆಯ  ಬಹುದೊಡ್ಡ ಭಾಗವನ್ನು ಬರೆದವನು ಸಂತ ಲೂಕ. "ನಮ್ಮ ಪ್ರಿಯ ವೈದ್ಯನಾದ ಲೂಕ ಎಂಬ ಸಂತ ಪೌಲನ ಮಾತಿನ ಮೂಲಕ ಲೂಕನ ಪರಿಚಯವಾಗುತ್ತದೆ.

(ಕೊಲೊಸ್ಸೆ 04:14). ಲೂಕ ಗ್ರೀಕ್ ಮೂಲದವ, ಅನ್ಯಮತಸ್ಥನಾಗಿದ್ದ ಎನ್ನಲಾಗಿದೆ. ಅಂತಿಯೋಕ್ಯ ಅವನ ಜನ್ಮಸ್ಥಳ ಎಂದೂ ಹೇಳಲಾಗಿದೆ.  ಸಂತ ಪೌಲ ತನ್ನ ಎರಡನೇ ಧರ್ಮಪ್ರಸಾರ ಪ್ರಯಾಣದಲ್ಲಿ ಅನಾರೋಗ್ಯದ ಸಂದರ್ಭದಲ್ಲಿ ಈ ವೈದ್ಯನನ್ನು ಬೇಟಿಯಾದ. ಈ ಬೇಟಿಯ ನಂತರ  ಲೂಕನನ್ನು 51ರಲ್ಲಿ ಟ್ರೊವಾಸ್ ಎಂಬ ಸ್ಥಳದಲ್ಲಿ ಕ್ರೈಸ್ತಧರ್ಮಕ್ಕೆ ಮಾನಸಾಂತ ರಿಸಿದ ಎಂಬ ನಂಬಿಕೆಯಿದೆ.

ಪ್ರೇಷಿತರ ಕಾರ್ಯಕಲಾಪಗಳಲ್ಲಿ ಉಲ್ಲೇಖವಾಗಿರುವ ಪೌಲನ ಎರಡನೇ ಧರ್ಮಪ್ರಸಾರ ಪ್ರಯಾಣದಲ್ಲಿ ಲೂಕನು ಅವನನ್ನು ಭೇಟಿಯಾಗಿ ಅವರೊಂದಿಗೆ ಫಿಲಿಪ್ಪಿಯಲ್ಲಿ ಕೆಲವು ವರ್ಷ ಇರುತ್ತಾನೆ. ಪೌಲ ಮೂರನೇ ಧರ್ಮಪ್ರಸಾರ ಪ್ರಯಾಣ ಆರಂಭಿಸಿದಾಗ ಅವರೊಂದಿಗೆ ಜೆರುಸಲೇಮಿಗೆ ಬಂದು ಸೆಜರೀಯದಲ್ಲಿ ಪೌಲ್ ಬಂಧನ ಕ್ಕೊಳಗಾದಾಗ ಅವನೊಂದಿಗೆ ಇರುತ್ತಾನೆ. ಈ ಎರಡು ವರ್ಷಗಳ ಕಾಲದಲ್ಲಿ, ಯೇಸುವನ್ನು ಕಂಡಿದ್ದ, ಅವರೊಂದಿಗೆ ಒಡನಾಡಿದ್ದ ಜನರನ್ನು ಕಂಡು, ಅವರನ್ನು ಸಂದರ್ಶಿಸಿ ಏಸುವಿನ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿರಬೇಕು. ಪೌಲ್ ರೋಮ್ ಗೆ ಬೆಳೆಸಿದ ಅಪಾಯಕಾರಿ ಪ್ರಯಾಣದಲ್ಲೂ ಲೂಕ ಅವನೊಂದಿಗೆ ಇರುತ್ತಾನೆ. ಕ್ರಿ.ಶ. 61 ರಲ್ಲಿ ಪೌಲ ರೋಮ್ನಲ್ಲಿ ಬಂಧಿತನಾದಾಗಲೂ ಎಲ್ಲರೂ ಪೌಲನನ್ನು ತೊರೆದಾಗ ಲೂಕ ಮಾತ್ರ ಅವನನ್ನು ಬಿಟ್ಟು ಹೋಗುವುದಿಲ್ಲ. "ಲೂಕ ಮಾತ್ರ ನನ್ನ ಜೊತೆಯಿದ್ದಾನೆ ಎಂದು ಪೌಲನೇ ಹೇಳುತ್ತಾನೆ" ಎಂದು ಪೌಲನೇ ಹೇಳುತ್ತಾನೆ. (2ತಿಮೋಥಿ4:11).

 ಲೂಕ ಅನ್ಯಮತಸ್ಥನಾಗಿದ್ದರಿಂದಲೋ ಏನೋ ಅನ್ಯಜನರೊಂದಿಗೆ ದುಡಿದು ಪೌಲನನ್ನು ಸೇರಿಕೊಂಡಿರಬೇಕು. ತನ್ನ ಶುಭಸಂದೇಶವನ್ನು ಅನ್ಯಜನರಿಗೆ ಗ್ರೀಕ್ ಭಾಷೆಯಲ್ಲಿ ಉತ್ತಮ ಶೈಲಿ ಮತ್ತು ನಾಜೂಕಾದ ರೀತಿಯಲ್ಲಿ ಬರೆಯುತ್ತಾರೆ. ಈತ ಪೌಲನಿಂದ ಎಷ್ಟು ಪ್ರಭಾವಗೊಂಡಿದ್ದ ಎಂದರೆ ಸಂತ ಜೆರೋಂ ಮತ್ತು ಜಾನ್ ಕ್ರಿಸಾಸ್ಟಮ್ ಲೂಕನ ಶುಭ ಸಂದೇಶವನ್ನು 'ಸಂತ ಪೌಲರ ಶುಭ ಸಂದೇಶ' ಎಂದು ಕರೆಯುತ್ತಾರೆ.

ಲೂಕ ಶುಭ ಸಂದೇಶ ಬರೆಯುವಷ್ಟರಲ್ಲಿ ಮತ್ತಾಯ ಮತ್ತು ಮಾರ್ಕನ ಶುಭಸಂದೇಶ ಈಗಾಗಲೇ ಚಾಲ್ತಿಯಲ್ಲಿತ್ತು. ಹಲವು ಜನರ ಅನುಭವ, ಮಾತೆ ಮೇರಿಯದೇ ಅನುಭವ ಈ ಶುಭಸಂದೇಶದಲ್ಲಿದೆ ಎನ್ನಲಾಗಿದೆ. ಸಂತ ಲೂಕ ಮಾತೆ ಮೇರಿಯ ಭಾವಚಿತ್ರ ಚಿತ್ರಸಿದ್ದ ಎಂಬ ಪ್ರತೀತಿಯೂ ಇದೆ. ಲೂಕನ ಈ ವಿಶಿಷ್ಟ ಬರವಣಿಗೆ ಮತ್ತು ಅನುಭವವನ್ನು ಅವನ ಶುಭಸಂದೇಶದಲ್ಲಿಯೇ ಕಾಣಬಹುದು‌.

ಲೂಕನ ಶುಭ ಸಂದೇಶದಲ್ಲಿ ಹೆಚ್ಚುವರಿಯಾಗಿ ಆರು ಪವಾಡಗಳು ಮತ್ತು 15 ಸಾಮತಿಗಳ ಉಲ್ಲೇಖವಿದೆ. ಬಡವರು ಮತ್ತು ಸಾಮಾಜಿಕ ಕಾಳಜಿ ಯಿರುವ ಲೂಕನಲ್ಲಿ ಲಾಜರ್ ಮತ್ತು ಶ್ರೀಮಂತನ ಕಥೆ ಬರುತ್ತದೆ. ದೇವ ಮಾತೆಯ ಸಾಮಾಜಿಕ ನ್ಯಾಯದ 'ಸ್ತುತಿಗೀತೆ' ಬರುತ್ತದೆ. ಲೂಕ ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ಇದ್ದುದ್ದರಿಂದ ಮಾತೆಮೇರಿ,ಎಲಿಜಬೆತ್

ಇವರ ಉಲ್ಲೇಖವಿದೆ. 'ನಮೋ ಮರಿಯಾ ವರಪ್ರಸಾದ ಪೂರ್ಣೆ' ಎಂಬ ಘೋಷಣೆ ಇದೆ. ದೇವರ ಕ್ಷಮೆ ಮತ್ತು ಪ್ರೀತಿಯ ಬಗ್ಗೆ ಲೂಕನದು ಅಪಾರ ನಂಬಿಕೆ. ಇಲ್ಲಿ ದುಂದುಗಾರ ಮಗನ ಬಗ್ಗೆ ಬರುತ್ತದೆ. ಸಿಮೋನ್ ಮನೆಯಲ್ಲಿ ಯೇಸುವಿನ ಪಾದ ಅಂಭ್ಯಂಜಿಸಿದ ಮಹಿಳೆಯ ಬಗ್ಗೆ ಬರೆಯುತ್ತಾರೆ.

 ಲೂಕನ ಮರಣದ ಬಗ್ಗೆ ನಮಗೆ ಸಾಕಷ್ಟು ಮಾಹಿತಿ ಇಲ್ಲ. ಪೌಲನು ಸಾವಿನ ನಂತರ ಲೂಕ ಏನು ಮಾಡಿದ, ಎಲ್ಲಿದ್ದ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಕೆಲವು ಬರಹಗಾರರು, ಲೂಕ  ಕೂಡ ರಕ್ತಸಾಕ್ಷಿಯಾದ ಎಂದರೆ, ಇನ್ನೂ ಕೆಲವರು ಆತ ಗ್ರೀಸ್ ನಲ್ಲಿ ಗಾ ಪ್ರದೇಶದಲ್ಲಿ ಬೋಧಿಸಿದ ಎನ್ನುತ್ತಾರೆ. ಮೊದಲ ಪರಂಪರೆಯ ಪ್ರಕಾರ ಲೂಕ ಗ್ರೀಸ್ ನಲ್ಲಿದ್ದು ತನ್ನ ಶುಭಸಂದೇಶ ಬರೆದ ನಂತರ 84ರಲ್ಲಿ ತೀರಿಕೊಂಡ. ಇನ್ನೊಂದು ಪರಂಪರೆಯ ಪ್ರಕಾರ ಲೂಕ ಡಾಲ್ ಮೇಷಿಯಾದಲ್ಲಿ (ಯುಗೋಸ್ಲಾವಿಯಾ) ಬೋಧನೆ ಮಾಡಿದ ನಂತರ ಗ್ರೀಸ್ನಲ್ಲಿ ರಕ್ತ ಸಾಕ್ಷಿಯಾದ. ಅವನ ಅವಶೇಷಗಳನ್ನು 360ರಲ್ಲಿ ಕಾನ್ಸ್ಟಾಂಟಿನೋಪಲ್ ಗೆ ತರಲಾಯಿತು.

 ಲೂಕನ ಚಿತ್ರ ಒಂದು ಎತ್ತು ಮತ್ತು ಕರುವಿನ ಜೊತೆಗೂಡಿ ಇರುತ್ತದೆ. ಕ್ರಿಸ್ತ ಬಲಿಯರ್ಪಣೆಯಾದ ಸಂಕೇತವಿದು. ಲೂಕ ವೈದ್ಯರುಗಳ ಪಾಲಕ.

17.10.23

 ಮೊದಲನೇ ವಾಚನ: ರೋಮನರಿಗೆ  1:16-25

ಶುಭಸಂದೇಶದ ವಿಷಯದಲ್ಲಿ ನಾನು ನಾಚಿಕೆಪಡುವವನೇ ಅಲ್ಲ. ಯೆಹೂದ್ಯರನ್ನು ಮೊದಲ್ಗೊಂಡು ಇತರರಿಗೂ  ವಿಶ್ವಾಸಿಸುವ ಪ್ರತಿಯೊಬ್ಬನಿಗೂ ಈ ಶುಭಸಂದೇಶವು ಜೀವೋದ್ಧಾರವನ್ನು ತರುವ ದೇವರ ಶಕ್ತಿಯಾಗಿದೆ. ದೇವರು ಮಾನವನನ್ನು ಹೇಗೆ ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ ಎಂಬುದನ್ನು ಶುಭಸಂದೇಶವು ಪ್ರಕಟಿಸುತ್ತದೆ. ಇಂಥ ಸಂಬಂಧವು ಆದಿಯಿಂದ ಅಂತ್ಯದವರೆಗೂ ವಿಶ್ವಾಸದಿಂದ ಮಾತ್ರ ಸಾಧ್ಯ. "ಯಾರು ದೇವರೊಡನೆ ಸತ್ಸಂಬಂಧ ಹೊಂದಿರುತ್ತಾರೋ ಅವರು ವಿಶ್ವಾಸದಿಂದಲೇ ಸಜ್ಜೀವವನ್ನು ಪಡೆಯುತ್ತಾರೆ" ಎಂದು ಪವಿತ್ರ ಗ್ರಂಥದಲ್ಲಿ ಲಿಖಿತವಾಗಿದೆ. ಮಾನವರ ಎಲ್ಲಾ ಪಾಪಕ್ರಮಗಳ ಮೇಲೆ ದೇವರ ಕೋಪಾಗ್ನಿ ಸ್ವರ್ಗದಿಂದ ಎರಗುವುದೆಂದು ಪ್ರಕಟವಾಗುತ್ತಿದೆ. ಏಕೆಂದರೆ, ಅವರ ಅಕ್ರಮ ನಡತೆ ಸತ್ಯವನ್ನು ಅಡಗಿಸುತ್ತಿದೆ. ದೇವರ ವಿಷಯವಾಗಿ ಮಾನವರು ಏನನ್ನು ಅರಿತುಕೊಳ್ಳಲು ಸಾಧ್ಯವೋ ಅದು ಅವರಿಗೆ ಚೆನ್ನಾಗಿ ತಿಳಿದಿದೆ. ದೇವರೇ ಅದನ್ನು ಅವರಿಗೆ ಸ್ಪಷ್ಟಪಡಿಸಿದ್ದಾರೆ. ದೇವರು ಲೋಕವನ್ನು ಸೃಷ್ಟಿಸಿದಂದಿನಿಂದ ಅವರ ಅಗೋಚರ ಗುಣಲಕ್ಷಣಗಳು, ಅವರ ಅನಂತ ಶಕ್ತಿ ಮತ್ತು ದೈವಸ್ವಭಾವ ಮನುಷ್ಯರಿಗೆ ಸೃಷ್ಟಿಗಳ ಮೂಲಕವೇ ವೇದ್ಯವಾಗುತ್ತಿವೆ. ಆದುದರಿಂದ ಮಾನವರು ತಮ್ಮ ಅಜ್ಞಾನಕ್ಕೆ ಯಾವ ನೆಪವನ್ನು ಒಡ್ಡಲೂ ಸಾಧ್ಯವಿಲ್ಲ. ದೇವರನ್ನು ಅವರು ಅರಿತಿದ್ದರೂ ದೇವರೆಂದು ಗೌರವಿಸಲಿಲ್ಲ;   ದೇವರಿಗೆ ಉಪಕಾರ ಸ್ಮರಣೆಯನ್ನು ಮಾಡಲಿಲ್ಲ. ಬದಲಾಗಿ ಅವರು ವ್ಯರ್ಥ ಆಲೋಚನೆಗಳಲ್ಲಿ ಮಗ್ನರಾದರು. ಅವರ ವಿವೇಕರಹಿತ ಮನಸ್ಸು ಅಂಧಕಾರಮಯವಾಯಿತು. ತಾವೇ ಜ್ಞಾನಿಗಳೆಂದು ಕೊಚ್ಚಿಕೊಳ್ಳುತ್ತ ಅವರು ನಿಜವಾಗಿಯೂ ಮೂರ್ಖರಾದರು. ಅಮರ ದೇವರನ್ನು ಆರಾಧಿಸುವುದನ್ನು ಬಿಟ್ಟು ಅಳಿದುಹೋಗುವಂಥ ನರಮಾನವರ ಪ್ರಾಣಿಪಕ್ಷಿಗಳ, ಸರ್ಪಾದಿಗಳ ವಿಗ್ರಹಗಳನ್ನು ಮಾಡಿ ಆರಾಧಿಸತೊಡಗಿದರು. ಆದುದರಿಂದ, ಮಾನವರು ಮನಸ್ಸಿನ ಆಶಾಪಾಶಾಗಳಿಗೆ ಬಲಿಯಾಗಿ ತಮ್ಮ ದೇಹಗಳಿಂದ, ತಮ್ಮತಮ್ಮಲ್ಲೇ ಅಶ್ಲೀಲ ಕೃತ್ಯಗಳೆಸಗಲೆಂದು ದೇವರು ಅವರನ್ನು ಅಶುದ್ಧ ನಡತೆಗೆ ಬಿಟ್ಟುಬಿಟ್ಟರು. ಅವರು ದೇವರ ಸತ್ಯವನ್ನು ಬಿಟ್ಟು ಆಸತ್ಯವಾದುದನ್ನು ಅಂಗೀಕರಿಸಿದರು; ಸೃಷ್ಟಿಕರ್ತನನ್ನು ಆರಾಧಿಸದೆ, ಸೃಷ್ಟಿಯಾದ ವಸ್ತುಗಳನ್ಯೇ ಆರಾಧಿಸಿ, ಸೇವೆ ಸಲ್ಲಿಸಿದರು. ಸರ್ವಕಾಲಕ್ಕೂ ಸೃಷ್ಟಿಕರ್ತರೊಬ್ಬರಿಗೇ ಸ್ತುತಿಸ್ತೋತ್ರ ಸಲ್ಲತಕ್ಕದ್ದು, ಆಮೆನ್.

ಕೀರ್ತನೆ: 19:2-3, 4-5
ಶ್ಲೋಕ: ಆಕಾಶಮಂಡಲ ಸಾರುತಿದೆ ದೇವರ ಮಹಿಮೆಯನು

ಶುಭಸಂದೇಶ: ಲೂಕ 11:37-41

ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಗಿಸಿದಾಗ, ಫರಿಸಾಯನೊಬ್ಬನು ಅವರನ್ನು ಊಟಕ್ಕೆ ಆಮಂತ್ರಿಸಿದನು. ಯೇಸು ಒಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡರು. ಊಟಕ್ಕೆ ಮುಂಚೆ ಅವರು ಕೈ ತೊಳೆಯದೆ ಹೋದುದನ್ನು ಕಂಡು ಫರಿಸಾಯನು ಚಕಿತನಾದನು. ಆಗ ಯೇಸು, "ಫರಿಸಾಯರಾದ ನೀವು ಲೋಟ ಹಾಗೂ ಊಟದ ತಟ್ಟೆಗಳ ಹೊರಭಾಗವನ್ನು ಶುಚಿ ಮಾಡುತ್ತೀರಿ; ಆದರೆ ನಿಮ್ಮ ಒಳಭಾಗವು ಲೋಭದಿಂದಲೂ ಕೆಡುಕಿನಿಂದಲೂ ತುಂಬಿದೆ. ಮೂರ್ಖರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನು ಮಾಡಲಿಲ್ಲವೇ? ನಿಮ್ಮ ತಟ್ಟೆ ಲೋಟಗಳಲ್ಲಿ ಇರುವುದನ್ನು ಮೊಟ್ಟಮೊದಲು ದಾನಮಾಡಿರಿ. ಆಗ ಸಮಸ್ತವೂ ನಿಮಗೆ ಶುದ್ಧಿಯಾಗಿರುವುದು.

16.10.23 - "ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ"

 ಮೊದಲನೇ ವಾಚನ: ರೋಮನರಿಗೆ  1:1-7


ದೇವರಿಗೆ ಅತ್ಯಂತ ಪ್ರಿಯರು ಹಾಗು ದೇವಜನರಾಗಲು ಕರೆಹೊಂದಿದವರಾದ ರೋಮ್ ನಗರ ನಿವಾಸಿಗಳೆಲ್ಲರಿಗೆ: ಕ್ರಿಸ್ತ ಯೇಸುವಿನ ದಾಸನೂ ಪ್ರೇಷಿತನಾಗಲು ಕರೆಹೊಂದಿದವನೂ ದೇವರ ಶುಭಸಂದೇಶವನ್ನು ಸಾರಲು ನೇಮಕಗೊಂಡವನೂ ಆದ ಪೌಲನು ಬರೆಯುವ ಪತ್ರ; ನಮ್ಮ ತಂದೆಯಾದ ದೇವರು ಹಾಗು ಪ್ರಭುವಾದ ಯೇಸುಕ್ರಿಸ್ತರು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅನುಗ್ರಹಿಸಲಿ. ದೇವರು ತಮ್ಮ ಶುಭಸಂದೇಶವನ್ನು ನೀಡುವುದಾಗಿ ಪ್ರವಾದಿಗಳ ಮುಖಾಂತರ ಮುಂಚಿತವಾಗಿಯೇ ಪವಿತ್ರಗ್ರಂಥದಲ್ಲಿ ವಾಗ್ದಾನಮಾಡಿದರು. ಈ ಸಂದೇಶ ದೇವರ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರನ್ನು ಕುರಿತಾದುದು. ಮನುಷ್ಯತ್ವದ ಮಟ್ಟಿಗೆ ಯೇಸು ದಾವೀದನ ವಂಶಜರು; ದೈವಿಕ ಪರಿಶುದ್ಧತೆಯ ಮಟ್ಟಿಗೆ ಇವರು ದೇವರ ಶಕ್ತಿಯನ್ನು ವ್ಯಕ್ತಪಡಿಸುವ ದೇವರ ಪುತ್ರ. ಸತ್ತು ಪುನರುತ್ಥಾನ ಹೊಂದಿ ಇದನ್ನು ಖಚಿತಪಡಿಸಿದವರು. ಇವರ ನಾಮ ಮಹಿಮೆಗೋಸ್ಕರವಾಗಿಯೇ ಸರ್ವಜನಾಂಗಗಳೂ ಇವರನ್ನು ವಿಶ್ವಾಸಿಸಿ, ವಿಧೇಯರಾಗಿ ನಡೆಯುವಂತೆ ಮಾಡಲು ಪ್ರೇಷಿತನಾಗುವ ಸೌಭಾಗ್ಯ ನನ್ನದಾಯಿತು. ಆ ಯೇಸುಕ್ರಿಸ್ತರ ಮುಖಾಂತರವೇ ದೇವರು ಈ ಭಾಗ್ಯವನ್ನು ನನಗೆ ಅನುಗ್ರಹಿಸಿದರು. ಯೇಸುಕ್ರಿಸ್ತರಿಗೆ ಸ್ವಂತದವರಾಗಲು ಕರೆಹೊಂದಿದ ನೀವು ಕೂಡ ಸರ್ವ ಜನಾಂಗಗಳಲ್ಲಿ ಸೇರಿದ್ದೀರಿ.

ಕೀರ್ತನೆ: 98:1,2-3, 3-4,
ಶ್ಲೋಕ: ಪ್ರಕಟಿಸಿಹನು ಪ್ರಭು ತನ್ನ ಮುಕ್ತಿವಿಧಾನವನು

ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು|
ಎಸಗಿಹನಾತನು ಪವಾಡ ಕಾರ್ಯಗಳನು|
ಗಳಿಸಿತಾತನ ಕೈ ಪೂತಭುಜ ಗೆಲುವನು||

ಪ್ರಕಟಿಸಿಹನು ಪ್ರಭು ತನ್ನ ಮುಕ್ತಿ ವಿಧಾನವನು|
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕ ಶಕ್ತಿಯನು||
ಸ್ಮರಿಸಿಕೊಂಡನು ಪ್ರಭು ತನ್ನ ಪ್ರೀತಿಯನು|
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು||

ಕಂಡು ಬಂದಿತು ಜಗದ ಎಲ್ಲೆ ಎಲ್ಲೆಗೆ|
ನಮ್ಮ ದೇವ ಸಾಧಿಸಿದ ಜಯಗಳಿಕೆ||
ಭೂನಿವಾಸಿಗಳೇ, ಮಾಡಿರಿ ಸುಮಧುರ ಭಜನೆ|

ಶುಭಸಂದೇಶ: ಲೂಕ 11:29-32


ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು: "ಈ ಪೀಳಿಗೆ ಕೆಟ್ಟ ಪೀಳಿಗೆ, ಇದು ಅದ್ಬುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು ದೈವತೀರ್ಪಿನ ದಿನ ದಕ್ಷಿಣದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು  ತೋರಿಸುವಳು.  ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ,  ಸೊಲೊಮೋನನಿಗಿಂತಲೂ  ಮೇಲಾದವನು ಇಗೋ, ಇಲ್ಲಿದ್ದಾನೆ. ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.

15.10.23 - ಹೀಗೆ, ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ,”

 ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 25:6-10

ಸೇನಾಧೀಶ್ವರ ಸರ್ವೇಶ್ವರ ಈ ಪರ್ವತದಲ್ಲಿ ಸಕಲ ರಾಷ್ಟ್ರಗಳಿಗೆ ಸಾರವತ್ತಾದ ಮೃಷ್ಟಾನ್ನವನ್ನೂ ಶ್ರೇಷ್ಟವಾದ ದ್ರಾಕ್ಷಾರಸವನ್ನೂ ಭೋಜನಕ್ಕಾಗಿ ಅಣಿಗೊಳಿಸುವರು. ಸಮಸ್ತ ರಾಷ್ಟ್ರಗಳನ್ನು ಆವರಿಸಿರುವ ಮುಸುಕನ್ನೂ ಸಕಲ ದೇಶಗಳನ್ನು ಮುಚ್ಚಿರುವ ತೆರೆಯನ್ನೂ ಇದೇ ಪರ್ವತದಲ್ಲಿ ನಾಶಮಾಡುವರು. ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವರು. ಸರ್ವೇಶ್ವರ ಸ್ವಾಮಿ ಎಲ್ಲರ ಕಣ್ಣೀರನ್ನು ಒರೆಸಿಬಿಡುವರು. ತಮ್ಮ ಪ್ರಜೆಗಾದ ಅವಮಾನವನ್ನು ಜಗದಿಂದಲೇ ತೊಲಗಿಸಿಬಿಡುವರು. ಸರ್ವೇಶ್ವರ ಸ್ವಾಮಿಯೇ ಇಂತೆಂದು ನುಡಿದಿದ್ದಾರೆ. ಇದು ನೆರವೇರಿದಾಗ ಜನರು: “ಇವರೇ ನಮ್ಮ ದೇವರು; ನಮ್ಮನ್ನು ರಕ್ಷಿಸುವರೆಂದು ಇವರನ್ನೇ ನೆಚ್ಚಿಕೊಂಡಿದ್ದೆವು ಇವರೇ ಸರ್ವೇಶ್ವರ; ಇವರನ್ನೇ ನೆಚ್ಚಿಕೊಂಡಿದ್ದೆವು. ಇವರು ನೀಡುವ ರಕ್ಷಣೆಯಲ್ಲಿ ಆನಂದಿಸೋಣ !” ಎಂದು ಹೇಳಿಕೊಳ್ಳುವರು. ಸರ್ವೇಶ್ವರ ಸ್ವಾಮಿಯ ಅಭಯ ಹಸ್ತವು ಈ ಪರ್ವತದ ಮೇಲೆ ಶಾಶ್ವತವಾಗಿ ನೆಲಸುವುದು."

ಕೀರ್ತನೆ: 23:1-3, 3-4, 5, 6

ಶ್ಲೋಕ: ದೇವರ ಮಂದಿರದಲಿ ನಾವಾಸಿಸುವೆ ಚಿರಕಾಲವೆಲ್ಲ  

ಎರಡನೇ ವಾಚನ: ಫಿಲಿಪ್ಪಿಯರಿಗೆ 4:12-14, 19-20

ಸಹೋದರರೇ, ಬಡತನ ಇರಲಿ, ಸಿರಿತನವಿರಲಿ, ಕೊರತೆಯಿರಲಿ, ಸಮೃದ್ಧಿ ಇರಲಿ, ಹಸಿದಿರಲಿ, ಹೊಟ್ಟೆ ತುಂಬಿರಲಿ - ಯಾವ ಸ್ಥಿತಿಯಲ್ಲಿದ್ದರೂ, ಎಲ್ಲಾ ವೇಳೆಯಲ್ಲಿಯೂ ತೃಪ್ತನಾಗಿರುವ ರಹಸ್ಯವನ್ನು ತಿಳಿದಿದ್ದೇನೆ. ಸರ್ವೇಶನ ಶಕ್ತಿಯಿಂದ ಸರ್ವವನ್ನೂ ಸಾಧಿಸುವ ಸಾಮರ್ಥ್ಯ ನನಗಿದೆ. ಆದರೂ ನನ್ನ ಸಂಕಷ್ಟಗಳಲ್ಲಿ ಸಹಾಯ ಮಾಡಿದುದು ನಿಮ್ಮ ಸೌಜನ್ಯವೇ ಸರಿ. ನನ್ನ ದೇವರು ತಮ್ಮ ಮಹದೈಶ್ವರ್ಯದಿಂದ ನಿಮ್ಮ ಅಗತ್ಯಗಳನ್ನೆಲ್ಲಾ ಕ್ರಿಸ್ತಯೇಸುವಿನ ಮುಖಾಂತರ ಪೂರೈಸುವರು. ನಮ್ಮ ತಂದೆಯಾದ ದೇವರಿಗೆ ನಿರಂತವೂ ಮಹಿಮೆ ಸಲ್ಲಲಿ!

ಶುಭಸಂದೇಶ:  ಮತ್ತಾಯ 22:1-14


ಯೇಸುಸ್ವಾಮಿ ಮುಖ್ಯ ಯಾಜಕರೊಂದಿಗೂ ಫರಿಸಾಯರೊಂದಿಗೂ  ಸಾಮತಿಗಳಲ್ಲೇ ಮಾತನಾಡಿದರು: “ಸ್ವರ್ಗಸಾಮ್ರಾಜ್ಯ ಇಂತಿದೆ; ರಾಜನೊಬ್ಬ ತನ್ನ ಕುಮಾರನ ವಿವಾಹ ಮಹೋತ್ಸವವನ್ನು ಏರ್ಪಡಿಸಿದ. ಅದಕ್ಕೆ ಆಹ್ವಾನಿತರಾಗಿದ್ದವರನ್ನು ಕರೆಯಲು ಸೇವಕರನ್ನು ಕಳುಹಿಸಿದ. ಆದರೆ ಅವರು ಬರಲು ಒಪ್ಪಲಿಲ್ಲ. ಪುನಃ ಬೇರೆ ಸೇವಕರನ್ನು ಅಟ್ಟಿದ. ‘ಔತಣ ಸಿದ್ಧವಾಗಿದೆ. ಕೊಬ್ಬಿನ ಮಾಂಸದ ಅಡಿಗೆಯನ್ನು ಮಾಡಿಸಿದ್ದೇನೆ. ಎಲ್ಲವೂ ಅಣಿಯಾಗಿದೆ. ಉತ್ಸವಕ್ಕೆ ಬೇಗ ಬನ್ನಿ’ ಎಂದು ಆಹ್ವಾನಿತರಿಗೆ ತಿಳಿಸುವಂತೆ ಹೇಳಿಕಳುಹಿಸಿದ. ಆದರೂ ಆಹ್ವಾನಿತರು ಅಲಕ್ಷ್ಯಮಾಡಿದರು. ಒಬ್ಬ ತೋಟಕ್ಕೆ ಹೊರಟುಬಿಟ್ಟ, ಇನ್ನೊಬ್ಬ ವ್ಯಾಪಾರಕ್ಕೆ ಹೊರಟುಹೋದ. ಉಳಿದವರು, ಕರೆಯಲು ಬಂದ ಆಳುಗಳನ್ನೇ ನಿಂದಿಸಿ, ಬಡಿದು, ಕೊಂದುಹಾಕಿದರು. ರಾಜನಿಗೆ ಕಡುಗೋಪ ಬಂದಿತು. ತನ್ನ ಸೈನಿಕರನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿದ. ಅವರ ಊರನ್ನು ಸುಟ್ಟುಹಾಕಿಸಿದ. ಅನಂತರ ತನ್ನ ಸೇವಕರಿಗೆ, ‘ವಿವಾಹ ಮಹೋತ್ಸವವೇನೋ ಸಿದ್ಧವಾಗಿದೆ; ಆಹ್ವಾನಿತರೋ ಅಯೋಗ್ಯರು. ನೀವು ಹೆದ್ದಾರಿಗಳಿಗೆ ಹೋಗಿ ಕಂಡಕಂಡವರನ್ನೆಲ್ಲಾ ಉತ್ಸವಕ್ಕೆ ಕರೆಯಿರಿ’ ಎಂದ. ಅಂತೆಯೇ ಅವರು ಹೋಗಿ ಯೋಗ್ಯರು, ಅಯೋಗ್ಯರೆನ್ನದೆ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆದುತಂದರು. ವಿವಾಹ ಮಂಟಪ ಅತಿಥಿಗಳಿಂದ ತುಂಬಿಹೋಯಿತು. “ಆಮೇಲೆ ರಾಜನು ಅತಿಥಿಗಳನ್ನು ನೋಡಲುಬಂದ. ಅಲ್ಲಿ ವಿವಾಹಕ್ಕೆ ತಕ್ಕ ವಸ್ತ್ರವನ್ನು ಧರಿಸದೆ ಬಂದಿದ್ದ ಒಬ್ಬನನ್ನು ಕಂಡ. ‘ಏನಯ್ಯ, ಸಮಾರಂಭಕ್ಕೆ ತಕ್ಕ ಉಡುಪಿಲ್ಲದೆ ಒಳಗೆ ಹೇಗೆ ಬಂದೆ?’ ಎಂದು ಅವನನ್ನು ಕೇಳಿದ. ಅದಕ್ಕೆ ಅವನು ಮೌನತಳೆದ. ಆಗ ರಾಜನು ಪರಿಚಾರಕರಿಗೆ, ‘ಇವನ ಕೈಕಾಲುಗಳನ್ನು ಕಟ್ಟಿ ಹೊರಗಿನ ಕತ್ತಲೆಗೆ ದಬ್ಬಿರಿ; ಅಲ್ಲಿರುವವರೊಡನೆ ಹಲ್ಲುಕಡಿದು ಗೋಳಾಡಲಿ,’ ಎಂದು ಹೇಳಿದ. “ಹೀಗೆ, ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ,” ಎಂದರು ಸ್ವಾಮಿ.

14.10.23 - "ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವನು ಹೆಚ್ಚು ಭಾಗ್ಯವಂತನು!"

 ಮೊದಲನೇ ವಾಚನ: ಯೊವೇಲ 3:12-21 


ಸರ್ವೇಶ್ವರ ಇಂತೆನ್ನುತ್ತಾರೆ: "ರಾಷ್ಟ್ರಗಳು ಎಚ್ಚೆತ್ತು ಸರ್ವೇಶ್ವರಸ್ವಾಮಿಯ ನ್ಯಾಯತೀರ್ಪಿನ ಕಣಿವೆಗೆ ಇಳಿಯಲಿ. ಸುತ್ತಮುತ್ತ ನೆರೆದಿರುವ ರಾಷ್ಟ್ರಗಳಿಗೆ ನ್ಯಾಯ ತೀರಿಸಲು ಅಲ್ಲಿ ನಾನು ಆಸೀನನಾಗಿರುವೆನು. ಸ್ವಾಮಿಯ ಶೂರರೇ. ಕುಡುಗೋಲನ್ನು ಹಾಕಿರಿ; ಫಲ ಪಕ್ವವಾಗಿದೆ ಬನ್ನಿ, ದ್ರಾಕ್ಷಿಯನ್ನು ತುಳಿಯಿರಿ; ಆಲೆಯು ಭರ್ತಿಯಾಗಿದೆ. ತೊಟ್ಟಿಗಳು ತುಂಬಿ ತುಳುಕುತ್ತಿವೆ; ರಾಷ್ಟ್ರಗಳ ದುಷ್ಟತನವು ಮಿತಿಮಿಾರಿದೆ. ಇಗೋ, ನ್ಯಾಯತೀರ್ಪಿನ ಕಣಿವೆಯಲ್ಲಿ ತಂಡೋಪತಂಡವಾದ ಜನಸ್ತೋಮ! ತೀರ್ಪಿನ ಕಣಿವೆಯಲ್ಲಿರುವವರಿಗೆ ಸರ್ವೇಶ್ವರನ ದಿನ ಸನ್ನಿಹಿತ! ಸೂರ್ಯಚಂದ್ರಗಳು ಮಂಕಾಗುತ್ತವೆ. ನಕ್ಷತ್ರಗಳು ಕಾಂತಿಗುಂದುತ್ತವೆ. ಸ್ವಾಮಿ ಸಿಯೋನಿನಿಂದ ಗರ್ಜಿಸುತ್ತಾರೆ, ಜೆರುಸಲೇಮಿನಿಂದ ಅವರ ಧ್ವನಿ ಮೊಳಗುತ್ತದೆ. ಭೂಮ್ಯಾಕಾಶಗಳು ನಡುಗುತ್ತವೆ. ಆದರೂ ಸರ್ವೇಶ್ವರ ತಮ್ಮ ಜನರಿಗೆ ಆಶ್ರಯ; ಇಸ್ರಯೇಲರಿಗೆ ರಕ್ಷಣಾ ದುರ್ಗ. ಇಸ್ರಯೇಲರೇ, ಕೇಳಿ, ಪವಿತ್ರ ಪರ್ವತವಾದ ಸಿಯೋನಿನಲ್ಲಿ ನೆಲೆಯಾಗಿರುವ ನಿಮ್ಮ ಸರ್ವೇಶ್ವರಸ್ವಾಮಿ ದೇವರು ನಾನೇ ಎಂದು ಆಗ ನಿಮಗೆ ಮನದಟ್ಟಾಗುವುದು. ಜೆರುಸಲೇಮ್ ಪುಣ್ಯಕ್ಷೇತ್ರವೆನಿಸಿಕೊಳ್ಳುವುದು. ಪರಕೀಯರು ಅದನ್ನೆಂದಿಗೂ ಆಕ್ರಮಿಸರು. ಆ ದಿನಗಳಲ್ಲಿ ಬೆಟ್ಟಗುಟ್ಟಗಳಿಂದ ದ್ರಾಕ್ಷಾರಸ ಮತ್ತು ಹಾಲುತುಪ್ಪ ಹರಿಯುವುದು. ಜುದೇಯ ನಾಡಿನ ಹಳ್ಳಕೊಳ್ಳಗಳು ನೀರಿನಿಂದ ತುಂಬಿರುವುವು.  ದೇವಾಲಯದಿಂದ ನೀರು ಚಿಮ್ಮಿ ಬಂದು ಆಕಾಚಿಯದ ಹಳ್ಳವನ್ನು ತಂಪಾಗಿಸುವುದು. ಈಜಿಪ್ಟ್ ಪಾಳುಬೀಳುವುದು, ಎದೋಮ್ ಬೆಂಗಾಡಾಗುವುದು. ಕಾರಣ, ಈ ಎರಡು ಪಟ್ಟಣದವರು ಜುದೇಯ ನಾಡಿನ ಮೇಲೆ ದಾಳಿಮಾಡಿದ್ದಾರೆ. ನಿರ್ದೋಷಿಗಳ ರಕ್ತವನ್ನು ಸುರಿಸಿದ್ದಾರೆ. ಹತರಾದವರು ನಿರ್ದೋಷಿಗಳೆಂದು ನಿರ್ಣಯಿಸುವೆನು. ಕೊಲೆಪಾತಕರನ್ನು ದಂಡಿಸಿಯೇ ತೀರುವೆನು. ಆದರೆ ಜುದೇಯನಾಡು, ಜೆರುಸಲೇಮ್ ನಗರ ಜನಭರಿತವಾಗಿ ಇರುವುದು. ಸರ್ವೇಶ್ವರಸ್ವಾಮಿಯಾದ ನಾನು ಸಿಯೋನ್ ಪರ್ವತದಲ್ಲಿ ನೆಲೆಯಾಗಿರುವೆನು." 

ಕೀರ್ತನೆ: 87:1-2, 5-6, 11-12 
ಶ್ಲೋಕ: ಸಜ್ಜನರೇ, ಪ್ರಭುವಿನಲಿ ಆನಂದಿಸಿರಿ 

ಶುಭಸಂದೇಶ: ಲೂಕ 11:27-28 



ಯೇಸುಸ್ವಾಮಿ ಮಾತನಾಡುತ್ತಿದ್ದಾಗ ಜನಸಮೂಹದಿಂದ ಮಹಿಳೆಯೊಬ್ಬಳು, "ನಿಮ್ಮನ್ನು ಉದರದಲ್ಲಿ ಹೊತ್ತು, ನಿಮಗೆ ಮೊಲೆಯೂಡಿಸಿದ ತಾಯಿ ಭಾಗ್ಯವಂತಳು!" ಎಂದು ಕೂಗಿ ಹೇಳಿದಳು. ಅದಕ್ಕೆ ಯೇಸು, "ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವನು ಹೆಚ್ಚು ಭಾಗ್ಯವಂತನು!" ಎಂದರು.

29.08.2026 - ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು

  ಸಂತ ಸ್ನಾನಿಕ ಯೊವಾನ್ನನ ಶಿರಚ್ಛೇದನ ಮೊದಲನೇ ವಾಚನ: ಯೆರೆಮಿಯ: 1: 17-19 ಆದುದರಿಂದ ನೀನು ನಿನ್ನ ನಡುವನ್ನು ಕಟ್ಟಿ ನಿಂತುಕೊಂಡು ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲ...