ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

10.10.23

 ಮೊದಲನೇ ವಾಚನ: ಯೋನನ 3:1-10 



ಯೋನನಿಗೆ ಸ್ವಾಮಿಯ ವಾಣಿ ಪುನಃ ಕೇಳಿಸಿತು: "ಎದ್ದು ಮಹಾನಗರವಾದ ನಿನೆವೆಗೆ ಹೋಗು, ನಾನು ನಿನಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿಗಳಿಗೆ ಸಾರು," ಎಂದಿತು. ಸ್ವಾಮಿಯ ಆಜ್ಞಾನುಸಾರ ಯೋನನು ನಿನೆವೆಗೆ ಹೋದನು. ಅದೊಂದು ವಿಸ್ತಾರವಾದ ನಗರ. ಅದನ್ನು ಹಾದುಹೋಗಲು ಮೂರು ದಿನಗಳು ಹಿಡಿಯುತ್ತಿತ್ತು. ನಗರವನ್ನು ಪ್ರವೇಶಿಸಿ ಒಂದು ದಿನದ ಪ್ರಯಾಣಮಾಡಿದ ನಂತರ ಯೋನನು ಸ್ವಾಮಿಯ ಸಂದೇಶವನ್ನು ಸಾರುತ್ತಾ, "ಜನರೇ ಕೇಳಿ; ನಿಮ್ಮ ನಗರ ನಲವತ್ತು ದಿನಗಳಲ್ಲಿ ನಾಶವಾಗುವುದು," ಎಂದನು. ಆ ನಗರದ ನಿವಾಸಿಗಳು ದೇವರ ಸಂದೇಶವನ್ನು ನಂಬಿದರು. ಪ್ರತಿಯೊಬ್ಬನೂ ಉಪವಾಸ ಕೈಗೊಳ್ಳಬೇಕೆಂದು ನಿರ್ಧರಿಸಿದರು. ಹಿರಿಯರು ಮೊದಲುಗೊಂಡು ಕಿರಿಯರವರೆಗೆ - ಎಲ್ಲರೂ ಮನಪರಿವರ್ತನೆ ಚಿಹ್ನೆಯಾಗಿ ಗೋಣಿತಟ್ಟನ್ನು  ಉಟ್ಟುಕೊಂಡರು ಈ ಸಂಗತಿ ನಿನೆವೆಯ ಅರಸನ ಕಿವಿಗೆ ಬಿದ್ದಿತು. ಅವನು ಸಿಂಹಾಸನದಿಂದ ಇಳಿದು, ತನ್ನ ರಾಜವಸ್ತ್ರಗಳನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡನು. ಕೂಡಲೇ ತನ್ನ ಪ್ರಜೆಗಳಿಗೆಈ ರಾಜಾಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿದನು: "ಅರಸನ ಹಾಗೂ ಆತನ ಆಪ್ತ ಪ್ರಮುಖರ ಆಜ್ಞೆಯಿದು: ಜನರಾಗಲೀ ದನಕರುಗಳಾಗಲೀ, ಕುರಿಮೇಕೆಗಳಾಗಲೀ, ಯಾರೂ ಏನನ್ನೂ ತಿನ್ನಬಾರದು, ಕುಡಿಯಲೂಬಾರದು. ಎಲ್ಲ ಜನರೂ ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು: ಪ್ರಾಣಿಗಳಿಗೂ ಹೊದಿಸಬೇಕು. ದೇವರನ್ನು ಶ್ರದ್ಧೆಯಿಂದ ಪ್ರಾರ್ಥಿಸಬೇಕು. ಎಲ್ಲರೂ ದೌರ್ಜನ್ಯವನ್ನು ತ್ಯಜಿಸಿ, ಹಿಂಸಾಚಾರವನ್ನು ಕೈಬಿಡಬೇಕು. ಹೀಗೆ ಮಾಡಿದ್ದೇ. ಆದರೆ, ದೇವರು ಒಂದುವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ತಮ್ಮ ಉಗ್ರಕೋಪವನ್ನು ತಡೆದಾರು, ನಾವು ನಾಶವಾಗದೆ ಉಳಿದೇವು." ಆ ಜನರು ಮಾಡಿದುದೆಲ್ಲವನ್ನು ದೇವರು ಗಮನಿಸಿದರು. ತಮ್ಮ ದುರ್ನಡತೆಯನ್ನು ಜನರು ಕೈಬಿಟ್ಟದ್ದನ್ನು ಕಂಡು, ಮನಮರುಗಿ ಅವರಿಗೆ ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ತಡೆಹಿಡಿದರು. 

ಕೀರ್ತನೆ: 130:1-2, 3-4, 7-8 

ಶ್ಲೋಕ: ಪಾಪಗಳ ನೀ ಪಟ್ಟಿಮಾಡಿದೆಯಾದರೆ ಪ್ರಭೂ ನಿನ್ನ ಮುಂದೆ ಯಾರು ತಾನೆ ನಿಲ್ಲಬಲ್ಲರು ವಿಭೂ? 

ಶುಭಸಂದೇಶ: ಲೂಕ 10:38-42 


ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಳೆಂಬ ಮಹಿಳೆ ಅವರನ್ನು ತಮ್ಮ ಮನೆಗೆ ಅಮಂತ್ರಿಸಿದಳು. ಆಕೆಗೆ ಮರಿಯಳೆಂಬ ಸೋದರಿ ಇದ್ದಳು. ಈಕೆ ಪ್ರಭುವಿನ ಪಾದದ ಬಳಿ ಕುಳಿತುಕೊಂಡು ಅವರ ಬೋಧನೆಯನ್ನು ಆಲಿಸುತ್ತಿದ್ದಳು. ಮಾರ್ತಳಾದರೋ, ಅತಿಥಿಸತ್ಕಾರದ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, "ಪ್ರಭೂ, ನನ್ನ ಸೋದರಿ ಈ ಕೆಲಸವನ್ನೆಲ್ಲಾ ನನ್ನೊಬ್ಬಳಿಗೇ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ," ಎಂದಳು. ಯೇಸು ಆಕೆಗೆ ಪ್ರತ್ಯುತ್ತರವಾಗಿ, "ಮಾರ್ತಾ, ಮಾರ್ತಾ, ನೀನು ಅನಾವಶ್ಯ ಚಿಂತೆ ಪೇಚಾಟಗಳಿಗೆ ಒಳಗಾಗಿರುವೆ. ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು," ಎಂದರು.

09.10.23 - " ನನ್ನ ನೆರೆಯವನು ಯಾರು?"

ಮೊದಲನೆಯ ವಾಚನ: ಯೋನ 1:1-17, 2:10


ಒಂದು ದಿನ ಅಮಿತ್ತಾಯನ ಮಗನಾದ ಯೋನನಿಗೆ ಸರ್ವೇಶ್ವರರಸ್ವಾಮಿಯ ವಾಣಿ ಕೇಳಿಸಿತು. " ನಿನೆವೆ ಮಹಾನಗರದ ನಿವಾಸಿಗಳು ಎಷ್ಟು ದುಷ್ಟರೆಂಬುದು ನನಗೆ ತಿಳಿದುಬಂದಿದೆ. ನೀನು ಅಲ್ಲಿಗೆ ಹೋಗು. ಅವರನ್ನು ಕಟುವಾಗಿ ಖಂಡಿಸು, " ಆದರೆ ಯೋನನು ಆ ಸ್ವಾಮಿಯ ಸನ್ನಿಧಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಿನೆವೆಗೆ ಹೋಗುವುದರ ಬದಲು ತಾರ್ಷಿಷಿಗೆ ಅಭಿಮುಖವಾಗಿ ಓಡಿಹೋಗಲು ಹೊರಟನು. ಜೊಪ್ಪ ಎಂಬ ಊರನ್ನು ತಲುಪಿದಾಗ ತಾರ್ಷಿಷಿಗೆ ಹೊರಡಲಿದ್ದ ಹಡಗೊಂದನ್ನು ಕಂಡನು. ಪ್ರಯಾಣದ ದರವನ್ನು ತೆತ್ತು ಸಹನಾವಿಕರೊಂದಿಗೆ ಹಡಗನ್ನು ಹತ್ತಿದನು. ಹೀಗೆ ಯೋನನು ಸರ್ವೇಶ್ವರಸ್ವಾಮಿಯ ಸನ್ನಿಧಿಯಿಂದ ದೂರ ಹೋಗಬಹುದೆಂದು ಭಾವಿಸಿದನು. ಆದರೆ ಸರ್ವೇಶ್ವರ ಸಮುದ್ರದಲ್ಲಿ ಬಿರುಗಾಳಿಯೊಂದನ್ನು ಬರಮಾಡಿದರು. ಅಲೆಗಳ ಹೊಡೆತಕ್ಕೆ ಹಡಗು ನುಚ್ಚುನೂರಾಗಿ ಒಡೆದುಹೋಗುವುದರಲ್ಲಿತ್ತು. ದಿಗ್ಭ್ರಾಂತರಾದ ನಾವಿಕರು ಪ್ರಾಣ ರಕ್ಷಣೆಗಾಗಿ ತಮ್ಮ ದೇವದೇತೆಗಳ ಮೊರೆಹೊಕ್ಕರು. ಪ್ರಾಣಾಪಾಯದಿಂದ ಪಾರಾಗಲು ತಮ್ಮಲ್ಲಿದ್ದ ಸರಕು ಸಾಮಾಗ್ರಿಗಳನ್ನು ಸಮುದ್ರಕ್ಕೆ ಎಸೆದರು. ಇಷ್ಟರೊಳಗೆ ಯೋನನು ಹಡಗಿನ ತಳಭಾಗಕ್ಕೆ ಇಳಿದುಹೋಗಿ ಹಾಯಾಗಿ ಮಲಗಿದ್ದನು. ಅವನಿಗೆ ಗಾಢನಿದ್ರೆ ಹತ್ತಿತ್ತು. ಇದನ್ನು ಕಂಡ ನೌಕಾಧಿಕಾರಿ ಅಲ್ಲಿಗೆ ಬಂದು, ಅವನನ್ನು ಎಬ್ಬಿಸುತ್ತಾ, " ಏನಯ್ಯಾ, ಹಾಯಾಗಿ ಇಲ್ಲಿ ನಿದ್ರೆ ಮಾಡುತ್ತಿದ್ದೀಯಲ್ಲ, ಎದ್ದೇಳು. ನಿನ್ನ ದೇವರಿಗೆ ಮೊರೆಯಿಡು. ಅವರಾದರೂ ನಮ್ಮ ಮೇಲೆ ಕರುಣೆತೋರಿ, ನಾವು ನಾಶವಾಗದಂತೆ ಕಾಪಾಡಿಯಾರು, " ಎಂದನು. ಆಮೇಲೆ ನಾವಿಕರು: " ನಮಗೆ ಸಂಭವಿಸಿರುವ ಈ ದುರಂತಕ್ಕೆ ಕಾರಣ ಯಾರಿರಬಹುದು? ಬನ್ನಿ, ಚೀಟುಹಾಕಿ ನೋಡೋಣ " ಎಂದು ತಮ್ಮತಮ್ಮಲ್ಲೇ ಮಾತನಾಡಿಕೊಂಡರು. ಹಾಗೆ ಮಾಡಿದಾಗ ಚೀಟು ಯೋನನ ಹೆಸರಿಗೆ ಬಂತು. ಆಗ ನಾವಿಕರು: " ನೀನು ಯಾರು? ಎಲ್ಲಿಂದ ಬಂದೆ? ಯಾವ ಕೆಲಸದ ಮೇಲೆ ಬಂದೆ? ನೀನು ಯಾವ ಜನಾಂಗದವನು? ಈ ದುರಂತಕ್ಕೆ ಕಾರಣ ಯಾರು? " ಎಂದು ಪ್ರಶ್ನಿಸಿದರು. ಅದಕ್ಕೆ ಯೋನನು: " ನಾನು ಹಿಬ್ರಿಯನು. ಸಮುದ್ರವನ್ನೂ ಭೂಮಿಯನ್ನೂ ಸೃಷ್ಟಿಸಿದ ಪರಲೋಕ ದೇವರಾದ ಸರ್ವೇಶ್ವರನ ಭಕ್ತನು ನಾನು, " ಎಂದು ಉತ್ತರಿಸಿದನು. ಅಲ್ಲದೆ ತಾನು ಆ ಸ್ವಾಮಿಯ ಸನ್ನಿಧಿಯಿಂದ ಓಡಿಹೋಗುತ್ತಿರುವುದಾಗಿಯೂ ತಿಳಿಸಿದನು. ಇದನ್ನು ಕೇಳಿದ್ದೇ ನಾವಿಕರು ಭಯಭ್ರಾಂತರಾದರು. " ಎಂಥಾ ತಪ್ಪು ಮಾಡಿದೆ! " ಎಂದು ಅವನನ್ನು ಖಂಡಿಸಿದರು. ಆಗ ಬಿರುಗಾಳಿ ಮತ್ತಷ್ಟು ತೀವ್ರಗೊಳ್ಳುತ್ತಿತ್ತು. ನಾವಿಕರು ಯೋನನಿಗೆ: " ಸಮುದ್ರ ಶಾಂತವಾಗಬೇಕಾದರೆ ನಿನ್ನನ್ನು ಏನು ಮಾಡಬೇಕು? ಹೇಳು, " ಎಂದು ಕೇಳಿದರು. ಯೋನನು: " ನನ್ನನ್ನು ಎತ್ತಿ ಸಮುದ್ರಕ್ಕೆ ಎಸೆಯಿರಿ. ಆಗ ಅದು ಶಾಂತವಾಗುವುದು. ನೀವು ಇಂಥ ಭೀಕರ ಬಿರುಗಾಳಿಗೆ ತುತ್ತಾಗಲು ನಾನೇ ಕಾರಣ. ಇದನ್ನು ನಾನು ಚೆನ್ನಾಗಿ ಬಲ್ಲೆ, " ಎಂದನು. ನಾವಿಕರು ಅವನ ಸಲಹೆಗೆ ಒಪ್ಪದೆ, ಹಡಗನ್ನು ದಡಕ್ಕೆ ಸಾಗಿಸಲು ತಮ್ಮ ಶಕ್ತಿ ಸಾಮರ್ಥ್ಯವನ್ನೆಲ್ಲ ಪ್ರಯೋಗಿಸಿ ಹುಟ್ಟುಹಾಕಿದರು. ಆದರೆ ಸಾಧ್ಯವಾಗಲಿಲ್ಲ. ಸಮುದ್ರವು ಅಲ್ಲೋಲಕಲ್ಲೋಲವಾಗುತ್ತಲೇ ಇತ್ತು. ಆಗ ಅವರು ಬೇರೆ ದಿಕ್ಕುತೋಚದೆ ಸರ್ವೇಶ್ವರಸ್ವಾಮಿಗೆ ಮೊರೆಯಿಡುತ್ತಾ : " ಸ್ವಾಮಿ, ಈ ನಿರಪರಾಧಿಯ ಪ್ರಾಣಹಾನಿಗೆ ನಾವು ಹೊಣೆಯಲ್ಲ. ಇದಕ್ಕಾಗಿ ನಮ್ಮನ್ನು ನಾಶಮಾಡಬೇಡಿ. ಇದೆಲ್ಲವೂ ಸಂಭವಿಸಿರುವುದು ನಿಮ್ಮ ಚಿತ್ತವಲ್ಲವೇ? " ಎಂದು ದೈನ್ಯದಿಂದ ಪ್ರಾರ್ಥಿಸಿದರು. ಬಳಿಕ ಅವರು ಯೋನನನ್ನು ಎತ್ತಿ ಸಮುದ್ರಕ್ಕೆ ಎಸೆದರು. ತಕ್ಷಣವೇ, ಭೋರ್ಗರೆಯುತ್ತಿದ್ದ ಸಮುದ್ರ ಶಾಂತವಾಯಿತು. ಇದನ್ನು ಕಂಡು ಜನರು ಸರ್ವೇಶ್ವರಸ್ವಾಮಿಗೆ ಬಹುವಾಗಿ ಭಯಪಟ್ಟರು, ಯಜ್ಞವನ್ನು ಅರ್ಪಿಸಿ, ಹರಕೆಗಳನ್ನು ಸಲ್ಲಿಸಿದರು. ಇತ್ತ ಸರ್ವೇಶ್ವರಸ್ವಾಮಿಯ ಆಜ್ಞಾನುಸಾರ ದೊಡ್ಡ ಮೀನೊಂದು ಬಂದು ಯೋನನನ್ನು ನುಂಗಿತು. ಅವನು ಆದರ ಹೊಟ್ಟೆಯಲ್ಲಿ ಮೂರು ಹಗಲು, ಮೂರು ಇರುಳು ಇದ್ದನು. ಸರ್ವೇಶ್ವರಸ್ವಾಮಿಯ ಆಜ್ಞೆಯ ಪ್ರಕಾರ ಆ ಮೀನು ಯೋನನನ್ನು ದಡದ ಮೇಲೆ ಕಕ್ಕಿತು.

ಕೀರ್ತನೆ ಯೋನ 2:2, 3, 4, 7
ಶ್ಲೋಕ: ಸರ್ವೇಶ್ವರಾ, ಮೇಲಕ್ಕೆತ್ತಿದೆಯೆನ್ನ ಜೀವಸಹಿತ.

ಸಂಕಟದಲಿ, ಸರ್ವೇಶ್ವರಾ, ನಾ ನಿನಗೆ ಮೊರೆಯಿಟ್ಟೆ|
ನೀನೆನ್ನ ಮೊರೆಗೆ ಕಿವಿಗೊಟ್ಟೆ||
ಪಾತಾಳದಂತರಾಳದಿಂದ ನಿನ್ನ ನೆರವನ್ನು ಬೇಡಿದೆ|
ನೀನೆನ್ನ ಪ್ರಾರ್ಥನೆಯನ್ನಾಲಿಸಿದೆ||

ಸಾಗರದ ಉದರಕೆ ನೀನೆನ್ನ ತಳ್ಳಿರುವೆ|
ಅಗಾಧ ಜಲದೊಳಕೆ ದೂಡಿರುವೆ||
ಸುತ್ತಮುತ್ತಲಿನ ಪ್ರವಾಹದ ಹೊಡೆತ|
ಮೇಲ್ಗಡೆ ಅಬ್ಬರಿಪ ಅಲೆಗಳ ಭೋರ್ಗರೆತ||

ನಿನ್ನ ಸನ್ನಿಧಿಯಿಂದ ನಾನಿನ್ನು ಬಹಿಷ್ಕ್ರತ|
ಕಾಣೆನೆಂದೂ ನಿನ್ನ ಪವಿತ್ರಾಲಯ ನಿರುತ||
ಈ ಭಾಗ್ಯಗಳೆಲ್ಲ ಎನಗಿಲ್ಲವೆಂದು|
ಪರಿಪರಿಯಾಗಿ ಮರುಗುತಿರುವೆನಿಂದು||

ನಂದಿದಂತಾಗಲು ಎನ್ನ ಪ್ರಾರ್ಣದೀವಿಗೆ|
ಮೊರೆಯಿಟ್ಟೆ, ಸರ್ವೇಶ್ವರಾ, ನಾ ನಿನಗೆ||
ನಿನ್ನ ಪರಿಶುದ್ದ ಆಲಯದಲಿ ನೀನಾಸೀನನಿದ್ದೆ|
ಎನ್ನ ಪ್ರಾರ್ಥನೆಯನು ನೀನಾಲಿಸಿದೆ||

ಶುಭಸಂದೇಶ: ಲೂಕ 10:25-37


ಆ ಕಾಲದಲ್ಲಿ ಒಬ್ಬ ಶಾಸ್ತ್ರಜ್ಞನು ಎದ್ದು ಯೇಸುವನ್ನು ಪರೀಕ್ಷಿಸುವ ಉದ್ದೇಶದಿಂದ " ಬೋಧಕರೇ, ಅಮರಜೀವ ನನಗೆ ಪ್ರಾಪ್ತಿಯಾಗಬೇಕಾದರೆ ನಾನು ಮಾಡಬೇಕಾದುದು ಏನು? " ಎಂದು ಕೇಳಿದನು. ಅದಕ್ಕೆ ಯೇಸು, " ಧರ್ಮಶಾಸ್ತ್ರದಲ್ಲಿ ಏನು ಬರೆದಿದೆ? ಹೇಗೆ ಪಠಿಸುತ್ತೀಯೆ? " ಎಂದು ಮರುಪ್ರಶ್ನೆ ಹಾಕಿದರು. ಅವನು, " ' ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು ' ಎಂದಿದೆ, " ಎಂದು ಉತ್ತರ ಕೊಟ್ಟನು. ಯೇಸು, " ಸರಿಯಾಗಿ ಉತ್ತರಕೊಟ್ಟೆ. ಅದರಂತೆ ಮಾಡು. ನಿನಗೆ ಅಮರ ಜೀವ ಲಭಿಸುವುದು, " ಎಂದರು. ಆದರೆ ಆ ಶಾಸ್ತ್ರಜ್ಞನು ತನ್ನನ್ನು ತಾನೇ ಸಮರ್ಥಿಸಿಕೊಳ್ಳಲು,. " ನನ್ನ ನೆರೆಯವನು ಯಾರು? " ಎಂದು ಯೇಸುವನ್ನು ಮತ್ತೆ ಪ್ರಶ್ನಿಸಿದನು. ಆಗ ಯೇಸು ಅವನಿಗೆ ಹೀಗೆಂದು ವಿವರಿಸಿದರು: " ಒಬ್ಬನು ಜೆರುಸಲೇಮಿನಿಂದ ಇಳಿದು ಜೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ದರೋಡೆಗಾರರ ಕೈಗೆ ಸಿಕ್ಕಿಬಿದ್ದ. ದರೋಡೆಗಾರರು ಅವನನ್ನು ಸುಲಿಗೆ ಮಾಡಿ, ಹೊಡೆದು ಬಡಿದು, ಅರೆಜೀವ ಮಾಡಿ ಅಲ್ಲೇ ಬಿಟ್ಟುಹೋದರು. ಅದೇ ಮಾರ್ಗವಾಗಿ ಒಬ್ಬ ಯಾಜಕನು ಹಾದು ಹೋಗಬೇಕಾಗಿ ಬಂದಿತು. ಈತನು, ಅವನನ್ನು ಕಂಡದ್ದೇ ಆಚೆ ಬಳಸಿಕೊಂಡು ಹೋದ. ಹಾಗೆಯೇ ಲೇವಿಯೊಬ್ಬನು ಆ ಸ್ಥಳಕ್ಕೆ ಬಂದು ಅವನನ್ನು ನೋಡಿ, ಹಾಗೆಯೇ ಬಳಸಿಕೊಂಡು ಹೋದ. ಆದರೆ ಆ ಮಾರ್ಗವಾಗಿ ಪ್ರಯಾಣಮಾಡುತ್ತಿದ್ದ ಒಬ್ಬ ಸಮಾರಿಯದವನು ಅಲ್ಲಿಗೆ ಬಂದಾಗ, ಅವನನ್ನು ಕಂಡು ಕನಿಕರಪಟ್ಟ. ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹಚ್ಚಿ ಅವುಗಳಿಗೆ ಬಟ್ಟೆ ಕಟ್ಟಿದ. ಬಳಿಕ ಅವನನ್ನು ತನ್ನ ಸ್ವಂತ ವಾಹಕಪಶುವಿನ ಮೇಲೆ ಹತ್ತಿಸಿಕೊಂಡು ಒಂದು ಛತ್ರಕ್ಕೆ ಕರೆದುಕೊಂಡು ಹೋಗಿ, ಆರೈಕೆ ಮಾಡಿದ. ಮಾರನೆಯ ದಿನ ಎರಡು ದಿನಾರಿ ನಾಣ್ಯಗಳನ್ನು ಛತ್ರದವನಿಗೆ ಕೊಟ್ಟು, ' ಇವನನ್ನು ಚೆನ್ನಾಗಿ ನೋಡಿಕೊ, ಇದಕ್ಕಿಂತ ಹೆಚ್ಚು ವೆಚ್ಚವಾದರೆ ನಾನು ಹಿಂದಿರುಗಿ ಬರುವಾಗ ಸಲ್ಲಿಸುತ್ತೇನೆ, ' ಎಂದ. " ದರೋಡೆಗಾರರ ಕೈಗೆ ಸಿಕ್ಕಿದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ? " ಎಂದು ಯೇಸು ಆ ಶಾಸ್ತ್ರಜ್ಞನನ್ನು ಕೇಳಿದರು. ಅದಕ್ಕೆ ಅವನು, " ದಯೆ ತೋರಿದವನೇ ನೆರೆಯವನು, " ಎಂದನು. ಆಗ ಯೇಸು, " ಹೋಗು, ನೀನೂ ಹಾಗೆಯೇ ಮಾಡು, " ಎಂದು ಹೇಳಿದರು.

08.10.23 - ‘ದೇವರ ಸಾಮ್ರಾಜ್ಯವನ್ನು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲಕೊಡುವ ಜನತೆಗೆ ನೀಡಲಾಗುವುದು'

 ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 5:1-7

ಹಾಡುವೆ ನಾನೆನ್ನ ಪ್ರಿಯನಿಗೆ ಗೀತೆಯೊಂದನು ಅವನ ದ್ರಾಕ್ಷಾವನದ ಕುರಿತು ಪ್ರೇಮಗೀತೆಯನು: ಪ್ರಿಯತಮನಿಗೆ ಇತ್ತೊಂದು ದ್ರಾಕ್ಷಿಯ ತೋಟ ಫಲವತ್ತಾಗಿಹ ಗುಡ್ಡದ ಮೇಲಿನ ತೋಟ. ಆರಿಸಿ ಎಸೆದನು ಕಲ್ಲುಮುಳ್ಳುಗಳನು ಅಗೆದು ಹದಮಾಡಿದನಾತ ಗುಡ್ಡವನು. ನೆಟ್ಟನು ಒಳ್ಳೊಳ್ಳೆ ದ್ರಾಕ್ಷಿಯ ಸಸಿಗಳನು ಕಟ್ಟಿದನು ಕಾವಲಿಗಾಗಿ ಅಟ್ಟಣೆಯೊಂದನು ಕಟ್ಟಿದನು ಅದರೊಳಗೆ ಆಲೆಯೊಂದನು. ನಿರೀಕ್ಷಿಸುತ್ತಿರೆ ಆತ ಸಿಹಿದ್ರಾಕ್ಷಿ ಹಣ್ಣನು, ಬಿಟ್ಟಿತದೋ ಅವನಿಗೆ ಹುಳಿ ಹಣ್ಣನು! ಆದುದರಿಂದ ನನ್ನ ಪ್ರಿಯನು ಹೀಗೆಂದು ಕೇಳುತ್ತಾನೆ: “ಜೆರುಸಲೇಮಿನ ನಿವಾಸಿಗಳೇ, ಜುದೇಯದ ಜನರೇ, ನನಗೂ ನನ್ನ ತೋಟಕ್ಕೂ ಮಧ್ಯೆ ಇರುವ ವ್ಯಾಜ್ಯವನ್ನು ತೀರಿಸಿರಿ. ನನ್ನ ತೋಟಕ್ಕಾಗಿ ನಾನು ಮಾಡಿದ್ದಕ್ಕಿಂತಲೂ ಇನ್ನೇನು ಮಾಡಬೇಕಾಗಿತ್ತು? ಅದು ಸಿಹಿದ್ರಾಕ್ಷಿಯನ್ನು ಕೊಡುವುದೆಂದು ನಾನು ನಿರೀಕ್ಷಿಸುತ್ತಿರಲು, ಅದು ಹುಳಿ ಹಣ್ಣನ್ನು ಕೊಟ್ಟಿತೇಕೆ? ನನ್ನ ಈ ತೋಟಕ್ಕೆ ಏನು ಮಾಡುವೆನೆಂದು ಹೇಳುತ್ತೇನೆ, ಕೇಳಿ: ಕಿತ್ತೆಸೆಯುವೆನು ಅದರ ಬೇಲಿಯನು; ತುತ್ತಾಗುವುದದು ದನಕರುಗಳಿಗೆ. ಕೆಡವಿಹಾಕುವೆನು ಅದರ ಗೋಡೆಯನು; ಈಡಾಗುವುದದು ಪರರ ತುಳಿದಾಟಕ್ಕೆ. ಬಂಜರು ಭೂಮಿಯಾಗಿಸುವೆನು ಅದನ್ನು; ಕುಡಿಕತ್ತರಿಸುವರಾರೂ ಇರರು ಅದಕ್ಕೆ. ಮುಳ್ಳುಕಳೆ ಬೆಳೆಯುವುದು ಅದರೊಳಗೆ. ನೀಡುವೆನು ಆಣತಿಯೊಂದನು ಮೋಡಗಳಿಗೆ; ಸುರಿಸವು ತುಂತುರು ಮಳೆಯನ್ನೂ ಅದಕ್ಕೆ. ಇಸ್ರಯೇಲ್ ಮನೆತನವೇ ಸೇನಾಧೀಶ್ವರ ಸರ್ವೇಶ್ವರ ನೆಟ್ಟ ಆ ದ್ರಾಕ್ಷಿಯ ತೋಟ. ಜುದೇಯದ ಜನರೇ ಆತ ನಾಟಿಮಾಡಿದಾ ಸುಂದರ ಸಸಿತೋಟ. ನ್ಯಾಯನೀತಿಯನು ನಿರೀಕ್ಷಿಸಿದನಾತ ಆದರೆ ಸಿಕ್ಕಿತವನಿಗೆ ರಕ್ತಪಾತ! ಸತ್ಸಂಬಂಧವನು ಎದುರುನೋಡಿದನಾತ ಇಗೋ, ದಕ್ಕಿತವನಿಗೆ ದುಃಖಿತರ ಆರ್ತನಾದ!

ಕೀರ್ತನೆ: 80:9, 12, 13-14, 15-16, 19-20

ಶ್ಲೋಕ: ಅನುಗ್ರಹಿಸಿದನು ಪ್ರಭು ಸ್ವರ್ಗದ ದವಸಧಾನ್ಯವನು 

ಎರಡನೇ ವಾಚನ: ಫಿಲಿಪ್ಪಿಯರಿಗೆ  4:6-9


ಸಹೋದರರೇ, ಯಾವ ವಿಷಯದಲ್ಲೂ ಚಿಂತಿಸದೆ, ನಿಮ್ಮ ಅಗತ್ಯಗಳಿಗಾಗಿ ದೇವರಲ್ಲಿ ಪ್ರಾರ್ಥಿಸಿರಿ. ಪ್ರಾರ್ಥಿಸುವಾಗಲೆಲ್ಲಾ ನಿಮ್ಮಲ್ಲಿ ಕೃತಜ್ಞತಾಭಾವ ಇರಲಿ. ಆಗ ಮನುಷ್ಯಗ್ರಹಿಕೆಗೂ ಮೀರಿದ ದೈವಶಾಂತಿಯು ನಿಮ್ಮ ಹೃನ್ಮನಗಳನ್ನು ಕ್ರಿಸ್ತೇಸುವಿನ ಅನ್ಯೋನ್ಯತೆಯಲ್ಲಿ ಸುರಕ್ಷಿತವಾಗಿ ಕಾಪಾಡುವುದು. ಕಡೆಯದಾಗಿ ಸಹೋದರರೇ, ಯಾವುದು ಸತ್ಯವು-ಮಾನ್ಯವು, ನ್ಯಾಯವು-ಶುದ್ಧವು, ಪ್ರೀತಿಕರವು-ಮನೋಹರವು ಆಗಿದೆಯೋ ಯಾವುದು ಸದ್ಗುಣವು-ಸ್ತುತ್ಯಾರ್ಹವು ಆಗಿದೆಯೋ ಅಂಥವುಗಳಲ್ಲಿ ಮಗ್ನರಾಗಿರಿ. ನೀವು ನನ್ನಿಂದ ಕಲಿತವು ಹಾಗೂ ಅರಿತವುಗಳನ್ನು, ಕೇಳಿದವು ಹಾಗೂ ಕಂಡವುಗಳನ್ನು ನಿಮ್ಮ ಜೀವಿತದಲ್ಲಿ ಕಾರ್ಯರೂಪಕ್ಕೆ ತನ್ನಿರಿ. ಆಗ ಶಾಂತಿದಾಯಕ ದೇವರು ನಿಮ್ಮ ಸಂಗಡ ಇರುವರು.

ಶುಭಸಂದೇಶ: ಮತ್ತಾಯ 21:33-43


ಯೇಸು ಮುಖ್ಯಯಾಜಕರಿಗೂ ಪ್ರಜಾಪ್ರಮುರಿಗೂ ಹೀಗೆಂದರು: “ಇನ್ನೊಂದು ಸಾಮತಿಗೆ ಕಿವಿಗೊಡಿ: ಒಬ್ಬ ಯಜಮಾನ ಒಂದು ದ್ರಾಕ್ಷಿತೋಟ ಮಾಡಿಸಿದ. ಅದರ ಸುತ್ತ ಬೇಲಿಯನ್ನು ಹಾಕಿಸಿದ. ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಅನಂತರ ಅದನ್ನು ಗೇಣಿದಾರರಿಗೆ ವಹಿಸಿ ಹೊರನಾಡಿಗೆ ಹೊರಟುಹೋದ.  ಫಲಕೊಡುವ ಕಾಲ ಹತ್ತಿರವಾದಾಗ, ತನಗೆ ಬರಬೇಕಾದ ಪಾಲನ್ನು ತರುವುದಕ್ಕಾಗಿ ಆಳುಗಳನ್ನು ಗೇಣಿದಾರರ ಬಳಿಗೆ ಕಳುಹಿಸಿದ.  ಇವರು ಆ ಆಳುಗಳ ಮೇಲೆ ಬಿದ್ದು ಒಬ್ಬನನ್ನು ಬಡಿದರು, ಇನ್ನೊಬ್ಬನನ್ನು ಕಡಿದರು, ಮತ್ತೊಬ್ಬನ ಮೇಲೆ ಕಲ್ಲು ತೂರಿದರು. ತೋಟದ ಯಜಮಾನ ಮೊದಲಿಗಿಂತಲೂ ಹೆಚ್ಚು ಆಳುಗಳನ್ನು ಕಳುಹಿಸಿದ. ಅವರಿಗೂ ಅದೇ ಗತಿ ಆಯಿತು.  ಕಟ್ಟಕಡೆಗೆ ಯಜಮಾನ, ‘ನನ್ನ ಮಗನಿಗೆ ಇವರು ಮರ್ಯಾದೆ ಕೊಟ್ಟೇಕೊಡುವರು’ ಎಂದುಕೊಂಡು ತನ್ನ ಮಗನನ್ನೇ ಕಳುಹಿಸಿದ. ಆದರೆ ಗೇಣಿದಾರರು ಮಗನನ್ನು ಕಂಡೊಡನೇ, ‘ಈ ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ ಇವನನ್ನು ಮುಗಿಸಿಬಿಡೋಣ. ಇವನಿಗೆ ಬರುವ ಸೊತ್ತನ್ನು ನಮ್ಮದಾಗಿಸಿಕೊಳ್ಳೋಣ,’ ಎಂದು ತಮ್ಮ ತಮ್ಮಲ್ಲೇ ಒಳಸಂಚು ಮಾಡಿಕೊಂಡರು.  ಅಂತೆಯೇ ಅವನನ್ನು ಹಿಡಿದು, ತೋಟದಿಂದ ಹೊರಕ್ಕೆ ದಬ್ಬಿಕೊಂಡುಹೋಗಿ, ಕೊಂದುಹಾಕಿದರು. “ಈಗ ನೀವೇ ಹೇಳಿ: ತೋಟದ ಯಜಮಾನ ಬಂದಾಗ ಆ ಗೇಣಿದಾರರಿಗೆ ಏನುಮಾಡುವನು?” ಎಂದು ಯೇಸು ಕೇಳಿದರು.  “ಆ ಕೇಡಿಗರನ್ನು ಕ್ರೂರವಾಗಿ ಸಂಹರಿಸುವನು. ತರುವಾಯ ಕಾಲಕಾಲಕ್ಕೆ ಸರಿಯಾಗಿ ಪಾಲನ್ನು ಸಲ್ಲಿಸುವ ಬೇರೆಯವರಿಗೆ ತೋಟವನ್ನು ಗೇಣಿಗೆ ಕೊಡುವನು,” ಎಂದು ಅಲ್ಲಿದ್ದವರು ಉತ್ತರಕೊಟ್ಟರು. ಬಳಿಕ ಯೇಸು ಇಂತೆಂದರು: “ ‘ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಆ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು! ಸರ್ವೇಶ್ವರನಿಂದಲೇ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ!’ ಎಂಬ ವಾಕ್ಯವನ್ನು ನೀವು ಪವಿತ್ರಗ್ರಂಥದಲ್ಲಿ ಓದಿಲ್ಲವೆ?  ಆದುದರಿಂದ ನಾನು ನಿಮಗೆ ಹೇಳುತ್ತೇನೆ, ‘ದೇವರ ಸಾಮ್ರಾಜ್ಯವನ್ನು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲಕೊಡುವ ಜನತೆಗೆ ನೀಡಲಾಗುವುದು.

07.10.23 - "ನಿಮ್ಮ ಹೆಸರುಗಳು ಸ್ವರ್ಗದಲಿ ಲಿಖಿತವಾಗಿವೆ ಎಂದು ಸಂತೋಷಪಡಿ."

ಮೊದಲನೆಯ ವಾಚನ: ಬಾರೂಕ 4:5-12, 27-29

ನನ್ನ ಜನರೇ, ಧೈರ್ಯದಿಂದಿರಿ, ಇಸ್ರಯೇಲಿನ ಹೆಸರನ್ನು ನೀವು ಉಳಿಸಬಲ್ಲಿರಿ. ನೀವು ಅನ್ಯರಾಷ್ಟ್ರಗಳಿಗೆ ಮಾರಲ್ಪಟ್ಟಿರುವುದು ವಿನಾಶಕ್ಕಾಗಿ ಅಲ್ಲ ನೀವು ಶತ್ರುಗಳ ವಶವಾಗಿರುವುದು ದೇವರನ್ನು ಸಿಟ್ಟಿಗೆಬ್ಬಿಸಿದ್ದರಿಂದ, ದೇವರನ್ನು ತೊರೆದು ದೆವ್ವಗಳಿಗೆ ಬಲಿಯರ್ಪಿಸಿದ್ದರಿಂದ ನಿಮ್ಮ ಸೃಷ್ಟಿಕರ್ತನ ಕೋಪವನ್ನು ಕೆರಳಿಸಿದ್ದರಿಂದ, ನಿಮ್ಮನ್ನು ಪೋಷಿಸಿದ ಮಾತೆ ಜೆರುಸಲೇಮನ್ನು ನೋಯಿಸಿದ್ದರಿಂದ. ನಿಮ್ಮ ಮೇಲೆ ಎರಗಲಿದ್ದ ದೇವಕೋಪವನ್ನು ಆಕೆ ಹೀಗೆಂದು ಬಣ್ಣಿಸಿದಳು, 'ಸಿಯೋನಿನ ನೆರೆಹೊರೆಯಲ್ಲಿ ವಾಸಿಸಿದವರೇ ಕೇಳಿ: ದೇವರು ನನ್ನ ಮೇಲೆ ಬರಮಾಡಿದ್ದಾರೆ ಮಹಾಕಸ್ತಿ ಶಾಶ್ವತರಾದ ದೇವರು ನನ್ನ ಪುತ್ರಿಯರ ಮೇಲೆ ಬರಮಾಡಿರುವ ಗಡೀಪಾರನ್ನು ನಾನು ಅರಿತಿರುವೆ. ಮುದದಿಂದ ನಾನಿವರನ್ನು ಸಲಹಿದೆ, ದುಃಖದಿಂದ ಕಣ್ಣೀರಿಡುತ್ತಾ ಕಳುಹಿಸಿಕೊಟ್ಟೆ. ನಾನೊಬ್ಬ ವಿಧವೆ, ಹಲವರಿಂದ ನಿರಾಕೃತಳು ನನ್ನನ್ನು ನೋಡಿ ಯಾರೂ ಆನಂದಿಸಬಾರದು: ದೇವರ ಧರ್ಮಶಾಸ್ತ್ರವನ್ನು ಬಿಟ್ಟು ನನ್ನ ಮಕ್ಕಳು ದೂರಸರಿದರು ಅವರ ಪಾಪಕೃತ್ಯಗಳ ನಿಮಿತ್ತ ನಾನು ಹಾಳುಬೀಳಬೇಕಾಯಿತು. ಮಕ್ಕಳೇ, ಧೈರ್ಯದಿಂದಿರಿ, ಮೊರೆಯಿಡಿ ದೇವರಿಗೆ, ಇದನ್ನೆಲ್ಲಾ ಬರಮಾಡಿದಾತ ತಂದುಕೊಳ್ಳುವನು ನಿಮ್ಮನ್ನು. ನೆನಪಿಗೆ. ದೇವರಿಗೆ ವಿಮುಖರಾಗಲು ಮನಸ್ಸು ಮಾಡಿದಿರಿ ಈಗ ಅವರಿಗೆ ಅಭಿಮುಖರಾಗಲು ಹತ್ತರಷ್ಟು ಮನಸ್ಸುಮಾಡಿರಿ. ನಿಮಗೆ ಈ ವಿಪತ್ತನ್ನು ಬರಮಾಡಿದಾತನು ನಿಮ್ಮ ಉದ್ಧಾರದೊಂದಿಗೆ ಶಾಶ್ವತ ಸಂತಸವನ್ನುಂಟುಮಾಡುವನು.'

ಕೀರ್ತನೆ 69:32-34, 35-36
ಶ್ಲೋಕ: ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು.

ಇದನರಿತು ದೀನದಲಿತರು ಆನಂದಗೊಳ್ಳಲಿ|
ದೇವನನು ಅರಸುವವರು ಪುನಶ್ಚೇತನಗೊಳ್ಳಲಿ||
ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು|
ಸೆರೆಯಲ್ಲಿರುವ ತನ್ನವರನು ತಿರಸ್ಕರಿಸನು||
ಭೂಮ್ಯಾಕಾಶಗಳು ಆತನನು ಕೊಂಡಾಡಲಿ|
ಸಾಗರಗಳು, ಜಲಚರಗಳು ಆತನನು ಭಜಿಸಲಿ||

ರಕ್ಷಿಸುವನು ದೇವನು ಆ ಸಿಯೋನ್ ಪಟ್ಟಣವನು|
ಕಟ್ಟಿಸುವನು ಯೆಹೂದ ನಾಡಿನ ನಗರಗಳನು|
ಸ್ವಂತವಾಗಿಸಿಕೊಳ್ಳುವರು ಆತನ ಪ್ರಜೆ ಅದನು||
ಅವರ ವಂಶಜರೇ ಬಾಧ್ಯಸ್ಥರಾಗುವರದಕೆ|
ದೇವರ ನಾಮಪ್ರಿಯರೇ ನಿವಾಸಿಗಳು ಅದಕೆ||

ಶುಭಸಂದೇಶ: ಲೂಕ 10:17-24


ಆ ಕಾಲದಲ್ಲಿ ಕಳುಹಿಸಲಾಗಿದ್ದ ಎಪ್ಪತ್ತೆರಡು ಮಂದಿ ಸಂತೋಷಭರಿತರಾಗಿ ಹಿಂದಿರುಗಿ ಬಂದು, "ಸ್ವಾಮಿ, ನಿಮ್ಮ ಹೆಸರಿನಲ್ಲಿ ಆಜ್ಞೆ ಮಾಡಿದಾಗ ದೆವ್ವಗಳು ಕೂಡ ನಮಗೆ ಅಧೀನವಾಗುತ್ತವೆ, " ಎಂದು ವರದಿಮಾಡಿದರು. ಅದಕ್ಕೆ ಯೇಸು, " ಸೈತಾನನು ಆಕಾಶದಿಂದ ಸಿಡಿಲಿನಂತೆ ಬೀಳುವುದನ್ನು ಕಂಡೆನು. ಇಗೋ, ಸರ್ಪಗಳನ್ನು ಹಾಗೂ ಚೇಳುಗಳನ್ನು ತುಳಿಯುವುದಕ್ಕೂ ಶತ್ರುವಿನ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೂ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಹಾನಿಮಾಡದು. ಆದರೂ ದೆವ್ವಗಳು ನಿಮಗೆ ಅಧೀನವಾಗಿವೆಯೆಂದು ಸಂತೋಷಪಡುವುದಕ್ಕಿಂತ ನಿಮ್ಮ ಹೆಸರುಗಳು ಸ್ವರ್ಗದಲಿ ಲಿಖಿತವಾಗಿವೆ ಎಂದು ಸಂತೋಷಪಡಿ, " ಎಂದು ಹೇಳಿದರು. ಅದೇ ಗಳಿಗೆಯಲ್ಲಿ ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡು, " ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ, ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ. ಪುತ್ರನು ಯಾರೆಂದು ಪಿತನ ಹೊರತು ಬೆರಾರೂ ಅರಿಯರು. ಪಿತನು ಯಾರೆಂದು ಪುತ್ರನು ಮತ್ತು ಯಾರಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ ಅವನೇ ಹೊರತು ಮತ್ತಾರೂ ಅರಿಯರು, " ಎಂದು ಹೇಳಿದರು. ಅನಂತರ ಯೇಸು ಶಿಷ್ಯರ ಕಡೆ ತಿರುಗಿ, ಅವರಿಗೆ ಪ್ರತ್ಯೇಕವಾಗಿ, " ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು. ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡುವುದನ್ನು ನೋಡುವುದಕ್ಕೂ ನೀವು ಕೇಳುವುದನ್ನೂ ಕೇಳುವುದಕ್ಕೂ ಆಶಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂದು ನಿಮಗೆ ಹೇಳುತ್ತೇನೆ, " ಎಂದರು.

06.10.23 - " ನಿಮ್ಮನ್ನು ಅಲಕ್ಷ್ಯ ಮಾಡುವವನು ನನ್ನನ್ನು ಕಳುಹಿಸಿದಾತನನ್ನೇ ಅಲಕ್ಷ್ಯ ಮಾಡುತ್ತಾನೆ."

ಮೊದಲನೆಯ ವಾಚನ: ಬಾರೂಕ 1:15-22

ನಾವು ಮಾಡಬೇಕಾದ ಪಾಪನಿವೇದನೆ ಹೀಗಿರಲಿ: ನಮ್ಮ ದೇವರಾದ ಸರ್ವೇಶ್ವರ ಸತ್ಯಸ್ವರೂಪರು; ನಾವಾದರೋ ಇಂದು ನಾಚಿಕೆಗೀಡಾಗಿದ್ದೇವೆ. ನಾವು ಮಾತ್ರವಲ್ಲ, ಜುದೇಯದ ಜನರು, ಜೆರುಸಲೇಮಿನ ನಿವಾಸಿಗಳು, ನಮ್ಮ ಅರಸರು, ಅಧಿಪತಿಗಳು, ಪ್ರವಾದಿಗಳು, ನಮ್ಮ ಪೂರ್ವಜರು ಎಲ್ಲರೂ ಅಂತೆಯೇ ನಾಚಿಕೆಗೀಡಾಗಿದ್ದೇವೆ. ಏಕೆಂದರೆ ದೇವರ ಮುಂದೆ ನಾವು ಪಾಪಿಗಳು, ಅವರಿಗೆ ಅವಿಧೇಯರಾಗಿ ನಡೆದುಕೊಂಡಿದ್ದೇವೆ. ನಾವು ನಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡಲಿಲ್ಲ ; ಅವರು ನಮಗೆ ಕೊಟ್ಟ ಆಜ್ಞೆಗಳನ್ನು ಪಾಲಿಸಲಿಲ್ಲ. ನಮ್ಮ ದೇವರಾದ ಸರ್ವೇಶ್ವರನ ನಮ್ಮ ಪೂರ್ವಜರನ್ನು ಈಜಿಪ್ಟ್ ದೇಶದಿಂದ ಕರೆತಂದ ದಿನದಿಂದ ಇಂದಿನವರೆಗೂ ನಾವು ಅವರಿಗೆ ಅವಿಧೇಯರಾಗಿಯೇ ನಡೆದುಕೊಂಡಿದ್ದೇವೆ. ಅವರ ಮಾತನ್ನು ಕೇಳದೆ ಉದಾಸೀನರಾಗಿದ್ದೇವೆ. ಆದುದರಿಂದಲೇ ಉಪದ್ರವಗಳು ನಮಗೆ ಅಂಟಿಕೊಂಡಿವೆ. ಹಾಲೂ ಜೇನೂ ಹರಿಯುವ ನಾಡನ್ನು ನಮಗೆ ಕೊಡುವುದಕ್ಕಾಗಿ ನಮ್ಮ ಪೂರ್ವಜರನ್ನು ಈಜಿಪ್ಟ್ ದೇಶದಿಂದ ಕರೆತಂದ ನಮ್ಮ ದೇವರಾದ ಸರ್ವೇಶ್ವರಸ್ವಾಮಿ ತಮ್ಮ ದಾಸ ಮೋಶೆಯ ಮೂಲಕ ಹಾಕಿಸಿದ ಶಾಪ ನಮ್ಮನ್ನು ಇಂದಿಗೂ ಬಿಟ್ಟಿಲ್ಲ. ನಮ್ಮ ದೇವರಾದ ಸರ್ವೇಶ್ವರ ನಮ್ಮ ಬಳಿಗೆ ಕಳುಹಿಸಿದ ಪ್ರವಾದಿಗಳು ನುಡಿದ ದೈವೋಕ್ತಿಗಳನ್ನು ನಾವು ಆಲಿಸದೆ, ಅವರ ಮಾತಿಗೆ ಕಿವಿಗೊಡದೆ ಹೋದೆವು. ಮಾತ್ರವಲ್ಲ, ನಮ್ಮಲ್ಲಿ ಪ್ರತಿಯೊಬ್ಬನು ಅವನವನ ಹೃದಯ ದುಷ್ಪ್ರೇರಣೆಗೆ ಒಳಪಟ್ಟು, ಅನ್ಯದೇವತೆಗಳ ಪೂಜೆಮಾಡಿದ್ದಾನೆ. ನಮ್ಮ ದೇವರಾದ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನೇ ಮಾಡಿದ್ದಾನೆ.

ಕೀರ್ತನೆ 79:1-5,8-9.V.9
ಶ್ಲೋಕ: ದೇವಾ, ನೆರವಾಗು ನಿನ್ನ ನಾಮಮಹಿಮೆಯ ನಿಮಿತ್ತ|


ಹೊಕ್ಕಿದರು ದೇವಾ, ಮ್ಲೇಚ್ಛರು ನಿನ್ನ ಸ್ವಂತನಾಡನು|
ಹೊಲೆ ಮಾಡಿಹರು ನಿನ್ನ ಪವಿತ್ರ ದೇವಾಲಯವನು||
ಹಾಳುದಿಬ್ಬವನ್ನಾಗಿಸಿಹರು ಜೆರುಸಲೇಮ್ ನಗರವನು|
ಅರ್ಪಿಸಿದರು ನಿನ್ನ ದಾಸರ ಶವಗಳನು ಪಕ್ಷಿಗಳಿಗೆ|
ಹಾಕಿದರು ನಿನ್ನ ಭಕ್ತರ ಮಾಂಸವನು ಕಾಡುಮೃಗಗಳಿಗೆ||

ನೀರಂತೆ ಚೆಲ್ಲಿದರು ನೆತ್ತರನು ಜೆರುಸಲೇಮ್ ಸುತ್ತಲು|
ನಮ್ಮವರ ಶವಗಳನು ಹೂಳಲು ಯಾರೂ ಇಲ್ಲದಿರಲು||
ನಿಂದಾಸ್ಪದರಾದೆವು ನೆರೆಹೊರೆಯ ಜನಾಂಗಗಳಿಗೆ|
ಗುರಿಯಾದೆವು ಸುತ್ತಣವರ ಹಾಸ್ಯಕುಚೋದ್ಯಗಳಿಗೆ||
ನಿನ್ನ ಕೋಪತಾಪ ಹೇ ಪ್ರಭೂ, ಇನ್ನೆಷ್ಟರವರೆಗೆ?|
ಉರಿಯುತ್ತಿರಬೇಕೆ ಸದಾ ನಿನ್ನ ರೋಷಾಗ್ನಿಯ ಧಗೆ?||

ಹೊರಿಸಬೇಡ ಪೂರ್ವಿಕರ ತಪ್ಪುಗಳನು ನಮ್ಮ ಮೇಲೆ|
ಉರಿಸಂಕಟದಲ್ಲಿರುವೆವು, ತೋರೆಮಗೆ ನಿನ್ನ ನಾಮಮಹಿಮೆಯ ನಿಮಿತ್ತ|
ಪಾಪಗಳನು ಅಳಿಸಿ ನಮ್ಮನುದ್ಧರಿಸು ನಿನ್ನ ನಾಮದ ಪ್ರಯುಕ್ತ||

ಘೋಷಣೆ ಕೀರ್ತನೆ 95:8
ಅಲ್ಲೆಲೂಯ, ಅಲ್ಲೆಲೂಯ!

ಪ್ರಭುವಿನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ | ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ ||
ಅಲ್ಲೆಲೂಯ!

ಶುಭಸಂದೇಶ: ಲೂಕ 10:13-16

ಆ ಕಾಲದಲ್ಲಿ ಯೇಸು ಹೀಗೆಂದರು: "ಕೊರಾಜ್ಜಿನ್ ಪಟ್ಟಣವೇ, ನಿನಗೆ ದಿಕ್ಕಾರ ! ಬೆತ್ಸಾಯಿದ ಪಟ್ಟಣವೇ, ನಿನಗೆ ದಿಕ್ಕಾರ ! ನಿಮ್ಮಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ಮಾಡಿದ್ದರೆ, ಅಲ್ಲಿಯವರು ಎಂದೋ ಗೋಣಿತಟ್ಟನ್ನು ಉಟ್ಟುಕೊಂಡು, ಬೂದಿಯನ್ನು ಬಳಿದುಕೊಂಡು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗುತ್ತಿದ್ದರು. ಆದುದರಿಂದ ತೀರ್ಪಿನ ದಿನ ಟೈರ್ ಮತ್ತು ಸಿದೋನಿನ ಗತಿಯು ನಿಮಗಿಂತಲೂ ಸಹನೀಯವಾಗಿರುವುದು. ಎಲೈ ಕಫೆರ್ನವುಮ್ ಪಟ್ಟಣವೇ, ನೀನು ಸ್ವರ್ಗಕ್ಕೇರುವೆ ಎಂದು ನೆನಸುತ್ತೀಯೋ? ಇಲ್ಲ, ಪಾತಾಳಕ್ಕೆ ಇಳಿಯುವೆ. " ಅನಂತರ ತಮ್ಮ ಶಿಷ್ಯರನ್ನು ಉದ್ದೇಶಿಸಿ, " ನಿಮ್ಮನ್ನು ಆಲಿಸುವವನು ನನ್ನನ್ನೇ ಆಲಿಸುತ್ತಾನೆ ; ನಿಮ್ಮನ್ನು ಅಲಕ್ಷ್ಯ ಮಾಡುವವನು ನನ್ನನ್ನೇ ಅಲಕ್ಷ್ಯ ಮಾಡುತ್ತಾನೆ. ನನ್ನನ್ನು ಅಲಕ್ಷ್ಯ ಮಾಡುವವನಾದರೋ ನನ್ನನ್ನು ಕಳುಹಿಸಿದಾತನನ್ನೇ ಅಲಕ್ಷ್ಯ ಮಾಡುತ್ತಾನೆ, " ಎಂದರು.

05.10.23

ಮೊದಲನೆಯ ವಾಚನ: ನೆಹೆಮಿಯ 8:1-12

ತಮ್ಮತಮ್ಮ ಪಟ್ಟಣಗಲಲ್ಲಿ ವಾಸಿಸುತ್ತಿದ್ದ ಇಸ್ರಯೇಲ್ ಸರ್ವಸಮೂಹದವರು ಏಳನೆಯ ತಿಂಗಳಲ್ಲಿ ನೀರುಬಾಗಿಲಿನ ಮುಂದಿನ ಬಯಲಿನಲ್ಲಿ ಒಟ್ಟಿಗೆ ಸೇರಿದರು. ಸರ್ವೇಶ್ವರ ಮೋಶೆಯ ಮುಖಾಂತರ ಇಸ್ರಯೇಲರಿಗೆ ಕೊಟ್ಟ ಧರ್ಮಶಾಸ್ತ್ರದ ಗ್ರಂಥವನ್ನು ತೆಗೆದುಕೊಂಡು ಬರಬೇಕೆಂದು ಧರ್ಮೋಪದೇಶಕನಾದ ಎಜ್ರನನ್ನು ಕೇಳಿಕೊಂಡರು. ಯಾಜಕ ಎಜ್ರನು, ಗ್ರಹಿಸಿಕೊಳ್ಳಲು ಶಕ್ತರಾದ ಸ್ತ್ರೀಪುರುಷರು ನೆರೆದಿದ್ದ ಸಮೂಹದವರ ಮುಂದೆ, ಏಳನೆಯ ತಿಂಗಳಿನ ಪ್ರಥಮ ದಿನದಲ್ಲಿ, ಆ ಧರ್ಮಶಾಸ್ತ್ರವನ್ನು ತಂದು ಬೆಳಗಿನಿಂದ ಮಧ್ಯಾಹ್ನದವರೆಗೂ ಓದಿದನು. ಆ ನೀರು ಬಾಗಿಲಿನ ಮುಂದಣ ಬಯಲಿನಲ್ಲಿ ಕೂಡಿಬಂದಿದ್ದ ಸ್ತ್ರೀಪುರುಷರಲ್ಲಿ ಗ್ರಹಿಸಲು ಶಕ್ತರಾದವರೆಲ್ಲರೂ ಧರ್ಮಶಾಸ್ತ್ರ ಪಾರಾಯಣವನ್ನು ಆಲಿಸುತ್ತಿದ್ದರು. ಧರ್ಮೋಪದೇಶಕ ಎಜ್ರನು ಪಾರಾಯಣಕ್ಕಾಗಿ ಮಾಡಲಾಗಿದ್ದ ಮರದ ಪೀಠದ ಮೇಲೆ ನಿಂತನು. ಜನಸಮೂಹಕ್ಕಿಂತಲೂ ಎತ್ತರವಾದ ಸ್ಥಳದಲ್ಲಿ ನಿಂತಿದ್ದ ಎಜ್ರನು ಪರಾತ್ಪರ ದೇವರಾದ ಸರ್ವೇಶ್ವರನನ್ನು ಸ್ತುತಿಸಿದಾಗ ಸರ್ವಜನರೂ ತಮ್ಮ ಕೈಗಳನ್ನೆತ್ತಿ ' ಆಮೆನ್, ಆಮೆನ್ ' ಎಂದು ಹೇಳಿ ನೆಲದ ಮಟ್ಟಿಗೂ ತಲೆಬಾಗಿ ಸರ್ವೇಶ್ವರನನ್ನು ಆರಾಧಿಸಿದರು. ಆಮೇಲೆ ಲೇವಿಯರು ಧರ್ಮಶಾಸ್ತ್ರವನ್ನು ಜನರು ಗ್ರಹಿಸುವಂತೆ ಮಾಡಿದರು. ಜನರು ಎದ್ದುನಿಂತ ನಂತರ ಅವರು ದೇವರ ಧರ್ಮಶಾಸ್ತ್ರವನ್ನು ಸ್ಪಷ್ಟವಾಗಿ ಓದುತ್ತಾ ಅದರ ತಾತ್ಪರ್ಯವನ್ನು ವಿವರಿಸಿದರು. ಜನರು ಚೆನ್ನಾಗಿ ಗ್ರಹಿಸಿಕೊಂಡರು. ಜನರೆಲ್ಲರೂ ಧರ್ಮೋಪದೇಶದ ವಾಕ್ಯಗಳನ್ನು ಕೇಳುತ್ತಾ ಕಣ್ಣೀರಿಡುತ್ತಿದ್ದರು. ರಾಜ್ಯಪಾಲ ನೆಹೆಮಿಯನು, ಧರ್ಮೋಪದೇಶಮಾಡುವ ಯಾಜಕ ಎಜ್ರನು ಹಾಗು ಜನರನ್ನು ಸಂಬೋಧಿಸುತ್ತಿದ್ದ ಲೇವಿಯರು ಜನರಿಗೆ, " ಈ ದಿನ ನಿಮ್ಮ ದೇವರಾದ ಸರ್ವೇಶ್ವರನಿಗೆ ಪರಿಶುದ್ಧ ದಿನ! ಆದುದರಿಂದ ನೀವು ದುಃಖಿಸುತ್ತಾ ಅಳುತ್ತಾ ಇರಬೇಡಿ, " ಎಂದು ಹೇಳಿದರು. ಇದಲ್ಲದೆ, ಎಜ್ರನು ಅವರಿಗೆ, " ಹೋಗಿ ಮೃಷ್ಟಾನ್ನವನ್ನೂ ಮಧುರಪಾನವನ್ನೂ ತೆಗೆದುಕೊಳ್ಳಿ, ತಮಗಾಗಿ ಏನೂ ಸಿದ್ಧಮಾಡದವರಿಗೆ ಒಂದು ಪಾಲನ್ನು ಕಳುಹಿಸಿರಿ. ಈ ದಿನ ನಮ್ಮ ಸರ್ವೇಶ್ವರನಿಗೆ ಪ್ರತಿಷ್ಠಿತ ದಿನ! ವ್ಯಸನಪಡಬೇಡಿ, ಸರ್ವೇಶ್ವರನ ಆನಂದವೇ ನಿಮ್ಮ ಆಶ್ರಯವಾಗಿದೆ, " ಎಂದನು. ಲೇವಿಯರು ಕೂಡ, " ಸುಮ್ಮನಿರಿ, ಇದು ದೇವರ ದಿವಸ, ದುಃಖಿಸಬೇಡಿ, " ಎಂದು ಹೇಳಿ ಜನರನ್ನು ಸಂತೈಸಿದರು. ತಮಗೆ ತಿಳಿಯಪಡಿಸಿದ ಮಾತುಗಳನ್ನು ಜನರೆಲ್ಲರೂ ಗಮನಿಸಿ, ಹೋಗಿ ಅನ್ನಪಾನಗಳನ್ನು ತೆಗೆದುಕೊಂಡು ಏನೂ ಇಲ್ಲದವರಿಗೆ ಪಾಲುಗಳನ್ನು ಕಳುಹಿಸಿ, ಬಹಳವಾಗಿ ಸಂತೋಷಪಟ್ಟರು.

ಕೀರ್ತನೆ 19:7-10

ಶ್ಲೋಕ: ಪ್ರಭುವಿನ ನಿಯಮ ನೀತಿಬದ್ದ, ಮನಸ್ಸಿಗದು ಹರ್ಷಾನಂದ.

ಪ್ರಭುವಿನ ಆಜ್ಞೆ ಪರಿಪೂರ್ಣ, ಜೀವನಕದು ನವಚೇತನ|
ನಂಬಲರ್ಹ ಪ್ರಭುವಿನ ಶಾಸನ, ಮುಗ್ದರಿಗದು ಸುಜ್ಞಾನ||
ಪ್ರಭುವಿನ ನಿಯಮ ನೀತಿಬದ್ದ, ಮನಸ್ಸಿಗದು ಹರ್ಷಾನಂದ|
ಪ್ರಭುವಿನ ಕಟ್ಟಳೆ ಪರಿಶುದ್ದ, ಕಣ್ಣಿಗದು ದೀವಿಗೆ||

ಪ್ರಭುವಿನ ಭೀತಿ ಪವಿತ್ರ, ಅದೆಂದಿಗೂ ಶಾಶ್ವತ|
ಪ್ರಭುವಿನ ತೀರ್ಪು ಯಥಾರ್ಥ, ಪರಿಪೂರ್ಣ ನ್ಯಾಯಯುತ||
ಅಪೇಕ್ಷಣೀಯವಾದುವವು ಚಿನ್ನ ಅಪರಂಜಿಗಿಂತ|
ಅತಿಮಧುರವಾದುವವು ಅಪ್ಪಟ ಜೇನುತುಪ್ಪಕ್ಕಿಂತ||

ಶುಭಸಂದೇಶ: ಲೂಕ 10:1-12

ಆ ಕಾಲದಲ್ಲಿ ಯೇಸು ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರನ್ನಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, " ಬೆಳೆಯೇನೋ ಹೇರಳವಾಗಿದೆ, ಕೊಯ್ಲುಗಾರರೊ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, ' ಈ ಮನೆಗೆ ಶಾಂತಿ, ' ಎಂದು ಆಶೀರ್ವಾದಮಾಡಿ. ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು. ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. ' ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ, ' ಎಂದು ತಿಳಿಸಿರಿ. ಆದರೆ ನೀವು ಹೋಗುವ ಊರಿನ ಜನರು ನಿಮ್ಮನ್ನು ಸ್ವಾಗತಿಸದೆ ಹೋದರೆ, ರಸ್ತೆಗಳಿಗೆ ಹೋಗಿ, ' ನಮ್ಮ ಪಾದಗಳಿಗೆ ಅಂಟಿರುವ ನಿಮ್ಮ ಊರಿನ ಧೂಳನ್ನು ಕೂಡ ನಿಮಗೆ ವಿರುದ್ದವಾಗಿ ಒದರಿಬಿಡುತ್ತೇವೆ. ಆದರೂ ದೇವರ ಸಾಮ್ರಾಜ್ಯ ಸಮೀಪಿಸಿದೆ ಎಂಬುದನ್ನು ಮಾತ್ರ ನೀವು ಗಮನದಲ್ಲಿಡಿ ' ಎಂದು ತಿಳಿಸಿರಿ. ತೀರ್ಪಿನ ದಿನ ಈ ಊರಿನ ಗತಿ ಸೊದೋಮ್ ಊರಿನ ಗತಿಗಿಂತಲೂ ಕಠಿಣವಾಗಿರುವುದೆಂದು ನಾನು ನಿಮಗೆ ಹೇಳುತ್ತೇನೆ.

04.10.23

ಮೊದಲನೆಯ ವಾಚನ: ನೆಹೆಮಿಯ 2:1-8

ನಾನು ರಾಜನ ಪಾನಸೇವಕನಾಗಿದ್ದೆ. ಅರ್ತಷಸ್ತರಾಜನ ಇಪ್ಪತ್ತನೆಯ ವರ್ಷದ ಚೈತ್ರಮಾಸದಲ್ಲಿ, ರಾಜನು ದ್ರಾಕ್ಷಾರಸ ಪಾನಮಾಡುವ ಹೊತ್ತಿನಲ್ಲಿ ದ್ರಾಕ್ಷಾರಸವನ್ನು ತಂದುಕೊಟ್ಟೆ. ನಾನು ಅವನ ಸನ್ನಿಧಿಯಲ್ಲಿ ಹಿಂದೆ ಎಂದೂ ಖಿನ್ನನಾಗಿರಲಿಲ್ಲ. ರಾಜ ನನಗೆ, " ನೀನು ಕಳೆಗುಂದಿದವನಾಗಿರುವೆ, ಏಕೆ? ನಿನ್ನ ದೇಹಾರೋಗ್ಯ ಚೆನ್ನಾಗಿದೆಯಲ್ಲವೇ? ಇದಕ್ಕೆ ಮನೋವೇದನೆಯೇ ಹೊರತು ಬೇರೇನೂ ಕಾರಣ ಇರಲಾರದು, " ಎಂದು ಹೇಳಿದ. ನನಗೆ ಮಹಾಭೀತಿಯುಂಟಾಯಿತು. ನಾನು ರಾಜನಿಗೆ, "ರಾಜಾಧಿರಾಜರು ಚಿರಂಜೀವಿಯಾಗಿರಲಿ! ನನ್ನ ಪೂರ್ವಿಕರ ಸಮಾಧಿಗಳಿರುವ ಪಟ್ಟಣವು ಹಾಳಾಗಿ ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ; ಹೀಗಿರುವಲ್ಲಿ, ನನ್ನ ಮುಖ ಕಳೆಗುಂದದೆ ಇರಲು ಸಾಧ್ಯವೆ?, " ಎಂದು ಹೇಳಿದೆ. ಆಗ ರಾಜ, " ನಿನ್ನ ಆಸೆಯೇನು?, " ಎಂದು ಕೇಳಿದನು. ನಾನು ಪರಲೋಕದ ದೇವರನ್ನು ಪ್ರಾರ್ಥಿಸಿ, ಅವನಿಗೆ, "ರಾಜರ ಚಿತ್ತವಿರುವುದಾದರೆ, ಮತ್ತು ತಮ್ಮ ಸೇವಕನು ತಮ್ಮ ದೃಷ್ಟಿಯಲ್ಲಿ ದಯೆಗೆ ಪಾತ್ರನಾಗಿದ್ದರೆ, ನನ್ನ ಪಿತೃಗಳ ಸಮಾಧಿಗಳಿರುವ ಪಟ್ಟಣವನ್ನು ಮರಳಿ ಕಟ್ಟುವುದಕ್ಕೆ ಜುದೇಯ ನಾಡಿಗೆ ಹೋಗಲು ನನಗೆ ಅಪ್ಪಣೆಯಾಗಬೇಕು, " ಎಂದು ಹೇಳಿದೆ. ರಾಜರ ಹತ್ತಿರದಲ್ಲೇ ಕುಳಿತುಕೊಂಡಿದ್ದಳು ರಾಣಿ. "ಪ್ರಯಾಣಕ್ಕೆ ನಿನಗೆ ಎಷ್ಟು ಕಾಲಬೇಕು? ಯಾವಾಗ ಹಿಂದಿರುಗುವೆ? " ಎಂದು ವಿಚಾರಿಸಿದ. ನಾನು ಕಾಲವನ್ನು ಸೂಚಿಸಿದೆ. ಅವನು ಒಪ್ಪಿಕೊಂಡು ಹೋಗಿಬರಲು ಅಪ್ಪಣೆಕೊಟ್ಟ. ತರುವಾಯ ನಾನು ರಾಜನಿಗೆ, "ನದಿಯಾಚೆಯ ದೇಶಾಧಿಪತಿಗಳು ತಮ್ಮ ಪ್ರಾಂತ್ಯಗಳಲ್ಲಿ ಹಾದು ಜುದೇಯ ನಾಡಿಗೆ ಹೋಗುವುದಕ್ಕೆ ನನಗೆ ಅಪ್ಪಣೆಯಾಗಬೇಕಾಗುತ್ತದೆ. ರಾಜವನಪಾಲಕನಾದ ಆಸಾಫನು ದೇವಾಲಯದ ಕೋಟೆಯ ಬಾಗಿಲುಗಳನ್ನು ಪಟ್ಟಣದ ಪೌಳಿಗೋಡೆಯನ್ನೂ ನಾನು ಸೇರುವ ಮನೆಯನ್ನೂ, ಕಟ್ಟಲು ಬೇಕಾಗುವ ತೊಲೆಗಳಿಗಾಗಿ ಮರಗಳನ್ನು ಕೊಡಬೇಕಾಗುತ್ತದೆ; ‌‌ಇದನ್ನೆಲ್ಲಾ ಕೊಡುವಂತೆ ರಾಜರು ನನ್ನ ಕೈಯಲ್ಲಿ ಪತ್ರಗಳನ್ನು ದಯಮಾಡಿ ನೀಡಬೇಕು, " ಎಂದು ಬಿನ್ನವಿಸಿದೆ. ನನ್ನ ದೇವರ ಕೃಪಾಹಸ್ತ ನನ್ನ ಮೇಲೆ ಇದ್ದುದರಿಂದ ರಾಜನು ಅವುಗಳನ್ನು ನನಗೆ ಕೊಟ್ಟನು.

ಕೀರ್ತನೆ 137:1-6.V.6
ಶ್ಲೋಕ: ಪ್ರಭುವಿನ ನಾಮ ಸ್ಮರಣೆ ಮಾಡದಿದ್ದಲ್ಲಿ, ಸೇದಿ ಹೋಗಲಿ ನಾಲಿಗೆ ನನ್ನ ಬಾಯಲಿ |

ಬಾಬಿಲೋನಿನ ನದಿಗಳ ತೀರದಲಿ ಕುಳಿತು|
ಅತ್ತು ಪ್ರಲಾಪಿಸಿದೆವು ಸಿಯೋನನ್ನು ನೆನೆದು||
ಆ ನಾಡಿನಲಿ ಕಿನ್ನರಿಗಳನ್ನೇ ತೂಗುಹಾಕಿದೆವು|
ನೀರವಂಜಿ ಮರಗಳಿಗೆ ಅವನ್ನು ನೇತುಹಾಕಿದೆವು||

ಸೆರೆಹಿಡಿದು ಬಂಧಿಸಿದಾ ಜನ ಈಪರಿ ಪೀಡಿಸಿದರೆಮ್ಮನು|
ಹಾಡಿ, ನಮ್ಮ ವಿವೋದಕ್ಕಾಗಿ ಸಿಯೋನಿನ ಗೀತೆಗಳಲೊಂದನು||
ಪ್ರಭುಗೀತೆಗಳ ನಾವು ಗಾನಮಾಡುವುದೆಂತು|
ಅನ್ಯನಾಡಿನೊಳು ಅವುಗಳನು ಹಾಡುವುದೆಂತು||

ಜೆರುಸಲೇಮ್, ನಾನು ನಿನ್ನ ಮರೆತಲ್ಲಿ|
ನನ್ನ ಬಲಹಸ್ತ ಬತ್ತಿಹೋಗಿಬಿಡಲಿ||
ಜೆರುಸಲೇಮನು ನಾ ಸ್ಮರಣೆಮಾಡದಿದ್ದಲ್ಲಿ|
ಆ ಸ್ಮರಣೆ ಸರ್ವೋತ್ತಮ ನಲಿವು ನನಗಾಗದಿದ್ದಲ್ಲಿ|
ಸೇದಿಹೋಗಲಿ ನಾಲಿಗೆ ನನ್ನ ಬಾಯಲಿ||

ಶುಭಸಂದೇಶ: ಲೂಕ 9:57-62

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರೊಂದಿಗೆ ದಾರಿಯಲ್ಲಿ ಹೋಗುತ್ತಿದ್ದಾಗ ಒಬ್ಬನು ಅವರಿಗೆ, " ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಹಿಂಬಾಲಿಸುತ್ತೇನೆ, " ಎಂದನು. ಯೇಸು ಅವನಿಗೆ, "ನರಿಗಳಿಗೆ ಗುಹೆಗಳುಂಟು; ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು; ಆದರೆ ನರಪುತ್ರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ, " ಎಂದರು. ಇನ್ನೊಬ್ಬನಿಗೆ ಯೇಸು, "ನನ್ನನ್ನು ಹಿಂಬಾಲಿಸು, " ಎಂದು ಹೇಳಿದಾಗ ಅವನು, "ಸ್ವಾಮಿ, ಮೊದಲು ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮುಗಿಸುವ ತನಕ ಸಮಯಕೊಡಿ, " ಎಂದನು. ಅವನಿಗೆ ಯೇಸು, "ಸತ್ತವರೇ ತಮ್ಮ ಸತ್ತವರನ್ನು ಸಮಾಧಿಮಾಡಿಕೊಳ್ಳಲಿ; ನೀನಾದರೋ ಹೋಗು, ದೇವರ ಸಾಮ್ರಾಜ್ಯವನ್ನು ಪ್ರಚಾರಮಾಡು, " ಎಂದು ಹೇಳಿದರು. ಮತ್ತೊಬ್ಬನು, "ನಿಮ್ಮನ್ನು ಹಿಂಬಾಲಿಸುತ್ತೇನೆ ಪ್ರಭೂ, ಆದರೆ ಮೊದಲು ಮನೆಯವರನ್ನು ಬೀಳ್ಕೊಟ್ಟು ಬರಲು ಅಪ್ಪಣೆಯಾಗಬೇಕು, "ಎಂದನು. ಯೇಸು ಅವನನ್ನು ನೋಡಿ, " ನೇಗಿಲಿಗೆ ಕೈಹಾಕಿ ಹಿಂದಕ್ಕೆ ನೋಡುವವನು ದೇವರ ಸಾಮ್ರಾಜ್ಯಕ್ಕೆ ತಕ್ಕವನಲ್ಲ, " ಎಂದರು.