23.08.23 - "ನನ್ನ ಔದಾರ್ಯವನ್ನು ಕಂಡು ನಿನಗೇಕೆ ಹೊಟ್ಟೆಯುರಿ?"

ಮೊದಲನೇ ವಾಚನ: ನ್ಯಾಯಸ್ಥಾಪಕರು 9:6-15


ಎಲ್ಲಾ ಶೆಕೆಮಿನವರೂ ಹಾಗು ಮಿಲ್ಲೋಕೋಟೆಯವರೂ ಶೆಕೆಮಿನ ಬಳಿಯಲ್ಲಿ ಸ್ಮಾರಕ ಸ್ತಂಭವಿರುವ ಓಕ್ ಮರದ ಹತ್ತಿರ ಕೂಡಿಬಂದು ಅಬೀಮೆಲೆಕನನ್ನು ತಮ್ಮ ಅರಸನನ್ನಾಗಿ ಮಾಡಿಕೊಂಡರು. ಯೋತಾಮನು ಇದನ್ನು ಕೇಳಿ, ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ನಿಂತು ಗಟ್ಟಿಯಾದ ಧ್ವನಿಯಿಂದ ಹೀಗೆಂದನು: "ಶೆಕೆಮಿನ ಜನರೇ, ನನ ಮಾತಿಗೆ ಕಿವಿಗೊಡಿ; ಆಗ ದೇವರೂ ನಿಮ್ಮ ಮೊರೆಗೆ ಕಿವಿಗೊಡುವರು; ಒಮ್ಮೆ ಮರಗಳು ತಮಗೆ ಒಬ್ಬ ಅರಸನನ್ನು ಅಭಿಷೇಕಿಸಬೇಕೆಂದು ಹೊರಟು ಓಲಿವ್ ಮರದ ಬಳಿಗೆ ಬಂದು, "ನೀನು ನಮಗೆ ಅರಸನಾಗು," ಎಂದವು. ಅದು ಅವುಗಳಿಗೆ, "ನನ್ನಲ್ಲಿರುವ ಎಣ್ಣೆಯಿಂದ ದೇವತೆಗಳೂ ಮಾನವರೂ ಘನತೆ ಗೌರವಗಳನ್ನು ಪಡೆಯುತ್ತಾರೆ. ಇದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೊ?" ಎಂದಿತು. ಬಳಿಕ ಆ ಮರಗಳು ಅಂಜೂರದ ಗಿಡದ ಬಳಿಗೆ ಹೋಗಿ ಅದಕ್ಕೆ, "ನೀನು ಬಂದು ನಮ್ಮ ಅರಸನಾಗು," ಎಂದವು. ಅದು, "ನಾನು ನನ್ನ ಶ್ರೇಷ್ಠವಾದ ಸಿಹಿಹಣ್ಣು ಕೊಡುವುದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೊ?" ಎಂದಿತು. ಆನಂತರ ಆ ಮರಗಳು ದ್ರಾಕ್ಷಾಬಳ್ಳಿಯ ಬಳಿಗೆ ಹೋಗಿ, "ನೀನು ಬಂದು ನಮ್ಮ ಅರಸನಾಗು," ಎಂದವು. ಅದಕ್ಕೆ ಆ ಬಳ್ಳಿ, "ನಾನು ನನ್ನ ರಸದಿಂದ ದೇವತೆಗಳಿಗೂ ಮಾನವರಿಗೂ ಆನಂದ ತರುವುದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೊ?" ಎಂದಿತು. ಕಡೆಗೆ ಆ ಮರಗಳು ಮುಳ್ಳು ಪೊದೆಯ ಬಳಿಗೆ ಹೋಗಿ, "ನೀನು ಬಂದು ನಮ್ಮ ಅರಸನಾಗು," ಎಂದವು. ಅದಕ್ಕೆ ಆ ಪೊದೆ, "ನೀವು ನಿಜವಾದ ಮನಸ್ಸಿನಿಂದ ನನಗೆ ರಾಜ್ಯಾಭಿಷೇಕ ಮಾಡಬೇಕೆಂದಿರುವುದಾದಾರೆ, ಬನ್ನಿ, ಬಂದು ನನ್ನ ನೆರಳಲ್ಲಿ ಆಶ್ರಯಿಸಿಕೊಳ್ಳಿ; ಇಲ್ಲವಾದರೆ ನನ್ನಿಂದ ಬೆಂಕಿಹೊರಟು ಲೆಬನೋನಿನ ದೇವದಾರುವೃಕ್ಷಗಳನ್ನು ಸುಟ್ಟುಬಿಡುವುದು," ಎಂದು ಬಿಟ್ಟಿತು.

ಕೀರ್ತನೆ: 21:2-3, 4-5, 6-7

ಶ್ಲೋಕ: ಅರಸನಿಗೆ ಹರ್ಷವಾಯಿತು ಪ್ರಭೂ, ನೀ ತೋರಿದ ಪರಾಕ್ರಮಕ್ಕಾಗಿ

ಶುಭಸಂದೇಶ: ಮತ್ತಾಯ 20:1-16


ಯೇಸು ತಮ್ಮ ಶಿಷ್ಯರಿಗೆ ಈ ಸಾಮತಿ ಹೇಳಿದರು, ಸ್ವರ್ಗಸಾಮ್ರಾಜ್ಯವು ಹೀಗಿದೆ: ಒಬ್ಬ ಯಜಮಾನನಿಗೆ ಒಂದು ದ್ರಾಕ್ಷಿತೋಟವಿತ್ತು. ಅದರಲ್ಲಿ ಕೆಲಸ ಮಾಡುವುದಕ್ಕೆ ಕೂಲಿಗಾರರನ್ನು ಗೊತ್ತುಮಾಡಲು ಅವನು ಬೆಳಗಿನ ಜಾವದಲ್ಲೇ ಹೊರಟ. ಆಳಿಗೆ ಒಂದು ಬೆಳ್ಳಿ ನಾಣ್ಯದಂತೆ ದಿನಕೂಲಿಯನ್ನು ಮಾತಾಡಿ ತೋಟಕ್ಕೆ ಕಳುಹಿಸಿದ. ಸುಮಾರು ಬೆಳಗ್ಗೆ ಒಂಭತ್ತು ಗಂಟೆಗೆ ಅವನು ಪುನಃ ಸಂತೆಬೀದಿಯ ಕಡೆಗೆ ಹೋದ ಕೆಲಸವಿಲ್ಲದೆ ಸುಮ್ಮನೆ ನಿಂತುಕೊಂಡಿದ್ದ ಕೆಲವು ಕೂಲಿಗಾರರನ್ನು ಅಲ್ಲಿ ಕಂಡ. ನೀವೂ ನನ ದ್ರಾಕ್ಷಿತೋಟಕ್ಕೆ ಹೋಗಿರಿ ನ್ಯಾಯವಾದ ಕೂಲಿಯನ್ನು ನಿಮಗೆ ಕೊಡುತ್ರೇನೆ, ಎಂದ. ಅವರೂ ಹೋದರು. ಬಳಿಕ  ಸುಮಾರು ಹನ್ನೆರಡು ಗಂಟೆಗೊಮ್ಮೆ ಮತ್ತೆ ಮೂರು ಗಂಟೆಗೊಮ್ಮೆ ಹೋಗಿ ಇನ್ನೂ ಕೆಲವರನ್ನು ಕೆಲಸಕ್ಕೆ ಕಳುಹಿಸಿದ. ಐದು ಗಂಟೆಗೆ ಹೋದಾಗಲೂಬೇರೆ ಕೆಲವರು ಅಲ್ಲಿ ನಿಂತಿರುವುದನ್ನು ಕಂಡು, ದಿನವಿಡೀ ಕೆಲಸ ಮಾಡದೆ ಸುಮ್ಮನೆ ಇಲ್ಲಿ ನಿಂತಿದ್ದೀರಲ್ಲಾ, ಏಕೆ?" ಎಂದು ಕೇಳಿದ, ಅದಕ್ಕೆ ಅವರು, "ನಮ್ಮನ್ನು ಯಾರೂ ಕೂಲಿಗೆ ಕರೆಯಲಿಲ್ಲ," ಎಂದರು. "ಹಾಗಾದರೆ ನೀವೂ ಕೂಡ ನನ್ನ ದ್ರಾಕ್ಷಿ ತೋಟಕ್ಕೆ ಹೋಗಿ ಕೆಲಸಮಾಡಿ," ಎಂದು ಹೇಳಿ ಅವರನ್ನೂ ಕಳುಹಿಸಿದ. "ಸಂಜೆಯಾಯಿತು. ತೋಟದ ಯಜಮಾನ ತನ್ನ ಮೇಸ್ತ್ರಿಗೆ, "ಕೂಲಿಯಾಳುಗಳನ್ನು ಕರೆದು, ಕೊನೆಗೆ ಬಂದವರಿಂದ ಆರಂಭಿಸಿ ಮೊದಲು ಬಂದವರ ತನಕ ಕೂಲಿಕೊಡು," ಎಂದ. ಅದರಂತೆ ಐದು ಗಂಟೆಗೆ ಗೊತ್ತುಮಾಡಿದವರು ಬಂದಾಗ ಒಬ್ಬೊಬ್ಬನಿಗೆ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು. ಮೊತ್ತಮೊದಲು ಗೊತ್ತುಮಾಡಿದವರು  ತಮ್ಮ ಸರದಿ ಬಂದಾಗ, ತಮಗೆ ಹೆಚ್ಚು ಸಿಗುವುದೆಂದು ಭಾವಿಸಿದರು. ಆದರೆ ಅವರಿಗೂ ಒಂದೊಂದೇ  ಬೆಳ್ಳಿನಾಣ್ಯ ದೊರಕಿತು. ಅದನ್ನು ತೆಗೆದುಕೊಂಡಾಗ ಅವರು ದಣಿಯ ವಿರುದ್ಧ ಗೊಣಗಲಾರಂಭಿಸಿದರು. "ಕಡೇ ಹೊತ್ತಿನಲ್ಲಿ ಬಂದ ಇವರು ಒಂದೇ ಒಂದು ಗಂಟೆ  ಕೆಲಸಮಾಡಿದ್ದಾರೆ; ಬಿಸಿಲಲ್ಲಿ ಬೆಂದು, ದಿನವೆಲ್ಲಾ ದುಡಿದು ನಮ್ಮನ್ನು ಇವರಿಗೆ ಸರಿಸಮ  ಮಾಡಿದ್ದೀರಲ್ಲಾ!" ಎಂದರು. ಅದಕ್ಕೆ ಯಜಮಾನ ಅವರಲ್ಲಿ ಒಬ್ಬನಿಗೆ, "ಅಯ್ಯಾ, ನಿನಗೆ ನಾನು ಅನ್ಯಾಯ ಮಾಡಿಲ್ಲ. ದಿನಕೊಂದು ಬೆಳ್ಳಿ ನಾಣ್ಯದಂತೆ ನೀನು ನನ್ನೊಡನೆ ಒಪ್ಪಂದ ಮಾಡಿಕೊಳ್ಳಲಲ್ಲವೇ? ನಿನ್ನ ಕೂಲಿ ಏನೋ ಅದನ್ನು ತೆಗೆದುಕೊಂಡು ಹೋಗು. ನಿನಗೆ ಕೊಟ್ಟಷ್ಟನ್ನು ಈ ಕಟ್ಟಕಡೆಯವನಿಗೂ ಕೊಡುವುದು ನನ್ನ ಇಷ್ಟ . ನನ್ನದನ್ನು ನನ್ನಿಷ್ಟಾನುಸಾರ ಕೊಡುವ ಹಕ್ಕು ನನಗಿಲ್ಲವೆ? ನನ್ನ ಔದಾರ್ಯವನ್ನು ಕಂಡು ನಿನಗೇಕೆ ಹೊಟ್ಟೆಯುರಿ?" ಎಂದ. ಹೀಗೆ, ಕಡೆಯವರು ಮೊದಲಿಗರಾಗುವರು; ಮೊದಲಿನವರು ಕಡೆಯವರಾಗುವರು," ಎಂದು ಯೇಸು ಬೋಧಿಸಿದರು.

22.08.23 - "ಮೊದಲಿನವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು"

 ಮೊದಲನೇ ವಾಚನ: ನ್ಯಾಯಸ್ಥಾಪಕರು 6:11-24



ಸರ್ವೇಶ್ವರನ ದೂತನು ಬಂದು ಒಫ್ರದಲ್ಲಿದ್ದ ಓಕ್ ಮರದ ಅಡಿಯಲ್ಲಿ ಕುಳಿತುಕೊಂಡನು. ಅದು ಅಬೀಯೆಜೆರನ ಗೋತ್ರದವನಾದ ಯೋವಾಷನದಾಗಿತ್ತು. ಅವನ ಮಗ ಗಿದ್ಯೋನನು ಮಿದ್ಯಾನ್ಯರಿಗೆ ಗೊತ್ತಾಗದ ಹಾಗೆಅಲ್ಲಿ ದ್ರಾಕ್ಷಿಯ ಆಲೆಯ ಮರೆಯಲ್ಲಿ ಗೋದಿಯನ್ನು ಬಡಿಯುತ್ತಿದ್ದನು. ಸರ್ವೇಶ್ವರನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾಗಿ ಅವನಿಗೆ, "ಪರಾಕ್ರಮಶಾಲಿಯೇ, ಸರ್ವೇಶ್ವರ ನಿನ್ನೊಡನೆ ಇದ್ದಾರೆ" ಎಂದನು. ಆಗ ಗಿದ್ಯೋನನು ಅವನಿಗೆ, "ಸ್ವಾಮೀ, ಸರ್ವೇಶ್ವರ ನಮ್ಮೊಡನೆ ಇದ್ದರೆ ನಮಗೆ ಇದೆಲ್ಲಾ ಏಕೆ ಸಂಭವಿಸಿತು? ನಮ್ಮ ಹಿರಿಯರು, ಸರ್ವೇಶ್ವರ ಅದ್ಬುತಗಳನ್ನು ನಡಿಸಿ ತಮ್ಮನ್ನು ಈಜಿಪ್ಟಿನಿಂದ ಬಿಡಿಸಿದರೆಂಬುದಾಗಿ ವಿವರಿಸುತ್ತಿದ್ದರು. ಅಂಥ ಅದ್ಬುತಗಳು ಈಗೆಲ್ಲಿವೆ? ಅವರು ನಮ್ಮನ್ನು ತಿರಸ್ಕರಿಸಿ ಮಿದ್ಯಾನ್ಯರ  ಕೈಗೆ ಒಪ್ಪಿಸಿಬಿಟ್ಟಿದ್ದಾರಲ್ಲಾ," ಎನ್ನಲು, ಸರ್ವೇಶ್ವರ ಅವರನ್ನು ದಿಟ್ಟಿಸಿ ನೋಡಿ, "ನಾನು ನಿನ್ನನ್ನು ಕಳುಹಿಸುತ್ತೇನೆ, ಹೋಗು; ಈ ನಿನ್ನ ಬಲದಿಂದ ಇಸ್ರಯೇಲರನ್ನು ಮಿದ್ಯಾನ್ಯರಿಂದ ಬಿಡಿಸು," ಎಂದು ಹೇಳಿದರು. ಆಗ ಗಿದ್ಯಾನನು, "ಸ್ವಾಮೀ, ನಾನು ಇಸ್ರಯೇಲರನ್ನು ರಕ್ಷಿಸುವುದು ಹೇಗೆ?, ಮನಸ್ಸೆ ಕುಲದಿಂದ ನನ್ನ ಮನೆ ಕನಿಷ್ಠವಾದುದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು," ಎಂದನು. ಸರ್ವೇಶ್ವರ ಅವನಿಗೆ, "ನಾನು ನಿನ್ನೊಂದಿಗೆ ಇರುವುದರಿಂದ ನೀನು ಮಿದ್ಯಾನ್ಯರೆಲ್ಲರನ್ನೂ ಒಬ್ಬ ಮನುಷ್ಯನನ್ನೋ ಎಂಬಂತೆ ಸದೆಬಡಿಯುವೆ," ಎಂದರು.  ಗಿದ್ಯಾನನು: "ಸ್ವಾಮೀ, ದಯವಿರಲಿ; ನನ್ನೊಂದಿಗೆ ಮಾತನಾಡುತ್ತಿರುವ ತಾವು ಸ್ವಾಮಿಯವರೇ ಆಗಿದ್ದೀರೆಂಬುದಕ್ಕೆ ನನಗೊಂದು ಗುರುತನ್ನು ಅನುಗ್ರಹಿಸಬೇಕು. ನಾನು ಹೋಗಿ ತಮಗೆ ಕಾಣಿಕೆಯನ್ನು ತೆಗೆದುಕೊಂಡು ಬರುವವರೆಗೆ ತಾವು ಈ ಸ್ಥಳವನ್ನು ಬಿಡಬಾರದು," ಎಂದು ಬಿನ್ನವಿಸಲು ಅವರು, "ನೀನು ತಿರುಗಿ ಬರುವವರೆಗೆ ನಾನು ಇಇಲ್ಲೇ ಇರುವೆನು," ಎಂದರು. ಗಿದ್ಯಾನನು ಮನೆಗೆ ಹೋಗಿ ಒಂದು ಆಡಿನ ಮರಿಯನ್ನು ಪಕ್ವಮಾಡಿ ಹತ್ತು ಕಿಲೋಗ್ರಾಂ ಹಿಟ್ಟಿನಿಂದ ಹಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು ಮಾಂಸವನ್ನು ಪುಟ್ಟಿಯಲ್ಲಿಟ್ಟು, ಅದರ ರಸವನ್ನು ಬಟ್ಟಲಿನಲ್ಲಿ ಹೊಯ್ದು, ಎಲ್ಲವನ್ನೂ ಓಕ್ ಮರದ ಕೆಳಗೆ ಅವರ ಮುಂದೆ ತಂದಿಟ್ಟನು. ಆಗ ದೇವದೂತನು ಅವನಿಗೆ, "ಮಾಂಸವನ್ನೂ ರೊಟ್ಟಿಗಳನ್ನೂ ಆ ಬಂಡೆಯ ಮೇಲಿಟ್ಟು ರಸವನ್ನು ಹೊಯ್ಯಿ" ಎನ್ನಲು ಅವನು ಹಾಗೆಯೇ ಮಾಡಿದನು. ಆನಂತರ ಸರ್ವೇಶ್ವರನ ದೂತನು ತನ್ನ ಕೈ ಕೋಲನ್ನು ಚಾಚಿ ಅದರ ತುದಿಯನ್ನು ಆ ರೊಟ್ಟಿಗಳಿಗೂ ಮಾಂಸಕ್ಕೂ  ಮುಟ್ಟಿಸಲು ಬಂಡೆಯಿಂದ ಬೆಂಕಿಯೆದ್ದು ಅವೆರಡನ್ನೂ ದಹಿಸಿಬಿಟ್ಟಿತು. ಸರ್ವೇಶ್ವರನ ದೂತನು ಅದೃಶ್ಯನಾದನು. ಆತನು ಸರ್ವೇಶ್ವರನ ದೂತನೆಂದು ಗಿದ್ಯೋನನು  ತಿಳಿದು ಭಯಪಟ್ಟು, "ಅಯ್ಯೋ ಸ್ವಾಮಿ, ಸರ್ವೇಶ್ವರಾ, ಸರ್ವೇಶ್ವರನ ದೂತನನ್ನು ಮುಖಾಮುಖಿಯಾಗಿ ನೋಡಡಿಬಿಟ್ಟೆನಲ್ಲಾ"ಎಂದು ಕೂಗಿದನು. ಆದರೆ ಸರ್ವೇಶ್ವರನು ಅವನಿಗೆ, "ಸಮಾಧಾನದಿಂದಿರು, ಹೆದರಬೇಡ; ನೀನು ಸಾಯುವುದಿಲ್ಲ" ಎಂದನು. ಗಿದ್ಯೋನನು ಅಲ್ಲೇ ಸರ್ವೇಶ್ವರನಿಗಾಗಿ  ಒಂದು ಬಲಿಪೀಠವನ್ನು ಕಟ್ಟಿ ಅದಕ್ಕೆ "ಯೆಹೋವ ಷಾಲೋಮ್"ಎಂದು ಹೆಸರಿಟ್ಟನು.

ಕೀರ್ತನೆ: 85:9, 11-12, 13-14

ಶ್ಲೋಕ: ಭಯಭಕ್ತಿಯುಳ್ಳವರಿಗಾತ ರಕ್ಷಣೆ ಸನ್ನಿಹಿತ

ಶುಭಸಂದೇಶ: ಮತ್ತಾಯ 19:23-30


ಆಗ ಯೇಸುಸ್ವಾಮಿ ತಮ್ಮ ಶಿಷ್ಯರನು ಉದ್ದೇಶಿಸಿ, "ಐಶ್ವರ್ಯವಂತನು ಸ್ವರ್ಗಸಾಮ್ರಾಜ್ಯವನ್ನು ಪ್ರವೆಶಿಸುವುದು ಕಷ್ಟವೆಂದು ನಿಮಗೆ ಒತ್ತಿ ಹೇಳುತ್ತೇನೆ. ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದಕಿಂತಲೂ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಸುಳುವುದು ಸುಲಭ ಎಂಬುದು ನಿಜ," ಎಂದರು. ಇದನ್ನು ಕೇಳಿದ ಮೇಲಂತೂ ಶಿಷ್ಯರು ಬೆಬ್ಬೆರಗಾದರು, "ಹಾಗಾದರೆ, ಯಾರು ತಾನೇ ಜೀವೋದ್ಧಾರ ಹೊಂದಲು ಸಾಧ್ಯ?" ಎಂದು ಕೊಂಡರು.  ಯೇಸು ಅವರನು ನಿಟ್ಟಿಸಿ ನೋಡುತ್ತಾ, "ಮನುಷ್ಯರಿಗಿದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ," ಎಂದರು. ಪೇತ್ರನು ಆಗ ಮುಂದೆ ಬಂದು, "ನೋಡಿ ನಾವು ಎಲ್ಲವನ್ನು ಬಿಟ್ಟುಬಿಟ್ಟು ತಮ್ಮನ್ನು ಹಿಂಬಾಲಿಸಿದ್ದೇವೆ. ನಮಗೇನು ದೊರಕುತ್ತದೆ?" ಎಂದು ಕೇಳಿದನು. ಅದಕ್ಕೆ ಯೇಸು, "ನಿಮಗೆ ಸತ್ಯವಾಗಿ ಹೇಳುತ್ತೇನೆ: ಹೊಸ ಸೃಷ್ಟಿಯಲ್ಲಿ ನರಪುತ್ರನು ತನ್ನ ಮಹಿಮಾನ್ವಿತ ಸಿಂಹಾಸನದ ಮೇಲೆ ಆಸೀನನಾಗುವಾಗ, ನನ್ನನ್ನು ಹಿಂಬಾಲಿಸಿರುವ ನೀವು ಕೂಡ, ಇಸ್ರಯೆಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯಾಧಿಪತಿಗಳಾಗಿ ಹನ್ನೆರಡು  ಸಿಂಹಾಸನಗಳ ಮೇಲೆ ಆಸೀನರಾಗುವಿರಿ. ನನ್ನ ನಾಮದ ನಿಮಿತ್ತ ಮನೆಮಠವನ್ನಾಗಲಿ, ಅಣ್ಣ ತಮ್ಮಂದಿರನ್ನಾಗಲಿ, ಅಕ್ಕ ತಂಗಿಯರನ್ನಾಗಲಿ, ತಂದೆ ತಾಯಿಯರನ್ನಾಗಲಿ, ಮಕ್ಕಳು ಮರಿಗಳನ್ನಾಗಲಿ, ಹೊಲ ಗದ್ದೆಗಳನ್ನಾಗಲಿ ತ್ಯೆಜಿಸುವ ಪ್ರತಿಯೊಬ್ಬನೂ ನೂರ್ಮಡಿಯಷ್ಟು ಪಡೆಯುವನು; ಮಾತ್ರವಲ್ಲ, ಅಮರ ಜೀವಕ್ಕೆ ಬಾಧ್ಯಸ್ಥನಾಗುವನು. ಆದರೆ ಮೊದಲಿನವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು.

21.08.23 - "ಯುವಕ ಖಿನ್ನಮನಸ್ಕನಾಗಿ, ಅಲ್ಲಿಂದ ಹೊರಟೇ ಹೋದ. ಏಕೆಂದರೆ ಅವನಿಗೆ ಅಪಾರ ಆಸ್ತಿಪಾಸ್ತಿಯಿತ್ತು"

 ಮೊದಲನೇ ವಾಚನ: ನ್ಯಾಯಸ್ಥಾಪಕರು 2:11-19


ಇಸ್ರಯೇಲರು ಬಾಳ್ ದೇವತೆಯ ಪ್ರತಿಮೆಗಳನ್ನು ಪೂಜಿಸಿ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಗಳಾದರು. ತಮ್ಮ ಪೂರ್ವಜರನ್ನು ಈಜಿಪ್ಟಿನಿಂದ ಕರೆದು ತಂದ ದೇವರಾದ ಸರ್ವೇಶ್ವರನನ್ನು ಬಿಟ್ಟು ಅನ್ಯ ದೇವತೆಗಳನ್ನು ಅಂದರೆ, ತಮ್ಮ ಸುತ್ತಮುತ್ತಲಿನ ಜನಾಂಗಗಳ ದೇವರುಗಳನ್ನು ಅವಲಂಬಿಸಿ ಅವುಗಳಿಗೆ ಅಡ್ಡ ಬಿದ್ದು ಸರ್ವೇಶ್ವರನನ್ನು ರೇಗಿಸಿದರು. ಅವರು ಸರ್ವೇಶ್ವರನನ್ನು ಬಿಟ್ಟು "ಬಾಳ್ ಅಷ್ಟೋರೆತ್" ಎಂಬ ದೇವತೆಗಳನ್ನು ಪೂಜಿಸತೊಡಗಿದರು. ಅದ್ದರಿಂದ ಸರ್ವೇಶ್ವರನ ಕೋಪ ಅವರ ಮೇಲೆ ಉರಿಯಹತ್ತಿತು; ಅವರನ್ನು ಕೊಳ್ಳೆ ಹೊಡೆದವರ ಕೈಗೆ ಒಪ್ಪಿಸಿದರು. ಶತ್ರುಗಳು ಅವರನ್ನು ಸುಲಿಗೆ ಮಾಡಿದರು. ಸರ್ವೇಶ್ವರ ಅವರನ್ನು ಅಕ್ಕಪಕ್ಕದ ವೈರಿಗಳಿಗೆ ಮಾರಿ ಬಿಟ್ಟರು. ಆ ಶತ್ರುಗಳ. ಮುಂದೆ ಇಸ್ರಯೇಲರು ನಿಲ್ಲಲಾರದೆ ಹೋದರು. ಮೊದಲೇ ಆಣೆಯಿಟ್ಟು ಹೇಳಿದಂತೆ ಅವರು ಎಲ್ಲಿಗೆ ಹೋದರೂ ಸರ್ವೇಶ್ವರನ ಕೈ ಅವರಿಗೆ ವಿರೋಧವಾಗಿಯೇ ಇತ್ತು. ಅವರಿಗೆ ಬಹಳ ದುಃಖ  ಉಂಟಾಯಿತು. ಆಗ ಸರ್ವೇಶ್ವರ ಅವರನ್ನು ಸೂರೆ ಮಾಡುವವರ ಕೈಯಿಂದ ತಪ್ಪಿಸಲು ನ್ಯಾಯಾಧಿಪತಿಗಳನ್ನು ಕಳುಹಿಸಿದರು. ಇಸ್ರಯೇಲರು ಇವರ ಮಾತನ್ನೂ ಕೇಳದೆ ಅನ್ಯದೇವತೆಗಳನ್ನು ಪೂಜಿಸಿ ಅವುಗಳಿಗೆ ಅಡ್ಡಬಿದ್ದು ದೇವ ದ್ರೋಹಿಗಳಾದರು. ಸರ್ವೇಶ್ವರನ ಆಜ್ಞೆಗಳನ್ನು ಪಾಲಿಸುತ್ತಿದ್ದ ತಮ್ಮ ಪೂರ್ವಜರ ಮಾರ್ಗವನ್ನು ಬೇಗನೆ ತ್ಯಜಿಸಿಬಿಟ್ಟರು. ಅವರಂತೆ ನಡೆಯಲ್ಲೇ ಇಲ್ಲ. ವೈರಿಗಳ ಹಿಂಸೆಯನ್ನು ತಾಳಲಾರದೆ ಇಸ್ರಯೇಲರು ಗೋಳಿಟ್ಟರು. ಸರ್ವೇಶ್ವರ ಅದನ್ನು ಕೇಳಿ ಕನಿಕರಪಟ್ಟು ನ್ಯಾಯಾಧಿಪತಿಗಳನ್ನು ಕಳುಹಿಸಿಕೊಟ್ಟರು; ಜೀವಮಾನವೆಲ್ಲ ಅವರ ಸಂಗಡವೇ ಇದ್ದು ಅವರ ಮುಖಾಂತರ ಇಸ್ರಯೇಲರನ್ನು ಶತ್ರುಗಳಿಂದ ಬಿಡಿಸಿದರು. ತಮ್ಮನ್ನು ಹಿಂಸಿಸುತ್ತಿದ್ದವರ ಕಾಟವನ್ನು ತಾಳದೆ ಮೊರೆಯಿಡುವುದನ್ನು ಸರ್ವೇಶ್ವರ ಕೇಳಿ ಮನ ಮರುಗಿದರು. ಅಂಥ ನ್ಯಾಯಾಧಿಪತಿಗಳು ತೀರಿಹೋದ ನಂತರ ಇಸ್ರಯೇಲರು ಮತ್ತೆ ತಮ್ಮ ಹಿಂದಿನವರಿಗಿಂತಲೂ ಭ್ರಷ್ಠರಾಗಿ ಅನ್ಯ ದೇವತೆಗಳನ್ನು ಅವಲಂಬಿಸಿ ಅವುಗಳಿಗೆ ಸೇವೆ ಮಾಡಿ ಅಡ್ಡಬಿದ್ದರು. ಅವರು ತಮ್ಮ ದುರ್ಮಾರ್ಗವನ್ನೂ ಹಠಮಾರಿತನವನ್ನೂ ಬಿಡಲೇ ಇಲ್ಲ.

ಕೀರ್ತನೆ: 106:34-35, 36-37, 39-40, 43-44

ಶ್ಲೋಕ: ಮರೆಯಬೇಡೆನ್ನನು ಪ್ರಭೂ, ನಿನ್ನ ಪ್ರಜೆಗೆ ದಯೆ ತೋರುವಾಗ

ಶುಭಸಂದೇಶ: ಮತ್ತಾಯ 19:16-22


ಒಮ್ಮೆ ಯೇಸುಸ್ವಾಮಿಯ ಬಳಿಗೆ ಒಬ್ಬ ಯುವಕನು ಬಂದು, "ಗುರುದೇವಾ, ಅಮರ ಜೀವವನ್ನು ಪಡೆಯಲು ನಾನು ಒಳ್ಳೆಯದೇನನ್ನು ಮಾಡಬೇಕು?" ಎಂದು ಕೇಳಿದನು. ಅದಕ್ಕೆ ಅವರು, "ಒಳ್ಳೆಯದನ್ನು ಕುರಿತು ನೀನು  ನನ್ನನ್ನು ವಿಚಾರಿಸುವುದು ಏಕೆ? ಒಳ್ಳೆಯವರು ಒಬ್ಬರೇ. ನೀನು ಆ ಜೀವಕ್ಕೆ ಪ್ರವೇಶಿಸಬೇಕಾದರೆ ದೈವಾಜ್ಞೆಯನ್ನು ಅನುಸರಿಸು," ಎಂದರು. "ಅವು ಯಾವುವು?" ಎಂದು ಮರು ಪ್ರಶ್ನೆ ಹಾಕಿದ ಅವನಿಗೆ ಯೇಸು, "ನರ ಹತ್ಯೆ ಮಾಡಬಾರದು, ವ್ಯೆಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳು ಸಾಕ್ಷಿ ಹೇಳಬಾರದು, ನಿನ್ನ ತಂದೆ ತಾಯಿಗಳನ್ನು ಗೌರವಿಸಬೇಕು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸಬೇಕು," ಎಂದರು. ಅದಕ್ಕೆ ಆ ಯುವಕ, "ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ. ನನ್ನಲ್ಲಿ ಇನ್ನೇನು ಕೊರತೆ ಇದೆ?" ಎಂದು ಮತ್ತೇ ಕೇಳಿದ. ಆಗ ಯೇಸು, "ನೀನು ಸಂಪೂರ್ಣನಾಗಬೇಕು ಎಂದಿದ್ದರೆ ಹೋಗು, ನಿನ್ನ ಆಸ್ಥಿಯನ್ನೆಲ್ಲಾ ಮಾರಿ, ಬಡಬಗ್ಗರಿಗೆ ದಾನ ಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು," ಎಂದರು. ಇದನ್ನು ಕೇಳಿದ್ದೇ. ಆ ಯುವಕ ಖಿನ್ನಮನಸ್ಕನಾಗಿ ಅಲ್ಲಿಂದ ಹೊರಟೇ ಹೋದ. ಏಕೆಂದರೆ ಅವನಿಗೆ ಅಪಾರ ಆಸ್ತಿಪಾಸ್ತಿಯಿತ್ತು.

20.08.23 - “ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ,”

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ  56:1, 6-7

ಸರ್ವೇಶ್ವರ ಸ್ವಾಮಿ ಹೇಳುವುದು ಏನೆಂದರೆ : ನ್ಯಾಯವನ್ನು ಅನುಸರಿಸಿರಿ. ನೀತಿಯನ್ನು ಆಚರಿಸಿರಿ. ಏಕೆಂದರೆ ನಾನೀಡುವ ಮುಕ್ತಿಯು ಬೇಗನೆ ಬರುವುದು; ನಾನು ತರುವ ಸತ್ಸಂಬಂಧವು ಕೂಡಲೆ ಬೆಳಗುವುದು. ಅನ್ಯದೇಶೀಯರಲ್ಲಿ ಯಾರು ಯಾರು ‘ಸರ್ವೇಶ್ವರ’ ಎಂದು ನನ್ನನ್ನು ಅವಲಂಭಿಸಿ, ಪೂಜಿಸಿ, ನನ್ನ ನಾಮವನ್ನು ಪ್ರೀತಿಸಿ, ನನಗೆ ದಾಸನಾಗಿ, ಸಬ್ಬತ್ದಿನವನ್ನು ಹೊಲೆಮಾಡದೆ ನನ್ನ ದಿನವೆಂದು ಆಚರಿಸಿ, ಜೊತೆಗೆ ನನ್ನ ಒಡಂಬಡಿಕೆಯನ್ನು ಸುಭದ್ರವಾಗಿ ಪಾಲಿಸುತ್ತಾರೋ, ಅವರೆಲ್ಲರನ್ನು ನನ್ನ ಪವಿತ್ರಪರ್ವತಕ್ಕೆ ಬರಮಾಡುವೆನು; ನನ್ನ ಪ್ರಾರ್ಥನಾಲಯದಲ್ಲಿ ಅವರನ್ನು ಆನಂದಗೊಳಿಸುವೆನು; ನನ್ನ ಬಲಿಪೀಠದ ಮೇಲೆ ಅವರು ನೀಡುವ ದಹನಬಲಿಗಳನ್ನೂ ಅರ್ಪಣೆಗಳನ್ನೂ ಸಂತೋಷದಿಂದ ಸ್ವೀಕರಿಸುವೆನು. ನನ್ನ ಆಲಯ ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ ಎನಿಸಿಕೊಳ್ಳುವುದು.”

ಕೀರ್ತನೆ: 67:2-3, 5, 6, 8

ಶ್ಲೋಕ: ನಿನ್ನ ಕೀರ್ತಿಸಲಿ ದೇವಾ ಜನರು, ಸಕೀರ್ತಿಸಲಿ ಅವರೆಲ್ಲರು

ಎರಡನೇ ವಾಚನ: ರೋಮನರಿಗೆ 11:13-15, 29-32

ಈಗ ನಾನು ಇಸ್ರಯೇಲರಲ್ಲದ ನಿಮ್ಮನ್ನು ಉದ್ದೇಶಿಸಿ ಹೇಳುತ್ತೇನೆ: ನಾನು ನಿಮ್ಮಂಥ ಅನ್ಯಜನರಿಗೆ ಪ್ರೇಷಿತನಾಗಿ ಕಳುಹಿಸಲ್ಪಟ್ಟವನು. ಇದರ ಬಗ್ಗೆ ಹೆಮ್ಮೆಪಡುತ್ತೇನೆ.  ಆದರೂ ಈ ಸೇವೆಯ ಮೂಲಕ ನನ್ನ ಸ್ವಜನರಲ್ಲಿ ಪ್ರೇಮಾಸೂಯೆಯನ್ನು ಮೂಡಿಸಿ ಅವರಲ್ಲಿ ಬಹುಶಃ ಕೆಲವರನ್ನಾದರೂ ಉದ್ಧಾರದ ಮಾರ್ಗಕ್ಕೆ ತರಲು ಸಾಧ್ಯವಾದೀತೆಂದು ನಂಬುತ್ತೇನೆ. ಇಸ್ರಯೇಲರು ತಿರಸ್ಕೃತರಾದ್ದರಿಂದ ಜಗತ್ತು ದೇವರೊಡನೆ ಸಂಧಾನವಾಗಲು ಸಾಧ್ಯವಾಯಿತಾದರೆ ಅವರು ಸ್ವೀಕೃತರಾಗುವಾಗ ಇನ್ನೇನು ತಾನೆ ಸಂಭವಿಸದು! ಸತ್ತವರು ಜೀವಕ್ಕೆ ಎದ್ದುಬಂದಂತಾಗುವುದಲ್ಲವೆ? ದೇವರು ತಾವೇ ನೀಡುವ ವರಗಳನ್ನಾಗಲಿ, ಕೊಡುವ ಕರೆಯನ್ನಾಗಲಿ ಹಿಂತೆಗೆದುಕೊಳ್ಳುವವರಲ್ಲ. ಇಸ್ರಯೇಲರಲ್ಲದ ನೀವು ಹಿಂದೊಮ್ಮೆ ದೇವರಿಗೆ ಅವಿಧೇಯರಾಗಿದ್ದಿರಿ. ಆದರೆ ಈಗ ಇಸ್ರಯೇಲರ ಅವಿಧೇಯತೆಯ ನಿಮಿತ್ತ ದೇವರ ದಯೆಯನ್ನು ಹೊಂದಿದ್ದೀರಿ. ಅದೇ ಪ್ರಕಾರ ಅವರು ಈಗ ಅವಿಧೇಯರಾಗಿದ್ದರೂ ನೀವು ಹೊಂದಿದ ಕರುಣೆಯ ನಿಮಿತ್ತ ಅವರೂ ಕರುಣೆಯನ್ನು ಹೊಂದುವರು. ಏಕೆಂದರೆ, ಸರ್ವರೂ ತಮ್ಮ ಕರುಣೆಯನ್ನು ಸವಿಯುವಂತೆ ದೇವರು ಎಲ್ಲರನ್ನು ಅವಿಧೇಯತೆ ಎಂಬ ಬಂಧನಕ್ಕೆ ಒಳಪಡಿಸಿದ್ದಾರೆ.

ಶುಭಸಂದೇಶ: ಮತ್ತಾಯ 15:21-28


ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪ್ರಾಂತ್ಯಕ್ಕೆ ಹೋದರು.  ಅಲ್ಲಿ ವಾಸವಾಗಿದ್ದ ಕಾನಾನ್ ನಾಡಿನ ಮಹಿಳೆ ಒಬ್ಬಳು ಅವರ ಬಳಿಗೆ ಬಂದಳು. “ಸ್ವಾಮೀ, ದಾವೀದ ಕುಲಪುತ್ರರೇ, ನನಗೆ ದಯೆತೋರಿ, ನನ್ನ ಮಗಳಿಗೆ ದೆವ್ವಹಿಡಿದು ಬಹಳ ಸಂಕಟಪಡುತ್ತಿದ್ದಾಳೆ,” ಎಂದು ಕೂಗಿಕೊಂಡಳು.  ಯೇಸು ಆಕೆಗೆ ಒಂದು ಮಾತನ್ನೂ ಹೇಳಲಿಲ್ಲ. ಶಿಷ್ಯರು ಹತ್ತಿರಕ್ಕೆ ಬಂದು, “ಇವಳನ್ನು ಕಳಿಸಿಬಿಡಿ, ಒಂದೇ ಸಮನೆ ಗೋಳಿಡುತ್ತಾ, ನಮ್ಮನ್ನು ಬೆಂಬತ್ತಿ ಬರುತ್ತಿದ್ದಾಳೆ,” ಎಂದು ಕೇಳಿಕೊಂಡರು.  ಆಗ ಯೇಸು, “ನನ್ನನ್ನು ಕಳಿಸಿರುವುದು ತಪ್ಪಿಹೋದ ಕುರಿಗಳಂತಿರುವ ಇಸ್ರಯೇಲ್ ಜನಾಂಗದವರ ಬಳಿಗೆ ಮಾತ್ರ,” ಎಂದರು.  ಆದರೂ ಆಕೆ ಯೇಸುವಿಗೆ ಅಡ್ಡಬಿದ್ದು, “ಸ್ವಾಮೀ, ಸಹಾಯ ಮಾಡಿ,” ಎಂದು ಯಾಚಿಸಿದಳು.  ಅದಕ್ಕೆ ಯೇಸು, “ಮಕ್ಕಳ ಆಹಾರವನ್ನು ತೆಗೆದು ನಾಯಿಗಳಿಗೆ ಎಸೆಯುವುದು ಸರಿಯಲ್ಲ,” ಎಂದರು.  ಆಗ ಆಕೆ, “ಅದು ನಿಜ ಸ್ವಾಮೀ, ನಾಯಿಗಳಾದರೂ ತಮ್ಮ ಯಜಮಾನನ ಮೇಜಿನಿಂದ ಕೆಳಕ್ಕೆ ಬೀಳುವ ಚೂರುಪಾರನ್ನು ತಿನ್ನುತ್ತವೆ, ಅಲ್ಲವೇ?’ ಎಂದು ಮರುತ್ತರ ಕೊಟ್ಟಳು.  ಆಗ ಯೇಸು, “ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ,” ಎಂದರು. ಅದೇ ಕ್ಷಣದಲ್ಲಿ ಆಕೆಯ ಮಗಳು ಗುಣಹೊಂದಿದಳು.

19.08.23 - "ನಾನು ಮತ್ತು ನನ್ನ ಮನೆಯವರು ಮಾತ್ರ ಸರ್ವೇಶ್ವರನಿಗೆ ಸೇವೆ ಸಲ್ಲಿಸುತ್ತೇವೆ"

 ಮೊದಲನೇ ವಾಚನ: ಯೆಹೋಶುವ 24:14-29

"ಈ ಕಾರಣ ನೀವು ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿರಿ. ಪೂರ್ಣ ಮನಸ್ಸಿನಿಂದ ಯಥಾರ್ಥಚಿತ್ತದಿಂದ ಅವರಿಗೆ ಸೇವೆ ಸಲ್ಲಿಸಿರಿ. ನಿಮ್ಮ ಪೂರ್ವಜರು ಯೂಪ್ರಟೀಸ್ ನದಿಯಾಚೆ ಯಲ್ಲೂ ಈಜಿಪ್ಟಿನಲ್ಲೂ ಪೂಜಿಸುತ್ತಿದ್ದ ದೇವತೆಗಳನ್ನು ತೊರೆದು ಬಿಡಿ. ಸರ್ವೇಶ್ವರನಿಗೆ ಸೇವೆ ಸಲ್ಲಿಸಿರಿ. ನಿಮಗೆ ಇದು ಸರಿ ಕಾಣದಿದ್ದರೆ ಯಾರಿಗೆ ಸೇವೆ ಸಲ್ಲಿಸಬೇಕೆಂದಿದ್ದೀರಿ ಇಂದೇ ಆರಿಸಿಕೊಳ್ಳಿ; ನಿಮ್ಮ ಪೂರ್ವಜರು ಯೂಪ್ರಟಿಸ್ ನದಿಯ ಆಚೆಯಲ್ಲಿ ಪೂಜಿಸುತ್ತಿದ್ದ ದೇವತೆಗಳಿಗೋ? ಹೇಳಿ. ನಾನು ಮತ್ತು ನನ್ನ ಮನೆಯವರು ಮಾತ್ರ ಸರ್ವೇಶ್ವರನಿಗೆ ಸೇವೆ ಸಲ್ಲಿಸುತ್ತೇವೆ," ಎಂದನು. ಅದಕ್ಕೆ ಜನರು, "ಸರ್ವೇಶ್ವರನನ್ನು ಬಿಟ್ಟು ಅನ್ಯ ದೇವತೆಗಳಿಗೆ ಸೇವೆ ಸಲ್ಲಿಸುವುದು  ನಮ್ಮಿಂದ ದೂರವಿರಲಿ. ನಾವು ದಾಸತ್ವದಲ್ಲಿದ್ದ ಈಜಿಪ್ಟಿನಿಂದ ನಮ್ಮನ್ನೂ ನಮ್ಮ ಪೂರ್ವಜರನ್ನೂ ಹೊರ ತಂದವರು ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಯೇ. ನಮ್ಮೆದುರಿನಲ್ಲೇ ಅವರು ಮಾಡಿದ ಅದ್ಬುತ ಕಾರ್ಯಗಳನ್ನು  ನೋಡಿದ್ದೇವೆ. ನಮ್ಮ ಎಲ್ಲಾ ಪ್ರಯಾಣಗಳಲ್ಲೂ ನಾವು ದಾಟಿಬಂದ ಜನಾಂಗಗಳಿಂದ ನಮ್ಮನ್ನು ಕಾಪಾಡಿದವರು ಅವರೇ. ಈನಾಡಿನ ನಿವಾಸಿಗಳಾಗಿದ್ದ ಅಮೋರಿಯರು ಮೊದಲಾದ ಎಲ್ಲಾ ಜನಾಂಗಗಳನ್ನು ಇಲ್ಲಿಂದ ಹೊರಡಿಸಿಬಿಟ್ಟರು ಅವರೇ. ಆದುದರಿಂದ ನಾವು ಕೂಡ ಸರ್ವೇಶ್ವರನಿಗೆ ಸೇವೆ ಸಲ್ಲಿಸುತ್ತೇವೆ. ಅವರೇ ನಮ್ಮ ದೇವರು," ಎಂದು ಉತ್ತರಕೊಟ್ಟರು. ಆಗ ಯೆಹೋಶುವನು ಅವರಿಗೆ, "ನೀವು ಸರ್ವೇಶ್ವರನಿಗೆ ಸೇವೆ ಸಲ್ಲಿಸಲು ಶಕ್ತರಲ್ಲ. ಸರ್ವೇಶ್ವರ ಸ್ವಾಮಿ ಪರಿಶುದ್ದರು; ತಮಗೆ ಸಲ್ಲಿಸಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ದೇವರು; ಅವರು ನಿಮ್ಮ ಪಾಪ, ಅಪರಾಧಗಳನ್ನು ಕ್ಷಮಿಸುವರು. ನೀವು ಅವರನು ಬಿಟ್ಟು ಅನ್ಯ ದೇವತೆಗಳಿಗೆ ಸೇವೆ ಸಲ್ಲಿಸಿದರೆ ನಿಮಗೆ ವಿಮುಖರಾಗಿ, ಒಳಿತಿಗೆ ಬದಲಾಗಿ ಕೇಡನ್ನೇ ಬರಮಾಡಿ ನಿಮ್ಮನ್ನು ನಾಶಮಾಡಿ ಬಿಡುವರು," ಎಂದನು. ಜನರು ಯೆಹೋಶುವನಿಗೆ, "ಇಲ್ಲ ನಾವು ಸರ್ವೇಶ್ವರ ಸ್ವಾಮಿಗೇ  ಸೇವೆ ಸಲ್ಲಿಸುತ್ತೇವೆ," ಎಂದರು. ಯೆಹೋಶುವ ಅವರಿಗೆ, "ನೀವು ಸರ್ವೇಶ್ವರನಿಗೇ ಸೇವೆ ಸಲ್ಲಿಸುವುದನ್ನು ಆರಿಸಿ ಕೊಂಡಿರುವುದಕ್ಕೆ ನೀವೇ ಸಾಕ್ಷಿಗಳು," ಎನ್ನಲು ಅವರು, "ಹೌದು, ನಾವೇ ಸಾಕ್ಷಿಗಳು," ಎಂದು ಉತ್ತರ ಕೊಟ್ಟರು. ಆಗ ಯೆಹೋಶುವ, ಹಾಗಾದರೆ ನಿಮ್ಮಲ್ಲಿರುವ ಅನ್ಯ ದೇವತೆಗಳನ್ನು ತೊರೆದು ಬಿಟ್ಟು ಇಸ್ರಯೇಲಿನ ದೇವರಾದ ಸರ್ವೇಶ್ವರನ ಕಡೆಗೆ ನಿಮ್ಮ ಹೃನ್ಮನಗಳನ್ನು ತಿರುಗಿಸಿಕೊಳ್ಳಿ," ಎಂದನು. ಅದಕ್ಕೆ ಜನರು, "ನಮ್ಮ ದೇವರಾದ ಸರ್ವೇಶ್ವರನಿಗೇ ಸೇವೆ ಸಲ್ಲಿಸುತ್ರೇವೆ.  ಅವರ ಮಾತನ್ನೇ ಕೇಳುತ್ತೇವೆ," ಎಂದರು. ಹೀಗೆ ಯೆಹೋಶುವ ಶೆಕೆಮಿನಲ್ಲಿ ಇಸ್ರಯೇಲರೊಡನೆ ಒಪ್ಪಂದ ಮಾಡಿಕೊಂಡು  ಅವರಿಗೆ ವಿಧಿ ನಿಯಮಗಳನ್ನು ನೇಮಿಸಿದನು. ಇದು ಮಾತ್ರವಲ್ಲ, ಈ ಎಲ್ಲಾ ಮಾತುಕತೆಯನ್ನು ದೇವರ ಧರ್ಮಶಾಸ್ತ್ರಗ್ರಂಥಲ್ಲಿ ಬರೆದಿಟ್ಟನು. ಒಂದು ದೊಡ್ಡ ಕಲ್ಲನ್ನು ಸರ್ವೇಶ್ವರನ ಆಲಯದ ಹತ್ತಿರದಲ್ಲೇ ಇದ್ದ ಓಕ್ ವೃಕ್ಷದ ಅಡಿಯಲ್ಲಿ ನಿಲ್ಲಿಸಿದನು. ಬಳಿಕ ಎಲ್ಲಾ ಜನರಿಗೆ,  "ಇಗೋ, ನೋಡಿ ಈ ಕಲ್ಲು! ಇದು ನಿಮ್ಮ ವಿಷಯದಲ್ಲಿ ಸಾಕ್ಷಿ ಹೇಳುವುದು. ಸರ್ವೇಶ್ವರ ನಮಗೆ ಹೇಳಿದ ಎಲ್ಲ ಮಾತುಗಳನ್ನು ಇದು ಕೇಳಿದೆ. ಆದ್ದರಿಂದ ನೀವು ನಿಮ್ಮ ದೇವರಾದ ಅವರನ್ನು ಅಲ್ಲಗಳೆದುದ್ದೇ ಆದರೆ ಈ ಕಲ್ಲೇ ನಿಮಗೆ ಸಾಕ್ಷಿಯಾಗಿರುವುದು," ಎಂದು ಹೇಳಿ ಆ ಜನರನ್ನು ಅವರವರ ಸೊತ್ತಿದ್ದಲ್ಲಿಗೆ ಕಳುಹಿಸಿಬಿಟ್ಟನು. ಇದಾದ ಮೇಲೆ ಸರ್ವೇಶ್ವರನ ದಾಸನಾದ ನೂನನ ಮಗ ಯೆಹೋಶುವನು ನೂರ ಹತ್ತು ವರ್ಷದವನಾಗಿ ಮರಣ ಹೊಂದಿದ.

ಕೀರ್ತನೆ: 16:1-2, 5, 7-8, 11
ಶ್ಲೋಕ: ನಿನ್ನ ಕೈಯಲ್ಲಿದೆ ಪ್ರಭು, ನನ್ನ ವಿಮೆ

ಶುಭಸಂದೇಶ: ಮತ್ತಾಯ 19:13-15


ಆನಂತರ ಕೆಲವರು ಚಿಕ್ಕಮಕ್ಕಳನ್ನು ಯೇಸುಸ್ವಾಮಿಯ ಬಳಿಗೆ ತಂದರು. ಶಿಷ್ಯರು ಅವರನ್ನು ಗದರಿಸಿದರು. ಆಗ ಯೇಸು, "ಚಿಕ್ಕ ಮಕ್ಕಳನ್ನು ನನ್ನ ಬಳಿಗೆ  ಬರಲು ಬಿಡಿ; ಅವುಗಳನ್ನು ತಡೆಯಬೇಡಿ. ಸ್ವರ್ಗ ಸಾಮ್ರಾಜ್ಯ ಇಂಥವರದೇ," ಎಂದರು. ತರುವಾಯ ಆ ಮಕ್ಕಳ ಮೇಲೆ ಕೈ ಇಟ್ಟು ಆಶೀರ್ವದಿಸಿದರು. ಬಳಿಕ ಅಲ್ಲಿಂದ ಹೊರಟು ಹೋದರು.

18.08.23 - "ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದೆ ಇರಲಿ,"

ಮೊದಲನೇ ವಾಚನ: ಯೆಹೋಶುವ  24:1-13


ಯೆಹೋಶುವನು ಎಲ್ಲ ಇಸ್ರಯೇಲ ಕುಲದವರನ್ನು ಶೆಕೆಮಿನಲ್ಲಿ ಸಭೆ ಸೇರಿಸಿದನು. ಹಿರಿಯರು, ನಾಯಕರು, ನ್ಯಾಯಾಧಿಪತಿಗಳು, ಅಧಿಕಾರಿಗಳು ಬಂದು ದೇವರ ಸನ್ನಿಧಿಯಲ್ಲಿ ಉಪಸ್ಥಿತರಾದರು. ಯೆಹೋಶುವ ಅವರೆಲ್ಲರನ್ನು  ಉದ್ದೇಶಿಸಿ: "ಅಬ್ರಹಾಮ್, ನಾಹೊರ್ ಎಂಬುವರ ತಂದೆಯಾದ ತೆಹರ ಮೊದಲಾದ ನಿಮ್ಮ ಮೂಲ ಪುರುಷರು ಪೂರ್ವದಲ್ಲಿ ಯೂಫ್ರೆಟಿಸ್ ನದಿಯ ಆಚೆಯಿದ್ದರು. ಅನ್ಯ ದೇವತೆಗಳನ್ನು ಪೂಜಿಸುತ್ತಿದ್ದರು. ನಾನು ನಿಮ್ಮ ಪಿತೃವಾದ ಅಬ್ರಹಾಮನನ್ನು ಅಲ್ಲಿಂದ ಕರೆ ತಂದು, ಕಾನಾನ್ ನಾಡಿನಲ್ಲೆಲ್ಲಾ ಸಂಚಾರ ಮಾಡಿಸಿದೆ. ಇಸಾಕನೆಂಬ ಮಗನನು ಕೊಟ್ಟು ಅವನ ಸಂತಾನವನ್ನು ಹೆಚ್ಚಿಸಿದೆ. ಇಸಾಕನಿಗೆ ಯಾಕೋಬ್ ಮತ್ತು ಏಸಾವ್ ಎಂಬ ಇಬ್ಬರು ಮಕ್ಕಳನ್ನು ಅನುಗ್ರಹಿಸಿದೆ ಏಸಾವನಿಗೆ ಸೇಯೀರ್ ಬೆಟ್ಟವನ್ನು ಸ್ವಂತ ಸೊತ್ತಾಗಿ ದಯಪಾಲಿಸಿದೆ. ಯಕೋಬನಾದರೋ ತನ್ನ ಮಕ್ಕಳ ಸಮೇತ ಈಜಿಪ್ಟ್ ದೇಶಕ್ಕೆ ಹೋದ  ಬಳಿಕ ನಾನು ಮೋಶೆ ಹಾಗೂ ಆರೋನರನ್ನು ಕಳಿಸಿ, ಆ ಈಜಿಪ್ಟಿನಲ್ಲಿ ಅನೇಕ ಅದ್ಬುತ ಕಾರ್ಯಗಳನ್ನು ನಡೆಸಿ, ಆ ಜನರನ್ನು ಬಾಧಿಸಿ, ನಿಮ್ಮನ್ನು ಹೊರಗೆ ಕರೆ ತಂದೆ. ನಿಮ್ಮ ಪೂರ್ವಜರು ಈಜಿಪ್ಟಿನಿಂದ ಬಿಡುಗಡೆಯಾಗಿ ಕೆಂಪು ಸಮುದ್ರಕ್ಕೆ ಬರುತ್ತಾ ಇರುವಾಗ ಈಜಿಪ್ಟಿನವರ ರಥಾಶ್ವಬಲಗಳ ಸಹಿತ  ಅವರನ್ನು ಆ ಸಮುದ್ರದವರೆಗೂ ಹಿಂದಟ್ಟಿ ಬಂದರು. ಆಗ ನಮ್ಮ ಪೂರ್ವಜರು ನನಗೆ ಮೊರೆಯಿಟ್ಟರು. ನಾನು ಅವರಿಗೂ ಈಜಿಪ್ಟಿನವರಿಗೂ ಮಧ್ಯೆ ಕಾರ್ಗತ್ತಲೆಯನ್ನು ಉಂಟುಮಾಡಿದೆ. ಇದಲ್ಲದೆ ಈಜಿಪ್ಟಿನವರ ಮೇಲೆ ಸಮುದ್ರವನ್ನು ಬರಮಾಡಿ ಅವರನ್ನು ಮುಳುಗಿಸಿಬಿಟ್ಟೆ. ನಾನು ಈಜಿಪ್ಟಿನಲ್ಲಿ ಏನೇನು ಮಾಡಿದೆನೆಂಬುದಕ್ಕೆ ನೀವೇ ಸಾಕ್ಷಿಗಳು. ನೀವು ದೀರ್ಘಕಾಲ ಮರುಭೂಮಿಯಲ್ಲಿದ್ದಿರಿ. ಆನಂತರ ನಿಮ್ಮನ್ನು ಜೋರ್ಡಾನಿನ ಆಚೆ ಅಮೋರಿಯರ ನಾಡಿಗೆ ಕರೆತಂದೆ. ನಿಮ್ಮೊಡನೆ ಯುದ್ಧಕ್ಕೆ ಬಂದ ಅವರನ್ನು ನಿಮ್ಮ ಕೈ ವಶ ಮಾಡಿದೆ. ನೀವು ಅವರ ನಾಡನ್ನು ಸ್ವತಂತ್ರಿಸಿಕೊಂಡಿರಿ. ಅವರನ್ನು ನಿಮ್ಮೆದುರಿನಲ್ಲೇ ನಾಶ ಮಾಡಿದೆ. ಆಮೇಲೆ ಮೊವಾಬ್ಯರ ಅರಸನೂ ಚಿಪ್ಪೋರನ ಮಗನೂ ಆದ  ಬಾಲಾಕನು ಇಸ್ರಯೇಲರಾದ ನಿಮ್ಮ ವಿರುದ್ಧ ಯುದ್ಧ ಮಾಡಲು ಎದ್ದ. ನಿಮ್ಮನ್ನು ಶಪಿಸಲು ಬೆಯೋರನ ಮಗ ಬಿಳಾಮನಿಗೆ ಕರೆ ಕಳುಹಿಸಿದ. ಆದರೆ ನಾನು ಆ ಬಿಳಾಮನಿಗೆ ಸಮ್ಮತಿ ಕೊಡಲಿಲ್ಲವಾದ್ದರಿಂದ ಅವನು ನಿಮ್ಮನ್ನು ಆಶೀರ್ವದಿಸುತ್ತಲೇ ಇರಬೇಕಾಯಿತು. ಹೀಗೆ ನಿಮ್ಮನ್ನು ಅವನ ಕೈಗೆ ಬೀಳದಂತೆ ತಪ್ಪಿಸಿದೆ. ನೀವು ಜೋರ್ಡಾನನ್ನು ದಾಟಿ ಜೆರಿಕೋವಿಗೆ ಬಂದಿರಿ. ಆಗ ಜೆರಿಕೋವಿನವರು, ಅಮೋರಿಯರು, ಪೆರಿಜ್ಜೀಯರು, ಕಾನಾನ್ಯರು, ಹಿತ್ತಿಯರು, ಗಿರ್ಗಾಷ್ಟಿಯರು, ಹಿವ್ವಿಯರು ಹಾಗೂ ಯೆಬೂಸಿಯರು ಇವರೆಲ್ಲರೂ ನಿಮಗೆ ವಿರುದ್ಧ ಯುದ್ಧಕ್ಕೆ ಬಂದರು. ನಾನು ಅವರೆಲ್ಲರನ್ನು ನಿಮ್ಮ ಕೈವಶ ಮಾಡಿದೆ. ಇದಲ್ಲದೆ ಕಣಜದ ಹುಳುಗಳನ್ನು ನಿಮ್ಮ ಮುಂದಾಗಿ ಕಳುಹಿಸಿದೆ. ಅವು ಅಮೋರಿಯರ ಅರಸರಿಬ್ಬರನ್ನು ಓಡಿಸಿಬಿಟ್ಟವು. ಇದು ನಿಮ್ಮ ಕತ್ತಿಬಿಲ್ಲುಗಳಿಂದ ಆದುದಲ್ಲ. ನೀವು ಕೃಷಿಮಾಡದ, ಬೆಳೆ ತುಂಬಿದ ಭೂಮಿಯನ್ನು ನಿಮಗೆ ಕೊಟ್ಟೆ. ನೀವು ಕಟ್ಟದ ನಗರಗಳಲ್ಲಿ ವಾಸಮಾಡುತ್ತಿದ್ದೀರಿ. ನೀವು ನೆಟ್ಟು ಬೆಳಸದ ದ್ರಾಕ್ಷಿ ಹಾಗೂ ಎಣ್ಣೆಮರಗಳ ತೋಟಗಳನ್ನು ಅನುಭವಿಸುತ್ತಿದ್ದೀರಿ."

ಕೀರ್ತನೆ: 136:1-3, 16-18, 21-22, 24
ಶ್ಲೋಕ: ಪ್ರಭುವಿನ ಪ್ರೀತಿ ಶಾಶ್ವತ

ಒಳ್ಳೆಯವನಾದ ಪ್ರಭುವಿಗೆ ಧನ್ಯವಾದ
ದೇವಾಧಿದೇವನಿಗೆ ಧನ್ಯವಾದ
ಮಹೋನ್ನತ ಪ್ರಭುವಿಗೆ ಧನ್ಯವಾದ
ಆತನ ಪ್ರೀತಿ ಶಾಶ್ವತ

ತನ್ನ ಪ್ರಜೆಯನು ಅರಣ್ಯ ಮಾರ್ಗವಾಗಿ ಕರೆತಂದವನಿಗೆ ಧನ್ಯವಾದ
ಬಲವಂತ ರಾಜರನು ಉರುಳಿಸಿದಾತನಿಗೆ ಧನ್ಯವಾದ
ಪ್ರಖ್ಯಾತ ರಾಜರನು ಸಂಹರಿಸಿದಾತನಿಗೆ ಧನ್ಯವಾದ
ಅವರ ನಾಡನು ಇಸ್ರಯೇಲರಿಗೆ ಕೊಟ್ಟಾತನಿಗೆ ಧನ್ಯವಾದ

ಅದನ್ನು ದಾಸರಾದ ನಮಗೆ ಸೊತ್ತಾಗಿ ನೀಡಿದಾತನಿಗೆ ಧನ್ಯವಾದ
ಶತ್ರು ಹಗೆಗಳಿಂದ ನಮ್ಮನ್ನು ಬಿಡಿಸಿದಾತನಿಗೆ ಧನ್ಯವಾದ

ಶುಭಸಂದೇಶ: ಮತ್ತಾಯ 19:3-12


ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, "ಯಾವುದಾದರು ಕಾರಣದಿಂದ ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?" ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಸೃಷ್ಟಿಕರ್ತ ಆದಿಯಿಂದಲೇ ಅವರನ್ನು ಗಂಡು ಹೆಣ್ಣಾಗಿ ಉಂಟು ಮಾಡಿದರು ಎಂದೂ, ಈ ಕಾರಣದಿಂದಲೇ ಗಂಡನು ತಂದೆ ತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು ಎಂದೂ ಹೇಳಿದ್ದಾರೆಂಬುದಾಗಿ ನೀವು  ಪವಿತ್ರಗ್ರಂಥದಲ್ಲಿ ಓದಿಲ್ಲವೇ? ಹೀಗಿರುವಲ್ಲಿ, ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರವಾಗಿರುವರು. ಈ ನಿಮಿತ್ತ ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದೆ ಇರಲಿ," ಎಂದರು. "ಹಾಗಾದರೆ ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟು ಬಿಡಬಹುದೆಂದು ಮೋಶೆಯು ನಿಯಮಿಸಿದ್ದು ಏಕೆ?" ಎಂದು ಫರಿಸಾಯರು ಮರುಪ್ರಶ್ನೆ ಹಾಕಿದರು. "ನಿಮ್ಮ ಹೆಂಡತಿಯನ್ನು ನೀವು ಬಿಟ್ಟು ಬಿಡಬಹುದೆಂದು ಮೋಶೆ ಅನುಮತಿ ಇತ್ತದ್ದು ನಿಮ್ಮ ಹೃದಯ ಕಾಠಿಣ್ಯದ ನಿಮಿತ್ತದಿಂದಲೇ. ಆದರೆ ಅದು ಆದಿಯಿಂದಲೇ ಹಾಗಿರಲಿಲ್ಲ. ನಾನು ನಿಮಗೆ ಹೇಳುವುದನ್ನು ಕೇಳಿ: ತನ್ನ ಹೆಂಡತಿಯನ್ನು ಅವಳ ದುರ್ನಡತೆಯ ಕಾರಣದಿಂದಲ್ಲದೆ ಬಿಟ್ಟುಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವ ಪ್ರತಿಯೊಬ್ಬನೂ ವ್ಯಭಿಚಾರಿಯಾಗುತ್ತಾನೆ." ಶಿಷ್ಯರು ಆಗ, "ಸತಿ ಪತಿಯರ ಸಂಬಂಧ ಈ  ರೀತಿ ಇರುವುದಾದರೆ, ಮದುವೆ ಮಾಡಿಕೊಳ್ಳದಿರುವುದೇ ಲೇಸು," ಎಂದರು. ಅದಕ್ಕೆ ಯೇಸು, "ಇದನ್ನು ಅಂಗೀಕರಿಸಲು ಎಲ್ಲರಿಂದಲೂ ಸಾಧ್ಯವಿಲ್ಲ: ಯಾರಿಗೆ ಅನುಗ್ರಹಿಸಲಾಗಿದೆಯೋ ಅವರಿಂದ ಮಾತ್ರ ಸಾಧ್ಯ ತಾಯಿಯ ಉದರದಿಂದಲೇ ನಪುಂಸಕರಾಗಿ ಹುಟ್ಟಿದವರಿದ್ದಾರೆ; ಜನರಿಂದ ನಪುಂಸಕರಾದವರು ಕೂಡ ಇದ್ದಾರೆ; ಸ್ವರ್ಗಸಾಮ್ರಾಜ್ಯದ ನಿಮಿತ್ತ ಅವಿವಾಹಿತರಾಗಿ ಇರುವವರೂ ಇದ್ದಾರೆ; ಇದನ್ನು ಅಂಗೀಕರಿಸಬಲ್ಲವನು ಅಂಗೀಕರಿಸಲಿ,"ಎಂದರು.

17.08.23

ಮೊದಲನೇ ವಾಚನ: ಯೆಹೋಶುವ  3:7-11, 13-17

ಆಗ ಸರ್ವೇಶ್ವರ, ಯೆಹೋಶುವನಿಗೆ: “ನಾನು ಇಂದಿನಿಂದ ನಿನ್ನನ್ನು ಇಸ್ರಯೇಲರ ಮುಂದೆ ಮಹಾತ್ಮನನ್ನಾಗಿಸುವೆನು. ನಾನು ಮೋಶೆಯ ಸಂಗಡ ಇದ್ದಹಾಗೆ ನಿನ್ನ ಸಂಗಡವೂ ಇರುವೆನೆಂದು ಅವರಿಗೆ ಗೊತ್ತಾಗುವುದು. ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಜೋರ್ಡನ್ ನದಿಯ ಅಂಚಿಗೆ ಬಂದ ಕೂಡಲೆ ಅಲ್ಲೇ ನಿಲ್ಲಬೇಕೆಂದು ಆಜ್ಞಾಪಿಸು,” ಎಂದರು. ಆಗ ಯೆಹೋಶುವನು ಇಸ್ರಯೇಲರಿಗೆ, “ಇಲ್ಲಿಗೆ ಬಂದು ನಿಮ್ಮ ದೇವರಾದ ಸರ್ವೇಶ್ವರ ಸ್ವಾಮಿಯ ಮಾತುಗಳನ್ನು ಕೇಳಿ: ಚೈತನ್ಯ ಸ್ವರೂಪರಾದ ದೇವರು ನಿಮ್ಮ ಮಧ್ಯೆ ಇದ್ದಾರೆಂದು ನಿಮಗೆ ಈಗ ತಿಳಿಯುವುದು. ಅದೇ ಕಾನಾನ್ಯರನ್ನು, ಹಿತ್ತಿಯರನ್ನು, ಹಿವ್ವಿಯರನ್ನು, ಪೆರಿಜೀಯರನ್ನು, ಗಿರ್ಗಾಷಿಯರನ್ನು, ಅಮೋರಿಯರನ್ನು ಹಾಗೂ ಯೆಬೂಸಿಯರನ್ನು ನಿಮ್ಮ ಮುಂದಿನಿಂದ ಓಡಿಸಿಬಿಡುವರೆಂದು ನಿಮಗೆ ಗೊತ್ತಾಗುವುದು. ಹೇಗೆಂದರೆ - ಸರ್ವಲೋಕದ ಒಡೆಯನ ಒಡಂಬಡಿಕೆಯ ಮಂಜೂಷವು ನಿಮ್ಮ ಮುಂದಾಗಿ ಹೋಗಿ ಜೋರ್ಡನಿನಲ್ಲಿ ಇಳಿಯುವುದು. ಆಗ ನೀವು ಇಸ್ರಯೇಲ್ ಕುಲಗಳಿಂದ ಕುಲಕ್ಕೆ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸಿಕೊಳ್ಳಬೇಕು. ಸರ್ವಲೋಕದ ಒಡೆಯನಾದ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ತಮ್ಮ ಕಾಲುಗಳನ್ನು ಜೋರ್ಡನ್ ನದಿಯ ನೀರಿನಲ್ಲಿ ಇಡುತ್ತಲೇ ಮೇಲಿಂದ ಹರಿದು ಬರುವ ನೀರು ಮುಂದೆ ಸಾಗದೆ ಅಲ್ಲೇ ರಾಶಿಯಾಗಿ ನಿಂತುಕೊಳ್ಳುವುದು,” ಎಂದು ತಿಳಿಸಿದನು. ಜನರು ಜೋರ್ಡನ್ ನದಿಯನ್ನು ದಾಟಲು ತಮ್ಮ ತಮ್ಮ ಡೇರೆಗಳಿಂದ ಹೊರಟರು. ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಅವರ ಮುಂದೆ ಇದ್ದರು. ಮಂಜೂಷವನ್ನು ಹೊತ್ತ ಯಾಜಕರು ಜೋರ್ಡನಿಗೆ ಬಂದರು. ಅದು ಸುಗ್ಗಿಯ ಕಾಲ. ನದಿ ದಡವಿೂರಿ ಹರಿಯುತ್ತಿತ್ತು. ಯಾಜಕರು ಬಂದು ನೀರಿನಲ್ಲಿ ತಮ್ಮ ಕಾಲುಗಳನ್ನು ಇಡುತ್ತಲೇ ಹರಿಯುತ್ತಿದ್ದ ಜೋರ್ಡನ್ ನದಿಯ ನೀರು ನಿಂತುಹೋಯಿತು. ಮೇಲಿಂದ ಬರುತ್ತಿದ್ದ ನೀರು ಬಹುದೂರದಲ್ಲಿದ್ದ ಚಾರೆತಾನಿನ ಬಳಿಯಿರುವ ಆದಾಮ್ ಊರಿನ ತನಕ ರಾಶಿಯಾಗಿ ನಿಂತುಕೊಂಡಿತು. ಕೆಳಗಿನ ನೀರು ಅರಾಬಾ ತಗ್ಗಿನಲ್ಲಿರುವ ಲವಣಸಮುದ್ರಕ್ಕೆ ಹರಿದು ಹೋಯಿತು. ಜನರು ಜೆರಿಕೋವಿನ ಎದುರಿನಲ್ಲಿ ನದಿ ದಾಟಿದರು. ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರು ಜೋರ್ಡನಿನ ನಡುವೆ ನೆಲದ ಮೇಲೆ ನಿಂತಿದ್ದರು. ಅಷ್ಟರಲ್ಲಿ ಇಸ್ರಯೇಲರೆಲ್ಲರೂ ಒಣನೆಲದ ಮೇಲೆ ನಡೆದು ಹೋದರು. ಹೀಗೆ ಜನರೆಲ್ಲರೂ ಜೋರ್ಡನಿನ ಆಚೆಗೆ ಸೇರಿದರು.

ಕೀರ್ತನೆ: 114:1-2, 3-4, 5-6
ಶ್ಲೋಕ: ಸಲ್ಲಿಸಿ ನೀವೆಲ್ಲ, ಪ್ರಭುವಿಗೆ ಧನ್ಯವಾದ. 

ಇಸ್ರಯೇಲ್  ಜನರು  ಈಜಿಪ್ಟನು  ಬಿಟ್ಟು  ಹೊರಟಾಗ,
ಯಕೋಬ್ಯರ  ಪರ  ನುಡಿಯಾಡುವವರನು  ಬಿಟ್ಟಗಲಿದಾಗ,,
ಜುದೇಯ  ಆಯಿತಾತನಿಗೆ  ದೇವಾಲಯ,
ಇಸ್ರಯೇಲ್  ಆಯಿತಾತನಿಗೆ  ಸ್ವರಾಜ್ಯ,,

ಇದ  ಕಂಡು  ಓಡಿಹೋಯಿತು  ಕಡಲು,
ಮರಳಿ  ಬಂದಿತು  ಜೋರ್ಡನ್  ಹೊನಲು,,
ಕುಪ್ಪಳಿಸಿದವು  ಪರ್ವತಗಳು  ಟಗರುಗಳಂತೆ,
ಕುಣಿದವು  ಬೆಟ್ಟಗುಡ್ಡಗಳು  ಕುರಿಮರಿಗಳಂತೆ,,

ಕಡಲೇ,  ಓಡುತ್ತಿರುವೆ  ಏಕೆ?,
ಜೋರ್ಡನ್,  ಮರಳುತ್ತಿರುವೆ  ಏಕೆ?,,
ಪರ್ವತಗಳೇ,  ಕುಪ್ಪಳಿಸಿದಿರೇಕೆ  ಟಗರುಗಳಂತೆ?,
ಬೆಟ್ಟಗುಡ್ಡಗಳೇ,  ಕುಣಿದಿರೇಕೆ  ಕುರಿಮರಿಗಳಂತೆ?,,

ಘೋಷಣೆ 2ತಿಮೊತಿ. 1:10

ಅಲ್ಲೆಲೂಯ, ಅಲ್ಲೆಲೂಯ!
ಮೃತ್ಯುಶಕ್ತಿಯನ್ನು ವಿನಾಶಗೊಳಿಸಿ, ಅಮರ ಜೀವವನ್ನು ಶುಭಸಂದೇಶದ ಮೂಲಕ ಬೆಳಕಿಗೆ ತಂದವರು ಯೇಸುವೇ ||
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 18:12-19:1


ಅನಂತರ ಪೇತ್ರನು ಯೇಸುವಿನ ಬಳಿಗೆ ಬಂದು, “ಸ್ವಾವಿೂ, ನನಗೆ ವಿರುದ್ಧ ದ್ರೋಹ ಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳುಸಲವೇ?” ಎಂದು ಕೇಳಿದನು. “ಏಳುಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ ಹೇಳುತ್ತೇನೆ” ಎಂದು ಯೇಸು ಉತ್ತರವಿತ್ತರು. ಯೇಸು ತಮ್ಮ ಮಾತನ್ನು ಮುಂದುವರಿಸುತ್ತಾ, “ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ: ಒಬ್ಬ ರಾಜನಿದ್ದ. ಅವನು ತನ್ನ ಸೇವಕರಿಂದ ಲೆಕ್ಕ ಕೇಳಲು ನಿರ್ಧರಿಸಿದ. ಲೆಕ್ಕ ತೆಗೆದುಕೊಳ್ಳಲು ಆರಂಭಿಸಿದಾಗ ಹತ್ತು ಸಾವಿರ ‘ಚಿನ್ನದ ನಾಣ್ಯ’ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು. ಆದರೆ ಸಾಲ ತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿಂದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ, ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲ ತೀರಿಸುವಂತೆ ರಾಜ ಆಜ್ಞಾಪಿಸಿದ. ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊಂಡ: ‘ಸ್ವಲ್ಪ ಸೈರಿಸಿಕೊಳ್ಳಿ ಸ್ವಾವಿೂ, ನಿಮ್ಮ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಅಂಗಲಾಚಿದ. ರಾಜನಿಗೆ ಕನಿಕರ ಉಂಟಾಯಿತು. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿ ಬಿಟ್ಟ. “ಆದರೆ ಅದೇ ಸೇವಕ ಹೊರಗೆ ಬಂದದ್ದೇ ತನಗೆ ಕೇವಲ ನೂರು ‘ಬೆಳ್ಳಿಕಾಸು’ ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊಂಡ. ಅವನನ್ನು ಹಿಡಿದು, ‘ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು,’ ಎಂದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, ‘ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ,’ ಎಂದು ಕಾಲಿಗೆ ಬಿದ್ದು ಕೇಳಿಕೊಂಡ. ಆದರೂ ಅವನು ಒಪ್ಪಲಿಲ್ಲ. ಅಷ್ಟುಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ. ಇದೆಲ್ಲವನ್ನು ಕಂಡ ಇತರ ಸೇವಕರು ಬಹಳವಾಗಿ ನೊಂದುಕೊಂಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು. ರಾಜನು ಅವನನ್ನು ಕರೆಯಿಸಿ, ‘ಎಲೋ ನೀಚ, ನೀನು ಬೇಡಿಕೊಂಡಿದ್ದರಿಂದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ. ನಾನು ನಿನಗೆ ದಯೆ ತೋರಿಸಿದಂತೆ ನೀನೂ ನಿನ್ನ ಜೊತೆಗಾರನಿಗೆ ದಯೆ ತೋರಿಸಬೇಕಿತ್ತು ಅಲ್ಲವೇ?’ ಎಂದು ಸಿಟ್ಟುಗೊಂಡ. ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ. “ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆ ನಿಮಗೆ ಇದರಂತೆಯೇ ಮಾಡುವರು,” ಎಂದರು. ಈ ವಿಷಯಗಳನ್ನು ಹೇಳಿಯಾದ ಮೇಲೆ, ಯೇಸುಸ್ವಾಮಿ ಗಲಿಲೇಯವನ್ನು ಬಿಟ್ಟು ಜೋರ್ಡನ್ ನದಿಯ ಆಚೆಕಡೆ ಇದ್ದ ಜುದೇಯ ಪ್ರಾಂತ್ಯಕ್ಕೆ ಬಂದರು.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...