07.06.23 - "ದೇವರು ಜೀವಿತರ ದೇವರೇ ಹೊರತು ಮೃತರ ದೇವರಲ್ಲ"

ಮೊದಲನೇ ವಾಚನ: ತೊಬೀತ 3:1-11, 16-17

ಆಗ ನಾನು ವ್ಯಸನಾಕ್ರಾಂತನಾದೆ. ನಿಟ್ಟುಸಿರಿಟ್ಟೆ. ಅತ್ತು ಪ್ರಲಾಪಿಸುತ್ತಾ ಹೀಗೆಂದು ಪ್ರಾರ್ಥನೆ ಮಾಡಿದೆ: ಹೇ ಸರ್ವೇಶ್ವರಾ, ನೀನು ನ್ಯಾಯಸ್ವರೂಪಿ: ಜಗತ್ತಿಗೆಲ್ಲ ನ್ಯಾಯಾಧಿಪತಿ: ನಿನ್ನ ಕಾರ್ಯಗಳೆಲ್ಲ ನ್ಯಾಯಸಮ್ಮತ ನಿನ್ನ ಮಾರ್ಗಗಳೆಲ್ಲ ಸತ್ಯ ಹಾಗೂ ದಯಾಪೂರಿತ. ಸರ್ವೇಶ್ವರಾ, ತಂದುಕೊ ನನ್ನನ್ನೀಗ ನೆನಪಿಗೆ ಕರುಣೆ ತೋರೆನಗೆ. ದಂಡಿಸಬೇಡ ನನ್ನ ಪಾಪಗಳಿಗಾಗಿ ಅರಿಯದೆ ಮಾಡಿದ ತಪ್ಪು ನೆಪ್ಪುಗಳಿಗಾಗಿ ನನ್ನ ಪೂರ್ವಜರ ಪಾಪದೋಷಗಳಿಗಾಗಿ. ನಿನ್ನ ಕಟ್ಟಳೆಗಳನ್ನು ಮೀರಿದೆವು ನಿನಗೆ ದ್ರೋಹವೆಸಗಿ ಪಾಪಮಾಡಿದೆವು; ಎಂದೇ ನಮ್ಮನ್ನೊಪ್ಪಿಸಿದೆ ಸೂರೆಗೆ, ಸೆರೆಗೆ, ಸಾವಿಗೆ ಚದರಿಸಿದೆ ಅನ್ಯಜನಾಂಗಗಳ ಈ ನಾಡಿಗೆ ಗುರಿಪಡಿಸಿದೆ ಇಲ್ಲಿನವರ ನಿಂದೆಪರಿಹಾಸ್ಯಕೆ. ನಿನ್ನ ನಿರ್ಣಯಗಳೆಲ್ಲ ನ್ಯಾಯಯುತ ನನಗೂ ಪೂರ್ವಜರಿಗೂ ನೀನಿತ್ತ ಶಿಕ್ಷೆ ಸೂಕ್ತ ಪಾಲಿಸಲಿಲ್ಲ ನಾವು ನಿನ್ನ ಆಜ್ಞೆಗಳನು ಕೈಗೊಳ್ಳಲಿಲ್ಲ ನಿನ್ನ ಸನ್ಮಾರ್ಗಗಳನು. ನಡೆಸೆನ್ನನೀಗ ನಿನ್ನ ಚಿತ್ತದ ಪ್ರಕಾರ ಬೇಕಾದರೆ ತೆಗೆದುಬಿಡು ಎನ್ನ ಪ್ರಾಣ. ಆಗ ತೆರಳುವೆ ನಾ ಜಗದಿಂದ ಮರೆಯಾಗಿ ಮರಳುವೆ ಧರೆಗೆ ಮಣ್ಣಾಗಿ. ಆಪಾದನೆಗಳನ್ನು ಕೇಳಿ ಸಾಕಾಗಿದೆ ದುಃಖಸಾಗರದಲ್ಲಿ ನಾ ಮುಳುಗಿರುವೆ. ನನಗೆ ಜೀವಕ್ಕಿಂತ ಸಾವೇ ಮೇಲಾಗಿದೆ. ಹೇ ಸರ್ವೇಶ್ವರಾ, ನೀಡೆನಗೆ ವಿಮೋಚನೆ ನಾನು ಸೇರಮಾಡು ಅಮರ ನಿವಾಸಕೆ. ಓ ಸರ್ವೇಶ್ವರಾ, ವಿಮುಖನಾಗಬೇಡ ನನಗೆ. ಈ ಜೀವನದ ಕಷ್ಟಸಂಕಟಗಳ ಸಹಿಸುವುದಕ್ಕಿಂತ ಕ್ರೂರನಿಂದೆ ದೂಷಣೆಗಳ ಕೇಳುವುದಕ್ಕಿಂತ ಸಾವೇ ಲೇಸು ನನಗೆ ಈ ಎಲ್ಲಕ್ಕಿಂತ. ಮೇದ್ಯ ನಾಡಿನ ಎಕ್‍ಬತಾನ ಎಂಬ ನಗರದಲ್ಲಿ ರಾಗುಯೇಲನ ಮಗಳು ಸಾರಾ ಎಂಬಾಕೆ ಇದ್ದಳು. ಅದೇ ದಿನದಂದು ಸಾರಳಿಗೆ ತನ್ನ ತಂದೆಯ ಸೇವಕಿಯೊಬ್ಬಳಿಂದ ಅಕಸ್ಮಾತ್ತಾಗಿ ನಿಂದೆ ದೂಷಣೆಗಳನ್ನು ಕೇಳಿಸಿಕೊಂಡಳು. ಸಾರಳಿಗೆ ಏಳುಸಾರಿ ವಿವಾಹವಾಗಿತ್ತು. ದೆವ್ವಗಳಲ್ಲೆಲ್ಲ ಅತೀ ದುಷ್ಟನಾದ ಆಸ್ಮೋದೇಯುಸ್ ಆಕೆಯ ಏಳು ಗಂಡಂದಿರನ್ನು ಒಬ್ಬರಾದ ಮೇಲೆ ಒಬ್ಬರನ್ನು ಆಕೆಯೊಂದಿಗೆ ಕೂಡಿ ಬಾಳುವುದಕ್ಕೆ ಮುಂಚೆಯೆ, ಕೊಂದುಹಾಕಿದ್ದನು. ಒಂದು ಬಾರಿ ಆ ಸೇವಕಿ ಸಾರಾಳಿಗೆ, “ಗಂಡಂದಿರ ಕೊಲೆಗಡುಕಿ ನೀನು; ಈಗಾಗಲೇ ಏಳು ಮಂದಿಯನ್ನು ಮದುವೆ ಆದೆ; ಒಬ್ಬನಿಂದಲೂ ಮಕ್ಕಳನ್ನು ಪಡೆಯದಷ್ಟು ನತದೃಷ್ಟಳು; ಗಂಡಂದಿರನ್ನು ಕಳೆದುಕೊಂಡ ಕೋಪವನ್ನು ನಮ್ಮ ಮೇಲೆ ಏಕೆ ಕಾರುತ್ತೀಯೆ? ಬೇಕಾದರೆ ಹೋಗಿ ಸತ್ತ ಗಂಡಂದಿರೊಂದಿಗೆ ಸೇರಿಕೊ. ನನ್ನ ಕಣ್ಣಿಗೆ ಎಂದೂ ನಿನ್ನ ಮಗ ಬೀಳದಿರಲಿ,” ಎಂದು ಶಪಿಸಿದಳು. ಇದನ್ನು ಕೇಳಿ, ಸಾರಳಿಗೆ ತೀವ್ರ ದುಃಖ ಉಂಟಾಯಿತು. ಆಕೆ ಅತ್ತು ಪ್ರಲಾಪಿಸಿದಳು. ಕುತ್ತಿಗೆಗೆ ನೇಣುಹಾಕಿಕೊಳ್ಳಲು ತಂದೆಯ ಕೊಠಡಿಗೆ ಹೋದಳು. ಆದರೆ ಆಕೆಗೆ ಒಂದು ಯೋಚನೆ ಹೊಳೆಯಿತು. ಬಹುಶಃ ಅವರು ನನ್ನ ತಂದೆಯನ್ನು ದೂಷಿಸಬಹುದು: “ನಿನ್ನ ಅಚ್ಚು ಮೆಚ್ಚಿನ ಮಗಳೊಬ್ಬಳೇ ದುಃಖದಿಂದ ನೇಣು ಹಾಕಿಕೊಂಡಳು” ಎಂದು ಜರೆಯಬಹುದು. ಇಂಥ ಚುಚ್ಚುಮಾತನ್ನು ಕೇಳಿದೊಡನೆ ನನ್ನ ವಯೋವೃದ್ಧ ತಂದೆ ಮೃತ್ಯುಲೋಕವನ್ನು ಸೇರಬಹುದು. ಆದುದರಿಂದ ನಾನೀಗ ನೇಣುಹಾಕಿಕೊಳ್ಳದಿರುವುದು ಲೇಸು. ಬದಲಿಗೆ ಸರ್ವೇಶ್ವರನೇ ಮರಣವನ್ನು ಕೊಡಲೆಂದು ಪ್ರಾರ್ಥಿಸುವೆ. ಆಗ ಇಂಥ ದೂಷಣೆಗಳನ್ನು ಕೇಳಲು ಅವಕಾಶ ಇರದು ಎಂದುಕೊಂಡಳು. ಅಂತೆಯೇ ಸಾರಳು ಕಿಟಕಿಯ ಬಳಿ ನಿಂತು ಕೈಗಳನ್ನು ಮೇಲಕ್ಕೆತ್ತಿ ಹೀಗೆಂದು ಪ್ರಾರ್ಥಿಸಿದಳು: ಕರುಣಾಳು ದೇವಾ, ನಿನಗೆ ಸ್ತುತಿಸ್ತೋತ್ರ ನಿನ್ನ ನಾಮ ಎಂದೆಂದಿಗೂ ಪೂಜಿತ ಸೃಷ್ಟಿಸಮಸ್ತವು ನಿನ್ನನು ಸ್ತುತಿಸಲಿ ಸತತ. ತೊಬೀತನ ಮತ್ತು ಸಾರಳ ಪ್ರಾರ್ಥನೆ ಮಹಿಮಾನ್ವಿತ ದೇವರ ಸನ್ನಿಧಿಗೆ ಮುಟ್ಟಿತು. ಅವರಿಬ್ಬರನ್ನೂ ಗುಣಪಡಿಸಲು ದೇವರು ರಫಯೇಲ್ ಎಂಬವನನ್ನು ಕಳುಹಿಸಿದರು. ತೊಬೀತನು ತನ್ನ ಕಣ್ಣುಗಳಿಂದ ದೇವರ ಜ್ಯೋತಿಯನ್ನು ನೋಡಲು ಸಾಧ್ಯವಾಗುವಂತೆ ಅವನ ಕಣ್ಣುಗಳ ಮಚ್ಚೆಗಳನ್ನು ತೆಗೆಯಬೇಕಾಗಿತ್ತು. ರಾಗುಯೇಲನ ಮಗಳು ಸಾರಳನ್ನು ತೊಬೀತನ ಮಗ ತೊಬಿಯಾಸನಿಗೆ ವಿವಾಹ ಮಾಡಿಕೊಡಬೇಕಾಗಿತ್ತು. ಮಾತ್ರವಲ್ಲ, ದೆವ್ವಗಳಲ್ಲೆಲ್ಲ ಅತೀ ದುಷ್ಟನಾದ ಆಸ್ಮೋದೇಯುಸ್ ದೆವ್ವವನ್ನು ಆಕೆಯಿಂದ ತೊಲಗಿಸಬೇಕಾಗಿತ್ತು. ಸಾರಳನ್ನು ಮದುವೆಯಾಗಲು ಬೇರೆಯವರಿಗಿಂತಲೂ ತೊಬಿಯಾಸನಿಗೆ ಹಕ್ಕುಬಾಧ್ಯತೆ ಇತ್ತು. ತೊಬೀತನು ಹೊರಾಂಗಣದಿಂದ ಮನೆಯೊಳಕ್ಕೆ ಹೋದನು. ಅದೇ ಸಮಯದಲ್ಲಿ ರಾಗುಯೇಲನ ಮಗಳಾದ ಸಾರಳು ಮಹಡಿಯ ಕೊಠಡಿಯಿಂದ ಇಳಿದು ಬಂದಳು.

ಕೀರ್ತನೆ 25: 2-3. 4-5 6-7, 8-9
ಶ್ಲೋಕ: ಇಟ್ಟಿರುವೆ ಭರವಸೆ ನಿನ್ನಲೆ ದೇವಾ ಸನ್ನುತ

ಎತ್ತಿರುವೆ ಪ್ರಭೂ, ಹೃನ್ಮನಗಳನು ನಿನ್ನತ್ತ
ಇಟ್ಟಿರುವೆ ಭರವಸೆ ನಿನ್ನಲೆ ದೇವಾ ಸನ್ನುತ
ಆಗಲಿ ಆಶಾಭಂಗ ನಿನ್ನೆದುರಾಳಿಗಳಿಗೆ
ಹಾಗಾಗದಿರಲಿ ನಿನ್ನ ನಿರೀಕ್ಷಿಸುವವರಿಗೆ. ಶ್ಲೋಕ

ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು
ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು
ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ, ಮುಕ್ತಿದಾತ
ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ. ಶ್ಲೋಕ

ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು
ಆದಿಯಿಂದ ನೀ ತೋರಿದಚಲ ಪ್ರೀತಿಯನು
ಯೌವನದೆನ್ನ ಪಾಪ ಪ್ರವೃತ್ತಿಗಳ ಮನದಲ್ಲಿಟ್ಟುಕೊಳ್ಳಬೇಡ
ನಿನ್ನೊಲುಮೆ ನಲ್ಮೆಗಳ ನಿಮಿತ್ತ ಪ್ರಭು, ನನ್ನ ನೆನೆಯದಿರಬೇಡ. ಶ್ಲೋಕ

ಸತ್ಯಸ್ವರೂಪನು, ದಯಾವಂತನು ಪ್ರಭು
ದಾರಿತಪ್ಪಿದವರಿಗೆ ಬೋಧಕನು ವಿಭು
ದೀನರನು ನಡೆಸುವನು ತನ್ನ ವಿಧಿಗನುಸಾರ
ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ. ಶ್ಲೋಕ


ಶುಭಸಂದೇಶ: ಮಾರ್ಕ 12: 18-27


ಅನಂತರ ಸದ್ದುಕಾಯರು ಯೇಸುಸ್ವಾಮಿಯ ಬಳಿಗೆ ಬಂದರು. ಸತ್ತಮೇಲೆ ಪುನರುತ್ಥಾನ ಇಲ್ಲವೆಂಬುದು ಇವರ ಅಭಿಮತ. ಇವರು ಯೇಸುವನ್ನು, “ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು,’ ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೇ? ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ವಿವಾಹವಾಯಿತು. ಅವನು ಮಕ್ಕಳಿಲ್ಲದೆ ಮೃತನಾದುದರಿಂದ ಎರಡನೆಯವನು ಅವನ ಹೆಂಡತಿಯನ್ನು ಮದುವೆಮಾಡಿಕೊಂಡು, ಸಂತಾನವಿಲ್ಲದೆ ಸಾವನ್ನಪ್ಪಿದ. ಮೂರನೆಯವನಿಗೂ ಇದೇ ಗತಿಯಾಯಿತು. ಅನಂತರ, ಉಳಿದವರೂ ಒಬ್ಬರ ಬಳಿಕ ಇನ್ನೊಬ್ಬರು ಆಕೆಯನ್ನು ಮದುವೆ ಮಾಡಿಕೊಂಡು, ಸಂತಾನವಿಲ್ಲದೆ ಸತ್ತುಹೋದರು. ಕಡೆಗೆ ಆ ಸ್ತ್ರೀಯೂ ಮರಣ ಹೊಂದಿದಳು. ಆಗ ಹೇಳಿ, ಪುನರುತ್ಥಾನದ ದಿನದಲ್ಲಿ, ಆಕೆ ಯಾರ ಹೆಂಡತಿ ಎನಿಸಿಕೊಳ್ಳುವಳು? ಏಳು ಮಂದಿ ಸಹೋದರರೂ ಆಕೆಯನ್ನು ವಿವಾಹವಾಗಿದ್ದರಲ್ಲವೇ?” ಎಂದು ಪ್ರಶ್ನಿಸಿದರು. ಅದಕ್ಕೆ ಯೇಸು, “ನಿಮ್ಮದು ಎಂಥಾ ತಪ್ಪು ಅಭಿಪ್ರಾಯ! ಪವಿತ್ರಗ್ರಂಥವನ್ನು ಆಗಲಿ, ದೇವರ ಶಕ್ತಿಯನ್ನಾಗಲೀ ನೀವು ಅರ್ಥಮಾಡಿಕೊಂಡಿಲ್ಲ. ಸತ್ತವರು ಪುನರುತ್ಥಾನವಾದ ಮೇಲೆ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಅವರು ಸ್ವರ್ಗದ ದೇವದೂತರಂತೆ ಇರುತ್ತಾರೆ. ಇದಲ್ಲದೆ ಸತ್ತವರು ಪುನರುತ್ಥಾನವಾಗುವ ವಿಷಯದಲ್ಲಿ ಹೇಳುವುದಾದರೆ: ‘ನಾನು ಅಬ್ರಹಾಮನಿಗೆ ದೇವರು, ಇಸಾಕನಿಗೆ ದೇವರು, ಯಕೋಬನಿಗೆ ದೇವರು’ ಎಂದು ದೇವರು ಮೋಶೆಗೆ ಹೇಳಿದ್ದನ್ನು ಮೋಶೆಯ ಗ್ರಂಥದಲ್ಲಿ ‘ಉರಿಯುವ ಪೊದೆ’ಯ ಪ್ರಸ್ತಾಪವಿರುವ ಭಾಗದಲ್ಲಿ, ನೀವು ಓದಿರಬೇಕಲ್ಲವೆ? ದೇವರು ಜೀವಿತರ ದೇವರೇ ಹೊರತು ಮೃತರ ದೇವರಲ್ಲ, ನಿಮ್ಮ ಅಭಿಪ್ರಾಯ ತೀರಾ ತಪ್ಪಾಗಿದೆ,” ಎಂದರು.

06.06.23

ಮೊದಲನೇ ವಾಚನ: ತೊಬೀತ 2: 9-14

ಅದೇ ರಾತ್ರಿ ಸ್ನಾನಮಾಡಿಕೊಂಡು ನನ್ನ ಅಂಗಳದ ಗೋಡೆಯ ಪಕ್ಕದಲ್ಲೇ ಮಲಗಿಕೊಂಡೆ. ಸೆಕೆಯಾಗಿದ್ದರಿಂದ ಮುಖವನ್ನು ಮುಚ್ಚಿಕೊಳ್ಳಲಿಲ್ಲ. ತಲೆಯ ಮೇಲ್ಭಾಗದ ಗೋಡೆಯಲ್ಲಿ ಗುಬ್ಬಚ್ಚಿಗಳಿದ್ದವೆಂದು ನನಗೆ ತಿಳಿದಿರಲಿಲ್ಲ. ಅವುಗಳ ಬಿಸಿಬಿಸಿ ಪಿಚ್ಚಿಕೆಗಳು ಕಣ್ಣುಗಳಿಗೆ ಬಿದ್ದವು. ಕಣ್ಣುಗಳ ಮೇಲೆ ಬಿಳಿಮಚ್ಚೆಗಳು ಉಂಟಾದವು. ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋದೆ. ಮುಲಾಮುಗಳಿಂದ ಅದನ್ನು ಗುಣಪಡಿಸಲು ಅವರು ಪ್ರಯತ್ನಿಸಿದಷ್ಟೂ ನನ್ನ ದೃಷ್ಟಿ ಕಡಿಮೆಯಾಯಿತು. ಕೊನೆಗೆ ನಾನು ಸಂಪೂರ್ಣವಾಗಿ ಕುರುಡನಾದೆ. ನಾಲ್ಕು ವರ್ಷಗಳ ಕಾಲ ದೃಷ್ಟಿಯಿಲ್ಲದೆ ಇದ್ದೆ. ನನ್ನ ಬಂಧುಬಳಗದವರೆಲ್ಲ ನನ್ನ ಬಗ್ಗೆ ಅನುಕಂಪ ತಾಳಿದ್ದರು. ಅಹೀಕರನು ಎಲಾಮಿಯಸಿಗೆ ಹೋಗುವತನಕ ಎರಡು ವರ್ಷಕಾಲ ನನಗೆ ಜೀವನಾಂಶವನ್ನು ಒದಗಿಸಿ ಕೊಟ್ಟನು. ಅಹೀಕರನು ಹೊರಟುಹೋದ ತರುವಾಯ ನನ್ನ ಪತ್ನಿ ಅನ್ನಾ ದುಡಿಯಬೇಕಾಗಿ ಬಂತು. ಅವಳು ಉಣ್ಣೆಯಿಂದ ನೂಲುತೆಗೆದು ಬಟ್ಟೆಯನ್ನು ನೇಯುತ್ತಿದ್ದಳು. ಕ್ರಯಮಾಡಿದವರಿಗೆ ಬಟ್ಟೆಯನ್ನು ತಲುಪಿಸಿ ಅವರಿಂದ ಹಣಪಡೆಯುತ್ತಿದ್ದಳು. ಡಿಸ್ಪ್ರೋಸ್ ತಿಂಗಳ ಏಳನೆಯ ದಿನದಂದು ತಾನೇ ನೆಯ್ದ ಬಟ್ಟೆಯ ತುಂಡೊಂದನ್ನು ಗೊತ್ತುಮಾಡಿದವರಿಗೆ ಕೊಟ್ಟಳು. ಅವರು ಅದಕ್ಕೆ ಪೂರ್ತಿ ಹಣವನ್ನು ಪಾವತಿ ಮಾಡಿದ್ದಲ್ಲದೆ ಊಟಕ್ಕೆಂದು ಒಂದು ಮೇಕೆಯನ್ನು ಸಹ ಕೊಡುಗೆಯಾಗಿ ಕೊಟ್ಟರು. ಆ ಮೇಕೆ ಮನೆಗೆ ಬಂದಾಗ ಅರಚಲು ಆರಂಭಿಸಿತು. ಆಗ ನನ್ನಾಕೆಯನ್ನು ಕರೆದು, “ಈ ಮೇಕೆ ಎಲ್ಲಿಂದ ಬಂತು? ಇದು ಕದ್ದು ತಂದ ಮೇಕೆಯಲ್ಲ ತಾನೇ? ಕದ್ದವಸ್ತುವನ್ನು ತಿನ್ನಲು ನಮಗೆ ಹಕ್ಕಿಲ್ಲ. ಇದನ್ನು ಮಾಲೀಕರಿಗೆ ಹಿಂದಿರುಗಿಸು,” ಎಂದು ಹೇಳಿದೆ. ಆದರೆ ಆಕೆ, “ಇಲ್ಲ, ನನ್ನ ಕೂಲಿಗಿಂತ ಹೆಚ್ಚಾಗಿ ಇದನ್ನು ಕೊಡುಗೆಯಾಗಿ ನನಗೆ ಕೊಟ್ಟರು,” ಎಂದು ಹೇಳಿದಳು. ನಾನು ಆಕೆಯನ್ನು ನಂಬಲಿಲ್ಲ. ಮಾಲೀಕರಿಗೆ ಅದನ್ನು ಹಿಂದಿರುಗಿಸಬೇಕೆಂದು ಒತ್ತಾಯ ಮಾಡಿದೆ. ಅವಳ ನಡತೆಯ ವಿಷಯದಲ್ಲಿ ನನಗೆ ತೀವ್ರ ನಾಚಿಕೆಯಾಯಿತು. ಅದಕ್ಕವಳು, “ನಿನ್ನ ದಾನಧರ್ಮ ಏನಾಯಿತು? ನಿನ್ನ ಸತ್ಕಾರ್ಯಗಳಿಂದ ಏನು ಬಂತು? ಅವುಗಳಿಂದ ನಿನಗೆ ಲಭಿಸಿದ ಪ್ರತಿಫಲ ಎಲ್ಲರಿಗೂ ಗೊತ್ತಾದ ವಿಷಯ!” ಎಂದು ಜರೆದಳು.

ಕೀರ್ತನೆ: 112: 1-2, 7-9
ಶ್ಲೋಕ: ಪ್ರಭುವಿನಲಿ ಭರವಸೆಯಿಟ್ಟ ಆ ಮನವು ಅಸ್ಥಿರವಲ್ಲ

ಪ್ರಭುವಿನಲಿ ಭಯಭಕ್ತಿ ಉಳ್ಳವನು ಧನ್ಯನು
ಆತನಾಜ್ಞೆಗಳಲಿ ಹಿಗ್ಗುವವನು ಭಾಗ್ಯನು
ಬಲಿಷ್ಠವಾಗುವುದು ಜಗದೊಳು ಅವನ ಸಂತಾನ
ಸಜ್ಜನರ ಸಂತತಿ ಪಡೆವುದು ಆಶೀರ್ವಚನ. ಶ್ಲೋಕ

ಅಶುಭವಾರ್ತೆಯ ಭಯಭೀತಿ ಯಾವುದೂ ಅವನಿಗಿಲ್ಲ
ಪ್ರಭುವಿನಲಿ ಭರವಸೆಯಿಟ್ಟ ಆ ಮನವು ಅಸ್ಥಿರವಲ್ಲ
ದೃಢವಿದೆ ಅವನ ಮನ, ಎದೆಗುಂದನವನು
ಕಾಣುವನು ದುರುಳರಿಗಾಗುವ ದಂಡನೆಯನು. ಶ್ಲೋಕ

ಉದಾರತೆಯಿಂದ ಕೊಡುವನು ಬಡವರಿಗೆ
ಫಲಿಸುವುದು ಅವನಾ ನೀತಿ ಸದಾಕಾಲಕೆ
ಮಹಿಮೆತರುವ ಕೋಡುಮೂಡುವುದು ಅವನಿಗೆ. ಶ್ಲೋಕ

ಶುಭಸಂದೇಶ: ಮಾರ್ಕ 12: 13-17

ಆಮೇಲೆ ಅವರು ಯೇಸುಸ್ವಾಮಿಯನ್ನು ಮಾತಿನಲ್ಲೇ ಸಿಕ್ಕಿಸುವ ಉದ್ದೇಶದಿಂದ ಕೆಲವು ಫರಿಸಾಯರನ್ನೂ ಹೆರೋದನ ಪಕ್ಷದ ಕೆಲವರನ್ನೂ ಅವರ ಬಳಿಗೆ ಕಳುಹಿಸಿದರು. ಇವರು ಬಂದು, “ಬೋಧಕರೇ, ತಾವು ಸತ್ಯವಂತರು, ಸ್ಥಾನಮಾನಕ್ಕೆ ಮಣಿಯದವರು, ಮುಖದಾಕ್ಷಿಣ್ಯಕ್ಕೆ ಎಡೆಕೊಡದವರು, ಸತ್ಯಕ್ಕನುಸಾರ ದೈವಮಾರ್ಗವನ್ನು ಬೋಧಿಸುವವರು ಎಂದು ನಾವು ಬಲ್ಲೆವು. ಹೀಗಿರುವಲ್ಲಿ ರೋಮ್ ಚಕ್ರಾಧಿಪತಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ, ಅಲ್ಲವೋ? ನಾವದನ್ನು ಕೊಡಬೇಕೋ, ಬೇಡವೋ?” ಎಂದು ಕೇಳಿದರು. ಅವರ ಕಪಟತನವನ್ನು ಯೇಸು ಗ್ರಹಿಸಿ, “ನೀವು ನನ್ನನ್ನು ಪರೀಕ್ಷಿಸುವುದೇಕೆ? ಒಂದು ನಾಣ್ಯವನ್ನು ತನ್ನಿ, ಅದನ್ನು ನೋಡೋಣ,” ಎಂದರು. ಅವರೊಂದು ನಾಣ್ಯವನ್ನು ತಂದರು. “ಇದರ ಮೇಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಯೇಸು ಕೇಳಿದರು. ಅದಕ್ಕೆ ಅವರು “ಅವು ರೋಮ್ ಚಕ್ರವರ್ತಿಯವು,” ಎಂದರು. ಆಗ ಯೇಸು, “ಹಾಗಾದರೆ ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದರು. ಇದನ್ನು ಕೇಳಿದ್ದೇ ಆ ಜನರು ಯೇಸುವಿನ ಬಗ್ಗೆ ಅತ್ಯಾಶ್ಚರ್ಯಪಟ್ಟರು.

05.06.23

ಮೊದಲನೆಯ ವಾಚನ:  ತೊಬೀತ 1:3; 2:1-8*

ಇದು ತೊಬೀತನ ಜೀವನ ಚರಿತ್ರೆ: ತೊಬೀತನು ತೊಬಿಯೇಲನ ಮಗ; ತೊಬಿಯೇಲನು ನಾನಿಯೇಲನ ಮಗ; ಅನಾನಿಯೇಲನು ಅದುಯೇಲನ ಮಗ; ಅದುಯೇಲ ಗಬಯೇಲನ ಮಗ; ಗಬಯೇಲನು ರಫಯೇಲನ ಮಗ ; ರಫಯೇಲನು ರಗುಯೇಲನ ಮಗ ; ರಾಗುಯೇಲನು ಅಸಿಯೇಲನ ಕುಟುಂಬದವನು ಹಾಗೂ ನಫ್ತಾಲಿಯ ಕುಲಕ್ಕೆ ಸೇರಿದವನು. ಅಸ್ಸೀರಿಯದ ರಾಜನಾಗಿದ್ದ ಶಲ್ಮನೇಸರನ ಕಾಲದಲ್ಲಿ ತೊಬೀತನು ತಿಸ್ಬೆಯೆಂಬ ಪಟ್ಟಣದಿಂದ ಗಡಿಪಾರಾದನು. ತಿಸ್ಬೆ ಉತ್ತರ ಗಲಿಲೇಯದಲ್ಲಿ ಇದೆ. ಇದು ನಫ್ತಾಲಿ ಪ್ರಾಂತ್ಯದ ಕಾದೇಶಿಗೆ ದಕ್ಷಿಣದಲ್ಲಿ, ಅಂದರೆ ಹಾಜೋರಿಗೆ ವಾಯುವ್ಯದಲ್ಲಿ, ಫೊಗೋರಿಗೆ ಉತ್ತರದಲ್ಲಿ ಇದೆ. ಎಸಾರದ್ಧೋನ್ ಅರಸನಾಗಿದ್ದಾಗಲೇ ನಾನು ಮನೆಗೆ ಹಿಂದಿರುಗಿದೆ. ಪತ್ನಿ ಅನ್ನಳು ಮತ್ತು ಮಗ ತೊಬಿಯಾಸ್ ನನ್ನೊಡನೆ ಸೇರಿಕೊಂಡರು. ಪಂಚಾಶತ್ತಮ ಹಬ್ಬದಂದು ಒಳ್ಳೆಯ ಔತಣಕೂಟವನ್ನು ಏರ್ಪಡಿಸಲಾಗಿತ್ತು. ನಾನು ಭೋಜನಕ್ಕೆ ಕುಳಿತೆ. ವಿವಿಧ ತಿಂಡಿತಿನಿಸುಗಳನ್ನು ಮೇಜಿನ ಮೇಲೆ ಬಡಿಸಲಾಗಿತ್ತು. ಆಗ ನನ್ನ ಮಗ ತೊಬಿಯಾಸನಿಗೆ, " ಮಗನೇ, ನೀನು ಹೋಗಿ ನಿನೆವೆಯಲ್ಲಿ ಗಡೀಪಾರಾಗಿರುವ ನಮ್ಮ ಸಹೋದರರಲ್ಲಿ ಯಾರಾದರು ಬಡವ ಹಾಗು ಧರ್ಮನಿಷ್ಠನು ಇದ್ದರೆ ಅಂಥವನನ್ನು ಊಟಕ್ಕೆ ಕರೆದುಕೊಂಡು ಬಾ. ಅಂಥವನೊಂದಿಗೆ ನಾನು ಊಟ ಮಾಡಬೇಕು. ನೀನು ಹಿಂದಿರುಗಿ ಬರುವವರೆಗೂ ನಾನು ಕಾದಿರುತ್ತೇನೆ, " ಎಂದೆನು. ಅಂತೆಯೇ, ತೊಬಿಯಾಸನು ಒಬ್ಬ ಬಡ ಇಸ್ರಯೇಲನನ್ನು ಹುಡುಕಲು ಹೊರಟನು. ಅವನು ಹಿಂದಿರುಗಿ ಬಂದು, " ಅಪ್ಪಾ, ಅಪ್ಪಾ ಅಪ್ಪಾ, " ಎಂದು ಕರೆದನು. ನಾನು, " ಏನು ಮಗನೇ? " ಎಂದು ಕೇಳಲು, ಅವನು, " ನಮ್ಮ ಕುಲದವರಲ್ಲಿ ಒಬ್ಬನನ್ನು ಈಗ ತಾನೇ ಹತ್ಯೆ ಮಾಡಿದ್ದಾರೆ. ಅವನ ಕೊರಳನ್ನು ಹಿಸುಕಿ ಅಂಗಡಿ ಬೀದಿಯಲ್ಲಿ ಬಿಸಾಡಿದ್ದಾರೆ. ಅವನು ಇನ್ನೂ ಅಲ್ಲೇ ಬಿದ್ದಿದ್ದಾನೆ, " ಎಂದನು. ತಕ್ಷಣ ನಾನು ಜಿಗಿದೆದ್ದು, ಭೋಜನವನ್ನು ಮುಟ್ಟದೆ ಹೊರಟೆ. ಆ ಅಂಗಡಿ ಬೀದಿಯಿಂದ ಶವವನ್ನು ಹೊತ್ತುತಂದೆ. ಸೂರ್ಯಾಸ್ತಮದ ನಂತರ ಸಮಾಧಿಮಾಡಲು ನನ್ನ ಕೊಠಡಿಯೊಂದರಲ್ಲಿ ಆ ಶವವನ್ನು ಅವಿತಿಟ್ಟೆ. ತರುವಾಯ ಸ್ನಾನಮಾಡಿ ದುಃಖದಿಂದ ಊಟಮಾಡಿದೆ. ಆಗ ಪ್ರವಾದಿ ಆಮೋಸನು ಬೇತೇಲಿನ ವಿರುದ್ಧ ನುಡಿದ ಈ ಮಾತುಗಳು ನನ್ನ ನೆನಪಿಗೆ ಬಂದವು: "ಮಾರ್ಪಡಿಸಿಸುವೆನು ನಿಮ್ಮ ಕೊಂಡಾಟ ದಿನಗಳನ್ನು ಗೋಳಾಟ ದಿನಗಳನ್ನಾಗಿ, ನಿಮ್ಮ ಹರ್ಷಗೀತೆಗಳನ್ನು ಶೋಕಗೀತೆಗಳನ್ನಾಗಿ. " ಈ ನುಡಿ ನನಗೆ ಕಣ್ಣೀರನ್ನು ತಂದಿತು. ಸೂರ್ಯಾಸ್ತಮವಾದ ಮೇಲೆ ನಾನು ಹೊರಟು ಗುಳಿಯನ್ನು ತೋಡಿ ಆ ಶವವನ್ನು ಭೂಸ್ಥಾಪನೆ ಮಾಡಿದೆ. ನನ್ನ ನೆರೆಯವರು ಪರಿಹಾಸ್ಯ ಮಾಡುತ್ತಾ, " ಈತನಿಗೆ ಭಯ ಬೇಡವೆ? ಈ ಮೊದಲೇ ಇಂಥ ಕಾರ್ಯಕ್ಕಾಗಿ ಅವನು ತಲೆತೆತ್ತಬೇಕಾಗಿತ್ತು ; ಪಲಾಯನ ಮಾಡಬೇಕಾಗಿತ್ತು. ಆದರೂ ಪುನಃ ಸತ್ತವರನ್ನು ಸಮಾಧಿಮಾಡಲು ಪ್ರಾರಂಭಿಸಿದ್ದಾನೆ, " ಎಂದುಕೊಂಡರು.

ಕೀರ್ತನೆ: 112:1-2, 3-4, 5-6, v.1
ಶ್ಲೋಕ: ಪ್ರಭುವಿನಲಿ ಭಯಭಕ್ತಿಯುಳ್ಳವನು ಧನ್ಯನು

ಪ್ರಭುವಿನಲಿ ಭಯಭಕ್ತಿಯುಳ್ಳವನು ಧನ್ಯನು|
ಆತನ ಆಜ್ಞೆಗಳಲಿ ಹಿಗ್ಗುವವನು ಭಾಗ್ಯನು||
ಬಲಿಷ್ಠವಾಗುವುದು ಜಗದೊಳು ಅವನ ಸಂತಾನ|
ಸಜ್ಜನರ ಸಂತತಿ ಪಡೆವುದು ಆಶೀರ್ವಚನ||

ಸಿರಿಸಂಪತ್ತಿರುವುದವನ ಮನೆಯಲಿ ಸಮೃದ್ದಿಯಾಗಿ|
ನೀತಿ ಪಲಿಸುವುದು ಆತನ ಮನದಲಿ ಶಾಶ್ವತವಾಗಿ||
ಸಜ್ಜನನಿಗೆ ಮೂಡುವುದು ಜ್ಯೋತಿ ಕತ್ತಲೊಳು|
ನ್ಯಾಯಪ್ರಿಯನು ಆತ, ದಯಾವಂತ, ಕೃಪಾಳು||

ದಯೆತೋರಿ ಧನಸಹಾಯ ಮಾಡುವವನು ಭಾಗ್ಯವಂತ|
ನ್ಯಾಯದಿಂದ ವ್ಯವರಿಸುವಂಥಾ ಮನುಜನು ಭಾಗ್ಯವಂತ||
ಅಚಲನಾಗಿರುವನು ನೀತಿವಂತನು|
ಮರೆಯಲಾರರು ಎಂದಿಗೂ ಆತನನು||

ಶುಭಸಂದೇಶ: ಮಾರ್ಕ 12:1-12

ಆ ಕಾಲದಲ್ಲಿ ಯೇಸು ಅವರೊಡನೆ ಸಾಮತಿಗಳ ರೂಪದಲ್ಲಿ ಮಾತನಾಡತೊಡಗಿದರು: "ಒಬ್ಬನು ದ್ರಾಕ್ಷಿಯ ತೋಟವೊಂದನ್ನು ಮಾಡಿ, ಅದರ ಸುತ್ತ ಬೇಲಿ ಹಾಕಿಸಿದ; ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಬಳಿಕ ತೋಟವನ್ನು ಗೇಣಿದಾರರಿಗೆ ವಹಿಸಿ, ಹೊರನಾಡಿಗೆ ಹೊರಟು ಹೋದ. ಫಲಕಾಲವು ಬಂದಾಗ ತನಗೆ ಬರತಕ್ಕ ಪಾಲನ್ನು ತರುವುದಕ್ಕಾಗಿ ಒಬ್ಬ ಸೇವಕನನ್ನು ಗೇಣಿದಾರರ ಬಳಿಗೆ ಕಳುಹಿಸಿದ. ಆದರೆ ಅವರು ಆ ಸೇವಕನನ್ನು ಹಿಡಿದು, ಹೊಡೆದು, ಬರಿಗೈಯಲ್ಲಿ ಹಿಂದಕ್ಕೆ ಅಟ್ಟಿದರು. ತೋಟದ ಯಜಮಾನ ಪುನಃ ಇನ್ನೊಬ್ಬ ಸೇವಕನನ್ನು ಕಳುಹಿಸಿದ. ಅವರು ಅವನ ತಲೆಯ ಮೇಲೆ ಹೊಡೆದು, ಅವಮಾನಮಾಡಿ ಕಳುಹಿಸಿದರು. ಯಜಮಾನ ಆಮೇಲೆ ಮತ್ತೊಬ್ಬ ಸೇವಕನನ್ನು ಕಳುಹಿಸಿದ. ಇವನನ್ನು ಅವರು ಕೊಂದುಹಾಕಿದರು. ಇನ್ನೂ ಅನೇಕರನ್ನು ಕಳುಹಿಸಲು, ಅವರಲ್ಲಿ ಕೆಲವರನ್ನು ಹೊಡೆದರು, ಕೆಲವರನ್ನು ಕಡಿದುಹಾಕಿದರು. ಯಜಮಾನನಿಗೆ ಇನ್ನು ಉಳಿದಿದ್ದವನೆಂದರೆ ಅವನ ಮುದ್ದುಮಗನೊಬ್ಬನೇ. " ನನ್ನ ಮಗನಿಗಾದರೂ ಅವರು ಮರ್ಯಾದೆಕೊಟ್ಟಾರು, ' ಎಂದು ಭಾವಿಸಿ, ಕಟ್ಟಕಡೆಗೆ ಆ ಯಜಮಾನ ತನ್ನ ಮಗನನ್ನೆ ಅವರ ಬಳಿಗೆ ಕಳುಹಿಸಿದ. ಆದರೆ ಗೇಣಿದಾರರು, 'ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ ಇವನನ್ನು ಮುಗಿಸಿಬಿಡೋಣ. ಆಗ ಈ ಆಸ್ತಿ ನಮ್ಮದಾಗುವುದು, ' ಎಂದು ಒಳಸಂಚು ಹೂಡಿ, ಅವನನ್ನು ಹಿಡಿದು, ಕೊಂದುಹಾಕಿ ತೋಟದ ಆಚೆಗೆ ಎಸೆದುಬಿಟ್ಟರು. ಇಂತಹ ಪರಿಸ್ಥಿತಿಯಲ್ಲಿ ಆ ತೋಟದ ಯಜಮಾನ ಏನು ಮಾಡುವನು? ಅವನು ಬಂದು ಆ ಗೇಣಿದಾರರನ್ನು ಸಂಹರಿಸಿ ತೋಟವನ್ನು ಬೇರೆ ಗೇಣಿದಾರರಿಗೆ ಒಪ್ಪಿಸುವನು. ಪವಿತ್ರಗ್ರಂಥದಲ್ಲಿ: 'ಮನೆಕಟ್ಟುವವರು ಬೇಡವೆಂದು ಬಿಸಾಡಿದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು; ಸರ್ವೇಶ್ವರನಿಂದಲೇ ಆದ ಆ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ ! ' ಎಂಬ ವಾಕ್ಯವನ್ನು ನೀವು ಓದಲಿಲ್ಲವೇ? " ಎಂದರು. ತಮ್ಮನ್ನು ಕುರಿತೇ ಸಾಮತಿಯನ್ನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಂಡ ಆ ಯೆಹೂದ್ಯ ಮುಖಂಡರು ಯೇಸುವನ್ನು ಹಿಡಿದು ಬಂಧಿಸಲು ಯತ್ನಿಸಿದರು. ಆದರೆ ಜನಸಮೂಹಕ್ಕೆ ಭಯಪಟ್ಟು ಅವರನ್ನು ಬಿಟ್ಟು ಹೋದರು.

04.06.23 - "ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು"

ಮೊದಲನೇ ವಾಚನ ವಿಮೋಚನಕಾಂಡ 34:4-6, 8-9

ಮೋಶೆ ಮೊದಲಿದ್ದ ಹಲಗೆಗಳಂತೆ ಎರಡು ಕಲ್ಲಿನ ಹಲಗೆಗಳನ್ನು ಸಿದ್ಧಪಡಿಸಿಕೊಂಡು, ಸರ್ವೇಶ್ವರನ ಅಪ್ಪಣೆಯ ಮೇರೆಗೆ ಬೆಳಿಗ್ಗೆ ಎದ್ದು ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ತೆಗೆದುಕೊಂಡು ಸೀನಾಯಿ ಬೆಟ್ಟವನ್ನು ಹತ್ತಿದನು. ಆಗ ಸರ್ವೇಶ್ವರ ಸ್ವಾಮಿ ಮೇಘಾವೃತರಾಗಿ ಇಳಿದುಬಂದು ಅಲ್ಲಿ ಅವನ ಹತ್ತಿರ ನಿಂತು, ‘ಸರ್ವೇಶ್ವರ’ ಎಂಬ ತಮ್ಮ ನಾಮವನ್ನು ಪ್ರಕಟಿಸಿದರು. ಸರ್ವೇಶ್ವರ ಮೋಶೆಯ ಎದುರಿನಲ್ಲಿ ಹಾದುಹೋಗುತ್ತಾ ಹೀಗೆಂದು ಪ್ರಕಟಿಸಿದರು: ಸರ್ವೇಶ್ವರನು; ಸರ್ವೇಶ್ವರನು ಕರುಣಾಮಯನು, ದಯಾಳು ದೇವರು. ತಟ್ಟನೆ ಸಿಟ್ಟುಗೊಳ್ಳದವನು, ಪ್ರೀತಿಪಾತ್ರನು, ನಂಬಿಗಸ್ತನು, ಕೂಡಲೇ ಮೋಶೆ ನೆಲದಮೇಲೆ ಅಡ್ಡಬಿದ್ದು ನಮಸ್ಕರಿಸಿ, ಸ್ವಾಮಿ, ಸರ್ವೇಶ್ವರಾ, ನಿಮ್ಮ ಅನುಗ್ರಹ ನಮಗೆ ದೊರಕಿತಾದರೆ, ತಾವೇ ನಮ್ಮ ಜೊತೆಯಲ್ಲಿ ಬರಬೇಕು. ನಮ್ಮ ಜನರು ಹಟಮಾರಿಗಳು. ಆದರೂ ತಾವು ನಮ್ಮ ಪಾಪಗಳನ್ನೂ ಅಧರ್ಮಗಳನ್ನೂ ಕ್ಷಮಿಸಿ ನಿಮ್ಮ ಜನರಾಗುವಂತೆ ನಮ್ಮನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು.

ಕೀರ್ತನೆ: 1:29-34

ಶ್ಲೋಕ: ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು

ಎರಡನೇ ವಾಚನ: 2 ಕೊರಿಂಥಿಯರಿಗೆ 13:11-13

ಸಹೋದರರೇ, ಸಂತೋಷದಿಂದಿರಿ, ಪರಿಪೂರ್ಣರಾಗಲು ಪ್ರಯತ್ನಿಸಿರಿ. ನನ್ನ ಬುದ್ಧಿಮಾತುಗಳಿಗೆ ಕಿವಿಗೊಡಿ; ಒಮ್ಮನಸ್ಸಿನಿಂದ ಬಾಳಿರಿ; ಸಮಾಧಾನದಿಂದ ಜೀವಿಸಿರಿ; ಆಗ ಪ್ರೀತಿ ಮತ್ತು ಶಾಂತಿ ಸ್ವರೂಪರಾದ ದೇವರು ನಿಮ್ಮೊಡನೆ ಇರುತ್ತಾರೆ. ಪವಿತ್ರವಾದ ಮುದ್ದಿಟ್ಟು ಒಬ್ಬರನ್ನು ಒಬ್ಬರು ವಂದಿಸಿರಿ. ದೇವಜನರೆಲ್ಲರೂ ನಿಮಗೆ ಶುಭಾಶಯಗಳನ್ನು ಕೋರಿದ್ದಾರೆ. ನಮ್ಮ ಪ್ರಭು ಯೇಸುಕ್ರಿಸ್ತರ ವರಪ್ರಸಾದವೂ ದೇವರ ಪ್ರೀತಿಯೂ ಪವಿತ್ರಾತ್ಮರ ಅನ್ಯೋನ್ಯತೆಯೂ ನಿಮ್ಮೆಲ್ಲರೊಡನೆ ಇರಲಿ!

ಶುಭಸಂದೇಶ: ಯೊವಾನ್ನ 3:16-18


ಯೇಸು ನಿಕೋದೇಮನಿಗೆ ಎಂತೆಂದರು: "ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ. ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು. ಪುತ್ರನಲ್ಲಿ ವಿಶ್ವಾಸವಿಟ್ಟವನಿಗೆ ತೀರ್ಪಿಲ್ಲ. ಆತನಲ್ಲಿ ವಿಶ್ವಾಸವಿಡದವನಾದರೋ ಈಗಾಗಲೇ ತೀರ್ಪಿಗೆ ಗುರಿಯಾಗಿದ್ದಾನೆ. ಏಕೆಂದರೆ, ಅವನಿಗೆ ದೇವರ ಏಕೈಕ ಪುತ್ರನಲ್ಲಿ ವಿಶ್ವಾಸವಿಲ್ಲ.

03.06.23 - "ವಿನಾಶದಿಂದ ನನ್ನನ್ನು ರಕ್ಷಿಸಿದಿರಿ ಕಷ್ಟಕಾಲದಲ್ಲಿ ಎನ್ನನ್ನು ಕಾಪಾಡಿದಿರಿ ಎಂದೇ ಕೃತಜ್ಞತಾಸ್ತುತಿ ಸಲ್ಲಿಸುವೆ"

 ಮೊದಲನೇ ವಾಚನ: ಸಿರಾಖ 51:12-20

ವಿನಾಶದಿಂದ ನನ್ನನ್ನು ರಕ್ಷಿಸಿದಿರಿ ಕಷ್ಟಕಾಲದಲ್ಲಿ ಎನ್ನನ್ನು ಕಾಪಾಡಿದಿರಿ ಎಂದೇ ಕೃತಜ್ಞತಾಸ್ತುತಿ ಸಲ್ಲಿಸುವೆ; ನಿಮ್ಮ ನಾಮವನ್ನು ಸರ್ವೇಶ್ವರಾ, ಕೊಂಡಾಡುವೆ. ಸುಜ್ಞಾನದ ಅನ್ವೇಷಣೆ ನಾನಿನ್ನೂ ಎಳೆಯವನಾಗಿದ್ದಾಗ, ದೇಶಾಂತರ ಹೋಗುವುದಕ್ಕೆ ಮುನ್ನ ಬಹಿರಂಗ ಪ್ರಾರ್ಥನೆಯಲ್ಲಿ ಜ್ಞಾನವನ್ನರಸಿದೆನಯ್ಯಾ. ಮಹಾಮಂದಿರದ ಎದುರಿನಲ್ಲಿ ನಾನದನ್ನು ಕೇಳಿಕೊಂಡೆ ಕಡೆಯವರೆಗೂ ಅದನ್ನು ಹುಡುಕಿದೆ. ದ್ರಾಕ್ಷಿ ಹೂಬಿಡುವ ಕಾಲದಿಂದ ಫಲಬಿಡುವ ತನಕ ಜ್ಞಾನದಲ್ಲಿ ಆನಂದಿಸಿತು ನನ್ನ ಹೃದಯ ಸರಳತೆಯಲ್ಲೇ ನಡೆಯಿತು ನನ್ನ ಪಾದ ನಾನದನ್ನು ಅರಸುತ್ತಾ ಬಂದೆ ಯೌವನದಿಂದ. ನನ್ನ ಕಿವಿಯನ್ನು ಕೊಂಚ ಬಾಗಿಸಿ, ಅದನ್ನು ಸ್ವೀಕರಿಸಿದೆ ಅದರಿಂದ ಒಳ್ಳೆಯ ಶಿಕ್ಷಣವನ್ನು ಪಡೆದುಕೊಂಡೆ. ಆದುದರಿಂದ ನಾ ಮುಂದುವರಿದೆ ಸುಜ್ಞಾನ ನೀಡುವಾತನನ್ನು ನಾ ಕೊಂಡಾಡುವೆ. ಅದನ್ನು ಅಭ್ಯಾಸಿಸಲು ನಿಶ್ಚಯಮಾಡಿದೆ ಒಳಿತನ್ನು ಕುರಿತು ಆಸಕ್ತನಾದೆ ನಾನೆಂದಿಗೂ ಆಶಾಭಂಗಪಡೆ. ಹೋರಾಡಿತು ನನ್ನಾತ್ಮ ಅದನ್ನು ಗಳಿಸಲು ನಿಷ್ಠೆಯಿಂದಿದ್ದೆ ನನ್ನ ಕಾರ್ಯಕಷ್ಟದೊಳು ನನ್ನ ಕೈಯೆತ್ತಿದೆ ಆಕಾಶದ ಕಡೆಗೆ ನನ್ನ ಅಜ್ಞಾನಕ್ಕಾಗಿ ನಾನೇ ಹಲುಬಿಕೊಂಡೆ. ಇಚ್ಛೆಯಿಂದ ನಾನದರ ಮೇಲೆ ಮನಸ್ಸಿಟ್ಟೆ ನಿರ್ಮಲತೆಯಲ್ಲಿ ಅದನ್ನು ಕಂಡುಕೊಂಡೆ ಮೊದಲಿನಿಂದಲೇ ಅದರೊಂದಿಗೆ ಸೇರುವ ಬುದ್ಧಿಯನ್ನು ಪಡೆದೆ ಇನ್ನು ನಾನೆಂದಿಗೂ ಅದನ್ನು ಕೈಬಿಡಲಾರೆ.

ಕೀರ್ತನೆ: 19:7-9, 10

ಶ್ಲೋಕ: ಪ್ರಭುವೇ, ನಿತ್ಯ ಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ. 

ಶುಭಸಂದೇಶ: ಮಾರ್ಕ 11: 27-33

ಯೇಸು ಮತ್ತು ಶಿಷ್ಯರು ಪುನಃ ಜೆರುಸಲೇಮಿಗೆ ಬಂದರು. ಯೇಸು ದೇವಾಲಯದ ಆವರಣದಲ್ಲಿ ತಿರುಗಾಡುತ್ತಿದ್ದಾಗ ಮುಖ್ಯ ಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಸಭಾಪ್ರಮುಖರು ಅವರ ಬಳಿಗೆ ಬಂದು “ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರು ಯಾರು?” ಎಂದು ಕೇಳಿದರು. ಅದಕ್ಕೆ ಯೇಸು, “ನಾನೂ ನಿಮಗೆ ಒಂದು ಪ್ರಶ್ನೆ ಹಾಕುತ್ತೇನೆ; ಅದಕ್ಕೆ ಉತ್ತರ ಕೊಡಿ. ಆಗ ಯಾವ ಅಧಿಕಾರದಿಂದ ನಾನು ಇದೆಲ್ಲವನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ. ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ? ಮನುಷ್ಯರಿಂದಲೋ? ಉತ್ತರಕೊಡಿ,” ಎಂದರು. ಇದನ್ನು ಕೇಳಿದ ಅವರು ತಮ್ಮ ತಮ್ಮೊಳಗೇ ತರ್ಕ ಮಾಡುತ್ತಾ, “ದೇವರಿಂದ ಬಂದಿತೆಂದು ಹೇಳಿದರೆ, ‘ಹಾಗಾದರೆ ನೀವೇಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವನು. ‘ಮನುಷ್ಯರಿಂದ ಬಂದಿತು’ ಎಂದು ಹೇಳೋಣ ಎಂದರೆ ಅದೂ ಆಗದು,” ಎಂದುಕೊಂಡರು. ಯೊವಾನ್ನನು ನಿಜವಾದ ಪ್ರವಾದಿಯೆಂದು ಸರ್ವರು ನಂಬಿದ್ದರಿಂದ ಅವರಿಗೆ ಜನರ ಭಯವಿತ್ತು. ಆದುದರಿಂದ ಅವರು, “ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು. ಅದಕ್ಕೆ ಯೇಸು, “ಹಾಗಾದರೆ ನಾನೂ ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.

02.06.23 - "ನೀವು ಪ್ರಾರ್ಥನೆಯಲ್ಲಿ ಏನೆಂದು ಬೇಡಿಕೊಳ್ಳುತ್ತೀರೋ, ಅದನ್ನೆಲ್ಲಾ ಪಡೆದಾಯಿತೆಂದು ವಿಶ್ವಾಸಿಸಿರಿ"

ಮೊದಲನೇ ವಾಚನ: ಸಿರಾಖ 44:1, 9-13

ಪೂರ್ವಜರ ಸ್ತುತಿ ವಂದನೆ ಸಲ್ಲಿಸೋಣ ನಾವೀಗ ಪ್ರಸಿದ್ಧ ಪುರುಷರಿಗೆ ನಮ್ಮನ್ನು ಪಡೆದ ನಮ್ಮ ಕುಲದ ಮೂಲಪಿತೃಗಳಿಗೆ. ಇನ್ನು ಕೆಲವರು ಯಾವ ಸ್ಮಾರಕವೂ ಇಲ್ಲದೆ ಎಂದೂ ಇಲ್ಲದ್ದವರಂತೆ ಗತಿಸಿಹೋದರು ಹುಟ್ಟಲಿಲ್ಲವೇನೋ ಎಂಬಂತೆ ಕಣ್ಮರೆಯಾಗಿ ಹೋದರು ಅವರ ನಂತರ ಅವರ ಮಕ್ಕಳು ಸಹ ಅವರಂತೆ ಹೋಗಿಬಿಟ್ಟರು. ಆದರೆ ಅವರು ದಯಾಳುಗಳಾಗಿದ್ದರು ಮರೆತು ಹೋಗಲಿಲ್ಲ ಅವರ ಸತ್ಕಾರ್ಯಗಳು. ಒಳ್ಳೆಯ ಸೊತ್ತು ಸದಾ ಉಳಿಯುವುದು ಅವರ ಪೀಳಿಗೆಯಲ್ಲಿ ಅವರ ಮಕ್ಕಳು ಸ್ಥಿರವಾಗಿರುವರು ಒಡಂಬಡಿಕೆಯ ಅನುಸರಣೆಯಲ್ಲಿ. ಅವರ ಸಂತಾನ ಸ್ಥಿರವಾಗಿರುವುದು ಒಡಂಬಡಿಕೆಯ ಪಾಲನೆಯಲ್ಲಿ ಅವರ ಮಕ್ಕಳೂ ಸಹ ನೆಲೆಯಾಗಿ ನಿಲ್ಲುವರು ಅದರ ಅನ್ವೇಷಣೆಯಲ್ಲಿ. ಉಳಿಯುವುದು ಅವರ ಸಂತಾನ ಎಂದೆಂದಿಗು ಅವರ ಗೌರವ ಅಳಿಸಿಹೋಗದು.

ಕೀರ್ತನೆ: 149:1-2, 3-4, 5-6, 9

ಶ್ಲೋಕ: ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು. 

ಶುಭಸಂದೇಶ: ಮಾರ್ಕ 11: 11-26


ಯೇಸು ಜೆರುಸಲೇಮನ್ನು ಸೇರಿ ಮಹಾದೇವಾಲಯವನ್ನು ಪ್ರವೇಶಿಸಿದರು. ಅಲ್ಲಿ ನಡೆಯುತ್ತಿದ್ದ ಎಲ್ಲವನ್ನೂ ನೋಡುವಷ್ಟರಲ್ಲಿ ಕತ್ತಲಾಗುತ್ತಾ ಬಂದಿತು; ಆದುದರಿಂದ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು, ಅವರು ಬೆಥಾನಿಯಕ್ಕೆ ಹೊರಟುಹೋದರು. ಮರುದಿನ ಅವರೆಲ್ಲರೂ ಬೆಥಾನಿಯದಿಂದ ಜೆರುಸಲೇಮಿಗೆ ಬರುತ್ತಿದ್ದಾಗ ಯೇಸುಸ್ವಾಮಿಗೆ ಹಸಿವಾಯಿತು. ದೂರದಲ್ಲಿ ಎಲೆ ತುಂಬಿದ ಅಂಜೂರದ ಮರವೊಂದು ಕಣ್ಣಿಗೆ ಬಿದ್ದಿತು. ಅದರಲ್ಲಿ ಹಣ್ಣೇನಾದರೂ ಸಿಕ್ಕೀತೆಂದು ಅಲ್ಲಿಗೆ ಹೋದರು. ಹತ್ತಿರಕ್ಕೆ ಬಂದಾಗ ಅದರಲ್ಲಿ ಬರೀ ಎಲೆಗಳೇ ಹೊರತು ಇನ್ನೇನೂ ಕಾಣಲಿಲ್ಲ. ಅದು ಅಂಜೂರದ ಹಣ್ಣಿನ ಕಾಲವಾಗಿರಲಿಲ್ಲ. ಯೇಸು ಆ ಮರಕ್ಕೆ, “ಇನ್ನು ಮುಂದೆ ನಿನ್ನ ಹಣ್ಣನ್ನು ಯಾರೂ ಎಂದಿಗೂ ತಿನ್ನದಂತಾಗಲಿ,” ಎಂದರು. ಶಿಷ್ಯರು ಈ ಮಾತುಗಳನ್ನು ಕೇಳಿಸಿಕೊಂಡರು. ತರುವಾಯ ಅವರು ಜೆರುಸಲೇಮಿಗೆ ಬಂದರು. ಯೇಸುಸ್ವಾಮಿ ಮಹಾದೇವಾಲಯಕ್ಕೆ ಹೋಗಿ, ಅಲ್ಲಿ ಮಾರುತ್ತಿದ್ದವರನ್ನೂ ಕೊಳ್ಳುತ್ತಿದ್ದವರನ್ನೂ ಹೊರಗಟ್ಟತೊಡಗಿದರು; ನಾಣ್ಯ ವಿನಿಮಯ ಮಾಡುತ್ತಿದ್ದ ವ್ಯಾಪಾರಿಗಳ ಮೇಜುಗಳನ್ನು ಕೆಡವಿದರು; ಪಾರಿವಾಳಗಳನ್ನು ಮಾರುತ್ತಿದ್ದವರ ಮಣೆಗಳನ್ನು ಉರುಳಿಸಿದರು. ಹೊರೆಹೊತ್ತುಕೊಂಡು ದೇವಾಲಯದ ಮೂಲಕ ಹಾದು ಹೋಗುವವರನ್ನು ತಡೆದರು. “ ‘ಸರ್ವಜನಾಂಗಗಳಿಗೂ ಪ್ರಾರ್ಥನಾಲಯ ನನ್ನೀ ಆಲಯ ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ ಅಲ್ಲವೇ? ನೀವು ಅದನ್ನು ಕಳ್ಳಕಾಕರ ಗುಹೆಯನ್ನಾಗಿ ಮಾಡಿದ್ದೀರಿ,” ಎಂದು ಯೇಸು ಅವರಿಗೆ ಬುದ್ಧಿಹೇಳಿದರು. ಮುಖ್ಯ ಯಾಜಕರೂ ಧರ್ಮಶಾಸ್ತ್ರಿಗಳೂ ನಡೆದ ಈ ಸಂಗತಿಯನ್ನು ಕೇಳಿ ಯೇಸುವನ್ನು ಕೊಲ್ಲಿಸುವ ಮಾರ್ಗವನ್ನು ಹುಡುಕ ತೊಡಗಿದರು. ಏಕೆಂದರೆ, ಯೇಸುವನ್ನು ಕಂಡರೆ ಅವರಿಗೆ ಭಯವಿತ್ತು. ಕಾರಣ - ಜನರೆಲ್ಲರೂ ಅವರ ಬೋಧನೆಗೆ ಮಾರುಹೋಗಿದ್ದರು. ಸೂರ್ಯಾಸ್ತಮದ ಬಳಿಕ ಯೇಸು ಮತ್ತು ಶಿಷ್ಯರು ಪಟ್ಟಣದಿಂದ ಹೊರಗೆ ಹೋದರು. ಬೆಳಿಗ್ಗೆ ಅವರೆಲ್ಲರೂ ಅದೇ ಮಾರ್ಗವಾಗಿ ಹಿಂದಿರುಗುವಾಗ ಅಂಜೂರದ ಮರವು ಬೇರುಸಹಿತ ಒಣಗಿಹೋಗಿರುವುದನ್ನು ಕಂಡರು. ಪೇತ್ರನು ಹಿಂದಿನ ದಿನ ನಡೆದುದನ್ನು ಸ್ಮರಿಸಿಕೊಂಡು, ಯೇಸುಸ್ವಾಮಿಗೆ, “ಗುರುವೇ, ತಾವು ಶಪಿಸಿದ ಆ ಅಂಜೂರದ ಮರ ಈಗ ಒಣಗಿ ಹೋಗಿದೆ,” ಎಂದನು. ಅದಕ್ಕೆ ಯೇಸು, “ನಿಮಗೆ ದೇವರಲ್ಲಿ ವಿಶ್ವಾಸವಿರಲಿ, ಆಗ ಯಾವನಾದರೂ ಈ ಬೆಟ್ಟಕ್ಕೆ, ‘ನೀನು ಇಲ್ಲಿಂದ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿ, ಮನಸ್ಸಿನಲ್ಲಿ ಸಂದೇಹಪಡದೆ, ಅದು ಸಂಭವಿಸುವುದೆಂದು ವಿಶ್ವಾಸಿಸಿದರೆ, ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಅವನು ಹೇಳಿದಂತೆಯೇ ಆಗುವುದು. ಆದುದರಿಂದ ನೀವು ಪ್ರಾರ್ಥನೆಯಲ್ಲಿ ಏನೆಂದು ಬೇಡಿಕೊಳ್ಳುತ್ತೀರೋ, ಅದನ್ನೆಲ್ಲಾ ಪಡೆದಾಯಿತೆಂದು ವಿಶ್ವಾಸಿಸಿರಿ; ಅದು ಲಭಿಸುವುದು ನಿಶ್ಚಯವೆಂದು ನಿಮಗೆ ಹೇಳುತ್ತೇನೆ. ಇದಲ್ಲದೆ, ನೀವು ಪ್ರಾರ್ಥನೆ ಮಾಡುವಾಗಲೆಲ್ಲ, ಯಾರಿಗಾದರೂ ವಿರೋಧವಾಗಿ ನಿಮ್ಮ ಮನಸ್ಸಿನಲ್ಲಿ ಏನಾದರೂ ಇದ್ದರೆ, ಅದನ್ನು ಕ್ಷಮಿಸಿಬಿಡಿ, ಆಗ ಸ್ವರ್ಗದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸಿ ಬಿಡುವರು.”

01.06.23

ಮೊದಲನೇ ವಾಚನ: ಸಿರಾಖ 42: 15-25

ಸರ್ವೇಶ್ವರನ ಕೆಲಸಗಳನ್ನು ಕುರಿತು ಈಗ ನೆನಪು ಮಾಡಿಕೊಡುತ್ತೇನೆ: ನಾನು ಕಂಡ ಸಂಗತಿಗಳನ್ನು ವಿವರಿಸುತ್ತೇನೆ: ಸರ್ವೇಶ್ವರನ ವಾಣಿಯ ಪ್ರಕಾರ ಆತನ ಕಾರ್ಯ ನೆರವೇರಿದೆ ಸೃಷ್ಟಿಸಮಸ್ತವೂ ಆತನ ಆಜ್ಞೆಗಳನ್ನು ಅನುಸರಿಸುತ್ತವೆ. ಪ್ರಕಾಶಕೊಡುವ ಸೂರ್ಯ ಎಲ್ಲವನ್ನು ದೃಷ್ಟಿಸುವನು ಸರ್ವೇಶ್ವರನ ಕೆಲಸ ಆತನ ಮಹಿಮೆಯಿಂದ ತುಂಬಿರುವುದು. ಸರ್ವೇಶ್ವರನ ಮಹತ್ಕಾರ್ಯಗಳನ್ನು ವಿವರಿಸುವ ಶಕ್ತಿಯನ್ನು ಆತ ಕೊಟ್ಟಿಲ್ಲ ತನ್ನ ದೇವದೂತರಿಗೂ. ಎಲ್ಲವೂ ತನ್ನ ಮಹಿಮೆಯಲ್ಲೇ ನೆಲೆಗೊಂಡಿರುವಂತೆ ಸ್ಥಾಪಿಸಿದವ ಸರ್ವಶಕ್ತನಾದ ಸರ್ವೇಶ್ವರನೇ. ಮಹೋನ್ನತ ಸರ್ವೇಶ್ವರ ತಿಳಿದಿರುವನು ಸರ್ವಜ್ಞಾನವನು, ಯುಗದ ಲಕ್ಷಣವನು; ಎಂದೇ ಪರಿಶೋಧಿಸಿಹನು ಪ್ರಪಾತವನು, ಹೃದಯವನು; ಬಲ್ಲನಾತನು ಅವುಗಳ ತಂತ್ರಕುತಂತ್ರಗಳನು. ಪ್ರಕಟಪಡಿಸುವನು ಹಿಂದೆ ನಡೆದವುಗಳನು ಮುಂದೆ ನಡೆಯುವಂಥವುಗಳನು ಶ್ರುತಪಡಿಸಬಲ್ಲನಾತನು ಗುಪ್ತವಾದುವುಗಳ ಸುಳಿವನು. ಯಾವ ಕಲ್ಪನೆಯೂ ಆತನಿಂದ ತಪ್ಪಿಸಿಕೊಳ್ಳದು ಯಾವ ಮಾತೂ ಆತನಿಗೆ ಮರೆಯಾಗಿರದು. ಯುಗಯುಗಾಂತರಕ್ಕೂ ಇರುವಾತನವನು ತನ್ನ ಜ್ಞಾನದ ಮಹತ್ಕಾರ್ಯಗಳನು ಕ್ರಮಪಡಿಸಿದರುವನು ಅದಕ್ಕೆ ಯಾವುದನ್ನು ಕೂಡಿಸಲಿಲ್ಲ, ಯಾವುದನ್ನು ಅದರಿಂದ ಕಳೆದಿಲ್ಲ ಸಲಹೆಗಾರನ ಅಗತ್ಯವೂ ಆತನಿಗಿರಲಿಲ್ಲ. ಆಹಾ, ಆತನ ಕಾರ್ಯಗಳು ಎಷ್ಟು ಅಪೇಕ್ಷಣೀಯ! ಆತನ ಕೆಲಸಗಳು ಎಷ್ಟು ತೇಜೋಮಯ! ಇವೆಲ್ಲವು ಅವುಗಳ ಪ್ರಯೋಜನಕ್ಕನುಸಾರ ಜೀವಿಸುತ್ತವೆ ನಿತ್ಯಕ್ಕೂ ಉಳಿಯುತ್ತವೆ, ಆತನಿಗೆ ವಿಧೇಯವಾಗಿರುತ್ತವೆ. ಎಲ್ಲ ಸಂಗತಿಗಳಿರುವುವು ದ್ವಂದ್ವವಾಗಿ ಒಂದು ಇನ್ನೊಂದಕ್ಕೆ ಎದುರಾಗಿ ಆತ ಯಾವುದನ್ನೂ ಮಾಡಿಲ್ಲ ಅಪೂರ್ಣವಾಗಿ. ವೈಶಿಷ್ಟ್ಯತೆಯಲ್ಲಿ ಒಂದು ಪರಿಪೂರ್ಣಗೊಳ್ಳುತ್ತದೆ ಇನ್ನೊಂದರಿಂದ. ಆತನ ಮಹಿಮೆಯನ್ನು ಪೂರ್ತಿಯಾಗಿ ಗ್ರಹಿಸಲು ಯಾರಿಂದ ಸಾಧ್ಯ?

ಕೀರ್ತನೆ: 33: 2-3, 4-5, 6-7, 8-9
ಶ್ಲೋಕ: ಸೃಷ್ಟಿಯಾಯಿತು ಗಗನಮಂಡಲ ಆತನ ನುಡಿಯೊಂದಕೆ. 

ಶುಭಸಂದೇಶ: ಮಾರ್ಕ 10: 46-52

ಯೇಸುಸ್ವಾಮಿ ಮತ್ತು ಅವರ ಶಿಷ್ಯರು ಜೆರಿಕೊ ಪಟ್ಟಣವನ್ನು ತಲುಪಿದರು. ಅಲ್ಲಿಂದ ಹೊರಡುವಾಗ ಜನರ ದೊಡ್ಡಗುಂಪು ಅವರನ್ನು ಹಿಂಬಾಲಿಸಿತು. ಕುರುಡು ಭಿಕ್ಷುಗಾರನಾದ, ತಿಮಾಯನ ಮಗ ಬಾರ್‍ತಿಮಾಯನು ದಾರಿಯ ಮಗ್ಗುಲಲ್ಲಿ ಕುಳಿತಿದ್ದನು. ಆ ಮಾರ್ಗವಾಗಿ ಹೋಗುತ್ತಿರುವಾತನು ನಜರೇತಿನ ಯೇಸು ಎಂದು ಕೇಳಿದೊಡನೆಯೇ, ಅವನು, “ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಗಟ್ಟಿಯಾಗಿ ಕೂಗಿಕೊಂಡನು. ಅನೇಕರು ‘ಸುಮ್ಮನಿರು’ ಎಂದು ಅವನನ್ನು ಗದರಿಸಿದರು. ಅವನಾದರೋ, “ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಇನ್ನಷ್ಟು ಗಟ್ಟಿಯಾಗಿ ಕೂಗಿಕೊಂಡನು. ಇದನ್ನು ಕೇಳಿ ಯೇಸು ಅಲ್ಲೇ ನಿಂತು, “ಅವನನ್ನು ಕರೆದುಕೊಂಡು ಬನ್ನಿ,” ಎಂದು ಅಪ್ಪಣೆಮಾಡಿದರು. ಅವರು ಹೋಗಿ, “ಏಳು, ಭಯಪಡಬೇಡ, ಯೇಸು ನಿನ್ನನ್ನು ಕರೆಯುತ್ತಿದಾರೆ,” ಎಂದು ಹೇಳಿದರು. ಅವನು ತನ್ನ ಮೇಲುಹೊದಿಕೆಯನ್ನು ಅಲ್ಲೇ ಬಿಟ್ಟು ತಟ್ಟನೆ ಎದ್ದು, ಯೇಸುವಿನ ಬಳಿಗೆ ಬಂದನು. ಯೇಸು, “ನನ್ನಿಂದ ನಿನಗೆ ಏನಾಗಬೇಕು?” ಎಂದು ಕೇಳಿದರು. ಅದಕ್ಕೆ ಅವನು, “ಗುರುದೇವಾ! ನನಗೆ ಕಣ್ಣು ಕಾಣುವಂತೆ ಮಾಡಿ,” ಎಂದು ಪ್ರಾರ್ಥಿಸಿದನು. ಯೇಸು ಅವನಿಗೆ, “ಹೋಗು, ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ,” ಎಂದರು. ಆ ಕ್ಷಣವೇ ಅವನಿಗೆ ದೃಷ್ಟಿ ಬಂದಿತು. ಅವನೂ ಯೇಸುವನ್ನು ಹಿಂಬಾಲಿಸಿ ಹಿಂದೆ ಹೋದನು.

29.08.2026 - ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು

  ಸಂತ ಸ್ನಾನಿಕ ಯೊವಾನ್ನನ ಶಿರಚ್ಛೇದನ ಮೊದಲನೇ ವಾಚನ: ಯೆರೆಮಿಯ: 1: 17-19 ಆದುದರಿಂದ ನೀನು ನಿನ್ನ ನಡುವನ್ನು ಕಟ್ಟಿ ನಿಂತುಕೊಂಡು ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲ...