19.02.23 - "ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ?"

ಮೊದಲನೇ ವಾಚನ: ಯಾಜಕಕಾಂಡ 19:1-2, 17-18

ಇಸ್ರಯೇಲ್ ಸಮಾಜದವರಿಗೆ ಹೀಗೆ ಆಜ್ಞಾಪಿಸುವಂತೆ ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದರು: "ನಿಮ್ಮ ದೇವರಾದ ಸರ್ವೇಶ್ವರನೆಂಬ ನಾನು ಪರಿಶುದ್ಧನಾಗಿರುವಂತೆ ನೀವು ಕೂಡ ಪರಿಶುದ್ಧರಾಗಿರಬೇಕು. “ಸಹೋದರನ ಬಗ್ಗೆ ಒಳಗೊಳಗೇ ಹಗೆ ಇಟ್ಟುಕೊಳ್ಳಬೇಡ. ನೆರೆಯವನ ದೋಷಕ್ಕೆ ನೀನು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ಎತ್ತಿ ತೋರಿಸಲೇಬೇಕು. ನಿನ್ನ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡು ಮಾಡಬೇಡ, ಅವರಿಗೆ ವಿರುದ್ಧ ಮತ್ಸರ ಇಟ್ಟುಕೊಳ್ಳಬೇಡ, ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು. ನಾನು ಸರ್ವೇಶ್ವರ.

ಕೀರ್ತನೆ: 103:1-2, 3-4, 8-10, 12-13

ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು.

ಎರಡನೇ ವಾಚನ: 1 ಕೊರಿಂಥಿಯರಿಗೆ 3:16-23

ಸಹೋದರರೇ, ನೀವು ದೇವರ ಆಲಯವಾಗಿದ್ದೀರಿ. ದೇವರ ಆತ್ಮವು ನಿಮ್ಮಲ್ಲಿ ವಾಸಿಸುತ್ತದೆಂದು ನಿಮಗೆ ಚೆನ್ನಾಗಿ ತಿಳಿದಿದೆ. ಯಾವನಾದರೂ ದೇವಾಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುತ್ತಾರೆ. ದೇವರ ಆಲಯವು ಪವಿತ್ರವಾದುದು. ನೀವೇ ಆ ಆಲಯ. ಯಾರೂ ತನ್ನನ್ನು ತಾನೇ ವಂಚಿಸಿಕೊಳ್ಳದಿರಲಿ. ನಿಮ್ಮಲ್ಲಿ ಯಾರಾದರೂ ಈ ಲೋಕದ ದೃಷ್ಟಿಯಲ್ಲಿ ತಾನು ಜಾಣನೆಂದು ಭಾವಿಸುವುದಾದರೆ ಅಂಥವನು ಮೊದಲು ಹುಚ್ಚನಂತಿರಲು ಕಲಿಯಲಿ. ಆಗ ಅವನು ನಿಜವಾಗಿಯೂ ಜಾಣನಾಗುತ್ತಾನೆ. ಇಹಲೋಕದ ಜಾಣತನವು ದೇವರ ದೃಷ್ಟಿಯಲ್ಲಿ ಹುಚ್ಚುತನವೇ ಸರಿ. “ದೇವರು ಜ್ಞಾನಿಗಳನ್ನು ಅವರ ಜಾಲವುದಲ್ಲಿಯೇ ಸಿಕ್ಕಿಸುವರು” ಎಂದೂ “ಜ್ಞಾನಿಗಳ ಯೋಜನೆಗಳು ನಿಷ್ಫಲವೆಂಬುದು ಪ್ರಭುವಿಗೆ ತಿಳಿದಿದೆ” ಎಂದೂ ಲಿಖಿತವಾಗಿದೆಯಲ್ಲವೆ? ಆದ್ದರಿಂದ ಕೇವಲ ನರಮಾನವರನ್ನೇ ನೆಚ್ಚಿಕೊಂಡು ಯಾರೂ ಹೆಚ್ಚಳಪಡದಿರಲಿ. ವಾಸ್ತವವಾಗಿ ಸಮಸ್ತವೂ ನಿಮ್ಮದೇ. ಪೌಲ, ಅಪೊಲೋಸ್, ಕೇಫ - ಇವರಾಗಲಿ; ಜಗತ್ತು, ಜೀವ, ಮರಣ – ಇವುಗಳಾಗಲಿ, ಅಥವಾ ವರ್ತಮಾನ, ಭವಿಷ್ಯತ್ಕಾಲಗಳಾಗಲಿ, ಇವೆಲ್ಲವೂ ನಿಮ್ಮವೇ. ಆದರೆ ನೀವು ಕ್ರಿಸ್ತ ಯೇಸುವಿಗೆ ಸೇರಿದವರು; ಕ್ರಿಸ್ತಯೇಸು ದೇವರಿಗೆ ಸೇರಿದವರು.

ಘೋಷಣೆ: ಅಲ್ಲೆಲೂಯ, ಅಲ್ಲೆಲೂಯ!
ಸರ್ವೇಶ್ವರನ ನಾಮದಲಿ ಬರುವ ಅರಸನಿಗೆ ಜಯ ಜಯವಾಗಲಿ/
ಶಾಂತಿ ಸ್ವರ್ಗದಲಿ, ಮಹಿಮೆ ಮಹೋನ್ನತದಲಿ//ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 5:38-48

ಯೇಸು ತಮ್ಮ ಶಿಷ್ಯರಿಗೆ ಇಂತೆಂದರು: " ’ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಬದಲಾಗಿ ಹಲ್ಲು’ ಎಂಬುದನ್ನು ನೀವು ಕೇಳಿದ್ದೀರಿ. ಆದರೆ ನನ್ನ ಬೋಧೆ ಇದು: ನಿನಗೆ ಅಪಕಾರ ಮಾಡಿದವನಿಗೆ ಪ್ರತೀಕಾರ ಮಾಡಬೇಡ. ನಿನ್ನ ಬಲಗೆನ್ನೆಗೆ ಒಬ್ಬನು ಹೊಡೆದರೆ ಇನ್ನೊಂದು ಕೆನ್ನೆಯನ್ನೂ ಒಡ್ಡು. ನಿನ್ನೊಡನೆ ವ್ಯಾಜ್ಯಮಾಡಿ ನಿನ್ನ ಒಳ ಅಂಗಿಯನ್ನು ಕಿತ್ತುಕೊಳ್ಳುವವನಿಗೆ ಹೊರ ಅಂಗಿಯನ್ನೂ ಕೊಟ್ಟುಬಿಡು. ಯಾರಾದರೂ ಒಂದು ಕಿಲೊವಿೂಟರ್ ದೂರ ಬಾ ಎಂದು ನಿನ್ನನ್ನು ಒತ್ತಾಯಪಡಿಸಿದರೆ ಅವನೊಡನೆ ಎರಡು ಕಿಲೊವಿೂಟರ್ ಹೋಗು; ಬೇಡಿಕೊಳ್ಳುವವನಿಗೆ ಕೊಡು. ಸಾಲ ಕೇಳಬಂದವನಿಂದ ಮುಖ ತಿರುಗಿಸಿಕೊಳ್ಳಬೇಡ." "ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು" ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ. ನಾನು ಹೇಳುವುದನ್ನು ಗಮನಿಸಿರಿ: ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ. ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ. ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕ ವಸೂಲಿ ಮಾಡುವವರೂ ಹಾಗೆ ಮಾಡುವುದಿಲ್ಲವೇ? ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯಜನರೂ ಹಾಗೆ ಮಾಡುತ್ತಾರಲ್ಲವೇ? ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ."

18.02.23

ಮೊದಲನೆಯ ವಾಚನ: ಹಿಬ್ರಿಯರಿಗೆ 11:1-7

ವಿಶ್ವಾಸವೆಂಬುದು ನಾವು ನಿರೀಕ್ಷಿಸುವಂಥವುಗಳು ನಮಗೆ ದೊರಕುತ್ತವೆ ಎಂಬ ದೃಢ ನಂಬಿಕೆ ಹಾಗು ಕಣ್ಣಿಗೆ ಕಾಣದಂಥವುಗಳು ನಿಶ್ಚಯವಾದವು ಎಂಬ ನಿಲುವು ಆಗಿದೆ. ನಮ್ಮ ಪೂರ್ವಜರು ದೈವಸಮ್ಮತಿಯನ್ನು ಪಡೆದದ್ದು ವಿಶ್ವಾಸದಿಂದಲೇ; ವಿಶ್ವವು ದೇವರ ವಾಣಿಯಿಂದ ಉಂಟಾಯಿತು. ಎಂಬುದನ್ನು ಮತ್ತು ಗೋಚರವಾದವುಗಳು ಅಗೋಚರವಾದವುಗಳಿಂದ ಉಂಟಾದವು ಎಂಬುದನ್ನು ವಿಶ್ವಾಸದಿಂದಲೇ ತಿಳಿಯುತ್ತೇವೆ. ವಿಶ್ವಾಸವಿದ್ದುದರಿಂದಲೇ ಹೇಬೆಲನು ಕಾಯಿನನಿಗಿಂತ ಉತ್ತಮವಾದ ಬಲಿಯನ್ನು ದೇವರಿಗೆ ಸಮರ್ಪಿಸಿದನು. ವಿಶ್ವಾಸದಿಂದಲೇ ತಾನು ಸತ್ಪುರುಷನೆಂದು ಸನ್ಮಾನಿತನಾದನು. ಅವನ ಕಾಣಿಕೆ ತಮಗೆ ಸ್ವೀಕೃತವಾಯಿತೆಂದು ದೇವರೇ ಸಾದರಪಡಿಸಿದರು. ಅವನು ಮೃತನಾಗಿದ್ದರೂ ಅವನ ವಿಶ್ವಾಸದ ಮೂಲಕ ಇಂದಿಗೂ ಮಾತನಾಡುತ್ತಿದ್ದಾನೆ. ವಿಶ್ವಾಸವಿದ್ದುದರಿಂದಲೇ ಹನೋಕನು ಮೃತ್ಯುವಿಗೆ ತುತ್ತಾಗದಂತೆ ದೇವರ ಬಳಿಗೆ ಒಯ್ಯಲ್ಪಟ್ಟನು. ದೇವರು ಆತನನ್ನು ಕರೆದುಕೊಂಡಿದ್ದರಿಂದ ಆತನು ಯಾರಿಗೂ ಕಾಣಸಿಗಲಿಲ್ಲ. ಆತನು ಹೀಗೆ ಒಯ್ಯಲ್ಪಡುವುದಕ್ಕೆ ಮುಂಚೆ ದೇವರಿಗೆ ಮೆಚ್ಚುಗೆಯಾಗಿದ್ದನು ಎಂಬುದಕ್ಕೆ ಸಾಕ್ಷ್ಯಾಧಾರವಿದೆ. ವಿಶ್ವಾಸವಿಲ್ಲದೆ ದೇವರ ಮೆಚ್ಚುಗೆಗೆ ಪಾತ್ರರಾಗಲು ಯಾರಿಂದಲೂ ಸಾಧ್ಯವಿಲ್ಲ. ದೇವರ ಬಳಿಗೆ ಸಾಗುವವರು, ಅವರ ಅಸ್ತಿತ್ವವನ್ನು ವಿಶ್ವಾಸಿಸಬೇಕು; ಅವರನ್ನು ಅರಸುವವರಿಗೆ ತಕ್ಕ ಪ್ರತಿಫಲ ಸಿಗುವುದೆಂದು ನಂಬಬೇಕು. ವಿಶ್ವಾಸವಿದ್ದುದರಿಂದಲೇ ನೋವನು ಕಾಣದೆ ಇದ್ದ ತನ್ನ ಭವಿಷ್ಯದ ಬಗ್ಗೆ ದೇವರಿಂದ ಮುನ್ನೆಚ್ಚರಿಕೆ ಪಡೆದಾಗ ಅದನ್ನು ಲಕ್ಷ್ಯಕ್ಕೆ ತಂದುಕೊಂಡು ಕುಟುಂಬವನ್ನು ರಕ್ಷಿಸಿಕೊಳ್ಳಲು ನಾವೆಯೊಂದನ್ನು ನಿರ್ಮಿಸಿದನು. ಇಡೀ ಜಗತ್ತೇ ದಂಡನೆಗೆ ಗುರಿಯಾಯಿತು. ನೋವನಾದರೋ ತನ್ನ ವಿಶ್ವಾಸದ ಫಲವಾಗಿ ಸತ್ಸಂಬಂಧಕ್ಕೆ ಬಾಧ್ಯಸ್ಥನಾದನು.

ಕೀರ್ತನೆ 145:2-5, 10-11, V.1
ಶ್ಲೋಕ: ದೇವಾ, ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ ನಮನ.

ಹೊಗಳುವೆನು ನಾ ದಿನದಿನವೂ ನಿನ್ನನು|
ಭಜಿಸುವೆನೆಂದಿಗೂ ನಿನ್ನ ಹೆಸರನು||
ಪ್ರಭು ಮಹಾತ್ಮನು, ಸುತ್ಯರ್ಹನು|
ಆತನ ಮಹಿಮೆ ಅಗಮ್ಯವಾದುದು||

ತಲೆಮಾರು ತಲೆಮಾರಿಗೆ ನುತಿಸುವುದು ನಿನ್ನ ಕಾರ್ಯಗಳನು|
ತಿಳಿಸುವುದು ಪ್ರಭು ನೀ ಮಾಡಿದೆಲ್ಲಾ ಮಹತ್ಕಾರ್ಯಗಳನು||
ಧ್ಯಾನಿಸುವೆನು ನಿನ್ನ ಅದ್ಭುತ ಕಾರ್ಯಗಳನು|
ನಿನ್ನ ಮಹೋನ್ನತ ಮಹಿಮಾ ಪ್ರಭಾವವನು||

ಪ್ರಭೂ, ನಿನ್ನನು ಸ್ತುತಿಸುವುದು ಸೃಷ್ಟಿಯೆಲ್ಲವೂ|
ಕೊಂಡಾಡುವುದು ನಿನ್ನನು ಭಕ್ತಸಮೂಹವು||
ಪ್ರಸಿದ್ದಪಡಿಸುವರು ನಿನ್ನ ರಾಜ್ಯದ ಮಹತ್ವವನು|
ವರ್ಣಿಸುವರವರು ನಿನ್ನ ಶಕ್ತಿ ಸಾಮರ್ಥ್ಯವನು||

ಶುಭಸಂದೇಶ: ಮಾರ್ಕ 9:2-13

ಆರು ದಿನಗಳ ಬಳಿಕ ಪೇತ್ರ, ಯಕೋಬ ಮತ್ತು ಯೊವಾನ್ನ ಇವರನ್ನು ಮಾತ್ರ ತಮ್ಮೊಡನೆ ಕರೆದುಕೊಂಡು ಯೇಸು ಎತ್ತರವಾದ ಒಂದು ಬೆಟ್ಟಕ್ಕೆ ಹೋದರು. ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಯೇಸು ರೂಪಾಂತರ ಹೊಂದಿದರು. ಆಗ ಅವರ ಉಡುಪು ಅತ್ಯಂತ ಶುಭ್ರವಾಗಿ ಹೊಳೆಯಿತು. ಜಗದ ಯಾವ ಅಗಸನಿಂದಲೂ ಮಡಿಮಾಡಲಾಗದಷ್ಟು ಅದು ಬಿಳುಪಾಯಿತು. ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಶಿಷ್ಯರಿಗೆ ಕಾಣಿಸಿತು. ಆಗ ಪೇತ್ರನು ಯೇಸುವಿಗೆ, " ಗುರುದೇವಾ, ನಾವು ಇಲ್ಲೆ ಇರುವುದು ಒಳ್ಳೆಯದು; ಅಪ್ಪಣೆಯಾಗಲಿ, ಮೂರು ಗುಡಾರಗಳನ್ನು ಕಟ್ಟುವೆವು; ತಮಗೊಂದು, ಮೋಶೆಗೊಂದು ಮತ್ತು ಮತ್ತು ಎಲೀಯನಿಗೊಂದು, " ಎಂದನು. ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂದೇ ತಿಳಿಯಲಿಲ್ಲ. ಶಿಷ್ಯರು ಅಷ್ಟು ಭಯಭ್ರಾಂತರಾಗಿದ್ದರು! ಅಷ್ಟರಲ್ಲಿ ಮೇಘವೊಂದು ಅವರನ್ನು ಆವರಿಸಿತು. ಅದರೊಳಗಿಂದ, " ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ಈತನ ಮಾತಿಗೆ ಕಿವಿಗೊಡಿ, "ಎಂಬ ವಾಣಿ ಕೇಳಿಸಿತು. ತಕ್ಷಣ, ಶಿಷ್ಯರು ಸುತ್ತಲೂ ನೋಡಲು ತಮ್ಮೊಂದಿಗೆ ಯೇಸುವೊಬ್ಬರನ್ನೇ ಹೊರತು ಬೇರೆ ಯಾರನ್ನೂ ಕಾಣಲಿಲ್ಲ. ಅನಂತರ ಯೇಸು ಮತ್ತು ಅವರ ಶಿಷ್ಯರು ಬೆಟ್ಟದಿಂದ ಇಳಿದುಬರುವಾಗ,. " ನರಪುತ್ರನು ಸತ್ತು ಪುನರುತ್ಥಾನಹೊಂದುವ ತನಕ ನೀವು ಕಂಡದ್ದನ್ನು ಯಾರಿಗೂ ಹೇಳಬೇಡಿ, " ಎಂದು ಆಜ್ಞಾಪಿಸಿದರು. ಅಂತೆಯೇ ಶಿಷ್ಯರು ಇದನ್ನು ಯಾರಿಗೂ ಹೇಳಲಿಲ್ಲ; ಆದರೂ 'ಸತ್ತು ಪುನರುತ್ಥಾನಹೊಂದುವುದು' ಎಂದರೆ ಏನು? ಎಂದು ತಮ್ಮತಮ್ಮೊಳಗೆ ಚರ್ಚಿಸಿಕೊಂಡರು. ಅನಂತರ, " ಎಲೀಯನು ಮೊದಲು ಬರಬೇಕಾದುದು ಅಗತ್ಯವೆಂದು ಶಾಸ್ತ್ರಜ್ಞರು ಹೇಳುತ್ತಾರಲ್ಲಾ, ಅದು ಹೇಗೆ? " ಎಂದು ಶಿಷ್ಯರು ಯೇಸುವನ್ನು ಕೇಳಿದರು. ಅದಕ್ಕೆ ಅವರು, " 'ಎಲೀಯನು ಮೊದಲು ಬಂದು ಎಲ್ಲವನ್ನೂ ಸಜ್ಜುಗೊಳಿಸುವನೆಂಬುದೇನೋ ನಿಜ. ಆದರೂ ನರಪುತ್ರನು ಜನರಿಂದ ತೀವ್ರಯಾತನೆಯನ್ನು ಅನುಭವಿಸಿ ಅವರಿಂದ ತಿರಸ್ಕೃತನಾಗಬೇಕು ,' ಎಂದು ಪವಿತ್ರಗ್ರಂಥದಲ್ಲಿ ಬರೆದಿದೆಯಲ್ಲವೆ? ಇದು ಹೇಗೆ? ಆದರೆ ನಾನು ನಿಮಗೆ ಹೇಳುವುದೇನೆಂದರೆ, 'ಎಲೀಯನು ಬಂದಾಗಿದೆ; ಆತನ ವಿಷಯವಾಗಿ ಮೊದಲೇ ಬರೆದಿರುವಂತೆ ಜನರು ತಮ್ಮ ಇಚ್ಛಾನುಸಾರ ಆತನನ್ನು ಹಿಂಸಿಸಿದ್ದೂ ಆಗಿದೆ' " ಎಂದರು.

17.02.23 - "ನನ್ನ ನಿಮಿತ್ತ ಹಾಗೂ ಶುಭಸಂದೇಶದ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೋಳ್ಳುವವನು ಅದನ್ನು ಉಳಿಸಿಕೊಳ್ಳುವನು."

ಮೊದಲನೆಯ ವಾಚನ: ಆದಿಕಾಂಡ 11:1-9

ಭೂಜನರೆಲ್ಲರಿಗೂ ಇದ್ದಿದ್ದು ಒಂದೇ ಭಾಷೆ, ಒಂದೇ ನುಡಿ. ಅವರು ಪೂರ್ವದಿಕ್ಕಿಗೆ ಪ್ರಯಾಣ ಮಾಡುತ್ತಾ ಇದ್ದಾಗ ಬಾಬಿಲೋನಿಯ ಕಾಡಿನ ಬಯಲುಸೀಮೆ ಸಿಕ್ಕಿತು. ಅವರು ಅಲ್ಲೇ ನೆಲೆಸಲು ತೊಡಗಿದರು. " ಬನ್ನಿ, ಒಳ್ಳೊಳ್ಳೆ ಸುಟ್ಟ ಇಟ್ಟಿಗೆಗಳನ್ನು ಮಾಡೋಣ; ಒಂದು ಪಟ್ಟಣವನ್ನು ಕಟ್ಟೋಣ; ಆಕಾಶವನ್ನು ಮುಟ್ಟುವಂಥ ಗೋಪುರವನ್ನು ನಿರ್ಮಿಸಿ ಪ್ರಖ್ಯಾತಿ ಪಡೆಯೋಣ. ಹೀಗೆ ಮಾಡಿದರೆ ನಾವು ಜಗದಲ್ಲೆಲ್ಲಾ ಚದರಿಹೋಗುವುದಕ್ಕೆ ಆಸ್ಪದವಿರುವುದಿಲ್ಲ, " ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು. ಕಟ್ಟುವಾಗ ಕಲ್ಲಿಗೆ ಬದಲಾಗಿ ಇಟ್ಟಿಗೆಯನ್ನೂ ಗಾರೆಗೆ (ಸುಣ್ಣಕ್ಕೆ) ಬದಲಾಗಿ ಕಲ್ಲರಗನ್ನೂ ಉಪಯೋಗಿಸಿದರು. ನರಮಾನವರು ಕಟ್ಟುತ್ತಿದ್ದ ಆ ಪಟ್ಟಣವನ್ನು ಹಾಗೂ ಗೋಪುರವನ್ನು ನೋಡಲು ಸರ್ವೇಶ್ವರಸ್ವಾಮಿ ಇಳಿದು ಬಂದರು. ನೋಡಿದ ಮೇಲೆ, "ಇವರು ಒಂದೇ ಜನಾಂಗ; ಇವರೆಲ್ಲರಿಗೂ ಒಂದೇ ಭಾಷೆ. ಇದು ಇವರು ಕೈಗೊಂಡಿರುವ ಕಾರ್ಯದ ಪ್ರಾರಂಭ ಮಾತ್ರ. ಮುಂದಕ್ಕೆ ಇವರು ಏನು ಬೇಕಾದರೂ ಮಾಡಿಯಾರು! ನಾವು ಹೋಗಿ ಇವರಲ್ಲಿ ಒಬ್ಬರ ಮಾತು ಒಬ್ಬರಿಗೆ ತಿಳಿಯದಂತೆ ಇವರ ಭಾಷೆಯನ್ನು ಗಲಿಬಿಲಿಗೊಳಿಸೋಣ, " ಎಂದರು. ಅಂತೆಯೇ ಮಾಡಿ ಅವರನ್ನು ಅಲ್ಲಿಂದ ಜಗದೆಲ್ಲೆಡೆಗೆ ಚದರಿಸಿಬಿಟ್ಟರು. ಜನರು ಆ ಪಟ್ಟಣ ಕಟ್ಟುವುದನ್ನು ನಿಲ್ಲಿಸಿಬಿಟ್ಟರು. ಹೀಗೆ ಸರ್ವೇಶ್ವರ ಇಡೀ ಜಗತ್ತಿನ ಭಾಷೆಯನ್ನು ಗಲಿಬಿಲಿಗೊಳಿಸಿ ಅಲ್ಲಿಂದ ಜನರನ್ನು ಜಗದೆಲ್ಲೆಡೆಗೆ ಚದರಿಸಿದರು.

ಕೀರ್ತನೆ: 33:10-11,12-13,14-15.V.12
ಶ್ಲೋಕ: ಸ್ವಜನರಾಗಿ ಪ್ರಭು ಆಯ್ದುಕೊಂಡ ಜನತೆ ಧನ್ಯ.

ವ್ಯರ್ಥವಾಗಿಪನು ಪ್ರಭು ರಾಷ್ಟ್ರಯೋಜನಗಳನು|
ನಿರರ್ಥಕವಾಗಿಪನು ಜನರ ದುಷ್ಟ ಸಂಕಲ್ಪಗಳನು||
ಪ್ರಭುವಿನ ಯೋಜನೆ ಶಾಶ್ವತ|
ಅವನ ಸಂಕಲ್ಪ ಅನವರತ||

ಪ್ರಭುವನು ದೇವರಾಗಿ ಪಡೆದ ಜನತೆ ಧನ್ಯ|
ಸ್ವಜನರಾಗಿ ಆತನಾಯ್ದುಕೊಂಡ ಜನತೆ ಧನ್ಯ||
ವೀಕ್ಷಿಸುತಿಹನು ಪ್ರಭು ಸಮಸ್ತವನು ಪರದಿಂದ|
ಲಕ್ಷಿಸುತಿಹನು ಮನುಜರನು ಸಿಂಹಾಸನದಿಂದ||

ಸ್ಥಾವರ ಸಿಂಹಾಸನದಿಂದ ನೋಡುತಿಹನು|
ಸರ್ವ ಭೂನಿವಾಸಿಗಳನು ಪರಿಶೀಲಿಸುತಿಹನು ||
ಅವರೆಲ್ಲರ ಹೃದಯಗಳನು ನಿರ್ಮಿಸಿದಾತನವನು|
ಅವರವರ ಕೃತ್ಯಗಳನ್ನು ಪರೀಕ್ಷಿಸುತಿಹನು||

ಶುಭಸಂದೇಶ: ಮಾರ್ಕ 8:34--9:1

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರನ್ನೂ ಜನರ ಗುಂಪನ್ನೂ ಒಟ್ಟಾಗಿ ತಮ್ಮ ಬಳಿಗೆ ಕರೆದು, " ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನು ಹಿಂಬಾಲಿಸಲಿ; ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ಹಾಗೂ ಶುಭಸಂದೇಶದ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೋಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು. ಒಬ್ಬನು ಪ್ರಪಂಚವನ್ನೆಲ್ಲಾ ಗೆದ್ದು, ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಬರುವ ಲಾಭವಾದರೂ ಏನು? ಮನುಷ್ಯನು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು? ದೈವನಿಷ್ಠೆಯಿಲ್ಲದ ಈ ಪಾಪಿಷ್ಠ ಪೀಳಿಗೆಯವರಲ್ಲಿ ಯಾರು ನನ್ನನ್ನೂ ನನ್ನ ಮಾತುಗಳನ್ನು ಕುರಿತು ನಾಚಿಕೆಪಡುತ್ತಾರೋ ಅಂಥವರನ್ನು ಕುರಿತು ನರಪುತ್ರನು ಸಹ ತನ್ನ ಪಿತನ ಪ್ರಭಾವದೊಡನೆ ದೇವದೂತರ ಪರಿವಾರ ಸಮೇತವಾಗಿ ಬರುವಾಗ ನಾಚಿಕೆಪಡುವನು, " ಎಂದರು. ಪುನಃ ಯೇಸು, ಅವರಿಗೆ "ಇಲ್ಲಿರೀವವರಲ್ಲಿ ಕೆಲವರು ದೇವರ ಸಾಮ್ರಾಜ್ಯವು ಪ್ರಭಾವದೊಡನೆ ಜಗತ್ತಿನಲ್ಲಿ ಪ್ರತ್ಯಕ್ಷವಾಗುವುದನ್ನು ನೋಡದೆ ಮರಣಹೊಂದುವುದಿಲ್ಲ ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ, " ಎಂದು ಹೇಳಿದರು.

16.02.23 - ಈ ಪ್ರತಿಜ್ಞೆಗೆ ಮೇಘಗಳಲ್ಲಿ ನಾನಿಟ್ಟಿರುವ ಮಳೆ ಬಿಲ್ಲೇ ಗುರುತು.

ಮೊದಲನೇ ವಾಚನ: ಆದಿಕಾಂಡ 9:1-13

ದೇವರು ನೋಹನನ್ನೂ ಅವರ ಮಕ್ಕಳನ್ನೂ ಆಶೀರ್ವದಿಸಿ ಹೀಗೆಂದರು "ನೀವು ಅಭಿವೃದ್ಧಿಯಾಗಿ ಹೆಚ್ಚು ಮಕ್ಕಳನ್ನು ಪಡೆಯಿರಿ; ಭೂಲೋಕದಲ್ಲೆಲ್ಲ ಹರಡಿಕೊಳ್ಳಿ. ಭೂಮಿಯ ಮೇಲಿರುವ ಎಲ್ಲ ಪ್ರಾಣಿಗಳೂ ಆಕಾಶದ ಎಲ್ಲ ಪಕ್ಷಿಗಳೂ ನೆಲದಮೇಲೆ ಹರಿದಾಡುವ ಎಲ್ಲ ಕ್ರಿಮಿಕೀಟಗಳೂ ಸಮುದ್ರದ ಎಲ್ಲ ಮೀನುಗಳು ನಿಮಗೆ ಹೆದರಿ ಬೆದರುವುವು. ಅವುಗಳನ್ನೆಲ್ಲ ನಿಮ್ಮ ಸ್ವಾಧೀನಕ್ಕೆ ಕೊಟ್ಟಿದ್ದೇನೆ. ಭೂಮಿಯ ಮೇಲೆ ಪೈರುಪಚ್ಚೆಯನ್ನು ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ. ಆದರೆ ಮಾಂಸವನ್ನು ಅದರ ಜೀವಸತ್ವವಾದ ರಕ್ತಸಮೇತ ತಿನ್ನಬಾರದು. ನಿಮ್ಮ ರಕ್ತಸುರಿಸಿ ಪ್ರಾಣತೆಗಿಯುವವರೆಗೆ ಮುಯ್ಯಿ ತೀರಿಸುವೆನು. ಮೃಗವಾಗಿದ್ದರೆ ಅದಕ್ಕೂ, ಮನುಷ್ಯನಾಗಿದ್ದರೆ, ಹತನಾದವನು ಅವನ ಸಹೋದರನಾದುದರಿಃದ ಅವನಿಗೂ ಮುಯ್ಯಿ ತೀರಿಸುವೆನು. "ನಿರ್ಮಿಸಿಹರು ದೇವರು ತಮ್ಮ ಸ್ವರೂಪದಲ್ಲಿ ನರರನ್ನು ಎಂತಲೆ ನರರನ್ನು ಕೊಲ್ಲುವವನು ನರನಿಂದಲೇ ಹತನಾಗುವನು. ನೀವು ಹೆಚ್ಚಿ ಅಭಿವೃಧಿಯಾಗುವಿರಿ, ನಿಮ್ಮ ಸಂಖೆ ಬೆಳೆಯಲಿ ಭೂಮಿಯಲ್ಲಿ." ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ ಇಂತೆಂದು ಹೇಳಿದರು: "ಕೇಳಿ, ನಾನೂ ನಿಮ್ಮನ್ನೂ ನಿಮ್ಮ ಸಂತತಿಯವರನ್ನೂ ನಿಮ್ಮ ಕೂಡ ನಾವೆಯಿಂದ ಹೊರಟು ಬಂದ ಪ್ರಾಣಿ - ಪಕ್ಷಿ ಮೃಗಾದಿ ಸಕಲ ಭೂಮಿಜಂತುಗಳನ್ನೂ ಕುರಿತು ಒಂದು ಸ್ಥರ ಪ್ರತಿಜ್ಞೆಯನ್ನು ಮಾಡುತ್ತೇನೆ. ಆ ಪ್ರಜ್ಞೆ ಏನೆಂದರೆ - ಇನ್ನು ಮೇಲೆ ನಾನು ಪ್ರಾಣಿಗಳನ್ನೆಲ್ಲಾ ಜಲಪ್ರಳಯದಿಂದ ನಾಶಮಾಡುವುದಿಲ್ಲ; ಇನ್ನು ಮುಂದೆ ಭೂಮಿಯನ್ನು ಹಾಳುಮಾಡುವ ಪ್ರಳಯವು ಬರುವುದೇ ಇಲ್ಲ," ದೇವರು ಮತ್ತೆ ಹೇಳಿದ್ದೇನೆಂದರೆ - "ನಾನು ನಿಮ್ಮನ್ನೂ ನಿಮ್ಮ ಸಂಗಡವಿರುವ ಸಮಸ್ತ ಜೀವರಾಶಿಗಳನ್ನೂ ಕುರಿತು ತಲತಲಾಂತರಗಳಿಗೆ ಮಾಡುವ ಈ ಪ್ರತಿಜ್ಞೆಗೆ ಮೇಘಗಳಲ್ಲಿ ನಾನಿಟ್ಟಿರುವ ಮಳೆಬಿಲ್ಲೇ ಗುರುತು. ನನಗೂ ಭೂಪ್ರಾಣಿಗಳಿಗೂ ಆದ ಒಡಂಬಡಿಕೆಗೆ ಇದೇ ಕುರುಹು.

ಕೀರ್ತನೆ: 102:16-18, 19-21, 29, 23-24

ಶ್ಲೋಕ: ಭೂಲೋಕವನ್ನು ವೀಕ್ಷಿಸಿದನು ಪ್ರಭು ಪರಲೋಕದಿಂದ

 ಶುಭಸಂದೇಶ: ಮಾರ್ಕ 8:27-33


ಯೇಸುಸ್ವಾಮಿ ತಮ್ಮ ಶಿಷ್ಯರ ಸಂಗಡ ಫಿಲಿಪ್ಪನ ಸೆಜರೇಯ ಎಃಬ ಪಟ್ಟಣದ ಪಕ್ಕದಲ್ಲಿರುವ ಹಳ್ಳಿಗಳಿಗೆ ಪ್ರಯಾಣ ಬೆಳೆಸಿದರು. ದಾರಿಯಲ್ಲಿ, "ಜನರು ನನ್ನನ್ನು ಯಾರೆಂದು ಹೇಳುತ್ತಾರೆ?" ಎಂದು ಶಿಷ್ಯರನ್ನು ಕೇಳಿದರು. ಅದಕ್ಕೆ ಶಿಷ್ಯರು, "ಕೆಲವರು ತಮ್ಮನ್ನು 'ಸ್ನಾನಿಕ ಯೊವಾನ್ನ' ಎನ್ನುತ್ತಾರೆ. ಇನ್ನು ಕೆಲವರು 'ಎಲೀಯನು,' ಮತ್ತೆ ಕೆಲವರು ಪ್ರವಾದಿಗಳಲ್ಲಿ ತಾವೂ ಒಬ್ಬರು ಎನ್ನುತ್ತಾರೆ," ಎಂದರು ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ಧಾರಕ ತಾವೇ" ಎಂದು ಉತ್ತರವಿತ್ತನು. ಆಗ ಯೇಸು, "ಈ ವಿಷಯವನ್ನು ಯಾರಿಗೂ ತಿಳಿಸಬೇಡಿ," ಎಂದು ತಮ್ಮ ಶಿಷ್ಯರಿಗೆ ಕಟ್ಟಪ್ಪಣೆ ಮಾಡಿದರು. ಈ ಘಟಣೆಯ ಬಳಿಕ ಯೇಸುಸ್ವಾಮಿ, "ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾಪ್ರಮುಖರಿಂದಲೂ ಪ್ರಧಾನ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು; ಆದರೆ ಮೂರನೇ ದಿನ ಪುನರುತ್ದಾನ ಹೊಂದುವನು." ಎಂದು ತಮ್ಮ ಶಿಷ್ಯರಿಗೆ ಮುಚ್ಚು ಮರೆ ಇಲ್ಲದೆ ಬೋಧಿಸಲಾರಂಭಿಸಿದರು.ಇದನ್ನು ಕೇಳಲಾಗದೆ ಪೇತ್ರನು ಅವರನ್ನು ಪ್ರತ್ಯೇಕವಾಗಿ ಕರೆದು, "ತಾವು ಹೀಗೆಲ್ಲಾ ಹೇಳಬಾರದು," ಎಂದು ಪ್ರತಿಭಟಿಸಿದನು. ಆಗ ಯೇಸು ಹಿಂದಕ್ಕೆ ತಿರುಗಿ, ತಮ್ಮ ಶಿಷ್ಯರನ್ನು ನೋಡಿ ಪೇತ್ರನನ್ನು ಎದರಿಸುತ್ತಾ, "ಸೈತಾನನೇ, ತೊಲಗು ಇಲ್ಲಿಂದ; ನಿನ್ನ ಈ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ," ಎಂದರು.

ಮನಸಿಗೊಂದಿಷ್ಟು : ’ಅಭಿಷಿಕ್ತರಾದ ಲೋಕೋದ್ಧಾರಕ ತಾವೇ’ ಎಂದ ಪೇತ್ರ, ಯೇಸು ಕಠಿಣ ಯಾತನೆಯನ್ನು ಅನುಭವಿಸಬೇಕು ಎಂಬುದನ್ನು ಜೀರ್ಣಿಸಿಕೊಳ್ಳದಾದ. ಯೇಸುವಿನ ಮೇಲಿನ ಆತನ ಪ್ರೀತಿಯಿಂದ ಅದು ಸಹಜವೇ ಆಗಿತ್ತು. ಆದರೆ ದೇವರ ಆಲೋಚನೆ ಅದೆಷ್ಟೇ ಕಠಿಣ ಎನಿಸಿದರೂ ಅದು ಕೊನೆಗೆ ಒಳಿತಿಗಾಗಿಯೇ ಎಂಬ ಸಂದೇಶವನ್ನು ಯೇಸು ಕಟುವಾಗಿಯೇ ನೀಡುತ್ತಾರೆ. ನಮ್ಮ ಬದುಕಿನಲ್ಲಿ ಎಂತಹ  ಪ್ರಳಯ ಬಂದರೂ ಒಂದು ದಿನ ಭರವಸೆಯ ಮಳೆ ಬಿಲ್ಲು ನಮಗಾಗಿ ಕಾದಿದೆ

ಪ್ರಶ್ನೆನೀವು ಯೇಸುವನ್ನು ಯಾರೆನುತ್ತೀರಿ?

15.02.23

ಮೊದಲನೆಯ ವಾಚನ: ಆದಿಕಾಂಡ 8:6-13, 20-22

ನಲವತ್ತು ದಿನಗಳಾದ ಮೇಲೆ ನೋಹನು ತಾನು ಮಾಡಿದ್ದ ನಾವೆಯ ಕಿಟಕಿಯನ್ನು ತೆರೆದು ಕಾಗೆಯೊಂದನ್ನು ಹೊರಕ್ಕೆ ಬಿಟ್ಟನು. ಅದು ಭೂಮಿಯ ಮೇಲಿದ್ದ ನೀರು ಒಣಗುವ ತನಕ ಹೋಗುತ್ತಾ ಬರುತ್ತಾ ಇತ್ತು. ನೀರು ಇಳಿಯಿತೋ ಇಲ್ಲವೋ ಎಂದು ತಿಳಿದುಕೊಳ್ಳಲು ನೋಹನು ಅನಂತರ ಪಾರಿವಾಳವೊಂದನ್ನು ಹೊರಕ್ಕೆ ಬಿಟ್ಟನು. ಭೂಮಿಯ ಮೇಲೆಲ್ಲ ನೀರು ಇದ್ದುದರಿಂದ. ಕಾಲಿಡುವುದಕ್ಕೆ ಸ್ಥಳ ಕಾಣದೆ ಈ ಪಾರಿವಾಳ ನಾವೆಗೆ ಹಿಂದಿರುಗಿತು. ನೋಹನು ಕೈ ಚಾಚಿ ಅದನ್ನು ಹಿಡಿದುಕೊಂಡು ನಾವೆಯೊಳಗೆ ಹಾಕಿಕೊಂಡನು. ಇನ್ನೂ ಏಳು ದಿವಸ ಕಾದು, ಪಾರಿವಾಳವನ್ನು ಹೊರಕ್ಕೆ ಬಿಟ್ಟನು. ಸಂಜೆ ವೇಳೆಗೆ ಆ ಪಾರಿವಾಳ ಅವನ ಬಳಿಗೆ ಮರಳಿತು; ಆಗ ಇಗೋ! ಅದರ ಬಾಯಲ್ಲಿ ಎಣ್ಣೇಮರದ ಹೊಸ ಚಿಗುರಿತ್ತು. ಇದನ್ನು ನೋಡಿ ನೋಹನು ಭೂಮಿಯ ಮೇಲಿಂದ ನೀರು ಇಳಿದುಹೋಗಿದೆಯೆಂದು ತಿಳಿದುಕೊಂಡನು. ಮತ್ತೆ ಏಳು ದಿನಗಳಾದ ಮೇಲೆ ಇನ್ನೊಮ್ಮೆ ಪಾರಿವಾಳವನ್ನು ಹೊರಕ್ಕೆ ಬಿಟ್ಟನು. ಈ ಸಾರಿ ಅದು ಹಿಂದುರುಗಿ ಬರಲೇ ಇಲ್ಲ. ನೋಹನು 601ನೆಯ ವರ್ಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಂದು ಭೂಮಿಯ ಮೇಲಿದ್ದ ನೀರು ಇಳಿದಿತ್ತು. ನೋಹನು ನಾವೆಯ ಗವಸಣಿಗೆಯನ್ನು ತೆಗೆದು ನೋಡಿದನು. ಇಗೋ, ಭೂಮಿಯ ತೇವ ಆರುತ್ತಿತ್ತು. ನೋಹನು ಸರ್ವೇಶ್ವರಸ್ವಾಮಿಗೆ ಒಂದು ಬಲಿಪೀಠವನ್ನು ಕಟ್ಟಿದನು. ಶುದ್ದವಾದ ಎಲ್ಲ ಪ್ರಾಣಿಪಕ್ಷಿಗಳಿಂದ ಆಯ್ದು ಆ ಪೀಠದ ಮೇಲೆ ದಹನಬಲಿಯನ್ನು ಅರ್ಪಿಸಿದನು. ಗಮಗಮಿಸುವ ಅದರ ಸುಗಂಧವು ಸ್ವಾಮಿಯನ್ನು ಮುಟ್ಟಿತು. ಅವರು ಮನದಲ್ಲೇ ಹೀಗೆಂದುಕೊಂಡರು: "ಇನ್ನು ಮೇಲೆ ನಾನು ಮನುಷ್ಯರ ನಿಮಿತ್ತ ಭೂಮಿಯನ್ನು ಶಪಿಸುವುದಿಲ್ಲ. ಮನುಷ್ಯರ ಹೃದಯದ ಆಲೋಚನೆ ಚಿಕ್ಕಂದಿನಿಂದಲೇ ಕೆಟ್ಟದ್ದು. ಈಗ ಮಾಡಿದಂತೆ ಇನ್ನು ಮೇಲೆ ಎಲ್ಲ ಜೀವಿಗಳನ್ನು ನಾನು ಸಂಹರಿಸುವುದಿಲ್ಲ. ಬಿತ್ತನೆ -- ಕೊಯಿಲು, ಚಳಿ -- ಬಿಸಿಲು, ಗ್ರೀಷ್ಠ -- ಹೇಮಂತ, ಹಗಲು -- ಇರುಳು ಈ ಕ್ರಮಕ್ಕೆ ಇರದು ಅಂತ್ಯ ಜಗವಿರುವವರೆಗು."


ಕೀರ್ತನೆ:116:12-13,14-15,18-19. V.17
ಶ್ಲೋಕ: ಅರ್ಪಿಸುವೆ ನಾ ನಿನಗೆ ಕೃತಜ್ಞತಾಬಲಿಯನು.

ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ|
ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ?||
ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು|
ಪ್ರಖ್ಯಾತಿಪಡಿಸುವೆನು ಪ್ರಭುವಿನ ನಾಮವನು||

ಆತನಿಗೆ ನಾ ಹೊತ್ತ ಹರಕೆಗಳನು|
ಆತನ ಸಭೆಯ ಮುಂದೆಯೇ ತೀರಿಸುವೆನು||
ಪ್ರಭು ಅಲ್ಪವೆಂದೆಣಿಸನು|
ತನ್ನ ಭಕ್ತರ ಮರಣವನು||

ಹೇ ಜೆರುಸಲೇಮೇ, ನಿನ್ನ ಮಧ್ಯದೊಳು|
ಆತನಿರುವ ಮಂದಿರದ ಅಂಗಳದೊಳು||
ತೀರಿಸುವೆನು ಆತನ ಸಭೆಯ ಸಮ್ಮುಖದೊಳು|
ಅರ್ಪಿಸುವೆ ನಾ ಹೊತ್ತ ಆ ಹರಕೆಗಳನು||

ಶುಭಸಂದೇಶ: ಮಾರ್ಕ 8:22-26

ಆ ಕಾಲದಲ್ಲಿ ಯೇಸು ಮತ್ತು ಅವರ ಶಿಷ್ಯರು ಬೆತ್ಸಾಯಿದಕ್ಕೆ ಬಂದರು. ಕೆಲವರು ಯೇಸುವಿನ ಬಳಿಗೆ ಕುರುಡನೊಬ್ಬನನ್ನು ಕರೆತಂದು ಅವನನ್ನು ಮುಟ್ಟಬೇಕೆಂದು ಬೇಡಿಕೊಂಡರು. ಯೇಸು ಕುರುಡನ ಕೈಯಿಡಿದು, ಅವನನ್ನು ಊರ ಹೊರಗೆ ಕರೆದೊಯ್ದರು. ಅವನ ಮೇಲೆ ಕೈಯಿಟ್ಟು, " ನಿನಗೆ ಏನಾದರೂ ಕಾಣುತ್ತಿದೆಯೇ? " ಎಂದು ಕೇಳಿದರು. ಆಗ ಅವನು ಕಣ್ಣೆತ್ತಿ ನೋಡಿ, " ನನಗೆ ಮನುಷ್ಯರು ಮರಗಳಂತೆ ಕಾಣಿಸುತ್ತಾರೆ. ಅದರೂ ಅವರು ನಡೆದಾಡುತ್ತಿದ್ದಾರೆ, " ಎಂದನು. ಯೇಸು ಪುನಃ ಅವನ ಕಣ್ಣುಗಳ ಮೇಲೆ ಕೈಯಿಟ್ಟರು. ಅವನು ಕಣ್ಣರಳಿಸಿ ನೋಡಿದಾಗ ಪೂರ್ಣ ದೃಷ್ಟಿಯನ್ನು ಹೊಂದಿದ್ದನು. ಎಲ್ಲವೂ ಆತನಿಗೆ ಸ್ಪಷ್ಟವಾಗಿ ಕಾಣಿಸಿತು. ಅನಂತರ ಯೇಸು, " ನೀನು ಊರೊಳಗೆ ಹೋಗುವುದೇ ಬೇಡ, " ಎಂದು ಅವನಿಗೆ ಆಜ್ಞಾಪಿಸಿ, ಮನೆಗೆ ಕಳುಹಿಸಿಬಿಟ್ಟರು.

14.02.23 - "ಎಚ್ಚರಿಕೆ, ಫರಿಸಾಯರ ಹಾಗೂ ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ,”

ಮೊದಲ ವಾಚನ - ಆದಿಕಾಂಡ 6: 5-8: 7: 1-5, 10


ಜಗತ್ತಿನಲ್ಲಿ ಮನುಜರ ಕೆಟ್ಟತನವು ಹೆಚ್ಚುತ್ತಲೇ ಇತ್ತು. ಅವರ ಮನದಾಲೋಚನೆಗಳು ಸದಾ ಕೆಟ್ಟದಾಗಿದ್ದವು. ಇದನ್ನು ಕಂಡ ಸರ್ವೇಶ್ವರ ಮನುಜನನ್ನು ಇಲ್ಲಿ ಸೃಷ್ಟಿಮಾಡಿದ್ದಕ್ಕಾಗಿ ವ್ಯಥೆಪಟ್ಟು, “ನಾನು ಸೃಷ್ಟಿಸಿದ ಮಾನವರನ್ನು ಈ ಜಗದಿಂದ ಅಳಿಸಿಬಿಡುತ್ತೇನೆ, ಅವರೊಂದಿಗೆ ಪ್ರಾಣಿಪಕ್ಷಿಗಳನ್ನು, ಕ್ರಿಮಿಕೀಟಗಳನ್ನು ಅಳಿಸಿಹಾಕುತ್ತೇನೆ. ಅವುಗಳನ್ನು ಉಂಟುಮಾಡಿದ್ದಕ್ಕಾಗಿ ನನಗೆ ದುಃಖವಾಗುತ್ತಿದೆ,” ಎಂದುಕೊಂಡರು. ಆದರೆ ನೋಹನ ವಿಷಯದಲ್ಲಿ ಸರ್ವೇಶ್ವರ ಸ್ವಾಮಿಗೆ ಮೆಚ್ಚುಗೆಯಿತ್ತು. ಸರ್ವೇಶ್ವರ ಸ್ವಾಮಿ ನೋಹನಿಗೆ, "ನೀನೂ ನಿನ್ನ ಮನೆಯವರೆಲ್ಲರೂ ನಾವೆಯನ್ನು ಸೇರಿಕೊಳ್ಳಿರಿ; ಈಗಿನ ಪೀಳಿಗೆಯಲ್ಲಿ ನೀನೊಬ್ಬನೇ ನನ್ನ ದೃಷ್ಟಿಗೆ ಸತ್ಪುರುಷ. ಎಲ್ಲ ಶುದ್ಧ ಪ್ರಾಣಿಗಳಲ್ಲಿ ಏಳೇಳು ಗಂಡುಹೆಣ್ಣುಗಳನ್ನು ಶುದ್ಧವಲ್ಲದ ಪ್ರಾಣಿಗಳಲ್ಲಿ ಎರಡೆರಡು ಗಂಡುಹೆಣ್ಣುಗಳನ್ನೂ ನಿನ್ನೊಂದಿಗೆ ಕರೆದುಕೊ.ಪಕ್ಷಿಗಳಲ್ಲಿಯೂ ಏಳೇಳು ಗಂಡುಹೆಣ್ಣುಗಳನ್ನು ತೆಗೆದುಕೊ. ಹೀಗೆ ಆಯಾ ಜಾತಿಯನ್ನು ಭೂಮಿಯಲ್ಲಿ ಉಳಿಸಿ ಕಾಪಾಡಬೇಕು. ಏಳು ದಿನಗಳಾನಂತರ ಭೂಮಿಯ ಮೇಲೆ ನಲವತ್ತು ದಿನ ಹಗಲಿರುಳೆನ್ನದೆ ಮಳೆ ಸುರಿಸುವೆನು; ನಾನು ಸೃಷ್ಟಿಮಾಡಿದ ಜೀವರಾಶಿಗಳನ್ನೆಲ್ಲ ಭೂಮಿಯಿಂದ ಅಳಿಸಿಹಾಕುವೆನು,” ಎಂದು ಹೇಳಿದರು. ಸರ್ವೇಶ್ವರ ಆಜ್ಞಾಪಿಸಿದಂತೆಯೇ ನೋಹನು ಎಲ್ಲವನ್ನು ಮಾಡಿದನು. ಏಳು ದಿನಗಳಾದ ಬಳಿಕ ಜಲಪ್ರಳಯವಾಗತೊಡಗಿತು.
ಪ್ರಭುವಿನ ವಾಕ್ಯ

ಕೀರ್ತನೆ - 29: 1-4, 8-10
ಶ್ಲೋಕ: ಅನುಗ್ರಹಿಸಲಿ ಪ್ರಭು ತನ್ನ ಪ್ರಜೆಗೆ ಸುಕ್ಷೇಮವನು

ಸುರಪುತ್ರರೇ, ಪ್ರಭುವಿನ ಸ್ತುತಿ ಮಾಡಿರಿ
ಸ್ತುತಿಸಿರಿ ಆತನ ಶ್ರೀನಾಮ ಮಹಿಮೆಯನು I

ಪೂಜಿಸಿರಿ ಪವಿತ್ರಾಂಬರರಾಗಿ ಆತನನು II
ಪ್ರಭು ಆಸೀನನು ಆಗಸದ ಜಲರಾಶಿಗಳ ಮೇಲೆ I

ಆತನಾಡಂಬರ ಧ್ವನಿ ಮೇಘಮಂಡಲದ ಮೇಲೆ II
ಪ್ರಭುವಿನ ಧ್ವನಿ ಶಕ್ತಿಯುತ Iಆತನ ಶಬ್ಧ ವೈಭವಯುತ II

ಪ್ರತಿಭಾಸ್ವರೂಪನಾದ ದೇವನಿದೋ, ಗುಡುಗುತ್ತಲೇ I
ಜಯಜಯ ಘೋಷಮಾಡುವರೆಲ್ಲರು ಆತನಾಲಯದೊಳು II

ಜಲಪ್ರಳಯದೊಳು ಪ್ರಭು ಆಸೀನನಾಗಿಹನು I
ಯುಗಯುಗಾಂತರಕು ಅರಸನಾಗಿ ಆಳುವನು II

ಘೋಷಣೆ:          ಪ್ರೇ. ಕಾ.  16:14

ಅಲ್ಲೆಲೂಯ, ಅಲ್ಲೆಲೂಯ!
ಬೋಧನೆಗೆ  ಕಿವಿಗೊಟ್ಟು  ಗ್ರಹಿಸುವಂತೆ  ಪ್ರಭೂ,  ನಮ್ಮ  ಹೃದಯಗಳನ್ನು  ತೆರೆಯಿರಿ,,
ಅಲ್ಲಲೂಯ!

ಶುಭಸಂದೇಶ - ಮಾರ್ಕ 8: 14-21


ಆ ಕಾಲದಲ್ಲಿ ಶಿಷ್ಯರು ಬುತ್ತಿಯನ್ನು ಕಟ್ಟಿಕೊಳ್ಳಲು ಮರೆತಿದ್ದರು. ದೋಣಿಯಲ್ಲಿ ಒಂದೇ ಒಂದು ರೊಟ್ಟಿಯಿತ್ತು. ಯೇಸುಸ್ವಾಮಿ ಅವರಿಗೆ, “ಎಚ್ಚರಿಕೆ, ಫರಿಸಾಯರ ಹಾಗೂ ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ,” ಎಂದು ಹೇಳಿದರು. ಇದನ್ನು ಕೇಳಿದ ಶಿಷ್ಯರು, “ನಮ್ಮಲ್ಲಿ ರೊಟ್ಟಿಯಿಲ್ಲದ್ದರಿಂದ ಹೀಗೆ ಹೇಳುತ್ತಿರಬಹುದೇ” ಎಂದು ಚರ್ಚಿಸತೊಡಗಿದರು. ಆ ಚರ್ಚೆಯನ್ನು ಯೇಸು ಗಮನಿಸಿ, “ರೊಟ್ಟಿ ಇಲ್ಲವೆಂದು ಚರ್ಚೆ ಏಕೆ? ನಿಮಗೆ ಇನ್ನೂ ಅರಿವಾಗಲಿ, ಗ್ರಹಿಕೆಯಾಗಲಿ ಇಲ್ಲವೇ? ನೀವಿನ್ನೂ ಮಂದಮತಿಗಳಾಗಿರುವಿರೋ? ಕಿವಿಗಳಿದ್ದೂ ಕೇಳಲಾರಿರಾ? ಕಣ್ಣುಗಳಿದ್ದೂ ನೋಡಲಾರಿರಾ? ನಾನು ಐದು ರೊಟ್ಟಿಗಳಿಂದ ಐದು ಸಾವಿರ ಜನರನ್ನು ತೃಪ್ತಿಪಡಿಸಿದಾಗ ಉಳಿದ ರೊಟ್ಟಿಯ ತುಂಡುಗಳನ್ನು ಎಷ್ಟು ಬುಟ್ಟಿ ತುಂಬಾ ಒಟ್ಟುಗೂಡಿಸಿದಿರಿ? ನಿಮಗೆ ಜ್ಞಾಪಕವಿಲ್ಲವೇ?” ಎಂದು ಕೇಳಿದರು. “ಹನ್ನೆರಡು ಬುಟ್ಟಿಗಳು” ಎಂದು ಅವರು ಉತ್ತರವಿತ್ತರು. “ಅಲ್ಲದೆ ನಾನು ಏಳು ರೊಟ್ಟಿಗಳಿಂದ ನಾಲ್ಕು ಸಾವಿರ ಜನರನ್ನು ತೃಪ್ತಿಪಡಿಸಿದಾಗ ಎಷ್ಟು ಕುಕ್ಕೆ ತುಂಬಾ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಿರಿ?” ಎಂದು ಪುನಃ ಅವರನ್ನು ಕೇಳಲು, “ಏಳು ಕುಕ್ಕೆಗಳು,” ಎಂದರು. ಆಗ ಯೇಸು, “ಇಷ್ಟಾದರೂ, ನಿಮಗಿನ್ನೂ ತಿಳುವಳಿಕೆ ಇಲ್ಲವೆ?” ಎಂದರು.
ಪ್ರಭುವಿನ ಶುಭಸಂದೇಶ

13.02.23 - “ಈ ಪೀಳಿಗೆ ಅದ್ಭುತವನ್ನು ಸಂಕೇತವಾಗಿ ಅಪೇಕ್ಷಿಸುವುದೇಕೆ?"

ಮೊದಲನೆಯ ವಾಚನ - ಆದಿಕಾಂಡ 4: 1-15, 25. V.14


ಆದಾಮನು ತನ್ನ ಹೆಂಡತಿಯ ಜೊತೆ ಕೂಡಲು ಆಕೆ ಗರ್ಭಿಣಿಯಾಗಿ ಕಾಯಿನನನ್ನು ಹೆತ್ತಳು. “ಸರ್ವೇಶ್ವರ ಸ್ವಾಮಿಯ ಅನುಗ್ರಹದಿಂದ ಒಂದು ಗಂಡುಮಗುವನ್ನು ಪಡೆದಿದ್ದೇನೆ” ಎಂದಳು. ತರುವಾಯ ಅವನ ತಮ್ಮನಾದ ಹೇಬೆಲನಿಗೆ ಜನ್ಮವಿತ್ತಳು. ಹೇಬೆಲನು ಕುರಿಗಾಹಿಯಾದನು; ಕಾಯಿನನು ವ್ಯವಸಾಯಗಾರನಾದನು. ಕ್ರಮೇಣ ಕಾಯಿನನು ತಾನು ಬೆಳೆಸಿದ ಫಸಲಲ್ಲಿ ಕೆಲವನ್ನು ತಂದು ಸರ್ವೇಶ್ವರ ಸ್ವಾಮಿಗೆ ಕಾಣಿಕೆಯಾಗಿ ಸಮರ್ಪಿಸಿದನು. ಅಂತೆಯೇ, ಹೇಬೆಲನು ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಸಮರ್ಪಿಸಿದನು. 5ಸರ್ವೇಶ್ವರ ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿಕೊಂಡರು; ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಇದರಿಂದ ಕಾಯಿನನು ಕಡುಗೋಪಗೊಂಡನು; ಅವನ ಮುಖ ಸಿಂಡರಿಸಿತು. ಆಗ ಸರ್ವೇಶ್ವರ ಕಾಯಿನನಿಗೆ, “ಕೋಪವೇಕೆ? ಮುಖ ಸಿಂಡರಿಸಿದೆ ಏಕೆ? ನೀನು ಒಳಿತನ್ನು ಮಾಡಿದ್ದರೆ ತಲೆ ಎತ್ತುತ್ತಿದ್ದೆ; ಕೆಡುಕನ್ನು ಮಾಡಿದ್ದರಿಂದ ಪಾಪವು ಹೊಸ್ತಿಲಲ್ಲಿ ಹೊಂಚುಹಾಕುತ್ತಿದೆ; ಅದು ನಿನ್ನನ್ನು ಬಯಸುತ್ತಿದೆ. ನೀನು ಅದನ್ನು ಜಯಿಸಬೇಕು,” ಎಂದರು. ಬಳಿಕ ಕಾಯಿನನು ತಮ್ಮ ಹೇಬೆಲನಿಗೆ, “ಹೊಲಕ್ಕೆ ಹೋಗೋಣ ಬಾ”, ಎಂದು ಕರೆದನು. ಅವರಿಬ್ಬರೂ ಅಲ್ಲಿಗೆ ಬಂದಾಗ ಕಾಯಿನನು ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು. “ನಿನ್ನ ತಮ್ಮನೆಲ್ಲಿ?" ಎಂದು ಸರ್ವೇಶ್ವರ ಕೇಳಿದಾಗ “ನಾನರಿಯೆ, ನನ್ನ ತಮ್ಮನಿಗೆ ನಾನೇನು ಕಾವಲುಗಾರನೋ” ಎಂದು ಕಾಯಿನನು ಉತ್ತರ ಕೊಟ್ಟನು. ಆಗ ಸರ್ವೇಶ್ವರ, “ನೀನು ಎಂಥ ಕೃತ್ಯ ಎಸಗಿದೆ? ಪ್ರತೀಕಾರಕ್ಕಾಗಿ ನೆಲದಿಂದ ನಿನ್ನ ತಮ್ಮನ ರಕ್ತ ಕೂಗಿ ನನಗೆ ಮೊರೆಯಿಡುತ್ತಿದೆ, ಕೇಳು. ನಿನ್ನ ಕೈ ಸುರಿಸಿದ ನಿನ್ನ ತಮ್ಮನ ರಕ್ತವನ್ನು ಕುಡಿದ ಈ ನೆಲದಿಂದಾಗಿ ನೀನು ಶಾಪಗ್ರಸ್ತನು; ತಿರಸ್ಕೃತನು. ಇದನ್ನು ನೀನು ವ್ಯವಸಾಯ ಮಾಡಿದರೂ ಇನ್ನು ಮುಂದೆ ಇದು ಫಲಕೊಡುವುದಿಲ್ಲ. ನೆಲೆಯಿಲ್ಲದೆ ನೀನು ಲೋಕದಲ್ಲಿ ಅಲೆಮಾರಿಯಾಗಿರಬೇಕು,” ಎಂದರು. ಅದಕ್ಕೆ ಕಾಯಿನನು, “ಸರ್ವೇಶ್ವರಾ, ಈ ಶಿಕ್ಷೆ ನನ್ನಿಂದ ಸಹಿಸಲಾಗದಷ್ಟು ಕಠಿಣ. ಈ ನಾಡಿನಿಂದ ನನ್ನನ್ನು ಹೊರದೂಡುತ್ತಿರುವಿರಿ, ತಮ್ಮ ಸಾನ್ನಿಧ್ಯ ನನಗಿನ್ನು ದೊರಕದು; ನೆಲೆ ಇಲ್ಲದ ನಾನು ಲೋಕದಲ್ಲಿ ಅಲೆಮಾರಿಯಾಗಿರಬೇಕು; ಕಂಡಕಂಡವರೆಲ್ಲರು ನನ್ನನ್ನು ಕೊಲ್ಲುವರು” ಎಂದು ಹೇಳಿದನು. ಅದಕ್ಕೆ ಸರ್ವೇಶ್ವರ, “ಇಲ್ಲ, ಕಾಯಿನನ ಪ್ರಾಣವನ್ನು ತೆಗೆದವನಿಗೆ ಏಳ್ಮಡಿ ದಂಡನೆ ಆಗುವುದು,"ಎಂದು ಹೇಳಿ, ಅವನನ್ನು ಕಂಡವರು ಕೊಲ್ಲದಂತೆ ಅವನ ಮೇಲೆ ಒಂದು ಗುರುತನ್ನು ಇಟ್ಟರು. ಆದಾಮ್ ಮತ್ತು ಅವನ ಹೆಂಡತಿಗೆ ಮತ್ತೊಂದು ಗಂಡುಮಗು ಆಯಿತು. ಅಕೆ, “ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ ದೇವರು ನನಗೆ ಬೇರೆ ಸಂತಾನವನ್ನು ಅನುಗ್ರಹಿಸಿದ್ದಾರೆ,” ಎಂದುಕೊಂಡು ಅವನಿಗೆ “ಸೇತ್" ಎಂದು ನಾಮಕರಣ ಮಾಡಿದಳು. 
ಪ್ರಭುವಿನ ವಾಕ್ಯ

ಕೀರ್ತನೆ - 50:1, 8, 16-17, 20-21
ಶ್ಲೋಕ: ದೇವರಿಗೆ ಧನ್ಯವಾದವೆ ನಿನ್ನ ಬಲಿಯರ್ಪಣೆಯಾಗಿರಲಿ I

ದೇವಾಧಿದೇವನಾದ ಪ್ರಭುವಿನ ನುಡಿ ಇಡೀ ಜಗಕೆ I
ಆತನ ಸನ್ನಿಧಿಗೆ ಕರೆ, ಪೂರ್ವದಿಂದ ಪಶ್ಚಿಮದವರೆಗೆ II

ನಿನ್ನ ಬಲಿಯರ್ಪಣೆಯನು ನಾ ತಪ್ಪೆಣಿಸುತಿಲ್ಲ I
ನನ್ನ ಮುಂದಿವೆ ಸತತ ನಿನ್ನ ದಹನಬಲಿಗಳೆಲ್ಲ II

“ನನ್ನ ವಿಧಿಗಳ ಪಠಿಸುವ ಹಕ್ಕು ನಿಮಗೆಂತು? I
ನನ್ನ ನಿಬಂಧನೆಗಳ ನೀವು ಜಪಿಸುವುದೆಂತು?” II

ನನ್ನ ಮಾತುಗಳನು ನೀವು ತಾತ್ಸಾರ ಮಾಡುತ್ತೀರಿ I
ನನ್ನ ತಿದ್ದುಪಾಟುಗಳನು ನೀವು ಧಿಕ್ಕರಿಸುತ್ತೀರಿ II

ಸೋದರನಿಗೆ ವಿರುದ್ಧ ಸುಳ್ಳಾಡಲು ಕೂರುತ್ತೀರಿ I
ಒಡಹುಟ್ಟಿದವರಿಗೆ ಎದುರಾಗಿ ಚಾಡಿಹೇಳುತ್ತೀರಿ II

ನೀವಿದನ್ನೆಲ್ಲ ಮಾಡಿದರೂ ನಾ ಮೌನಿಯೆನ್ನುವಿರಾ? I
ನಾ ಕೂಡ ನಿಮ್ಮಂಥವನು ಎಂದುಕೊಂಡಿರಾ? II

ಶುಭಸಂದೇಶ - ಮಾರ್ಕ 8:11-13


ಆ ಕಾಲದಲ್ಲಿ ಫರಿಸಾಯರು ಯೇಸುಸ್ವಾಮಿಯ ಬಳಿಗೆ ಬಂದು, ಅವರೊಡನೆ ತರ್ಕಮಾಡಿ, ಅವರನ್ನು ಪರೀಕ್ಷಿಸುವ ಉದ್ದೇಶದಿಂದ: “ನೀನು ದೇವರಿಂದ ಬಂದವನೆಂಬುದನ್ನು ಸೂಚಿಸಲು ಒಂದು ಅದ್ಭುತವನ್ನು ಮಾಡಿತೋರಿಸು,” ಎಂದು ಕೇಳಿದರು. ಇದನ್ನು ಕೇಳಿ ಯೇಸು, ಮನಸ್ಸಿನಲ್ಲೇ ನೊಂದುಕೊಂಡು, ನಿಟ್ಟುಸಿರಿಟ್ಟು, “ಈ ಪೀಳಿಗೆ ಅದ್ಭುತವನ್ನು ಸಂಕೇತವಾಗಿ ಅಪೇಕ್ಷಿಸುವುದೇಕೆ? ಇದಕ್ಕೆ ಅಂಥ ಯಾವ ಸಂಕೇತವನ್ನು ಕೊಡಲಾಗದು, ಇದು ಖಂಡಿತ,” ಎಂದರು. ಅನಂತರ ಯೇಸು ಅವರನ್ನು ಬಿಟ್ಟು, ದೋಣಿಯನ್ನು ಹತ್ತಿ ಸರೋವರದ ಆಚೆದಡಕ್ಕೆ ಹೊರಟುಹೋದರು.
ಪ್ರಭುವಿನ ಶುಭಸಂದೇಶ

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...