ಮೊದಲನೆಯ ವಾಚನ: ಹಿಬ್ರಿಯರಿಗೆ 11:1-7
ವಿಶ್ವಾಸವೆಂಬುದು ನಾವು ನಿರೀಕ್ಷಿಸುವಂಥವುಗಳು ನಮಗೆ ದೊರಕುತ್ತವೆ ಎಂಬ ದೃಢ ನಂಬಿಕೆ ಹಾಗು ಕಣ್ಣಿಗೆ ಕಾಣದಂಥವುಗಳು ನಿಶ್ಚಯವಾದವು ಎಂಬ ನಿಲುವು ಆಗಿದೆ. ನಮ್ಮ ಪೂರ್ವಜರು ದೈವಸಮ್ಮತಿಯನ್ನು ಪಡೆದದ್ದು ವಿಶ್ವಾಸದಿಂದಲೇ; ವಿಶ್ವವು ದೇವರ ವಾಣಿಯಿಂದ ಉಂಟಾಯಿತು. ಎಂಬುದನ್ನು ಮತ್ತು ಗೋಚರವಾದವುಗಳು ಅಗೋಚರವಾದವುಗಳಿಂದ ಉಂಟಾದವು ಎಂಬುದನ್ನು ವಿಶ್ವಾಸದಿಂದಲೇ ತಿಳಿಯುತ್ತೇವೆ. ವಿಶ್ವಾಸವಿದ್ದುದರಿಂದಲೇ ಹೇಬೆಲನು ಕಾಯಿನನಿಗಿಂತ ಉತ್ತಮವಾದ ಬಲಿಯನ್ನು ದೇವರಿಗೆ ಸಮರ್ಪಿಸಿದನು. ವಿಶ್ವಾಸದಿಂದಲೇ ತಾನು ಸತ್ಪುರುಷನೆಂದು ಸನ್ಮಾನಿತನಾದನು. ಅವನ ಕಾಣಿಕೆ ತಮಗೆ ಸ್ವೀಕೃತವಾಯಿತೆಂದು ದೇವರೇ ಸಾದರಪಡಿಸಿದರು. ಅವನು ಮೃತನಾಗಿದ್ದರೂ ಅವನ ವಿಶ್ವಾಸದ ಮೂಲಕ ಇಂದಿಗೂ ಮಾತನಾಡುತ್ತಿದ್ದಾನೆ. ವಿಶ್ವಾಸವಿದ್ದುದರಿಂದಲೇ ಹನೋಕನು ಮೃತ್ಯುವಿಗೆ ತುತ್ತಾಗದಂತೆ ದೇವರ ಬಳಿಗೆ ಒಯ್ಯಲ್ಪಟ್ಟನು. ದೇವರು ಆತನನ್ನು ಕರೆದುಕೊಂಡಿದ್ದರಿಂದ ಆತನು ಯಾರಿಗೂ ಕಾಣಸಿಗಲಿಲ್ಲ. ಆತನು ಹೀಗೆ ಒಯ್ಯಲ್ಪಡುವುದಕ್ಕೆ ಮುಂಚೆ ದೇವರಿಗೆ ಮೆಚ್ಚುಗೆಯಾಗಿದ್ದನು ಎಂಬುದಕ್ಕೆ ಸಾಕ್ಷ್ಯಾಧಾರವಿದೆ. ವಿಶ್ವಾಸವಿಲ್ಲದೆ ದೇವರ ಮೆಚ್ಚುಗೆಗೆ ಪಾತ್ರರಾಗಲು ಯಾರಿಂದಲೂ ಸಾಧ್ಯವಿಲ್ಲ. ದೇವರ ಬಳಿಗೆ ಸಾಗುವವರು, ಅವರ ಅಸ್ತಿತ್ವವನ್ನು ವಿಶ್ವಾಸಿಸಬೇಕು; ಅವರನ್ನು ಅರಸುವವರಿಗೆ ತಕ್ಕ ಪ್ರತಿಫಲ ಸಿಗುವುದೆಂದು ನಂಬಬೇಕು. ವಿಶ್ವಾಸವಿದ್ದುದರಿಂದಲೇ ನೋವನು ಕಾಣದೆ ಇದ್ದ ತನ್ನ ಭವಿಷ್ಯದ ಬಗ್ಗೆ ದೇವರಿಂದ ಮುನ್ನೆಚ್ಚರಿಕೆ ಪಡೆದಾಗ ಅದನ್ನು ಲಕ್ಷ್ಯಕ್ಕೆ ತಂದುಕೊಂಡು ಕುಟುಂಬವನ್ನು ರಕ್ಷಿಸಿಕೊಳ್ಳಲು ನಾವೆಯೊಂದನ್ನು ನಿರ್ಮಿಸಿದನು. ಇಡೀ ಜಗತ್ತೇ ದಂಡನೆಗೆ ಗುರಿಯಾಯಿತು. ನೋವನಾದರೋ ತನ್ನ ವಿಶ್ವಾಸದ ಫಲವಾಗಿ ಸತ್ಸಂಬಂಧಕ್ಕೆ ಬಾಧ್ಯಸ್ಥನಾದನು.
ಕೀರ್ತನೆ 145:2-5, 10-11, V.1
ಶ್ಲೋಕ: ದೇವಾ, ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ ನಮನ.
ಹೊಗಳುವೆನು ನಾ ದಿನದಿನವೂ ನಿನ್ನನು|
ಭಜಿಸುವೆನೆಂದಿಗೂ ನಿನ್ನ ಹೆಸರನು||
ಪ್ರಭು ಮಹಾತ್ಮನು, ಸುತ್ಯರ್ಹನು|
ಆತನ ಮಹಿಮೆ ಅಗಮ್ಯವಾದುದು||
ತಲೆಮಾರು ತಲೆಮಾರಿಗೆ ನುತಿಸುವುದು ನಿನ್ನ ಕಾರ್ಯಗಳನು|
ತಿಳಿಸುವುದು ಪ್ರಭು ನೀ ಮಾಡಿದೆಲ್ಲಾ ಮಹತ್ಕಾರ್ಯಗಳನು||
ಧ್ಯಾನಿಸುವೆನು ನಿನ್ನ ಅದ್ಭುತ ಕಾರ್ಯಗಳನು|
ನಿನ್ನ ಮಹೋನ್ನತ ಮಹಿಮಾ ಪ್ರಭಾವವನು||
ಪ್ರಭೂ, ನಿನ್ನನು ಸ್ತುತಿಸುವುದು ಸೃಷ್ಟಿಯೆಲ್ಲವೂ|
ಕೊಂಡಾಡುವುದು ನಿನ್ನನು ಭಕ್ತಸಮೂಹವು||
ಪ್ರಸಿದ್ದಪಡಿಸುವರು ನಿನ್ನ ರಾಜ್ಯದ ಮಹತ್ವವನು|
ವರ್ಣಿಸುವರವರು ನಿನ್ನ ಶಕ್ತಿ ಸಾಮರ್ಥ್ಯವನು||
ಶುಭಸಂದೇಶ: ಮಾರ್ಕ 9:2-13
ಆರು ದಿನಗಳ ಬಳಿಕ ಪೇತ್ರ, ಯಕೋಬ ಮತ್ತು ಯೊವಾನ್ನ ಇವರನ್ನು ಮಾತ್ರ ತಮ್ಮೊಡನೆ ಕರೆದುಕೊಂಡು ಯೇಸು ಎತ್ತರವಾದ ಒಂದು ಬೆಟ್ಟಕ್ಕೆ ಹೋದರು. ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಯೇಸು ರೂಪಾಂತರ ಹೊಂದಿದರು. ಆಗ ಅವರ ಉಡುಪು ಅತ್ಯಂತ ಶುಭ್ರವಾಗಿ ಹೊಳೆಯಿತು. ಜಗದ ಯಾವ ಅಗಸನಿಂದಲೂ ಮಡಿಮಾಡಲಾಗದಷ್ಟು ಅದು ಬಿಳುಪಾಯಿತು. ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಶಿಷ್ಯರಿಗೆ ಕಾಣಿಸಿತು. ಆಗ ಪೇತ್ರನು ಯೇಸುವಿಗೆ, " ಗುರುದೇವಾ, ನಾವು ಇಲ್ಲೆ ಇರುವುದು ಒಳ್ಳೆಯದು; ಅಪ್ಪಣೆಯಾಗಲಿ, ಮೂರು ಗುಡಾರಗಳನ್ನು ಕಟ್ಟುವೆವು; ತಮಗೊಂದು, ಮೋಶೆಗೊಂದು ಮತ್ತು ಮತ್ತು ಎಲೀಯನಿಗೊಂದು, " ಎಂದನು. ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂದೇ ತಿಳಿಯಲಿಲ್ಲ. ಶಿಷ್ಯರು ಅಷ್ಟು ಭಯಭ್ರಾಂತರಾಗಿದ್ದರು! ಅಷ್ಟರಲ್ಲಿ ಮೇಘವೊಂದು ಅವರನ್ನು ಆವರಿಸಿತು. ಅದರೊಳಗಿಂದ, " ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ಈತನ ಮಾತಿಗೆ ಕಿವಿಗೊಡಿ, "ಎಂಬ ವಾಣಿ ಕೇಳಿಸಿತು. ತಕ್ಷಣ, ಶಿಷ್ಯರು ಸುತ್ತಲೂ ನೋಡಲು ತಮ್ಮೊಂದಿಗೆ ಯೇಸುವೊಬ್ಬರನ್ನೇ ಹೊರತು ಬೇರೆ ಯಾರನ್ನೂ ಕಾಣಲಿಲ್ಲ. ಅನಂತರ ಯೇಸು ಮತ್ತು ಅವರ ಶಿಷ್ಯರು ಬೆಟ್ಟದಿಂದ ಇಳಿದುಬರುವಾಗ,. " ನರಪುತ್ರನು ಸತ್ತು ಪುನರುತ್ಥಾನಹೊಂದುವ ತನಕ ನೀವು ಕಂಡದ್ದನ್ನು ಯಾರಿಗೂ ಹೇಳಬೇಡಿ, " ಎಂದು ಆಜ್ಞಾಪಿಸಿದರು. ಅಂತೆಯೇ ಶಿಷ್ಯರು ಇದನ್ನು ಯಾರಿಗೂ ಹೇಳಲಿಲ್ಲ; ಆದರೂ 'ಸತ್ತು ಪುನರುತ್ಥಾನಹೊಂದುವುದು' ಎಂದರೆ ಏನು? ಎಂದು ತಮ್ಮತಮ್ಮೊಳಗೆ ಚರ್ಚಿಸಿಕೊಂಡರು. ಅನಂತರ, " ಎಲೀಯನು ಮೊದಲು ಬರಬೇಕಾದುದು ಅಗತ್ಯವೆಂದು ಶಾಸ್ತ್ರಜ್ಞರು ಹೇಳುತ್ತಾರಲ್ಲಾ, ಅದು ಹೇಗೆ? " ಎಂದು ಶಿಷ್ಯರು ಯೇಸುವನ್ನು ಕೇಳಿದರು. ಅದಕ್ಕೆ ಅವರು, " 'ಎಲೀಯನು ಮೊದಲು ಬಂದು ಎಲ್ಲವನ್ನೂ ಸಜ್ಜುಗೊಳಿಸುವನೆಂಬುದೇನೋ ನಿಜ. ಆದರೂ ನರಪುತ್ರನು ಜನರಿಂದ ತೀವ್ರಯಾತನೆಯನ್ನು ಅನುಭವಿಸಿ ಅವರಿಂದ ತಿರಸ್ಕೃತನಾಗಬೇಕು ,' ಎಂದು ಪವಿತ್ರಗ್ರಂಥದಲ್ಲಿ ಬರೆದಿದೆಯಲ್ಲವೆ? ಇದು ಹೇಗೆ? ಆದರೆ ನಾನು ನಿಮಗೆ ಹೇಳುವುದೇನೆಂದರೆ, 'ಎಲೀಯನು ಬಂದಾಗಿದೆ; ಆತನ ವಿಷಯವಾಗಿ ಮೊದಲೇ ಬರೆದಿರುವಂತೆ ಜನರು ತಮ್ಮ ಇಚ್ಛಾನುಸಾರ ಆತನನ್ನು ಹಿಂಸಿಸಿದ್ದೂ ಆಗಿದೆ' " ಎಂದರು.
No comments:
Post a Comment