19.01.23 - ಯೇಸು ಅನೇಕರನ್ನು ಗುಣಪಡಿಸಿದ್ದರಿಂದ ರೋಗಿಗಳೆಲ್ಲರೂ ಅವರನ್ನು ಮುಟ್ಟಬೇಕೆಂದು ಮುನ್ನುಗ್ಗಿ ಮೇಲೆ ಮೇಲೆ ಬೀಳುತ್ತಿದ್ದರು

ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 7:25--8:6

ಸಹೋದರರೇ, ತಮ್ಮ ಮುಖಾಂತರ ದೇವರನ್ನು ಅರಸುವವರನ್ನು ಯೇಸು ಸಂಪೂರ್ಣವಾಗಿ ಉದ್ಧಾರ ಮಾಡಬಲ್ಲರು. ಅಂಥವರ ಪರವಾಗಿ ವಿಜ್ಞಾಪಿಸಲೆಂದೇ ಯೇಸು ಸದಾ ಬದುಕಿರುವರು. ನಮಗೆ ಬೇಕಾಗಿದ್ದ ಪ್ರಧಾನ ಯಾಜಕರು ಯೇಸುವೇ. ಇವರು ಪರಿಶುದ್ಧರು, ನಿರ್ದೋಷಿ, ನಿಷ್ಕಳಂಕರು, ಪಾಪಿಗಳಿಂದ ಪ್ರತ್ಯೇಕಿಸಲಾದವರು, ಗಗನಮಂಡಲಗಳಿಗಿಂತಲೂ ಉನ್ನತದಲ್ಲಿರುವವರು. ಇವರು ಮಿಕ್ಕ ಪ್ರಧಾನ ಯಾಜಕರಂತೆ ಮೊದಲು ಸ್ವಂತ ಪಾಪಗಳಿಗಾಗಿಯೂ ಅನಂತರ ಜನರ ಪಾಪಗಳಿಗಾಗಿಯೂ ದಿನಂಪ್ರತಿ ಪರಿಹಾರ ಬಲಿಯನ್ನು ಒಪ್ಪಿಸಬೇಕಾಗಿಲ್ಲ. ಏಕೆಂದರೆ, ಜನರ ಪಾಪ ಪರಿಹಾರಕ್ಕಾಗಿ ಒಮ್ಮೆಗೇ ಶಾಶ್ವತವಾಗಿ ತಮ್ಮನ್ನು ತಾವೇ ಬಲಿಯಾಗಿ ಸಮರ್ಪಿಸಿಕೊಂಡರು. ಧರ್ಮಶಾಸ್ತ್ರ ನೇಮಿಸುವ ಪ್ರಧಾನ ಯಾಜಕರು ಕುಂದು ಕೊರತೆಯುಳ್ಳ ಮಾನವರು. ಆದರೆ, ಧರ್ಮಶಾಸ್ತ್ರದ ತರುವಾಯ ಬಂದ ಹಾಗೂ ಶಪಥದಿಂದ ಕೂಡಿದ ದೈವವಾಕ್ಯವು ಸದಾ ಸರ್ವಸಂಪೂರ್ಣರಾದ ಪುತ್ರನನ್ನೇ ಪ್ರಧಾನ ಯಾಜಕರನ್ನಾಗಿ ನೇಮಿಸುತ್ತದೆ. ಈಗ ಹೇಳುತ್ತಿರುವುದರ ಮುಖ್ಯಾಂಶ ಏನೆಂದರೆ: ಸ್ವರ್ಗದಲ್ಲಿ ಮಹೋನ್ನತ ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನರಾಗಿರುವಂಥ ಪ್ರಧಾನ ಯಾಜಕ ನಮಗಿದ್ದಾರೆ. ಅಲ್ಲಿ, ಆ ಪವಿತ್ರ ಸ್ಥಾನದಲ್ಲಿ ಮನುಷ್ಯರಿಂದಲ್ಲ, ದೇವರಿಂದಲೇ ನಿರ್ಮಿತವಾದ ನಿಜವಾದ ಗರ್ಭಗುಡಿಯಲ್ಲಿ, ಅವರು ಯಾಜಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬ ಪ್ರಧಾನಯಾಜಕನು ಕಾಣಿಕೆಗಳನ್ನೂ ಬಲಿಗಳನ್ನೂ ಅರ್ಪಿಸುವುದಕ್ಕಾಗಿಯೇ ನೇಮಕಗೊಂಡಿರುತ್ತಾನೆ. ಆದ್ದರಿಂದ ಸಮರ್ಪಿಸುವುದಕ್ಕೆ ನಮ್ಮ ಈ ಪ್ರಧಾನಯಾಜಕರಿಗೂ ಏನಾದರೂ ಇರಲೇಬೇಕು. ಇವರು ಧರೆಯಲ್ಲೇ ಇದ್ದಿದ್ದರೆ ಯಾಜಕರಾಗಿರುತ್ತಿರಲಿಲ್ಲ. ಏಕೆಂದರೆ ಧರ್ಮಶಾಸ್ತ್ರ ವಿಧಿಸುವ ಕಾಣಿಕೆಗಳನ್ನು ಸಮರ್ಪಿಸುವುದಕ್ಕೆ ಬೇರೆ ಯಾಜಕರು ಇದ್ದಾರೆ. ಸ್ವರ್ಗೀಯ ಗರ್ಭ ಗುಡಿಯ ಚಿಹ್ನೆ ಹಾಗೂ ಛಾಯೆಯಾಗಿರುವ ಆಲಯಗಳಲ್ಲಿ ಇಲ್ಲಿಯ ಯಾಜಕರು ಉಪಾಸನೆ ಮಾಡುತ್ತಾರೆ. ಮೋಶೆ ಗರ್ಭಗುಡಿಯನ್ನು ನಿರ್ಮಿಸಲು ಆರಂಭಿಸಿದಾಗ, ದೇವರು ಆತನಿಗೆ, “ಬೆಟ್ಟದ ಮೇಲೆ ನಾನು ತೋರಿಸಿದ ನಕ್ಷೆಯ ಪ್ರಕಾರವೇ ನೀನು ಎಲ್ಲವನ್ನೂ ನಿರ್ಮಿಸಬೇಕು,” ಎಂದು ಆಜ್ಞೆಯನ್ನಿತ್ತರು. ಯೇಸು, ಆ ಯಾಜಕರ ಸೇವೆಗಿಂತಲೂ ಶ್ರೇಷ್ಠವಾದ ಯಾಜಕಸೇವೆಯನ್ನು ಕೈಗೊಂಡಿದ್ದಾರೆ. ಯೇಸುವನ್ನು ಮಧ್ಯಸ್ಥರನ್ನಾಗಿ ಪಡೆದಿರುವ ಒಡಂಬಡಿಕೆಯು ಅಷ್ಟೇ ಶ್ರೇಷ್ಠವಾದುದು. ಏಕೆಂದರೆ ಅದು, ಹಿಂದಿನ ವಾಗ್ದಾನಗಳಿಗಿಂತಲೂ ಉತ್ತಮವಾದ ವಾಗ್ದಾನಗಳನ್ನು ಆಧರಿಸಿದೆ.
 ಪ್ರಭುವಿನ ವಾಕ್ಯ

ಕೀರ್ತನೆ: 40:7-8, 8-9, 10, 17 

ಶ್ಲೋಕ: ಪ್ರಭೂ, ನಿನ್ನ ಚಿತಾನುಸಾರ ನಡೆವುದೇ  ಪರಮಾವೇಶ. 

ನಾನೋಗೊಡುತ ಇಂತೆಂದೆ : “ಇಗೋ ನಾನೇ ಬರುತ್ತಿರುವೆ I
ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ? II
ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ I
ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ” II

ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ I
ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ II
ಬಚ್ಚಿಟ್ಟುಕೊಳ್ಳಲಿಲ್ಲ ನನ್ನೆದೆಯೊಳು ನಿನ್ನ ಸತ್ಸಂಬಂಧವನು I
ಪ್ರಕಟಿಸಿದೆನು ಜೀವೋದ್ಧಾರವನು, ನಿನ್ನ ಪ್ರಾಮಾಣಿಕತೆಯನು I

ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ ಪ್ರೀತಿ ಸತ್ಯತೆಯನು II
ಬಡವನು, ದುರ್ಬಲನು ಆದೆನಗೆ ಪ್ರಭೂ, ನೀ ಹಿತಚಿಂತಕನು I
ತಡಮಾಡಬೇಡ ದೇವಾ, ನೀನೆನಗುದ್ಧಾರಕನು, ಸಹಾಯಕನು II

ಮಾರ್ಕನು ಬರೆದ ಶುಭಸ೦ದೇಶ 3:7-12 


ಆ ಕಾಲದಲ್ಲಿ ಯೇಸುಸ್ವಾಮಿ ತಮ್ಮ ಶಿಷ್ಯರ ಜೊತೆಯಲ್ಲಿ ಗಲಿಲೇಯ ಸರೋವರದ ತೀರಕ್ಕೆ ಹೊರಟು ಹೋದರು. ಸಾವಿರಾರು ಜನರು ಅವರನ್ನು ಹಿಂಬಾಲಿಸಿದರು. ಈ ಜನರು ಯೇಸು ಮಾಡುತ್ತಿದ್ದ ಮಹತ್ಕಾರ್ಯಗಳ ಸಮಾಚಾರವನ್ನು ಕೇಳಿ, ಗಲಿಲೇಯ ಪ್ರಾಂತ್ಯದಿಂದ, ಜುದೇಯ ಪ್ರಾಂತ್ಯದಿಂದ, ಜೆರುಸಲೇಮ್ ನಗರದಿಂದ, ಇದು ಮೇಯ ಪ್ರಾಂತ್ಯದಿಂದ ಜೋರ್ಡನ್ ನದಿಯ ಪೂರ್ವಪ್ರದೇಶ ಹಾಗೂ ಟೈರ್-ಸಿದೋನ್ ಪಟ್ಟಣಗಳ ಸುತ್ತಮುತ್ತಲಿಂದ ಬಂದಿದ್ದರು. ಜನಸಂದಣಿ ಅಧಿಕವಾಗುತ್ತಿದ್ದುದರಿಂದ ಅವರು ತಮ್ಮ ಮೈಮೇಲೆ ಬಿದ್ದಾರೆಂದು ಯೇಸು, ತಮಗೆ ಒಂದು ದೋಣಿಯನ್ನು ಸಿದ್ಧವಾಗಿಡಲು ಶಿಷ್ಯರಿಗೆ ಹೇಳಿದರು. ಯೇಸು ಅನೇಕರನ್ನು ಗುಣಪಡಿಸಿದ್ದರಿಂದ ರೋಗಿಗಳೆಲ್ಲರೂ ಅವರನ್ನು ಮುಟ್ಟಬೇಕೆಂದು ಮುನ್ನುಗ್ಗಿ ಮೇಲೆ ಮೇಲೆ ಬೀಳುತ್ತಿದ್ದರು. ದೆವ್ವಗಳು ಸಹ ಅವರನ್ನು ಕಂಡಾಗಲೆಲ್ಲಾ ಅವರ ಪಾದಕ್ಕೆರಗಿ, “ನೀವು ದೇವರ ಪುತ್ರ", ಎಂದು ಕಿರುಚುತ್ತಿದ್ದವು. ಆದರೆ ಯೇಸು, ತಾವು ಯಾರೆಂಬುದನ್ನು ಪ್ರಕಟಿಸಬಾರದೆಂದು ಅವುಗಳಿಗೆ ಕಟ್ಟಪ್ಪಣೆ ಮಾಡುತ್ತಿದ್ದರು. 
ಪ್ರಭು ಕ್ರಿಸ್ತರ ಶುಭಸ೦ದೇಶ

18.01.23 - “ಸಬ್ಬತ್‍ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ?"

ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 7:1-3, 15-17

ಸಹೋದರರೇ, ಈ ಮೆಲ್ಕಿಸದೇಕನು ಸಾಲೇಮ್ ನಗರದ ರಾಜನೂ ಮಹೋನ್ನತ ದೇವರ ಯಾಜಕನೂ ಆಗಿದ್ದನು. ಶತ್ರುರಾಜರನ್ನು ಗೆದ್ದು ಹಿಂದಿರುಗುತ್ತಿದ್ದ ಅಬ್ರಹಾಮನನ್ನು ಈತನು ಎದುರುಗೊಂಡು ಆಶೀರ್ವದಿಸಿದನು. ಆಗ ಅಬ್ರಹಾಮನು ತಾನು ಗೆದ್ದು ತಂದಿದ್ದ ಎಲ್ಲದರಲ್ಲೂ ದಶಮಾಂಶವನ್ನು ಆತನಿಗೆ ಕೊಟ್ಟು ಗೌರವಿಸಿದನು. ಮೆಲ್ಕಿಸದೇಕ ಎಂಬ ಹೆಸರಿನ ಮೂಲಾರ್ಥ, ‘ನ್ಯಾಯನೀತಿಯ ಅರಸ.’ ಅಲ್ಲದೆ, ಆತನು ಸಾಲೇಮಿನ ಅರಸನೂ ಆಗಿದ್ದನು. ಆದ್ದರಿಂದ ‘ಶಾಂತಿಸಮಾಧಾನದ ಅರಸ’ ಎಂಬ ಅರ್ಥವೂ ಉಂಟು.ಆತನಿಗೆ ತಂದೆತಾಯಿಯಾಗಲಿ ವಂಶಾವಳಿಯಾಗಲಿ ಇಲ್ಲ. ಆತನ ಜನ್ಮಕ್ಕೆ ಆದಿಯಾಗಲಿ, ಜೀವನಕ್ಕೆ ಅಂತ್ಯವಾಗಲಿ ಇಲ್ಲ. ಆತನು ದೇವಪುತ್ರನನ್ನು ಹೋಲುತ್ತಾನೆ. ಶಾಶ್ವತ ಯಾಜಕನಾಗಿ ಉಳಿಯುತ್ತಾನೆ. ಹೀಗೆ ಕಾಣಿಸಿಕೊಂಡ ಯಾಜಕ ಮೆಲ್ಕಿಸದೇಕನನ್ನು ಹೋಲುವುದರಿಂದ ನಾವು ಹೇಳುವ ವಿಷಯ ಇನ್ನೂ ಸ್ಪಷ್ಟವಾಗುತ್ತದೆ. ಇವರು ಯಾಜಕರಾದುದು ಅಳಿವಿಲ್ಲದ ಜೀವಶಕ್ತಿಯಿಂದ; ಕುಲಗೋತ್ರಗಳ ನಿಯಮಾನುಸಾರವಾದ ದೈಹಿಕ ಹುಟ್ಟಿನಿಂದಲ್ಲ. “ನೀನು ಸದಾಕಾಲವೂ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಯಾಜಕನು,” ಎಂದು ಪವಿತ್ರಗ್ರಂಥ ಸಮರ್ಥಿಸುತ್ತದೆ. 
ಪ್ರಭುವಿನ ವಾಕ್ಯ

ಕೀರ್ತನೆ: 110:1, 2, 3, 4 

ಶ್ಲೋಕ: ಮೆಲ್ಕಿಸದೇಕ್ ಪರಂಪರೆಯ ಯಾಜಕ ನೀ ನಿರುತ. 

ನುಡಿದಿಹನು ಇಂತೆಂದು ಪ್ರಭು ನನ್ನೊಡೆಯನಿಗೆ I
“ಆಸೀನನಾಗಿರು ನೀನು ನನ್ನ ಬಲಗಡೆಗೆ I
ಹಗೆಗಳನು ನಿನಗೆ ಕಾಲ್ಮಣೆಯಾಗಿಸುವವರೆಗೆ” II
ಸಿಯೋನಿನ ಹೊರಗು ವಿಸ್ತರಿಸುವನು ಪ್ರಭು ನಿನ್ನ ರಾಜ್ಯದಾಳಿಕೆಯನು I

ನಿನ್ನ ವೈರಿ ವಿರೋಧಿಗಳ ನಟ್ಟನಡುವೆಯೆ ದೊರೆತನ ಮಾಡುವೆ ನೀನು II
ಸೇನೆಯನು ನೀ ಅಣಿಗೊಳಿಸುವ ದಿನದೊಳು I
ಸೇರಿಕೊಳ್ವರು ತಾವಾಗಿಯೇ ಪ್ರಜೆಗಳು I
ಶುಭ್ರ ವಸ್ತ್ರಧರಿಸಿ ನಿನ್ನ ಯುವಕ ಯೋಧರು I

ಉದಯಕಾಲದಿಬ್ಬನಿಯಂತೆ ಇಳಿದು ಬರುವರು II
“ಮೆಲ್ಕಿಸೆದೆಕ್ ಪರಂಪರೆಯ ಯಾಜಕ ನೀ ನಿರುತ” I
ಬದಲಿಸನು ಪ್ರಭು ತಾನಿತ್ತ ಪ್ರಮಾಣದೀ ಮಾತ II

ಮಾರ್ಕನು ಬರೆದ ಶುಭಸ೦ದೇಶ 3:1-6 


ಆ ಕಾಲದಲ್ಲಿ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಪುನಃ ಹೋದರು. ಅಲ್ಲಿ ಒಬ್ಬ ಬತ್ತಿದ ಕೈಯುಳ್ಳವನು ಇದ್ದನು. ಅವನನ್ನು ಸಬ್ಬತ್‍ದಿನದಲ್ಲಿ ಗುಣಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪು ಹೊರಿಸಬಹುದೆಂಬ ಉದ್ದೇಶದಿಂದ ಕೆಲವರು ಹೊಂಚು ಹಾಕುತ್ತಿದ್ದರು. ಯೇಸು ಬತ್ತಿದ ಕೈಯುಳ್ಳವನಿಗೆ, “ಎದ್ದು ಮುಂದಕ್ಕೆ ಬಾ,” ಎಂದರು. ಬಳಿಕ ಅಲ್ಲಿದ್ದವರನ್ನು ಉದ್ದೇಶಿಸಿ, “ಸಬ್ಬತ್‍ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ ಹೇಳಿ,” ಎಂದು ಕೇಳಲು ಅವರು ಮಾತೇ ಎತ್ತಲಿಲ್ಲ. ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ದಿಟ್ಟಿಸಿ, ಅವರ ಹೃದಯ ಕಲ್ಲಾಗಿರುವುದನ್ನು ಕಂಡು, ಮನನೊಂದು, ಬತ್ತಿದ ಕೈಯುಳ್ಳವನಿಗೆ, “ನಿನ್ನ ಕೈಯನ್ನು ಚಾಚು,” ಎಂದರು. ಅವನು ಚಾಚಿದನು, ಅದು ಸಂಪೂರ್ಣವಾಗಿ ಸ್ವಸ್ಥವಾಯಿತು. ಫರಿಸಾಯರು ಅಲ್ಲಿಂದ ಹೊರಗೆ ಹೋದರು. ಕೂಡಲೇ ಹೆರೋದಿಯರೊಡನೆ ಸೇರಿಕೊಂಡು ಯೇಸುವನ್ನು ಕೊಲೆಮಾಡಲು ಒಳಸಂಚು ಹೂಡಿದರು. 
ಪ್ರಭು ಕ್ರಿಸ್ತರ ಶುಭಸ೦ದೇಶ

17.01.23 - "ಸಬ್ಬತ್‍ ದಿನ ಇರುವುದು ಮನುಷ್ಯನಿಗಾಗಿ ಹೊರತು ಮನುಷ್ಯ ಇರುವುದು ಸಬ್ಬತ್ತಿಗಾಗಿ ಅಲ್ಲ"

ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 6:10-20 


ಸಹೋದರರೇ, ನೀವು ದೇವಜನರಿಗೆ ಉಪಚಾರಮಾಡಿದ್ದೀರಿ, ಮಾಡುತ್ತಲೂ ಇದ್ದೀರಿ. ದೇವರ ಹೆಸರಿನಲ್ಲಿ ನೀವು ಮಾಡಿದ ಪ್ರೀತಿಪೂರ್ವಕವಾದ ಸೇವೆಯನ್ನು ದೇವರು ಮರೆಯುವಂತಿಲ್ಲ, ಅವರು ಅನ್ಯಾಯ ಮಾಡುವವರೇನೂ ಅಲ್ಲ. ನೀವು ಹೊಂದಿರುವ ನಿರೀಕ್ಷೆ ಪೂರ್ಣವಾಗಿ ಕೈಗೂಡುವಂತೆ ನಿಮ್ಮಲ್ಲಿ ಪ್ರತಿಯೊಬ್ಬನೂ ಮೊದಲಿನ ಆಸಕ್ತಿಯನ್ನು ಕಡೆಯತನಕವೂ ತೋರಿಸಬೇಕೆಂದು ಹಾರೈಸುತ್ತೇನೆ. ನೀವು ಆಲಸಿಗಳಾಗಿರಬಾರದು; ವಿಶ್ವಾಸದಿಂದಲೂ ಬಹು ತಾಳ್ಮೆಯಿಂದಲೂ ದೈವ ವಾಗ್ದಾನಗಳನ್ನು ಬಾಧ್ಯವಾಗಿಸಿಕೊಂಡವರನ್ನು ಅನುಸರಿಸಬೇಕು. ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತಮ್ಮ ಮಾತನ್ನು ಈಡೇರಿಸುವುದಾಗಿ ಶಪಥಮಾಡಿದರು. ತಮಗಿಂತಲೂ ಮೇಲಾದವರಾರೂ ಇಲ್ಲವಾದ ಕಾರಣ ತಮ್ಮ ಸ್ವಂತ ಹೆಸರಿನಲ್ಲೇ ಶಪಥಮಾಡಿದರು. “ಖಂಡಿತವಾಗಿಯೂ ನಾನು ನಿನ್ನನ್ನು ಆಶೀರ್ವದಿಸುವೆನು; ನಿನ್ನ ಸಂತಾನವನ್ನು ಹೆಚ್ಚಿಸಿಯೇ ತೀರುವೆನು,” ಎಂದರು. ಅಂತೆಯೇ, ಅಬ್ರಹಾಮನು ದೀರ್ಘಕಾಲ ಕಾದಿದ್ದು ದೇವರ ವಾಗ್ದಾನದ ಫಲವನ್ನು ಪಡೆದನು. ಮನುಷ್ಯರು ತಮಗಿಂತಲೂ ಹೆಚ್ಚಿನವರ ಮೇಲೆ ಆಣೆಯಿಡುವುದು ವಾಡಿಕೆ. ಹೀಗೆ ಆಣೆಯಿಟ್ಟು ಪ್ರಮಾಣಮಾಡಿದರೆ ಎಲ್ಲ ವಿವಾದಗಳು ಕೊನೆಗೊಳ್ಳುತ್ತವೆ. ಹಾಗೆಯೇ, ದೇವರು ತಮ್ಮ ವಾಗ್ದಾನವನ್ನು ಬಾಧ್ಯವಾಗಿ ಪಡೆಯುವವರಿಗೆ ತಮ್ಮ ಸಂಕಲ್ಪ ಅಚಲವಾದುದು ಎಂಬುದನ್ನು ಸ್ಪಷ್ಟಪಡಿಸಲು, ಶಪಥಮಾಡಿ ಸ್ಥಿರಪಡಿಸಿದರು. ದೇವರ ವಾಗ್ದಾನ ಮತ್ತು ಶಪಥ ಇವೆರಡೂ ಅಚಲವಾದ ಆಧಾರಗಳು. ಇವುಗಳ ವಿಷಯವಾಗಿ ದೇವರು ನಮಗೆ ಮೋಸಮಾಡುವವರೇ ಅಲ್ಲ. ಇದರಿಂದಾಗಿ, ದೇವರ ಆಶ್ರಯಕ್ಕಾಗಿ ಧಾವಿಸಿಬಂದಿರುವ ನಾವು, ನಮ್ಮ ಮುಂದಿರಿಸಿರುವ ನಂಬಿಕೆ ನಿರೀಕ್ಷೆಯಲ್ಲಿ ಸ್ಥಿರವಾಗಿ ನಿಲ್ಲಲು ಬಲವಾದ ಪ್ರೋತ್ಸಾಹ ದೊರೆತಂತಾಯಿತು. ಈ ನಂಬಿಕೆ, ನಿರೀಕ್ಷೆ, ನಮ್ಮ ಬಾಳನೌಕೆಯ ಸ್ಥಿರವಾದ ಹಾಗೂ ಸುರಕ್ಷಿತವಾದ ಲಂಗರಿನಂತಿದೆ. ಇದು ತೆರೆಯ ಹಿಂದಿರುವ ಸ್ವರ್ಗೀಯ ಗರ್ಭಗುಡಿಯನ್ನು ಪ್ರವೇಶಿಸುವಂಥದ್ದು. ಸದಾಕಾಲವೂ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಪ್ರಧಾನಯಾಜಕರಾದ ಯೇಸು ನಮ್ಮ ಮುಂದಾಳಾಗಿ ಹೋಗಿ ಆ ಗರ್ಭಗುಡಿಯನ್ನು ಪ್ರವೇಶಿಸಿದ್ದಾರೆ. 
ಪ್ರಭುವಿನ ವಾಕ್ಯ

ಕೀರ್ತನೆ: 111:1-2, 4-5, 9-10 
ಶ್ಲೋಕ: ತನ್ನೊಡಂಬಡಿಕೆಯ ಚಿರ ನೆನಪಿರುವುಸು ಆತನಿಗೆ. 

ಸಜ್ಜನರ ಸಂಘದೊಳು, ಸಭಾಸದಸ್ಯರೊಳು ಕೂಡಿ I
ಹೊಗಳುವೆ ಪ್ರಭುವನು ಮನಃಪೂರ್ವಕವಾಗಿ ಹಾಡಿ II
ಮಹತ್ತಾದವು ಪ್ರಭುವಿನಾ ಕಾರ್ಯಗಳು I
ಕೊಂಡಾಡುವರು ಅವುಗಳನು ಭಕ್ತಾದಿಗಳು II

ಆತನ ಅದ್ಭುತಕಾರ್ಯ ಸ್ಮರಣೀಯ I
ಕರುಣಾವಂತ ಪ್ರಭು, ಪ್ರೀತಿಮಯ II
ಆಹಾರವನೀಯುವನು ಭಯಭಕ್ತಿಯುಳ್ಳವರಿಗೆ I
ತನ್ನೊಡಂಬಡಿಕೆಯ ಚಿರ ನೆನಪಿರುವುದು ಆತನಿಗೆ II

ವಿಮೋಚನೆಯನಿತ್ತಿಹನು ಪ್ರಭು ತನ್ನ ಪ್ರಜೆಗೆ I
ಸ್ಥಿರಸ್ಥಾಪಿತವಾಗಿಹುದು ಆತನ ಒಡಂಬಡಿಕೆ I
ಪರಿಶುದ್ಧ, ಪರಮಪೂಜ್ಯ ಆತನ ನಾಮಾಂಕೆ II

ಸುಜ್ಞಾನಕ್ಕೆ ಮೂಲವು ದೈವಭಯವು I
ಅದರ ಪಾಲನೆಯು ವಿವೇಕತನವು I
ಪ್ರಭುವಿಗೆ ಸ್ತೋತ್ರ ಸದಾಕಾಲವು II

ಘೋಷಣೆ                  ಕೀರ್ತನೆ  16:1-13
ಅಲ್ಲೆಲೂಯ, ಅಲ್ಲೆಲೂಯ!
ನುಡಿಯಲಿ  ಪ್ರಭು  ಸದಾ  ಪ್ರಾಮಾಣಿಕನು |  ನಡೆಯಲಿ  ಪ್ರಭು   ಸದಾ   ಪ್ರೀತಿಮಯನು||
ಅಲ್ಲೆಲೂಯ!

ಮಾರ್ಕನು ಬರೆದ ಶುಭಸ೦ದೇಶ 2:23-28 


ಅದೊಂದು ಸಬ್ಬತ್‍ದಿನ. ಯೇಸುಸ್ವಾಮಿ ಗೋದಿಯ ಹೊಲಗಳಲ್ಲಿ ಹಾದು ಹೋಗುತ್ತಿದ್ದರು. ಜೊತೆಯಲ್ಲಿದ್ದ ಅವರ ಶಿಷ್ಯರು ತೆನೆಗಳನ್ನು ಕೀಳಲಾರಂಭಿಸಿದರು. ಇದನ್ನು ಕಂಡ ಫರಿಸಾಯರು,, “ನೋಡು, ಸಬ್ಬತ್‍ದಿನದಲ್ಲಿ ನಿಷಿದ್ಧವಾದುದನ್ನು ನಿನ್ನ ಶಿಷ್ಯರು ಮಾಡುತ್ತಿದ್ದಾರೆ, ಇದು ಸರಿಯೇ?” ಎಂದು ಯೇಸುವನ್ನು ಪ್ರಶ್ನಿಸಿದರು. ಅದಕ್ಕೆ ಯೇಸು, “ಹಿಂದೆ, ಅರಸ ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದು, ಉಣ್ಣಲು ಏನೂ ಇಲ್ಲದಿದ್ದಾಗ ಏನು ಮಾಡಿದರೆಂಬುದನ್ನು ನೀವು ಓದಿರಬೇಕಲ್ಲವೇ? ಪ್ರಧಾನಯಾಜಕ ಅಬಿಯಾತರನ ಕಾಲದಲ್ಲಿ ಅವನು ದೇವಮಂದಿರದೊಳಕ್ಕೆ ಹೋಗಿ, ಯಾಜಕನ ಹೊರತು ಬೇರೆ ಯಾರೂ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತಿಂದ; ಅಲ್ಲದೆ, ತನ್ನ ಸಂಗಡ ಇದ್ದವರಿಗೂ ಕೊಟ್ಟನಲ್ಲವೇ?’ ಎಂದು ಅವರನ್ನು ಕೇಳಿದರು. ಬಳಿಕ ಯೇಸು ಅವರಿಗೆ, “ಸಬ್ಬತ್‍ ದಿನ ಇರುವುದು ಮನುಷ್ಯನಿಗಾಗಿ ಹೊರತು ಮನುಷ್ಯ ಇರುವುದು ಸಬ್ಬತ್ತಿಗಾಗಿ ಅಲ್ಲ. ಆದುದರಿಂದ ನರಪುತ್ರನು ಸಬ್ಬತ್ತಿಗೂ ಒಡೆಯ,” ಎಂದರು. 
ಪ್ರಭು ಕ್ರಿಸ್ತರ ಶುಭಸ೦ದೇಶ

16.01.23

ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 5:1-10

ಪ್ರತಿಯೊಬ್ಬ ಪ್ರಧಾನಯಾಜಕ ಜನರ ಮಧ್ಯದಿಂದ ಆರಿಸಲಾದವನು; ಜನರ ಪರವಾಗಿ ದೇವರ ಸನ್ನಿಧಿಯಲ್ಲಿ ಸೇವೆಸಲ್ಲಿಸಲು ಮತ್ತು ಪಾಪಪರಿಹಾರಕ್ಕಾಗಿ ಬಲಿಗಳನ್ನೂ ಕಾಣಿಕೆಗಳನ್ನೂ ಸಮರ್ಪಿಸಲು ನೇಮಕಗೊಂಡವನು. ತಾನೂ ದುರ್ಬಲ ಮಾನವನಾದ ಕಾರಣ, ಆತನು ಅಜ್ಞಾನಿಗಳನ್ನೂ ದುರ್ಮಾರ್ಗಿಗಳನ್ನೂ ಸಹಾನುಭೂತಿಯಿಂದ ಕಾಣಬಲ್ಲನು. ಜನರಿಗೋಸ್ಕರ ಹೇಗೋ ಹಾಗೆಯೇ ತನ್ನ ದೌರ್ಬಲ್ಯದ ನಿಮಿತ್ತ ತನಗೋಸ್ಕರವೂ ಆತನು ಪಾಪಪರಿಹಾರಕಬಲಿಯನ್ನು ಅರ್ಪಿಸಬೇಕಾಗಿದೆ. ಅಲ್ಲದೆ, ಪ್ರಧಾನಯಾಜಕನೆಂಬ ಗೌರವಪದವಿಯನ್ನು ತನ್ನಷ್ಟಕ್ಕೆ ತಾನೇ ಯಾರೂ ವಹಿಸಿಕೊಳ್ಳರು. ಆರೋನನಂತೆ ಅವರೂ ದೇವರಿಂದ ಕರೆ ಹೊಂದಿದವರಾಗಿರಬೇಕು. ಅದೇ ರೀತಿ ಕ್ರಿಸ್ತಯೇಸು, ಪ್ರಧಾನಯಾಜಕನೆಂಬ ಉನ್ನತ ಪದವಿಗೆ ತನ್ನನ್ನೇ ಏರಿಸಿಕೊಳ್ಳಲಿಲ್ಲ. “ನೀನೇ ನನ್ನ ಪುತ್ರನು; ನಾನೇ ನಿನ್ನನ್ನು ಪಡೆದಿದ್ದೇನೆ,” ಎಂದ ದೇವರೇ ಅವರನ್ನು ಆ ಪದವಿಗೆ ಏರಿಸಿದರು. ಅವರೇ ಮತ್ತೊಂದು ಕಡೆಯಲ್ಲಿ: “ನೀನು ಸದಾಕಾಲವೂ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಯಾಜಕ,” ಎಂದಿದ್ದಾರೆ. ಕ್ರಿಸ್ತಯೇಸು ಈ ಭೂಲೋಕದಲ್ಲಿದ್ದಾಗ, ತಮ್ಮನ್ನು ಮರಣದಿಂದ ಕಾಪಾಡಲು‍ ಶಕ್ತರಾದ ದೇವರನ್ನು ಉಚ್ಚಸ್ವರದಿಂದ ಕೂಗುತ್ತಾ ಕಣ್ಣೀರಿಡುತ್ತಾ ವಿನಂತಿಸಿ ಪ್ರಾರ್ಥಿಸಿದರು. ಅವರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು. ಯೇಸು, ದೇವರ ಪುತ್ರರಾಗಿದ್ದರೂ ಹಿಂಸೆಬಾಧೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿಂದ ಅರಿತುಕೊಂಡರು. ಹೀಗೆ, ಅವರು ಸ್ವತಃ ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ಶಾಶ್ವತ ಜೀವೋದ್ಧಾರಕ್ಕೆ ಕಾರಣರಾದರು. ಅಲ್ಲದೆ, ದೇವರಿಂದ, “ಮೆಲ್ಕಿಸದೇಕನ ಪರಂಪರೆಗೆ ಸೇರಿದ ಪ್ರಧಾನಯಾಜಕ,” ಎನಿಸಿಕೊಂಡರು. 
ಪ್ರಭುವಿನ ವಾಕ್ಯ

ಕೀರ್ತನೆ: 110:1, 2, 3, 4 ನುಡಿದಿಹನು ಇಂತೆಂದು ಪ್ರಭು ನನ್ನೊಡೆಯನಿಗೆ I

“ಆಸೀನನಾಗಿರು ನೀನು ನನ್ನ ಬಲಗಡೆಗೆ I
ಹಗೆಗಳನು ನಿನಗೆ ಕಾಲ್ಮಣೆಯಾಗಿಸುವವರೆಗೆ” II
ಸಿಯೋನಿನ ಹೊರಗು ವಿಸ್ತರಿಸುವನು ಪ್ರಭು ನಿನ್ನ ರಾಜ್ಯದಾಳಿಕೆಯನು I
ನಿನ್ನ ವೈರಿ ವಿರೋಧಿಗಳ ನಟ್ಟನಡುವೆಯೆ ದೊರೆತನ ಮಾಡುವೆ ನೀನು II

ಸೇನೆಯನು ನೀ ಅಣಿಗೊಳಿಸುವ ದಿನದೊಳು I
ಸೇರಿಕೊಳ್ವರು ತಾವಾಗಿಯೇ ಪ್ರಜೆಗಳು I
ಶುಭ್ರ ವಸ್ತ್ರಧರಿಸಿ ನಿನ್ನ ಯುವಕ ಯೋಧರು I

ಉದಯಕಾಲದಿಬ್ಬನಿಯಂತೆ ಇಳಿದು ಬರುವರು II
“ಮೆಲ್ಕಿಸೆದೆಕ್ ಪರಂಪರೆಯ ಯಾಜಕ ನೀ ನಿರುತ” I
ಬದಲಿಸನು ಪ್ರಭು ತಾನಿತ್ತ ಪ್ರಮಾಣದೀ ಮಾತ II

ಮಾರ್ಕನು ಬರೆದ ಶುಭಸ೦ದೇಶ 2:18-22 

ಯೊವಾನ್ನನ ಶಿಷ್ಯರು ಮತ್ತು ಫರಿಸಾಯರು ಉಪವಾಸವ್ರತಗಳನ್ನು ಕೈಗೊಂಡಿದ್ದ ಒಂದು ಸಂದರ್ಭದಲ್ಲಿ ಕೆಲವು ಜನರು ಯೇಸುಸ್ವಾಮಿಯ ಬಳಿಗೆ ಬಂದರು. ಅವರು, “ಯೊವಾನ್ನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಉಪವಾಸವ್ರತವನ್ನು ಕೈಗೊಳ್ಳುತ್ತಾರೆ, ಆದರೆ ನಿನ್ನ ಶಿಷ್ಯರೇಕೆ ಹಾಗೆ ಮಾಡುವುದಿಲ್ಲ” ಎಂದು ಕೇಳಿದರು. ಅದಕ್ಕೆ ಯೇಸು, “ಮದುವಣಿಗನು ಜೊತೆಯಲ್ಲಿ ಇರುವಾಗ ಅವನ ಆಪ್ತರು ಉಪವಾಸ ಮಾಡುವುದುಂಟೆ? ಖಂಡಿತವಾಗಿಯೂ ಇಲ್ಲ. ಅವನು ತಮ್ಮ ಜೊತೆಯಲ್ಲಿರುವಷ್ಟು ಕಾಲ ಅವರು ಉಪವಾಸ ಮಾಡಲಾಗದು. ಮದುವಣಿಗನು ಅವರಿಂದ ಅಗಲಬೇಕಾದ ಕಾಲ ಬರುವುದು. ಆಗ ಅವರು ಉಪವಾಸ ಮಾಡುವರು. “ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ. ಹಾಕಿದಲ್ಲಿ, ಹೊಸ ತೇಪೆಯು ಹಳೆಯ ಅಂಗಿಯನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ. ಅಂತೆಯೇ ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ಯಾರೂ ತುಂಬಿಡುವುದಿಲ್ಲ. ತುಂಬಿಟ್ಟರೆ, ಅದರಿಂದ ಬುದ್ದಲಿಗಳು ಬಿರಿಯುತ್ತವೆ. ಮದ್ಯವು ಮತ್ತು ಬುದ್ದಲಿಗಳು ಎರಡೂ ನಷ್ಟವಾಗುತ್ತವೆ. ಆದುದರಿಂದ ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡಬೇಕು,” ಎಂದರು.
ಪ್ರಭು ಕ್ರಿಸ್ತರ ಶುಭಸ೦ದೇಶ

15.01.23 - “ಇಗೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ"

 ಮೊದಲನೇ ವಾಚನ: ಯೆಶಾಯ 49:3, 5-6


ಆತನೆನಗೆ ಇಂತೆಂದ: “ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ.” ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ; ನನ್ನ ಶಕ್ತಿಸಾಮರ್ಥ್ಯ ಇರುವುದು ಆ ದೇವರಲಿ. ಮತ್ತೆ ಆತ ಇಂತೆಂದನು ನನಗೆ: “ಮಹತ್ಕಾರ್ಯವೇನೂ ಅಲ್ಲ ನನ್ನ ದಾಸನಾದ ನಿನಗೆ ಕುಲಗಳನು ಉದ್ಧರಿಸುವ ಮಾತ್ರಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವಜನಾಂಗಗಳಿಗೆ ನನ್ನ ರಕ್ಷಣೆ ವ್ಯಾಪಿಸಿರುವಂತೆ ಮಾಡಲು ಜಗದ ಕಟ್ಟಕಡೆಯವರೆಗೆ.”

ಕೀರ್ತನೆ: 40:2, 4, 7-8, 8-9, 10

ಶ್ಲೋಕ: ಪ್ರಭೂ, ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ

ಮೇಲೆತ್ತಿದನು ವಿನಾಶದ ಕೆಸರಿಂದ, ಕರಾಳ ಕೂಪದಿಂದ |
ಗೋರ್ಕಲ್ಲ ಮೇಲಿರಿಸಿ ಹೆಜ್ಜೆಯಿಡಿಸಿದನು ಅತಿ ಧೈರ್ಯದಿಂದ ||
ಪ್ರಭುವಿನಲ್ಲೆ ಭರವಸೆ ಇಟ್ಟು ನಡೆವಾತನು ಧನ್ಯನು |
ಗರ್ವಿಗಳನು, ಸುಳ್ಳುದೇವರನು, ಹಿಂಬಾಲಿಸನವನು || (ಶ್ಲೋಕ)

ನಾನೋಗೊಡುತ ಇಂತೆಂದೆ: “ಇಗೋ ನಾನೇ ಬರುತ್ತಿರುವೆ |
ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ? ||
ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ |
ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ”|| (ಶ್ಲೋಕ)

ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ ||
ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ ||
ಬಚ್ಚಿಟ್ಟುಕೊಳ್ಳಲಿಲ್ಲ ನನ್ನೆದೆಯೊಳು ನಿನ್ನ ಸತ್ಸಂಬಂಧವನು |
ಪ್ರಕಟಿಸಿದೆನು ಜೀವೋದ್ಧಾರವನು, ನಿನ್ನ ಪ್ರಾಮಾಣಿಕತೆಯನು |
ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ ಪ್ರೀತಿ ಸತ್ಯತೆಯನು || (ಶ್ಲೋಕ)

ಎರಡನೇ ವಾಚನ: 1 ಕೊರಿಂಥಿಯರಿಗೆ 1:1-3

ಕ್ರಿಸ್ತ ಯೇಸುವಿನಲ್ಲಿ ಪುನೀತರಾಗಿ ದೇವಜನರಾಗಲು ಕರೆಹೊಂದಿರುವ ಕೊರಿಂಥದ ಶ್ರೀಸಭೆಯವರಿಗೂ ಹಾಗೂ ಪ್ರಭು ಯೇಸುಕ್ರಿಸ್ತರನ್ನು ಎಲ್ಲೆಡೆಯೂ ನಾಮಸ್ಮರಣೆ ಮಾಡುವ ಸರ್ವಜನರಿಗೂ - ದೇವರ ಚಿತ್ತಾನುಸಾರ ಕ್ರಿಸ್ತಯೇಸುವಿನ ಪ್ರೇಷಿತನಾಗಲು ಕರೆಹೊಂದಿದ ಪೌಲನಾದ ನಾನು ಸಹೋದರ ಸೊಸ್ಥೆನನೊಂದಿಗೆ ಸೇರಿ ಬರೆಯುವ ಪತ್ರ. ಯೇಸುಕ್ರಿಸ್ತರು ನಮಗೂ ಸಮಸ್ತ ದೇವಜನರಿಗೂ ಪ್ರಭುವಾಗಿದ್ದಾರೆ. ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸುಕ್ರಿಸ್ತರಿಂದಲೂ ನಿಮಗೆ ಅನುಗ್ರಹ ಮತ್ತು ಶಾಂತಿಸಮಾಧಾನ ಲಭಿಸಲಿ!

ಶುಭಸಂದೇಶ: ಯೊವಾನ್ನ 1:29-34

ಮರುದಿನ ಯೊವಾನ್ನನು, ತಾನಿದ್ದಲ್ಲಿಗೇ ಯೇಸು ಬರುತ್ತಿರುವುದನ್ನು ಕಂಡು, “ಇಗೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ; ಲೋಕದ ಪಾಪಗಳನ್ನು ಪರಿಹರಿಸುವವರು ಇವರೇ. ಇವರು ‘ನನ್ನ ಬಳಿಕ ಬಂದವರಾದರೂ ನನಗಿಂತಲೂ ಮೊದಲೇ ಇದ್ದವರು; ಆದುದರಿಂದ ಇವರು ನನಗಿಂತಲೂ ಶ್ರೇಷ್ಠರು,’ ಎಂದು ನಾನು ಹೇಳಿದುದು ಇವರನ್ನು ಕುರಿತೇ. ಇಸ್ರಯೇಲರಿಗೆ ಇವರನ್ನು ತೋರ್ಪಡಿಸಬೇಕೆಂದೇ ನಾನು ನೀರಿನಿಂದ ಸ್ನಾನದೀಕ್ಷೆ ಕೊಡುತ್ತಾ ಬಂದೆನು; ಬರಬೇಕಾಗಿದ್ದವರು ಇವರೇ ಎಂದು ನನಗೂ ತಿಳಿದಿರಲಿಲ್ಲ,” ಎಂದು ನುಡಿದನು. ಯೊವಾನ್ನನು ತನ್ನ ಸಾಕ್ಷ್ಯವನ್ನು ಮುಂದುವರಿಸುತ್ತಾ, “ಪಾರಿವಾಳದ ರೂಪದಲ್ಲಿ ಪವಿತ್ರಾತ್ಮ ಸ್ವರ್ಗದಿಂದ ಇಳಿದು ಬಂದು ಅವರ ಮೇಲೆ ನೆಲಸುವುದನ್ನು ನಾನು ನೋಡಿದೆನು. ಬರಬೇಕಾಗಿದ್ದವರು ಇವರೇ ಎಂದು ನನಗೂ ತಿಳಿದಿರಲಿಲ್ಲ. ಆದರೆ ನೀರಿನಿಂದ ಸ್ನಾನದೀಕ್ಷೆ ಕೊಡುವಂತೆ ನನ್ನನ್ನು ಕಳುಹಿಸಿದ ದೇವರು, ‘ಪವಿತ್ರಾತ್ಮ ಇಳಿದು ಬಂದು ಯಾವ ವ್ಯಕ್ತಿಯ ಮೇಲೆ ನೆಲಸುವುದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವಾತ,’ ಎಂದಿದ್ದರು. ಅದನ್ನು ನಾನು ಕಣ್ಣಾರೆ ನೋಡಿದ್ದೇನೆ. ಆದುದರಿಂದ ಅವರೇ ದೇವರ ಪುತ್ರನೆಂದು ಸಾಕ್ಷಿ ನೀಡುತ್ತಿದ್ದೇನೆ,” ಎಂದು ಹೇಳಿದನು. 

14.01.23 - "ನನ್ನನ್ನು ಹಿಂಬಾಲಿಸು"

ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 4:12-16


ಸಹೋದರರೇ, ದೇವರ ವಾಕ್ಯ ಜೀವಂತವಾದುದು, ಕ್ರಿಯಾತ್ಮಕವಾದುದು; ಎಂಥ ಇಬ್ಬಾಯಿ ಕತ್ತಿಗಿಂತಲೂ ಹರಿತವಾದುದು. ಪ್ರಾಣ ಮತ್ತು ಆತ್ಮಗಳ, ಕೀಲು ಮತ್ತು ಮಜ್ಜೆಗಳ ಭೇದವನ್ನು ಛೇದಿಸುವಂತಾದ್ದು; ಹೃದಯದ ಆಶೆ ಆಲೋಚನೆಗಳನ್ನು ವಿವೇಚಿಸುವಂತಾದ್ದು. ನಾವು ಯಾರಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ, ಅವರ ಕಣ್ಣಿಗೆ ಮುಚ್ಚುಮರೆಯಾದುದು ಯಾವುದೂ ಇಲ್ಲ. ಅವರ ದೃಷ್ಟಿಗೆ ಎಲ್ಲವೂ ಬಟ್ಟಬಯಲು. ಸ್ವರ್ಗಲೋಕಕ್ಕೆ ಏರಿಹೋದ ದೇವರ ಪುತ್ರನಾದ ಯೇಸುವೇ ನಮಗೆ ಶ್ರೇಷ್ಠ ಹಾಗೂ ಪ್ರಧಾನಯಾಜಕ ಆಗಿರುವುದರಿಂದ ನಾವು ನಿವೇದಿಸುವ ವಿಶ್ವಾಸದಲ್ಲಿ ಸದೃಢರಾಗಿರೋಣ. ಈ ಪ್ರಧಾನಯಾಜಕ, ನಮ್ಮ ದೌರ್ಬಲ್ಯಗಳನ್ನು ಕಂಡು ಅನುಕಂಪ ತೋರದೆ ಇರುವವರಲ್ಲ. ಅವರು, ನಮ್ಮಂತೆಯೇ ಇದ್ದುಕೊಂಡು ಎಲ್ಲಾ ವಿಷಯಗಳಲ್ಲೂ ಶೋಧನೆ ಸಂಕಟಗಳನ್ನು ಅನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ. ಆದಕಾರಣ, ನಾವು ಸಮಯೋಚಿತ ಸಹಾಯವನ್ನು ಅವರ ಅನುಗ್ರಹದಿಂದ ಪಡೆಯಲು ಮತ್ತು ಅವರ ಕರುಣೆಯನ್ನು ಸವಿಯಲು ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ. 
ಪ್ರಭುವಿನ ವಾಕ್ಯ

ಕೀರ್ತನೆ: 19:8, 9, 10, 15 
ಶ್ಲೋಕ: ಪ್ರಭೂ, ನಿತ್ಯ ಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ. 


ಪ್ರಭುವಿನ ನಿಯಮ ನೀತಿಬದ್ಧ; ಮನಸ್ಸಿಗದು ಒಸಗೆ I
ಪ್ರಭುವಿನ ಕಟ್ಟಳೆ ಪರಿಶುದ್ಧ; ಕಣ್ಣಿಗದು ದೀವಿಗೆ II
ಪ್ರಭುವಿನ ಭೀತಿ ಪವಿತ್ರ; ಅದೆಂದಿಗೂ ಶಾಶ್ವತ I

ಪ್ರಭುವಿನ ತೀರ್ಪು ಯಥಾರ್ಥ; ಪರಿಪೂರ್ಣ ನ್ಯಾಯಯುತ II
ಅಪೇಕ್ಷಣೀಯವಾದುವವು ಚಿನ್ನ ಅಪರಂಜಿಗಿಂತ I
ಅತಿಮಧುರವಾದುವು ಅಪ್ಪಟ ಜೇನುತುಪ್ಪಕ್ಕಿಂತ II

ಮಾರ್ಕನು ಬರೆದ ಶುಭಸ೦ದೇಶ 2:13-17 




ಯೇಸುಸ್ವಾಮಿ ಪುನಃ ಗಲಿಲೇಯ ಸರೋವರದ ತೀರಕ್ಕೆ ಹೋದರು. ಜನರ ಗುಂಪು ಅವರನ್ನು ಸುತ್ತುಗಟ್ಟಿತು. ಯೇಸು ಅವರಿಗೆ ಪ್ರಬೋಧಿಸಿದರು. ಅಲ್ಲಿಂದ ಹೊರಟುಹೋಗುತ್ತಿರುವಾಗ ಅಲ್ಫಾಯನ ಮಗನಾದ ಲೇವಿಯು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿರುವುದನ್ನು ಯೇಸು ಕಂಡರು. “ನನ್ನನ್ನು ಹಿಂಬಾಲಿಸು,” ಎಂದು ಹೇಳಿ ಕರೆದರು. ಲೇವಿ ಎದ್ದು ಅವರನ್ನು ಹಿಂಬಾಲಿಸಿದನು. ತದನಂತರ ಯೇಸು ಲೇವಿಯ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಬಹುಮಂದಿ ಸುಂಕದವರು, ಪಾಪಿಷ್ಠರು, ಅಲ್ಲಿಗೆ ಬಂದರು. ಇವರೆಲ್ಲರೂ ಯೇಸು ಮತ್ತು ಅವರ ಶಿಷ್ಯರ ಪಂಕ್ತಿಯಲ್ಲೇ ಊಟಕ್ಕೆ ಕುಳಿತರು. ಇಂಥವರು ಬಹುಮಂದಿ ಯೇಸುವನ್ನು ಹಿಂಬಾಲಿಸುತ್ತಿದ್ದರು. ಫರಿಸಾಯ ಪಂಥಕ್ಕೆ ಸೇರಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, ಸುಂಕದವರ ಮತ್ತು ಇತರ ಪಾಪಿಗಳ ಪಂಕ್ತಿಯಲ್ಲಿ ಯೇಸು ಊಟಮಾಡುವುದನ್ನು ಕಂಡು, “ಈತನು ಇಂಥಾ ಬಹಿಷ್ಕೃತ ಜನರ ಜೊತೆಯಲ್ಲಿ ಊಟಮಾಡುವುದೇಕೆ?” ಎಂದು ಯೇಸುವಿನ ಶಿಷ್ಯರೊಡನೆ ಆಕ್ಷೇಪಿಸಿದರು. ಇದನ್ನು ಕೇಳಿಸಿಕೊಂಡ ಯೇಸು ಅವರಿಗೆ, “ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ, ಆರೋಗ್ಯವಂತರಿಗಲ್ಲ, ನಾನು ಕರೆಯಲು ಬಂದಿರುವುದು ಧರ್ಮಿಷ್ಠರನ್ನಲ್ಲ, ಪಾಪಿಷ್ಠರನ್ನು,” ಎಂದರು. 
ಪ್ರಭು ಕ್ರಿಸ್ತರ ಶುಭಸ೦ದೇಶ

13.01.23 - “ನಾನು ನಿನಗೆ ಆಜ್ಞಾಪಿಸುತ್ತೇನೆ; ಏಳು, ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು”

ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 4:1-5, 11

ದೇವರು ತಮ್ಮ ವಿಶ್ರಾಂತಿಯ ನೆಲೆಯನ್ನು ನೀಡುವುದಾಗಿ ಮಾಡಿದ ವಾಗ್ದಾನ ಇನ್ನೂ ರದ್ದಾಗದೆ ಉಳಿದಿದೆ. ನಿಮ್ಮಲ್ಲಿ ಯಾರೂ ಆ ವಾಗ್ದಾನದ ಫಲವನ್ನು ಪಡೆಯದೆ ಇರಬಾರದು. ಎಂತಲೇ, ನಾವು ಭಯಭಕ್ತಿಯಿಂದ ಬಾಳೋಣ. ಶುಭವಾರ್ತೆಯನ್ನು ಅವರಿಗೆ ಸಾರಲಾದಂತೆ ನಮಗೂ ಸಾರಲಾಯಿತು. ಅವರು ಅದನ್ನು ಆಲಿಸಿದರು; ಆದರೆ ಅವರಲ್ಲಿ ವಿಶ್ವಾಸವಿರಲಿಲ್ಲ. ಈ ಕಾರಣ, ಅವರು ಕೇಳಿದ ಸಂದೇಶದಿಂದ ಫಲ ಪಡೆಯದೆ ಹೋದರು. ಲೋಕಾದಿಯಲ್ಲೇ, ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿದ್ದರೂ ಅವರು, “ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ ಎಂದು ಸಿಟ್ಟುಗೊಂಡು ಶಪಥ ಮಾಡಿದೆನು,” ಎಂದು ಹೇಳಿದ್ದಾರೆ. ವಿಶ್ವಾಸಿಸುವ ನಾವಾದರೋ ಆ ವಿಶ್ರಾಂತಿಯ ನೆಲೆಯನ್ನು ಸೇರುತ್ತೇವೆ. ಪವಿತ್ರಗ್ರಂಥದ ಒಂದೆಡೆಯಲ್ಲಿ, ಏಳನೆಯ ದಿನವನ್ನು ಕುರಿತು: “ದೇವರು ತಮ್ಮ ಸೃಷ್ಟಿಕಾರ್ಯಗಳನ್ನೆಲ್ಲಾ ಮುಗಿಸಿ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು,” ಎಂದು ಬರೆದಿದೆ. ಮೇಲೆ ಹೇಳಿದ ವಚನದಲ್ಲಾದರೋ, “ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ,” ಎಂದಿದೆ. ಆದ್ದರಿಂದ ಈ ವಿಶ್ರಾಂತಿಯನ್ನು ಪಡೆಯಲು ನಾವು ಪ್ರಯತ್ನಪಡೋಣ. ನಮ್ಮಲ್ಲಿ ಯಾರೂ ಆ ಜನರಂತೆ ಅವಿಧೇಯತೆಯಿಂದ ವರ್ತಿಸಿ ವಿಶ್ವಾಸಭ್ರಷ್ಟರಾಗದೆ ಇರೋಣ. 

-ಪ್ರಭುವಿನ ವಾಕ್ಯ

ಕೀರ್ತನೆ: 78:3, 4, 6-7, 8 

ಪೇಳ್ವೆವು ನಾವು ಕೇಳಿ ತಿಳಿದುಕೊಂಡವುಗಳನೆ I
ಪೂರ್ವಜರೆಮಗೆ ತಿಳಿಸಿದ ಸಂಗತಿಗಳನೆ I
ಪ್ರಭುವಿನ ಮಹಿಮೆ ಪರಾಕ್ರಮದ ಪವಾಡಗಳನೆ II
ಮರೆಮಾಡೆವು ಅವರ ಸಂತತಿಯಾದ ನಿಮಗೆ I

ವಿವರಿಸುವೆವು ಮುಂಬರಲಿರುವ ಪೀಳಿಗೆಗೆ II
“ಗೊತ್ತಾಗಲಿ ಇವೆಲ್ಲ ಮುಂದಿನ ತಲೆಮಾರಿಗೆ I
ತಿಳಿಸುತ್ತ ಹೋಗಲಿ ಮಕ್ಕಳು ಮೊಮ್ಮಕ್ಕಳಿಗೆ” II
ಆಗ ತಮ್ಮ ಪ್ರಾಚೀನ ಪೂರ್ವಿಕರಂತೆ ಅವರಾಗರು I

ಮೊಂಡರು, ಅವಿಧೇಯರು, ದೈವದ್ರೋಹಿಗಳು, ಚಪಲಚಿತ್ತರು II
ಮರೆಯರು ನನ್ನ ಮಹತ್ಕಾರ್ಯಗಳನು I
ಇಡುವರು ನನ್ನಲ್ಲೇ ಭರವಸೆಯನು I
ಕೈಗೊಳ್ಳುವರು ನನ್ನ ಆಜ್ಞೆಗಳನು II

ಮಾರ್ಕನು ಬರೆದ ಶುಭಸ೦ದೇಶ 2:1-12


ಕೆಲವು ದಿನಗಳು ಕಳೆದ ಬಳಿಕ ಯೇಸುಸ್ವಾಮಿ ಮತ್ತೊಮ್ಮೆ ಕಫೆರ್ನವುಮಿಗೆ ಬಂದರು. ಅವರು ಮನೆಯಲ್ಲಿದ್ದಾರೆಂಬ ಸುದ್ದಿ ಹಬ್ಬಿತು. ಜನರು ಗುಂಪುಗುಂಪಾಗಿ ಅಲ್ಲಿಗೆ ಬಂದರು. ಇದರಿಂದಾಗಿ ಮನೆಯೊಳಗೆ ಮಾತ್ರವಲ್ಲ, ಹೊರಗಡೆಯೂ ಸ್ಥಳ ಸಾಲದೆ ಹೋಯಿತು. ಯೇಸು ಅಲ್ಲಿ ಸೇರಿದ್ದ ಜನಸ್ತೋಮಕ್ಕೆ ದೇವರ ವಾಕ್ಯವನ್ನು ಬೋಧಿಸತೊಡಗಿದರು. ಆಗ ಒಬ್ಬ ಪಾರ್ಶ್ವವಾಯುರೋಗಿಯನ್ನು ನಾಲ್ವರಿಂದ ಹೊರಿಸಿಕೊಂಡು ಕೆಲವರು ಅಲ್ಲಿಗೆ ಬಂದರು. ಜನಸಂದಣಿಯ ನಿಮಿತ್ತ ಅವನನ್ನು ಯೇಸುವಿನ ಸಮೀಪಕ್ಕೆ ಸಾಗಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಅವರು ಯೇಸು ಇದ್ದ ಮನೆಯ ಮೇಲ್ಛಾವಣಿಯನ್ನು ತೆರೆದು, ದೊಡ್ಡ ಕಿಂಡಿಯೊಂದನ್ನು ಮಾಡಿ, ರೋಗಿಯನ್ನು ಹಾಸಿಗೆಯ ಸಮೇತ ಕೆಳಗಿಳಿಸಿದರು. ಯೇಸು ಅವರ ವಿಶ್ವಾಸವನ್ನು ಮೆಚ್ಚಿ ಆ ಪಾರ್ಶ್ವವಾಯು ರೋಗಿಗೆ, “ಮಗು, ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,” ಎಂದರು.

ಆಗ, ಅಲ್ಲೇ ಕುಳಿತಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, “ಇವನೇಕೆ ಹೀಗೆ ಮಾತನಾಡುತ್ತಾನೆ? ಇದು ದೇವದೂಷಣೆ! ದೇವರೊಬ್ಬರ ಹೊರತು ಪಾಪಗಳನ್ನು ಕ್ಷಮಿಸಲು ಬೇರೆ ಯಾರಿಂದ ಸಾಧ್ಯ?” ಎಂದು ತಮ್ಮ ಮನಸ್ಸಿನಲ್ಲೇ ಆಲೋಚಿಸಿಕೊಳ್ಳುತ್ತಿದ್ದರು. ಅವರು ಹೀಗೆ ಯೋಚಿಸುತ್ತಿರುವುದನ್ನು ಯೇಸು ತಕ್ಷಣ ಗ್ರಹಿಸಿಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಹೀಗೆ ಆಲೋಚಿಸುತ್ತಿರುವುದು ಏಕೆ? ಈ ಪಾರ್ಶ್ವವಾಯು ರೋಗಿಗೆ, ‘ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,’ ಎಂದು ಹೇಳುವುದು ಸುಲಭವೋ ಅಥವಾ ‘ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎನ್ನುವುದು ಸುಲಭವೋ? ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸಲು ನರಪುತ್ರನಿಗೆ ಅಧಿಕಾರವುಂಟೆಂದು ಈ ಮೂಲಕ ನಿಮಗೆ ಖಚಿತವಾಗಬೇಕು,” ಎಂದು ಹೇಳಿ, ಆ ಪಾರ್ಶ್ವವಾಯು ರೋಗಿಯನ್ನು ನೋಡಿ, “ನಾನು ನಿನಗೆ ಆಜ್ಞಾಪಿಸುತ್ತೇನೆ; ಏಳು, ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು” ಎಂದರು.

ಎಲ್ಲರೂ ನೋಡುತ್ತಿದ್ದ ಹಾಗೆ ಅವನು ಎದ್ದುನಿಂತನು; ತನ್ನ ಹಾಸಿಗೆಯನ್ನು ತಾನೇ ಎತ್ತಿಕೊಂಡು ಹೊರಟುಹೋದನು. ನೆರೆದಿದ್ದ ಎಲ್ಲರೂ ಆಶ್ಚರ್ಯಚಕಿತರಾಗಿ, “ಇಂಥ ಕಾರ್ಯವನ್ನು ನಾವು ನೋಡಿದ್ದೇ ಇಲ್ಲ!", ಎಂದು ದೇವರನ್ನು ಕೊಂಡಾಡಿದರು. 
-ಪ್ರಭು ಕ್ರಿಸ್ತರ ಶುಭಸ೦ದೇಶ

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...