ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

16.01.23

ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 5:1-10

ಪ್ರತಿಯೊಬ್ಬ ಪ್ರಧಾನಯಾಜಕ ಜನರ ಮಧ್ಯದಿಂದ ಆರಿಸಲಾದವನು; ಜನರ ಪರವಾಗಿ ದೇವರ ಸನ್ನಿಧಿಯಲ್ಲಿ ಸೇವೆಸಲ್ಲಿಸಲು ಮತ್ತು ಪಾಪಪರಿಹಾರಕ್ಕಾಗಿ ಬಲಿಗಳನ್ನೂ ಕಾಣಿಕೆಗಳನ್ನೂ ಸಮರ್ಪಿಸಲು ನೇಮಕಗೊಂಡವನು. ತಾನೂ ದುರ್ಬಲ ಮಾನವನಾದ ಕಾರಣ, ಆತನು ಅಜ್ಞಾನಿಗಳನ್ನೂ ದುರ್ಮಾರ್ಗಿಗಳನ್ನೂ ಸಹಾನುಭೂತಿಯಿಂದ ಕಾಣಬಲ್ಲನು. ಜನರಿಗೋಸ್ಕರ ಹೇಗೋ ಹಾಗೆಯೇ ತನ್ನ ದೌರ್ಬಲ್ಯದ ನಿಮಿತ್ತ ತನಗೋಸ್ಕರವೂ ಆತನು ಪಾಪಪರಿಹಾರಕಬಲಿಯನ್ನು ಅರ್ಪಿಸಬೇಕಾಗಿದೆ. ಅಲ್ಲದೆ, ಪ್ರಧಾನಯಾಜಕನೆಂಬ ಗೌರವಪದವಿಯನ್ನು ತನ್ನಷ್ಟಕ್ಕೆ ತಾನೇ ಯಾರೂ ವಹಿಸಿಕೊಳ್ಳರು. ಆರೋನನಂತೆ ಅವರೂ ದೇವರಿಂದ ಕರೆ ಹೊಂದಿದವರಾಗಿರಬೇಕು. ಅದೇ ರೀತಿ ಕ್ರಿಸ್ತಯೇಸು, ಪ್ರಧಾನಯಾಜಕನೆಂಬ ಉನ್ನತ ಪದವಿಗೆ ತನ್ನನ್ನೇ ಏರಿಸಿಕೊಳ್ಳಲಿಲ್ಲ. “ನೀನೇ ನನ್ನ ಪುತ್ರನು; ನಾನೇ ನಿನ್ನನ್ನು ಪಡೆದಿದ್ದೇನೆ,” ಎಂದ ದೇವರೇ ಅವರನ್ನು ಆ ಪದವಿಗೆ ಏರಿಸಿದರು. ಅವರೇ ಮತ್ತೊಂದು ಕಡೆಯಲ್ಲಿ: “ನೀನು ಸದಾಕಾಲವೂ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಯಾಜಕ,” ಎಂದಿದ್ದಾರೆ. ಕ್ರಿಸ್ತಯೇಸು ಈ ಭೂಲೋಕದಲ್ಲಿದ್ದಾಗ, ತಮ್ಮನ್ನು ಮರಣದಿಂದ ಕಾಪಾಡಲು‍ ಶಕ್ತರಾದ ದೇವರನ್ನು ಉಚ್ಚಸ್ವರದಿಂದ ಕೂಗುತ್ತಾ ಕಣ್ಣೀರಿಡುತ್ತಾ ವಿನಂತಿಸಿ ಪ್ರಾರ್ಥಿಸಿದರು. ಅವರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು. ಯೇಸು, ದೇವರ ಪುತ್ರರಾಗಿದ್ದರೂ ಹಿಂಸೆಬಾಧೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿಂದ ಅರಿತುಕೊಂಡರು. ಹೀಗೆ, ಅವರು ಸ್ವತಃ ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ಶಾಶ್ವತ ಜೀವೋದ್ಧಾರಕ್ಕೆ ಕಾರಣರಾದರು. ಅಲ್ಲದೆ, ದೇವರಿಂದ, “ಮೆಲ್ಕಿಸದೇಕನ ಪರಂಪರೆಗೆ ಸೇರಿದ ಪ್ರಧಾನಯಾಜಕ,” ಎನಿಸಿಕೊಂಡರು. 
ಪ್ರಭುವಿನ ವಾಕ್ಯ

ಕೀರ್ತನೆ: 110:1, 2, 3, 4 ನುಡಿದಿಹನು ಇಂತೆಂದು ಪ್ರಭು ನನ್ನೊಡೆಯನಿಗೆ I

“ಆಸೀನನಾಗಿರು ನೀನು ನನ್ನ ಬಲಗಡೆಗೆ I
ಹಗೆಗಳನು ನಿನಗೆ ಕಾಲ್ಮಣೆಯಾಗಿಸುವವರೆಗೆ” II
ಸಿಯೋನಿನ ಹೊರಗು ವಿಸ್ತರಿಸುವನು ಪ್ರಭು ನಿನ್ನ ರಾಜ್ಯದಾಳಿಕೆಯನು I
ನಿನ್ನ ವೈರಿ ವಿರೋಧಿಗಳ ನಟ್ಟನಡುವೆಯೆ ದೊರೆತನ ಮಾಡುವೆ ನೀನು II

ಸೇನೆಯನು ನೀ ಅಣಿಗೊಳಿಸುವ ದಿನದೊಳು I
ಸೇರಿಕೊಳ್ವರು ತಾವಾಗಿಯೇ ಪ್ರಜೆಗಳು I
ಶುಭ್ರ ವಸ್ತ್ರಧರಿಸಿ ನಿನ್ನ ಯುವಕ ಯೋಧರು I

ಉದಯಕಾಲದಿಬ್ಬನಿಯಂತೆ ಇಳಿದು ಬರುವರು II
“ಮೆಲ್ಕಿಸೆದೆಕ್ ಪರಂಪರೆಯ ಯಾಜಕ ನೀ ನಿರುತ” I
ಬದಲಿಸನು ಪ್ರಭು ತಾನಿತ್ತ ಪ್ರಮಾಣದೀ ಮಾತ II

ಮಾರ್ಕನು ಬರೆದ ಶುಭಸ೦ದೇಶ 2:18-22 

ಯೊವಾನ್ನನ ಶಿಷ್ಯರು ಮತ್ತು ಫರಿಸಾಯರು ಉಪವಾಸವ್ರತಗಳನ್ನು ಕೈಗೊಂಡಿದ್ದ ಒಂದು ಸಂದರ್ಭದಲ್ಲಿ ಕೆಲವು ಜನರು ಯೇಸುಸ್ವಾಮಿಯ ಬಳಿಗೆ ಬಂದರು. ಅವರು, “ಯೊವಾನ್ನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಉಪವಾಸವ್ರತವನ್ನು ಕೈಗೊಳ್ಳುತ್ತಾರೆ, ಆದರೆ ನಿನ್ನ ಶಿಷ್ಯರೇಕೆ ಹಾಗೆ ಮಾಡುವುದಿಲ್ಲ” ಎಂದು ಕೇಳಿದರು. ಅದಕ್ಕೆ ಯೇಸು, “ಮದುವಣಿಗನು ಜೊತೆಯಲ್ಲಿ ಇರುವಾಗ ಅವನ ಆಪ್ತರು ಉಪವಾಸ ಮಾಡುವುದುಂಟೆ? ಖಂಡಿತವಾಗಿಯೂ ಇಲ್ಲ. ಅವನು ತಮ್ಮ ಜೊತೆಯಲ್ಲಿರುವಷ್ಟು ಕಾಲ ಅವರು ಉಪವಾಸ ಮಾಡಲಾಗದು. ಮದುವಣಿಗನು ಅವರಿಂದ ಅಗಲಬೇಕಾದ ಕಾಲ ಬರುವುದು. ಆಗ ಅವರು ಉಪವಾಸ ಮಾಡುವರು. “ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ. ಹಾಕಿದಲ್ಲಿ, ಹೊಸ ತೇಪೆಯು ಹಳೆಯ ಅಂಗಿಯನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ. ಅಂತೆಯೇ ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ಯಾರೂ ತುಂಬಿಡುವುದಿಲ್ಲ. ತುಂಬಿಟ್ಟರೆ, ಅದರಿಂದ ಬುದ್ದಲಿಗಳು ಬಿರಿಯುತ್ತವೆ. ಮದ್ಯವು ಮತ್ತು ಬುದ್ದಲಿಗಳು ಎರಡೂ ನಷ್ಟವಾಗುತ್ತವೆ. ಆದುದರಿಂದ ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡಬೇಕು,” ಎಂದರು.
ಪ್ರಭು ಕ್ರಿಸ್ತರ ಶುಭಸ೦ದೇಶ

No comments:

Post a Comment