ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

07.07.22 - "ಬೋಧನೆಮಾಡಿರಿ. ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ"

ಮೊದಲನೇ ವಾಚನ: ಪ್ರವಾದಿ ಹೋಶೇಯನ ಗ್ರಂಥ 11:1, 3-4, 8-9 

ಸರ್ವೇಶ್ವರ ಇಂತೆನ್ನುತ್ತಾರೆ: “ಪ್ರೀತಿಸಿದೆನು ಇಸ್ರಯೇಲನ್ನು ಅದರ ಬಾಲ್ಯಾವಸ್ಥೆಯಿಂದ; ಕರೆದೆನು ನನ್ನ ಆ ಪುತ್ರನನು ಈಜಿಪ್ಟಿನಿಂದ. ಎಫ್ರಯಿಮಿಗೆ ಅಂಬೆಗಾಲಿಡಲು ಕಲಿಸಿದವನು ನಾನೇ ಅದನ್ನು ಕೈಗಳಲ್ಲಿ ಎತ್ತಿಕೊಂಡು ಆಡಿಸಿದವನು ನಾನೇ ಆ ಜನರನ್ನು ಸ್ವಸ್ಥಮಾಡಿದವನೂ ನಾನೇ; ಆದರೆ ಅರಿತುಕೊಳ್ಳದೆಹೋದರು ಈ ವಿಷಯವನೇ. ಬೆಳೆಸಿದೆನು ಅವರನ್ನು ಕರುಣೆಯ ಕಟ್ಟುಗಳಲಿ, ಪ್ರೀತಿಯ ಬಂಧನದಲಿ ಸುಧಾರಿಸಿದೆ ಅವರ ಹೆಗಲಿಗೆ ಬಿಗಿದಿದ್ದ ನೊಗವನ್ನು ಬಿಚ್ಚಿ ಊಟ ಬಡಿಸಿದೆ ಅವರಿಗೆ ನೆಲಸಮ ಬಗ್ಗಿ. “ಹೇಗೆ ತ್ಯಜಿಸಲಿ ಎಫ್ರಯಿಮೇ, ನಿನ್ನನು ಹೇಗೆ ಕೈಬಿಡಲಿ ಇಸ್ರಯೇಲೇ, ನಿನ್ನನು. ಹೇಗೆ ಈಡುಮಾಡಲಿ ದುರ್ಗತಿಗೆ ನಿನ್ನನು ಅದ್ಮದಂತೆ, ಹೇಗೆ ನಾಶಮಾಡಲಿ ನಿನ್ನನು ಚೆಬೋಯೀಮನಂತೆ? ತಡೆಹಿಡಿಯುವೆನು ನನ್ನ ಉಗ್ರಕೋಪವನು ನಾಶಪಡಿಸಲಾರೆ ಮರಳಿ ಎಫ್ರಯಿಮನು. ನರಮಾನವನಲ್ಲ, ದೇವರು ನಾನು ನಿಮ್ಮಲ್ಲಿ ನೆಲೆಯಾಗಿರುವ ಸದಮಲಸ್ವಾಮಿಯು! ನನ್ನದಲ್ಲ ನಾಶಮಾಡುವ ರೋಷವು.

ಕೀರ್ತನೆ: 80:2, 3, 15-16

ಶ್ಲೋಕ:  ದೇವರೇ, ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು

ಶುಭಸಂದೇಶ:  ಮತ್ತಾಯ 10:7-15


ಹನ್ನೆರಡು ಮಂದಿಯ ನಿಯೋಗವನ್ನು ಕಳುಹಿಸುವಾಗ ಯೇಸುಸ್ವಾಮಿ ಅವರಿಗೆ ಕೊಟ್ಟ ಆದೇಶ ಇದು: "ಪರಕೀಯರತ್ತ ಹೋಗಲೇಬೇಡಿ; ಸಮಾರಿಯದವರ ಯಾವ ಊರಿಗೂ ಕಾಲಿಡಬೇಡಿ. ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ; ಹೋಗುತ್ತಾ, ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆಮಾಡಿರಿ. ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ. ದೆವ್ವಗಳನ್ನು ಬಿಡಿಸಿರಿ, ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ. ಜೇಬಿನಲ್ಲಿ ಚಿನ್ನ, ಬೆಳ್ಳಿ, ತಾಮ್ರವನ್ನಾಗಲಿ, ಪ್ರಯಾಣಕ್ಕೆಂದು ಜೋಳಿಗೆಯನ್ನಾಗಲಿ, ಎರಡು ಅಂಗಿಗಳನ್ನಾಗಲಿ, ಕಾಲಿಗೆ ಕೆರವನ್ನಾಗಲಿ, ಕೈಗೆ ದಂಡವನ್ನಾಗಲಿ ತೆಗೆದುಕೊಳ್ಳಬೇಡಿ. ಏಕೆಂದರೆ, ದುಡಿಮೆಗಾರನು ಜೀವನಾಧಾರಕ್ಕೆ ಬಾಧ್ಯನು. “ನೀವು ಒಂದು ಪಟ್ಟಣಕ್ಕಾಗಲಿ, ಹಳ್ಳಿಗಾಗಲಿ ಹೋದಾಗ, ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳಲು ಯೋಗ್ಯನು ಯಾರೆಂದು ಕಂಡುಹಿಡಿಯಿರಿ. ಅಲ್ಲಿಂದ ಮುಂದಕ್ಕೆ ಸಾಗುವವರೆಗೂ ಅವನಲ್ಲೇ ತಂಗಿರಿ. ನೀವು ಒಂದು ಮನೆಗೆ ಹೋದಾಗ, “ಈ ಮನೆಗೆ ಶುಭವಾಗಲಿ!” ಎಂದು ಹರಸಿರಿ. ಆ ಮನೆಯವರು ನಿಮ್ಮನ್ನು ಸ್ವಾಗತಿಸಿದರೆ, ನಿಮ್ಮ ಆಶೀರ್ವಾದ ಅವರ ಮೇಲೆ ನೆಲಸಲಿ. ನಿಮ್ಮನ್ನು ಸ್ವಾಗತಿಸದೆಹೋದರೆ, ನಿಮ್ಮ ಆಶೀರ್ವಾದ ನಿಮಗೇ ಹಿಂದಿರುಗಲಿ. ಒಂದು ಮನೆಯೇ ಆಗಲಿ, ಊರೇ ಆಗಲಿ, ನಿಮ್ಮನ್ನು ಸ್ವಾಗತಿಸದೆ ಅಥವಾ ನಿಮಗೆ ಕಿವಿಗೊಡದೆಹೋದರೆ, ಆ ಮನೆಯನ್ನು ಅಥವಾ ಊರನ್ನು ಬಿಟ್ಟು ಮುಂದಕ್ಕೆ ಹೋಗಿರಿ. ಹೋಗುವಾಗ ನಿಮ್ಮ ಪಾದಗಳಿಗೆ ಅಂಟಿರುವ ದೂಳನ್ನೂ ಝಾಡಿಸಿಬಿಡಿ. ತೀರ್ಪಿನ ದಿನ ಆ ಊರಿನ ಗತಿ ಸೊದೋಮ್ ಮತ್ತು ಗೊಮೋರ ಊರುಗಳ ಗತಿಗಿಂತ ಕಠಿಣವಾಗಿರುವುದೆಂದು ನಾನು ನಿಮಗೆ ಒತ್ತಿ ಹೇಳುತ್ತೇನೆ.

06.07.22 - "ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ."

ಮೊದಲನೇ ವಾಚನ: ಪ್ರವಾದಿ ಹೋಶೇಯನ ಗ್ರಂಥ 10:1-3, 7-8, 12

ಇಸ್ರಯೇಲ್ ಸೊಂಪಾಗಿ ಬೆಳೆದ ದ್ರಾಕ್ಷಾಲತೆ, ಫಲಭರಿತ ದ್ರಾಕ್ಷಾಬಳ್ಳಿ, ಅದರ ಫಲ ಹೆಚ್ಚಿದಂತೆಲ್ಲ ಬಲಿಪೀಠಗಳು ಹೆಚ್ಚಿಕೊಂಡಿವೆ. ಆ ನಾಡು ಅಭಿವೃದ್ಧಿಯಾದಂತೆಲ್ಲ, ಹೆಚ್ಚು ಸುಂದರವಾದ ವಿಗ್ರಹಸ್ತಂಭಗಳು ನಿರ್ಮಿತವಾಗಿವೆ. ಅವರದು ವಂಚನೆಯ ಮನಸ್ಸು. ಈಗ ಅವರು ತಮ್ಮ ಪಾಪಕ್ಕೆ ತಕ್ಕ ದಂಡನೆಯನ್ನು ಅನುಭವಿಸಲೇಬೇಕು. ಸರ್ವೇಶ್ವರಸ್ವಾಮಿ ಅವರ ಯಜ್ಞವೇದಿಗಳನ್ನು ಕೆಡವುವರು. ಅವರ ಪೂಜಾಸ್ತಂಭಗಳನ್ನು ಒಡೆದುಹಾಕುವರು. “ನಮಗೆ ರಾಜನೇ ಇಲ್ಲ. ನಾವು ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಲ್ಲ. ನಮಗೆ ರಾಜನಿದ್ದರೂ ಅವನು ನಮಗೆ ಏನು ತಾನೇ ಮಾಡಿಯಾನು?” ಎಂದು ಆ ಜನರು ಆಡಿಕೊಳ್ಳುತ್ತಾರೆ. ಸಮಾರ್ಯದ ರಾಜನು ಪ್ರವಾಹದಲ್ಲಿ ಕೊಚ್ಚಿಕೊಂಡುಹೋಗುವ ಕಡ್ಡಿಯಂತೆ ಕಣ್ಮರೆ ಆಗುವನು. ಇಸ್ರಯೇಲಿನ ಪಾಪಕ್ಕೆ ಆಸ್ಪದ ಆಗಿದ್ದ ಆವೆನಿನ ಪೂಜಾಸ್ಥಾನಗಳು ನಾಶವಾಗುವುವು. ಪಾಳುಬಿದ್ದ ಬಲಿಪೀಠಗಳ ಮೇಲೆ ಮುಳ್ಳುಕಳ್ಳಿಗಳು ಹುಟ್ಟಿಕೊಳ್ಳುವುವು. ಅಲ್ಲಿನ ಜನರು: ‘ಪರ್ವತವೇ, ನಮ್ಮನ್ನು ತುಳಿದುಬಿಡಿ; ಗುಡ್ಡಗಳೇ ನಮ್ಮನ್ನು ನುಂಗಿಬಿಡಿ’ ಎಂದು ಕೂಗಿಕೊಳ್ಳುವರು.” ನಾನು ಇಂತೆಂದೆ: “ಪಾಳುಬಿದ್ದ ನೆಲವನ್ನು ಉತ್ತು ಹದಮಾಡಿರಿ; ನೀತಿಯ ಬೀಜವನ್ನು ಬಿತ್ತಿರಿ; ಪ್ರೀತಿಯ ಫಲವನ್ನು ಕೊಯ್ಯಿರಿ. ಸಮಯವು ಸನ್ನಿಹಿತವಾಗಿದೆ. ಸರ್ವೇಶ್ವರ ಆಗಮಿಸಿ ನಿಮ್ಮ ಮೇಲೆ ನೀತಿಯನ್ನು ಮಳೆಗರೆಯುವಂತೆ ಅವರಿಗೆ ಶರಣು ಹೋಗಬೇಕು.
ಕೀರ್ತನೆ: 105:2-3, 4-5, 6-7
ಶ್ಲೋಕ:  ಅಪೇಕ್ಷಿಸಿ ನಿತ್ಯವೂ ಪ್ರಭುವಿನ ದರ್ಶನವನು

ಶುಭಸಂದೇಶ: ಮತ್ತಾಯ 10:1-7


ಯೇಸುಸ್ವಾಮಿ ತಮ್ಮ ಹನ್ನೆರಡುಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಎಲ್ಲ ರೋಗರುಜಿನಗಳನ್ನು ಗುಣಪಡಿಸುವುದಕ್ಕೂ ದೆವ್ವಗಳನ್ನು ಬಿಡಿಸುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು. ಆ ಹನ್ನೆರಡುಮಂದಿ ಪ್ರೇಷಿತರ ಹೆಸರುಗಳು ಇವು; ಮೊದಲನೆಯವನು ಪೇತ್ರ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ; ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ; ಫಿಲಿಪ್ಪ ಮತ್ತು ಬಾರ್ತೊಲೊಮಾಯ; ತೋಮ ಮತ್ತು ಸುಂಕ ವಸೂಲಿಗಾರ ಮತ್ತಾಯ; ಅಲ್ಫಾಯನ ಮಗ ಯಕೋಬ ಮತ್ತು ತದ್ದಾಯ; ದೇಶಾಭಿಮಾನಿ ಎಂದು ಕರೆಯಲಾದ ಸಿಮೋನ ಮತ್ತು ಗುರುದ್ರೋಹಿ ಆಗಲಿದ್ದ ಯೂದ ಇಸ್ಕರಿಯೋತ. ಆ ಹನ್ನೆರಡುಮಂದಿಯ ನಿಯೋಗವನ್ನು ಕಳುಹಿಸುವಾಗ ಯೇಸುಸ್ವಾಮಿ ಅವರಿಗೆ ಕೊಟ್ಟ ಆದೇಶ ಇದು: “ಪರಕೀಯರತ್ತ ಹೋಗಲೇಬೇಡಿ; ಸಮಾರಿಯದವರ ಯಾವ ಊರಿಗೂ ಕಾಲಿಡಬೇಡಿ. ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ; ಹೋಗುತ್ತಾ, ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ."






05.07.22 - “ಬೆಳೆಯೇನೋ ಹೇರಳ; ಕೊಯಿಲುಗಾರರೋ ವಿರಳ"

ಮೊದಲನೇ ವಾಚನ: ಪ್ರವಾದಿ ಹೋಶೇಯನ ಗ್ರಂಥ 8:4-7, 11-13

“ಅವರು ನನ್ನ ಅನುಮತಿ ಇಲ್ಲದೆ ಅರಸರನ್ನು ನೇಮಿಸಿಕೊಂಡಿದ್ದಾರೆ. ನನಗೆ ತಿಳಿಯದಂತೆ ಅಧಿಪತಿಗಳನ್ನು ಮಾಡಿಕೊಂಡಿದ್ದಾರೆ. ಬೆಳ್ಳಿಬಂಗಾರದ ವಿಗ್ರಹಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರು ಮಾಡಿರುವುದೆಲ್ಲ ಅವರ ನಾಶಕ್ಕಾಗಿಯೇ. ಸಮಾರಿಯವೇ, ನೀನು ನಿರ್ಮಿಸಿಕೊಂಡಿರುವ ಬಸವನನ್ನು ಧಿಕ್ಕರಿಸಿದ್ದೇನೆ. ನನ್ನ ಕೋಪಾಗ್ನಿ ನಿನ್ನ ಮೇಲೆ ಉರಿದುಬರುತ್ತಿದೆ. ಈ ಜನರು ನಿರ್ಮಲರಾಗುವುದಕ್ಕೆ ಇನ್ನೆಷ್ಟುಕಾಲ ಹಿಡಿಯುವುದೋ? ಆ ಬಸವ ಇಸ್ರಯೇಲಿನ ಕೈಕೆಲಸವೇ. ಶಿಲ್ಪಿ ಕೊಟ್ಟ ರೂಪವದು; ಅದು ದೇವರಲ್ಲ. ಸಮಾರ್ಯದ ಬಸವನು ನುಚ್ಚುನೂರಾಗುವನು. ಇವರು ಗಾಳಿಯನ್ನು ಬಿತ್ತುತ್ತಾರೆ; ಬಿರುಗಾಳಿಯನ್ನು ಕೊಯ್ಯುತ್ತಾರೆ. ಅವರ ಪೈರು ತೆನೆಗೆ ಬಾರದು. ಕಾಳು ಮೊಳೆತರೂ ಕೂಳು ದೊರಕದು. ಒಂದು ವೇಳೆ ದೊರಕಿದರೂ ಅನ್ಯಜನರು ಅದನ್ನು ಕಬಳಿಸಿಬಿಡುವರು. “ಎಫ್ರಯಿಮ್ ಪಾಪಪರಿಹಾರಕ್ಕಾಗಿ ಬಲಿಪೀಠಗಳನ್ನು ಕಟ್ಟಿದೆ. ಆ ಬಲಿಪೀಠಗಳೇ ಅದರ ಪಾಪಕ್ಕೆ ಕಾರಣವಾಗಿ ಪರಿಣಮಿಸಿವೆ. ನಾನು ನನ್ನ ಧರ್ಮವನ್ನು ಲಕ್ಷಾಂತರ ವಿಧಿಗಳ ರೂಪದಲ್ಲಿ ಬರೆದುಕೊಟ್ಟರೂ ಅವುಗಳು ತನಗೆ ಪರಕೀಯವೆಂದು ಭಾವಿಸುತ್ತದೆ. ಎಫ್ರಯಿಮಿನವರು ಬಲಿಪಶುಗಳನ್ನು ನನಗೆ ನೈವೇದ್ಯವಾಗಿ ವಧಿಸುತ್ತಾರೆ, ವಧಿಸಿದ್ದನ್ನು ಭುಜಿಸುತ್ತಾರೆ. ಆದರೆ ಆ ಬಲಿಗಳನ್ನು ನಾನು ಮೆಚ್ಚುವುದಿಲ್ಲ. ಅವರ ಅಧರ್ಮವನ್ನು ನೆನಪಿಗೆ ತಂದುಕೊಂಡು ಅವರ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವೆನು. ಆ ಜನರು ಈಜಿಪ್ಟಿಗೆ ಹಿಂದಿರುಗಬೇಕಾಗುವುದು."

ಕೀರ್ತನೆ: 115:3-4, 5-6, 7-8, 9-10
ಶ್ಲೋಕ:  ಪ್ರಭುವಿನಲ್ಲಿದೆ ಭರವಸೆ ಇಸ್ರಯೇಲ್ ಜನರಿಗೆ

ಶುಭಸಂದೇಶ: ಮತ್ತಾಯ 9:32-38


ಕುರುಡರು ಹೊರಟು ಹೋಗುತ್ತಿದ್ದ ಹಾಗೆ, ದೆವ್ವ ಹಿಡಿದಿದ್ದ ಒಬ್ಬ ಮೂಕನನ್ನು ಕೆಲವರು ಯೇಸುಸ್ವಾಮಿಯ ಬಳಿಗೆ ಕರೆತಂದರು. ದೆವ್ವ ಬಿಡಿಸಿದ ಮೇಲೆ ಆ ಮೂಕನಿಗೆ ಮಾತು ಬಂದಿತು. ಜನರೆಲ್ಲರೂ ಆಶ್ಚರ್ಯಚಕಿತರಾದರು. “ಇಂತಹ ಕಾರ್ಯವನ್ನು ನಾವು ಇಸ್ರಯೇಲಿನಲ್ಲಿ ಕಂಡದ್ದೇ ಇಲ್ಲ!” ಎಂದುಕೊಂಡರು. ಆದರೆ ಫರಿಸಾಯರು, “ಇವನು ದೆವ್ವಗಳೊಡೆಯನ ಶಕ್ತಿಯಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ,” ಎಂದರು. ಯೇಸುಸ್ವಾಮಿ, ಊರೂರುಗಳಲ್ಲೂ ಹಳ್ಳಿ ಹಳ್ಳಿಗಳಲ್ಲೂ ಸಂಚಾರ ಮಾಡುತ್ತಾ ಅಲ್ಲಿಯ ಪ್ರಾರ್ಥನಾಮಂದಿರಗಳಲ್ಲಿ ಬೋಧಿಸಿದರು. ಶ್ರೀಸಾಮ್ರಾಜ್ಯದ ಶುಭಸಂದೇಶವನ್ನು ಸಾರಿದರು. ಎಲ್ಲಾತರದ ರೋಗರುಜಿನಗಳನ್ನು ಗುಣಪಡಿಸಿದರು. ಆ ಜನಸಮೂಹವನ್ನು ಕಂಡಾಗ ಅವರ ಮನ ಕರಗಿತು. ಏಕೆಂದರೆ, ಕುರುಬನಿಲ್ಲದ ಕುರಿಗಳಂತೆ ಅವರು ತೊಳಲಿದ್ದರು ಹಾಗೂ ಬಳಲಿದ್ದರು. ಆದುದರಿಂದ ಯೇಸು ತಮ್ಮ ಶಿಷ್ಯರಿಗೆ, “ಬೆಳೆಯೇನೋ ಹೇರಳ; ಕೊಯಿಲುಗಾರರೋ ವಿರಳ; ಈ ಕಾರಣ ತನ್ನ ಕೊಯಿಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಪ್ರಾರ್ಥಿಸಿರಿ,” ಎಂದರು.

04.07.22 - "ಮಗಳೇ, ಹೆದರಬೇಡ; ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ,"

ಮೊದಲನೇ ವಾಚನ: ಹೊಶೇಯ 2:16, 17-18, 21-22

ಸರ್ವೇಶ್ವರ ಇಂತೆನ್ನುತ್ತಾರೆ: ಆ ದಿನಗಳಲ್ಲಿ ನೀನು ನನ್ನನ್ನು ‘ಬಾಳ್‍ದೇವತೆ’ ಎಂದು ಕರೆಯದೆ ‘ನನ್ನ ಪತಿ’ ಎಂದು ಕರೆಯುವೆ. ಬಾಳ್‍ದೇವತೆಗಳ ಹೆಸರುಗಳನ್ನು ನಿನ್ನ ಬಾಯಿಂದ ತೊಲಗಿಸುವೆನು; ಇನ್ನೆಂದಿಗೂ ಅವುಗಳನ್ನು ನೀನು ಉಚ್ಚರಿಸದಂತೆ ಮಾಡುವೆನು. ಆ ದಿನಗಳಲ್ಲಿ ನನ್ನ ಜನರಿಗೆ ಹಾನಿ ಮಾಡದಂತೆ ಕಾಡಿನ ಮೃಗಗಳೊಂದಿಗೂ, ಆಕಾಶದ ಪಕ್ಷಿಗಳೊಂದಿಗೂ, ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೊಂದಿಗೂ ಒಪ್ಪಂದ ಮಾಡಿಕೊಳ್ಳುವೆನು. ಬಿಲ್ಲುಬಾಣ, ಕತ್ತಿಕಠಾರಿಗಳು ಅವರ ನಾಡಿನಲ್ಲಿ ಇಲ್ಲದಂತೆ ಮಾಡುವೆನು; ನನ್ನ ಜನರು ಸುರಕ್ಷಿತವಾಗಿ ನೆಲಸುವಂತೆ ಮಾಡುವೆನು. ಸರ್ವೇಶ್ವರ ಇಂತೆನ್ನುತ್ತಾರೆ: ಆ ದಿನದಂದು ಪ್ರೀತಿಸುವೆನು ನಿನ್ನನು; ಆಲಿಸುವೆನು ಆಗಸದ ಮೊರೆಯನು. ಆಗಸವು ಆಲಿಸುವುದು ಭೂಮಿಯ ಮೊರೆಯನು ಇವು ಆಲಿಸುವುವು ಇಸ್ರಯೇಲಿನ ಮೊರೆಯನು.

ಕೀರ್ತನೆ: 145:2-3, 4-5, 6-7, 8-9

ಶ್ಲೋಕ: ಪ್ರಭು ದಯಾನಿಧಿ, ಕೃಪಾಸಾಗರನು

ಶುಭಸಂದೇಶ: ಮತ್ತಾಯ 9:18-26


ಯೇಸುಸ್ವಾಮಿ ಹೀಗೆ ಬೋಧಿಸುತ್ತಿರುವಾಗಲೇ ಯೆಹೂದ್ಯ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನು ಯೇಸುವಿನ ಮುಂದೆ ಮೊಣಕಾಲೂರಿ, "ನನ್ನ ಮಗಳು ಈಗ ತಾನೆ ಸತ್ತುಹೋದಳು. ಆದರೂ ತಾವು ದಯಮಾಡಿಸಿ ತಮ್ಮ ಹಸ್ತವನ್ನು ಆಕೆಯ ಮೇಲಿಡಬೇಕು. ಅವಳು ಮರಳಿ ಬದುಕುವಳು," ಎಂದು ಬೇಡಿಕೊಂಡನು. ಯೇಸು ಎದ್ದು ಅವನ ಹಿಂದೆ ಹೊರಟರು. ಶಿಷ್ಯರೂ ಹಿಂಬಾಲಿಸಿ ಹೋದರು. ಹೋಗುತ್ತಿದ್ದಾಗ, ಹನ್ನೆರಡು ವರ್ಷಗಳಿಂದ ರಕ್ತಸ್ರಾವ ರೋಗದಿಂದ ಬಹಳವಾಗಿ ನರಳುತ್ತಿದ್ದ ಒಬ್ಬ ಮಹಿಳೆ ಹಿಂಬದಿಯಿಂದ ಬಂದು ಯೇಸುಸ್ವಾಮಿಯ ಉಡುಪಿನ ಅಂಚನ್ನು ಮುಟ್ಟಿದಳು. "ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣಹೊಂದುವೆನು" ಎಂದುಕೊಂಡಿದ್ದಳು ಆಕೆ. ಯೇಸು ಹಿಂದಿರುಗಿ ಆಕೆಯನ್ನು ನೋಡಿ, "ಮಗಳೇ, ಹೆದರಬೇಡ; ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ," ಎಂದರು. ಆ ಕ್ಷಣದಲ್ಲೇ ಆಕೆ ವ್ಯಾಧಿಯಿಂದ ಮುಕ್ತಳಾದಳು. ಯೇಸು ಆ ಅಧಿಕಾರಿಯ ಮನೆಯನ್ನು ತಲುಪಿದರು. ಅಲ್ಲಿ ವಾದ್ಯಗಾರರನ್ನೂ ಗದ್ದಲ ಮಾಡುತ್ತಿದ್ದ ಜನಜಂಗುಳಿಯನ್ನೂ ಕಂಡು, "ಎಲ್ಲರೂ ಇಲ್ಲಿಂದ ಹೊರಡಿರಿ, ಬಾಲಕಿ ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ" ಎಂದರು. ಜನರು ನಕ್ಕು ಅವರನ್ನು ಪರಿಹಾಸ್ಯ ಮಾಡಿದರು. ಆದರೂ ಜನರ ಗುಂಪನ್ನು ಹೊರಗೆ ಕಳುಹಿಸಿ, ಯೇಸು ಕೊಠಡಿಯೊಳಕ್ಕೆ ಹೋಗಿ, ಬಾಲಕಿಯ ಕೈಹಿಡಿದು ಎಬ್ಬಿಸಿದರು. ಆಕೆ ಎದ್ದಳು. ಈ ಸಮಾಚಾರ ಆ ನಾಡಿನಲ್ಲೆಲ್ಲಾ ಹಬ್ಬಿ ಹರಡಿತು. 

03.07.2022 - "ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ."

ಮೊದಲನೇ ವಾಚನ: ಯೆಶಾಯ 66:10-14


"ಜೆರುಸಲೇಮನ್ನು ಪ್ರೀತಿಸುವವರೇ, ನೀವೆಲ್ಲರೂ ಆನಂದಿಸಿರಿ ಆಕೆಯೊಂದಿಗೆ, ಹರ್ಷಗೊಳ್ಳಿರಿ ಆಕೆಯ ಬಗ್ಗೆ ಆಕೆಯ ನಿಮಿತ್ತ  ದುಃಖಿಸುವವರೇ, "ಸಾಂತ್ವನ ನೀಡುವ ಆಕೆಯ ಸ್ತನ್ಯದಿಂದ ತೃಪ್ತಿಗೊಳ್ಳುವೆವು, ಹೌದು, ಆಕೆಯ ಸಿರಿ ಸಮೃದ್ಧಿಯನ್ನು ಹೀರುತ್ತಾ ಹಿಗ್ಗುವೆವು," ಎಂದು ನೀವೆಲ್ಲರು ಉಲ್ಲಾಸಪಡಿ ಆಕೆಯೊಂದಿಗೆ." ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: "ಇಗೋ, ಆಕೆಗೆ ಹರಿಯಮಾಡುವೆನು ಸುಕಶಾಂತಿಯನ್ನು ನದಿಯಂತೆ ನೀಡುವೆ ರಾಷ್ಟ್ರಗಳ ವೈಭವವನು ತುಂಬಿ ತುಳುಕುವ ತೊರೆಯಂತೆ ನೀವಿರುವಿರಿ ಹಾಲುಕುಡಿವ ಹಸುಳೆಯಂತೆ ಎತ್ತಿಕೊಳ್ಳಲಾಗುವುದು ನಿಮ್ಮನ್ನು ತಾಯ ಕಂಕುಳಲಿ ನಲಿದಾಡುವಿರಿ ನೀವು ಆಕೆಯ ಮಡಿಲಲಿ. ನಾನೇ ನಿಮ್ಮನ್ನು ಸಂತೈಸುವೆನು ತಾಯಿಯಂತೆ ಸಾಂತ್ವನ ದೊರಕುವುದು ನಿಮಗೆ ಜೆರುಸಲೇಮಿನಲ್ಲೆ. ಇದನ್ನು ಕಂಡಾಗ ನಿಮ್ಮೆದೆ ಸಂತಸದಿಂದ ಉಬ್ಬುವುದು. ಚಿಗುರುವುದು ಹಸಿಹುಲ್ಲಂತೆ ನಿಮ್ಮೆಲುಬು. "ಸರ್ವೇಶ್ವರನ ಕೃಪಾಹಸ್ತ ತನ್ನ ಭಕ್ತರ ಮೇಲೆ ಆತನ ರೋಷಾವೇಶ ಶತ್ರುಗಳ ಮೇಲೆ" ಎಂಬುವುದು ವ್ಯಕ್ತವಾಗುವುದು ನಿಮಗೆ.

ಕೀರ್ತನೆ: 66:1-3, 4-5, 6-7, 16, 20

ಶ್ಲೋಕ: ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ

ಎರಡನೇ ವಾಚನ: ಗಲಾತ್ಯರಿಗೆ  6:14-18


ನಮಗಾದರೋ ನಮ್ಮ ಪ್ರಭು ಯೇಸುಕ್ರಿಸ್ತರ ಶಿಲುಬೆಯನ್ನು ಬಿಟ್ಟು ಬೇರಾವುದರಲ್ಲೂ ಹೆಚ್ಚಳಪಡುವುದು ಬೇಡವೇ ಬೇಡ. ಆ ಶಿಲುಬೆಯ ಮೂಲಕ, ನನ್ನ ಪಾಲಿಗೆ ಲೋಕವೇ ಶಿಲುಬೆಗೆ ಜಡಿಸಿಕೊಂಡು ಸತ್ತಿದೆ; ನಾನೂ ಸಹ ಲೋಕದ ಪಾಲಿಗೆ ಶಿಲುಬೆಗೆ ಜಡಿಸಿಕೊಂಡು ಸತ್ತಿದ್ದೇನೆ. ಸುನ್ನತಿ ಮಾಡಿಸಿಕೊಳ್ಳುವುದೋ, ಮಾಡಿಸಿ ಕೊಳ್ಳದಿರುವುದೋ ಮಹತ್ತಾದುದಲ್ಲ. ಹೊಸ ಸೃಷ್ಟಿಯಾಗುವುದೇ ಮಹತ್ತರವಾದುದು ಈ ನಿಯಮವನ್ನು ಅನುಸರಿಸುವ ಎಲ್ಲರಿಗೂ, ಅಂದರೆ ನಿಜ ಇಸ್ರಯೇಲರಾದ  ದೇವಜನರೆಲ್ಲರಿಗೂ ಶಾಂತಿ ಸಮಾಧಾನವೂ ಕೃಪಾಶೀರ್ವಾದವೂ ಲಭಿಸಲಿ! ಇನ್ನು ಮೇಲೆ ಯಾರೂ ನನಗೆ ತೊಂದರೆ ಕೊಡದಿರಲಿ. ಯೇಸುವಿನ ದಾಸನೆಂದು ಸೂಚಿಸುವ ಕೆಂಗುರುತುಗಳು ನನ್ನ ದೇಹದಲ್ಲಿ ಮುದ್ರಿತವಾಗಿವೆ. ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹ ನಿಮ್ಮೊಡನೆ ಇರಲಿ! ಆಮೆನ್.

ಶುಭಸಂದೇಶ: ಲೂಕ  10:1-12, 17-20 (10:19)


ಯೇಸುಸ್ವಾಮಿ ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, "ಬೆಳೆಯೇನೋ ಹೇರಳವಾಗಿದೆ; ಕೊಯ್ಲುಗಾರರೂ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ, ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, "ಈ ಮನೆಗೆ ಶಾಂತಿ," ಎಂದು ಆಶೀರ್ವಾದ ಮಾಡಿ, ಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದು, ಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು. ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗ, ಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. "ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ," ಎಂದು ತಿಳಿಸಿರಿ. ಆದರೆ ನೀವು ಹೋಗುವ ಊರಿನ ಜನರು ನಿಮ್ಮನ್ನು ಸ್ವಾಗತಿಸದೆ ಹೋದರೆ, ರಸ್ತೆಗಳಿಗೆ ಹೋಗಿ, "ನಿಮ್ಮ ಪಾದಗಳಿಗೆ ಅಂಟಿರುವ ನಿಮ್ಮ ಊರಿನ ಧೂಳನ್ನು ಕೂಡ ನಿಮಗೆ ವಿರುದ್ಧವಾಗಿ ಒದರಿಬಿಡುತ್ತೇವೆ. ಆದರೂ ದೇವರ ಸಾಮ್ರಾಜ್ಯ ಸಮೀಪಿಸಿದೆ ಎಂಬುದನ್ನು ಮಾತ್ರ ನೀವು ಗಮನದಲ್ಲಿಡಿ," ಎಂದು ತಿಳಿಸಿರಿ. ತೀರ್ಪಿನ ದಿನ ಈ ಊರಿನ ಗತಿ ಸೊದೋಮ್ ಊರಿನ ಗತಿಗಿಂತಲೂ ಕಠಿಣವಾಗಿರುವುದೆಂದು ನಾನು ನಿಮಗೆ ಹೇಳುತ್ತೇನೆ." ಕಳುಹಿಸಲಾದ ಎಪ್ಪತ್ತೆರಡು ಮಂದಿ ಸಂತೋಷಭರಿತರಾಗಿ ಹಿಂದಿರುಗಿ ಬಂದು, "ಸ್ವಾಮೀ ನಿಮ್ಮ ಹೆಸರಿನಲ್ಲಿ ಆಜ್ಞೆಮಾಡಿದಾಗ ದೆವ್ವಗಳು ಕೂಡ ನಮಗೆ ಅದೀನವಾಗುತ್ತವೆ," ಎಂದು ವರದಿ ಮಾಡಿದರು. ಅದಕ್ಕೆ ಯೇಸು, "ಸೈತಾನನು ಆಕಾಶದಿಂದ ಸಿಡಿಲಿನಂತೆ ಬೀಳುವುದನ್ನು ಕಂಡೆನು. ಇಗೋ, ಸರ್ಪಗಳನ್ನು ಹಾಗೂ ಚೇಳುಗಳನ್ನು ತುಳಿಯುವುದಕ್ಕೂ ಶತ್ರುವಿನ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೂ  ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಹಾನಿಮಾಡದು. ಆದರೂ ದೆವ್ವಗಳು ನಿಮಗೆ ಅಧೀನವಾಗಿವೆಯೆಂದು ಸಂತೋಷಪಡುವುದಕಿಂತ ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿವೆ ಎಂದು ಸಂತೋಷಪಡಿ," ಎಂದು ಹೇಳಿದರು.

02.07.22 - " ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ"

ಮೊದಲನೆಯ ವಾಚನ: ಆಮೋಸ 9:11-15


ಸರ್ವೇಶ್ವರ ಇಂತೆನ್ನುತ್ತಾರೆ: "ದಿನ ಬರಲಿದೆ, ಅಂದು ಬಿದ್ದುಹೋಗಿರುವ ದಾವೀದನ ಗುಡಾರವನ್ನು ಮರಳಿ ಎಬ್ಬಿಸುವೆನು. ಅದರ ಬಿರುಕುಗಳನ್ನು ಮುಚ್ಚುವೆನು, ಹಾಳಾದುದ್ದನ್ನು ಎತ್ತಿ ನಿಲ್ಲಿಸುವೆನು. ಮೊದಲು ಇದ್ದಂತೆಯೇ ಪುನಃ ನಿರ್ಮಿಸುವೆನು. ಹೀಗೆ ನನ್ನ ಜನರು ಎದೋಮಿನ ಮಿಕ್ಕ ಭಾಗವನ್ನೂ ಸರ್ವೇಶ್ವರನ ಪ್ರಜೆ ಎನ್ನಿಸಿಕೊಂಡ ಸಕಲ ಜನಾಂಗಗಳನ್ನೂ ಸ್ವಾಧೀನಪಡಿಸಿಕೊಳ್ಳುವರು." ಈ ಕಾರ್ಯವನ್ನು ಸಾಧಿಸುವಂಥ ಸರ್ವೇಶ್ವರಸ್ವಾಮಿಯ ನುಡಿಯಿದು: ಕಾಲ ಬರುವುದು. ಆಗ ಹೊಸಬಿತ್ತನೆಯಾಗುವುದು ಕೊಯ್ಯುವವನ ಹಿಂದೆಯೆ; ಹೊಸ ಫಸಲು ಸಿದ್ಧವಾಗುವುದು ದ್ರಾಕ್ಷೆ ತುಳಿಯುವವನ ಮುಂದೆಯೆ. ಸುರಿಸುವುವು ದ್ರಾಕ್ಷಾರಸವನು ಬೆಟ್ಟಗಳು, ಕರಗುವಂತಿರುವುವು ಅದರಿಂದ ಎಲ್ಲ ಗುಡ್ಡಗಳು. ಸನಾತನ ಸೌಭಾಗ್ಯಕ್ಕೆ ಮರಳಿಸುವೆನು ನನ್ನ ಜನರಾದ ಇಸ್ರಯೇಲರನು. ವಾಸಮಾಡುವರವರು ಪಾಳುಬಿದ್ದ ಪಟ್ಟಣಗಳನು ಮತ್ತೆ ಕಟ್ಟಿಕೊಂಡು. ಕುಡಿಯುವರು ಸಮೃದ್ಧಿಯಾಗಿ ದ್ರಾಕ್ಷಾತೋಟಗಳನು ಮಾಡಿಕೊಂಡು. ತಿನ್ನುವರು ಯಥೇಚ್ಛವಾಗಿ ಫಲವೃಕ್ಷಗಳನು ಬೆಳೆಸಿಕೊಂಡು. ಬೇರೂರಿಸುವೆನು ಅವರನು ಸ್ವಂತನಾಡಿನಲಿ, ಕೀಳರಾರು ಅವರನು ಅಲ್ಲಿಂದ ಮರಳಿ." ಇದು ನಿನ್ನ ದೇವರಾದ ಸರ್ವೇಶ್ವರನ ನುಡಿ.

ಕೀರ್ತನೆ: 85:9, 11-12, 13-14
ಶ್ಲೋಕ: ಭಯಭಕ್ತಿಯುಳ್ಳವರಿಗಾತನ ರಕ್ಷಣೆ ಸನ್ನಿಹಿತ.

ಭಯಭಕ್ತಿಯುಳ್ಳವರಿಗಾತನ ರಕ್ಷಣೆ ಸನ್ನಿಹಿತ|
ಇದರಿಂದ ತನ್ನ ಮಹಿಮೆ ನಾಡಿನಲ್ಲಿರುವುದು ನಿರುತ||

ಸರ್ವ ಜನಾಂಗಗಳೇ, ಚಪ್ಪಾಳೆ ಹೊಡೆಯಿರಿ|
ಸರ್ವೇಶ್ವರನಿಗೆ ಜಯಜಯ ಘೋಷಮಾಡಿರಿ ಮಾಡಿರಿ||
ಪರಾತ್ಪರನಾದ ಪ್ರಭುವು ಘನಗಂಭೀರನು|
ಪ್ರಪಂಚಕ್ಕೆಲ್ಲ ರಾಜಧಿರಾಜನು||

ಏರಿದನು ಪ್ರಭು ಜಯಜಯಕಾರದೊಂದಿಗೆ|
ಆರೋಹಣವಾದನು ತುತೂರಿನಾದ ಜೊತೆಗೆ||
ಕೀರ್ತಿಸಿರಿ, ನಮ್ಮ ದೇವನನು ಸಂಕೀರ್ತಿಸಿರಿ|
ಕೀರ್ತಿಸಿರಿ, ನಮ್ಮ ರಾಜನನು ಸಂಕೀರ್ತಿಸಿರಿ||

ದೇವನು ಭೂಮಂಡಲಕ್ಕೆಲ್ಲಾ ಒಡೆಯನು|
ಕೀರ್ತನೆಯಿಂದ ಕೊಂಡಾಡಿರಿ ಆತನನು||
ವಹಿಸಿಕೊಂಡನು ದೇವನು ಸರ್ವಾಧಿಪತ್ಯ|
ಅಲಂಕರಿಸಿಹನು ತನ್ನ ಪೂಜ್ಯ ಗದ್ದುಗೆಯ||

ಶುಭಸಂದೇಶ: ಮತ್ತಾಯ 9:14-17



ಯೊವಾನ್ನನ ಶಿಷ್ಯರು ಯೇಸುವಿನ ಬಳಿಗೆ ಬಂದರು. " ನಾವೂ ಫರಿಸಾಯರೂ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ? " ಎಂದು ಪ್ರಶ್ನೆ ಹಾಕಿದರು. ಅದಕ್ಕೆ ಯೇಸು, " ಮದುವಣಿಗನು ಜೊತೆಯಲ್ಲಿರುವಷ್ಟು ಕಾಲ ಅವನ ಆಪ್ತರು ದುಃಖಪಡುವುದುಂಟೇ? ಮದುವಣಿಗನು ಅವರಿಂದ ಅಗರಬೇಕಾಗುವ ಕಾಲವು ಬರುವುದು; ಆಗ ಅವರು ಉಪವಾಸ ಮಾಡುವರು. " ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ. ಏಕೆಂದರೆ ಹೊಸ ತೇಪೆಯು ಹಳೆಯ ಅಂಗಿಯನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ. ಅಂತೆಯೇ ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ತುಂಬಿಡುವುದಿಲ್ಲ. ತುಂಬಿಟ್ಟರೆ ಬುದ್ದಲಿಗಳು ಬಿರಿಯುತ್ತವೆ, ಮದ್ಯವು ಚೆಲ್ಲಿಹೋಗುತ್ತದೆ; ಬುದ್ದಲಿಗಳೂ ಹಾಳಾಗುತ್ತವೆ. ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡುತ್ತಾರೆ. ಆಗ ಎರಡೂ ಉಳಿಯುತ್ತವೆ, " ಎಂದರು.

01.07.22

ಮೊದಲನೆಯ ವಾಚನ: ಆಮೋಸ 8:4-6, 9-12


ದಿಕ್ಕಿಲ್ಲದವರನ್ನು ತುಳಿದುಬಿಡುವವರೇ, ನಾಡಿನ ಬಡವರನ್ನು ನಿರ್ಮೂಲ ಮಾಡುವವರೇ, ಕೇಳಿ, "ದವಸಧಾನ್ಯಗಳನ್ನು ಮಾರಬೇಕಲ್ಲ, ಈ ಅಮಾವಾಸ್ಯೆ ತೀರುವುದು ಯಾವಾಗ ? ಗೋದಿಯ ವ್ಯಾಪಾರ ಮಾಡಬೇಕಾಗಿದೆ. ಸಬ್ಬತ್ ದಿನ ಕಳೆಯುವುದು ಯಾವಾಗ ? ಕೊಳಗವನ್ನು ಕಿರಿದುಮಾಡೋಣ, ತೊಲವನ್ನು ಹಿರಿದುಮಾಡೋಣ, ಕಳ್ಳತಕ್ಕಡಿಯನ್ನು ಬೆಳೆಸೋಣ; ಬಡವರನ್ನು ಬೆಳ್ಳಿಗೆ, ದಿಕ್ಕಿಲ್ಲದವರನ್ನು ಒಂದು ಜೊತೆ ಕೆರಕ್ಕೆ ಕೊಂಡುಕೊಳ್ಳೋಣ; ಗೋದಿಯ ನುಚ್ಚುನುಸಿಯನ್ನೂ ಬಿಡದಂತೆ ಮಾರಿಬಿಡೋಣ, " ಎಂದುಕೊಳ್ಳುತ್ತೀರಿ, ಅಲ್ಲವೇ? ಒಡೆಯರಾದ ಸರ್ವೇಶ್ವರ ಇಂತೆನ್ನುತ್ತಾರೆ: "ಆ ದಿನದಂದು ನಡುಮಧ್ಯಾಹ್ನದಲ್ಲಿ ಸೂರ್ಯನನ್ನು ಮುಳುಗಿಸುವೆನು. ಹಾಡು ಹಗಲಲ್ಲೇ ಭೂಮಿಯನ್ನು ಕತ್ತಲಾಗಿಸುವೆನು. ನಿಮ್ಮ ಕೊಂಡಾಟದಿನಗಳನ್ನು ಗೋಳಾಟದಿನಗಳನ್ನಾಗಿ ಮಾರ್ಪಡಿಸುವೆನು. ನಿಮ್ಮ ಹರ್ಷಗೀತೆಗಳನ್ನು ಶೋಕಗೀತೆಗಳನ್ನಾಗಿ ಬದಲಾಯಿಸುವೆನು. ನೀವೆಲ್ಲರೂ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಂಡು, ತಲೆ ಬೋಳಿಸಿಕೊಳ್ಳುವಂತೆ ಮಾಡುವೆನು. ಏಕಮಾತ್ರ ಪುತ್ರನನ್ನು ಕಳೆದುಕೊಂಡವರಂತೆ ನೀವು ಅತ್ತು ಪ್ರಲಾಪಿಸುವಿರಿ. ಆ ದಿನವೆಲ್ಲಾ ನಿಮಗೆ ಕರಾಳ ದಿನವಾಗುವುದು." ಒಡೆಯರಾದ ಸರ್ವೇಶ್ವರ ಇಂತೆನ್ನುತ್ತಾರೆ : "ದಿನಗಳು ಬರಲಿವೆ, ಅಂದು ನಾಡಿನಲ್ಲಿ ಕ್ಷಾಮವನ್ನುಂಟುಮಾಡುವೆನು. ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವೂ ಅಲ್ಲ; ಸರ್ವೇಶ್ವರನ ಸಂದೇಶಕ್ಕಾಗಿ ಹಸಿದು ಹಂಬಲಿಸುವ ಕ್ಷಾಮ. ಜನರು ಸಮುದ್ರದಿಂದ ಸಮುದ್ರದವರೆಗೆ ಉತ್ತರದಿಂದ ಪೂರ್ವದವರೆಗೆ ಅತ್ತಿತ್ತ ಹುಡುಕುತ್ತಾ ಬಳಲಿಹೋಗುವರು. ಆದರೂ ಅದು ಸಿಗದು.

ಕೀರ್ತನೆ: 119:2, 10, 20, 30, 40 ಮತ್ತಾಯ 4:4
ಶ್ಲೋಕ: ಮಾನವನು ಜೀವಿಸುವುದು ದೇವರಾಡುವ ಪ್ರತಿಯೊಂದು ನುಡಿಯಿಂದ.

ಆತನ ಕಟ್ಟಳೆಗಳನ್ನು ಕೈಗೊಳ್ಳುವವರು ಧನ್ಯರು|
ಮನಃಪೂರ್ವಕವಾಗಿ ಆತನನ್ನು ಅರಸುವವರು ಧನ್ಯರು||
ತುಂಬುಹೃದಯದಿಂದ ಹಂಬಲಿಸುತ್ತಿರುವೆನಯ್ಯಾ||
ನಿನ್ನಾಜ್ಞೆಯಿಂದ ನಾ ತಪ್ಪದಂತೆ ಕಾಯಯ್ಯಾ||

ನಿನ್ನ ವಿಧಿಗಳನ್ನೇ ಹಂಬಲಿಸುತ್ತಿರುವೆ ಅನುದಿನ,|
ಈ ಕಾರಣ ಕರಗಿಹೋಗುತಿದೆ ಎನ್ನ ಚೇತನ||
ಆರಿಸಿಕೊಂಡಿರುವೆನು ನಾನು ಸತ್ಯಮಾರ್ಗವನು|
ಇರಿಸಿಕೊಂಡಿಹೆನು ಕಣ್ಮುಂದೆ ನಿನ್ನ ವಿಧಿಗಳನು||

ನಿನ್ನ ನಿಬಂಧನೆಗಳ ಅಭಿಮಾನಿಯು ನಾನು|
ನೀತಿಗನುಸಾರ ಚೇತನಗೊಳಿಸೆನ್ನ ನೀನು||
ಬಾಯ್ದೆರೆದು ಹಾತೊರೆಯುತ್ತಿರುವೆ|
ನಿನ್ನ ಆಜ್ಞೆಗಳನು ಅರಸುತಿರುವೆ||

ಶುಭಸಂದೇಶ: ಮತ್ತಾಯ 9:9-13

ಆ ಕಾಲದಲ್ಲಿ ಯೇಸು ಆ ಸ್ಥಳವನ್ನು ಬಿಟ್ಟು ಮುಂದಕ್ಕೆ ಹೋಗುತ್ತಿದ್ದಾಗ ಮತ್ತಾಯ ಎಂಬವನನ್ನು ಕಂಡರು. ಅವನು ಸುಂಕವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿದ್ದನು. " ನನ್ನನ್ನು ಹಿಂಬಾಲಿಸು, " ಎಂದು ಹೇಳಿ ಯೇಸು ಅವನನ್ನು ಕರೆದರು. ಮತ್ತಾಯನು ಎದ್ದು ಅವರನ್ನು ಹಿಂಬಾಲಿಸಿದನು. ಇದಾದ ಮೇಲೆ ಯೇಸು ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಬಹುಮಂದಿ ' ಸುಂಕದವರೂ ' ' ಪಾಪಿಷ್ಟರೂ ' ಅಲ್ಲಿಗೆ ಬಂದರು. ಯೇಸು ಮತ್ತು ಅವರ ಶಿಷ್ಯರು ಕುಳಿತಿದ್ದ ಪಂಕ್ತಿಯಲ್ಲೇ ಇವರೂ ಊಟಕ್ಕೆ ಕುಳಿತರು. ಫರಿಸಾಯರು ಇದನ್ನು ಕಂಡದ್ದೇ ಯೇಸುವಿನ ಶಿಷ್ಯರನ್ನುದ್ದೇಶಿಸಿ, ನಿಮ್ಮ ಗುರು ಇಂತಹ ಬಹಿಷ್ಕೃತ ಜನರ ಜೊತೆಯಲ್ಲಿ ಊಟಮಾಡುವುದೇ ? " ಎಂದು ಆಕ್ಷೇಪಿಸಿದರು. ಇದನ್ನು ಕೇಳಿಸಿಕೊಂಡ ಯೇಸು, " ವೈದನ ಅವಶ್ಯಕತೆ ಇರುವುದು ರೋಗಿಗಳಿಗೆ; ಆರೋಗ್ಯವಂತರಿಗಲ್ಲ. ನೀವು ಹೋಗಿ, ' ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ ' ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ಕರೆಯಲು ಬಂದಿರುವುದು ಧರ್ಮಿಷ್ಠರನಲ್ಲ, ಪಾಪಿಷ್ಠರನ್ನು " ಎಂದರು.