ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

08.08.20 - " ಈ ಬೆಟ್ಟಕ್ಕೆ ಇಲ್ಲಿಂದ ಆ ಸ್ಥಳಕ್ಕೆ ಹೋಗು, ಎಂದು ಹೇಳಿದರೆ ಅದು ಹೋಗುತ್ತದೆ"

ಮೊದಲನೇ ವಾಚನ: ಪ್ರವಾದಿ ಹಬಕ್ಕೂಕನ ಗ್ರಂಥ 1:12--2:4

ಸರ್ವೇಶ್ವರಾ, ನನ್ನ ದೇವರೇ, ಪರಮ ಪಾವನ ಸ್ವಾಮಿಯೇ, ಅನಾದಿಯಿಂದ ಇರುವಂಥವರು ನೀವು. ನಾವು ಖಂಡಿತ ಸಾಯುವುದಿಲ್ಲ. ನಮ್ಮನ್ನು ದಂಡಿಸುವಂತೆ ಆ ಬಾಬಿಲೋನಿನವರನ್ನು ನೇಮಿಸಿದವರು ನೀವು; ಅವರನ್ನು ಪ್ರಬಲಗೊಳಿಸಿದವರು ನೀವು. ನಮಗೆ ಪೊರೆಬಂಡೆ ನೀವೇ. ಕೇಡನ್ನು ನೋಡಲಾರದಷ್ಟು ನಿಷ್ಕಳಂಕ ನಿಮ್ಮ ಕಣ್ಣು. ಕೆಡುಕನ್ನು ಸಹಿಸಲಾಗದಷ್ಟು ಪವಿತ್ರರು ನೀವು. ಇಂತಿರಲು ಕೆಡುಕನ್ನು ನೋಡಿ ಕೊಂಡಿರುವಿರೇಕೆ? ದುಷ್ಟನು ಶಿಷ್ಟನಾದವನನ್ನು ಕಬಳಿಸುತ್ತಿರುವುದನ್ನು ನೋಡಿ ಸುಮ್ಮನಿರುವಿರೇಕೆ? ಮನುಜರನ್ನು ಕಡಲ ಮೀನುಗಳಿಗೆ ಸಮನಾಗಿಸಿರುವಿರಿ, ಏಕೆ? ನಾಯಕನಿಲ್ಲದ ಕ್ರಿಮಿಕೀಟಗಳ ಗತಿಗೆ ಇಳಿಸಿರುವಿರಿ, ಏಕೆ? ಈ ಕಾರಣ ಆ ಬಾಬಿಲೋನಿಯರು ಮಾನವರನ್ನು ಗಾಳದಿಂದ ಸೆಳೆದುಕೊಳ್ಳುತ್ತಾರೆ; ಬಲೆಯಿಂದ ಬಾಚಿಕೊಳ್ಳುತ್ತಾರೆ; ತಮ್ಮ ಜಾಲದಲ್ಲಿ ರಾಶಿ ಹಾಕಿಕೊಳ್ಳುತ್ತಾರೆ; ಹಿರಿಹಿರಿ ಹಿಗ್ಗುತ್ತಾರೆ. ತಮ್ಮ ಬಲೆಗೆ ಬಲಿಕೊಡುತ್ತಾರೆ; ಧೂಪ ಹಾಕುತ್ತಾರೆ. ಅವುಗಳ ಮೂಲಕವೇ ಅವರ ಜೀವನ ಗಟ್ಟಿ; ಅವರ ಭೋಜನ ಪುಷ್ಟಿ. ಹೀಗೆ ಅವರು ನಿರಂತರವಾಗಿ ತಮ್ಮ ಬಲೆಯಿಂದ ಭಾಗ್ಯವನ್ನು ಪಡೆದುಕೊಳ್ಳುತ್ತಿರಬೇಕೋ? ದಯದಾಕ್ಷಿಣ್ಯವಿಲ್ಲದೆ ರಾಷ್ಟ್ರಗಳನ್ನು ನಾಶ ಮಾಡುತ್ತಿರಬೇಕೋ? “ನಾನು ಕಾವಲುಗಾರನಾಗಿ ನಿಲ್ಲುವೆನು. ಕಾವಲುಗೋಪುರವನ್ನೇ ಹತ್ತಿ ನಿಂತುಕೊಳ್ಳುವೆನು. ಸರ್ವೇಶ್ವರ ನನಗೆ ಏನು ಹೇಳುವರೋ, ಯಾವ ಉತ್ತರ ಕೊಡುವರೋ, ಎಂದು ಎದುರುನೋಡುವೆನು.” ಆಗ ಸರ್ವೇಶ್ವರ ನನಗೆ ಕೊಟ್ಟ ಉತ್ತರ ಇದು: “ನೀನು ಕಂಡ ದರ್ಶನವನ್ನು ಬರೆ. ಓದುವವನು ಶೀಘ್ರವಾಗಿ ಓದುವಂತೆ ಹಲಗೆಗಳ ಮೇಲೆ ಅದನ್ನು ಕೆತ್ತು. ನಿಯಮಿತ ಕಾಲದಲ್ಲಿ ಆ ದರ್ಶನ ನೆರವೇರುವುದು. ಅದರ ಅಂತಿಮ ಪರಿಣಾಮ ಶೀಘ್ರದಲ್ಲಿ ಗೊತ್ತಾಗುವುದು. ತಡವಾದರೂ ಕಾದಿರು; ಮೋಸಮಾಡದು. ಅದು ಖಂಡಿತವಾಗಿ ಕೈಗೂಡುವುದು; ತಾಮಸವಾಗದು. ನೋಡು, ನೇರಮನಸ್ಕನಲ್ಲದವನು, ಉಬ್ಬಿಹೋಗಿರುವ ಆ ದುರ್ಜನನು ಉಳಿಯನು; ದೇವರೊಂದಿಗೆ ಸತ್ಸಂಬಂಧ ಹೊಂದಿರುವ ಸಜ್ಜನನು ವಿಶ್ವಾಸದಿಂದಲೇ ಬಾಳುವನು. 
ಕೀರ್ತನೆ: 9:8-9, 10-11, 12-13

ಶ್ಲೋಕ: ನಿನ್ನನು ಅರಸುವವರನು ಹೇ ಪ್ರಭೂ, ನೀ ಕೈ ಬಿಡುವವನಲ್ಲ.

ಶುಭಸಂದೇಶ: ಮತ್ತಾಯ 17:14-20


ಜನರ ಗುಂಪು ಇದ್ದಲ್ಲಿಗೆ ಅವರೆಲ್ಲರು ಮರಳಿಬಂದರು. ಆಗ ಒಬ್ಬನು ಯೇಸುಸ್ವಾಮಿಯ ಬಳಿಗೆ ಬಂದು,  “ಪ್ರಭೂ, ನನ್ನ ಮಗನ ಮೇಲೆ ಕನಿಕರವಿಡಿ, ಅವನು ಮೂರ್ಛಾರೋಗಿ, ಅವನ ಕಷ್ಟ ಹೇಳತೀರದು, ಆಗಾಗ ಬೆಂಕಿಯಲ್ಲೋ ನೀರಿನಲ್ಲೋ ಬಿದ್ದುಬಿಡುತ್ತಾನೆ.  ಅವನನ್ನು ತಮ್ಮ ಶಿಷ್ಯರ ಬಳಿಗೆ ಕರೆದುಕೊಂಡು ಬಂದೆ. ಆದರೆ ಅವನನ್ನು ಗುಣಪಡಿಸಲು ಅವರಿಂದಾಗಲಿಲ್ಲ,” ಎಂದು ಮೊಣಕಾಲೂರಿ ಯಾಚಿಸಿದನು. ಅದಕ್ಕೆ ಯೇಸು, “ಅಯ್ಯೋ ವಿಶ್ವಾಸವಿಲ್ಲದ ವಕ್ರ ಪೀಳಿಗೆಯೇ, ಇನ್ನೆಷ್ಟುಕಾಲ ನಾನು ನಿಮ್ಮೊಂದಿಗಿರಲಿ? ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ?” ಎಂದು ಹೇಳಿ, “ಆ ಹುಡುಗನನ್ನು ಇಲ್ಲಿ ನನ್ನ ಬಳಿಗೆ ಕರೆದುಕೊಂಡು ಬನ್ನಿ,” ಎಂದರು. ಅನಂತರ ಆ ಹುಡುಗನಲ್ಲಿದ್ದ ದೆವ್ವವನ್ನು ಅವರು ಗದರಿಸಿದೊಡನೆಯೇ, ಅದು ಅವನನ್ನು ಬಿಟ್ಟುಹೋಯಿತು. ಅವನು ತಕ್ಷಣವೇ ಸ್ವಸ್ಥನಾದನು. ತರುವಾಯ ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಆ ದೆವ್ವವನ್ನು ಬಿಡಿಸಲು ನಮ್ಮಿಂದಾಗಲಿಲ್ಲವಲ್ಲ, ಅದೇಕೆ?” ಎಂದು ಕೇಳಿದರು.  ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಿಮ್ಮ ಅಲ್ಪವಿಶ್ವಾಸವೇ ಅದಕ್ಕೆ ಕಾರಣ. ನಾನು ನಿಶ್ಚಯವಾಗಿ ಹೇಳುತ್ತೇನೆ: ನಿಮಗೆ ಸಾಸಿವೆ ಕಾಳಿನಷ್ಟು ವಿಶ್ವಾಸವಾದರೂ ಇದ್ದಲ್ಲಿ, ಈ ಬೆಟ್ಟಕ್ಕೆ ಇಲ್ಲಿಂದ ಆ ಸ್ಥಳಕ್ಕೆ ಹೋಗು, ಎಂದು ಹೇಳಿದರೆ ಅದು ಹೋಗುತ್ತದೆ. ನಿಮ್ಮಿಂದ ಅಸಾಧ್ಯವಾದುದು ಒಂದೂ ಇರದು," ಎಂದರು.

07.08.20 - "ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು"

ಮೊದಲನೇ ವಾಚನ: ನಹೂಮ2:1 , 3; 3:1-3, 6-7

ನಿನೆವೆಯೇ, ನಿನಗೆದುರಾಗಿ ನಿಂತಿಹನು, ನಿನ್ನನ್ನು ಚದುರಿಸುವವನು! ಕಾವಲಿಡು ಕೋಟೆಯ ಸುತ್ತಲು ಪಹರೆಯಿಡು ದಾರಿ ಕಾಯಲು; ಅಣಿಯಾಗಲಿ ನಿನ್ನ ಸೈನ್ಯವಿಡೀ, ನಡುಕಟ್ಟಿ ನಿಲ್ಲು. ಶತ್ರುವಿನ ಶೂರರ ಗುರಾಣಿ ರಕ್ತಗೆಂಪು, ಪರಾಕ್ರಮಿಗಳ ಉಡುಪು ಕಡುಗೆಂಪು. ರಣರಂಗದೊಳು ಥಳಥಳಿಸುತ್ತವೆ ರಥಗಳು ಝಳಪಿಸುತ್ತವೆ ಈಟಿಗಳು. ಕಾಳಗಕ್ಕೆ ಕಾತರದಿಂದಿವೆ ಕುದುರೆಗಳು. ಧಿಕ್ಕಾರ ರಕ್ತಮಯವಾದ ನಗರಕೆ! ತುಂಬಿದೆ ಅದರಲಿ ಸುಳ್ಳು ಮತ್ತು ಸುಲಿಗೆ ನಿಲ್ಲದೆ ನಡೆಯುತ್ತಿದೆ ಅದರಲಿ ಕೊಳ್ಳೆ. ಕೇಳಿ, ಚಕ್ರಗಳಚೀತ್ಕಾರ, ಚಾಟಿಗಳ ಚಟಪಟ; ಕುದುರೆಗಳ ಭರದೌಡು, ರಥಗಳ ಹಾರಾಟ. ರಾಹುತರ ರಭಸ, ಕತ್ತಿಯ ಥಳಥಳಿಪು, ಈಟಿಯ ಝಳಿಪು; ಹತರಾದವರು ಅಗಣಿತ, ಸತ್ತವರು ಅಸಂಖ್ಯಾತ, ಶವಗಳ ರಾಶಿ ವಿಪರೀತ; ನುಗ್ಗುವವರು ಎಡವುತಿಹರು ಹೆಣಗಳನು ದಾಟಿಹೋಗುತ. ಎಸೆಯುವೆನು ನಿನ್ನ ಮೇಲೆ ಹೊಲಸನು ಕಳೆಯುವೆನು ನಿನ್ನ ಮಾನವನು ಪರಿಹಾಸ್ಯಕ್ಕೀಡುಮಾಡುವೆನು ನಿನ್ನನು. ನಿನ್ನ ನೋಡುವವರು ನಿನ್ನಿಂದ ದೂರ ಓಡುವರು “ನಿನೆವೆ ಹಾಳುಬಿದ್ದಿದೆ, ಅದಕ್ಕೆ ಗೋಳಿಡುವರಾರು? ಅದನ್ನು ಸಂತೈಸುವವರು ನಮಗೆಲ್ಲಿ ಸಿಕ್ಕಿಯಾರು?, ಎಂದುಕೊಳ್ಳುವರು.”

ಧರ್ಮೋಪದೇಶಕಾಂಡ: 32:35-36, 39, 41

ಶ್ಲೋಕ: ಬದುಕಿಸುವವನು, ಕೊಲ್ಲುವವನು ನಾನೇ.

ಶುಭಸಂದೇಶ: ಮತ್ತಾಯ 16:24-28


ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.  ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು.  ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯರು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು?  ನರಪುತ್ರನು ತನ್ನ ಪಿತನ ಪ್ರಭಾವದೊಡನೆ ತನ್ನ ದೂತರ ಸಮೇತ ಬರಲಿದ್ದಾನೆ. ಆಗ ಪ್ರತಿಯೊಬ್ಬ ಮಾನವನಿಗೆ ಅವನವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುವನು.  ಇಲ್ಲಿರುವವರಲ್ಲಿ ಕೆಲವರು ನರಪುತ್ರನು ತನ್ನ ಸಾಮ್ರಾಜ್ಯದಲ್ಲಿ ಪ್ರತ್ಯಕ್ಷನಾಗುವುದನ್ನು ಕಾಣುವುದಕ್ಕೆ ಮುನ್ನ ಸಾವನ್ನು ಸವಿಯುವುದಿಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ”.

06.08.20 - "ಅವರ ಮುಖ ಸೂರ್ಯನಂತೆ ಪ್ರಕಾಶಿಸಿತು"

ಮೊದಲನೇ ವಾಚನ: ದಾನಿಯೇಲ 7:9-10, 13-14

ನಾನು ನೋಡುತ್ತಿದ್ದ ಹಾಗೆ: ಸಿಂಹಾಸನಗಳನ್ನು ಹಾಕಲಾಯಿತು. ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ತಲೆಗೂದಲಿತ್ತು ನಿರ್ಮಲವಾದ ಬಿಳಿಯ ಉಣ್ಣೆಯಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು.  ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದುಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪುನೀಡಲು ಕುಳಿತುಕೊಂಡರು. ಪಟ್ಟಿಪುಸ್ತಕಗಳನ್ನು ತೆರೆಯಲಾಯಿತು. ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು. ಸಕಲ ರಾಷ್ಟ್ರ-ಕುಲ-ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!

ಕೀರ್ತನೆ: 97:1-2, 5-6, 9

ಶ್ಲೋಕ: ಪ್ರಭುವೇ, ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ

ಎರಡನೇ ವಾಚನ: ಪೇತ್ರ 1:16-19

ನಮ್ಮ ಪ್ರಭು ಯೇಸುಕ್ರಿಸ್ತರ ಶಕ್ತಿಸಾಮರ್ಥ್ಯವನ್ನು ಮತ್ತು ಅವರ ಪುನರಾಗಮನವನ್ನು ನಿಮಗೆ ತಿಳಿಯಪಡಿಸುವಾಗ ಚಮತ್ಕಾರದಿಂದ ಕಲ್ಪಿಸಿದ ಕಟ್ಟುಕತೆಗಳನ್ನು ಆಧರಿಸಿ ನಾವು ಮಾತನಾಡಲಿಲ್ಲ. ನಾವೇ ಅವರ ಮಹತ್ತನ್ನು ಕಣ್ಣಾರೆಕಂಡು ಅದನ್ನು ತಿಳಿಯಪಡಿಸಿದ್ದೇವೆ.  ತಂದೆಯಾದ ದೇವರಿಂದ ಅವರು ಗೌರವವನ್ನೂ ಮಹಿಮೆಯನ್ನೂ ಪಡೆದಾಗ, “ಈತನು ನನ್ನ ಪುತ್ರ, ನನಗೆ ಪ್ರಿಯನಾದವನು; ನನ್ನ ಅಪಾರ ಮೆಚ್ಚುಗೆಗೆ ಪಾತ್ರನು,” ಎಂದು ಅವರನ್ನು ಕುರಿತೇ ವಾಣಿಯೊಂದು ಮಹೋನ್ನತ ವೈಭವದಿಂದ ಕೇಳಿಬಂದಿತು.  ಆಗ ನಾವು ಆ ಪುನೀತ ಪರ್ವತದ ಮೇಲೆ ಅವರೊಡನೆ ಇದ್ದೆವು. ಸ್ವರ್ಗದಿಂದ ಆ ವಾಣಿಯನ್ನು ನಾವು ಕೇಳಿದೆವು. ಆದ್ದರಿಂದ ಪ್ರವಾದನೆಯ ಸಂದೇಶವು ನಮಗೆ ಮತ್ತಷ್ಟು ಖಚಿತವಾಗಿ ಗೊತ್ತಾಗಿದೆ. ಇದನ್ನು ನೀವು ಕತ್ತಲಲ್ಲಿ ಬೆಳಗುವ ದೀಪವೆಂದು ಪರಿಗಣಿಸಿ ಲಕ್ಷ್ಯಕೊಟ್ಟರೆ ಒಳ್ಳೆಯದು. ನಿಮ್ಮ ಹೃದಯದಲ್ಲಿ ಬೆಳಕು ಹರಿದು ಅರುಣೋದಯದ ನಕ್ಷತ್ರವು ಮೂಡುವವರೆಗೂ ಈ ದೀಪವು ಬೆಳಗುತ್ತಿರುತ್ತದೆ.

ಶುಭಸಂದೇಶ: ಮತ್ತಾಯ 17:1-9


ಪೇತ್ರ, ಯಕೋಬ ಮತ್ತು ಆತನ ಸಹೋದರ ಯೊವಾನ್ನ ಇವರನ್ನು ಯೇಸುಸ್ವಾಮಿ ಪ್ರತ್ಯೇಕವಾಗಿ ತಮ್ಮೊಡನೆ ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದರು. ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಸ್ವಾಮಿ ರೂಪಾಂತರ ಹೊಂದಿದರು, ಅವರ ಮುಖ ಸೂರ್ಯನಂತೆ ಪ್ರಕಾಶಿಸಿತು. ಅವರ ಉಡುಪು ಬೆಳಕಿನಂತೆ ಪ್ರಜ್ವಲಿಸಿತು. ಇದ್ದಕ್ಕಿದ್ದ ಹಾಗೆ ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಅವರಿಗೆ ಕಾಣಿಸಿತು. ಆಗ ಪೇತ್ರನು ಯೇಸುವಿಗೆ, “ಪ್ರಭೂ, ನಾವು ಇಲ್ಲೇ ಇರುವುದು ಎಷ್ಟು ಒಳ್ಳೆಯದು! ಅಪ್ಪಣೆಯಾದರೆ ಇಲ್ಲಿ ಮೂರು ಗುಡಾರಗಳನ್ನು ಕಟ್ಟುವೆನು. ತಮಗೊಂದು, ಮೋಶೆಗೊಂದು, ಎಲೀಯನಿಗೊಂದು,” ಎಂದನು. ಪೇತ್ರ ಇನ್ನೂ ಮಾತನಾಡುತ್ತಿರುವಾಗಲೇ ಪ್ರಕಾಶಮಾನವಾದ ಮೇಘವೊಂದು ಅವರನ್ನು ಆವರಿಸಿತು; ಆ ಮೇಘದಿಂದ ಒಂದು ವಾಣಿ, ‘ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು. ಈತನ ಮಾತಿಗೆ ಕಿವಿಗೊಡಿ,” ಎಂದಿತು. ಶಿಷ್ಯರು ಈ ವಾಣಿಯನ್ನು ಕೇಳಿ ಭಯಭ್ರಾಂತರಾದರು; ಬೋರಲು ಬಿದ್ದರು. ಆಗ ಯೇಸು ಅವರ ಹತ್ತಿರಕ್ಕೆ ಬಂದು ಅವರನ್ನು ಮುಟ್ಟಿ, “ಏಳಿ, ಭಯಪಡಬೇಡಿ,” ಎಂದರು. ಅವರು ಕಣ್ಣೆತ್ತಿ ನೋಡಿದಾಗ ಯೇಸುವನ್ನು ಬಿಟ್ಟು ಮತ್ತೆ ಯಾರನ್ನೂ ಕಾಣಲಿಲ್ಲ. ಅವರೆಲ್ಲರು ಬೆಟ್ಟದಿಂದ ಇಳಿದುಬರುವಾಗ ಯೇಸು, “ನರಪುತ್ರನು ಸತ್ತು ಪುನರುತ್ಥಾನ ಹೊಂದುವ ತನಕ ನೀವು ಕಂಡ ಈ ದರ್ಶನವನ್ನು ಯಾರಿಗೂ ಹೇಳಬೇಡಿ,” ಎಂದು ಆಜ್ಞಾಪಿಸಿದರು. 

05.08.20 - “ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ,”

ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ  31:1-7
ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ಕಾಲ ಬರಲಿದೆ, ಆಗ ಇಸ್ರಯೇಲಿನ ಸಕಲ ಗೋತ್ರಗಳಿಗೆ ನಾನೇ ದೇವರಾಗಿರುವೆನು. ಅವರು ನನಗೆ ಪ್ರಜೆಯಾಗಿರುವರು.  ಇದು ಸರ್ವೇಶ್ವರನಾದ ನನ್ನ ನುಡಿ. ಅಳಿದುಳಿದಾ ಜನಕ್ಕೆ ಅರಣ್ಯದಲ್ಲಿ ದಯೆ ದೊರೆಯಿತು. ಇಸ್ರಯೇಲ್ ಶಾಂತಿಯನ್ನು ಅರಸುತ್ತಾ ಹೋಗುವಾಗ ಸರ್ವೇಶ್ವರನಾದ ನಾನು ದೂರದಿಂದ ಅದಕ್ಕೆ ದರ್ಶನಕೊಟ್ಟು: ‘ನಾನು ನಿನ್ನನ್ನು ಪ್ರೀತಿಸುವುದು ಶಾಶ್ವತ ಪ್ರೇಮದಿಂದ. ಈ ಕಾರಣದಿಂದ ನಿನ್ನನ್ನು ಆಕರ್ಷಿಸಿಕೊಂಡಿದ್ದೇನೆ ಅಚಲ ಪ್ರೇಮದಿಂದ.  ಇಸ್ರಯೇಲೆಂಬ ಯುವತಿಯೇ, ನಿನ್ನ ಪಾಳುಬಿದ್ದ ಪ್ರದೇಶಗಳನ್ನು ನಾನು ಪುನಃ ಕಟ್ಟುವೆನು, ಅವು ಕಟ್ಟಡಗಳಿಂದ ಕೂಡಿರುವುವು. ನೀನು, ಮತ್ತೆ ತಾಳಮೇಳಗಳನ್ನು ತೆಗೆದುಕೊಂಡು ನಲಿದಾಡುವವರ ನಾಟ್ಯಗಳಲ್ಲಿ ಭಾಗವಹಿಸುವೆ.  ಸಮಾರಿಯದ ಗುಡ್ಡಗಳಲ್ಲಿ ಮರಳಿ ದ್ರಾಕ್ಷಾತೋಟಗಳನ್ನು ಮಾಡಿಕೊಳ್ಳುವೆ. ನೆಡುವವರೇ ನೆಟ್ಟ ಫಲಗಳನ್ನು ಸವಿಯುವರು. 6ಹೌದು, ದಿನ ಬರುವುದು. ಆಗ ಕಾವಲುಗಾರರು ಎಫ್ರಯಿಮಿನ ಗುಡ್ಡಗಳ ಮೇಲೆ ನಿಂತು, ‘ಎದ್ದೇಳಿ, ಹೋಗೋಣ. ಬನ್ನಿ ಸಿಯೋನಿಗೆ, ನಮ್ಮ ದೇವರಾದ ಸರ್ವೇಶ್ವರನ ಸನ್ನಿಧಾನಕ್ಕೆ’ ಎಂದು ಕೂಗಿ ಕರೆ ನೀಡುವರು.” ಸರ್ವೇಶ್ವರ ಹೀಗೆನ್ನುತ್ತಾರೆ: “ಯಕೋಬನನ್ನು ಕುರಿತು ಹರ್ಷಧ್ವನಿಗೈಯಿರಿ ಜನಾಂಗಗಳಾ ಶಿರೋಮಣಿಗೆ ಜೈಕಾರಮಾಡಿರಿ. ‘ಸರ್ವೇಶ್ವರ ಆಳಿದುಳಿದಾ ಇಸ್ರಯೇಲರನ್ನು ರಕ್ಷಿಸಿಹನು’ ಎಂದು ಘೋಷಿಸುತ್ತಾ ಸ್ತುತಿಸಿರಿ.

ಕೀರ್ತನೆ: 31-10,11-12,13

ಶ್ಲೋಕ: ಕುರಿಮಂದೆಯನ್ನು ಕಾಯುವ ಕುರುಬನಂತೆ ಪ್ರಭು ನಮ್ಮನ್ನು ಕಾಪಾಡುವರು 

ಶುಭಸಂದೇಶ: ಮತ್ತಾಯ 15:21-28


ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪ್ರಾಂತ್ಯಕ್ಕೆ ಹೋದರು. ಅಲ್ಲಿ ವಾಸವಾಗಿದ್ದ ಕಾನಾನ್ ನಾಡಿನ ಮಹಿಳೆ ಒಬ್ಬಳು ಅವರ ಬಳಿಗೆ ಬಂದಳು. “ಸ್ವಾಮೀ, ದಾವೀದ ಕುಲಪುತ್ರರೇ, ನನಗೆ ದಯೆತೋರಿ, ನನ್ನ ಮಗಳಿಗೆ ದೆವ್ವಹಿಡಿದು ಬಹಳ ಸಂಕಟಪಡುತ್ತಿದ್ದಾಳೆ,” ಎಂದು ಕೂಗಿಕೊಂಡಳು. ಯೇಸು ಆಕೆಗೆ ಒಂದು ಮಾತನ್ನೂ ಹೇಳಲಿಲ್ಲ. ಶಿಷ್ಯರು ಹತ್ತಿರಕ್ಕೆ ಬಂದು, “ಇವಳನ್ನು ಕಳಿಸಿಬಿಡಿ, ಒಂದೇ ಸಮನೆ ಗೋಳಿಡುತ್ತಾ, ನಮ್ಮನ್ನು ಬೆಂಬತ್ತಿ ಬರುತ್ತಿದ್ದಾಳೆ,” ಎಂದು ಕೇಳಿಕೊಂಡರು. ಆಗ ಯೇಸು, “ನನ್ನನ್ನು ಕಳಿಸಿರುವುದು ತಪ್ಪಿಹೋದ ಕುರಿಗಳಂತಿರುವ ಇಸ್ರಯೇಲ್ ಜನಾಂಗದವರ ಬಳಿಗೆ ಮಾತ್ರ,” ಎಂದರು. ಆದರೂ ಆಕೆ ಯೇಸುವಿಗೆ ಅಡ್ಡಬಿದ್ದು, “ಸ್ವಾಮೀ, ಸಹಾಯ ಮಾಡಿ,” ಎಂದು ಯಾಚಿಸಿದಳು. ಅದಕ್ಕೆ ಯೇಸು, “ಮಕ್ಕಳ ಆಹಾರವನ್ನು ತೆಗೆದು ನಾಯಿಗಳಿಗೆ ಎಸೆಯುವುದು ಸರಿಯಲ್ಲ,” ಎಂದರು. ಆಗ ಆಕೆ, “ಅದು ನಿಜ ಸ್ವಾಮೀ, ನಾಯಿಗಳಾದರೂ ತಮ್ಮ ಯಜಮಾನನ ಮೇಜಿನಿಂದ ಕೆಳಕ್ಕೆ ಬೀಳುವ ಚೂರುಪಾರನ್ನು ತಿನ್ನುತ್ತವೆ, ಅಲ್ಲವೇ?’ ಎಂದು ಮರುತ್ತರ ಕೊಟ್ಟಳು. ಆಗ ಯೇಸು, “ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ,” ಎಂದರು. ಅದೇ ಕ್ಷಣದಲ್ಲಿ ಆಕೆಯ ಮಗಳು ಗುಣ ಹೊಂದಿದಳು.



04.08.20 - "ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಇಬ್ಬರೂ ಹಳ್ಳದಲ್ಲಿ ಬೀಳುತ್ತಾರಷ್ಟೆ,"

ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ  30:1-2, 12-15, 18-22

ಸರ್ವೇಶ್ವರ ಸ್ವಾಮಿ ಯೆರೆಮೀಯನಿಗೆ ಮತ್ತೊಮ್ಮೆ ಈ ಸಂದೇಶವನ್ನು ದಯಪಾಲಿಸಿದರು: “ಇಸ್ರಯೇಲರ ದೇವರಾದ ಸರ್ವೇಶ್ವರ ಹೀಗೆನ್ನುತ್ತಾರೆ - ‘ನಾನು ನಿನಗೆ ಹೇಳಿರುವ ಮಾತುಗಳನ್ನೆಲ್ಲ ಗ್ರಂಥರೂಪವಾಗಿ ಬರೆ. ಹೌದು, ಸರ್ವೇಶ್ವರ ಹೀಗೆನ್ನುತ್ತಾರೆ: “ನಿನ್ನ ಗಾಯಗಳು ಗುಣಹೊಂದವು ನಿನ್ನ ಹುಣ್ಣನ್ನು ವಾಸಿಮಾಡಲಾಗದು. ನಿನ್ನ ಪರ ವಾದಿಸುವವರಿಲ್ಲ, ನಿನ್ನ ವ್ರಣಕ್ಕೆ ಔಷಧವಿಲ್ಲ ನಿನ್ನನ್ನು ಆರೈಕೆ ಮಾಡುವವರಿಲ್ಲ. ನಿನ್ನ ನಲ್ಲರೆಲ್ಲರು ಮರೆತುಬಿಟ್ಟರು, ನಿನ್ನನ್ನು ಹುಡುಕದಿರುವರು ಶತ್ರುವಿನಂತೆ ನಿನ್ನನ್ನು ಥಳಿಸಿದೆನು, ಕ್ರೂರವಾಗಿ ದಂಡಿಸಿದೆನು. ಏಕೆಂದರೆ, ನಿನ್ನ ಅಪರಾಧ ಹೆಚ್ಚಿದೆ ನಿನ್ನ ಪಾಪಗಳು ಲೆಕ್ಕವಿಲ್ಲದಿವೆ. ‘ಅಯ್ಯೋ ನೋವು ನಿಲ್ಲದಿದೆ,’ ಎಂದು ನಿನ್ನ ಗಾಯಕ್ಕಾಗಿ ಗೋಳಿಡುತ್ತಿರುವೆ ಏಕೆ? ನಿನ್ನ ಅಪರಾಧ ಹೆಚ್ಚಿದೆ, ಪಾಪಗಳು ಬಹಳವಿವೆ ಎಂದೇ ಇದನ್ನೆಲ್ಲ ನಿನಗೆ ಮಾಡಿದೆ. ಯಕೋಬನ ಮನೆಗಳ ದುರವಸ್ಥೆಯನ್ನು ತಪ್ಪಿಸುವೆನು ಜೆರುಸಲೇಮಿನ ನಿವಾಸಗಳನ್ನು ನಿಶ್ಚಯವಾಗಿ ಕರುಣಿಸುವೆನು. ಅದರ ಹಾಳುದಿಬ್ಬಗಳ ಮೇಲೆ ಹೊಸನಗರ ಕಟ್ಟುವೆನು ಅದರ ಅರಮನೆ ಮೊದಲಿದ್ದ ಸ್ಥಳದಲ್ಲೆ ನೆಲೆಯಾಗಿ ನಿಲ್ಲುವುದು. ಅವುಗಳಿಂದ ಸ್ತುತಿಸ್ತೋತ್ರ ಕೇಳಿಬರುವುದು ಅಲ್ಲಿಂದ ನಲಿವುನಾದ ಕೇಳಿಸುವುದು. ಆ ಜನರನ್ನು ಹೆಚ್ಚಿಸುವೆನು, ಅವರು ಕೊಂಚವಾಗಿರರು. ಅವರನ್ನು ಘನಪಡಿಸುವೆನು, ಅವರು ಹೀನರಾಗಿರರು. ಅವನ ಸಂತಾನ ಹಿಂದಿನ ಸುಸ್ಥಿತಿಯನ್ನು ಹೊಂದುವುದು ಅವರ ಸಮಾಜ ನನ್ನ ಮುಂದೆ ನೆಲೆಯಾಗಿ ನಿಲ್ಲುವುದು ಅವರನ್ನು ಬಾಧಿಸುವವರನ್ನೆಲ್ಲ ನಾನು ದಂಡಿಸುವೆನು. ಅವರಲ್ಲೇ ಒಬ್ಬನು ಅವರಿಗೆ ಪ್ರಭುವಾಗುವನು ಅವರ ವಂಶದವನೇ ಅವರನ್ನು ಆಳುವನು. ಅವನನ್ನು ನಾನು ನನ್ನ ಹತ್ತಿರ ಬರಗೊಡಿಸುವೆನು ಅವನು ನನ್ನ ಸನ್ನಿಧಾನಕ್ಕೆ ಸೇರುವನು. ಇಲ್ಲದಿದ್ದಲ್ಲಿ, ನನ್ನನು ಸಮೀಪಿಸಲು ಧೈರ್ಯಗೊಳ್ಳುವವನಾರು? - ಇದು ಸರ್ವೇಶ್ವರನಾದ ನನ್ನ ನುಡಿ. ನೀವು ನನಗೆ ಪ್ರಜೆಯಾಗಿರುವಿರಿ ನಾನು ನಿಮಗೆ ದೇವರಾಗಿರುವೆನು.

ಕೀರ್ತನೆ: 102:16-18, 19-21, 29, 22-23

ಶ್ಲೋಕ: ಪ್ರಭು ಪುನರುದ್ದರಿಸುವನು ಸಿಯೋನನು

ಶುಭಸಂದೇಶ: ಮತ್ತಾಯ 15:1-2, 10-14

ಜೆರುಸಲೇಮಿನಿಂದ ಫರಿಸಾಯರೂ ಧರ್ಮಶಾಸ್ತ್ರಿಗಳೂ ಯೇಸುಸ್ವಾಮಿಯ ಬಳಿಗೆ ಬಂದು, "ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಸಂಪ್ರದಾಯಗಳನ್ನು ಮೀರುವುದೇಕೆ? ಅವರು ಊಟಕ್ಕೆ ಮುಂಚೆ ಶುದ್ಧಾಚಾರಕ್ಕೆ ಅನುಗುಣವಾಗಿ ಕೈತೊಳೆದುಕೊಳ್ಳದೆ ಊಟ ಮಾಡುವುದೇಕೆ?" ಎಂದು ಕೇಳಿದರು. ಅನಂತರ ಯೇಸುಸ್ವಾಮಿ ಜನರನ್ನು ತಮ್ಮ ಬಳಿಗೆ ಕರೆದು, "ನಾನು ಹೇಳುವುದನ್ನು ಕೇಳಿ ಚೆನ್ನಾಗಿ ತಿಳಿದುಕೊಳ್ಳಿರಿ: ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಕಲುಷಿತಗೊಳಿಸುವುದಿಲ್ಲ; ಬಾಯೊಳಗಿನಿಂದ ಹೊರಕ್ಕೆ ಬರುವಂಥದ್ದೇ ಮನುಷ್ಯನನ್ನು ಕಲುಷಿತಗೊಳಿಸುತ್ತದೆ," ಎಂದು ಹೇಳಿದರು. ಆಗ ಶಿಷ್ಯರು ಹತ್ತಿರಕ್ಕೆ ಬಂದು, "ನಿಮ್ಮ ಮಾತನ್ನು ಕೇಳಿ ಫರಿಸಾಯರು ಬಹಳ ಬೇಸರಗೊಂಡಿದ್ದಾರೆಂದು ನಿಮಗೆ ತಿಳಿಯಿತೇ?" ಎಂದರು. ಅದಕ್ಕೆ ಯೇಸು, "ನನ್ನ ಪರಮಪಿತನು ನೆಡದ ಗಿಡಗಳನ್ನೆಲ್ಲಾ ಬೇರುಸಹಿತ ಕಿತ್ತುಹಾಕಲಾಗುವುದು. ಅವರನ್ನು ಅವರಷ್ಟಕ್ಕೇ ಬಿಡಿ; ಅವರೊ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸಲು ಹೋಗುತ್ತಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಇಬ್ಬರೂ ಹಳ್ಳದಲ್ಲಿ ಬೀಳುತ್ತಾರಷ್ಟೆ," ಎಂದರು.

03.08.20 - “ಅಲ್ಪವಿಶ್ವಾಸಿಯೇ, ಏಕೆ ಸಂದೇಹಪಟ್ಟೆ?”

ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ  28:1-17

ಅದೇ ವರ್ಷದಲ್ಲಿ, ಅಂದರೆ ಜುದೇಯದ ಅರಸ ಚಿದ್ಕೀಯನ ಆಳ್ವಿಕೆಯಲ್ಲಿ ನಾಲ್ಕನೆಯ ವರ್ಷದ ಐದನೆಯ ತಿಂಗಳಲ್ಲಿ, ಪ್ರವಾದಿಯಾದ ಅಜ್ಜೂರನ ಮಗನು ಹಾಗು ಗಿಬ್ಯೋನ್ ಊರಿನವನು ಆದ ಹನನ್ಯನು ಸರ್ವೇಶ್ವರನ ಆಲಯದೊಳಗೆ ಬಂದು ಯಾಜಕರ ಮತ್ತು ಸಕಲ ಜನರ ಮುಂದೆ ನಿಂತು ನನಗೆ ಹೀಗೆ ಹೇಳಿದ - “ ಇಸ್ರಯೇಲರ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರನ ನುಡಿ ಇದು: ‘ಬಾಬಿಲೋನಿಯದ ಅರಸನು ಹೇರಿರುವ ನೊಗವನ್ನು ಮುರಿದುಬಿಟ್ಟಿದ್ದೇನೆ. ಬಾಬಿಲೋನಿಯದ ಅರಸನಾದ ನೆಬೂಕದ್ನೆಚ್ಚರನು ಈ ಸ್ಥಳದಿಂದ ಬಾಬಿಲೋನಿಗೆ ಕೊಂಡು ಒಯ್ದ ಸರ್ವೇಶ್ವರನ ಆಲಯದ ಸಕಲ ಉಪಕರಣಗಳನ್ನು ಎರಡು ವರ್ಷಗಳೊಳಗಾಗಿ ನಾನು ಪುನಃ ಈ ಸ್ಥಳಕ್ಕೆ ಸೇರಿಸುವೆನು.  ಯೆಹೋಯಾಕೀಮನ ಮಗನೂ ಜುದೇಯದ ಅರಸನೂ ಆದ ಯೆಕೊನ್ಯನನ್ನು ಮತ್ತು ಬಾಬಿಲೋನಿಗೆ ಸೆರೆಹೋದ ಎಲ್ಲ ಯೆಹೂದ್ಯರನ್ನು ಈ ಸ್ಥಳಕ್ಕೆ ಮರಳಿ ಬರಮಾಡುವೆನು. ಇದು ಸರ್ವೇಶ್ವರನ ನುಡಿ.” ಆಗ ಪ್ರವಾದಿ ಯೆರೆಮೀಯನು ಸರ್ವೇಶ್ವರನ ಆಲಯದೊಳಗೆ ನಿಂತಿದ್ದ ಯಾಜಕರ ಮತ್ತು ಸಕಲ ಜನರ ಎದುರಿನಲ್ಲೆ ಪ್ರವಾದಿ ಹನನ್ಯನಿಗೆ: “ಆಮೆನ್! ಸರ್ವೇಶ್ವರ ಹಾಗೆಯೇ ಮಾಡಲಿ! ಸರ್ವೇಶ್ವರ ತಮ್ಮ ಆಲಯದ ಉಪಕರಣಗಳನ್ನೂ ಸೆರೆಹೋದವರೆಲ್ಲರನ್ನೂ ಬಾಬಿಲೋನಿನಿಂದ ಈ ಸ್ಥಳಕ್ಕೆ ಪುನಃ ಬರಮಾಡಲಿ. ನೀನು ನುಡಿದ ಮಾತುಗಳನ್ನು ನೆರವೇರಿಸಲಿ! ಆದರೆ ನಾನು, ನಿನ್ನ ಮತ್ತು ಸಕಲ ಜನರ ಕಿವಿಗೆ ಬೀಳುವಂತೆ ನುಡಿಯುವ ಈ ಮಾತನ್ನು ಗಮನಿಸು: ನನಗೂ ನಿನಗೂ ಹಿಂದೆ, ಪುರಾತನ ಕಾಲದಿಂದಿದ್ದ ಪ್ರವಾದಿಗಳು ಅನೇಕ ದೇಶಗಳಿಗೂ ದೊಡ್ಡ ದೊಡ್ಡ ರಾಜ್ಯಗಳಿಗೂ ಯುದ್ಧ, ಆಪತ್ತು-ವಿಪತ್ತು, ಕಾಯಿಲೆ-ಕಷ್ಟ, ಇಂಥವುಗಳನ್ನು ಸಾರುತ್ತಿದ್ದರು. ಹಿತಸಮಾಚಾರವನ್ನು ಸಾರುವ ಪ್ರವಾದಿಯೇ ಸರ್ವೇಶ್ವರನಿಂದ ನಿಜವಾಗಿ ಕಳುಹಿಸಲ್ಪಟ್ಟವನೆಂದು ಅವನ ಮಾತು ಕೈಗೂಡಿದ ಮೇಲೆ ತಿಳಿಯತಕ್ಕದ್ದು,” ಎಂದು ಹೇಳಿದನು. ಆಗ ಪ್ರವಾದಿ ಹನನ್ಯನು ಪ್ರವಾದಿ ಯೆರೆಮೀಯನ ಹೆಗಲಿನಿಂದ ನೊಗವನ್ನು ತೆಗೆದು ಮುರಿದುಹಾಕಿದನು.  ನೆರೆದಿದ್ದ ಜನರೆಲ್ಲರ ಮುಂದೆ, “ಸರ್ವೇಶ್ವರನೇ ಹೇಳಿದ್ದಾರೆ - ಇದೇ ಪ್ರಕಾರ, ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಹೊರಿಸಿರುವ ನೊಗವನ್ನು ಇನ್ನೆರಡು ವರ್ಷದೊಳಗೆ ಸಮಸ್ತ ರಾಷ್ಟ್ರಗಳ ಹೆಗಲಿನಿಂದ ತೆಗೆದು ಮುರಿದು ಹಾಕಲಾಗುವುದು,” ಎಂದು ಹೇಳಿದನು. ಇದನ್ನು ಕೇಳಿದ ಪ್ರವಾದಿ ಯೆರೆಮೀಯನು ಅಲ್ಲಿಂದ ಹೊರಟುಹೋದನು. ಹೀಗೆ ಪ್ರವಾದಿ ಹನನ್ಯನು ಪ್ರವಾದಿ ಯೆರೆಮೀಯನ ಹೆಗಲಿನಿಂದ ನೊಗವನ್ನು ತೆಗೆದು, ಮುರಿದುಹಾಕಿದ ಮೇಲೆ ಸರ್ವೇಶ್ವರ ಯೆರೆಮೀಯನಿಗೆ ಹೀಗೆಂದರು: “ ನೀನು ಹೋಗಿ ಹನನ್ಯನಿಗೆ: ‘ಸರ್ವೇಶ್ವರ ಇಂತೆನ್ನುತ್ತಾರೆ - ನೀನು ಮರದ ನೊಗಗಳನ್ನು ಮುರಿದುಬಿಟ್ಟಿರುವೆ. ಅವುಗಳಿಗೆ ಬದಲಾಗಿ ಕಬ್ಬಿಣದ ನೊಗಗಳನ್ನು ಮಾಡು.  ಏಕೆಂದರೆ ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರನ ಮಾತಿವು: ಈ ಎಲ್ಲ ರಾಷ್ಟ್ರಗಳು ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನಿಗೆ ಸೇವೆಮಾಡಲೆಂದು ನಾನು ಅವುಗಳ ಹೆಗಲಿಗೆ ಕಬ್ಬಿಣದ ನೊಗವನ್ನು ಹೇರಿದ್ದೇನೆ. ಅವು ಅವನಿಗೆ ಸೇವೆ ಸಲ್ಲಿಸೇತೀರಬೇಕು; ಕಾಡುಮೃಗಗಳು ಕೂಡ ಸೇವೆಸಲ್ಲಿಸುವಂತೆ ಅವನಿಗೆ ಅವುಗಳನ್ನು ಒಪ್ಪಿಸಿದ್ದೇನೆ, ಎಂದು ಹೇಳು.” ಆಗ ಪ್ರವಾದಿ ಯೆರೆಮೀಯನು ಪ್ರವಾದಿ ಹನನ್ಯನಿಗೆ, “ಹನನ್ಯನೇ ಕೇಳು, ಸರ್ವೇಶ್ವರ ನಿನ್ನನ್ನು ಕಳಿಸಲಿಲ್ಲ. ಆದರೂ ಈ ಜನರು ಸುಳ್ಳನ್ನು ನಂಬುವಂತೆ ಮಾಡುತ್ತಿರುವೆ. ಆದಕಾರಣ ಸರ್ವೇಶ್ವರ ಇಂತೆನ್ನುತ್ತಾರೆ: ಇಗೋ, ನಾನು ನಿನ್ನನ್ನು ಈ ಜಗತ್ತಿನಿಂದ ತೊಲಗಿಸುವೆನು. ನೀನು ಸರ್ವೇಶ್ವರನಾದ ನನಗೆ ವಿರುದ್ಧವಾಗಿ ದ್ರೋಹದ ಮಾತುಗಳನ್ನು ಆಡಿದ್ದರಿಂದ ಇದೇ ವರ್ಷ ಸಾಯುವೆ,” ಎಂದು ಹೇಳಿದನು. ಅಂತೆಯೇ ಹನನ್ಯನು ಅದೇ ವರ್ಷದ ಏಳನೆಯ ತಿಂಗಳಲ್ಲಿ ಸತ್ತುಹೋದನು.

ಕೀರ್ತನೆ: 119:29, 43, 79, 80, 95, 102

ಶ್ಲೋಕ: ಪ್ರಭೂ, ಬೋಧಿಸೆನಗೆ ನಿನ್ನ ನಿಬಂಧನೆಗಳನ್ನು

ಶುಭಸಂದೇಶ: ಮತ್ತಾಯ 14:22-36


ಯೊವಾನ್ನನ ಮರಣದ ಸಮಾಚಾರವನ್ನು ಕೇಳಿದ ಯೇಸುಸ್ವಾಮಿ ತಾವು ಜನರ ಗುಂಪನ್ನು ಕಳುಹಿಸಿಬಿಡುವಷ್ಟರಲ್ಲಿ, ಶಿಷ್ಯರು ದೋಣಿ ಹತ್ತಿ ತಮಗಿಂತ ಮುಂದಾಗಿ ಹೋಗಬೇಕೆಂದು ಆಜ್ಞಾಪಿಸಿದರು. ಜನರನ್ನು ಬೀಳ್ಕೊಟ್ಟ ಬಳಿಕ ಪ್ರಾರ್ಥನೆಮಾಡಲು ಯೇಸು ಒಬ್ಬರೇ ಬೆಟ್ಟಕ್ಕೆ ಹೋದರು. ಕತ್ತಲೆ ಕವಿದಾಗ ಅವರು ಅಲ್ಲಿ ಒಬ್ಬಂಟಿಗರಾಗಿದ್ದರು. ಅಷ್ಟರಲ್ಲಿ ದೋಣಿ ದಡದಿಂದ ಬಹುದೂರ ಸಾಗಿತ್ತು. ಎದುರುಗಾಳಿ ಬೀಸಿ ಅದು ಅಲೆಗಳ ಬಡಿತಕ್ಕೆ ಸಿಕ್ಕಿಕೊಂಡಿತ್ತು. ಆಗ ರಾತ್ರಿಯ ಕಡೇ ಜಾವದ ಸಮಯ. ಯೇಸು ಸರೋವರದ ಮೇಲೆ ನಡೆದುಕೊಂಡೇ ಶಿಷ್ಯರ ಬಳಿಗೆ ಬಂದರು. ಹೀಗೆ ಸರೋವರದ ಮೇಲೆ ನಡೆದು ಬರುತ್ತಿದ್ದ ಯೇಸುವನ್ನು ನೋಡಿದಾಗ ಶಿಷ್ಯರು ಭಯಭ್ರಾಂತರಾದರು. ದಿಗಿಲುಗೊಂಡು, “ಭೂತ, ಭೂತ!” ಎಂದು ಚೀರಿದರು. ತಕ್ಷಣವೇ ಯೇಸು, “ಭಯಪಡಬೇಡಿ, ನಾನೇ ಬೇರೆ ಯಾರೂ ಅಲ್ಲ, ಧೈರ್ಯದಿಂದಿರಿ,” ಎಂದು ಅವರೊಡನೆ ಮಾತನಾಡಿದರು. ಆಗ ಪೇತ್ರನು, “ಸ್ವಾಮೀ, ನೀವೇ ಆದರೆ ನಾನೂ ನೀರಿನ ಮೇಲೆ ನಡೆದು ನಿಮ್ಮ ಬಳಿಗೆ ಬರುವಂತೆ ಆಜ್ಞಾಪಿಸಿ,” ಎಂದನು. ಯೇಸು, “ಬಾ” ಎಂದು ಕರೆಯಲು ಪೇತ್ರನು ದೋಣಿಯನ್ನು ಬಿಟ್ಟು ನೀರಿನ ಮೇಲೆ ನಡೆಯುತ್ತಾ ಯೇಸುವಿನತ್ತ ಬಂದನು. ಆದರೆ ಬಲವಾದ ಗಾಳಿ ಬೀಸುತ್ತಿರುವುದನ್ನು ಕಂಡು ಹೆದರಿದನು. ಹಾಗೆಯೇ ಮುಳುಗಿಹೋಗಲಾರಂಭಿಸಿದನು. ಆಗ, “ಸ್ವಾಮೀ, ಕಾಪಾಡಿ, ಕಾಪಾಡಿ,” ಎಂದು ಕೂಗಿಕೊಂಡನು. ಆ ಕ್ಷಣವೇ ಯೇಸು ಕೈಚಾಚಿ ಅವನನ್ನು ಹಿಡಿದುಕೊಂಡು, “ಅಲ್ಪವಿಶ್ವಾಸಿಯೇ, ಏಕೆ ಸಂದೇಹಪಟ್ಟೆ?” ಎಂದರು. ಅನಂತರ ಅವರಿಬ್ಬರೂ ದೋಣಿಯನ್ನು ಹತ್ತಿದರು. ಕೂಡಲೇ ಗಾಳಿ ನಿಂತುಹೋಯಿತು. ದೋಣಿಯಲ್ಲಿದ್ದವರು, “ನೀವು ನಿಜವಾಗಿಯೂ ದೇವರ ಪುತ್ರ!” ಎಂದು ಹೇಳಿ ಯೇಸುವನ್ನು ಆರಾಧಿಸಿದರು. ಅವರೆಲ್ಲರೂ ಸರೋವರವನ್ನು ದಾಟಿ ಗೆನೆಸರೇತ್ ಊರಿನ ದಡ ಸೇರಿದರು. ಈ ಊರಿನವರು ಯೇಸುಸ್ವಾಮಿಯನ್ನು ಗುರುತು ಹಚ್ಚಿದ್ದೇ ತಡ ಸುತ್ತಮುತ್ತಲಿನ ಊರುಗಳಿಗೆಲ್ಲಾ ಹೇಳಿಕಳುಹಿಸಿದರು. ರೋಗರುಜಿನಗಳಿಂದ ನರಳುತ್ತಿದ್ದವರನ್ನು ಕರೆದುಕೊಂಡು ಬಂದರು. ಇವರು, “ನಿಮ್ಮ ಉಡುಪಿನ ಅಂಚನ್ನಾದರೂ ಮುಟ್ಟಲು ಅಪ್ಪಣೆಯಾದರೆ ಸಾಕು,” ಎಂದು ಯೇಸುವನ್ನು ಬೇಡಿಕೊಂಡರು. ಹಾಗೆ ಮುಟ್ಟಿದವರೆಲ್ಲಾ ಗುಣಹೊಂದಿದರು.

02.08.20 - "ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ,”

ಮೊದಲನೇ ವಾಚನ: ಯೆಶಾಯ 55:1-3

ಎಲೈ ಬಾಯಾರಿದ ಜನರೇ, ನೀರಿನ ಬಳಿಗೆ ಬನ್ನಿ ಹಣವಿಲ್ಲದವರೇ ಬನ್ನಿ, ಅನ್ನವನ್ನು ತೆಗೆದುಕೊಂಡು ತಿನ್ನಿ. ಹಾಲನು, ದ್ರಾಕ್ಷಾರಸವನು ಕ್ರಯವಿಲ್ಲದೆ ಕೊಂಡುಕೊಳ್ಳಿ. ಆಹಾರವಲ್ಲದ್ದಕ್ಕೆ ಹಣವನು ವ್ಯಯಮಾಡುವುದೇಕೆ? ತೃಪ್ತಿ ತರದ ಪದಾರ್ಥಕ್ಕೆ ನಿಮ್ಮ ದುಡಿತದ ವೆಚ್ಚವೇಕೆ? ಕಿವಿಗೊಡಿ ನನಗೆ, ಒಳಿತನ್ನು ತಿಂದು ಆನಂದಪಡಿ ಆ ಮೃಷ್ಟಾನ್ನವನುಂಡು. ಕಿವಿಯನ್ನಿತ್ತ ತಿರುಗಿಸಿ ಬನ್ನಿ ನನ್ನ ಬಳಿಗೆ, ಬದುಕಿಬಾಳುವಿರಿ ನೀವು ಕಿವಿಗೊಟ್ಟರೆನಗೆ. ದಾವೀದನಿಗೆ ವಾಗ್ದಾನವಿತ್ತ ವರವ ಈವೆ ನಿಮಗೆ ಮಾಡಿಕೊಳ್ಳುವೆ-ಚಿರವಾದ ಒಡಂಬಡಿಕೆಯನು ನಿಮ್ಮೊಂದಿಗೆ.

ಕೀರ್ತನೆ: 145:8-9, 15-16, 17-18

ಶ್ಲೋಕ: ನೀ ಕೈನೀಡಿ ಎಲ್ಲರ ಕೋರಿಕೆಗಳನು ಈಡೇರಿಸುತ್ತಿ

ಎರಡನೇ ವಾಚನ: ರೋಮನರಿಗೆ 8:35, 37-39

ಸಹೋದರರೇ, ಕ್ರಿಸ್ತಯೇಸುವಿನ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಯಾರಿಂದ ಸಾಧ್ಯ? ಕಷ್ಟಸಂಕಟ, ಇಕ್ಕಟ್ಟು-ಬಿಕ್ಕಟ್ಟು, ಹಿಂಸೆ ಬಾಧೆ ಇವುಗಳಿಂದ ಸಾಧ್ಯವೆ? ಇಲ್ಲ, ಹಸಿವು ನೀರಡಿಕೆ, ನಗ್ನಸ್ಥಿತಿ, ಆಪತ್ತು-ವಿಪತ್ತು, ಖಡ್ಗಕಠಾರಿಗಳಿಂದ ಸಾಧ್ಯವೆ? ಎಂದಿಗೂ ಇಲ್ಲ.  ಪವಿತ್ರಗ್ರಂಥದಲ್ಲಿ ಹೀಗೆ ಬರೆಯಲಾಗಿದೆ: ದಿನವಿಡೀ ನಿಮಗೋಸ್ಕರವೇ ಸಾವಿಗೀಡಾಗುತಿಹೆವು ನಾವು ವಧ್ಯಸ್ಥಾನಕ್ಕೆ ಒಯ್ದ ಕುರಿಗಳಂತೆ ಪರಿಗಣಿತರಾಗುತಿಹೆವು ನಾವು.” ನಮ್ಮನ್ನು ಪ್ರೀತಿಸಿದ ಯೇಸುಕ್ರಿಸ್ತರ ಮುಖಾಂತರ ಇವೆಲ್ಲವುಗಳಲ್ಲಿಯೂ ನಾವು ಪೂರ್ಣ ಜಯಶಾಲಿಗಳಾಗುತ್ತೇವೆ.  ಸಾವಾಗಲಿ ಜೀವವಾಗಲಿ, ದೇವದೂತರಾಗಲಿ ದುರಾತ್ಮರಾಗಲಿ, ಈಗಿನ ಸಂತತಿಗಳೇ ಆಗಲಿ, ಭವಿಷ್ಯದ ಆಗುಹೋಗುಗಳೇ ಆಗಲಿ, ಯಾವ ಶಕ್ತಿಗಳೇ ಆಗಲಿ ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ತೋರಿಬಂದ ದೈವಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲಾರವು. ಅಂತೆಯೇ, ಮೇಲಣ ಲೋಕವಾಗಲಿ, ಕೆಳಗಣ ಲೋಕವಾಗಲಿ, ಸೃಷ್ಟಿಸಮಸ್ತಗಳಲ್ಲಿ ಯಾವುದೇ ಆಗಲಿ, ಆ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇದು ನಿಶ್ಚಯ

ಶುಭಸಂದೇಶ: ಮತ್ತಾಯ 14:13-21


ಯೊವಾನ್ನನ ಮರಣದ ಸಮಾಚಾರವನ್ನು ಕೇಳಿದ ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು, ದೋಣಿಹತ್ತಿ ನಿರ್ಜನಪ್ರದೇಶಕ್ಕೆ ಒಬ್ಬಂಟಿಗರಾಗಿ ಹೊರಟರು. ಇದನ್ನು ತಿಳಿದುಕೊಂಡ ಜನರು ಊರೂರುಗಳಿಂದ ಹೊರಟು ಗುಂಪುಗುಂಪಾಗಿ ಅವರ ಹಿಂದೆಯೇ ಕಾಲ್ದಾರಿಯಲ್ಲಿ ನಡೆದುಹೋದರು.  ಯೇಸು ದೋಣಿಯಿಂದ ಇಳಿದಾಗ, ದೊಡ್ಡ ಜನಸಮೂಹವನ್ನು ಕಂಡು ಅವರ ಮನ ಕರಗಿತು; ಅವರಲ್ಲಿ ಅಸ್ವಸ್ಥರಾಗಿದ್ದವರನ್ನು ಗುಣಪಡಿಸಿದರು. ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, “ಇದು ನಿರ್ಜನಪ್ರದೇಶ, ಈಗಾಗಲೇ ಹೊತ್ತು ಮೀರಿಹೋಗಿದೆ. ಜನಸಮೂಹವನ್ನು ಕಳುಹಿಸಿಬಿಡಿ, ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೆ ಬೇಕಾದ ತಿಂಡಿತಿನಿಸುಗಳನ್ನು ಕೊಂಡುಕೊಳ್ಳಲಿ,” ಎಂದರು.  ಅದಕ್ಕೆ ಯೇಸು, “ಅವರು ಹೋಗಬೇಕಾಗಿಲ್ಲ, ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿ,” ಎಂದರು.  ಶಿಷ್ಯರು ಪ್ರತ್ಯುತ್ತರವಾಗಿ, “ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ,” ಎಂದರು.  ಯೇಸು, “ಅವನ್ನು ಇಲ್ಲಿಗೆ ತನ್ನಿ,” ಎಂದು ಹೇಳಿ, ಜನರೆಲ್ಲರೂ ಹುಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಮಾಡಿದರು.  ಬಳಿಕ ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿನೋಡಿ, ದೇವರಿಗೆ ಸ್ತೋತ್ರಸಲ್ಲಿಸಿದರು. ತರುವಾಯ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟರು. ಶಿಷ್ಯರು ಜನರಿಗೆ ಹಂಚಿದರು.  ಎಲ್ಲರೂ ಹೊಟ್ಟೆತುಂಬ ತಿಂದು ತೃಪ್ತರಾದರು. ಉಳಿದಿದ್ದ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಹನ್ನೆರಡು ಬುಟ್ಟಿಗಳ ತುಂಬ ಆದುವು. ಊಟ ಮಾಡಿದವರಲ್ಲಿ ಹೆಂಗಸರು, ಮಕ್ಕಳನ್ನು ಬಿಟ್ಟರೆ, ಗಂಡಸರೇ ಸುಮಾರು ಐದು ಸಾವಿರ ಇದ್ದರು.