ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

08.05.2020 - "ನಾನಿರುವೆಡೆಯಲ್ಲಿಯೇ ನೀವೂ ಇರಬೇಕು. ನಾನು ಹೋಗುವ ಎಡೆಗೆ ಮಾರ್ಗವು ನಿಮಗೆ ತಿಳಿದೇ ಇದೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13:26-33

ಅಂತಿಯೋಕ್ಯದಲ್ಲಿ ಪ್ರಾರ್ಥನಾಮಂದಿರದಲ್ಲಿ ಪೌಲನು ಜನರನ್ನುದ್ದೇಶಿಸಿ, ಇಂತೆಂದನು. “ನನ್ನ ಸಹೋದರರೇ, ಅಬ್ರಹಾಮನ ಸಂತತಿಯವರೇ, ಮತ್ತು ದೇವರಲ್ಲಿ ಭಯಭಕ್ತಿ ಉಳ್ಳ ಇನ್ನಿತರರೇ, ಈ ಜೀವೋದ್ಧಾರದ ಸಂದೇಶವನ್ನು ಕಳುಹಿಸಿರುವುದು ನಮಗಾಗಿಯೇ. ಜೆರುಸಲೇಮಿನ ನಿವಾಸಿಗಳು ಮತ್ತು ಅವರ ಅಧಿಕಾರಿಗಳು ಯೇಸು ಲೋಕೋದ್ಧಾರಕನೆಂದು ಅರಿತುಕೊಳ್ಳಲಿಲ್ಲ. ಪ್ರತಿ ಸಬ್ಬತ್ದಿನ ಓದಲಾದ ಪ್ರವಾದಿಗಳ ವಾಕ್ಯಗಳನ್ನು ಅವರು ಗ್ರಹಿಸಿಕೊಳ್ಳಲಿಲ್ಲ. ಯೇಸುವಿಗೆ ಮರಣದಂಡನೆಯನ್ನು ವಿಧಿಸಿ ಆ ಪ್ರವಾದನೆಗಳು ನಿಜವಾಗಲು ಕಾರಣರಾದರು. ಮರಣದಂಡನೆ ವಿಧಿಸಲು ಯಾವ ಕಾರಣವಿಲ್ಲದಿದ್ದರೂ ಅವರನ್ನು ಕೊಲ್ಲಿಸುವಂತೆ ಪಿಲಾತನನ್ನು ಕೇಳಿಕೊಂಡರು. ಯೇಸುವನ್ನು ಕುರಿತು ಪವಿತ್ರಗ್ರಂಥ ಹೇಳುವುದೆಲ್ಲವೂ ನೆರವೇರಿದ ಮೇಲೆ ಅವರನ್ನು ಶಿಲುಬೆಯಿಂದ ಕೆಳಗಿಳಿಸಿ ಸಮಾಧಿಮಾಡಿದರು. ಆದರೆ ದೇವರು ಅವರನ್ನು ಮರಣದಿಂದ ಪುನರುತ್ಥಾನಗೊಳಿಸಿದರು. ಹೀಗೆ ಪುನರುತ್ಥಾನ ಹೊಂದಿದ ಯೇಸು, ಗಲಿಲೇಯದಿಂದ ತಮ್ಮೊಡನೆ ಜೆರುಸಲೇಮಿಗೆ ಬಂದಿದ್ದವರಿಗೆ ಕಾಣಿಸಿಕೊಂಡರು. ಆ ವ್ಯಕ್ತಿಗಳೇ ಈಗ ನಮ್ಮ ಜನರ ಮಧ್ಯೆ ಇರುವ ಯೇಸುವಿನ ಪರವಾದ ಸಾಕ್ಷಿಗಳು. ನಾವೀಗ ನಿಮಗೆ ಸಾರುವ ಶುಭಸಂದೇಶ ಇದು: ದೇವರು ಯೇಸುಸ್ವಾಮಿಯನ್ನು ಪುನರುತ್ಥಾನಗೊಳಿಸಿದ್ದಾರೆ. ಈ ಮೂಲಕ ನಮ್ಮ ಪೂರ್ವಜರಿಗೆ ಮಾಡಿದ ವಾಗ್ದಾನವನ್ನು ಅವರ ಸಂತತಿಯಾದ ನಮಗಿಂದು ಈಡೇರಿಸಿದ್ದಾರೆ. ಎರಡನೆಯ ಕೀರ್ತನೆಯಲ್ಲಿ ಹೀಗೆಂದು ಬರೆದಿದೆ: ‘ನೀನೇ ನನ್ನ ಪುತ್ರ, ನಾನಿಂದು ನಿನ್ನ ಜನಕ.

ಕೀರ್ತನೆ: 2:6-7, 8-9, 10-11

ಶ್ಲೋಕ: ಈ ದಿನ ನಾನಿನ್ನ ಹಡೆದಿಹನು; ನೀನೆನಗೆ ಮಗನು

ಶುಭಸಂದೇಶ ಯೊವಾನ್ನ 14:1-6

ಯೇಸು ಸ್ವಾಮಿ ತಮ್ಮ ಮಾತನ್ನು ಮುಂದುವರಿಸುತ್ತಾ ಶಿಷ್ಯರಿಗೆ, “ನೀವು ಹೃದಯದಲ್ಲಿ ಕಳವಳಗೊಳ್ಳದಿರಿ; ದೇವರಲ್ಲಿ ವಿಶ್ವಾಸವಿಡಿ; ನನ್ನಲ್ಲಿಯೂ ವಿಶ್ವಾಸವಿಡಿ. ನನ್ನ ಪಿತನ ಆಸ್ಥಾನದಲ್ಲಿ ಅನೇಕ ನಿವಾಸಗಳು ಇವೆ. ಹಾಗಿಲ್ಲದ ಪಕ್ಷದಲ್ಲಿ ನಿಮಗೆ ತಿಳಿಸುತ್ತಿದ್ದೆ. ನಾನು ಹೋಗಿ ನಿಮಗೆ ಸ್ಥಳವನ್ನು ಅಣಿಗೊಳಿಸುತ್ತೇನೆ. 3ಅಣಿಗೊಳಿಸಿದ ಬಳಿಕ ಹಿಂದಿರುಗಿ ಬಂದು ನಿಮ್ಮನ್ನು ಕರೆದೊಯ್ಯುತ್ತೇನೆ. ನಾನಿರುವೆಡೆಯಲ್ಲಿಯೇ ನೀವೂ ಇರಬೇಕು. ನಾನು ಹೋಗುವ ಎಡೆಗೆ ಮಾರ್ಗವು ನಿಮಗೆ ತಿಳಿದೇ ಇದೆ,” ಎಂದು ಹೇಳಿದರು. ಆಗ ತೋಮನು, “ಪ್ರಭುವೇ, ನೀವು ಎಲ್ಲಿಗೆ ಹೋಗುತ್ತೀರೆಂದು ನಮಗೆ ತಿಳಿಯದು; ಅಂದಮೇಲೆ ಅಲ್ಲಿಗೆ ಹೋಗುವ ಮಾರ್ಗವು ಹೇಗೆ ತಿಳಿದೀತು?” ಎಂದು ಕೇಳಿದನು. ಅದಕ್ಕೆ ಯೇಸು, “ಮಾರ್ಗವೂ ಸತ್ಯವೂ ಜೀವವೂ ನಾನೇ. ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು. ಎಂದರು.

07.05.2020 - "ನನ್ನೊಡನೆ ಉಂಡವನೇ ನನಗೆ ದ್ರೋಹ ಬಗೆದನು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13:13-25

ಪೌಲ ಮತ್ತು ಸಂಗಡಿಗರು ಪಾಫೊಸಿನಿಂದ ನೌಕಾಯಾನ ಮಾಡಿ ಪಾಂಫೀಲಿಯದ ಪೆರ್ಗ ಎಂಬಲ್ಲಿಗೆ ಬಂದರು. ಮಾರ್ಕನೆನಿಸಿಕೊಂಡ ಯೊವಾನ್ನನು ಅವರನ್ನು ಅಲ್ಲೇ ಬಿಟ್ಟು ಜೆರುಸಲೇಮಿಗೆ ಹಿಂದಿರುಗಿದನು. ಉಳಿದವರು ಪೆರ್ಗದಿಂದ ಹೊರಟು ಪಿಸಿದಿಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್ದಿನದಲ್ಲಿ ಪ್ರಾರ್ಥನಾಮಂದಿರಕ್ಕೆ ಹೋಗಿ ಕುಳಿತುಕೊಂಡರು. ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥಗಳಿಂದ ವಾಚನವಾದ ನಂತರ ಪ್ರಾರ್ಥನಾಮಂದಿರದ ಅಧಿಕಾರಿಗಳು ಅವರಿಗೆ, “ಸಹೋದರರೇ, ಜನರಿಗೆ ಉಪಯುಕ್ತವಾದ ಹಿತೋಕ್ತಿ ಏನಾದರೂ ಇದ್ದರೆ ಉಪದೇಶಮಾಡಿ,” ಎಂದು ಕೇಳಿಕೊಂಡರು. ಆಗ ಪೌಲನು ಎದ್ದು ನಿಂತು ಜನರಿಗೆ ನಿಶ್ಯಬ್ದವಾಗಿರುವಂತೆ ಕೈಸನ್ನೆ ಮಾಡಿ, ಹೀಗೆಂದು ಉಪದೇಶ ಮಾಡಲಾರಂಭಿಸಿದನು: “ಇಸ್ರಯೇಲ್ ಬಾಂಧವರೇ, ಹಾಗು ನಿಜದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಕೇಳಿ: ಇಸ್ರಯೇಲ್ ಜನರ ದೇವರು ನಮ್ಮ ಪೂರ್ವಜರನ್ನು ಆರಿಸಿಕೊಂಡರು. ಈಜಿಪ್ಟಿನಲ್ಲಿ ಪರಕೀಯರಾಗಿ ವಾಸಿಸುತ್ತಿದ್ದ ನಮ್ಮ ಜನರನ್ನು ಪ್ರಬಲ ಜನಾಂಗವನ್ನಾಗಿ ಮಾಡಿದರು. ತಮ್ಮ ಮಹಾಶಕ್ತಿಯನ್ನು ಪ್ರಯೋಗಿಸಿ ಅವರನ್ನು ಈಜಿಪ್ಟಿನಿಂದ ಹೊರಗೆ ತಂದರು. ಬೆಂಗಾಡಿನಲ್ಲಿ ಸುಮಾರು ನಾಲ್ವತ್ತು ವರ್ಷಗಳ ಕಾಲ ಅವರನ್ನು ಕಾಪಾಡಿದರು. ಕಾನಾನ್ ನಾಡಿನ ಏಳು ಜನಾಂಗಗಳನ್ನು ನಾಶಮಾಡಿ ನಮ್ಮ ಜನರಿಗೆ ಆ ನಾಡನ್ನು ಸ್ವಾಸ್ತ್ಯವಾಗಿ ಕೊಟ್ಟರು. ಹೀಗೆ ಸುಮಾರು ನಾನೂರ ಐವತ್ತು ವರ್ಷಗಳು ಕಳೆದವು. ಅನಂತರ ಪ್ರವಾದಿ ಸಮುವೇಲನ ಕಾಲದವರೆಗೆ ದೇವರು ಅವರಿಗೆ ನ್ಯಾಯಾಧಿಪತಿಗಳನ್ನು ಕಳುಹಿಸಿದರು. ತಮಗೆ ಅರಸನು ಬೇಕೆಂದು ಕೇಳಿಕೊಂಡಾಗ ದೇವರು ಬೆನ್ಯಾಮೀನ ಗೋತ್ರದ ಕೀಷನ ಮಗ ಸೌಲನನ್ನು ನೇಮಿಸಿದರು. ಇವನು ನಾಲ್ವತ್ತು ವರ್ಷ ಆಳಿದನು. ಅನಂತರ ದೇವರು ಸೌಲನನ್ನು ತ್ಯಜಿಸಿ ದಾವೀದನನ್ನು ಅರಸನನ್ನಾಗಿ ನೇಮಿಸಿದರು. ಇವನ ಬಗ್ಗೆ ದೇವರು, “ಜೆಸ್ಸೆಯನ ಮಗ ದಾವೀದನು ನನಗೆ ಮೆಚ್ಚುಗೆಯಾದ ವ್ಯಕ್ತಿ; ಇವನು ನನ್ನ ಆಶೆ ಆಕಾಂಕ್ಷೆಗಳನ್ನೆಲ್ಲಾ ಪೂರೈಸುವನು,” ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಈ ದಾವೀದನ ಸಂತತಿಯಿಂದಲೇ ದೇವರು ತಮ್ಮ ವಾಗ್ದಾನದ ಪ್ರಕಾರ ಇಸ್ರಯೇಲ್ ಜನರಿಗೆ ಒಬ್ಬ ಉದ್ಧಾರಕನನ್ನು ಕಳುಹಿಸಿದರು. ಇವರೇ ಯೇಸುಸ್ವಾಮಿ. ಇವರ ಆಗಮನಕ್ಕೆ ಸಿದ್ಧತೆಯಾಗಿ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿ ಸ್ನಾನದೀಕ್ಷೆಯನ್ನು ಪಡೆಯಬೇಕೆಂದು ಯೊವಾನ್ನನು ಇಸ್ರಯೇಲಿನ ಎಲ್ಲ ಜನರಿಗೆ ಸಾರಿದರು. ಯೊವಾನ್ನನು ತನ್ನ ನಿಯೋಗವನ್ನು ಪೂರೈಸುತ್ತಿದ್ದಂತೆ ಜನರಿಗೆ, ‘ನಾನು ಯಾರೆಂದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ವ್ಯಕ್ತಿ ನಾನಲ್ಲ. ನನ್ನ ಅನಂತರ ಒಬ್ಬರು ಬರುವರು; ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,’ ಎಂದನು.

ಕೀರ್ತನೆ:  89:2-3, 21-22, 25, 27

ಶ್ಲೋಕ: ಪ್ರಭು, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು

ನಿನ್ನಚಲ ಪ್ರೀತಿ ಪ್ರಭುನನಗೆ ಶಾಶ್ವತ ಸಿದ್ಧ 
ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ 
ನೀನೆಂದೆ, “ನಾನಾರಿಸಿದವನೊಡನೆ ಮಾಡಿರುವೆ ಒಪ್ಪಂದ 
ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರವಾದ ಶಪಥ 

ನನ್ನ ಕೈಯ ಆಸರೆ ಅವನಿಗಿದೆ ಸತತ 
ನನ್ನ ಭುಜಬಲವು ಅವನಿಗೆ ಶಕ್ತಿಯುತ 
ಸಿಗನು ಶತ್ರುವಿನ ಕುತಂತ್ರಕೆ 
ಕುಗ್ಗನು ಕೆಡುಕರಾ ದರ್ಪಕೆ 

ತೊರೆನದಿಗಳಿಂದ ಸಾಗರದವರೆಗೆ 
ಅಧಿಕಾರ ನೀಡುವೆ ಅವನ ಕೈಗೆ 

ಮಾಡುವೆನವನನು ಜೇಷ್ಠಪುತ್ರನನ್ನಾಗಿ
ಭೂರಾಜರುಗಳೊಳು ಅತ್ಯುನ್ನತನನ್ನಾಗಿ

ಶುಭಸಂದೇಶ :  ಯೊವಾನ್ನ 13:16-20

ತಮ್ಮ ಶಿಷ್ಯರ ಪಾದಗಳಾನ್ನು ತೊಳೆದ ನಂತರ ಯೇಸು ಹೀಗೆಂದರು: "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಧಣಿಗಿಂತ ದಾಸನು ದೊಡ್ಡವನಲ್ಲ. ಅಂತೆಯೇ ಕಳುಹಿಸಲಾದವನು ಕಳುಹಿಸುವವನಿಗಿಂತ ಶ್ರೇಷ್ಠನಲ್ಲ. ಇದನ್ನೆಲ್ಲಾ ಅರ್ಥಮಾಡಿಕೊಂಡು ಅದರಂತೆ ನಡೆದರೆ, ನೀವು ಧನ್ಯರು ! “ನಾನು ನಿಮ್ಮೆಲ್ಲರನ್ನೂ ಕುರಿತು ಹೀಗೆ ಹೇಳುತ್ತಾ ಇಲ್ಲ. ಯಾರನ್ನು ನಾನು ಆರಿಸಿಕೊಂಡಿದ್ದೇನೆಂಬುದು ನನಗೆ ಗೊತ್ತು. ಆದರೆ ‘ನನ್ನೊಡನೆ ಉಂಡವನೇ ನನಗೆ ದ್ರೋಹ ಬಗೆದನು’ ಎಂಬುದಾಗಿ ಪವಿತ್ರಗ್ರಂಥದಲ್ಲಿ ಬರೆದಿದೆ. ಆ ಮಾತು ಈಡೇರಬೇಕಾಗಿದೆ. ಅದು ಈಡೇರುವಾಗ ‘ಇರುವಾತನು ನಾನೇ’ ಎಂದು ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ಹೇಳುತ್ತಿದ್ದೇನೆ. ನಾನು ಕಳುಹಿಸಿದಾತನನ್ನು ಬರಮಾಡಿಕೊಳ್ಳುವವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ. ನನ್ನನ್ನು ಬರಮಾಡಿಕೊಳ್ಳುವವನು ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,”.

06.05.2020 - "ನಾನು ಬಂದುದು ಲೋಕದ ಉದ್ಧಾರಕ್ಕಾಗಿ, ತೀರ್ಪು ಕೊಡುವುದಕ್ಕಾಗಿ ಅಲ್ಲ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 12:24--13:5

ದೇವರ ಶುಭಸಂದೇಶವಾದರೋ ಹಬ್ಬಿ ಹರಡತೊಡಗಿತು. ಬಾರ್ನಬ ಮತ್ತು ಸೌಲನು ತಮ್ಮ ಧರ್ಮಕಾರ್ಯವನ್ನು ಮುಗಿಸಿಕೊಂಡು ಮಾರ್ಕ ಎಂದು ಹೆಸರುಗೊಂಡ ಯೊವಾನ್ನನೊಂದಿಗೆ ಜೆರುಸಲೇಮಿನಿಂದ ಹಿಂದಿರುಗಿದರು. ಅಂತಿಯೋಕ್ಯದ ಧರ್ಮಸಭೆಯಲ್ಲಿ ಕೆಲವು ಪ್ರವಾದಿಗಳೂ ಬೋಧಕರೂ ಇದ್ದರು. ಅವರಾರೆಂದರೆ: ಬಾರ್ನಬ, ಕಾಳನೆಂದು ಕರೆಯಲಾದ ಸಿಮೆಯೋನ್, ಸಿರೇನಿನ ಲೂಸಿಯಸ್, ಸಾಮಂತ ಹೆರೋದನ ಬಾಲ್ಯಸ್ನೇಹಿತ ಮೆನಹೇನ ಮತ್ತು ಸೌಲ ಒಂದು ದಿನ ಅವರು ದೇವಾರಾಧನೆಯಲ್ಲೂ ಉಪವಾಸ ವ್ರತದಲ್ಲೂ ನಿರತರಾಗಿದ್ದಾಗ ಪವಿತ್ರಾತ್ಮ, “ಬಾರ್ನಬ ಮತ್ತು ಸೌಲರನ್ನು ನಾನು ಯಾವ ಕಾರ್ಯಕ್ಕಾಗಿ ಕರೆದಿದ್ದೇನೋ ಆ ಕಾರ್ಯಕ್ಕಾಗಿ ವಿೂಸಲಾಗಿಡಿ,” ಎಂದರು. ಅಂತೆಯೇ ಅವರು ಉಪವಾಸವಿದ್ದು, ಪ್ರಾರ್ಥನೆ ಮಾಡಿ, ಇವರಿಬ್ಬರ ಮೇಲೆ ಹಸ್ತನಿಕ್ಷೇಪಮಾಡಿ ಕಳುಹಿಸಿಕೊಟ್ಟರು. ಸೈಪ್ರಸ್ ದ್ವೀಪದಲ್ಲಿ ಧರ್ಮಪ್ರಚಾರ ಹೀಗೆ ಪವಿತ್ರಾತ್ಮ ಅವರೇ ಕಳುಹಿಸಿದ ಬಾರ್ನಬ ಮತ್ತು ಸೌಲ ಸೆಲೂಸಿಯಾಕ್ಕೆ ಹೋದರು. ಅಲ್ಲಿಂದ ಸೈಪ್ರಸ್ ದ್ವೀಪಕ್ಕೆ ನೌಕಾಯಾನ ಮಾಡಿದರು. ಅವರು ಸಲವಿೂಸ್ ಎಂಬ ಸ್ಥಳಕ್ಕೆ ಬಂದಾಗ ಯೆಹೂದ್ಯರ ಪ್ರಾರ್ಥನಾ ಮಂದಿರಗಳಿಗೆ ಹೋಗಿ ಶುಭಸಂದೇಶವನ್ನು ಸಾರಿದರು. ಮಾರ್ಕನೆನಿಸಿಕೊಂಡ ಯೊವಾನ್ನ ಅವರ ಸಂಗಡವಿದ್ದು ಅವರಿಗೆ ನೆರವಾಗುತ್ತಿದ್ದನು.

ಕೀರ್ತನೆ: 67:2-3, 5, 6, 8

ಶ್ಲೋಕ: ನಿನ್ನ ಕೀರ್ತಿಸಲಿ ದೇವಾ, ಜನರು, ಸಂಕೀರ್ತಿಸಲಿ ಅವರೆಲ್ಲರೂ


ಪ್ರಸಿದ್ಧವಾಗಲಿ ನಿನ್ನ ಸನ್ಮಾರ್ಗ ಜಗದೊಳೆಲ್ಲಾ /
ಜೀವೋದ್ಧಾರಗೊಳಿಸುವ ನಿನ್ನ ಶಕ್ತಿ ಜನತಿಗೆಲ್ಲ //
ನಿನ್ನ ಕೀರ್ತಿಸಲಿ ದೇವಾ, ಜನರು /ಸಂಕೀರ್ತಿಸಲಿ ಅವರೆಲ್ಲರೂ //

ನಿನ್ನ ಕೀರ್ತಿಸಲಿ ದೇವಾ, ಜನರು / 
ಸಂಕೀರ್ತಿಸಲಿ ಅವರೆಲ್ಲರೂ //

ಇತ್ತನೆಮ್ಮ ದೇವನು ಆಶೀರ್ವಾದವನು /
ಕೊಟ್ಟಿತೆಮ್ಮ ಭೂಮಿಯು ಸಂತುಷ್ಟ ಬೆಳೆಯನು //

ಶುಭ ಸಂದೇಶ : ಯೊವಾನ್ನ 12:44-50

ಯೇಸು ಸ್ವಾಮಿ ಗಟ್ಟಿಯಾಗಿ ಕೂಗಿ ಇಂತೆಂದರು : “ನನ್ನಲ್ಲಿ ವಿಶ್ವಾಸವಿಡುವವನು ನನ್ನಲ್ಲಿ ಅಲ್ಲ, ನನ್ನನ್ನು ಕಳುಹಿಸಿದಾತನಲ್ಲೇ ವಿಶ್ವಾಸವಿಡುತ್ತಾನೆ. ನನ್ನನ್ನು ಕಾಣುವವನು ನನ್ನನ್ನು ಕಳುಹಿಸಿದಾತನನ್ನೇ ಕಾಣುತ್ತಾನೆ. ನನ್ನಲ್ಲಿ ವಿಶ್ವಾಸವಿಡುವವನು ಅಂಧಕಾರದಲ್ಲಿ ಉಳಿಯಬಾರದೆಂದು ನಾನೇ ಜಗಜ್ಯೋತಿಯಾಗಿ ಬಂದಿದ್ದೇನೆ. ಯಾವನಾದರೂ ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದೆಹೋದರೆ ಅಂಥವನಿಗೆ ತೀರ್ಪುಕೊಡುವವನು ನಾನಲ್ಲ. ನಾನು ಬಂದುದು ಲೋಕದ ಉದ್ಧಾರಕ್ಕಾಗಿ, ತೀರ್ಪುಕೊಡುವುದಕ್ಕಾಗಿ ಅಲ್ಲ. ನನ್ನನ್ನು ನಿರಾಕರಿಸಿ ನನ್ನ ಮಾತುಗಳನ್ನು ಅಂಗೀಕರಿಸದೆ ಹೋದವನಿಗೆ ತೀರ್ಪುಕೊಡುವಂಥದ್ದು ಒಂದು ಇದೆ. ಅದು ಯಾವುದೆಂದರೆ ನಾನು ಆಡಿದ ಮಾತೇ. ಅಂತಿಮ ದಿನದಂದು ಅದೇ ಅವನಿಗೆ ತೀರ್ಪುಕೊಡುವುದು. ಏಕೆಂದರೆ, ನನ್ನಷ್ಟಕ್ಕೆ ನಾನೇ ಇದನ್ನೆಲ್ಲಾ ಮಾತನಾಡುತ್ತಿಲ್ಲ. ನನ್ನನ್ನು ಕಳುಹಿಸಿದ ಪಿತನೇ, ನಾನು ಏನು ಹೇಳಬೇಕು, ಯಾವ ಮಾತನ್ನು ಆಡಬೇಕು ಎಂದು ನನಗೆ ಆಜ್ಞೆಮಾಡಿದ್ದಾರೆ. ಅವರ ಆಜ್ಞೆಯೇ ನಿತ್ಯಜೀವದಾಯಕ ಎಂದು ನಾನು ಬಲ್ಲೆ. ಆದ್ದರಿಂದಲೇ ಪಿತನು ಹೇಳಿದಂತೆಯೇ ನಾನು ಮಾತನಾಡುತ್ತೇನೆ.”

05.05.2020 - "ನಾನೂ ಪಿತನೂ ಒಂದೇ ಆಗಿದ್ದೇವೆ,”

ಮೊದಲನೇ ವಾಚನ: ಪ್ರೇಷಿತರಕಾರ್ಯಕಲಾಪಗಳು 11:19-26


ಸ್ತೇಫನನು ಕೊಲೆಯಾದ ಮೊದಲ್ಗೊಂಡು ಉಂಟಾದ ಹಿಂಸಾಚಾರದ ನಿಮಿತ್ತ ಭಕ್ತಾದಿಗಳು ಚದರಿಹೋದರು. ಅವರಲ್ಲಿ ಕೆಲವರು ಫೆನಿಷ್ಯ, ಸೈಪ್ರಸ್, ಅಂತಿಯೋಕ್ಯದವರೆಗೂ ಹೋಗಿ ಶುಭಸಂದೇಶವನ್ನು ಸಾರಿದರು. ಆದರೆ ಇದನ್ನು ಸಾರಿದ್ದು ಯೆಹೂದ್ಯರಿಗೆ ಮಾತ್ರ. ಸೈಪ್ರಸ್ ಮತ್ತು ಸಿರೇನಿನ ಕೆಲವು ಭಕ್ತರಾದರೋ ಅಂತಿಯೋಕ್ಯಕ್ಕೆ ಹೋಗಿ ಪ್ರಭು ಯೇಸುವಿನ ಶುಭಸಂದೇಶವನ್ನು ಗ್ರೀಕರಿಗೂ ಸಾರಿದರು. ಪ್ರಭುವಿನ ಶಕ್ತಿ ಅವರೊಡನೆ ಇತ್ತು. ಜನರು ಬಹುಸಂಖ್ಯೆಯಲ್ಲಿ ಪ್ರಭುವಿನಲ್ಲಿ ವಿಶ್ವಾಸವಿಟ್ಟು ಅವರ ಭಕ್ತರಾದರು. ಈ ಸಮಾಚಾರ ಜೆರುಸಲೇಮಿನ ಧರ್ಮಸಭೆಗೆ ತಲುಪಿತು. ಬಾರ್ನಬನನ್ನು ಅಂತಿಯೋಕ್ಯಕ್ಕೆ ಅವರು ಕಳುಹಿಸಿದರು. ಬಾರ್ನಬನು ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ಕಂಡು ಸಂತೋಷಪಟ್ಟನು. ಪ್ರಭುವಿಗೆ ದೃಢಮನಸ್ಸಿನಿಂದ ಪ್ರಾಮಾಣಿಕರಾಗಿರುವಂತೆ ಪ್ರೋತ್ಸಾಹಿಸಿದನು. ಬಾರ್ನಬನು ಸತ್ಪುರುಷನು, ಪವಿತ್ರಾತ್ಮಭರಿತನು ಹಾಗೂ ಅಗಾಧ ವಿಶ್ವಾಸವುಳ್ಳವನು. ಅನೇಕ ಜನರು ಪ್ರಭುವಿನ ಅನುಯಾಯಿಗಳಾದರು. ಅನಂತರ ಬಾರ್ನಬನು ಸೌಲನನ್ನು ಹುಡುಕಿಕೊಂಡು ತಾರ್ಸಕ್ಕೆ ಹೋದನು.  ಅವನನ್ನು ಅಲ್ಲಿ ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಅವರಿಬ್ಬರೂ ಬಂದು ವರ್ಷವಿಡೀ ಧರ್ಮಸಭೆಯೊಂದಿಗೆ ಇದ್ದು ಬಹುಜನರಿಗೆ ಉಪದೇಶ ಮಾಡಿದರು. ಭಕ್ತಾದಿಗಳನ್ನು ಮೊದಲಬಾರಿಗೆ ‘ಕ್ರೈಸ್ತರು’ ಎಂದು ಕರೆದದ್ದು - ಅಂತಿಯೋಕ್ಯದಲ್ಲೇ.

ಕೀರ್ತನೆ: 87:1-3, 4-5, 6-7
ಶ್ಲೋಕ: ಸ್ತುತಿಮಾಡಿ ಪ್ರಭುವನು ಸಮಸ್ತ ರಾಷ್ಟ್ರಗಳೇ

ಪವಿತ್ರ ಪರ್ವತದಲಿ ಕರ್ತನು I
ಸ್ಥಾಪಿಸಿಹನು ತನ್ನ ನಗರವನು II
ಯಕೋಬ ವಂಶದ ಸಕಲ ನಿವಾಸಿಗಳಿಗಿಂತ I
ಸಿಯೋನ್ ದ್ವಾರಗಳು ಆತನಿಗೆ ಸುಪ್ರೀತ II
ದೈವ ಶ್ರೀನಗರವೇ, ಕೇಳು ಇವನ್ನು I
ನಿನ್ನ ಕುರಿತ ಅತಿಶಯೋಕ್ತಿಗಳನು : II

ನನಗೆ ಮಣಿಯುವ ರಾಷ್ಟ್ರಗಳಲಿ I
ಈಜಿಪ್ಟ್, ಬಾಬೆಲ್ ದೇಶಗಳನು ಲೆಕ್ಕಿಸುವೆ II
ಜೆರುಸಲೇಮಿನ ನಿವಾಸಿಗಳಲಿ I
ಪಿಲಿಷ್ಟಿಯ, ಟೈರ್, ಎಥಿಯೋಪಿಯ ಜನ ಸೇರಿವೆ II
ಸಕಲ ಜನಾಂಗಗಳ ಜನನಿ ಸಿಯೋನ್ ನಗರವೇ I
ಅದನು ಸ್ಥಾಪಿಸಿದವ ಪರಾತ್ಪರ ಪ್ರಭುವೇ” II

ಪ್ರಭು ಪಟ್ಟಿಮಾಡುವಾಗ ಸಕಲ ಜಾತಿಜನಾಂಗಗಳನು I
ನಿನ್ನ ಜನಾಂಗವೆಂದೇ ಪರಿಗಣಿಸುವನು ಪ್ರತಿಯೊಂದನು II
ಗಾಯಕ ನರ್ತಕರೂ ಹಾಡುವರೀ ಹಾಡ I

ನಮ್ಮೆಲ್ಲರ ಜೀವದೊರೆತೆ ನೀನೇ ನೋಡ” II

ಯೊವಾನ್ನ 10:22-30


ಅದು ಚಳಿಗಾಲವಾಗಿತ್ತು. ಜೆರುಸಲೇಮಿನಲ್ಲಿ ಮಹಾದೇವಾಲಯದ ಪ್ರತಿಷ್ಠಾಪನೆಯ ಹಬ್ಬಾಚರಣೆ ನಡೆಯುತ್ತಿತ್ತು. ಯೇಸು ಸ್ವಾಮಿ ಆ ದೇವಾಲಯದ ಆವರಣದಲ್ಲಿದ್ದ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಿದ್ದರು. ಯೆಹೂದ್ಯರು ಅವರನ್ನು ಸುತ್ತುವರಿದು, “ಇನ್ನೆಷ್ಟುಕಾಲ ನಮ್ಮನ್ನು ಸಂಶಯದಲ್ಲಿರಿಸುವೆ?ನೀನೇ ಅಭಿಷಿಕ್ತನಾದ ಲೋಕೋದ್ಧಾರಕ ಆಗಿದ್ದರೆ ನಮಗೆ ಸ್ಪಷ್ಟವಾಗಿ ಹೇಳು,” ಎಂದರು. ಯೇಸು ಪ್ರತ್ಯುತ್ತರವಾಗಿ, “ನಾನು ನಿಮಗೆ ಹೇಳಿಯಾಯಿತು. ಆದರೂ ನೀವು ನಂಬುತ್ತಿಲ್ಲ. ನನ್ನ ಪಿತನ ಹೆಸರಿನಲ್ಲಿ ನಾನು ಮಾಡುವ ಕಾರ್ಯಗಳೇ ನನ್ನ ಪರವಾಗಿ ಸಾಕ್ಷಿಕೊಡುತ್ತವೆ. ಆದರೂ ನಿಮಗೆ ನಂಬಿಕೆಯೆಂಬುದಿಲ್ಲ. ಕಾರಣ, ನೀವು ನನ್ನ ಕುರಿಗಳಲ್ಲ. ನನ್ನ ಕುರಿಗಳಾದರೋ ನನ್ನ ಸ್ವರವನ್ನು ಗುರುತಿಸುತ್ತವೆ. ನಾನು ಅವನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ. ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದಿಗೂ ನಾಶ ಆಗುವುದಿಲ್ಲ. ನನ್ನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು, ಅವನ್ನು ನನಗೆ ಕೊಟ್ಟ ಪಿತ ಸರ್ವಶ್ರೇಷ್ಠರು. ಪಿತನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು. ನಾನೂ ಪಿತನೂ ಒಂದೇ ಆಗಿದ್ದೇವೆ,” ಎಂದರು.

04.05.2020 - “ನಾನೇ ಉತ್ತಮ ಕುರಿಗಾಹಿ. ಉತ್ತಮ ಕುರಿಗಾಹಿಯು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನೇ ಕೊಡುತ್ತಾನೆ"

ಮೊದಲನೇ ವಾಚನ: ಪ್ರೇಷಿತರಕಾರ್ಯಕಲಾಪಗಳು 11:1-18
ಅನ್ಯಧರ್ಮದವರೂ ಸಹ ದೈವವಾಕ್ಯವನ್ನು ಸ್ವೀಕರಿಸಿದರೆಂಬ ಸುದ್ದಿ ಜುದೇಯದಲ್ಲಿದ್ದ ಪ್ರೇಷಿತರಿಗೂ ವಿಶ್ವಾಸಿಗಳಿಗೂ ಮುಟ್ಟಿತು. ಪೇತ್ರನು ಜೆರುಸಲೇಮಿಗೆ ಹೋದಾಗ ಅನ್ಯಧರ್ಮದವರಿಗೆ ಸುನ್ನತಿಯಾಗಬೇಕು ಎನ್ನುತ್ತಿದ್ದ ಪಂಗಡದವರು ಮುಂದೆ ಬಂದು, “ನೀನು ಸುನ್ನತಿಯಿಲ್ಲದ ಅನ್ಯಧರ್ಮದವರ ಮನೆಗೆ ಭೇಟಿಕೊಟ್ಟು ಅವರೊಡನೆ ಊಟ ಮಾಡಿದ್ದೇಕೆ?” ಎಂದು ಆಕ್ಷೇಪಿಸಿದರು. ಅದಕ್ಕೆ ಪೇತ್ರನು ನಡೆದ ವೃತ್ತಾಂತವನ್ನು ಆಮೂಲಾಗ್ರವಾಗಿ ಅವರಿಗೆ ವಿವರಿಸಿದನು: “ಜೊಪ್ಪ ಪಟ್ಟಣದಲ್ಲಿ ನಾನು ಧ್ಯಾನಪರವಶನಾಗಿದ್ದಾಗ ದರ್ಶನವೊಂದನ್ನು ಕಂಡೆ. ಸ್ವರ್ಗದಿಂದ ದೊಡ್ಡ ದುಪ್ಪಟಿಯಂಥ ವಸ್ತು ಒಂದು ಕೆಳಕ್ಕೆ ಇಳಿಯಿತು. ಅದರ ನಾಲ್ಕು ಮೂಲೆಗಳನ್ನು ಹಿಡಿದು ಕೆಳಕ್ಕೆ ಇಳಿಬಿಡಲಾಗಿತ್ತು. ಅದು ಬಂದು ನನ್ನ ಪಕ್ಕದಲ್ಲೇ ನಿಂತಿತು. ಅದನ್ನು ಗಮನಿಸಿ ನೋಡಿದಾಗ ಅದರಲ್ಲಿ ಪ್ರಾಣಿಗಳೂ ಕಾಡುಮೃಗಗಳೂ ಹರಿದಾಡುವ ಕ್ರಿಮಿಕೀಟಗಳೂ ಹಾರಾಡುವ ಪಕ್ಷಿಗಳೂ ಕಂಡುಬಂದವು. ಆಗ, ‘ಪೇತ್ರ, ಏಳು, ಕೊಯ್ದು ತಿನ್ನು’ ಎಂಬ ವಾಣಿ ನನಗೆ ಕೇಳಿಸಿತು. ಅದಕ್ಕೆ ನಾನು, ‘ಬೇಡವೇ ಬೇಡ ಸ್ವಾಮಿ, ಅಶುದ್ಧ ಹಾಗು ಅಸ್ಪೃಶ್ಯವಾದುದು ಯಾವುದೂ ನನ್ನ ಬಾಯನ್ನು ಎಂದೂ ಹೊಕ್ಕಿಲ್ಲ,’ ಎಂದೆ. ಮತ್ತೊಮ್ಮೆ ಆ ವಾಣಿ ಸ್ವರ್ಗಲೋಕದಿಂದ, ‘ದೇವರೇ ಶುದ್ಧಿಕರಿಸಿರುವ ಏನನ್ನೂ ನೀನು ಅಶುದ್ಧವೆನ್ನಬೇಡ,’ ಎಂದು ಉತ್ತರಿಸಿತು. ಹೀಗೆ ಮೂರು ಬಾರಿ ನಡೆದ ಮೇಲೆ, ಅವೆಲ್ಲವನ್ನೂ ಒಟ್ಟಿಗೆ ಸ್ವರ್ಗಕ್ಕೆ ಮರಳಿ ಎಳೆದುಕೊಳ್ಳಲಾಯಿತು. ಅದೇ ಸಮಯಕ್ಕೆ ಸರಿಯಾಗಿ, ಸೆಜರೇಯದಿಂದ ಕಳುಹಿಸಲಾದ ಮೂರು ಮಂದಿ ನನ್ನನ್ನು ಹುಡುಕಿಕೊಂಡು, ನಾನು ತಂಗಿದ್ದ ಮನೆಗೆ ಬಂದರು. ನಾನು ಸಂಕೋಚ ಪಡದೆ ಅವರೊಡನೆ ಹೋಗಬೇಕೆಂದು ಪವಿತ್ರಾತ್ಮ ತಿಳಿಸಿದರು. ಜೊಪ್ಪದ ಈ ಆರು ಮಂದಿ ಭಕ್ತರೂ ನನ್ನೊಡನೆ ಸೆಜರೇಯಕ್ಕೆ ಬಂದರು. ನಾವೆಲ್ಲರೂ ಕೊರ್ನೇಲಿಯನ ಮನೆಯನ್ನು ಪ್ರವೇಶಿಸಿದೆವು. ಅವನು, “ನನ್ನ ಮನೆಯಲ್ಲೇ ದೂತನೊಬ್ಬನು ಕಾಣಿಸಿಕೊಂಡು, ‘ಈಗಲೇ ಯಾರನ್ನಾದರೂ ಜೊಪ್ಪಕ್ಕೆ ಕಳುಹಿಸಿ ಪೇತ್ರ ಎಂದು ಕರೆಯಲಾಗುವ ಸಿಮೋನನನ್ನು ಬರಹೇಳು. ಅವನು ನೀನೂ ನಿನ್ನ ಕುಟುಂಬದವರೆಲ್ಲರೂ ಪಡೆಯಬಹುದಾದಂಥ ಜೀವೋದ್ಧಾರದ ಸಂದೇಶವನ್ನು ನೀಡುವನು,’ ಎಂದು ತಿಳಿಸಿದನು” ಎಂದು ನಮಗೆ ಹೇಳಿದನು. ನಾನು ಉಪದೇಶ ಮಾಡಲು ಪ್ರಾರಂಭಿಸಿದ ಕೂಡಲೇ ನಮ್ಮ ಮೇಲೆ ಇಳಿದಂತೆ ಅವರ ಮೇಲೂ ಪವಿತ್ರಾತ್ಮ ಇಳಿದು ಬಂದರು. ಆಗ ನನಗೆ, ‘ಯೊವಾನ್ನನು ನೀರಿನಿಂದ ಸ್ನಾನದೀಕ್ಷೆಯನ್ನು ಕೊಟ್ಟನು. ನೀವಾದರೋ ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನವನ್ನು ಪಡೆಯುವಿರಿ,’ ಎಂಬ ಪ್ರಭುವಿನ ಮಾತುಗಳು ನೆನಪಿಗೆ ಬಂದವು. ನಾನುಪ್ರಭು ಯೇಸುಕ್ರಿಸ್ತರನ್ನು ವಿಶ್ವಾಸಿಸಿದಾಗ ನಮಗೆ ಕೊಟ್ಟ ವರವನ್ನೇ ದೇವರು ಆ ಅನ್ಯ ಧರ್ಮದವರಿಗೂ ಕೊಟ್ಟಿರುವರು. ಹೀಗಿರುವಲ್ಲಿ ದೇವರನ್ನು ತಡೆಗಟ್ಟಲು ನಾನಾರು?” ಎಂದನು. ಈ ಮಾತುಗಳನ್ನು ಕೇಳಿದ ಮೇಲೆ ಅವರು ತಮ್ಮ ಆಕ್ಷೇಪಣೆಯನ್ನು ನಿಲ್ಲಿಸಿದರು, ಮಾತ್ರವಲ್ಲ, ‘ಅನ್ಯ ಧರ್ಮದವರೂ ಪಶ್ಚಾತ್ತಾಪಪಟ್ಟು ನವ ಜೀವ ಪಡೆಯುವ ಸದವಕಾಶವನ್ನು ದೇವರು ದಯಪಾಲಿಸಿದ್ದಾರಲ್ಲಾ!’ ಎಂದು ದೈವ ಸ್ತುತಿ ಮಾಡಿದರು.

ಕೀರ್ತನೆ: 42:2-3; 43:3-4

ಶ್ಲೋಕ: ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ,
ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ


ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ /
ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ? //
“ಎಲ್ಲಿ? ನಿನ್ನ ದೇವನೆಲ್ಲಿ?” ಎಂದು ಜನ  ಜರೆಯುತಿರಲು /
ಕಂಬನಿಯೆ ನನಗನ್ನಪಾನವಾಗಿಹುದು  ಹಗಲಿರುಳು //

ಕಳುಹಿಸು ನಿನ್ನ ಜ್ಯೋತಿಯನು
ನಿನ್ನ ಸತ್ಯವನ್ನು ನನ್ನ ನಡೆಸಲಿಕೆ /
ಸೇರಿಸಲೆನ್ನನು ನಿನ್ನ ಪವಿತ್ರ ಪರ್ವತಕೆ
ನಿನ್ನಯ ನಿವಾಸಕೆ //
ಬರುವೆನಾಗ ನಿನ್ನ ಬಲಿಪೀಠದ ಬಳಿಗೆ /
ನನ್ನಾನಂದ ನಿಧಿಯಾದ ನಿನ್ನ ಸನ್ನಿಧಿಗೆ /
ವೀಣೆ ನುಡಿಸಿ ದೇವಾ, ನಿನ್ನ ಸ್ತುತಿಸಲಿಕೆ //

ಯೊವಾನ್ನ 10:11-18 
“ನಾನೇ ಉತ್ತಮ ಕುರಿಗಾಹಿ. ಉತ್ತಮ ಕುರಿಗಾಹಿಯು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನೇ ಕೊಡುತ್ತಾನೆ. ಕುರಿಗಾಹಿಯಾಗಲಿ, ಕುರಿಗಳ ಒಡೆಯನಾಗಲಿ ಅಲ್ಲದ ಕೂಲಿಯಾಳು, ತೋಳ ಬರುವುದನ್ನು ಕಂಡದ್ದೇ, ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ತೋಳವು ಬಂದು ಕುರಿಗಳ ಮೇಲೆ ಎರಗಿ, ಮಂದೆಯನ್ನು ಚದರಿಸುತ್ತದೆ. ಅವನು ಕೇವಲ ಕೂಲಿಯಾಳು; ಕುರಿಗಳ ಚಿಂತೆ ಅವನಿಗಿಲ್ಲ. ನಾನಾದರೋ ಉತ್ತಮ ಕುರಿಗಾಹಿ. ಪಿತನು ನನ್ನನ್ನು ಬಲ್ಲರು; ನಾನೂ ಪಿತನನ್ನು ಬಲ್ಲೆ. ಅಂತೆಯೇ ನಾನು ನನ್ನ ಕುರಿಗಳನ್ನು ಬಲ್ಲೆನು; ಅವು ನನ್ನನ್ನು ಬಲ್ಲವು. ಅವುಗಳಿಗೋಸ್ಕರ ನಾನು ನನ್ನ ಪ್ರಾಣವನ್ನೇ ಕೊಡುತ್ತೇನೆ. ಈ ಮಂದೆಗೆ ಸೇರದ ಬೇರೆ ಕುರಿಗಳೂ ನನಗಿವೆ. ಅವನ್ನೂ ನಾನು ಕರೆತರಬೇಕು. ಅವು ಸಹ ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ ಕುರಿಹಿಂಡು ಆಗುವುದು. ಒಬ್ಬನೇ ಕುರಿಗಾಹಿ ಇರುವನು. “ಏಕೆಂದರೆ, ನನ್ನ ಪಿತನಿಗೆ ನನ್ನಲ್ಲಿ ಪ್ರೀತಿ ಇದೆ. ನನ್ನ ಪ್ರಾಣವನ್ನು ಮರಳಿ ಪಡೆಯುವಂತೆ ನಾನದನ್ನು ಧಾರೆಯೆರೆಯುತ್ತೇನೆ. ನನ್ನ ಪ್ರಾಣವನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು; ನಾನಾಗಿಯೇ ಅದನ್ನು ಧಾರೆಯೆರೆಯುತ್ತೇನೆ. ಅದನ್ನು ಧಾರೆಯೆರೆಯುವ ಹಕ್ಕು ನನಗಿದೆ. ಅದನ್ನು ಪುನಃ ಪಡೆಯುವ ಹಕ್ಕು ಸಹ ನನಗಿದೆ. ಈ ಆಜ್ಞೆಯನ್ನು ನಾನು ನನ್ನ ಪಿತನಿಂದ ಪಡೆದಿದ್ದೇನೆ,” ಎಂದು ನುಡಿದರು.

03.05.2020 - "ನಾನು ಬಂದದ್ದಾದರೋ ಜೀವನೀಡಲು, ಯಥೇಚ್ಛವಾಗಿ ನೀಡಲು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:14, 36-41


ಆಗ ಪೇತ್ರನು ಇತರ ಹನ್ನೊಂದು ಮಂದಿ ಪ್ರೇಷಿತರೊಡನೆ ಎದ್ದುನಿಂತು, ಜನಸಮೂಹವನ್ನು ಉದ್ದೇಶಿಸಿ, ಗಟ್ಟಿಯಾದ ಧ್ವನಿಯಿಂದ ಹೀಗೆಂದು ಪ್ರಬೋಧಿಸಿದನು: “ಯೆಹೂದ್ಯ ಸ್ವಜನರೇ, ಜೆರುಸಲೇಮಿನ ಸಕಲ ನಿವಾಸಿಗಳೇ, ನನಗೆ ಕಿವಿಗೊಡಿ. ಈ ಘಟನೆಯ ಅರ್ಥ ನಿಮಗೆ ಮನದಟ್ಟಾಗಲಿ. “ಇಸ್ರಯೇಲಿನ ಜನರೆಲ್ಲರಿಗೆ ಇದು ನಿಸ್ಸಂದೇಹವಾಗಿ ತಿಳಿದಿರಲಿ: ನೀವು ಶಿಲುಬೆಗೇರಿಸಿದ ಈ ಯೇಸುಸ್ವಾಮಿಯನ್ನೇ ದೇವರು ಪ್ರಭುವನ್ನಾಗಿಯೂ ಅಭಿಷಿಕ್ತ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ.” ಇದನ್ನು ಕೇಳಿದ ಆ ಜನರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪ್ರೇಷಿತರನ್ನು ಉದ್ದೇಶಿಸಿ, “ಸಹೋದರರೇ, ಈಗ ನಾವು ಮಾಡಬೇಕಾದುದು ಏನು?” ಎಂದು ಕೇಳಿದರು.  ಅದಕ್ಕೆ ಪೇತ್ರನು, “ನಿಮ್ಮಲ್ಲಿ ಪ್ರತಿ ಒಬ್ಬನೂ ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗಲಿ; ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆಯಲಿ. ಇದರಿಂದ ನೀವು ಪಾಪಕ್ಷಮೆಯನ್ನು ಪಡೆಯುವಿರಿ; ದೇವರ ವರವಾದ ಪವಿತ್ರಾತ್ಮರನ್ನು ಹೊಂದುವಿರಿ. ಈ ವಾಗ್ದಾನವನ್ನು ನಿಮಗೆ ಮಾತ್ರವಲ್ಲ, ನಿಮ್ಮ ಸಂತತಿಗೂ ದೂರ ಇರುವ ಎಲ್ಲರಿಗೂ ಮತ್ತು ಸರ್ವೇಶ್ವರನಾದ ದೇವರು ತಮ್ಮತ್ತ ಆಹ್ವಾನಿಸುವ ಪ್ರತಿಯೊಬ್ಬನಿಗೂ ಮಾಡಲಾಗಿದೆ,” ಎಂದನು. ಪೇತ್ರನು ಅವರಿಗೆ ಹಲವಾರು ವಿಧದಲ್ಲಿ ಮನವಿಮಾಡಿದನು. ‘ಈ ದುಷ್ಟ ಪೀಳಿಗೆಯಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಿ,’ ಎಂದು ಎಚ್ಚರಿಸಿದನು. ಅವನ ಬೋಧನೆಯನ್ನು ಅಂಗೀಕರಿಸಿದ ಅನೇಕರು ದೀಕ್ಷಾಸ್ನಾನ ಪಡೆದರು. ಅಂದೇ ಸುಮಾರು ಮೂರು ಸಾವಿರ ಜನರು ಸಭೆಯನ್ನು ಸೇರಿಕೊಂಡರು. 

ಕೀರ್ತನೆ: 23:1-3, 3-4, 5, 6

ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ನನಗೆ, ಕುಂದುಕೊರತೆಗಳೆಲ್ಲಿಯವು ಎನಗೆ?


ಪ್ರಭು ಕುರಿಗಾಹಿಯಾಗಿರಲು ನನಗೆ I
ಕುಂದುಕೊರತೆಗಳೆಲ್ಲಿಯವು ಎನಗೆ? II
ಹಸಿರುಗಾವಲುಗಳಲೆನ್ನ ತಂಗಿಸುವನು I
ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು II
ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ I

ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ II

ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ I
ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ II
ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ I
ನಿನ್ನ ಕುರಿಗೋಲು, ಊರುಗೋಲು, ಧೈರ್ಯವನು ತರುವುದೆನಗೆ I

ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ II


ಸಜ್ಜುಗೊಳಿಸುವೆ ನೀ ಶತ್ರುಗಳ ಕಣ್ಮುಂದೆಯೆ ನನಗೌತಣವನು I
ಹಚ್ಚುವೆ ತಲೆಗೆ ತೈಲವನು, ತುಂಬಿತುಳುಕಿಸುವೆ ಪಾನಪಾತ್ರೆಯನು II
ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ I
ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ 


ಎರಡನೇ ವಾಚನ: 1 ಪೇತ್ರನು 2:20-25

ನೀವು ತಪ್ಪುಮಾಡಿ, ಶಿಕ್ಷೆಗೆ ಗುರಿಯಾದಾಗ ತಾಳ್ಮೆಯಿಂದಿದ್ದರೆ ಅದೇನೂ ದೊಡ್ಡ ಕಾರ್ಯವಲ್ಲ. ಆದರೆ ಒಳ್ಳೆಯದನ್ನು ಮಾಡಿಯೂ ಬರುವ ಹಿಂಸೆಬಾಧೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡರೆ, ದೇವರು ನಿಮ್ಮನ್ನು ಮೆಚ್ಚುತ್ತಾರೆ. ನೀವು ಹೀಗೆ ಜೀವಿಸಬೇಕೆಂದೇ ದೇವರು ನಿಮ್ಮನ್ನು ಕರೆದಿದ್ದಾರೆ. ಕ್ರಿಸ್ತಯೇಸು ಸಹ ನಿಮಗಾಗಿ ಹಿಂಸೆಬಾಧೆಯನ್ನು ಅನುಭವಿಸಿದರು; ತಮ್ಮ ಹೆಜ್ಜೆಯ ಜಾಡನ್ನೇ ನೀವು ಅನುಸರಿಸುವಂತೆ ನಿಮಗೊಂದು ಆದರ್ಶವನ್ನು ಬಿಟ್ಟುಹೋದರು. ಅವರು ಯಾವ ಪಾಪವನ್ನೂ ಮಾಡಲಿಲ್ಲ. ಅವರ ಬಾಯಿಂದ ಅಬದ್ಧವಾದ ಮಾತೊಂದೂ ಕೇಳಿಬರಲಿಲ್ಲ. ಅವರು, ಅವಮಾನಪಡಿಸಿದವರನ್ನು ಪ್ರತಿಯಾಗಿ ಅವಮಾನಪಡಿಸಲಿಲ್ಲ. ಅವರು ಯಾತನೆಯನ್ನು ಅನುಭವಿಸುವಾಗಲೂ ಯಾರಿಗೂ ಬೆದರಿಕೆ ಹಾಕಲಿಲ್ಲ. ಬದಲಿಗೆ, ಸತ್ಯಸ್ವರೂಪರೂ ನ್ಯಾಯಾಧಿಪತಿಯೂ ಆದ ದೇವರಿಗೆ ತಮ್ಮನ್ನೇ ಒಪ್ಪಿಸಿಕೊಂಡರು. ನಾವು ಪಾಪದ ಪಾಲಿಗೆ ಸತ್ತು, ಸತ್ಯಕ್ಕೋಸ್ಕರ ಜೀವಿಸುವಂತೆ ಕ್ರಿಸ್ತಯೇಸು ತಮ್ಮ ದೇಹದಲ್ಲಿ ನಮ್ಮ ಪಾಪಗಳನ್ನು ಹೊತ್ತು ಶಿಲುಬೆಯ ಮರವನ್ನೇರಿದರು. ಅವರ ಗಾಯಗಳಿಂದ ನೀವು ಗುಣಹೊಂದಿದಿರಿ. ನೀವು ದಾರಿತಪ್ಪಿದ ಕುರಿಗಳಂತೆ ಅಲೆಯುತ್ತಿದ್ದಿರಿ. ಈಗಲಾದರೋ ನಿಮ್ಮ ಆತ್ಮಗಳನ್ನು ಕಾಯುವ ಕುರಿಗಾಹಿಯೂ ಸಂರಕ್ಷಕನೂ ಆದಾತನ ಬಳಿಗೆ ಮರಳಿದ್ದೀರಿ.

ಶುಭಸಂದೇಶ: ಯೊವಾನ್ನ 10:1-10


“ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿ ಹಟ್ಟಿಗೆ ಬಾಗಿಲ ಮೂಲಕ ಬರದೆ ಗೋಡೆ ಹತ್ತಿಬರುವವನು ಕಳ್ಳ ಹಾಗೂ ಕೊಳ್ಳೆಗಾರ. ಬಾಗಿಲ ಮೂಲಕ ಬರುವವನು ಕುರಿಗಾಹಿ. ಕಾವಲುಗಾರನು ಅವನಿಗೆ ಬಾಗಿಲು ತೆರೆಯುತ್ತಾನೆ. ಕುರಿಗಳು ಅವನ ಸ್ವರವನ್ನು ಕೇಳುತ್ತವೆ. ಅವನು ತನ್ನ ಕುರಿಗಳನ್ನು ಹೆಸರಿಟ್ಟು ಕರೆದು ಹೊರಗೆ ಬಿಡುತ್ತಾನೆ. ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ನಂತರ ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಹಿಂದೆ ಹೋಗುತ್ತವೆ. ಏಕೆಂದರೆ ಅವುಗಳಿಗೆ ಅವನ ಸ್ವರ ಗೊತ್ತು. ಅಪರಿಚಿತನನ್ನು ಅವು ಹಿಂಬಾಲಿಸುವುದಿಲ್ಲ; ಅವನಿಂದ ದೂರ ಓಡಿಹೋಗುತ್ತವೆ. ಅಪರಿಚಿತರ ಸ್ವರವನ್ನು ಅವು ಗುರುತಿಸುವುದಿಲ್ಲ. ಯೇಸು ಸ್ವಾಮಿ ಹೇಳಿದ ಈ ಸಾಮತಿಯನ್ನು ಕೇಳಿದವರು ಅರ್ಥ ಮಾಡಿಕೊಳ್ಳಲಿಲ್ಲ. ಆದುದರಿಂದ ಯೇಸು ಸ್ವಾಮಿ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಗಳಿಗೆ ನಾನೇ ಬಾಗಿಲು. ನನಗಿಂತ ಮೊದಲು ಬಂದವರೆಲ್ಲರು ಕಳ್ಳರು ಹಾಗೂ ಕೊಳ್ಳೆಗಾರರು. ಕುರಿಗಳು ಅವರಿಗೆ ಕಿವಿಗೊಡಲಿಲ್ಲ. ಹೌದು, ನಾನೇ ಬಾಗಿಲು, ನನ್ನ ಮೂಲಕ ಒಳಹೋಗುವವನು ಸುರಕ್ಷಿತನಾಗಿರುತ್ತಾನೆ. ಅವನು ಒಳಗೆ ಹೋಗುತ್ತಾನೆ, ಹೊರಗೆ ಬರುತ್ತಾನೆ; ಮೇವನ್ನು ಕಂಡುಕೊಳ್ಳುತ್ತಾನೆ. ಕಳ್ಳನು ಬರುವುದು ಕಳ್ಳತನಕ್ಕಾಗಿ, ಕೊಲ್ಲುವುದಕ್ಕಾಗಿ ಮತ್ತು ನಾಶಮಾಡುವುದಕ್ಕಾಗಿ ಮಾತ್ರ. ನಾನು ಬಂದದ್ದಾದರೋ ಜೀವನೀಡಲು, ಯಥೇಚ್ಛವಾಗಿ ನೀಡಲು.

02.05.2020 - “ಪ್ರಭುವೇ, ನಾವು ಹೋಗುವುದಾದರೂ ಯಾರ ಬಳಿಗೆ?"

ಮೊದಲನೇ ವಾಚನ ಪ್ರೇಷಿತರ ಕಾರ್ಯಕಲಾಪಗಳು 9:31-42

ಇಂತಿರಲು ಜುದೇಯ, ಗಲಿಲೇಯ ಮತ್ತು ಸಮಾರಿಯದ ಧರ್ಮಸಭೆಯಲ್ಲಿ ಶಾಂತಿ ನೆಲಸಿತು. ಸಭೆ ಬೆಳೆಯುತ್ತಾ ಪ್ರಭುವಿನ ಭಯಭಕ್ತಿಯಲ್ಲಿ ಬಾಳುತ್ತಾ ಪವಿತ್ರಾತ್ಮ ಅವರ ನೆರವಿನಿಂದ ಪ್ರವರ್ಧಿಸುತ್ತಾ ಇತ್ತು. ಪೇತ್ರನು ಅಲ್ಲಲ್ಲಿದ್ದ ಭಕ್ತವಿಶ್ವಾಸಿಗಳಿಗೆ ಭೇಟಿಕೊಡುತ್ತಾ ಲುದ್ದ ಎಂಬ ಊರಿನಲ್ಲಿ ವಾಸವಾಗಿದ್ದ ಭಕ್ತರ ಬಳಿಗೆ ಬಂದನು. ಅಲ್ಲಿ ಪಾರ್ಶ್ವವಾಯು ಪೀಡಿತನಾಗಿ ಎಂಟು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಐನೇಯಾ ಎಂಬವನನ್ನು ಕಂಡನು. ಪೇತ್ರನು ಅವನಿಗೆ, “ಐನೇಯಾ, ಯೇಸುಕ್ರಿಸ್ತರು ನಿನ್ನನ್ನು ಸ್ವಸ್ಥಪಡಿಸುತ್ತಾರೆ, ಎದ್ದು ನಿನ್ನ ಹಾಸಿಗೆಯನ್ನು ಎತ್ತಿಡು,” ಎಂದನು. ಆ ಕ್ಷಣವೇ ಅವನು ಎದ್ದನು. ಲುದ್ದ ಮತ್ತು ಸಾರೋನಿನ ನಿವಾಸಿಗಳೆಲ್ಲರೂ ಅವನನ್ನು ಕಂಡು ಪ್ರಭುವಿನ ಭಕ್ತರಾದರು. ಜೊಪ್ಪ ಎಂಬ ಊರಿನಲ್ಲಿ ತಬಿಥ ಎಂಬ ಒಬ್ಬ ಭಕ್ತೆ ಇದ್ದಳು. (ಗ್ರೀಕ್ ಭಾಷೆಯಲ್ಲಿ ಅವಳ ಹೆಸರು ‘ದೋರ್ಕ’) ಅವಳು ಸತ್ಕಾರ್ಯಗಳಲ್ಲೂ ದಾನಧರ್ಮಗಳಲ್ಲೂ ಸದಾ ನಿರತಳಾಗಿದ್ದವಳು. ಅವಳು ಕಾಯಿಲೆಯಿಂದ ಒಂದು ದಿನ ಸತ್ತಳು. ಜನರು ಅವಳ ಶವಕ್ಕೆ ಸ್ನಾನಮಾಡಿಸಿ ಮೇಲಂತಸ್ತಿನ ಕೋಣೆಯಲ್ಲಿ ಇರಿಸಿದರು. ಲುದ್ದವು ಜೊಪ್ಪಕ್ಕೆ ಸಮೀಪದಲ್ಲೇ ಇತ್ತು. ಪೇತ್ರನು ಲುದ್ದದಲ್ಲಿರುವುದನ್ನು ಕೇಳಿದ ಭಕ್ತಾದಿಗಳು, “ದಯವಿಟ್ಟು ಬೇಗನೆ ನಮ್ಮೂರಿಗೆ ಬನ್ನಿ,” ಎಂದು ಇಬ್ಬರ ಮುಖಾಂತರ ಹೇಳಿ ಕಳುಹಿಸಿದರು. ಪೇತ್ರನು ಎದ್ದು ಅವರ ಜೊತೆಯಲ್ಲೇ ಹೊರಟುಬಂದನು. ಅವನನ್ನು ಮೇಲಂತಸ್ತಿನ ಕೋಣೆಗೆ ಕರೆದುಕೊಂಡು ಹೋದರು. ಅಲ್ಲಿ ಕೂಡಿದ್ದ ವಿಧವೆಯರೆಲ್ಲರೂ ಅವನ ಸುತ್ತುವರಿದು ಅಳುತ್ತಾ, ದೋರ್ಕಳು ಜೀವದಿಂದ ಇದ್ದಾಗ ತಮಗೆ ಮಾಡಿಕೊಟ್ಟ ಬಟ್ಟೆಬರೆಗಳನ್ನು ಅವನಿಗೆ ತೋರಿಸಿದರು. ಪೇತ್ರನು ಅವರೆಲ್ಲರನ್ನೂ ಹೊರಗೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥಿಸಿದನು. ಅನಂತರ ಶವದ ಕಡೆಗೆ ತಿರುಗಿ, “ತಬಿಥಾ, ಮೇಲಕ್ಕೇಳು,” ಎಂದನು. ಆಕೆ ಕಣ್ತೆರೆದು ಪೇತ್ರನನ್ನು ನೋಡಿ ಎದ್ದು ಕುಳಿತಳು. ಪೇತ್ರನು ಕೈ ನೀಡಿ ಆಕೆಯನ್ನು ಎತ್ತಿ ನಿಲ್ಲಿಸಿದನು. ಭಕ್ತರನ್ನೂ ವಿಧವೆಯರನ್ನೂ ಕರೆದು ಜೀವಂತಳಾದ ತಬಿಥಳನ್ನು ಅವರಿಗೆ ತೋರಿಸಿದನು. ಈ ಸಮಾಚಾರ ಜೊಪ್ಪದಲ್ಲೆಲ್ಲಾ ಹರಡಿತು. ಅನೇಕರು ಪ್ರಭುವನ್ನು ವಿಶ್ವಾಸಿಸಿದರು

ಕೀರ್ತನೆ: 116:12-13, 14-15, 16-17

ಶ್ಲೋಕ: ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ?

ಶುಭಸಂದೇಶ: ಯೊವಾನ್ನ 6:60-69


ಯೇಸುಸ್ವಾಮಿಯ ಶಿಷ್ಯರಲ್ಲಿ ಹಲವರು, “ಇವು ಕಟುವಾದ ಮಾತುಗಳು, ಇವನ್ನು ಯಾರುತಾನೆ ಕೇಳಿಯಾರು?” ಎಂದು ಮಾತನಾಡಿಕೊಂಡರು. ಈ ವಿಷಯವಾಗಿ ತಮ್ಮ ಶಿಷ್ಯರು ಗೊಣಗುಟ್ಟುತ್ತಿರುವುದನ್ನು ಯೇಸು ತಾವಾಗಿಯೇ ಅರಿತು, “ಇಷ್ಟುಮಾತ್ರಕ್ಕೆ ನೀವು ಕಂಗೆಡಬೇಕೆ? ಹಾಗಾದರೆ ನರಪುತ್ರನು ತಾನು ಮೊದಲಿದ್ದ ಸ್ಥಳಕ್ಕೆ ಮರಳಿ ಏರುವುದನ್ನು ನೀವು ಕಂಡಾಗ ಏನನ್ನುವಿರಿ? ಸಜ್ಜೀವವನ್ನು ಕೊಡುವಂಥಾದ್ದು ದೇವರ ಆತ್ಮವೇ. ನರಮಾಂಸದಿಂದ ಏನೂ ಆಗದು. ನಾನು ನಿಮ್ಮೊಡನೆ ಆಡಿದ ಮಾತುಗಳು ಜೀವದಾಯಕ ದೇವರಾತ್ಮವನ್ನು ತರುತ್ತವೆ. ಆದರೂ ನಿಮ್ಮಲ್ಲಿ ಕೆಲವರಿಗೆ ವಿಶ್ವಾಸವಿಲ್ಲ,” ಎಂದು ಹೇಳಿದರು. (ವಿಶ್ವಾಸವಿಲ್ಲದವರು ಯಾರು, ತಮ್ಮನ್ನು ಹಿಡಿದುಕೊಡುವ ಗುರುದ್ರೋಹಿ ಯಾರು, ಎಂದು ಯೇಸುವಿಗೆ ಮೊದಲಿನಿಂದಲೂ ತಿಳಿದಿತ್ತು.) “ ‘ಪಿತನು ಅನುಗ್ರಹಿಸಿದ ಹೊರತು ಯಾರೂ ನನ್ನ ಬಳಿಗೆ ಬರಲಾರರು,’ ಎಂದು ನಾನು ಹೇಳಿದುದು ಇದಕ್ಕಾಗಿಯೇ,” ಎಂದು ಯೇಸು ಮತ್ತೆ ನುಡಿದರು. ಅಂದಿನಿಂದ ಯೇಸುಸ್ವಾಮಿಯ ಹಿಂಬಾಲಕರಲ್ಲಿ ಹಲವರು ಅವರ ಸಹವಾಸವನ್ನು ಬಿಟ್ಟುಬಿಟ್ಟರು. ಹೋದವರು ಹಿಂದಿರುಗಿ ಬರಲಿಲ್ಲ. ಆಗ ಯೇಸು ಹನ್ನೆರಡು ಮಂದಿ ಶಿಷ್ಯರಿಗೆ, “ನೀವು ಕೂಡ ಹೋಗಬೇಕೆಂದು ಇದ್ದೀರಾ?’ ಎಂದು ಕೇಳಿದರು. ಅದಕ್ಕೆ ಸಿಮೋನ ಪೇತ್ರನು, “ಪ್ರಭುವೇ, ನಾವು ಹೋಗುವುದಾದರೂ ಯಾರ ಬಳಿಗೆ? ನಿತ್ಯಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ. ತಾವೇ ದೇವರಿಂದ ಬಂದ ಪರಮಪೂಜ್ಯರು. ಹೌದು, ಇದೇ ನಮ್ಮ ವಿಶ್ವಾಸ ಮತ್ತು ಗ್ರಹಿಕೆ,” ಎಂದು ಹೇಳಿದನು.