15.10.2019

ಮೊದಲನೇ ವಾಚನ: ರೋಮನರಿಗೆ  1:16-25

ಶುಭಸಂದೇಶದ ವಿಷಯದಲ್ಲಿ ನಾನು ನಾಚಿಕೆಪಡುವವನೇ ಅಲ್ಲ. ಯೆಹೂದ್ಯರನ್ನು ಮೊದಲ್ಗೊಂಡು ಇತರರಿಗೂ  ವಿಶ್ವಾಸಿಸುವ ಪ್ರತಿಯೊಬ್ಬನಿಗೂ ಈ ಶುಭಸಂದೇಶವು ಜೀವೋದ್ಧಾರವನ್ನು ತರುವ ದೇವರ ಶಕ್ತಿಯಾಗಿದೆ. ದೇವರು ಮಾನವನನ್ನು ಹೇಗೆ ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ ಎಂಬುದನ್ನು ಶುಭಸಂದೇಶವು ಪ್ರಕಟಿಸುತ್ತದೆ. ಇಂಥ ಸಂಬಂಧವು ಆದಿಯಿಂದ ಅಂತ್ಯದವರೆಗೂ ವಿಶ್ವಾಸದಿಂದ ಮಾತ್ರ ಸಾಧ್ಯ. "ಯಾರು ದೇವರೊಡನೆ ಸತ್ಸಂಬಂಧ ಹೊಂದಿರುತ್ತಾರೋ ಅವರು ವಿಶ್ವಾಸದಿಂದಲೇ ಸಜ್ಜೀವವನ್ನು ಪಡೆಯುತ್ತಾರೆ" ಎಂದು ಪವಿತ್ರ ಗ್ರಂಥದಲ್ಲಿ ಲಿಖಿತವಾಗಿದೆ. ಮಾನವರ ಎಲ್ಲಾ ಪಾಪಕ್ರಮಗಳ ಮೇಲೆ ದೇವರ ಕೋಪಾಗ್ನಿ ಸ್ವರ್ಗದಿಂದ ಎರಗುವುದೆಂದು ಪ್ರಕಟವಾಗುತ್ತಿದೆ. ಏಕೆಂದರೆ, ಅವರ ಅಕ್ರಮ ನಡತೆ ಸತ್ಯವನ್ನು ಅಡಗಿಸುತ್ತಿದೆ. ದೇವರ ವಿಷಯವಾಗಿ ಮಾನವರು ಏನನ್ನು ಅರಿತುಕೊಳ್ಳಲು ಸಾಧ್ಯವೋ ಅದು ಅವರಿಗೆ ಚೆನ್ನಾಗಿ ತಿಳಿದಿದೆ. ದೇವರೇ ಅದನ್ನು ಅವರಿಗೆ ಸ್ಪಷ್ಟಪಡಿಸಿದ್ದಾರೆ. ದೇವರು ಲೋಕವನ್ನು ಸೃಷ್ಟಿಸಿದಂದಿನಿಂದ ಅವರ ಅಗೋಚರ ಗುಣಲಕ್ಷಣಗಳು, ಅವರ ಅನಂತ ಶಕ್ತಿ ಮತ್ತು ದೈವಸ್ವಭಾವ ಮನುಷ್ಯರಿಗೆ ಸೃಷ್ಟಿಗಳ ಮೂಲಕವೇ ವೇದ್ಯವಾಗುತ್ತಿವೆ. ಆದುದರಿಂದ ಮಾನವರು ತಮ್ಮ ಅಜ್ಞಾನಕ್ಕೆ ಯಾವ ನೆಪವನ್ನು ಒಡ್ಡಲೂ ಸಾಧ್ಯವಿಲ್ಲ. ದೇವರನ್ನು ಅವರು ಅರಿತಿದ್ದರೂ ದೇವರೆಂದು ಗೌರವಿಸಲಿಲ್ಲ;   ದೇವರಿಗೆ ಉಪಕಾರ ಸ್ಮರಣೆಯನ್ನು ಮಾಡಲಿಲ್ಲ. ಬದಲಾಗಿ ಅವರು ವ್ಯರ್ಥ ಆಲೋಚನೆಗಳಲ್ಲಿ ಮಗ್ನರಾದರು. ಅವರ ವಿವೇಕರಹಿತ ಮನಸ್ಸು ಅಂಧಕಾರಮಯವಾಯಿತು. ತಾವೇ ಜ್ಞಾನಿಗಳೆಂದು ಕೊಚ್ಚಿಕೊಳ್ಳುತ್ತ ಅವರು ನಿಜವಾಗಿಯೂ ಮೂರ್ಖರಾದರು. ಅಮರ ದೇವರನ್ನು ಆರಾಧಿಸುವುದನ್ನು ಬಿಟ್ಟು ಅಳಿದುಹೋಗುವಂಥ ನರಮಾನವರ ಪ್ರಾಣಿಪಕ್ಷಿಗಳ, ಸರ್ಪಾದಿಗಳ ವಿಗ್ರಹಗಳನ್ನು ಮಾಡಿ ಆರಾಧಿಸತೊಡಗಿದರು. ಆದುದರಿಂದ, ಮಾನವರು ಮನಸ್ಸಿನ ಆಶಾಪಾಶಾಗಳಿಗೆ ಬಲಿಯಾಗಿ ತಮ್ಮ ದೇಹಗಳಿಂದ, ತಮ್ಮತಮ್ಮಲ್ಲೇ ಅಶ್ಲೀಲ ಕೃತ್ಯಗಳೆಸಗಲೆಂದು ದೇವರು ಅವರನ್ನು ಅಶುದ್ಧ ನಡತೆಗೆ ಬಿಟ್ಟುಬಿಟ್ಟರು. ಅವರು ದೇವರ ಸತ್ಯವನ್ನು ಬಿಟ್ಟು ಆಸತ್ಯವಾದುದನ್ನು ಅಂಗೀಕರಿಸಿದರು; ಸೃಷ್ಟಿಕರ್ತನನ್ನು ಆರಾಧಿಸದೆ, ಸೃಷ್ಟಿಯಾದ ವಸ್ತುಗಳನ್ಯೇ ಆರಾಧಿಸಿ, ಸೇವೆ ಸಲ್ಲಿಸಿದರು. ಸರ್ವಕಾಲಕ್ಕೂ ಸೃಷ್ಟಿಕರ್ತರೊಬ್ಬರಿಗೇ ಸ್ತುತಿಸ್ತೋತ್ರ ಸಲ್ಲತಕ್ಕದ್ದು, ಆಮೆನ್.

ಕೀರ್ತನೆ: 19:2-3, 4-5
ಶ್ಲೋಕ: ಆಕಾಶಮಂಡಲ ಸಾರುತಿದೆ ದೇವರ ಮಹಿಮೆಯನು

ಶುಭಸಂದೇಶ: ಲೂಕ 11:37-41

ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಗಿಸಿದಾಗ, ಫರಿಸಾಯನೊಬ್ಬನು ಅವರನ್ನು ಊಟಕ್ಕೆ ಆಮಂತ್ರಿಸಿದನು. ಯೇಸು ಒಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡರು. ಊಟಕ್ಕೆ ಮುಂಚೆ ಅವರು ಕೈ ತೊಳೆಯದೆ ಹೋದುದನ್ನು ಕಂಡು ಫರಿಸಾಯನು ಚಕಿತನಾದನು. ಆಗ ಯೇಸು, "ಫರಿಸಾಯರಾದ ನೀವು ಲೋಟ ಹಾಗೂ ಊಟದ ತಟ್ಟೆಗಳ ಹೊರಭಾಗವನ್ನು ಶುಚಿ ಮಾಡುತ್ತೀರಿ; ಆದರೆ ನಿಮ್ಮ ಒಳಭಾಗವು ಲೋಭದಿಂದಲೂ ಕೆಡುಕಿನಿಂದಲೂ ತುಂಬಿದೆ. ಮೂರ್ಖರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನು ಮಾಡಲಿಲ್ಲವೇ? ನಿಮ್ಮ ತಟ್ಟೆ ಲೋಟಗಳಲ್ಲಿ ಇರುವುದನ್ನು ಮೊಟ್ಟಮೊದಲು ದಾನಮಾಡಿರಿ. ಆಗ ಸಮಸ್ತವೂ ನಿಮಗೆ ಶುದ್ಧಿಯಾಗಿರುವುದು.

14.10.2019 - "ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ"

ಮೊದಲನೇ ವಾಚನ: ರೋಮನರಿಗೆ  1:1-7

ದೇವರಿಗೆ ಅತ್ಯಂತ ಪ್ರಿಯರು ಹಾಗು ದೇವಜನರಾಗಲು ಕರೆಹೊಂದಿದವರಾದ ರೋಮ್ ನಗರ ನಿವಾಸಿಗಳೆಲ್ಲರಿಗೆ: ಕ್ರಿಸ್ತ ಯೇಸುವಿನ ದಾಸನೂ ಪ್ರೇಷಿತನಾಗಲು ಕರೆಹೊಂದಿದವನೂ ದೇವರ ಶುಭಸಂದೇಶವನ್ನು ಸಾರಲು ನೇಮಕಗೊಂಡವನೂ ಆದ ಪೌಲನು ಬರೆಯುವ ಪತ್ರ; ನಮ್ಮ ತಂದೆಯಾದ ದೇವರು ಹಾಗು ಪ್ರಭುವಾದ ಯೇಸುಕ್ರಿಸ್ತರು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅನುಗ್ರಹಿಸಲಿ. ದೇವರು ತಮ್ಮ ಶುಭಸಂದೇಶವನ್ನು ನೀಡುವುದಾಗಿ ಪ್ರವಾದಿಗಳ ಮುಖಾಂತರ ಮುಂಚಿತವಾಗಿಯೇ ಪವಿತ್ರಗ್ರಂಥದಲ್ಲಿ ವಾಗ್ದಾನಮಾಡಿದರು. ಈ ಸಂದೇಶ ದೇವರ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರನ್ನು ಕುರಿತಾದುದು. ಮನುಷ್ಯತ್ವದ ಮಟ್ಟಿಗೆ ಯೇಸು ದಾವೀದನ ವಂಶಜರು; ದೈವಿಕ ಪರಿಶುದ್ಧತೆಯ ಮಟ್ಟಿಗೆ ಇವರು ದೇವರ ಶಕ್ತಿಯನ್ನು ವ್ಯಕ್ತಪಡಿಸುವ ದೇವರ ಪುತ್ರ. ಸತ್ತು ಪುನರುತ್ಥಾನ ಹೊಂದಿ ಇದನ್ನು ಖಚಿತಪಡಿಸಿದವರು. ಇವರ ನಾಮ ಮಹಿಮೆಗೋಸ್ಕರವಾಗಿಯೇ ಸರ್ವಜನಾಂಗಗಳೂ ಇವರನ್ನು ವಿಶ್ವಾಸಿಸಿ, ವಿಧೇಯರಾಗಿ ನಡೆಯುವಂತೆ ಮಾಡಲು ಪ್ರೇಷಿತನಾಗುವ ಸೌಭಾಗ್ಯ ನನ್ನದಾಯಿತು. ಆ ಯೇಸುಕ್ರಿಸ್ತರ ಮುಖಾಂತರವೇ ದೇವರು ಈ ಭಾಗ್ಯವನ್ನು ನನಗೆ ಅನುಗ್ರಹಿಸಿದರು. ಯೇಸುಕ್ರಿಸ್ತರಿಗೆ ಸ್ವಂತದವರಾಗಲು ಕರೆಹೊಂದಿದ ನೀವು ಕೂಡ ಸರ್ವ ಜನಾಂಗಗಳಲ್ಲಿ ಸೇರಿದ್ದೀರಿ.

ಕೀರ್ತನೆ: 98:1,2-3, 3-4,

ಶ್ಲೋಕ: ಪ್ರಕಟಿಸಿಹನು ಪ್ರಭು ತನ್ನ ಮುಕ್ತಿವಿಧಾನವನು

ಶುಭಸಂದೇಶ: ಲೂಕ 11:29-32


ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು: "ಈ ಪೀಳಿಗೆ ಕೆಟ್ಟ ಪೀಳಿಗೆ, ಇದು ಅದ್ಬುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು ದೈವತೀರ್ಪಿನ ದಿನ ದಕ್ಷಿಣದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು  ತೋರಿಸುವಳು.  ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ,  ಸೊಲೊಮೋನನಿಗಿಂತಲೂ  ಮೇಲಾದವನು ಇಗೋ, ಇಲ್ಲಿದ್ದಾನೆ. ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.

13.10.2019 - "ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ"

ಮೊದಲನೇ ವಾಚನ: 2 ಅರಸರು 5:14-17 

ಎಲೀಷನು ಹೇಳಿದಂತಯೇ ನಾಮಾನನು ಜೋರ್ಡಾನಿಗೆ ಹೋಗಿ, ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೈವಪುರುಷನ ಮಾತಿಗನುಸಾರ ಅವನ ದೇಹ ಒಂದು ಮಗುವಿನ ದೇಹದಂತೆ ಶುದ್ಧವಾಯಿತು. ಆನಂತರ ನಾಮಾನನು ತನ್ನ ಪರಿವಾರದವರೊಡನೆ ಹಿಂದಿರುಗಿ ದೈವಪುರುಷನ ಬಳಿಗೆ ಹೋಗಿ ಅವನ ಮುಂದೆ ನಿಂತನು. "ಇಸ್ರಯೇಲ್ ನಾಡಿನಲ್ಲಿರುವ ದೇವರ ಹೊರತು, ಲೋಕದಲ್ಲಿ ಬೇರೆ ದೇವರು ಇಲ್ಲವೇ ಇಲ್ಲವೆಂಬುದು ಈಗ ನನಗೆ ಗೊತ್ತಾಯಿತು; ತಾವು ದಯವಿಟ್ಟು ಈ ಕಾಣಿಕೆಯನ್ನು ಅಂಗೀಕರಿಸಬೇಕು," ಎಂದು ಹೇಳಿದನು. ಅದಕ್ಕೆ ಎಲೀಷನು, "ನಾನು ಸನ್ನಿಧಿ ಸೇವೆ ಮಾಡುತ್ತಿರುವ ಸರ್ವೇಶ್ವರನಾಣೆ, ನಿನ್ನಿಂದ ಏನೂ ತೆಗೆದುಕೊಳ್ಳುವುದಿಲ್ಲ," ಎಂದನು. ನಾಮಾನನು ಎಷ್ಟು ಒತ್ತಾಯಪಡಿಸಿದರೂ ಅವನು ತೆಗೆದುಕೊಳ್ಳಲೇ ಇಲ್ಲ. ಆಗ ಅವನು ಎಲೀಷನಿಗೆ, "ತಾವು ನನ್ನಿಂದ ಏನನ್ನೂ ಸ್ವೀಕರಿಸದಿದ್ದರೆ ತಮ್ಮ ಸೇವಕನಾದ ನನಗೆ ಎರಡು ಹೇಸರುಕತ್ತೆಗಳು ಹೊರುವಷ್ಟು ಮಣ್ಣನ್ನು ಕೂಡಿಸಬೇಕೆಂದು ಬೇಡಿಕೊಳ್ಳುತ್ತೇನೆ. ನಾನು ಇನ್ನು ಮುಂದೆ ಎಲ್ಲಾ ದೇವತೆಗಳನ್ನು ಬಿಟ್ಟು ಸರ್ವೇಶ್ವರಸ್ವಾಮಿಯೊಬ್ಬರಿಗೇ  ದಹನಬಲಿಗಳನ್ನು ಸಮರ್ಪಿಸಬೇಕೆಂದಿರುತ್ತೇನೆ," ಎಂದು ಹೇಳಿದನು. 

ಕೀರ್ತನೆ: 98:1, 2-3, 3-4 

ಶ್ಲೋಕ: ಪ್ರಕಟಿಹನು ಪ್ರಭು ತನ್ನ ಮುಕ್ತಿವಿಧಾನವನು 

ಎರಡನೇ ವಾಚನ: 2 ತಿಮೊಥೇಯನಿಗೆ  2:8-13 

ಪ್ರಿಯಪುತ್ರನೇ, ಕ್ರಿಸ್ತ ಯೆಸುವನ್ನು ಸ್ಮರಿಸಿಕೋ. ದಾವೀದನ ವಂಶಸ್ಥರಾದ ಅವರು ಮೃತರಾಗಿ ಪುನರುತ್ಥಾನರಾದರು. ಇದೇ ನಾನು ಸಾರುವ ಶುಭಸಂದೇಶ. ಇದನ್ನು ಸಾರಿದ್ದರಿಂದಲೇ ನಾನು ಕಷ್ಟಗಳಿಗೆ ಈಡಾಗಿದ್ದೇನೆ; ಪಾತಕಿಯಂತೆ ಬೇಡಿಕೆಗಳಿಂದ ಬಂಧಿತನಾಗಿದ್ದೇನೆ. ಆದರೆ ದೇವರ ವಾಕ್ಯವನ್ನು ಯಾರೂ ಬಂಧಿಸುವಂತಿಲ್ಲ. ದೇವರಿಂದ ಆಯ್ಕೆಯಾದ ಪ್ರಜೆಗಳು ಪ್ರಭು ಯೇಸುವಿನಲ್ಲಿ ಲಭಿಸುವ ಜೀವೋದ್ಧಾರವನ್ನೂ ಅನಂತ ಮಹಿಮೆಯನ್ನೂ ನನ್ನೊಂದಿಗೆ ಪಡೆಯಲೆಂದು ನಾನು ಇದೆಲ್ಲವನ್ನೂ ಅವರಿಗಾಗಿ  ಸಹಿಸುತ್ತಿದ್ದೇನೆ. ಈ ಮಾತು ನಂಬತಕ್ಕದ್ದಾಗಿದೆ: ನಾವು ಆತನೊಡನೆ ಸತ್ತಿದ್ದರೆ, ಆತನೊಡನೆ ಜೀವಿಸುತ್ತೇವೆ. ಸೈರಣೆಯುಳ್ಳವರು ನಾವಾದರೆ, ಆತನೊಡನೆ ರಾಜ್ಯವಾಳುತ್ತೇವೆ; ನಾವಾತನನು ನಿರಾಕರಿಸಿದರೆ ನಮ್ಮನಾತ ನಿರಾಕರಿಸುತ್ತಾನೆ. ನಾವು ವಿಶ್ವಾಸಭ್ರಷ್ಟರಾದರೂ ವಿಶ್ವಾಸಪಾತ್ರನಾತ; ಕಾರಣ,  ತನ್ನ ಸ್ವಭಾವಕ್ಕೆ ವಿರುದ್ಧ ವರ್ತಿಸನಾತ. 

ಶುಭಸಂದೇಶ: ಲೂಕ 17:11-19 


ಯೇಸುಸ್ವಾಮಿ ಜೆರುಸಲೇಮಿಗೆ ಪ್ರಯಾಣ ಮಾಡುತ್ತಾ ಸಮಾರಿಯ ಹಾಗೂ ಗಲಿಲೇಯ ಗಡಿಗಳ ನಡುವೆ ಹಾದುಹೋಗುತ್ತಿದ್ದರು. ಒಂದು ಗ್ರಾಮವನ್ನು ಸಮಿಾಪಿಸಿದಾಗ ಕುಷ್ಟರೋಗದಿಂದ ನರಳುತ್ತಿದ್ದ ಹತ್ತು ಮಂದಿ ಅವರಿಗೆ ಎದುರಾಗಿ ಬಂದರು. ದೂರದಲ್ಲೇ ನಿಂತು, "ಯೇಸುವೇ, ಗುರುವೇ, ನಮ್ಮ ಮೇಲೆ ಕರುಣೆಯಿಡಿ,' ಎಂದು ಕೂಗಿ ಕೇಳಿಕೊಂಡರು. ಯೇಸು ಅವರನ್ನು ನೋಡಿ, "ನೀವು ಯಾಜಕರ ಬಳಿಗೆ ಹೋಗಿರಿ, ಅವರು ನಿಮ್ಮನ್ನು ಪರೀಕ್ಷಿಸಲಿ," ಎಂದರು. ಅಂತೆಯೇ, ಅವರು ದಾರಿಯಲ್ಲಿ ಹೋಗುತ್ತಿರುವಾಗಲೇ ಗುಣಹೊಂದಿದರು. ಅವರಲ್ಲಿ ಒಬ್ಬನು ತಾನು ಗುಣಹೊಂದಿದ್ದನು ಕಂಡು, ಹರ್ಷೋದ್ಗಾರದಿಂದ ದೇವರನ್ನು ಸ್ತುತಿಸುತ್ತಾ ಹಿಂದಿರುಗಿ ಬಂದನು. ಯೇಸುವಿನ ಪಾದಕ್ಕೆ ಸಾಷ್ಟಾಂಗವೆರಗಿ ಕೃತಜ್ಞತೆಯನ್ನು ಸಲ್ಲಿಸಿದನು. ಇವನೋ ಸಮಾರಿಯದವನು! ಆಗ ಯೇಸು, "ಹತ್ತುಮಂದಿ ಗುಣ ಹೊಂದಿದರಲ್ಲವೇ? ಮಿಕ್ಕ ಒಂಭತ್ತು ಮಂದಿ ಎಲ್ಲಿ? ದೇವರನ್ನು ಸ್ತುತಿಸುವುದಕ್ಕೆ ಈ ಹೊರನಾಡಿನವನ ಹೊರತು ಬೇರಾರೂ ಬರಲಿಲ್ಲವೇ?" ಎಂದರು. ಆನಂತರ ಆ ಸಮಾರಿಯದವನಿಗೆ, "ಎದ್ದು ಹೋಗು: ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ," ಎಂದು ಹೇಳಿದರು.

12.10.2019 - "ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವನು ಹೆಚ್ಚು ಭಾಗ್ಯವಂತನು!"

ಮೊದಲನೇ ವಾಚನ: ಯೊವೇಲ 3:12-21 

ಸರ್ವೇಶ್ವರ ಇಂತೆನ್ನುತ್ತಾರೆ: "ರಾಷ್ಟ್ರಗಳು ಎಚ್ಚೆತ್ತು ಸರ್ವೇಶ್ವರಸ್ವಾಮಿಯ ನ್ಯಾಯತೀರ್ಪಿನ ಕಣಿವೆಗೆ ಇಳಿಯಲಿ. ಸುತ್ತಮುತ್ತ ನೆರೆದಿರುವ ರಾಷ್ಟ್ರಗಳಿಗೆ ನ್ಯಾಯ ತೀರಿಸಲು ಅಲ್ಲಿ ನಾನು ಆಸೀನನಾಗಿರುವೆನು. ಸ್ವಾಮಿಯ ಶೂರರೇ. ಕುಡುಗೋಲನ್ನು ಹಾಕಿರಿ; ಫಲ ಪಕ್ವವಾಗಿದೆ ಬನ್ನಿ, ದ್ರಾಕ್ಷಿಯನ್ನು ತುಳಿಯಿರಿ; ಆಲೆಯು ಭರ್ತಿಯಾಗಿದೆ. ತೊಟ್ಟಿಗಳು ತುಂಬಿ ತುಳುಕುತ್ತಿವೆ; ರಾಷ್ಟ್ರಗಳ ದುಷ್ಟತನವು ಮಿತಿಮಿಾರಿದೆ. ಇಗೋ, ನ್ಯಾಯತೀರ್ಪಿನ ಕಣಿವೆಯಲ್ಲಿ ತಂಡೋಪತಂಡವಾದ ಜನಸ್ತೋಮ! ತೀರ್ಪಿನ ಕಣಿವೆಯಲ್ಲಿರುವವರಿಗೆ ಸರ್ವೇಶ್ವರನ ದಿನ ಸನ್ನಿಹಿತ! ಸೂರ್ಯಚಂದ್ರಗಳು ಮಂಕಾಗುತ್ತವೆ. ನಕ್ಷತ್ರಗಳು ಕಾಂತಿಗುಂದುತ್ತವೆ. ಸ್ವಾಮಿ ಸಿಯೋನಿನಿಂದ ಗರ್ಜಿಸುತ್ತಾರೆ, ಜೆರುಸಲೇಮಿನಿಂದ ಅವರ ಧ್ವನಿ ಮೊಳಗುತ್ತದೆ. ಭೂಮ್ಯಾಕಾಶಗಳು ನಡುಗುತ್ತವೆ. ಆದರೂ ಸರ್ವೇಶ್ವರ ತಮ್ಮ ಜನರಿಗೆ ಆಶ್ರಯ; ಇಸ್ರಯೇಲರಿಗೆ ರಕ್ಷಣಾ ದುರ್ಗ. ಇಸ್ರಯೇಲರೇ, ಕೇಳಿ, ಪವಿತ್ರ ಪರ್ವತವಾದ ಸಿಯೋನಿನಲ್ಲಿ ನೆಲೆಯಾಗಿರುವ ನಿಮ್ಮ ಸರ್ವೇಶ್ವರಸ್ವಾಮಿ ದೇವರು ನಾನೇ ಎಂದು ಆಗ ನಿಮಗೆ ಮನದಟ್ಟಾಗುವುದು. ಜೆರುಸಲೇಮ್ ಪುಣ್ಯಕ್ಷೇತ್ರವೆನಿಸಿಕೊಳ್ಳುವುದು. ಪರಕೀಯರು ಅದನ್ನೆಂದಿಗೂ ಆಕ್ರಮಿಸರು. ಆ ದಿನಗಳಲ್ಲಿ ಬೆಟ್ಟಗುಟ್ಟಗಳಿಂದ ದ್ರಾಕ್ಷಾರಸ ಮತ್ತು ಹಾಲುತುಪ್ಪ ಹರಿಯುವುದು. ಜುದೇಯ ನಾಡಿನ ಹಳ್ಳಕೊಳ್ಳಗಳು ನೀರಿನಿಂದ ತುಂಬಿರುವುವು.  ದೇವಾಲಯದಿಂದ ನೀರು ಚಿಮ್ಮಿ ಬಂದು ಆಕಾಚಿಯದ ಹಳ್ಳವನ್ನು ತಂಪಾಗಿಸುವುದು. ಈಜಿಪ್ಟ್ ಪಾಳುಬೀಳುವುದು, ಎದೋಮ್ ಬೆಂಗಾಡಾಗುವುದು. ಕಾರಣ, ಈ ಎರಡು ಪಟ್ಟಣದವರು ಜುದೇಯ ನಾಡಿನ ಮೇಲೆ ದಾಳಿಮಾಡಿದ್ದಾರೆ. ನಿರ್ದೋಷಿಗಳ ರಕ್ತವನ್ನು ಸುರಿಸಿದ್ದಾರೆ. ಹತರಾದವರು ನಿರ್ದೋಷಿಗಳೆಂದು ನಿರ್ಣಯಿಸುವೆನು. ಕೊಲೆಪಾತಕರನ್ನು ದಂಡಿಸಿಯೇ ತೀರುವೆನು. ಆದರೆ ಜುದೇಯನಾಡು, ಜೆರುಸಲೇಮ್ ನಗರ ಜನಭರಿತವಾಗಿ ಇರುವುದು. ಸರ್ವೇಶ್ವರಸ್ವಾಮಿಯಾದ ನಾನು ಸಿಯೋನ್ ಪರ್ವತದಲ್ಲಿ ನೆಲೆಯಾಗಿರುವೆನು." 

ಕೀರ್ತನೆ: 87:1-2, 5-6, 11-12 

ಶ್ಲೋಕ: ಸಜ್ಜನರೇ, ಪ್ರಭುವಿನಲಿ ಆನಂದಿಸಿರಿ 

ಶುಭಸಂದೇಶ: ಲೂಕ 11:27-28 



ಯೇಸುಸ್ವಾಮಿ ಮಾತನಾಡುತ್ತಿದ್ದಾಗ ಜನಸಮೂಹದಿಂದ ಮಹಿಳೆಯೊಬ್ಬಳು, "ನಿಮ್ಮನ್ನು ಉದರದಲ್ಲಿ ಹೊತ್ತು, ನಿಮಗೆ ಮೊಲೆಯೂಡಿಸಿದ ತಾಯಿ ಭಾಗ್ಯವಂತಳು!" ಎಂದು ಕೂಗಿ ಹೇಳಿದಳು. ಅದಕ್ಕೆ ಯೇಸು, "ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವನು ಹೆಚ್ಚು ಭಾಗ್ಯವಂತನು!" ಎಂದರು.

11.10.2019 - "ಸ್ವರ್ಗದಿಂದ ಒಂದು ಅದ್ಬುತ ಕಾರ್ಯವನ್ನು ಮಾಡಿತೋರಿಸುವಂತೆ ಕೇಳಿದರು"

ಮೊದಲನೇ ವಾಚನ: ಯೊವೇಲ  1:13-15; 2:1-2 

ಯಾಜಕರೇ, ಗೋಣಿತಟ್ಟನ್ನುಟ್ಟು ರೋದಿಸಿರಿ; ಬಲಿಪೀಠದ ಪರಿಚಾರಕರೇ, ಪ್ರಲಾಪಿಸಿರಿ; ದೇವರ ದಾಸರೇ, ಬನ್ನಿ; ಗೋಣಿತಟ್ಟನ್ನುಟ್ಟು ಜಾಗರಣೆ ಮಾಡಿರಿ. ದೇವರ ಆಲಯದಲ್ಲಿ ಧ್ಯಾನಪಾನ ನ್ಯೆವೇದ್ಯಗಳು ನಿಂತುಹೋಗಿವೆ. ಉಪವಾಸ ವ್ರತವನ್ನು ಕೈಗೊಂಡು ಮಹಾಸಭೆಯನ್ನು ಕರೆಯಿರಿ; ಹಿರಿಯರನ್ನೂ ನಾಡಿನ ಜನಸಾಮಾನ್ಯರನ್ನೂ ಸೇರಿಸಿರಿ; ದೇವರಾದ ಸರ್ವೇಶ್ವರಸ್ವಾಮಿಯ ಆಲಯಕ್ಕೆ ಬರಮಾಡಿರಿ; ಆ ಸ್ವಾಮಿಗೆ ಪ್ರಾರ್ಥನೆಮಾಡಿರಿ. ಸರ್ವೇಶ್ವರಸ್ವಾಮಿಯ ದಿನ ಸಮಿಾಪಿಸಿದೆ. ಆ ದಿನ ಸರ್ವಶಕ್ತನಿಂದ ವಿನಾಶವನ್ನು ತರಲಿದೆ; ಎಂಥಾ ಭಯಂಕರ ದಿನವದು! ಸಿಯೋನಿನಲ್ಲಿ ಕೊಂಬೂದಿರಿ; ನನ್ನ ಪರಿಶುದ್ಧ ಪರ್ವತದಲ್ಲಿ ಎಚ್ಚರಿಕೆಯ ವಾಣಿ ಮೊಳಗಲಿ; ಸಮಸ್ತ ದೇಶನಿವಾಸಿಗಳು ಹೆದರಿ ನಡುಗಲಿ, ಸರ್ವೇಶ್ವರಸ್ವಾಮಿಯ ದಿನ ಬರಲಿದೆ, ಸನ್ನಿತವಾಗಿದೆ. ಅದು ಕಾರಿರುಳಿನ ಕರಾಳ ದಿನ, ಕಾರ್ಮುಗಿಲ ಕಾರ್ಗತ್ತಲ ದಿನ. ಮುಂಬೆಳಕು ಗುಡ್ಡದಿಂದ ಗುಡ್ಡಕ್ಕೆ ಹರಡುವಂತೆ ಪ್ರಬಲವಾದ ದೊಡ್ಡ ಸೈನ್ಯವೊಂದು ಬರುತ್ತಿದೆ; ಇಂಥ ಸೈನ್ಯ ಹಿಂದೆಂದೂ ಬಂದಿಲ್ಲ, ತಲತಲಾಂತರಕ್ಕೂ ಬಬರುವಂತಿಲ್ಲ. 

ಕೀರ್ತನೆ: 9:2-3, 6, 16, 8-9 

ಶ್ಲೋಕ: ಪ್ರಭು ಜನಕೆ ನ್ಯಾಯತೀರಿಸುವನು ನೀತಿಗನುಸಾರ 

ಶುಭಸಂದೇಶ: ಲೂಕ 11:15-26 

ಜನರಲ್ಲಿ ಕೆಲವರು, "ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ," ಎಂದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಸ್ವರ್ಗದಿಂದ ಒಂದು ಅದ್ಬುತ ಕಾರ್ಯವನ್ನು ಮಾಡಿತೋರಿಸುವಂತೆ ಕೇಳಿದರು. ಅವರ ಆಲೋಚನೆಗಳನ್ನು ಅರಿತುಕೊಂಡ ಯೇಸು, ಅಂತಃಕಲಹದಿಂದ ಒಡೆದು ಹೋಗಿರುವ ಪ್ರತಿಯೊಂದು ರಾಜ್ಯ ನಾಶವಾಗುವುದು; ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಾಗುವುವು. ಅಂತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು? ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು. ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ, ಎಂಬುದು ಸ್ಪಷ್ಟ. ಬಲಿಷ್ಠನೊಬ್ಬನು ಸರ್ವಾಯುಧಗಳಿಂದ ಸುಸಜ್ಜಿತನಾಗಿ ತನ್ನ ಮನೆಗೆ ಕಾವಲಿರಿಸುವಾಗ ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ. ಆದರೆ ಇವನಿಗಿಂತಲೂ ಬಲಿಷ್ಠನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಯನ್ನು ಹಂಚಿಕೊಡುತ್ತಾನೆ. ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಕರಿಸದವನು ಚದುರಿಸುತ್ತಾನೆ," ಎಂದರು. ಯೇಸುಸ್ವಾಮಿ ಬೋಧನೆಯನ್ನು ಮುಂದುವರಿಸುತ್ತಾ, "ದೆವ್ವವು ಒಬ್ಬ ಮನುಷ್ಯನನ್ನು ಬಿಟ್ಟು ತೊಲಗಿದ ಮೇಲೆ ನೆಲೆಯನ್ನು ಹುಡುಕುತ್ತಾ ಒಣಗಾಡಿನಲ್ಲಿ ಅಲೆದಾಡುತ್ತದೆ. ಅದಕ್ಕೆ ನೆಲೆ ಸಿಗದ ಕಾರಣ ಅದು, "ನಾನು ಬಿಟ್ಟುಬಂದ ನನ್ನ ಮನೆಗೇ ಹಿಂದಿರುಗುತ್ತೇನೆ" ಎಂದುಕೊಳ್ಳುತ್ತದೆ. ಅದು ಮರಳಿ ಬಂದಾಗ, ಮನೆ ಗುಡಿಸಿರುವುದನ್ನೂ ಎಲ್ಲವೂ ಚೊಕಟವಾಗಿರುವುದನ್ನೂ ಕಾಣುತ್ತದೆ. ಪುನಃ ಹೊರಟು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಅವು ಆ ಮನುಷ್ಯನ ಒಳ ಹೊಕ್ಕು ನೆಲಸುತ್ತದೆ. ಕೊನೆಗೆ ಅವನ ಪರಿಸ್ಥಿತಿ ಪೂರ್ವಸ್ಥಿತಿಗಿಂತಲೂ ಅಧೋಗತಿಗೆ ಇಳಿಯುತ್ತದೆ," ಎಂದರು.

10.10.2019 - "ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮ ಅವರನ್ನೇ ಅನುಗ್ರಹಿಸಬಲ್ಲರು"

ಮೊದಲನೇ ವಾಚನ: ಮಲಾಕಿಯನ 3:13-4:2 

"ನೀವು ನನಗೆ ಕಠಿಣವಾದ ಮಾತುಗಳನ್ನಾಡಿದ್ದೀರಿ," ಎನ್ನುತ್ತಾರೆ ಸರ್ವೇಶ್ವರ. "ನೀವು, "ನಿನಗೆ ವಿರುದ್ಧವಾಗಿ ನಾವು ಮಾತನಾಡಿದ್ದೇನು?" ಎಂದು ಕೇಳುತ್ತೀರೋ? ದೇವರಿಗೆ ಸೇವೆ ಮಾಡುವುದು  ವ್ಯರ್ಥ. ಅವರು ಹೇಳಿದಂತೆ ನಾವು ನಡೆದುಕೊಳ್ಳುವುದರಿಂದ ಪ್ರಯೋಜನವೇನು? ನಮ್ಮ ಕೃತ್ಯಗಳಿಗಾಗಿ ಸೇನಾಧೀಶ್ವರ ಸರ್ವೇಶ್ವರನ ಮುಂದೆ ದುಃಖಪಡುವುದರಿಂದ ಲಾಭವೇನು? ಆಹಂಕಾರಿಗಳೇ ಭಾಗ್ಯವಂತರು; ದುಷ್ಕರ್ಮಿಗಳು ಚೆನ್ನಾಗಿ ಅಭಿವೃದ್ಧಿಯಾಗುತ್ತಿದ್ದಾರೆ, ಅಷ್ಟೆ ಅಲ್ಲ, ದೇವರನ್ನೇ ಪರಿಕ್ಷೆಗೆ ಗುರಿಪಡಿಸಿ ಸುರಕ್ಷಿತವಾಗಿದ್ದಾರೆ," ಎಂದು ನೀವು ಹೇಳಿದ್ದೀರಿ. ಇಂಥ ಮಾತುಗಳನ್ನು ಕೇಳಿ, ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರು ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು. ಸರ್ವೇಶ್ವರ ಅವರಿಗೆ ಕಿವಿಗೊಟ್ಟು ಆಲಿಸಿದರು. ಭಯಭಕ್ತಿಯಿಂದ ತಮ್ಮ ನಾಮ ನಾಮಸ್ಮರಣೆ ಮಾಡುವವರ ಹೆಸರುಗಳನ್ನು ತಮ್ಮ ಮುಂದಿದ್ಧ ದಾಖಲೆ ಪುಸ್ತಕದಲ್ಲಿ ಬರೆಸಿದರು. ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: "ಇವರು ನನ್ನ ಜನರು; ನಾನು ಕಾರ್ಯತತ್ಪರನಾಗುವ ದಿನದಂದು ಅವರು ನನಗೆ ಸ್ವಕೀಯ ಜನರಾಗಿರುವರು.  ತಂದೆಯೊಬ್ಬನು ತನ್ನ ಸೇವೆ ಮಾಡುವ ಮಗನನ್ನು ಕಾಪಾಡುವಂತೆ ನಾನು ಅವರನ್ನು ಕಾಪಾಡುವೆನು. ಆಗ ಸಜ್ಜನರಿಗೂ ದುರ್ಜನರಿಗೂ, ದೇವರಸೇವೆ ಮಾಡುವವರಿಗೂ ಮಾಡದವರಿಗೂ ಇರುವ ವ್ಯತ್ಯಾಸವನ್ನು ಮತ್ತೆ ನೀವು ಮನಗಾಣುವಿರಿ. "ಇಗೋ, ಆ ದಿನ ಬರುತ್ತಿದೆ. ಒಲೆಯಂತೆ ಉರಿಯುತ್ತಿದೆ.  ಎಲ್ಲ ಆಹಾಂಕಾರಿಗಳು, ದುಷ್ಕರ್ಮಿಗಳು, ಒಣಹುಲ್ಲಿನಂತೆ ಆಗಿಹೋಗಿದ್ದಾರೆ. ಆದ್ದರಿಂದ ಬರಲಿರುವ ಆ ದಿನದಂದು ಸುಟ್ಟು ಭಸ್ಮವಾಗುತ್ತಾರೆ. ಬುಡ ರೆಂಬೆಸಹಿತ ಬೂದಿಯಾಗುತ್ತದೆ," ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ, "ನನ್ನ ನಾಮದಲ್ಲಿ ಭಯಭಕ್ತಿಯಿಂದ ಇರುವ ನಿಮಗಾದರೋ ಜೀವೋದ್ಧಾರಕನೆಂಬ ಸೂರ್ಯನು ಉದಯಿಸಿ, ಸುಕ್ಷೇಮವನ್ನೀಯುವ ಕಿರಣಗಳನ್ನು ಬೀರುವನು. ಕೊಟ್ಟಿಗೆಯಿಂದ ಹೊರಬಂದ ಕರುಗಳಂತೆ ನೀವು ಕುಣಿದು ಕುಪ್ಪಳಿಸುವಿರಿ. 

ಕೀರ್ತನೆ: 1:1-2, 3, 4, 6 

ಶ್ಲೋಕ: ಪ್ರಭುವಿನಲ್ಲೇ ಭರವಸೆಯಿಟ್ಟು ನಡೆವಾತನು ಧನ್ಯನು 

ಶುಭಸಂದೇಶ: ಲೂಕ 11:5-13 

ಯೇಸುಸ್ವಾಮಿ ಶಿಷ್ಯರಿಗೆ ಹೀಗೆಂದರು: "ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನ ಮನೆಗೆ ನಡುರಾತ್ರಿಯಲ್ಲಿ ಹೋಗುತ್ತಾನೆಂದು ಭಾವಿಸೋಣ: ಅವನು, "ಗೆಳೆಯಾ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು. ಪ್ರಯಾಣದಲ್ಲಿದ್ದ ನನ್ನ ಸ್ನೇಹಿತನೊಬ್ಬನು ಅನಿರೀಕ್ಷಿತವಾಗಿ ನನ್ನ ಮನೆಗೆ ಈಗತಾನೆ ಬಂದಿದ್ದಾನೆ. ಅವನಿಗೆ ಊಟಕ್ಕಿಡಲು ನನ್ನಲ್ಲಿ ಏನೂ ಇಲ್ಲ," ಎಂದು ಕೇಳಲು, ಈ ಸ್ನೇಹಿತ ಒಳಗಿನಿಂದಲೇ, "ನನಗೆ ತೊಂದರೆ ಕೊಡಬೇಡ; ಬಾಗಿಲು ಹಾಕಿ ಆಗಿದೆ; ನನ್ನ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ಬಂದು ಕೊಡುವುದಕ್ಕಾಗುವುದಿಲ್ಲ," ಎಂದು ಉತ್ತರ ಕೊಡುವುದು ಸಹಜವಲ್ಲವೇ? ಆದರೂ, ತನ್ನ ಗೆಳೆಯ ಇವನು ಎದ್ದು ಬಂದುಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದು ಬಂದು ಕೇಳಿದಷ್ಟನ್ನು ಕೊಡುತ್ತಾನೆಂಬುದು ನಿಜ. ಆದುದರಿಂದ "ಕೇಳಿರಿ, ನಿಮಗೆ ದೊರಕುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು. ಏಕೆಂದರೆ ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು; ಹುಡುಕುವವನಿಗೆ ಸಿಗುವುದು; ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು. ನಿಮ್ಮಲ್ಲಿ ಯಾವ ತಂದೆ ತಾನೇ ತನ್ನ ಮಗ ಮಿಾನನ್ನು  ಕೇಳಿದರೆ ಹಾವನ್ನು ಕೊಡುತ್ತಾನೆ? ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುತ್ತಾನೆ? ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅವಕ್ಕಿಂತಲೂ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮ ಅವರನ್ನೇ ಅನುಗ್ರಹಿಸಬಲ್ಲರು! ಎಂದು ನಾನು ನಿಮಗೆ ಹೇಳುತ್ತೇನೆ."

09.10.2019 - "ನಿಮ್ಮ ಸಾಮ್ರಾಜ್ಯ ಬರಲಿ"

ಮೊದಲನೇ ವಾಚನ: ಯೋನನ 4:1-11 


ಸರ್ವೇಶ್ವರಸ್ವಾಮಿಯ ವರ್ತನೆಯು ಯೋನನಿಗೆ ಹಿಡಿಸಲಿಲ್ಲ. ಅವನ ಕೋಪ ನೆತ್ತಿಗೇರಿತು. ಆಗ ಅವನು ಹೀಗೆಂದು ಮೊರೆಯಿಟ್ಟನು: "ಸ್ವಾಮಿಾ, ಈ ರೀತಿ ಸಂಭವಿಸುವುದೆಂದು ನಾನು ಸ್ವದೇಶವನ್ನು ಬಿಡುವ ಮುನ್ನವೇ ನಿಮಗೆ ಹೇಳಿದ್ದೇನಲ್ಲವೆ? ಈ ಕಾರಣದಿಂದಲೇ ಅಲ್ಲವೆ ನಾನು ತಾರ್ಷಿಷಿಗೆ ಓಡಿಹೋಗಲು ಪ್ರಯತ್ನಿಸಿದ್ದು? ನೀವು ಪ್ರೀತಿಸ್ವರೂಪಿ, ಕರುಣಾಮಯಿ, ಸಹನಾಶೀಲರಾದ ದೇವರು, ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ಹಿಂತೆಗೆದುಕೊಳ್ಳುವ ದೇವರು - ಎಂದು ಆಗಲೇ ನನಗೆ ತಿಳಿದಿತ್ತು. ಆದುದರಿಂದ ಸರ್ವೇಶ್ವರಾ, ನನ್ನ ಪ್ರಾಣವನ್ನು ಹಿಂತೆಗೆದುಕೊಳ್ಳಿ. ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು." ಎಂದು ಮೊರೆಯಿಟ್ಟನು. ಅದಕ್ಕೆ ಸರ್ವೇಶ್ವರ, "ನೀನು ಹೀಗೆ ಸಿಟ್ಟುಗೊಳ್ಳುವುದು ಸರಿಯೇ?" ಎಂದರು. ಅನಂತರ ಯೋನನು ಆ ನಗರವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋದನು. ಅಲ್ಲಿ ತನಗಾಗಿ ಒಂದು ಗುಡಿಸಲನ್ನು ಕಟ್ಟಿಕೊಂಡನು. ನಗರಕ್ಕೆ ಏನು ಸಂಭವಿಸುತ್ತದೋ ಎಂಬುದನ್ನು ನೋಡಲು ಅದರ ನೆರಳಿನಲ್ಲಿ ಕುಳಿತನು. ದೇವರಾದ ಸರ್ವೇಶ್ವರ ಆ ಸ್ಥಳದಲ್ಲಿ ಒಂದು ಸೋರೆಬಳ್ಳಿ ಮೊಳೆಯುವಂತೆ ಮಾಡಿದರು. ಅದು ಬೆಳೆದು ತಲೆಗೆ ನೆರಳನ್ನೂ ಮನಸ್ಸಿಗೆ ತಣಿವನ್ನೂ ನೀಡಿತು. ಯೋನನಿಗೆ ಬಹಳ ಸಂತೋಷವಾಯಿತು. ಆದರೆ ಮಾರನೆಯ ದಿನ ಮುಂಜಾನೆ ದೇವರ ಆಜ್ಞಾನುಸಾರ ಆ ಗಿಡಕ್ಕೆ ಹುಳುವೊಂದು ಹೊಡೆಯಿತು. ಆಗ ಗಿಡವು ಒಣಗಿಹೋಯಿತು. ಸೂರ್ಯನು ಏರುತ್ತಿರಲು, ಸರ್ವೇಶ್ವರನ ಚಿತ್ತಾನುಸಾರ ಬಿಸಿಯಾದ ಮೂಡಣ ಗಾಳಿ ಬೀಸಿತು. ಬಿಸಿಲಿನ ತಾಪದಿಂದ ಯೋನನು ಮೂರ್ಛೆಹೋಗುವಂತಾದನು; ಸಾವನ್ನು ಅಪೇಕ್ಷಿಸುತ್ತಾ: "ಬದುಕಿರುವುದಕ್ಕಿಂತ ಸಾಯುವುದೇ ಲೇಸು," ಎಂದು ಬೇಡಿಕೊಂಡನು. ಅದಕ್ಕೆ ದೇವರು: "ನೀನು ಸೋರೆಗಿಡದ ವಿಷಯದಲ್ಲಿ ಸಿಟ್ಟುಗೊಳ್ಳುವುದು  ಸರಿಯೇ?" ಎಂದು ಕೇಳಲು, ಯೋನನು, "ಹೌದು, ಸಾವನ್ನು ಬಯಸುವಷ್ಟು ಸಿಟ್ಟುಗೊಳ್ಳುವುದು ಸರಿಯಲ್ಲವೇ?" ಎಂದು ಉತ್ತರವಿತ್ತನು. ಆಗ ಸರ್ವೇಶ್ವರ: "ನೀನು ಆ ಗಿಡಕ್ಕಾಗಿ ಶ್ರಮಿಸಲೂ ಇಲ್ಲ, ಅದನ್ನು ಬೆಳೆಸಲೂ ಇಲ್ಲ ಅದು ತಾನಾಗಿಯೇ ಒಂದು ರಾತ್ರಿಯಲ್ಲಿ ಬೆಳೆಯಿತು. ಒಂದೇ ರಾತ್ರಿಯಲ್ಲಿ ಬಾಡಿಹೋಯಿತು. ಅದಕ್ಕಾಗಿ ಇಷ್ಟೊಂದು ಚಿಂತೆಯೇ? ಹೀಗಿರುವಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ನಿರಪರಾಧಿಗಳೂ ಅಪಾರ ಪಶುಪ್ರಾಣಿಗಳೂ ಇರುವ ನಿನೆವೆ ಮಹಾನಗರದ ಬಗ್ಗೆ ನಾನು ಇನ್ನೆಷ್ಟು ಚಿಂತೆಮಾಡಬೇಕು?" ಎಂದರು. 

ಕೀರ್ತನೆ: 86:3-4, 5-6,  9--10 

ಶ್ಲೋಕ: ಪ್ರಭೂ, ನೀ ದಯಾಳು; ದೇವಾ, ನೀ ಕರುಣಾಮೂರ್ತಿ 

ಶುಭಸಂದೇಶ: ಲೂಕ  11:1-4 

ಒಮ್ಮೆ ಯೇಸುಸ್ವಾಮಿ ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡುತ್ತಾ ಇದ್ದರು. ಅವರ ಪ್ರಾರ್ಥನೆ ಮುಗಿದ ಮೇಲೆ ಶಿಷ್ಯರಲ್ಲಿ ಒಬ್ಬನು, "ಪ್ರಭುವೇ ಯೊವಾನ್ನನು ತನ್ನ ಶಿಷ್ಯರಿಗೆ  ಪ್ರಾರ್ಥನೆ ಮಾಡುವುದನ್ನು ಕಲಿಸಿದ ಹಾಗೆ ನಮಗೂ ಕಲಿಸಿಕೊಡಿ," ಎಂದನು. ಅದಕ್ಕೆ ಯೇಸು ಇಂತೆಂದರು: "ನೀವು ಹೀಗೆ ಪ್ರಾರ್ಥನೆಮಾಡಬೇಕು: "ತಂದೆಯೇ, ನಿಮ್ಮ ಪವಿತ್ರನಾಮ ಪೂಜಿತವಾಗಲಿ: ನಿಮ್ಮ ಸಾಮ್ರಾಜ್ಯ ಬರಲಿ. ನಮಗೆ ಅಗತ್ಯವಾದ ಆಹಾರವನ್ನು ಅನುದಿನವೂ ಕೊಡಿ. ನಮಗೆ ತಪ್ಪು ಮಾಡಿದ ಪ್ರತಿಯೊಬ್ಬನನ್ನು ನಾವು ಕ್ಷಮಿಸುವುದರಿಂದ, ನಮ್ಮ ಪಾಪಗಳನ್ನು ಕ್ಷಮಿಸಿರಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ."

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...