14.09.2019 - "ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು"

ಮೊದಲನೇ ವಾಚನ: ಸಂಖ್ಯಾಕಾಂಡ - 21:4-9


ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪು ಕಡಲಿನ ಮಾರ್ಗವಾಗಿ ಪ್ರಯಾಣ ಮಾಡಿದರು. ಈ ಮಾರ್ಗದ ಆಯಾಸದಿಂದವರಿಗೆ ಬೇಸರವಾಯಿತು. ಆಗ ಅವರು ದೇವರಿಗೂ ಮೋಶೆಗೂ ವಿರುದ್ಧ ಮಾತನಾಡತೊಡಗಿದರು: "ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಗಿದೆ,", ಎಂದು ಹೇಳತೊಡಗಿದರು. ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹು ಜನ ಸತ್ತುಹೋದರು. ಆಗ ಜನರು ಮೋಶೆಯ ಬಳಿಗೆ ಬಂದು, "ನಾವು ನಿಮಗೂ ಸರ್ವೇಶ್ವರನಿಗೂ ವಿರುದ್ಧ ಮಾತಾಡಿ ದೋಷಿಗಳಾದೆವು. ಈ ಸರ್ಪಗಳು ನಮ್ಮನ್ನು ಬಿಟ್ಟು ತೊಲಗುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿ," ಎಂದು ಬೇಡಿಕೊಂಡರು. ಮೋಶೆ ಜನರ ಪರವಾಗಿ ಪ್ರಾರ್ಥಿಸಿದನು. ಸರ್ವೇಶ್ವರ ಅವನಿಗೆ, ನೀನು ಕಂಚಿನಿಂದ ವಿಷಸರ್ಪದ ಆಕಾರವನ್ನು ಮಾಡಿಸಿ, ಧ್ವಜ ಸ್ತಂಭದ ಮೇಲೆ ಎತ್ತಿ ನಿಲ್ಲಿಸು. ಸರ್ಪಗಳಿಂದ ಗಾಯಗೊಂಡ ಪ್ರತಿಯೊಬ್ಬನು ಅದನ್ನು ನೋಡಿ ಬದುಕಿಕೊಳ್ಳುವನು," ಎಂದು ಆಜ್ಞಾಪಿಸಿದರು. ಅಂತೆಯೇ ಮೋಶೆ ಕಂಚಿನಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜ ಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಗಾಯಗೊಂಡವರಲ್ಲಿ ಯಾರು ಯಾರು ಆ ಕಂಚಿನ  ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.

ಕೀರ್ತನೆ: 78:1-2, 34-38

ಶ್ಲೋಕ: ಮರೆಯದಿರು ಪ್ರಭುವಿನ ಮಹತ್ಕಾರ್ಯಗಳನು

ಎರಡನೇ ವಾಚನ: ಫಿಲಿಪ್ಪಿಯರಿಗೆ 2:6-11

ಜೀವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ. ತನ್ನನ್ನೇ ಬರಿದು ಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ. ತನ್ನನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ, ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ. ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವ ಪರಮನು, ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು,  "ಕ್ರಿಸ್ತ ಯೇಸುವೇ ಪ್ರಭು", ಎಂದೆಲ್ಲರಿಗೆ ಅರಿಕೆ ಮಾಡುವರು ಪಿತ ದೇವನ ಮಹಿಮೆಯನ್ನು ಈ ಪರಿ ಹೊಗಳಿ ಸಾರುವರವರು.

ಶುಭಸಂದೇಶ: ಯೊವಾನ್ನ 3:13-17



ಯೇಸು ನಿಕೊದೇಮನಿಗೆ ಇಂತೆಂದರು: "ಸ್ವರ್ಗಲೋಕದಿಂದಲೇ ಇಳಿದುಬಂದ ನರಪುತ್ರನೇ ಹೊರತು ಬೇರೆ ಯಾರೂ ಸ್ವರ್ಗಕ್ಕೆ ಏರಿಹೋದವರಿಲ್ಲ. ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು. ಅಂತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವಂತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು. ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ. ದೇವವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿ ಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು.

13.09.19 - "ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದು ಹಾಕು"

ಮೊದಲನೇ ವಾಚನ: 1 ತಿಮೊಥೇಯನಿಗೆ 1:1-2, 12-14

ಕ್ರೈಸ್ತ ವಿಶ್ವಾಸದಲ್ಲಿ ಸತ್ ಪುತ್ರನಾದ ತಿಮೊಥೇಯನಿಗೆ - ಪೌಲನು ಬರೆಯುವ ಪತ್ರ. ನಮ್ಮ ಉದ್ಧಾರಕರಾದ ದೇವರ ಮತ್ತು ನಮ್ಮ ನಿರೀಕ್ಷೆಯಾಗಿರುವ ಕ್ರಿಸ್ತ ಯೇಸುವಿನ ಆಜ್ಞಾನುಸಾರ, ನಾನು ಕ್ರಿಸ್ತ ಯೇಸುವಿನ ಪ್ರೇಷಿತನಾಗಿದ್ದೇನೆ. ಪಿತನಾದ ದೇವರೂ ನಮ್ಮ ಪ್ರಭುವಾದ ಕ್ರಿಸ್ತ ಯೇಸುವೂ ನಿನಗೆ ಕೃಪೆಯನ್ನೂ ಕರುಣೆಯನ್ನೂ ಶಾಂತಿಯನ್ನೂ ಅನುಗ್ರಹಿಸಲಿ! ಶುಭ ಸಂದೇಶದ ಸೇವೆಯನ್ನು ಕೈಗೊಳ್ಳಲು ಯೋಗ್ಯನೆಂದು ಎಣಿಸಿ ನನಗೆ ಬೇಕಾದ ಶಕ್ತಿಸಾಮರ್ಥ್ಯವನ್ನು ದಯಪಾಲಿಸಿದ ನಮ್ಮ ಪ್ರಭು ಯೇಸುಕ್ರಿಸ್ತರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಹಿಂದೆ ನಾನು ಅವರನು ದೂಷಿಸಿದೆ, ಹಿಂಸಿಸಿದೆ, ಅವಮಾನಪಡಿಸಿದೆ. ಆದರೆ ದೇವರು ದಯಾಮಯಿ; ಆಗ ನಾನು ತಿಳಿಯದೆ ಅವಿಶ್ವಾಸಿಯಾಗಿ ಹಾಗೆ ಮಾಡಿದ್ದರಿಂದ ದೇವರು ನನಗೆ ಕರುಣೆ ತೋರಿದರು. ಕ್ರಿಸ್ತ ಯೇಸುವಿನ ಅನ್ಯೋನ್ಯತೆಯಿಂದ ಲಭಿಸುವ ಪ್ರೀತಿ ವಿಶ್ವಾಸದಲ್ಲಿ ಭಾಗಿಯಾಗುವಂತೆ ಅವರು ನನ್ನ ಮೇಲೆ ತಮ್ಮ ಕೃಪಾವರಗಳನ್ನು ಹೇರಳವಾಗಿ ಸುರಿಸಿದರು.

ಕೀರ್ತನೆ: 16:1-2, 5, 6-7, 8-9

ಶ್ಲೋಕ: ನನ್ನ ಸ್ವತ್ತೂ ಸ್ವಾಸ್ಥ್ಯವೂ ನೀನೇ ಪ್ರಭು

ಶುಭಸಂದೇಶ: ಲೂಕ 6:39-42


ಯೇಸುಸ್ವಾಮಿ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: "ಕುರುಡನು ಕುರುಡನಿಗೆ ದಾರಿ ತೋರಿಸಲಾದೀತೆ? ಇಬ್ಬರೂ ಹಳ್ಳದಲ್ಲಿ ಬೀಳುವುದಿಲ್ಲವೇ? ಗುರುವಿಗಿಂತ ಶಿಷ್ಯನು ಶ್ರೇಷ್ಟನಲ್ಲ; ಆದರೂ ಪೂರ್ಣ ಶಿಕ್ಷಣ ಪಡೆದ ಪ್ರತಿಯೊಬ್ಬನೂ ಗುರುವಿನಂತೆ ಆಗುವನು. ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ನೋಡದೆ, ಸೋದರನ ಕಣ್ಣಿನಲ್ಲಿರುವ ಅಣುವನ್ನು ಗಮನಿಸುವುದೇಕೆ? ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನೇ ಕಾಣಲಾರದ ನೀನು, "ತಮ್ಮಾ ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದುಬಿಡುತ್ತೇನೆ," ಎಂದು ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದು ಹಾಕು, ಆನಂತರ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆದುಹಾಕಲು ನಿನಗೆ ಕಣ್ಣು ನಿಚ್ಚಳವಾಗಿ ಕಾಣಿಸುವುದು,"

12.09.19 - "ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದುಕೊಡುವರು,"

ಮೊದಲನೇ ವಾಚನ: ಕೊಲೊಸ್ಸೆಯರಿಗೆ 3:12-17

ಸಹೋದರರೇ, ನೀವು ದೇವರಿಂದ ಆಯ್ಕೆಯಾದವರು. ದೇವರಿಗೆ ಪ್ರಿಯವಾದವರು, ದೇವರ ಸ್ವಂತ ಜನರು. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳೇ ನಿಮ್ಮ ಆಭರಣವಾಗಿರಲಿ. ಒಬ್ಬರನೊಬ್ಬರು ಸೈರಿಸಿಕೊಳ್ಳಿ. ಒಬ್ಬನ ಮೇಲೆ ತಪ್ಪು ಹೊರಿಸಲು ಕಾರಣವಿದ್ದರೂ ಕ್ಷಮಿಸಿಬಿಡಿ. ಪ್ರಭು ಯೇಸು ನಿಮ್ಮನ್ನು ಕ್ಷಮಿಸಿದಂತೆ ನೀವೂ ಇತರರನ್ನು ಕ್ಷಮಿಸಿರಿ. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮಲ್ಲಿ ಪ್ರೀತಿಯಿರಲಿ. ಪ್ರೀತಿಯೇ ಸಮಸ್ತವನ್ನು  ಸಂಪೂರ್ಣಗೊಳಿಸುವ ಬಂಧನ. ನಿಮ್ಮ ಹೃನ್ಮನಗಳು ಕ್ರಿಸ್ತ ಯೇಸುವಿನ ಶಾಂತಿ ಸಮಾಧಾನದಿಂದ ತುಂಬಿರಲಿ. ನೀವು ಒಂದೇ ಶರೀರವಾಗಿ ಬಾಳಲು ಕರೆಯಲ್ಪಟ್ಟಿದ್ದೀರಿ;  ಕೃತಜ್ಞತೆಯುಳ್ಳವರಾಗಿ ಜೀವಿಸಿರಿ. ಕ್ರಿಸ್ತ ಯೇಸುವಿನ ವಾಕ್ಯ ನಿಮ್ಮಲ್ಲಿ ನೆಲೆಸಿ ಸಮೃದ್ಧಿಯಾಗಿ ಬೆಳೆಯಲಿ. ಜ್ಞಾನಸಂಪನ್ನರಾಗಿ ಒಬ್ಬರಿಗೊಬ್ಬರು ಉಪದೇಶಮಾಡಿರಿ ಹಾಗೂ ಬುದ್ಧಿ ಹೇಳಿಕೊಳ್ಳಿರಿ. ಕೃತಜ್ಞತೆಯುಳ್ಳವರಾಗಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಭಕ್ರಿಗೀತೆಗಳಿಂದಲೂ ಹೃದಯಾಂತರಾಳದಿಂದ ದೇವರಿಗೆ ಹಾಡಿರಿ. ನುಡಿಯಲ್ಲಾಗಲೀ ನಡೆಯಲ್ಲಾಗಲೀ ನೀವು ಏನು ಮಾಡಿದರೂ ಯೇಸುಸ್ವಾಮಿಯ ಹೆಸರಿನಲ್ಲಿಯೇ ಮಾಡಿರಿ. ಅವರ ಮುಖಾಂತರವೇ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.

ಕೀರ್ತನೆ: 150:1-2, 3-4, 5-6

ಶ್ಲೋಕ: ಪ್ರಭುವನು ಸ್ತುತಿಸಲಿ ಉಸಿರಿರುವುದೆಲ್ಲವೂ

ಶುಭಸಂದೇಶ: ಲೂಕ 6:27-38 



ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನನ್ನನ್ನು ಆಲಿಸುತ್ತಿರುವವರೇ, ನನ್ನ ಮಾತನ್ನು ಕೇಳಿರಿ: "ನಿಮ್ಮ ಶತ್ರುಗಳನ್ನು ಪ್ರೀತಿಸಿರಿ, ನಿಮ್ಮನ್ನು ದ್ವೇಷಿಸುವವರನ್ನು ಸತ್ಕರಿಸಿ. ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ, ನಿಮ್ಮನ್ನು ನಿಂದಿಸುವವರಿಗಾಗಿ ಪ್ರಾರ್ಥಿಸಿರಿ. ನಿನ್ನ ಒಂದು ಕೆನ್ನೆಗೆ ಹೊಡೆಯುವವನಿಗೆ ಇನ್ನೊಂದು ಕೆನ್ನೆಯನ್ನು ಒಡ್ಡು, ನಿನ್ನ ಮೇಲಂಗಿಯನ್ನು ಕಿತ್ತುಕೊಳ್ಳುವವನಿಗೆ ಒಳ ಅಂಗಿಯನ್ನೂ ತೆಗೆದುಕೊಳ್ಳಲು ಬಿಡು. ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡು. ನಿನ್ನ ಸೊತ್ತನ್ನು ಕಸಿದುಕೊಳ್ಳುವವನಿಂದ ತಿರುಗಿ ಕೇಳದಿರು. ಅಲ್ಲದೆ, ಇತರರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ. ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ಅದೇನು ಪುಣ್ಯ? ಪಾಪಿಷ್ಟರು ಸಹ ತಮ್ಮನ್ನು ಪ್ರೀತಿಸುವವರನ್ನು ಪ್ರೀತಿಸುತ್ತಾರಲ್ಲವೇ? ಉಪಕಾರ ಮಾಡಿದವರಿಗೇ ಉಪಕಾರ ಮಾಡಿದರೆ ಅದೇನು ಪುಣ್ಯ? ಪಾಪಿಷ್ಟರು ಸಹ ಹಾಗೆಯೇ ಮಾಡುತ್ತಾರಲ್ಲವೇ? ಸಾಲತೀರಿಸುವಂಥ ನಂಬಿಗಸ್ಥರಿಗೇ ಸಾಲಕೊಟ್ಟರೆ ಅದೇನು ಪುಣ್ಯ? ಕೊಟ್ಟಷ್ಟೂ ಬರುತ್ತದೆಂದು ಪಾಪಿಷ್ಟರು ಸಹ ಸಾಲ ಕೊಡುತ್ತಾರಲ್ಲವೆ? ಆದುದರಿಂದ ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ಅವರಿಗೆ ಒಳಿತನ್ನೇ ಮಾಡಿರಿ. ಪ್ರತಿಯಾಗಿ ಪಡೆಯುವ ಆಶೆಯಿಡದೆ ಸಾಲಕೊಡಿ. ಆಗ ನಿಮಗೆ ಮಹತ್ತಾದ ಸಂಭಾವನೆ ದೊರಕುವುದು. ನೀವು ಮಹೋನ್ನತ ದೇವರ ಮಕ್ಕಳಾಗುವಿರಿ. ದೇವರು ದುರ್ಜನರಿಗೂ ಒಳ್ಳೆಯವರು, ಕೃತಘ್ನರಿಗೂ ಒಳ್ಳೆಯವರು. ನಿಮ್ಮ ತಂದೆಯಾದ ದೇವರಂತೆ ನೀವೂ ದಯಾವಂತರಾಗಿರಿ. ನೀವು ಇತರರ ಬಗ್ಗೆ ತೀರ್ಪು ಕೊಡಬೇಡಿ, ಆಗ ದೇವರೂ ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ; ಪರರನ್ನು ದಂಡನೆಗೆ ಗುರಿಮಾಡಬೇಡಿ, ದೇವರು ನಿಮ್ಮನ್ನೂ ದಂಡನೆಗೆ ಗುರಿಮಾಡುವುದಿಲ್ಲ. ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು; ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು; ಅಳತೆಯಲ್ಲಿ ತುಂಬಿ, ಕುಲುಕಿ, ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದುಕೊಡುವರು," ಎಂದರು.

11.09.2019 - "ಜನರೆಲ್ಲರಿಂದ ಹೊಗಳಿಸಿಕೊಳ್ಳುವಾಗ ನಿಮಗೆ ಧಿಕ್ಕಾರ! "

ಮೊದಲನೇ ವಾಚನ: ಕೊಲೊಸ್ಸೆಯರಿಗೆ 3:1-11 

ನೀವು ಯೇಸುಕ್ರಿಸ್ತರೊಂದಿಗೆ ಪುನರುತ್ದಾನ ಹೊಂದಿರುವುದಾದರೆ ಸ್ವರ್ಗೀಯ ವಿಷಯಗಳ ಕಡೆಗೆ ಗಮನ ಕೊಡಿ. ಕ್ರಿಸ್ತ ಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಆಸೀನರಾಗಿದ್ದಾರೆ. ನೀವು ಕ್ರಿಸ್ತ ಯೇಸುವಿನೊದಿಗೆ ಮರಣ ಹೊಂದಿರುವುದರಿಂದ ಅವರೊಂದಿಗೆ ನಿಮ್ಮ ಜೀವ ದೇವರಲ್ಲಿ ಮರೆಯಾಗಿದೆ. ನಿಮ್ಮ ಮನಸ್ಸು ಪ್ರಾಪಂಚಿಕ ವಿಷಯಗಳ ಮೇಲೆ ಅಲ್ಲ ಸ್ವರ್ಗೀಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿರಲಿ. ಕ್ರಿಸ್ತ ಯೇಸುವೇ ನಿಮ್ಮ ನೈಜ ಜೀವವಾಗಿದ್ದಾರೆ. ಅವರು ಪುನರಾಗಮಿಸುವಾಗ ನೀವು ಸಹ ಅವರ ಮಹಿಮೆಯಲ್ಲಿ ಪಾಲುಗಾರರಾಗಿ ಅವರೊಂದಿಗೆ ಪ್ರತ್ಯಕ್ಷರಾಗುವಿರಿ. ನಿಮ್ಮಲ್ಲಿರುವ ಪ್ರಾಪಂಚಿಕ ಆಶೆ ಆಕಾಂಕ್ಷೆಗಳನ್ನು ತ್ಯಜಿಸಿರಿ, ಹಾದರ, ಅನೈತಿಕತೆ, ಕಾಮಾಭಿಲಾಷೆ, ದುರಾಲೋಚನೆ, ವಿಗ್ರಹಾರಾಧನೆಗೆ ಸಮವಾಗಿರುವ ಲೋಭ - ಇವುಗಳನ್ನು ದಮನಮಾಡಿರಿ. ಇಂಥವುಗಳಿಗೆ ಈಡಾಗುವ ದುಷ್ಕರ್ಮಿಗಳು ದೇವರ ಕೋಪಾಗ್ನಿಗೆ ಗುರಿಯಾಗುತ್ತಾರೆ. ಒಮ್ಮೆ ಇವೆಲ್ಲ ನಿಮ್ಮ ಜೀವನದ ರೀತಿ ನೀತಿಗಳಾಗಿದ್ದು ಇವುಗಳಲ್ಲೇ ಮಗ್ನರಾಗಿದ್ದೀರಿ. ಈಗಲಾದರೋ ಕೋಪ, ರೋಷ, ಮತ್ಸರ ಇವುಗಳನ್ನು ತ್ಯಜಿಸಿರಿ; ದೂಷಣೆ ಮತ್ತು ಹೊಲಸು ಮಾತುಗಳು ನಿಮ್ಮ ಬಾಯಿಂದ ಬರಕೂಡದು. ಒಬ್ಬರಿಗೊಬ್ಬರು ಸುಳ್ಳು ಹೇಳಬೇಡಿ. ಏಕೆಂದರೆ, ನಿಮ್ಮಲ್ಲಿದ್ದ ಹಳೆಯ ಸ್ವಭಾವವನ್ನೂ ಅದಕ್ಕೆ ಸಂಬಂಧಿಸಿದ ದುರಭ್ಯಾಸಗಳನ್ನೂ ತೊರೆದುಬಿಟ್ಟಿದ್ದೀರಿ. ಮಾತ್ರವಲ್ಲ, ನೂತನ ಸ್ವಭಾವವನ್ನು ಧರಿಸಿಕೊಂಡಿದ್ದೀರಿ. ನೀವು ಸೃಷ್ಟಿಕರ್ತನನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಸ್ವಭಾವವನ್ನು ಅನುದಿನವೂ ನವೀಕರಿಸಲಾಗುತ್ತಿದೆ. ಇಂಥ ಹೊಸ ಜೀವನದಲ್ಲಿ ಯೆಹೂದ್ಯ - ಗ್ರೀಕ, ಸುನ್ನತಿ ಹೊಂದಿದವ - ಸುನ್ನತಿ ಇಲ್ಲದವ, ನಾಗರಿಕ - ಅನಾಗರಿಕ, ಯಜಮಾನ - ಗುಲಾಮ ಎಂಬ ಭಿನ್ನಭೇದಗಳಿಲ್ಲ. ಕ್ರಿಸ್ತ ಯೇಸುವೇ ಸಮಸ್ತದಲ್ಲಿ ಸಮಸ್ತವೂ ಆಗಿದ್ದಾರೆ.

ಕೀರ್ತನೆ: 145:2-3, 10-11, 12-13

ಶ್ಲೋಕ: ಪ್ರಭುವಿನ ಕರುಣೆ ಎಲ್ಲರ ಮೇಲೆ

ಶುಭಸಂದೇಶ: ಲೂಕ 6:20-26


ಯೇಸುಸ್ವಾಮಿ ತಮ್ಮ ಶಿಷ್ಯರ ಕಡೆಗೆ ದೃಷ್ಟಿಸಿ ನೋಡಿ ಹೀಗೆಂದು ಬೋಧಿಸಿದರು:  "ದೀನದಲಿತರೇ,,  ನೀವು ಭಾಗ್ಯವಂತರು! ದೇವರ ಸಾಮ್ರಾಜ್ಯ ನಿಮ್ಮದು. ಈಗ ಹಸಿದಿರುವವರೇ, ನೀವು ಭಾಗ್ಯವಂತರು! ನಿಮಗೆ ಸಂತೃಪ್ತಿಯಾಗುವುದು. ಈಗ ಅತ್ತು ಗೋಳಾಡುವವರೇ, ನೀವು ಭಾಗ್ಯವಂತರು! ನೀವು ನಕ್ಕು ನಲಿದಾಡುವಿರಿ! ನರಪುತ್ರನ ಶಿಷ್ಯರು ನೀವಾದುದರಿಂದ ನಿಮ್ಮನ್ನು ದ್ವೇಷಿಸಿ, ಬಹಿಷ್ಕರಿಸಿ, ಧಿಕ್ಕರಿಸಿ, ನಿಮ್ಮ ಹೆಸರೆತ್ತುವುದು ಕೂಡ ಕೇಡೆಂದು ತಿರಸ್ಕರಿಸುವಾಗ ನೀವು ಭಾಗ್ಯವಂತರು! ಈ ಜನರ ಪೂರ್ವಜರು ಪ್ರವಾದಿಗಳನ್ನು ಹೀಗೆಯೇ ತೆಗಳಿದರು. ಇದೆಲ್ಲಾ ಸಂಭವಿಸುವಾಗ ಹಿಗ್ಗಿ ನಲಿದಾಡಿರಿ. ಏಕೆಂದರೆ, ಸ್ವರ್ಗದಲ್ಲಿ ನಿಮಗೆ ಲಭಿಸುವ ಪ್ರತಿಫಲವು ಮಹತ್ತರವಾದುದು. ಆದರೆ ಧನಿಕರೇ, ನಿಮಗೆ ಧಿಕ್ಕಾರ! ನೀವು ಸುಖಜೀವನವನ್ನು ಅನುಭವಿಸಿ ಆಗಿದೆ. ಈಗ ತಿಂದು ತೃಪ್ತಿಯಾಗಿರುವವರೇ, ನಿಮಗೆ ಧಿಕ್ಕಾರ! ನೀವು ದುಃಖಿಸಿ ಗೋಳಾಡುವಿರಿ. ಜನರೆಲ್ಲರಿಂದ ಹೊಗಳಿಸಿಕೊಳ್ಳುವಾಗ ನಿಮಗೆ ಧಿಕ್ಕಾರ! ಕಪಟ ಪ್ರವಾದಿಗಳೂ ಈ ಜನರ ಪೂರ್ವಜರಿಂದ ಹೀಗೆಯೇ ಹೊಗಳಿಸಿಕೊಂಡಿದ್ದರು.

10.09.2019 - ಅಲ್ಲಿದ್ದ ಜನರೆಲ್ಲರು ಯೇಸುವನ್ನು ಮುಟ್ಟಲು ತವಕಪಡುತ್ತಿದ್ದರು.

ಮೊದಲನೇ ವಾಚನ: ಕೊಲೊಸ್ಸೆಯರಿಗೆ 2:6-15

ನೀವು ಯೇಸುಕ್ರಿಸ್ತರನ್ನು ಪ್ರಭುವಾಗಿ ಸ್ವೀಕರಿಸಿರುವುದರಿಂದ, ಅವರೊಡನೆ  ಐಕ್ಯೆತೆಯಿಂದ ಬಾಳಿರಿ. ಅವರಲ್ಲಿ ಸ್ಥಿರವಾಗಿರಿ. ಅವರನ್ನೇ ಅವಲಂಬಿಸಿ ನಿಮ್ಮ ಬಾಳೆಂಬ ಸೌಧವನ್ನು ನಿರ್ಮಿಸಿರಿ. ನೀವು ಕಲಿತುಕೊಂಡಿರುವಂತೆ ನಿಮ್ಮ ವಿಶ್ವಾಸ ಅವರಲ್ಲಿ ದೃಢವಾಗಿರಲಿ. ಕೃತಜ್ಞತೆಯು ನಿಮ್ಮಲ್ಲಿ ಉಕ್ಕೇರಲಿ, ಪ್ರಪಂಚದ ಪ್ರಬಲ ಶಕ್ತಿಗಳಿಂದಲೂ ಮಾನವ ವಿವೇಚನೆಯ ಶುಷ್ಕತರ್ಕ ಸಿದ್ಧಾಂತಗಳಿಂದಲೂ ಯಾರೂ ನಿಮ್ಮನ್ನು ಮೋಸಗೊಳಿಸಿ ವಶಪಡಿಸಿಕೊಳ್ಳದಂತೆ ಎಚ್ಚರಿಕೆಯಿಂದಿರಿ. ಇವುಗಳು ಪ್ರಾಪಂಚಿಕ ಪಾರಂಪರ್ಯಕ್ಕೆ ಮತ್ತು ವಿಶ್ವದ ಮೂಲಭೂತ ಶಕ್ತಿಗಳಿಗೆ ಸಂಬಂಧಿಸಿದವುಗಳೇ ಹೊರತು ಯೇಸುಕ್ರಿಸ್ತರಿಗಲ್ಲ. ದೈವತ್ವದ ಸಂಪೂರ್ಣತೆ ಸಶರೀರವಾಗಿ ಯೇಸುಕ್ರಿಸ್ತರಲ್ಲಿ ನೆಲೆಗೊಂಡಿದೆ. ಸಕಲ ಅಧಿಪತ್ಯಕ್ಕೂ ಅಧಿಕಾರಕ್ಕೂ ಶಿರಸ್ಸು ಅವರೇ. ಅವರಲ್ಲಿ ಮಾತ್ರ ನೀವು ಪರಿಪೂರ್ಣತೆಯನ್ನು ಹೊಂದಲು ಸಾಧ್ಯ. ಕ್ರಿಸ್ತಯೇಸುವಿನಲ್ಲಿಯೇ ನೀವು ಸುನ್ನತಿಯನ್ನು ಪಡೆದಿದ್ದೀರಿ. ಇದು ಶಾರೀರಕ ಸುನ್ನತಿಯಲ್ಲ, ಪಾಪಮಯ ಸ್ವಭಾವವನ್ನು ಕಿತ್ತೊಗೆಯುವ ಸುನ್ನತಿ. ಸ್ವಯಂ ಕ್ರಿಸ್ತಯೇಸುವೇ ಯೋಜಿಸಿದ ‌ಸುನ್ನತಿ. ದೀಕ್ಷಾಸ್ನಾನದಲ್ಲಿ ನೀವು ಅವರೊಂದಿಗೆ ಸಮಾಧಿಯಾದಿರಿ. ಕ್ರಿಸ್ತ ಯೇಸುವನ್ನು ಮೃತರ ಮಧ್ಯದಿಂದ ದೈವರು ತಾವೇ ಎಬ್ಬಿಸಿದರು. ಈ ದೇವರ ಶಕ್ತಿಯಲ್ಲಿ ನೀವು ವಿಶ್ವಾಸವಿಟ್ಟಿರುವುದರಿಂದ ದೀಕ್ಷಾಸ್ನಾನದಲ್ಲಿಯೇ ನಿಮ್ಮನ್ನು ಕ್ರಿಸ್ತಯೇಸುವಿನೊಂದಿಗೆ ಎಬ್ಬಿಸಲಾಯಿತು. ನಿಮ್ಮ ಪಾಪಮಯ ಜೀವನದಿಂದಲೂ ಸುನ್ನತಿ ರಹಿತವಾದ ಸ್ವಭಾವದಿಂದಲೂ ಒಮ್ಮೆ ನೀವು ಮೃತರಾಗಿದ್ದಿರಿ. ಆದರೆ ಈಗ ದೇವರು ಕ್ರಿಸ್ತ ಯೇಸುವಿನೊಂದಿಗೆ ನಿಮ್ಮನ್ನು ಜೀವಂತಗೊಳಿಸಿದ್ದಾರೆ. ಅವರು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾರೆ. ನಮ್ಮನ್ನು ಬಂದಿಸಿದ್ದ ಧರ್ಮಶಾಸ್ತ್ರದ ವಿಧಿ ನಿಯಮಗಳನ್ನು ಕ್ರಿಸ್ತಯೇಸು ತೊಡೆದುಹಾಕಿದ್ದಲ್ಲದೆ ಅವುಗಳನ್ನು ಶಿಲುಬೆಗೆ ಜಡಿದು ನಮ್ಮನ್ನು ಬಿಡುಗಡೆ ಮಾಡಿದ್ದಾರೆ. ಬಲಾಢ್ಯ ಒಡೆಯರನ್ನೂ ಅಧಿಕಾರಿಗಳನ್ನೂ ನಿರಾಯುಧರನ್ನಾಗಿ ಮಾಡಿ, ತಾವು ಗಳಿಸಿದ ಜಯದ ನಿಮಿತ್ತ ಜನರೆಲ್ಲರ ಮುಂದೆ ಶಿಲುಬೆಯ ವಿಜಯೋತ್ಸವದಲ್ಲಿ ಅವರನ್ನು ಸೆರೆಯಾಳುಗಳನ್ನಾಗಿ ಪ್ರದರ್ಶಿಸಿದ್ದಾರೆ.

ಕೀರ್ತನೆ: 145:1-2, 8-9, 10-11

ಶ್ಲೋಕ: ಪ್ರಭುವಿನ ಕರುಣೆ ಎಲ್ಲರ ಮೇಲೆ

ಶುಭಸಂದೇಶ: ಲೂಕ 6:12-19


ಒಮ್ಮೆ ಯೇಸುಸ್ವಾಮಿ ಪ್ರಾರ್ಥನೆ ಮಾಡಲು ಬೆಟ್ಟವನ್ನೇರಿದರು. ರಾತ್ರಿಯೆಲ್ಲಾ ದೇವರ ಪ್ರಾರ್ಥನೆಯಲ್ಲಿ ಕಳೆದರು. ಬೆಳಗಾದಾಗ ತಮ್ಮ ಶಿಷ್ಯರನ್ನು ಕರೆದು, ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡರು, ಅವರಿಗೆ "ಪ್ರೇಷಿತರು" ಎಂದು ಹೆಸರಿಟ್ಟರು. ಹೀಗೆ ಆಯ್ಕೆ ಆದವರು; ಪೇತ್ರನೆಂದು ಹೆಸರು ಪಡೆದ ಸಿಮೋನ ಮತ್ತು ಅವನ ಸಹೋದರ ಆಂದ್ರೆಯ, ಯಕೋಬ ಮತ್ತು ಯೊವಾನ್ನ, ಫಿಲಿಪ್ಪ ಮತ್ತು ಬಾರ್ತೋಲೊಮಾಯ, ಮತ್ತಾಯ ಮತ್ತು ತೋಮ, ಆಲ್ಫಾಯನ ಮಗ ಯಕೋಬ ಮತ್ತು ದೇಶಾಭಿಮಾನಿ ಎನಿಸಿಕೊಂಡಿದ್ದ ಸಿಮೋನ, ಯಕೋಬನ ಮಗ ಯೂದ ಮತ್ತು ಗುರುದ್ರೋಹಿಯಾಗಲಿದ್ದ ಯೂದ ಇಸ್ಕರಿಯೋತ. ಆನಂತರ ಯೇಸುಸ್ವಾಮಿ ಅವರೊಂದಿಗೆ ಬೆಟ್ಟದಿಂದ ಇಳಿದು, ಸಮತಟ್ಟಾದ ಸ್ಥಳಕ್ಕೆ ಬಂದರು. ಶಿಷ್ಯರ ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮ್ ಪಟ್ಟಣದಿಂದಲೂ ಸಮುದ್ರ ತೀರದ ಟೈರ್ ಹಾಗೂ ಸಿದೋನ್ ಪಟ್ಟಣಗಳಿಂದಲೂ ಜನಸಮೂಹ ಅಲ್ಲಿಗೆ ಬಂದಿತ್ತು. ಯೇಸುವಿನ ಬೋಧನೆಯನ್ನು ಕೇಳುವುದಕ್ಕೂ ತಮ್ಮ ರೋಗರುಜಿನಗಳಿಂದ ವಿಮುಕ್ತರಾಗುವುದಕ್ಕೂ ಜನರು ಅಲ್ಲಿಗೆ ಬಂದು ಸೇರಿದ್ದರು. ದೆವ್ವಪೀಡಿತರು ಕೂಡ ಬಂದು ಸ್ವಸ್ಥರಾಗುತ್ತಿದ್ದರು. ಯೇಸುವಿನಿಂದ ದಿವ್ಯಶಕ್ತಿ ಹರಿದು ಎಲ್ಲರನ್ನೂ ಗುಣಪಡಿಸುತ್ತಿತ್ತು. ಆದುದರಿಂದ ಅಲ್ಲಿದ್ದ ಜನರೆಲ್ಲರು ಯೇಸುವನ್ನು ಮುಟ್ಟಲು ತವಕಪಡುತ್ತಿದ್ದರು.

09.09.2019 - "ನಿನ್ನ ಕೈಯನ್ನು ಚಾಚು"

ಮೊದಲನೇ ವಾಚನ: ಕೊಲೊಸ್ಸೆಯರಿಗೆ: 1:24-2:3

ಸಹೋದರರೇ, ಪೌಲನೆಂಬ ನಾನು ಈ ಸುವಾರ್ತೆಗೆ ಸೇವಕನಾದೆನು. ಈಗ ನಿಮಗೋಸ್ಕರ ಸಂಕಟಪಡುವುದರಲ್ಲಿ ನನಗೆ ಸಂತೋಷವಿದೆ. ಕ್ರಿಸ್ತ ಯೇಸು ತಮ್ಮ ಶರೀರವಾದ ಧರ್ಮಸಭೆಗೋಸ್ಕರ ಅನುಭವಿಸಬೇಕಾದ ಯಾತನೆಗಳಲ್ಲಿ ಉಳಿದದ್ದನ್ನು ನಾನು ನನ್ನ ದೇಹದಲ್ಲಿ ಅನುಭವಿಸಿ ಪೂರ್ಣಗೊಳಿಸುತ್ತಿದ್ದೇನೆ. ದೇವರು ನನ್ನನ್ನು ಧರ್ಮಸಭೆಯ ದಾಸನನ್ನಾಗಿ ನೇಮಿಸಿದ್ದಾರೆ. ನಿಮ್ಮ ಹಿತಕ್ಕಾಗಿ ಒಂದು ಮಹತ್ವದ ಕಾರ್ಯವನ್ನು ನನಗೆ ವಹಿಸಿರುತ್ತಾರೆ. ಯುಗಯುಗಾಂತರಗಳಿಂದಲೂ ತಲತಲಾಂತರಗಳಿಂದಲೂ ನಿಗೂಢವಾಗಿದ್ದ ರಹಸ್ಯವನ್ನು, ಅಂದರೆ ತಮ್ಮ ವಾಕ್ಯವನು, ಈಗ ತಮ್ಮ ಜನರಿಗೆ ದೇವರು ಪ್ರಕಟಿಸಿದ್ದಾರೆ. ಈ ರಹಸ್ಯ ಎಷ್ಟು ಶ್ರೀಮಂತವಾದುದು, ಎಷ್ಟು ಮಹಿಮಾನ್ವಿತವಾದುದು ಎಂಬುದನ್ನು ಎಲ್ಲಾ ಜನಾಂಗಗಳಿಗೂ ತಿಳಿಸಲು ದೇವರು ಇಚ್ಛಿಸಿದರು. ಕ್ರಿಸ್ತ ಯೇಸು ನಿಮ್ಮಲ್ಲಿದ್ದು ಮುಂದಿನ ಮಹಿಮೆಯ ನಿರೀಕ್ಷೆಗೆ ಆಧಾರವಾಗಿದ್ದಾರೆ ಎಂಬುದೇ ಈ ರಹಸ್ಯ. ನಾವು ಸಾರುತ್ತಲಿರುವುದೂ  ಯೇಸುಕ್ರಿಸ್ತರನ್ನೇ. ಎಲ್ಲರಿಗೂ ಬುದ್ಧಿ ಹೇಳುತ್ತಾ ಎಲ್ಲರಿಗೂ ಪೂರ್ಣಜ್ಞಾನವನ್ನು ಉಪದೇಶಿಸುತ್ತಾ ದೇವರ ಮುಂದೆ ಎಲ್ಲರನ್ನು ಕ್ರಿಸ್ತ ಯೇಸುವಿನಲ್ಲಿ ಪರಿಣತರನ್ನಾಗಿ ಊರ್ಜಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ನನ್ನನ್ನು ಚೇತನಗೊಳಿಸುತ್ತಿರುವ ಯೇಸುಕ್ರಿಸ್ತರ ಶಕ್ತಿಯಿಂದ ಈ ಗುರಿಯನ್ನು ಸಾಧಿಸಲು ಶ್ರಮವಹಿಸಿ ಹೋರಾಡುತ್ತಿದ್ದೇನೆ. ನಿಮಗಾಗಿಯೂ ಲವೊದಿಕೀಯರಿಗಾಗಿಯೂ ಹಾಗೂ ನನ್ನ ನೇರ ಪರಿಚಯ ಇಲ್ಲದವರಿಗಾಗಿಯೂ ನಾನು ಎಷ್ಟು ಶ್ರಮಿಸುತ್ತಿದ್ದೇನೆಂಬುದನ್ನು ತಿಳಿಯಬಯಸುತ್ತೇನೆ. ಇದರಿಂದ ಅವರು ಅಂತರಂಗದಲ್ಲಿ ಉತ್ತೇಜನಗೊಂಡು ಪ್ರೀತಿಯಲ್ಲಿ ಒಂದಾಗಬೇಕು; ನೈಜ ಅರಿವಿನಿಂದ ಅವರಿಗೆ ಪೂರ್ಣಜ್ಞಾನ ಲಭಿಸಬೇಕು ಎಂಬುದೇ ನನ್ನ ಆಶಯ. ಆಗ ಅವರು ದೇವರ ರಹಸ್ಯವನ್ನು, ಅಂದರೆ ಕ್ರಿಸ್ತ ಯೇಸುವನ್ನು ಅರಿತುಕೊಳ್ಳಲು ಸಾಧ್ಯ. ಕ್ರಿಸ್ತ ಯೇಸುವಿನಲ್ಲಿಯೇ ಜ್ಞಾನ, ವಿವೇಕ ಎಂಬ ಸಿರಿಸಂಪತ್ತು ಅಡಗಿದೆ.

ಕೀರ್ತನೆ: 62:6-7,9

ಶ್ಲೋಕ: ಭದ್ರವಾದ ಬಂಡೆ, ನನಗಾಶ್ರಯ ದೇವನೇ

ಶುಭಸಂದೇಶ: ಲೂಕ 6:6-11


ಒಂದು ಸಬ್ಬತ್ ದಿನ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಹೋಗಿ ಉಪದೇಶ ಮಾಡುತ್ತಿದ್ದರು. ಅಲ್ಲಿ ಬಲಗೈ ಬತ್ತಿಹೋಗಿದ್ದ ಒಬ್ಬಾತ ಇದ್ದನು. ಅವನನ್ನು  ಸಬ್ಬತ್ ದಿನದಲ್ಲಿ ಸ್ವಸ್ಥಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪು ಹೊರಿಸಬಹುದೆಂಬ ಉದ್ದೇಶದಿಂದ ಧರ್ಮಶಾಸ್ತ್ರಿಗಳು ಮತ್ತು ಫರಿಸಾಯರು ಹೊಂಚುಹಾಕಿ ನೋಡುತ್ತಿದ್ದರು. ಯೇಸು ಅವರ ಆಲೋಚನೆಗಳನ್ನರಿತು ಬತ್ತಿದ ಕೈಯುಳ್ಳವನಿಗೆ, "ಬಂದು ಇಲ್ಲಿ ನಿಲ್ಲು," ಎಂದರು. ಅವನು ಎದ್ದು ಬಂದು ನಿಂತನು. ಆಗ ಯೇಸು ಅವರಿಗೆ, "ನಾನು ನಿಮಗೊಂದು ಪ್ರಶ್ನೆ ಹಾಕುತ್ತೇನೆ: ಸಬ್ಬತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ?" ಎಂದರು. ಆನಂತರ ಸುತ್ತಲೂ ಇದ್ದವರೆಲ್ಲರನ್ನು ದಿಟ್ಟಿಸಿ ನೋಡಿ ಬತ್ತಿದ ಕೈಯುಳ್ಳವನ ಕಡೆ ತಿರುಗಿ, "ನಿನ್ನ ಕೈಯನ್ನು ಚಾಚು," ಎಂದರು. ಅವನು ಚಾಚಿದ. ಕೈ ಸ್ವಸ್ಥವಾಯಿತು. ಅವರಾದರೋ ಕ್ರೋಧಭರಿತರಾಗಿ, ಯೇಸುವಿಗೆ ಏನಾದರೂ ಮಾಡಬೇಕೆಂದು ತಮ್ಮತಮ್ಮೊಳಗೆ ಸಂಚುಮಾಡಿದರು.

08.09.2019 - "ಯಾವನು ತನಗಿರುವುದನ್ನೆಲ್ಲಾ ಪರಿತ್ಯಾಗ ಮಾಡುವುದಿಲ್ಲವೋ ಅವನು ನನ್ನ ಶಿಷ್ಯನಾಗಲಾರ":

ದೇವಮಾತೆಯ ಮಹೋತ್ಸವ 



ಮೊದಲನೇ ವಾಚನ: ಸುಜ್ಞಾನ ಗ್ರಂಥ 9:13-18

ದೇವರ ಸಂಕಲ್ಪವನ್ನು ಅರಿಯಬಲ್ಲವನಾರು? ಸರ್ವೇಶ್ವರನ ಚಿತ್ತವೇನೆಂದು ಗ್ರಹಿಸಬಲ್ಲವನಾರು? ಮರ್ತ್ಯ ಮಾನವರ ವಿವೇಚನೆ ಅಸಮರ್ಪಕವಾದುದೇ ನಮ್ಮ ಯೋಜನೆಗಳೆಲ್ಲ ಕೈಗೂಡದೆ ಹೋಗುವಂಥವೇ. ಈ ನಶ್ವರ ದೇಹ ಅಂತರಾತ್ಮವನ್ನು ಕುಗ್ಗಿಸುತ್ತದೆ ಈ ಮಣ್ಣಿನ ಗುಡಾರ, ಚಿಂತಾಭರಿತ ಮನಕ್ಕೊಂದು ಭಾರವೇ. ಧರೆಯ ಮೇಲಿನ ವಿಷಯಗಳನ್ನು ತಿಳಿಯುವುದೆಷ್ಟೋ ಕಷ್ಟಕರ  ಕೈಗೆಟಕುವುಗಳನ್ನೇ ಕಂಡರಿತುಕೊಳ್ಳುವುದು ಎಷ್ಟೋ ಪ್ರಯಾಸಕರ. ಇಂತಿರಲು, ಸ್ವರ್ಗದಲ್ಲಿರುವುದನು ಬದಲಿಗೆ ತರಲು ಯಾರು ಸಮರ್ಥ? ನೀವು ನಿಮ್ಮ ಸುಜ್ಞಾನವನ್ನು ಅನುಗ್ರಹಿಸದೆ ಹೋಗಿದ್ದರೆ ನಿಮ್ಮ ಪವಿತ್ರಾತ್ಮನನ್ನು ಸ್ವರ್ಗದಿಂದ ಕಳುಹಿಸದೆ ಹೋಗಿದ್ದರೆ ನಿಮ್ಮ ಸಂಕಲ್ಪವನ್ನು ಯಾರಾದರು ಅರಿಯುತ್ತಿದ್ದರೇ? ಹೀಗೆ ಲೋಕದ ಮಾರ್ಗಗಳನ್ನು ತಿದ್ದಲಾಯಿತು, ನಿಮಗೆ ಮೆಚ್ಚುಗೆಯಾದುದನು ಜನರಿಗೆ ಕಲಿಸಲಾಯಿತು, ಸುಜ್ಞಾನದಿಂದಲೇ ಅವರಿಗೆ ರಕ್ಷಣೆ ಲಭಿಸುವಂತಾಯಿತು.

ಕೀರ್ತನೆ: 90:3-6, 12-13, 14, 17

ಶ್ಲೋಕ: ಪ್ರಭು, ತಲತಲಾಂತರಕ್ಕೆ ಶ್ರೀನಿವಾಸ ನೀನೆಮಗೆ

ಎರಡನೇ ವಾಚನ: ಫಿಲೆಮೋನನಿಗೆ 1:9-10, 12-17

ನಿನ್ನ ಮೇಲಿರುವ ಪ್ರೀತಿಯ ನಿಮಿತ್ತ ನಾನು ನಿಮ್ಮಲ್ಲಿ ವಿನಂತಿಸುತ್ತೇನೆ: ವೃದ್ಧಪ್ರಾಯನೂ ಮತ್ತು ಕ್ರಿಸ್ತಯೇಸುವಿಗೋಸ್ಕರ ಈಗ ಸೆರೆಯಾಳೂ ಆಗಿರುವ ಪೌಲನೆಂಬ ನಾನು ಒನೇಸಿಮನ ಪರವಾಗಿ ನಿನ್ನಲ್ಲಿ ವಿಜ್ಞಾಪಿಸುತ್ತೇನೆ. ಇವನು ಯೇಸುವಿನಲ್ಲಿ ನನ್ನ ಸ್ವಂತ ಮಗನಂತಿದ್ದಾನೆ. ಸೆರೆಮನೆಯಲ್ಲಿ ನಾನು ಅವನನ್ನು ಆಧ್ಯಾತ್ಮಿಕವಾಗಿ ಪಡೆದೆನು. ನನಗಂತೂ ಇವನು ಪ್ರಾಣದಂತಿದ್ದರೂ ಈಗ ನಿನ್ನ ಬಳಿಗೆ ಕಳುಹಿಸುತ್ತಿದ್ದೇನೆ. ಶುಭಸಂದೇಶಕ್ಕೋಸ್ಕರ ನಾನು ಸೆರೆಮನೆಯಲ್ಲಿರುವಾಗ ನಿನ್ನ ಬದಲಾಗಿ ನನಗೆ ಸಹಾಯ ಮಾಡಲು ಇವನನ್ನು ಇಲ್ಲಿಯೇ ಉಳಿಸಿಕೊಳ್ಳಲು ಇಷ್ಟವಿತ್ತು. ಆದರೆ ನನಗೆ ಸಹಾಯವಾಗಲೆಂದು ನಿನ್ನನ್ನು ಕಡ್ಡಾಯಪಡಿಸಲು ನನಗಂತೂ ಇಷ್ಟವಿಲ್ಲ. ನಿನಗಾಗಿಯೇ ನಿನ್ನ ಸ್ವಂತ ಇಚ್ಛೆಯಿಂದ ಹಾಗೆ ಮಾಡಬೇಕೆಂಬುದು ನನ್ನ ಅಪೇಕ್ಷೆ. ಆದ್ದರಿಂದ ನಿನ್ನ ಒಪ್ಪಿಗೆಯಿಲ್ಲದೆ ನಾನು ಏನನ್ನೂ ಮಾಡುತ್ತಿಲ್ಲ. ಸ್ವಲ್ಪಕಾಲ ಒನೇಸಿಮನು ನಿನ್ನಿಂದ ದೂರವಿದ್ದುದಕ್ಕೆ ಕಾರಣ ಆತನು ಸದಾಕಾಲ ನಿನ್ನವನಾಗುವುದಕ್ಕೋ ಏನೋ. ಈಗ ಅವನು ನಿನ್ನ ಬಳಿಗೆ ಬರುತ್ತಿರುವುದು ಕೇವಲ ಗುಲಾಮನಂತೆ ಅಲ್ಲ, ಅದಕ್ಕಿಂತಲೂ ಬಹಳ  ಮೇಲಾದವನಂತೆ, ಕ್ರಿಸ್ತ ಯೇಸುವಿನಲ್ಲಿ ಪ್ರಿಯ ಸಹೋದರನಂತೆ, ಅವನೆಂದರೆ ನನಗೆಷ್ಟೋ ಪ್ರೀತಿ. ಹಾಗಾದರೆ ನಿನ್ನ ಸೇವಕನೂ ನಮ್ಮ ಪ್ರಭುವಿನಲ್ಲಿ ನಿನ್ನ ಪ್ರಿಯ ಸಹೋದರನೂ ಆಗಿರುವ ಅವನ ಬಗ್ಗೆ ನಿನಗೆ ಮತ್ತಷ್ಟು ಪ್ರೀತಿ ಇರಬೇಕಲ್ಲವೇ? ಆದ್ದರಿಂದ ಕ್ರಿಸ್ತ ಯೇಸುವಿನಲ್ಲಿ ನಿನಗೂ ನನಗೂ ಅನ್ಯೋನ್ಯತೆ ಇದೆಯೆಂದು ನೀನು ಪರಿಗಣಿಸುವುದಾದರೆ ನನ್ನನ್ನು ಹೇಗೆ ಸ್ವಾಗತಿಸುತ್ತಿದ್ದೆಯೋ ಹಾಗೆಯೇ ಇವನನ್ನೂ ಸ್ವಾಗತಿಸು.

ಶುಭಸಂದೇಶ: ಲೂಕ 14:25-33


ಜನರು ಗುಂಪುಗುಂಪಾಗಿ ಯೇಸುಸ್ವಾಮಿಯ ಸಂಗಡ ಹೋಗುತ್ತಿದ್ದರು. ಆಗ ಯೇಸು ಅವರ ಕಡೆಗೆ ತಿರುಗಿ ಹೀಗೆಂದರು: "ನನ್ನಲ್ಲಿಗೆ ಬರುವ ಯಾರೊಬ್ಬನೂ ತನ್ನ ತಂದೆ-ತಾಯಿ, ಹೆಂಡತಿ- ಮಕ್ಕಳು, ಸೋದರ- ಸೋದರಿಯರನ್ನು ಮಾತ್ರವಲ್ಲ, ತನ್ನ ಪ್ರಾಣವನ್ನು ಕೂಡ ತ್ಯಜಿಸದ ಹೊರತು, ನನ್ನ ಶಿಷ್ಯನಾಗಲಾರನು. ತನ್ನ ಶಿಲುಬೆಯನ್ನು ಹೊತ್ತು ನನ್ನ ಹಿಂದೆ ಬಾರದವನುನನ್ನ ಶಿಷ್ಯನಾಗಲಾರನು. ನಿಮ್ಮಲ್ಲಿ ಒಬ್ಬನು ಒಂದು ಗೋಪುರವನ್ನು ಕಟ್ಟಲು ಇಚ್ಛಿಸಿದರೆ, ಕೆಲಸವನ್ನು ಮುಗಿಸಲು ತನ್ನಿಂದ ಸಾಧ್ಯವೇ ಎಂದು ನೋಡಲು, ಮೊದಲು ಕುಳಿತು, ಬೇಕಾಗುವ ಖರ್ಚುವೆಚ್ಚವನ್ನು ಲೆಕ್ಕ ಹಾಕುವುದಿಲ್ಲವೇ? ಇಲ್ಲದೆ ಹೋದರೆ, ಇವನು ಅಸ್ತಿವಾರ ಹಾಕಿದ ಮೇಲೆ ಕೆಲಸ ಪೂರೈಸದೆ ಇರುವುದನ್ನು ಕಂಡು, "ಕಟ್ಟಲಾರಂಭಿಸಿದ; ಮುಗಿಸಲು ಇವನಿಂದಾಗಲಿಲ್ಲ!" ಎಂದು ನೋಡುವವರೆಲ್ಲರೂ ಅವನನ್ನು ಪರಿಹಾಸ್ಯಮಾಡುವರು. ಹಾಗೆಯೇ, ಅರಸನೊಬ್ಬನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವುದಕ್ಕೆ ಮುಂಚೆ ಇಪ್ಪತ್ತು ಸಾವಿರ ಸೈನ್ಯದೊಡನೆ ಬರುವ ಶತ್ರುವನ್ನು ತನ್ನ ಹತ್ತು ಸಾವಿರ ಸೈನ್ಯದಿಂದ ಎದುರಿಸಲು ಸಾಧ್ಯವೇ ಎಂದು ಮೊದಲು ಕುಳಿತು ಆಲೋಚನೆ ಮಾಡುವುದಿಲ್ಲವೇ? ಸಾಧ್ಯವಿಲ್ಲದಿದ್ದರೆ, ಶತ್ರು ರಾಜನು ದೂರದಲ್ಲಿರುವಾಗಲೇ ದೂತರನ್ನು ಕಳುಹಿಸಿ, ಸಂಧಾನಕ್ಕೆ ಷರತ್ತುಗಳೇನೆಂದು ವಿಚಾರಿಸುತ್ತಾನೆ. ಅದೇ ಮೇರೆಗೆ, ನಿಮ್ಮಲ್ಲಿ ಯಾವನು ತನಗಿರುವುದನ್ನೆಲ್ಲಾ ಪರಿತ್ಯಾಗ ಮಾಡುವುದಿಲ್ಲವೋ ಅವನು ನನ್ನ ಶಿಷ್ಯನಾಗಲಾರ.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...