07.01.2019 - "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ"

ಮೊದಲನೇ ವಾಚನ: 1 ಯೊವಾನ್ನ  3:22-4:6 

ನಾವು ದೇವರ ಆಜ್ಞೆಗಳಿಗೆ ವಿಧೇಯರಾಗಿ ಅವರಿಗೆ ಮೆಚ್ಚುಗೆಯಾದವುಗಳನ್ನೇ ಮಾಡುವುದರಿಂದ ನಾವು ಕೋರುವುದೆಲ್ಲವನ್ನು ಅವರಿಂದ ಪಡೆಯುತ್ತೇವೆ. ನಾವು ದೇವರ ಪುತ್ರ ಯೇಸುಕ್ರಿಸ್ತರ ನಾಮದಲ್ಲಿ ವಿಶ್ವಾಸವಿಟ್ಟು ಅವರು ವಿಧಿಸಿದಂತೆ ಒಬ್ಬರನ್ನೊಬ್ಬರು ಪ್ರೀತಿಸಬೇಕು ಇದೇ ಅವರ ಆಜ್ಞೆ, ದೇವರ ಆಜ್ಞೆಗಳನ್ನು ಪಾಲಿಸುವವನು ಅವರಲ್ಲಿ ನೆಲಸಿರುತ್ತಾನೆ. ದೇವರು ಅವನಲ್ಲಿ ನೆಲಸಿರುತ್ತಾರೆ. ದೇವರು ನಮ್ಮಲ್ಲಿ ನೆಲಸಿದ್ದಾರೆಂದು ಅವರು ದಯಪಾಲಿಸುವ ಪವಿತ್ರಾತ್ಮರಿಂದಲೇ ತಿಳಿದುಕೊಳ್ಳುತ್ತೇವೆ. ಪ್ರಿಯರೇ, "ನಾವು ಪವಿತ್ರಾತ್ಮ ಪ್ರೇರಿತರು" ಎಂದು ಹೇಳುವ ಎಲ್ಲರನ್ನೂ ನಂಬಬಾರದು. ಆ ಪ್ರೇರಣೆ ದೇವರಿಂದ ಬಂದಿದೆಯೇ ಎಂದು ಪರಿಕ್ಷಿಸಿ ನೋಡಬೇಕು. ಏಕೆಂದರೆ, ಎಷ್ಟೋ ಮಂದಿ ಕಪಟ ಪ್ರವಾದಿಗಳು ಎಲ್ಲೆಡೆಯಲ್ಲೂ ಹರಡಿದ್ದಾರೆ. ದೇವರ  ಆತ್ಮರಿಂದ ಬಂದ ಪ್ರೇರಣೆಯನ್ನು ನೀವು ಹೀಗೆ ಗುರುತಿಸಬಹುದು ಮನಷ್ಯ ಆಗಿ ಬಂದ ಕ್ರಿಸ್ತಯೇಸುವನ್ನು ಒಪ್ಪಿಕೊಳ್ಳುವ ಆತ್ಮವು ದೇವರಿಂದ  ಪ್ರೇರಿತವಾದುದು. ಯೇಸುವನ್ನು ಒಪ್ಪಿಕೊಳ್ಳದ ಆತ್ಮ ದೇವರಿಂದ ಪ್ರೇರಿತವಾದುದಲ್ಲ. ಅದು ಕ್ರಿಸ್ತ ವಿರೋಧಿಯ ಆತ್ಮ. ಅದು ಬರುವುದೆಂದು ನೀವು ಕೇಳಿದೀರಿ; ಈಗಾಗಲೇ ಅದು ಲೋಕದಲ್ಲಿ ತಲೆದೋರಿದೆ. ಪ್ರಿಯ ಮಕ್ಕಳೇ, ನೀವಂತು ದೇವರಿಗೆ ಸೇರಿದವರು. ಲೋಕದಲ್ಲಿರುವ ದುರಾತ್ಮಕ್ಕಿಂತಲೂ ನಿಮ್ಮಲ್ಲಿರುವ ಆತ್ಮವು ಶ್ರೇಷ್ಟವಾದುದು. ಆದ್ದರಿಂದಲೇ ಆ ಕಪಟ ಪ್ರವಾದಿಗಳನ್ನು ಜಯಿಸಿದ್ದೀರಿ. ಅವರು ಲೋಕಕ್ಕೆ ಸೇರಿದವರು. ಆದ್ದರಿಂದ ಅವರು ಲೌಕಿಕವಾದುದನ್ನೇ ಮಾತನಾಡುತ್ತಾರೆ. ಎಂದೇ, ಲೋಕವು ಅವರಿಗೆ ಕಿವಿಗೊಡುತ್ತದೆ.  ನಾವಾದರೋ ದೇವರಿಗೆ ಸೇರಿದವರು. ದೇವರನ್ನು ಅರಿತವನು ನಮಗೆ ಕಿವಿಗೊಡುತ್ತಾನೆ. ದೇವರಿಗೆ ಸೇರದವನು ನಮಗೆ ಕಿವಿಗೊಡುವುದಿಲ್ಲ. ಇದರಿಂದಲೇ ಸತ್ಯವನ್ನು ಸಾರುವ ಆತ್ಮ ಯಾವುದು ಮತ್ತು ಅಸತ್ಯವನ್ನು ಸಾರುವ ಆತ್ಮ ಯಾವುದು ಎಂಬುದು ನಮಗೆ ತಿಳಿಯುತ್ತದೆ. 

ಕೀರ್ತನೆ: 2:7-8, 10-12 

ಶ್ಲೋಕ: ನಿನಗಧೀನ ಮಾಡುವೆನು ರಾಷ್ಟ್ರಗಳನ್ನು ಕೊಡುವೆನು ನಿನಗೆ ಸ್ವಾ‌ಸ್ತ್ಯವಾಗಿ ಜಗದ ಆದ್ಯಂತ್ಯವನು. 

ಶುಭಸಂದೇಶ: ಮತ್ತಾಯ  4:12-17, 23-25 

ಯೊವಾನ್ನನು ಬಂಧಿತನಾದನೆಂದು ಯೇಸುಸ್ವಾಮಿ ಕೇಳಿ, ಆ ಪ್ರಾಂತ್ಯವನ್ನು ಬಿಟ್ಟು ಗಲಿಲೇಯಕ್ಕೆ ಹೊರಟುಹೋದರು. ನಜರೇತ್ ಊರಿನಲ್ಲಿ ತಂಗದೆ ಗಲಿಲೇಯ ಸರೋವರದ ಸಮೀಪದಲ್ಲಿರುವ ಕಫೆರ್ನವುಮ್ ಎಂಬ ಊರಿನಲ್ಲಿ ವಾಸಮಾಡಿದರು. ಇದು ಜೆಬುಲೋನ್ ಹಾಗೂ ನೆಫ್ತಲೀಮ್ ನಾಡುಗಳ ಸರಹದ್ದಿನಲ್ಲಿದೆ. ಹೀಗೆ: "ಜೆಬುಲೋನ್ ನಾಡೇ, ನೆಫ್ತಲೀಮ್ ನಾಡೇ, ಸರೋವರದ ಹತ್ತಿರವಿರುವ ಹಾದಿ ಬೀದಿಯೇ, ಜೋರ್ಡಾನ್ ಹೊರವಲಯವೇ, ಕಾರ್ಗತ್ತಲಲ್ಲಿ ವಾಸಿಸುವವರಿಗೆ ದಿವ್ಯ ಜ್ಯೋತಿಯೊಂದು ಕಾಣಿಸಿತು. ಮರಣಛಾಯೆ ಕವಿದ ನಾಡಿಗರಿಗೆ ಅರುಣೋದಯವಾಯಿತು," ಎಂದು ನುಡಿದ ಪ್ರವಾದಿ ಯೆಶಾಯನ ವಚನಗಳು ಈಡೇರಿದವು. ಅಂದಿನಿಂದ ಯೇಸು, "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಸ್ವರ್ಗಸಾಮ್ರಾಜ್ಯ ಸಮೀಪಿಸಿತು," ಎಂಬ ಸಂದೇಶವನ್ನು ಬೋಧಿಸತೊಡಗಿದರು. ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದಲ್ಲೆಲ್ಲಾ  ಸಂಚರಿಸಿ ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಉಪದೇಶ ಮಾಡುತ್ತಿದ್ದರು. ದೈವರಾಜ್ಯದ ಸಂದೇಶವನ್ನು ಪ್ರಬೋಧಿಸುತ್ತಿದ್ದರು. ಜನರ ಎಲ್ಲಾ ತರದ ರೋಗ ರುಜಿನಗಳನ್ನೂ ಬೇನೆ  ಬವಣೆಗಳನ್ನೂ ಗುಣಪಡಿಸುತ್ತಿದ್ದರು. ಅವರ ಕೀರ್ತಿ ಸಿರಿಯಾ ದೇಶದಲ್ಲೆಲ್ಲಾ ಹಬ್ಬಿತು. ದೆವ್ವ ಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯು ಪೀಡಿತರನ್ನೂ ನಾನಾ ತರದ ವ್ಯಾಧಿ ಹಾಗೂ ವೇದನೆಯಿಂದ ನರಳುತ್ತಿದ್ದ ಎಲ್ಲ ರೋಗಿಗಳನ್ನೂ ಅವರ ಬಳಿಗೆ ಕರೆತಂದರು. ಯೇಸು ಅವರೆಲ್ಲರನ್ನು ಸ್ವಸ್ಥಪಡಿಸಿದರು. ಗಲಿಲೇಯ, ದೆಕಪೊಲಿ, ಜೆರುಸಲೇಮ್, ಜುದೇಯ ಎಂಬ ಸ್ಥಳಗಳಿಂದಲೂ ಜೋರ್ಡಾನ್ ನದಿಯ ಆಚೆಕಡೆಯಿಂದಲೂ ಜನರು ತಂಡೋಪತಂಡವಾಗಿ ಬಂದು ಯೇಸುವನ್ನು ಹಿಂಬಾಲಿಸಿದರು.

06.01.2019 - "ಇಸ್ರಯೇಲನ್ನು ಪರಿಪಾಲಿಸುವವನು ನಿನ್ನಿಂದಲೇ ಉದಯಿಸಲಿರುವನು"

ಮೊದಲನೇ ವಾಚನ: ಯೆಶಾಯ  60:1-6 

ನಿನಗೆ ಬೆಳಕು ಬಂದಿದೆ ಜೆರುಸಲೇಮೇ, ಏಳು, ಪ್ರಕಾಶಿಸು; ನಿನ್ನ ಮೇಲೆ ಉದಯಿಸಿದೆ ಸರ್ವೇಶ್ವರನ ತೇಜಸ್ಸು. ಇಗೋ ಜಗತ್ತನು ಮುತ್ತಿದೆ ಕತ್ತಲು, ಜನಾಂಗಗಳನು ಆವರಿಸಿದೆ ಕಾರ್ಗತ್ತಲು. ನಿನ್ನ ಮೇಲಾದರೋ ಉದಯಿಸುವನು ಸರ್ವೇಶ್ವರನು, ನಿನ್ನಲ್ಲಿ ಗೋಚರವಾಗುವುದು ಆತನಾ ತೇಜಸ್ಸು. ರಾಷ್ಟ್ರಗಳು ಬರುವವು ನಿನ್ನ ಬೆಳಕಿಗೆ, ಅರಸರು ನಿನ್ನ ಉದಯದ ಶೋಭೆಗೆ. ನೀ ನೋಡು ಸುತ್ತಮುತ್ತಲು ಕಣ್ಣೆತ್ತಿ, ಬರುತಿಹರು ನಿನ್ನ ಮಕ್ಕಳೆಲ್ಲರು ಗುಂಪಾಗಿ. ದೂರದಿಂದ ಬರುತಿಹರು ಗಂಡುಮಕ್ಕಳು, ಕಂಕುಳಿನಲ್ಲಿ ಹೊತ್ತ ಆ ಹೆಣ್ಣುಮಕ್ಕಳು. ಇದನ್ನು ನೋಡಿ ನೀ ಬೆಳಗುವೆ ಕಾಂತಿಯಿಂದ, ಉಬ್ಬುವುದು ನಿನ್ನ ಎದೆ ಆನಂದದಿಂದ. ಹರಿಯುವುದು ನಿನ್ನೆಡೆಗೆ ಸಮುದ್ರ ವ್ಯಾಪಾರ ಸಮೃದ್ಧಿ, ದೊರಕುವುದು ನಿನಗೆ ಅನ್ಯಜನಾಂಗಗಳ ಆಸ್ತಿಪಾಸ್ತಿ. ತುಂಬಿರುವುದು ನಿನ್ನೊಳು ಒಂಟೆಗಳ ಗುಂಪುಗಳು, ಮಿದ್ಯಾನಿನ, ಏಫದ ಪ್ರಾಯದ ಒಂಟೆಗಳು. ಬರುವರೆಲ್ಲರು ಶೆಬದಿಂದ, ತರುವರು ಬಂಗಾರ, ಧೂಪಗಳನು ಸಾರುವರೆಲ್ಲರು ಸರ್ವೇಶ್ವರನ ಸ್ತುತ್ಯಕಾರ್ಯಗಳನ್ನು. 

ಕೀರ್ತನೆ: 72:1-2, 7-8, 10-11, 12-13 

ಶ್ಲೋಕ: ರಾಜರುಗಳು ಸಾಷ್ಟಾಂಗವೆರಗಲಿ ಸರ್ವೇಶ್ವರಸ್ವಾಮಿಗೆ 

ಎರಡನೇ ವಾಚನ: ಎಫೆಸಿಯರಿಗೆ  3:2-3, 5-6 

ದೇವರು ತಮ್ಮ ಕೃಪಾತಿಶಯದ ಬಗ್ಗೆ ಸಾರುವ ಹೊಣೆಯನ್ನು ನಿಮ್ಮ ಸಲುವಾಗಿ ನನಗೆ ಕೊಟ್ಟಿರುತ್ತಾರೆಂಬುದನ್ನು ನೀವೇ ಬಲ್ಲಿರಿ. ದೇವರು ತಮ್ಮ ನಿಗೂಢ ಯೋಜನೆಯನ್ನು ನನಗೆ ಪ್ರಕಟಗೊಳ್ಳಿಸಿದ್ದಾರೆ. ಇದರ ಬಗ್ಗೆ ನಾನು ಮೊದಲೇ ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ. ಹಿಂದಿನ ಕಾಲದವರಿಗೆ ಈ ರಹಸ್ಯವನ್ನು ತಿಳಿಸಿರಲಿಲ್ಲ. ಆದರೆ ಈಗ ದೇವರು ಪವಿತ್ರಾತ್ಮರ  ಪೂಜ್ಯ ಪ್ರೇಷಿತರಿಗೂ ಪ್ರವಾದಿಗಳಿಗೂ ಅದನ್ನು ಪ್ರಕಟಿಸಿದ್ದಾರೆ. ಶುಭಸಂದೇಶದ ಮೂಲಕ ಅನ್ಯಜನರೂ ಯೇಸುಕ್ರಿಸ್ತರಲ್ಲಿ ದೇವಜನರೋಡನೆ ಸಹಬಾಧ್ಯರು, ಹಕ್ಕುದಾರರು, ಒಂದೇ ಶರೀರದ ಅಂಗಗಳು, ಹಾಗೂ ದೇವರು ಮಾಡಿದ ವಾಗ್ದಾನದಲ್ಲಿ ಪಾಲುಗಾರರು - ಇದೇ ಆ ರಹಸ್ಯ. 

ಶುಭಸಂದೇಶ: ಮತ್ತಾಯ 2:1-12 

ಯೇಸುಸ್ವಾಮಿ ಜನಿಸಿದ್ದು ಹೆರೋದರಸನ ಕಾಲದಲ್ಲಿ: ಜುದೇಯ ನಾಡಿನ ಬೆತ್ಲೆಹೇಂ ಎಂಬ ಊರಿನಲ್ಲಿ. ಕೆಲವು ಜ್ಯೋತಿಷಿಗಳು ಪೂರ್ವದಿಕ್ಕಿನಿಂದ ಹೊರಟು ಜೆರುಸಲೇಮಿಗೆ ಬಂದರು. "ಯೆಹೂದ್ಯರ ಅರಸ ಹುಟ್ಟಿದ್ದಾರಲ್ಲವೇ  ಅವರೆಲ್ಲಿ?"  ಎಂದು  ವಿಚಾರಿಸಿದರು; "ಅವರನ್ನು ಸೂಚಿಸುವ ನಕ್ಷತ್ರ ಪೂರ್ವದಲ್ಲಿ ಉದಯಿಸಿದ್ದನ್ನು ಕಂಡು ಅವರನ್ನು ಆರಾಧಿಸಲು ಇಲ್ಲಿಗೆ ಬಂದಿದ್ದೇವೆ" ಎಂದರು. ಇದನ್ನು ಕೇಳಿದ್ದೇ  ಹೆರೋದರಸನು ಬಹಳ ತಳಮಳಗೊಂಡನು; ಅಂತೆಯೇ ಜೆರುಸಲೇಮ್ ಆದ್ಯಂತವೂ ಗಲಿಬಿಲಿಗೊಂಡಿತು. ಯೆಹೂದ್ಯರ ಎಲ್ಲ ಮುಖ್ಯ ಯಾಜಕರನ್ನೂ ಧರ್ಮಶಾಸ್ತ್ರಿಗಳನ್ನೂ ಅವನು ಸಭೆ ಸೇರಿಸಿದನು. " ಕ್ರಿಸ್ತ ಹುಟ್ಟಬೇಕಾದುದು ಎಲ್ಲಿ?" ಎಂದು ಅವರನ್ನು ವಿಚಾರಿಸಿದನು. ಅದಕ್ಕೆ ಅವರು "ಜುದೇಯದಲ್ಲಿರುವ ಬೆತ್ಲೆಹೇಮಿನಲ್ಲೇ ಹುಟ್ಟುವನು; ಏಕೆಂದರೆ "ಜುದೇಯ ನಾಡಿನ ಬೆತ್ಲೆಹೇಮೇ, ಜುದೇಯದ ಪ್ರಮುಖ ಪಟ್ಟಣಗಳಲ್ಲಿ ನೀನು ಅಲ್ಪಳೇನು ಅಲ್ಲ. ಕಾರಣ ನನ್ನ ಪ್ರಜೆ ಇಸ್ರಯೇಲನ್ನು ಪರಿಪಾಲಿಸುವವನು ನಿನ್ನಿಂದಲೇ ಉದಯಿಸಲಿರುವನು", ಎಂದು ಪ್ರವಾದಿ ಬರೆದಿದ್ದಾನೆ. ಎಂದು ಉತ್ತರವಿತ್ತನು. ಆಗ ಹೆರೋದನು ಆ ಜ್ಯೋತಿಷಿಗಳನ್ನು ಗೋಪ್ಯವಾಗಿ ಬರಮಾಡಿಕೊಂಡು ಅವರಿಗೆ ನಕ್ಷತ್ರ ಕಾಣಿಸಿಕೊಂಡ ಕಾಲವನ್ನು ಸ್ಪಷ್ಟವಾಗಿ ಕೇಳಿ ತಿಳಿದುಕೊಂಡನು. ಆನಂತರ ಅವರನ್ನು ಬೆತ್ಲೆಹೇಮಿಗೆ ಕಳುಹಿಸಿಕೊಡುತ್ತಾ, 'ನೀವು ಹೋಗಿ ಆ ಮಗುವನ್ನು ಚೆನ್ನಾಗಿ ಹುಡುಕಿರಿ; ಕಂಡಕೂಡಲೇ ನನಗೆ ಬಂದು ತಿಳಿಸಿರಿ. ನಾನು ಹೋಗಿ ಆ ಮಗುವನ್ನು ಆರಾಧಿಸಬೇಕು," ಎಂದು ಹೇಳಿದನು. ಜ್ಯೋತಿಷಿಗಳು ಅರಸನ ಮಾತಿಗೆ ತಲೆಬಾಗಿ ಹೊರಟರು. ಪೂರ್ವದಿಕ್ಕಿನಲ್ಲಿ ಮೊದಲೇ ಅವರಿಗೆ ಕಾಣಿಕೊಂಡಿದ್ದ ನಕ್ಷತ್ರ ಪುನಃ ಕಾಣಿಸಿಕೊಂಡಿತು. ಅವರು ಪರಮಾನಂದಭರಿತರಾದರು. ಆ ನಕ್ಷತ್ರ ಅವರ ಮುಂದೆ ಮುಂದೆ ಸಾಗುತ್ತಾ ಮಗು ಇದ್ದ ಸ್ಥಳದ ಮೇಲೆ ಬಂದು ನಿಂತುಬಿಟ್ಟಿತು. ಜ್ಯೋತಿಷಿಗಳು ಆ ಮನೆಯನ್ನು ಪ್ರವೇಶಿಸಿ ಮಗುವನ್ನು ತಾಯಿ ಮರಿಯಳ ಬಳಿ ಕಂಡು ಅದಕ್ಕೆ ಸಾಷ್ಟಾಂಗವೆರಗಿ ಆರಾಧಿಸಿದರು. ತಮ್ಮ ತಮ್ಮ ಬೊಕ್ಕಸಗಳನ್ನು ಬಿಚ್ಚಿ ಚಿನ್ನ, ಪರಿಮಳದ್ರವ್ಯ ಮತ್ತು ರಕ್ತಬೋಳ ಇವುಗಳನ್ನು ಮಗುವಿಗೆ ಪಾದಕಾಣಿಕೆಯಾಗಿ ಸಮರ್ಪಿಸಿದರು. ಹೆರೋದನ ಬಳಿಗೆ ಹಿಂದಿರುಗಬಾರದೆಂದು ಕನಸಿನಲ್ಲಿ ದೈವಾಜ್ಞೆಯಾದ್ದರಿಂದ, ಅವರು ಬೇರೆ ಮಾರ್ಗವಾಗಿ ತಮ್ಮ ದೇಶಕ್ಕೆ ಮರಳಿದರು.

5.01.2019 - "ಗುರುದೇವ, ದೇವರ ಪುತ್ರ ನೀವೇ"

ಮೊದಲನೇ ವಾಚನ: 1  ಯೊವಾನ್ನ  3:11-21 

ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದೆ ಮೊತ್ತಮೊದಲಿನಿಂಲೂ ನೀವು ಕೇಳಿದ ಸಂದೇಶ. ತನ್ನ ಸಹೋದರನನ್ನೇ ಕೊಂದ ಕಾಯಿನನಂತೆ ನಾವು ಇರಬಾರದು. ಅವನು ಕಡುಕೇಡಿಗನ ಕುವರ. ಅವನು ಕೊಂದುದಾದರೂ ಏಕೆ?  ತನ್ನ ಕೃತ್ಯಗಳು ದುಷ್ಟವಾಗಿದ್ದು ತನ್ನ ಸಹೋದರನ ಕೃತ್ಯಗಳು ಧರ್ಮಿಷ್ಠವಾಗಿದ್ದುದರಿಂದ ಅಲ್ಲವೇ? ಸಹೋದರರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿ. ನಾವು ನಮ್ಮ ಸಹೋದರರನ್ನು ಪ್ರೀತಿಸುವುದರಿಂದ ಸಾವಿನಿಂದ ಜೀವಕ್ಕೆ ಸಾಗಿದ್ದೇವೆಂದು ತಿಳಿದಿದ್ದೇವೆ. ಪ್ರೀತಿಸದೆ ಇರುವವನು ಸಾವಿನಲ್ಲೇ ನೆಲಸಿರುತ್ತಾನೆ. ತನ್ನ ಸಹೋದರರನ್ನು ದ್ವೇಷಿಸುವವನು ಕೊಲೆಗಾರನೇ ಹೌದು. ಯಾವ ಕೊಲೆಗಾರನಲ್ಲೂ ನಿತ್ಯ ಜೀವ ಇರದೆಂದು ನೀವು ಬಲ್ಲಿರಿ. ಕ್ರಿಸ್ತಯೇಸು ನಮಗೋಸ್ಕರ ತಮ್ಮ ಪ್ರಾಣವನ್ನೇ ತೆತ್ತರು. ಇದರಿಂದ ಪ್ರೀತಿ ಎಂತಹುದೆಂದು ನಾವು ಅರಿತುಕೊಂಡೆವು. ನಾವೂ ಕೂಡ ಸಹೋದರರಿಗಾಗಿ ಪ್ರಾಣಾರ್ಪಣೆ ಮಾಡಲು ಬದ್ಧರಾಗಿದ್ದೇವೆ. ಲೋಕದ ಸುಖಸಂಪತ್ತುಳ್ಳ ಒಬ್ಬನು, ಕುಂದು ಕೊರತೆಯಲ್ಲಿ ಸಿಲುಕಿರುವ ತನ್ನ ಸಹೋದರನನ್ನು ಕಂಡಾಗಲೂ ಮನಕರಗದಿದ್ದರೆ ಅವನಲ್ಲಿ ದೇವರ ಪ್ರೀತಿ ಹೇಗೆ ತಾನೇ ನೆಲೆಸೀತು? ಪ್ರಿಯಮಕ್ಕಳೇ, ನಾವು ಬರಿಯ ಮಾತಿನಿಂದಾಗಲಿ, ಬಾಯುಪಚಾರದಿಂದಾಗಲಿ, ಪ್ರೀತಿಸುವವರಾಗಿರಬಾರದು. ನಮ್ಮ ಪ್ರೀತಿ ಸತ್ಯದಲ್ಲೂ ಕೃತ್ಯದಲ್ಲೂ ವ್ಯಕ್ತವಾಗಬೇಕು. ಹೀಗೆ ನಾವು ಸತ್ಯಕ್ಕೆ ಸೇರಿದವರು ಎಂಬುದು ಮನದಟ್ಟಾಗುವುದಲ್ಲದೆ ದೇವರ ಮುಂದೆ ನಮ್ಮ ಮನಸ್ಸು ನೆಮ್ಮದಿಯಿಂದಿರುತ್ತದೆ. ಯಾವ ವಿಷಯದಲ್ಲಾದರೂ ನಮ್ಮ ಮನಸಾಕ್ಷಿ ನಮ್ಮನ್ನು ಖಂಡಿಸದಿದ್ದರೆ, ನಾವು ದೇವರ ಮುಂದೆ ಧೈರ್ಯದಿಂದಿರಲು ಸಾಧ್ಯವಾಗುತ್ತದೆ. 

ಕೀರ್ತನೆ:100:1-2, 3, 4, 5 

ಶ್ಲೋಕ: ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ. 

 ಶುಭಸಂದೇಶ: ಯೊವಾನ್ನ 1:43-51 

ಮರುದಿನ ಯೇಸುಸ್ವಾಮಿ ಗಲಿಲೇಯ ನಾಡಿಗೆ ಹೋಗಲು ನಿರ್ಧರಿಸಿದರು. ಅವರು ಫಿಲಿಪ್ಪನನ್ನು ಕಂಡು, "ನನ್ನೊಡನೆ ಬಾ," ಎಂದು ಕರೆದರು.ಅಂದ್ರೆಯ ಮತ್ತು ಪೇತ್ರನಂತೆ ಫಿಲಿಪ್ಪನು ಕೂಡ ಬೆತ್ಸಾಯಿದ ಎಂಬ ಊರಿನವನು. ಫಿಲಿಪ್ಪನು ನತಾನಿಯೇಲನನ್ನು ಕಂಡು, "ಧರ್ಮಶಾಸ್ತ್ರದಲ್ಲಿ ಮೋಶೆ ಉಲ್ಲೇಖಿಸಿದ ಮತ್ತು ಪ್ರವಾದಿಗಳು ಪ್ರವಚನ ಮಾಡಿದ ವ್ಯಕ್ತಿಯು ನಮಗೆ ಸಿಕ್ಕಿದ್ಧಾರೆ. ಇವರೇ ಜೋಸೆಫನ ಮಗನಾದ ನಜರೇತ್ ಊರಿನ ಯೇಸು," ಎಂದು ಹೇಳಿದನು. ಅದಕ್ಕೆ ನತಾನಿಯೇಲನು, "ಏನು? ನಜರೇತಿನಿಂದ ಒಳ್ಳೆಯದೇನಾದರೂ ಬರುವುದು ಉಂಟೆ?" ಎಂದು ಕೇಳಲು, "ಬಂದು ನೀನೇ ನೋಡು," ಎಂದು ಫಿಲಿಪ್ಪನು ಉತ್ತರಕೊಟ್ಟನು. ತಮ್ಮ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡ ಯೇಸು, "ಇಗೋ ನೋಡಿ, ನಿಜವಾದ ಇಸ್ರಯೇಲನು, ಈತನಲ್ಲಿ ಕಪಟವಿಲ್ಲ," ಎಂದು ನುಡಿದರು. ನತಾನಿಯೇಲನು, "ನನ್ನ ಪರಿಚಯ ನಿಮಗೆ ಹೇಗಾಯಿತು?" ಎಂದು ಕೇಳಲು ಯೇಸು, "ಫಿಲಿಪ್ಪನು ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ," ಎಂದು ಉತ್ತರ ಕೊಟ್ಟರು. ಅದಕ್ಕೆ ನತಾನಿಯೇಲನು  "ಗುರುದೇವ, ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ," ಎಂದನು. ಆಗ ಯೇಸು, "ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆ ಎಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೆ? ಇದಕ್ಕೂ ಮಿಗಿಲಾದುವುಗಳನ್ನು ನೀನು ಕಾಣುವೆ," ಎಂದು ನುಡಿದರು. ತಮ್ಮ ಮಾತನ್ನು ಮುಂದುವರಿಸುತ್ತಾ, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಸ್ವರ್ಗವು ತೆರೆದಿರುವುದನ್ನೂ ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ," ಎಂದು ಹೇಳಿದರು.

04.01.2019 - "ನಮಗೆ "ಮೆಸ್ಸೀಯ" ಸಿಕ್ಕಿದ್ದಾರೆ"

ಮೊದಲನೇ ವಾಚನ: 1 ಯೊವಾನ್ನ 3:7-10 

ಪ್ರಿಯ ಮಕ್ಕಳೇ, ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸುವುದಕ್ಕೆ ಯಾರಿಗೂ ಅವಕಾಶ ಕೊಡಬೇಡಿ. ಕ್ರಿಸ್ತಯೇಸು ಸತ್ಯ ಸ್ವರೂಪಿಯಾಗಿರುವಂತೆಯೇ ಸತ್ಯಕ್ಕನುಸಾರ ನಡೆಯುವ ಪ್ರತಿ ಒಬ್ಬನೂ ಸತ್ಯವಂತನೇ. ಪಾಪಮಾಡುವವನು ಸೈತಾನನ ಸಂತಾನದವನು. ಸೈತಾನನು ಆದಿಯಿಂದಲೂ ಪಾಪಮಾಡಿದವನೇ. ಅವನ ದುಷ್ಕ್ರತ್ಯಗಳನ್ನು ವಿನಾಶಗೊಳಿಸಲೆಂದೇ ದೇವರ ಪುತ್ರ ಕಾಣಿಸಿಕೊಂಡದ್ದು. ದೇವರಿಂದ ಜನಿಸಿದ ಯಾವನೂ ಪಾಪಮಾಡನು. ದೇವರ ಜೀವದ ಕುಡಿ ಅವನಲ್ಲಿರುವುದು. ಅವನು ಪಾಪದಲ್ಲಿ ಜೀವಿಸನು. ಏಕೆಂದರೆ, ಅವನು ದೇವರಿಂದ ಜನಿಸಿದವನು. ಸನ್ಮಾರ್ಗದಲ್ಲಿ ನಡೆಯದವನೂ ಸಹೋದರರನ್ನು ಪ್ರೀತಿಸದವನೂ ದೇವರಿಂದ ಜನಿಸಿದವನಲ್ಲ. ಹೀಗೆ ದೇವರ ಮಕ್ಕಳು ಯಾರು ಮತ್ತು ಸೈತಾನನ ಮಕ್ಕಳು ಯಾರು ಎಂಬುದನ್ನು ತಿಳಿಯಬಹುದು. 

ಕೀರ್ತನೆ: 98:1, 7-9 

ಶ್ಲೋಕ: ಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ ನಮ್ಮ ದೇವ ಸಾಧಿಸಿದ ಜಯಗಳಿಕೆ. 

ಶುಭಸಂದೇಶ: ಯೊವಾನ್ನ 1:35-42 

ಮಾರನೆಯ ದಿನ ಯೊವಾನ್ನನು ತನ್ನಿಬ್ಬರು ಶಿಷ್ಯರ ಸಂಗಡ ನಿಂತುಕೊಂಡಿರುವಾಗ, ಯೇಸುಸ್ವಾಮಿ ಆ ಮಾರ್ಗವಾಗಿ ಹೋಗುತ್ತಿದ್ದರು. ಅವರನ್ನು ನೋಡುತ್ತಲೇ ಯೊವಾನ್ನನು ತನ್ನ ಆ ಶಿಷ್ಯರಿಗೆ, "ಇಗೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ  ಕುರಿಮರಿ," ಎಂದು ಹೇಳಿದನು. ಇದನ್ನು ಕೇಳಿ ಆ ಶಿಷ್ಯರು ಯೇಸುವನ್ನು ಹಿಂಬಾಲಿಸಿದರು. ಯೇಸುಸ್ವಾಮಿ, ತಮ್ಮನ್ನು ಹಿಂಬಾಲಿಸಿ ಬರುತ್ತಿರುವುದನ್ನು ನೋಡಿ, "ನಿಮಗೆ ಏನು ಬೇಕು?" ಎಂದು ಕೇಳಿದರು. ಅವರು, "ರಬ್ಬಿ, ತಾವು ವಾಸ ಮಾಡುವುದೆಲ್ಲಿ?" ಎಂದು ವಿಚಾರಿಸಿದರು. ('ರಬ್ಬಿ'  ಎಂದರೆ ಗುರುದೇವ ಎಂದು ಅರ್ಥ.) ಯೇಸು ಉತ್ತರವಾಗಿ, "ಬಂದು ನೋಡಿ" ಎನ್ನಲು ಅವರು ಹೋಗಿ ಯೇಸುಸ್ವಾಮಿ ಇದ್ದ ಸ್ಥಳವನ್ನು ಕಂಡು ಆ ದಿನವನ್ನು ಅವರೊಡನೆ ಕಳೆದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು. ಯೊವಾನ್ನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ್ದ ಇಬ್ಬರು ಶಿಷ್ಯರಲ್ಲಿ ಸಿಮೋನ ಪೇತ್ರನ ಸಹೋದರನಾದ ಆಂದ್ರೆಯನು ಒಬ್ಬನು. ಇವನು ಮೊದಲು ತನ್ನ ಸಹೋದರ ಸಿಮೋನನನ್ನು ಕಂಡು, "ನಮಗೆ "ಮೆಸ್ಸೀಯ" ಸಿಕ್ಕಿದ್ದಾರೆ," ಎಂದು ತಿಳಿಸಿ ಅವನನ್ನು ಯೇಸುವಿನ ಬಳಿಗೆ ಕರೆತಂದನು. ('ಮೆಸ್ಸೀಯ' ಎಂದರೆ ಅಭಿಷಿಕ್ತನಾದ ಲೋಕೋದ್ಧಾರಕ ಎಂದು ಅರ್ಥ). ಯೇಸು ಸಿಮೋನನನ್ನು ನೋಡಿ, "ಯೊವಾನ್ನನ ಮಗನಾದ ಸಿಮೋನನೇ, ಇನ್ನು ಮುಂದೆ ನಿನ್ನನ್ನು ಕೇಫನೆಂದು ಕರೆಯುವರು," ಎಂದು ನುಡಿದರು. ('ಕೇಫ' ಎಂದರೆ 'ಪೇತ್ರ' ಇಲ್ಲವೇ 'ಬಂಡೆ' ಎಂದರ್ಥ).

03.01.2019 - ಆತನೇ ಪವಿತ್ರಾತ್ಮನಿಂದ ದೀಕ್ಷಸ್ನಾನ ಕೊಡುವಾತ

ಮೊದಲನೇ ವಾಚನ: 1ಯೊವಾನ್ನ 2:29-3:6

ಕ್ರಿಸ್ತಯೇಸು ಸತ್ಯಸ್ವರೂಪಿ ಎಂಬುದನ್ನು ನೀವು ಬಲ್ಲಿರಿಎಂದೇಸತ್ಯಮಾರ್ಗದಲ್ಲಿ ನಡೆಯುವ ಪ್ರತಿಯೊಬ್ಬನೂ ಅವರಿಂದ ಜನಿಸಿದವನು ಎಂಬುದು ನಿಮಗೆ ವೇದ್ಯವಾಗಿರಬೇಕುನಾವು ದೇವರ ಮಕ್ಕಳುಎನಿಸಿಕೊಂಡಿರಬೇಕಾದರೆ ಪಿತನು ನಮ್ಮನ್ನು ಎಷ್ಟಾಗಿ ಪ್ರೀತಿಸುತ್ತಾರೆಂಬುದನ್ನು ಗಮನಿಸಿರಿನಿಜಕ್ಕೂ ನಾವು ನಾವು ದೇವರ ಮಕ್ಕಳೇಲೋಕವು ಅವರನ್ನು ಅರಿತುಕೊಳ್ಳಲಿಲ್ಲವಾದ ಕಾರಣ ನಾವು ಎಂಥವರೆಂದು ಅದು ಅರಿತಿಲ್ಲಪ್ರಿಯರೇನಾವೀಗ ದೇವರ ಮಕ್ಕಳುಮುಂದೆ ನಾವು ಎಂಥವರಾಗುತ್ತೇವೆ ಎಂಬುದು ಇನ್ನೂ ವಿಷದವಾಗಿಲ್ಲಆದರೆ ಕ್ರಿಸ್ತಯೇಸು ಪ್ರತ್ಯಕ್ಷವಾಗುವಾಗ ನಾವೂ ಅವರಂತೆಯೇ ಇರುತ್ತೇವೆಂದು ಬಲ್ಲೆವು.  ಎಕೆಂದರೆಅವರನ್ನು ನಾವು ಅವರ ಯಥಾರ್ಥ ರೂಪದಲ್ಲೇ ಕಾಣುತ್ತೇವೆ ಕ್ರಿಸ್ತಯೇಸುವಿನಲ್ಲಿ ನಂಬಿಕೆ ನಿರೀಕ್ಷೆಯನ್ನಿಟ್ಟಿರುವ ಪ್ರತಿಯೊಬ್ಬನೂ ಅವರು  ಶುದ್ಧರಾಗಿರುವಂತೆಯೇ ತಮ್ಮನ್ನು ಶುದ್ಧವಾಗಿಟ್ಟುಕೊಳ್ಳುತ್ತಾನೆಪಾಪಮಾಡುವ ಪ್ರತಿಯೊಬ್ಬನೂ ದೇವರ ಆಜ್ಞೆಯನ್ನು ಮೀರುತ್ತಾನೆದೇವರ ಆಜ್ಞೆಯನ್ನು ಉಲ್ಲಂಘಿಸುವುದೇ ಪಾಪ ಪಾಪರಹಿತರಾದ ಕ್ರಿಸ್ತಯೇಸು ಪಾಪಪರಿಹಾರ ಮಾಡಲೆಂದೇ ಕಾಣಿಸಿಕೊಂಡರೆಂದು ನೀವು ಬಲ್ಲಿರಿಅವರಲ್ಲಿ ನೆಲಸಿರುವ ಪ್ರತಿಯೊಬ್ಬನೂ ಪಾಪಮಾಡನುಪಾಪ ಮಾಡುವವನು ಅವರನ್ನು ಕಂಡವನೂ ಅಲ್ಲಅರಿತವನೂ ಅಲ್ಲ.

ಕೀರ್ತನೆ: 98:1, 3-4, 5-6

ಶ್ಲೋಕಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ ನಮ್ಮ ದೇವ ಸಾಧಿಸಿದ ಜಯಗಳಿಕೆ.

 ಶುಭಸಂದೇಶಯೊವಾನ್ನ 1:29-34

ಮರುದಿನ ಯೊವಾನ್ನನುತಾನಿದ್ದಲ್ಲಿಗೇ ಯೇಸುಬರುತ್ತಿರುವುದನ್ನು ಕಂಡು,"ಇಗೋ  ನೋಡಿ,   ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿಲೋಕದ ಪಾಪಗಳನ್ನು ಪರಿಹರಿಸುವವರು ಇವರೇಇವರು 'ನನ್ನ ಬಳಿಕ ಬಂದವರಾದರೂ ನನಗಿಂತಲೂ ಮೊದಲೇ ಇದ್ದವರುಆದುದರಿಂದ ಇವರು ನನಗಿಂತಲೂ ಶ್ರೇಷ್ಟರು," ಎಂದು ನಾನು ಹೇಳಿದುದು ಇವರನ್ನು ಕುರಿತೇಇಸ್ರಯೇಲರಿಗೆ ಇವರನ್ನು ತೋರ್ಪಡಿಸಬೇಕೆಂದೇ ನಾನು ನೀರಿನಿಂದ ಸ್ನಾನದೀಕ್ಷೆ ಕೊಡುತ್ತಾ ಬಂದೆನುಬರಬೇಕಾಗಿದ್ದವರು ಇವರೇ ಎಂದು ನನಗೂ ತಿಳಿದಿರಲಿಲ್ಲ," ಎಂದು ನುಡಿದನುಯೊವಾನ್ನನು ತನ್ನಸಾಕ್ಷ್ಯವನ್ನು ಮುಂದುವರಿಸುತ್ತಾ,"ಪಾರಿವಾಳದ ರೂಪದಲ್ಲಿ ಪವಿತ್ರಾತ್ಮ ಸ್ವರ್ಗದಿಂದ ಇಳಿದುಬಂದು ಅವರ ಮೇಲೆ ನೆಲಸುವುದನ್ನು ನಾನು ನೋಡಿದೆನುಬರಬೇಕಾಗಿದ್ದವರು ಇವರೇ ಎಂದು ನನಗೂ ತಿಳಿದಿರಲಿಲ್ಲ ಆದರೆ ನೀರಿನಿಂದ ಸ್ನಾನದೀಕ್ಷೆ ಕೊಡುವಂತೆ ನನ್ನನ್ನು ಕಳುಹಿಸಿದ ದೇವರು,ಪವಿತ್ರಾತ್ಮ ಇಳಿದುಬಂದು ಯಾವ ವ್ಯಕ್ತಿಯ ಮೇಲೆ ನೆಲಸುವುದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮನಿಂದ ದೀಕ್ಷಸ್ನಾನ ಕೊಡುವಾತ,' ಎಂದಿದ್ದರುಅದನ್ನು ನಾನು ಕಣ್ಣಾರೆ ನೋಡಿದ್ದೇನೆಆದುದರಿಂದ ಅವರೇ ದೇವರ ಪುತ್ರನೆಂದು ಸಾಕ್ಷಿ ನೀಡುತ್ತಿದ್ದೇನೆ," ಎಂದು ಹೇಳಿದನು.

02.01.2019 - ನೀವು ಕ್ರಿಸ್ತ ಯೇಸುವಿನಿಂದ ಅಭಿಷಿಕ್ತರಾಗಿದ್ದೀರಿ.

ಮೊದಲನೇ ವಾಚನ: 1  ಯೊವಾನ್ನ 2:22-28 

ಯೇಸುವೇ ಕ್ರಿಸ್ತ ಎಂಬುದನ್ನು ಯಾರು ಅಲ್ಲಗಳೆಯುತ್ತಾನೋ ಅವನೇ ಅಸತ್ಯವಾದಿ: ಅವನೇ ಕ್ರಿಸ್ತವಿರೋಧಿ. ಅವನು ಪಿತನನ್ನು ಮತ್ತು ಪುತ್ರನನ್ನು ತಿರಸ್ಕರಿಸುತ್ತಾನೆ. ಪುತ್ರನನ್ನು ತಿರಸ್ಕರಿಸುವವನು ಪಿತನನ್ನೂ ತಿರಸ್ಕರಿಸುತ್ತಾನೆ. ಪುತ್ರನನ್ನು ಅಂಗೀಕರಿಸುವವನು ಪಿತನನ್ನೂ ಅಂಗೀಕರಿಸುತ್ತಾನೆ. ಮೊದಲಿನಿಂಲೂ ನೀವು ಯಾವ ಸಂದೇಶವನ್ನು ಕೇಳಿದ್ದೀರೋ ಅದು ನಿಮ್ಮಲ್ಲಿ ನೆಲಸಲಿ. ಮೊದಲಿನಿಂದಲೂ ನೀವು ಕೇಳಿದ ಸಂದೇಶ ನಿಮ್ಮಲ್ಲಿ ನೆಲಸಿದ್ದರೆ ಪುತ್ರನಲ್ಲಿಯೂ ಪಿತನಲ್ಲಿಯೂ ನೀವು ನೆಲಸುತ್ತೀರಿ. ಕ್ರಿಸ್ತಯೇಸು ನಿಮಗೆ ವಾಗ್ದಾನ ಮಾಡಿರುವ ನಿತ್ಯಜೀವ ಇದೇ. ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸಬೇಕೆಂದಿರುವವರನ್ನು ಕುರಿತು ಇದನ್ನು ನಿಮಗೆ ಬರೆದಿದ್ದೇನೆ. ನೀವು ಕ್ರಿಸ್ತ ಯೇಸುವಿನಿಂದ ಅಭಿಷಿಕ್ತರಾಗಿದ್ದೀರಿ. ಆ ಅಭಿಷೇಕವು ನಿಮ್ಮಲ್ಲಿ ನೆಲಸಿದೆ. ಆದ್ದರಿಂದ ಯಾರೂ ನಿಮಗೆ ಬೋಧಿಸುವ ಅವಶ್ಯಕತೆಯಿಲ್ಲ. ಆ ಅಭಿಷೇಕವೇ ನಿಮಗೆ ಎಲ್ಲವನ್ನೂ ಬೋಧಿಸುತ್ತಾ ಬರುತ್ತದೆ. ಈ ಬೋಧನೆ ಸತ್ಯವಾದುದು. ಮಿಥ್ಯವಾದುದಲ್ಲ. ಅದರ ಪ್ರಕಾರವೇ ಕ್ರಿಸ್ತಯೇಸುವಿನಲ್ಲಿ ನೆಲೆಸಿರಿ. ಹೌದು ಪ್ರಿಯಮಕ್ಕಳೇ, ಕ್ರಿಸ್ತಯೇಸು ಪ್ರತ್ಯಕ್ಷರಾಗುವಾಗ, ಅವರ ಪುನರಾಗಮನದ ಪ್ರಯುಕ್ತ ಅವರ ಮುಂದೆ ನಾವು ನಾಚಿಕೆ ಪಡದೆ ಧೈರ್ಯದಿಂದಿರುವಂತೆ ಅವರಲ್ಲಿ ನೆಲೆಗೊಂಡಿರೋಣ. 

ಕೀರ್ತನೆ: 98:1, 2-3, 3-4  
ಶ್ಲೋಕ: ಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ ನಮ್ಮ ದೇವ ಸಾಧಿಸಿದ ಜಯಗಳಿಕೆ. 

ಶುಭಸಂದೇಶ: ಯೊವಾನ್ನ 1:19-28 

ಜೆರುಸಲೇಮಿನ ಯೆಹೂದ್ಯ ಅಧಿಕಾರಿಗಳು, ಯಾಜಕರನ್ನೂ ಲೇವಿಯರನ್ನೂ ಯೊವಾನ್ನನ ಬಳಿಗೆ ಕಳಿಸಿದರು. ಇವರು, "ನೀನು ಯಾರು?" ಎಂದು ಪ್ರಶ್ನಿಸಿದರು. ಯೊವಾನ್ನನು ಅದಕ್ಕೆ ಉತ್ತರವಾಗಿ, "ಅಭಿಷಿಕ್ತನಾದ ಲೋಕೋದ್ಧಾರಕ ನಾನಲ್ಲ," ಎಂದು ಸ್ಪಷ್ಟವಾಗಿ ಹೇಳಿದನು. ಏನನ್ನೂ ಮರೆಮಾಚಲಿಲ್ಲ. ಹಾಗಾದರೆ, "ನೀನು ಎಲೀಯನೋ?" ಎಂದು ಕೇಳಲು 'ಅಲ್ಲ' ಎಂದನು. "ನೀನು ಬರಬೇಕಾಗಿದ್ದ ಪ್ರವಾದಿಯಿರಬಹುದೇ?" ಎಂದು ಅವರು ಮತ್ತೆ ಕೇಳಲು, "ಅದೂ ಅಲ್ಲ," ಎಂದು ಮರುನುಡಿದನು. ಹಾಗಾದರೆ ನೀನು ಯಾರೆಂದು ನಮಗೆ ತಿಳಿಸು. ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರಕೊಡಬೇಕಾಗಿದೆ. ನಿನ್ನನ್ನು ಕುರಿತು ನೀನು ಏನು ಹೇಳುತ್ತಿ?" ಎಂದು ಅವರು ಮತ್ತೊಮ್ಮೆ ಕೇಳಿದರು. ಅದಕ್ಕೆ ಯೊವಾನ್ನನು, "ಪ್ರಭುವಿನ ಮಾರ್ಗವನ್ನು ನೇರಗೊಳಿಸಿರೆಂದು ಬೆಂಗಾಡಿನಲ್ಲಿ ಕೂಗುವವನ ಸ್ವರವೇ ನಾನು," ಎಂದು ಯೆಶಾಯ ಪ್ರವಾದಿಯ ಮಾತುಗಳಲ್ಲೇ ಉತ್ತರಕೊಟ್ಟನು. ಆಗ ಫರಿಸಾಯರ ಕಡೆಯಿಂದ ಬಂದಿದ್ದ ಕೆಲವರು, "ನೀನು ಲೋಕೋದ್ಧಾರಕನಾಗಲಿ, ಎಲೀಯನಾಗಲಿ, ಬರಬೇಕಾಗಿದ್ದ ಪ್ರವಾದಿಯೇ ಆಗಲಿ ಅಲ್ಲವೆಂದ ಮೇಲೆ ಸ್ನಾನದೀಕ್ಷೆ ಕೊಡುವುದೇಕೆ?" ಎಂದು ಪ್ರಶ್ನಿಸಿದರು. ಪ್ರತ್ಯುತ್ತರವಾಗಿ ಯೊವಾನ್ನನು, "ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ನಿಮಗೆ ತಿಳಿಯದ  ಒಬ್ಬ ವ್ಯಕ್ತಿನಿಮ್ಮ ನಡುವೆ ಇದ್ದಾರೆ. ನನ್ನ ಬಳಿಕ ಬರಬೇಕಾಗಿದ್ದವರು ಅವರೇ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ," ಎಂದನು. ಯೊವಾನ್ನನು ಸ್ನಾನದೀಕ್ಷೆ ಕೊಡುತ್ತಿದ್ದ ಜೋರ್ಡಾನ್ ನದಿಯ ಆಚೆದಡದಲ್ಲಿದ್ದ ಬೆಥಾನಿಯ ಎಂಬಲ್ಲಿ ಇದೆಲ್ಲವೂ ನಡೆಯಿತು.

01.01.2019

ಸರ್ವರಿಗೂ  ಹೊಸ ವರ್ಷದ ಶುಭಾಶಯಗಳು 

ಮೊದಲನೇ ವಾಚನ: ಸಂಖ್ಯಾಕಾಂಡ 6:22-27 

ಸರ್ವೇಶ್ವರ ಮೋಶೆಗೆ ಹೀಗೆಂದರು:  ನೀನು ಆರೋನನಿಗೂ ಅವನ ಮಕ್ಕಳಿಗೂ ಹೀಗೆ ಆಜ್ಞಾಪಿಸು: 'ನೀವು ಇಸ್ರಯೇಲರನ್ನು ಆಶೀರ್ವದಿಸುವಾಗ ಈ ಪ್ರಕಾರ ಹೇಳಬೇಕು - ಸರ್ವೇಶ್ವರ ನಿಮ್ಮನ್ನು ಆಶೀರ್ವದಿಸಿ, ಕಾಪಾಡಲಿ! ಸರ್ವೇಶ್ವರ ಪ್ರಸನ್ನಮುಖದಿಂದ ನಿಮ್ಮನ್ನು ನೋಡಿ, ನಿಮಗೆ ದಯೆತೋರಲಿ! ಸರ್ವೇಶ್ವರ ನಿಮ್ಮ ಮೇಲೆ ಕೃಪಾಕಟಾಕ್ಷವಿಟ್ಟು, ಶಾಂತಿಯನ್ನು ಅನುಗ್ರಹಿಸಲಿ!' ಹೀಗೆ ಅವರು ಇಸ್ರಯೇಲರ ಮೇಲೆ ನನ್ನ ಹೆಸರನ್ನು ಉಚ್ಚರಿಸುವಾಗ ನಾನು ಅವರನ್ನು ಆಶೀರ್ವದಿಸುವೆನು." 

ಕೀರ್ತನೆ: 67:2-3, 5, 6, 8 

ಶ್ಲೋಕ :ಹರಸು ದೇವಾ, ನಮ್ಮನಾಶೀರ್ವದಿಸು 

ಎರಡನೇ ವಾಚನ: ಗಲಾತ್ಯರಿಗೆ 4:4-7 

ಕಾಲವು ಪರಿಪಕ್ವವಾದಾಗ ದೇವರು ತಮ್ಮ ಪುತ್ರನನ್ನೇ ಕಳುಹಿಸಿಕೊಟ್ಟರು. ಇವರು ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಬಿಡುಗಡೆ ಮಾಡುವುದಕ್ಕಾಗಿಯೂ ದೇವಪುತ್ರರ ಪದವಿಯನ್ನು ನಮಗೆ ಒದಗಿಸಿಕೊಡುವುದಕ್ಕಾಗಿಯೂ ಒಬ್ಬ ಸ್ತ್ರೀಯಲ್ಲಿ ಜನಿಸಿದರು; ಧರ್ಮಶಾಸ್ತ್ರಕ್ಕೆ ಅಧೀನರಾಗಿಯೇ ಹುಟ್ಟಿದರು, ನೀವು ದೇವರ ಮಕ್ಕಳಾಗಿರುವುದರಿಂದಲೇ, "ಅಪ್ಪ, ತಂದೆಯೇ," ಎಂದು ಕರೆಯುವ ತಮ್ಮಪುತ್ರನ ಆತ್ಮವನ್ನು ದೇವರು ನಮ್ಮ ಹೃದಯಗಳಿಗೆ ಕಳುಹಿಸಿದ್ದಾರೆ. ಆದ್ದರಿಂದ, ದೇವರ ಅನುಗ್ರಹದಿಂದಲೇ ನೀನು ಇನ್ನು ಮನೆಯಾಳಲ್ಲ, ಮಗನಾಗಿದ್ದೀ, ಮಗನೆಂದ ಮೇಲೆ ನೀನು ವಾರಸುದಾರನೂ ಹೌದು. 

 ಶುಭಸಂದೇಶ: ಲೂಕ 2:16-21

ಕುರುಬರು ತ್ವರೆಯಾಗಿ ಹೋಗಿ, ಮರಿಯಳನ್ನೂ ಜೋಸೆಫನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡರು, ಕಂಡ ಮೇಲೆ ಆ ಮಗುವಿನ ವಿಷಯವಾಗಿ ದೂತನು ತಮಗೆ ಹೇಳಿದ್ದನ್ನೆಲ್ಲ ಅವರಿಗೆ ತಿಳಿಯಪಡಿಸಿದರು. ಕುರುಬರು ಹೇಳಿದ ವಿಷಯವನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು. ಮರಿಯಳಾದರೋ ಈ ವಿಷಯಗಳನ್ನೆಲ್ಲಾ ಮನಸ್ಸಿನಲ್ಲಿಯೇ ಇಟ್ಟುಕೊಂಡು ಆಲೋಚಿಸುತ್ತಾ ಬಂದಳು. ಇತ್ತ, ಕುರುಬರುತಾವು ಕೇಳಿದ್ದನ್ನು ನೆನೆಯುತ್ತಾ, ದೇವರ ಮಹಿಮೆಯನ್ನು  ಸಾರುತ್ತಾ, ಕೊಂಡಾಡುತ್ತಾ ಹಿಂದಿರುಗಿದರು. ದೇವದೂತನು ಅವರಿಗೆ ತಿಳಿಸಿದಂತೆ ಎಲ್ಲವೂ ಸಂಭವಿಸಿತು. ಎಂಟನೆಯ ದಿನ ಶಿಶುವಿಗೆ ಸುನ್ನತಿ ಮಾಡಬೇಕಾಗಿದ್ದ ಸಂದರ್ಭದಲ್ಲಿ ಅದಕ್ಕೆ 'ಯೇಸು' ಎಂಬ ಹೆಸರನ್ನಿಟ್ಟು ನಾಮಕರಣ ಮಾಡಿದರು. ಈ ಹೆಸರನ್ನು ಮರಿಯಳು ಗರ್ಭಿಣಿಯಾಗುವುದಕ್ಕೆ ಮುಂಚೆಯೇ ದೂತನು ಸೂಚಿಸಿದ್ದನು.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...