08.07.2018 - ಸಾಧಾರಣ ಕಾಲದ ಹದಿನಾಲ್ಕನೆಯ ಭಾನುವಾರ




ಮೊದಲನೇ ವಾಚನ: ಯೆಜೆಕಿಯೇಲ 2:2-5

ಅವರು ಈ ಮಾತನ್ನು ಹೇಳಿದ ಕೂಡಲೇ ದೇವರಾತ್ಮ ನನ್ನೊಳಗೆ ಸೇರಿ ನಾನು ಎದ್ದು ನಿಂತುಕೊಳ್ಳುವಂತೆ ಮಾಡಿತು; ಆಗ ನನ್ನೊಡನೆ ಮಾತಾಡಿದಾತನ ನುಡಿಯನ್ನು ಚೆನ್ನಾಗಿ ಕೇಳಿದೆ. ಆತ ನನಗೆ ಹೀಗೆ ಹೇಳಿದನು. "ನರಪುತ್ರನೇ, ನನಗೆ ವಿಮುಖರಾಗಿ ದ್ರೋಹಮಾಡಿದ ಜನಾಂಗದವರಾದ ಇಸ್ರಯೇಲರ ಬಳಿಗೆ ನಿನ್ನನ್ನು ಕಳುಹಿಸುವೆನು; ಈ ದಿನದವರೆಗೆ ಅವರೂ ಅವರ ಪಿತೃಗಳೂ ನನ್ನನ್ನು ಪ್ರತಿಭಟಿಸುತ್ತಲೇ ಬಂದಿದ್ದಾರೆ. ನಾನು ಯಾವ ಸಂತಾನದವರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಆ ಸಂತಾನದವರು ನಾಚಿಕೆಗೆಟ್ಟವರೂ ಹಠಗಾರರೂ ಆಗಿದ್ದಾರೆ; ನೀನು ಅವರಿಗೆ "ಸರ್ವೇಶ್ವರನಾದ ದೇವರೇ ಇಂತೆನ್ನುತ್ತಾರೆ,"ಎಂದು ನುಡಿ. ಅವರು ದ್ರೋಹಿ ವಂಶದವರು, ಒಂದು ವೇಳೆ ಕೇಳದೆ ಹೋಗಬಹುದು. ಕೇಳಿದರೂ ಕೇಳದೆ ಹೋದರೂ ಒಬ್ಬ ಪ್ರವಾದಿ ತಮ್ಮ ಮಧ್ಯೆ ಕಾಣಿಸಿಕೊಂಡಿದ್ದಾನೆಂದು ತಿಳಿದುಕೊಳ್ಳುವರು. 

ಕೀರ್ತನೆ: 123:1-2, 2, 3-4
ಶ್ಲೋಕ: ನನ್ನ ಕಣ್ಣುಗಳನು ನಿನ್ನ ಕಡೆಗೆ ಎತ್ತಿರುವೆ ಪ್ರಭೂ

ಎರಡನೇ ವಾಚನ: 2 ಕೊರಿಂಥಿಯರಿಗೆ 12:7-10

 ನನಗೆ ತಿಳಿಸಲಾದ ಗಹನ ಸತ್ಯಗಳಿಂದ ನಾನು ಉಬ್ಬಿಹೋಗದ ಹಾಗೆ ನನ್ನ ದೇಹದಲ್ಲಿ ಶೂಲದಂತೆ ನಾಟಿರುವ ಬೇನೆಯೊಂದನ್ನು ನನಗೆ ಕೊಡಲಾಯಿತು. ನಾನು ಅಹಂಕಾರಪಡದ ಹಾಗೆ ಇದು ನನ್ನನ್ನು ತವಿತಿವಿದು ಸೈತಾನನ ದೂತನಂತೆ ಕಾಡಿಸುತ್ತಿತ್ತು. ಈ ಪೀಡೆ ನನ್ನನ್ನು ಬಿಟ್ಟು ತೊಲಗಲೆಂದು ನಾನು ಮೂರು ಸಾರಿ ಪ್ರಭುವಿನಲ್ಲಿ ಬೇಡಿಕೊಂಡೆ. ಅದಕ್ಕವರು, "ನನ್ನ ಅನುಗ್ರಹವೇ ನಿನಗೆ ಸಾಕು. ನನ್ನ ಶಕ್ತಿ ಪರಿಪಕ್ವವಾಗುವುದು ನಿಶ್ಯಕ್ತಿಯಲ್ಲಿಯೇ," ಎಂದು ಹೇಳಿದರು. ಕ್ರಿಸ್ತಯೇಸುವಿನ ಶಕ್ತಿ ನನ್ನಲ್ಲಿ ನೆಲಸುವಂತೆ ನನ್ನ ನಿಶ್ಯಕ್ತಿಯನ್ನು ಕುರಿತು ಮತ್ತಷ್ಟು ಹೆಮ್ಮೆಪಡುತ್ತೇನೆ. ದುರ್ಲಬತೆಗಳಲ್ಲೂ ದುರವಸ್ಥೆಗಳಲ್ಲೂ ಮಾನನಷ್ಟದಲ್ಲೂ ಕಷ್ಟ ಹಿಂಸೆಗಳಲ್ಲೂ. ಆಪತ್ತುವಿಪತ್ತುಗಳಲ್ಲೂ ನಾನು ಕ್ರಿಸ್ತ ಯೇಸುವಿನ ನಿಮಿತ್ತ ಸಂತುಷ್ಪನಾಗಿದ್ದೇನೆ. ನಾನ ಬಲಿಶಾಲಿಯಾಗಿರುವುದು ಬಲಹೀನನಾಗಿರುವಾಗಲೇ.

ಶುಭಸಂದೇಶ: ಮಾರ್ಕ 6:1-6

ಯೇಸುಸ್ವಾಮಿ ಅಲ್ಲಿಂದ ಹೊರಟು ತಮ್ಮ ಸ್ವಂತ ಊರಿಗೆ ಹೋದರು. ಶಿಷ್ಯರು ಅವರನ್ನು ಹಿಂಬಾಲಿಸಿದರು. ಸಬ್ಬತ್ ದಿನ ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಉಪದೇಶ ಮಾಡತೊಡಗಿದರು. ಕಿಕ್ಕಿರಿದು ನೆರೆದಿದ್ದ ಜನರು ಯೇಸುವಿನ ಭೋಧನೆಯನ್ನು ಕೇಳಿ ಬೆರಗಾದರು. "ಇದೆಲ್ಲಾ ಇವನಿಗೆ ಎಲ್ಲಿಂದ ಬಂದಿತು? ಇವನು ಪಡೆದಿರುವ ಜ್ಞಾನವಾದರೂ ಎಂಥದ್ದು? ಇವನಿಂದ ಮಹತ್ಕಾರ್ಯಗಳು ಆಗುವುದಾದರೂ ಹೇಗೆ? ಇವನು ಆ ಬಡಗಿಯಲ್ಲವೇ? ಮರಿಯಳ ಮಗನಲ್ಲವೇ? ಯಾಕೋಬ, ಯೋಸೆ, ಯೂದ ಮತ್ತು ಸಿಮೋನ ಇವರ ಸಹೋದರರಲ್ಲವೇ ಇವನ ಸಹೋದರಿಯರು ಇಲ್ಲಿಯೇ ವಾಸಮಾಡುತ್ತಿಲ್ಲವೇ?" ಎಂದು ಹೇಳುತ್ತಾ ಯೇಸುವನ್ನು ತಾತ್ಸಾರ ಮಾಡಿದರು. ಆಗ ಯೇಸು, "ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು. ಆದರೆ ಸ್ವಗ್ರಾಮದಲ್ಲಿ, ಸ್ವಗ್ರಹದಲ್ಲಿ ಗೌರವ ದೊರಕದು." ಎಂದರು. ಕೆಲವು ರೋಗಿಗಳ ಮೇಲೆ ಕೈಗಳನ್ನಿರಿಸಿ ಅವರನ್ನು ಗುಣಪಡಿಸಿದ್ದನ್ನು ಬಿಟ್ಟರೆ ಇನ್ನಾವ ಮಹತ್ತಾದ ಕಾರ್ಯಗಳನ್ನೂ ಅವರು ಅಲ್ಲಿ ಮಾಡಲಿಲ್ಲ. ಆ ಜನರ ಅವಿಶ್ವಾಸವನ್ನು ಕಂಡು ಯೇಸುವಿಗೆ ಬಹಳ ಅಚ್ಚರಿಯಾಯಿತು.

ಸಂತ ಹಿಸ್ಪೇರಿಯಸ್

07.07.2018

ಮೊದಲನೇ ವಾಚನ: ಆಮೋಸ 9:11-15 



ಸರ್ವೇಶ್ವರ ಇಂತೆನ್ನುತ್ತಾರೆ: "ದಿನ ಬರಲಿದೆ, ಅಂದು ಬಿದ್ದುಹೋಗಿರುವ ದಾವೀದನ ಗುಡಾರವನ್ನು ಮರಳಿ ಎಬ್ಬಿಸುವೆನು. ಅದರ ಬಿರುಕುಗಳನ್ನು ಮುಚ್ಚುವೆನು. ಹಾಳಾದುದ್ದನ್ನು ಎತ್ತಿ ನಿಲ್ಲಿಸುವೆನು. ಮೊದಲು ಇದ್ದಂತೆಯೇ ಪುನಃ ನಿರ್ಮಿಸುವೆನು. ಹೀಗೆ ನನ್ನ ಜನರು ಎದೋಮಿನ ಮಿಕ್ಕ ಭಾಗವನ್ನೂ ಸರ್ವೇಶ್ವರನ ಪ್ರಜೆ ಎನ್ನಿಸಿಕೊಂಡ ಸಕಲ ಜನಾಂಗಗಳನ್ನೂ ಸ್ವಾಧೀನಪಡಿಸಿಕೊಳ್ಳುವರು. ಈ ಕಾರ್ಯವನ್ನು  ಸಾಧಿಸುವಂಥ ಸರ್ವೆಶ್ವರಸ್ವಾಮಿಯ ನುಡಿಯಿದು; ಕಾಲ ಬರುವುದು; ಆಗ ಹೊಸಬಿತ್ತನೆಯಾಗುವುದು ಕೊಯ್ಯುವವನ ಹಿಂದೆಯೇ; ಹೊಸ ಫಸಲು ಸಿದ್ಧವಾಗುವುದು ದ್ರಾಕ್ಷಿ ತುಳಿಯುವವನ ಮುಂದೆಯೇ. ಸುರಿಸುವುವು ದ್ರಾಕ್ಷಾರಸವನ್ನು ಬೆಟ್ಟಗಳು ಕರಗುವಂತಿರುವುವು ಅದರಿಂದ ಎಲ್ಲ ಗುಡ್ಡಗಳು. ಸನಾತನ ಸೌಭಾಗ್ಯಕ್ಕೆ ಮರಳಿಸುವೆನು ನನ್ನ ಜನರಾದ ಇಸ್ರಯೇಲರನು. ವಾಸಮಾಡುವವರು ಪಳುಬಿದ್ದ ಪಟ್ಟಣಗಳನ್ನು ಮತ್ತೆ ಕಟ್ಟಿಕೊಂಡು. ಕುಡಿಯುವರು ಸಮೃದ್ಧಯಾಗಿ ದ್ರಾಕ್ಷಾತೋಟಗಳನ್ನು ಮಾಡಿಕೊಂಡು. ತಿನ್ನುವರು ಯಥೇಚ್ಛವಾಗಿ ಫಲವೃಕ್ಷಗಳನ್ನು ಬೆಳೆಸಿಕೊಂಡು. ಬೇರೂರೀಸುವೆನು ಅವರನ್ನು ಸ್ವಂತನಾಡಲ್ಲಿ ಕೀಳರಾರೂ ಅವರನ್ನು ಅಲ್ಲಿಂದ ಮರಳಿ." ಇದು ನಿನ್ನ ದೇವರಾದ ಸರ್ವೇಶ್ವರನ ನುಡಿ.  

ಕೀರ್ತನೆ: 85:9, 10, 11-12, 13-14 

ಶ್ಲೋಕ: ಭಯಭಕ್ತಿಯುಳ್ಳವರಿಗಾತನ ರಕ್ಷಣೆ ಸನ್ನಿಹಿತ.  

ಶುಭಸಂದೇಶ: ಮತ್ತಾಯ  9:14-17 

ಬಳಿಕ ಯೊವಾನ್ನನ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದರು. "ನಾವೂ ಫರಿಸಾಯರೂ ಉಪವಾಸ ವೃತವನ್ನು ಕೈಗೊಳ್ಳುತ್ತೇವೆ. ಆದರೆ ನಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ?" ಎಂದು ಪ್ರಶ್ನೆ ಹಾಕಿದರು. ಅದಕ್ಕೆ ಯೇಸು, "ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದುಃಖಪಡುವುದುಂಟೇ? ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲವು ಬರುವುದು; ಅಗ ಅವರು ಉಪವಾಸ ಮಾಡುವರು. "ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ. ಏಕೆಂದರೆ ಹೊಸ ತೇಪೆಯು ಹಳೆಯ ಅಂಗಿಯನ್ನು ಹಿಂಜುವುದರಿಂದ ‌ಹರಕು ಹೆಚ್ಚಾಗುತ್ತದೆ. ಅಂತೆಯೇ ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ತುಂಬಿಡುವುದಿಲ್ಲ. ತುಂಬಿಟ್ಟರೆ ಬುದ್ದಲಿಗಳು ಬಿರಿಯುತ್ತವೆ, ಮದ್ಯವು ಚೆಲ್ಲಿ ಹೋಗುತ್ತದೆ; ಬುದ್ದಲಿಗಳೂ ಹಾಳಾಗುತ್ತವೆ. ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡುತ್ತಾರೆ. ಆಗ ಎರಡೂ ಉಳಿಯುತ್ತವೆ." ಎಂದರು.

06.07.2018

ಮೊದಲನೇ ವಾಚನ:ಆಮೋಸ 8:4-6, 9-12 

ದಿಕ್ಕಿಲ್ಲದವರನ್ನು ತುಳಿದುಬಿಡುವವರೇ, ನಾಡಿನ ಬಡವರನ್ನು ನಿರ್ಮೂಲ ಮಾಡುವವರೇ, ಕೇಳಿ, "ದವಸ ಧಾನ್ಯಗಳನ್ನು ಮಾರಬೇಕಲ್ಲ. ಈ ಅಮವಾಸ್ಯ ತೀರುವುದು ಯಾವಾಗ? ಗೋದಿಯ ವ್ಯಾಪಾರ ಮಾಡಬೇಕಾಗಿದೆ. ಸಬ್ಬತ್ ದಿನ ಕಳೆಯುವುದು  ಯಾವಾಗ? ಕೊಳಗವನ್ನು ಕಿರಿದು ಮಾಡೋಣ. ತೊಲವನ್ನು ಹಿರಿದು ಮಾಡೋಣ. ಕಳ್ಳತಕ್ಕಡಿಯನ್ನು ಬಳಸೋಣ; ಬಡವರನ್ನು ಬೆಳ್ಳಿಗೆ, ದಿಕ್ಕಿಲ್ಲದವರನ್ನು ಒಂದು ಜೊತೆ ಕೆರಕ್ಕೆ ಕೊಂಡುಕೊಳ್ಳೋಣ; ಗೋದಿಯ ನುಚ್ಚುನುಸಿಯನ್ನೂ ಬಿಡದಂತೆ ಮಾರಿಬಿಡೋಣ," ಎಂದುಕೊಳ್ಳುತ್ತೀರಿ, ಅಲ್ಲವೇ? ಒಡೆಯರಾದ ಸರ್ವೇಶ್ವರ ಇಂತೆನ್ನುತ್ತಾರೆ: "ಆ ದಿನದಂದು ನಡು ಮದ್ಯಾಹ್ನದಲ್ಲಿ ಸೂರ್ಯನನ್ನು ಮುಳುಗಿಸುವೆನು. ಹಾಡು ಹಗಲಲ್ಲೇ ಭೂಮಿಯನ್ನು ಕತ್ತಲಾಗಿಸುವೆನು. ನಿಮ್ಮ ಕೊಂಡಾಟದ ದಿನಗಳನ್ನು ಗೋಳಾಟದ ದಿನಗಳನ್ನಾಗಿ ಮಾರ್ಪಡಿಸುವೆನು. ನಿಮ್ಮ ಹರ್ಷಗೀತಗಳನ್ನು ಶೋಕಗೀತೆಗಳನ್ನಾಗಿ ಬದಲಾಯಿಸುವೆನು. ನೀವೆಲ್ಲರೂ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಂಡು, ತಲೆ ಬೋಳಿಸಿಕೊಳ್ಳುವಂತೆ ಮಾಡುವೆನು. ಏಕಮಾತ್ರ ಪುತ್ರನನ್ನು ಕಳೆದುಕೊಂಡವರಂತೆ ನೀವು ಅತ್ತು ಪ್ರಲಾಪಿಸುವಿರಿ. ಆ ದಿನವೆಲ್ಲಾ ನಿಮಗೆ ಕರಾಳ ದಿನವಾಗುವುದು." ಒಡೆಯರಾದ ಸರ್ವೇಶ್ವರ ಇಂತೆನ್ನುತ್ತಾರೆ: "ದಿನಗಳು ಬರಲಿವೆ ಅಂದು ನಾಡಿನಲ್ಲಿ ಕ್ಷಾಮವನ್ನುಂಟುಮಾಡುವೆನು. ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವೂ ಅಲ್ಲ; ಸರ್ವೇಶ್ವರನ ಸಂದೇಶಕ್ಕಾಗಿ ಹಸಿದು ಹಂಬಲಿಸುವ ಕ್ಷಾಮ. ಜನರು ಸಮುದ್ರದಿಂದ ಸಮುದ್ರದವರೆಗೆ ಉತ್ತರದಿಂದ ಪೂರ್ವದವರೆಗೆ ಅತ್ತಿತ್ತ ಹುಡುಕುತ್ತಾ ಬಳಲಿ ಹೋಗುವರು. ಆದರೂ ಅದು ಸಿಗದು." 

ಕೀರ್ತನೆ: 119:2, 10, 20, 30, 40, 131 

ಶ್ಲೋಕ: ಮಾನವನು ಜೀವಿಸುವುದು ದೇವರಾಡುವ ಪ್ರತಿಯೊಃದು ನುಡಿಯಿಂದ. 

ಶುಭ ಸಂದೇಶ : ಮತ್ತಾಯ 9:9-13

 ಆ ಸ್ಥಳವನ್ನು ಬಿಟ್ಟು ಮುಂದಕ್ಕೆ ಹೋಗುತ್ತಿದ್ದಾಗ ಮತ್ತಾಯ ಎಂಬುವನನ್ನು ಕಂಡರು. ಅವನು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿದ್ದನು. "ನನ್ನನ್ನು ಹಿಂಬಾಲಿಸು," ಎಂದು ಹೇಳಿ ಯೇಸು ಅವನ್ನನ್ನು ಕರೆದರು. ಮತ್ತಾಯನು ಎದ್ದು ಅವರನ್ನು ಹಿಂಬಾಲಿಸಿದನು. ಇದಾದ ಮೇಲೆ ಯೇಸು ಸ್ವಾಮಿ ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಬಹುಮಂದಿ "ಸಂಕದವರೂ", "ಪಾಪಿಷ್ಟರೂ" ಅಲ್ಲಿಗೆ ಬಂದರು. ಯೇಸು ಮತ್ತು ಅವರ ಶಿಷ್ಯರು ಕುಳಿತ್ತಿದ್ದ ಪಂಕ್ತಿಯಲ್ಲೇ ಇವರೂ ಊಟಕ್ಕೆ ಕುಳಿತರು. ಫರಿಸಾಯರು ಇದನ್ನು ಕಂಡದ್ದೇ ಯೇಸುವಿನ ಶಿಷ್ಯರನ್ನು ಉದ್ದೇಶಿಸಿ, "ನಿಮ್ಮ ಗುರು ಇಂತಹ ಬಹಿಷ್ಕ್ರತ ಜನರ ಜೊತೆಯಲ್ಲಿ ಊಟ ಮಾಡುವುದೇ?" ಎಂದು ಆಕ್ಷೇಪಿಸಿದರು. ಇದನ್ನು ಕೇಳಿಸಿಕೊಂಡ ಯೇಸು, "ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ; ಆರೋಗ್ಯವಂತರಿಗಲ್ಲ. ನೀವು ಹೋಗಿ, 'ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ" ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ, ನಾನು ಕರೆಯಲು ಬಂದಿರುವುದು ಧರ್ಮಿಷ್ಠರನ್ನಲ್ಲ, ಪಾಪಿಷ್ಟರನ್ನು" ಎಂದರು.

05.07.2018

ಮೊದಲನೇ ವಾಚನ: ಆಮೋಸ 7:10-17 


ತರುವಾಯ ಬೇತೇಲಿನ ಯಾಜಕನಾದ ಆಮಚ್ಯನು ಇಸ್ರಯೇಲಿನ ಅರಸ ಯಾರೊಬ್ದಾಮನಿಗೆ ಹೀಗೆಂದು ಹೇಳಿಕಳುಹಿಸಿದನು: "ಆಮೋಸನು ನಿನಗೆ ವಿರುದ್ದವಾಗಿ ಇಸ್ರಯೇಲರಲ್ಲಿ ಒಳಸಂಚು ಹೂಡಿದ್ದಾನೆ. ಅವನ ಮಾತುಗಳನ್ನು ನಾಡು ಸಹಿಸಲಾರದು. ಏಕೆಂದರೆ, "ಯಾರೊಬ್ಬಾಮನು ಖಡ್ಗದಿಂದ ಹತನಾಗುವನು. ಇಸ್ರಯೇಲ್ ಸ್ವಂತ ನಾಡಿನಿಂದ ಪರದೇಶಕ್ಕೆ ಒಯ್ಯಲ್ಪಡುವುದು ಖಂಡಿತ ಎಂದು ಅವನು ನುಡಿದಿದ್ದಾನೆ." ಆ ಬಳಿಕ ಆಮಚ್ಯನು ಆಮೋಸನಿಗೆ, "ಕಣಿ ಹೇಳುವವನೇ, ತೊಲಗು, ಜುದೇಯ ನಾಡಿಗೆ ಓಡಿಹೋಗು; ಅಲ್ಲಿ ಪ್ರವಾದನೆಮಾಡಿ ಹೊಟ್ಟೆ ಹೊರೆದುಕೊ. ಬೇತೇಲಿನಲ್ಲಿ ಇನ್ನು ಪ್ರವಾದನೆ ಮಾಡಬೇಡ. ಇದು ರಾಜನ ಗರ್ಭಗುಡಿ, ರಾಜ್ಯದ ಪವಿತ್ರಾಲಯ," ಎಂದನು. ಅದಕ್ಕೆ ಆಮೋಸನು ಪ್ರತ್ಯುತ್ತರವಾಗಿ: "ನಾನು ಪ್ರವಾದಿಯಲ್ಲ, ಪ್ರವಾದಿಯ ಮಗನೂ ಅಲ್ಲ. ನಾನೊಬ್ಬ ಗೊಲ್ಲ, ಹತ್ತಿಹಣ್ಣನ್ನು ಕೀಳುವವನು. ಮಂದೆಕಾಯುವುದರಿಂದ ಸರ್ವೇಶ್ವರ ನನ್ನನ್ನು ಬಿಡಿಸಿದರು. ನೀನು ಹೋಗಿ ನನ್ನ ಜನರಾದ ಇಸ್ರಯೇಲರಿಗೆ ಪ್ರವಾದನೆಮಾಡು" ಎಂದು ಹೇಳಿಕಳುಹಿಸಿದರು. "ಆದ್ದರಿಂದ ಆ ಸರ್ವೇಶ್ವರಸ್ವಾಮಿಯ ವಾಕ್ಯವನ್ನು ಗಮನಿಸು; "ಇಸ್ರಯೇಲಗೆ ವಿರುದ್ದ ಪ್ರವಾದನೆ ಮಾಡಬೇಡ; ಇಸಾಕನ ಮನೆತನದ ವಿರುದ್ಧ ಮಾತೆತ್ತಬೇಡ; ಎಂದ ನೀನು ಹೇಳುತ್ತಿಯಲ್ಲವೇ? ನೀನು ಹೀಗೆ ಹೇಳಿದ್ದರಿಂದ ಸರ್ವೇಶ್ವರ ಇಂತೆನ್ನುತ್ತಾರೆ: "ನಿನ್ನ ಹೆಂಡತಿ ಈ ಪಟ್ಟಣದಲ್ಲಿ  ವೇಶ್ಯೆಯಾಗುವಳು. ನಿನ್ನ ಪುತ್ರ ಪುತ್ರಿಯರ ಕತ್ತಿಗೆ ತುತ್ತಾಗುವರು. ನಿನ್ನ ನಾಡನ್ನು ಶತ್ರುಗಳು ವಶಪಡಿಸಿಕೊಂಡು ಹಂಚಿಕೊಳ್ಳುವರು. ನೀನು ಸಹ ಅಪವಿತ್ರವಾದ ನಾಡಿನಲ್ಲಿ ಸಾಯುವೆ. ಇಸ್ರಯೇಲರು ಖಂಡಿತವಾಗಿ ಸ್ವಂತ ನಾಡಿನಿಂದ ಪರದೇಶಕ್ಕೆ ಸೆರೆಯಾಗಿ ಹೋಗುವವರು", ಎಂದು ಹೇಳಿದನು.


ಕೀರ್ತನೆ: 19:8, 9, 10, 11 

ಶ್ಲೋಕ: ಪ್ರಭುವಿನ ತೀರ್ಪು ಯಥಾರ್ಥ, ನ್ಯಾಯಯುತ. 

ಶುಭಸಂದೇಶ: ಮತ್ತಾಯ 9:1-8 

ಯೇಸುಸ್ವಾಮಿ ದೋಣಿ ಹತ್ತಿ ಮರಳಿ ಸರೋವರವನ್ನು ದಾಟಿ ಸ್ವಂತ ಊರಿಗೆ ಬಂದರು. ಆಗ ಜನರು ಒಬ್ಬ ಪಾರ್ಶ್ವವಾಯು ರೋಗಿಯನ್ನುಹಾಸಿಗೆಯ ಸಮೇತ ಹೊತ್ತುಕೊಂಡು ಅವರ ಬಳಿಗೆ ತಂದರು. ಯೇಸು ಅವರ ವಿಶ್ವಾಸವನ್ನು ಮೇಚ್ಚಿ, ಆ ಪಾರ್ಶ್ವವಾಯು ರೋಗಿಗೆ. "ಮಗು ದೈರ್ಯದಿಂದಿರು. ನಿನ್ನ ಪಾಪಗಳು ಕ್ಷಮಿಸಲಾಗಿದೆ," ಎಂದರು. ಆಗ ಅಲ್ಲಿದ್ದ ಧರ್ಮಶಾಸ್ತ್ರಗಳಲ್ಲಿ ಕೆಲವರು, "ಇವನು ದೇವದೂಷಣೆ ಮಾಡುತ್ತಿದ್ದಾನೆ," ಎಂದುಕೊಂಡರು. ಯೇಸು ಅವರ ಆಲೋಚನೆಗಳನ್ನು ಅರಿತುಕೊಂಡು, "ನೀವು ಮನಸ್ಸಿನಲ್ಲೇಕೆ ದುರಾಲೋಚನೆ ಮಾಡುತ್ತಿದ್ದೀರಿ? "ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ" ಎನ್ನುವುದು ಸುಲಭವೋ ಅಥವ "ಎದ್ದು ನಡೆ" ಎನ್ನುವುದು ಸುಲಭವೋ? ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸಲು ನರಪುತ್ರನಿಗೆ ಅಧಿಕಾರ ಉಂಟೆಂದು ಈ ಮೂಲಕ ನಿಮಗೆ ಖಚಿತವಾಗಬೇಕು," ಎಂದು ಹೇಳಿ, ಆ ಪಾರ್ಶ್ವವಾಯು ರೋಗಿಯನ್ನು ನೋಡಿ, "ಎದ್ದೇಳು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು" ಎಂದರು. ಅದರಂತೆಯೇ, ಆರೋಗಿ ಎದ್ದು ಮನೆಗೆ ಹೊರಟುಹೋದನು. ಇದನ್ನು ಕಂಡ ಜನರು ತಲ್ಲಣಗೊಂಡರು. ಮಾನವನಿಗೆ ಇಂಥ ಅಧಿಕಾರ ಕೊಟ್ಟ ದೇವರನ್ನು ಕೊಂಡಾಡಿದರು.

04.07.2018

ಮೊದಲನೇ ವಾಚನ: ಆಮೋಸ: 5: 14-15, 21-24

ಕೆಟ್ಟದ್ದನ್ನು ಬಿಟ್ಟುಬಿಡಿ, ಒಳ್ಳೆಯದನ್ನು ಆಸಕ್ತಿಯಿಂದ ಮಾಡಿ; ನೀವು ಬಾಳುವಿರಿ. ಆಗ ನೀವು ಹೇಳಿಕೊಳ್ಳುವಂತೆ, ಸೇನಾಧೀಶ್ವರ ದೇವರಾದ ಸರ್ವೇಶ್ವರ ನಿಮ್ಮೊಡನೆ ಇರುವರು. ಕೆಟ್ಟದ್ದನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ. ನ್ಯಾಯ ಮಂಟಪದಲ್ಲಿ ಸತ್ಯಕ್ಕೆ ಜಯವಾಗುವಂತೆ ನೋಡಿಕೊಳ್ಳಿರಿ. ಆಗ ಬಹುಶಃ ಸೇನಾಧೀಸ್ವರ ದೇವರಾದ ಸರ್ವೇಶ್ವರ ಅಳಿದುಳಿದ ಜೋಸೆಫನ  ವಂಶಕ್ಕೆ ಕರುಣೆ ತೋರಿಯಾರು. "ನಿಮ್ಮ ಹಬ್ಬಹುಣ್ಣಿಮೆಗಳನ್ನು ಹಗೆ ಮಾಡುತ್ತೇನೆ, ತುಚ್ಚೀಕರಿಸುತ್ತೇನೆ. ನಿಮ್ಮ ಉತ್ಸವಗಳ ವಾಸನೆಯೂ ನನಗೆ ಬೇಡ. ನೀವು ನನಗೆ ದಹನ ಬಲಿದಾನಗಳನ್ನು, ಧಾನ್ಯ ನೈವೇದ್ಯಗಳನ್ನು ಅರ್ಪಿಸುವುದಕ್ಕೆ ಬಂದರೂ ನಾನು ಅವುಗಳನ್ನು ಸ್ವೀಕರಿಸುವುದಿಲ್ಲ. ಸಮಾಧಾನದ ಯಜ್ನವಾಗಿ ನೀವು ಒಪ್ಪಿಸುವ ಕೊಬ್ಬಿದ ಪಶುಗಳನ್ನು ನಾನು ಕಟಾಕ್ಷಿಸೆನು. ನಿಮ್ಮ ಭಜನೆ ನಿಂತು ಹೋಗಳಿ; ನಿಮ್ಮ ವೀಣಾ ವಾದ್ಯಗಳು ತೊಲಗಲಿ. ನ್ಯಾಯ ನೀತಿ ಹೊಳೆಯಂತೆ ಹರಿಯಲಿ; ಸದ್ಧರ್ಮ ಮಹಾನದಿಯಂತೆ ಪ್ರವಹಿಸಲಿ.

ಕೀರ್ತನೆ: 50: 7, 8-9, 10-11, 12-13, 16ಬಿಸಿ - 17

ಶ್ಲೋಕ: ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ಧಾರವನು



ಶುಭಸಂದೇಶ: ಮತ್ತಾಯ: 8: 28-34


ಯೇಸುಸ್ವಾಮಿ ಗಲಿಲೇಯ ಸರೋವರವನ್ನು ದಾಟಿ, ಆಚೆಯ ಕಡೆಯಿದ್ದ ಗದರೇನ ಎಂಬ ಪ್ರಾಂತ್ಯಕ್ಕೆ ಬಂದರು. ದೆವ್ವ ಹಿಡಿದಿದ್ದ ಇಬ್ಬರು ಸಮಾಧಿಯ ಗುಹೆಗಳಿಂದ ಹೊರಬಂದು ಅವರಿಗೆ ಎದುರಾದರು. ಅವರಿಬ್ಬರೂ ಮಹಾ ಕ್ರೂರಿಗಳು. ಈ ಕಾರಣ ಯಾರೂ ಆ ಮಾರ್ಗವಾಗಿ ಹೋಗಲಾಗುತ್ತಿರಲಿಲ್ಲ. ಅವರು ಯೇಸುವನ್ನು ನೋಡಿದೊಡನೆಯೇ "ಓ ದೇವರ ಪುತ್ರನೇ, ನಿಮಗೇಕೆ ನಮ್ಮ ಗೊಡವೆ? ನಿಯಮಿತ ಕಾಲಕ್ಕೆ ಮುಂಚೆಯೇ ನಮ್ಮನ್ನು ಪೀಡಿಸಲು ಬಂದಿರಾ?" ಎಂದು ಕೂಗಿ ಕೊಂಡರು. ಹಂದಿಗಳ ದೊಡ್ಡ ಹಿಂಡೊಂದು ಅಲ್ಲಿಂದ ಸ್ವಲ್ಪ ದೂರದಲ್ಲೇ ಮೇಯುತ್ತಿತ್ತು. "ನೀವು ನಮ್ಮನ್ನು ಹೊರದೂಡಿದ್ದೇ ಆದರೆ ಆ ಹಂದಿಗಳ ಹಿಂಡಿಗೆ ನಮ್ಮನ್ನು ಕಳುಹಿಸಿ ಕೊಡಿ," ಎಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. ಯೇಸು, "ಹೋಗಿ" ಎಂದು ಅಪ್ಪಣೆಯಿತ್ತರು. ದೆವ್ವಗಳು ಹೊರಗೆ ಬಂದು ಹಂದಿಗಳ ಹಿಂಡನ್ನು ಹೊಕ್ಕವು. ಆ ಕ್ಷಣವೇ ಆ ಹಿಂಡೆಲ್ಲಾ ಬೆಟ್ಟದ ಕಡಿದಾದ ಬದಿಯಿಂದ ಧಾವಿಸಿ, ಸರೋವರಕ್ಕೆ ಬಿದ್ದು, ನೀರು ಪಾಲಾಗಿ ಹೋಯಿತು. ಹಂದಿ ಮೇಯಿಸುತ್ತಿದ್ದವರು ಅಲ್ಲಿಂದ ಪಲಾಯನ ಮಾಡಿ ಊರಿಗೆ ಓಡಿ ಹೋಗಿ ನಡೆದ್ದದೆಲ್ಲವನ್ನೂ ಮತ್ತು ದೆವ್ವ ಮೆಟ್ಟಿದ್ದವರಿಗೆ ಸಂಭವಿಸಿದ್ದನ್ನೂ ವರದಿಮಾದಿದರು. ಆಗ ಊರಿಗೆ ಊರೇ ಯೇಸುವನ್ನು ನೋಡಲು ಬಂದಿತು. ಅವರನ್ನು ಕಂಡು ತಮ್ಮ ಆಸು ಪಾಸನ್ನು ಬಿಟ್ಟು ಹೋಗಬೇಕೆಂದು ಮನವಿ ಮಾಡಿಕೊಂಡಿತು. 

03.07.2018

ಸಂತ ತೋಮಸರ ಮಹೋತ್ಸವ 


ಮೊದಲನೇ ವಾಚನ: ಎಫೆಸಿಯರಿಗೆ: 2: 19-22 (ಪ್ರೇಷಿತರ ಕಾರ್ಯಕಲಾಪಗಳು: 10: 24-35)

ಹೀಗಿರಲಾಗಿ, ನೀವು ಇನ್ನು ಮೇಲೆ ಪರಕೀಯರೂ ಪರದೇಶಿಗಳೂ ಆಗಿರದೆ, ದೇವ ಜನರೊಂದಿಗೆ ಸಹ ಜೀವಿಗಳು ಮತ್ತು ದೇವರ ಮನೆತನದವರು ಆಗಿದ್ದೀರಿ. ಪ್ರೇಷಿತರು ಹಾಗೂ ಪ್ರವಾದಿಗಳೂ ಹಾಕಿದ ತಳಹದಿಯ ಮೇಲೆ ನಿಮ್ಮನ್ನು ನಿರ್ಮಿಸಲಾಗಿದೆ. ಯೇಸು ಕ್ರಿಸ್ತರೇ ಈ ತಳಹದಿಯ ಮುಖ್ಯ ಮೂಲೆಗಲ್ಲು. ಇಡೀ ಕಟ್ಟಡವು ಅವರನ್ನೇ ಆಧರಿಸಿ, ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ನಿಂತು, ಪ್ರಭುವಿಗೆ ಅರ್ಪಿತವಾದ ದೇವ ಮಂದಿರ ಆಗುತ್ತದೆ. ಯೇಸು ಕ್ರಿಸ್ತರ ಅನ್ಯೋನ್ಯತೆಯಲ್ಲಿ ನೀವು ಸಹ ಇತರರೆಲ್ಲಾರೊಡನೆ ದೇವರ ನಿವಾಸಕ್ಕೆ ತಕ್ಕ ಮಂದಿರವಾಗಿ ಪವಿತ್ರಾತ್ಮ ಅವರಿಂದ ಕಟ್ಟಲ್ಪಡುತ್ತಿದ್ದೀರಿ.


ಕೀರ್ತನೆ: 117: 1ಬಿಸಿ, 2

ಶ್ಲೋಕ: ಆತನನು ಹೊಗಳಿ ಹಾಡಿ ಸರ್ವ ಜನಾಂಗಗಳೇ


ಎರಡನೆಯ ವಾಚನ: ಹಿಬ್ರಿಯರಿಗೆ: 1: 2-3 (1 ಪೇತ್ರ: 1: 3-9)


ಸಹೋದರರೇ, ಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟು ಮಾಡಿದ್ದು ಇವರ ಮುಖಾಂತರವೇ: ಸಮಸ್ತಕ್ಕೂ ಬಾಧ್ಯಸ್ಥರನ್ನಾಗಿ ನೇಮಿಸಿರುವುದು ಇವರನ್ನೇ. ಇವರೇ ದೇವರ ಮಹಿಮೆಯ ತೇಜಸ್ಸು; ಇವರೇ ದೈವತ್ವದ ಪಡಿಯಚ್ಚು; ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರ; ನಮ್ಮ ಪಾಪಗಳನ್ನು ತೊಡೆದುಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿರುವವರೂ ಇವರೇ ಎಂದಿದ್ದಾರೆ.

ಶುಭಸಂದೇಶ: ಯೊವಾನ್ನ: 20: 24-29


ಹನ್ನೆರಡು ಮಂದಿಯಲ್ಲಿ ಒಬ್ಬನಾದ ದಿದುಮ ಎಂಬ ತೋಮನು ಯೇಸುಸ್ವಾಮಿ ಬಂದಾಗ ಶಿಷ್ಯರೊಡನೆ ಇರಲಿಲ್ಲ. ಉಳಿದ ಶಿಷ್ಯರು "ನಾವು ಪ್ರಭುವನ್ನು ನೋಡಿದೆವು", ಎಂದು ಹೇಳಿದರು. ಅದಕ್ಕೆ ಅವನು, "ಅವರ ಕೈಗಳಲ್ಲಿ ಮೊಳೆಗಳಿಂದಾದ ಗಾಯದ ಕಲೆಯನ್ನು ನಾನು ನೋಡಬೇಕು, ಮೊಳೆಗಳು ಜಡಿದಿದ್ದ ಜಾಗದಲ್ಲಿ ನನ್ನ ಬೆರಳನ್ನಿಡಬೇಕು. ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟು ನೋಡಬೇಕು. ಆ ಹೊರತು ನಾನು ನಂಬುವುದೇ ಇಲ್ಲ," ಎಂದುಬಿಟ್ಟನು. ಎಂಟು ದಿನಗಳು ಕಳೆದವು. ಶಿಷ್ಯರು ಪುನಃ ಒಳಗೆ ಒಟ್ಟುಗೂಡಿದ್ದರು. ತೋಮನು ಅವರೊಡನೆ ಇದ್ದನು. ಬಾಗಿಲುಗಳು ಮುಚ್ಚಿದ್ದರು ಯೇಸು ಬಂದು ಅವರ ನಡುವೆ ನಿಂತು, "ನಿಮಗೆ ಶಾಂತಿ" ಎಂದರು. ಆಮೇಲೆ ತೋಮನಿಗೆ, "ಇಗೋ ನೋಡು ನನ್ನ ಕೈಗಳು; ನಿನ್ನ ಬೆರಳನ್ನು ತಂದು ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು; ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು" ಎಂದು ಹೇಳಿದರು. ಆಗ ತೋಮನು, "ನನ್ನ ಪ್ರಭುವೇ ನನ್ನ ದೇವರೆ" ಎಂದನು. ಯೇಸು ಅವನಿಗೆ "ನನ್ನನ್ನು ಕಂಡುದರಿಂದ ತಾನೇ ನಿನಗೆ ವಿಶ್ವಾಸ ಹುಟ್ಟಿತ್ತು? ಕಾಣದೆ ವಿಶ್ವಾಸಿಸುವವರು ಧನ್ಯರು" ಎಂದು ಹೇಳಿದರು. 

02.07.2018

ಮೊದಲನೇ ವಾಚನ: ಆಮೋಸ: 2: 6-10, 13-16

ಸರ್ವೇಶ್ವರ ಇಂತೆನ್ನುತ್ತಾರೆ: "ಇಸ್ರಯೇಲಿನ ಜನರು ಪದೇ ಪದೇ ಮಾಡಿದ ಪಾಪಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ಬೆಳ್ಳಿ ಬಂಗಾರಕ್ಕಾಗಿ ಸಜ್ಜನರನ್ನು ಮಾರಿಬಿಡುತ್ತಾರೆ. ಒಂದು ಜೊತೆ ಜೋಡುಗಳ ಸಾಲವನ್ನು ಸಹ ತೀರಿಸಲಾಗದ ಬಡಬಗ್ಗರನ್ನೂ ವಿಕ್ರಯಿಸುತ್ತಾರೆ. ದಿಕ್ಕಿಲ್ಲದವರ ತಲೆಗಳನ್ನು ಬೀದಿಯ ಧೂಳಿನಂತೆ ತುಳಿದು ಬಿಡುತ್ತಾರೆ. ದೀನ ದಲಿತರಿಗೆ ನ್ಯಾಯ ದೊರಕದಂತೆ ಮಾಡುತ್ತಾರೆ. ತಂದೆಯೂ ಮಗನೂ ಒಬ್ಬ ಮಹಿಳೆಯನ್ನು ಇಟ್ಟುಕೊಂಡು ನನ್ನ ಪವಿತ್ರ ನಾಮಕ್ಕೆ ಅಪಕೀರ್ತಿ ತರುತ್ತಾರೆ. ಪ್ರತಿಯೊಂದು ಪ್ರಾರ್ಥಾನಾಲಯದಲ್ಲಿಯೂ ಮಲಗುತ್ತಾರೆ. ಬಡವರಿಂದ ಅಡವಾಗಿ ಇಟ್ಟುಕೊಂಡ ಬಟ್ಟೆಗಳ ಮೇಲೆಯೇ ಬಿದ್ದಿರುತ್ತಾರೆ. ವಿಧಿಯಿಲ್ಲದೆ ದಂಡತೆರಬೇಕಾದವರಿಂದ ಹೆಂಡವನ್ನು ತಂದು ದೇವರ ಮಂದಿರದಲ್ಲೇ ಕುಡಿಯುತ್ತಾರೆ. "ಆದರೂ ನನ್ನ ಜನರೇ, ನಿಮಗೆ ಎದುರಾಗಿ ನಿಂತ ಅಮೋರ್ಯದವ್ರನ್ನು ಧ್ವಂಸ ಮಾಡಿದೆನು. ದೇವದಾರು ಮರದಂತೆ ಎತ್ತರವಾಗಿ, ಅಲ್ಲೋನ್ ಮರದಂದೆ ಬಲಿಷ್ಠರಾಗಿ ಇದ್ದ ನಿಮ್ಮ ಶತ್ರು ಅಮೋರ್ಯದವನ್ನು ನಾಶ ಪಡಿಸಿದೆನು. ಮರದ ಮುಡಿಯಿಂದ ಫಲವನ್ನೂ ಅಡಿಯಿಂದ ಬೇರನ್ನೂ ಕಿತ್ತು ಹಾಕುವಂತೆ ಅವರನ್ನು ನಿರ್ಮೂಲ ಮಾಡುವೆನು. ಈಜಿಪ್ಟಿನಿಂದ ನಿಮ್ಮನ್ನು ಹೊರತಂದವನು ನಾನೇ. ಆದ್ದರಿಂದ ಧಾನ್ಯ ತುಂಬಿದ ಬಂಡೆ ನಸುಕುವಂತೆ ನಿಮ್ಮನ್ನು ಇದ್ದಲ್ಲಿಯೇ ನಸುಕುಬಿಡುವೆನು. ನಿಮ್ಮಲ್ಲಿ ದೌಡೋಡುವವನು ಕೂಡ ತಲೆ ತಪ್ಪಿಸಿಕೊಳ್ಳಲಾರನು. ಬಲಿಷ್ಠನು ಬಲಹೀನನಾಗುವನು. ಪರಾಕ್ರಮಿಯೂ ಪ್ರಾಣ ಉಳಿಸಿಕೊಳ್ಳಲಾರನು. ಬಿಲ್ಲುಹಿಡಿದವನು ನಿಲ್ಲಲಾರಾನು. ಓಟಗಾರನೂ ಸಿಕ್ಕಿಬೀಳುವನು. ರಾಹುತನು ರಕ್ಷಣೆಪಡೆಯಲಾರನು. ಪ್ರಬಲವಾಗಿದ್ದವರಲ್ಲಿ ಧೀರನಾದವನು ಸಹ ನಗ್ನವಾಗಿ ಪಲಾಯಣ ಮಾಡುವನು." ಇದು ಸರ್ವೇಶ್ವರ ಸ್ವಾಮಿಯ ನುಡಿ.

ಕೀರ್ತನೆ: 50:16-17, 18-1, 20-21, 22-23

ಶ್ಲೋಕ: ದೇವರ ನೆನೆಯದವರೆ, ನೀಡಿರಿ ಗಮನವನು.


ಶುಭಸಂದೇಶ: ಮತ್ತಾಯ: 8: 18-22


ದೊಡ್ಡ ಜನಸಮೂಹ ತಮ್ಮ ಸುತ್ತಲೂ ನಿಂತಿರುವುದನ್ನು ಯೇಸುಸ್ವಾಮಿ ನೋಡಿದರು. ಸರೋವರದ ಆಚೆಯ ದಡಕ್ಕೆ ಹೋಗಲು ತಮ್ಮ ಶಿಷ್ಯರಿಗೆ ಅಪ್ಪಣೆ ಮಾಡಿದರು. ಆಗ ಒಬ್ಬ ಧರ್ಮಶಾಸ್ತ್ರಿ ಬಂದು, "ಗುರುವೇ, ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಹಿಂಬಾಲಿಸಿ ಬರುತ್ತೇನೆ," ಎಂದನು. ಅದಕ್ಕೆ ಯೇಸು, "ನರಿಗಳಿಗೆ ಗುಹೆಗಳುಂಟು: ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು; ಆದರೆ ನರಪುತ್ರನಿಗೆ ತಲೆಯಿಟ್ಟು ಮಲಗಲೂ ಸ್ಥಳ ಇಲ್ಲ," ಎಂದರು. ಶಿಷ್ಯರು ಮತ್ತೊಬ್ಬನು ಮುಂದೆ ಬಂದು, "ಸ್ವಾಮೀ, ಮೊದಲು ನನ್ನ ತಂದೆಯ ಉತ್ತರ ಕ್ರಿಯೆಗಳನ್ನು ಮುಗಿಸಲು ಸಮಯ ಕೊಡಿ, "ಎಂದು ಕೇಳಿದನು. ಅವನಿಗೆ ಯೇಸು, "ಸತ್ತವರೇ ತಮ್ಮ ಸತ್ತವರನ್ನು ಸಮಾಧಿ ಮಾಡಿಕೊಳ್ಳಲಿ; ನೀನು ನನ್ನನ್ನು ಹಿಂಬಾಲಿಸು," ಎಂದರು.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...