ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

20.05.10 - ಪಿತನೇ, ಇವರೆಲ್ಲಾ ಒಂದಾಗಿರಲಿ

ಸಂತ ಯೊವಾನ್ನನ ಶುಭ ಸಂದೇಶ - 17:20-26

"ನೀವು ನನ್ನಲ್ಲಿಟ್ಟ ಪ್ರೀತಿಯು ಇವರಲ್ಲಿಯೂ ಇರುವಂತಾಗುವುದು; ನಾನೂ ಇವರಲ್ಲಿ ಇರುವಂತಾಗುವುದು"

ಯೇಸುಸ್ವಾಮಿ ಆಕಾಶದತ್ತ ಕಣ್ಣೆತ್ತಿ ನೋಡಿ ಹೀಗೆಂದು ಪ್ರಾರ್ಥಿಸಿದರು "ಇವರಿಗಾಗಿ ಮಾತ್ರವಲ್ಲ,ಇವರ ಮಾತನ್ನು ಕೇಳಿ ನನ್ನಲ್ಲಿ ವಿಶ್ವಾಸವಿಡುವವರಿಗಾಗಿಯೂ ಪ್ರಾರ್ಥಿಸುತ್ತೇನೆ. ಪಿತನೇ, ಇವರೆಲ್ಲಾ ಒಂದಾಗಿರಲಿ.ನೀವು ನನ್ನಲ್ಲಿ, ನಾನು ನಿಮ್ಮಲ್ಲಿ ಇರುವಂತೆಯೇ ಇವರೂ ನಮ್ಮಲ್ಲಿ ಒಂದಾಗಿರಲಿ.ಹೀಗೆ ನನ್ನನು ಕಳುಹಿಸಿದವರು ನೀವೇ ಎಂದು ಲೋಕವು ವಿಶ್ವಾಸಿಸುವಂತಾಗಲಿ.ನಾವು ಒಂದಾಗಿರುವಂತೆ ಇವರೂ ಒಂದಾಗಿರಲೆಂದು ನೀವು ನನಗಿತ್ತ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ. ನಾನು ಇವರಲ್ಲಿಯೂ ನೀವು ನನ್ನಲಿಯೂ ಇದ್ದು, ಇವರ ಐಕ್ಯಮತ್ಯವು ಪೂರ್ಣಸಿದ್ಧಿಗೆ ಬರಲಿ.ಆಗ ನೀವೇ ನನ್ನನ್ನು ಕಳುಹಿಸಿರುವಿರಿ ಎಂದು ಲೋಕಕ್ಕೆ ಮನವರಿಕೆ ಆಗುವುದು.

ಪಿತನೇ, ಇವರನ್ನು ನೀವು ನನಗೆ ಕೊಟ್ಟಿರುವಿರಿ.ಜಗತ್ತು ಉಂಟಾಗುವ ಮೊದಲೇ ನೀವು ನನ್ನನ್ನು ಪ್ರೀತಿಸಿ ನನಗಿತ್ತ ಮಹಿಮೆಯನ್ನು ಇವರೂ ಕಾಣುವಂತೆ ನಾನಿದ್ದಲ್ಲಿ ಇವರೂ ಇರಬೇಕೆಂದು ಆಶಿಸುತ್ತೇನೆ. ನಿತ್ಯ ಸ್ವರೂಪಿಯಾದ ಪಿತನೇ,ಲೋಕವು ನಿಮ್ಮನ್ನು ಅರಿತುಕೊಳ್ಳಲಿಲ್ಲ.ಆದರೆ ನಾನು ಅರಿತಿದ್ದೇನೆ. ನನ್ನನು ಕಳುಹಿಸಿದವರು ನೀವೆಂದು ಇವರು ತಿಳಿದುಕೊಂಡಿದ್ದಾರೆ.ನಿಮ್ಮ ನಾಮವನ್ನು ನಾನು ಇವರಿಗೆ ತಿಳಿಯಪಡಿಸಿದ್ದೇನೆ;ಇನ್ನೂ ತಿಳಿಯಪಡಿಸುತ್ತೇನೆ.ಹೀಗೆ ನೀವು ನನ್ನಲ್ಲಿಟ್ಟ ಪ್ರೀತಿಯು ಇವರಲ್ಲಿಯೂ ಇರುವಂತಾಗುವುದು; ನಾನೂ ಇವರಲ್ಲಿ ಇರುವಂತಾಗುವುದು."

19.05.10 - ಲೋಕಕ್ಕೆ ಇವರ ಮೇಲೆ ದ್ವೇಶವಿದೆ

ಸಂತ ಯೊವಾನ್ನನ ಶುಭ ಸಂದೇಶ - 17:11-19

"ಸತ್ಯಸಂಧರಾಗಿ ಇವರನ್ನು ನಿಮ್ಮ ಸೇವೆಗೆ ಮೀಸಲಾಗಬೇಕೆಂದು ನನ್ನನ್ನು ನಾನೇ ಮೀಸಲಾಗಿಸಿಕೊಂಡಿದ್ದೇನೆ"

ಯೇಸುಸ್ವಾಮಿ ಆಕಾಶದತ್ತ ಕಣ್ಣೆತ್ತಿ ನೋಡಿ ಹೀಗೆಂದು ಪ್ರಾರ್ಥಿಸಿದರು."ಪವಿತ್ರ ಪಿತನೇ, ನಾವು ಒಂದಾಗಿರುವಂತೆ, ನೀವು ನನಗೆ ಕೊಟ್ಟಿರುವ ಇವರೂ ಒಂದಾಗಿರುವ ಹಾಗೆ ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ. ನಾನು ಇವರೊಡನೆ ಇದ್ದಾಗ ಇವರನ್ನು ಕಾಪಾಡಿದೆನು. ನೀವಿತ್ತ ಇವರನ್ನು ನಿಮ್ಮ ನಾಮದ ಶಕ್ತಿಯಿಂದ ಸುರಕ್ಷಿತವಾಗಿ ನೋಡಿಕೊಂಡು ಬಂದೆನು. ಪವಿತ್ರ ಗ್ರಂಥದ ಮಾತು ನೆರೆವೇರುವಂತೆ ವಿನಾಶಕ್ಕೆ ಗುರಿಯಾಗಬೇಕಿದ್ದ ಒಬ್ಬನನ್ನು ಬಿಟ್ಟರೆ, ಇವರಲ್ಲಿ ಬೇರೆ ಯಾರೂ ನಾಶವಾಗಲಿಲ್ಲ. ಈಗ ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ನನ್ನ ಆನಂದವು ಅವರ ಹೃದಯದಲ್ಲಿ ತುಂಬಿತುಳುಕುವಂತೆ ಈ ಲೋಕದಲ್ಲಿರುವಾಗಲೇ ಇವುಗಳನ್ನು ಹೇಳುತ್ತಿದ್ದೇನೆ.ನಿಮ್ಮ ಸಂದೇಶವನ್ನು ಇವರಿಗೆ ತಿಳಿಸಿದ್ದೇನೆ. ನಾನು ಲೋಕಕ್ಕೆ ಸೇರಿದವನಲ್ಲ. ಅಂತೆಯೇ, ಇವರೂ ಲೋಕಕ್ಕೆ ಸೇರಿದವರಲ್ಲ. ಈ ಕಾರಣ, ಲೋಕಕ್ಕೆ ಇವರ ಮೇಲೆ ದ್ವೇಶವಿದೆ. ಇವರನ್ನು ಲೋಕದಿಂದ ತೆಗೆದುಬಿಡಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತಿಲ್ಲ. ಆದರೆ ಕೇಡಿಗನಿಂದ ಇವರನ್ನು ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕಕ್ಕೆ ಹೇಗೆ ಸೇರಿದವನಲ್ಲವೋ ಹಾಗೆ ಇವರೂ ಈ ಲೋಕಕ್ಕೆ ಸೇರಿದವರಲ್ಲ. ಇವರನ್ನು ಸತ್ಯಸಂಧರನ್ನಾಗಿಸಿ ನಿಮ್ಮ ಸೇವೆಗೆ ಮೀಸಲಾಗಿಡಿ. ನಿಮ್ಮ ಮಾತೇ ಸತ್ಯ. ನೀವು ನನ್ನನ್ನು ಲೋಕಕ್ಕೆ ಕಳಿಸಿದಂತೆ ನಾನೂ ಇವರನ್ನು ಲೋಕಕ್ಕೆ ಕಳಿಸಿದ್ದೇನೆ.ಸತ್ಯಸಂಧರಾಗಿ ಇವರನ್ನು ನಿಮ್ಮ ಸೇವೆಗೆ ಮೀಸಲಾಗಬೇಕೆಂದು ನನ್ನನ್ನು ನಾನೇ ಮೀಸಲಾಗಿಸಿಕೊಂಡಿದ್ದೇನೆ.

18.05.10 - ನಿರೀಕ್ಷಿಸಿದ ಗಳಿಗೆ

ಸಂತ ಯೊವಾನ್ನನ ಶುಭ ಸಂದೇಶ - 17:1-11

"ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ"

ಯೇಸುಸ್ವಾಮಿ ಅವರೊಡನೆ ಹೀಗೆ ಮಾತನಾಡಿದ ಮೇಲೆ ಆಕಾಶದತ್ತ ಕಣ್ಣೆತ್ತಿ ನೋಡಿ, "ಪಿತನೇ, ನಿರೀಕ್ಷಿಸಿದ ಗಳಿಗೆ ಬಂದಿದೆ.ನಿಮ್ಮ ಪುತ್ರನು ನಿಮ್ಮ ಮಹಿಮೆಯನ್ನು ಬೆಳಗಿಸುವಂತೆ ನೀವು ಆತನ ಮಹಿಮೆಯನ್ನು ಬೆಳಗಿಸಿರಿ. ನರಮಾನವರೆಲ್ಲರ  ಮೇಲೆ ನೀವು ಆತನಿಗೆ ಅಧಿಕಾರವನ್ನು ಕೊಟ್ಟಿರುವಿರಿ. ಇದರಿಂದಾಗಿ ನೀವು ಆತನಿಗೆ ಒಪ್ಪಿಸಿರುವ ಎಲ್ಲರಿಗೆ ನಿತ್ಯ ಜೀವವನ್ನು ಆತನು ನೀಡುವನು. ಏಕೈಕ ನಿಜ ದೇವರಾದ ನಿಮ್ಮನ್ನೂ ನೀವು ಕಳುಹಿಸಿಕೊಟ್ಟ ಯೇಸುಕ್ರಿಸ್ತನನ್ನೂ ಅರಿತಿಕೊಳ್ಳುವುದೇ ನಿತ್ಯ ಜೀವ.ನೀವು ನನಗೆ ಕೊಟ್ಟ ಕಾರ್ಯವನ್ನು ನಾನು ಮಾಡಿ ಮುಗಿಸಿ ನಿಮ್ಮ ಮಹಿಮೆಯನ್ನು ಜಗತ್ತಿಗೆಲ್ಲ ತೋರ್ಪಡಿಸಿದೆನು.

ಪಿತನೇ, ಜಗತ್ತು ಉಂಟಾಗುವ ಮೊದಲೇ ನಿಮ್ಮೊಡನೆ ನನಗಿದ್ದ ಅದೇ ಲೋಕದಿಂದ ಆರಸಿ ನನಗೆ ಕೊಟ್ಟ ಜನರಿಗೆ ನಿಮ್ಮ ನಾಮವನ್ನು ತಿಳಿಯಪಡಿಸಿದ್ದೇನೆ. ಇವರು ನಡೆದಿದ್ದಾರೆ. ನೀವು ನನಗೆ ಕೊಟ್ಟಿದೆಲ್ಲವೂ ನಿಅವಾಗಿ ನಿಮ್ಮಿಂದಲೇ ಬಂದಿರುವುದೆಂದು ಈಗ ಇವರಿಗೆ ತಿಳಿದಿದೆ. ನಿಮ್ಮಿಂದ ನಾನು ಕಲಿತುದೆಲ್ಲವನ್ನೂ ಇವರಿಗೆ ತಿಳಿಯಪದಿಸಿದ್ದೇನೆ. ಅವುಗಳನ್ನು ಇವರು ಅಂಗೀಕರಿಸಿ ನಿಮ್ಮಿಂದಲೇ ನಾನು ಬಂದದು ನಿಜವೆಂದು ಅರಿತುಕೊಂಡಿದ್ದಾರೆ.ನನ್ನ್ನು ಕಳುಹಿಸಿದ್ದು ನೀವೇ ಎಂದು ವಿಶ್ವಾಸಿಸಿದ್ದಾರೆ.ನಾನು ಇವರಿಗಾಗಿ, ಲೋಕಕ್ಕಾಗಿ ಅಲ್ಲ.ನೀವೆ ನನಗೆ ಕೊಟ್ಟಿರುವವರಿಗಾಗಿ ಪ್ರಾರ್ಥಿಸುತ್ತೇನೆ. ಏಕೆಂದರೆ, ಇವರು ನಿಮ್ಮವರು:ಇವರಿಂದ ನಮಗೆ ಮಹಿಮೆ ಉಂಟಾಗಿದೆ.ನನ್ನದೆಲ್ಲವೂ ನಿಮ್ಮದೇ: ನಿಮ್ಮದೆಲ್ಲವೂ ನನ್ನದೇ.

 ನಾನಿನ್ನು ಲೋಕದಲ್ಲಿ ಇರುವುದಿಲ್ಲ.ಇವರಾದರೋ ಲೋಕದಲ್ಲಿ ಇರುತ್ತಾರೆ. ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ಪವಿತ್ರ ಪಿತನೇ, ನಾನು ಒಂದಾಗಿರುವಂತೆ ನೀವು ನನಗೆ ಕೊಟ್ಟಿರುವ ಇವರೂ  ಒಂದಾಗಿರುವ ಹಾಗೆ ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ.

17.05.2010 - ಲೋಕದಲ್ಲಿ ನಿಮಗೆ ಕಷ್ಟ ಸಂಕಟಗಳು ತಪ್ಪಿದ್ದಲ್ಲ

ಸಂತ ಯೊವಾನ್ನನು ಬರೆದ ಶುಭಸಂದೇಶ - 16:29-33


"ನೀವೆಲ್ಲರೂ ನನ್ನನ್ನು ಒಬ್ಬಂಟಿಗನಾಗಿ ಬಿಟ್ಟು ನಿಮ್ಮ ನಿಮ್ಮ ಮನೆಗೆ ಚದುರಿಹೋಗುವ ಕಾಲವು ಬರುತ್ತದೆ."

ಶಿಷ್ಯರು ಯೇಸುವಿಗೆ, " ಈಗ ನೀವು ಸಾಮತಿಗಳನ್ನು ಬಳಸದೆ ಸ್ಫಷ್ಟವಾಗಿಯೇ ಮಾತನಾಡುತ್ತಿದ್ದೀರಿ. ನೀವು ಎಲ್ಲವನ್ನೂ ಬಲ್ಲವರು.
ಪ್ರಶ್ನೆಗಳಿಗಾಗಿ ನೀವು ಕಾಯಬೇಕಿಲ್ಲ ಎಂದು ನಮಗೀಗ ತಿಳಿಯಿತು. ಆದುದರಿಂದ ನೀವು ದೇವರಿಂದ ಬಂದವರೆಂದ ನಾವು ವಿಶ್ವಾಸಿಸುತ್ತೇವೆ," ಎಂದರು. ಆಗ ಯೇಸುಸ್ವಾಮಿ, "ಈಗ ನೀವು ವಿಶ್ವಾಸಿಸುತ್ತೀರೋ? ನೀವೆಲ್ಲರೂ ನನ್ನನ್ನು ಒಬ್ಬಂಟಿಗನಾಗಿ ಬಿಟ್ಟು ನಿಮ್ಮ ನಿಮ್ಮ ಮನೆಗೆ ಚದುರಿಹೋಗುವ ಕಾಲವು ಬರುತ್ತದೆ. ಈಗಾಗಲೇ ಬಂದಿದೆ. ಆದರೆ ಪಿತನು ನನ್ನೊಡನೆ ಇರುವುದರಿಂದ ನಾನು ಒಬ್ಬಂಟಿಗನಲ್ಲ. ನಿಮಗೆ  ನನ್ನಲ್ಲಿ ಶಾಂತಿ ಸಮಾಧಾನ ಲಭಿಸಲೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಕಷ್ಟಸಂಕಟಗಳು ತಪ್ಪಿದ್ದಲ್ಲ, ಆದರೆ ಧೈರ್ಯವಾಗಿರಿ . ನಾನು ಲೋಕವನ್ನು ಜಯಿಸಿದ್ದೇನೆ," ಎಂದು ಹೇಳಿದರು

04.05.2010 - "ನಾನು ಶಾಂತಿ ಸಮಾಧಾನವನ್ನು ನಿಮಗೆ ಬಿಟ್ಟು ಹೋಗುತ್ತೇನೆ;ನನ್ನ ಶಾಂತಿ ಸಮಧಾನವನ್ನು ನಿಮಗೆ ಕೊಡುತ್ತೇನೆ"


ಸಂತ ಯೊವಾನ್ನನು ಬರೆದ ಶುಭ ಸಂದೇಶದಿಂದ ವಾಚನ - 21:1-14

"ಪಿತ ನನಗಿಂತಲೂ ಶ್ರೇಷ್ಠರು"

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ: "ನಾನು ಶಾಂತಿ ಸಮಾಧಾನವನ್ನು ನಿಮಗೆ ಬಿಟ್ಟು ಹೋಗುತ್ತೇನೆ;ನನ್ನ ಶಾಂತಿ ಸಮಧಾನವನ್ನು ನಿಮಗೆ ಕೊಡುತ್ತೇನೆ.ಈ ಲೋಕವು ಕೊಡುವ ರೀತಿಯಲ್ಲಿ ನಾನದನ್ನು ನಿಮಗೆ ಕೊಡುವುದಿಲ್ಲ.ನೀವು ಹೃದಯದಲ್ಲಿ ಕಳವಳಗೊಳ್ಳದಿರಿ,ಭಯಪಡಬೇಡಿ.ನಾನು ಹೊರಟು ಹೋಗುತ್ತೇನೆಂದೂ, ಮತ್ತೆ ನಿಮ್ಮ ಬಳಿಗೆ ಬರುವೆನೆಂದೂ ನಾನು ಹೇಳಿದ್ದನ್ನು ನೀವು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನಾನು ಪಿತನ ಬಳಿಗೆ ಹೋಗುತ್ತಿರುವುದನ್ನು ಕುರಿತು ಹಿಗ್ಗುತ್ತಿದ್ದಿರಿ. ಏಕೆಂದರೆ ಪಿತ ನನಗಿಂತಲೂ ಶ್ರೇಷ್ಠರು. ಇದೆಲ್ಲಾ ಈಡೇರುವಾಗ ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ತಿಳಿಯಪಡಿಸಿದ್ದೇನೆ.ಇಹದ ಲೋಕಾಧಿಪತಿ ಬರುವ ಸಮಯವಾಯಿತು.ಇನ್ನು ಬಹಳ ಹೊತ್ತು ನಾನು ನಿಮ್ಮೊಡನೆ ಮಾತನಾಡಲು ಕಾಲಾವಕಾಶವಿಲ್ಲ. ನನ್ನ ಮೇಲೆ ಅವನಿಗೆ ಯಾವ ಅಧಿಕಾರವೂ ಇಲ್ಲ. ಆದರೆ ನಾನು ಪಿತನನ್ನು ಪ್ರೀತಿಸುತ್ತೇನೆಂಬುದನ್ನೂ ಅವರು ವಿಧಿಸಿದಂತೆಯೇ ಮಾಡುತ್ತೇನೆ ಎಂಬುದನ್ನೂ ಲೋಕವು ತಿಳಿಯಬೇಕು" ಎಂದರು.

09.04.2010 - "ಅವರೇ ಪ್ರಭು"

ಸಂತ ಯೊವಾನ್ನನು ಬರೆದ ಶುಭ ಸಂದೇಶದಿಂದ ವಾಚನ - 21:1-14

"ದೋಣಿಯ ಬಲಗಡೆ ಬೆಲೆ ಬೀಸಿರಿ;ಮೀನುಗಳು ಸಿಗುತ್ತವೆ"

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಮತ್ತೂಮ್ಮೆ ತಿಬೇರಿಯ ಸರೋವರದ ಬಳಿ ಕಾಣಿಸಿಕೊಂಡರು. ಅದು ಹೀಗೆ ನಡೆಯಿತು: ಸಿಮೋನ ಪೇತ್ರನು,ದಿದಿಮನೆಂಬ ತೋಮನು, ಗಲಿಲೇಯದ ಕಾನ ಊರಿನ ನತಾನಯೇಲನು, ಜೆಬೆದಾಯನ ಪುತ್ರರು ಮತ್ತು ಯೇಸುವಿನ ಇನ್ನಿಬ್ಬರು ಶಿಷ್ಯರು ಒಟ್ಟಿಗೆ ಸೇರಿದ್ದರು. ಆಗ ಸಿಮೋನ ಪೇತ್ರನು," ನಾನು ಮೀನು ಹಿಡಿಯಲು ಹೋಗುತ್ತೇನೆ," ಎಂದನು.ಮಿಕ್ಕವರು,"ನಾವೂ ನಿನ್ನೊಡನೆ ಬರುತ್ತೇವೆ," ಎಂದರು. ಅವರೆಲ್ಲರೂ ಹೊರಟು ದೋಣಿಯನ್ನು ಹತ್ತಿದರು.ಆ ರಾತ್ರಿಯೆಲ್ಲಾ ಅವರಿಗೆ ಒಂದೂ ಮೀನೂ ಸಿಗಲಿಲ್ಲ.

ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿಂತಿದ್ದರು.ಆದರೆ ಅವರು ಯೇಸು ಎಂದು ಶಿಷ್ಯರಿಗೆ ಹೊಳೆಯಲಿಲ್ಲ. ಯೇಸು ಅವರಿಗೆ," ಮಕ್ಕಳೇ, ಊಟಕ್ಕೆ ಏನಾದರೂ ಸಿಕ್ಕಿತೇ?" ಎಂದು ಕೇಳಿದರು. "ಏನೂ ಇಲ್ಲ", ಎಂದರು ಅವರು. "ದೋಣಿಯ ಬಲಗಡೆ ಬೆಲೆ ಬೀಸಿರಿ;ಮೀನುಗಳು ಸಿಗುತ್ತವೆ" ಎಂದು ಯೇಸು ಹೇಳಲು ಅವರು ಹಾಗೆಯೇ ಮಾಡಿದರು. ಆಗ ಮೀನುಗಳು ರಾಶಿ ರಾಶಿಯಾಗಿ ಸಿಕ್ಕಿದವು. ಬಲೆಯನ್ನು ಎಳೆಯಲೂ ಆಗದೆ ಹೋಯಿತು. ಆಗ ಯೇಸುವಿನ ಆಪ್ತ ಶಿಷ್ಯನು ಪೇತ್ರನಿಗೆ,"ಅವರೇ ಪ್ರಭು" ಎಂದನು. ಪ್ರಭುವೆಂದು ಕೇಳಿದ್ದೇ ತಡ, ಬರಿ ಮೈಯಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊಂಡು ನೀರಿಗೆ ಧುಮುಕಿದನು. ಮಿಕ್ಕ ಶಿಷ್ಯರು ಮೀನು ತುಂಬಿದ್ದ ಬಲೆಯನ್ನು ಎಳೆಯುತ್ತಾ ಸುಮಾರು ಮುನ್ನೂರು ಅಡಿ ದೂರದಲ್ಲಿ ಇದ್ದ ದಡಕ್ಕೆ ದೋಣಿಯಲ್ಲೇ ಬಂದರು. ಅವರು ದಡವನ್ನು ಸೇರಿದಾಗ  ಅಲ್ಲಿ ಇದ್ದಲಿನ ಬೆಂಕಿ ಮಾಡಲಾಗಿತ್ತು. ಕೆಂಡದ ಮೇಲೆ ಮೀನುಗಳಿದ್ದವು. ರೊಟ್ಟಿಯೂ ಅಲ್ಲಿತ್ತು. 

ಯೇಸು ಅವರಿಗೆ ,"ನೀವು ಈಗ ತಾನೇ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿ," ಎಂದು ಹೇಳಿದರು. ಸಿಮೋನ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಳೆದು ತಂದನು. ಬೆಲೆಯ ತುಂಬ ದೊಡ್ಡ ಮೀನುಗಳು - ಒಟ್ಟಿಗೆ ನೂರೈವತ್ತಮೂರು ಇದ್ದವು. ಅಷ್ಟು ಮೀನುಗಳಿದ್ದರೂ ಬಲೆಯು ಹರಿದಿರಲಿಲ್ಲ. ಯೇಸು ಅವರಿಗೆ," ಬಂದು ಊಟ ಮಾಡಿ," ಎಂದು ಅವರನ್ನು ಕರೆದರು. ಅವರು ಪ್ರಭುವೆಂದು ಅರಿತಿದ್ದ ಕಾರಣ ಶಿಷ್ಯರಲ್ಲಿ ಒಬ್ಬನಿಗಾದರೂ," ನೀವು ಯಾರು?" ಎಂದು ಕೇಳುವಷ್ಟು ಧೈರ್ಯ ಇರಲಿಲ್ಲ. ಯೇಸು ಹತ್ತಿರಕ್ಕೆ ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟರು; ಹಾಗೆಯೇ ಮೀನನ್ನೂ ಕೊಟ್ಟರು. ಯೇಸು ಸತ್ತು ಜೀವಂತರಾಗಿ ಎದ್ದ ಬಳಿಕ ತಮ್ಮ ಶಿಷ್ಯರಿಗೆ  ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ.

ಪಾಸ್ಖ ಹಬ್ಬದ ಶುಭಾಶಯಗಳು

ಈ ದಿನ ಕರ್ತರು 
ವೇದದ ನೀತಿಯ ಮೇರೆಗೆ
ಸಾಧಿಸಿ ಉತ್ಥಾನರಾದರು
ಅಲ್ಲೆಲೂಯ ಅಲ್ಲೆಲ್ಲೂಯ ಅಲ್ಲೆಲ್ಲೂಯ

ಚಿಂತೆಯ ತೊಲಗಿಸಿ
ಸಂತಸವನ್ನು ಕರುಣಿಸಿ
ಶಾಂತಿ ಸಮಾಧಾನ ತಂದರು
ಅಲ್ಲೆಲೂಯ ಅಲ್ಲೆಲ್ಲೂಯ ಅಲ್ಲೆಲ್ಲೂಯ

ಪಾಸ್ಖ ಹಬ್ಬದ ಶುಭಾಶಯಗಳು