02.06.2026 - ಹಾಗಾದರೆ ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ

ಮೊದಲನೇ ವಾಚನ: 2 ಪೇತ್ರ 3:12-15, 17-18

ಇವೆಲ್ಲವೂ ಹೀಗೆ ನಾಶವಾಗಿ ಹೋಗುವುದರಿಂದ ನೀವು ಎಂಥವರಾಗಿ ಜೀವಿಸಬೇಕು? ಪರಿಶುದ್ದರಾಗಿಯೂ ಭಕ್ತಿಪೂರಿತರಾಗಿಯೂ ಬಾಳಬೇಕು. ದೇವರ ಆ ದಿನವನ್ನು ಎದುರುನೋಡುತ್ತಾ ಅದು ಬೇಗನೆ ಬರಲೆಂದು ಹಾರೈಸಬೇಕು. ಆ ದಿನ, ಆಕಾಶಮಂಡಲವು ಅಗ್ನಿಯಿಂದ ಉರಿದುಹೋಗುವುದು; ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು ಶಾಖದಿಂದ ಕರಗಿಹೋಗುವುವು. ನಾವಾದರೋ, ದೇವರ ವಾಗ್ದಾನದ ಪ್ರಕಾರ ನೀತಿಯ ನೆಲೆಯಾಗಿರುವ ನೂತನ ಆಕಾಶಮಂಡಲವೂ ನೂತನ ಭೂಮಂಡಲವೂ ಬರುವುದನ್ನು ಎದುರು ನೋಡುತ್ತಿರುವೆವು. ಪ್ರಿಯರೇ, ಇವುಗಳನ್ನು ಎದುರುನೋಡುವವರಾಗಿರುವ ನೀವು ದೇವರ ದೃಷ್ಟಿಯಲ್ಲಿ ನಿರ್ಮಲರೂ ನಿರ್ದೋಷಿಗಳೂ ಆಗಿದ್ದು ಶಾಂತಿಸಮಾಧಾನದಿಂದಿರಲು ಪ್ರಯತ್ನಿಸಿರಿ. ನಮ್ಮ ಪ್ರಭುವಿನ ದೀರ್ಘಶಾಂತಿ ಹಾಗು ಸಹನೆ ನಮ್ಮ ಜೀವೋದ್ಧಾರಕ್ಕಾಗಿಯೇ ಎಂದು ತಿಳಿದುಕೊಳ್ಳಿ. ನಮ್ಮ ಪ್ರಿಯ ಸಹೋದರನಾದ ಪೌಲನೂ ಸಹ ತನಗೆ ದೇವರಿತ್ತ ಜ್ಞಾನದ ಪ್ರಕಾರ ಹೀಗೆಯೇ ನಿಮಗೆ ಬರೆದಿದ್ದಾನೆ ಆದಕಾರಣ ಪ್ರಿಯರೇ, ಈ ವಿಷಯಗಳನ್ನು ಮುಂಚಿತವಾಗಿಯೇ ತಿಳಿದುಕೊಂಡಿರುವ ನೀವು ಎಚ್ಚರಿಕೆಯಿಂದಿರಿ. ದುರ್ಜನರ ದುರ್ಬೋಧನೆಗೆ ಮರುಳಾಗದಿರಿ. ನಿಮ್ಮ ಸ್ಥಿರವಿಶ್ವಾಸವನ್ನು ಬಿಟ್ಟು ಭ್ರಷ್ಟರಾಗದಿರಿ. ನಮ್ಮ ಪ್ರಭು ಮತ್ತು ಉದ್ಧಾರಕರಾದ ಯೇಸುಕ್ರಿಸ್ತರ ಅನುಗ್ರಹದಲ್ಲೂ ಅವರನ್ನು ಕುರಿತ ಜ್ಞಾನದಲ್ಲೂ ನೀವು ಅಭಿವೃದ್ಧಿಹೊಂದಿರಿ. ಅವರಿಗೆ ಈಗಲೂ ಯುಗಯುಗಾಂತರಕ್ಕೂ ಮಹಿಮೆಯುಂಟಾಗಲಿ! ಆಮೆನ್.

ಕೀರ್ತನೆ: 90:2, 3-4, 10, 14, 16

ಶ್ಲೋಕ: ಪ್ರಭೂ, ತಲತಲಾಂತರಕ್ಕೆ ಶ್ರೀನಿವಾಸ ನೀನೆಮಗೆ

1.  ಬೆಟ್ಟಗಳು  ಹುಟ್ಟುವುದಕೆ  ಮುಂಚಿನಿಂದ|
ಭೂದೇಶಗಳು  ಆಗುವುದಕ್ಕೆ  ಮೊದಲಿಂದ|
ನೀನೆಮಗೆ  ದೇವರು  ಯುಗಯುಗಗಳಿಂದ||
ಶ್ಲೋಕ

2.  'ನರಪುತ್ರರೇ,  ಮರಳಿ  ಮಣ್ಣಿಗೆ  ಸೇರಿರಿ'  ಎನ್ನುತಿಹೆ|
ನಿನ್ನ  ದೃಷ್ಟಿಯಲ್ಲಿ  ಪ್ರಭೂ,  ಸಹಸ್ರ  ವರುಷ|
ಇರುಳಿನೊಂದು  ಜಾವ,  ಗತಿಸಿಹೋದ  ಒಂದು  ದಿವಸ||
ಶ್ಲೋಕ

3.  ನಮ್ಮ  ಆಯುಷ್ಕಾಲ  ಎಪ್ಪತ್ತು  ವರುಷ|
ಹೆಚ್ಚಾಗಿದ್ದರೆ  ಬಲ  ಎಂಭತ್ತು  ವರುಷ||
ಶ್ಲೋಕ

4.  ಉದಯದಲೆ  ತೋಯಿಸೆಮ್ಮನು  ನಿನ್ನ  ಕೃಪೆಯಿಂದ|
ಹರ್ಷಿಸಿ  ಆನಂದಿಸುವೆವು  ಆಗ  ದಿನದಾದ್ಯಂತ||
ಪ್ರಕಟವಾಗಲಿ  ನಿನ್ನ  ರಕ್ಷಾಕಾರ್ಯ    ಭಕ್ತರಿಗೆ|
ನಿನ್ನ  ಮಹಿಮಾಶಕ್ತಿ  ಅವರ  ಸಂತಾನಕೆ||
ಶ್ಲೋಕ


ಶುಭಸಂದೇಶ: ಮಾರ್ಕ12:13-17


ಆಮೇಲೆ ಅವರು ಯೇಸುಸ್ವಾಮಿಯನ್ನು ಮಾತಿನಲ್ಲೇ ಸಿಕ್ಕಿಸುವ ಉದ್ದೇಶದಿಂದ ಕೆಲವು ಫರಿಸಾಯರನ್ನೂ ಹೆರೋದನ ಪಕ್ಷದ ಕೆಲವರನ್ನೂ ಅವರ ಬಳಿಗೆ ಕಳುಹಿಸಿದರು. ಇವರು ಬಂದು, “ಬೋಧಕರೇ, ತಾವು ಸತ್ಯವಂತರು, ಸ್ಥಾನಮಾನಕ್ಕೆ ಮಣಿಯದವರು, ಮುಖದಾಕ್ಷಿಣ್ಯಕ್ಕೆ ಎಡೆಕೊಡದವರು, ಸತ್ಯಕ್ಕನುಸಾರ ದೈವಮಾರ್ಗವನ್ನು ಬೋಧಿಸುವವರು ಎಂದು ನಾವು ಬಲ್ಲೆವು. ಹೀಗಿರುವಲ್ಲಿ ರೋಮ್ ಚಕ್ರಾಧಿಪತಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ, ಅಲ್ಲವೋ? ನಾವದನ್ನು ಕೊಡಬೇಕೋ, ಬೇಡವೋ?” ಎಂದು ಕೇಳಿದರು. ಅವರ ಕಪಟತನವನ್ನು ಯೇಸು ಗ್ರಹಿಸಿ, “ನೀವು ನನ್ನನ್ನು ಪರೀಕ್ಷಿಸುವುದೇಕೆ? ಒಂದು ನಾಣ್ಯವನ್ನು ತನ್ನಿ, ಅದನ್ನು ನೋಡೋಣ,” ಎಂದರು. ಅವರೊಂದು ನಾಣ್ಯವನ್ನು ತಂದರು. “ಇದರ ಮೇಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಯೇಸು ಕೇಳಿದರು. ಅದಕ್ಕೆ ಅವರು, “ಅವು ರೋಮ್ ಚಕ್ರವರ್ತಿಯವು,” ಎಂದರು. ಆಗ ಯೇಸು, “ಹಾಗಾದರೆ ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದರು. ಇದನ್ನು ಕೇಳಿದ್ದೇ ಆ ಜನರು ಯೇಸುವಿನ ಬಗ್ಗೆ ಅತ್ಯಾಶ್ಚರ್ಯಪಟ್ಟರು.

No comments:

Post a Comment

02.06.2026 - ಹಾಗಾದರೆ ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ

ಮೊದಲನೇ ವಾಚನ: 2 ಪೇತ್ರ 3:12-15, 17-18 ಇವೆಲ್ಲವೂ ಹೀಗೆ ನಾಶವಾಗಿ ಹೋಗುವುದರಿಂದ ನೀವು ಎಂಥವರಾಗಿ ಜೀವಿಸಬೇಕು? ಪರಿಶುದ್ದರಾಗಿಯೂ ಭಕ್ತಿಪೂರಿತರಾಗಿಯೂ ಬಾಳಬೇಕು. ದೇವ...