01.03.2026 - ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು

 ಮೊದಲನೆಯ ವಾಚನ : ಆದಿಕಾಂಡ 12:1-4 

ಸರ್ವೇಶ್ವರಸ್ವಾಮಿ ಅಬ್ರಾಹಮನಿಗೆ ಹೀಗೆಂದರು: "ನೀನು ನಿನ್ನ ಸ್ವಂತ ನಾಡನ್ನೂ ಬಂಧು ಬಳಗದವರನ್ನೂ ತವರು ಮನೆಯನ್ನೂ ಬಿಟ್ಟು ನಾನು ತೋರಿಸುವ ನಾಡಿಗೆ ಹೊರಟುಹೋಗು.  ನಾನು ನಿನ್ನನ್ನು ದೊಡ್ಡ ಜನಾಂಗವಾಗಿ ಮಾಡುತ್ತೇನೆ.  ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರಿಗೆ ಘನತೆ ಗೌರವವನ್ನು ತರುತ್ತೇನೆ.  ನೀನೇ ಆದರ್ಶದ ಆಶೀರ್ವಾದವಾಗಿ ಬೆಳಗುವೆ.  "ನಿನ್ನನ್ನು ಹರಸುವವರನ್ನು ನಾ ಹರಸುವೆ.  ನಿನ್ನನ್ನು ಶಪಿಸುವವರನು ನಾ ಶಪಿಸುವೆ.  ಧರೆಯ ಕುಲದವರಿಗೆಲ್ಲ ನಿನ್ನ ಮುಖೇನ ದೊರಕುವುದು ನನ್ನಿಂದ ಆಶೀರ್ವಾದ." ಸರ್ವೇಶ್ವರ ಹೀಗೆಂದು ಹೇಳಿದ ಮೇಲೆ ಅಬ್ರಾಮನು  ಹೊರಟು ಹೋದನು.

ಕೀರ್ತನೆ  33:4-5, 18-19, 20,22


ಶ್ಲೋಕ : ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ,
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ ಕೀರ್ತನೆ
33:4-5,18-20,22,v. 22

ಶ್ಲೋಕ:  ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ | ಕಾದಿಹೆವು ಇದೋ ನಿನ್ನ ನಂಬಿ ಭರವಸದಿ ||

1.  ಸತ್ಯವಾದುದು ಆತನ ಪವಿತ್ರ ವಾಕ್ಯ|
ಸ್ತುತ್ಯವಾದುದು ಆತನ ಪುನೀತ ಕಾರ್ಯ||
ಸತ್ಯಸಂಧನು, ನ್ಯಾಯಪ್ರಿಯನು ಆತನು|
ಆಚಲ ಪ್ರೀತಿಯಿಂದ ಜಗವನು ತುಂಬಿಹನು||
ಶ್ಲೋಕ

2.  ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು|
ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು||
ತಪ್ಪಿಸುವನವನು ಪ್ರಾಣವನು ಮರಣದಿಂದ|
ಉಳಿಸುವನು ಜೀವವನು ಕ್ಷಾಮಡಾಮರದಿಂದ||
ಶ್ಲೋಕ

3.  ಕಾದಿದೆ ಎನ್ನ ಮನ ಪ್ರಭುವಿಗಾಗಿ|
ಆತನಿಹನು ಎನಗೆ ಗುರಾಣಿಯಾಗಿ||
ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ|
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ||
ಶ್ಲೋಕ


ಎರಡನೆಯ ವಾಚನ : 2 ತಿಮೋಥೇಯನಿಗೆ 1:8-10 


ಆದ್ದರಿಂದ ಕ್ರಿಸ್ತಯೇಸುವಿಗೆ ಸಾಕ್ಷಿ ಆಗಿರಲು ನಾಚಬೇಡ. ಅವರಿಗಾಗಿ ಬಂಧಿಯಾಗಿರುವ ನನ್ನ  ವಿಷಯದಲ್ಲೂ  ನಾಚಬೇಡ. ದೇವರ ಶಕ್ತಿಯನ್ನು ಆಶ್ರಯಿಸಿ ನನ್ನೊಡನೆ ಶುಭಸಂದೇಶಕ್ಕೋಸ್ಕರ ನಿನ್ನ ಪಾಲಿನ ಶ್ರಮವನ್ನು ಅನುಭವಿಸು. ನಾವು ಸ್ವಂತ ಸತ್ಕಾರ್ಯಗಳಿಂದಲ್ಲ,   ದೇವರ ಯೋಜನೆ ಹಾಗೂ ಅನುಗ್ರಹಗಳಿಂದಲೇ ಜೀವೋದ್ಧಾರ ವರವನ್ನು ಪಡೆದಿದ್ದೇವೆದೇವರ ಪ್ರಜೆಗಳೆನಿಸಿಕೊಂಡಿದ್ದೇವೆ ಅನುಗ್ರಹವನ್ನು ಕ್ರಿಸ್ತಯೇಸುವಿನಲ್ಲಿ ಅನಾದಿಯಿಂದಲೇ ನಮಗೆ ಕೊಡಲಾಯಿತು ಕಾಲದಲ್ಲೂ ನಮ್ಮಉದ್ಧಾರಕ ಕ್ರಿಸ್ತಯೇಸುವಿನ ಪ್ರತ್ಯಕ್ಷದ ಮೂಲಕ ಅದನ್ನು ಬಹಿರಂಗಪಡಿಸಲಾಗಿದೆಮೃತ್ಯುಶಕ್ತಿಯನ್ನು ವಿನಾಶಗೊಳಿಸಿ ಅಮರ   ಜೀವವನ್ನು ಶುಭಸಂದೇಶದ ಮೂಲಕ ಬೆಳಕಿಗೆ ತಂದವರು ಯೇಸುವೇ.
ಮತ್ತಾಯ 17:1-9

ಆ ಕಾಲದಲ್ಲಿ ಪೇತ್ರ, ಯಕೋಬ ಮತ್ತು ಆತನ ಸಹೋದರ ಯೊವಾನ್ನ ಇವರನ್ನು ಯೇಸು ಪ್ರತ್ಯೇಕವಾಗಿ ತಮ್ಮೊಡನೆ ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದರು.  ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಯೇಸು ರೂಪಾಂತರ ಹೊಂದಿದರು, ಅವರ ಮುಖ ಸೂರ್ಯನಂತೆ ಪ್ರಕಾಶಿಸಿತು.  ಅವರ ಉಡುಪು ಬೆಳಕಿನಂತೆ ಪ್ರಜ್ವಲಿಸಿತು.  ಇದ್ದಕ್ಕಿದ್ದ ಹಾಗೆ ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಅವರಿಗೆ ಕಾಣಿಸಿತು.  ಆಗ ಪೇತ್ರನು ಯೇಸುವಿಗೆ, "ಪ್ರಭೂ, ನಾವು ಇಲ್ಲೇ ಇರುವುದು ಎಷ್ಟು ಒಳ್ಳೆಯದು!   ಅಪ್ಪಣೆಯಾದರೆ ಇಲ್ಲಿ ಮೂರು ಗುಡಾರಗಳನ್ನು ಕಟ್ಟುವೆನು.  ತಮಗೊಂದು, ಮೋಶೆಗೊಂದು ಎಲೀಯನಿಗೊಂದು, "ಎಂದನು.  ಪೇತ್ರ ಇನ್ನೂ ಮಾತನಾಡುತ್ತಿರುವಾಗಲೇ ಪ್ರಕಾಶ ಮಾನವಾದ ಮೇಘವೊಂದು ಅವರನ್ನು ಆವರಿಸಿತು;  ಆ ಮೇಘದಿಂದ ಒಂದು ವಾಣಿ, "ಈತನು ನನ್ನ ಪುತ್ರ, ನನಗೆ ಪರಮ  ಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು.  ಈತನ ಮಾತಿಗೆ ಕಿವಿಗೊಡಿ,"  ಎಂದಿತು.  ಶಿಷ್ಯರು ಈ ವಾಣಿಯನ್ನು ಕೇಳಿ ಭಯಭ್ರಾಂತರಾದರು; ಬೋರಲು ಬಿದ್ದರು.  ಆಗ ಯೇಸು ಅವರ ಹತ್ತಿರಕ್ಕೆ ಬಂದು ಅವರನ್ನು ಮುಟ್ಟಿ, "ಏಳಿ, ಭಯಪಡಬೇಡಿ," ಎಂದರು.  ಅವರು ಕಣ್ಣೆತ್ತಿ ನೋಡಿದಾಗ ಯೇಸುವನ್ನು ಬಿಟ್ಟು ಮತ್ತೆ ಯಾರನ್ನೂ ಕಾಣಲಿಲ್ಲ.  ಅವರೆಲ್ಲರು ಬೆಟ್ಟದಿಂದ ಇಳಿದು ಬರುವಾಗ ಯೇಸು, "ನರಪುತ್ರನು ಸತ್ತು ಪುನರುತ್ಥಾನ ಹೊಂದುವ ತನಕ ನೀವು ಕಂಡ ಈ ದರ್ಶನವನ್ನು ಯಾರಿಗೂ ಹೇಳಬೇಡಿ," ಎಂದು ಆಜ್ಞಾಪಿಸಿದರು.

ಮನಸ್ಸಿಗೊಂದಿಷ್ಟು 

ಬೆಟ್ಟದ ಮೇಲಿನ ಯೇಸುವಿನ ರೂಪಾಂತರದ ಅದ್ಭುತ ದೃಶ್ಯ ಕಾವ್ಯವನ್ನು ಕಂಡ ಪೇತ್ರ ಅಲ್ಲೇ ಗುಡಾರ ಮಾಡಿಕೊಳ್ಳುವ ಆಲೋಚನೆ ಮಾಡುತ್ತಾನೆ. ಆದರೆ ಯೇಸುವಿಗದು  ಮುಂದೆ ತಾವು ಶಿಲುಬೆ ಏರಿ ಮಾಡಬೇಕಾದ ಮಹತ್ತ್ ಕಾರ್ಯದ ಮೆಟ್ಟಿಲು. ಅದನ್ನೇ ದೇವರೊಂದಿಗೆ ಮತ್ತೊಮ್ಮೆ ಧೃಡೀಕರಿಸಲು ಬೆಟ್ಟ ಈ ರೂಪಾಂತರ ಸಾಧನ,ವೇದಿಕೆಯಾಗುತ್ತದೆ. ನಾವು ಕೂಡ ಎಷ್ಟೋ ಬಾರಿ ನಮಗಿಷ್ಟವಾದ  ವಾತಾವರಣದಲ್ಲಿ ಹಾಯಾಗಿ ಇರಲು ಇಷ್ಟಪಡುತ್ತೇವೆ. ಆದರೆ ಕ್ರೈಸ್ತರಾಗಿ ನಮ್ಮ ಶಿಲುಬೆ ಹೊತ್ತು ನಿಜ ಕ್ರೈಸ್ತ ಜವಾಬ್ದಾರಿಗಳನ್ನು ಹೊರಲು ಸಿದ್ಧರಾಗಬೇಕಾಗಿದೆ.

ಪ್ರಭುವೇ,

ಬೆಟ್ಟದ ಮೇಲೆ ಕೇಳಿಸಿತು 
ಪಿತನ ಮೆಚ್ಚುಗೆ 
ಅದೇ ಆನಂದಲ್ಲಿ ಇರಬಹುದಿತ್ತು 
ನೀವು ಬೆಚ್ಚಗೆ 
ಆದರೆ ನಿಮ್ಮದು  
ಶಿಲುಬೆಯ ಮಾರ್ಗ
ಮಾಡಲು ನಮ್ಮ 
ರಕ್ಷಣೆಯ ದಾರಿ ಸರಾಗ 

-ಚಿತ್ತ

28.02.2026 - ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ

 ಮೊದಲನೇಯ ವಾಚನ : ಧರ್ಮೋಪದೇಶಕಾಂಡ 26:16-19


“ಈ ಆಜ್ಞಾವಿಧಿಗಳನ್ನು ನೀವು ಅನುಸರಿಸಬೇಕದು ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಇಂದು ಆಜ್ಞಾಪಿಸಿದ್ದಾರೆ. ಆದುದರಿಂದ ನೀವು ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಇವುಗಳನ್ನು ಕೈಕೊಂಡು ನಡೆಯಬೇಕು. ನಮಗೆ ಸರ್ವೇಶ್ವರನೇ ದೇವರಾಗಿರುವರೆಂದು ಹಾಗು ಅವರು ಹೇಳಿದ ಮಾರ್ಗದಲ್ಲೇ ನಡೆದು ಅವರ ಆಜ್ಞಾವಿಧಿನಿರ್ಣಯಗಳನ್ನು ಕೈಕೊಂಡು ಅವರ ಮಾತಿಗೆ ಲಕ್ಷ್ಯಕೊಡುವೆವೆಂದೂ ನೀವು ಈಗ ಒಡಂಬಟ್ಟಿದ್ದೀರಿ. ಸರ್ವೇಶ್ವರ ಸ್ವಾಮಿ ಆದರೋ ನಿಮ್ಮ ವಿಷಯದಲ್ಲಿ,‘ಇವರು ನನ್ನ ಆಜ್ಞೆಗಳನ್ನೆಲ್ಲ ಅನುಸರಿಸುವವರಾದರೆ ನನ್ನ ವಾಗ್ದಾನಾನುಸಾರ ನನಗೆ ಸ್ವಕೀಯಜನರಾಗಿರುವರು. ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತ ಇವರಿಗೆ ಹೆಚ್ಚಾದ ಕೀರ್ತಿಘನಮಾನಗಳನ್ನುಂಟು ಮಾಡುವೆನು ಹಾಗು ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಸರ್ವೇಶ್ವರನಿಗೆ ಮೀಸಲಾದ ಜನರಾಗಲು ಒಡಂಬಟ್ಟಿದ್ದಾರೆ,’ ಎನ್ನುವರು,” ಎಂದು ಹೇಳಿದನು.

ಕೀರ್ತನೆ : 119:1-2, 4-5, 7-8
ಶ್ಲೋಕ : ಪ್ರಭುವಿನ ಶಾಸ್ರ್ತಾನುಸಾರ ನಡೆಸುವವರು ಧನ್ಯರು

ಶುಭ ಸಂದೇಶ : ಮತ್ತಾಯ 5:43-48

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರರಿಗೆ ಹೀಗೆಂದರು: ‘ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು’ ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ. ನಾನು ಹೇಳುವುದನ್ನು ಗಮನಿಸಿರಿ; ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ. ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ. ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕ ವಸೂಲಿಮಾಡುವವರೂ ಹಾಗೆ ಮಾಡುವುದಿಲ್ಲವೇ? ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯಜನರೂ ಹಾಗೆ ಮಾಡುತ್ತಾರಲ್ಲವೇ? ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ.” 

ಮನಸ್ಸಿಗೊಂದಿಷ್ಟು : ’ಶತ್ರುವಿಗಾಗಿ ಪ್ರೀತಿಸಿ’ ಎಂದ ಯೇಸು ’ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ’ ಎನ್ನುತ್ತಾ ಮತ್ತೊಂದು ಕಠಿಣವಾದ ಮೆಟ್ಟಿಲನ್ನು ಏರಲು ಹೇಳುತ್ತಿದ್ದಾರೆ. ಅದು ಕಠಿಣ ಎನಿಸಿದರೆ ಅವರ ಮುಂದಿನ ಮಾತು ನಮ್ಮ ಕಣ್ಣು ತೆರೆಸಬೇಕು. ಪಾಪಿ ಪುಣ್ಯವಂತರೆನ್ನದೆ ಎಲ್ಲರ ಮೇಲೆ ಬೆಳಕು, ಮಳೆ ಸುರಿಸುವ ದೇವರ ಕಾರುಣ್ಯದ ಒಂದಷ್ಟು ಭಾಗವಾದರೂ ನಮ್ಮ ಹೃದಯಕ್ಕೆ ಬರಲು ನಾವು ಅವಕಾಶ ಮಾಡಿಕೊಡಬೇಕಾಗಿದೆ.

ಪ್ರಶ್ನೆ : ನಮ್ಮ ಶತ್ರುಗಳನ್ನು ಪ್ರೀತಿಸುವುದು ಕಷ್ಟವೋ? ಅವರಿಗಾಗಿ ಪ್ರಾರ್ಥಿಸಿವುದು ಹೆಚ್ಚು ಕಷ್ಟವೋ?

ಪ್ರಭುವೇ,
ಮಿತ್ರರಿಗಿಂತ ಶತ್ರುಗಳೇ ಹೆಚ್ಚು
ನಮ್ಮ ಆಲೋಚನೆಗಳಲ್ಲಿರಲು
ಅವರ ಪ್ರೀತಿಸಿ ಪ್ರಾರ್ಥಿಸಿ
ನಿಮ್ಮಂತೆ ಪರಿಪೂರ್ಣರಾಗಲು
ಅರಿವಿನ ಬೆಳಕಾಗಿ ನನ್ನಲ್ಲಿ ಬನ್ನಿಒಲವಿನ ಮಳೆಯನ್ನು ತನ್ನಿ

27.02.2026 - ತನ್ನ ಸೋದರನನ್ನು ತುಚ್ಛೀಕರಿಸುವವನು ನ್ಯಾಯಸಭೆಯ ವಿಚಾಣೆಗೆ ಒಳಗಾಗುವನು

 ಮೊದಲನೇಯ ವಾಚನ :  ಯೆಜೆಕಿಯೇಲ 18 : 21-28


"ಆದರೆ ದುಷ್ಟನು ತಾನು ಮಾಡುತ್ತಿದ್ದ  ಪಾಪಗಳನ್ನೆಲ್ಲಾ ಬಿಟ್ಟುಬಿಟ್ಟು, ನನ್ನ ಸಕಲ ವಿಧಿಗಳನ್ನು ಕೈಗೊಂಡು, ನ್ಯಾಯ ನೀತಿಗಳನ್ನು ನಡೆಸಿದರೆ ಸಾಯನು; ಖಂಡಿತ ಜೀವಿಸುವನು. ಅವನು ಮಾಡಿದ ಯಾವ ಅಪರಾಧವೂ ಆತನ ಲೆಕ್ಕಕ್ಕೆ ಸೇರದು. ಅವನು ಮಾಡುತ್ತಿರುವ ಸದ್ಧರ್ಮದಿಂದಲೇ ಅವನು ಜೀವಿಸುವನು. ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ. ದುಷ್ಟನ ಸಾವಿನಲ್ಲಿ ನನಗೆ ಲವಲೇಶವಾದರೂ ಸಂತೋಷವಿಲ್ಲ. ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. ಆದರೆ ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು, ಅಧರ್ಮಮಾಡಿ, ದುಷ್ಟನು ನಡೆಸುವ ದುರಾಚಾರಗಳನ್ನೆಲ್ಲಾ ನಡೆಸಿದರೆ, ಅವನು ಜೀವಿಸುವನೇ? ಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಲ್ಪಡದು, ಅವನು ಮಾಡುತ್ತಿರುವ ಪಾಪಾಪರಾಧಗಳಿಂದಲೇ ಸಾಯುವನು. "ಆದರೆ ನೀವು, 'ಸರ್ವೇಶ್ವರನ ಕ್ರಮ ಸರಿಯಿಲ್ಲ' ಎಂದು ಹೇಳುತ್ತಿದ್ದೀರಿ; ಇಸ್ರಯೇಲ್ ವಂಶದವರೇ ನನ್ನ ಕ್ರಮವು ಸರಿಯಿಲ್ಲವೇ? ನಿಮ್ಮ ಕ್ರಮವೇ ಸರಿಯಿಲ್ಲವಷ್ಟೆ. ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮದಿಂದಲೇ ಸಾಯಬೇಕಾಯಿತು. ದುಷ್ಟನು ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟು, ನ್ಯಾಯನೀತಿಗಳನ್ನು ನಡೆಸಿದರೆ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು. ಅವನು ಯೋಚಿಸಿ, ತಾನು ಮಾಡುತ್ತಿದ್ದ ಅಪರಾಧಗಳನ್ನೆಲ್ಲಾ ಬಿಟ್ಟದ್ಧರಿಂದ ಸಾಯನು, ಖಂಡಿತ ಜೀವಿಸುವನು.

ಕೀರ್ತನೆ: 130: 1-2, 3-4, 5-7, 7-8

ಶ್ಲೋಕ: ಪಾಪಗಳ ನೀ ಪಟ್ಟಿ ಮಾಡಿದೆಯಾದರೆ ಪ್ರಭೂ ನಿನ್ನ ಮುಂದೆ ಯಾರು ತಾನೆ ನಿಲ್ಲಬಲ್ಲರು ವಿಭೂ?

ಶುಭಸಂದೇಶ: ಮತ್ತಾಯ 5:20-26

"ಧರ್ಮಶಾಸ್ತ್ರಿಗಳ ಹಾಗೂ ಫರಿಸಾಯರ ಧರ್ಮನಿಷ್ಠೆಗಿಂತ ನಿಮ್ಮ ಧರ್ಮನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸಲಾರಿರಿ ಎಂಬುದು ನಿಶ್ಚಯ."  "ನರಹತ್ಯೆ ಮಾಡಬೇಡ; ನರಹತ್ಯೆ ಮಾಡುವವನು ನ್ಯಾಯತೀರ್ಪಿಗೆ ಗುರಿಯಾಗುವನು' ಎಂದು ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. ಆದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ: ತನ್ನ ಸೋದರನ ಮೇಲೆ (ನಿಷ್ಕಾರಣವಾಗೆ) ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯತೀರ್ಪಿಗೆ ಈಡಾಗುವನು; ತನ್ನ ಸೋದರನನ್ನು ತುಚ್ಛೀಕರಿಸುವವನು ನ್ಯಾಯಸಭೆಯ ವಿಚಾಣೆಗೆ ಒಳಗಾಗುವನು; 'ಮುರ್ಖ' ಎಂದು ಮೂದಲಿಸುವವನು ನರಕಾಗ್ನಿಗೆ ಗುರಿಯಾಗುವನು. ಆದಕಾರಣ, ಬಲಿಪೀಠದ ಮುಂದೆ ದೇವರಿಗೆ ಕಾಣಿಕೆಯನ್ನು  ಅರ್ಪಿಸಲಿರುವಾಗ, ನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಃಸ್ತಾಪವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಬಲೀಪೀಠದ ಮುಂದೆಯೇ ಇಟ್ಟುಬಿಡು. ಮೊದಲು ಹೋಗಿ ನಿನ್ನ ಸೋದರನೊಡನೆ ಸಮಾಧಾನ ಮಾಡಿಕೊ, ಆನಂತರ ಬಂದು ನಿನ್ನ ಕಾಣಿಕೆಯನ್ನು ಒಪ್ಪಿಸು."  "ನಿನ್ನ ಎದುರಾಳಿ ನಿನ್ನನ್ನು ನ್ಯಾಯ ಸ್ಥಾನಕ್ಕೆ ಎಳೆಯುವಾಗ ಮಾರ್ಗ ಮಧ್ಯೆದಲ್ಲೇ ಅವನೊಡನೆ ಬೇಗ ಸಂಧಾನ ಮಾಡಿಕೊ. ಇಲ್ಲದಿದ್ದರೆ, ಅವನು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು. ನ್ಯಾಯಾಧಿಪತಿ ನಿನ್ನನ್ನು ಪೋಲೀಸರ ವಶಕ್ಕೆ ಬಿಡಬಹುದು. ಆನಂತರ ನಿನಗೆ ಸೆರೆವಾಸ ಪ್ರಾಪ್ತವಾದೀತು! ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಬಿಡಿ ಕಾಸನ್ನೂ ಬಿಡದೆ ಎಲ್ಲವನ್ನೂ ತೆರಬೇಕಾಗುವುದು. ಇದನ್ನು ನೆನಪಿನಲ್ಲಿಡು.

ಮನಸಿಗೊಂದಿಷ್ಟು : ಯೇಸು ಇಲ್ಲಿ ಅತ್ಯಂತ ಸರಳವೂ ಆದರೆ ಕಷ್ಟವೂ ಆದ ಪರಿಹಾರವನ್ನು ಕೊಡುತ್ತಾರೆ. ಅದೆಷ್ಟೋ ದ್ವೇಷ, ಮನಸ್ತಾಪಗಳು ಮೊಳಕೆಯಲ್ಲೇ ಪರಿಹರಿಸಬಹುದಾದರೂ ಅದು ಕುಟುಂಬಗಳಿಗೆ, ಮುಂದಿನ ತಲೆ ಮಾರುಗಳಿಗೂ ಸಾಗುವುದನ್ನು ನಾವು ಕಾಣುತ್ತೇವೆ. ಭಾರತದಂತ ದೇಶದಲ್ಲಿ ಅತ್ಯಂತ ಹೆಚ್ಚಿನ ಮೊಕದೊಮ್ಮೆಗಳು ಕೇಸುಗಳು ದಾಖಲಾಗುವುದು  ಹೊಲ ಗದ್ದೆಗಳ ನಡುವಿನ ದಾರಿಯ ಕಾರಣಕ್ಕೇ. ಇಲ್ಲಿ ಸೋತು ಗೆಲ್ಲುವ, ಗೆದ್ದು ಸೋಲುವ  ಮಾರ್ಗ ಯೇಸುವಿನದು.

ಪ್ರಶ್ನೆ : ನಾವು ಮತ್ತೊಬ್ಬರನ್ನು ತುಚ್ಛೀಕರಿಸಿದ ಸಂದರ್ಭಗಳ ಲೆಕ್ಕ ನಮ್ಮಲ್ಲಿದೆಯೇ?   

26.02.2026 - ಕೇಳಿರಿ, ನಿಮಗೆ ಕೊಡಲಾಗುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು.

 ಮೊದಲನೇ ವಾಚನ: ಎಸ್ತೇರಳು 14:12, 14-16, 23-25


ಮರಣ ಭಯದಿಂದ ಕಂಗೆಟ್ಟ ರಾಣಿ ಎಸ್ತೇರಳು ಸರ್ವೇಶ್ವರನ ಆಶ್ರಯವನ್ನು ಕೋರಿದಳು. ಇಸ್ರಯೇಲರ ದೇವರಾದ ಸರ್ವೇಶ್ವರನಿಗೆ ಪ್ರಾರ್ಥನೆ ಮಾಡುತ್ತಾ ಈ ಪರಿ ಮೊರೆಯಿಟ್ಟಳು: "ನನ್ನ ಸರ್ವೇಶ್ವರ, ಅರಸನೇ, ತಾವೊಬ್ಬರೇ ದೇವರು, ಒಬ್ಬಂಟಿಗಳು ನಾನು, ತಾವೇ ನನಗೆ ನೆರವು. ನನ್ನ ಪ್ರಾಣಕ್ಕೆ ಗಂಡಾಂತರ ಬಂದಿಹ ಈ ವೇಳೆಯಲಿ ತಮ್ಮನ್ನಲ್ಲದೆ ಯಾರನ್ನು ಆಶ್ರಯಿಸಲಿ? ತಾವಾರಿಸಿಕೊಂಡಿರಿ ಸಕಲ ರಾಷ್ಟ್ರಗಳಿಂದ ಇಸ್ರಯೇಲನ್ನು ತಮ್ಮ ಪ್ರಜೆಯಾಗಲು ಪ್ರತ್ಯೇಕಿಸಿದಿರಿ, ನಮ್ಮ ಪೂರ್ವಜರನ್ನು. ತಪ್ಪದೆ ಈಡೇರಿಸಿದಿರಿ. ತಮ್ಮ ವಾಗ್ದಾನಗಳನ್ನು ಕುಟುಂಬದವರಿಂದ ಬಾಲ್ಯದಿಂದಲೇ ನಾ ಕಲಿತ ಈ ಪಾಠವನ್ನು. ಸರ್ವೇಶ್ವರಾ, ನಮ್ಮನ್ನು ತಂದುಕೊಳ್ಳಿ ನೆನಪಿಗೆ ಆಪತ್ತಿನಲ್ಲಿ ನೆರವಿತ್ತು ಧೈರ್ಯನೀಡಿ ನಮಗೆ ರಾಜಾಧಿರಾಜ, ಒಡೆಯ ತಾವು ಸಕಲ ದೇವರುಗಳಿಗೆ. ಕರುಣಿಸಿ, ಸಿಂಹರಾಜನ ಮುಂದೆ ನಿಂತು ನಾ ವಾದಿಸುವಂತೆ ಈ ರಾಜನು  ಶತ್ರು ಹಾಮಾನನನ್ನು ದ್ವೇಷಿಸುವಂತೆ ಆ ಶತ್ರು ಹಾಗು ಅವನ ಸಂಗಡಿಗರು ನಾಶವಾಗುವಂತೆ. ಸರ್ವೇಶ್ವರಾ, ರಕ್ಷಿಸಿ ನೆರವಿತ್ತು ಈ ಒಬ್ಬಂಟಿಗಳಿಗೆ, ಯಾರನ್ನು ಆಶ್ರಯಿಸಲಿ ನಾನು, ತಮ್ಮನ್ನಲ್ಲದೆ?

ಕೀರ್ತನೆ: 138:1-2, 2-3, 7-8

ಶ್ಲೋಕ:ಸರ್ವೇಶ್ವರಾ, ಮೊರೆಯಿಟ್ಟಾಗ ದಯಪಾಲಿಸಿದೆ ಎನಗೆ ಸದುತ್ತರವನು

ಶುಭಸಂದೇಶ: ಮತ್ತಾಯ 7:7-12

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಕೇಳಿರಿ, ನಿಮಗೆ ಕೊಡಲಾಗುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು. ಏಕೆಂದರೆ ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡಲಾಗುವುದು, ಹುಡುಕುವವನಿಗೆ ಸಿಗುವುದು, ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು. ನಿಮ್ಮಲ್ಲಿ ಯಾವನು ತಾನೇ ತನ್ನ ಮಗ ರೊಟ್ಟಿಯನ್ನು ಕೇಳಿದರೆ ಕಲ್ಲನ್ನು ಕೊಟ್ಟಾನು? ವಿೂನನ್ನು ಕೇಳಿದರೆ ಹಾವನ್ನು ಕೊಟ್ಟಾನು? ಕೆಟ್ಟವರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅದಕ್ಕಿಂತಲೂ ಎಷ್ಟೋ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಒಳ್ಳೆಯ ಕೊಡುಗೆಗಳನ್ನು ಕೊಡಬಲ್ಲರು!" "ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿ. ಧರ್ಮಶಾಸ್ತ್ರದ ಹಾಗೂ ಪ್ರವಾದನೆಗಳ ಸಾರ ಇದೇ."

https://soundcloud.com/prashanth-ignatius/maganu-tanna/s-t9Ng1

ಮನಸ್ಸಿಗೊಂದಿಷ್ಟು :  ನಾವು ಪ್ರಾರ್ಥನೆಯಲ್ಲಿ ನಿರಾಶರಾಗಬಾರದು ಎಂಬುದು ಯೇಸುವಿನ ಇಂಗಿತ. ನಮ್ಮ ಪ್ರಾರ್ಥಿಸುವುದನ್ನು ಖಂಡಿತ ಕೊಡುವಷ್ಟು ದೇವರು ಒಳ್ಳೆಯವರು ಎಂಬುದು ಅವರ ಮಾತು. ಅದರೆ ನಾವು ಕೇಳಿಕೊಳ್ಳುವ ಬಿನ್ನಹ ದೇವರನ್ನು ಕೇಳಲು ಯೋಗ್ಯವೇ ಎಂಬುದನ್ನು ನಾವು ಯೋಚಿಸಬೇಕು.

ಪ್ರಶ್ನೆ : ಇತರರು ನಮಗೇನು ಮಾಡಬೇಕೆಂದು ಅಪೇಕ್ಷಿಸುತ್ತೇವೂ ಅದನ್ನು  ನಾವು ಇತರರಿಗೆ ಮಾಡುತ್ತಿದ್ದೇವೆಯೇ?

ಪ್ರಭುವೇ,
ನಮಗೆ ಒಳ್ಳೆಯದನ್ನೇ ನೀಡುವವರು ನೀವು
ಎಲ್ಲದರಲ್ಲೂ ನಿಮ್ಮನೇ ನೆಚ್ಚುವಂತೆ ನಾವು
ನಮ್ಮ ಹೃದಯವು ಮಾರ್ಪಡಲಿ

25.02.2026 - ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು

 ಮೊದಲನೇ ವಾಚನ: ಯೋನ 3: 1-10



ಯೋನನಿಗೆ ಆ ಸ್ವಾಮಿಯ ವಾಣಿ ಪುನಃ ಕೇಳಿಸಿತು: “ಎದ್ದು ಮಹಾನಗರವಾದ ನಿನೆವೆಗೆ ಹೋಗು. ನಾನು ನಿನಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿಗಳಿಗೆ ಸಾರು,” ಎಂದಿತು. ಸ್ವಾಮಿಯ ಆಜ್ಞಾನುಸಾರ ಯೋನನು ನಿನೆವೆಗೆ ಹೋದನು. ಅದೊಂದು ವಿಸ್ತಾರವಾದ ನಗರ. ಅದನ್ನು ಹಾದುಹೋಗಲು ಮೂರು ದಿನಗಳು ಹಿಡಿಯುತ್ತಿತ್ತು. ನಗರವನ್ನು ಪ್ರವೇಶಿಸಿ ಒಂದು ದಿನದ ಪ್ರಯಾಣಮಾಡಿದ ನಂತರ ಯೋನನು ಸ್ವಾಮಿಯ ಸಂದೇಶವನ್ನು ಸಾರುತ್ತಾ, “ಜನರೇ ಕೇಳಿ: ನಿಮ್ಮ ನಗರ ನಲವತ್ತು ದಿನಗಳಲ್ಲಿ ನಾಶವಾಗುವುದು,” ಎಂದನು. ಆ ನಗರದ ನಿವಾಸಿಗಳು ದೇವರ ಸಂದೇಶವನ್ನು ನಂಬಿದರು. ಪ್ರತಿಯೊಬ್ಬನೂ ಉಪವಾಸ ಕೈಗೊಳ್ಳಬೇಕೆಂದು ನಿರ್ಧರಿಸಿದರು. ಹಿರಿಯರು ಮೊದಲುಗೊಂಡು ಕಿರಿಯರವರೆಗೆ – ಎಲ್ಲರೂ ಮನಃಪರಿವರ್ತನೆಯ ಚಿಹ್ನೆಯಾಗಿ ಗೋಣಿತಟ್ಟನ್ನು ಉಟ್ಟುಕೊಂಡರು. ಈ ಸಂಗತಿ ನಿನೆವೆಯ ಅರಸನ ಕಿವಿಗೆ ಬಿದ್ದಿತು. ಅವನು ಸಿಂಹಾಸನದಿಂದ ಇಳಿದು, ತನ್ನ ರಾಜವಸ್ತ್ರಗಳನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡನು. ಕೂಡಲೇ ತನ್ನ ಪ್ರಜೆಗಳಿಗೆ ಈ ರಾಜಾಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿದನು: “ಅರಸನ ಹಾಗೂ ಆತನ ಆಪ್ತ ಪ್ರಮುಖರ ಆಜ್ಞೆಯಿದು: ಜನರಾಗಲೀ, ದನಕರುಗಳಾಗಲೀ, ಕುರಿಮೇಕೆಗಳಾಗಲೀ, ಯಾರೂ ಏನನ್ನೂ ತಿನ್ನಬಾರದು, ಕುಡಿಯಲೂಬಾರದು. ಎಲ್ಲ ಜನರೂ ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು: ಪ್ರಾಣಿಗಳಿಗೂ ಹೊದಿಸಬೇಕು. ದೇವರನ್ನು ಶ್ರದ್ಧೆಯಿಂದ ಪ್ರಾರ್ಥಿಸಬೇಕು. ಎಲ್ಲರೂ ದೌರ್ಜನ್ಯವನ್ನು ತ್ಯಜಿಸಿ, ಹಿಂಸಾಚಾರವನ್ನು ಕೈಬಿಡಬೇಕು. ಹೀಗೆ ಮಾಡಿದ್ದೇ ಆದರೆ, ದೇವರು ಒಂದುವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ತಮ್ಮ ಉಗ್ರಕೋಪವನ್ನು ತಡೆದಾರು, ನಾವು ನಾಶವಾಗದೆ ಉಳಿದೇವು.” ಆ ಜನರು ಮಾಡಿದುದೆಲ್ಲವನ್ನು ದೇವರು ಗಮನಿಸಿದರು. ತಮ್ಮ ದುರ್ನಡತೆಯನ್ನು ಜನರು ಕೈಬಿಟ್ಟದ್ದನ್ನು ಕಂಡು, ಮನಮರುಗಿ ಅವರಿಗೆ ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ತಡೆಹಿಡಿದರು.

ಕೀರ್ತನೆ: 51:1-2, 10-11, 16-17

ಶ್ಲೋಕ: ನೊಂದ ಬೆಂದ ಮಾನವನಾತ ಒಲ್ಲೆಯೆನನು.

ಶುಭಸಂದೇಶ: ಲೂಕ 11: 29-32

ಆ ಕಾಲದಲ್ಲಿ ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು: “ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು. “ದೈವತೀರ್ಪಿನ ದಿನ ದಕ್ಷಿಣದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ, ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.

24.02.2026 - ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸುಗುಟ್ಟಬೇಡ

 ಮೊದಲನೇ ವಾಚನ: ಯೆಶಾಯ 55:10-11



ಸ್ವಾಮಿ ಸರ್ವೇಶ್ವರ ಹೀಗೆನ್ನುತ್ತಾರೆ: ಮಳೆಯೂ ಹಿಮವೂ ಆಕಾಶ ಮಂಡಲದಿಂದಿಳಿದು ಬಂದು ತೋಯಿಸಿ, ಹಸಿರುಗೊಳಿಸಿ, ಹುಲುಸು ಮಾಡುತ್ತವೆ ಭೂಮಿಯನ್ನು. ಬಿತ್ತುವವನಿಗೆ ಬೀಜ, ಉಣ್ಣುವವನಿಗೆ ಅಹಾರ ಒದಗಿಸದೆ ಹಿಂದಿರುಗಿ ಬರುವುದಿಲ್ಲ ಅವು ಸುಮ್ಮನೆ ಬಂದಲ್ಲಿಗೆ. ಅಂತೆಯೇ, ನನ್ನ ಬಾಯಿಂದ ಹೊರಡುವ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿದ ಹೊರತು, ನನ್ನ ಉದ್ದೇಶವನು ಕೈಗೂಡಿಸಿದ ಹೊರತು, ನನ್ನ ಬಳಿಗೆ ವ್ಯರ್ಥವಾಗಿ ಹಿಂದಿರುಗದು.

ಕೀರ್ತನೆ: 34:4-5, 6-7, 16-17, 18-19,
ಶ್ಲೋಕ: ಸಜ್ಜನನಿಗೊದಗುವ ಸಂಕಟಗಳು ವಿಪರೀತ

ಶುಭಸಂದೇಶ: ಮತ್ತಾಯ 6:7-15

"ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸುಗುಟ್ಟಬೇಡ. ತಮ್ಮ ಪ್ರಾರ್ಥನೆ ದೀರ್ಘವಾದಷ್ಟೂ ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ. ನೀವು ಅವರಂತೆ ಆಗಬೇಡಿ. ನಿಮ್ಮ ಅಗತ್ಯಗಳೇನೆಂದು ನೀವು ಕೇಳುವುದಕ್ಕೆ ಮೊದಲೇ ನಿಮ್ಮ ತಂದೆಗೆ ಗೊತ್ತಿದೆ. ಆದುದರಿಂದ ಹೀಗೆಂದು ಪ್ರಾರ್ಥನೆ ಮಾಡಿ: "ಸ್ವರ್ಗದಲ್ಲಿರುವ ಓ ನಮ್ಮ ತಂದೆಯೇ, ನಿಮ್ಮ ಪವಿತ್ರ ನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ; ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಜಗತ್ತಿನಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಅಹಾರವನ್ನು ನಮಗಿಂದು ಕೊಡಿ. ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿ. "ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು. ಜನರನ್ನ ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸರು.

ಮನಸಿಗೊಂದಿಷ್ಟು ಅತ್ಯಂತ ಸರಳವಾಗಿ ಕಾಣುವ ಪರಲೋಕ ಪ್ರಾರ್ಥನೆ ನಮಗೆ ನಿಜಕ್ಕೂ ಸವಾಲೊಡ್ಡೂವಂತ ಪ್ರಾರ್ಥನೆಯೇ ಸರಿ. ನಮ್ಮ ಚಿತ್ತಕ್ಕಿಂತ ದೇವರ ಚಿತ್ತ ನಡೆಯಲಿ ಎನ್ನುವುದು ಕಷ್ಟವಲ್ಲವೇ? ನಮ್ಮ ಅನುದಿನದ ಅವಶ್ಯಕತೆಯಷ್ಟೇ ನಮಗೆ ಸಾಕೆ? ನಾವು ಇತರರನ್ನು ಕ್ಷಮಿಸುವಂತೆ ನಮ್ಮನ್ನು ಕ್ಷಮಿಸಿ ಎನ್ನುವ ಕಂಡೀಷನ್, ಲೌಕಿಕ  ಸುಖದ ಶೋಧನೆಯಲ್ಲೇ ಸುಖ ಕಂಡಿರುವಾಗ ಆ ಶೋಧನೆಗಳಿಗೆ ಒಳಪಡಿಸಬೇಡಿ ಎನ್ನುವ ಬೇಡಿಕೆಗಳು ನಮ್ಮ ಅಂತರಂಗವನ್ನು ಶೋಧಿಸುವಂತದ್ದು. ನಾವು ಪ್ರತಿ ದಿನ ಮಾಡುವ ಈ ಪ್ರಾರ್ಥನೆ ನಿಜಕ್ಕೂ ನಮ್ಮ ಅಂತರಂಗದಿಂದ ಬರುತ್ತಿದೆಯೇ?

ಪ್ರಶ್ನೆ: ನಮ್ಮ ಪ್ರಾರ್ಥನೆಯಲ್ಲಿ ನಿರರ್ಥಕ ಪದಗಳೆಷ್ಟು, ಸ್ವಾರ್ಥ ಬೇಡಿಕೆಗಳೆಷ್ಟು?

23.02.2026 - ಸ್ವಾಮಿ, ತಾವು ಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರ ಕೊಟ್ಟೆವು

 ಮೊದಲನೆಯ ವಾಚನ: ಯಾಜಕಕಾಂಡದಿಂದ ಇಂದಿನ ವಾಚನ 19:1-2,11-18



ಇಸ್ರಯೇಲ್ ಸಮಾಜದವರಿಗೆ ಹೀಗೆ ಆಜ್ಞಾಪಿಸುವಂತೆ ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದರು: "ನಿಮ್ಮ ದೇವರಾದ ಸರ್ವೇಶ್ವರನೆಂಬ ನಾನು ಪರಿಶುದ್ಧನಾಗಿರುವಂತೆ ನೀವು ಕೂಡ ಪರಿಶುದ್ಧರಾಗಿರಬೇಕು. ಕಳಬೇಡ, ಹುಸಿಯ ನುಡಿಯಲುಬೇಡ; ಒಬ್ಬರನ್ನೊಬ್ಬರು ಮೋಸಗೊಳಿಸುವುದುಬೇಡ. ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿನ್ನ ದೇವರ ನಾಮಕ್ಕೆ ಅಪಕೀರ್ತಿ ತರಬೇಡ, ನಾನೇ ಸರ್ವೇಶ್ವರ. ಮತ್ತೊಬ್ಬನನ್ನು ಬಲಾತ್ಕರಿಸಬೇಡ; ಅವನ ಸೊತ್ತನ್ನು ಅಪಹರಿಸಬೇಡ. ಕೂಲಿಯವನ ಕೂಲಿಯನ್ನು ಮರುದಿನದವರೆಗೆ ನಿನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಡ. ಕಿವುಡರನ್ನು ದೂಷಿಸಬೇಡ; ಕುರುಡರು ನಡೆಯುವ ದಾರಿಯಲ್ಲಿ ಎಡರು ಕಲ್ಲನ್ನು ಇಡಬೇಡ. ನಿನ್ನ ದೇವರಲ್ಲಿ ಭಯಭಕ್ತಿಯಿರಲಿ, ನಾನೇ ಸರ್ವೇಶ್ವರ. ವ್ಯಾಜತೀರಿಸುವಾಗ ಅನ್ಯಾಯವಾದ ತೀರ್ಪನ್ನು ಕೊಡಬೇಡ. ಬಡವನ ಬಡತನವನ್ನಾಗಲಿ, ದೊಡ್ಡವನ ಘನತೆಯನ್ನಾಗಲಿ ಲಕ್ಷ್ಯ ಮಾಡದೆ ಪಕ್ಷಪಾತವಿಲ್ಲದ ತೀರ್ಪನ್ನು ಕೊಡು. ನಿನ್ನ ಜನರ ನಡುವೆ ಚಾಡಿಕೋರನಾಗಿ ತಿರುಗಾಡಬೇಡ; ಮತ್ತೊಬ್ಬನಿಗೆ ಮರಣಶಿಕ್ಷೆ ಆಗಲೇಬೇಕೆಂದು ಛಲ ಹಿಡಿಯಬೇಡ. ನಾನೇ ಸರ್ವೇಶ್ವರ. ಸಹೋದರನ ಬಗ್ಗೆ ಒಳಗೊಳಗೇ ಹಗೆ ಇಟ್ಟುಕೊಳ್ಳಬೇಡ. ನೆರೆಯವನ ದೋಷಕ್ಕೆ ನೀನು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ಎತ್ತಿ ತೋರಿಸಲೇಬೇಕು. ನಿನ್ನ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡು ಮಾಡಬೇಡ, ಅವರಿಗೆ ವಿರುದ್ಧ ಮತ್ಸರ ಇಟ್ಟುಕೊಳ್ಳಬೇಡ; ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು. ನಾನೇ ಸರ್ವೇಶ್ವರ.

ಕೀರ್ತನೆ 19:7,8,9,14 ಯೊವಾನ್ನ 6:53
ಶ್ಲೋಕ: ಸ್ವಾಮಿ ಸರ್ವೇಶ್ವರಾ, ನಿಮ್ಮ ಮಾತುಗಳೇ ಆತ್ಮ ಮತ್ತು ಜೀವವಾಗಿವೆ ||

ಪ್ರಭುವಿನ ಆಜ್ಞೆ ಪರಿಪೂರ್ಣ; ಜೀವನಕದು ನವಚೇತನ |
ನಂಬಲರ್ಹ; ಪ್ರಭುವಿನ ಶಾಸನ ಮುಗ್ದರಿಗದು ಸುಜ್ಞಾನ||
ಪ್ರಭುವಿನ ನಿಯಮ ನೀತಿಬದ್ದ|
ಮನಸ್ಸಿಗದು ಒಸಗೆ ಪ್ರಭುವಿನ ಕಟ್ಟಳೆ ಪರಿಶುದ್ದ; ಕಣ್ಣಿಗದು ದೀವಿಗೆ||

ಪ್ರಭುವಿನ ಭೀತಿ ಪವಿತ್ರ ; ಎಂದೆಂದಿಗೂ ಶಾಶ್ವತ|
ಪ್ರಭುವಿನ ತೀರ್ಪು ಯಥಾರ್ಥ; ಪರಿಪೂರ್ಣ ನ್ಯಾಯಯುತ||
ನಿನಗೊಪ್ಪಿಗೆಯಾಗಲಿ ನನ್ನ ಬಾಯ ಮಾತು, ಹೃದಯಧ್ಯಾನ|
ನೀನೆನ್ನ ಪ್ರಭು, ನನಗೆ ಉದ್ಧಾರಕ, ನನಗಾಶ್ರಯಧಾಮ||

ಘೋಷಣೆ: ಯೆಜೆ 18:31
ನಿತ್ಯ ಸೌಭಾಗ್ಯದ ಅರಸರಾದ ಪ್ರಭು ಯೇ‌ಸುವೇ, ನಿಮಗೆ ಸ್ತುತಿಯಾಗಲಿ !
ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ, ನೀವು ಮಾಡುತ್ತಾ ಬಂದಿರುವ ಅಪರಾಧಗಳನ್ನೆಲ್ಲಾ ನಿಮ್ಮಿಂದ ತೊಲಗಿಸಿ ಬಿಟ್ಟು | ನಿಮ್ಮ ಹೃದಯವನ್ನೂ ಸ್ವಭಾವವನ್ನೂ ನೂತನಮಾಡಿಕೊಳ್ಳಿ ||

ಶುಭಸಂದೇಶ: ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 25:31-46


ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನರಪುತ್ರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಬರುವಾಗ ತನ್ನ ಮಹಿಮಾನ್ವಿತ ಸಿಂಹಾಸನದಲ್ಲಿ ಆಸೀನನಾಗಿರುವನು. ಸರ್ವಜನಾಂಗಗಳನ್ನು ಆತನ ಸಮ್ಮುಖದಲ್ಲಿ ಒಟ್ಟುಗೂಡಿಸಲಾಗುವುದು. ಕುರುಬನು ಕುರಿಗಳನ್ನು ತನ್ನ ಬಲಗಡೆಯಲ್ಲೂ ಆಡುಗಳನ್ನು ತನ್ನ ಎಡಗಡೆಯಲ್ಲೂ ಇರಿಸುವನು. ಆಗ ಅರಸನು ತನ್ನ ಬಲಗಡೆಯಿರುವ ಜನರಿಗೆ, 'ನನ್ನ ಪಿತನಿಂದ ಧನ್ಯರೆನಿಸಿಕೊಂಡವರೇ, ಬನ್ನಿ. ಲೋಕಾದಿಯಿಂದ ನಿಮಗಾಗಿ ಸಿದ್ದಮಾಡಿದ ಸಾಮ್ರಾಜ್ಯವನ್ನು ಸ್ವಾಸ್ತ್ಯವಾಗಿ ಪಡೆಯಿರಿ. ಏಕೆಂದರೆ, ನಾನು ಹಸಿದಿದ್ದೆ, ನನಗೆ ಆಹಾರ ಕೊಟ್ಟಿರಿ; ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ಕೊಟ್ಟಿರಿ. ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಟ್ಟಿರಿ. ರೋಗದಿಂದಿದ್ದೆ, ನನ್ನನ್ನು ಆರೈಕೆ ಮಾಡಿದಿರಿ. ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಿದಿರಿ, ' ಎಂದು ಹೇಳುವನು. ಅದಕ್ಕೆ ಆ ಸಜ್ಜನರು, 'ಸ್ವಾಮಿ, ತಾವು ಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರ ಕೊಟ್ಟೆವು? ಬಾಯಾರಿದ್ದನ್ನು ಕಂಡು ಕುಡಿಯಲು ಕೊಟ್ಟೆವು? ಯಾವಾಗ ತಾವು ಅಪರಿಚಿತರಾಗಿದ್ದನ್ನು ಕಂಡು ನಾವು ಆಶ್ರಯ ಕೊಟ್ಟೆವು? ಬಟ್ಟೆಬರೆಯಿಲ್ಲದ್ದನ್ನು ಕಂಡು ಉಡಲು ಕೊಟ್ಟೆವು? ತಾವು ರೋಗಿಯಾಗಿರುವುದನ್ನು ಅಥವಾ ಬಂಧಿಯಾಗಿರುವುದನ್ನು ಕಂಡು ನಾವು ಸಂಧಿಸಲು ಬಂದೆವು? 'ಎಂದು ಕೇಳುವರು. ಆಗ ಅರಸನು ಪ್ರತ್ಯುತ್ತರವಾಗಿ 'ಈ ನನ್ನ ಸೋದರರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೇ ಮಾಡಿದಿರಿ, ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ, ' ಎನ್ನುವನು. ಅನಂತರ ಆತನು ತನ್ನ ಎಡಗಡೆ ಇರುವವರನ್ನು ನೋಡಿ, 'ಶಾಪಗ್ರಸ್ತರೇ, ನನ್ನಿಂದ ತೊಲಗಿರಿ. ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ. ಏಕೆಂದರೆ ನಾನು ಹಸಿದಿದ್ದೆ, ನೀವು ನನಗೆ ಆಹಾರ ಕೊಡಲಿಲ್ಲ; ಬಾಯಾರಿದ್ದೆ, ಕುಡಿಯಲು ಕೊಡಲಿಲ್ಲ; ಅಪರಿಚಿತನಾಗಿದ್ದೆ ನನಗೆ ಆಶ್ರಯ ನೀಡಲಿಲ್ಲ ; ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಡಲಿಲ್ಲ ; ರೋಗಿಯಾಗಿದ್ದೆ, ಬಂಧಿಯಾಗಿದ್ದೆ , ನೀವು ನನ್ನನ್ನು ಸಂಧಿಸಲಿಲ್ಲ, 'ಎಂದು ಹೇಳುವನು. ಅದಕ್ಕೆ ಅವರು ಕೂಡ, 'ಸ್ವಾಮಿ, ತಾವು ಯಾವಾಗ ಹಸಿದಿದ್ದಿರಿ, ಬಾಯಾರಿದ್ದಿರಿ, ಅಪರಿಚಿತರಾಗಿದ್ದಿರಿ, ಯಾವಾಗ ಬಟ್ಟೆಬರೆ ಇಲ್ಲದೆ ಇದ್ದಿರಿ, ರೋಗಿಯಾಗಿದ್ದಿರಿ, ಮತ್ತು ಬಂಧಿಯಾಗಿ ಇದ್ದಿರಿ ಮತ್ತು ನಾವು. ಅದನ್ನು ಕಂಡು ನಿಮಗೆ ಉಪಚಾರಮಾಡದೆ ಹೋದೆವು? ' ಎಂದು ಪ್ರಶ್ನಿಸುವರು. ಅದಕ್ಕೆ ಪ್ರತ್ಯುತ್ತರವಾಗಿ ಅರಸನು, 'ಇವರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹಾಗೆ ಮಾಡದೆ ಹೋದಾಗ ಅದನ್ನು ನನಗೇ ಮಾಡಲಿಲ್ಲ, ,' ಎನ್ನುವನು. ಹೀಗೆ ಈ ದುರ್ಜನರು ನಿತ್ಯಶಿಕ್ಷೆಗೂ, ಆ ಸಜ್ಜನರು ನಿತ್ಯಜೀವಕ್ಕೂ ಹೋಗುವರು.

ಮನಸ್ಸಿಗೊಂದಿಷ್ಟು - 23.02.2026 

ಯೇಸು ತಮ್ಮನ್ನೇ ಅತ್ಯಂತ ದೀನ ದುರ್ಬಲ ಜನರೊಂದಿಗೆ ಗುರುತಿಸಿಕೊಂಡು, ಅವರಿಗೆ ಮಾಡುವ ಸೇವೆ, ಸಹಾಯ ತಮಗೇ ಮಾಡಿದಂತೆ ಎನ್ನುತ್ತಾರೆ ಇಂದಿನ ಶುಭಸಂದೇಶದಲ್ಲಿ. ಅಂತಹ ಜನರನ್ನು ಗುರುತಿಸದೆ 'ನೀವು ಯಾವಾಗ ಹಸಿದು ನನ್ನ ಬಳಿ ಬಂದಿರಿ' ಎಂದು ನಾವು ಕೇಳುವಂತಿಲ್ಲ. ಇಲ್ಲಿ ಸಹಾಯ, ಸೇವೆ ಮಾಡಿದವರದು, ಮಾಡದೆ ಇರುವವರದು ಇಬ್ಬರದೂ ಒಂದೇ ಪ್ರಶ್ನೆ 'ನೀವು ಯಾವಾಗ ನನ್ನ ಬಳಿ ಬಂದಿರಿ?'  ಅದರಲ್ಲಿ ವ್ಯತ್ಯಾಸವಿಲ್ಲ. ಆದರೆ ವ್ಯತ್ಯಾಸ ಇರುವುದು ಅದಕ್ಕೆ ಮುಂಚೆ ಅವರು ಮಾಡಿದ ಕಾರ್ಯದಲ್ಲಿ.
  
ದೇವರು ಮುಂದೆ ತಮ್ಮ ಎಡ ಬಲದಲ್ಲಿ ಯಾರನ್ನು ಆರಿಸಿಕೊಳ್ಳುತ್ತಾರೆ ಎನ್ನುವುದು ನಾವು ಮಾಡಿದ ಧಾರ್ಮಿಕ ಕಾರ್ಯಗಳಿಗಿಂತ,  ನಾವು ಇತರರಿಗೆ ತೋರಿದ ದಯೆ, ಮಾಡಿದ ಸಹಾಯ, ತೋರಿದ ಸಹಕಾರಗಳ ಮೇಲೆ ನಿಂತಿದೆ. ಎಚ್ಚರ ವಹಿಸೋಣ 

ಪ್ರಭುವೇ,
ಹಸಿದವರಲ್ಲಿ ಬಾಯಾರಿದವರಲ್ಲಿ 
ರೋಗಿಗಳಲ್ಲಿ ಬಂಧಿತರಲ್ಲಿ 
ನಿಮ್ಮನ್ನು ಕಾಣಲು
ನೀವು ನಮಗೆ 
ಕೊಟ್ಟಿರುವ ಅವಕಾಶ 
ಇಗೋ ನಮ್ಮ ಮುಂದೆ 
ಹರಡಿ ನಿಂತಿರುವ ಆಕಾಶ
ಅವರಲ್ಲಿ ಕಾಣಲು ನಿಮ್ಮನ್ನು 
ಸದಾ ಅಣಿಗೊಳಿಸಿ ನಮ್ಮನ್ನು 
 
ಮನ ಸೇವೆಗೆ 
ಹಸಿದು ಹಾತೊರೆಯಲಿ 
ಬಾಯರಲಿ ನಿನ್ನನ್ನು 
ಕಾಣಲು ಪರರಲಿ
ಬಿಡುಗಡೆಯಾಗಲಿ 
ಸ್ವಾರ್ಥ ನನ್ನಿಂದ 
ಗುಣವಾಗಲಿ ಉದಾಸೀನತೆಯ 
ರೋಗ ನಿನ್ನ ಕೃಪೆಯಿಂದ   

-ಚಿತ್ತ

22.02.2026 - ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು. ಅವರೊಬ್ಬರಿಗೇ ಸೇವೆ ಸಲ್ಲಿಸು,

ಮೊದಲನೇ ವಾಚನ: ಆದಿಕಾಂಡ 2:7-9; 3:1-7


ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು. ಆಗ ಮನುಷ್ಯನು ಜೀವಾತ್ಮನಾದನು. ಇದಲ್ಲದೆ, ದೇವರಾದ ಸರ್ವೇಶ್ವರ ಪೂರ್ವ ದಿಕ್ಕಿನಲ್ಲಿರುವ ಏದೆನ್ ಪ್ರದೇಶದಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದರು. ನೋಟಕ್ಕೆ ರಮ್ಯವೂ ಊಟಕ್ಕೆ ರುಚಿಕರವೂ ಆದ ನಾನಾ ತರದ ಮರಗಳನ್ನು ದೇವರಾದ ಸರ್ವೇಶ್ವರ ಅಲ್ಲಿ ಬೆಳೆಯ ಮಾಡಿದರು. ಆ ವನದ ಮಧ್ಯದಲ್ಲಿ ಜೀವದಾಯಕ ವೃಕ್ಷವನ್ನು ಹಾಗು ಒಳಿತು ಕೆಡಕುಗಳ ಅರಿವನ್ನು ಮೂಡಿಸುವ ವೃಕ್ಷವನ್ನು ಬೆಳೆಯಿಸಿದರು. ಸರ್ವೇಶ್ವರನಾದ ದೇವರು ಉಂಟುಮಾಡಿದ ಭೂಜಂತುಗಳಲ್ಲಿ ಅತಿ ಯುಕ್ತಿಉಳ್ಳದ್ದು ಸರ್ಪ. ಅದು ಮಹಿಳೆಯ ಬಳಿಗೆ ಬಂದು, “ಏನಮ್ಮಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ತಿನ್ನಕೂಡದು ಎಂದು ದೇವರು ಆಜ್ಞೆ ಮಾಡಿರುವುದು ನಿಜವೋ”? ಎಂದು ಕೇಳಿತು. ಅದಕ್ಕೆ ಆ ಮಹಿಳೆ, “ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು; ಆದರೆ ಅದರ ನಡುವೆಯಿರುವ ಈ ಮರದ ಹಣ್ಣನ್ನು ಮಾತ್ರ ತಿನ್ನಲೂ ಕೂಡದು, ಮುಟ್ಟಲೂ ಕೂಡದು, ‘ತಿಂದರೆ ಸಾಯುವಿರಿ’ ಎಂದು ದೇವರು ಹೇಳಿದ್ದಾರೆ,” ಎಂದು ಉತ್ತರ ಕೊಟ್ಟಳು. ಆಗ ಆ ಸರ್ಪ, “ಆ ಮಾತು ನಿಜವಲ್ಲ, ನೀವು ಸಾಯುವುದು ಸುಳ್ಳು. ಇದರ ಹಣ್ಣನ್ನು ತಿಂದ ಕೂಡಲೆ ನಿಮ್ಮ ಕಣ್ಣುಗಳು ತೆರೆಯುವುವು. ನೀವು ದೇವರಂತೆ ಆಗಿ ಒಳಿತು- ಕೆಡುಕುಗಳನ್ನರಿತ ಜ್ಞಾನಿಗಳು ಆಗಿಬಿಡುವಿರಿ. ಇದು ದೇವರಿಗೆ ಚೆನ್ನಾಗಿ ಗೊತ್ತುಂಟು,” ಎಂದಿತು. ಆಗ ಆ ಮಹಿಳೆ, “ಈ ಮರದ ಹಣ್ಣು ಊಟಕ್ಕೆ ಎಷ್ಟು ಚೆನ್ನಾಗಿದೆ, ನೋಟಕ್ಕೆ ಎಷ್ಟು ರಮಣೀಯವಾಗಿದೆ, ಜ್ಞಾನಾರ್ಜನೆಗೆ ಎಷ್ಟು ಆಕರ್ಷಣೀಯವಾಗಿದೆ” ಎಂದು ತಿಳಿದು, ಅದನ್ನು ತೆಗೆದುಕೊಂಡು ತಿಂದಳು; ಸಂಗಡವಿದ್ದ ಗಂಡನಿಗೂ ಕೊಟ್ಟಳು; ಅವನೂ ತಿಂದನು. ಕೂಡಲೆ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆ ಆಗಿದ್ದೇವೆಂದು ತಿಳಿದು ಅವರು ಅಂಜೂರದ ಎಲೆಗಳನ್ನು ಹೊಲಿದು ಉಟ್ಟುಕೊಂಡರು.

ಕೀರ್ತನೆ 51:3-4, 5-6, 12-13, 17

ಶ್ಲೋಕ: ಕೃಪಾಳು ದೇವಾ, ಕರುಣಿಸೆಮ್ಮನು ಏಕೆಂದರೆ ನಿಮ್ಮ ವಿರುದ್ಧ ಪಾಪವನ್ನು ಮಾಡಿದ್ದೇವೆ

ಎರಡನೇ ವಾಚನ: ರೋಮನರಿಗೆ 5:12-19

ಒಬ್ಬ ಮನುಷ್ಯನಿಂದಲೇ ಪಾಪ, ಪಾಪದಿಂದ ಮರಣ, ಈ ಲೋಕವನ್ನು ಪ್ರವೇಶಿಸಿದವು. ಎಲ್ಲರೂ ಪಾಪ ಮಾಡಿದ್ದರಿಂದ ಮರಣವು ಎಲ್ಲರಿಗೂ ಪ್ರಾಪ್ತಿಯಾಯಿತು. ಧರ್ಮಶಾಸ್ತ್ರವನ್ನು ಕೊಡುವುದಕ್ಕೆ ಮೊದಲೇ ಪಾಪವು ಲೋಕದಲ್ಲಿತ್ತು. ಆದರೆ ಧರ್ಮಶಾಸ್ತ್ರ ಇಲ್ಲದೆ ಇದ್ದುದರಿಂದ ಪಾಪವನ್ನು ಗಣನೆಗೆ ತಂದುಕೊಳ್ಳಲಾಗಲಿಲ್ಲ. ಆದರೂ, ಆದಾಮನ ಕಾಲದಿಂದ ಮೋಶೆಯ ಕಾಲದವರೆಗೂ ಮರಣವು ದಬ್ಬಾಳಿಕೆ ನಡೆಸುತ್ತಿತ್ತು. ದೇವರ ಆಜ್ಞಾವಿಧಿಗಳನ್ನು ವಿೂರಿ ಆದಾಮನು ಮಾಡಿದ ಪಾಪಕ್ಕೆ ಸಮನಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ, ಮರಣದ ಆಳ್ವಿಕೆ ನಡೆಯುತ್ತಿತ್ತು. ಆದಾಮನು ಮುಂಬರಲಿದ್ದ ಮಹಾತ್ಮನ ಮುನ್ಸೂಚನೆಯಾಗಿದ್ದಾನೆ. ಆದರೆ ಆದಾಮನ ಪಾಪಕ್ಕೂ ದೇವರ ಅನುಗ್ರಹಕ್ಕೂ ವ್ಯತ್ಯಾಸವಿದೆ. ಒಬ್ಬ ಮನುಷ್ಯನ ಅಪರಾಧದಿಂದ ಎಲ್ಲರೂ ಮರಣಕ್ಕೊಳಗಾದರು ಎಂಬುದೇನೋ ನಿಜ. ಆದರೆ ದೇವರ ಅನುಗ್ರಹವು ಅದಕ್ಕಿಂತಲೂ ಅತ್ಯಧಿಕವಾದುದು. ಅಂತೆಯೇ, ಯೇಸುಕ್ರಿಸ್ತ ಎಂಬ ಒಬ್ಬ ಮಹಾತ್ಮನ ಅನುಗ್ರಹದಿಂದ ಲಭಿಸುವ ಉಚಿತಾರ್ಥ ವರಗಳು ಇನ್ನೂ ಅಧಿಕಾಧಿಕವಾದುವು ಎಂಬುದೂ ನಿಜ. ದೇವರ ಉಚಿತಾರ್ಥ ವರಕ್ಕೂ ಒಬ್ಬ ಮನುಷ್ಯನ ಪಾಪದ ಪರಿಣಾಮಕ್ಕೂ ಎಷ್ಟೋ ವ್ಯತ್ಯಾಸವಿದೆ. ಆ ಒಂದು ಪಾಪದ ಪರಿಣಾಮವಾಗಿ ಮನುಷ್ಯನು ಅಪರಾಧಿಯೆಂದು ನಿರ್ಣಯಿಸಲ್ಪಟ್ಟನು. ಆದರೆ ಅನೇಕರು ಅಪರಾಧಿಗಳಾದ ಮೇಲೂ ಕೊಡಲಾಗುವ ಉಚಿತಾರ್ಥ ವರವು ದೇವರೊಡನೆ ಸತ್ಸಂಬಂಧವನ್ನು ಉಂಟುಮಾಡುತ್ತದೆ. ಒಬ್ಬ ಮನುಷ್ಯನ ಅಪರಾಧದ ಕಾರಣ, ಒಬ್ಬ ವ್ಯಕ್ತಿಯ ಮುಖಾಂತರ ಮರಣವು ಎಲ್ಲಾ ಮಾನವರ ಮೇಲೆ ದಬ್ಬಾಳಿಕೆ ನಡೆಸಿತು. ಆದರೆ, ಹೇರಳವಾದ ದೈವಾನುಗ್ರಹವನ್ನೂ ದೇವರೊಡನೆ ಸತ್ಸಂಬಂಧವೆಂಬ ಉಚಿತಾರ್ಥ ವರವನ್ನೂ ಪಡೆದವರಾದರೋ ಯೇಸುಕ್ರಿಸ್ತ ಎಂಬ ಮಹಾತ್ಮನ ಮುಖಾಂತರ ಮತ್ತಷ್ಟು ವಿಪುಲವಾಗಿ ಸಜ್ಜೀವವನ್ನು ಪಡೆದು ರಾಜ್ಯವಾಳುತ್ತಾರೆ. ಒಬ್ಬನ ಅಪರಾಧದಿಂದ ಎಲ್ಲಾ ಮಾನವರು ದಂಡನೆಯ ತೀರ್ಪಿಗೆ ಗುರಿಯಾಗುತ್ತಾರೆ. ಹಾಗೆಯೇ ಒಬ್ಬನ ಸತ್ಕಾರ್ಯದಿಂದ ಎಲ್ಲಾ ಮಾನವರು ವಿಮೋಚನೆಯನ್ನೂ ಸಜ್ಜೀವವನ್ನೂ ಪಡೆಯುತ್ತಾರೆ. ಹೇಗೆ ಒಬ್ಬ ಮನುಷ್ಯನ ಅವಿಧೇಯತೆಯಿಂದ ಎಲ್ಲರೂ ಪಾಪಿಗಳಾದರೋ, ಹಾಗೆಯೇ ಒಬ್ಬ ಮನುಷ್ಯನ ವಿಧೇಯತೆಯಿಂದ ಎಲ್ಲರೂ ದೇವರೊಡನೆ ಸತ್ಸಂಬಂಧವನ್ನು ಹೊಂದುತ್ತಾರೆ.

ಶುಭಸಂದೇಶ: ಮತ್ತಾಯ 4:1-11

ಯೇಸುಸ್ವಾಮಿ ಪಿಶಾಚಿಯಿಂದ ಪರಿಶೋಧಿತರಾಗಲೆಂದು ಪವಿತ್ರಾತ್ಮ ಅವರನ್ನು ಬೆಂಗಾಡಿಗೆ ಕರೆದೊಯ್ದರು. ಅಲ್ಲಿ ಯೇಸು ನಲವತ್ತು ದಿನ ಹಗಲಿರುಳೂ ಉಪವಾಸವಿದ್ದರು. ಅನಂತರ ಅವರಿಗೆ ಬಹಳ ಹಸಿವಾಯಿತು. ಆಗ ಶೋಧಕನು ಬಂದು, "ನೀನು ದೇವರ ಪುತ್ರನೆಂಬುದು ಸತ್ಯವಾದರೆ, ಈ ಕಲ್ಲುಗಳು ರೊಟ್ಟಿಗಳಾಗಲೆಂದು ಆಜ್ಞೆಮಾಡು," ಎಂದನು. ಅದಕ್ಕೆ ಯೇಸುಸ್ವಾಮಿ, "ಪವಿತ್ರ ಗ್ರಂಥದಲ್ಲಿ ಹೇಳಿರುವ ಪ್ರಕಾರ, "ಮಾನವನು ಜೀವಿಸುವುದು ಆಹಾರದಿಂದ ಮಾತ್ರವಲ್ಲ; ದೇವರಾಡುವ ಪ್ರತಿಯೊಂದು ನುಡಿಯಿಂದ", ಎಂದರು. ಬಳಿಕ ಪಿಶಾಚಿ ಅವರನ್ನು ಪವಿತ್ರ ನಗರಕ್ಕೆ ಅಂದರೆ ಜೆರುಸಲೇಮಿಗೆ ಕರೆದೊಯ್ದು ಮಹಾದೇವಾಲಯದ ಗೋಪುರದ ತುದಿಯ ಮೇಲೆ ನಿಲ್ಲಿಸಿ, "ನೀನು ದೇವರ ಪುತ್ರನೆಂಬುದು ಸತ್ಯವಾದರೆ ಕಳಕ್ಕೆ ಧುಮುಕು. ಏಕೆಂದರೆ, ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ, ‘ದೇವರೇ ತಮ್ಮ ದೂತರಿಗೆ ಆಜ್ಞೆ ಮಾಡುವರು’ ಮತ್ತು ‘ಇವರು ನಿನ್ನ ಕಾಲುಗಳು ಕಲ್ಲುಗಳಿಗೆ ತಾಕದಂತೆ ನಿನ್ನನ್ನು ಕೈಗಳಲ್ಲಿ ಆತುಗೊಳ್ಳುವರು,’ ಎಂದಿತು. ಅದಕ್ಕೆ ಯೇಸು, “ ‘ನಿನ್ನ ದೇವರು ಸರ್ವೇಶ್ವರ; ನೀನು ಅವರನ್ನು ಪರೀಕ್ಷಿಸಬಾರದು’, ಎಂದೂ ಸಹ ಪವಿತ್ರಗ್ರಂಥದಲ್ಲಿ ಬರೆದಿದೆ,” ಎಂದರು. ಅನಂತರ ಪಿಶಾಚಿ ಯೇಸುವನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕೊಂಡೊಯ್ದು, ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ತೋರಿಸಿತು. "ನೀನು ನನಗೆ ಅಡ್ಡಬಿದ್ದು ಆರಾಧಿಸುವೆಯಾದರೆ ಇವೆಲ್ಲವನ್ನು ನಿನಗೆ ಕೊಡಬಲ್ಲೆ," ಎಂದಿತು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಸೈತಾನನೇ, ತೊಲಗು, ‘ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು. ಅವರೊಬ್ಬರಿಗೇ ಸೇವೆಸಲ್ಲಿಸು,’ ಎಂದೂ ಪವಿತ್ರಗ್ರಂಥದಲ್ಲಿ ಬರೆದಿದೆ," ಎಂದರು. ಆಗ ಪಿಶಾಚಿ ಯೇಸುವನ್ನು ಬಿಟ್ಟು ತೊಲಗಿತು. ದೇವದೂತರು ಬಂದು ಅವರನ್ನು ಉಪಚರಿಸಿದರು.

ಮನಸ್ಸಿಗೊಂದಿಷ್ಟು : ಶೋಧನೆಗಳು ನಮ್ಮ ಪಾಪಗಳಿಗೆ ದಾರಿಯಲ್ಲ, ಬದಲಾಗಿ ಪಾಪಗಳನ್ನು ಜಯಿಸುವ ಸಾಧನವಾಗಬಲ್ಲದು. ನಮ್ಮನ್ನು ದುರ್ಬಲಗಳಿಸುವುದಕ್ಕಿಂತ ನಮ್ಮನ್ನು ಇನ್ನಷ್ಟು ಶಕ್ತರನ್ನಾಗಿಸಬಲ್ಲದು. ದೇವರ ಚಿತ್ತ, ದೇವರ ಕಾರ್ಯಗಳನ್ನು ನೆರವೇರಿಸುವವರು ಈ ಶೋಧನೆಗಳನ್ನು ವಿಜಯದ ಮೆಟ್ಟಿಲುಗಳನ್ನಾಗಿ ಬಳಸಿಕೊಂಡು ದೇವರತ್ತ ಏರಬಲ್ಲರು ಎಂಬ ಸಂದೇಶ ಇಂದಿನ ಶುಭಸಂದೇಶದಲ್ಲಿದೆ

ಪ್ರಶ್ನೆ : ನಾವು ಎದುರಿಸುತ್ತಿರುವ ಶೋಧನೆಗಳನ್ನು ನಮ್ಮನ್ನು ದೇವರತ್ತ ಏರಿಸುತ್ತಿದೆಯೇ ಅಥವಾ ವಿಮುಖವಾಗಿಸುತ್ತಿದೆಯೇ?

ಪ್ರಭುವೇ,
ನಮಗೆ ಬಂದೊದಗುವ ಶೋಧನೆ
ತರುವ ಯಾವುದೇ ವೇದನೆ
ಮೀರಿ ಏರುವ ಸಾಧನೆ 
ನಮ್ಮದಾಗಲು ಬೇಕಿದೆ 
ನಿಮ್ಮ ಭರವಸೆಯ ಅನುಮೋದನೆ

-ಚಿತ್ತ

21.02.2026 - ನನ್ನನ್ನು ಹಿಂಬಾಲಿಸು

 ಮೊದಲನೇ ವಾಚನ: ಯೆಶಾಯ 58:9-14


ಸರ್ವೇಶ್ವರ ಇಂತೆನ್ನುತ್ತಾರೆ: "ನೀವು ದಬ್ಬಾಳಿಕೆ ನಡೆಸುವುದನ್ನೂ ಇತರರನ್ನು ಜರೆಯುವುದನ್ನೂ ಕೇಡನ್ನು ನುಡಿಯುವುದನ್ನೂ ನಿಮ್ಮ ನಡುವೆಯಿಂದ ತೊಲಗಿಸಿದರೆ ಹಾಗೂ ಹಸಿದವರಿಗೆ ಜೀವನಾಂಶವನ್ನೂ ಬಡವರಿಗೆ ಅಗತ್ಯವಾದುದನ್ನೂ ನೀಡಿದರೆ, ನಿಮ್ಮ ಜ್ಯೋತಿ ಕತ್ತಲಲ್ಲಿ ಬೆಳಗುವುದು; ಅಂಧಕಾರ ನೀಗಿ ಮಧ್ಯಾಹ್ನವಾಗುವುದು. ಸರ್ವೇಶ್ವರಸ್ವಾಮಿ ನಿಮ್ಮನ್ನು ನಿರಂತರವಾಗಿ ಮುನ್ನಡೆಸುವರು; ಮರುಭೂಮಿಯಲ್ಲೂ ನಿಮಗೆ ಮನಃತೃಪ್ತಿಯನ್ನು ನೀಡುವರು; ನಿಮ್ಮ ಎಲುಬುಗಳನ್ನು ಬಲಪಡಿಸುವರು; ನೀರೆರೆದ ತೋಟದಂತೆಯೂ ಬತ್ತಿಹೋಗದ ಬುಗ್ಗೆಯಂತೆಯೂ ನೀವು ಇರುವಿರಿ. ಪುರಾತನಕಾಲದ ಪಾಳುಬಿದ್ದ ಮನೆಗಳನ್ನು ನಿಮ್ಮವರು ಮರಳಿ ಕಟ್ಟುವರು. ತಲತಲಾಂತರಗಳಿಂದ ಪಾಳುಬಿದ್ದಿರುವ ತಳಹದಿಗಳ ಮೇಲೆ ಕಟ್ಟಡಗಳನ್ನು ನೀವು ನಿರ್ಮಿಸುವಿರಿ. ‘ಬಿದ್ದ ಗೋಡೆಯನ್ನು ಎಬ್ಬಿಸಿದ ರಾಷ್ಟ್ರ, ಹಳೆಯ ದಾರಿಗಳನ್ನು ಸರಾಗಮಾಡಿದ ರಾಷ್ಟ್ರ’ ಎಂಬ ಬಿರುದು ನಿಮಗೆ ಬರುವುದು.” ಸಬ್ಬತ್‍ದಿನದ ಸದಾಚರಣೆ “ನೀವು ಸಬ್ಬತ್‍ದಿನವನ್ನು ತಾತ್ಸಾರ ಮಾಡದೆ, ಆ ನನ್ನ ಪರಿಶುದ್ಧ ದಿನದಲ್ಲಿ ನಿಮ್ಮ ದೈನಂದಿನ ವ್ಯವಹಾರವನ್ನು ನಡೆಸದೆ, ಸ್ವೇಚ್ಛೆಯಾಗಿ ವರ್ತಿಸದೆ, ಸ್ವಕಾರ್ಯದಲ್ಲೇ ನಿರತರಾಗದೆ, ಹರಟೆಮಾತುಗಳಲ್ಲಿ ಕಾಲಕಳೆಯದೆ, ಸರ್ವೇಶ್ವರಸ್ವಾಮಿಯ ಸಬ್ಬತ್‍ದಿನ ಪರಿಶುದ್ಧವಾದುದು, ಸಂತೋಷಕರವಾದುದು, ಮಾನ್ಯತೆಗೆ ಅರ್ಹವಾದುದು ಎಂದು ಸನ್ಮಾನಿಸಿದ್ದೇ ಆದರೆ ನೀವು ಸರ್ವೇಶ್ವರಸ್ವಾಮಿಯಾದ ನನ್ನ ಆನಂದದಲ್ಲಿ ಭಾಗಿಗಳಾಗುವಿರಿ; ನಾನು ನಿಮ್ಮನ್ನು ಉನ್ನತಸ್ಥಾನಕ್ಕೆ ಏರಿಸುವೆನು. ನಿಮ್ಮ ಪಿತೃ ಯಕೋಬನ ಸೊತ್ತನ್ನು ನೀವು ನಿರಂತಕವಾಗಿ ಅನುಭವಿಸುವಂತೆ ಮಾಡುವೆನು,” ಇದು ಸರ್ವೇಶ್ವರಸ್ವಾಮಿಯ ನುಡಿ.

ಕೀರ್ತನೆ: 86:1-2, 3-4, 5-6

ಶ್ಲೋಕ: ನಿನ್ನ ಸತ್ಯಪಥದಲಿ ನಾ ನಡೆವಂತೆ, ಬೋಧಿಸೆನಗೆ ಪ್ರಭೂ, ನಿನ್ನ ಮಾರ್ಗವನು.

ಶುಭಸಂದೇಶ: ಲೂಕ 5:27-32


ಯೇಸುಸ್ವಾಮಿ ಅಲ್ಲಿಂದ ಹೋಗುತ್ತಿದ್ದಾಗ ಲೇವಿ ಎಂಬ ಸುಂಕದವನನ್ನು ಕಂಡರು. ಅವನು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿದ್ದನು. “ನನ್ನನ್ನು ಹಿಂಬಾಲಿಸು,” ಎಂದು ಹೇಳಿ ಯೇಸು ಅವನನ್ನು ಕರೆದರು. ಲೇವಿಯು ಎದ್ದು ಎಲ್ಲವನ್ನೂ ಪರಿತ್ಯಜಿಸಿ, ಯೇಸುವನ್ನು ಹಿಂಬಾಲಿಸಿದನು. ತರುವಾಯ ಆ ಲೇವಿ ತನ್ನ ಮನೆಯಲ್ಲಿ ಯೇಸುವಿಗೆ ಒಂದು ದೊಡ್ಡ ಔತಣವನ್ನು ಏರ್ಪಡಿಸಿದನು. ಬಹುಜನ ಸುಂಕದವರೂ ಇತರರೂ ಯೇಸುವಿನ ಪಂಕ್ತಿಯಲ್ಲೇ ಊಟಕ್ಕೆ ಕುಳಿತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಅವರ ಪಂಥಕ್ಕೆ ಸೇರಿದ ಧರ್ಮಶಾಸ್ತ್ರಜ್ಞರು ಗೊಣಗಾಡುತ್ತಾ, ಯೇಸುವಿನ ಶಿಷ್ಯರ ಬಳಿಗೆ ಬಂದು, “ನೀವು ಸುಂಕದವರ ಮತ್ತು ಪಾಪಿಷ್ಠರ ಜೊತೆಯಲ್ಲಿ ಏಕೆ ತಿನ್ನುತ್ತೀರಿ, ಕುಡಿಯುತ್ತೀರಿ?” ಎಂದು ಪ್ರಶ್ನಿಸಿದರು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ವೈದ್ಯನ ಅವಶ್ಯಕತೆಯಿರುವುದು ರೋಗಿಗಳಿಗೆ, ಆರೋಗ್ಯವಂತರಿಗಲ್ಲ; ನಾನು ಬಂದಿರುವುದು ಧರ್ಮಿಷ್ಠರನ್ನು ಕರೆಯುವುದಕ್ಕಲ್ಲ, ‘ಪಶ್ಚತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ, ದೇವರಿಗೆ ಅಭಿಮುಖಿಗಳಾಗಿರಿ’ ಎಂದು ಪಾಪಿಷ್ಠರನ್ನು ಕರೆಯುವುದಕ್ಕೆ,” ಎಂದರು.

ಮನಸ್ಸಿಗೊಂದಿಷ್ಟು : ’ಹಿಂಬಾಲಿಸು’ ಎಂಬ ಒಂದೇ ಮಾತಿಗೆ ಎಲ್ಲವನ್ನೂ ತ್ಯಜಿಸಿ  ಹೊರಟ ಮತ್ತಾಯನ ಆ ಕ್ಷಣದ ನಿರ್ಧಾರ ನಮಗೆಷ್ಟು ಕಠಿಣ. ವೈದ್ಯನ ಅವಶ್ಯಕತೆಯಿರುವ ರೋಗಿಗಳಂತ ನಮ್ಮ ಬದುಕಿಗೆ ಯೇಸುವಿನ ಅವಶ್ಯಕತೆ ಇದ್ದರೂ ನಾವು ಯೇಸುವನ್ನು ಬರಮಾಡಿಕೊಳ್ಳುತ್ತಿಲ್ಲ. ಬರಮಾಡಿಕೊಳ್ಳಲು ಬೇಕಾದ ಹೃದಯ ನಮ್ಮದಾಗಲಿ.

ಪ್ರಶ್ನೆ : ಯೇಸು ನನ್ನ ಬಾಳಿಗೆಷ್ಟು ಅವಶ್ಯ?  

ಪ್ರಭುವೇ,
ಬಾ ಹಿಂಬಾಲಿಸು ಎಂದು 
ಕರೆದರೂ ನೀನು
ತಡೆಯೊಡ್ಡುತ್ತಿದೆ 
ನನ್ನೊಳಗಿನ ನಾನು
ಪಾಪ ಸರಿಸಿ ಏರ್ಪಡಿಸುವೆ
ಮನದಲೊಂದೌತಣ
ಮುಂದಿನದೆಲ್ಲಾ ಸಂಭ್ರಮಕ್ಕೆ
ನೀನೊಬ್ಬನೇ ಆಗು ಕಾರಣ
-ಚಿತ್ತ   

20.02.2026 - ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದುಃಖಪಡುವುದುಂಟೇ?

 




ಮೊದಲನೇ ವಾಚನ: ಯೆಶಾಯ  58:1-9

ಸರ್ವೇಶ್ವರಸ್ವಾಮಿ ಇಂತೆನ್ನುತ್ತಾರೆ: “ಗಟ್ಟಿಯಾಗಿ ಕೂಗು, ನಿಲ್ಲಿಸಬೇಡ; ಕೊಂಬಿನಂತೆ ಸ್ವರವೆತ್ತಿ ನನ್ನ ಜನರಿಗೆ ಅವರ ದ್ರೋಹವನ್ನು ತಿಳಿಸು; ಯಕೋಬ ವಂಶದವರಿಗೆ ಅವರ ಪಾಪವನ್ನು ತಿಳಿಸು; ತಮ್ಮ ದೇವರ ವಿಧಿನಿಯಮಗಳನ್ನು ಬಿಡದೆ, ಧರ್ಮವನ್ನು ಆಚರಿಸುವ ಜನಾಂಗವೊ ಎಂಬಂತೆ, ಇವರು ದಿನ ದಿನವೂ ನನ್ನ ದರ್ಶನಕ್ಕಾಗಿ ಬರುತ್ತಾರೆ; ನನ್ನ ಮಾರ್ಗವನ್ನು ತಿಳಿದುಕೊಳ್ಳುವುದರಲ್ಲಿ ಸಂತೋಷಿಸುವಂತೆ ನಟಿಸುತ್ತಾರೆ. ಧೈರ್ಯವಾಗಿ ನನ್ನಿಂದ ನ್ಯಾಯವಿಧಿಗಳನ್ನು ಕೇಳುತ್ತಾರೆ. ದೇವ ದರ್ಶನದಲ್ಲಿ ಆನಂದಿಸುವವರಂತೆ ತೋರಿಸಿಕೊಳ್ಳುತ್ತಾರೆ.” ನಾವು ಉಪವಾಸ ಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವುದಿಲ್ಲ? ನಮ್ಮನ್ನು ನಾವೇ ತಗ್ಗಿಸಿಕೊಂಡಿದ್ದೇವೆ, ನೀನು ಗಮನಿಸದೆ ಇರುವುದೇಕೆ?” ಎಂದುಕೊಳ್ಳುತ್ತಾರೆ. “ನಿಮ್ಮ ಉಪವಾಸದ ಪರಿಣಾಮಗಳು ಇಷ್ಟೆ: ವ್ಯಾಜ್ಯ, ಕಲಹ, ಗುದ್ದಾಟ. ಇಲ್ಲಿಯವರೆಗೆ ನೀವು ಮಾಡಿದಂತೆ ಉಪವಾಸ ಮಾಡಿದರೆ, ನಿಮ್ಮ ಪ್ರಾರ್ಥನೆ ಪರಲೋಕವನ್ನು ಮುಟ್ಟುವುದಿಲ್ಲ. ಸ್ವಾರ್ಥ ನಿಗ್ರಹಕ್ಕಾಗಿ ನಾನು ನೇಮಿಸಿದ ಉಪವಾಸದ ದಿನ ಇಂಥದೋ? ಒಬ್ಬನು ಜೊಂಡಿನಂತೆ ತಲೆಯನ್ನು ಬಗ್ಗಿಸಿಕೊಳ್ಳುವುದು, ಗೋಣಿತಟ್ಟನ್ನು ಉಟ್ಟುಕೊಳ್ಳುವುದು, ಬೂದಿಯ ಗುಂಡಿಯಲ್ಲಿ ಕುಳಿತುಕೊಳ್ಳುವುದು, ಇವು ನನಗೆ ಮೆಚ್ಚುಗೆಯಾಗುವ ಉಪವಾಸ ಎನ್ನುತ್ತೀರೊ? “ನಾನು ಹೇಳುವುದನ್ನು ಕೇಳಿ: ಅನ್ಯಾಯದ ಬಂಧನಗಳನ್ನು ಬಿಚ್ಚುವುದು, ಭಾರವಾದ ನೊಗದ ಕಣಿಗಳನ್ನು ಕಳಚುವುದು, ಜರ್ಜರಿತರಾದವರನ್ನು ಬಿಡುಗಡೆಮಾಡುವುದು, ಹಸಿದವರಿಗೆ ಅನ್ನ ಹಾಕುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯಾದವರನ್ನು ಕಂಡಾಗ ಅವರಿಗೆ ಬಟ್ಟೆ ಹೊದಿಸುವುದು, ನಿನ್ನ ರಕ್ತ ಸಂಬಂಧಿಕರಿಂದ ಮುಖ ಮರೆಮಾಡಿಕೊಳ್ಳದಿರುವುದು, ಇದೇ ಅಲ್ಲವೆ ನನಗೆ ಇಷ್ಟಕರವಾದ ಉಪವಾಸ ವ್ರತ? “ಇದನ್ನು ಆಚರಿಸುವಾಗ ನೀವು ಉದಯ ಕಾಲದ ಸೂರ್ಯನಂತೆ ಪ್ರಜ್ವಲಿಸುವಿರಿ. ಆರೋಗ್ಯಭಾಗ್ಯವು ನಿಮಗೆ ಬೇಗನೆ ದೊರಕುವುದು. ನಿಮ್ಮ ಸದಾಚಾರವೆ ನಿಮಗೆ ಮುಂಬಲವಾಗಿ ನಡೆಸುವುದು; ಸರ್ವೇಶ್ವರಸ್ವಾಮಿಯ ಮಹಿಮೆ ನಿಮಗೆ ಹಿಂಬಲವಾಗಿ ಇರುವುದು. ಆಗ ನೀವು ಪ್ರಾರ್ಥಿಸಿದರೆ, ಆ ಸ್ವಾಮಿ ನಿಮಗೆ ಉತ್ತರಿಸುವರು; ಮೊರೆಯಿಟ್ಟು ಕರೆದರೆ ‘ಇಗೋ ಆಲಿಸುತ್ತಿದ್ದೇನೆ’ ಎನ್ನುವರು. 

ಕೀರ್ತನೆ: 51:3-4, 5-6, 18-19

ಶ್ಲೋಕ: ನೊಂದ ಬೆಂದ ಮನವನಾತ ಬಲ್ಲೆಯೆನನು

ಶುಭಸಂದೇಶ: ಮತ್ತಾಯ 9: 14-15

ಯೊವಾನ್ನನ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದರು. “ನಾವೂ ಫರಿಸಾಯರೂ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ?" ಎಂದು ಪ್ರಶ್ನೆ ಹಾಕಿದರು. ಅದಕ್ಕೆ ಯೇಸು, "ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದುಃಖಪಡುವುದುಂಟೇ? ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲವು ಬರುವುದು; ಆಗ ಅವರು ಉಪವಾಸ ಮಾಡುವರು.

ಮನಸ್ಸಿಗೊಂದಿಷ್ಟು : ಕೇವಲ ಆಚರಣೆಗಾಗಿ ಮಾತ್ರವೇ ಮಾಡುವ ಉಪವಾಸ ವ್ರತದ ಬಗ್ಗೆ ಇಂದಿನ ಎರಡೂ ವಾಚನಗಳು ಮಾತನಾಡುತ್ತವೆ.   ದೇವರಿಗೆ ಇಷ್ಟವಾದ  ಉಪವಾಸ ವ್ರತ ಯಾವುದೆಂದು ಯೆಶಾಯ ಪ್ರವಾದಿ ಹೇಳಿದರೆ, "ನಾನು ಜೊತೆಗಿರುವಾಗ ಉಪವಾಸವೇಕೆ ಬೇಕು" ಎನ್ನುತ್ತಾರೆ ಯೇಸು. ನಮ್ಮ ಉಪವಾಸ, ತ್ಯಾಗದಿಂದ ನಮಗೆ ಮಾತ್ರವೇ ಒಳ್ಳೆಯದಾಗಿ ಮತ್ತೊಬ್ಬರಿಗೆ ಅದರಿಂದ ಪ್ರಯೋಜನವಾಗದಿದ್ದರೆ ಅದು ನಿರರ್ಥಕ ಎಂಬ ಪೋಪ್ ಫ್ರಾನ್ಸಿಸ್ ರ ಮಾತು ಚಿಂತನೆಗೆ ಯೋಗ್ಯವಾಗಿದೆ. 

ಪ್ರಭುವೇ,
ನೀ ನನ್ನ ಜೊತೆಯಿರೇ ದುಃಖವೇಕೆ 
ಕರುಣೆ ಪ್ರೀತಿಯಿಲ್ಲದ ಉಪವಾಸವೇಕೆ?
-ಚಿತ್ತ 

19.02.2026 - ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ.....

 ಮೊದಲನೇ ವಾಚನ: ಧರ್ಮೋಪದೇಶಕಾಂಡ 30:15-20


ಮೋಶೆಯು ಜನರಿಗೆ ಹೀಗೆಂದು ಹೇಳಿದನು: “ಇಗೋ ನೋಡಿ: ನಾನು ಶುಭವನ್ನೂ ಅಶುಭವನ್ನೂ ಜೀವವನ್ನೂ ಸಾವನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ. ನಾನು ಈಗ ನಿಮಗೆ ಬೋಧಿಸುವಂತೆ ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ, ಅವರು ಹೇಳಿದ ಮಾರ್ಗದಲ್ಲಿ ನಡೆದು, ಅವರ ಆಜ್ಞಾವಿಧಿ ನಿರ್ಣಯಗಳನ್ನು ಅನುಸರಿಸಿದರೆ ನೀವು ಬದುಕಿ ಬಾಳುವಿರಿ, ಅಭಿವೃದ್ಧಿಯಾಗುವಿರಿ, ಮತ್ತು ನೀವು ಸ್ವಾಧೀನ ಮಾಡಿಕೊಳ್ಳಲು ಹೋಗುವ ನಾಡಿನಲ್ಲಿ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಆಶೀರ್ವದಿಸುವರು. ಆದರೆ ನೀವು ಅವರನ್ನು ಬಿಟ್ಟು, ಅವರ ಮಾತನ್ನು ಕೇಳಲೊಲ್ಲದೆ, ಮೋಸಹೋಗಿ, ಇತರ ದೇವರುಗಳನ್ನು ಪೂಜಿಸಿ ಅವಲಂಬಿಸಿದರೆ ನೀವು ಸ್ವಾಧೀನ ಮಾಡಿಕೊಳ್ಳಲು ಜೋರ್ಡನ್ ನದಿಯನ್ನು ದಾಟಿ ಹೋಗುವ ನಾಡಿನಲ್ಲಿ ಬಹುಕಾಲ ಇರದೆ ನಾಶ ಆಗಿ ಹೋಗುವಿರಿ. ಇದನ್ನು ನಾನು ಈಗ ನಿಮಗೆ ಖಂಡಿತವಾಗಿ ತಿಳಿಸುತ್ತೇನೆ. ನಾನು ಸಾವು ಜೀವಗಳನ್ನೂ ಶಾಪಾಶೀರ್ವಾದಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮಿ ಆಕಾಶಗಳೇ ಸಾಕ್ಷಿಗಳಾಗಿರಲಿ; ಆದುದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಬಾಳುವಂತೆ ಜೀವವನ್ನೇ ಆರಿಸಿಕೊಳ್ಳಿ; ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ ಅವರ ಮಾತಿಗೆ ವಿಧೇಯರಾಗಿರಿ; ಅವರನ್ನು ಹೊಂದಿಕೊಂಡೇ ಇರಿ. ಸರ್ವೇಶ್ವರ ನಿಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್, ಯಕೋಬರಿಗೆ ಪ್ರಮಾಣಮಾಡಿ ಕೊಟ್ಟ ನಾಡಿನಲ್ಲಿ ನೀವು ಬದುಕಿ ಬಾಳುವುದಕ್ಕೂ ಬಹುಕಾಲ ಇರುವುದಕ್ಕೂ ಅವರೇ ಆಧಾರ.”

ಕೀರ್ತನೆ: 1:1-2, 3, 4, 6

ಶ್ಲೋಕ: ಪ್ರಭುವಿನಲ್ಲೇ ಭರವಸೆಯಿಟ್ಟು ನಡೆವಾತನು ಧನ್ಯನು

ಶುಭಸಂದೇಶ: ಲೂಕ 9:22-25


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು. ಆದರೆ ಮೂರನೇ ದಿನ ಆತನು ಪುನರುತ್ಥಾನ ಹೊಂದುವನು,” ಎಂದು ಅವರಿಗೆ ತಿಳಿಸಿದರು. ಯೇಸುಸ್ವಾಮಿ ಎಲ್ಲರನ್ನು ನೋಡಿ ಹೇಳಿದ್ದೇನೆಂದರೆ: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ಅನುದಿನವೂ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು. ಒಬ್ಬನು ಪ್ರಪಂಚವನ್ನೆಲ್ಲಾ ಗೆದ್ದುಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅಥವಾ ತೆತ್ತರೆ ಅವನಿಗೆ ಅದರಿಂದ ಬರುವ ಲಾಭವಾದರೂ ಏನು?

ಮನಸ್ಸಿಗೊಂದಿಷ್ಟು :  ಆಯ್ಕೆಗಳು ನಮ್ಮನ್ನು ಗೊಂದಲಕ್ಕೆ ತಳ್ಳಬಹುದು. ಸುಖ-ಸಮೃದ್ಧಿ, ಆಸೆ-ಸೌಲಭ್ಯಗಳ ನಡುವೆ ಶಿಲುಬೆಯನ್ನು ಹೊತ್ತು ತಮ್ಮ ಹಿಂದೆ  ಬರಲು ಯೇಸು ನೀಡುವ ಕರೆ ಕಷ್ಟದ ಆಯ್ಕೆಯೇ. ಇಂದಿನವರೆಗಿನ ನಮ್ಮ ಆಯ್ಕೆ ಯಾವುದಾಗಿತ್ತು. ಮುಂದೆ ಯಾವುದಾಗಬಹುದು? ಯೇಸುವಿನ ಹಿಂದೆ ಸಾಗಲು ನಮಗಿರುವ ಅಡ್ಡಿಗಳೇನು?

ಪ್ರಶ್ನೆ : ಇಂದಿನ ಶುಭಸಂದೇಶದಲ್ಲಿನ ಯೇಸುವಿನ ಕರೆ ನಮ್ಮನ್ನು ಯೋಚಿಸುವಂತೆ ಮಾಡಿದೆಯೇ ಅಥವಾ ಪ್ರತಿ ನಿತ್ಯದ ವಾಕ್ಯದಂತೆ ಇದೂ ಓದಿಗೆ ಮಾತ್ರವೇ?

ಪ್ರಭುವೇ,
ಹೊರಬೇಕಾದ ಶಿಲುಬೆ, ಭಾರವೇ ಸರಿ 
ಹೊತ್ತು ನಿನ್ನ ಹಿಂದೆ ಬರುವುದಾಗಲಿ 
ಈ ನನ್ನ ಜೀವನದ ಗುರಿ
-ಚಿತ್ತ  

18.02.2026 - ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದಂತೆ ಎಚ್ಚರಿಕೆಯಿಂದಿರಿ

 









ಮೊದಲನೇ ವಾಚನ: ಯೊವೇಲ 2:12-18

ಸರ್ವೇಶ್ವರ ಇಂತೆನ್ನುತ್ತಾರೆ: “ಈಗಲಾದರೂ ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಳ್ಳಿ. ಉಪವಾಸ ಕೈಗೊಂಡು, ಅತ್ತು ಗೋಳಾಡಿ.” ನಿಮ್ಮ ಉಡುಪುಗಳನ್ನು ಅಲ್ಲ, ಹೃದಯಗಳನ್ನು ಸೀಳಿರಿ: ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಕಡೆಗೆ ತಿರುಗಿಕೊಳ್ಳಿ; ಅವರು ದಯಾವಂತರು, ಕರುಣಾಮೂರ್ತಿ, ಸಹನಶೀಲ, ಪ್ರೀತಿಮಯ. ವಿಧಿಸಬೇಕಾಗಿದ್ದ ದಂಡನೆಗಾಗಿ ಮನನೊಂದುಕೊಳ್ಳುವಂಥವರು. ಒಂದು ವೇಳೆ ಸರ್ವೇಶ್ವರ ತಮ್ಮ ಮನಸ್ಸನ್ನು ಬದಲಾಯಿಸಬಹುದು. ನಿಮ್ಮ ಕಡೆಗೆ ತಿರುಗಿ ನಿಮ್ಮನ್ನು ಆಶೀರ್ವದಿಸಬಹುದು; ನಿಮ್ಮ ದೇವರಾದ ಅವರಿಗೆ ಅರ್ಪಿಸಲು ಬೇಕಾದ ನೈವೇದ್ಯಗಳನ್ನು ಧಾರಾಳವಾಗಿ ಅನುಗ್ರಹಿಸಬಹುದು. ಸಿಯೋನ್ ಶಿಖರದ ಮೇಲೆ ನಿಂತು ಕೊಂಬೂದಿರಿ. ಉಪವಾಸ ದಿನವನ್ನು ಘೋಷಿಸಿರಿ. ಮಹಾಸಭೆಯನ್ನು ಕರೆಯಿರಿ. ಜನರನ್ನು ಒಟ್ಟುಗೂಡಿಸಿರಿ; ಸಭೆಯನ್ನು ಏರ್ಪಡಿಸಿರಿ; ವೃದ್ಧರನ್ನು, ಮಕ್ಕಳನ್ನು, ಮೊಲೆಗೂಸುಗಳನ್ನು ಕರೆತನ್ನಿರಿ. ವಧೂವರರು ತಮ್ಮ ಕಲ್ಯಾಣಗೃಹದಿಂದ ಹೊರಟುಬರಲಿ. ಸರ್ವೇಶ್ವರಸ್ವಾಮಿಯ ಪರಿಚಾರಕರಾದ ಯಾಜಕರು ದೇವಾಲಯದ ದ್ವಾರ ಮಂಟಪಕ್ಕೂ ಬಲಿಪೀಠಕ್ಕೂ ನಡುವೆ ಶೋಕತಪ್ತರಾಗಿ ಹೀಗೆಂದು ಪ್ರಾರ್ಥಿಸಲಿ: “ಕರುಣೆ ತೋರು, ಹೇ ಸರ್ವೇಶ್ವರಾ, ನಿನ್ನ ಪ್ರಜೆಗೆ ನಿಂದೆಯಾಗದಿರಲಿ ನಿನ್ನ ಸ್ವಂತ ಜನತೆಗೆ ಗುರಿಯಾಗದಿರಲಿ ಅವರು ಅನ್ಯರ ತಾತ್ಸಾರಕೆ ‘ನಿಮ್ಮ ದೇವನೆಲ್ಲಿ?’ ಎಂಬ ಪರಕೀಯರ ಹೀಯಾಳಿಕೆಗೆ” ಆಗ ಸರ್ವೇಶ್ವರ ತಮ್ಮ ದೇಶದ ಮೇಲೆ ಅಭಿಮಾನಗೊಂಡು, ತಮ್ಮ ಜನರಿಗೆ ಕರುಣೆ ತೋರಿ ಹೀಗೆಂದರು:

ಕೀರ್ತನೆ: 51:3-4, 5-6, 12-13, 14, 17

ಶ್ಲೋಕ: ಕೃಪಾಳು ದೇವಾ ಕರುಣಿಸೆಮ್ಮನು ನಿಮ್ಮ ವಿರುದ್ಧ ನಾವು ಪಾಪ ಮಾಡಿದ್ದೇವೆ.

ಎರಡನೇ ವಾಚನ: 2 ಕೊರಿಂಥಿಯರಿಗೆ 5:20-6:2

ಸಹೋದರರೇ, ನಾವು ಕ್ರಿಸ್ತಯೇಸುವಿನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾರೆ. ಅವರೊಡನೆ ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತ್ತೇವೆ. ಪಾಪವನ್ನೇ ಅರಿಯದ ಕ್ರಿಸ್ತಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತಯೇಸುವಿನಲ್ಲಿ ನಾವು ದೇವರೊಡನೆ ಸತ್ಸಂಬಂಧವನ್ನು ಪಡೆಯಲೆಂದೇ ಹೀಗೆ ಮಾಡಿದರು. ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೇನೆಂದರೆ: ದೇವರಿಂದ ನೀವು ಪಡೆದ ವರಪ್ರಸಾದಗಳನ್ನು ವ್ಯರ್ಥಮಾಡಬೇಡಿ. "ಸುಪ್ರಸನ್ನತೆಯ ಕಾಲದಲ್ಲಿ ನಿನ್ನನ್ನಾಲಿಸಿದೆನು; ಉದ್ಧಾರ ದಿನದಂದು ನಿನಗೆ ನೆರವಾದೆನು,” ಎಂದಿದ್ದಾರೆ ದೇವರು. ಇದೇ ಆ ಸುಪ್ರಸನ್ನತೆಯ ಕಾಲ. ಇದೇ ಆ ಉದ್ಧಾರದ ಸುದಿನ.

ಶುಭಸಂದೇಶ: ಮತ್ತಾಯ 6:1-6, 16-18

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಸ್ವರ್ಗದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರಕದು. ಅಂತೆಯೇ, ನೀನು ದಾನಧರ್ಮ ಮಾಡುವಾಗ ತುತೂರಿಯನ್ನು ಊದಿಸಬೇಡ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿದ್ದಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ದಾನಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು." "ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾ ಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ಅವರಿಗೆ ಬರಬೇಕಾದ ಪೂರ್ತಿಫಲ ಆಗಲೇ ಬಂದಾಯಿತೆಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ. ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು."  "ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪೆಮಾಡಬೇಡಿ. ಜನರ ಕಣ್ಣಿಗೆ ತಾವು ಉಪವಾಸಿಗಳೆಂದು ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ಮುಖವನ್ನು ಬಾಡಿಸಿಕೊಳ್ಳುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿಯಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ಉಪವಾಸ ಕೈಗೊಂಡಾಗ ಮುಖ ತೊಳೆದುಕೊ, ತಲೆಬಾಚಿಕೊ. ಆಗ ಉಪವಾಸ ಮಾಡುವವನಂತೆ ನೀನು ಜನರಿಗೆ ಕಾಣಿಸಿಕೊಳ್ಳುವುದಿಲ್ಲ; ಅಂತರಂಗದಲ್ಲಿ ಇರುವ ನಿನ್ನ ತಂದೆಗೆ ಮಾತ್ರ ಕಾಣಿಸಿಕೊಳ್ಳುವೆ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು."

ಮನಸ್ಸಿಗೊಂದಿಷ್ಟು : ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳಾದ ದಾನ-ಧರ್ಮ ಪ್ರಾರ್ಥನೆ ಹಾಗೂ ಉಪವಾಸ ವ್ರತ ಹೇಗಿರಬೇಕೆಂಬುದನ್ನು ಯೇಸು ಇಂದು ಹೇಳುವುದನ್ನು ನಾವು ಕಾಣುತ್ತೇವೆ. ಆಚರಣೆಗಳು ತಮ್ಮ ಮೂಲ ಅರ್ಥವನ್ನೇ ಕಳೆದುಕೊಂಡು ಕೇವಲ ತೋರ್ಪಡಿಕೆಗೆ ಸೀಮಿತವಾದಾಗ ಅದು ಮನುಷ್ಯರ ಮೆಚ್ಚುಗೆಗಷ್ಟೇ  ಪಾತ್ರವಾಗುತ್ತದೆ. ಆದರೆ ದೇವರನ್ನು ಮೆಚ್ಚಿಸುವುದು ಅವುಗಳ ನಿಜ ಕಾರಣವಾಗಬೇಕು ಎಂಬುದು ಯೇಸುವಿನ ಕರೆ.

ಪ್ರಶ್ನೆ : ನಮ್ಮ ದಿನ ನಿತ್ಯದ ಕಾರ್ಯಗಳು ಯಾರನ್ನು ಹೆಚ್ಚು ಮೆಚ್ಚಿಸುವತ್ತ ಸಾಗುತ್ತಿದೆ? ಮನುಷ್ಯರನ್ನೋ ? ದೇವರನ್ನೋ ?

ಪ್ರಭುವೇ,
ಇಂದಿನವರೆಗಿನ 'ನನ್ನನ್ನು' ಸರಿಸಿ 
ಈಗಿಂದಲೇ  ನಿಮ್ಮನ್ನು ನನ್ನಲಿರಿಸಿ 
-ಚಿತ್ತ 

17.02.2026

ಮೊದಲನೇ ವಾಚನ: ಯಕೋಬ 1:12-18


ಸಂಕಟ ಶೋಧನೆಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವವನೇ ಧನ್ಯನು. ಅವನು ಪರಿಶೋಧನೆಯಲ್ಲಿ ಯಶಸ್ವಿಯಾದ ಮೇಲೆ ಸಜ್ಜೀವವೆಂಬ ಜಯಮಾಲೆಯನ್ನು ಪಡೆಯುತ್ತಾನೆ. ದೇವರು ತಮ್ಮನ್ನು ಪ್ರೀತಿಸುವವರಿಗೆ ಇದನ್ನು ಕಾದಿರಿಸಿರುತ್ತಾರೆ. ಪಾಪಪ್ರಲೋಭನೆಗೆ ಒಳಗಾದಾಗ, “ಈ ಪ್ರಲೋಭನೆಗಳು ದೇವರಿಂದಲೇ ಬಂದವು,” ಎಂದು ಯಾರೂ ಹೇಳದಿರಲಿ. ಏಕೆಂದರೆ, ದೇವರು ಸ್ವತಃ ಪಾಪಪ್ರಲೋಭನೆಗೆ ಗುರಿಯಾಗುವುದಿಲ್ಲ ಮತ್ತು ಯಾರನ್ನೂ ಅಂಥ ಪ್ರಲೋಭನೆಗೆ ಗುರಿಪಡಿಸುವುದಿಲ್ಲ. ಮಾನವನು ಪ್ರಲೋಭನೆಗೆ ಒಳಗಾಗುವುದು ತನ್ನ ದುರಿಚ್ಛೆಯಿಂದಲೇ. ಅದು ಅವನನ್ನು ಆಕರ್ಷಿಸಿ ಮರುಳುಗೊಳಿಸುತ್ತದೆ. ದುರಿಚ್ಛೆ ಗರ್ಭಧರಿಸಿ ಪಾಪಕ್ಕೆ ಜನ್ಮವೀಯುತ್ತದೆ; ಪಾಪವು ಪೂರ್ತಿಯಾಗಿ ಬೆಳೆದು ಮರಣವನ್ನು ಹಡೆಯುತ್ತದೆ. ಪ್ರಿಯ ಸಹೋದರರೇ, ಮೋಸಹೋಗಬೇಡಿ. ಎಲ್ಲಾ ಯೋಗ್ಯ ವರಗಳೂ ಉತ್ತಮಕೊಡುಗೆಗಳೂ ಬರುವುದು ಮೇಲಿನಿಂದಲೇ. ಜ್ಯೋತಿರ್ಮಂಡಲವನ್ನು ಉಂಟುಮಾಡಿದ ದೇವರೇ ಅವುಗಳ ಮೂಲದಾತರು. ಅವರಲ್ಲಿ ಚಂಚಲತೆ ಇಲ್ಲ, ಮಬ್ಬು ಮುಸುಕಿನ ಛಾಯೆಯೂ ಇಲ್ಲ. ಸೃಷ್ಟಿಗಳಲ್ಲೆಲ್ಲಾ ನಾವು ಪ್ರಥಮ ಫಲವಾಗುವಂತೆ ದೇವರು ತಮ್ಮ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ನಮಗೆ ಜೀವವಿತ್ತರು.

ಕೀರ್ತನೆ
94: 12-13, 14-15, 18-19, v. 12

ಶ್ಲೋಕ:  ಪ್ರಭೂ, ನಿನ್ನಿಂದ ಧರ್ಮೋಪದೇಶ ಪಡೆದವನು ಧನ್ಯ

1.  ಪ್ರಭೂ, ನಿನ್ನಿಂದ ಶಿಕ್ಷಿತನಾದ ಮಾನವ ಧನ್ಯ|
ನಿನ್ನಿಂದ ಧರ್ಮೋಪದೇಶ ಪಡೆದವನು ಧನ್ಯ|
ನೆಮ್ಮದಿ ನೀಡುವೆ ಅವನು ಸಂಕಟದಲಿರುವಾಗ||
ಶ್ಲೋಕ

2.  ತಳ್ಳಿಬಿಡಲು ಪ್ರಭು ತನ್ನ ಜನರನ್ನು ಕೈಬಿಡನವನು|
ತನ್ನ ಸ್ವಕೀಯರನು ನ್ಯಾಯತೀರ್ಪು ಮರಳಿ ತಿರುಗುವುದು|
ನೀತಿಯತ್ತ ನೇರ ಮನಸ್ಕರೆಲ್ಲ ಮಾಡುವರು ಅದನು ಸಮರ್ಥ||
ಶ್ಲೋಕ

3.  ನನ್ನ ಕಾಲು ಜಾರಿಹೋಯಿತು ಎನ್ನುವುದರೊಳಗೆ|
ನಿನ್ನ ಅಚಲ ಪ್ರೀತಿ, ಪ್ರಭೂ, ನೆರವಾಯಿತೆನಗೆ||
ನನ್ನ ಅಂತರಂಗದಲಿ ಏಳಲು ಅಂದೋಲನ|
ತಂದಿತೆನ್ನ ಮನಕೆ ಆನಂದ ನಿನ್ನ ಸಾಂತ್ವನ||
ಶ್ಲೋಕ

ಘೋಷಣೆ
(2 ಕೊರಿಂಥಿ 5:19)

ಅಲ್ಲೆಲೂಯ, ಅಲ್ಲೆಲೂಯ!
ದೇವರು ಮಾನವರ ಅಪರಾಧಗಳನ್ನು ಲೆಕ್ಕಿಸದೆ | ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಡನೆ ಸಂದಾನಗೊಳಿಸುತ್ತಾರೆ ||
ಅಲ್ಲೆಲೂಯ!


ಶುಭಸಂದೇಶ: ಮಾರ್ಕ 8:14-21


ಶಿಷ್ಯರು ಬುತ್ತಿಯನ್ನು ಕಟ್ಟಿಕೊಳ್ಳಲು ಮರೆತಿದ್ದರು. ದೋಣಿಯಲ್ಲಿ ಒಂದೇ ಒಂದು ರೊಟ್ಟಿಯಿತ್ತು. ಯೇಸುಸ್ವಾಮಿ ಅವರಿಗೆ, “ಎಚ್ಚರಿಕೆ, ಫರಿಸಾಯರ ಹಾಗೂ ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ,” ಎಂದು ಹೇಳಿದರು. ಇದನ್ನು ಕೇಳಿದ ಶಿಷ್ಯರು, “ನಮ್ಮಲ್ಲಿ ರೊಟ್ಟಿಯಿಲ್ಲದ್ದರಿಂದ ಹೀಗೆ ಹೇಳುತ್ತಿರಬಹುದೇ” ಎಂದು ಚರ್ಚಿಸತೊಡಗಿದರು. ಆ ಚರ್ಚೆಯನ್ನು ಯೇಸು ಗಮನಿಸಿ “ರೊಟ್ಟಿ ಇಲ್ಲವೆಂದು ಚರ್ಚೆ ಏಕೆ? ನಿಮಗೆ ಇನ್ನೂ ಅರಿವಾಗಲಿ, ಗ್ರಹಿಕೆಯಾಗಲಿ ಇಲ್ಲವೇ? ನೀವಿನ್ನೂ ಮಂದಮತಿಗಳಾಗಿರುವಿರೋ? ಕಿವಿಗಳಿದ್ದೂ ಕೇಳಲಾರಿರಾ? ಕಣ್ಣುಗಳಿದ್ದೂ ನೋಡಲಾರಿರಾ? ನಾನು ಐದು ರೊಟ್ಟಿಗಳಿಂದ ಐದುಸಾವಿರ ಜನರನ್ನು ತೃಪ್ತಿಪಡಿಸಿದಾಗ ಉಳಿದ ರೊಟ್ಟಿಯ ತುಂಡುಗಳನ್ನು ಎಷ್ಟು ಬುಟ್ಟಿ ತುಂಬಾ ಒಟ್ಟುಗೂಡಿಸಿದಿರಿ? ನಿಮಗೆ ಜ್ಞಾಪಕವಿಲ್ಲವೇ?” ಎಂದು ಕೇಳಿದರು. “ಹನ್ನೆರಡು ಬುಟ್ಟಿಗಳು” ಎಂದು ಅವರು ಉತ್ತರವಿತ್ತರು. “ಅಲ್ಲದೆ ನಾನು ಏಳು ರೊಟ್ಟಿಗಳಿಂದ ನಾಲ್ಕುಸಾವಿರ ಜನರನ್ನು ತೃಪ್ತಿಪಡಿಸಿದಾಗ ಎಷ್ಟು ಕುಕ್ಕೆತುಂಬಾ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಿರಿ?” ಎಂದು ಪುನಃ ಅವರನ್ನು ಕೇಳಲು, “ಏಳು ಕುಕ್ಕೆಗಳು,” ಎಂದರು. ಆಗ ಯೇಸು, “ಇಷ್ಟಾದರೂ ನಿಮಗಿನ್ನೂ ತಿಳುವಳಿಕೆ ಇಲ್ಲವೆ?” ಎಂದರು.  

16.02.2026 - “ಈ ಪೀಳಿಗೆ ಅದ್ಭುತವನ್ನು ಸಂಕೇತವಾಗಿ ಅಪೇಕ್ಷಿಸುವುದೇಕೆ?

 ಮೊದಲನೇ ವಾಚನ: ಯಕೋಬ 1:1-11


ಜಗದಾದ್ಯಂತ ಚದರಿರುವ ಇಸ್ರಯೇಲಿನ ಹನ್ನೆರಡು ಕುಲದವರಿಗೆ - ದೇವರ ಹಾಗೂ ಪ್ರಭು ಯೇಸುಕ್ರಿಸ್ತರ ದಾಸನಾದ ಯಕೋಬನ ಶುಭಾಶಯಗಳು. ನನ್ನ ಪ್ರಿಯ ಸಹೋದರರೇ, ನಿಮಗೆ ವಿವಿಧ ಸಂಕಟ ಶೋಧನೆಗಳು ಬಂದೊದಗಿದಾಗ ಅವುಗಳನ್ನು ಸಂತೋಷದಿಂದ ಸಹಿಸಿಕೊಳ್ಳಿ. ಇವು ನಿಮ್ಮ ವಿಶ್ವಾಸವನ್ನು ಒರೆಗೆ ಹಚ್ಚಿ ನಿಮ್ಮನ್ನು ದೃಢಪಡಿಸುತ್ತೇವೆ; ನಿಮ್ಮನ್ನು ಸಹನಶೀಲರನ್ನಾಗಿ ಮಾಡುತ್ತವೆ. ಈ ಸಹನೆ ಸಿದ್ಧಿಗೆ ಬಂದಾಗ ನೀವು ಯಾವ ಕುಂದುಕೊರತೆ ಇಲ್ಲದೆ, ಪರಿಪೂರ್ಣರೂ ಸರ್ವಗುಣ ಸಂಪನ್ನರೂ ಆಗುತ್ತೀರಿ. ನಿಮ್ಮಲ್ಲಿ ಯಾರಿಗಾದರೂ ಜ್ಞಾನದ ಕೊರತೆಯಿದ್ದರೆ ಅಂಥವನು ದೇವರಲ್ಲಿ ಬೇಡಿಕೊಳ್ಳಲಿ. ಯಾರನ್ನೂ ತಿರಸ್ಕರಿಸದೆ ಎಲ್ಲರಿಗೂ ಯಥೇಚ್ಛವಾಗಿ ನೀಡುವ ದೇವರು, ಅವನಿಗೆ ಜ್ಞಾನವನ್ನು ದಯಪಾಲಿಸುತ್ತಾರೆ. ಆದರೆ ಬೇಡುವವನು ವಿಶ್ವಾಸದಿಂದ ಬೇಡಲಿ. ಸಂಶಯಕ್ಕೆ ಎಡೆಕೊಡದಿರಲಿ. ಸಂಶಯಕ್ಕೀಡಾಗುವವನ ಪರಿಸ್ಥಿತಿಯಾದರೋ ಬಿರುಗಾಳಿಯ ಬಡಿತಕ್ಕೆ ಸಿಕ್ಕಿದ ಸಮುದ್ರದ ಅಲೆಯಂತೆ ತುಯ್ದಾಡುತ್ತಿರುತ್ತದೆ. ಅಂಥವನು ಚಂಚಲಚಿತ್ತನು. ಆಚಾರವಿಚಾರಗಳಲ್ಲಿ ಅಸ್ಥಿರ ಮನಸ್ಸುಳ್ಳವನು. ಆದ್ದರಿಂದ ಅವನು ಪ್ರಭುವಿನಿಂದ ಏನನ್ನಾದರೂ ಪಡೆಯುತ್ತೇನೆಂದು ಭಾವಿಸದಿರಲಿ. ದೀನದಲಿತನಾದ ಸಹೋದರನು, ದೇವರು ತನ್ನನ್ನು ಉನ್ನತ ಸ್ಥಿತಿಗೆ ಏರಿಸಿದಾಗ ಅನಂದಿಸಲಿ. ಅಂತೆಯೇ ಧನಿಕನಾದ ಸಹೋದರನು, ದೇವರು ತನ್ನನ್ನು ದೀನಸ್ಥಿತಿಗೆ ಇಳಿಸಿದಾಗ ಆನಂದಿಸಲಿ. ಏಕೆಂದರೆ, ಧನಿಕರು ಹುಲ್ಲಿನ ಹೂವಿನಂತೆ ಗತಿಸಿ ಹೋಗುತ್ತಾರೆ. ಸೂರ್ಯನ ಸುಡು ಬಿಸಿಲಿಗೆ ಹುಲ್ಲು ಒಣಗಿಹೋಗುತ್ತದೆ, ಅದರ ಹೂವು ಉದುರಿ ಹೋಗುವುದು, ಅದರ ಅಂದ ಚೆಂದವೂ ಹಾಳಾಗಿ ಹೋಗುತ್ತದೆ. ಅಂತೆಯೇ ಧನಿಕನು ತನ್ನ ವ್ಯವಹಾರಗಳಲ್ಲಿಯೇ ಕುಂದಿ ಹೋಗುತ್ತಾನೆ.

ಕೀರ್ತನೆ: 119:67, 68, 71, 72, 75, 76

ಶ್ಲೋಕ: ನಾ ಬದುಕುವಂತೆ ತೋರೆನಗೆ ನಿನ್ನ ದಯೆ

ಶುಭಸಂದೇಶ: ಮಾರ್ಕ 8:11-13


ಫರಿಸಾಯರು ಯೇಸುಸ್ವಾಮಿಯ ಬಳಿಗೆ ಬಂದು, ಅವರೊಡನೆ ತರ್ಕಮಾಡಿ, ಅವರನ್ನು ಪರೀಕ್ಷಿಸುವ ಉದ್ದೇಶದಿಂದ: “ನೀನು ದೇವರಿಂದ ಬಂದವನೆಂಬುದನ್ನು ಸೂಚಿಸಲು ಒಂದು ಅದ್ಭುತವನ್ನು ಮಾಡಿತೋರಿಸು,” ಎಂದು ಕೇಳಿದರು. ಇದನ್ನು ಕೇಳಿ ಯೇಸು, ಮನಸ್ಸಿನಲ್ಲೇ ನೊಂದುಕೊಂಡು, ನಿಟ್ಟುಸಿರಿಟ್ಟು, “ಈ ಪೀಳಿಗೆ ಅದ್ಭುತವನ್ನು ಸಂಕೇತವಾಗಿ ಅಪೇಕ್ಷಿಸುವುದೇಕೆ? ಇದಕ್ಕೆ ಅಂಥ ಯಾವ ಸಂಕೇತವನ್ನು ಕೊಡಲಾಗದು, ಇದು ಖಂಡಿತ,” ಎಂದರು. ಅನಂತರ ಯೇಸು ಅವರನ್ನು ಬಿಟ್ಟು, ದೋಣಿಯನ್ನು ಹತ್ತಿ ಸರೋವರದ ಆಚೆದಡಕ್ಕೆ ಹೊರಟುಹೋದರು.

15.02.25 - ಕೋಪ ಕೊಲೆಗೆ ಮೂಲ

 ಮೊದಲನೇ ವಾಚನ: ಸಿರಾಖನು 15:15-50


ನೀನು ಇಚ್ಛಿಸಿದೆಯಾದರೆ ಆತನ ಆಜ್ಞೆಗಳನ್ನು ಅನುಸರಿಸಿ ನಡೆವೆ ಹೀಗೆ ನಂಬಿಗಸ್ಥನಾಗಿ ದೇವರ ಚಿತ್ತಾನುಸಾರ ಬಾಳುವೆ. ನಿನ್ನ ಮುಂದೆ ಇಟ್ಟಿರುವರು ಬೆಂಕಿಯನ್ನು ಹಾಗು ನೀರನ್ನು ನೀನು ಆಯ್ದುಕೊಳ್ಳಬಹುದು ನಿನಗೆ ಬೇಕಾದುದನ್ನು. ಜೀವನ್ಮರಣಗಳು ಇರಿಸಲಾಗಿವೆ ಮನುಷ್ಯನ ಎದುರಿನಲ್ಲೆ ಅವನು ಇಷ್ಟಪಟ್ಟದ್ದನ್ನು ಕೊಡಲಾಗುವುದು ಅವನಿಗೆ. ಏಕೆಂದರೆ ದೇವರ ಜ್ಞಾನ ಅಪರಿಮಿತ ಆತ ಅಪೂರ್ವ ಬಲವಂತ, ಎಲ್ಲವನು ವೀಕ್ಷಿಸುವಂಥವ. ದೇವರಿಗೆ ಭಯಪಡುವವರ ಮೇಲಿದೆ ಆತನ ಕೃಪಾಕಟಾಕ್ಷ ಮನುಷ್ಯನು ಮಾಡುವ ಪ್ರತಿಯೊಂದೂ ಆತನಿಗೆ ವ್ಯಕ್ತ. ದುರುಳನಾಗೆಂದು ದೇವರು ಯಾರಿಗೂ ಆಜ್ಞಾಪಿಸಲಿಲ್ಲ, ಪಾಪಮಾಡಲು ಯಾರಿಗೂ ಅನುಮತಿ ಕೊಟ್ಟಿಲ್ಲ.

ಕೀರ್ತನೆ: 119:1-2, 4-5, 17-18, 33-34

ಶ್ಲೋಕ: ಪ್ರಭುವಿನ ಶಾಸ್ತ್ರಾನುಸಾರ ನಡೇದವರು ಧನ್ಯರು

ಎರಡನೇ ವಾಹನ: 1 ಕೊರಿಂಥಿಯರಿಗೆ 2:6-10

ನಾನು ಪರಿಣಿತರೊಂದಿಗೆ ಜ್ಞಾನವನ್ನೇ ಕುರಿತು ಮಾತನಾಡುತ್ತೇನೆ. ಆದರೆ ಇದು ಇಹಲೋಕದ ಜ್ಞಾನವಲ್ಲ, ಅಳಿದು ಹೋಗುವಂಥ ಅಧಿಪತಿಗಳ ಜ್ಞಾನವೂ ಅಲ್ಲ. ನಾನು ಸಾರುವ ಜ್ಞಾನ ದೇವರ ನಿಗೂಢ ಜ್ಞಾನ. ಮಾನವರಿಗೆ ಮುಚ್ಚಿಟ್ಟ ಜ್ಞಾನ. ನಮ್ಮನ್ನು ಮಹಿಮೆಗೊಳಿಸುವುದಕ್ಕಾಗಿ ಲೋಕದ ಉತ್ಪತ್ತಿಗೆ ಮೊದಲೇ ದೇವರು ನಿಯೋಜಿಸಿದ ಜ್ಞಾನ. ಲೋಕಾಧಿಪತಿಗಳಾರಿಗೂ ಇದರ ಅರಿವಿರಲಿಲ್ಲ. ಹಾಗೆ ಅರಿತಿದ್ದರೆ ಆ ಮಹಿಮಾನ್ವಿತ ಪ್ರಭುವನ್ನು ಅವರು ಶಿಲುಬೆಗೇರಿಸುತ್ತಿರಲಿಲ್ಲ. ಪವಿತ್ರಗ್ರಂಥದಲ್ಲಿ ಹೇಳಿರುವಂತೆ: “ಕಣ್ಣಾವುದೂ ಕಂಡಿಲ್ಲ, ಕಿವಿಯಾವುದೂ ಕೇಳಿಲ್ಲ. ಮನುಜಕಲ್ಪನೆಗೂ ಎಟುಕಲಿಲ್ಲ. ಅಂಥ ಅತಿಶಯಗಳನ್ನು ಸಜ್ಜುಗೊಳಿಸಿರುವನು, ತನ್ನನೊಲಿದವರಿಗೆ ಪರಮದೇವನು.” ನಮಗಾದರೋ ದೇವರು ಪವಿತ್ರಾತ್ಮ ಅವರ ಮುಖಾಂತರ ಇವುಗಳನ್ನು ಪ್ರಕಟಿಸಿದ್ದಾರೆ. ಸಕಲವನ್ನು ಹಾಗೂ ದೇವರ ಅಂತರಾಳವನ್ನು ಅವಲೋಕಿಸುವವರು ಈ ಪವಿತ್ರಾತ್ಮರೇ.

ಶುಭಸಂದೇಶ: ಮತ್ತಾಯ 5:17-37


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೇಳಿದ್ದೇನೆಂಡರೆ: "ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದು ಮಾಡಲು ನಾನು ಬಂದೆನೆಂದು ತಿಳಿಯಬೇಡಿ. ರದ್ದು ಮಾಡಲು ಅಲ್ಲ, ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ. ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲ ನೆರವೇರುವುದೇ ಹೊರತು ಅದರಲ್ಲಿ ಒಂದು ಚಿಕ್ಕ ಅಕ್ಷರವಾಗಲಿ, ಚುಕ್ಕೆಯಾಗಲಿ ನಿರರ್ಥಕವಾಗದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವಲ್ಲಿ, ಅದರ ಆಜ್ಞೆಗಳಲ್ಲಿ ಅತಿ ಚಿಕ್ಕದೊಂದನ್ನು ವಿೂರುವವನು, ವಿೂರುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆಂದು ಪರಿಗಣಿತನಾಗುವನು; ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು. ಧರ್ಮಶಾಸ್ತ್ರಿಗಳ ಹಾಗೂ ಫರಿಸಾಯರ ಧರ್ಮನಿಷ್ಠೆಗಿಂತ ನಿಮ್ಮ ಧರ್ಮನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸಲಾರಿರಿ ಎಂಬುದು ನಿಶ್ಚಯ." ಕೋಪ ಕೊಲೆಗೆ ಮೂಲ " ‘ನರಹತ್ಯೆ ಮಾಡಬೇಡ; ನರಹತ್ಯೆ ಮಾಡುವವನು ನ್ಯಾಯತೀರ್ಪಿಗೆ ಗುರಿಯಾಗುವನು’ ಎಂದು ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. ಆದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ: ತನ್ನ ಸೋದರನ ಮೇಲೆ (ನಿಷ್ಕಾರಣವಾಗಿ) ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯತೀರ್ಪಿಗೆ ಈಡಾಗುವನು; ತನ್ನ ಸೋದರನನ್ನು ತುಚ್ಛೀಕರಿಸುವವನು ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು; ‘ಮೂರ್ಖ’ ಎಂದು ಮೂದಲಿಸುವವನು ನರಕಾಗ್ನಿಗೆ ಗುರಿಯಾಗುವನು. ಆದಕಾರಣ, ಬಲಿಪೀಠದ ಮುಂದೆ ದೇವರಿಗೆ ಕಾಣಿಕೆಯನ್ನು ಅರ್ಪಿಸಲಿರುವಾಗ, ನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಸ್ತಾಪವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಬಲಿಪೀಠದ ಮುಂದೆಯೇ ಇಟ್ಟುಬಿಡು. ಮೊದಲು ಹೋಗಿ ನಿನ್ನ ಸೋದರನೊಡನೆ ಸಮಾಧಾನಮಾಡಿಕೊ, ಅನಂತರ ಬಂದು ನಿನ್ನ ಕಾಣಿಕೆಯನ್ನು ಒಪ್ಪಿಸು." "ನಿನ್ನ ಎದುರಾಳಿ ನಿನ್ನನ್ನು ನ್ಯಾಯಸ್ಥಾನಕ್ಕೆ ಎಳೆಯುವಾಗ ಮಾರ್ಗಮಧ್ಯದಲ್ಲೇ ಅವನೊಡನೆ ಬೇಗ ಸಂಧಾನಮಾಡಿಕೊ. ಇಲ್ಲದಿದ್ದರೆ, ಅವನು ನಿನ್ನನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು. ನ್ಯಾಯಾಧಿಪತಿ ನಿನ್ನನ್ನು ಪೋಲೀಸರ ವಶಕ್ಕೆ ಬಿಡಬಹುದು. ಅನಂತರ ನಿನಗೆ ಸೆರೆವಾಸ ಪ್ರಾಪ್ತವಾದೀತು! ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಬಿಡಿಕಾಸನ್ನೂ ಬಿಡದೆ ಎಲ್ಲವನ್ನೂ ತೆರಬೇಕಾಗುವುದು. ಇದನ್ನು ನೆನಪಿನಲ್ಲಿಡು." "ವ್ಯಭಿಚಾರ ಮಾಡಕೂಡದು ಎಂಬ ನಿಯಮವನ್ನು ನೀವು ಕೇಳಿದ್ದೀರಿ; ಆದರೆ ನಾನು ಹೇಳುತ್ತೇನೆ, ಕೇಳಿ: ಪರಸ್ತ್ರೀಯನ್ನು ಕಾಮದೃಷ್ಟಿಯಿಂದ ನೋಡುವ ಪ್ರತಿಯೊಬ್ಬನೂ ತನ್ನ ಹೃದಯದಲ್ಲಿ ಆಕೆಯೊಡನೆ ಆಗಲೇ ವ್ಯಭಿಚಾರ ಮಾಡಿದವನೇ ಆಗುತ್ತಾನೆ. ನಿನ್ನ ಬಲಗಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತೆಸೆದುಬಿಡು; ನಿನ್ನ ಇಡೀ ದೇಹ ನರಕಕ್ಕೆ ತುತ್ತಾಗುವುದಕ್ಕಿಂತ ನಿನ್ನ ಒಂದು ಅಂಗ ನಾಶವಾಗುವುದೇ ಲೇಸು. ನಿನ್ನ ಬಲಗೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಬಿಸಾಡಿಬಿಡು; ನಿನ್ನ ಇಡೀ ದೇಹ ನರಕದ ಪಾಲಾಗುವುದಕ್ಕಿಂತ ಒಂದು ಅವಯವ ನಾಶವಾಗುವುದು ಎಷ್ಟೋ ಮೇಲು." "ಇದಲ್ಲದೆ, ‘ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ವಿವಾಹ ವಿಚ್ಛೇದನ ಪತ್ರವನ್ನು ಅವಳಿಗೆ ಕೊಡಲಿ,’ ಎಂದು ವಿಧಿಸಲಾಗಿದೆ. ಆದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ: ತನ್ನ ಹೆಂಡತಿಯ ದುರ್ನಡತೆಯ ಕಾರಣದಿಂದಲ್ಲದೆ, ಅವಳನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರಿಣಿಯಾಗುವುದಕ್ಕೆ ಕಾರಣನಾಗುತ್ತಾನೆ; ಅಲ್ಲದೆ ಗಂಡ ಬಿಟ್ಟವಳನ್ನು ಮದುವೆಯಾಗುವವನು ಕೂಡ ವ್ಯಭಿಚಾರಿಯಾಗುತ್ತಾನೆ." " ‘ಸುಳ್ಳಾಣೆಯಿಡಬೇಡ; ದೇವರಿಗೆ ಆಣೆಯಿಟ್ಟು ವಾಗ್ದಾನಮಾಡಿದಂತೆ ನಡೆದುಕೊಳ್ಳಲೇ ಬೇಕು’ ಎಂದು ಪೂರ್ವಿಕರಿಗೆ ಹೇಳಿದ್ದು ನಿಮಗೆ ತಿಳಿದೇ ಇದೆ. ಈಗ ನಾನು ಹೇಳುವುದನ್ನು ಕೇಳಿ: ನೀವು ಆಣೆಯಿಡಲೇಬೇಡಿ. ಆಕಾಶದ ಮೇಲೆ ಆಣೆಯಿಡಬೇಡಿ, ಅದು ದೇವರ ಸಿಂಹಾಸನ; ಭೂಮಿಯ ಮೇಲೆ ಆಣೆಯಿಡಬೇಡಿ, ಅದು ದೇವರ ಪಾದಪೀಠ; ಜೆರುಸಲೇಮಿನ ಮೇಲೆ ಆಣೆಯಿಡಬೇಡಿ, ಅದು ರಾಜಾಧಿರಾಜನ ಪಟ್ಟಣ; ನಿಮ್ಮ ತಲೆಯ ಮೇಲೂ ಆಣೆಯಿಡಬೇಡಿ; ಹಾಗೆ ಆಣೆಯನ್ನಿಟ್ಟು ಅದರ ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲು ನಿಮ್ಮಿಂದಾಗದು. ಹೌದಾದರೆ ಹೌದೆನ್ನಿ, ಅಲ್ಲವಾದರೆ ಅಲವೆನ್ನಿ; ಇದಕ್ಕಿಂತ ಮಿಗಿಲಾದುದು ಪಿಶಾಚಿಯಿಂದ ಪ್ರೇರಿತವಾದುದು."

24.03.2026 - ನನ್ನನ್ನು ಕಳುಹಿಸಿದಾತನು ನನ್ನೊಡನಿದ್ದಾನೆ. ಆತನು ಮೆಚ್ಚುವುದನ್ನೇ ನಾನು ಸತತವೂ ಮಾಡುವುದರಿಂದ ಆತನು ನನ್ನನ್ನು ಏಕಾಂಗಿಯಾಗಿ ಬಿಟ್ಟಿಲ್ಲ

  ಮೊದಲನೇ ವಾಚನ: ಸಂಖ್ಯಾಕಾಂಡ 21:4-9 ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪುಕಡಲಿನ ಮಾರ್ಗವಾಗಿ ಪ್ರಯಾಣ ಮಾಡಿದರು....