ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥದಿಂದ ಇಂದಿನ ವಾಚನ 1:17-29
ಕೀರ್ತನೆ : 71:1-6,15,17 V.15
ಶ್ಲೋಕ: ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು.
1. ಆಶ್ರಯಕೋರಿ ಹೇ ಪ್ರಭೂ, ನಾ ಬಂದಿರುವೆ|
ಆಶಾಭಂಗವಾಗದಿರಲೆಂದು ನಾ ಬೇಡುವೆ||
ಸತ್ಯಸ್ವರೂಪನೇ, ನನ್ನ ಬಿಡಿಸಿ ರಕ್ಷಿಸಯ್ಯಾ|
ನನಗೆ ಕಿವಿಗೊಟ್ಟು ಪ್ರಭು ನನ್ನನುದ್ಧರಿಸಯ್ಯಾ||
ಶ್ಲೋಕ
2. ನೀನಾಗಿರು ನನಗಾಶ್ರಯದುರ್ಗ, ಕೋಟೆಕೊತ್ತಲು|
ನೀನೇ ನನ್ನ ದುರ್ಗ, ಕೋಟೆ ನನ್ನನು ರಕ್ಷಿಸಲು||
ದುರುಳರ ಕೈಯಿಂದೆನ್ನನು ದೇವಾ, ಬಿಡಿಸಯ್ಯಾ|
ಕ್ರೂರ ಕೇಡಿಗರ ವಂಶದಿಂದೆನ್ನನು ತಪ್ಪಿಸಯ್ಯಾ||
ಶ್ಲೋಕ
3. ಸ್ವಾಮಿ ದೇವಾ, ನೀನೇ ನನ್ನ ಭರವಸೆ|
ಬಾಲ್ಯದಿಂದಲೂ ನೀನೇ ನನ್ನ ನಂಬಿಕೆ||
ಹುಟ್ಟಿನಿಂದಲೇ ನಾ ನಿನಗಂಟಿಕೊಂಡಿರುವೆನಯ್ಯಾ|
ಗರ್ಭದಿಂದಲೆ ನೀ ಎನ್ನನು ಕರೆದುತಂದೆಯಯ್ಯಾ|
ನಿರಂತರವೂ ನಿನ್ನನು ಕೊಂಡಾಡುತ್ತಿರುವೆನಯ್ಯಾ||
ಶ್ಲೋಕ
4. ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು|
ವಿವರಿಸಲು ಅಸದಳವಾದ ನಿನ್ನಗಣಿತ ರಕ್ಷಣೆಯನು||
ದೇವಾ, ಬಾಲ್ಯಾರಭ್ಯ ನನಗೆ ಬೋಧಿಸಿರುವೆಯಲ್ಲವೆ?|
ನಿನ್ನ ಅದ್ಭುತ ಕಾರ್ಯಗಳನೆಂದಿಗು ನಾ ಘೋಷಿಸುತ್ತಿರುವೆ||
ಶ್ಲೋಕ
ಆ ಕಾಲದಲ್ಲಿ ಹೆರೋದನು ತಾನು ಇಟ್ಟುಕೊಂಡಿದ್ದ ಹೆರೋದಿಯಳ ನಿಮಿತ್ತ ಯೊವಾನ್ನನನ್ನು ಸೆರೆ ಹಿಡಿಸಿ ಬಂಧನದಲ್ಲಿರಿಸಿದ್ದನು. ಹೆರೋದಿಯಳು ಹೆರೋದನ ಸಹೋದರ ಫಿಲಿಪ್ಪನ ಧರ್ಮಪತ್ನಿ. ಆದರೂ ಹೆರೋದನು ಆಕೆಯನ್ನು ಹೆಂಡತಿಯಾಗಿ ಇಟ್ಟುಕೊಂಡಿದ್ದನು. ಈ ಕಾರಣ ಯೊವಾನ್ನನು, "ನಿನ್ನ ಸಹೋದರನ ಪತ್ನಿಯನ್ನು ನೀನು ಇಟ್ಟುಕೊಂಡಿರುವುದು ನ್ಯಾಯವಲ್ಲ," ಎಂದು ಪದೇ ಪದೇ ಅವನನ್ನು ಎಚ್ಚರಿಸುತ್ತಿದ್ದನು. ಇದರ ನಿಮಿತ್ತ ಹೆರೋದಿಯಳು ಯೊವಾನ್ನನ ಮೇಲೆ ಹಗೆಯಿಟ್ಟು ಆತನನ್ನು ಕೊಲ್ಲಿಸಬೇಕು ಎಂದಿದ್ದಳು. ಆದರೆ ತನ್ನ ಸೇಡನ್ನು ತೀರಿಸಿಕೊಳ್ಳಲು ಅವಳಿಂದಾಗಿರಲಿಲ್ಲ. ಏಕೆಂದರೆ, ಯೊವಾನ್ನನು ಸಂತನು ಹಾಗೂ ಸತ್ಪುರುಷನು ಎಂದು ಹೆರೋದನು ಅರಿತು, ಆತನಿಗೆ ಭಯಪಟ್ಟು ಯಾವ ಅಪಾಯವೂ ಆತನಿಗೆ ಬಾರದಂತೆ ನೋಡಿಕೊಳ್ಳುತ್ತಿದ್ದನು. ಯೊವಾನ್ನನು ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗಲೆಲ್ಲಾ ಹೆರೋದನ ಮನಸ್ಸು ಅಲ್ಲೋಲ ಕಲ್ಲೋಲವಾಗುತ್ತಿತ್ತು. ಆದರೂ ಆತನ ಮಾತುಗಳನ್ನು ಕಿವಿಗೊಟ್ಟು ಕೇಳುತ್ತಿದ್ದನು. ಕಡೆಗೊಮ್ಮೆ, ಹೆರೋದಿಯಳಿಗೆ ಅನುಕೂಲವಾದ ಸಂದರ್ಭ ಒದಗಿತು. ಹೆರೋದನು ತನ್ನ ಹುಟ್ಟು ಹಬ್ಬದ ದಿನಾಚರಣೆಯಂದು, ಆಸ್ಥಾನಿಕರಿಗೂ ಸೇನಾಧಿಪತಿಗಳಿಗೂ ಗಲಿಲೇಯ ಪ್ರಾಂತ್ಯದ ಪ್ರಮುಖರಿಗೂ ಔತಣ ಕೂಟವನ್ನು ಏರ್ಪಡಿಸಿದನು. ಆ ಸಮಾರಂಭದಲ್ಲಿ ಹೆರೋದಿಯಳ ಮಗಳು ಔತಣ ಶಾಲೆಗೆ ಬಂದು ನರ್ತನ ಮಾಡಿದಳು. ಹೆರೋದನೂ ಅವನ ಜೊತೆಯಲ್ಲಿ ಭೋಜನಕ್ಕೆ ಕುಳಿತಿದ್ದ ಅತಿಥಿಗಳೂ ಅದನ್ನು ಬಹಳವಾಗಿ ಮೆಚ್ಚಿಕೊಂಡರು. ಆಗ ಅರಸ ಹೆರೋದನು ಅವಳಿಗೆ, "ನಿನಗೆ ಏನು ಬೇಕಾದರೂ ಕೇಳು, ಕೊಡುತ್ತೇನೆ" ಎಂದನು. "ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಅದನ್ನು ನಿನಗೆ ಕೊಡುತ್ತೇನೆ," ಎಂದು ಪ್ರಮಾಣ ಮಾಡಿದನು. ಅವಳು ತನ್ನ ತಾಯಿಯ ಬಳಿಗೆ ಹೋಗಿ, "ಅಮ್ಮಾ, ನಾನು ಏನನ್ನು ಕೇಳಿಕೊಳ್ಳಲಿ?" ಎಂದು ವಿಚಾರಿಸಿದಳು. "ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು," ಎಂದು ಆಕೆ ಮಗಳನ್ನು ಪ್ರೇರೇಪಿಸಿದಳು. ಕೂಡಲೇ ಅವಳು ಅರಸನ ಬಳಿಗೆ ಧಾವಿಸಿ, "ಸ್ನಾನಿಕ ಯೊವಾನ್ನನ ತಲೆಯನ್ನು ಇದೀಗಲೇ ಒಂದು ತಟ್ಟೆಯಲ್ಲಿ ತರಿಸಿಕೊಡಿ; ಇದೇ ನನ್ನ ಬೇಡಿಕೆ," ಎಂದು ಕೇಳಿಕೊಂಡಳು. ಅರಸನಿಗೆ ಅತೀವ ದುಃಖವಾಯಿತು. ಆದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ. ಆದುದರಿಂದ ಅವನು ಒಬ್ಬ ಪಹರೆಯವನನ್ನು ಕರೆದು, ಕೂಡಲೇ ಯೊವಾನ್ನನ ತಲೆಯನ್ನು ತರಬೇಕೆಂದು ಅವನಿಗೆ ಆಜ್ಞೆಮಾಡಿ ಕಳುಹಿಸಿದನು. ಪಹರೆಯವನು ಸೆರೆಮನೆಗೆ ಹೋಗಿ ಯೊವಾನ್ನನ ತಲೆಯನ್ನು ಕತ್ತರಿಸಿ, ಅದನ್ನು ತಟ್ಟೆಯಲ್ಲಿ ಇಟ್ಟು ಹುಡುಗಿಗೆ ತಂದುಕೊಟ್ಟನು. ಅವಳು ಅದನ್ನು ತನ್ನ ತಾಯಿಗೆ ಕೊಟ್ಟಳು. ಇದನ್ನು ಕೇಳಿದ ಯೊವಾನ್ನನ ಶಿಷ್ಯರು ಅಲ್ಲಿಗೆ ಬಂದು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿಮಾಡಿದರು.
Please upload tommorow gospel readdings
ReplyDelete